Thursday, July 4, 2024

ಭಾರತದ ಮುಟ್ಟಿನ ಗಂಡು ಅರುಣಾಚಲಂ

ಭಾರತದ ಮುಟ್ಟಿನ ಗಂಡು ಅರುಣಾಚಲಂ

 ಡಾ. ಎಂ.ಜೆ. ಸುಂದರ ರಾಮ್  
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು 
ಹಾಗು ವಿಜ್ಞಾನ ಸಂವಹನಕಾರರು



ಭಾಗ -೧ 

ಮುಟ್ಟಿನ ಹಿಂದೆ ಬಿದ್ದ ಅರುಣಾಚಲಂ

ಬಡತನದ ಬೇಗೆಯಿಂದ ಶಾಲೆ ಬಿಟ್ಟ ಇವನು ಮಾಡದ ಕೆಲಸವಿಲ್ಲ.‌ ಕೈ ಹಿಡಿದವಳ ಕಷ್ಟಕ್ಕೆ ಸಹಾಯ ಮಾಡ ಹೊರಟರೆ ಆಕೆ ಡೈವರ್ಸ್‌ ನೋಟೀಸು ಕಳಿಸಿದಳು !!! ಕೊನೆಗೆ ತನ್ನ ಹೆತ್ತ ತಾಯಿಯೇ ಈತನನ್ನು ನಂಬದೇ, ವಿಕೃತ ಮನಸ್ಸಿನವನು  ಎಂದು ಮನೆ ಬಿಟ್ಟೇ ಹೋದಳು. ಊರಿಗೆ ಊರೇ ಹುಚ್ಚನೆಂದು‌ ಅವಮಾನಿಸಿ, ಯಾವುದೋ ದೆವ್ವ ಮೈಮೇಲೆ ಬಂದಿದೆ ಎಂದು ಈತನನ್ನು ಕಟ್ಟಿ ಹಾಕಿ ಥಳಿಸಿ ದೆವ್ವ ಬಿಡಿಸಲು  ಪ್ರಯತ್ನಿಸಿದಾಗ ಅದು ಹೇಗೋ ತಪ್ಪಿಸಿಕೊಂಡು ಊರೇ ಬಿಟ್ಟರೂ ತನ್ನ ಸಂಶೋಧನೆಯನ್ನು ಬಿಡದೆ , ಎದುರಾದ ಅಗ್ನಿದಿವ್ಯವನ್ನು ಗೆದ್ದ  ಅರುಣಾಚಲಂ ಎಂಬ  ಪದ್ಮಪ್ರಶಸ್ತಿ ವಿಜೇತ ಭೂಪನ ರೋಚಕ ಕತೆ ಇದು. 

 ತಮಿಳುನಾಡಿನ ಕೊಯಮತ್ತೂರಿನಲ್ಲಿ ಅರುಣಾಚಲಂ ಮುರುಗಾನಂದಮ್  ಎಂಬ ಒಬ್ಬ ಬಡ ನೇಕಾರನಿದ್ದಾನೆ . ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತನ್ನ 14ನೇ ವಯಸ್ಸಿನಲ್ಲಿ ಶಾಲೆಯನ್ನು ಬಿಟ್ಟನು. ಬಡತನದಲ್ಲಿದ್ದ ಅವನು ಹೊಟ್ಟೆಪಾಡಿಗಾಗಿ  ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿ 1998ರಲ್ಲಿ ಶಾಂತಿ ಎಂಬವಳನ್ನು ಮದುವೆಯಾದ.

 ಶಾಂತಿಗೆ ಮಾಸಿಕ ಮುಟ್ಟಿನ ಶೌಚ ಮಾಡಿಕೊಳ್ಳಲು ಸ್ಯಾನಿಟರಿ ಪ್ಯಾಡ್ sanitary padಗಳನ್ನು ಕೊಂಡುಕೊಳ್ಳುವಷ್ಟು ಹಣವಿರುತ್ತಿರಲಿಲ್ಲ. ಆದ್ದರಿಂದ ಆಕೆ ಮಾಸಿದ, ಕೊಳಕು ಚಿಂದಿ ಬಟ್ಟೆಗಳನ್ನೇ ಬಳಸಿ ಬಳಿಕ ಯಾರಿಗೂ ಕಾಣದಂತೆ ಅವನು ಜೋಪಾನವಾಗಿ ಬಚ್ಚಿಡುತ್ತಿದ್ದಳು.

 ಈಕೆಯ ವರ್ತನೆಯಿಂದ ಶಾಂತಿ ತನ್ನಿಂದ ಏನನ್ನು ಮರೆ ಮಾಡುತ್ತಿರುವುದನ್ನು ಅರುಣಾಚಲಂ ಗಮನಿಸಿದ. ಅವನಿಗೆ ಹುಡುಕಿದಾಗ ಸಿಕ್ಕಿದ್ದು ಕೊಳಕಾದ ಚಿಂದಿ ಬಟ್ಟೆಗಳು!!! ಬೇಸರದಿಂದ ಅವಳನ್ನು ಪ್ರಶ್ನಿಸಿದಾಗ ಬೇಸರದಿಂದ ಆಕೆಯನ್ನು ಪ್ರಶ್ನಿಸಿದಾಗ, “ನಮ್ಮಲ್ಲಿ ಪ್ಯಾಡ್ ಕೊಳ್ಳುವಷ್ಟು ಹಣವೆಲ್ಲಿದೆ? ಪ್ಯಾಡ್ ಗಳನ್ನು ಕೊಂಡರೆ   ಮನೆಗೆ ಬೇಕಾಗುವ ಹಾಲಿನ ಪ್ರಮಾಣವನ್ನು ಕಡಿತಗೊಳಿಸಬೇಕು” ಎಂದಳು ಶಾಂತಿ.

 ಶಾಂತಿಗಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸಲು ಅರುಣಾಚಲಂ ಪೇಟೆಯ ದೊಡ್ಡ ಅಂಗಡಿಗೆ ಬಂದ. ಅಲ್ಲಿ ಒಂದು ಪ್ಯಾಡ್ ಅನ್ನು ತೆಗೆದು ಅದನ್ನು ಕೈಯಲ್ಲಿ ಹಿಡಿದು ಅದರ ತೂಕ 10 ಗ್ರಾಂನಷ್ಟು ಇರಬಹುದು ಎಂದು ಅಂದಾಜು ಮಾಡಿದ.10 ಗ್ರಾಂ ತೂಕದ ಆ ಹತ್ತಿಗೆ ಅಂದಿನ ಕಾಲದಲ್ಲಿ ಕೇವಲ 10 ಪೈಸೆಯಾಗುತ್ತಿತ್ತು ಆದರೆ ಅಂಗಡಿಯ ಬೆಲೆ 4 ರೂಪಾಯಿ. ಅಬ್ಬಾ 40 ಪಟ್ಟು ಅಧಿಕ ಹಣ!”ಈ ಲೂಟಿಯನ್ನು ಸಹಿಸಲಾರದ ಅರುಣಾಚಲಂ ತನ್ನಪತ್ನಿಗೆ ತಾನೇ ಸ್ಯಾನಿಟರಿ ಪ್ಯಾಡನ್ನು ತಯಾರಿಸಿಕೊಡುವ ದುಸ್ಸಾಹಸಕ್ಕೆ ಕೈ ಹಾಕಿದ.

ಅರುಣಾಚಲಂ ಹತ್ತಿಯನ್ನು ಕೊಂಡು ಅಂಗಡಿಯ ಪ್ಯಾಡನಲ್ಲಿರುವ ಸ್ಟೇಯನ್ನು ತೆಗೆದುಕೊಂಡು ಅದೇ ಆಕಾರದಲ್ಲಿ ಕತ್ತರಿಸಿ ತೆಳುವಾದ ಹತ್ತಿ ಬಟ್ಟೆಯಿಂದ ಅದನ್ನು ಬಿಗಿದು ಸುತ್ತಿ ಕಟ್ಟಿ ಪ್ಯಾಡ್ ಮಾಡಿ ಶಾಂತಿಗೆ ಕೊಟ್ಟು ಅವಳ ಅಭಿಪ್ರಾಯ ಕೇಳಿದ. ಈ ಪ್ಯಾಡ್ ಅನ್ನು ಬಳಸಿದ ಶಾಂತಿ ಅದು ಅಸಮರ್ಪಕವೆಂದು ಅದನ್ನು ತಿರಸ್ಕರಿಸಿ ಮತ್ತೆ ಚಿಂದಿ ಬಟ್ಟೆಗೇ ಶರಣಾದಳು.

 ಮುಟ್ಟಿನ ಹರಿವು ನಿಲ್ಲಲು ಗ್ರಾಮಸ್ಥ ಹೆಣ್ಣು ಮಕ್ಕಳು ಹಳೆಯ ಚಿಂದಿ ಬಟ್ಟೆಗಳನ್ನಷ್ಟೇ ಅಲ್ಲದೆ ಮರಳು,ಮರದ ಹೊಟ್ಟು, ಬೂದಿ, ಎಲೆ ಮೊದಲಾದ ರೋಗಕಾರಕ ವಸ್ತುಗಳನ್ನು ಬಳಸುತ್ತಾರೆ.

 ಬಿಬಿಸಿಯ ಪ್ರಕಾರ ಭಾರತದಲ್ಲಿ ಸುಮಾರು 70ರಷ್ಟು ಲೈಂಗಿಕ ರೋಗಗಳು ಮತ್ತು ಗರ್ಭಿಣಿಯರ ಸಾವು ಮುಟ್ಟನ್ನು ನಿಭಾಯಿಸುವ ಅನಾರೋಗ್ಯಕರ ಪದ್ಧತಿಗಳಿಂದ ಉಂಟಾಗುತ್ತಿವೆ.

 ತಾನು ಸಿದ್ಧಪಡಿಸಿದ ಪ್ಯಾಡ್ ಗಳ ದೋಷವನ್ನು ಅರಿಯಲು ಅರುಣಾಚಲಂ ಹತ್ತಿರದಲ್ಲಿದ್ದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರನ್ನು ಕಂಡು ತಾನು ಸೃಷ್ಟಿಸಿದ ಪ್ಯಾಡ್ ಗಳನ್ನು ಪರಿಚಯಿಸಿ ಅವನ್ನು ಬಳಸಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದನು. ಆದರೆ ಅವರು ಸಂಕೋಚ ಪಟ್ಟು ಅವನನ್ನು ಬೈದು ಕಳಿಸಿದರು. ತನ್ನ ಸಮಸ್ಯೆಯನ್ನು ಪರಿಹರಿಸಲು ಅರುಣಾಚಲಂ ಗೆ ಉಳಿದದ್ದು ಒಂದೇ ಮಾರ್ಗ : ಪ್ರತಿಷ್ಠಿತ ವಿಜ್ಞಾನಿಗಳು ಭಯಂಕರ ರೋಗಾಣುಗಳ ಮೇಲೆ ಸಂಶೋಧನೆ ನಡೆಸುವಾಗ ಪ್ರಯೋಗವನ್ನು ತಮ್ಮ ಮೇಲೆಯೇ ಪ್ರಯೋಗಿಸಿಕೊಳ್ಳುವಂತೆ ತನ್ನ ಸಂಶೋಧನೆಯನ್ನು ತನ್ನ ಮೇಲೆ ಪ್ರಯೋಗಿಸಿಕೊಂಡು ಬಲಿಪಶುವಾಗುವ  ಹಾಸ್ಯಾಸ್ಪದ ನಿರ್ಧಾರವನ್ನು ತೆಗೆದುಕೊಂಡ! “ನಾನು ತಯಾರಿಸಿದ ಸ್ಯಾನಿಟರಿ ಪ್ಯಾಡನ್ನು ನಾನೇ ಧರಿಸಿದ ಮೊದಲ ಗಂಡಾಗಿರಲು ದೃಢ ಸಂಕಲ್ಪ ಮಾಡಿದೆ” ಎಂದ ಅರುಣಾಚಲಂ ಹೆಮ್ಮೆಯಿಂದ!

 ಅರುಣಾಚಲಂ ತಾನೇ ಒಂದು ಕೃತಕ ಗರ್ಭಕೋಶವನ್ನು ಸೃಷ್ಟಿಸಿದನು. ಕಾಲ್ ಚೆಂದಿನ ರಬ್ಬರ್ ಬ್ಲಡನ್ನು ತಂದು ಅದರ ಕೆಳಭಾಗದಲ್ಲಿ ಎರಡು ರಂದ್ರಗಳನ್ನು ಕೊರೆದು ಅವಕ್ಕೆ ಪ್ಲಾಸ್ಟಿಕ್ ಕೊಳವೆಗಳನ್ನು ಜೋಡಿಸಿದನು. ಸಹಪಾಠಿಯಾಗಿದ್ದ ಮಾಂಸ ಕಡಿಯುವ  ವೃತ್ತಿಯ ಸ್ನೇಹಿತನನ್ನು ಭೇಟಿ ಮಾಡಿ ತನಗೆ  ಕುರಿ ರಕ್ತವನ್ನು ಕೊಡುವಂತೆ ಕೇಳಿಕೊಂಡನು. ಕುರಿ ಕಡಿಯುವ ದಿನದಂದು ಕಟುಕ ಅರುಣಾಚಲಂನ ಮನೆಯ ಮುಂದೆ ಸೈಕಲ್ ಘಂಟೆ ಬಾರಿಸಿಕೊಂಡು ಹೋಗುವನು ಇದರ ಜಾಡು ಹಿಡಿದ ಅರುಣಾಚಲಂ ಅವನನ್ನು ಕೂಡಲೇ ಹಿಂಬಾಲಿಸಿ, ಬಲಿಯಾದ ಕುರಿ ರಕ್ತವನ್ನು ಪಡೆದು ತಾನು ತಯಾರಿಸಿದ್ದ ಬ್ಲಾಡರ್ ಗೆ ತುಂಬಿಕೊಳ್ಳುವನು ರಕ್ತ ಹೆಪ್ಪುಗಟ್ಟದಿರಲು ರಕ್ತ ಭಂಡಾರ ನಡೆಸುತ್ತಿದ್ದ ಮತ್ತೊಬ್ಬ ಗೆಳೆಯನಿಂದ ಗರಣೆರೋಧಕ  ( antique coagulant ) ರಾಸಾಯನಿಕವನ್ನು ಪಡೆದು ರಕ್ತಕ್ಕೆ ಬೆರೆಸಿದನು 

 ಹೀಗೆ ತಾನು ತಯಾರಿಸಿದ ಕೃತಕ ಗರ್ಭಕೋಶವನ್ನು ತನ್ನ ದೇಹದ ಮುಂಭಾಗ ಸೊಂಟದ ಕೆಳಗೆ ಬಿಗಿದುಕೊಂಡನು. ತಾನು ತಯಾರಿಸಿದ್ದ ಸ್ಯಾನಿಟರಿ ಪ್ಯಾಡನ್ನು ಗರ್ಭಕೋಶದ ಕೆಳಭಾಗಕ್ಕೆ ತನ್ನೆರಡು ತೊಡೆಗಳ ಮಧ್ಯೆ ಬಿಟ್ಟು ಗರ್ಭಕೋಶದ ಎರಡು ಕೊಳವೆಗಳು ಅದನ್ನು ತಾಗುವಂತೆ ಕಟ್ಟಿಕೊಂಡನು . ತಾನು ತಯಾರಿಸಿದ್ದ ಸ್ಯಾನಿಟರಿ ಕಟ್ಟಿಕೊಂಡು ಕಟ್ಟಿಕೊಂಡು ಎಂದಿನಂತೆ ಉಡುಪನ್ನು ಧರಿಸಿ ನಡೆಯುತ್ತಾ ಸೈಕಲ್ ತುಳಿಯುತ್ತಾ ಓಡಾಡಿದನು. ಹೀಗೆ ಓಡಾಡುವಾಗ ಅರುಣಾಚಲಂ ತನ್ನ ಗರ್ಭಕೋಶವನ್ನು ಆಗಾಗ ಮೃದುವಾಗಿ ಅದುಮಿದಾಗ ಒಳಗಿದ್ದ ರಕ್ತವು ಮುಟ್ಟು ಹರಿಯುವಂತೆ ಕೊಳವೆಗಳ ಮೂಲಕ ಹರಿದು ತಾನು ಕಟ್ಟಿಕೊಂಡಿದ್ದ ಪ್ಯಾಡಿನ ಮೇಲೆ ಸೋರುತಿತ್ತು!!! ಅರುಣಾಚಲಂ ಈಗ ಮುಟ್ಟಿನ ಗಂಡಾಗಿದ್ದ!!.

 ಅರುಣಾಚಲಂ ಈ ಅವತಾರದಲ್ಲಿ ಕೆಲವು ದಿನ ಓಡಾಡಿಕೊಂಡಿದ್ದನು ಆದರೆ ಬ್ಲಾಡರಿಗೆ ತುಂಬಿದ್ದ ರಕ್ತ ಕೇವಲ 20 ನಿಮಿಷಗಳಲ್ಲಿ ಕೊಳೆತು ಸುತ್ತಲೂ ದುರ್ನಾತ ಹರಡಿತು. ಅವನು ಕಟ್ಟಿಕೊಂಡಿದ್ದ ಸ್ಯಾನಿಟರಿ ಪ್ಯಾಡ್ ರಕ್ತವನ್ನು ಸರಿಯಾಗಿ ಹೀರಿಕೊಳ್ಳದೆ ಅವನ ಉಡುಪಿಲ್ಲ ರಕ್ತ ಕಲೆಗಳಾಗಿ ಘೋರವಾಗಿ ಎದ್ದು ಕಾಣತೊಡಗಿದವು. ರಕ್ತದ ಕಲೆಗಳನ್ನು ತೊಳೆಯಲು ಅರುಣಾಚಲಂ ಯಾರಿಗೂ ಕಾಣಿಸದೆ ಆಗಾಗ ಊರ ಬಾವಿಗೆ ಹೋಗಿ ತನ್ನ ಕರವಸ್ತ್ರವನ್ನು ಒದ್ದೆ ಮಾಡಿ ರಕ್ತ ಕಲೆಗಳನ್ನು ಒರೆಸಿಕೊಳ್ಳುತ್ತಿದ್ದ. ಈ ದೃಶ್ಯವನ್ನು ದೂರದಿಂದ ನೋಡಿದ ಊರಿನ ಕೆಲವು ಜನರು ಇವನು ಲೈಂಗಿಕ ರೋಗದಿಂದ ನರಳುತ್ತಿರುವನೆಂದು ಅನುಮಾನಿಸಿ, ಅವನನ್ನು ಮೂದಲಿಸಿ ಬಹಿಷ್ಕರಿಸಿದರು. ಈ ಭಯಾನಕ ಸುದ್ದಿ ಕಾಳಗಿಚ್ಚಿನಂತೆ ಊರೆಲ್ಲಾ ಹರಡಿತು. ಅರುಣಾಚಲಂ ಕೆಲವು ವೈದ್ಯ ವಿದ್ಯಾರ್ಥಿನಿಯರ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾನೆ ಎಂದು ಜನ ಕತೆ ಕಟ್ಟಿ ವದಂತಿ ಹಬ್ಬಿಸಿದರು. ಈ ಸುದ್ದಿ ಅವನ ಪತ್ನಿಯ ಕಿವಿಗೆ ಸಿಡಿಲಿನಂತೆ ಎರಗಿತು. ಅವಳು ಕೆರಳಿ ಶಪಿಸುತ್ತಾ, ಅವನನ್ನು ಬಿಟ್ಟು ತನ್ನ ತವರಿಗೆ ಹೊರಟು ಹೋದಳು. 20 ದಿನಗಳ ನಂತರ ಅರುಣಾಚಲಂಗೆ ಅವಳಿಂದ ವಿವಾಹ ವಿಚ್ಛೇದನ ನೋಟಿಸ್ ಜಾರಿಯಾಯಿತು! ಇದನ್ನು ಸ್ವೀಕರಿಸಿದ ಅರುಣಾಚಲಂ ‘ನನ್ನ ಸಂಶೋಧನೆಯಲ್ಲಿ ನನಗೆ ಸಿಕ್ಕಿದ ಮೊದಲ ಪುರಸ್ಕಾರವಿದು’ ಎಂದ!!

 ಅರುಣಾಚಲಂನ ನೋವಿನ ಕತೆ ಇಲ್ಲಿಗೇ ನಿಲ್ಲುವುದಿಲ್ಲ ..... 

ಆತನ ನೋವು-ನಲಿವಿನ ಸಾಧನೆಯ ಕತೆಯನ್ನು ಮುಂದಿನ ಸಂಚಿಕೆಯಲ್ಲಿ ಓದುವಿರಂತೆ ...

No comments:

Post a Comment