Sunday, October 6, 2024

ಕಲಿಕೆ ಸ್ವಪರೀಕ್ಷೆ

 ಕಲಿಕೆ ಸ್ವಪರೀಕ್ಷೆ  

ಪ್ರೊ||ಎಮ್.ಆರ್.ನಾಗರಾಜು, 
ಎಸ್.ವಿ.ಪ್ರಗತಿ,ಮೊದಲ ಮಹಡಿ, 

106 #251,ಎಚ್.ವಿ ಹಳ್ಳಿ ಅಂಚೆ, 

ರಾಜರಾಜೇಶ್ವರಿ ನಗರ, 

ಬೆಂಗಳೂರು-560098,


ಅಧ್ಯಯನ ಮಾಡಲು ಅನೇಕ ಉದ್ದೇಶಗಳಿವೆ. ಕೇವಲ ಅರ್ಥಮಾಡಿಕೊಳ್ಳುವುದು ಅಷ್ಟೇ ಅಲ್ಲ. ಅದಕ್ಕೆ ಪೂರಕವಾದ ಅನೇಕ ಉಪ ಉದ್ದೇಶಗಳಿವೆ. ಅರ್ಥಮಾಡಿಕೊಂಡಿದ್ದನ್ನು ಬರೆಯುವುದು, ಬರವಣಿಗೆಯ ವೇಗ ಹೆಚ್ಚಿಸಿಕೊಳ್ಳುವುದು, ಬರೆದುದನ್ನು ನೆನಪಿಟ್ಟುಕೊಳ್ಳುವುದು, ಪ್ರಶ್ನೆಗೆ ಪೂರಕವಾಗಿ ಉತ್ತರ ರೂಪಿಸುವುದೂ ಜೀವನಕ್ಕೆ ಅನ್ವಯಿಸಿಕೊಳ್ಳುವುದು, ಸಂದರ್ಭೋಚಿತವಾಗಿ ಅದನ್ನು ಬಳಕೆ ಮಾಡಿಕೊಳ್ಳುವುದು.....ಇತ್ಯಾದಿ.

ಈ ಅಂಶಗಗಳೆಲ್ಲದರ ಮೊತ್ತವಾಗಿ ವಿದ್ಯಾರ್ಥಿಗೆ ತನ್ನ ಕಲಿಕೆಯ ಬಗೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಮತ್ತಷ್ಟು ವಿಷಯಗಳನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಲು ಅದು ಸಹಾಯಕವಾಗುತ್ತದೆ.

ಪೂರ್ವ ವಿಚಾರವಿರದೆ ಓದಲು ಕುಳಿತುಕೊಂಡು ಪುಸ್ತಕದ ಸಾಲುಗಳ ಮೇಲೆ ಕಣ್ಣೋಡಿಸುವುದು ಕಲಿಕೆ ಎನಿಸದು. ನನಗೆ ಅರ್ಥವಾಗಿದೆ ಎಂಬ ಕುರುಡುನಂಬಿಕೆ, ಆತ್ಮವಿಶ್ವಾಸ ಅಪಾಯಕಾರಿ.

ನಾನು ಕಲಿತ ಪಾಠ ನನಗೆ ಕರಗತವಾಗಿದೆಯೆ ಕರತಲಾಮಲಕವಾಗಿದೆಯೆ-ಎಂದು ಪರೀಕ್ಷಿಸಿಕೊಂಡ ಮೇಲೆ ನಾವು ಆತ್ಮವಿಶ್ವಾಸ ಗಳಿಸುವುದು-ಸಹಜಮಾರ್ಗ. ಆದರೆ ನಮ್ಮ ಕಲಿಕೆಯ ಒರತೆಯನ್ನು ಒರೆಹಚ್ಚಿ ಪರೀಕ್ಷಿಸಿದಾಗ ತಾನೆ ನಮ್ಮ ಕೊರತೆಗಳು ಬೆಳಕಿಗೆ ಬರುವುದು? 

ಈಗಿರುವ ಕ್ರಮದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಸಾಧನೆಯನ್ನು ಒರೆ ಹಚ್ಚುವುದು ಅಧ್ಯಾಪಕರ ಕೆಲಸ. ಪರೀಕ್ಷೆ/ಕಿರುಪರೀಕ್ಷೆಗಳ ಮೂಲಕ ಅಧ್ಯಾಪಕರು ಅವರ ಅರಿವನ್ನು ಪರೀಕ್ಷಿಸುವರು. ಆಗಲೂ ಆ ಪರೀಕ್ಷೆಗಳ ಫಲಿತಾಂಶದಿಂದ ತಮ್ಮ ಓರೆ ಕೋರೆಗಳನ್ನು ವಿದ್ಯಾರ್ಥಿಗಳು ಕಂಡುಕೊಂಡು ತಿದ್ದಿಕೊಳ್ಳುವರೆ? ತಿದ್ದಿಕೊಂಡರೆ ಎಂದು ಪರೀಕ್ಷಿಸುವ ಕೆಲಸ ವಿದ್ಯಾರ್ಥಿಗಳಿಗಾಗಲಿ ಅಧ್ಯಾಪಕರಿಗಾಗಲಿ ಆಸಕ್ತಿಯ ವಿಷಯ ಅಲ್ಲ!

ಇಂತಹ ಹಿನ್ನಲೆಯಲ್ಲಿ ತಮ್ಮ ಸಾಧನೆಯ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳಲು ಅಧ್ಯಾಪಕರಾಗಲಿ, ಪೋಷಕರಾಗಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿಲ್ಲ.

ಈ ವಾಸ್ತವಪ್ರಜ್ಞೆಯಿಂದ ಈ ಲೇಖನ ಬರೆಯಲಾಗುತ್ತಿದೆ. ಲೇಖನದ ಹಿನ್ನಲೆಯಾಗಿ ಬರೆದ ವ್ಯವಸ್ಥೆಯ ಇತಿಮಿತಿಗೆ ಅಪವಾದವಾಗಿ ಇರುವಂತಹ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸ್ವಪರೀಕ್ಷೆ ಮಾಡಿಕೊಳ್ಳುತ್ತ ಇರಬಹುದು. ಅವರಿಗೆ ನನ್ನ ಮುಕ್ತ ಅಭಿನಂದನೆಗಳು. ಈ ಲೇಖನ ಯಾರನ್ನು ಖಂಡಿಸಲು ಬರೆದುದಲ್ಲ.

ಅಂತಹವರು ಹಂತಹಂತವಾಗಿ ತಮ್ಮ ಕಲಿಕೆಯನ್ನು ಪರೀಕ್ಷಿಸಿಕೊಳ್ಳುವ ಕ್ರಮದ ಬಗ್ಗೆ ಈಗ ತಿಳಿಯೋಣ.

ಮೊದಲನೆಯ ಹಂತ: ಅಧ್ಯಾಪಕರು ಪಾಠ ಹೇಳಿ ಬರೆಸಿದ ಟಿಪ್ಪಣಿ ಅಥವಾ ಪಠ್ಯಪುಸ್ತಕದ ನಿರೂಪಣೆ ವಿಷಯವನ್ನು ನಿಃಸಂಧಿಗ್ಧವಾಗಿ ಅರಿಯಲು ಸಹಾಯಕ. ಆದರೆ ಅದು ಅವರ ಭಾಷೆಯಲ್ಲದ ಕಾರಣ ನೆನಪಿಟ್ಟುಕೊಳ್ಳುವುದು ಕಷ್ಟ.

ಆದ್ದರಿಂದ ಅವರು ಪಾಠ ಅರ್ಥವಾದ ಮೇಲೆ ತಮ್ಮದೇ ಸಹಜ ಬರವಣಿಗೆಯಲ್ಲಿ ಬರೆದಿಟ್ಟುಕೊಂಡರೆ ಅನುಕೂಲ. ಹಾಗೆ ಬರೆದಾಗ ಎಲ್ಲ ವಿಷಯಗಳೂ ತಾಂತ್ರಿಕ ಶಬ್ದಗಳೂ ಕೈಬಿಟ್ಟು ಹೋಗಿಲ್ಲ ಎಂಬಂಶವನ್ನು ಖಾತರಿ ಮಾಡಿಕೊಳ್ಳಲು ಕೂಡ ಅನುಕೂಲ. ಒಮ್ಮೆ ಅಧ್ಯಾಪಕರಿಗೆ ತೋರಿಸಿ ಸ್ಪಷ್ಟ ಮಾಡಿಕೊಳ್ಳಲು ಅವಕಾಶವಿದ್ದರೆ ಹಾಗೆ ಮಾಡುವುದೊಳಿತು. ಒಂದು ಅಧ್ಯಾಯ ಮುಗಿದ ಕೂಡಲೆ ಈ ಕೆಲಸ ಮಾಡಬೇಕು. ತುಂಬ ತಡವಾಗಿ ಅಧ್ಯಾಪಕರಿಗೆ ನಿಮ್ಮ ಸಹಕಾರಿಗಳಿಗೆ ಕೊಟ್ಟರೆ ಅವರು ಪರಿಶೀಲಿಸಲು ಹೆಚ್ಚು ವೇಳೆ ಬೇಕಾಗುವುದು.

ಎರಡನೆಯ ಹಂತ: ಪಠ್ಯಪುಸ್ತಕದಲ್ಲಿ ಕೊಟ್ಟಿರುವ, ಹಳೆಯ ಪ್ರಶ್ನೆಪತ್ರಿಕೆಗಳಲ್ಲಿ ಬಂದಿರುವ ಪ್ರಶ್ನೆಗಳಿಗೆ ಉತ್ತರ ಬರೆದು ಅದನ್ನು ಬರೆಯಬಲ್ಲೆ ಎಂದು ಖಾತರಿ ಮಾಡಿಕೊಳ್ಳುವುದು. ಬರೆವಣಿಗೆಯ ಕಾಗುಣಿತ, ಕೈಬರಹ ಶುದ್ಧವಾಗಿದೆಯೆ ಎಂದು ಪರಿಶೀಲಿಸಬೇಕು.

ಮೂರನೆಯ ಹಂತ: ಪುಸ್ತಕ ಮುಚ್ಚಿಟ್ಟು ಆ ಅಧ್ಯಾಯದ ಒಂದು ಸಾಲು ಹೇಳಿದರೆ ಉಳಿದೆಲ್ಲ ಸಾಲೂ ನೆನಪಿಗೆ ಬರುವುದೇ ಎಂದು ಪರೀಕ್ಷಿಸಿಕೊಳ್ಳುವುದು. ಯಾವ ಭಾಗ ಮರೆತು ಹೋಗುವುದೋ ಅದನ್ನು ಲಕ್ಷ್ಯವಿರಿಸಿ ಮತ್ತೆ ಮತ್ತೆ ಓದಬೇಕು.

ನಾಲ್ಕನೆಯ ಹಂತ: ಓದುವಾಗ ಇಡೀ ವಾಕ್ಯ ಅರ್ಥ ಆಗಬೇಕಾದರೆ ನಿಮಿಷಕ್ಕೆ ಎಷ್ಟು ಪದ ಓದಬಲ್ಲೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಅರ್ಥವಾಗುತ್ತಾ ಹೋದ ಹಾಗೆಲ್ಲ ನಿಮಿಷವೊಂದಕ್ಕೆ ಓದುವ ಪದಗಳ ಸಂಖ್ಯೆ ಅಧಿಕವಾಗುವುದು.

ಐದನೆಯ ಹಂತ: ಓದುವ ವೇಗದ ಹಾಗೆಯೆ ಬರೆವಣಿಗೆಯ ವೇಗ ಕೈಬರಹದ ಅಂದ ಕುಂದದ ಹಾಗೆ ಲೆಕ್ಕ ಮಾಡಿದರೆ ಕಲಿಕೆ ಆದಂತೆಲ್ಲ ಬರೆವಣಿಗೆ ವೇಗ ಹೆಚ್ಚುತ್ತಾ ಹೋಗುತ್ತದೆ. 

ಆರನೆಯ ಹಂತ: ಓದಿದ ಪರಿಕಲ್ಪನೆಗಳನ್ನು ಜೀವನದ ದೈನಂದಿನ ಅನುಭವಗಳಲ್ಲಿ ಎಲ್ಲಿ ಗುರುತಿಸಬಹುದು ಎಂಬುದನ್ನು ಪತ್ತೆ ಹಚ್ಚುವುದು.(ಇದನ್ನು ಇತಿಹಾಸ ಭೂಗೋಲ ವಿಷಯಗಳಲ್ಲಿ ಮಾಡುವುದು ಕಷ್ಟ) ಆನ್ವಯಿಕ ಪ್ರಶ್ನೆಗಳು ಸ್ಪರ್ಧಾಪರೀಕ್ಷೆಯಲ್ಲಿ ಬಂದಾಗ ಅವುಗಳಿಗೆ ಉತ್ತರ ಬರೆಯಲು ಸಾಧ್ಯವಾಗುತ್ತದೆ.

ಈ ಆರು ಹಂತಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅಷ್ಟೇ ಅಲ್ಲ; ಮರೆವು ಬಾರದಂತೆ ಕಾಯ್ದುಕೊಳ್ಳಲೂ ಉಪಯೋಗ ಆಗುತ್ತದೆ. ಕೆಲವು ದಿನ ಓದುವುದನ್ನು ನಿಲ್ಲಿಸಿ ನೋಡಿ. ಆಗ ಓದುವ ವೇಗ, ಬರೆವಣಿಗೆ ವೇಗಗಳು ಹಿಂದೆ ಸರಿದು ಮತ್ತಷ್ಟು ಓದಬೇಕೆಂದು ಎಚ್ಚರಿಸುತ್ತವೆ. 

ಒಂದು ಸಾಮಾನ್ಯ ಸೂಚನೆ?

ಕಲಿಯುವ ಅವಧಿಯನ್ನು ಪ್ರಶಸ್ತವಾಗಿ ಬಳಕೆ ಮಾಡಿಕೊಳ್ಳಲು-ಮನಸ್ಸಿಗೆ ಅಧ್ಯಯನ ವಿಷಯ ಅಲ್ಲದ ವಿಷಯಗಳನ್ನು ಆಲೋಚಿಸುವುದು, ಮಾತನಾಡುವುದು ಕೈಬಿಡಬೇಕು. ಆಗ ಏಕಾಗ್ರತೆಯಿಂದ ಓದಲು ಸುಲಭ ಆಗುವುದು.

ಮನಸ್ಸು ತಿಳಿಯಾಗಿದ್ದರೆ ಪಾಠದ ಪ್ರತಿಬಿಂಬ ಸ್ಪಷ್ಟ. ಮನಸ್ಸು ಕೊಳೆಯಾಗಿದ್ದರೆ ಪ್ರತಿಬಿಂಬ ಮೂಡದು; ಮೂಡಿದರೂ ಅಸ್ಪಷ್ಟ. ಮೂಡ್ ಸದಾ ತಿಳಿಯಾಗಿ ಇರಲಿ.

No comments:

Post a Comment