Wednesday, September 4, 2024

ನೀವೂ ತನ್ನಿ . . . ‘ಲಕ್ಷ್ಮೀ ತರು’

 ನೀವೂ ತನ್ನಿ . . . ‘ಲಕ್ಷ್ಮೀ ತರು’

 ಲೇಖಕರು : ರಮೇಶ, ವಿ,ಬಳ್ಳಾ

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ 

 ಮೊ: 9739022186

 ಸಹೋದ್ಯೋಗಿಯೊಬ್ಬರು ಒಂದು ಫೋಟೊ ತೋರಿಸಿ ಈ ಮರ ಯಾವುದು ? ಎಲ್ಲಿ ಸಿಗುತ್ತೇ ? ಪತ್ತೆ ಹಚ್ಚಿ ನನಗೊಂದು ತಂದು ಕೊಡಿ ಸರ್ ಅಂತಾ ದುಂಬಾಲು ಬಿದ್ದಿದ್ದರು. ನಾನು ವಿಜ್ಞಾನ ಶಿಕ್ಷಕ ಅಂತಾ ನನ್ನನ್ನು ಪರೀಕ್ಷೆ ಮಾಡುತ್ತಿರಬಹುದೇನೊ ಅಂದುಕೊಂಡೆ.  ಆ ಮರದ ವಿವರವನ್ನು ಅವರು ಎಲ್ಲೋ ಪಡೆದಿದ್ದರು ಎಂಬುದು ನಂತರ ತಿಳಿಯಿತು. ಅದು ಅವರಿಗೆ ಉಪಯೋಗದ ದೃಷ್ಠಿಯಿಂದ ಬಹಳ ಅಗತ್ಯವಾಗಿತ್ತು. ಆ ಮರ ನೋಡಿದಾಕ್ಷಣ ನಾನೂ ಹೇಳಿಯೇ ಬಿಟ್ಟೆ ಅದು ‘ಸಿಮರೂಬಾ’ ಅಂತಾ. ನಮ್ಮ ಶಾಲಾ ಮೈದಾನದಲ್ಲಿಯೇ ಇದೆಯಲ್ಲಾ ಎಂದಾಗ ಅವರಿಗೆ ಖುಷಿಯೋ ಖುಷಿ.

ಹೌದು ! ಸಿಮರೂಬಾ ಎಂದಾಕ್ಷಣ ನೆನಪಾಯಿತು. ಪರಿಸರ ದಿನಾಚರಣೆಯ ನೆಪದಲ್ಲಿ ಅರಣ್ಯ ಇಲಾಖೆಯ ನರ್ಸರಿಗೆ ಹೋಗಿ ಶಾಲೆಗಳಿಗೆ ನಾಲ್ಕಾರು ಸಸಿಗಳನ್ನು ಕೇಳಿದರೆ ಸಾಕು ಖಂಡಿತಾ ಅದರಲ್ಲೊಂದು ಸಿಮರೂಬಾ ಸಸಿ ಕೊಟ್ಟೇ ಇರುತ್ತಾರೆ. ಹೊಂಗೆ, ಬೇವು, ಬಸವನಪಾದ, ಜಟ್ರೋಪ, ಹೀಗೆ ಅನೇಕ ಬಹುಪಯೋಗಿ ನೆರಳು ನೀಡುವ ಹಾಗೂ ಸುಲ¨sವಾಗಿ ಬೆಳೆಯಬಹುದಾದ ಇಂತಹ ಮರಗಳನ್ನು ಅರಣ್ಯಕೃಷಿಗಾಗಿ ಇಲಾಖೆಯವರು ಜೂನ್ ಹೊತ್ತಿಗೆ ತಯಾರಿ ಮಾಡಿಕೊಂಡಿರುತ್ತಾರೆ. ಶಾಲಾ ಕಾಲೇಜುಗಳಿಗೆ ತಂದು ನೆಡುತ್ತಾರೆ. ಸಾರ್ವಜನಿಕ ಉದ್ಯಾನ, ದೇವಸ್ಥಾನ, ರಸ್ತೆ ಬದಿಗಳಲ್ಲಿ ಇವುಗಳನ್ನು ನೆಡುವುದು ಸಾಮಾನ್ಯ. ಇಂತಹವುಗಳಲ್ಲಿ ಸಿಮರೂಬಾ ಒಂದು ವಿಶೇಷ ಮರವಾಗಿ ಬಹುತೇಕರಿಗೆ ಇತ್ತೀಚಿಗೆ ಹೆಚ್ಚೆಚ್ಚು ಪರಿಚಿತವಾಗುತ್ತಿರುವುದಾದರೂ ಏಕೆ ? ಎಂದು ನೋಡಿದಾಗ ಅದರ ಕೆಲ ವಿಶಿಷ್ಟ ಗುಣಗಳು ಹಾಗೂ ಔಷಧೀಯ ಉಪಯುಕ್ತತೆ ಎದ್ದು ಕಾಣುತ್ತದೆ.



    ಸಿಮರೂಬಾವನ್ನು ಕನ್ನಡದಲ್ಲಿ ‘ಲಕ್ಷ್ಮಿ ತರು’ ಎಂದರೆ ಸಾಮಾನ್ಯ ಹೆಸರುಗಳು ವಿಭಿನ್ನವಾಗಿವೆ. ಸ್ವರ್ಗದ ಮರ(paradise tree),  ಬೇಧಿ ತೊಗಟೆಮರ(dysentery bark), ಕಹಿ ಕಟ್ಟಿಗೆ (bitter wood) ಎಂತೆಲ್ಲಾ ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಸಿಮರೂಬಾ ಗ್ಲುಕಾ (Simarouba glauca ). ಸಿಮರೂಬೇಸಿಯಾ ಕುಟುಂಬದ ಇದು ಮಧ್ಯಮ ಗಾತ್ರದ ಮರವಾಗಿದ್ದು, ಪೂರ್ಣ ಬೆಳೆದ ಮರ ಸುಮಾರು 20 ಮೀಟರ್‌ವರೆಗೂ ಎತ್ತರವಾಗಿರುತ್ತದೆ. ಇದರ ಬೊಡ್ಡೆ (trunk ) 50 ರಿಂದ 60 ಸೆಂ.ಮೀ. ವ್ಯಾಸ ಹೊಂದಿದ್ದು. ಹಚ್ಚ ಹಸಿರಾದ ಸಂಯುಕ್ತ(Compound ), 12 ಜೊತೆ ಪರ್ಯಾಯ(alternae) ಎಲೆ ಪತ್ರಕಗಳುಳ್ಳ 20-50 ಸೆಂ.ಮೀ. ಉದ್ದನೆಯ ಎಲೆಗುಚ್ಛವುಳ್ಳದ್ದಾಗಿರುತ್ತದೆ. ಇದು ಸಣ್ಣ ಬಿಳಿ ಬಣ್ಣದ ಹೂ ತಳೆಯುವ ಮೂಲಕ ಹೂ ಬೀಡುವ ಸಸ್ಯ ಜಾತಿಗೆ ಸೇರಿದ್ದಾಗಿದೆ. ಈ ಹೂಗಳು ಗಂಡು ಇಲ್ಲವೇ ಹೆಣ್ಣು ಆಗಿರುವ ಏಕಲಿಂಗಿ (unisexual)ಗಳಾಗಿದ್ದು, 4-6 ದಳ(petal)ಗಳ ಹಾಗೂ 8-12 ಕೇಸರ(stamen)ಗಳನ್ನು ಹೊಂದಿವೆ. ಇದರ ಹಳದಿ ಮಿಶ್ರಿತ ಹಸಿರು ಕಾಯಿಗಳು ಕ್ರಮೇಣ ಕೆಂಪು ಜುಳುಕಿನ ನೆರಳೆ ಬಣ್ಣದ ಹಣ್ಣಾಗಿ ಕಂಗೊಳಿಸುತ್ತವೆ. ಇದರಲ್ಲಿನ ಬೀಜಗಳು ಬಹುಪಯೋಗಿ ಉತ್ಪನ್ನವಾಗಿವೆ.

ಮೂಲತಃ ಇದು ಫ್ಲೋರಿಡಾ, ಮಧ್ಯೆ ಅಮೇರಿಕಾ ಹಾಗೂ ದಕ್ಷಿಣ ಅಮೇರಿಕಾದ್ದಾದರೂ ಇಂದು ಬಹುತೇಕ ಕಡೆ ಆವರಿಸಿದೆ. ಸದ್ಯ ಇದರ ಆರು ಪ್ರಭೇದಗಳು ನೋಡಲಿಕ್ಕೆ ಸಿಗುತ್ತವೆ. ಈ ತಳಿಯನ್ನು ಮೊದಲು ಪ್ರೆಂಚ್ ಸಂಶೋಧಕ 1713ರಲ್ಲಿ ಬೆಳಕಿಗೆ ತಂದರು. ಭಾರತದಲ್ಲಿ ಮಹಾರಾಷ್ಟ್ರದ NBPGR (Natonal Bureau of Plant Genetic Resources) 1960ರಲ್ಲಿ ಪರಿಚಯಿಸಿತು. ನಂತರ 1986ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ. ಶ್ಯಾಮಸುಂದರ್ ಜೋಶಿ ಹಾಗೂ ಡಾ. ಶಾಂತಾ ಜೋಶಿ ಅದರ ವಿಸ್ತೃತ ಅಧ್ಯಯನ ಕೈಗೊಂಡು ಹತ್ತು ಹಲವು ಉಪಯುಕ್ತತೆ ಹಾಗೂ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಿದರು. 

ಲಕ್ಷ್ಮಿ ತರು ಸಾಕಷ್ಟು ಉಪಯೋಗಕಾರಿಯಾಗಿದ್ದು ಬಹುತೇಕ ಮರದ ಎಲ್ಲ ಭಾಗಗಳು ಅಂದರೆ ಕಾಂಡ, ಎಲೆ, ಹೂ ಕಾಯಿ ವ್ಯಯವಾಗದೇ ಬಳಕೆಗೆ ಬರುತ್ತವೆ. ಅಂತಲೇ ಅದು ಎಂದಿಗಿAತ ಇಂದು ಹೆಚ್ಚು ಮುನ್ನಲೆಗೆ ಬರುತ್ತಿದೆ. ಈ ಎಲ್ಲ ಉಪಯುಕ್ತತೆಯ ದೃಷ್ಠಿಯಿಂದ ನಿಜಕ್ಕೂ ಲಕ್ಷ್ಮಿ ತರುವನ್ನು ಮಹಾಲಕ್ಷ್ಮಿಯಂತೆ ಎಲ್ಲರೂ ಮನೆಗೆ ಬರಮಾಡಿಕೊಳ್ಳಲು ಬಯಸುತ್ತಿದ್ದಾರೆ. 

ಸಿಮರೂಬಾದ ಕಾಂಡವನ್ನು ಹೆಚ್ಚಿನ ಮಟ್ಟಿಗೆ ಹಾಗೂ ಬಹುಮುಖ್ಯವಾಗಿ ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕುರ್ಚಿ ಟೇಬಲ್, ಸೋಪಾ, ಕಾಟ್‌ನಂತಹ ಕಟ್ಟಿಗೆ ಉಪಕರಣಗಳನ್ನು ತಯಾರಿಸಲಾಗುತ್ತದೆ. ಅಲ್ಲದೇ ಕಾಗದದ ಕಾರ್ಖಾನೆಗಳಲ್ಲಿ ಇದರ ಬಳಕೆ ಇದೆ. ಉತ್ತಮ ಗುಣಮಟ್ಟದ ಪೇಪರ್ ಇದರಿಂದ ತಯಾರಾಗುತ್ತದೆ. ಒಂದು ಮರದಿಂದ 15 ರಿಂದ 30 ಕಿಲೋಗ್ರಾಂ ದಷ್ಟು ಬೀಜಗಳು ಉಂಟಾಗುತ್ತವೆ. ಇವು ಶೇಕಡ 65ರಷ್ಟು ಖಾದ್ಯತೈಲ(edible) ಹೊಂದಿವೆ. ಈ ಬೀಜಗಳು 3 ರಿಂದ 5 ಲೀಟರ್‌ನಷ್ಟು ಎಣ್ಣೆಯನ್ನ್ನು ನೀಡುತ್ತವೆ. ಇದು ಖಾದ್ಯ ತೈಲವಷ್ಟೇ ಅಲ್ಲದೆ ಜೈವಿಕ ಇಂಧನವಾಗಿಯೂ ಬಳಕೆಯಾಗುತ್ತದೆ. ಬೀಜದ ಉಪಉತ್ಪನ್ನಗಳು ಕೂಡ (oil cake ) ಬೇಕರಿಗಳಲ್ಲಿ, ಸಾಬೂನು, ಕಾಸ್ಮೇಟಿಕ್ಸ್ ತಯಾರಿಕೆಯಲ್ಲಿ ಮಹತ್ವ ಪಡೆದಿವೆ. ಬೀಜಗಳ ಹೊದಿಕೆಯಿಂದ ಕಾರ್ಡ್ಬೋರ್ಡ್ ಸಹ ತಯಾರಿಸಲಾಗುತ್ತದೆ.

ಔಷಧೀಯ ಮಹತ್ವ : ಸಿಮರೂಬಾ ಒಂದು ಅದ್ಭುತ ಔಷಧಿಯ ಸಸ್ಯವಾಗಿದೆ. ಇದರ ಮಹತ್ವ ಇಂದು ಎಲ್ಲರಿಗೂ ಅರಿವಾದ ಕಾರಣದಿಂದಲೇ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾನ್ಯವಾದ ಕಾಯಿಲೆಗಳಾದ ಮಲೇರಿಯಾ, ಅತಿಸಾರ(diarrhea)ದಂತಹ ಚಿಕಿತ್ಸೆಯಲ್ಲಿ ಇದರ ಬಳಕೆ ಇದೆ. ಸಿಮರೂಬಾ 11 ಉಪಯುಕ್ತ ಔಷಧೀಯ ಕ್ವಾಸಿನಾಯ್ಡ್ಗಳನ್ನು ಒಳಗೊಂಡಿದ್ದು ಬ್ಯಾಕ್ಟೇರಿಯಾದಂತಹ ಸೂಕ್ಷ್ಮಾಣು ಜೀವಿವಿರೋಧಿ ಗುಣಗಳನ್ನು ಹೊಂದಿವೆ. ಅಲ್ಲದೇ ಲ್ಯೂಕೇಮಿಯಾ ಮತ್ತು ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ಸೆಣಸಾಡುವ ಉಪಯುಕ್ತ ಪ್ರತಿರೋಧಕತೆ ಸಿಮರೂಬಾದಲ್ಲಿ ಇದೆ ಎಂಬುದನ್ನು ಕೆಲ ವರದಿಗಳು ಹೇಳುತ್ತವೆ. ಆದರೆ ಆ ಬಗ್ಗೆ ನಿರ್ಧಿಷ್ಟತೆ ಹಾಗೂ ತಜ್ಞರ ಸ್ಪಷ್ಟೀಕರಣ ಅಧಿಕೃತವಾಗಿ ಎಲ್ಲೂ ಇಲ್ಲ. ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾ, ವೈರಸ್, ಮತ್ತು ಪ್ರೋಟೊಜೋವಾಗಳಿಂದ ಬರುವ ಚಿಕೂನ್‌ಗುನ್ಯ, ಸಾಮಾನ್ಯ ಶೀತ, ಹೆಪಟೈಟಿಸ್, ದಂತರೋಗಗಳನ್ನು ಸಿಮರೂಬಾದ ಎಲೆಗಳಿಂದ ತಯಾರಿಸುವ ಕಷಾಯದಿಂದ ಗುಣಪಡಿಸಬಹುದೆಂದು ಹೇಳಲಾಗುತ್ತದೆ. ಅದೇನೆ ಇರಲಿ ಪ್ರಾಚೀನ ಹಾಗೂ ಸಾಂಪ್ರದಾಯಿಕ ರೋಗ ಚಿಕಿತ್ಸೆಯ ಕೆಲ ಉಪಯುಕ್ತತೆಯ ದೃಷ್ಠಿಯಿಂದ ಸಿಮರೂಬಾ ಮಹತ್ವದ್ದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂದುವರೆದು ಅಧ್ಯಯನ ವಿಸ್ತಾರವಾಗಲಿ, ಚಿಕಿತ್ಸಾ ವಿಧಾನಗಳು ಅಭಿವೃದ್ಧಿಗೊಂಡು ಮಾನವ ಆರೋಗ್ಯಕ್ಕೆ ಸಿಮರೂಬಾ ನೆರವಾಗಲಿ ಅಂಬೋಣ.

ಪರಿಸರ ಸ್ನೇಹಿಯಾಗಿ : ಸಿಮರೂಬಾ ಎಲ್ಲ ಮಣ್ಣಿನಲ್ಲೂ ಬೆಳೆಯಲು ಸೂಕ್ತವಾದ ಒಂದು ಸಸ್ಯ ಜಾತಿಯಾಗಿದೆ. ಅದೇನೂ ಹೆಚ್ಚು ನೀರು ಬೇಡುವಂತದ್ದಲ್ಲ. ಬರಡು ನೆಲದಲ್ಲೂ ಸೊಗಸಾಗಿ ಬೆಳೆಯುವ ಇದು ಮಣ್ಣಿನ ಅಂತಸತ್ವ ಹೆಚ್ಚಿಸಿ ತನ್ನ ಬೇರುಗಳಿಂದ ಮಣ್ಣಿನ ಸವೆತವನ್ನು ತಡೆದು ರಕ್ಷಕವಾಗಿ ನಿಂತಿದೆ. ಇದರ ಎಲೆಗಳು ಅತ್ಯಂತ ಉಪಯುಕ್ತವಾದ ಗೊಬ್ಬರದಂತೆ ತೋರುತ್ತವೆ. ಮಣ್ಣು ಅದರ ಫಲವತ್ತತೆಯನ್ನು ನಿರಂತರವಾಗಿಸವಲ್ಲಿ ಸಹಾಯಕವಾಗಿವೆ. ಇನ್ನು ಮುಂದುವರೆದು ಇದು ಅತ್ಯಧಿಕ ಪ್ರಮಾಣದಲ್ಲಿ ವಾತಾವರಣದ ಕಾರ್ಬನ್ ಡೈ ಆಕ್ಸೈಡನ್ನು ಹೀರುವ ಮರವಾಗಿದೆ. ಆ ಮೂಲಕ ಹಸಿರು ಮನೆ ಪರಿಣಾಮದಂತಹ ಸಮಸ್ಯೆಯನ್ನು ನೀಗಿಸಿ ಪರಿಸರ ಸ್ನೇಹಿಯಾಗಿ ಕಾರ್ಯ ಮಾಡುತ್ತದೆ. ಸಿಮರೂಬಾ ಭೂತಾಪವನ್ನು ಇಳಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಸೌರಶಕ್ತಿಯನ್ನು ಜೀವರಾಸಾಯನಿಕ ಶಕ್ತಿಯಾಗಿಸಿ ರಕ್ಷಿಸುತ್ತದೆ. ಉದುರುವ ಎಲೆಗಳು ತಿರೆಯ ಒಡಲಿಗೆ ಶಕ್ತಿಯ ಸತ್ವವಾಗಿ, ಫಲವತ್ಕಾರಕಗಳಾಗಿ ಒದಗುತ್ತವೆ.

 ಅತ್ಯಂತ ಕನಿಷ್ಠ ಮಳೆ (400ಮೀ.ಮೀ) ಬೀಳುವ ಜಾಗಗಳಲ್ಲೂ ಬೆಳೆಯುವ ಈ ಮರ ¨sಂಜರು ಭೂಮಿಯನ್ನು ತನ್ನಿಂದ ಹಸಿರಾಗುವಂತೆ ಮಾಡಿದೆ. ಯಾವುದೇ ಪ್ರಾಣಿ, ದನಕರು, ಕುರಿಕೋಳಿ, ಜಾನುವಾರುಗಳು ಮೇಯದ ಇದನ್ನು ಎಲ್ಲೆಡೆ ನೋಡಬಹುದು. ಹುಳು, ಕೀಟಗಳ ಬಾಧೆಗೆ ತುತ್ತಾಗದ ಈ ಮರ ಸುಮಾರು 70 ವರ್ಷಗಳವರೆಗೆ ಬಾಳುವುದೆಂದು ಹೇಳಲಾಗುತದೆ. ಒಟ್ಟಾರೆ ಸಿಮರೂಬಾ ಔಷಧಿಯಾಗಿ, ಪರಿಸರ ಸ್ನೇಹಿ ಮರವಾಗಿ, ಮಣ್ಣಿನ ಸಂರಕ್ಷಣೆಯಲ್ಲಿ, ಜನರ ಬದುಕಿನ ಅಗತ್ಯ ವಸ್ತು ಸಾಮಗ್ರಿ ಒದಗಿಸುವ ಕಾಯಕಲ್ಪವಾಗಿ ಅಭೂತಪೂರ್ವ ಮನ್ನನೆ ಗಳಿಸಿರುವುದನ್ನು ನೋಡಿದರೆ ನಿಜಕ್ಕೂ ಇದು ಹೆಸರಿಗೆ ತಕ್ಕ ಹಾಗೇ ಲಕ್ಷ್ಮಿಯೇ ಸರಿ. ಅಂತಹ ಲಕ್ಷ್ಮಿ ತರುವನ್ನು ನೀವೂ ತರುವಿರಾ ? ಮನೆ, ಸುತ್ತಲಿನ ಬಯಲಿನಲ್ಲಿ ನೆಟ್ಟು ಪರಿಸರ ಉಳಿಸುವಿರಾ ? ಯೋಚಿಸಿ.


ಆಕರಗಳು :

1) ಫಾರ‍್ಮಸಿಟಿಕಲ್ ಇಂಪಾರ‍್ಟನ್ಸ್ ಆಫ್ ಸಿಮರೂಬಾ – ಜಿಬಿ ಆಂಟೋನಿ ಸಂಗಡಿಗರು

2) ಮೆಡಿಸಿನಲ್‌  ಪ್ಲಾಂಟ್ಸ್ ಸಿಮರೂಬ - ಆರ್ ಕೆ ಭಟ್ಟಾಚಾರ್ಯ ಸಂಗಡಿಗರು

3) ವಿಕಿಪಿಡಿಯಾ

4) ಜಾಲತಾಣ

No comments:

Post a Comment