Wednesday, September 4, 2024

ಮರ, ಮಳೆ ಮತ್ತು ಮನುಷ್ಯ

 ಮರ, ಮಳೆ ಮತ್ತು ಮನುಷ್ಯ


ಮಳೆಗಾಲದಲ್ಲಿ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಅದರಲ್ಲೂ ರಸ್ತೆ ಅಂಚಿನ ದೊಡ್ಡ ದೊಡ್ಡ ಮರಗಳು ಏಕಾಏಕಿ ಧರೆಗೆ ಉರುಳುತ್ತವೆ. ಹಲವು ಬಾರಿ ಟ್ರಾಫಿಕ್ ಜಾಮ್ ಗೆ ಕಾರಣವಾಗುವುದಲ್ಲದೆ,ಪಾದ ಚಾರಿಗಳ ಪ್ರಾಣಕ್ಕೂ ಸಂಚಕಾರ ತರುತ್ತವೆ. ಅಷ್ಟು ಸೊಗಸಾಗಿ ಬೆಳೆದಿದ್ದ ಮರವು ಒಮ್ಮೆಲೇ ಉರಳಿ ಬೀಳಲು ಕಾರಣ ಮಳೆ ಅನ್ನಿಸಿದರೂ ಮೂಲ ಕಾರಣ ಬೇರೆಯೇ ಆಗಿರುವುದು ಸೋಜಿಗವೆನಿಸಿದರೂ ಸತ್ಯ. ಈ ಸತ್ಯ ಶೋಧನೆಗೆ ಹೊರಟಾಗ ಆಕ್ಸಿನ್ ಗಳೆಂಬ ಸಸ್ಯರಸದೂತಗಳು ಕಂಡುಬರುತ್ತವೆ ಸಸ್ಯಗಳ ಬೇರು ಕಾಂಡ ಮತ್ತಿತರ ಭಾಗಗಳ ತುತ್ತ ತುದಿಯಲ್ಲಿ ಈ ರಸದೂತಗಳು ಅತಿ ಕಡಿಮೆ ಪ್ರಮಾಣದಲ್ಲಿ ತಯಾರಾಗುತ್ತವೆ. ಮತ್ತು ಅಗಾಧವಾದ ಪರಿಣಾಮಗಳನ್ನು ಉಂಟುಮಾಡುತ್ತವೆ. ಆಕ್ಸಿನ್ಗಳ ಇರುವಿಕೆಯನ್ನು ಪತ್ತೆ ಹಚ್ಚಿದ ಮೊದಲಿಗರಲ್ಲಿ ಜೀವ ವಿಕಾಸ ಶಾಸ್ತ್ರಜ್ಞರಾದ ಚಾರ್ಲ್ಸ್ ಡಾರ್ವಿನ್ ಹಾಗೂ ಆತರ ಮಗ ಜೂ. ಡಾರ್ವಿನ್ ಕೂಡ ಇದ್ದರು. ಗ್ಯಾಲಪಗೋಸ್ ಐಲ್ಯಾಂಡ್ ಗೆ ಹೋದ ಸಂದರ್ಭದಲ್ಲಿ ಅಲ್ಲಿಯ ಕ್ಯಾನರಿ ಹುಲ್ಲು ಸೂರ್ಯನ ರಶ್ಮಿಯ ದಿಕ್ಕಿನ ಎಡೆಗೆ ಬಾಗುವುದನ್ನು ಗಮನಿಸಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದರು. ತದನಂತರ ಹೆಚ್. ಡಬ್ಲ್ಯೂ .ವೆಂಟ್ ಎಂಬುವರು ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದರು,

ಈ ರಾಸಾಯನಿಕ ವಸ್ತುವನ್ನು ಆಕ್ಸಿನ್ ಎಂದು ಗುರುತಿಸಿ, "ಇಂಡಾಲ್ ಅಸಿಟಿಕ್ ಆಸಿಡ್ (IAA)" ಎಂದು ನಾಮಕರಣ ಮಾಡಿದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು! ಎನ್ನುವಂತೆ ಆಕ್ಸಿನ್ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದರೂ ದೊಡ್ಡ ಪರಿಣಾಮಗಳನ್ನು ಬೀರುತ್ತದೆ. ದ್ಯುತಿಅನುವರ್ತನೆ (ಫೋಟೋ ಟ್ರೋಪಿಸಂ) ಅಂದರೆ ಬೆಳಕಿನ ಕಡೆಗೆ ವಾಲುವಿಕೆ ಆಕ್ಸಿನಿನ ಒಂದು ಪ್ರಮುಖ ಪರಿಣಾಮ. ಇದರಂತೆ ಸಸ್ಯದ ಮೇಲ್ಭಾಗವು  ಬೆಳಕಿನ ಕಡೆಗೆ ವಾಲುತ್ತಾ ವಾಲುತ್ತಾ ದ್ಯುತಿ ಸಂಶ್ಲೇಷಣೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತದೆ. ಮನೆಯ ಕಿಟಕಿಯ ಪಕ್ಕದಲ್ಲಿ ಇಟ್ಟ ಮನಿ ಪ್ಲಾಂಟ್ ಗಿಡವು ಬೆಳಕಿಗೆ ಹಾತೊರೆದು, ಕಿಟಕಿ ಆಚೆಗೆ ವಾಲಿ ಕೊಳ್ಳುವುದು ಫೋಟೋ ಟ್ರೋಪಿಸಂ ಗೆ ಉದಾಹರಣೆ.ನಗರಗಳಲ್ಲಿ ಒಂದು ಲೇಔಟ್ ಮಾಡಿದಾಗ ರಸ್ತೆಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಡುವುದು ಸಾಮಾನ್ಯ. ಆ ಲೇಔಟ್ ಅಭಿವೃದ್ಧಿಗೊಂಡಂತೆ ಆ ಸಸಿಯು ಬೆಳೆದು ಮರವಾಗಿರುತ್ತದೆ. ಆ ಮರಗಳ ಬೇರುಗಳಿಂದ ಮನೆಯ ಗೋಡೆಗಳು ಸೀಳಿ ಬಿಡುತ್ತವೆ ಎಂಬ ಕಾರಣಕ್ಕೆ ಹಲವರು ಯಾವ ಮುಲಾಜು ಇಲ್ಲದೆ ಮರಗಳನ್ನು ಕತ್ತರಿಸಿ ಹಾಕುವುದು ಅತ್ಯಂತ ಬೇಸರದ ಸಂಗತಿ.

ಬೆಳಕನ್ನು ಗ್ರಹಿಸಲು ಮರಗಳು ಎಲ್ಲ ದಿಕ್ಕುಗಳಲ್ಲೂ ತಮ್ಮ ರೆಂಬೆಕೊಂಬೆಗಳನ್ನು ಪಸರಿಸಿಕೊಳ್ಳುತ್ತವೆ. ಆದರೆ ಲೇಔಟ್ ನಲ್ಲಿ ಮನೆಗಳು ರಸ್ತೆಯ ಇಕ್ಕೆಲಗಳಲ್ಲಿ ಎದ್ದು ನಿಂತಾಗ ಮರಗಳಿಗೆ ಸಿಗುತ್ತಿದ್ದ ಬೆಳಕಿನ ಪ್ರಮಾಣವು ಕಡಿಮೆಯಾಗಿ ದ್ಯುತಿ ಸಂಶ್ಲೇಷಣೆಗೆ ಧಕ್ಕೆಯಾಗುತ್ತದೆ ಇದಕ್ಕೆ ಉಪಾಯವೆಂಬಂತೆ ಮರವು ಮುಂಬರುವ ಹೊಸ ರೆಂಬೆ ಕೊಂಬೆಗಳನ್ನು ತನಗೆ ಯಾವ ಕಡೆ ಅಡೆತಡೆಗಳು ಇಲ್ಲವೋ ಅರ್ಥ ಕಡೆಗೆ ಅಂದರೆ ರಸ್ತೆಯು ಚಾಚಿರುವ ದಿಕ್ಕಿಗೆ ಸೇರಿಸಿಕೊಳ್ಳುತ್ತಾ ಬರುತ್ತದೆ. ಕಾಲಕ್ರಮದಲ್ಲಿ ಮರವು ರಸ್ತೆಗೆ ಅಭಿಮುಖವಾಗಿಯೇ ಬೆಳೆಯುತ್ತಾ ಬರುತ್ತದೆ. ಹೀಗೆ ಒಂದೇ ದಿಕ್ಕಿನಲ್ಲಿ ಬೆಳೆದ ಮರವು ತನ್ನದೇ ರೆಂಬೆ ಕೊಂಬೆಗಳ ಭಾರದಿಂದ ವಾಲುತ್ತಾ ರಸ್ತೆ ಎಡೆಗೇ ಬಂದಿರುತ್ತದೆ. ಈ ರೀತಿಯ ಅಸಮಾನತೆಯಿಂದ ಜೋರಾದ ಗಾಳಿ ಅಥವಾ ಮಳೆಗೆ ಮರವು ತನ್ನ ಸಮತೋಲನವನ್ನು ಕಳೆದುಕೊಂಡು ಕೆಳಗೆ ಬೀಳುತ್ತದೆ ಅಥವಾ ರಸ್ತೆಯ ಕಡೆಗೆ ಚಾಚಿಕೊಂಡಿದ್ದ ರೆಂಬೆಯು ಉರುಳಿ ಬೀಳುತ್ತದೆ.

ಹೀಗೆಲ್ಲಾ ನಡೆಯಲು ಕಾರಣ ಮರವೋ? ರಸ್ತೆಯೋ? ಮನೆಯೋ ? ಅಥವಾ ಮನುಷ್ಯನೋ? ಎಂಬ ಪ್ರಶ್ನೆಯಂತೂ ಕಾಡುತ್ತಲೇ ಇರುತ್ತದೆ.

ಲೇಖಕರು :

ಚಂದ್ರಿಕಾ ಜೆ

ಜೀವವಿಜ್ಞಾನ ಉಪನ್ಯಾಸಕಿ

P E S PU College

ಬೆಂಗಳೂರು.


1 comment:

  1. ಉತ್ತಮವಾದ ಲೇಖನ ಮೇಡಂ. ಧನ್ಯವಾದಗಳು.

    ReplyDelete