Saturday, January 4, 2025

"ಅಂಧರ ಬದುಕಿನ ದಾರಿ ದೀಪ- ಲೂಯಿಸ್ ಬ್ರೈಲ್" : ಬ್ರೈಲ್ ಲಿಪಿ-ದೃಷ್ಟಿಹೀನರ ಬದುಕಿನ ಕಣ್ಣು .

 "ಅಂಧರ ಬದುಕಿನ ದಾರಿ ದೀಪ- ಲೂಯಿಸ್ ಬ್ರೈಲ್" 

ಬ್ರೈಲ್ ಲಿಪಿ-ದೃಷ್ಟಿಹೀನರ ಬದುಕಿನ ಕಣ್ಣು . 


ಲೇಖನ:

ಬಸವರಾಜ ಎಮ್ ಯರಗುಪ್ಪಿ 

ಬಿ ಆರ್ ಪಿ ಶಿರಹಟ್ಟಿ 

ಸಾ.ಪೊ ರಾಮಗೇರಿ.ತಾಲ್ಲೂಕು ಲಕ್ಷ್ಮೇಶ್ವರ

 ಜಿಲ್ಲಾ ಗದಗ.ದೂರವಾಣಿ 9742193758

 ಮಿಂಚಂಚೆ basu.ygp@gmail.com



ಜನೆವರಿ 04-ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ ತನ್ನಿಮಿತ್ತ ವಿಶೇಷ ಲೇಖನ. 

ಬ್ರೈಲ್ ಲಿಪಿ ಇದು ದೃಷ್ಟಿ ವಿಕಲಚೇತನರ ದಾರಿ ದೀಪ.ಹೌದು ಓದುಗರೆ, ಲೂಯಿಸ್ ಬ್ರೈಲ್ ಸ್ವತಃ ಹೇಳಿದಂತೆ - "ನಮಗೆ ಕರುಣೆಯ ಅಗತ್ಯವಿಲ್ಲ, ಅಥವಾ ನಾವು ದುರ್ಬಲರಾಗಿದ್ದೇವೆ ಎಂದು ನಮಗೆ ನೆನಪಿಸುವ ಅಗತ್ಯವಿಲ್ಲ.ನಮ್ಮನ್ನು ಸಮಾನವಾಗಿ ಪರಿಗಣಿಸಬೇಕು ಮತ್ತು ನನ್ನ ಲಿಪಿಯು ಸಂವಹನ ಸಾಧನವಾಗಿ ನಾವು ಇದನ್ನು ಬಳಸುವ ಮಾರ್ಗವಾಗಿದೆ" ಎಂದು ಅವರು ಬ್ರೈಲ್ ಲಿಪಿಯ ಮಹತ್ವದ ಬಗ್ಗೆ  ಹೇಳಿದ್ದು ಅಕ್ಷರಶಃ ಸತ್ಯವಾದ ಮಾತು.

ಸಂಪರ್ಕ ವಲಯದಲ್ಲಿ ಬ್ರೈಲ್ ಲಿಪಿಯ ಮಹತ್ವ ಸಾರುವ ಉದ್ದೇಶದಿಂದ ಈ ದಿನ ಮಹತ್ವ ಪಡೆದುಕೊಂಡಿದೆ.ದೃಷ್ಟಿ ವಿಶೇಷಚೇತನರ ಹಕ್ಕುಗಳ ರಕ್ಷಣೆ ದೃಷ್ಟಿಯಿಂದಲೂ ಈ ದಿನ ವಿಶೇಷತೆ ಪಡೆದಿದೆ.ದೃಷ್ಟಿಹೀನ ಜನರು ಎದುರಿಸುತ್ತಿರುವ ಅನಾನುಕೂಲತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಬ್ರೈಲ್ ಲಿಪಿ ಆವಿಷ್ಕಾರ ಮಾಡಿದ ಲೂಯಿಸ್ ಬ್ರೈಲ್ ಅವರ ಜನ್ಮದಿನದವೂ ಆಗಿದ್ದು, ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ವಿಶ್ವದಾದ್ಯಂತ ಪ್ರತಿವರ್ಷ ಜನವರಿ 04  ರಂದು ವಿಶ್ವ ಬ್ರೈಲ್ ದಿನವನ್ನು ಆಚರಿಸಲಾಗುತ್ತದೆ. 

ಸರಿಯಾಗಿ ದೃಷ್ಟಿ ಹೊಂದಿರುವ ಜನರು ತಮ್ಮ ಕಣ್ಣುಗಳಿಂದ ಜಗತ್ತನ್ನು ನೋಡುವುದು ಸುಲಭವಾದರೂ, ದೃಷ್ಟಿಹೀನರು ದಿನನಿತ್ಯದ ಚಟುವಟಿಕೆಗಳನ್ನು ಮಾಡುವುದು ಸ್ವಲ್ಪ ಕಷ್ಟಕರವಾಗುತ್ತದೆ.ಈ ಜನರಿಗೆ ಓದಲು ಮತ್ತು ಕಲಿಯಲು ಸಹ ಕಷ್ಟವಾಗುತದೆ. ಇಂತಹವರಿಗೆ ಸಹಾಯ ಮಾಡಲು, ಲೂಯಿಸ್ ಅವರು ಬ್ರೈಲ್ ಭಾಷೆಯ ಲಿಪಿಯ ಸಂವಹನ ಸಾಧನವನ್ನು ಕಂಡುಹಿಡಿದರು.  

#ಹಿನ್ನಲೆ:

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದನ್ನು ನವೆಂಬರ್ 2018 ರಲ್ಲಿ ಅಧಿಕೃತವಾಗಿ ಅಂಗೀಕರಿಸಿತು.ನಂತರ ಮೊದಲ ವಿಶ್ವ ಬ್ರೈಲ್ ದಿನವನ್ನು 2019 ರಲ್ಲಿ ಆಚರಿಸಲಾಯಿತು. ಆ ವರ್ಷ ಅಂಧರು ಮತ್ತು ಭಾಗಶಃ ದೃಷ್ಟಿ ಹೊಂದಿರುವ ಜನರಿಗೆ ಸಂವಹನ ಸಾಧನವಾಗಿ ಬ್ರೈಲ್ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಬ್ರೈಲ್ ದಿನವನ್ನು ಅಧಿಕೃತವಾಗಿ ಗೊತ್ತುಪಡಿಸಲಾಯಿತು. ಅಂದಿನಿಂದ ಬ್ರೈಲ್ ಬರವಣಿಗೆಯ(ಲಿಪಿಯ) ವ್ಯವಸ್ಥೆಯ ಸೃಷ್ಟಿಕರ್ತ ಲೂಯಿಸ್ ಬ್ರೈಲ್ ಅವರ ಜನ್ಮದಿನವನ್ನು ಆಚರಣೆ ಮಾಡುವಂತೆ ವಿಶ್ವಸಂಸ್ಥೆ ಸೂಚಿಸಿತು.


#ಬ್ರೈಲ್ ಲಿಪಿ ಆವಿಷ್ಕಾರ:

ಬ್ರೈಲ್ ಲಿಪಿಗೆ ಅದರ ಸೃಷ್ಟಿಕರ್ತ ಲೂಯಿಸ್ ಬ್ರೈಲ್ ಹೆಸರಿಡಲಾಗಿದೆ.ಬಾಲ್ಯದ ಅಪಘಾತದ ಪರಿಣಾಮವಾಗಿ ತನ್ನ ದೃಷ್ಟಿ ಕಳೆದುಕೊಂಡ ಬೆಳೆದ ಫ್ರೆಂಚ್ ಸಂಶೋಧಕ.1824 ರಲ್ಲಿ, ಹದಿನೈದನೆಯ ವಯಸ್ಸಿನಲ್ಲಿ, ಅವರು ರಾತ್ರಿಯ ಬರವಣಿಗೆಯಲ್ಲಿ ಸುಧಾರಣೆಯಾಗಿ ಫ್ರೆಂಚ್ ವರ್ಣಮಾಲೆಯ ಆಧಾರದ ಮೇಲೆ ಬ್ರೈಲ್ ಕೋಡ್ ಅನ್ನು ಅಭಿವೃದ್ಧಿಪಡಿಸಿದ್ದರು. ನಂತರ ಅವರು 1829 ರಲ್ಲಿ ಸಂಗೀತ ಸಂಕೇತಗಳನ್ನು ಒಳಗೊಂಡ ತಮ್ಮ  ಲಿಪಿಯ ವಿನ್ಯಾಸಗಳ ವ್ಯವಸ್ಥೆಯನ್ನು ಪ್ರಕಟಿಸಿದರು.1837 ರಲ್ಲಿ ಪ್ರಕಟವಾದ ಎರಡನೆಯ ಪರಿಷ್ಕರಣೆಯು ಆಧುನಿಕ ಯುಗದಲ್ಲಿ ಅಭಿವೃದ್ಧಿಪಡಿಸಿದ ಬರವಣಿಗೆಯ ಮೊದಲ ಬೈನರಿ ರೂಪಕವಾಗಿ ಹೊರಹೊಮ್ಮಿತು.



#ಯಾರು ಈ ಲೂಯಿಸ್ ಬ್ರೈಲ್..? 

ಲೂಯಿಸ್ ಬ್ರೈಲ್ ಅವರು ಫ್ರಾನ್ಸ್ನಲ್ಲಿ ಜನವರಿ 04, 1809 ರಂದು ಜನಿಸಿದರು. 3 ನೇ ವಯಸ್ಸಿನಲ್ಲಿ ಅವರು ಆಕಸ್ಮಿಕವಾಗಿ ದೃಷ್ಟಿಕಳೆದುಕೊಂಡಿದ್ದರು. ದೃಷ್ಟಿ ಹೀನತೆ ಹೊರತಾಗಿಯೂ ಸರಿಯಾಗಿ ಓದುವುದು ಮತ್ತು ಬರೆಯಲು ಬಹಳ ಉತ್ಸಾಹ ಹೊಂದಿದ್ದರು. 15 ನೇ ವಯಸ್ಸಿನಲ್ಲಿ, ಶಾಲೆಯಲ್ಲಿ ಒಂದು ತುಂಡು ಕಾಗದದ ಮೇಲೆ ಚುಕ್ಕೆಗಳನ್ನು  ಬಿಡಿಸುವ ಮೂಲಕ ಈ ಬ್ರೈಲ್ ಲಿಪಿಯನ್ನು ಅಭಿವೃದ್ಧಿಪಡಿಸಿದರು.


#ಬ್ರೈಲ್ ಲಿಪಿಯ ವಿನ್ಯಾಸ:

ಬ್ರೈಲ್ ಕೋಶ ಎಂದು ಕರೆಯಲ್ಪಡುವ 3 × 2 ಮ್ಯಾಟ್ರಿಕ್ಸ್ನಲ್ಲಿ ಜೋಡಿಸಲಾದ ಆರು ಎತ್ತರದ ಚುಕ್ಕೆಗಳ ಸಂಯೋಜನೆಯನ್ನು ಬಳಸಿಕೊಂಡು ಬ್ರೈಲ್ ಅಕ್ಷರಗಳನ್ನು ರಚಿಸಲಾಗುತ್ತದೆ. ಈ ಚುಕ್ಕೆಗಳ ಸಂಖ್ಯೆ ಮತ್ತು ಜೋಡಣೆಯು ಒಂದು ಅಕ್ಷರದಿಂದ ಇನ್ನೊಂದನ್ನು ಪ್ರತ್ಯೇಕಿಸುತ್ತದೆ. ವಿವಿಧ ಬ್ರೈಲ್ ವರ್ಣಮಾಲೆಗಳು ಮುದ್ರಿತ ಬರವಣಿಗೆಗಾಗಿ ಪ್ರತಿಲೇಖನ ಸಂಕೇತಗಳಾಗಿ ಹುಟ್ಟಿಕೊಂಡಿರುವುದರಿಂದ , ಮ್ಯಾಪಿಂಗ್ಗಳು (ಅಕ್ಷರ ಪದನಾಮಗಳ ಸೆಟ್) ಭಾಷೆಯಿಂದ ಭಾಷೆಗೆ ಮತ್ತು ಒಂದರೊಳಗೆ ಬದಲಾಗಿರುವುದು ಬ್ರೈಲ್ ಲಿಪಿಯ ವೈಶಿಷ್ಟ್ಯವಾಗಿದೆ.


#ಇಂಗ್ಲಿಷ್ ಬ್ರೈಲ್ನಲ್ಲಿ ಬ್ರೈಲ್ನ 3 ಹಂತಗಳಿವೆ:

*ಒಪ್ಪಂದವಿಲ್ಲದ ಬ್ರೈಲ್ - ಮೂಲಭೂತ ಸಾಕ್ಷರತೆಗಾಗಿ ಬಳಸಲಾಗುವ ಅಕ್ಷರದ ಮೂಲಕ ಅಕ್ಷರದ ಪ್ರತಿಲೇಖನ. 

*ಸಂಕುಚಿತ ಬ್ರೈಲ್ - ಸಂಕ್ಷೇಪಣಗಳು ಮತ್ತು ಸಂಕೋಚನಗಳ ಸೇರ್ಪಡೆಯ ಜಾಗವನ್ನು ಉಳಿಸುವ ಕಾರ್ಯವಿಧಾನ ವಾಗಿ ಈ ಹಂತವನ್ನು ಬಳಸಲಾಗುತ್ತದೆ.

*ಗ್ರೇಡ್ 3 ಬ್ರೈಲ್ - ಸಾಮಾನ್ಯವಾಗಿ ಕಡಿಮೆ ಬಳಸಲಾಗುವ ವಿವಿಧ ಪ್ರಮಾಣಿತವಲ್ಲದ ವೈಯಕ್ತಿಕ ಸ್ಟೆನೋಗ್ರಫಿಯ ಹಂತವಾಗಿದೆ. 

#ಬ್ರೈಲ್ ಸಾಕ್ಷರತೆ:

ಕುರುಡುತನ ಹೊಂದಿರುವ ಜನರಿಗೆ ಸಮಾನ ಅವಕಾಶಗಳಲ್ಲಿ ಬ್ರೈಲ್ ಸಾಕ್ಷರತೆಯೂ ಪ್ರಮುಖ ಅಂಶವಾಗಿದೆ. ದೃಷ್ಟಿ ವಿಕಲತೆ ಹೊಂದಿರುವವರ ಮೇಲೆ ಸಾಕ್ಷರತೆಯ ಅಸಮಾನತೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಪ್ರತಿಬಿಂಬಿಸಲು ಬ್ರೈಲ್ ಸಾಕ್ಷರತೆಯು ಜಾಗೃತಿ ಮೂಡಿಸುತ್ತದೆ. 


#ಬ್ರೈಲ್ ಲಿಪಿಯ ಪ್ರಯೋಜನಗಳು:

ಬ್ರೈಲ್ ಎಂಬುದು ಕುರುಡರು,ಕಿವುಡರು ಅಥವಾ ಕಡಿಮೆ ದೃಷ್ಟಿ ಹೊಂದಿರುವ ಜನರು ಸೇರಿದಂತೆ ದೃಷ್ಟಿಹೀನರಾಗಿರುವ ಜನರು ಬಳಸುವ ಸ್ಪರ್ಶ ಬರವಣಿಗೆಯ ವ್ಯವಸ್ಥೆಯಾಗಿದೆ. ಇದನ್ನು ಉಬ್ಬು ಕಾಗದದ ಮೇಲೆ ಮತ್ತು ಕಂಪ್ಯೂಟರ್ಗಳು ಅಥವಾ ಸ್ಮಾರ್ಟ್ಫೋನ್ ಸಾಧನಗಳಿಗೆ ಸಂಪರ್ಕಿಸಿ,ರಿಫ್ರೆಶ್ ಮಾಡಬಹುದಾದ ಬ್ರೈಲ್ ಡಿಸ್ಪ್ಲೇಗಳನ್ನು ಬಳಸುವ ಮೂಲಕ ಅವರು ಓದಬಹುದು. ಬ್ರೈಲ್ ಅನ್ನು ಸ್ಲೇಟ್ ಮತ್ತು ಸ್ಟೈಲಸ್ , ಬ್ರೈಲ್ ರೈಟರ್, ಎಲೆಕ್ಟ್ರಾನಿಕ್ ಬ್ರೈಲ್ ನೋಟ್ಟೇಕರ್ ಅಥವಾ ಕಂಪ್ಯೂಟರ್ಗೆ ಸಂಪರ್ಕಿಸಿ ಬರೆಯಬಹುದು.

ಈ ದಿನಾಚರಣೆ ಅಭಿಯಾನವು ಬ್ರೈಲ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬ್ರೈಲ್ ಕಲಿಯಲು ಹೆಚ್ಚು ಕುರುಡು ಮತ್ತು ಭಾಗಶಃ ದೃಷ್ಟಿ ಹೊಂದಿರುವ ಜನರನ್ನು ಉತ್ತೇಜಿಸುವುದು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಇತರರಿಗೆ ಬ್ರೈಲ್ ಶಿಕ್ಷಣ ನೀಡುವುದಾಗಿದೆ.


ಅಂಧರ ಬದುಕಿನ ಇವತ್ತಿನ ಆತ್ಮವಿಶ್ವಾಸ ಮತ್ತು ಅವರ ಸಾಧನೆಗಳ ಹಿಂದೆ ಲೂಯಿ ಬ್ರೈಲ್ರ ಪರಿಶ್ರಮವಿದೆ. ಬ್ರೈಲ್ ನ ಬದುಕು ಮತ್ತು ಅವರು ಮಾಡಿದ ಸಾಧನೆ, ಅನೇಕ ದೃಷ್ಟಿಹೀನರ ಬದುಕಿಗೆ ಸ್ಫೂರ್ತಿಯ ಸೆಲೆಯಾಗಿದೆ. ದೃಷ್ಟಿ ವಿಶೇಷ ಚೇತನರು ಇಂದು ಸಮಾಜದಿಂದ ಯಾವುದೇ ರೀತಿಯ ಅನುಕಂಪ ನಿರೀಕ್ಷಿಸದೆ ಸಹಜ ರೀತಿಯಿಂದ ಬದುಕು ನಡೆಸುತ್ತಿದ್ದಾರೆ. ಅಂಗವೈಕಲ್ಯವನ್ನು ಮರೆತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.ಅವರನ್ನು ಈ ಸಂದರ್ಭದಲ್ಲಿ ಶ್ಲಾಘಿಸದೇ ಇದ್ದರೆ ತಪ್ಪಾಗುತ್ತದೆ. 

ಮನಸ್ಸು ಕುರುಡಾಗಿದ್ದಾಗ ಕಣ್ಣುಗಳು ನಿಷ್ಪ್ರಯೋಜಕವಾಗುತ್ತವೆ.ಆದರೆ ಅದು ಹೀಗಾಗಬಾರದೆಂದರೆ ನಾವು ಹೃದಯದ ಒಳಗಣ್ಣಿನಿಂದ ಮನಃಪೂರ್ವಕವಾಗಿ, ಬ್ರೈಲ್ ಲಿಪಿಯ ಸಂವಹನ ಸಾಧನದಿಂದ ಅವರಿಗೆ ದಾರಿ ದೀಪವಾಗುವ ಮೂಲಕ ನಾವು ಡಿಸೆಂಬರ್ 03 ರ ವಿಶ್ವ ವಿಶೇಷಚೇತನರ ದಿನಕ್ಕೆ ಗೌರವಯುತ ಚೇತನ ನೀಡೋಣ. 

ಒಟ್ಟಾರೆಯಾಗಿ ದೃಷ್ಟಿ ವಿಕಲ ಚೇತನರಲ್ಲಿ ಬ್ರೈಲ್ ಲಿಪಿ ಹೊಸ ಆಯಾಮ ಸೃಷ್ಟಿಸಿದ್ದು, ಅವರ ಬದುಕಿಗೆ ಆಶಾಕಿರಣ ಮೂಡಿಸಿದೆ. ಈ ಸಮುದಾಯದ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲೂ ಗಮನಾರ್ಹ ಪಾತ್ರ ನಿರ್ವಹಣೆ ಮಾಡಿದೆ.ದೃಷ್ಟಿ ವಿಕಲ ಚೇತನರು ಸ್ವಾವಲಂಬಿ ಬದುಕು ಸಾಗಿಸಲು ಬ್ರೈಲ್ ಲಿಪಿ ನಿರ್ಣಾಯಕ ಪಾತ್ರ ವಹಿಸಿದೆ.ಪರಿವರ್ತನೆಯಲ್ಲಿ ಬ್ರೈಲ್ ಸಹಾಯ ಮಾಡಿದೆ ಆದ್ದರಿಂದ ಬ್ರೈಲ್ ಲಿಪಿಯನ್ನು ದೃಷ್ಟಿಹೀನರ ಬದುಕಿನ ಆಶಾಕಿರಣ ಎನ್ನಬಹುದು. 


#ಕೊನೆಯ ಮಾತು:

ಲೂಯಿಸ್ ಬ್ರೈಲ್ ಅವರು "ಅಂಧರ ಬಾಳಿಗೆ ಕಣ್ಣಲ್ಲಿ ಕಣ್ಣಾಗಿ ಅವರ ಪಾಲಿನ ದಾರಿ ದೀಪದ ಆಶಾಕಿರಣದ ಬೆಳಕಾಗಿದ್ದಾರೆ"ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗಲಾರದು..!




No comments:

Post a Comment