Wednesday, September 4, 2024

ಕಲಿಕಾ ಪಲ್ಲಟದ ಪರಿಶ್ರಮ

        ಕಲಿಕಾ ಪಲ್ಲಟದ ಪರಿಶ್ರಮ 
ಪ್ರೊ|| ಎಮ್. ಆರ್.ನಾಗರಾಜು,
ವಿಜ್ಞಾನ ಸಂವಹನಕಾರರು 

ಬೋಧನೆಯನ್ನು ಕುರಿತು ಸಾರ್ವತ್ರಿಕವಾಗಿ ಚರ್ಚೆ ಮಾಡುವ ವಾದ ಮಾಡುವ ಲೇಖನ ಬರೆಯುವ ಪರಿಪಾಠ ನಮಗಿದೆ. ಅದು ತಪ್ಪೇನಲ್ಲ. ಆದರೆ ಆಯಾ ಕಲಿಕಾ ವಿಷಯಗಳಿಗೆ ಮಾತ್ರ ಅನ್ವಯವಾಗುವಂತಹ ಕೆಲವು ಸೂಕ್ಷ್ಮ ಅಂಶಗಳು ಆ ಬಗೆಯ ಚರ್ಚೆಯಲ್ಲಿ ಬರಲು ಆಸ್ಪದವೇ ಇರುವುದಿಲ್ಲ.

ಉದಾಹರಣೆಗೆ ಪದ್ಯವೊಂದನ್ನು ಬೋಧಿಸುವ ಬಗೆಗೂ, ಗಣಿತ ಪ್ರಮೇಯವೊಂದನ್ನು ಕಲಿಸುವ ಬಗೆಗೂ ಅಂತರ ಇರುತ್ತದೆ. ಪದ್ಯದಲ್ಲಿ ಪ್ರಸ್ತಾಪ ಆಗಿರುವ ಅಂಶಗಳು ವಿದ್ಯಾರ್ಥಿಯ ನೇರ ಅನುಭವಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಕಲ್ಪನೆಗೆ ಎಟುಕಬಹುದಾದ ಮಾನವ ವರ್ತನೆಯದು. ಅವರಿಗೆ ಸಮಸ್ಯೆಯೆಂದರೆ, ಅವರು ಬಳಕೆ ಮಾಡುವ ಪದಕ್ಕಿಂತ ಭಿನ್ನವಾದ ಪದವನ್ನು ಪದ್ಯದಲ್ಲಿ ಪ್ರಾಸದ ಸಲುವಾಗಿ ಬಳಕೆ ಮಾಡುವುದು. ಆ ಭಾಷಾಜ್ಞಾನ, ಭಾಷೆಯ ಪದಾನ್ವಯ, ಸಂರಚನೆಯನ್ನು ಆತ್ಮೀಯಗೊಳಿಸಿದರೆ ಆಯಿತು ಭಾಷೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿರುವ ಬಗೆಗೆ ಮಕ್ಕಳ ಗಮನ ಸೆಳೆದರಾಯಿತು.

ಗಣಿತ ವಿಷಯ ಹಾಗಲ್ಲ. ಅಲ್ಲಿ ಭಾವಾವೇಶದ ಅಂಶ ಕಡಿಮೆ. ಜೊತೆಗೆ ಅಲ್ಲಿ ಕಲಿಸುವ ಪಾಠದ ಸಮಸ್ಯೆ ರೂಪುಗೊಂಡ ಬಗೆ, ಪರಿಹಾರ ಕಂಡುಕೊಂಡ ಬಗೆಯನ್ನು ಸಂಕ್ಷೇಪವಾಗಿ ಹೇಳಿರುತ್ತಾರೆ. ಇಲ್ಲವೆ ಹೇಳಿರುವುದಿಲ್ಲ. ಮುಖ್ಯವಾದ ಒತ್ತು ತರ್ಕದ ಪ್ರಾರಂಭಿಕ ಸ್ಥಾನದಿಂದ ಅಂತಿಮ ಗುರಿ ತಲುಪಿದ ಪರಿ ಹಾಗೂ ಅಂತಹದೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಬಗೆ, ಪರಿಹರಿಸುವ ಪರಿ ಇವಕ್ಕೆ ಹೆಚ್ಚು ಒತ್ತು. ಅಮೂರ್ತದೊಂದಿಗೆ ನಿರ್ಭಾವುಕ ತರ್ಕದೊಂದಿಗೆ ವ್ಯವಹಾರ.

ತರಗತಿಯ ಮೊದಲ ಅವಧಿಯಲ್ಲಿ ತಲ್ಲೀನವಾಗಿ ವಿಷಯವೊಂದರಲ್ಲಿ ಭಾಗವಹಿಸಿರುವ ವಿದ್ಯಾರ್ಥಿ ಬೆಲ್ ಹೊಡೆದ ಕೂಡಲೆ ಮತ್ತೊಂದು ಅವಧಿಯ ಬೇರೆ ಪಾಠದ ಬೇರೆ ಕಲಿಕಾ ವಿಧಾನಕ್ಕೆ ಪೂರಕವಾದ ಮನೋಭಾವ ರೂಢಿಸಿಕೊಳ್ಳಬೇಕು. ಪದ್ಯದ ತರಗತಿಯಲ್ಲಿನ ಭಾಷಾಜ್ಞಾನ ಸ್ವರೂಪ, ಗಣಿತದ ತರಗತಿಯ ಭಾಷಾಜ್ಞಾನ ಸ್ವರೂಪ ಬೇರೆ ಬೇರೆ. ಕಲಿಕಾಧೋರಣೆಯನ್ನು ಪ್ರತಿ ಅವಧಿ 45-60 ನಿಮಿಷಗಳಿಗೊಮ್ಮೆ ದಿನಕ್ಕೆ ಆರೇಳು ಬಾರಿ ಬದಲಾಯಿಸಿಕೊಳ್ಳುವ ಕಸರತ್ತು ಮಾಡಬೇಕು. ಬೇರೆ ಅಧ್ಯಾಪಕರು ಬರುವ ಕಾರಣ ಅವರಿಗೆ ಈ ಕಸರತ್ತಿನ ಈ ಅನುಭವ ಇರುವುದಿಲ್ಲ. ಅವರ ಬಾಲ್ಯದಲ್ಲಿ ಅನುಭವಿಸಿದ ಈ ವೇದನೆ ಮರೆತುಹೋಗಿರಲಿಕ್ಕೂ ಸಾಕು. ಹೀಗಾಗಿ ಎಲ್ಲರೂ ತಂತಮ್ಮ ಕಲಿಕಾ ವಿಧಾನಕ್ಕೆ ಒಗ್ಗಿಕೊಳ್ಳುವಂತೆ ಒತ್ತಾಯ ಹೇರುತ್ತಾರೆ. ಚಲಿಸುವ ವಸ್ತು ಚಲಿಸುತ್ತಲೇ ಇರುವ, ನಿಂತವಸ್ತು ನಿಂತೇ ಇರುವ ಪ್ರವೃತ್ತಿ ಬಗ್ಗೆ ನ್ಯೂಟನ್ ಹೇಳಿ ಆ ಪರಿಯನ್ನು ಬದಲಾಯಿಸಲು ಬಾಹ್ಯ ಒತ್ತಡ ಹಾಕಬೇಕೆಂದು ಹೇಳಿರುವುದನ್ನು ನೆನಪು ಮಾಡಿಕೊಳ್ಳೋಣ. ಆದರೆ ಮಕ್ಕಳು ಬಲಪ್ರಯೋಗವನ್ನು ಆಂತರಿಕವಾಗಿ ಸ್ವಪ್ರಯತ್ನಪೂರ್ವಕವಾಗಿ ಮಾಡಬೇಕು; ತಡವಾಗಿ ಮಾಡುವಂತಿಲ್ಲ.



 ಕೆಲಸದ ಬದಲಾವಣೆ-ವಿಶ್ರಾಂತಿ (Rest is change of work) ಎಂದು  ಹೇಳುವರು. ಎರಡನೇ ವಿಧಾನಕ್ಕೆ ಬದಲಾವಣೆ ಮೊದಲನೆ ವಿಧಾನಕ್ಕೆ ವಿಶ್ರಾಂತಿ ಎಂದಿದರ ಅರ್ಥ. ಹಾಗಾದರೂ ಈ ವಿಶ್ರಾಂತಿಗಳಿಸಲು ಮೊದಲ ಕಲಿಕಾ ಶ್ರಮದಿಂದ ಎರಡನೆ ಕಲಿಕಾ ಕ್ರಮಕ್ಕೆ ಪಲ್ಲಟ ಆಗುವ ಶ್ರಮ ಪಟ್ಟಮೇಲೆ ತಾನೆ ಈ ವಿಶ್ರಾಂತಿ ಲಭ್ಯ!

  ಎಲ್ಲ ಪ್ಯಾಷನ್‌ಗಳೂ (Passion) ಫ್ಯಾಷನ್ಗಳಾಗಿವೆ (Fashion), ಶಿಕ್ಷಣವೂ ಇದಕ್ಕೆ ಹೊರತಲ್ಲ.

 ಪ್ರತಿ ಅವಧಿ (Period) ಕೊನೆಯಲ್ಲಿ ಶ್ರಮ ವಿಶ್ರಾಂತಿಯ ಕಣ್ಣುಮುಚ್ಚಾಲೆ ಆಟ ಮಕ್ಕಳಿಗೆ ದಣಿವನ್ನು ಮಾಡುತ್ತದೆ. ಇಷ್ಟೇ ಅಲ್ಲ, ಶಾಲೆ ಮುಗಿಸಿ ಬಂದ ಮೇಲೂ ಮಾರನೆ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಓದುವಾಗಲೂ ವಿಷಯಪಲ್ಲಟ ಹಾಗೂ ಅದರ ಅಂಗವಾಗಿ ಕಲಿಕಾವಿಧಾನದ ಪಲ್ಲಟ ಆಗಲೇಬೇಕು. ಹೀಗಾಗಿ ಪಲ್ಲಟದ ಹಿಡಿತ ಶಾಲೆಯಲ್ಲೂ, ಮನೆಯಲ್ಲೂ ಇರುತ್ತದೆ. ಆಗ ಮಕ್ಕಳು ಏನು ಮಾಡುತ್ತಾರೆ?

 ಶಾಲೆಯಲ್ಲಂತೂ ಕಲಿಕಾ ವಿಧಾನ ಪಲ್ಲಟ ಅನಿವಾರ್ಯ. ಆದರೆ ಮನೆಯಲ್ಲಿ ಓದುವಾಗ ವೇಳಾಪಟ್ಟಿಗೆ ಅನುಗುಣವಾಗಿ ಓದದೆ ಯಾವುದೋ ಒಂದು ವಿಷಯ ಓದುತ್ತಾರೆ. ಉಳಿದ ವಿಷಯಗಳಿಗೆ ಹಿಂದಿನ ಕಲಿಕೆಯನ್ನು ಓದಿ ನೆನಪಿಸಿಕೊಂಡು ಸಿದ್ಧರಾಗಿ ತರಗತಿಗೆ ಬರುವುದಿಲ್ಲ.

 ಈ ಪ್ರವೃತ್ತಿಯನ್ನು ತಪ್ಪಿಸಲು ಮನೆಕೆಲಸ (home work) ಪರಿಹಾರವೆಂದು ಶಿಕ್ಷಣತಜ್ಞರು, ಅಧ್ಯಾಪಕರು ಭಾವಿಸುತ್ತಾರೆ. ಈ ನೆವದಲ್ಲಿಯಾದರೂ ಕೇವಲ ಓದಿ ನೆನಪಿನಲ್ಲಿ ಇಟ್ಟುಕೊಳ್ಳುವ ಬದಲು ಬರೆದು ಅಭ್ಯಾಸ ಮಾಡಲಿ ಎಂಬ ಆಶಯವೂ ಇರುತ್ತದೆ. ಆದರೆ ಮನೆಕೆಲಸವನ್ನು ಯಾವ ವಿಷಯದಲ್ಲಿ ನೀಡಬೇಕೆಂಬ ಬಗೆಗೆ ವೇಳಾಪಟ್ಟಿ ತಯಾರಿಸುವುದು ಕೆಲವೇ ಶಾಲೆಗಳಲ್ಲಿ. ಉಳಿದಂತೆ ಕೆಲವೊಮ್ಮೆ ಎಲ್ಲ ವಿಷಯಗಳಲ್ಲೂ ನೀಡಲಾಗುತ್ತದೆ. ಕೆಲವು ದಿನ ಯಾವ ವಿಷಯದಲ್ಲೂ ನೀಡಲಾಗುವುದಿಲ್ಲ. ಹೀಗಾಗಿ ಕೆಲಸದ ಹೊರೆ ಸಮರೂಪದಲ್ಲಿರುವುದಿಲ್ಲ. ಅಲ್ಲದೆ ಮತ್ತೆ ವಿಷಯಾಂತರ ಮಾಡುವಾಗ ಕಲಿಕಾ ಕ್ರಮದ ಪಲ್ಲಟವೂ ಉಂಟಾಗುತ್ತದೆ. ಮನೆಕೆಲಸದ ಆಯಾಸದ ಜೊತೆಗೆ ಈ ಪಲ್ಲಟದ ಆಯಾಸಕೂಡಾ ಆಗುತ್ತದೆ.

 ಹಿಟ್ಲರ್, ಸೈನಿಕರನ್ನು ‘ಫಿರಂಗಿ (cannon) ಮೇವು’ ಎನ್ನುತ್ತಿದ್ದ. ವಿದ್ಯಾರ್ಥಿಗಳು ಕಲಿಕಾ ಉದ್ಯಮದ ಕಚ್ಚಾಸಾಮಾಗ್ರಿಗಳು. ಇತ್ತೀಚಿನ ದಿನಗಳಲ್ಲಿ ಮನೆಪಾಠ ಮನೋರೋಗವಾಗಿ ಪರಿಣಮಿಸಿದೆ. ಹಿಂದೆ, ಮಕ್ಕಳನ್ನು ಶಾಲೆಗೆ ಕಳಿಸುವಾಗ ಯಾರಿಗೆ ಪೂರಕ ಕಲಿಕೆ ಅಗತ್ಯವಿದೆಯೊ ಅವರನ್ನು ಮಾತ್ರ ಮನೆ ಪಾಠಕ್ಕೆ ಕಳಿಸಲಾಗುತ್ತಿತ್ತು. ಅಂತಹ ಮಕ್ಕಳ ಕಡೆಗೆ ವೈಯಕ್ತಿಕ ಅಗತ್ಯಲಕ್ಷ್ಯ ನೀಡಲಾಗುತ್ತಿತ್ತು.

ಈಗ ಹಾಗಲ್ಲ. ಎಲ್ಲ ಹುಡುಗರಿಗೂ ಮನೆಪಾಠ ಶಾಲೆಯ ಪಾಠದ ಜೊತೆಗೆ ಇರಲೆಬೇಕು. ಗೆಲ್ಲಲಬೇಕೆಂಬ ಛಲ, ಮಕ್ಕಳು ಜಾಣರಲ್ಲವೇನೋ ಎಂಬ ಗುಮಾನಿ-ಈ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ನಮ್ಮ ಬಾಲ್ಯದಲ್ಲಿ ನಾವು ಮನೆ ಪಾಠಕ್ಕೆ ಹೋಗಲು ವಿದ್ಯಾರ್ಥಿಗಳಾಗಿ ನಿರಾಕರಿಸುತ್ತಿದ್ದೆವು. ಮನೆಪಾಠಕ್ಕೆ ಹೋಗಿ ಎರಡನೇ ಬಾರಿ ಕೇಳಿಸಿಕೊಳ್ಳುವುದು ದಡ್ಡತನ ಒಪ್ಪಿದಂತೆ ಎಂಬುದು ನಮ್ಮ ಆಗಿನ ಧೋರಣೆ. ಜೊತೆಗೆ ಬಡತನ ಇದ್ದ ಕಾರಣ ಅನೇಕರ ಮನೆಗಳಲ್ಲಿ ಮಕ್ಕಳನ್ನು ಮನೆ ಪಾಠಕ್ಕೆ ಕಳುಸುವುದು ಆಗದ ಮಾತಾಗಿತ್ತು. ತಾವು ಓದುವುದಾಗಿ ಮಕ್ಕಳು ತಂದೆ ತಾಯಿಯರಿಗೆ ಆತ್ಮವಿಶ್ವಾಸ ತುಂಬುತ್ತಿದ್ದರು.

 ಈಗ ಮನೆಪಾಠ, ಅಲ್ಲಿಗೆ ಹೋಗಲು ವಾಹನ ಸೌಕರ್ಯ ಐಚ್ಛಿಕ ವಿಷಯವಲ್ಲ. ಅನಿವಾರ್ಯವಾಗಿ ಮಾಡಲೇಬೇಕಾದ ವಿದ್ಯಾರ್ಥಿಸೇವೆ. ನಾವು ವಿದ್ಯಾರ್ಥಿಗಳಾಗಿದ್ದಾಗ, ನಮ್ಮ ಅಧ್ಯಯನದಿಂದ ಗಳಿಸಿದ ಅಂಕದ ಶ್ರೇಯಸ್ಸು ಮನೆ ಪಾಠದ ಅಧ್ಯಾಪಕರಿಗೆ ಹೋಗಬೇಕೇಕೆ ಎಂದು ಹೇಳುವ ದಿಟ್ಟತನ ವಿದ್ಯಾರ್ಥಿಗಳಿಗಿತ್ತು. ಈಗ ಆ ದಿಟ್ಟತನ ವಿದ್ಯಾರ್ಥಿಗಳಲ್ಲೂ ಉಳಿದಿಲ್ಲ.

 ಮನೆಪಾಠಕ್ಕೆ ಮಕ್ಕಳನ್ನು ಕಳಿಸುತ್ತಿರುವ ಕಾರಣ ಮನೆಕೆಲಸಕೊಡುವುದು ಕಡಿಮೆ ಆಗಿದೆ. ಪೋಷಕರೆ ಮನೆ ಕೆಲಸ ಕೊಡಬೇಡಿರೆಂದು ಶಾಲಾ ಅಧ್ಯಾಪಕರಿಗೆ ಮನವಿ ಮಾಡಿಕೊಳ್ಳುತ್ತಾರೆ. ಅಂತೂ ಮನೆ ಕೆಲಸ ಕಮ್ಮಿಯಾಗಿ (ನಿಶ್ಯೇಷವಾಗಿ ಇಲ್ಲವಾಗಿಲ್ಲ) ಮನೆ ಪಾಠ ಆ ಜಾಗವನ್ನು ಆಕ್ರಮಿಸಿದೆ.

 ಇದರ ನಕಾರಾತ್ಮಕ ಪರಿಣಾಮಗಳೂ ಅನೇಕ ಸಮಯದ ಅಭಾವ, ಕಲಿಕಾಕ್ರಮ ಪಲ್ಲಟದ ಹೆಚ್ಚಳ. ಮುಕ್ತ ಆಲೋಚನೆ ಮಾಡುವ ಮಟ್ಟಿಗೆ ಮಕ್ಕಳು ಭಾಗವಹಿಸುವುದು ಎಲ್ಲವೂ ಹಿಂದೆ ಸರಿದಿವೆ. ಮೊದಲನೆ ತರಗತಿಯಿಂದಲೆ ಮಕ್ಕಳು ಶಾಲೆಯ ಜೊತೆಗೆ ಮನೆಪಾಠಕ್ಕೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಕೈಪಿಡಿಗಳ ಕಾಲ್ಪಿಡಿದು ಅಂಕಗಳಿಸಬೇಕಾಗಿದೆ. ಇದರ ಜೊತೆಗೆ ಸ್ಮಾರ್ಟ್ ತರಗತಿಗಳಲ್ಲಿ ಹೇಳಿದ ಪಾಠದ ಇನ್ನೊಂದು ನಿರೂಪಣೆಯನ್ನು ಕೇಳುವ ಪರಿಸ್ಥಿತಿ ಉಂಟಾಗಿದೆ.

ಯಂತ್ರವೇಗದಲ್ಲಿ ಕಲಿಕಾ ಪ್ರಕ್ರಿಯೆ ಸಾಗುವಾಗ ಆಲೋಚನೆ, ಆಸ್ವಾದ, ಆನಂದ ಎಲ್ಲವೂ ಹಿಂದೆ ಸರಿದು ಬದುಕಿಗೂ ಮೀರಿ ಕಲಿಕೆ ಯಾಂತ್ರಿಕವಾಗಿದೆ. ಕೃಷಿ, ಚಲನಚಿತ್ರ, ಮೊದಲಾದ ವಿಶಿಷ್ಟ ಸಂಘನಾಕಾರ್ಯಗಳು ಉದ್ದಿಮೆ (Industry) ಎನಿಸಿದ ಹಾಗೆ ಕಲಿಕೆ ಉದ್ಯಮವಾಗಿದೆ. ಶಾಲೆ ಕೈಗಾರಿಕಾ ಕಾರ್ಖಾನೆ ಆಗಿದೆ.

 ಪ್ರೊ||ಎಮ್.ಆರ್.ನಾಗರಾಜು, ಎಸ್.ವಿ.ಪ್ರಗತಿ,ಮೊದಲ ಮಹಡಿ,06 #251,ಎಚ್.ವಿ ಹಳ್ಳಿ ಅಂಚೆ, ರಾಜರಾಜೇಶ್ವರಿ ನಗರ, ಬೆಂಗಳೂರು-560098, 

ದೂರವಾಣಿ: 080-29500331, 

ಚರವಾಣಿ-9480093875, 

ಮಿಂಚಂಚೆ: mrnynk@gmail.com 

No comments:

Post a Comment