Saturday, April 3, 2021

ಭೂಮಿ ಅಂದರೆ ಏನರ್ಥ?

ಭೂಮಿ ಅಂದರೆ ಏನರ್ಥ?

ಲೇಖಕರು: ಡಾ. ಡಿ. ಆರ್. ಪ್ರಸನ್ನಕುಮಾರ್
ಪರಿಸರ ಶಿಕ್ಷಣದ ಹವ್ಯಾಸಿ ಲೇಖಕರು




ಸುಮಾರು ೫೦ ವರ್ಷಗಳ ಹಿಂದೆ ಆರಂಭವಾದ ಭೂ ದಿನದ ಆಚರಣೆ, ಅದರ ಹಿಂದಿನ ಕಥೆ, ಆನಂತರದ ಬೆಳವಣಿಗೆಗಳು ಅದರಿಂದುಂಟಾದ ಪರಿಣಾಮಗಳು ಎಲ್ಲವನ್ನು ಕ್ಷಣಕಾಲ ಪಕ್ಕಕ್ಕಿಡೋಣ. ನನ್ನ ಪ್ರಶ್ನೆ ‘ಭೂಮಿ ಎಂದರೆ ನಿಮ್ಮ ವ್ಯಾಖ್ಯಾನವೇನು?

ಭೂಮಿ ನಮಗೆ ಶಾಲೆಯಲ್ಲಿ ಪರಿಚಯವಾದದ್ದು ‘ಭೂಮಿ ಒಂದು ಗ್ರಹ’ ಎಂದೇ ಹೌದಲ್ಲವೇ? ಅಂದು ಭೂಮಿ ನಮ್ಮ ತಾಯಿ ಎಂದೋ, ಎಲ್ಲ ಜೀವಿಗಳೂ ನಮ್ಮ ಸಹ-ಉದರಿಗಳೆಂದೋ ಏಕೆ ಕಲಿಯಲಿಲ್ಲಾ? ಭಾವನೆ ಮತ್ತು ಕಲಿಕೆಯನ್ನು ಬೇರೆ ಬೇರೆಯಾಗಿ ನೋಡುವ ಅನಿವರ‍್ಯತೆ ಇತ್ತೇ? ಭೂಮಿ ಎಂದರೆ ನಮ್ಮಲ್ಲಿ ಸ್ಫುರಿಸುವ ಭಾವವೇನು? ಆ ಭಾವಕ್ಕೆ ಕಾರಣವೇನು? ನಮ್ಮ ಭಾವನೆ ನಮ್ಮ ಆಚರಣೆಗಳನ್ನು ಪ್ರಭಾವಿಸುತ್ತಿದೆಯಾ ಅಥವಾ ಭಾವನೆಯೇ ಬೇರೆ, ಬದುಕೇ ಬೇರೆ ಎಂಬಂತೆ ಬದುಕುತ್ತಿರುವೆವೋ ಎಂಬ ಸಣ್ಣ ಸಣ್ಣ ಸಂಶಯಗಳನ್ನು ತೊಡೆದುಹಾಕುವ ಮತ್ತು ನಮ್ಮ ದ್ವಂದ್ವಗಳನ್ನು ಮೀರುವ ಪ್ರಯತ್ನ ಈ ಲೇಖನ. ಯಾವುದೇ ಉಪದೇಶವಾಗಲೀ, ಆದೇಶಗಳಾಗಲೀ ನಮ್ಮನ್ನು ಬದಲಿಸದಾದಾಗ, ಅಂತರಂಗದ ಧ್ವನಿ ಬದಲಿಸಬಹುದು ಎಂಬ ವಿಶ್ವಾಸ. ಅಂತಹ ವಿಶ್ವಾಸಗಳೇ ಪರಿಸರ ಜಾಗೃತಿಯ ಜೀವಾಳ.

****

ಪೃಥ್ವಿ ದಿನಾಚರಣೆ

ಪೃಥ್ವಿ ದಿನಾಚರಣೆಯು ಪರಿಸರದ ಮಹತ್ವ ಹಾಗೂ ಭೂಮಿಯ ರಕ್ಷಣೆಗೆ ಜನಜಾಗೃತಿ ಮೂಡಿಸುವ ದಿನ. ಕೈಗಾರಿಕೆಗಳ ಮಾಲಿನ್ಯದ ವಿರುದ್ಧ ಅಮೆರಿಕದಲ್ಲಿ ಆರಂಭವಾದ ಈ ಚಳವಳಿ ಕೆಲವೇ ವರ್ಷಗಳಲ್ಲಿ ಬೃಹತ್ ಅಭಿಯಾನದ ಸ್ವರೂಪವನ್ನೂ ಪಡೆಯಿತು. ಪರಿಸರ ಕುರಿತ ಸರ್ಕಾರಗಳ ನಿಷ್ಕಾಳಜಿಯನ್ನು ಪ್ರಶ್ನಿಸಿ ಏಪ್ರಿಲ್ ೨೨, ೧೯೭೦ರಲ್ಲಿ ಅಮೇರಿಕಾದ ಜನತೆ ಬೀದಿಗಿಳಿದಿದ್ದರ ಪರಿಣಾಮವೇ ಭೂದಿನದ ಹಿನ್ನಲೆ. ವಿಶ್ವಸಂಸ್ಥೆಯಂತಹ ಜಾಗತಿಕ ವೇದಿಕೆಗಳಲ್ಲಿಯೂ ಈ ಕುರಿತು ಚರ್ಚೆಗಳಾದವು. ಮಾಲಿನ್ಯ ತಡೆಯ ನಿಯಮಗಳು ಜಾರಿಗೆ ಬರಲಾರಂಬಿಸಿದವು. ಈ ಅಭಿಯಾನದಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಕೈಜೋಡಿಸಿವೆ. ಪರಿಸರ ರಕ್ಷಣೆ, ಭೂಮಿ ಸಂರಕ್ಷಣೆಗೆ ಒತ್ತು ನೀಡುವ ವಾಗ್ಧಾನ ನೀಡಿವೆ. ಭೂಮಿ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಬಗ್ಗೆ ಅರಿವು ಮೂಡಿಸುವ ವೇದಿಕೆಗಳು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅಂತಹ ಒಂದು ಪ್ರಯತ್ನ ಈ ಲೇಖನ. ಈ ವರ್ಷದ ಘೋಷವಾಕ್ಯ “ನಮ್ಮ ಭೂಮಿಯ ಪುನರ್ಸ್ಥಾಪನೆ” ಹಾಗಾಗಿ ನಮ್ಮ ನಂಬುಗೆಗಳ ಮರುಸ್ಥಾಪನೆಯ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ.
****
ನಮ್ಮ ಈ ಭೂಮಿ ಸೌರವ್ಯೂಹದ ಐದನೆಯ ದೊಡ್ಡ ಗ್ರಹ, ಇದುವರೆಗಿನ ಅಧ್ಯಯನಗಳ ಪ್ರಕಾರ ಸೌರವ್ಯೂಹದಲ್ಲಿರುವ ಏಕೈಕ ಜೀವಂತ ಗ್ರಹ. ಇದು ಈಗಿರುವ ಪಥಕ್ಕಿಂತ ಸೂರ್ಯನಿಗೆ ಸ್ವಲ್ಪ ಹತ್ತಿರದಲ್ಲಿ ಅಥವಾ ಸ್ವಲ್ಪ ದೂರದಲ್ಲಿದ್ದಿದ್ದರೂ ಜೀವಿಸಲು ಅಯೋಗ್ಯವಾಗುತ್ತಿತ್ತು ಎಂಬುದು ಇನ್ನೊಂದು ಅಚ್ಚರಿ. ಹೀಗೆಯೇ ಭೂಮಿಯ ಕುರಿತು ಅನೇಕ ಕುತೂಹಲಗಳು ಅನಾದಿಕಾಲದಿಂದಲೂ ಇವೆ. ಭೂಮಿ ಚಪ್ಪಟೆಯಾಗಿದೆ ಎಂದೋ,  ಭೂಮಿಯ ಸುತ್ತ ಇಡೀ ಸೌರಮಂಡಲ ಸುತ್ತುತ್ತದೆ ಎಂಬ ‘ಭೂ ಕೇಂದ್ರಿತ’ ವಾದಗಳಿಂದ ಹಿಡಿದು ಸೂರ್ಯನೇ ಕೇಂದ್ರ ಎಂದು ತಿಳಿಯುವವರೆಗೆ, ಭೂಮಿಯ ಪದರಗಳಿಂದ ಹಿಡಿದು ಸಾಗರದ ಆಳದಿಂದ ವ್ಯೋಮದ ಅನಿಲ ಪದರಗಳವರೆಗೆ ಎಲ್ಲವನ್ನೂ ಜಾಲಾಡಿ,  ನಮ್ಮ ಭೂಪ್ರದೇಶಗಳು, ಕಾಡು, ಮಳೆ,  ಮರುಭೂಮಿ, ಹಿಮ, ಸಾಗರ, ಪರ್ವತ, ಕಣಿವೆ, ಮಾರುತಗಳು, ಎಲ್ಲಕ್ಕೂ ವೈಜ್ಞಾನಿಕ ಕಾರಣ ನೀಡುವ ಮಟ್ಟಿಗೆ ತಿಳಿದಿದ್ದರೂ ಇಂದಿಗೂ ಈ ಭೂಮಿ ಅನೇಕ ರಹಸ್ಯಗಳನ್ನು ಅಡಗಿಸಿಟ್ಟ ಖಜಾನೆಯೇ ಸರಿ. ಇತ್ತೀಚೆಗೆ ಆ ಖಜಾನೆಯಿಂದ ಹೊರಬಂದ ಕೋವಿಡ್ ವೈರಸ್ ಮಾನವ ಜನಾಂಗವನ್ನೇ ತಲ್ಲಣಗೊಳಿಸಿದ್ದು ಅದಕ್ಕೆ ಸಾಕ್ಷಿ ಎನ್ನಬಹುದೇನೋ?

೪.೫ ಶತಕೋಟಿ ವರ್ಷಗಳ ಹಿಂದಿನ ಕಾಲಚಕ್ರದ ಗಡಿಯಾರವನ್ನು ಬೆನ್ನೆತ್ತಿದರೆ, ಈ ಭೂಮಿ ಉಂಟಾದ ಬಗೆ, ಇಲ್ಲಿ ಆದ ಬದಲಾವಣೆಗಳು, ಕೋಟ್ಯಾಂತರ ರ‍್ಷಗಳಿಂದ ನಿರಂತರವಾಗಿ ಯಾರ ಗಮನಕ್ಕೂ ಬಾರದ ಸೃಷ್ಟಿಯ ಎಷ್ಟೋ ಅದ್ಭುತ ರಹಸ್ಯಗಳನ್ನು ಒಡಲಲ್ಲಿ ಅಡಗಿಸಿಟ್ಟು ಏನೂ ತಿಳಿಯದಂತೆ ಮೌನವಾಗಿದೆಯೆಲ್ಲಾ ಎಂದೆನಿಸದಿರದು. ತಾರೆಯ ಚೂರು ತಾರೆಯಾಗದೆ ಗ್ರಹವಾಯಿತೇಕೆ? ಎನ್ನುವ ಕುತೂಹಲದ ಪ್ರಶ್ನೆಗಳು ಭೂಮ್ಯೋಮಗಳ ಸಂಬಂಧವನ್ನು ಹುಡುಕುವ ದಾರಿಯಾದವು ಸಹ. ಮೊದಲ ಹಂತದ ಬೆಂಕಿ ಆರಿ ತಣ್ಣಗಾದಂತೆ, ಮಾನವರ ಕುತೂಹಲ ತಣಿಯದಿದ್ದುದು ಅನೇಕ ಅವಿಷ್ಕಾರಗಳಿಗೆ ನಾಂದಿಯಾಯಿತು. ಈಗ ಸೂರ್ಯ ಮತ್ತು ನಮ್ಮ ಸಂಬಂಧ ಬೆಸೆದಿರುವ ಬಗೆಯನ್ನು ನೋಡಿ,  ಭೂಮಿ ಅಂದು ತಾರೆಗಳಿಂದ ತಂದಿದ್ದ ರಾಸಾಯನಿಕಗಳು ಈಗಲೂ ಭೂಮಿಯಲ್ಲಿವೆ, ಅಷ್ಟೇ ಏಕೆ ನಮ್ಮೊಳಗಿರುವ ರಾಸಾಯನಿಕ ಘಟಕಗಳೂ ಅವೇ ಅಂಶಗಳ ಸಂಯುಕ್ತಗಳೇ! ಅಂದರೆ ನಾವು ತಾರೆಯ ಸಂಬಂಧಿಕರು ಅಂತೆಲೇ? ನಮ್ಮ ಸುತ್ತಲಿನ ಸಕಲ ಜೈವ- ಅಜೈವ ವಸ್ತುಗಳಲ್ಲೂ ಅದೇ ರಾಸಾಯನಿಕಗಳ ಸಂಯುಕ್ತಗಳು ಕಾಣುವಾಗ ಇಡೀ ಭೂಜಗತ್ತಿನ ಒಬ್ಬರಿಗೊಬ್ಬರಿಗೆ ಸಂಬಂಧ ಇಲ್ಲವೆಂದು ಹೇಗೆ ಹೇಳುವುದು? ಅಂದರೆ ಭೂಮಿ ನಮ್ಮ ಮನೆ ಇಲ್ಲಿರುವವರೆಲ್ಲಾ ನಮ್ಮವರು ಎಂದಾಯ್ತಲ್ಲವೇ? ಇಲ್ಲಿರುವವರೆಲ್ಲಾ ಕಾಲನ ಪರೀಕ್ಷೆಯಲ್ಲಿ ಪಾಸಾಗಿ ಉಳಿದವರೇ ಹೌದಾದರೆ ಅವರಿಗೂ ನಮಗಿಂತ ಹೆಚ್ಚಿನ ಪ್ರಾಶಸ್ತ್ಯ, ಗೌರವ ಸಿಗುತ್ತಿಲ್ಲವೇಕೆ?

ಈ ಭೂಮಿಯ ಮುಖ್ಯ ಉಪ ವ್ಯವಸ್ಥೆಗಳಾದ ಶಿಲಾಗೋಳ, ವಾಯುಗೋಳ, ಜಲಗೋಳಗಳ ಅಂಶಗಳ ವಿವಿಧ ಪ್ರಮಾಣದ ಸಂಯೋಜನೆಯು ಜೀವಗೋಳದ ಸೃಷ್ಟಿಗೆ ನಾಂದಿ ಹಾಡಿದ್ದು ಹಾಗೂ ಈ ಜೀವಗೋಳದ ಸೃಷ್ಟಿ ವಿಘಟನೆಯಾಗಿ ಮತ್ತೆ ಆ ಮೂರು ಗೋಳಗಳಿಗೆ ಹಂಚಿ ಹೋಗುವುದು ಚಕ್ರೀಯಗತಿಯಾಗಿ ಪರಿವರ್ತನೆ ಹೊಂದಿ ಒಂದು ಸಮತೋಲನಕ್ಕೆ ಕಾರಣವಾಗಿದೆ. ಇಂದು ಏನೆಲ್ಲಾ ಭೂಮಿಯಲ್ಲಿ ಇದೆಯೋ ಅದು ಭೂಮಿ ಉಂಟಾದಾಗಿನಿಂದಲೂ ಇದೆ ಎಂದರೆ ಆಶ್ಚರ್ಯವಾಗುತ್ತದೆ, ಆದರೆ ಇದು ಸತ್ಯ. ಇದುವರೆವಿಗೆ ಭೂಮಿಗೆ ಹೊರಗಿನಿಂದ ( ಸೂರ್ಯನ ಬೆಳಕು ಮತ್ತು ಶಾಖ ಹೊರತುಪಡಿಸಿ)  ಒಂದಂಶವೂ ಬಂದದ್ದಿಲ್ಲ ಹಾಗೂ ಹೊರಗೆ (ರಾಕೆಟ್ ಉಪಗ್ರಹಗಳನ್ನು ಹೊರತುಪಡಿಸಿ) ಹೋದದ್ದಿಲ್ಲಾ. ಅಂದರೆ ನಾವೆಲ್ಲಾ ಒಂದು ಬೃಹತ್ ಕಚ್ಚಾ ಸಾಮಾಗ್ರಿ ತುಂಬಿದ ಸಂಪನ್ಮೂಲದ ಖಜಾನೆಯನ್ನು ಬಳಸಿ ಬರಿದು ಮಾಡುತ್ತಾ ನಾವೇ ಕಚ್ಚಾ ಸಾಮಾಗ್ರಿಯಾಗಿ ಪರಿರ‍್ತನೆಯಾಗಿ ತುಂಬಿಸುತ್ತಾ ಇರುತ್ತೇವೆ ಎಂದು ಭಾವಿಸುವುದಾದರೆ, ಯಾವ ಯಾವ ಸಂಪನ್ಮೂಲ ಎಷ್ಟಿದೆ? ಅದರ ಅತಿ ಬಳಕೆಯಿಂದ ಯಾರಿಗಾದರೂ ಅನ್ಯಾಯವಾಗಿದೆಯೇ? ಮುಂದೆ ಅನ್ಯಾಯವಾಗಬಹುದೇ? ಎಂದು ಭಾವಿಸದಿದ್ದಲ್ಲಿ ಮುಂದೆ ಆ ಸಂಪನ್ಮೂಲದ ಕೊರತೆ ನಮ್ಮ ಗಣನೆಗೂ ನಿಲುಕದ ಯಾವುದೋ ಒಂದು ಜೀವಿಯ ಅವಸಾನಕ್ಕೂ  ಕಾರಣವಾಗಬಹುದು ಎಂಬ ಭಾವನೆಯೇ ಸಹಬಾಳ್ವೆಯ ಮಂತ್ರ. 

ಮಾನವ ವಿಕಾಸದ ಹಾದಿಯಲ್ಲಿ ಈಗಷ್ಟೇ ವಿಕಸಿಸಿದ ಜೀವಿ ಅಂದರೆ ಈಗಾಗಲೇ ವಿಕಸಿಸಿರುವವರಿಗಿಂತ ಕಿರಿಯ ಎಂದು ಭಾವಿಸಿದರೂ,  ತನ್ನ ಬುದ್ಧಿಮತ್ತೆಯಿಂದ ಇದು ಇಡೀ ಗ್ರಹವನ್ನು, ಜೀವ ಜಗತ್ತನ್ನು ಅಕ್ಷರಶಃ ನಿಯಂತ್ರಿಸುತ್ತಿದ್ದಾನೆ ಎನಿಸುವ ಮಟ್ಟಿಗೆ ತನ್ನ ಕದಂಬ ಬಾಹುಗಳನ್ನು ಎಲ್ಲ ಜೀವಿ ವ್ಯವಸ್ಥೆಯ ಮೇಲೆ ಚಾಚತೊಡಗಿದ್ದಾನೆ. ಇದನ್ನು ಅಭಿವೃದ್ಧಿ ಎನ್ನಿ, ವಿನಾಶ ಎನ್ನಿ, ಬದುಕಲು ಸಹಜ ಕ್ರಿಯೆ ಎನ್ನಿ, ಆದರೆ ಇದೆಲ್ಲವೂ ಆಗುತ್ತಿರುವುದಂತೂ ಸತ್ಯ. ಕೆಲವರು ವೇಗವಾಗಿ, ಮತ್ತೆ ಕೆಲವರು ನಿಧಾನವಾಗಿ, ಮತ್ತೆ ಹಲವರು  ಮೌನವಾಗಿ ಕೈಜೋಡಿಸಿದ್ದೇವೆ ಅಷ್ಟೇ….! ಒಂದೆಡೆ ಅರಿತೋ ಅರಿಯದೆಯೋ ಭೂಮಿಗೆ ಕಂಟಕವಾಗುತ್ತಾ, ಮತ್ತೊಂದೆಡೆ ಅದೇ ಭೂಮಿಯನ್ನು ಉಳಿಸಿ ಎನ್ನುವ ಎರಡೂ ಪಾತ್ರಗಳೂ ನಾವೇ ಆಗುವುದು ಎಂತಹ ಸಂದಿಗ್ಧ ಪರಿಸ್ಥಿತಿ ಅಲ್ಲವೇ? ಈ ದ್ವಂದಗಳಿಂದ ಹೊರಬರದೆ ಯಾವುದೇ ದಿನಾಚರಣೆಯನ್ನು ಹೇಗೆಲ್ಲಾ ಆಚರಿಸಿದರೂ ಪಾಪಪ್ರಜ್ಞೆ ಕಾಡಬೇಕಿತ್ತಲ್ಲವೆ? ನಮಗೆ ದ್ವಂದ್ವಗಳಿಲ್ಲವೋ ಅಥವಾ ಕಾಲದ ಪ್ರವಾಹದಲ್ಲಿ ಯೋಚಿಸುವುದನ್ನೇ ಮರೆತಿದ್ದೇವೋ ಕಾಣೆ!
ಭೂಮಿ  ಕಲ್ಲು ಮಣ್ಣು ನೀರು ಅನಿಲಗಳ ಬೃಹತ್ ಸಂಗ್ರಹವೇ? ಒಡಲಲ್ಲಿ ಅಮೂಲ್ಯ ರತ್ನಗಳನ್ನುಳ್ಳ ರತ್ನಗರ್ಭಾ ವಸುಂಧರೆಯೇ? ನಮ್ಮ ಪೊರೆವ ತಾಯಿಯೇ? ಎಲ್ಲವೂ ಸತ್ಯ, ಆದರೆ ಅವರವರ ಭಾವಕ್ಕೆ ಎನ್ನುವ ಸಾಲಿನೊಂದಿಗೆ ಕೊನೆಯಾಗುತ್ತದೆ. ನಾವು ಈ ಭೂಮಿ ಬದುಕಿದೆ, ಉಸಿರಾಡುತ್ತಿದೆ ಎಂದೇ ಕಲಿತಿದ್ದೆವು ಎಂದು ಭಾವಿಸೋಣ, ನೀರು ಆಕಾಶ ಮಣ್ಣು ಎಲ್ಲವನ್ನೂ ಅಗೋಚರ ಶಕ್ತಿಯ ವರ ಎಂದು ಪೂಜಿಸುತ್ತಿದ್ದೆವೆಂದು ಕಲ್ಪಿಸಿಕೊಳ್ಳೋಣ, ಇದರಿಂದಾಗುತ್ತಿದ್ದ ನಷ್ಟವೇನು? ಕಳೆ ನಾಶಕವು ಒಳ್ಳೆ ಸಸ್ಯವನ್ನು ನಾಶಮಾಡಿದಂತೆ, ಅಜ್ಞಾನವನ್ನು ಹೊಡೆದೋಡಿಸಬೇಕಿದ್ದ ಜ್ಞಾನ ಅವಶ್ಯಕವಿದ್ದ ಜ್ಞಾನವನ್ನೂ ಹೊಸಕಿಹಾಕಿತೇ? ಭೂಮಿ ಒಂದು ಆಕಾಶಕಾಯ, ಅದರ ಬಗ್ಗೆ ಅವಶ್ಯಕತೆಗಿಂತ ಹೆಚ್ಚಿನ ಭಾವನಾತ್ಮಕತೆ ಬೇಡ ಎನ್ನುವ ವಾದ ಸಹ ಮೇಲೇಳುತ್ತದೆ. ನಮಗೆ ಈ ಭೂಮಿಯೇ ಅರ್ಥವಾಗದಿದ್ದರೆ, ಅದರೊಂದಿಗಿನ ಸಂಬಂಧವೇ ಸ್ಪಷ್ಟವಾಗದಿದ್ದರೆ,  ‘ಭೂದಿನ’ ವನ್ನು ಯಾರಿಗಾಗಿ ಏತಕ್ಕಾಗಿ ಆಚರಿಸುವುದು? ಬಹುಶಃ ಸೆಕೆಂಡ್ ಗೆ  ಸುಮಾರು ೩೦ ಕಿಲೋಮೀಟರ್ ವೇಗವಾಗಿ ತಿರುಗುತ್ತಿರುವ ಈ ಭೂಮಿಯ ಚಲನೆ ಹೇಗೆ ನಮ್ಮ ಅರಿವಿಗೆ ಬರುತ್ತಿಲ್ಲವೋ ಹಾಗೆ ಈ ಭೂಮಿ ಅಡಗಿಸಿಟ್ಟ ರಹಸ್ಯಗಳು ಕಗ್ಗಂಟಾದ ಅಮರ‍್ತ ಪರಿಕಲ್ಪನೆಗಳಾಗಿ  ಉಳಿದುಬಿಡುತ್ತಿವೆ. ‘ನಮ್ಮಮನೆ’ಯನ್ನು ಅರಿಯುವ ಈ ಪ್ರಯತ್ನದಲ್ಲಿ ವಸ್ತುನಿಷ್ಠ ಸಂಶೋಧನೆ ಹಾಗೂ ಭಾವನೆ ಎರಡೂ ಮೇಳೈಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಬುದ್ದಿ ಅಹಂಕಾರವನ್ನು ಪ್ರಚೋದಿಸಿದ್ದರ ಫಲವೇ ಮಾನವ ಇಂದು ‘ಜೀವಜಗತ್ತು ನನ್ನ ಅಡಿಯಾಳು’ ಎಂಬಂತೆ ವರ್ತಿಸಲು ಕಾರಣ. ತಾತ್ವಿಕವಾಗಿ ಹೇಳುವುದಾದರೆ, ಜಿರಲೆ ನಮಗಿಂತ ಕೋಟ್ಯಾಂತರ ವರ್ಷಗಳಿಗೆ ಹಿರಿಯ! ಆ ಹಕ್ಕು ಸ್ಥಾನಮಾನ ನಾವು ಕಸಿದಿದ್ದೇಕೆ? ಪರಿಸರ ಮತ್ತು ಮಾನವನ ನಡುವೆ ಭಾವನಾತ್ಮಕ ಸಂಬಂಧ ಬೆಳೆಯದ ಹೊರತು ಯಾವ ದಿನಾಚರಣೆಗಳೂ ಏನೂ ಪ್ರಭಾವ ಬೀರಲಾರವು. 

ಮಾನವ ಪರಿಸರದ ಶಿಶು ಮತ್ತು ಪರಿಸರದ ಅಂಶಗಳ ಮಹತ್ವ ನಮ್ಮ ಪೂರ್ವಜರಿಗೆ ಅರಿವಾಗಿತ್ತು. ಆ ಕೆಲವು ಸತ್ಯಗಳು ಪೀಳಿಗೆಯಿಂದ ಪೀಳಿಗೆಗೆ ದಾಟುವಾಗ ಮರೆಯಾದವೆನಿಸುತ್ತಿದೆ. ಹಾಗಾಗಿ ನಮ್ಮ ಆಚರಣೆಗಳೂ ಯಾಂತ್ರಿಕ ಮತ್ತು ಭಾವರಾಹಿತ್ಯವಾಗಿವೆ.  ‘ಭೂಮಿ’ ಈ ಪದ  ಯಾವಾಗ ನಮ್ಮ ಕಿವಿಗೆ ಬಿತ್ತು ಜ್ಞಾಪಿಸಿಕೊಳ್ಳಿ ಮತ್ತು ನಿತ್ಯ ಈಪದವನ್ನು ಎಷ್ಟು ಬಾರಿ ಉಚ್ಚರಿಸುವೆವು ಎಂದು ಯೋಚಿಸಿ. ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ……ಎಳ್ಳು ಜೀರಿಗೆ ನೀಡುವ ಭೂತಾಯ ಎದ್ದೊಂದು ಗಳಿಗೆ ನೆನೆದೇನು……. ನೆನೆಯುತ್ತಿರುವೆವಾ? ಅದೇ ನೆನಪಿಲ್ಲ. !!  ಜನಪದರ ಮಾತು ಬಿಡಿ, ವೇದಗಳ ಕಾಲದಿಂದಲೂ ‘ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ.. ವಿಷ್ಣುಪತ್ನಿ  ನಮಸ್ತುಭ್ಯಂ ಪಾದಸ್ರ‍್ಶಂ  ಕ್ಷಮಸ್ವಮೇ” ….ನಿನ್ನ ಮೇಲೆ ಅನಿವರ‍್ಯವಾಗಿ ಪಾದ ಊರಬೇಕಾಗಿದೆ ಕ್ಷಮಿಸು ಎಂದು ನಮಗೆ ನಾವೇ ಹೇಳಿಕೊಳ್ಳುತ್ತಿದ್ದೆವಲ್ಲಾ ಇಂದು ಅಂತಹವರ  ಸಂಖ್ಯೆ ಎಷ್ಟಿದೆ? ಇಷ್ಟೆಲ್ಲಾ ಅವಿಷ್ಕಾರ, ಆಧುನಿಕತೆ, ಶಿಕ್ಷಣದ ನಂತರವೂ ನಮ್ಮ ಭೂಮಿ ಬರೀ ನೆಲವಲ್ಲಾ ಇದು ಎನ್ನುವಾಗ ಅನಂತ ಅಂತರ್ಭಾವಗಳು ಸ್ಫುರಿಸುವಂತಹ ಶಿಕ್ಷಣ, ಅದರಿಂದುಂಟಾಗುವ ಆಚರಣೆಗಳು ಏಕೆ ಕಾಣದಾಗಿವೆ? ರಕ್ಷಿಸಬೇಕಾದ್ದು ಭೂಮಿಯನ್ನೋ ಅಥವಾ ಟೊಳ್ಳಾಗುತ್ತಿರುವ ನಮ್ಮ ಬೌದ್ಧಿಕ ದಿವಾಳಿತನವನ್ನೋ!

ಯಾರಿಗೆ ಬೇಕಿದೆ ಭೂಮಿ?  ಆಹಾರ ಬೆಳೆದು ತಿನ್ನುವವರಿಗಾ? ಉತ್ಪನ್ನಗಳನ್ನು ಬೆಳೆದು ಮಾರಿ ಜೀವಿಸುವವರಿಗಾ? ಭೂಮಿಯ ಗರ್ಭ ಬಗೆದು ನೀರು, ಮರಳು, ಕಲ್ಲು, ಕಲ್ಲಿದ್ದಲು, ಪೆಟ್ರೋಲ್, ಎಲ್ಲವನ್ನೂ ಖರೀದಿಗಿಟ್ಟಿರುವವರಿಗಾ? ತುಂಡು ಭೂಮಿಯನ್ನು ತುಂಡರಿಸಿ ಮಾರುವವರಿಗಾ? ಕೊಳ್ಳುವವರಿಗಾ? ಏನಾದರಗಾಲಿ ಮುಂದಿನ ಜನಾಂಗವನ್ನು ಎಚ್ಚರಿಸೋಣ ಎನ್ನುವ ಬೋಧಕರಿಗಾ? ಅಯ್ಯೋ ನಾವೇ ಮಾತನಾಡದಿದ್ದರೆ ಏನು ಅನಾಹುತವಾಗಿಬಿಡುವುದೋ ಎಂದು ಹಲವಾರು ಚಳುವಳಿ ಮಾಡುವ, ಹೋರಾಟ ಮಾಡಿಯಾದರೂ ಉಳಿಸುವೆವು ಎನ್ನುವ ಪರಿಸರವಾದಿಗಳಿಗಾ? ಆದರೆ ಮಾನವನಲ್ಲದೆ, ಕೋಟ್ಯಾಂತರ ಜೀವಿಗಳಿಗೆ ಕೋಟ್ಯಾಂತರ ವರ್ಷಗಳಿಂದ ಆಹಾರ, ನೆಲೆ, ನೆರಳು ನೀಡಿ ಸಲಹುವ ಭೂಮಿಯನ್ನು ಯಕಃಶ್ಚಿತ್ ಮಾನವರಾದ ನಾವು ಹೇಗೆ ತಾನೇ ‘ರಕ್ಷಿಸುವೆವು’ ಎಂದು ಹೇಳಲು ಸಾಧ್ಯ ಎಂಬುದೇ ಕೆಲವೊಮ್ಮೆ ಪ್ರಶ್ನೆಯಾಗುತ್ತದೆ. ಅಗಾಧ ಸಾರ‍್ಥ್ಯದ ಭೂಮಿಯನ್ನು ನಿರ‍್ಗದತ್ತ ವಸ್ತುಗಳಿಂದ ಅಂದರೆ ರಾಸಾಯನಿಕ, ಯಂತ್ರಗಳ ಸಹಾಯವಿಲ್ಲದೆ ಸೋಲಿಸಲಾಗದು ಎನ್ನುವುದು ಮತ್ತು ಭೂಮಿ ರೌದ್ರಾವತಾರ ತಾಳಿದರೆ ಅಂದರೆ ಭೂಕಂಪ, ಅಗ್ನಿ ಪರ್ವತ ಸ್ಫೋಟ ಸುನಾಮಿಗಳಾದರೆ ನಾವ್ಯಾರೂ ಉಳಿಯೆವು ಎಂಬ ಎರಡೂ ಸತ್ಯ ಮಾನವನಿಗೆ ಅರ್ಥವಾಗದ್ದೇನಲ್ಲಾ.  ಕಟ್ಟುವ ಕೆಡವುವ ನಿಸರ್ಗದ ಕೆಲಸವನ್ನು ಮಾನವನೇ ಮಾಡಹೊರಟಿದ್ದೇ ಎಲ್ಲ ವಿಪರ್ಯಾಸಗಳಿಗೆ ಮೂಲ.

ಮಾನವ ಮತ್ತು ಭೂಮಿಯ ಸಂಘರ್ಷ ಒಂದು ವಿಧದಲ್ಲಿ ಮಾನಸಿಕ ಸಮರವೇ ಸರಿ. ಆರಂಭದ ದಿನಗಳ ಮಾನವ ಮತ್ತು ಈಗಿನ ದಿನದ ಮಾನವನ ಬುದ್ಧಿ ಹಾಗೂ ಮನಸ್ಸಿನ ವಿಕಾಸ ಇಡೀ ಜೀವವಿಕಾಸದ ತೊಟ್ಟಿಲನ್ನು ಮಸಣವಾಗಿಸುತ್ತದೆ ಎಂದರೆ ಬದಲಾಗಬೇಕಾದ್ದು ಏನು ಎಂಬುದು ನಮಗರ್ಥವಾಗದ ಸಂಗತಿಯೇನಲ್ಲಾ. ಈ ಮಾನವನ ಮನಸ್ಸನ್ನು ಬದಲಿಸಿದ್ದು ಏನು? ಬಹುಶಃ ಶಿಕ್ಷಣವೇ ಅಲ್ಲವೇ? ಶಿಕ್ಷಣ ಎಂದಾಕ್ಷಣ ಶಾಲಾಶಿಕ್ಷಣ ಎಂದೇ ಆಗಬೇಕಾಗಿಲ್ಲ ಎಲ್ಲರಿಂದ ಕಲಿತದ್ದು ಎಲ್ಲರನ್ನೂ ಸೋಲಿಸಿ ಬದುಕಲು ಕಲಿತಿದ್ದು ಆಗಿರಬಹುದು. ಈ ಕಲಿಕೆಯನ್ನು ಹಿಮ್ಮುಖವಾಗಿಸಲು ಅಂದರೆ ಕಲಿತಿದ್ದನ್ನು ಮರೆಸಲು, ಮುಂದುವರೆಸದಂತೆ ತಡೆಯಲು ಶಾಲೆಗಳಲ್ಲಿ ಪರಿಸರ ಶಿಕ್ಷಣ ಮಾಡಿದರೆ ಸಾಕೆ? ನಮ್ಮ ಪಠ್ಯವನ್ನು ಪರಿಸರ ಅಧ್ಯಯನ ಎಂದು ಬದಲಿಸಿದರೆ ಸಾಕೇ? ಕ್ಯಾನ್ಸರ್ ಗೆ ಬರಿ ಮುಲಾಮು ಮದ್ದಾಗುವುದೇ? ಹಾಗಿದ್ದಲ್ಲಿ ಏನಾದರೂ ಬದಲಾಗಬೇಕಿತ್ತಲ್ಲವೇ? ಆದರೂ ಭೂಮಿ ಜಡವಸ್ತು ಎಂಬ ಭಾವ ಜಡ್ಡು ಹಿಡಿದ ಮನಸ್ಸಿನಿಂದ ಹೊರಹಾಕಲಾಗುತ್ತಿಲ್ಲ. ಆ ಮನಸ್ಥಿತಿಯನ್ನು ಬದಲಿಸದೆ, ಭೂಮಿಯ ಸ್ಥಿತಿಯನ್ನು ಬದಲಿಸಲಾಗದು.

ನಿರಾಸೆಯ ಕರ‍್ಮೋಡಗಳ ನಡುವೆ ಭರವಸೆಯ ಮಿಂಚಿನಂತೆ ‘ಇರಲಿ ಪ್ರಯತ್ನಿಸೋಣ’ ಎಂದು ಭಾವಿಸುವುದಾದರೆ ಅರಿವು - ಅನುಷ್ಠಾನವಾಗುತ್ತಿಲ್ಲ ಎಂಬ ಸರಳ ಸತ್ಯ ಗೋಚರವಾಗುತ್ತದೆ. ಎಲ್ಲರಿಗೂ ಅರಿವಿಲ್ಲವೆಂದಲ್ಲಾ. ಭೂಮಿಯ ನಾಶಕ್ಕೆ ಕಾರಣವಾಗುತ್ತಿರುವ ಬಹುತೇಕ ಕೆಲಸ ನೆಡೆಯುತ್ತಿರುವುದು ಶಿಕ್ಷಿತ ಮನಸ್ಸುಗಳಿಂದಲೇ ತಾನೇ? ಸುಶಿಕ್ಷಿತರ ಈ ‘ಶಿಕ್ಷೆ’ಯಿಂದ ಭೂಮಿಯನ್ನು ಬಿಡುಗಡೆ ಮಾಡಲು ಶಿಕ್ಷಕರಿಗೆ ಹೊಸ ಪರಿಣಾಮಕಾರಿ ಶಿಕ್ಷಣ ನೀಡುವ ಸವಾಲು ಎಲ್ಲರ ಮುಂದಿದೆ. ಹಾಗಾದಲ್ಲಿ ಕಳೆದ ೫೦ ವರ್ಷಗಳಿಂದ ಈ ರೀತಿಯ ಪ್ರಯತ್ನಗಳಿಗೆ, ಆಚರಣೆಗಳಿಗೆ ಯಾವ ರೀತಿಯ ಸ್ಪಂದನೆ ಸಿಕ್ಕಿದೆ ಹಾಗೂ ಇಂತಹ ಚಿಂತನೆಗಳನ್ನು ವೇಗೋ ವೇಗೋತ್ಕರ್ಷಗೊಳಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮನ್ನು ಅಂದರೆ ‘ಸುಶಿಕ್ಷಿತರೆಂದು ಭಾವಿಸುವವರನ್ನು’ ಕಾಡಬೇಕು. ಈ ಪ್ರಶ್ನೆಗಳೇ ಮುಂದೆ ಜಾಗತಿಕ ಅಭಿಯಾನಗಳಾಗಿ ರೂಪುಗೊಳ್ಳುವುದು.

ಭೂಮಿಯನ್ನು ರಕ್ಷಿಸುವ ಮಾತು ಬಿಡಿ… ನಮ್ಮ ಮನೆ, ವಠಾರ, ಬೀದಿ, ಊರು ಇದನ್ನಾದರೂ ಪರಿಸರ ಸ್ನೇಹಿಯಾಗಿಸುವಲ್ಲಿ ಏನು ಮಾಡುತ್ತಿದ್ದೇವೆ? ಎಲ್ಲರೂ ಹಾಲು ಹಾಕಿದಾಗ ನನ್ನ ನೀರು ಯಾರಿಗೂ ಕಾಣದು ಎಂದು ನೀರು ತಂದು ಸರದಿಯಲ್ಲಿ ನಿಂತಿದ್ದೇವೆ ಅನಿಸುವುದಿಲ್ಲವೇ? ನಮ್ಮ ಪಾತ್ರೆಯಲ್ಲಿ ಹಾಲಿನ ಬದಲು ನೀರು ತುಂಬಿಸುವ ಮನಸ್ಸು ನಮಗೆ ಬಂದದ್ದಾದರೂ ಹೇಗೆ? ಯಾರಿಗಾಗಿ ರಾಜಿಯಾಗುತ್ತಿದ್ದೇವೆ? ಈ ರಾಜಿಯಾಗುವಿಕೆಯ ಸುಖ ರಾಜಿಯಾಗದಿರುವಿಕೆಯ ಕಷ್ಟವನ್ನು ಮರೆಸುತ್ತದೆ ಎಂದಲ್ಲವೇ? ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿ ಎಂದರೆ, ಅಗತ್ಯವನ್ನೇ ಹಿಗ್ಗಲಿಸುವ ನಾವು ಬಕಾಸುರನ ಸಂತಾನದಂತೆ ವರ್ತಿಸಿದರೆ, ನಮ್ಮ ಹೊಟ್ಟೆತುಂಬಿಸಲು ಸಂಪನ್ಮೂಲಗಳನ್ನು ಎಲ್ಲಿಂದ ತರಬೇಕು? ಯಾರಿಗೋ ಮೀಸಲಿಟ್ಟ ಪಾಲನ್ನು ನಾವು ತಿಂದರೆ ಅವರು ಬದುಕುವುದೆಂತು? ನಾವು ಬಳಸಿ ಉಳಿದಿದ್ದೆಲ್ಲಾ ವ್ಯರ್ಥ ಎಂದು  ಇಡೀ ಭೂಮಿಯ ಮೇಲೆ ಹರಡಿದರೆ ಭೂಮಿ ಕಸದಬುಟ್ಟಿಯಾದೀತೆಂಬ ಅರಿವಾಗಲೀ, ಅದು ಪಕ್ಕದ ಜೀವಿಗೆ ಹಾನಿಯುಂಟುಮಾಡಬಹುದೆಂಬ ಸಾಮಾನ್ಯ ಸಾಮಾಜಿಕ ಪ್ರಜ್ಞೆ ನಮಗಿಲ್ಲವೆಂದರೆ ಇದು ಯಾರ ತಪ್ಪು? ಕಲಿಸಿದವರದಾ? ಕಲಿಯಲಾರೆ ನಾನು ಇರುವುದೇ ಹೀಗೆ ಎಂದು ಹಠ ಹಿಡಿದವರದಾ? ಒಲಿಸುವ ಕಲಿಸುವ ಪ್ರಕ್ರಿಯೆಗೆ ಯಾರಿಗೆ ತಾಳ್ಮೆ ಇದೆ? ಆದರೂ ಪ್ರಯತ್ನ ಮುಂದುವರೆಸುವಾ.

ಡಿವಿಜಿಯವರು ಕಗ್ಗದಲ್ಲಿ “ವಸ್ತುಸಾಕ್ಷಾತ್ಕಾರ ಅಂತರೀಕ್ಷಣೆಯಿಂದ ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ” ಎಂದಿದ್ದಾರೆ. ಪರಿಸರ ಕುರಿತ ಅರಿವು ಜ್ಞಾನ ನಮ್ಮನ್ನು ಅಂತರೀಕ್ಷಣೆಗೆ ದೂಡಿ ನಮ್ಮ ಅಷ್ಟಿಷ್ಟು ಆಚರಣೆಗಳನ್ನು ಬದಲಿಸಲಿಲ್ಲವೆಂದರೆ ಅದು ಆ ಜ್ಞಾನಕ್ಕೆ ಮಾಡಿದ ಅವಮಾನವಲ್ಲವೇ? ಒಂದಂತೂ ಸತ್ಯ, ಎಲ್ಲಿಯವರೆಗೆ ಈ ‘ಭೂಮಿ’ ಎನ್ನುವ ಶಬ್ಧ ನಮ್ಮ ಅಂತರಂಗದಲ್ಲಿ ಮಮತೆಯನ್ನು ಉದ್ದೀಪಿಸುವುದಿಲ್ಲವೋ, ಈ ಭೂಮಿಯ ನಾಡಿಮಿಡಿತವನ್ನು ನಮ್ಮ ಕಿವಿ ಕೆಳದಂತಾಗುವುದಿಲ್ಲವೋ, ಅರಳಿದ ಹೂವನ್ನು ಆಘ್ರಾಣಿಸಲು ಸಮಯವಿಲ್ಲದೆ ಓಡುವ ಧಾವಂತದಲ್ಲಿರುವೆವೋ ಅಲ್ಲಿಯವರೆಗೆ ಈ ಆಚರಣೆಗಳು ಅರ್ಥಹೀನ.  ಆದರೆ ಈ ದಿನಾಚರಣೆಗಳು ನಾವು ನಡೆಯುವ ಹಾದಿ ಸರಿಇದೆಯೇ? ಸರಿಪಡಿಸಬೇಕೇ? ಎಂದು ಆಗ್ಗಾಗ್ಗೆ ಪ್ರಶ್ನಿಸಿ ನಮ್ಮನ್ನು ಜಾಗೃತಗೊಳಿಸುವ ಮತ್ತು ಸ್ವಾವಲೋಕನಕ್ಕೆ ದೂಡುವ ದಿನಗಳಂತೂ ಹೌದು. ಹಾಗಾಗಿ ಮಕ್ಕಳಲ್ಲಾದರೂ ಈ ಸ್ವಾವಲೋಕನದ ಹವ್ಯಾಸ ಕ್ರಮೇಣ ಅಭ್ಯಾಸವಾಗಿ ಪರಿವರ್ತನೆಯಾಗಲಿ, ವರ್ತನೆಗಳನ್ನು ಬದಲಿಸಲಿ.

“ಭೂಮಿಗೆ ಮನುಷ್ಯ ಅನಿವಾರ್ಯವಲ್ಲ ಆದರೆ ಮನುಷ್ಯನಿಗೆ ಭೂಮಿ ಅನಿವಾರ್ಯ”. ಅದ್ಭುತಗಳ ಗಣಿಯಾದ ಭೂಮಿಯನ್ನು ರಕ್ಷಿಸುತ್ತೇವೆ ಎಂಬ ಹಮ್ಮಿನಿಂದ ಹೊರಬಂದು ನನ್ನ ಆಲೋಚನೆ ಆಚರಣೆಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡುವೆನು ಎಂಬ ವಿನೀತ ಮನಸ್ಥಿತಿಗೆ ಹೊರಳುವುದೇ ಸಧ್ಯ ಪಲ್ಲಟವಾಗಬೇಕಿರುವ ಭಾವ. ಬದುಕನಿತ್ತ ಭೂಮಿಗೆ ಕೃತಜ್ಙತೆಯನರ್ಪಿಸಿ, ಧನ್ಯತಾಭಾವದಿಂದ ಸರಳ ಜೀವನ ನೆಡೆಸುವ ಕಲೆ ಕಲಿಯಬೇಕಿದೆ, ಕಲಿಸಬೇಕಿದೆ, ಆಚರಿಸಬೇಕಿದೆ. ಬಹುಶಃ ಇಷ್ಟು ಮಾಡಲು ಒಂದು ಜೀವಮಾನವೂ ಕಡಿಮೆ ಸಮಯವೇ!.

‘ಸತತ ಕೃಷಿಯೋ ಪ್ರಕೃತಿ’ ಎಂದಂತೆ ನಾವೂ ಸಹ ಸತತ ಸ್ವಾವಲೋಕನದಿಂದ ಉತ್ತಮರಾಗಬಹುದಲ್ಲವೇ? ಮತ್ತೆ ಮತ್ತೆ ಕಾಡುವ ಪ್ರಶ್ನೆ “ಭೂಮಿ ಎಂದರೆ ಏನರ್ಥ …..ಅದು ಪ್ರತಿಜೀವಿಗೂ ಭೂಮಿಗೂ ಇರುವ ಸಂಬಂಧದ ಗೂಡಾರ್ಥ”

ನಮ್ಮ ಕೈಯಲ್ಲಿ  ಇಂದು ನಮ್ಮ ಭವಿಷ್ಯ ಮಾತ್ರವಲ್ಲಾ, ಜೊತೆಗೆ ನಮ್ಮೊಂದಿಗೆ ಈ ಭೂಮಿಯನ್ನು ಹಂಚಿಕೊಂಡಿರುವ ಉಳಿದೆಲ್ಲ ಜೀವಜಂತುಗಳ ಭವಿಷ್ಯವೂ ಅಡಗಿದೆ”

-      ಡೇವಿಡ್ ಅಟೆನ್ ಬರೋ

 



35 comments:

  1. ನಿಜವಾಗಿಯೂ ಸರ್ ಭೂಮಿ ತನ್ನಲ್ಲಿರುವ ಅನೇಕ ರಹಸ್ಯಗಳಲ್ಲಿ corona ದಂತಹ ರಹಸ್ಯ ಹೊರಹಾಕಿದೆ.. ಹೇಗೆ ಆದರೆ ಪರಿಸರದಲ್ಲಿನ ಒರತಿಯೊಂದು ಜೀವಿಗೂ ಜೀವಿಸುವ ಹಕ್ಕು ನಾವೇ ಕಸಿದುಕೊಂಡಂತಾಗುತ್ತದೆ.. (very informative article sir thank u vry much?

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.....ನಿಮ್ಮ ಪರಿಚಯವಾಗಲಿಲ್ಲಾ‌......

      Delete
  2. ಭೂಮಿಯ ಮೇಲೆ ಮಾತೃ ಪ್ರಜ್ಞೆ ಜಾಗೃತಗೊಳಿಸುವ ಲೇಖನ

    ReplyDelete
    Replies
    1. ಲೇಖನ ಇಷ್ಟ ಪಟ್ಟಿರಿ....ಧನ್ಯವಾದ....

      Delete
  3. ಸಕಾಲಿಕ ಮಾಹಿತಿಪೂರ್ಣ ಅತ್ಯುತ್ತಮ ಬರಹ..ಅರಿವಿನ ಅನುಷ್ಠಾನದ ಕೊರತೆ ಸತ್ಯವಾದ ಮಾತು.ವಿಪರೀತ ವಸ್ತು ವ್ಯಾಮೋಹದ,ಕೊಳ್ಳುಬಾಕ ಸಂಸ್ಕೃತಿಗೆ ಮಾರುಹೋಗಿ,ಭೂಮಿಯ ಎಲ್ಲಾ ಸಂಪನ್ಮೂಲಗಳ ಬರಿದಾಗಿಸಿ,ಮಾನವ ಮಾಡುತ್ತಿರುವ ಅನಾಹುತ ಗಳು ಭೂಮಿಯ ಸಕಲ ಚರಾಚರಗಳನ್ನು ದುರಂತದೆಡೆಗೆ ತಳ್ಳುತ್ತಿರುವುದು ಎಂದು ನಿಲ್ಲುವುದು?..ಸರಳ ಜೀವನದ ಮಹತ್ವ ಎಲ್ಲರೂ ಅರಿಯುವುದು ಎಂದು.?ಬರಹ ತುಂಬಾ ಚೆನ್ನಾಗಿದೆ...

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದ ಮೇಡಂ... ನಿಮ್ಮ ಮಾತು ಸತ್ಯ.... ಬದಲಾವಣೆ ನಮ್ಮ ಮನಸ್ಸಿನಲ್ಲಿ ಆಗದ ಹೊರತು ಹೊರಗೆ ಅದರ ಪರಿಣಾಮ ಇದೇ ರೀತಿ ಮುಂದುವರಿಯುತ್ತದೆ....
      ಭೂಮಿಯನ್ನು ಅರ್ಥಮಾಡಿಕೊಳ್ಳುವಲ್ಲಿಯೇ ಸೋತಿದ್ದೇವೆ ಎನ್ನುವುದೇ ನೋವಿನ ಸಂಗತಿ...

      Delete
  4. ಅತ್ಯುತ್ತಮ ಮೌಲಿಕ ಲೇಖನ ಸರ್‌. ಪ್ರತಿಯೊಬ್ಬರನ್ನು ಚಿಂತನೆಗೆ ಒರೆಹಚ್ಚುವ ಲೇಖನ.

    ReplyDelete
    Replies
    1. ಸಹವಾಸ ದೋಷ....ನಿಮ್ಮಂತಹವರ ಒತ್ತಾಸೆಯ ಪ್ರತಿಫಲ......

      Delete
  5. "ಅರಿವು - ಅನುಷ್ಠಾನವಾಗುತ್ತಿಲ್ಲ" ಹೌದು ಸರ್.
    ಓದುಗರನ್ನು ಸ್ವಾವಲೋಕನಕ್ಕೆ ಒಳಪಡಿಸುವ ಅತ್ಯುತ್ತಮ ಲೇಖನ.

    ReplyDelete
    Replies
    1. ಧನ್ಯವಾದ ರಾವ್ ರವರಿಗೆ....ನಿಜ ಸಾರ್ ಎಲ್ಲವನ್ನು ಅರಿತಿರುವೆವು ಎನ್ನುವ ಅಹಂ ನಲ್ಲೇ ನಮ್ಮೆಲ್ಲಾ ತೃಪ್ತಿ ಅಡಗಿದೆ...ಅನುಷ್ಠಾನ ಕಷ್ಟ ಹಾಗಾಗಿ ಅದು ಇಷ್ಟವಾಗುವುದಿಲ್ಲಾ.....

      Delete
  6. ಅತ್ಯುತ್ತಮ ಲೇಖನ.

    ReplyDelete
    Replies
    1. ನಿಮ್ಮಂತೆ ಜನರನ್ನು ಎಚ್ಚರಿಸುವಲ್ಲಿ ನಮ್ಮ ಅಳಿಲು ಸೇವೆ ಚಂದ್ರು.......

      Delete
  7. Replies
    1. ನಾವು ಬರೀತೀವಿ.... ನೀವು ಮಾಡಿ ತೋರಿಸುತ್ತೀರಿ....ನಿಮ್ಮ ಅನುಷ್ಠಾನ ಹಲವರಿಗೆ ಮಾದರಿ.......

      Delete
  8. ನಮ್ಮ ಮನೆಗೆ ಮಾತ್ರ ಸೀಮಿತ ಆಗುತ್ತಿರುವ ನಾವು ವಿಶಾಲ ದೃಷ್ಟಿ ಹೊಂದಬೇಕಿದೆ.... ನಮ್ಮ ಕುಟುಂಬ ಸುವಿಶಾಲ ಎಂದು ನಮ್ಮ ಸ್ಥಾನ ಮತ್ತು ಜವಾಬ್ದಾರಿ ತಿಳಿಸುವ ಉತ್ತಮ ಲೇಖನ...

    ReplyDelete
    Replies
    1. ಧನ್ಯವಾದಗಳು ಓಂಕಾರಪ್ಪನವರೇ....

      Delete
  9. ಭೂಮಿ ಎಂದರೆ ಮಮತೆಯ ಭಾವವನ್ನು ಉದ್ದೀಪಿಸುವ ಕಾರ್ಯ ಆಗಬೇಕು ಎಂದು ಹೇಳುವ ನಿಮ್ಮ ಈ ಲೇಖನ ಗಂಭೀರ ಚಿಂತನೆಗೆ ದೂಡಿತು. ಅಭಿನಂದನೆಗಳು. ಬರೆವಣಿಗೆ ಹೀಗೇ ಮುಂದುವರೆಯಲಿ ಎಂದು ಅಪೇಕ್ಷಿಸುತ್ತ, ಧನ್ಯವಾದಗಳು ನಿಮಗೆ.

    ReplyDelete
    Replies
    1. ಜನಾರ್ಧನ್....ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು.....

      Delete
  10. ಒಳ್ಳೆಯ ಲೇಖನ.

    ReplyDelete
  11. ಸರ್ ನಮಸ್ತೆ ತುಂಬಾ ಒಳ್ಳೆಯ ಲೇಖನ

    ReplyDelete
  12. ನಮ್ಮ ನೆಲೆಯ ಸಮಗ್ರ ಪರಿಚಯವಾಯಿತು ಗುರುಗಳೆ.

    ReplyDelete
    Replies
    1. ಧನ್ಯವಾದ ರವಿ ರವರೆ....

      Delete
  13. ಅರ್ಥಗರ್ಭಿತ ಲೇಖನ.👌👌👌

    ReplyDelete
  14. ಅದ್ಬುತವಾದ ಲೇಖನ ಸರ್. ಚೆನ್ನಾಗಿದೆ ಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಸವಿಜ್ಞಾನಕೈ ತುಂಬಾ ಉಪಯುಕ್ತ ಕೊಡುಗೆ ನೀಡಿದ್ದೀರಿ.. ಇದೆ ರೀತಿ ಕಾರ್ಯಗಳು ತಮ್ಮಿಂದ ಬರುತ್ತಾ ಇರಲಿ... ಹೃದಯಾಭಿನಂದನೆಯ ಧನ್ಯವಾದಗಳು ಸರ್..
    ಬಸವರಾಜ ಎಮ್ ಯರಗುಪ್ಪಿ(TPD trainees)
    ಬಿ ಆರ್ ಪಿ ಶಿರಹಟ್ಟಿ
    Mobile No 9742193758
    Email address is basu.ygp@gmail.com

    ReplyDelete
  15. ಶಿಕ್ಷಣ ಹೆಚ್ಚಾದಂತೆ ಮಾನವನಿಗೆ ದುರಾಸೆ ಹೆಚ್ಚಾಗಿದೆ, ಇದರಿಂದ ಅವನು ಪರಿಸರದ ಒಡನಾಟದಿಂದ ತುಂಬಾ ದೂರ ಉಳಿಯುತ್ತಿದ್ದಾನೆ, ಮಾನವನಿಗೆ ಪಾಠ ಕಲಿಸುವುದು ಅಷ್ಟು ಸುಲಭದ ಮಾತಲ್ಲ ಪ್ರಕೃತಿಯೇ ಮನಸು ಮಾಡಬೇಕಿದೆ

    ReplyDelete
  16. ಉತ್ತಮ ವಿಚಾರ ಸರ್, ಧನ್ಯವಾದಗಳು.

    ReplyDelete
  17. ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಹೇಗಿತ್ತು,ಹೇಗಿರಬೇಕು ಎಂಬುದನ್ನು ನಿಮ್ಮದೇ ಬರವಣಿಗೆ ಶೈಲಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿರುವ ನಿಮಗೆ ನನ್ನ ಧನ್ಯವಾದಗಳು ...

    ReplyDelete