ವಿಜ್ಞಾನ ಲೋಕದ ನ್ಯೂಕ್ಲಿಯಸ್‌ ಈತ!!!

 ವಿಜ್ಞಾನ ಲೋಕದ ನ್ಯೂಕ್ಲಿಯಸ್‌ ಈತ!!! 

ರಾಮಚಂದ್ರ ಭಟ್‌ ಬಿ.ಜಿ

ಅದೊಂದು ದಿನ ತರಗತಿಯಲ್ಲಿ ಪರಮಾಣು ರಚನೆಯ ಬಗ್ಗೆ ತಿಳಿಸಿಕೊಡುತ್ತಿದ್ದೆ.  ಅನೀರೀಕ್ಷಿತವಾಗಿ” ಸರ್‌ ಕಣ್ಣಿಗೇ ಕಾಣದ ಪರಮಾಣುವಿನಲ್ಲಿ ಅದಕ್ಕಿಂತಲೂ ಅತಿಚಿಕ್ಕ ಬೀಜಕೇಂದ್ರ ಇರೋದು ಹೇಗೆ ಗೊತ್ತಾಗುತ್ತೆ ಸರ್‌? ಇದನ್ನು ನಾವು ನಂಬೋದು ಹೇಗೆ ಸರ್‌?” ಎಂಬ ಕುತೂಹಲದ ಪ್ರಶ್ನೆಯ ಕೂರಂಬೊಂದು ನನ್ನೆಡೆಗೆ ತೂರಿ ಬಂತು. ಜೆ.ಜೆ.ಯ ಕತೆ ಮುಂದುವರೆದು ಆತನ ಅತಿ ಪ್ರಿಯಶಿಷ್ಯನೆನಿಸಿದ ಮತ್ತೊಬ್ಬ ಪ್ರತಿಭೆಯ ಜೀವನ ದರ್ಶನಕ್ಕೆ ಕಾರಣವಾಯಿತು.

"ಪರಮಾಣು ಭೌತಶಾಸ್ತ್ರದ ಪಿತಾಮಹ" ಎಂದೇ ಹೆಸರಾದ, "ಮೈಕೆಲ್ ಫ್ಯಾರಡೆಯ ನಂತರದ ಶ್ರೇಷ್ಠ ಪ್ರಯೋಗತಜ್ಞ (experimental physicist) " ಎಂಬ ಹೊಗಳಿಕೆಗೆ ಪಾತ್ರರಾದ ಇವರು ವಿಕಿರಣಪಟುತ್ವದಿಂದ ಧಾತುಗಳು ದ್ರವ್ಯಾಂತರಣಗೊಳ್ಳುತ್ತವೆ ವಿಘಟನೆ (disintegrate)ಗೊಳ್ಳುತ್ತವೆ ಎನ್ನುವುದನ್ನು ಕಂಡುಹಿಡಿದರು. ವಿಕಿರಣಪಟು ಧಾತುಗಳ ವಿಶಿಷ್ಟ ಗುಣವಾದ ಅರ್ಧಾಯುಷ್ಯವನ್ನು ಕಂಡುಹಿಡಿದಿದ್ದು ಕೂಡ ಇದೇ ಮಹಾನ್‌ ವಿಜ್ಞಾನಿ. ಇದರಿಂದಾಗಿ ಭೂಮಿಯ ಆಯಸ್ಸನ್ನು ನಿಖರವಾಗಿ ಲೆಕ್ಕಾಚಾರ ಹಾಕುವುದು ಸಾಧ್ಯವಾಯಿತು!! ಅಚ್ಚರಿ ಎಂದರೆ ಇದಕ್ಕಾಗಿ ಅವರು ಬಳಸಿದ್ದು ಸಿಗರೇಟ್ ಪ್ಯಾಕ್‌ ಮತ್ತು ಟಿನ್ ಕ್ಯಾನ್‌ಗಳು ಎನ್ನುವುದೇ ಅಚ್ಚರಿ!!! ಇವೆಲ್ಲವುಗಳಿಗೆ ಮುಕುಟವಿಟ್ಟಂತಹ ಎಂದರೆ ನ್ಯೂಕ್ಲಿಯಸ್‌ನ ಆವಿಷ್ಕಾರ. ಇವರ ಪರಿಚಯ ಈಗ ನಿಮಗೆ ಸಿಕ್ಕಿರಬೇಕು. ಅವರೇ ಉತ್ಕೃಷ್ಟ ಸಂಶೋಧನೆಗಳ ಸರದಾರ ಎನಿಸಿದ ರುದರ್ ಫೋರ್ಡ್.

 ಇಂತಹ ಅದ್ಭುತ ವಿಜ್ಞಾನಿಯ ಜೀವನಯಾನ ಅತ್ಯಂತ ಕುತೂಹಲಕಾರವಾದದ್ದು, ಅದ್ಭುತವಾದದ್ದು ರೋಚಕವಾದುದ್ದು ಮತ್ತು ಸ್ಫೂರ್ತಿದಾಯಕ ಎನಿಸುವಂತದ್ದು.

   ಅರ್ನೆಸ್ಟ್ ರುದರ್ ಫೋರ್ಡ್ 1871 ರ ಆಗಸ್ಟ್ 30 ರಂದು ನ್ಯೂಜಿಲ್ಯಾಂಡ್‍ನ ನೆಲ್ಸನ್ ಎಂಬ ಊರಿನಲ್ಲಿ ಜನಿಸಿದರು. 12 ಮಕ್ಕಳ ದೊಡ್ಡ ಕುಟುಂಬದಲ್ಲಿ ಹುಟ್ಟಿದ ರುದರ್ಫೋರ್ಡ್ ತನ್ನ ತಂದೆಗೆ ನಾಲ್ಕನೆಯ ಮಗು. ತಂದೆ ಜೇಮ್ಸ್ ರುದರ್ ಫೋರ್ಡ್, ಸ್ಕಾಟಿಶ್ ಬಡ ರೈತ. ತಾಯಿ ಮಾರ್ತಾ ರುದರ್ ಫೋರ್ಡ್, ಇಂಗ್ಲಿಷ್ ಶಿಕ್ಷಕಿ. ಬಾಲ್ಯದಲ್ಲಿ ತುಂಟನಾಗಿದ್ದ ಹಳ್ಳಿಯ ಬಾಲಕ ಒರಟನೂ ಹೌದು. ಆತನಿಗೆ ರಗ್ಬಿ ಮತ್ತು ಮೀನು ಹಿಡಿಯುವುದೆಂದರೆ ಪಂಚಪ್ರಾಣ.  

ಜನನಿ ತಾನೇ ಮೊದಲ ಗುರುವು ಎಂಬಂತೆ, ತಾಯಿಯೇ ಆತನ ಮೊದಲ ಗುರು.ಆತನಿಗೆ ಪದೇ ಪದೇ ನೀಡುತ್ತಿದ್ದ ಉಪದೇಶ ಜ್ಞಾನವೇ ಶಕ್ತಿ ಎನ್ನುವುದು. ಮೊದಲಿನಿಂದಲೂ ಆತ ಕಲಿಕೆಯಲ್ಲಿ ಮುಂದಿದ್ದ.  ಹಣವಿಲ್ಲದ  ನಾವು ಸದಾ ಆಲೋಚನೆಯನ್ನೇ ಮಾಡಬೇಕು” ಎಂದು ಹೇಳುತ್ತಿದ್ದ. ಇದು ಆತನ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಬಡತನದ ಜೊತೆಗಿನ ಈ ತುಂಬು ಕುಟುಂಬದ ಬದುಕು  ಹಣವಿಲ್ಲದಿದ್ದರೂ ಬದುಕುವುದನ್ನು ಕಲಿಸಿತು. ಹೀಗಾಗಿ ಶಿಷ್ಯವೇತನವನ್ನೇ ಅವಲಂಬಿಸಿ ಮಾಸ್ಟರ್ ಡಿಗ್ರಿಯವರೆಗೂ ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ.

ಇಂಥ ರುದರ್‌ಫೋರ್ಡರ ಜೀವನಕ್ಕೆ ತಿರುವು ಸಿಕ್ಕಿದ್ದು ಜುಲೈ 1895ರಲ್ಲಿ ಮೆಕ್ಲಾರೆನ್ ಎಂಬಾತ ಮದುವೆಯಾದಾಗ!!!  ಆ ಮದುವೆಗೂ ಈ ರುದರ್ ಫೋರ್ಡರ ಬದುಕಿಗೂ ಏನು ಸಂಬಂಧ? ಎತ್ತಣ ಮಾಮರ? ಎತ್ತಣ ಕೋಗಿಲೆ? ಎಂದು ಯೋಚಿಸುತ್ತಿದ್ದೀರಾ? ಅದು ಮೆಕ್ಲಾರೆನ್‌ರ ದುರಾದೃಷ್ಟವೋ ರುದರ್ಫೋರ್ಡರ ಅದೃಷ್ಟವೋ ಹೇಳಲಾಗದು. ಮೆಕ್‌ಲಾರೆನ್‌ಗೆ ವಿದೇಶದಲ್ಲಿ ಅಧ್ಯಯನಕ್ಕೆ ಹೋಗಲು ಸ್ಕಾಲರ್ಶಿಪ್ ದೊರಕಿತ್ತು. ಮದುವೆಯಿಂದಾಗಿ ಈ ಶಿಷ್ಯವೇತನ  ಅಮಾನ್ಯಗೊಂಡಿತು!!! ಆಗ 24ರ ಹರೆಯದ ರುದರ್ ಫೋರ್ಡರು 1894ರಲ್ಲಿ 1851ರಾಯಲ್ ಎಕ್ಸಿಬಿಷನ್ ರಿಸರ್ಚ್ ಫೆಲೋಶಿಪ್ ( 1851 Exhibition Science Scholarship) ಶಿಷ್ಯವೇತನಕ್ಕೆ ಆಯ್ಕೆಯಾದರು. ಈ ಸುದ್ದಿ ಬಂದಾಗ  ರುದರ್ ಫೋರ್ಡರು ಹೊಲದಲ್ಲಿ ಸನಿಕೆಯಿಂದ ಆಲೂಗಡ್ಡೆ ಕೀಳುತ್ತಾ ಇದು ನಾನು ತೆಗೆಯುವ ಕೊನೆಯ ಆಲೂಗಡ್ಡೆ ಎಂದು ಜೋರಾಗಿ ಕಿರುಚುತ್ತ ಹೇಳಿದರಂತೆ!!

ಅತ್ಯಂತ ಪ್ರತಿಭಾವಂತನಾಗಿದ್ದ ಈತನಿಗೆ ಇಂಜಿನಿಯರಿಂಗ್ ವೃತ್ತಿ ಕೈಬೀಸಿ ಕರೆಯುತ್ತಿತ್ತು. ಆದರೆ ಇಂಜಿನಿಯರಿಂಗ್ ನಲ್ಲಿ ಆತನಿಗೆ ಆಸಕ್ತಿಯೇ ಇರಲಿಲ್ಲ. ಆಗ ನ್ಯೂಜಿಲ್ಯಾಂಡ್ ದೇಶದಲ್ಲಿದ್ದ ಇಂಜಿನಿಯರ್‌ಗಳ ಸಂಖ್ಯೆ ಕೇವಲ 126!!! ಮನಸ್ಸು ಮಾಡಿದ್ದಿದ್ದರೆ ಇಂಜಿನಿಯರ್ ಆಗಿ ಕೈ ತುಂಬಾ ಸಂಪಾದನೆ ಮಾಡಬಹುದಾಗಿತ್ತು. ಇದನ್ನು ಒಲ್ಲದ ರುದರ್ ಫೋರ್ಡ್ ಶಾಲಾ ಶಿಕ್ಷಕನಾಗಲು ಬಯಸಿದರು!!! ಆದರೆ ನಿಯತಿ ಬೇರೆಯದೇ ಆಗಿತ್ತು. ಶಿಕ್ಷಕನಾಗಿ  ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ತರುವುದರಲ್ಲಿ ಆತ ವಿಫಲನಾದ!! ತರಲೆ ವಿದ್ಯಾರ್ಥಿಗಳೊಂದಿಗಿನ ಸಮಸ್ಯೆಯಿಂದ ಬೇಸತ್ತು ಕೊನೆಗೆ ಈ ವೃತ್ತಿಗೇ ಶರಣು ಹೊಡೆದ.

ಕಾಲೇಜು ಹಾಸ್ಟೆಲ್ ನಲ್ಲಿ ಇರುತ್ತಿದ್ದ ರುದರ್ ಫೋರ್ಡ್ ಮೇರಿ ನ್ಯೂಟನ್ ಎಂಬ ತರುಣಿಯೊಂದಿಗೆ ಅನುರಕ್ತನಾದ. ಈಕೆ ಕಾಲೇಜಿನ ಬೋರ್ಡಿಂಗ್ ಹೌಸಿನ ಒಡತಿಯ ಮಗಳು. ಈಕೆಯ ಪ್ರೇಮಪಾಶದಿಂದ ಬಂಧಿತನಾದ ಚಿಗುರು ಮೀಸೆಯ ಚೆಲುವಾಂತ ಚೆನ್ನಿಗ ರುದರ್ ಫೋರ್ಡ್ 1894ರಲ್ಲಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಆದರೆ ಆಕೆಯಿಂದ ದೊರೆತ ಉತ್ತರ ಆತನ ಕೋಮಲ ಹೃದಯವನ್ನು ಹಿಂಡಿ ಹಿಪ್ಪೆ ಮಾಡಿತು. ಮೇರಿಗೆ ತನ್ನಿನಿಯನ ಮೇಧಾ ಶಕ್ತಿಯಲ್ಲಿ ಅಪಾರ ನಂಬಿಕೆ ಇತ್ತು. ತನ್ನಿಂದಾಗಿ ಆತನ ಶೈಕ್ಷಣಿಕ ಭವಿಷ್ಯ ಕಮರುವುದು ಆಕೆಗೆ ಒಂದಿನಿತೂ ಇಷ್ಟವಿರಲಿಲ್ಲ. " ಮದುವೆಯ ಬಂಧಕ್ಕೆ ಒಳಗಾಗುವುದು ಮೂರ್ಖತನ " ಎಂದು ಹೇಳಿ ಆತನನ್ನು ಮದುವೆಯಾಗಲು ನಿರಾಕರಿಸಿದಳು!!! ಇದು ಆತನ ಭವಿಷ್ಯಕ್ಕೆ ನೂತನ ಅವಕಾಶವೊಂದರ ಬಾಗಿಲು ತೆರೆಸಿತು. ತನ್ನ ಪ್ರೇಮ ಪ್ರಕರಣ ಹೀಗೆ ವಿಫಲಗೊಂಡದ್ದು ಆತನಿಗೆ ಇನ್ನಿಲ್ಲದ ನೋವು ತಂದಿತು. ಪರಿಪರಿಯಾಗಿ ಬೇಡಿದರೂ ಮೇರಿ ಒಪ್ಪಲಿಲ್ಲ. ಕೊನೆಗೆ ನಿನ್ನ ಶಿಕ್ಷಣ ಪೂರ್ಣಗೊಂಡು ಉತ್ತಮ ಉದ್ಯೋಗ ದೊರೆಯುವವರೆಗೂ ನಾನು ನಿನಗಾಗಿಯೇ ಕಾಯುತ್ತೇನೆ ಎನ್ನುವ ಭರವಸೆಯನ್ನು ಕೊಟ್ಟಳು. ಅಂತೂ ಆಶಾಕಿರಣವೊಂದು ಚಿಗುರಿತು. ತನ್ನ ಸ್ವಾರ್ಥಕ್ಕಿಂತ ಇನಿಯನ ಬದುಕಿನ ಯಶಸ್ಸಿಗೆ ಆಕೆ ಮಾಡಿದ ತ್ಯಾಗ ಮರೆಯಲಾಗದ್ದು. ಪ್ರಪಂಚಕ್ಕೆ ಒಬ್ಬ ಅದ್ಭುತ ವಿಜ್ಞಾನಿಯನ್ನು ನೀಡಲು ಹೇತುವಾಯ್ತು. ಮಂದೆ ರುದರ್ಫೋರ್ಡ್‌ ಏರಿದ ಎತ್ತರವನ್ನು ಗಮನಿಸಿದರೆ ತ್ಯಾಗಮಯಿ ಮಮತಾಮಯಿ ಮೇರಿಯ ಅಪ್ಪಟ ಚಿನ್ನದಂತಹ ಗುಣ ಎಷ್ಟು ಉದಾತ್ತವಾಗಿತ್ತು ಎನ್ನುವುದು ವೇದ್ಯವಾಗುತ್ತದೆ. 

  ಈ ಶಿಷ್ಯವೇತನದಿಂದಾಗಿ ಆತ ಪ್ರಪಂಚದ ಯಾವುದೇ ಮೂಲೆಗೂ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಅವಕಾಶವೊಂದು ಲಭ್ಯವಾಯಿತು. ಈ ಅವಕಾಶವೇ ಆತನನ್ನು ಕೇಂಬ್ರಿಡ್ಜ್ ನ  ಕ್ಯಾವೆಂಡಿಷ್ ಲ್ಯಾಬೋರೇಟರಿಯ ಮುಖ್ಯಸ್ಥನಾಗಿದ್ದ ಮಹಾನ್ ವಿಜ್ಞಾನಿ ಜೆ.ಜೆ. ಥಾಮ್ಸನ್ ರವರ ಸಂಪರ್ಕಕ್ಕೆ ಬರುವಂತೆ ಮಾಡಿತು. ಜೆ ಜೆ ಯವರ ಸಾಧನೆಯನ್ನು ನನ್ನ ಹಿಂದಿನ ಲೇಖನದಲ್ಲಿ ಓದಿದ್ದೀರಿ. ಪ್ರೊಫೆಸರ್ ಜೆ.ಜೆ.ಯವರ ಪ್ರೀತಿ, ಗೌರವಗಳಿಗೆ ಪಾತ್ರನಾದ ರುದರ್‌ಫೋರ್ಡರ ಬದುಕಿನ ಗ್ರಾಫ್ ಏರು ಗತಿಯಲ್ಲಿ ಸಾಗುವುದರಲ್ಲಿತ್ತು. ರುದರ್ಫೋರ್ಡರಿಗೆ ಜೆ.ಜೆ.ಯವರನ್ನು ನೋಡುತ್ತಿದ್ದಂತೆ, “ ಈತ ಪಳೆಯುಳಿಕೆಯಂತಿಲ್ಲ!! ಸದಾ ಕ್ರಿಯಾಶೀಲ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ನಿಜವಾದ ಗುರು ಎನ್ನುವ ಭಾವೊಂದು ಮನಸ್ಸಿನಲ್ಲಿ ಮೂಡಿತಂತೆ!!. ಬಹುಶಃ ರಾಮಕೃಷ್ಣ ಪರಮಹಂಸರನ್ನು ವಿವೇಕಾನಂದರು ಪರೀಕ್ಷಿಸಿದಂತೆ ಈತನೂ ತನ್ನ ಗುರುವಿನ ವ್ಯಕ್ತಿತ್ವವನ್ನು ಪರೀಕ್ಷಿಸಿದನೇನೋ? 

ಸರಿಯಾದ ಸಮಯಕ್ಕೆ ಇಂಗ್ಲೆಂಡಿಗೆ ಬಂದ ರುದರ್ ಫೋರ್ಡ್ನ್ನು ಅವಕಾಶಗಳ ಮಹಾಪೂರವೇ ಕಾಯುತ್ತಿತ್ತು. ಆಗ ತಾನೇ ಕ್ಷ-ಕಿರಣದ ಆವಿಷ್ಕಾರವಾಗಿತ್ತು. ವಿಲಿಯಂ ಕ್ರೂಕ್ಸ್ ರವರ ನಿರ್ವಾತ ನಳಿಕೆಗಳನ್ನು ಅತ್ಯುಚ್ಛ ಶಕ್ತಿಯ ಪ್ರಬಲ ಕ್ಷ-ಕಿರಣಗಳನ್ನು ಉತ್ಪಾದಿಸಲು ಬಳಸುತ್ತಿದ್ದರು. ರುದರ್‌ ಇದನ್ನು ಬಳಸಿ ರೇಡಿಯೋ ಸಿಗ್ನಲ್ಳ ಬಗ್ಗೆ ಅಧ್ಯಯನ ನಡೆಸಲಾರಂಭಿಸಿದರು. ಥಾಮ್ಸನ್‌ನ ಪ್ರೋತ್ಸಾಹದೊಂದಿಗೆ, ರುದರ್‌ಫೋರ್ಡ್ ನಿಸ್ತಂತು ಸಂವಹನಕ್ಕಾಗಿ ರೇಡಿಯೋ ತರಂಗಗಳನ್ನು ಉತ್ಪಾದಿಸಿದರು. 1896 ರಲ್ಲಿ ಬ್ರಿಟಿಷ್ ಅಸೋಸಿಯೇಷನ್‌ನ ಸಭೆಯಲ್ಲಿ ತನ್ನ ಫಲಿತಾಂಶಗಳನ್ನು ಪ್ರಸ್ತುತಪಡಿಸಿದಾಗ 800 ಮೀ ಸಾಗುವ ರೇಡಿಯೊ ತರಂಗಗಳನ್ನು ಪ್ರದರ್ಶಿಸಿದರೆ, ಗುಗ್ಲಿಯೆಲ್ಮೊ ಮಾರ್ಕೋನಿರೇಡಿಯೊ ತರಂಗಗಳು ಸುಮಾರು 16 ಕಿಮೀವರೆಗೆ ಸಂದೇಶವನ್ನು ಕಳುಹಿಸಿದವು. ಇದು ಮುಂದೆ ಮಾರ್ಕೊನಿಗೆ ನೊಬೆಲ್ ಪ್ರಶಸ್ತಿ ತಂದು ಕೊಟ್ಟಿತು.

 ಅದೇ ಸಂದರ್ಭದಲ್ಲಿ ಹೆನ್ರಿ ಬೆಕ್ವೆರೆಲ್ ಯುರೇನಿಯಂನಂತಹ ಭಾರಧಾತುವು ನಿರ್ದಿಷ್ಟ ವಿಕಿರಣಗಳನ್ನು ಹೊರಹೊಮ್ಮಿಸುವ ವಿದ್ಯಮಾನವಾದ ವಿಕಿರಣ ಪಟುತ್ವವನ್ನು ಆಕಸ್ಮಿಕವಾಗಿ ಕಂಡುಹಿಡಿದರು. 1897ರಲ್ಲಿ ಫ್ರಾನ್ಸ್‌ನಲ್ಲಿದ್ದ ಪೋಲ್ಯಾಂಡ್ ದೇಶದ ಮೇರಿ ಕ್ಯೂರಿಯೂ ಯುರೇನಿಯಂ ಧಾತುವನ್ನು ಅಧ್ಯಯನ ಮಾಡುತ್ತಿದ್ದರು. ಮೇರಿಕ್ಯೂರಿಯವರು ಥೋರಿಯಂನಿಂದಲೂ  ಕೂಡ ಇದೇ ಬಗೆಯ ವಿಕಿರಣಗಳನ್ನು ಹೊರಹೊಮ್ಮುವುದನ್ನು ಕಂಡುಕೊಂಡರು. ಇದರಿಂದ ಉತ್ತೇಜಿತರಾದ ರುದರ್ಫೋರ್ಡ್‌ರವರ ಆಸಕ್ತಿ ಆ ಕಡೆ ಹರಿಯಿತು. ಈ ವಿಕಿರಣಪಟು ವಿಕಿರಣಗಳು ಅನಿಲಗಳ ಮೇಲೆ ಯಾವ ಪ್ರಭಾವ ಬೀರುತ್ತವೆ ಎನ್ನುವ ಕುರಿತು ತಮ್ಮ ಅಧ್ಯಯನವನ್ನು ಮುಂದುವರಿಸಿದ್ದರು. 1998ರ ಸೆಪ್ಟೆಂಬರ್ 1 ರಂದು ರುದರ್ ಫೋರ್ಡರು ತಮ್ಮ ಸಂಶೋಧನೆಯನ್ನು ಪ್ರಕಟಿಸಿದರು. ವಿಕಿರಣಪಟು ಧಾತುಗಳಿಂದ ಹೊರಹೊಮ್ಮುತ್ತಿದ್ದ ಎಲ್ಲ ವಿಕಿರಣಗಳ ಗುಣ ಸ್ವಭಾವಗಳು ಒಂದೇ ತೆರನಾಗಿರಲಿಲ್ಲ. ಅವುಗಳಲ್ಲಿ ಭಾರವಾದ ಆಲ್ಫಾಕಿರಣಗಳು ಮತ್ತು ಹಗುರವಾದ ಬೀಟಾ ಕಿರಣಳೆಂಬ ೨ ವಿಧಗಳನ್ನು ಗುರುತಿಸಿದರು. ಅಲ್ಫಾ ಕಣಗಳು ಅತಿ ತೆಳುವಾದ ಹಾಳೆಗಳ ಮೂಲಕ ಹಾದುಹೋದರೆ ಬೀಟಾ ಕಣಗಳು ಹೆಚ್ಚಿನ ದಪ್ಪ ಹಾಳೆಗಳ ಮೂಲಕ ಹಾದು ಹೋಗುತ್ತದೆ ಎನ್ನುವುದನ್ನು ಕಂಡುಕೊಂಡರು. ಮರು ವರ್ಷವೇ ಪಾಲ್ ವಿಲ್ಲಾರ್ಡ್ ಎನ್ನುವರು ಇನ್ನೂ ಹೆಚ್ಚಿನ ಶಕ್ತಿಯ ವಿಕಿರಣಗಳನ್ನು ಸಂಶೋಧಿಸಿದರು. ರುದರ್ ಫೋರ್ಡರು ಅದಕ್ಕೆ ಗ್ಯಾಮಾ ವಿಕಿರಣಗಳು ಎಂಬ ಹೆಸರನ್ನು ನೀಡಿದರು

ಈ ರೀತಿಯಾಗಿ ಒಂದರ ಮೇಲೊಂದರಂತೆ ಅದ್ಭುತ ಆವಿಷ್ಕಾರಗಳನ್ನು ಮಾಡುತ್ತಿದ್ದರೆ, ದೂರದ ಕೆನಡಾದಲ್ಲಿ ಅವರನ್ನು ಪ್ರೊಫೆಸರ್‌ ಹುದ್ದೆ ಕಾಯುತ್ತಿತ್ತು. ಕೆನಡಾದ ಮೆಕ್‌ಗಿಲ್‌ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ನಿವೃತ್ತರಾದರು. ಆಗ ವಿಶ್ವವಿದ್ಯಾನಿಲಯದ ಇಲಾಖಾ ಮುಖ್ಯಸ್ಥರುಗಳು ಈ ಹುದ್ದೆಗೆ ಯೋಗ್ಯ ಅಭ್ಯರ್ಥಿಯನ್ನು ಶಿಫಾರಸು  ಮಾಡುವಂತೆ  ಜೆ.ಜೆ ಥಾಮ್ಸನ್ ರವರನ್ನು ಪತ್ರ ಮುಖೇನ ಕೋರಿದರು. ಜೆ.ಜೆ.ಯವಪತ್ರ ತಮ್ಮ ಪ್ರಿಯ ಶಿಷ್ಯನ ರುದರ್ ಫೋರ್ಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಪತ್ರದಲ್ಲಿ ಅವರು “ನನ್ನೊಬ್ಬ ಶಿಷ್ಯನಿದ್ದಾನೆ. ಸಂಶೋಧನಾ ಸಾಮರ್ಥ್ಯದಲ್ಲಿ, ಕ್ರಿಯಾಶೀಲತೆಯಲ್ಲಿ, ಉತ್ಸಾಹದಲ್ಲಿ ರುದರ್‌ಫೋರ್ಡನನ್ನು ಮೀರಿಸುವ ಇನ್ನೊಬ್ಬ ಅಭ್ಯರ್ಥಿ ನಿಮಗೆ ದೊರಕಲಾರ“ ಎಂದು ಬಣ್ಣಿಸಿ ಶಿಷ್ಯನ ಹೆಸರನ್ನು ಶಿಫಾರಸು ಮಾಡಿದರು. ಆದರೆ ರುದರ್ ಫೋರ್ಡರಿಗೆ ಅತ್ತ ಹೋಗುವ ಪೂರ್ಣ ಮನಸ್ಸು ಇರಲಿಲ್ಲ. ಇದರಿಂದ ಇದ್ದ ಸ್ಕಾಲರ್ಶಿಪ್ ಕೈತಪ್ಪಿ ಹೋಗುವ ಭಯವಿತ್ತು. ಜೊತೆಗೆ ಅಲ್ಲಿಗೆ ಹೋಗುವ ಆಸಕ್ತಿಯೂ ಇತ್ತು!!!.  ಏಕೆಂದರೆ, ತನಗಾಗಿ ಕಾಯುತ್ತಿರುವ ಗೆಳತಿ ಮೇರಿಯನ್ನು ಮದುವೆಯಾಗುವ ಅವಕಾಶವೂ ಇತ್ತು. ಕೊನೆಗೂ ಈ ಹುದ್ದೆಗೆ ಒಪ್ಪಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಮೆಕ್‌ಗಿಲ್ ವಿಶ್ವವಿದ್ಯಾಲಯವನ್ನು ಸೇರಿದರು. ತಮ್ಮ ಭಾವೀ ಪತ್ನಿಗೆ ಪತ್ರ ಬರೆದು ಈ ಸಂತಸದ ಸುದ್ದಿಯನ್ನು ತಿಳಿಸಿದರು. ಆದರೆ, ಹಣದ ಅಡಚಣೆಯಿಂದಾಗಿ ಮದುವೆಗೆ ಮತ್ತೂ ಒಂದುವರೆ ವರ್ಷ ಕಾಯಬೇಕಾಯಿತು. ಕೊನೆಗೂ 1900 ರಲ್ಲಿ ತಮ್ಮ ಮನದನ್ನೆಯನ್ನು ವರಿಸಿದರು .

ಅದು ಅವರ ಸಂಶೋಧನೆ ತುರೀಯಾವಸ್ಥೆಯಲ್ಲಿದ್ದ ಕಾಲ. 1898-1907 ಅವಧಿಯಲ್ಲಿ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ನೂರಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. 1902ರಲ್ಲೇ 14 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ತಮ್ಮ ಸಂಶೋಧನಾ ಪ್ರವೃತ್ತಿಯಿಂದ ಯುವ ಸಮೂಹವನ್ನು ಆಕರ್ಷಿಸಿದರು. ಹಾಗೂ ಅವರೇ ಉತ್ತಮ ಮಾರ್ಗದರ್ಶನ ನೀಡಿ ಮ್ಮ ವಿದ್ಯಾರ್ಥಿಗಳ ಸಂಶೋಧನೆಗಳ ಗೌರವವನ್ನು ಅವರಿಗೇ ನೀಡಿದರು. ಇದು ಸಂಶೋಧನಾ ಕ್ಷೇತ್ರದಲ್ಲಿ ದುರ್ಲಭವಾದ ಅತಿ ದೊಡ್ಡ ಗುಣ. ಅಂದಿನ ದಿನಗಳಲ್ಲಿ ಮಹಿಳಾ ವಿಜ್ಞಾನಿಗಳು ಅಪರೂಪ. ತಮ್ಮ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಒದಗಿಸಿ ಅನೇಕ ಮಹಿಳಾ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದರು. ಕೆನಡಾದಲ್ಲಿ ಫ್ರೆಡರಿಕ್ ಸಾಡಿ (1877-1965) ಎಂಬ ಕಿರಿಯ ಸಹೋದ್ಯೋಗಿ ಜೊತೆ ಸಂಶೋಧನೆಗೈದು ಯುರೇನಿಯಮ್ ಹೊರಹೊಮ್ಮಿಸುವ ಉಷ್ಣಶಕ್ತಿಯ ಕಾರಣವಾಗಿ ಸಂಭವಿಸುವ ಪರಮಾಣವಿ ವಿಘಟನೆ ಕುರಿತ ಸಿದ್ಧಾಂತವನ್ನು ಮಂಡಿಸಿದರು.

 ಓವನ್ಸ್‌ ತನ್ನ ಪ್ರಯೋಗವೊಂದರಲ್ಲಿ ಥೋರಿಯಂ ಆಕ್ಸೈಡ್ ನಿಂದ ಹೊರಬರುವ ವಿಕಿರಣಗಳು ಗಾಳಿಯಿಂದ ಹೊಯ್ದಾಡುವ ವಿಚಿತ್ರವಾದ ವರ್ತನೆಯನ್ನು ಗಮನಿಸಿದರು. ಗಾಳಿಯ ಪ್ರಭಾವಕ್ಕೆ ಒಳಗಾಗದ ವಿಕಿರಣಗಳ ಈ ವರ್ತನೆ ಅಚ್ಚರಿಯನ್ನು ಉಂಟು ಮಾಡಿತು. ಇದಕ್ಕೆ ಕಾರಣ ತಿಳಿಯಲಿಲ್ಲ. ಇದನ್ನು ಅಧ್ಯಯನ ಮಾಡಿದ ರುದರ್ಫೋರ್ಡ್‌, ಇದು ಥೋರಿಯಂ ಆಕ್ಸೈಡ್ ನಿಂದ ಹೊರಬಂದದ್ದು ಅನಿಲವೇ ಹೊರತು ವಿಕಿರಣಗಳಲ್ಲ ಎಂದು ತರ್ಕಿಸಿದರು. ಮುಂದೆ ಇದು ವಿಕಿರಣಪಟು ಧಾತುವಾದ ರೆಡಾನ್‌ ಎನ್ನುವುದನ್ನು ಕಂಡುಹಿಡಿದರು. ಈ ಅನಿಲವನ್ನು ಎಲೆಕ್ಟ್ರೋಸ್ಕೋಪಿನ ಮೇಲೆ ಹಾಯಿಸಿದಾಗ ಕೆಲವೇ ನಿಮಿಷಗಳಲ್ಲಿ ತನ್ನ ವಿಕಿರಣಪಟು ಗುಣವನ್ನು ನಿಲ್ಲಿಸಿತು.!!! ಇದು ಮತ್ತೊಂದು ನಂಬಲಸಾಧ್ಯವಾದ ಅಚ್ಚರಿಯ ಸಂಶೋಧನೆಯಾಗಿತ್ತು. ಈ ನಿಗೂಢತೆಯ ಹಿಂದೆ ಬಿದ್ದ ರುದರ್ಫೋರ್ಡರಿಗೆ ವಿಕಿರಣಪಟು ಧಾತುಗಳ ವಿಶಿಷ್ಟ ಗುಣವಾದ ಅರ್ಧಾಯುಷ್ಯದ ಪರಿಚಯವಾಯಿತು!!  

ಅರ್ಧಾಯುಷ್ಯದ ಸಂಶೋಧನೆಯೂ ಹಲವಾರು ರೀತಿಯಲ್ಲಿ ಅದ್ಭುತ ಸಂಶೋಧನೆಯೇ ಆಗಿತ್ತು. ಸಂಶೋಧನೆ ಮುಂದುವರೆಸಿದ ರುದರ್ ಫೋರ್ಡ್ ರವರು ಯುರೇನಿಯಂನ ಅದುರಾದ ಪಿಚ್ ಬ್ಲೆಂಡನ್ನು ಅಧ್ಯಯನ ಮಾಡಿ ಅದರ ವಯಸ್ಸು 700 ಮಿಲಿಯನ್ ಎಂದು ಲೆಕ್ಕ ಹಾಕಿದರು!!. ಇದು ಅದುವರೆಗಿನ ಸಂಶೋಧನೆಯೊಂದನ್ನು ತಲೆಕೆಳಗೆ ಮಾಡಿತು. ಅಲ್ಲಿಯವರೆಗೂ ವಿಜ್ಞಾನಿಗಳು ಭೂಮಿಯ ವಯಸ್ಸನ್ನು ನೂರು ಮಿಲಿಯನ್ ವರ್ಷಗಳೆಂದು ಲೆಕ್ಕ ಹಾಕಿದ್ದರು. ಭೂಮಿಯ ಮೇಲಿನ ಪಿಚ್ ಬ್ಲೆಂಡಿನ ವಯಸ್ಸೇ 700 ಮಿಲಿಯನ್ ಆಗಿದ್ದರೆ, ಭೂಮಿಯ ಆಯಸ್ಸು 1೦೦ ಮಿಲಿಯನ್‌ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಹಜವಾಗಿಯೇ ಎದ್ದು ಬಿಟ್ಟಿತು. ರುದರ್‌ಫೋರ್ಡರ ಸಂಶೋಧನೆಯಿಂದ ಭೂಮಿಯ ವಯಸ್ಸು 4.5 ಬಿಲಿಯನ್ ವರ್ಷಗಳಷ್ಟು ಹಿಂದಕ್ಕೆ ಒಯ್ದು ಬಿಟ್ಟಿತು. ಈಗ ನಾವು ರುದರ್ ಫೋರ್ಡರ ಲೆಕ್ಕಾಚಾರವನ್ನೇ ಒಪ್ಪಿಕೊಂಡಿದ್ದೇವೆ. ಕೆನಡಾದಲ್ಲಿ ರುದರ್ಫೋರ್ಡರು ವಿಜ್ಞಾನಿಯಾಗಿ ಅಪಾರ ಯಶಸ್ಸನ್ನು ಗಳಿಸಿದರು. ಆದರೆ ದೂರದ ಕೆನಡಾದಲ್ಲಿ ಅವರಿಗೆ ಒಂಟಿತನ ಕಾಡುತ್ತಿತ್ತು. ಮನಸ್ಸು ಪದೇ ಪದೇ  ಇಂಗ್ಲೆಂಡಿಗೆ ಹಿಂದಿರುಗಲು ಬಯಸುತ್ತಿತ್ತು. ಕೊನೆಗೂ 197ರಲ್ಲಿ ರುದರ್ಫೋರ್ಡರು ಮ್ಯಾಂಚೆಸ್ಟರಿಗೆ ಹಿಂದಿರುಗಿದರು. ಅಲ್ಲಿ ಸಂಶೋಧನೆ ಮುಂದುವರೆಸಿ ಆಲ್ಫಾಕಣಗಳು ಧನ ವಿದ್ಯುದಾವಿಷ್ಟ ಹೀಲಿಯಂ ಬೀಜಗಳೆಂದು ರುಜುವಾತು ಮಾಡಿದರು. ಈ ಅಯಾನುಗಳನ್ನು ಎಣಿಸಲು  ತಮ್ಮ ವಿದ್ಯಾರ್ಥಿಯಾಗಿದ್ದ ಜರ್ಮನ್ ಭೌತವಿಜ್ಞಾನಿ ಹ್ಯಾನ್ಸ್‌ ಗೈಗರ್‌ (1882-1945) ಜೊತೆಗೂಡಿ ಗೈಗರ್‌ ಕೌಂಟರ್‌ ಎಂಬ ಸಾಧನವನ್ನು ರೂಪಿಸಿದರು. ಕ್ರಾಂತಿಕಾರಿ ಸಂಶೋಧನೆ ಪರಮಾಣು ಬಗೆಗಿನ ಪರಿಕಲ್ಪನೆಯನ್ನು ಅರಿಯಲು ಕಾರಣವಾಯಿತು. ಆಲ್ಫಾ ಕಣಗಳನ್ನು ಬಳಸಿ ಪರಮಾಣುವಿನ ನ್ಯೂಕ್ಲಿಯಸ್‌ ಅನ್ನು ಕಂಡು ಹಿಡಿದರು. 

ಪರಮಾಣುವೊಂದು ಸೂಕ್ಷ್ಮಾತಿ ಸೂಕ್ಷ್ಮ ಸೌರಮಂಡಲ. ಇದರ ಪೂರ್ಣ ರಾಶಿ ನ್ಯೂಕ್ಲಿಯಸ್‌ನಲ್ಲೇ ಸಾಂದ್ರೀಕರಿಸಿದೆ. ಇದನ್ನು ಸುತ್ತುವರಿದು ಎಲೆಕ್ಟ್ರಾನ್ ಗ್ರಹ’ಗಳು ಪರಿಭ್ರಮಿಸುತ್ತಿವೆ ಎಂಬ ತೀರ್ಮಾನಕ್ಕೆ ಬಂದರು. ತನ್ನ ಶಿಷ್ಯ ನೀಲ್ಸ್ ಬೋರ್ (1882-1962) ಜೊತೆಗೂಡಿ ರುದರ್ಫೋರ್ಡ್-ಬೋರ್ ಪರಮಾಣು ಪರಿಕಲ್ಪನೆಯನ್ನು ನೀಡಿದರು.

 ಮೊದಲನೆಯ ಮಹಾಯುದ್ಧದ ವೇಳೆ (1914-18) ಇವರು ಬ್ರಿಟಿಷ್ ನೌಕಾದಳಕ್ಕಾಗಿ ಜಲಾಂತರ್ಗಾಮೀ ನೌಕೆಗಳನ್ನು ಪತ್ತೆ ಹಚ್ಚುವ ವಿಧಾನಗಳ ಕುರಿತಂತೆ ಸಂಶೋಧನೆಯನ್ನು ನಡೆಸಿದರು. 1919ರಲ್ಲಿ ಅವರು ಹಗುರ ಧಾತುವಾದ ನೈಟ್ರೋಜನ್‌ ಅನ್ನು ಆಲ್ಫಾ ಕಣದಿಂದ ತಾಡಿಸಿ ಒಡೆದರು. 1920ರಲ್ಲಿ ನ್ಯೂಟ್ರಾನ್‌ಗಳ ಇರುವಿಕೆಯನ್ನು ಅವರು ಊಹಿಸಿದರು. ಅವರ ಶಿಷ್ಯ ನೊಬೆಲ್ ಪ್ರಶಸ್ತಿ ವಿಜೇತ ಚಾಡ್ವಿಕ್ ಆಲ್ಫಾ ಕಣಗಳನ್ನು ಬಳಸಿ ನ್ಯೂಟ್ರಾನ್ ಕಣವನ್ನು ಕಂಡುಹಿಡಿದರು. ವಿಕಿರಣಶೀಲ ಧಾತುಗಳ ವಿಘಟನೆ ಮತ್ತು ದ್ರವ್ಯಾಂತರಣವನ್ನು ಅರ್ಥಮಾಡಿಕೊಳ್ಳಲು ಅವರ ಈ ಸಂಶೋಧನೆಯು ಮಹತ್ತರ ಕೊಡುಗೆ ನೀಡಿದುದಲ್ಲದೇ 20 ನೇ ಶತಮಾನದ ಆಧುನಿಕ ಭೌತಶಾಸ್ತ್ರಕ್ಕೂ ‌ಭದ್ರ ಬುನಾದಿ ಹಾಕಿತು. ಹಾಗಾಗಿ ಅವರನ್ನು ನ್ಯೂಕ್ಲಿಯ ಭೌತಶಾಸ್ತ್ರದ ಪಿತಾಮಹ ಎಂದು ಕರೆಯಲಾಯಿತು. 

ಹೀಗೆ ಅವಿರತವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡ ರುದರ್‌ಫೋರ್ಡರನ್ನು ಪ್ರಶಸ್ತಿಗಳೂ ಬೆಂಬತ್ತಿದವು. 1908ರಲ್ಲಿ ರುದರ್‌ಫೋರ್ಡ್‌ ವಿಕಿರಣಗಳ ಕುರಿತ ಅಧ್ಯಯನಕ್ಕೆ ಸರ್ವೋಚ್ಛ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. 1914 ರಲ್ಲಿ ನೈಟ್ ಪದವಿ ಪಡೆದರು. 1931 ರಲ್ಲಿ ರುದರ್‌ಫೋರ್ಡ್ ನ್ಯೂಜಿಲೆಂಡ್‌ ದೇಶದ ಬ್ಯಾರನ್ ಆಫ್ ನೆಲ್ಸನ್ ಪ್ರಶಸ್ತಿಗೆ ಭಾಜನರಾದರು.

 ಅವರ ಗೌರವಾರ್ಥವಾಗಿ ಪರಮಾಣು ಸಂಖ್ಯೆ 104 ಹೊಂದಿರುವ ಧಾತುವಿಗೆ ರುದರ್ಫೋರ್ಡಿಯಮ್ ಎಂದು ನಾಮಕರಣ ಮಾಡಲಾಯಿತು. ಬಿಡುವಿಲ್ಲದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ರುದರ್‌ಫೋರ್ಡರು ಅನೇಕ ಶ್ರೇಷ್ಠ ವಿಜ್ಞಾನಿಗಳನ್ನು ಬೆಳೆಸಿದರು. ಅವರ ಸಂಶೋಧನೆಗೆ ಮಾರ್ಗ ದರ್ಶನ ನೀಡಿದರು.

ರುದರ್ಫೋರ್ಡ್ ಹರ್ನಿಯ ಸಮಸ್ಯೆಯಿಂದ ಬಳಲುತ್ತಿದ್ದರು. ಬಿಡುವಿಲ್ಲದ ಕೆಲಸದ ನಡುವೆ ಬಹುಶಃ ಅರೋಗ್ಯದೆಡೆಗೆ ಅಷ್ಟಾಗಿ ಗಮನ ನೀಡದೆ ಇರುವುದರಿಂದ ಹರ್ನಿಯ ಉಲ್ಭಣಿಸಿತು.1937ರಲ್ಲಿ ಅಕಾಲಿಕ ಮರಣಕ್ಕೀಡಾದರು.

ಮೊದಲನೆಯ ಮಹಾಯುದ್ಧದ ಮೊದಲು , "ಮನುಷ್ಯನು ತನ್ನ ನೆರೆಹೊರೆಯವರೊಂದಿಗೆ ಶಾಂತಿಯಿಂದ ಬದುಕುವವರೆಗೆ ಪರಮಾಣುವಿನಿಂದ ಶಕ್ತಿಯನ್ನು ಹೊರತೆಗೆಯುವುದನ್ನು ಯಾರೂ ಕಂಡುಹಿಡಿಯುವುದಿಲ್ಲ" ಎಂದು ಪರಮಾಣು ಶಕ್ತಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಇದು ಕೆಲವೇ ವರ್ಷಗಳಲ್ಲಿ ನಿಜವಾಯಿತು!!!

1937 ರಲ್ಲಿ ಅವರ ಮರಣದ ನಂತರ, ಅವರನ್ನು ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಐಸಾಕ್ ನ್ಯೂಟನ್ ಬಳಿ ಮೇರಿ ನ್ಯೂಟನ್‌ರ ಪತಿಯನ್ನು ಸಮಾಧಿ ಮಾಡಲಾಯಿತು!! ಇದರೊಂದಿಗೆ ವಿಜ್ಞಾನರಂಗದ ಧ್ರುವತಾರೆಯೊಂದು ಅಸ್ತಂಗತವಾಯಿತು. 

 


Thursday, January 4, 2024

ಸಂಪಾದಕರ ಡೈರಿಯಿಂದ .....


ಸಂಪಾದಕರ ಡೈರಿಯಿಂದ .....

  ಹೊಸ ವರ್ಷ ಮತ್ತೆ  ಹೊಸ ಹಿಗ್ಗು ತಂದಿದೆ. ನಿಮ್ಮ ಪ್ರೀತಿ ಅಭಿಮಾನಗಳೊಂದಿಗೆ ಮುನ್ನಡೆಯುತ್ತಿರುವ ಸವಿಜ್ಞಾನ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಅಂಬೆಗಾಲಿಡುತ್ತಾ ನಾಡಿನ ವಿಜ್ಞಾನಾಸಕ್ತರನ್ನು ಹೆಚ್ಚು ಹೆಚ್ಚು ತಲುಪುವ ಗುರಿಯೊಂದಿಗೆ ಮುಂದೆ ಸಾಗುತ್ತಿದ್ದೇವೆ. ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ ‘ ಹಾಗೂ ಅಭಿಮಾನಿ ಓದುಗರಿಗೆ  ನನ್ನ ಅನಂತ ನಮನಗಳು ಹಾಗೂ 2024ನೇ ಕ್ಯಾಲೆಂಡರ್‌ ವರ್ಷದ ಹಾರ್ದಿಕ ಶುಭಾಶಯಗಳು.

ನಿಮ್ಮ ಮಿದುಳಿಗೆಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ 2024 ಜನವರಿ ತಿಂಗಳ ಸಂಚಿಕೆ ವೈವಿಧ್ಯಮಯ ಲೇಖನಗಳೊಂದಿಗೆ ನಿಮ್ಮ ಮುಂದಿದೆ.                                                                                           

    ಇವೆಲ್ಲದರ ಜೊತೆಗೆಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುವಂತೆ ಜನವರಿ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ ನೀಡಿದೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದಒಗಟುಗಳು ಹಾಗೂ ಸೈನ್ಟೂನ್ ಗಳು ಎಂದಿನಂತೆ ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ. ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಓದುಗರಾಗಿ, ಲೇಖಕರಾಗಿ ನಮ್ಮೊಂದಿಗೆ ಕೈ ಜೋಡಿಸುವ ನಿರೀಕ್ಷೆಯೊಂದಿಗೆ  ವಂದನೆಗಳೊಂದಿಗೆ  

ರಾಮಚಂದ್ರಭಟ್‌ ಬಿ.ಜಿ.

ಸಂಪಾದಕರು 

( ಪ್ರಧಾನ ಸಂಪಾದಕರ ಪರವಾಗಿ )

ಕಾಗೆ ಕಾಗೆ ಕವ್ವ... ಎಲ್ಲಿ ಹೋದಿಯವ್ವ

 ಕಾಗೆ ಕಾಗೆ ಕವ್ವ... ಎಲ್ಲಿ ಹೋದಿಯವ್ವ....


ಲೇಖಕರು : ರಮೇಶ, ವಿ,ಬಳ್ಳಾ

                                                ಅಧ್ಯಾಪಕರು

                                         ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

                               (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ 

                                                                        ಮೊ: 9739022186


    ಬಾಲ್ಯದ ಆ ದಿನಗಳು ಇನ್ನೂ ನೆನಪಿವೆ. ರೊಟ್ಟಿ, ಮೊಸರು ಚಟ್ನಿ ಹಚ್ಚಿಕೊಂಡು ಮಾಳಿಗೆ ಏರುವ ಕಲ್ಲು ಮೆಟ್ಟಿಲುಗಳ ಮೇಲೆ ಕುಳಿತು ಊಟ ಮಾಡುವುದೆಂದರೆ ಖುಷಿಯೋ ಖುಷಿ. ಒಂದು ತುಣುಕು ರೊಟ್ಟಿ ಮುರಿದು ಬಾಯಲ್ಲಿ ಹಾಕಿಕೊಂಡರೆ ಸಾಕು ಅಗಿಯಲು ಸ್ವಲ್ಪ ಹೊತ್ತು ಬೇಕಾಗುತ್ತಿತ್ತು. ಅಲ್ಲಿಯವರೆಗೆ ಕೈ ಸುಮ್ಮನಿರದೇ ಮತ್ತೆ ಒಂದು ತುಣುಕು ಮುರಿಯುತ್ತಿತ್ತು. ಅದನ್ನು ಅಲ್ಲಿಯೇ ಓಡಾಡುತ್ತ ತಿರುಗುವ ಹಾಗೂ ಕೆಲ ಸಾರಿ ಊಟ ಮಾಡುವ ನಮ್ಮನ್ನೇ ನೋಡುತ್ತ ಜೊಲ್ಲು ಸುರಿಸುವ ಓಣಿಯ ಆ ನಾಯಿಗಳನ್ನು ಛೂ.. ಛೂ... ಎಂದು ಕರೆದು ರೊಟ್ಟಿ ತುತ್ತು ಹಾಕುತ್ತ ಮಜಾ ನೋಡುವ ನಮ್ಮ ಸಡಗರ ಒಂದು ಕಡೆಯಾದರೆ, ಆ ರೊಟ್ಟಿಗಾಗಿ ಕಾದು ಮರದಲ್ಲಿ ಕುಳಿತು ಕಾವ್.. ಕಾವ್.. ಎನ್ನುತ್ತಾ ಒಮ್ಮೆಲೆ ಹಾರಿ ಹೊತ್ತೊಯ್ಯುತ್ತಿದ್ದ ಆ ಪಕ್ಷಿಗಳು ನಾಯಿಗಳನ್ನು ಗೋಳು ಹೊಯ್ಯುತ್ತಿದ್ದವು. ಒಂದೊಂದು ಸಾರಿ ಆ ಕಪ್ಪು ಬಣ್ಣದ ಹಕ್ಕಿಗಳು ನಮ್ಮ ಹತ್ತಿರದ ಸಂಬಂಧಿಗಳಂತೆ, ಮನೆಯ ಸುತ್ತ ಗಿಡಮರ ಮುಳ್ಳು ಕಂಟೆಗಳ ಹಾಗೂ ವಿದ್ಯುತ್ ಕಂಬಗಳ ಆಸುಪಾಸಿನಲ್ಲಿ ಗುಂಪಾಗಿ ಜೋರು ದನಿ ಮಾಡುವ ಅವು ತೀರ ಚಿರಪರಿಚಿತವೆಂಬಂತೆ ಕಾಣುತ್ತಿದ್ದವು. ಅವೇ ಕಾಗೆಗಳು. ಆದರೆ ಆ ಕಾಗೆಗಳ ಕಲರವ ಇಂದು ಕೇಳುತ್ತಿಲ್ಲ. ಕಾವ್.. ಕಾವ್.. ದನಿಯ ಸುಳಿವು ಸಿಗುತ್ತಿಲ್ಲ. ಆ ಕಪ್ಪು ಹಕ್ಕಿಗಳು ಎಲ್ಲಿ ಹೋದವೋ ಹುಡುಕಬೇಕಿದೆ.



ಒಂದು ಹಂತದಲ್ಲಿ ಕಾಗೆಗಳೆಂದರೆ ಅವುಗಳಿಲ್ಲದ ಜಾಗಗಳೇ ಇಲ್ಲ ಎಂಬಂತಿತ್ತು. ಅವು ಸರ್ವವ್ಯಾಪಿಯಾಗಿ. ಮಾನವ ಮತ್ತು ಅವನ ನಾಗರಿಕತೆಯ ಜೊತೆ ಜೊತೆಗೆ ವಿಶಿಷ್ಟವಾಗಿ ಗುರುತಿಸಿಕೊಂಡು ಅವಿನಾಭಾವ ಸಂಬಂಧ ಹೊಂದಿದ ಜೀವಿಗಳಾಗಿದ್ದವು. ಕಾಗೆಗಳದು ಗುಂಪುಗಳಲ್ಲಿ ಜೀವಿಸುವ ಮತ್ತು ಮಾನವನ ವಾಸ ನೆಲೆಗಳ ಹತ್ತಿರವೇ ಹೆಚ್ಚೆಚ್ಚು ಕಾಣಿಸುವ ಪಕ್ಷಿ ಸಂಕುಲದ ದೊಡ್ಡ ಬಳಗವಾಗಿದೆ. ಇದನ್ನು ಹೆಚ್ಚು ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ ಎನಿಸಿದರೂ ನಮ್ಮ ನಡುವಿನ ಈ ಜೀವಿಗಳ ಕಾವ್.. ಕಾವ್.. ಸದ್ದು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸಿದೆ ಎನಿಸುತ್ತದೆ. ಆ ಕಾರಣಕ್ಕಾಗಿ ಅವುಗಳತ್ತ ನಮ್ಮ ದೃಷ್ಠಿ ಹರಿಸಬೇಕಾಗಿದೆ. 

ಮನೆ ಕಾಗೆ (house crow) ಎಂತಲೇ ಸಾಮನ್ಯವಾಗಿ ಕರೆಯಲಾಗುವ ಕಾರ್ವಿಡೀ ಕುಟುಂಬದ ಈ ಬೂದು ಬಣ್ಣದ ಕತ್ತು ಹೊಂದಿದ ಕುರೂಪ ಪಕ್ಷಿ ಎಲ್ಲರಿಗೂ ಪರಿಚಿತ. ಹಳ್ಳಿಗಾಡಿನ ಹನುಮಂತನಿಂದ ಹಿಡಿದು, ಪಟ್ಟಣದ ಪ್ರತೀಕ್ಷಾಳವರೆಗೂ ತನ್ನ ಗುರುತು ಉಳಿಸಿದ ಜೀವಿ ಇದು. ಇದರ ವೈಜ್ಞಾನಿಕ ಹೆಸರು ಕಾರ್ವಸ್ ಸ್ಪ್ಲೆಂಡೆನ್ಸ್ (Corvus splendens).  ಇದೇ ಪ್ರಭೇಧದ ಇನ್ನೊಂದು ಕಾಗೆ ಕಪ್ಪು ಬಣ್ಣದಿಂದ ಕೂಡಿದ್ದು ಕಾಡಿನ ಕಾಗೆ (Corvus macrorhynchosಎಂತಲೇ ಪರಿಚಿತ. ಇದರ ಮೈಬಣ್ಣ ಸಂಪೂರ್ಣ ಕಪ್ಪಾಗಿದ್ದು ಮನೆ ಕಾಗೆಯ ಕತ್ತಿನ ಭಾಗದ ಬೂದು ಬಣ್ಣ ಇದನ್ನು ಪ್ರತ್ಯೇಕವಾಗಿ ನೋಡಲು ಸಹಾಯಕವಾಗುತ್ತದೆ. ಈ ಎರಡು ಕಾಗೆಗಳಲ್ಲದೇ ಒಟ್ಟು 120 ಪ್ರಭೇಧಗಳ ಕಾಗೆಗಳು ನೋಡಲು ಕಾಣಸಿಗುತ್ತವೆ. ಕಾಗೆ ಇದರ ಮೂಲ ಏಷ್ಯಾ ಆಗಿದ್ದರೂ ದಕ್ಷಿಣ ಅಮೇರಿಕಾವನ್ನು ಬಿಟ್ಟು ಉಳಿದೆಡೆ ಜಗತ್ತಿನ ಬಹುತೇಕ ಎಲ್ಲ ಭಾಗಗಳಲ್ಲೂ ಇವೆ ಎಂದು ಹೇಳಲಾಗುತ್ತದೆ.

ಕಾಗೆಗಳು ದೊಡ್ಡ ಗಾತ್ರದಿಂದ ಹಿಡಿದು ಮಧ್ಯಮ ಗಾತ್ರದ ದುಂಡಾದ ತಲೆ ಭಾಗವನ್ನು ಹೊಂದಿದೆ. ಮನೆ ಕಾಗೆಯ ಗಂಟಲು, ಎದೆಯ ಮೇಲ್ಭಾಗ, ಮುಂಡ ಭಾಗ, ಕಾಲುಗಳು, ಬಾಲ ಕಪ್ಪು ಬಣ್ಣದಿಂದ ಕೂಡಿದ್ದು, ಕತ್ತು ಭಾಗ ಮತ್ತು ಸ್ತನಭಾಗ ಮಾತ್ರ ತಿಳಿ ಬೂದು ಬಣ್ಣದ ಹೊಳಪು ಹೊಂದಿದೆ. 15-16 ಇಂಚಿನ ದೇಹದ ಕಪ್ಪನೆ ಹೊಳೆಯುವ ರೆಕ್ಕೆ ಪುಕ್ಕಗಳು ನವಿಲುನಂತಹ ಸೌಂದರ್ಯದ ಪಕ್ಷಿಯ ಮುಂದೆ ಇವುಗಳ ಆಕರ್ಷಣೆಯನ್ನು ಗೌಣವಾಗಿಸುತ್ತವೆ. ಶಂಕುವಿನಾಕಾರದ ಇದರ ಕೊಕ್ಕು ಹುಳು ಹುಪ್ಪಡಿಗಳನ್ನು ಹೆಕ್ಕಿ ತಿನ್ನಲು ಹೇಳಿ ಮಾಡಿಸಿದಂತಿದೆ. ಈ ಭಾರತೀಯ ಕಾಗೆ ಪ್ರಭೇದವು ನೇಪಾಳ, ಪಾಕಿಸ್ತಾನ, ಬಾಂಗ್ಲಾದಲ್ಲೂ ಕಂಡು ಬರುತ್ತದೆ. ಇದರ ಇನ್ನು ಕೆಲ ಉಪವರ್ಗಗಳು ಶ್ರೀಲಂಕಾ, ಮಯನ್ಮಾರ್, ಥೈಲ್ಯಾಂಡ್, ಮಾಲ್ಡಿವ್ಸ್ ಭಾಗಗಳಲ್ಲೂ ತಮ್ಮ ಸ್ಥಳೀಯ ವೈಶಿಷ್ಟ್ಯತೆಯೊಂದಿಗೆ ಹಾಗೂ ಕೆ¯ ಭಿನ್ನತೆಯೊಂದಿಗೆ ಕಂಡು ¨ರುತ್ತವೆ. 

ಕಾಗೆಗಳು ಬಲು ವಿಶಿಷ್ಟ ಬುದ್ಧಿಮತ್ತೆಯ ಜೀವಿಗಳೆಂದೇ ವಿಜ್ಞಾನಿಗಳು ಗುರುತಿಸುತ್ತಾರೆ. ವಾನರಗಳ ಮೆದುಳು, ಈ ಕಾಗೆಯ ಮೆದುಳು ಒಂದು ಹಂತದಲ್ಲಿ ಸಮವಾಗಿಯೇ ಇದ್ದರೂ ಜೀವ ವಿಕಾಸದ ಹಾದಿಯಲ್ಲಿ ಮಾತ್ರ ಇವು ಕಾಗೆಗಳಾಗಿಯೇ ಉಳಿಯಬೇಕಾಯಿತು ಎನ್ನಲಾಗುತ್ತದೆ. ಹಾಗಾಗಿ ಇವುಗಳನ್ನು ಆಕಾಶದ ಮಂಗಗಳು (feathered apes) ಎನ್ನಲಾಗುತ್ತದೆ. ಆ ಜಾಣ್ಮೆಯ ಪ್ರತೀಕವಾಗಿ ಏನೋ ಮಾನವನ ಸನಿಹ ಸಂಬಂಧಿಯಂತೆ ಒಡನಾಟ ತೋರುವ ಈ ಕಾಗೆಗಳು ಮಾನವ ಪರಿಸರವನ್ನು ಹೆಚ್ಚು ಇಷ್ಟಪಡುತ್ತವೆ. ಕೂಡಿ ಬಾಳುವ ತತ್ವವನ್ನು ಸಾರಿ ಹೇಳುತ್ತವೆ. ಒಂದಗುಳ ಕಂಡರೆ ಸಾಕು ತನ್ನ ಬಳಗವನ್ನೆಲ್ಲ ಕೂಗಿ ಕರೆದು ಹಂಚಿಕೊಂಡು ತಿಂದು ಬದುಕುತ್ತವೆ. ಇಂತಹ ಉದಾರ ಗುಣ, ಭಾತೃತ್ವ ಪಕ್ಷಿ ಸಂತತಿಯಲ್ಲಿ ವಿಶಿಷ್ಟವಾಗಿದೆ.

ಮನೆಯ ಮುಂದಿನ ಮರಗಳಲ್ಲಿ ಆಶ್ರಯ ಪಡೆದು ಬದುಕು ಸಾಗಿಸುವ ಇವುಗಳ ಜೀವನ ವೈಶಿಷ್ಟಗಳು ಹಲವು. ಕಾಗೆಗಳ ಮೆದುಳು ಅತ್ಯಂತ ಸಮೃದ್ಧವಾಗಿ ವಿಕಾಸಗೊಂಡಿದೆ. ಮುಂಭಾಗದ ಮೆದುಳು ಹೇರಳವಾದ ನರಕೋಶಗಳನ್ನು ಹೊಂದಿ ಮಾನವನಷ್ಟೇ ಬುದ್ಧಿಶಾಲಿ ಎನಿಸಿದೆ. ಒಂದೇ ಬಾರಿಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಇದು, ಜೀವನದುದ್ಕ್ಕೂ ಒಂದು ಸಂಗಾತಿಯನ್ನು ಮಾತ್ರ ಆಯ್ದುಕೊಳ್ಳುತ್ತದೆ. ಅಂದಾಜು 20 ಧ್ವನಿಗಳ ಆಲಾಪ ಮಾಡುವ ಇದು ವಿಭಿನ್ನ ವ್ಯತ್ಯಾಸ ಹೊಂದಿದ ಶಬ್ದ ತರಂಗಗಳನ್ನುಂಟು ಮಾಡಿದರೂ ಕೇಳಲು ಒಂದೇ ಧ್ವನಿ ಎನ್ನುವಂತಿರುತ್ತದೆ. ಪರಿಸರದ ಒಂದು ಅವಲೋಕನಕಾರರಾಗಿ ಸೂಕ್ಷ್ಮತೆಯನ್ನು ಹೊಂದಿದ ಕಾಗೆಗಳ ವಿಶಿಷ್ಟ ನಡುವಳಿಕೆಗಳು ಆಗಾಗ ವ್ಯಕ್ತವಾಗುತ್ತಲೇ ಇರುತ್ತವೆ.

 ಸ್ಥಳೀಯ ಪರಿಸರದ ಒಂದು ಭಾಗವಾಗಿ ತನ್ನ ತಳಿ ವೃಧ್ಧಿಸುವ ಕಾರ್ಯದಲ್ಲಿ ಮಗ್ನವಾಗುವ ಈ ಕಾಗೆಗಳು 3-4 ಮೀಟರ್ ಎತ್ತರದ ಮರಗಳ ರೆಂಬೆ ಕೊಂಬೆಗಳಲ್ಲಿ ಗೂಡು ಕಟ್ಟುತ್ತವೆ. ದಪ್ಪ ಕಡ್ಡಿಗಳ ಅರೆಬರೆ ವಿನ್ಯಾಸದ ಅಷ್ಟೊಂದು ನಾಜೂಕಲ್ಲದ ಇವುಗಳ ಗೂಡುಗಳು, ಇವುಗಳು ಅಶಿಸ್ತಿನ ಒರಟು ಜೀವಿಗಳೆಂದು ತೋರಿಸುತ್ತವೆ. ಕೆಲ ಸಾರಿ ಎತ್ತರದ ಸೂಕ್ತ ಕಟ್ಟಡವಾಗಿರಬಹುದು ಅಥವಾ ಗೋಪುರಗಳಾಗಿರಬಹುದು ಅಲ್ಲೂ ಗೂಡು ನಿರ್ಮಿಸಿ 3-5 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ನಿಜಕ್ಕೂ ಕಾಗೆ ಒಂದು ಅತ್ಯಂತ ಬುದ್ಧಿವಂತ ಪ್ರಾಣಿ ಎನಿಸಿಕೊಂಡರೂ ಕೆಲ ಸಾರಿ ಮೋಸ ಹೋಗುವುದು ಇದೆ. ಇವು ಎಷ್ಟು ಹೊಂದಾಣಿಕೆ ಹಾಗೂ ಸಹಜೀವನದ ಜೀವಿಗಳೆಂದರೆ ಕೋಗಿಲೆ ಇಡುವ ಮೊಟ್ಟೆಗಳನ್ನು ಮರಿ ಮಾಡಿಕೊಡುತ್ತವೆ. ಆ ಮೂಲಕ ಮೋಸದ ಬಲೆಗೆ ಬಿದ್ದರೂ ತಾಯಿ ಹೃದಯದ ಭಾವವನ್ನು ತಳೆದು ಪಕ್ಷಿಜೀವಿ ಪ್ರಪಂಚದಲ್ಲಿ ಅನನ್ಯವಾಗಿ ಗುರುತಿಸಲ್ಪಡುತ್ತವೆ. 

ನಮ್ಮ ಸಂಸ್ಕøತಿ ಸಂಸ್ಕಾರದ ಅವಿಭಾಜ್ಯ ಅಂಗವೆಂಬಂತೆ ಪ್ರಾಚೀನ ಕಾಲದಿಂದಲೂ ಪ್ರಸ್ತುತ ಜನಜೀವನದುದ್ದಕ್ಕೂ ಕಾಗೆ ತನ್ನ ಗುರುತು ಉಳಿಸುತ್ತಾ ಸಾಗಿದೆ. ತೀರಿದ ಪೂರ್ವಜರನ್ನು ಕಾಗೆಗಳಲ್ಲಿ ಕಾಣುವ ನಮ್ಮ ಭಾರತೀಯ ಪರಂಪರೆ ವಿಶಿಷ್ಟವಾದದ್ದು. ಮಾತಾ-ಪಿತೃಗಳ ಶ್ರಾದ್ಧ ಕರ್ಮಗಳಲ್ಲಿ ವಿಶಿಷ್ಟ ಆಚರಣೆಯಾದ ಪಿಂಡ ಬಿಡುವ ಪದ್ಧತಿಯ ವೇಳೆ ಈ ಕಾಗೆಗಳು ಬಂದು ತುತ್ತು ತಿಂದರೆ ಅದು ಪೂರ್ವಜರಿಗೆ ಅರ್ಪಿತವಾದಂತೆ ಎಂಬ ನಂಬಿಕೆ ಇದೆ. ಹಾಗೆಯೇ ಇದರ ಜೊತೆ ಜೊತೆಗೆ ಇನ್ನು ಹತ್ತು ಹಲವು ನಂಬಿಕೆಗಳು ಇದಕ್ಕೆ ತಳಕು ಹಾಕಿಕೊಂಡು ನಮ್ಮ ಬದುಕಿನ ಹಲವು ಮಗ್ಗಲುಗಳಲ್ಲಿ ತನ್ನ ಛಾಪು ಮೂಡಿಸಿದೆ. ಕಾಗೆ ಮನೆ ಮಾಳಿಗೆ ಮೇಲೆ ಕುಳಿತು ಕೂಗಿದರೆ ಅಂದು ಮನೆಗೆ ಬೀಗರು ಬರುತ್ತಾರೆ ಎಂಬುದು ಇದರಲ್ಲೊಂದು. ಅಷ್ಟೇ ಏಕೆ ಅಪಶಕುನದ ಹಕ್ಕಿಯಾಗಿಯೂ ಕೇಡುತನದ ಜೀವಿ ಎಂಬಂತೆ ಹಲವು ಬಾರಿ ಬಿಂಬಿತವಾಗಿದೆ. ಮನೆಯೊಳಗೆ ಅಪ್ಪಿತಪ್ಪಿ ಪ್ರವೇಶವಾದದ್ದಾದರೆ ಅದು ಕೇಡುಗಾಲವೆಂದು ಆರು ತಿಂಗಳು ಮನೆ ಖಾಲಿ ಮಾಡುವುದು ಇದೆ. ಇದಲ್ಲದೇ ಹೊರಗಡೆ ಓಡಾಡುವಾಗ ಕಾಗೆ ನೆತ್ತಿ ಬಡಿದು ಹೋದರೆ ಆ ವ್ಯಕ್ತಿಯ ಸಾವಿನ ಸುಳ್ಳು ಸುದ್ಧಿ ಹಬ್ಬಿಸಿ ಪಾರು ಮಾಡುವುದು ವಾಡಿಕೆಯಾಗಿ ಬೆಳೆದು ಬಂದಿದೆ. ಆದರೆ ಈ ಎಲ್ಲ ಸತ್ಯ ಮಿಥ್ಯಗಳ ಹಾಗೂ ಪವಿತ್ರ ಅಪವಿತ್ರಗಳ ತೊಳಲಾಟದಲ್ಲಿ ನಮ್ಮ ಜಾನಪದರ ಹಾಗೂ ಪುರಾತನರ ಜೀವನದ ಒಂದು ಭಾಗವೆಂಬಂತೆ ಹಾಸುಹೊಕ್ಕಾಗಿ ಆಪ್ತತೆ ಹೊಂದಿದ ಈ ನತದೃಷ್ಟ ಪಕ್ಷಿಗಳು ಇಂದು ಮರೆಯಾಗುತ್ತಿವೆ.





 ಕರ್ಕಶ ದನಿಯ ಈ ಕಪ್ಪು ಬಣ್ಣದ ಕಾಗೆಗಳು ನಿಕೃಷ್ಟವೆಂಬಂತೆ ರೂಢಿಯಲ್ಲಿ ಬೆಳೆದು ಬಂದಿವೆ. ಆದರೆ ಅವುಗಳಿಂದಾಗುವ ಅನುಕೂಲಗಳು ಹಲವು. ರೈತನ ಹೊಲದ ಕ್ರಿಮಿಕೀಟಗಳನ್ನು ಭಕ್ಷಿಸಿ ನೆರವಾಗುತ್ತವೆ. ಆಹಾರದ ಯಾವುದೇ ಮಡಿವಂತಿಕೆ ಇವಕ್ಕಿಲ್ಲ. ಸಿಕ್ಕಿದ್ದನ್ನೇಲ್ಲ ತಿನ್ನುವ ಇವು ಹುಳು ಹುಪ್ಪಡಿಗಳು, ತರಕಾರಿ, ಕಾಳುಕಡಿ ತ್ಯಾಜ್ಯ ಪದಾರ್ಥಗಳು, ಮಾಂಸ ಭಕ್ಷಗಳು, ಸತ್ತ ಜೀವಿಯ ದೇಹದ ತುಣುಕುಗಳು ಎಲ್ಲ ತಿನ್ನುವ ಇವು ಪರಿಸರದ ಶುಚಿಕಾರರಾಗಿ ತೋರುತ್ತವೆ. ಹಾಗೇ ಕೆಲ ಸಾರಿ ರೈತನಿಗೆ ಬೇಸರವನ್ನು ತರಿಸಿ ಫಸಲು ಹಾಳು ಮಾಡುವುದು ಇದೆ.


ಮನೆ ಕಾಗೆಯ ಬಗ್ಗೆ ಚರ್ಚಿಸುವ ಹೊತ್ತಿನಲ್ಲಿ ಅವುಗಳ ಒಡನಾಟದ ಸುಳಿವು ಸಿಗುತ್ತಿಲ್ಲವೆಂಬ ಕೊರಗು ಇತ್ತಿತ್ತಲಾಗಿ ಹೆಚ್ಚು ಕಾಡುತ್ತಿದೆ. ಒಂದು ಕಾಲದಲ್ಲಿ ಮಾನವನಷ್ಟೇ ಕಾಗೆಗಳ ಸಂಖ್ಯೆ ಇತ್ತೇನೋ ಅನಿಸುವಷ್ಟು ಹೇರಳತೆ ಇತ್ತು. ಅವುಗಳ ನೈಜ ನಿರ್ಧಿಷ್ಟ ಸಂಖ್ಯೆ ಇಲ್ಲ ಆದರೆ ಅಂದಾಜು ಮಾತ್ರ. ಗಮನಿಸಿದಾಗ ಇಂದಿನ ಸಂಖ್ಯೆ ಕಳವಳಕಾರಿಯಾಗಿದೆ. ನಮ್ಮ ಮಕ್ಕಳು ಕಾಗೆ ಕಾಗೆ ಕವ್ವ. .., ಯಾರ ಬಂದಾರವ್ವ ಎಂದು ಹಾಡುವುದು ಮಾತ್ರ ಇಂದು ಕೇಳುತ್ತಿದೆ. ಅವುಗಳನ್ನು ಚೆನ್ನಾಗಿ ಸನಿಹದಿಂದ ನೋಡಿ ಅನುಭವಿಸುವ ಕಾಲ ಇಲ್ಲವಾಗುತ್ತಿದೆ ಏನೋ ಅನಿಸುತ್ತದೆ. ಕಾರಣ ನಮ್ಮ ನಗರೀಕರಣ ಹಾಗೂ ಬದಲಾದ ಜೀವನಶೈಲಿಯಿಂದಾಗಿ ಅವುಗಳ ವಾಸನೆಲೆಗಳ ಅವನತಿಯಾಗುತ್ತಿವೆ. ಅವುಗಳಿಗೆ ಸೂಕ್ತ ಗಿಡಮರಗಳ ಹಸಿರು ಪರಿಸರವಿಲ್ಲದೇ ಬನಗುಡುತ್ತಿವೆ. ಹಾಗಾಗಿ ನಾವಿಂದು ಕಾಗೆ ಕಾಗೆ ಕವ್ವ... ಎಲ್ಲಿ ಹೋದಿಯವ್ವ... ಎಂದು ಹೇಳಬೇಕಾಗಿದೆ. 

ಆಕರಗಳು :

ಕರ್ನಾಟಕದ ಪಕ್ಷಿಗಳು – ಅರ್ಲಿ ಬರ್ಡ ಕೈಪಿಡಿ

ಸಾಮಾನ್ಯ ಪಕ್ಷಿಗಳು- ಸಲೀಂ ಅಲಿ, ಅಯಿಬ್ ಫತೇಅಲಿ

ಹಂಪಿಜೀವಜಾಲ ಜಾನಪದ –ಮೊಗಳ್ಳಿ ಗಣೇಶ

ಜಾಲತಾಣ

                                      

   














Important days Jan 2024


ಜನವರಿ ತಿಂಗಳ ಪ್ರಮುಖ ದಿನಾಚರಣೆಗಳು

ಜನವರಿ ೧ : ಸತ್ಯೇಂದ್ರನಾಥ್ ಬೋಸ್ ಜನ್ಮ ದಿನ

 


 

ಐನ್‌ಸ್ಟೆöÊನ್ ಅವರೊಂದಿಗೆ ಸೇರಿ ಕ್ವಾಂಟಮ್ ಮೆಕಾನಿಕ್ಸ್ ಕುರಿತ ಸಂಶೋಧನೆಗಳು ಹಾಗೂ ದ್ರವ್ಯದ ೫ನೇ ಸ್ಥಿತಿಯನ್ನು ಸಂಶೋಧಿಸಿದರು. ಗೌರವಾರ್ಥ ಉಪಪರಮಾಣೀಯ ಕಣವೊಂದಕ್ಕೆ ಬೋಸಾನ್ ಎಂದು ಹೆಸರಿಸಲಾಗಿದೆ.

ಜನವರಿ ೪ : ವಿಶ್ವ ಬ್ರೆöÊಲ್‌  ದಿನ

ತನ್ನ ಬಾಲ್ಯಾವಸ್ಥೆಯಲ್ಲಿ ಅಫಘಾತವೊಂದರಲ್ಲಿ ತನ್ನ ದೃಷ್ಟಿ ಕಳೆದುಕೊಂಡರು.  ದೃಷ್ಟಿ ವಿಕಲ ಚೇತನರಿಗೆ ಓದಲು ನೆರವಾಗಲು ವಿಶಿಷ್ಟ ಲಿಪಿ ರೂಪಿಸಿದ ಲೂಯಿಸ್ ಬ್ರೆöÊಲ್ ರವರ ಜನ್ಮ ದಿನದ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

              

 

ಜನವರಿ ೪ : ಭೌತಶಾಸ್ತçಜ್ಞ ಐಸಾಕ್ ನ್ಯೂಟನ್ ಜನ್ಮ ದಿನ


 

ಜನವರಿ ೮ : ಸೈದ್ಧಾಂತಿಕ ಭೌತಶಾಸ್ತçಜ್ಞ ಸ್ಟೀಫನ್ ಹಾಕಿಂಗ್ ಜನ್ಮ ದಿನ

              




ಜನವರಿ ೯ : ಪ್ರವಾಸಿ ಭಾರತೀಯ ದಿನ

ದೇಶದ ಉನ್ನತಿಗೆ ಅನಿವಾಸಿ ಭಾರತೀಯರ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಆಚರಿಸಲಾಗುತ್ತದೆ.

              

ಜನವರಿ ೯ : ಹರ್ ಗೋಬಿಂದ್ ಖೊರಾನ ಜನ್ಮ ದಿನ

ಕೃತಕ ಜೀನ್ ಸಂಶ್ಲೇಷಣೆಗಾಗಿ ನೊಬೆಲ್ ಪ್ರಶಸ್ತಿ ವಿಜೇತ, ಭಾರತೀಯ ಸಂಜಾತ ವಿಜ್ಞಾನಿ                         

ಜನವರಿ ೧೨ : ರಾಷ್ಟಿçÃಯ ಯುವ ದಿನ

ವಿಶ್ವಕ್ಕೆ ಭಾರತ ದರ್ಶನ ಮಾಡಿಸಿದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

 ಜನವರಿ ೧೨ : ಯೆಲ್ಲಪ್ರಗಡ ಸುಬ್ಬರಾವ್ ಜನ್ಮ ದಿನ

ಹಲವು ಉಪಯುಕ್ತ ರಾಸಾಯನಿಕಗಳ ಶೋಧ ಮಾಡಿದ ಜೀವರಸಾಯನ ವಿಜ್ಞಾನಿ                        

ಜನವರಿ ೧೫ : ರಾಷ್ಟಿçÃಯ ಸೈನ್ಯ ದಿನ

ಸ್ವತಂತ್ರ ಭಾರತದ ಮೊದಲ ದಂಡನಾಯಕರಾಗಿ ಜನರಲ್ ಕಾರಿಯಪ್ಪ ಅಧಿಕಾರ ಸ್ವೀಕರಿಸಿದ ದಿನ

ಜನವರಿ 19 : ಜೇಮ್ಸ್ ವ್ಯಾಟ್ ಜನ್ಮ ದಿನ

ಹಬೆ ಯಂತ್ರವನ್ನು ರೂಪಿಸಿದ ವಿಜ್ಞಾನಿ

ಜನವರಿ 24 : ರಾಷ್ಟ್ರೀಯ ಹೆಣ್ಣು ಮಗುವಿನ ದಿನ

ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ, ಸಮಸ್ಯೆಗಳ ಪರಿಹಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜನ್ಮ ದಿನದ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.           

ಜನವರಿ 25 : ರಾಷ್ಟಿçÃಯ ಮತದಾರರ ದಿನ:                                          ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.            

ಜನವರಿ 26 : ಭಾರತದ ಗಣ ರಾಜ್ಯೋತ್ಸವ

ಜನವರಿ 26 :  ಅಂತರ ರಾಷ್ಟಿçÃಯ ಕಸ್ಟಮ್ಸ್ ದಿನ         

ಜನವರಿ 28 : ಡಾ. ರಾಜಾ ರಾಮಣ್ಣ ಜನ್ಮ ದಿನ ದೇಶದ ಖ್ಯಾತ ಅಣು ವಿಜ್ಞಾನಿ            

ಜನವರಿ 30 : ಹುತಾತ್ಮರ ದಿನ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯ ಸ್ಮರಣೆಯ ದಿನ


ಜನವರಿ 30 : ವಿಶ್ವ ಕುಷ್ಟ ರೋಗ ದಿನ


ಕೃತಕ ಬುದ್ಧಿಮತ್ತೆ: ಮಾನವನ ಜನಾಂಗಕ್ಕೆ ಸವಾಲಾಗಬಲ್ಲದೆ?

ಕೃತಕ ಬುದ್ಧಿಮತ್ತೆ: ಮಾನವನ ಜನಾಂಗಕ್ಕೆ ಸವಾಲಾಗಬಲ್ಲದೆ?

         

                                                 ಬಿ ಎನ್ ರೂಪ,   ಸಹ  ಶಿಕ್ಷಕರು    ಕೆಪಿಎಸ್ ಜೀವನ್ ಭೀಮ ನಗರ,

                                                  ಬೆಂಗಳೂರು ದಕ್ಷಿಣ ವಲಯ -4.

ಜೀವ ವಿಕಾಸದ ಹಾದಿಯಲ್ಲಿ ಮಾನವನನ್ನು ಅತ್ಯಂತ ಬುದ್ಧಿವಂತ ಜೀವಿಯೆಂದು ಪರಿಗಣಿಸಲಾಗಿತ್ತು. ಇದಕ್ಕೆ ಕಾರಣ ಅವನ ದ್ವಿಪಾದ ನಿಲುವು ಮೆದುಳಿನ  ಹೆಚ್ಚಿದ ಸಾಮರ್ಥ್ಯ, ಸಂವಹನ ಕೌಶಲ್ಯ , ಹೆಬ್ಬೆರಳಿನ ಹೆಚ್ಚಿನ ದಕ್ಷತೆ ಹಾಗೂ ಕಾರ್ಯ,ಜವಾಬ್ದಾರಿಯುತ ವಿವೇಕಯುತ ನಡುವಳಿಕೆ .ಆದರೆ ಇತ್ತೀಚಿಗೆ ಮಾನವನು ಅಭಿವೃದ್ಧಿಯ ಗುತ್ತಿಗೆ ಹಿಡಿದು ತನ್ನ ಎಲ್ಲಾ ವಿಚಾರಗಳನ್ನು ಗಾಳಿಗೆ ಮೇಲೆ ತೇಲಿ ಬಿಟ್ಟಿದ್ದಾನೆ, ಅವನ ಬುದ್ಧಿಶಕ್ತಿಯಿಂದ ಹಾಗೂ ವಿಜ್ಞಾನ -ತಂತ್ರಜ್ಞಾನ ಬೆಳೆಸಿ ಹಿಂದೂ ಹಲವಾರು ನಾವಿನ್ಯತೆಯಿಂದ ಕೂಡಿದ ಕೇಳರಿಯದ ಆವಿಷ್ಕಾರಗಳನ್ನು ಮಾಡಿದ್ದಾನೆ. ಇದರಲ್ಲಿ ಒಂದು ಕೊಡುಗೆ ಕೃತಕ ಬುದ್ಧಿಮತ್ತೆ ಸಹ ಒಂದಾಗಿದೆ.


-ಕೃತಕ ಬುದ್ಧಿಮತ್ತೆ ಹಾಗಾದರೆ ಏನಿದು ಕೃತಕ ಬುದ್ಧಿಮತ್ತೆ?


ಕೃತಕ ಬುದ್ಧಿಮತ್ತೆ ಇಂದು ಸಕಲ ಕ್ಷೇತ್ರಗಳಲ್ಲೂ ಹಾಸುಹೊಕ್ಕಾಗಿದೆ. ಇದು ಮಾನವನ ಹಾಗೂ ಇತರ ಪ್ರಾಣಿಗಳ ಬುದ್ಧಿಶಕ್ತಿಗೆ ವಿರುದ್ಧವಾಗಿರುವ ಬುದ್ಧಿಮತ್ತೆ. ಇದು ಯಂತ್ರಗಳಲ್ಲಿ ಬುದ್ಧಿಶಕ್ತಿ ತುಂಬುವ ತಂತ್ರಾಂಶಗಳು ತುಂಬುವ ಕೃತಕ ಬುದ್ಧಿವಂತಿಕೆಯಾಗಿದೆ.

ನಾವು ಇತ್ತೀಚಿನ ವರ್ಷಗಳಲ್ಲಿ ಹಲವಾರು ಗಣಕಯಂತ್ರಕ್ಕೆ ಸಂಬಂಧಪಟ್ಟ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದೇವೆ. ಕೆಲವು ಉನ್ನತ ಅಪ್ಲಿಕೇಶನ್‌ಗಳೆಂದರೆ ಗೂಗಲ್, ಬಿಂಗ್‌ಗಳಂತಹ ವೆಬ್ ಸರ್ಚ್ ಇಂಜಿನ್ ಗಳು

 ನಿಮ್ಮ ಆದೇಶವನ್ನು ಅರಿತು ಕಾರ್ಯ ನಿರ್ವಹಿಸುವ ಸಿರಿ, ಅಲೆಕ್ಸಾಗಳಿಂದ ಹಿಡಿದು ವ್ಯಾಮೋದಂತಹ ಚಾಲಕ ರಹಿತ ಸ್ವಯಂ ಚಾಲಿತ ವಾಹನಗಳು, ಚಾಟ್ ಜಿಪಿಟಿ , ಬಾರ್ಡ್‌ ಗಳಂತಹ ಎ ಐ ನಮ್ಮ ಬದುಕನ್ನು ಬದಲಿಸುತ್ತಿವೆ.

ಅಲನ್ ಟೂರಿಕ್ ರವರು ಮೆಷಿನ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಗಣನೀಯ ಸಂಶೋಧನೆ ನಡೆಸಿದ ಮೊದಲ ವ್ಯಕ್ತಿ ಯಾಗಿದ್ದಾರೆ. 1956 ರಲ್ಲಿ ಕೃತಕ ಬುದ್ಧಿಮತ್ತೆಯನ್ನು ಶೈಕ್ಷಣಿಕ  ವಿಭಾಗವಾಗಿ ಸ್ಥಾಪಿಸಲಾಯಿತು. ಕೃತಕ ಬುದ್ಧಿಮತ್ತೆ 2020 ದಶಕದ ನಂತರ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮಾನವನ ಬೌದ್ಧಿಕ ಕೌಶಲಗಳಾದ - ತಾರ್ಕಿಕತೆ , ಜ್ಞಾನ ಪ್ರಾತಿನಿಧ್ಯ, ಗ್ರಹಿಸುವಿಕೆ ಹಾಗೂ ಭಾಷಾ ಸಂಸ್ಕರಣೆ , ಕಲಿಕೆ- ಗ್ರಹಿಕೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಕೃತಕ ಬುದ್ಧಿಮತ್ತೆ ಎರಡಲಗಿನ ಕತ್ತಿಯಂತಿದೆ. ಕೃತಕ ಬುದ್ಧಿಮತ್ತೆಯ ಅನುಕೂಲ ಹಾಗೂ ಅನಾನುಕೂಲಗಳನ್ನು  ಪರಾಮರ್ಶಿಸೋಣ.


ಉಪಯೋಗಗಳು ಅಥವಾ ಅನುಕೂಲಗಳು:-

1.     ಮಾನವನ  ಮಾಡುವಂತಹ ಪುನರಾವರ್ತಿತ ದೋಷವನ್ನು ಇದು ಮಾಡುವುದಿಲ್ಲ.

2.     ರೋಬೋಟ್‌ಗಳು ಹೆಚ್ಚು ಜವಾಬ್ದಾರಿಯೊಂದಿಗೆ ನಿಖರವಾವಾಗಿ ಕೆಲಸವನ್ನು ಒದಗಿಸಬಲ್ಲದು

3.     ವಿರಾಮ ರಹಿತ ಹಾಗೂ ಆಯಾಸವಿಲ್ಲದೆ ಕೆಲಸವನ್ನು ದಿನಪೂರ್ತಿ ಮಾಡಬಲ್ಲದು .

4.     ಡಿಜಿಟಲ್ ಸಹಾಯದಿಂದ ಮಾನವನ ಸಿಬ್ಬಂದಿ ಕಡಿಮೆ ಮಾಡಬಹುದು.

5.      ಹೊಸ ಆವಿಷ್ಕಾರಗಳು ಸ್ವಯಂಚಾಲಿತ ಕಾರುಗಳು ಅಲ್ಗಾರಿದಮ್ ಗಳ ಸಂಯೋಗವನ್ನು ಬಳಸುತ್ತದೆ . 

6.     ಪಕ್ಷಪಾತವಿಲ್ಲದ ನಿರ್ಧಾರವನ್ನು ಮಾಡುತ್ತದೆ.

7.      ದೈನಂದಿನ ಅಪ್ಲಿಕೇಶನ್‌ಗಳನ್ನು ಬಳಸಲು ಸಹಕಾರಿಯಾಗಿದೆ .

8.     ಪುನರಾವರ್ತಿತ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು

9.     ವೈದ್ಯಕೀಯ ಕ್ಷೇತ್ರಗಳಲ್ಲೂ ಸಹ ಇದರ ಅನ್ವಯ ಅಪಾರವಾಗಿದೆ. 

       10   . ಉನ್ನತ ಹಾಗೂ ಸುಧಾರಿತ ಸಂವಹನ ಇಂಟರ್ಫೇಸ್ ಅನ್ನು ಪರಿಚಯಿಸುತ್ತದೆ. 

 ಅನಾನುಕೂಲಗಳು:-

1. ದುಬಾರಿ .

2. ಸೃಜನಶೀಲವಲ್ಲ

3.ಇದು ನಿರುದ್ಯೋಗವನ್ನು ಸೃಷ್ಟಿ ಮಾಡುತ್ತದೆ

4. ಮಾನವನನ್ನು ಸೋಮಾರಿಯಾಗಿ ಮಾಡುತ್ತದೆ

5. ನೈತಿಕತೆ ಇಲ್ಲ

6. ಭಾವರಹಿತ

7.  ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಕಷ್ಟ.

  

 ಇತ್ತೀಚಿಗೆ ಆಗುತ್ತಿರುವ ಹಠಾತ್ ಬದಲಾವಣೆಯನ್ನು ಗಮನಿಸಿದಾಗ ನಮ್ಮನ್ನು ನಾವು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಕೃತಕ ಬುದ್ಧಿಮತ್ತೆಯಿಂದ ರಕ್ಷಿಸಿಕೊಳ್ಳುವ ಜವಾಬ್ದಾರಿ ಎದುರಾಗುತ್ತಿದೆ. ಆಧುನಿಕ ಅಸುರರು ಆಗದಂತೆ ಕಾಯುವ ಹಾಗೂ ಒಳ್ಳೆಯ ಪ್ರಜೆಯಾಗುವಂತೆ ರೂಪಿಸುವಲ್ಲಿ ಮಹತ್ತರ ಜವಾಬ್ದಾರಿ ಇದೆ.

  ಏಕೆಂದರೆ ಇಂದಿನ  ಬಹುತೇಕ ವಿದ್ಯಾರ್ಥಿಗಳು ಯಾವುದೇ ರೀತಿಯ ಅಧ್ಯಯನ, ಸತತ ಪರಿಶ್ರಮ, ಕಠಿಣ ಪರಿಶ್ರಮ, ಆಸಕ್ತಿ, ಇವುಗಳಲ್ಲಿ ಕುಂದು ಕೊರತೆ ಕಂಡು ಬಂದು, ಸುಲಭವಾಗಿ ಕೃತಕ ಬುದ್ಧಿಮತ್ತೆಯ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸಿ ತಮ್ಮ ಮನೆಗೆಲಸ, ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಕೃತಿ ಚೌರ್ಯ ಆಗುವ ಭಯಾವೂ ಸಹ ಎದುರಾಗಿದೆ. ಇದರಿಂದಾಗಿ ಪ್ರತಿ ಅಪ್ಲಿಕೇಶನ್ ಗಳನ್ನು ಬಳಸಿ ಶಿಕ್ಷಕರು ಇದನ್ನು ಕಂಡು ಹಿಡಿಯುವ ಕಾರ್ಯವು ಸಹ ಈಗ ಎದುರಾಗಿದೆ. ಆದ್ದರಿಂದ ಹೊಸ ಆವಿಷ್ಕಾರಗಳಲ್ಲಿ ಅದರದೇ ಆದ ಸಾಧಕ- ಬಾಧಕ ಹಾಗೂ ಅನುಕೂಲ-ಅನಾನುಕೂಲಗಳಿವೆ. ಇವುಗಳಲ್ಲಿ ಇರುವಂತ ಧನಾತ್ಮಕ ಉಪಯೋಗಗಳನ್ನು ಮಾತ್ರ ಬಳಸಿಕೊಂಡು ಋಣಾತ್ಮಕ ಅಂಶಗಳನ್ನು ತ್ಯಜಿಸಬೇಕು. ಮುಂದಿನ ಪೀಳಿಗೆಯ ಉತ್ತಮ ಆಲೋಚನೆಯನ್ನು ಮಾಡುವಂತಹ ಒಂದು ಪ್ರವೃತ್ತಿಯನ್ನು ಬೆಳೆಸಬೇಕು.

ಮುಂದಿನ ಪೀಳಿಗೆಯವರನ್ನು ಉತ್ತಮ ಆಚಾರವಂತ, ವಿಚಾರವಂತ ,ಗುಣವಂತ, ಮೌಲ್ಯಯುತ ಕೌಶಲ್ಯ ಭರಿತ, ಹೃದಯವಂತ, ಸತ್ಪ್ರಜೆಯಾಗಿ ಮಾಡುವಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಮುಂದಿನ ಪೀಳಿಗೆಯವರನ್ನು ಅಧ್ಯಯನ ಶೀಲರನ್ನಾಗಿ ಸ್ವಯಂ ಆತ್ಮವಲೋಕನ ಮಾಡಿಕೊಳ್ಳುವವರಾಗಿ, ಪರಿಶ್ರಮ, ಕಾಳಜಿ ,ಕಳಕಳಿ,ಸಂಪತ್ ಭರಿತ ಒಳ್ಳೆಯ ಮಾನವನನ್ನಾಗಿ ಮಾಡುವ ಕರ್ತವ್ಯ ನಮ್ಮೆಲ್ಲರ ಮುಂದಿದೆ . ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಭಾಗಿಯಾಗೋಣ ನೀವೇನೆನ್ನುತ್ತೀರಿ? ಮಾನವೀಯತೆ ಗೆಲ್ಲಲಿ ಎಂಬುದೇ ನಮ್ಮ ಆಶಯ.