Monday, September 4, 2023

ತಿಂಗಳನ ಮೇಲಿನ ವಿಕ್ರಮದ ಹಿಂದಿನ ವಿರಾಟ ಶಕ್ತಿ

ತಿಂಗಳನ ಮೇಲಿನ ವಿಕ್ರಮದ ಹಿಂದಿನ ವಿರಾಟ ಶಕ್ತಿ


                                            ಲೇಖಕರು: ರಾಮಚಂದ್ರ ಭಟ್‌ ಬಿ. ಜಿ

ಇತ್ತೀಚೆಗಷ್ಟೇ ಚಂದ್ರಯಾನ-೩ರಲ್ಲಿ ಯಶಸ್ಸು ಕಂಡು ಚಂದ್ರನ ದಕ್ಷಿಣ ಧ್ರುವದ ಮೇಲೆ   ಹೆಜ್ಜೆಯೂರಿದ  ಪ್ರಥಮ ದೇಶ ಎಂಬ ಹೆಗ್ಗಳಿಕೆ ಕಾರಣವಾದ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಸ್ಥಾಪನೆಗೆ‌ ನಾಂದಿ ಹಾಡಿದ ವಿಕ್ರಮ್‌ ಸಾರಾಭಾಯ್‌ ಅವರ ಕೊಡುಗೆಯನ್ನು ಸ್ಮರಿಸುವ ಲೇಖನ

  ಅಂದು ಅಮೃತ ಮಹೋತ್ಸವದ ಅಮೃತ ಘಳಿಗೆ. ವಿಶ್ವದಾದ್ಯಂತ ಕುತೂಹಲ ಕ್ಷಣಕ್ಷಣಕ್ಕೂ ಏರುತ್ತಿತ್ತು. ಭರತ ಭೂಮಿಯಲ್ಲಂತೂ ಕೂತೂಹಲಕ್ಕಿಂತಲೂ ಭಯ, ಆತಂಕವೇ ಹೆಚ್ಚು. ಅದೆಷ್ಟು ಹೃದಯಗಳು ಹೋಮ, ಹವನ ಪ್ರಾರ್ಥನೆಗಳಲ್ಲಿ ತೊಡಗಿದ್ದರೋ? ಆತಂಕದ ನಡುವೆ ಕಣ್ಣುಗಳು ನೇರಪ್ರಸಾರದ ವಿವಿಧ ಸ್ಕ್ರೀನ್‌ಗಳಿಗಂಟಿದ್ದವು. ಪ್ರಾರ್ಥನೆ ಕೊನೆಗೂ ಫಲಿಸಿತು. ಸೋಮನಾಥರ ಕಂಚಿನ ಕಂಠ ಎಲ್ಲರನ್ನೂ ಸಂತೋಷ ಸಾಗರದಲ್ಲೇ ತೇಲಿಸಿಬಿಟ್ಟಿತು. ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಭಾರತ ಬಾಹ್ಯಾಕಾಶದಲ್ಲಿ ಹೊಸ ಇತಿಹಾಸವನ್ನು ಬರೆದಾಗಿತ್ತು. ದೂರದ ಆಫ್ರಿಕಾದಲ್ಲಿದ್ದರೂ ಪ್ರಧಾನಿಯವರ ಕಣ್ಣುಗಳು ಚಂದ್ರಯಾನ-೩ರ ಯಶಸ್ಸನ್ನು ಎದುರು ನೋಡುತ್ತಿತ್ತು.ಮೋದಿಯವರು ದೂರದ ಬ್ರಿಕ್ಸ್‌ ಸಮ್ಮೇಳನದ ನಡುವೆ ಬಿಡುವು ಮಾಡಿ ನಮ್ಮ ಹೆಮ್ಮೆಯ ಇಸ್ರೋಗೆ ವಿಜಯದ ನಗೆಯೊಂದಿಗೆ ಧನ್ಯವಾದ ಅರ್ಪಿಸಿದರು.

                        

ಕನಸು ಕಾಣಲೂ ಸಾಧ್ಯವಿಲ್ಲದ ಆ ದಿನಗಳಂದು ಇಂತಹ ಸಾಧನೆಯ ಕಸುವು ಮನದಲ್ಲಿ ತುಂಬಿಕೊಂಡು ಹೊಸ ಸಾಧನೆಗೆ ಸಾಧನೆಗೆ ಶ್ರೀಕಾರವಿಟ್ಟ ಆ ದ್ರಷ್ಟಾರರನ್ನು ನಾವು ಮರೆಯಲಾದೀತೆ ? ಚಿನ್ನದ ಚಮಚವನ್ನು ಬಾಯಿಯಲ್ಲಿಟ್ಟುಕೊಂಡೇ ಹುಟ್ಟಿದ ಇವರು ಮನಸ್ಸು ಮಾಡಿದರೆ ಚಿನ್ನದರಮನೆಯಲ್ಲೇ ವಿಲಾಸೀ ಜೀವನವನ್ನು ಕಳೆಯಬಹುದಾಗಿತ್ತು. ಮನೆಗೆ ಬರುತ್ತಿದ್ದ ಕೇಂದ್ರ ಸರ್ಕಾರದ ಮಂತ್ರಿಗಳು, ರಾಷ್ಟ್ರೀಯ ನಾಯಕರೊಂದಿಗಿನ ಕೌಟುಂಬಿಕ ಸ್ನೇಹವನ್ನು ಬಳಸಿ ರಾಜಕೀಯ ಕ್ಷೇತ್ರದಲ್ಲಿ ತ್ರಿವಿಕ್ರಮನಾಗಿ ಬೆಳೆಯಬಹುದಿತ್ತು. ಆದರೆ ಆತ ಇದಕ್ಕೆ ಮನಸ್ಸು ಮಾಡದೇ ವಿಜ್ಞಾನ ಕ್ಷೇತ್ರವನ್ನು ಆರಿಸಿಕೊಂಡು ʼಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹʼ ಎನಿಸಿಕೊಂಡದ್ದು ನಮ್ಮ ದೇಶದ ಅದೃಷ್ಟವೇ ಸರಿ. ಬಹುಷಃ ಈಗ ನಿಮಗೆ ನಾನ್ಯಾರ ಕಥೆ ಹೇಳ ಹೊರಟಿದ್ದೇನೆಂಬುದರ ಸುಳಿವು ಸಿಕ್ಕಿರಬೇಕು. ಇಸ್ರೋದ ಮಹತ್ಸಾಧನೆಯ ಹಿಂದಿನ ಸಂಸ್ಥಾಪಕ ಶಕ್ತಿ ಎನಿಸಿದ ವಿಕ್ರಮ್ ಸಾರಾಭಾಯಿಯವರು ಅಂಬಾಲಾಲ್ ಸಾರಾಭಾಯಿ ಮತ್ತು ಸರಳಾದೇವಿ ದಂಪತಿಗಳ ಪುತ್ರರಾಗಿ 12 ಆಗಸ್ಟ್ 1919 ರಂದು ಅಹಮದಾಬಾದ್ನಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಬುದ್ಧಿವಂತನಾಗಿದ್ದ ಬಾಲಕ ಸಾಹಸಪ್ರಿಯ ಕೂಡಾ. ಇವರ ಮನೆಗೆ ಬರುತ್ತಿದ್ದ ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಸಿ.ವಿ.ರಾಮನ್ ಮುಂತಾದ ಮಹನೀಯರುಗಳ ವ್ಯಕ್ತಿತ್ವ ಈ ಧೀಮಂತ ಬಾಲಕನ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಮುಂಬಯಿ ಮತ್ತು ಕೇಂಬ್ರಿಜ್‍ಗಳಲ್ಲಿ ಶಿಕ್ಷಣ ಪಡೆದ ಅವರು, 1947ರಲ್ಲಿ ಕಾಸ್ಮಿಕ್‌ ಕಿರಣಗಳ ಮೇಲೆ ನಡೆಸಿದ ಸಂಶೋಧನೆಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು. ಸರ್‌ ಸಿ.ವಿ ರಾಮನ್‌ ಅವರ ಪ್ರಭಾವದಿಂದ ತಾಯ್ನಾಡಿಗೆ ಹಿಂದಿರುಗಿದರು. ಸಿ.ವಿ. ರಾಮನ್‌ ಅವರು ಸಾರಾಭಾಯಿ, ಹೋಮಿ ಭಾಭಾ ರಂಥ ಅನೇಕ ಯುವ ಪ್ರತಿಭೆಗಳು ಭಾರತಕ್ಕೆ ಹಿಂದಿರುಗುವಂತೆ ಮಾಡಿದ್ದರು. ಇದು ರಾಮನ್ನರ ಸಂಶೋಧನೆಯಷ್ಟೇ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯೂ ಹೌದು. 

ಮುಂದೆ ಸಾರಾಭಾಯ್ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸಿ. ವಿ. ರಾಮನ್ರವರ  ಮಾರ್ಗದರ್ಶನದಲ್ಲಿ ಕಾಸ್ಮಿಕ್‌‌ ಕಿರಣ, ಭೂಕಾಂತತ್ವ, ಅಂತರಗ್ರಹ, ವ್ಯೋಮ ವಿಜ್ಞಾನ, ಸೂರ್ಯ-ಭೂಮಿಗಳ ಸಂಬಂಧ ಮುಂತಾದವುಗಳ ಕುರಿತು ಸಂಶೋಧನೆ ಮಾಡಿದರು.

             

    ಕಾಸ್ಮಿಕ್‌ ಕಿರಣಗಳ ತೀಕ್ಷ್ಣತೆ ದಿನಕ್ಕೆರಡು ಬಾರಿ ಬದಲಾಗುವುದನ್ನು ಕಂಡುಹಿಡಿದರು. ಸಂಶೋಧನೆ ಬಾಹ್ಯಾಕಾಶ ಸಂಶೋಧನೆಗಳಿಗೆ ಸಹಾಯಕವಾಯಿತು. ಪರಮಾಣುವಿನಲ್ಲಿ ಪ್ರೋಟಾನ್‌, ಇಲೆಕ್ಟ್ರಾನ್‌ ನ್ಯೂಟ್ರಾನ್‌ಗಳಲ್ಲದೆ ಪಾಸಿಟ್ರಾನ್‌ಗಳು, ಇಲೆಕ್ಟ್ರಾನ್‌ ಆನಯಾನ್‌ಗಳು, ಬೇರೆ ರೀತಿಯ ಬೇರೆ ರಾಶಿಯ ಮೆಸಾನ್‌ ಕಣಗಳೂ ಇರುತ್ತವೆ. ಇವು ಕೂಡ ಕಾಸ್ಮಿಕ್‌ ಕಿರಣಗಳಿಂದ ಉತ್ಪತ್ತಿಯಾಗುತ್ತವೆ ಹಾಗೂ ಇವು ನಮ್ಮ ದೇಹವನ್ನು ನಿಮಿಷಕ್ಕೆ 60 ಕಣಗಳಂತೆ ಹಾದು ಹೋಗುತ್ತವೆ ಎಂಬುದನ್ನು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡರು. ಅಯಾನುಗೋಳ ಮತ್ತು ಕಾಂತಗೋಳದಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಿದರು.

ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಸಾರಾಭಾಯ್ 1965ರಲ್ಲಿ ಅದರ ನಿರ್ದೇಶಕರೂ ಆದರು. ವಿದ್ಯಾರ್ಥಿಗಳ ಪ್ರಾಧ್ಯಾಪಕರಾಗಿದ್ದ ಸಂದರ್ಭವೊಂದು ನಮ್ಮೆಲ್ಲರಿಗೂ ಅನುಕರಣೀಯ. ಎಷ್ಟೋ ಸಂದರ್ಭಗಳಲ್ಲಿ ನಾವು ಪ್ರಾಯೋಗಿಕ ಉಪಕರಣಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಅವುಗಳನ್ನು ಮುಟ್ಟಲೂ ಬಿಡುವುದಿಲ್ಲ.  ಒಂದು ದಿನ ಸಂಶೋಧನಾ ವಿದ್ಯಾರ್ಥಿಯೊಬ್ಬ ಪ್ರಯೋಗಾಲಯದ ಅಮೂಲ್ಯ ಉಪಕರಣವೊಂದನ್ನು ಆಕಸ್ಮಿಕವಾಗಿ ಒಡೆದು ಹಾಕಿದ. ಪ್ರೊಫೆಸರ್ ಏನನ್ನುತ್ತಾರೆ ಎನ್ನುವ ಭಯದಿಂದ‌ ಆತ ನಡುಗುತ್ತಿದ್ದ. ಪ್ರಯೋಗಾಲಯಕ್ಕೆ ಬಂದ ಪ್ರೊಫೆಸರ್‌ ಸಾರಾಭಾಯಿಯವರು ಈ ವಿದ್ಯಾರ್ಥಿಯ ಮುಖವನ್ನು ನೋಡಿ ಏನೋ ಸಮಸ್ಯೆಯಾಗಿದೆ ಎಂದು ಹತ್ತಿರ ಬಂದರು.  ವಿಷಯವನ್ನು ತಿಳಿದುಕೊಂಡ ಅವರು  ಆತನ ಬೆನ್ನು ತಟ್ಟಿ  ಇವೆಲ್ಲವೂ ಸಂಶೋಧನೆಯಲ್ಲಿ ಸಹಜ.  ಈ ಉಪಕರಣ ಒಡೆದು ಹೋದರೆ ಏನು? ಮತ್ತೊಂದನ್ನು ತರಿಸಿಕೊಂಡರಾಯಿತು ನೀನು ಸಂಶೋಧನೆಯನ್ನು ಮುಂದುವರೆಸು ಎಂದು ಹೇಳಿ ಧೈರ್ಯ ತುಂಬಿ ಆತನ ಮನೋಸ್ಥೈರ್ಯವನ್ನು ಹೆಚ್ಚಿಸಿದರು. ಇಂತಹ ಘಟನೆಗಳೆಷ್ಟೋ?

ಸಾರಾಭಾಯಿಯವರದ್ದು ಚುರುಕು ಹಾಗೂ ದೂರದರ್ಶಿತ್ವದ ವ್ಯಕ್ತಿತ್ವ. ಅವರು ಅತ್ಯುತ್ತಮ ಮಾನವ ಸಂಪನ್ಮೂಲ ನಿರ್ವಾಹಕರಾಗಿದ್ದರು. ನಮ್ಮ ಹೆಮ್ಮೆಯ ಕನ್ನಡಿಗ ವಿಜ್ಞಾನಿ ಸಿ. ಆರ್.‌ ಸತ್ಯ ಅವರಿಂದಲೇ ಸಾರಾಭಾಯಿಯವರ ಬಗ್ಗೆ ಘಟನೆಯೊಂದನ್ನು ನಾನು ತಿಳಿದುಕೊಂಡೆ. 1968ರಲ್ಲಿ ಸಿ.ಆರ್‌.ಸತ್ಯರವರು ತುಂಬಾದ ಇಸ್ರೋ ಪ್ರಯೋಗಾಲಯದಲ್ಲಿ ಕಲಾಮ್‌ ಅವರ ಸೂಚನೆಯಂತೆ ವೈಜ್ಞಾನಿಕ ಉಪಕರಣವೊಂದನ್ನು ವಿನ್ಯಾಸ ಮಾಡುತ್ತಿದ್ದರು. ಕಲಾಮ್‌ ಅವರಿಂದ ಈ ಮಾಹಿತಿ ಪಡೆದುಕೊಂಡ ಸಾರಾಭಾಯಿಯವರು ಕಲಾಮರೊಂದಿಗೆ ಅದನ್ನು ವೀಕ್ಷಿಸಲು ಬಂದರು. ಸತ್ಯ ಅವರ ವಿನ್ಯಾಸ ಇನ್ನೂ ಪೂರ್ಣಗೊಂಡಿರಲಿಲ್ಲ. ಆದರೆ, ಅದರ ವಿನ್ಯಾಸವನ್ನು ಮೆಚ್ಚಿಕೊಂಡ ಸಾರಾಭಾಯಿ ಸತ್ಯರವರ ಕಾರ್ಯನಿಷ್ಠೆಯನ್ನು ಮೆಚ್ಚಿ, ಅವರ ಆಸಕ್ತಿಯನ್ನು ಗಮನಿಸಿ ಉನ್ನತ ಅಧ್ಯಯನಕ್ಕೆ ಅವರನ್ನು ಯುರೋಪ್‌ ಹಾಗೂ ಅಮೇರಿಕಾಗಳಿಗೆ ಕಳುಹಿಸಿ ಕೊಡುವಂತೆ ಕಲಾಮರಿಗೆ ತಿಳಿಸಿದರು. ಹಾಗೆಯೇ ಸತ್ಯರವರತ್ತ ತಿರುಗಿ, “ಸತ್ಯ,  ಫೆಬ್ರವರಿ ೨ ರಂದು ಪ್ರಧಾನಿ ಇಂದಿರಾ ಗಾಂಧಿಯವರು ತುಂಬಾಗೆ ಬರುತ್ತಾ ಇದ್ದಾರೆ. ಅಷ್ಟರೊಳಗೆ ನೀನಿದನ್ನು ಪೂರ್ಣಗೊಳಿಸು. ಅವರಿಂದಲೇ ಉದ್ಘಾಟನೆ ಮಾಡಿಸೋಣ“ ಎಂದು ಹೇಳಿ ಪ್ರೋತ್ಸಾಹಿಸಿದರು. ಅಷ್ಟೇ ಅಲ್ಲ, ಅದೇ ರೀತಿ ಇಂದಿರಾ ಗಾಂಧಿಯವರಿಂದಲೇ ಉದ್ಘಾಟನೆ ಮಾಡಿಸಿ ಸಂತೋಷಪಟ್ಟರು. ಇದು ಅವರು ಕಿರಿಯರನ್ನು ಪ್ರೋತ್ಸಾಹಿಸುವ ಪರಿ.

ಆಗರ್ಭ ಶ್ರೀಮಂತರು, ಅನೇಕ ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿ ಅತ್ಯಂತ ಯಶಸ್ವಿ ಉದ್ಯಮಿಯೂ ಆಗಿದ್ದ ಸಾರಾಬಾಯಿಯವರದ್ದು ಅತ್ಯಂತ ಸರಳ ವ್ಯಕ್ತಿತ್ವ.  ಜುಬ್ಬಾ -ಪೈಜಾಮ ಚಪ್ಪಲಿಗಳನ್ನು ಧರಿಸಿಕೊಂಡೇ ಓಡಾಡುತ್ತಿದ್ದರು. ಒಮ್ಮೆ ಅವರು ಬೆಳಗಿನ ಜಾವ ತುಂಬಾದ ಗೆಸ್ಟ್ ಹೌಸಿನಿಂದ ನಡೆಯುತ್ತಾ ರಾಕೆಟ್ ಉಡಾವಣೆ ಮಾಡುವ ಸಂಕಿರಣದತ್ತ ಬಂದರು.  ಆಗ ತಾನೇ ಕೆಲಸಕ್ಕೆ ಸೇರಿದ್ದ ಸೆಕ್ಯೂರಿಟಿ ಆಳು ಕೃಷ್ಣ ನಾಯರ್ಗೆ ಇವರ ಪರಿಚಯವಿರಲಿಲ್ಲ. ಅವನು ಇವರನ್ನು ತಡೆದು ನಿಲ್ಲಿಸಿ,“ಇದು ನಿಷೇಧಿತ ಸ್ಥಳ. ನಿಮ್ಮ ಬಳಿ ಪಾಸ್ ಇದೆಯೇ?” ಎಂದು ಕೇಳಿದ. ಆಗ ಸಾರಾಭಾಯಿಯವರು ನಮ್ರತೆಯಿಂದಲೇ ನನ್ನ ಬಳಿ ಅದೇನು ಇಲ್ಲ ಎನ್ನುತ್ತಾ ಹಿಂದಿರುಗಿದರು !. ಸ್ವಲ್ಪ ಸಮಯದ ನಂತರ ಅವರು ಅಲ್ಲಿಯ ನಿರ್ದೇಶಕರೊಂದಿಗೆ ಮತ್ತು ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಕಾರಿನಲ್ಲಿ ಬಂದಿಳಿದಾಗ ಕೃಷ್ಣನಾಯರ್‌ಗೆ ತಾನು ಯಾರನ್ನು ತಡೆದು ನಿಲ್ಲಿಸಿದ್ದೆ ಎಂದು ತಿಳಿಯಿತು. ತನ್ನ ತಪ್ಪು ಅರಿವಾಗಿ ಗಡಗಡ ನಡುಗಲಾರಂಭಿಸಿದ.  ಅವರಕಾಲಿಗೆ ದೀರ್ಘ ದಂಡ ನಮಸ್ಕಾರ ಮಾಡಿ ಕ್ಷಮೆ ಕೇಳಿದ. ಆಗ ನಗುತ್ತಲೇ ಸಾರಾಭಾಯಿವರು ನೀನು ನಿನ್ನ ಡ್ಯೂಟಿ ಮಾಡಿದೆ ಅಷ್ಟೇ. ನಿನ್ನದೇನೂ ತಪ್ಪಿಲ್ಲ“ ಎಂದು ಆತನನ್ನು ಸಮಾಧಾನಪಡಿಸಿದರು. ಎಂಥಾ ನಿಷ್ಕಲ್ಮಶ ವ್ಯಕ್ತಿತ್ವ!!! ಇದಕ್ಕೇ ಅಲ್ಲವೇ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದು?

ಕೊಡೈಕೆನಾಲ್, ತಿರುವನಂತಪುರ ಮತ್ತು ಗುಲ್ಮಾರ್ಗ್‍ಗಳಲ್ಲಿ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ ಸಾರಾಭಾಯ್‌ ಅವರು.ಅಹಮದಾಬಾದಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ವಸ್ತ್ರೋದ್ಯಮ ಸಂಶೋಧನಾ ಸಂಸ್ಥೆ, ನೆಹರೂ ಫೌಂಡೇಶನ್ ಮತ್ತು ಕಮ್ಯೂನಿಟಿ ಸೈನ್ಸ್ ಸೆಂಟರ್‌ಗ್ರೂಪ್ ಫಾರ್ ಇಂಪ್ರೂವ್‌ಮೆಂಟ್ ಆಫ್ ಸೈನ್ಸ್ ಎಜುಕೇಷನ್ ಮೊದಲಾದ ಹಲವು ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು.

ಎಲ್ಲದಕ್ಕಿಂತಲೂ ಹೆಚ್ಚಾಗಿ ಸಾರಾಭಾಯಿಯವರನ್ನು ನಾವು ನೆನೆಯಬೇಕಾದದ್ದು ಅವರ ವೈಮಾಂತರಿಕ್ಷ ಸಂಶೋಧನೆಗಳಿಗೆ ಬೆನ್ನೆಲುಬಾದ ಇಸ್ರೋ ಸಂಸ್ಥೆಯ ಸ್ಥಾಪನೆಗಾಗಿ. ನೆಹರೂರವರ ಮನ ಒಲಿಸಿದ ಸಾರಾಭಾಯಿಯವರ ಸತತ ಪರಿಶ್ರಮ ಮತ್ತು ದೂರದರ್ಶಿತ್ವದ ಫಲವಾಗಿ 1962 ರಲ್ಲಿ ಭಾರತ ಸರ್ಕಾರ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research ), ಸ್ಥಾಪಿಸಿತು.ಅದಕ್ಕೆ ಡಾ ವಿಕ್ರಮ್ ಸಾರಾಭಾಯ್ಅವರೇ ಮೊದಲ ಅಧ್ಯಕ್ಷರಾದರು. 1969 ರಲ್ಲಿ ಅದು ಇಸ್ರೋ(Indian Space Research organization- ISRO) ಆಗಿ ಪರಿವರ್ತನೆಗೊಂಡು ಬೆಳೆಯಿತು. ಇಸ್ರೋದ ಪ್ರಧಾನ ಕೇಂದ್ರಕ್ಕಾಗಿ ಭಾರತದಾದ್ಯಂತ ಓಡಾಡಿ ಕೊನೆಗೆ ತುಂಬಾ ಪ್ರದೇಶವನ್ನು ಆಯ್ಕೆ ಮಾಡಿದ್ದರು. ಈ ಆಯ್ಕೆಯ ಹಿಂದೆ ಭೌಗೋಳಿಕ, ಹವಾಮಾನ ಮೊದಲಾದ ವೈಜ್ಞಾನಿಕ ವಿಚಾರಗಳಿದ್ದವು. ಅಲ್ಲಿಂದೀಚೆಗೆ, ಇಸ್ರೋ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಲೇ ಬಂದಿದೆ. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ಕಕ್ಷೆಗೆ ಸೇರಿದಂದಿನಿಂದ ಚಂದ್ರಯಾನ್-‌೩ ಚಂದ್ರನ ಮೇಲ್ಮೈ ಮೇಲೆ ಇಳಿಯುವವರೆಗೂ ಅನೇಕ ಸಾಧನೆಗಳಿಗೆ ಕಾರಣವಾಗಿದೆ.





ಭಾರತದ ಅಣುಶಕ್ತಿ ಕಾರ್ಯಕ್ರಮದ ಪಿತಾಮಹ ಎನಿಸಿದ ಹೋಮಿ ಜಹಂಗೀರ್ ಭಾಭಾ 1966 ರ ಜನವರಿ೨೪ರಂದು ದುರಾದೃಷ್ಟವಶಾತ್‌ ದುರಂತ ಅಂತ್ಯಕಂಡರು. ಸ್ನೇಹಿತ ಜಹಾಂಗೀರ್‌ ಭಾಭಾರವರ ನಿಧನಾ ನಂತರ ವಿಕ್ರಮ್‍ರವರು ಭಾರತದ ಪರಮಾಣು ಶಕ್ತಿ ಮಂಡಲಿಯ ಅಧ್ಯಕ್ಷರಾದರು. ಅಧ್ಯಕ್ಷರಾದ ನಂತರ ಯುರೇನಿಯಮ್ ಅದುರಿನ ಅನ್ವೇಷಣೆಗೆ ಆದ್ಯತೆ ನೀಡಿದರು. ಕಲ್ಪಾಕಮ್‍ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಮಾಣದ ವೇಗವರ್ಧನೆ ಮತ್ತು ಭಾರತೀಯ ಸಂಪನ್ಮೂಲಗಳಿಂದಲೇ ಕೊಲ್ಕತಾದ ಸೈಕ್ಲೊಟ್ರಾನ್ ಸ್ಥಾಪನೆಗೆ ಚಾಲನೆ ನೀಡಿದರು. ಭಾರತದ ಎಲೆಕ್ಟ್ರಾನಿಕ್ ಆಯೋಗದ ಹಾಗೂ ಸಂಯುಕ್ತ ರಾಷ್ಟ್ರ ಸಂಸ್ಥೆ ಸಂಘಟಿತ ಬಾಹ್ಯವ್ಯೋಮದ ಶಾಂತಿಯುತ ಉಪಯೋಗಗ ಅಧಿವೇಶನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.

 

ದುರಂತ ಅಂತ್ಯ :

ವಿಜ್ಞಾನಿಗಳದ್ದೂ ದೇಶ ಕಾಯುವ ಸೈನಿಕನ ಬದುಕೇ!!!.  ಅದೆಷ್ಟೋ ವಿಜ್ಞಾನಿಗಳು ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಹಲವು ಬಗೆಯ ವಿದ್ರೋಹ, ಷಡ್ಯಂತ್ರಗಳಿಗೆ ಬಲಿಯಾಗಿದ್ದಾರೆ. ಜಹಾಂಗೀರ್‌ ಭಾಭಾರಂತಹವರು ದುರಂತ ಅಂತ್ಯಕ್ಕೆ ಒಳಗಾಗಿದ್ದಾರೆ.ನಂಬಿ ನಾರಾಯಣನ್‌ರಂಥವರನ್ನು ಯಾರದ್ದೋ ರಾಜಕೀಯಕ್ಕೆ ಬಲಿಪಶು ಮಾಡಲಾಗಿದೆ. ಸಾರಾಭಾಯ್‌ ಅವರೂ ಇಂತಹದ್ದೇ ಅನುಮಾನಾಸ್ಪದ ಅಂತ್ಯ ಕಂಡಿರುವುದಾಗಿ ಕೆಲವರು ನಂಬುತ್ತಾರೆ.ಸಾಮಾನ್ಯವಾಗಿ ಪ್ರತಿ ದಿನ 16-18ಗಂಟೆಗಳ ಕಾಲ ದುಡಿಯುತ್ತಿದ್ದ ವಿಕ್ರಮ್ ಸಾರಾಭಾಯಿಯವರು ಕಾರ್ಯನಿಮಿತ್ತ ತುಂಬಾ ರಾಕೆಟ್ ಉಡಾವಣಾ ಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದರು. ಯಾವುದೇ ಆರೋಗ್ಯ ಸಮಸ್ಯೆಗಳೂ ಇಲ್ಲದಿದ್ದ ಸಾರಾಭಾಯಿಯವರು 1971 ಡಿಸೆಂಬರ್ 30ರಂದುರಾತ್ರಿ ನಿದ್ರಿಸುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು  ಎನ್ನುವ ಸುದ್ದಿ ದೇಶದ ಮೇಲೆ ಬರಸಿಡಿಲಿನಂತೆ ಎರಗಿತು. ಎಂದು ಹೇಳಲಾದರೂ ಅನೇಕರು ಈ ಕುರಿತು ಸಂದೇಹ ವ್ಯಕ್ತಪಡಿಸುತ್ತಾರೆ.ಅವರ ಮರಣಾ ನಂತರ ತುಂಬಾದಲ್ಲಿರುವ ಇಸ್ರೋ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ವ್ಯೋಮಕೇಂದ್ರ ಎಂಬ ಹೆಸರಿಟ್ಟು ಈ ದೇಶಪ್ರೇಮಿ ಭಾರತೀಯ ವಿಜ್ಞಾನಿಗೆ ರಾಷ್ಟ್ರ ಕೃತಜ್ಞತೆಯನ್ನು ಸಲ್ಲಿಸಿದೆ. ಆಗಸ್ಟ್‌ ೨೩ರಂದು ತಿಂಗಳನ ಅಂಗಳದಲ್ಲಿಳಿದ ಲ್ಯಾಂಡರ್‌ಗೂ ವಿಕ್ರಮ್ ಲ್ಯಾಂಡರ್‌ ಎಂಬ ಹೆಸರಿಟ್ಟು ಮಹಾನ್‌ ವಿಜ್ಞಾನಿ, ದಕ್ಷ ಆಡಳಿತಗಾರ, ಸಮರ್ಥ ಉದ್ಯಮಿ ಎನಿಸಿದ ವಿಕ್ರಮ ಸಾರಾಭಾಯಿಯವರಿಗೆ ಗೌರವ ಸಲ್ಲಿಸಲಾಗಿದೆ. ಇಂತಹ ಸಾಧಕನಿಗೆ ೧೯೬೨-ಭಾರತ ಸರ್ಕಾರದ ಭಾಟ್ನಾಗರ್ ಸ್ಮಾರಕ ಪಾರಿತೋಷಕ, ೧೯೬೬-ಪದ್ಮಭೂಷಣ ಹಾಗೂ ೧೯೭೨-(ಮರಣೋತ್ತರ)ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇಂತಹ ವ್ಯಕ್ತಿಗಳು ತಾವು ಉರಿದು ಸಮಾಜಕ್ಕೆ ಬೆಳಕನ್ನು ನೀಡುವ ಸೊಡರುಗಳಾಗಿದ್ದಾರೆ. ಇಂತಹ ಸ್ಫೂರ್ತಿಯ ಬೆಳಕಿನ ಕಿಡಿಯಿಂದ ನಮ್ಮಲ್ಲೂ ಅದೇ ಬಗೆಯ ರನ್ನದ ಕಿಡಿ ಹಚ್ಚಿಕೊಂಡು ಭವ್ಯಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸುವುದೇ ಅವರಿಗೆ ನಾವು ನೀಡಬಲ್ಲ ಗೌರವವಾದೀತು.  

        ಇನ್ನಷ್ಟು ಮಾಹಿತಿಗಾಗಿ https://starsunfolded.com/vikram-sarabhai/

ಸೊಳ್ಳೆ-ರೊಳ್ಳೆ

                                                        ಸೊಳ್ಳೆ-ರೊಳ್ಳೆ

ಶ್ರೀಧರ ಮಯ್ಯ ಎಂ. ಎನ್.‌

ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಗುತ್ತೂರು

ಹರಿಹರ ತಾ.  ದಾವಣಗೆರೆ ಜಿಲ್ಲೆ 

ಡೆಂಗ್ಯೂ ರೋಗಕ್ಕೆ ಕಾರಣವಾಗುವ ವೈರಾಣುವನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವ ಮೂಲಕ ಡೆಂಗ್ಯೂ ಮುಕ್ತ ಸಮಾಜವನ್ನು ನಿರ್ಮಿಸುವ ಅವಶ್ಯಕತೆಯನ್ನು ಶಿಕ್ಷಕ ಶ್ರೀಧರ ಮಯ್ಯ ಅವರು ಈ ಲೇಖನದಲ್ಲಿ ಚರ್ಚಿಸಿದ್ದಾರೆ.

ನಿಮಗೆ ಗೊತ್ತಾ? ಯಕಃಶ್ಚಿತ್‌ ಒಂದು ಸೆಂ.ಮೀಗಿಂತ ಕಡಿಮೆ ಇರುವ ಸೊಳ್ಳೆ 5-6 ಅಡಿ ಎತ್ತರದ ಈ ದೈತ್ಯ ಮನುಷ್ಯನನ್ನೇ ಕೊಲ್ಲುತ್ತದೆ ಎಂದರೆ, ಅಬ್ಬಾ ಅದರ ಶಕ್ತಿ ಎಷ್ಟಿರಬೇಡ!!!! ಅದರಲ್ಲಿ ಎಂಥ ಸೂಕ್ಷ್ಮಾಣುವಿರಬೇಡ. ʼಸೊಳ್ಳೆ ಹೊಸಕಿದಂತೆ ಹೊಸಕಿ ಬಿಡುತ್ತೇನೆʼ ಎಂಬ ಮಾತನ್ನು ನೀವು ಕೇಳಿರಬಹುದು. ಅದೇ ಸೊಳ್ಳೆ ನಮ್ಮನ್ನೂ ಅದೇ ರೀತಿ ಹೊಸಕಿ ಬಿಡಬಹುದು, ಅಲ್ಲವೇ. ವಿಶ್ವದಾದ್ಯಂತ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವವರ ಸಂಖ್ಯೆ ವರ್ಷಕ್ಕೆ ಅಂದಾಜು 700 ಮಿಲಿಯನ್‌ ಅಂದರೆ, ಸುಮಾರು 70 ಕೋಟಿ. ಇದರಲ್ಲಿ ಸಾಯುವವರು ಅಂದಾಜು ಒಂದು ಮಿಲಿಯನ್‌ ಅಂದರೆ 10 ಲಕ್ಷ. ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಧಿಕೃತ ವರದಿ.

ಸೊಳ್ಳೆಗಳಿಂದ ಹರಡುವ ಸಾಮಾನ್ಯ ರೋಗಗಳೆಂದರೆ, ಡೆಂಗ್ಯೂ, ಚಿಕುನ್‌ಗುನ್ಯಾ, ಮಲೇರಿಯಾ, ಹಳದಿಜ್ವರ, ಆನೆಕಾಲುರೋಗ, ಜಪಾನೀಸ್‌ ಇನ್‌ಸೆಫಲೈಟಿಸ್‌, ರಾಸ್‌ ರಿವರ್‌ ಫೀವರ್‌, ಜಿಕಾ ಫೀವರ್... ಅಬ್ಬಬ್ಬಾ, ಒಂದೇ ಎರಡೇ!!!!

                     ‌       


ಈಡಿಸ್‌ ಈಜಿಪ್ಟಿಸೊಳ್ಳೆ

ನಿಮ್ಮ ಮಾಹಿತಿಗಾಗಿ ನಮ್ಮ ರಾಜ್ಯದಲ್ಲಿನ ಕೇವಲ ಡೆಂಗ್ಯೂ ಜ್ವರದ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ಡೆಂಗ್ಯೂ ಪ್ರಕರಣದಲ್ಲಿ ನಮ್ಮ ರಾಜ್ಯಕ್ಕೆ ಮೂರನೇ ಸ್ಥಾನ. ಮೇ 13, 2023ರ ವರದಿ ಏನು ಹೇಳಿದೆ ಗೊತ್ತೇ ? ಡೆಂಗ್ಯೂಗೆ ತುತ್ತಾದವರು 48,109 ಮಂದಿ.  2022ರಲ್ಲಿ 34,963 ಮಂದಿ.  ಅಂದರೆ, ಕಳೆದ ಬಾರಿಗಿಂತ 38% ಹೆಚ್ಚು.  ಇನ್ನು ಮರಣ ದರ 4.2%. ಅಂದರೆ, ನೂರಕ್ಕೆ 4 ಸರಾಸರಿ ಸಾವು. ಕೊರೊನಾದ ಮರಣ ದರ ಎಷ್ಟುಗೊತ್ತೇ ? 1%ಗಿಂತ ಕಡಿಮೆ. ಏಕೆ ಇಷ್ಟೊಂದು ಜನ ರೋಗಕ್ಕೆ ತುತ್ತಾಗಲು ಕಾರಣ ಏನೆಂದು ಯೋಚಿಸಿದ್ದೀರಾ? ಇದಕ್ಕೆ ಒಂದೇ ಉತ್ತರ- ಸ್ವಚ್ಛತೆಯ ಕೊರತೆ. ನೀವು ಒಂದು ಹಳ್ಳಿಗೆ ಕಾಲಿಟ್ಟುನೋಡಿ. ಅಲ್ಲಿ

  1.    ಬಯಲು ಶೌಚಾಲಯ ಕೈಬೀಸಿ ಕರೆಯುತ್ತದೆ.
  2.  ತೆರೆದ ಚರಂಡಿಗಳು ನದಿಯಂತೆ ಹರಿಯುತ್ತಿರುತ್ತವೆ
  3.    ಕೊಳಚೆನೀರು, ಮಣ್ಣಿನಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ
  4.   ಹೊಲ, ಹೋಟೆಲ್‌ ತ್ಯಾಜ್ಯಗಳಿಗೆ ಹಂದಿಗಳು ಮುತ್ತಿಕ್ಕುತ್ತಿರುತ್ತವೆ
  5.   ಸೊಳ್ಳೆ, ನೊಣದಂತಹ ಕೀಟಗಳ ಗಾಯನ ಕಿವಿಗೆ ಬಡಿಯುತ್ತಿರುತ್ತವೆ
  6.   ಆಸ್ಪತ್ರೆಗಳಲ್ಲಿ ಸಂತೆಯಂತೆ ಜನ ಗಿಜಿಗುಡುತ್ತಿರುತ್ತಾರೆ.

ನಗರ ಪ್ರದೇಶಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ

 

ಫ್ಲೇವಿವೈರಿಡೆ ಗುಂಪಿಗೆ ಸೇರಿದ ಡೆಂಗ್ಯೂ ವೈರಸ್

ಹೀಗಿದ್ದಾಗ, ಸೊಳ್ಳೆ, ನೊಣಗಳ ಸಂಖ್ಯೆ ಹೆಚ್ಚಾಗದೇ ಇರುತ್ತದೆಯೇ? ರೋಗ ಹರಡಿ ಜನ ಸಾಯದೇ ಇರುತ್ತಾರೆಯೇ?

ಡೆಂಗ್ಯೂ ಲಕ್ಷಣಗಳು

1.    ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು

2.   ಚರ್ಮದ ಮೇಲೆ ಗುಳ್ಳೆಗಳು

3.   ಮಲಬದ್ಧತೆ, ಕಪ್ಪುಮಲ ವಿಸರ್ಜನೆ

4.   ರಕ್ತದೊತ್ತಡದ ಧೀಡೀರ್‌ ಇಳಿತ

5.   ರಕ್ತದಲ್ಲಿ ಕಿರುತಟ್ಟೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವಿಕೆ

6.   ಚಿಕಿತ್ಸೆ ಫಲಿಸದೆ ರೋಗಿ ಸಾಯಬಹುದು

 

ಡೆಂಗ್ಯೂ ಲಕ್ಷಣಗಳು
ಹರಡುವ ವಿಧಾನಗಳು
ನಿಂತ ನೀರು, ಟೈರ್‌, ತೆಂಗಿನಚಿಪ್ಪು, ಮುರಿದ ಪ್ಲಾಸ್ಟಿಕ್‌, ತೊಟ್ಟಿಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಮೊಟ್ಟೆ ಇಡುವ ಸೊಳ್ಳೆಗಳು ರೋಗ ಹರಡಲು ಕಾರಣವಾಗುತ್ತವೆ. ಸೊಳ್ಳೆ ರೋಗ ಹರಡುವ ಕೆಲಸ ಮಾಡಿದರೆ, ಅವುಗಳಲ್ಲಿರುವ ಡೆಂಗ್ಯೂ ವೈರಸ್‌ ರೋಗ ಉಂಟುಮಾಡುವ ಕೆಲಸ ಮಾಡುತ್ತದೆ. ಈ ವೈರಸ್‌ಗಳಲ್ಲಿ ನಾಲ್ಕು ವಿಧಗಳಿವೆ ಅವುಗಳುDENV-1, DENV-2 ,DENV-3,DENV-4
ಡೆಂಗ್ಯೂ ವರ್ಗಾವಣೆಯಾಗುವಿಕೆ - ಡೆಂಗ್ಯೂ ಪೀಡಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ

ಡೆಂಗ್ಯೂ ಹರಡುವಿಕೆ 

ತಡೆಗಟ್ಟುವ ವಿಧಾನಗಳು

1.     ನಮ್ಮ ಮನೆ, ಶಾಲೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು

2.     ಒಡೆದ ಪ್ಲಾಸ್ಟಿಕ್‌, ಗಾಜಿನ ಬಾಟಲ್‌ಗಳು, ಟೈರ್‌ಗಳು, ತೆಂಗಿನಚಿಪ್ಪು ಮುಂತಾದುವುಗಳನ್ನು ಸರಿಯಾಗಿ

   ವಿಲೇವಾರಿ ಮಾಡಬೇಕು.

3.     ಸೊಳ್ಳೆ ಪರದೆ ಉಪಯೋಗಿಸಬೇಕು

4.     ಸೊಳ್ಳೆ ನಿರ್ಮೂಲನಾ ಸಾಧನಗಳನ್ನು ಬಳಸಬೇಕು

5.     ಕಿಟಕಿಗಳಿಗೆ ಪರದೆಗಳನ್ನು ಅಳವಡಿಸಿಕೊಳ್ಳಬೇಕು

6.     ದನದ ಕೊಟ್ಟಿಗೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಲೋಬಾನಬಳಸಬೇಕು

7.     ಬಯಲು ಶೌಚಾಲಯಗಳನ್ನು ಬಳಸದೇ, ಪ್ರತೀ ಮನೆಯಲ್ಲೂ ಶೌಚಾಲಯ ಕಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು.

ಒಟ್ಟಿನಲ್ಲಿ ಸ್ವಚ್ಛತೆಯ ಕಡೆ ಗಮನ ನೀಡಿದರೆ, ಡೆಂಗ್ಯೂ ಅಷ್ಟೇ ಅಲ್ಲ ಸೊಳ್ಳೆ ಮುಕ್ತ ಸಮಾಜ ಮಾಡಬಹುದು.


ಪೀಪೀ ಊದುವ ಮಜಾ,,,,

 ಪೀಪೀ ಊದುವ ಮಜಾ,,,, 

ಲೇಖಕರು : ರಮೇಶ ವಿ. ಬಳ್ಳಾ ಅಧ್ಯಾಪಕರು                     ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು                      ಗುಳೇದಗುಡ್ಡ ಜಿ: ಬಾಗಲಕೋಟ

ಮಕ್ಕಳಿಗೆ ಖುಷಿ ಕೊಡುವ, ಹಳ್ಳಿಗಾಡಿನ ಕಡೆ ಸುಲಭವಾಗಿ ಲಭ್ಯವಿರುವ ಹಾಗೂ ವಿಶಿಷ್ಟ ಶಬ್ಧ ಮಾಡುವ ಜನಪ್ರಿಯ ಆಟಿಕೆಯಾದ ಪೀಪೀ ಯ ಪರಿಚಯ, ಅದನ್ನು ತಯಾರಿಸುವ ಹಲವು ವಿಧಾನಗಳು ಹಾಗೂ ಅದು ಹೊರಡಿಸುವ ಶಬ್ಧದ ಹಿಂದಿನ ವೈಜ್ಞಾನಿಕ  ಅಂಶವನ್ನು ತಿಳಿಸಿಕೊಡುವ ಪ್ರಯತ್ನದ ಈ ಲೇಖನವನ್ನು  ರಚಿಸಿದ್ದಾರೆ, ಶಿಕ್ಷಕ ರಮೇಶ್‌ ವಿ ಬಳ್ಳಾ ಅವರು.

ಜಾತ್ರೆ, ಉತ್ಸವಗಳು, ಮೇಳಗಳು ಬಂದವೆದರೆ ಮಕ್ಕಳಿಗೆ ಖುಷಿಯೋ ಖುಷಿ. ಹಲವಾರು ಬಗೆಯ ಆಟಿಕೆಗಳು, ತಿಂಡಿ ತಿನಿಸುಗಳು ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಬಹುತೇಕ ಮಕ್ಕಳು ತಿನಿಸುಗಳ ಜೊತೆಗೆ ‘ಪೀಪೀ’ ಎಂಬ ಆಟಿಕೆಯನ್ನು ಕೊಂಡುಕೊಳ್ಳದೇ ವಾಪಸಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲ ಮಕ್ಕಳು ಪೀಪೀ ಊದಿ ಮಜಾ ಮಾಡುವ ಮೂಲಕ ಸಂತೋಷಪಡುತ್ತಾರೆ.

ಪೀ ಪೀ ಎಂಬ ಸಾಧನ ತನ್ನ ಮೂಲಕ ಮಾಡುವ ಶಬ್ದದ ವಿಶೇಷತೆಯಿಂದಾಗಿ ಕೇಳುಗರನ್ನು ಅದರಲ್ಲೂ ಮಕ್ಕಳನ್ನು ಆನಂದತುದಿಲರನ್ನಾಗಿಸಿ ವಿಶಿಷ್ಟ ಅನುಭವವನ್ನು ನೀಡುತ್ತದೆ. ಶಬ್ದವು ವಸ್ತುಗಳ ಕಂಪನದಿದ ಹೊರಡುತ್ತದೆ ಎಂಬುದು ನಮಗೆಲ್ಲ ತಿಳಿದ ಸಂಗತಿ. ಕಂಪಿಸುವ ವಸ್ತುಗಳು ಮಾತ್ರ ಶಬ್ದ ಉತ್ಪತ್ತಿ ಮಾಡಬಲ್ಲವು. ನಿಮಗೆ ಅನುಭವವಾಗಿರಬಹುದು ಕೈಜಾರಿ ಬಿದ್ದ ಸ್ಟೀಲ್ ತಟ್ಟೆ, ಸ್ಟೀಲ್ ಲೋಟ ಅವು ಮಾಡುವ ಜೋರು ಶಬ್ದ ನಮ್ಮ ಕಿವಿ ಗಡಚಿಡುತ್ತದೆ ಹಾಗೂ ಅವು ಕಂಪಿಸುವ ರೀತಿಯನ್ನು ಸಹ ನಾವು ಕೆಲ ಸಾರಿ ಕಣ್ಣಾರೆ ಕಾಣಬಹುದು. ಬಿದ್ದ ಲೋಟವನ್ನು ತಕ್ಷಣ ಮುಟ್ಟಿದಾಗ ಕಂಪನದ ಅನುಭವ ಆಗೇ ಆಗುತ್ತದೆ. ನಾವು ಬಳಸುವ ಕರತಾಳ(ಚಳ್ಳಂ), ತಮಟೆ, ಡೊಳ್ಳು, ತಬಲ, ತಂಬೂರಿ ಇತ್ಯಾದಿ ಸಂಗೀತ ವಾದ್ಯಗಳನ್ನು ಗಮನಿಸಿದಾಗ ಅವುಗಳಲ್ಲಿ ಕಂಪನವಾಗುವಿಕೆಯನ್ನು ಗುರುತಿಸಬಹುದು. ನಾವು ಆಲಿಸುವ ಆ ಸಂಗೀತ, ನಾದ ಸಂಭ್ರಮ ಆ ವಸ್ತುಗಳ ಕಂಪನದಿದ ಹೊರಟ ಶಬ್ದವೇ ಆಗಿದೆ.

ಪೀಪೀ ಎಂಬುದು ಹಳ್ಳಿಯ ಹುಡುಗರಿಂದ ಹಿಡಿದು, ನಗರದ ಮಕ್ಕಳವರೆಗೂ ಬಲು ಇಷ್ಟವಾದ ಆಟಿಕೆ. ಸಾಮಾನ್ಯರೆಲ್ಲರೂ ಕೊಂಡುಕೊಳ್ಳಬಹುದಾದ ಸುಲಭ ಬೆಲೆಯಲ್ಲಿ ದೊರೆಯುವ ಈ ಆಟಿಕೆಗಳು ಶಬ್ದದ ಮೂಲಕ ದೊಡ್ಡದಾಗಿ ತಮ್ಮ ಇರುವಿಕೆಯನ್ನು ಪ್ರದರ್ಶಿಸುತ್ತವೆ. ಚಿಕ್ಕದಾಗಿ ಪಿಂಯ್,,,ಪಿಯ್,,, ಎಂದು ಶಬ್ದ ಮಾಡುವ ಚಿಕ್ಕ ಬೆರಳಿನಾಕಾರದ ಕೊಳವೆಯಿಂದ ಹಿಡಿದು, ಪಾಂವ್,,,ಪಾವ್,,, ಎಂದು ಜೋರು ಶಬ್ದ ಮಾಡುವ ದೊಡ್ಡ ಕೊಳವೆಯ (ವಾಹನದ ಹಾರ್ನ ರೀತಿಯ) ಪೀ ಪೀ ಗಳ ಲೋಕವೇ ವಿಭಿನ್ನ. ಇಂದಿಗೂ ನಮ್ಮ ಹಳ್ಳಿ ಹುಡುಗರು ಪೀ,,ಪೀ,,ಗಳನ್ನು ಕೊಂಡು ಊದುವುದಕ್ಕಿಂತ ಸ್ಥಳೀಯ ಕೆಲ ವಸ್ತುಗಳನ್ನು ಬಳಸಿ ಸ್ವತಃ ತಾವೇ ತಯಾರಿಸಿ ಊದುವ ಮೂಲಕ ಮಜಾ ಅನುಭವಿಸುತ್ತಾರೆ. ಅಂಥ ಕೆಲ ಸ್ಥಳಿಯ ಮಾದರಿಗಳು ತಮ್ಮಲ್ಲೂ ಇರಬಹುದು. ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳು ಪುಕ್ಕಟೆ ಸಿಗುವ ವಸ್ತುಗಳಿಂದ ತಯಾರಿಸಿದ ಪೀ,,ಪೀ,,ಗಳನ್ನು ತಾವೂ ಊದಿ ಮಜಾ ಮಾಡಬಹುದು. ಈ ಪೀ,,ಪೀ,,ಗಳ ಹಿಂದಿರುವ ವೈಜ್ಞಾನಿಕ ಕಾರ್ಯವಿಧಾನವನ್ನು ಅರಿಯುವ ಮುನ್ನ ಕೆಲ ಮಾದರಿಗಳನ್ನು ನೋಡೋಣ.

ಬಸರಿ ಎಲೆ ಪೀ ಪೀ : ಸ್ವಲ್ಪ ಅಗಲವಾದ, ಉದ್ದನೆಯ, ಚೂಪು ತುದಿಯ ಎಲೆಯುಳ್ಳ ಬಸರಿ ಮರ ಹಳ್ಳಿಗಾಡಿನ ಮಕ್ಕಳಿಗೆ ತುಂಬ ಚಿರಪರಿಚಿತ. ಆ ಎಲೆಗಳನ್ನು ಬಳಸಿ ಮಾಡಬಹುದಾದ ಸುಲಭ ಪೀ ಪೀ ಹೀಗಿದೆ.

ಗುಂಡು ಉದ್ದನೆಯ ಎಲೆಯ ಚೂಪು ತುದಿಯನ್ನು ಮೊದಲು ಮಡಚಿ ಕೊಳವೆಯಾಕಾರಕ್ಕೆ ಸುತ್ತಬೇಕು. ಸುತ್ತಿದ ನಂತರ ಸುರುಳಿ ಬಿಚ್ಚದಂತೆ ದಾರ ಕಟ್ಟಬೇಕು. ಆ ಮೇಲೆ ಕೊಳವೆಯ ಒಂದು ತುದಿಯನ್ನು ಬೆರಳಿನಿಂದ ಒತ್ತಿ ಚಪ್ಪಟೆ ಮಾಡಬೇಕು. ಈ ಭಾಗವನ್ನೇ ಬಾಯಿಯಲ್ಲಿ ಹಿಡಿದು ಊದಬೇಕು. ಈಗ ಹಸಿರು ಎಲೆಯ ಚಿಕ್ಕ ಕೊಳವೆಯಾಕಾರದ ಪೀ ಪೀ ತಯಾರಾಯಿತು. ಪೀ ಪೀ ಊದಿ ಪಿಂಯ್ ಪಿಂಯ್ ಶಬ್ದದೊಂದಿಗೆ ಮಜಾ ಮಾಡಿ ನೋಡಿ.

ಕೊಳವೆಗಳ ಪೀ ಪೀ : ಚಿಕ್ಕ ಚಿಕ್ಕ ಕೊಳವೆಗಳಂತಿರುವ ಪೆನ್ನಿನ ಉದ್ದನೆಯ ಭಾಗಗಳು,ಇಲ್ಲವೆ ಪೆನ್ನಿನ ಕ್ಯಾಪ್, ಹೊಲಿಗೆ ದಾರದುಂಡಿಯ ಕೊಳವೆಗಳು, ತಗಡಿನ ಕೊಳವೆಗಳು ಇತ್ಯಾದಿಗಳನ್ನು ಬಳಸಿಕೊಂಡು ಇನ್ನೊಂದು ಬಗೆಯ ಪೀ ಪೀಯಾಗಿ ಊದಬಹುದು.

ಕೊಳವೆಯ ಕೆಳಭಾಗವನ್ನು ಬಲಗೈ ಹೆಬ್ಬೆರಳಿನಿಂದ ಮುಚ್ಚಿ, ತೋರುಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಕೊಳವೆಯನ್ನಿಟ್ಟು ಬಾಯಿಯ ಕೆಳತುದಿಯ ಮೇಲೆ ಕೊಳವೆಯ ಮೇಲ್ತುದಿ ಬರುವಂತೆ ಇಟ್ಟು ಊದಬೇಕು. ಹಾಗೆಯೇ ಮೇಲ್ತುದಿಯ ಭಾಗವನ್ನು ಶಬ್ದ ಹೊರಡಲು ಅನುವಾಗುವಂತೆ ಹೊಂದಾಣಿಕೆ ಮಾಡಬೇಕು. ಈಗ ಊದಿ ನೋಡಿ ಸುಂಯ್ ಸುಂಯ್ ಎಂಬ ರೀತಿಯ ಧ್ವನಿ ಮಾಡುವ ಪೀ ಪೀ ರೆಡಿ.

ದ್ವಿದಳ ಪೀ ಪೀ : ಎರಡು ಎಲೆಗಳೋ, ಎರಡು ಭಾಗವಾಗಿ ಮಡಚಿದ ಕಾಗದದ ತುಣುಕೋ, ಹೂವಿನ ಎರಡು ಎಸಳೋ ಇತ್ಯಾದಿ ಬಳಸಿಕೊಂಡು ‘ಪಿಂಯ್’ ದು ಊದಬಹುದಾದ ಸರಳ ಪೀ ಪೀ ಇದಾಗಿದೆ.

ಎರಡು ಎಲೆಗಳನ್ನು ಎದುರು ಬದುರು ಜೋಡಿಸಿ, ಬೆರಳಿನ ಮಧ್ಯೆ ಹಿಡಿಯಬೇಕು. ಊದುವಾಗ ತುದಿಯ ಭಾಗಕ್ಕೆ ಬರುವ ಎಲೆಯ ಭಾಗಗಳನ್ನು ವಿರುದ್ಧ ದಿಕ್ಕಿಗೆ ಅಗಲಿಸಿ ಮಧ್ಯೆ ಗಾಳಿ ಊದಿದರೆ ‘ಪಿಂಯ್’ ಎಂದು ಶಬ್ದ ಹೊರಡುತ್ತದೆ. ಹೊಂದಾಣಿಕೆಗೆ ಬೆರಳುಗಳನ್ನು ಸಡಿಲಿಸುವಿಕೆ ಹಾಗೂ ಬಿಗಿಗೊಳಿಸುವಿಕೆಯನ್ನು ಮಾಡುತ್ತಿರಬೇಕು. ಕಾಗದವನ್ನು ಹಾಗೇ ಹೂವಿನ ದಳಗಳನ್ನು ಬಳಸಿಯೂ ಇದೇ ಮಾದರಿಯಲ್ಲಿ ಮಾಡಿ ಊದಬಹುದು.

ಈರುಳ್ಳಿ ಪೀ ಪೀ : ಈರುಳ್ಳಿ ಬರೀ ಒಗ್ಗರಣೆಗೆ ಮಾತ್ರವಲ್ಲ, ಅದರ ಕೊಳವೆಯಂತ ಎಲೆ ಮಕ್ಕಳಿಗೆ ಪೀ ಪೀ ಆಗಿ ಬಳಕೆಯಾಗುತ್ತದೆ. ಉದ್ದನೆಯ ಕೊಳವೆಯಾಕಾರದ ಎಲೆಗಳನ್ನು ನಿರ್ಧಿಷ್ಟ ಗಾತ್ರಕ್ಕೆ ಕತ್ತರಿಸಿಕೊಂಡು ಒಂದು ತುದಿಯಿಂದ ಊದಿದರೆ ಸಣ್ಣದಾಗಿ ಪಿಂಯ್ ಪಿಂಯ್,,, ಎಂದು ಶಬ್ದ ಬರುತ್ತದೆ. ಇದೇ ರೀತಿಯಲ್ಲಿ ಎಳನೀರು, ಕೊಲ್ಡ ಡ್ರಿಂಕ್ಸ್ ಕುಡಿಯಲು ಬಳಸುವ ಸ್ಟಾçಗಳನ್ನು ಬಳಸಿಯೂ ಪೀ ಪೀ ಊದಬಹುದು.

ದೊಡ್ಡ ಕೊಳವೆಯ ಪೀ ಪೀ : ಊದುಬತ್ತಿಯ ಗುಂಡು ಕೊಳವೆಗಳು, ನೂಲು ಸುತ್ತುವ ಕೋನ್‌ಗಳು ಇತ್ಯಾದಿಗಳನ್ನು ಬಳಸಿ ದೊಡ್ಡ ಶಬ್ದ ಬರುವ ಹಾರ್ನ ರೀತಿಯ ಪೀ ಪೀ ಗಳನ್ನು ತಯಾರಿಸಬಹುದು.

ಕೊಳವೆಯ ಒಂದು ತುದಿಗೆ ದೊಡ್ಡ ಗಾತ್ರದ ಬಲೂನ್‌ನ್ನು ಸೇರಿಸಿ ಬಿಗಿದು ದಾರ ಕಟ್ಟಬೇಕು. ಮತ್ತೊಂದು ತುದಿಯಲ್ಲಿ ಬಲೂನ್ ಪೂರ್ತಿ ಉಬ್ಬುವವರೆಗೆ (ಒಡೆಯದಂತೆ) ಗಾಳಿಯನ್ನು ಊದಬೇಕು. ನಂತರ ಹಾಗೆಯೇ ಪುನಃ ಗಾಳಿಯು ಹೊರ ಹೋಗಲು ಬಿಡಬೇಕು. ಹೀಗೆ ಬಿಟ್ಟಾಗ ಜೋರಾಗಿ ಪಾಂವ್ ಪಾಂವ್,,, ಎಂದು ಶಬ್ದ ಬರುತ್ತದೆ.


ಶಬ್ದ ಮಾನವನ ಸಂವಹನದ ಪ್ರಮುಖ ಮಾಧ್ಯಮ. ಹಾಗೇ ಹೊರಡುವ ಶಬ್ದದ ಹಿಂದಿನ ಆಂಗಿಕ ತಾಂತ್ರಿಕತೆಯು ವಿಶಿಷ್ಟವಾಗಿದೆ. ನಮ್ಮ ಗಂಟಲಿನ ಭಾಗದಲ್ಲಿ ಧ್ವನಿಪೆಟ್ಟಿಗೆ (Larynx) ಎಂಬ ಭಾಗವಿದೆ. ಇದರ ರಚನಾ ವಿನ್ಯಾಸವೇ ಶಬ್ದ ಹೊರಡಲು ಕಾರಣವಾಗಿದೆ. ಉಸಿರ್ನಾಳದಿಂದ ಹೊರಬರುವ ಗಾಳಿಯು ಮಧ್ಯದಲ್ಲಿರುವ ಧ್ವನಿತಂತು (Vocal cord) ಗಳನ್ನು ಕಂಪಿಸುವತೆ ಮಾಡುತ್ತದೆ. ಅವುಗಳ ಕಂಪನವೇ ವಿಭಿನ್ನ ರೀತಿಯ ಧ್ವನಿ ಹೊರಡುವಿಕೆಗೆ ಕಾರಣವಾಗಿದೆ. ಧ್ವನಿತಂತುಗಳಿಗೆ ಜೋಡಿಸಲ್ಪಟ್ಟಿರುವ ಮಾಂಸಖಡಗಳು ಬಿಗಿಯಾದಾಗ ಹಾಗೂ ಸಡಿಲವಾದಾಗ ಧ್ವನಿಯ ಹೊರಡುವಿಕೆಯಲ್ಲಿ ಅದರ ಶೈಲಿಯಲ್ಲಿ, ಗುಣಮಟ್ಟದಲ್ಲಿ ವ್ಯತ್ಯಾಸವಾಗಿ ವಿಭಿನ್ನ ಶಬ್ದದ ಉತ್ಪತ್ತಿಯಾಗುತ್ತದೆ. ಇದೇ ತತ್ವ ಎಲೆಗಳ, ಹಾಳೆಗಳ ಮುಂತಾದ ಪೀ ಪೀಗಳಲ್ಲಿ ಅಡಕವಾಗಿದ್ದು ಅವುಗಳನ್ನು ವಿಶಿಷ್ಟವಾಗಿ ಸುತ್ತಿ, ಮಡಚಿ ರೂಪಿಸುವಿಕೆಯ ಕಾರಣದಿಂದ ಅವುಗಳು ವಿಭಿನ್ನ ರೀತಿಯ ಶಬ್ದಗಳನ್ನು ಹೊರಡಿಸಿ ಮಕ್ಕಳಿಗೆ ಮುದ ಕೊಡುತ್ತವೆ.




ಓಝೋನ್ ಬರೀ ಪದರವಲ್ಲ;ಅದು ನಮ್ಮೆಲ್ಲರ ರಕ್ಷಾಕವಚ.

 ಓಝೋನ್ ಬರೀ ಪದರವಲ್ಲ;ಅದು ನಮ್ಮೆಲ್ಲರ ರಕ್ಷಾಕವಚ.

ಬಸವರಾಜ ಎಂ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ

 ಲಕ್ಷ್ಮೇಶ್ವರ ತಾ. ಗದಗ ಜಿಲ್ಲೆ 

ಸೆಪ್ಟೆಂಬರ್ 16 ವಿಶ್ವ ಓಝೋನ್ ಪದರ ರಕ್ಷಣಾ ದಿನ; ತನ್ನಿಮಿತ್ತ ಸಾಂದರ್ಭಿಕ ಲೇಖನ.


"ಭೂಮಿಯು ನಮ್ಮ ತಾಯಿಯಾದರೆ, ಓಝೋನ್ ನಮ್ಮ ತಂದೆ" ಎನ್ನುವ ಉಕ್ತಿಯು ಓಝೋನ್ ಪದರದ ಮಹತ್ವವನ್ನು ಸಾರುತ್ತದೆ. ಮತ್ತೊಂದು ಕಡೆ "ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ" ಎಂದು ಡಾ ಎ ಪಿ ಜೆ ಅಬ್ದುಲ್ ಕಲಾಂ ಹೇಳಿದಂತೆ ಕಷ್ಟ-ಸಂಕಷ್ಟ, ಕಷ್ಟ-ಬಾಧೆ ಎಲ್ಲಾ ಜೀವಿಗಳಿಗೆ ಬರುತ್ತದೆ ಮತ್ತು ಹೋಗುತ್ತದೆ... ಭಯವೇಕೆ? ಸಂಕಷ್ಟ ಬಂದರೆ ಅದರ  ಹಿನ್ನಲೆಯನ್ನು ಅರಿತುಕೊಳ್ಳಬೇಕು. ಅದರಂತೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈ ಭೂಮಂಡಲದ ಸಕಲ ಜೀವಿಗಳ ರಕ್ಷಣೆ ನೀಡುವ "ಓಝೋನ್" ಎಂಬ ರಕ್ಷಾ ಕವಚ ವಾಯುಮಂಡಲದಲ್ಲಿದೆ. ಆ ಪದರವೀಗ ಅಪಾಯದ ಹಂತದಲ್ಲಿದೆ. ಆದ್ದರಿಂದ ಓಝೋನ್ ಇದ್ದರೇ ನಮ್ಮೆಲ್ಲರ ಉಳಿವು, ಅದಿಲ್ಲದಿರೆ ನಮ್ಮೆಲ್ಲರ ಅಳಿವು ಶತಸಿದ್ಧ. ಹಾಗಾಗಿ ಓಝೋನ್ ಪದರವನ್ನು ರಕ್ಷಿಸಲು ಮತ್ತು ಭೂಮಿಯ ಮೇಲಿನ ಜೀವಿಗಳ ಜೀವವನ್ನು ಉಳಿಸಲು ಪ್ರತಿಜ್ಞೆ ಮಾಡುವ ಮೂಲಕ ಓಝೋನ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿ ವರ್ಷ ಸೆಪ್ಟೆಂಬರ್ 16ರಂದು "ವಿಶ್ವ ಓಝೋನ್" ದಿನವೆಂದು ಆಚರಿಸಲಾಗುತ್ತದೆ.

ಈ ದಿನದ ಉದ್ದೇಶ:

ಓಝೋನ್ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

    ಓಝೋನ್ ಇಲ್ಲದ ಭೂಮಿಯು, ಛಾವಣಿಯಿಲ್ಲದ ಮನೆಯಂತೆ.ಹೀಗಾಗಿ ಪ್ರಾಣಿಗಳು ಜೀವಿಸಲು ಮುಖ್ಯವಾದದ್ದು ಭೂಮಿ ಹಾಗೂ ಅವುಗಳ ಮೂಲಭೂತ ಘಟಕಗಳು ಆದ್ದರಿಂದ ಭೂಮಿಯನ್ನು ಭೂಮಿ ತಾಯಿಗೆ ಹೋಲಿಸುತ್ತೇವೆ. ಅದೇ ರೀತಿ ಓಝೋನ್ ಪದರ ಸಹ ಜೀವಿಸಲು ಅಷ್ಟೇ ಮುಖ್ಯ. ಆದ್ದರಿಂದ ಅದನ್ನು ತಂದೆಗೆ ಹೋಲಿಸಿದರೆ ತಪ್ಪಾಗಲಾರದು. ಜೀವಿಗಳು ಬದುಕಿ ಬಾಳಲು ಭೂಮಿ ಬೇಕು ಹಾಗೆಯೇ ಭೂಮಿಯಲ್ಲಿ ಜೀವಿಗಳು ಬದುಕುಳಿಯಲು ಓಝೋನ್ ಬೇಕೇ ಬೇಕು. ಮಳೆಗಾಲದಲ್ಲಿ ಕೊಡೆ ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಝೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ನೇರಳಾತೀತ (ಅಲ್ಟ್ರಾ ವೈಲೆಟ್) ಕಿರಣಗಳಿಂದ ರಕ್ಷಿಸುತ್ತದೆ. 

ಈ ದಿನದ ಇತಿಹಾಸ:

ಡಿಸೆಂಬರ್ 19, 1994 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 16 ರಂದು ಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಓಝೋನ್ ದಿನವನ್ನಾಗಿ  ಘೋಷಿಸಿತು. 1987 ರಲ್ಲಿ ಓಝೋನ್ ನಗರವನ್ನು ನಾಶಪಡಿಸುವ ವಸ್ತುಗಳ ಮೇಲಿನ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಸಹಿ ಹಾಕಲಾಯಿತು. ಸೆಪ್ಟೆಂಬರ್ 16, 1987 ರಂದು, ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿದವು. ಅಂದಿನಿಂದ  ಇಂದಿನವರೆಗೊ ಪ್ರತಿ ವರ್ಷ ಈ ದಿನವನ್ನು ಓಝೋನ್ ಪದರದ ಸಂರಕ್ಷಣೆಯ ವಿಶ್ವದಾದ್ಯಂತ ಜನಜಾಗೃತಿ ಮೂಡಿಸುವ ಸಲುವಾಗಿ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ. 


ಓಝೋನ್  ರಚನೆ ಮತ್ತು ಸಂಶೋಧನೆ:

ಓಝೋನ್ ಪದರವು ಹೆಚ್ಚಿನ ಓಝೋನ್ ಸಾಂದ್ರತೆಯನ್ನು ಹೊಂದಿರುವ ವಾತಾವರಣದ ಒಂದು ಭಾಗವಾಗಿದೆ. ಓಝೋನ್ ಮೂರು ಆಕ್ಸಿಜನ್  ಪರಮಾಣುಗಳಿಂದ ಮಾಡಲ್ಪಟ್ಟ ಅಣುವಾಗಿದೆ. ಓಝೋನ್ ಒಂದು ಟ್ರೈಆಕ್ಸಿಜನ್ ಅಜೈವಿಕ ಅಣುವಾಗಿದ್ದು, ಇದನ್ನು ಸಾಮಾನ್ಯವಾಗಿ O₃ ಎಂದು ಉಲ್ಲೇಖಿಸಲಾಗುತ್ತದೆ. ಹೈಡ್ರೋಕಾರ್ಬನ್‌ಗಳು ಎಂದು ಕರೆಯಲ್ಪಡುವ ನೈಟ್ರೋಜನ್  ಮತ್ತು ಆವಿಶೀಲ ಸಾವಯವ ಸಂಯುಕ್ತಗಳ ನಡುವೆ ಶಾಖ ಮತ್ತು ಸೂರ್ಯನ ಬೆಳಕಿನ ಸಮ್ಮುಖದಲ್ಲಿ ರಾಸಾಯನಿಕ ಕ್ರಿಯೆ ನಡೆದು ಓಝೋನ್ ರೂಪಗೊಳ್ಳುತ್ತದೆ.

ರಾಸಾಯನಿಕ ಧಾತುವೊಂದರ ಭಿನ್ನರೂಪವಾಗಿ ಮೊಟ್ಟಮೊದಲ ಬಾರಿಗೆ ಗುರುತಿಸಲ್ಪಟ್ಟ ಓಝೋನ್ ಒಂದು ಭಿನ್ನವಾದ ರಾಸಾಯನಿಕ ಸಂಯುಕ್ತವಾಗಿ ‘ಕ್ರಿಸ್ಟಿಯನ್ ಫ್ರೆಟ್ರಿಕ್ ಸ್ಕಾನ್ ಬೀನ್’ ಎಂಬಾತನಿಂದ 1840 ರಲ್ಲಿ ಸಂಶೋಧಿಸಲ್ಪಟ್ಟಿತ್ತು. ಮಿಂಚಿನ ಬಿರುಗಾಳಿಗಳಲ್ಲಿನ ಒಂದು ವಿಲಕ್ಷಣವಾದ ವಾಸನೆಗೆ ಉಲ್ಲೇಖಿಸಲಾಗುವ “ಓಝೀನ್”(ವಾಸನೆ ಬೀರುವುದು) ಎಂಬ ಗ್ರೀಕ್ ಕ್ರಿಯಾಪದದ ಹೆಸರನ್ನು ಅವನು “ಓಝೋನ್” ಎಂದು ಹೆಸರಿಸಿದ. ಓಝೋನ್ ಗೆ ಸಂಬಂಧಿಸಿದ ಸೂತ್ರವಾದ O3 (ಆಮ್ಲಜನಕದ 3 ಪರಮಾಣುಗಳು) ಎಂಬುದು "ಜಾಕ್ವೆಸ್-ಲೂಯಿಸ್ ಸೋರೆಟ್" ಎಂಬಾತನಿಂದ 1865 ರಲ್ಲಿ ನಿರ್ಣಯಿಸಲ್ಪಡುವವರೆಗೆ ಮತ್ತು ಸ್ಕಾನ್ ಬೀನ್ ಎಂಬಾತನಿಂದ 1867 ರಲ್ಲಿ ಧೃಢೀಕರಿಸಲ್ಪಡುವವರೆಗೆ ಈ ವಿಷಯ ತೀರ್ಮಾನಿಸಲ್ಪಟ್ಟಿರಲಿಲ್ಲ ಎಂದು ವಿಷಾದನೀಯ ಸಂಗತಿ. 


ಓಝೋನ್ ಪದರಿನ ಪಾತ್ರವೇನು ಅದು ಎಲ್ಲಿದೆ..? 

ಆಕ್ಸಿಜನ್ ನ 3 ಪರಮಾಣುಗಳು ಸೇರಿ ಓಝೋನ್(O3) ಆಗುತ್ತದೆ. ವಾತಾವರಣದ ಮೇಲೆ ಭೂಮಿಯನ್ನು ಆವರಿಸುವ ಈ ಪದರವು ಅಪಾಯಕಾರಿಯಾದ ಸೂರ್ಯನಿಂದ ಬರುವ ಅತಿ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವುದರ ಮೂಲಕ ಜೀವಸಂಕುಲದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಭೂಮಿಯ ಮೇಲೆ ಸುಮಾರು 15 ಕಿ.ಮೀ. ದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಓಝೋನ್ ಪದರ ಜರಡಿಯಂತೆ ಭೂಮಿಯನ್ನು ಆವರಿಸಿದೆ.

ಓಝೋನ್ ಪದರಿನ ಮುಖ್ಯ ಕಾರ್ಯವೇನು..?

ಸೂರ್ಯನಿಂದ ಬಂದ ಶೇ 97-98 ರಷ್ಟು ಅತಿನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರ ಭೂಮಿ ಮೇಲೆ ಬೀಳುವಂತೆ ಮಾಡುತ್ತದೆ. ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿರುವ ಆಮ್ಲಜನಕದ(02)  ಮೇಲೆ ಬಿದ್ದಾಗ ಆಮ್ಲಜನಕ 2 ಪರಮಾಣುಗಳಾಗಿ (O+O) ಬೇರ್ಪಡುತ್ತವೆ. ಬೇರ್ಪಡದೇ ಇದ್ದ ಆಮ್ಲಜನಕ (O2) ಜೊತೆ ಮತ್ತೊಂದು ಪರಮಾಣು ಸಂಯೋಗವಾಗಿ ಓಝೋನ್ (O3) ಆಗುತ್ತದೆ.

ಓಝೋನ್ ಪದರ ನಾಶವಾಗಲು ಕಾರಣಗಳೇನು..? 

* ಶೈತ್ಯಕಾರಿಗಳಲ್ಲಿ ಸಾಮಾನ್ಯವಾಗಿ ಬಳಸುವ ಕ್ಲೋರೋ ಫ್ಲೋರೋ ಕಾರ್ಬನ್ (CFC) ಗಳನ್ನು ಒಂದು ಅಣುವು ಓಝೋನ್ ನ 1,00,000 ಅಣುಗಳನ್ನು ನಾಶ ಮಾಡುತ್ತದೆ. ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.  

*ಬಾಹ್ಯಕಾಶ ಸಂಶೋಧನೆಯಲ್ಲಿ ಹಾಗೂ ಉಪಗ್ರಹಗಳ ಉಡಾವಣೆಗೆ ಹಾರಿ ಬಿಡುವ ರಾಕೆಟ್ ಗಳಿಂದ  ಓಝೋನ್ ಪದರಿಗೆ ಹಾನಿಯಾಗುತ್ತದೆ. 

*ಸೌಂದರ್ಯವರ್ಧಕಗಳ ಅತಿಯಾದ ಬಳಕೆ ಹಾಗೂ ಇನ್ನೂ ಮುಂತಾದವುಗಳಿಂದ  ಓಝೋನ್ ಪದರ ಕ್ಷೀಣಿಸಲು ಕಾರಣಗಳಾಗಿವೆ.

ಈ ಪದರಿನ ನಾಶದಿಂದ ಪರಿಣಾಮಗಳೇನು..? 

  • ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಗಳು ದುರ್ಬಲಗೊಂಡು, ಅಕಾಲಿಕ ಕಣ್ಣಿನ ಪೊರೆ ಬೆಳೆಯುವುದು ಮತ್ತು ಚರ್ಮದ ಕ್ಯಾನ್ಸರ್ ಗೆ ಹೆಚ್ಚು ಒಳಗಾಗುತ್ತೇವೆ. 
  • ಭೂ ತಾಪಮಾನ ಏರಿಕೆ. 
  • ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇರುತ್ತದೆ. 
  • ಜೀವಹಾನಿ, ಆರ್ಥಿಕ ದುಷ್ಪರಿಣಾಮಗಳು, ಸಾಮಾಜಿಕ ಸ್ಥಿತ್ಯಂತರಗಳು ಪ್ರಪಂಚದಲ್ಲಿ ಉಂಟಾಗುತ್ತವೆ ಅವಾಗ ಈ ಕಷ್ಟಕರ ಮತ್ತು ಸಂಕೀರ್ಣ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. 
  • ಓಝೋನ್ ಸವಕಳಿಗೆ ಕಾರಣವಾಗುವ ಅನಿಲಗಳ ಸ್ವಭಾವದಿಂದಾಗಿ ಅವುಗಳ ರಾಸಾಯನಿಕ ಪರಿಣಾಮಗಳು 50 ರಿಂದ 100 ವರ್ಷಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಓಝೋನ್ ಪದರ ರಕ್ಷಣೆ ಹೇಗೆ..? 

  • ಕೃಷಿಯಲ್ಲಿ ಕೀಟನಾಶಕ ಬಳಸುತ್ತಿರುವ ಮಿಥೈಲ್ ಬ್ರೋಮೈಡ್ ಗೆ ನಿಷೇಧ ಹೇರಬೇಕು. 
  • ಅವಶ್ಯವಿದ್ದಾಗ ಮಾತ್ರ ವಾಹನ ಬಳಕೆ ಮಾಡಬೇಕು. 
  • ಅರಣ್ಯನಾಶ ತಡೆಗಟ್ಟಿ ಹಸಿರನ್ನು ಬೆಳೆಸಬೇಕು. 
  • ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು. 
  • ರೆಫ್ರೀಜರೇಟರ್ ನಲ್ಲಿ ಹಾಗೂ ಕೋಲ್ಡ್ ಹೌಸ್ ಗಳಲ್ಲಿ  'ಸಿ ಎಫ್ ಸಿ'ಯ ಬದಲು  ಹೈಡ್ರೋ ಕ್ಲೋರೋ ಫ್ಲೋರೋ ಕಾರ್ಬನ್ (Hydro  Chloro Floro Carbons-HCFC’s)ರಾಸಾಯನಿಕ ಉಪಯೋಗಿಸಬೇಕು.
  • ಆಹಾರದ ನಷ್ಟ, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಬೇಕಾಗಿದೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಕೆಲಸ ಆಗಬೇಕಿದೆ ಹಾಗೂ
  • ಸೌಂದರ್ಯವರ್ಧಕಗಳ ಬಳಕೆ ಇತಿಮಿತಿಯಲ್ಲಿ ಬಳಸಬೇಕು ಅಥವಾ ಬಳಸಲೇಬೇಡಿ. 

ಚೇತರಿಸಿಕೊಳ್ಳುತ್ತಿದೆ ಓಝೋನ್:

ಒಂದು ವೈಜ್ಞಾನಿಕ ಅಧ್ಯಯನದ ವರದಿ ಪ್ರಕಾರ,2018ರ ಅಂತ್ಯಕ್ಕೆ ಪದರದ ಹಾನಿಯ ಕುರಿತಾದ ಇತ್ತೀಚಿನ  ಓಝೋನ್ ಪದರದ ಹಾನಿಗೊಳಗಾದ ಭಾಗಗಳು 2000ನೇ ವರ್ಷದಿಂದೀಚೆಗೆ ಪ್ರತಿ ದಶಕಕ್ಕೆ ಶೇ 1-3ರ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿದೆ. ಯೋಜಿತ ಪ್ರಮಾಣದಲ್ಲಿ ಚೇತರಿಕೆ ಮುಂದುವರಿದರೆ ಉತ್ತರಾರ್ಧಗೋಳ ಮತ್ತು ಸಮವಿಭಾಜಕ ರೇಖೆಯ ಮೇಲಿರುವ ಓಝೋನ್ 2030ರ ವೇಳೆಗೆ ಸಂಪೂರ್ಣವಾಗಿ ಸರಿಯಾಗಲಿದೆ. ಇದೇ ಪ್ರಮಾಣದಲ್ಲಿ ಚೇತರಿಕೆ ಮುಂದುವರಿದರೆ ದಕ್ಷಿಣಾರ್ಧಗೋಳವು 2050ರ ದಶಕದಲ್ಲಿ ಮತ್ತು ಧ್ರುವ ಪ್ರದೇಶಗಳಲ್ಲಿ 2060ರ ವೇಳೆಗೆ ಓಝೋನ್ ಪದರವು ಚೇತರಿಕೆ ಕಾಣಲಿದೆ ಎಂದು ವೈಜ್ಞಾನಿಕ ಅಧ್ಯಯನದ ವರದಿ ಹೇಳಿದೆ. 

ಒಟ್ಟಾರೆಯಾಗಿ  ಪ್ರಪಂಚದ ಎಲ್ಲಾ ಜನರು ಒಗ್ಗೂಡಿ ಓಝೋನ್ ಪದರ ರಕ್ಷಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆಯಾಗಿಸುವಂತೆ ಮಾಡುವುದು ನಮ್ಮೆಲರ ಹೊಣೆಯಾಗಬೇಕಾಗಿದೆ."ಓಝೋನ್ -ಕೇವಲ ಒಂದು ಪದರವಲ್ಲ; ಆದರೆ ಅದು ನಮ್ಮ ಭೂಮಿಯ ಮೇಲಿನ ಜೀವಿಗಳ ರಕ್ಷಕ" ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಅಂದಾಗ ಮಾತ್ರ ನಾವು ಈ ಗ್ರಹದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸೋಣ. ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟಿದ್ದಾರೆಯೋ ಅದೇ ರೀತಿ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡೋಣ.ಈ ನಿಟ್ಟಿನಲ್ಲಿ ಪ್ರಯತ್ನಿಸಿ ಯಶಸ್ವಿಗಳಾಗೋಣ.ಈ ವಿಶ್ವ ಓಝೋನ್ ದಿನದಂದು ಓಝೋನ್ ಪದರವನ್ನು ರಕ್ಷಿಸಲು ಮತ್ತು ಭೂಮಿಯ ಮೇಲಿನ ಜೀವವನ್ನು ಉಳಿಸಲು ಪ್ರತಿಜ್ಞೆ ಮಾಡೋಣ..! ಓಝೋನ್ ಉಳಿಸಿ, ಭೂಮಿಯನ್ನು ಉಳಿಸೋಣ.

ಕೊನೆಯ ಮಾತು:

"ಓಝೋನ್ ನಿಮ್ಮ ಹೃದಯದಂತಿದೆ, ಅದು ಒಡೆದರೆ, ನೀವು ಭೂಮಿಯ ಮೇಲೆ ಇಲ್ಲದಂತಾಗುತ್ತೀರಿ ಹುಷಾರ್...! "

ಓ ಓಝೋನ್‌ !! ಏನು ನಿನ್ನ ಮಹಿಮೆ?