Wednesday, September 4, 2024

ಶೈಕ್ಷಣಿಕ, ಸಾಮಾಜಿಕ ಸೇವೆಗೆ ಅನ್ವರ್ಥ ಈ ಗಿರೀಶ್‌ !!!


 ಶೈಕ್ಷಣಿಕ, ಸಾಮಾಜಿಕ ಸೇವೆಗೆ ಅನ್ವರ್ಥ ಈ ಗಿರೀಶ್‌‌ !!! 

                                                                                
                                         ಲೇ : ರಾಮಚಂದ್ರ ಭಟ್‌ ಬಿ.ಜಿ


 ಶಿಕ್ಷಕ ದಿನಾಚರಣೆಯಂದು  ದೆಹಲಿಯಲ್ಲಿ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರಿಂದ ರಾಷ್ಟ್ರೀಯ ಶಿಕ್ಷಕ   ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಗಿರೀಶ್.‌H.N.


 ಮೆಣಸಿಕ್ಯಾತನಹಳ್ಳಿ  ಮೈಸೂರಿನ ಪುಟ್ಟ ಗ್ರಾಮ.HIV ಪೀಡಿತನೊಬ್ಬ ಸಾಮಾಜಿಕ ನಿಂದನೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಏಡ್ಸ್ ಭಯದಿಂದ ಗ್ರಾಮಸ್ಥರು ಆತನ ಕುಟುಂಬಸ್ಥರಿಗೆ ಆತನ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ. ಸೀಮೆಎಣ್ಣೆ ಬಳಸಿ ಹಾಗೂ ಹೀಗೂ ಅಂತೂ ಯಾವುದೋ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಿಬಿಡುತ್ತಾರೆ ಆತನು ಕುಟುಂಬಸ್ಥರು. ಇದು ಈ ಘಟನೆಯ ನಂತರ ಆ ಹಳ್ಳಿಯ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕರಾಗಿ ಬಂದಿರುವ ಯುವಕನ ಗಮನಕ್ಕೆ ಬರುತ್ತದೆ. ತನ್ನ ವಿದ್ಯಾರ್ಥಿಗಳಿಂದ ಘಟನೆಯ ವಿವರಗಳನ್ನು ತಿಳಿದುಕೊಂಡ ಮಾತೃ ಹೃದಯದ ಆತ ಮಮ್ಮಲ ಮರುಗಿದ. ತನ್ನ ಶಿಕ್ಷಕ ತಂದೆಯಿಂದ ಬಳುವಳಿಯಾಗಿ ಬಂದ ಸಾಮಾಜಿಕ ಪ್ರಜ್ಞೆ ಆತನಲ್ಲಿ ಜಾಗೃತಿಗೊಂಡಿತು. ಮನಸ್ಸಿನಲ್ಲಿ  ಇಂತಹ ಸಾಮಾಜಿಕ ಪಿಡುಗಿಗೆ ಯಾವುದೇ ಉಪಾಯವಿಲ್ಲವೇ ? ಎಂಬ ಪ್ರಶ್ನೆ ಮೂಡಿತು. ಇದಕ್ಕೆ ಜನಜಾಗೃತಿ ಮೂಡಿಸಲೇಬೇಕು. ವಿಜ್ಞಾನ ಶಿಕ್ಷಕನಾಗಿ ನನ್ನ ಹೊಣೆಗಾರಿಕೆ ಏನು? ಚಿಂತೆಯ ಚಿತೆಯುರಿಯಲಾರಂಭಿಸಿತು. ಸಮಾಜ ದೇವರು ಮತ್ತು ವಿಜ್ಞಾನಗಳ ಸುತ್ತಲೇ ಗಿರಕಿ ಹೊಡೆಯುತ್ತಾ ಆಲೋಚನೆಗಳು ಕೊನೆಗೊಂದು ಮೂರ್ತರೂಪವನ್ನು ಪಡೆದುಕೊಂಡವು. ಈಗಾಗಲೇ ಪ್ಲೇಗ್‌ ಮಾರಿಯಿಂದ ರಕ್ಷಣೆಗಾಗಿ ಪ್ಲೇಗ್‌ ಮಾರಮ್ಮನ ಮೊರೆ ಹೋಗಿ ಮಾನಸಿಕ ಸಮಾಧಾನ ಪಡುತ್ತಿರುವುದು ನೆನಪಿಗೆ ಬಂತು. ಉಪಾಯ ಹೊಳೆದೇ ಬಿಟ್ಟಿತು. ಜನ ಜಾಗೃತಿಗಾಗಿ ಆತ ಏಡ್ಸಮ್ಮ ದೇವಾಲಯ ಕಟ್ಟಿಸಿದ.


 ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡ. ರಾಷ್ಟ್ರದ ಗಮನ ಸೆಳೆದ ಈ ಯುವ ಶಿಕ್ಷಕನ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ.!!! ನಾನು ಹೇಳುತ್ತಿರುವುದು ಯಾವುದೇ ಕಟ್ಟುಕಥೆ ಅಥವಾ ಸಿನಿಮಾ ಕಥೆಯಲ್ಲ. ನಮ್ಮ ಈ ಸ್ಫೂರ್ತಿದಾಯಕ ಕಥನದ  ಹೀರೋ ಗಿರೀಶ್ ಹೆಚ್. ಎನ್. ಇವರೇ ಈ ಬಾರಿಯ  ಕನ್ನಡದ ನೆಲದಿಂದ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಮೊದಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 

ಪ್ರಸ್ತುತ ಗಿರೀಶ್‌ ರವರು ಮೈಸೂರು ಜಿಲ್ಲೆಯ ಹುಣಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆಯುವವರೆಗಿನ ಗಿರೀಶ್‌ರ ಹಾದಿ ಯಾವುದೇ ಬ್ಲಾಕ್‌ ಬಸ್ಟರ್‌ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇಲ್ಲಿ ನೋವು- ನಲಿವುಗಳಿವೆ. ಬಿಟ್ಟೂ ಬಿಡದೆ ಬೆಂಬತ್ತಿದ ಅವಮಾನಗಳಿವೆ. ಅದೇ ರೀತಿ ಸಾಧನೆಗೆ ಸಿಕ್ಕ ಸನ್ಮಾನಗಳಿವೆ. ಹಿಂದಿನ ನಮ್ಮ ಸಂಚಿಕೆಯಲ್ಲಿ ನೀವು ಓದಿದ ಪ್ಯಾಡ್ ಮ್ಯಾನ್‌ ನಂತಹ ರೋಚಕ ಸ್ಫೂರ್ತಿದಾಯಕ ಕಥನವಿದು. ಸಮಾಜದ ಜನರ ಸೇವೆಗೆ ಹೊರಟವನನ್ನು ಜನರು ಕುಹಕ ತನದಿಂದ ಏಡ್ಸ್ ಗಿರೀಶ್ ಎಂದಾಗ ಕುಟುಂಬಸ್ಥರ ಮಾನಸಿಕ ರೋಧನ ಹೇಗಿರಬೇಡ? ಅದನ್ನೇ ಸವಾಲಿನ ಮೆಟ್ಟಿಲಾಗಿಸಿ ಯಶಸ್ಸನ್ನು ಗಳಿಸಿದ, ಆ ಹೆಸರು ನನಗೆ ಹೆಮ್ಮೆ ಎಂದು ಹೇಳುವ ಗಿರೀಶ್ ರವರದ್ದು ಅಪರೂಪದ ಅನುಕರಣ ಯೋಗ್ಯ ಸಮಚಿತ್ತದ ವ್ಯಕ್ತಿತ್ವ. ಇವರ ಕಾರ್ಯ ತತ್ಪರತೆಯನ್ನು ಗಮನಿಸಿದ ಮೈಸೂರು ಜಿಲ್ಲೆಯ ವಿವಿಧ ಸಂಸ್ಥೆಗಳು ತಮ್ಮ CSR ಫಂಡನ್ನು ನೀಡಿ ಸಹಾಯ ಹಸ್ತ ನೀಡಿದರು. ಹೀಗೆ 60 ಲಕ್ಷಕ್ಕೂ ಹೆಚ್ಚಿನ ಧನಸಹಾಯ ಪಡೆದು ಸುಸಜ್ಜಿತ ಜೀವಶಾಸ್ತ್ರ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾರೆ. ಈ ಪ್ರಯೋಗಾಲಯವನ್ನು ಮೈಸೂರು ಜಿಲ್ಲೆಯ ಅತ್ಯಂತ ಉತ್ತಮ ಹಾಗೂ ಯಾವುದೇ ಇತರ ಖಾಸಗಿ ಕಾಲೇಜುಗಳ ಪ್ರಯೋಗಾಲಯಕ್ಕೆ ಕಡಿಮೆ ಇಲ್ಲದಂತೆ ಸಜ್ಜುಗೊಳಿಸಿದ್ದಾರೆ.

 
 94ನೇ ಇಸವಿಯಲ್ಲಿ ಕೊಡಗು ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ಗಿರೀಶ್ ರವರು ಮೊದಲ ಬಾರಿಗೆ ಸಮಾಜದ ಜನರಲ್ಲಿ ಕಣ್ಣುಗಳ ದಾನದ ಕುರಿತ ಮಹತ್ವ ಮೂಡಿಸಲು ಚಳುವಳಿಯೊಂದನ್ನು ಪ್ರಾರಂಭಿಸುವ ಮೂಲಕ ತಮ್ಮ ಶೈಕ್ಷಣಿಕ ಕಾರ್ಯದೊಂದಿಗೆ ಸಾಮಾಜಿಕ ಕ್ರಾಂತಿಗೆ ಪ್ರಯತ್ನಿಸಿದರು. ಸ್ವತಂತ್ರ ಭಾರತದ 50ನೇ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೇತ್ರದಾನದ ಬಗ್ಗೆ ತಮ್ಮ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ಅರಿವು ಮೂಡಿಸುವುದರ ಜೊತೆ ನೇತ್ರದಾನ ಮಾಡಲು ಮನವೊಲಿಸಿ ವಹಿಯಲ್ಲಿ ೩೫೦ಕ್ಕೂ ಹೆಚ್ಚು ಜನರಿಂದ ಸಹಿ ಹಾಕಿಸಿದರು.  ಇದು ಕ್ರಮೇಣ ಈ ಯೋಜನೆ ಸಾಕಷ್ಟು ವಿವಾದಕ್ಕೆ ಒಳಗಾಯಿತು. ಮಾಪಿಳ್ಳೆ ಸಮುದಾಯದ ಜನರು ಇದನ್ನು ವಿರೋಧಿಸಿ ಮೇಲಧಿಕಾರಿಗಳಿಗೆ ದೂರು ನೀಡಿದರು. ಮೇಲಧಿಕಾರಿಗಳು ಊರ ಉಸಾಬರಿ ನಿಮಗೆಕೇ? ಧರ್ಮವಿರೋಧಿಯಾದ ನಿಮ್ಮ ಈ ಸಮಾಜಮುಖಿ  ಕಾರ್ಯಕ್ರಮವನ್ನು ನಿಲ್ಲಿಸಿ. ನಿಮ್ಮ ಕರ್ತವ್ಯವಾದ ಬೋಧನಾ ಕಾರ್ಯವನ್ನು ಮಾತ್ರ ಅದನ್ನು ಸರಿಯಾಗಿ ನಿರ್ವಹಿಸಿ ಎಂಬ ಸೂಚನೆ ನೀಡಿದರು. ಹೀಗೆ ಮೊದಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಕೈಬಿಡಬೇಕಾಯಿತು ಎಂದು ಅಂದಿನ ಆ ದಿನಗಳ ಕುರಿತು ವಿಷಾದವನ್ನು ಹೊರ ಹಾಕುತ್ತಾರೆ  ಗಿರೀಶ್.

1998ರಲ್ಲಿ ಮೈಸೂರು ಜಿಲ್ಲೆಯ ಮೆಣಸಿಕ್ಯಾತನಹಳ್ಳಿಗೆ ವರ್ಗಾವಣೆಯಾಗಿ ಬಂದಾಗ ಅಲ್ಲಿ ನಡೆದ ಅಮಾನವೀಯ ಘಟನೆಯೊಂದು ಅವರ ಮನವನ್ನು ಕಲಕಿತು. ಆ ಊರಿನಲ್ಲಿ ಇದ್ದ ಎಚ್ಐವಿ ಪೀಡಿತರೊಬ್ಬರು  ಸಾಮಾಜಿಕ ಬಹಿಷ್ಕಾರದಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾದರು. ಈ ಸಂದರ್ಭದಲ್ಲಿ ಆ ಎಚ್ಐವಿ ಪೀಡಿತರ ಕಳೇಬರಕ್ಕೆ ಸ್ಮಶಾನದಲ್ಲೂ ಸ್ಥಳ ದೊರಕಲಿಲ್ಲ. ವೈದ್ಯರೇ ಹೆಚ್ಐವಿ ರೋಗಿಗೆ ಚಿಕಿತ್ಸೆ ನೀಡಲು ಹೆದರುತ್ತಾ ಇದ್ದ ಕಾಲವದು. ಇಂಥದ್ದರಲ್ಲಿ ಸಾಮಾನ್ಯ ಜನ ಎಚ್ಐವಿ ರೋಗಿಯ ಬಗ್ಗೆ ಯಾವ ಭಾವನೆಯನ್ನು ಇಟ್ಟುಕೊಂಡಿರಬಹುದು? ಹಾಗಾಗಿ ದೇಹದ ಅಂತ್ಯಸಂಸ್ಕಾರಕ್ಕೂ ಕೂಡ ಜನ ಅವಕಾಶ ನೀಡಲಿಲ್ಲ. ಕೋವಿಡ್‌ ಸಂದರ್ಭದ ಭೀತಿಯ ನಮ್ಮ ಬದುಕನ್ನು ನೆನಪಿಸಿಕೊಳ್ಳಬಹುದು. ಕುಟುಂಬ ವರ್ಗದವರು ಸೀಮೆಣ್ಣೆ ಸುರಿದು ಹೇಗೆ ಹೇಗೋ ಯಾವುದೊ ವಿಧಾನದಿಂದ ಕೊನೆಗೂ ಅಂತ್ಯಸಂಸ್ಕಾರ ಮಾಡಿದರು. ಗಿರೀಶ್ ತಮ್ಮ ವಿದ್ಯಾರ್ಥಿಗಳ ಮೂಲಕ ಈ ಘಟನೆಯನ್ನು ತಿಳಿದುಕೊಂಡಾಗ ಇದಕ್ಕೆ ಏನಾದರೂ ಮಾಡಲೇಬೇಕಲ್ಲ ಎಂಬ ಆಲೋಚನೆಯೊಂದು ಮೂಡಿತು. ಇದೇ  ಅವರ ಬದುಕಿಗೆ ದೊಡ್ಡ ತಿರುವು ನೀಡಿತು.
 ಹಿಂದಿನ ಸೋಲಿನ ಅನುಭವದಿಂದ ಪಾಠ ಕಲಿತ ಗಿರೀಶ್ ಈಗ ತಂತ್ರ ಒಂದನ್ನು ಹೂಡಿದರು. ಹೇಗೂ ಜನರಿಗೆ ದೇವರಲ್ಲಿ ತೀವ್ರವಾದ ಭಕ್ತಿ ಭಯ ನಂಬಿಕೆ ಎಲ್ಲ ಇದೆ. ನಮ್ಮಲ್ಲಿ ಪ್ರತಿಯೊಬ್ಬ ರೋಗಕ್ಕೂ ಒಬ್ಬ ಅಧಿದೇವತೆ ಇದ್ದಾರೆ. ಪ್ಲೇಗ್‌ ಮಾರಮ್ಮನ ಕೃಪೆಯಿಂದ ರೋಗದಿಂದ ಮುಕ್ತಿ ಕಾಣುವ ಹಳ್ಳಿಗಾಡಿನ ಮುಗ್ಧ ಮನಸ್ಸು. ಇದರಲ್ಲಿ ವಿಜ್ಞಾನವನ್ನು ಮಿಳಿತಗೊಳಿಸಿ ಏಡ್ಸ್ ಅಮ್ಮ ದೇವಾಲಯವನ್ನು ಕಟ್ಟಿಸಿದರು. ಈ ಗುಡಿಯಲ್ಲಿ ವಿದ್ಯಾರ್ಥಿಗಳಿಗೆ ಸಮಾಜದ ಜನರಿಗೆ ಏಡ್ಸ್ ರೋಗಕ್ಕೆ ಕಾರಣಗಳು, ಏಡ್ಸ್ ಬಂದಾಗ ಆ ವ್ಯಕ್ತಿಯನ್ನು ಉಪಚರಿಸುವ ವಿಧಾನ ಇತ್ಯಾದಿಗಳನ್ನು ವಿವರಿಸಲು ಪ್ರಾರಂಭಿಸಿದರು. ಆಗ ಮತ್ತೊಂದು ಹೋರಾಟ ಅವರ ವಿರುದ್ಧ ಪ್ರಾರಂಭವಾಯಿತು!!!
 ನೀನು ಮಹಿಳಾ ವಿರೋಧಿ ಎಂದು ಮಹಿಳಾ ಸಂಘಟನೆಗಳು ಅವರ ವಿರುದ್ಧ ತೊಡೆತಟ್ಟಿದವು. ಆಗ ಅತ್ಯಂತ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಆ ಮಹಿಳಾ ಮಣಿಯರಿಗೆ ನಾವು ಭೂಮಿತಾಯಿ ಅಂತ ಹೇಗೆ ಕರೀತೀವೋ , ಹಾಗೆಯೇ ಮಾರಮ್ಮ ಮೊದಲಾದ ಹೆಣ್ಣು ದೇವತೆಗಳು ಹೇಗೆ ರೋಗಗಳಿಂದ ಜನರಿಗೆ ರಕ್ಷಣೆ ನೀಡುತ್ತಾರೋ ಹಾಗೆ ಈ ಏಡ್ಸಮ್ಮ ತಾಯಿಯು ಜನರಿಗೆ ರೋಗದ ವಿರುದ್ಧ ರಕ್ಷಣೆ ನೀಡುತ್ತಾಳೆ ಎಂದು ಆ ಮಹಿಳಾ ಸಂಘಟನೆಯ ನಾಯಕಿಯರ ಮನವೊಲಿಸಿದರು. ದೇವರು ಮತ್ತು ವಿಜ್ಞಾನಗಳ ನಡುವಿನ ಘರ್ಷಣೆ ತಾಕಲಾಟಗಳು ಎಂದು ಮುಗಿಯದ ಕಥೆಗಳು.
 ಈ ಏಡ್ಸಮ್ಮ ದೇವಾಲಯ ಕೇವಲ ರಾಷ್ಟ್ರದ ಗಮನವನ್ನು ಸೆಳೆದದ್ದು ಅಷ್ಟೇ ಅಲ್ಲದೆ ವಿದೇಶದ ಗಮನವನ್ನು ಸೆಳೆಯಿತು. ಸಾಮಾಜಿಕ ಕಳಕಳಿಯುಳ್ಳ ಶಿಕ್ಷಕನೊಬ್ಬ ಏಡ್ಸಮ್ಮ ನ ಗುಡಿ ಕಟ್ಟಿ ಜನಜಾಗೃತಿಯನ್ನು ಮೂಡಿಸುತ್ತಿದ್ದಾನೆ ಎನ್ನುವ ಬಗ್ಗೆ ಪ್ರಕಟವಾದ ಪುಟ್ಟ ಲೇಖನವು ಪ್ರಚಾರವನ್ನೇ ಬಯಸದ ಗಿರೀಶ್ ರವರನ್ನು ಇದ್ದಕ್ಕಿದ್ದಂತೆ ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿತು. ಆಕಸ್ಮಿಕವಾಗಿ ಹವ್ಯಾಸಿ ಛಾಯಾಗ್ರಾಹಕನೊಬ್ಬ ತೆಗೆದ ಛಾಯಾಚಿತ್ರ ಹಾಗೂ ಪುಟ್ಟ ಲೇಖನ ವೈರಲ್ ಆಗಿಬಿಟ್ಟಿತು. ಇಂಡಿಯಾ ಟುಡೇ ಪತ್ರಿಕೆಯಲ್ಲಿ ಸ್ಟೀಫನ್ ಡೇವಿಡ್ ರವರು ಈ ಕುರಿತು ಒಂದು ಅಗ್ರ ಲೇಖನವನ್ನು ಬರೆದರು. ಇದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಗಮನವನ್ನು ಸೆಳೆಯಿತು . ಈ ಮೂಲಕ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಈ ಕುರಿತು ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ಕಳುಹಿಸಿತು. ಏಡ್ಸಮ್ಮ  ಗುಡಿಯ ನಿರ್ಮಾಣಕ್ಕೂ ಮೊದಲು ಈ ರೋಗದ ಕುರಿತು ಜನರಲ್ಲಿ ಯಾವ ರೀತಿಯಾದ ಜನಜಾಗೃತಿ ಇತ್ತು ? ನಂತರ ಯಾವ ರೀತಿಯಾದ ಜನಜಾಗೃತಿ ಹೆಚ್ಚಾಯಿತು ? ಎನ್ನುವುದರ ತುಲನಾತ್ಮಕ ಅಧ್ಯಯನಕ್ಕಾಗಿ, ಸಂಶೋಧನಾ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಅಧ್ಯಯನ ನಡೆಸಿದರು. ವಿಶ್ವದ ಪ್ರತಿಷ್ಟಿತ ವಿಶ್ವವಿದ್ಯಾಲಯ ನಡೆಸಿದ ಈ ಸಂಶೋಧನೆಯು ಗಿರೀಶ್ ರವರ ಛಾಯಾಚಿತ್ರದೊಂದಿಗೆ ಅಮೆರಿಕಾದ ಗೆಜಟಿಯರ್ ನಲ್ಲೂ ಕೂಡ ಪ್ರಕಟವಾಗಿದೆ . ಶಿಕ್ಷಕನೊಬ್ಬ ಇಂತಹ ಒಂದು ಅಪರೂಪದ ಸಂಶೋಧನೆಗೆ ಕಾರಣವಾದದ್ದು ಒಂದು ಅದ್ಭುತವೇ ಸರಿ. 

ಹೀಗೆ ಏಡ್ಸ್ ಕುರಿತು ಜನಜಾಗೃತಿ ಮೂಡಿಸುತ್ತಾ  ಹೆಚ್ಐವಿ ಪೀಡಿತ ವ್ಯಕ್ತಿಗಳ ಜೊತೆಗೆ ಇರುವುದರಿಂದ , ಅವರೊಂದಿಗೆ ಊಟ, ಆಟ- ಪಾಠಗಳನ್ನು ನಡೆಸುವುದರಿಂದ ರೋಗ ಹರಡುವುದಿಲ್ಲ ಎನ್ನುವುದನ್ನು ಜನರಿಗೆ ತಿಳಿಸುವ ಸಲುವಾಗಿ ತಾವೇ ಅವರೊಂದಿಗೆ ಊಟ ಮಾಡುತ್ತಿದ್ದರು. ಹೀಗಾಗಿ  ಗಿರೀಶ್ ರವರ ಬಗ್ಗೆಯೂ ಹಲವಾರು ಕಥೆಗಳು ಹುಟ್ಟಿಕೊಂಡವು . ಬಹುಶಃ ಈತನೂ ಏಡ್ಸ್ ರೋಗಿ ಇರಬೇಕು, ಅದಕ್ಕೇ ಈತ ಏಡ್ಸ್ ಜನರ ಜೊತೆಗೇ ಓಡಾಡುತ್ತಾನೆ ಎಂಬ ಗಾಳಿ ಸುದ್ದಿಯನ್ನು ಹುಟ್ಟುಹಾಕಿದರು!!!  ಸಹೋದ್ಯೋಗಿಗಳೂ ಸಂದೇಹದ ಕಣ್ಣುಗಳಿಂದ ಅವರನ್ನು ನೋಡಲು ಆರಂಭಿಸಿದರು. ಇವು ಗಿರೀಶರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡತೊಡಗಿದವು. ತಾನು ಮಾಡಿದ  ರಕ್ತದಾನದಿಂದ ಅಥವಾ ಸಲೂನುಗಳಿಂದ ತಮಗೂ ಏಡ್ಸ್ ಬಂದಿರಬಹುದೇ ಎನ್ನುವಂತಹ ಮಾನಸಿಕ ಸಂದೇಹವೂ ಗಿರೀಶರನ್ನು ಕಾಡಲಾರಂಭಿಸಿತು! ಮನಸ್ಸಿನ ಶಕ್ತಿ ಅಪಾರ !!! ಮೈಸೂರಿನ ಏಡ್ಸ್ ಪರೀಕ್ಷಾ ಕೇಂದ್ರಕ್ಕೆ ಹೋಗಿ ರಕ್ತ ಪರೀಕ್ಷೆಗೆ ನೀಡಿ ಗಂಟೆಗಳ ಕಾಲ ಫಲಿತಾಂಶಕ್ಕೆ ಕಾಯುವಾಗ ನಡೆಯುತ್ತಿದ್ದ ಮಾನಸಿಕ ತುಮುಲ ಹೇಳತೀರದು. ಎಚ್ಐವಿ ನೆಗೆಟಿವ್ ರಿಪೋರ್ಟ್ ಬಂದಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಊರಿಗೆಲ್ಲ ಆ ರಿಪೋರ್ಟನ್ನು ಹಂಚಿದ್ದೇ ಹಂಚಿದ್ದು!!! ಶಾಲೆಯಲ್ಲಿ, ವಿದ್ಯಾರ್ಥಿಗಳಿಗೆಲ್ಲ  ಮಕ್ಕಳೇ ನಾನು ಎಚ್ಐವಿ ಪಾಸಿಟಿವ್ ಅಲ್ಲ. ಆದರೆ ಎಚ್ಐವಿ  ಪಾಸಿಟಿವ್ ರೋಗಿಗಳೆಡೆಗೆ ಪಾಸಿಟಿವ್ ಆಗಿ ಇದ್ದೇನೆ ಅಷ್ಟೇ. ನೀವೂ ನನ್ನ ಜೊತೆ ನಿಲ್ಲಿ. ಇಂತಹ ಸಾಮಾಜಿಕ ಪಿಡುಗುಗಳಿಂದ ನಾವು ಹೊರ ಬರಬೇಕು ಎಂದು ತಮ್ಮ ಸಾಮಾಜಿಕ ಕಳಕಳಿಯನ್ನು ಪ್ರತಿಪಾದಿಸುತ್ತಾ ತಮ್ಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸಮಾಜದಲ್ಲಿ ಜನ ಜಾಗೃತಿ ಮೂಡಿಸಲು ಏಡ್ಸ್‌ ಅಮ್ಮ  ಜಾತ್ರೆಯನ್ನು ನಡೆಸಿ ಜನಜಾಗೃತಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದರು. ಉದ್ದೇಶ ಸದುದ್ದೇಶವನ್ನು ಹೊಂದಿದ್ದರೆ ಎಲ್ಲವೂ ಕೈ ಹಿಡಿಯುತ್ತದೆ. ಈಗ ಸರ್ಕಾರವೂ ಬೆಂಬಲಕ್ಕೆ ನಿಂತಿತು. ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು.  ಅಲ್ಲದೇ ಬಿ.ಎಡ್ ಕಾಲೇಜು, ಟಿ.ಸಿ.ಎಚ್. ಕಾಲೇಜುಗಳು, ಪದವಿ ಕಾಲೇಜುಗಳು ಮತ್ತು ಶಾಲೆಗಳು ಹಲವಾರು ಶಿಕ್ಷಣ ಸಂಸ್ಥೆಗಳು, ಸ್ತ್ರೀ ಸ್ವ - ಸಹಾಯ ಸಂಘ ಸಂಸ್ಥೆಗಳಿಗೆ ಹೋಗಿ ಅಲ್ಲಿ 300ಕ್ಕೂ ಹೆಚ್ಚು ಜನ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದರು.  ಇವೆಲ್ಲದರ ಫಲವಾಗಿ ಸಮಾಜ ಅವರಿಗೆ ಏಡ್ಸ್ ಗಿರೀಶ್ ಎಂಬ ನಾಮಕರಣವನ್ನು ಮಾಡಿತು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಗಿರೀಶ್ ರವರು ಅದನ್ನೇ ಮಹಾಪ್ರಸಾದ ಎಂದುಕೊಳ್ಳುತ್ತಾ ತಮ್ಮ ವೈವಿಧ್ಯಮಯ ಜನಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಿದರು. ವಿದ್ಯಾರ್ಥಿಗಳ ಜೊತೆಗೂಡಿ ಒಂದು ಟನ್‌ಗೂ ಹೆಚ್ಚಿನ ಪ್ಲಾಸ್ಟಿಕ್‌ ಸಂಗ್ರಹಿಸಿ ಜನ ಜಾಗೃತಿ ಮೂಡಿಸಿದರು.

1300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿರುವ ತಮ್ಮ ಕಾಲೇಜಿನ ಹೆಣ್ಣು ಮಕ್ಕಳ ಋತುಚಕ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂತು. ಹೀಗಾಗಿ ಈ ಕುರಿತು ಒಂದು ಅಧ್ಯಯನ ನಡೆಸಿದಾಗ ಶೇಕಡ 41 ರಷ್ಟು ಹೆಣ್ಣು ಮಕ್ಕಳ ಪಾಲಕರಿಗೆ ಋತುಚಕ್ರದ ಸಮಯದಲ್ಲಿ ಮಕ್ಕಳು ಬಳಸುವ ಪ್ಯಾಡ್, ಕಪ್, ಪೂತಿ ನಾಶಕಗಳು ಮೊದಲಾದ ವಸ್ತುಗಳನ್ನು ಒದಗಿಸುವ ಚೈತನ್ಯವಿಲ್ಲದಿರುವುದು ತಿಳಿದುಬಂತು. ವಿಶ್ವಸಂಸ್ಥೆಯ ಪ್ರಕಾರ ಇದನ್ನು ಋತುಚಕ್ರ ಬಡತನ ಅಥವಾ  menstrual poverty ಎನ್ನುತ್ತಾರೆ. ಇದಕ್ಕಾಗಿ ವಿಶ್ವಸಂಸ್ಥೆ ಜನಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಋತುಚಕ್ರ ದಿನಾಚರಣೆ (world menstrual day) ಯನ್ನು  ಸಲುವಾಗಿ ಘೋಷಿಸಿದೆ.  ಪ್ರತಿ ಋತುಚಕ್ರದ ಸಾಮಾನ್ಯ ಅವಧಿ 28 ದಿನಗಳು ಹಾಗೂ ಋತುಚಕ್ರದಲ್ಲಿ ಸುಮಾರು ಐದು ದಿನಗಳ ಕಾಲ ಋತುಸ್ರಾವ ನಡೆಯುವುದರಿಂದ ಮೇ 28ನ್ನು ಋತುಚಕ್ರ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.   ಗಿರೀಶ್ ರವರು ತಮ್ಮ ಕಾಲೇಜಿನಲ್ಲಿ ಪ್ಯಾಡ್ ಬ್ಯಾಂಕನ್ನು ಸ್ಥಾಪಿಸಿ ಅವಶ್ಯಕತೆ ಇರುವ ಹೆಣ್ಣು ಮಕ್ಕಳಿಗೆ ಅವುಗಳನ್ನು ಬಳಸಲು ಅವಕಾಶ ನೀಡಿದರು. ಇವರ ಕಾರ್ಯವನ್ನು ಮನಗಂಡ ಅನೇಕ ದಾನಿಗಳು ಇದಕ್ಕೆ ಕೈಜೋಡಿಸಿದರು. ಋತುಚಕ್ರವು ನಿಯಮಿತವಾಗಿ ನಡೆಯುವುದು ಆರೋಗ್ಯವಂತ ದೇಹದ ಸಂಕೇತ. ಹಾಗಾಗಿ ನನ್ನ ಋತುಚಕ್ರ ನನ್ನ ಹೆಮ್ಮೆ, ಮುಟ್ಟು ಏನಿದರ ಗುಟ್ಟು?  No blood is Bad  ಎಂಬ ಕ್ಯಾಂಪೇನ್‌ಗಳನ್ನು ತಮ್ಮ ಕಾಲೇಜಿನಲ್ಲಿ ಪ್ರಾರಂಭಿಸಿದರು. ಈ ಕಾಳಜಿಯೊಂದಿಗಿನ ಜಾಗೃತಿ ಹೆಣ್ಣು ಮಕ್ಕಳಲ್ಲಿ ಹೊಸ ಚೈತನ್ಯವನ್ನು ಮೂಡಿಸಿತು. 

 


ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲಾರಂಭಿಸಿದರು. ಈ ಸಾಮಾಜಿಕ ಬದಲಾವಣೆ ಹೊಸ ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ಇವೆಲ್ಲವೂ ಜೀವಶಾಸ್ತ್ರ ಪಠ್ಯದಲ್ಲಿರುವ ವಿಷಯಗಳೇ ಆಗಿರುವುದರಿಂದ ಕೀಳರಿಮೆ ಅನಗತ್ಯ ಎಂಬ ಭಾವನೆ ಈ ಹೆಣ್ಣು ಮಕ್ಕಳಲ್ಲಿ ಮೂಡಿತು. ಇದು ಶಾಲೆಗೆ ವಿದ್ಯಾರ್ಥಿಗಳ ಹಾಜರಾತಿ, ದಾಖಲಾತಿ ಹೆಚ್ಚಾಗುವುದರ ಜೊತೆಗೆ ಫಲಿತಾಂಶವೂ ಹೆಚ್ಚಾಗಿ ಗುಣಾತ್ಮಕ ಶಿಕ್ಷಣಕ್ಕೆ ಕಾರಣವಾಯಿತು. 

 ಅನೇಕ ಬಾರಿ ಹೆಣ್ಣು ಮಕ್ಕಳನ್ನು ಹದಿಹರೆಯಕ್ಕೆ  ಬರುತ್ತಿದ್ದಂತೆ ಮದುವೆ ಮಾಡಿಕೊಡುವುದು ಒಂದು ಸಾಮಾಜಿಕ , ಧಾರ್ಮಿಕ ಪಿಡುಗು.  ಪೋಷಕರ ಮನವೊಲಿಸಿ ಇಂತಹ ಅನೇಕ ಬಾಲ್ಯ ವಿವಾಹಗಳನ್ನು ತಪ್ಪಿಸಿ ಮುಖ್ಯ ವಾಹಿನಿಗೆ ತಂದಿರುವುದು ಗಿರೀಶ್ ರವರ ಹೆಗ್ಗಳಿಕೆ.

 ಸಾಮಾಜಿಕ ಕಾರ್ಯಗಳಲ್ಲಿ ಅಷ್ಟೇ ಅಲ್ಲದೆ ಶೈಕ್ಷಣಿಕವಾಗಿಯೂ ಗಿರೀಶ್ ರವರು ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅನೇಕ ಜೀವಶಾಸ್ತ್ರ ಉಪನ್ಯಾಸಕರಿಗೆ ತರಬೇತಿಗಳನ್ನು ನೀಡಿದ್ದಾರೆ. ಸವಿಜ್ಞಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಟಿ.ಎ.ಬಾಲಕೃಷ್ಣ ಅಡಿಗರ ನೇತೃತ್ವದ 11,12ನೇ ತರಗತಿಗಳ ಎನ್‌ಸಿಆರ್‌ಟಿ ಜೀವಶಾಸ್ತ್ರ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದೈನಂದಿನ ಬೋಧನೆಯಲ್ಲಿ ICT ಬಳಕೆ, ಹೊರ ಸಂಚಾರ, ವಿಜ್ಞಾನ ರಂಗೋಲಿ ಸ್ಪರ್ಧೆ, ಹಲವಾರು ನಾವೀನ್ಯಯುತ ವಿಧಾನಗಳನ್ನು ಬಳಸಿ ವಿದ್ಯಾರ್ಥಿಗಳಲ್ಲಿ ಕಲಿಕೆಯತ್ತ ಆಸಕ್ತಿ ಹುಟ್ಟಿಸಿದ್ದಾರೆ. ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕ ಸಂಘದ ಅಧ್ಯಕ್ಷರಾಗಿ , ಕಾರ್ಯದರ್ಶಿಗಳಾಗಿ , ಮೈಸೂರು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ, ಸಾಮಾಜಿಕ ಕಾಳಜಿ ಇರುವ ಕ್ಯಾನ್ಸರ್‌ ಜಾಗೃತಿ, ಹದಿಹರೆಯದ ಶಿಕ್ಷಣ, ಶೈಕ್ಷಣಿಕ ತರಬೇತಿಗಳನ್ನು ನಡೆಸುತ್ತಲೇ ಇದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಜಾವಾಣಿ ಮೆಟ್ರೋ ಕಾಲಂ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ವಿಜಯೀಭವ ಕಾಲಂಗಳನ್ನು ಬರೆಯುತ್ತಾ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡುತ್ತಿದ್ದಾರೆ. ಬಿರ್ಲಾ ಫೌಂಡೇಶನ್‌ ನ ಜ್ಞಾನಾರ್ಜನ್‌ ಯೋಜನೆಯ knowledge Partner ಆಗಿ, ಹಾಗೆಯೇ IAS, KASPDO, ಬ್ಯಾಂಕ್‌ ಪರೀಕ್ಷೆಗಳು ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೈಸೂರಿನ ವಿವಿಧ ಸಂಘ-ಸಂಸ್ಥೆಗಳಲ್ಲದೇ ತಮ್ಮದೇ ಸಂಘಟನೆಯ ಮೂಲಕ ೪೦ಸಾವಿರಕ್ಕೂ ಹೆಚ್ಚು ಯುವ ಉದ್ಯೋಗಾಂಕ್ಷಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದಾರೆ.

೨೦೦೩ ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಅನುದಾನದಲ್ಲಿ make arts / stop aids ಅಮೇರಿಕದ ಗೇರ್‌ ಫೌಂಡೇಷನ್‌ ನಡೆಸಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ತಮ್ಮ ಕಾರ್ಯಗಳ ಕುರಿತು ಪ್ರಬಂಧ ಮಂಡಿಸಿದ್ದಾರೆ. ದೆಹಲಿಯಲ್ಲಿ ನಡೆದ  ಜಿ- 20 ಶೃಂಗಸಭೆ  ವಿಶ್ವ ಪರಿಸರ ಶೃಂಗಸಭೆ - 2023 ESDA ಯಲ್ಲಿ ಪಾಲ್ಗೊಂಡಿದ್ದಾರೆ. 

 

ಪ್ರಶಸ್ತಿಗಳು : 
ಇವರ ಕಾರ್ಯವನ್ನು ಮೆಚ್ಚಿ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಪ್ರಮುಖ ಪುರಸ್ಕಾರಗಳೆಂದರೆ,  ಕರ್ನಾಟಕ ಸರ್ಕಾರದಿಂದ “ಕರ್ನಾಟಕ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ 2023” , 

 “Education Excellance Award - 2023” at G20 Summit &                4th World  Environment Conference NOIDA, Delhi ,  
ಪ್ರೆಸ್ ಕ್ಲಬ್ ವಿಜಯ ಕರ್ನಾಟಕದಿಂದ ‘ಹೆಮ್ಮೆಯ ಕನ್ನಡಿಗ ಪ್ರಶಸ್ತಿ - 2023’, ಲಯನ್ಸ್ ಇಂಟರ್‌ನ್ಯಾಶನಲ್‌ನಿಂದ ‘ಬೆಸ್ಟ್ ಟೀಚರ್ ಆಫ್ ಅಂಬಾಸಿಡರ್ ಅವಾರ್ಡ್ - 2023’,  ‘ಕನ್ನಡ ವಿಕಾಸ ರತ್ನ ಪ್ರಶಸ್ತಿ - 2023’ ,  ನೇಗಿಲ ಯೋಗಿ ಟ್ರಸ್ಟ್ ಎನ್‌ಜಿಒದಿಂದ ‘ಶಿಷ್ಯರು ಮೆಚ್ಚಿದ ಗುರು ಪ್ರಶಸ್ತಿ - 2021’,  ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ - 2020’ ಇವಲ್ಲದೇ ಇನ್ನೂ ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. 

ಇವೆಲ್ಲಕ್ಕೂ ಕಲಶವಿಟ್ಟಂತೆ 2024ರ ರಾಷ್ಟ್ರೀಯ ಶಿಕ್ಷಕ (NTA)  ಪುರಸ್ಕಾರ ಅವರ ಪ್ರಶಸ್ತಿಗಳ ಪಟ್ಟಿಗೆ ಮುಕುಟದಂತಿದೆ. ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿರುವ ಶ್ರೀಯುತ ಎಚ್. ಎನ್. ಗಿರೀಶ್ ರವರಿಗೆ ಈ ಬಾರಿಯ ರಾಷ್ಟ್ರಪ್ರಶಸ್ತಿ ಸಂದಿರುವುದು ಪ್ರಶಸ್ತಿಗೇ ಬಂದ ಘನತೆಯೇ ಸರಿ. 

 ಸವಿಜ್ಞಾನ ತಂಡವು ಈ ಬಾರಿಯ ರಾಷ್ಟ್ರೀಯ ಶಿಕ್ಷಕ ಪುರಸ್ಕಾರಕ್ಕೆ ಪಾತ್ರರಾದ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಗಿರೀಶ್‌ ಹೆಚ್‌. ಎನ್.‌ ರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

 

 
 

 

3 comments:

  1. excellent awareness from you sir. its essence to society as a teacher must a roll model all the best for future plans and congratulation

    ReplyDelete
  2. ಅದ್ಭುತ ಸರ್.... ಗಿರಿ ಸರ್ ತಮಗೆ ತುಂಬು ಹೃದಯದ ಅಭಿನಂದನೆಗಳು ಸರ್

    ReplyDelete
  3. ಶ್ರೀಯುತರಿಗೆ ಹಾಗೂ ಅವರನ್ನು ಪರಿಚಯಿಸಿದ ರಾಮಚಂದ್ರ ಭಟ್ಟರಿಗೆ, ಇಬ್ಬರಿಗೂ ಅಭಿನಂದನೆಗಳು💐💐💐💐

    ReplyDelete