Saturday, January 2, 2021

ಸಮಸ್ತವನ್ನೂ ಅಲ್ಲಾಡಿಸಿಬಿಟ್ಟ ಗುಮಾಸ್ತ !!!

 ಸಮಸ್ತವನ್ನೂ ಅಲ್ಲಾಡಿಸಿಬಿಟ್ಟ ಗುಮಾಸ್ತ !!!

ಲೇಖನ:    ರೋಹಿತ್ ವಿ ಸಾಗರ್

ಪ್ರಾಂಶುಪಾಲರು, 

ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು 

ಸಾಗರ 


ಇಪ್ಪತ್ತನೇ ಶತಮಾನದ ಆರಂಭದ ದಿನಗಳವು. ಸ್ವಿಟ್ಜರ್ಲ್ಯಾಂಡಿನ ಬರ್ನ್ ಎಂಬ ನಗರದಲ್ಲಿದ್ದ ಪೇಟೆಂಟ್ ಕಛೇರಿಯಲ್ಲಿ 23ರ ಹರಯದ ಸ್ಪುರದ್ರೂಪಿ ತರುಣನೊಬ್ಬ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದ. ಆತನ ಕೆಲಸ ಪೇಟೆಂಟ್ಗೆಂದು ಬಂದಿದ್ದ ಅರ್ಜಿಗಳನ್ನು ಪರಿಶೀಲಿಸುವುದು. ಮೂಲತ: ಜರ್ಮನಿಯವನಾದ ಈತ ಜನಿಸಿದ್ದು 1879ರ ಮಾರ್ಚ್ 14ರಂದು. ಹೇಮನ್ ಮತ್ತು ಪೌಲಿನ್ ಎಂಬ ಯಹೂದಿ ದಂಪತಿಗಳಿಗೆ ಚಿಕ್ಕಂದಿನಿಂದಲೂ ಮಂದಮತಿಯಂತೆಯೇ ಇರುತ್ತಿದ್ದ ಈತ ಮಾತನಾಡಲು ಶುರುಮಾಡಿದ್ದೇ ಮೂರು ವರ್ಷಗಳ ನಂತರ. ವಯಸ್ಸು ಐದು ದಾಟಿದಾಗ ಆತ ತಾಯಿಯಿಂದ ವಯೋಲಿನ್ ಬಾರಿಸುವುದನ್ನು ಚೆನ್ನಾಗಿ ಕಲಿತುಕೊಂಡ. ಆ ಸದ್ದು ಮಲಗಿದ ಆತನ ಬುದ್ಧಿಮತ್ತೆಯನ್ನು ಬಡಿದೆಬ್ಬಿಸಿತೋ ಏನೋ, ಅಲ್ಲಿಂದ ಮುಂದೆ ಆತ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳ ಸಾಲಿನಲ್ಲಿ ಗುರುತಿಸಲ್ಪಟ್ಟ. ರೇಖಾಗಣಿತ ಮತ್ತು ಭೌತಶಾಸ್ತ್ರಗಳು ಅವನ ನೆಚ್ಚಿನ ಆಯ್ಕೆಯ ವಿಷಯಗಳಾದವು. ಆ ಚಿಕ್ಕ ವಯಸ್ಸಿನಲ್ಲೇ ಹಲವು ಕ್ಲಿಷ್ಟ ವಿಷಯಗಳ ಪುಸ್ತಕಗಳನ್ನು ಓದಿ ಜೀರ್ಣಿಸಿಕೊಂಡ. ಈತ, ಮುಂದೆ ಜಗತ್ತಿಗೇ ಅಜೀರ್ಣವಾಗುವಷ್ಟು ಸಂಶೋಧನೆಗಳನ್ನು ಸಾಲು ಸಾಲಾಗಿ ನಿಲ್ಲಿಸಿಬಿಟ್ಟ. ಸಮಸ್ತ ವಿಶ್ವದ ಎಲ್ಲಾ ವೈಜ್ಞಾನಿಕ ಚಿಂತನೆಗಳನ್ನೇ ಅಲುಗಾಡಿಸಿದ ಆ ಗುಮಾಸ್ತನೇ 1921ರ ನೋಬೆಲ್ ಪ್ರಶಸ್ತಿ ಪುರಸ್ಕ್ರತ ಆಲ್ಬರ್ಟ್ ಐನ್ಸ್ಟೈನ್.


ನೈಸರ್ಗಿಕ ತತ್ವಶಾಸ್ತ್ರದ ಅನಭಿಷಿಕ್ತ ದೊರೆ ನ್ಯೂಟನ್ನನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಏಕೈಕ ವಿಜ್ಞಾನಿಯೊಬ್ಬನಿದ್ದ ಎಂದಾದರೆ, ಅದು ಕೇವಲ ಐನ್ಸ್ಟೈನ್ ಮಾತ್ರ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಈತನ ಬಗ್ಗೆ ಖುಷಿಪಡಲೇ ಬೇಕಾದ ವಿಷಯವೆಂದರೆ ವೈಜ್ಞಾನಿಕ ಚಿಂತನೆಗಳ ವ್ಯಾಪ್ತಿಯನ್ನು ಕಣ್ಣಿಗೆ ಕಾಣಿಸದಷ್ಟು ದೂರಕ್ಕೆ ವಿಸ್ತರಿಸಿದ ಈತ ಮೂಲತ: ಶಾಂತಿಪ್ರಿಯನಾಗಿದ್ದ, ಮಹಾತ್ಮ ಗಾಂಧೀಜಿಯ ಅಭಿಮಾನಿಯಾಗಿದ್ದ. ಆದರೆ ಅವನಿಗರಿವಿಲ್ಲದಂತೆಯೇ ಆತ ಮನುಕುಲದ ಅತಿದೊಡ್ಡ ಪ್ರಮಾದವೊಂದರ ಭಾಗವಾಗಿ ಬಿಟ್ಟಿದ್ದ ಎಂಬುದು ವಿಪರ್ಯಾಸ.

ಇಸವಿ 1905, ಐನ್ಸ್ಟೈನ್ ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಬಹುದಾದ ವರ್ಷ. ಅದೊಂದೆ ವರ್ಷದಲ್ಲಿ ಸಾಲು ಸಾಲಾಗಿ ಐನ್ಸ್ಟೈನ್ ಐದು ಅಭೂತಪೂರ್ವ ಸಂಶೋಧನೆಗಳನ್ನು ಪ್ರಬಂಧಗಳ ಮೂಲಕ ಜಗತ್ತಿಗೆ ಪರಿಚಯಿಸಿದ. ಈ ಎಲ್ಲಾ ಲೇಖನಗಳು ಜರ್ಮನಿಯ "ಅನ್ನಾಲೈನ್ ಡೆರ್ ಫಿಸಿಕ್" ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಆಗ ಐನ್ಸ್ಟೈನ್ಗಿನ್ನೂ 26 ವರ್ಷ. ಇತಿಹಾಸದಲ್ಲಿ ಆ ಇಸವಿಯನ್ನು ಪವಾಡದ ವರ್ಷ ಎಂದು ಕರೆಯಲಾಗಿದೆ. “ಅಣುಗಾತ್ರದಲ್ಲಿ ಒಂದು ಹೊಸ ತೀರ್ಮಾನ" ಎಂಬ ಸಂಶೋಧನೆ ಏಪ್ರಿಲ್ನಲ್ಲಿ ಅವನ ಈ ದಂಡಯಾತ್ರೆಯ ಮೊದಲ ಯಶಸ್ಸಾಗಿತ್ತು. ನಂತರದಲ್ಲಿ ಪ್ರೋಟಾನ್ಗಳೆಂಬ ಶಕ್ತಿ ಪ್ಯಾಕೆಟ್ಟುಗಳ ಹೊಸ ಚಿಂತನೆಯೊಂದಿಗೆ ಆತ ಬರೆದ ಮಹತ್ವದ ಸಂಶೋಧನಾ ಪ್ರಬಂಧವೇ ದ್ಯುತಿ ವಿದ್ಯುತ್ ಪರಿಣಾಮ ಮತ್ತದರ ವಿವರಣೆ”. ಮುಂದೆ ಈ ಸಂಶೋಧನೆಗಾಗಿಯೇ 1921ರಲ್ಲಿ ಈತನಿಗೆ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂರನೆಯದಾಗಿ ಬ್ರೌನಿಯನ್ ಚಲನೆಯೆಂಬ ಚಿಕ್ಕ ಕಣಗಳ ಅಡ್ಡಾದಿಡ್ಡಿ ಚಲನೆಯ ಕುರಿತಾದ ವಿವರಣೆ, ಅಣು ಮತ್ತು ಪರಮಾಣುಗಳ ಬಗೆಗೆ ಹಲವು ವಿಚಾರಗಳಿದ್ದ ಅನುಮಾನಗಳನ್ನು ಬಗೆಹರಿಸುವಲ್ಲಿ ನೆರವಾಯಿತು. ನಂತರದ ಎರೆಡೂ ಸಂಶೋಧನೆಗಳೂ ಐನ್ಸ್ಟೈನ್ನ ಹೆಸರನ್ನು ಅಜರಾಮರವನ್ನಾಗಿಸಿದವು. 

ಅವುಗಳಲ್ಲಿ ಮೊದಲನೆಯದು ವಿಶೇಷ ಸಾಪೇಕ್ಷತಾ ಸಿದ್ಧಾಂತ. ನ್ಯೂಟನ್ನ ಕಣ್ಣಿಗೆ ಕಾಣುವ ವಸ್ತುಗಳ ಕ್ರಿಯೆಗಳ ಕುರಿತಾದ ಭೌತವಿಜ್ಞಾನವನ್ನು ಕಂಡು ಅನುಭವಿಸುತ್ತಿದ್ದ ಜಗತ್ತಿಗೆ ವಾಸ್ತವತೆಯನ್ನೇ ಅವಾಸ್ತವ ಎಂಬಂತೆ ಬಿಂಬಿಸಿದ ಈ ಸಿದ್ಧಾಂತವನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ನ್ಯೂಟನ್ ಹೇಳಿದಂತೆ ಪ್ರದೇಶ ಮತ್ತು ಕಾಲಗಳು ಯಾವುದರ ಮೇಲೆಯೂ ಅವಲಂಬಿತವಾಗುವುದಿಲ್ಲ. ಅವು ಎಂದೆಂದಿಗೂ ಬದಲಾಗದ ಶಾಶ್ವತ ಪರಿಮಾಣಗಳು. ಆದರೆ ಐನ್ಸ್ಟೈನ್ ಎಲ್ಲಾ ಪರಿಮಾಣಗಳಂತೆ ಕಾಲ ಮತ್ತು ಪ್ರದೇಶಗಳೆರೆಡೂ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿವೆ ಎಂದು ಸೈದ್ಧಾಂತಿಕವಾಗಿ ತೋರಿಸಿಕೊಟ್ಟ. ಅಂದರೆ ನಮ್ಮ ಪ್ರಕಾರ ಎರಡು ನಿರ್ದಿಷ್ಟ ಸ್ಥಳಗಳ ನಡುವಿನ ದೂರ ಯಾವಾಗಲೂ ಒಂದೇ ಇರುತ್ತದೆ. ನಾನು ನೋಡಿದರೂ ಅಷ್ಟೇ ನೀವು ನೋಡಿದರೂ ಅಷ್ಟೇ ಅಥವಾ ಮತ್ತಾರೋ ಪರದೇಶಿ ಬಂದು ನೋಡಿದರೂ ಅಷ್ಟೆ ಇರುತ್ತದೆ. ಆದರೆ ಸಾಪೇಕ್ಷ ಸಿದ್ಧಾಂತದ ಪ್ರಕಾರ ಅತ್ಯಂತ ವೇಗವಾಗಿ ಚಲಿಸಬಲ್ಲ ವ್ಯಕ್ತಿಯೊಬ್ಬನಿಗೆ ಆ ದೂರ ಮೊದಲು ಕಂಡದ್ದಕ್ಕಿಂತ ಕಡಿಮೆಯಾಗಿ ಕಾಣುತ್ತದೆ. ಅದೇ ರೀತಿ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಒಂದು ವರ್ಷವಾಗಿರುವ ಸಮಯ, ವ್ಯೋಮದಲ್ಲಿರುವ ಮತ್ತೊಬ್ಬನಿಗೆ ಒಂದು ವಾರವಾಗಿ ಅನುಭವಕ್ಕೆ ಬರುತ್ತದೆ. ಇದು ನಮ್ಮ ನಂಬಿಕೆಗಳನ್ನೇ ಬುಡಸಮೇತ ಅಲುಗಾಡಿಸುವಂತಹದು, ಆದರೆ ಇದೇ ಸತ್ಯ ಎಂದು ಪ್ರಾಯೋಗಿಕವಾಗಿಯೂ ಸಾಧ್ಯಮಾಡಿ ತೋರಿಸಲಾಗಿದೆ. ಕಣ್ಣಿಗೆ ಕಾಣುವುದೊಂದೇ ಸತ್ಯ ಎಂದುಕೊಂಡಿದ್ದವರಿಗೆ ಕಾಣದ್ದನ್ನೂ ಬಣ್ಣಿಸಿ ಅದನ್ನೇ ಸತ್ಯವೆಂದು ತೋರಿಸಿದವನೇ ಈ ಐನ್ಸ್ಟೈನ್. ಒಮ್ಮೆ ಯಾರೋ ಒಬ್ಬರು ಈ ಸಿದ್ಧಾಂತವನ್ನು ಸರಳವಾಗಿ ಹೇಳಿ ಎಂದಿದ್ದಕ್ಕೆ ಐನ್ಸ್ಟೈನ್ ಒಂದು ಉದಾಹರಣೆಯನ್ನು ಹೇಳುತ್ತಾರೆ. ಇಬ್ಬರು ತರುಣರನ್ನು ಕರೆದು ಒಬ್ಬನನ್ನು ಕಾದ ಕಾವಲಿಯ ಮೇಲೆ ಇನ್ನೊಬ್ಬನನ್ನು ಅತೀ ಸುಂದರ ತರುಣಿಯೊಬ್ಬಳ ಜೊತೆಗೆ ಒಂದು ತಾಸು ಕೂರಿಸಿ, ಅವರಿಗೆ ಗಡಿಯಾರ ತೋರಿಸದೇ, ಅವರು ಎಷ್ಟು ಕಾಲ ಹಾಗೆ ಕುಳಿತಿದ್ದರು ಎಂದು ಕೇಳಿ. ಉತ್ತರ ವಿಸ್ಮಯಕಾರಿಯಾಗಿರುತ್ತದೆ. ಹುಡಿಗಿಯ ಪಕ್ಕ ಕುಳಿತವನು ಹತ್ತೇ ನಿಮಿಷ ಎನ್ನುತ್ತಾನೆ. ಕಾವಲಿಯ ಮೇಲೆ ಕುಳಿತವನು ಮೂರು ತಾಸು ಎನ್ನುತ್ತಾನೆ. ಆದರೆ ನಿಜವಾಗಿಯೂ ಅವರಿಬ್ಬರೂ ಕುಳಿತದ್ದು ಒಂದು ತಾಸು ಎಂಬುದು ಗಡಿಯಾರ ನೋಡಿದವರಿಗೆ ಮಾತ್ರ ಗೊತ್ತಾಗುತ್ತದೆ. ಹಾಗಂತ ಇಬ್ಬರೂ ತಮ್ಮ ಅನುಭವಕ್ಕೆ ಬಂದ ಸತ್ಯವನ್ನು ಹೇಳಿದ್ದಾರೆ. ಇದರರ್ಥ ಕಾಲವೂ ಕೂಡ ವೀಕ್ಷಕನನ್ನೂ ಅವನ ಪರಿಸ್ಥಿತಿಯನ್ನು ಅಲವಂಬಿಸಿರುತ್ತದೆ ಎಂದಾಯಿತಲ್ಲವೇ?!.

ಅವಳಿಗಳ ಅಭಾಸ ಎಂಬ ಇನ್ನೊಂದು ನೇರ ದೃಷ್ಟಾಂತವೊಂದು ಸಾಪೇಕ್ಷ ಸಿದ್ಧಾಂತವನ್ನು ಬಣ್ಣಿಸುತ್ತದೆ ರಾಜ ಮತ್ತು ರಾಣಿ ಎಂಬ ಇಬ್ಬರು ಅವಳಿಗಳಿದ್ದಾರೆ ಎಂದಿಟ್ಟುಕೊಳ್ಳಿ. ರಾಜನನ್ನು ಕ್ಷಿಪಣಿಯೊಂದರಲ್ಲಿಟ್ಟು ಅದನ್ನು ಬೆಳಕಿನ ವೇಗದಲ್ಲಿ ವ್ಯೋಮದಲ್ಲಿ ಸಂಚರಿಸುವಂತೆ ಮಾಡಿ ನಾಲ್ಕು ವರ್ಷಗಳ ತರುವಾಯ ರಾಜ ಹಿಂತಿರುಗಿ ಬಂದರೆ ಅಲ್ಲೊಂದು ನಂಬಲಸಾಧ್ಯವಾದ ಪವಾಡವಾಗಿರುತ್ತದೆ. ರಾಜ ಹೊರಡುವಾಗ ಅವರಿಬ್ಬರಿಗೂ ಹತ್ತು ವರ್ಷ ವಯಸ್ಸು ಎಂದಿಟ್ಟುಕೊಳ್ಳೋಣ, ಈಗ ಹಿಂತಿರುಗಿದಾಗ ರಾಣಿಯ ವಯಸ್ಸು 14 ವರ್ಷ ಆಗಿರುತ್ತದೆ. ಆದರೆ ರಾಜನ ವಯಸ್ಸು ಹತ್ತೇ ಆಗಿರುತ್ತದೆ. ದೈಹಿಕವಾಗಿಯೂ ಭೂಮಿಯ ಮೇಲೆ ನಾವು ಅನುಭವಿಸಿರುವ ನಾಲ್ಕೂ ವರ್ಷಗಳನ್ನು ವ್ಯೋಮದಲ್ಲಿ ರಾಜ ಅನುಭವಿಸಿಯೇ ಇರುವುದಿಲ್ಲ. ಕೇವಲ ಒಂದೆರೆಡು ನಿಮಿಷದಲ್ಲಿ ತಾನು ಹೋಗಿ ಬಂದೆ ಎಂದುಕೊಂಡಿರುತ್ತಾನೆ. ಅವನ ಮನಸು, ಅವನ ದೇಹವೂ ಅಷ್ಟೇ ಸಮಯವನ್ನು ಅನುಭವಿಸಿರುತ್ತದೆ. ಇದನ್ನೇ ಕೊಂಚ ಬದಲಾಯಿಸಿದರೆ ತಾಯಿಯನ್ನೇ ಮಗನಿಗಿಂತ ಚಿಕ್ಕವಳನ್ನಾಗಿಸಬಹುದು. ಮೊಮ್ಮಗಳನ್ನು ಅಜ್ಜನಿಗಿಂತ ದೊಡ್ಡವಳನ್ನಾಗಿಸಬಹುದು, ಆಶ್ಚರ್ಯವಾದರೂ ನಿಜ.

ಐನ್ಸ್ಟೈನ್ ಕೇವಲ ಸಮವೇಗದಲ್ಲಿ ಚಲಿಸುವ ಸನ್ನಿವೇಶ ಅಥವಾ ಚೌಕಟ್ಟುಗಳಿಗೆ ಮಾತ್ರ ಇದನ್ನು ಅನ್ವಯಿಸಿದ್ದರಿಂದ, ಇದು ವಿಶೇಷ ಸಾಪೇಕ್ಷ ಸಿದ್ಧಾಂತ ಎಂಬ ಹೆಸರು ಪಡೆದುಕೊಂಡಿತು. ಇದನ್ನೇ ಮುದುವರೆಸಿ ಎಲ್ಲಾ ರೀತಿಯ ಚೌಕಟ್ಟು (ಫ್ರೇಮ್) ಗಳಿಗೂ ವಿಭಿನ್ನ ವೇಗಗಳಿಗೂ ಸೇರಿ ಆತ ನೀಡಿದ ಮತ್ತೊಂದು ಅಸಾಮಾನ್ಯ ಸಿದ್ಧಾಂತವನ್ನು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಎಂದು ಕರೆಯಲಾಯಿತು. ಅದು ಪ್ರಕಟವಾದದ್ದು 1915ರಲ್ಲಿ. ಇಂದಿಗೆ ಸರಿಯಾಗಿ ನೂರಾ ಐದು ವರ್ಷಗಳ ಹಿಂದೆ. ಇದರ ಶತಮಾನೋತ್ಸವ ಸಂಭ್ರಮದಲ್ಲಿ ಅಪ್ರತಿಮ ಬುದ್ಧಿವಂತ, ಮನುಕುಲವನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿದ ಡಾ:ಆಲ್ಬರ್ಟ್ ಐನ್ಸ್ಟೈನ್ರಿಗೆ ಹೃದಯಪೂರ್ವಕ ನಮನಗಳು.

ಐನ್ಸ್ಟೈನ್ನ ಪವಾಡ ವರ್ಷದ ಕೊನೆಯ ಲೇಖನ ಆತನನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯಿತು. ಅದೇ ಶಕ್ತಿ ಮತ್ತು ದ್ರವ್ಯರಾಶಿಗಳ ಪರಸ್ಪರ ಬದಲಾವಣೆಯ ಕುರಿತಾದ ಸಂಶೋಧನೆ. ಜಗತ್ತಿನ ಪ್ರತಿಯೊಬ್ಬರಿಗೂ ಪರಿಚಿತವಾಗಿರುವ E=mC2 ಎಂಬ ಸಮೀಕರಣ. ಇದರಲ್ಲಿ ಐನ್ಸ್ಟೈನ್ ಶಕ್ತಿ ಮತ್ತು ದ್ರವ್ಯರಾಶಿಗಳು ಬೇರೆ ಬೇರೆಯಲ್ಲ, ಒಂದೇ ನಾಣ್ಯದ ಎರೆಡು ಮುಖಗಳು ಎಂದು ಕ್ರಾಂತಿಕಾರಕವಾಗಿ ಸಾರಿ ಹೇಳಿದ. ಅವನ ಪ್ರಕಾರ ಯಾವುದೇ ದ್ರವ್ಯರಾಶಿಯನ್ನಾದರೂ ಕೆಲವು ನಿರ್ದಿಷ್ಟ ಕ್ರಿಯೆಗಳಿಂದ ಶಕ್ತಿಯನ್ನಾಗಿ ಪರಿವರ್ತಿಸಬಹುದು, ಅದೇ ರೀತಿ ಶಕ್ತಿಯನ್ನು ದ್ರವ್ಯರಾಶಿಯನ್ನಾಗಿ ಪರಿವರ್ತಿಸಬಹುದು ಹಾಗೂ ಅದರ ಪ್ರಮಾಣವನ್ನು E=mC2 ಎಂಬ ಸಮೀಕರಣದಿಂದ ಅಳೆಯಬಹುದು ಎಂದು ತೋರಿಸಿಕೊಟ್ಟ. ಇಲ್ಲಿ E ಎಂದರೆ ಶಕ್ತಿ, m ಎಂದರೆ ದ್ರವ್ಯರಾಶಿ, C ಎಂದರೆ ಬೆಳಕಿನ ವೇಗ, ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್. ಈ ಪುಟ್ಟ ಸಮೀಕರಣದಿಂದ ಏನಾದೀತು ಎಂಬ ಪ್ರಶ್ನೆ ನಿಮಗಿದ್ದರೆ, ಜಪಾನಿನಲ್ಲಿ ಬಿದ್ದ ಪರಮಾಣು ಬಾಂಬುಗಳನ್ನು ನೆನಪಿಸಿಕೊಳ್ಳಿ.

ಮನುಕುಲದ ಒಳಿತಿಗಾಗಿ ವಿಜ್ಞಾನವಿರಬೇಕು ಎಂದು ವಾದಿಸುತ್ತಿದ್ದ ಐನ್ಸ್ಟೈನ್ E=mC2 ಸಮೀಕರಣ ಮುಂದೆ ಪರಮಾಣು ಬಾಂಬು ತಯಾರಿಕೆಗೆ ಸಹಕಾರಿಯಾಯಿತೆಂದು ಅವನೆಂದೂ ಊಹಿಸಿರಲಿಲ್ಲ. ಹಾಗಾಗಿಯೇ ಆ ಬಾಂಬು ಸ್ಪೋಟಗೊಂಡಾಗ ಬಿಕ್ಕಿ ಬಿಕ್ಕಿ ಅತ್ತಿದ್ದ ಐನ್ಸ್ಟೈನ್, ಪರಮಾಣು ಶಕ್ತಿಯ ನಿಯಂತ್ರಣಕ್ಕೆಂದು ಸ್ಥಾಪಿತವಾದ ಸಮಿತಿಯ ಅಧ್ಯಕ್ಷನಾಗಿ ನಿಯೋಜಿತಗೊಂಡ್ಡಿದ್ದು 1945ರಲ್ಲಿ.

ಪ್ರೀತಿಯಲ್ಲಿ ಬೀಳುವವರಿಗೆ ಗುರುತ್ವ ಕಾರಣವಲ್ಲ ಎನ್ನುತ್ತಾ ಮಾರ್ಮಿಕವಾಗಿ ಮಾತನಾಡಬಲ್ಲವನಾಗಿದ್ದ ಒಬ್ಬ ಅಪ್ರತಿಮ ವಿಜ್ಞಾನಿ ಐನ್ಸ್ಟೈನ್. ನೂರಾರು ಸಂಶೋಧನೆಗಳ ಮೂಲಕ ನಾಲ್ಕೈದು ವಿಶ್ವವಿದ್ಯಾನಿಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿಜ್ಞಾನದ ಪಾಠ ಹೇಳಿಕೊಟ್ಟ ಐನ್ಸ್ಟೈನ್, ಮಾನವ ಜೀವನದಿಂದ ಹೊರ ನಿಂತಾಗ ಮಾತ್ರ ಪ್ರಕೃತಿದರ್ಶನ ಸಾಧ್ಯ ಎಂಬುದನ್ನು ನಿರೂಪಿಸಿದ. ಸಮಸ್ತವನ್ನೂ ತನ್ನ ಚಿಂತನೆಗಳಿಂದ ಅಲುಗಾಡಿಸಿದ್ದ ಗುಮಾಸ್ತ ಐನ್ಸ್ಟೈನ್ 1955ರಂದು ಜಗತ್ತನ್ನೇ ದು:ಖದಲ್ಲಿಟ್ಟು ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದ.

***

ಈ ಲೇಖನದ PDF ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

4 comments: