Sunday, October 6, 2024

"ಹೆಣ್ಣು ಬಾಳಿನ ಕಣ್ಣು" ಮಗಳು ಮನೆಯ ನಂದಾದೀಪ

 "ಹೆಣ್ಣು ಬಾಳಿನ ಕಣ್ಣು" ಮಗಳು ಮನೆಯ ನಂದಾದೀಪ 


ಲೇಖನ: ✍️ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ.

ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ



                                                                                  ಅಕ್ಟೋಬರ್ 11 ರಂದು ಅಂತರರಾಷ್ಟ್ರೀಯ ಹೆಣ್ಣು ಮಗುವಿನ  ದಿನವನ್ನಾಗಿ ಆಚರಿಸಲಾಗುತ್ತಿದೆ ತನ್ನಿಮಿತ್ತ ಸಾಂದರ್ಭಿಕ ಲೇಖನ. 


"ಹೆಣ್ಣುಮಕ್ಕಳು ಶಿಕ್ಷಣ ಪಡೆದಾಗ, ಅವರ ದೇಶಗಳು ಬಲಿಷ್ಠವಾಗುತ್ತವೆ ಮತ್ತು ಹೆಚ್ಚು ಸಮೃದ್ಧವಾಗುತ್ತವೆ" ಎಂದು ಮಿಚೆಲ್ ಒಬಾಮ ಹೇಳಿರುವುದು ಬಹಳ ಸಮಂಜಸವಾಗಿದೆ.ಹೆಣ್ಣೊಬ್ಬಳು ಕಲಿತರೆ ತನ್ನ ಸುತ್ತಮುತ್ತಲಿನ ಜನರನ್ನು ಸುಶಿಕ್ಷಿತರನ್ನಾಗಿಸುತ್ತಾಳೆ. ಸನ್ಮಾರ್ಗದಲ್ಲಿ ನಡೆಸುತ್ತಾಳೆ. ಪ್ರತಿಯೊಬ್ಬರ ಜೀವನವು ರೂಪುಗೊಳ್ಳುವ ಹೆಣ್ಣುಮಕ್ಕಳ ಪಾತ್ರ ಅಗಾಧವಾಗಿದೆ. ನನ್ನ ಜೀವನದಲ್ಲೂ ಅಮ್ಮ, ಚಿಕ್ಕಮ್ಮ-ದೊಡ್ಡಮ್ಮ, ಅತ್ತೆ, ಅಕ್ಕ-ತಂಗಿ, ಅತ್ತಿಗೆ ಹೀಗೆ ಎಲ್ಲರೂ ಒಂದಿಲ್ಲೊಂದು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಹೇಳಬಹುದು. ಪ್ರಪಂಚದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 11 ರಂದು "ಅಂತಾರಾಷ್ಟ್ರೀಯ ಹೆಣ್ಣು ಮಗುವಿನ" ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗೆಯೇ ಭಾರತದಲ್ಲಿ ಪ್ರತಿ ವರ್ಷ ಜನವರಿ 24 ರಂದು "ರಾಷ್ಟ್ರೀಯ ಹೆಣ್ಣು ಮಕ್ಕಳ" ದಿನವನ್ನು ಸಹ ಆಚರಿಸಲಾಗುತ್ತದೆ. ವಿಶ್ವ ಹೆಣ್ಣು ಮಕ್ಕಳ ದಿನವನ್ನು ಡಿಸೆಂಬರ್ 19, 2011 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿತು. 2012 ರಲ್ಲಿ ಮೊದಲು ಈ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.

#ಈ ದಿನದ ಉದ್ದೇಶ:

ಸಮಾಜದ ಜನರ ಮಧ್ಯೆ ಹೆಣ್ಣು ಮಕ್ಕಳ ಜೀವನ ಮಟ್ಟವನ್ನು ಉತ್ತಮಪಡಿಸಲು ಹಾಗೂ ಸಮಾಜದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಹಾಗಾಗಿ ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಬಗೆಗಿರುವ ದೃಷ್ಟಿಕೋನ ಬದಲಿಸುವುದು. ಸಮಾಜದಲ್ಲಿ ಹೆಣ್ಣು ಮಗುವಿಗೆ ದೊರೆಯಬೇಕಿರುವ ಗೌರವ ಮತ್ತು ಮೌಲ್ಯ ಖಾತ್ರಿಗೊಳಿಸುವುದು.ದೇಶದಲ್ಲಿ ಇತರರಂತೆ ಹೆಣ್ಣು ಮಗುವಿಗೂ ಎಲ್ಲ ಮೂಲ ಹಕ್ಕುಗಳು ದೊರೆಯುವಂತೆ ಮಾಡುವುದು. ಹೆಣ್ಣು ಮಗು ಲಿಂಗಾನುಪಾತ ಕುಸಿಯುವುದನ್ನು ತಡೆಯಲು ಅಗತ್ಯವಿರುವ ಯೋಜನೆ ರೂಪಿಸುವುದು ಈ ದಿನದ ಉದ್ದೇಶವಾಗಿದೆ. 

ಲಿಂಗ ತಾರತಮ್ಯ #ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ:

ವಿಶ್ವ ಸಂಸ್ಥೆಯ ಅಂಕಿ- ಅಂಶಗಳ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಬೆರಳೆಣಿಕೆಯಷ್ಟು ದೇಶಗಳನ್ನು ಹೊರತುಪಡಿಸಿ, ಮೂರು ಹುಡುಗಿಯರಲ್ಲಿ ಒಬ್ಬರು 18 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಾರೆ. ಒಂಬತ್ತು ಹುಡುಗಿಯರಲ್ಲಿ ಒಬ್ಬರು ತಮ್ಮ 15 ನೇ ವರ್ಷ ತುಂಬುವ ಮೊದಲೇ ಮದುವೆಯಾಗುತ್ತಾರೆ. ಈ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಬಡವರು, ಕಡಿಮೆ ವಿದ್ಯಾವಂತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹವಾಗಿದೆ. ಸಮಾಜದಲ್ಲಿ ನಿತ್ಯ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ. ಇವುಗಳಿಂದ ಅದೆಷ್ಟೋ ಜನ ಜೀವ ಮತ್ತು ಜೀವನ ಎರಡನ್ನೂ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಹಲವಾರು ರಾಜಕೀಯ ನಾಯಕರು ಮತ್ತು ಸಮುದಾಯದ ನಾಯಕರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಜನರಿಗೆ  ತೋರಿಕೆಗೆ ಮಾತ್ರ ತಮ್ಮ ಭಾಷಣದಲ್ಲಿ ಮಾತನಾಡುತ್ತಿರುವುದು ವಿಷಾದನೀಯ. 

#ಸುಧಾರಣಾ ಕ್ರಮಗಳು:

*ವಿವಿಧ ದೇಶಗಳಲ್ಲಿ ಬಾಲ್ಯವಿವಾಹ ತಡೆಗುಟ್ಟುವುದು ಸಹ ಈ ದಿನಾಚರಣೆಯ ಮೊದಲ ಆಶಯವಾಗಬೇಕಾಗಿದೆ.

*14 ವರ್ಷದವರೆಗಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಬೇಕು. 

*ಅಮಾನವೀಯ ಕೃತ್ಯಗಳನ್ನು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಬಗೆಗೆ ಗಮನಹರಿಸುವುದು ಸಹ ಈ ದಿನದ ಧ್ಯೇಯವಾಗಬೇಕಾಗಿದೆ.

*ಒಟ್ಟಾರೆ ಸಮಾಜದಲ್ಲಿ ಹೆಣ್ನು-ಗಂಡು ಎಂಬ ಭೇದ - ಭಾವ ತೊರೆದು ಸಹಬಾಳ್ವೆ, ಸಮಾನ ಅವಕಾಶಗಳುಳ್ಳ ಜೀವನ ರೂಪಿಸಬೇಕಾಗಿದೆ. 

*ಸಮಾಜದ ಜನರಲ್ಲಿ ತಮ್ಮ ಜೀವನವನ್ನು ಉತ್ತಮಗೊಳಿಸಲು ಸಮಾಜದಲ್ಲಿ ಹುಡುಗಿಯರ ಸ್ಥಾನವನ್ನು ಉತ್ತೇಜಿಸಲು ಮತ್ತು ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ. 

*ಹೆಣ್ಣು ಮಗುವನ್ನು ಉಳಿಸಿ, ಮಕ್ಕಳ ಲಿಂಗ ಅನುಪಾತ ಮತ್ತು ಹೆಣ್ಣುಮಕ್ಕಳಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ಒಳಗೊಂಡಂತೆ ಸಂಘಟಿತ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. 

*ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳದಂತಹ ಹೇಯ ಕೃತ್ಯಗಳನ್ನು ತಡೆಗಟ್ಟಲು, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಬೇಕಿದೆ. 

*ಹದಿಹರೆಯದ ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡುವ ಮತ್ತು ಹೆಣ್ಣು ಮಕ್ಕಳನ್ನು ಹಿಂಸಿಸುವ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಬೇಕಾಗಿದೆ.

*ಪ್ರಪಂಚದಾದ್ಯಂತ, ಹುಡುಗಿಯರು ಬಾಲ್ಯ ವಿವಾಹ, ತಾರತಮ್ಯ, ಹಿಂಸೆ ಮತ್ತು ಕಲಿಕೆಯ ಅವಕಾಶಗಳಂತಹ ಲಿಂಗ ಆಧಾರಿತ ಸವಾಲುಗಳನ್ನು ಎದುರಿಸುವಂತಹ ಶಿಕ್ಷಣ ನೀಡಬೇಕಾಗಿದೆ. 

ಭಾರತದಲ್ಲಿ ಹೆಣ್ಣು ಮಕ್ಕಳ ಜೀವನ ಸುಖಮಯವಾಗಿ ಸಾಗಿಸಲು ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ವರ್ತನೆಯಲ್ಲೂ ಅಪಾರವಾದ ಸುಧಾರಣೆಗಳು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರಾಧಾನ್ಯತೆ ನೀಡಿದ್ದು, "ಬೇಟಿ ಬಚಾವೋ, ಬೇಟಿ ಪಡಾವೋ" ಎಂಬ ಘೋಷವಾಕ್ಯದ ಮೂಲಕ ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಒಟ್ಟಾರೆಯಾಗಿ ನಾವು ನಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆ ಪಡೋಣ ಹಾಗೂ ಹೆಣ್ಣು ಮಗುವಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸೋಣ. ಹೆಣ್ಣು ಮಗುವನ್ನು ಉಳಿಸುವುದು, ಮಕ್ಕಳ ಲಿಂಗ ಅನುಪಾತಗಳು ಮತ್ತು ಹೆಣ್ಣು ಮಗುವಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಜಾಗೃತಿ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಈ ದಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ. ಇಂದಿನ ಶಾಲಾ ಶಿಕ್ಷಣದಲ್ಲಿ 100% ಬಾಲಕಿಯರ ದಾಖಲಾತಿ ಮತ್ತು ಉನ್ನತ ಶಿಕ್ಷಣದಲ್ಲಿ  ಭಾಗವಹಿಸುವಿಕೆಯ ಪ್ರಮಾಣವನ್ನು ಖಾತ್ರಿಪಡಿಸಿ ಹೆಚ್ಚಿಸುವುದು. ಎಲ್ಲಾ ಹಂತಗಳಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡುವುದು, ಲಿಂಗ ಸಮಾನತೆ ಮತ್ತು ಸಮಾಜದಲ್ಲಿ ಒಳಗೊಳ್ಳುವಿಕೆಯನ್ನು ಅಭ್ಯಾಸ ಮಾಡುವುದು ಮತ್ತು ಸಕಾರಾತ್ಮಕ ನಾಗರಿಕ ಸಂವಾದಗಳ ಮೂಲಕ ಹುಡುಗಿಯರ ನಾಯಕತ್ವದ ಸಾಮರ್ಥ್ಯವನ್ನು ಸುಧಾರಿಸುವುದರಿಂದ ಸಾಧ್ಯತೆಗಳು ಇರುತ್ತವೆ.ಅದಕ್ಕೆ ಹೇಳೋದು 'ಹೆಣ್ಣೊಂದು ಕಲಿತರೆ,ಶಾಲೆಯೊಂದು ತೆರೆದಂತೆ'ಅಂತಾ ಹಿರಿಯರ ಮಾತೂ ಸತ್ಯ. ಹೀಗಾಗಿ ಹೆಣ್ಣು ಕುಟುಂಬದ ಕಣ್ಣು.ಅಮ್ಮ, ಅಕ್ಕ-ತಂಗಿ ಅತ್ತೆ, ಅಜ್ಜಿ, ಪತ್ನಿ,ಸ್ನೇಹಿತೆ..ಹೀಗೆ ಹಲವಾರು ಮಹತ್ವಪೂರ್ಣ ಸ್ಥಾನಗಳಲ್ಲಿ ನಮಗೆ ಬೆನ್ನೆಲುಬಾಗಿ ನಿಲ್ಲುವವಳು ಮಮತಾಮಯಿ ಹೆಣ್ಣು.ಸ್ತ್ರೀ ಎಂದ ತಾನು ಉರಿದು ಜಗವನೆಲ್ಲ ಬೆಳಗುವ ಬತ್ತಿಯಂತೆ.ತಾನು ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಡುವವಳು ಹೆಣ್ಣು.



No comments:

Post a Comment