ಆಹ್ .. ಆಹಾ .. ಹಾ ಹಾ !! ಎಂದು ಗುಡಿವೆಂಕದಲ್ಲಿ ಕುಪ್ಪಳಿಸಿದಾಗ …..
ಸಾಲಗುಂದ ತಾII
ಸಿಂಧನೂರು ಜಿ. :ರಾಯಚೂರು .
“ ವಿಜ್ಞಾನವನ್ನು ಕೀಳಾಗಿ ಬೋಧಿಸಿ, ಹೀನವಾಗಿ ಕಲಿತರೆ ಅದು ನಿರ್ಜೀವ ವಿಷಯಗಳ ಹೊರೆಯನ್ನು ತುಂಬಿದಂತೆ ” - ಕೊಠಾರಿ ಆಯೋಗದ ಈ ಉಕ್ತಿಯು ಪ್ರತಿಕ್ಷಣ ನಮ್ಮ ವಿಜ್ಞಾನ ಶಿಕ್ಷಕರ ಅಂತರಂಗದ ಬಾಗಿಲು ಬಡಿದು ನಮ್ಮನ್ನು ಎಚ್ಚರಿಸುತ್ತಾ ನಮಗೆ ಕೆಲಸ ಮಾಡಲು ಚೇತನವನ್ನು ಸದಾ ತುಂಬಲಿ ಎಂಬ ಸದಾಶಯದೊಂದಿಗೆ ಅಗಸ್ತ್ಯ ಫೌಂಡೇಶನ್ ಗುಡಿವಂಕ (ಆಂಧ್ರಪ್ರದೇಶ) ಡಿಸೆಂಬರ್ 2023ರ ವಿಜ್ಞಾನ ತರಬೇತಿ ಮತ್ತು ರಲ್ಲಿ ನಡೆದ ತರಬೇತಿಯ ಕೆಲವು ನೆನಪಿನ ಪುಟಗಳನ್ನು ತೆರೆಯುತ್ತಿದ್ದೇನೆ..
ಗುಡಿವೆಂಕವು ಕರ್ನಾಟಕ, ಆಂಧ್ರ , ತಮಿಳುನಾಡು ರಾಜ್ಯಗಳ ಗಡಿರೇಖೆಯನ್ನು ಹಂಚಿಕೊಂಡ ಈ ತರಬೇತಿಯ ಸ್ಥಳ ಬೆಟ್ಟ, ಗುಡ್ಡ , ಗಿಡ ಮರ ಮತ್ತು ಕೆರೆಗಳಿಂದ ಕೂಡಿದ 172 ಎಕರೆ ಜಾಗದಲ್ಲಿ ಹರಡಿಕೊಂಡಿದ್ದು ನಗರೀಕರಣದ ವಾಸನೆಯಿಂದ ದೂರವಿದ್ದು ಬಹಳ ರಮಣೀಯವಾಗಿದೆ.
ಬೆಳಂಬೆಳಗ್ಗೆ 6:00ಕ್ಕೇ ನಿಸರ್ಗನಡಿಗೆ ,ಯೋಗಾಸನದಿಂದ ಪ್ರಾರಂಭವಾದ ತರಬೇತಿಯು ಸಂಜೆ 7:30ರ ವರೆಗೆ ಯಾವುದೇ ಬೇಸರ ತರದೆ ಅನೂಚಾಗಿ ನಡೆಯುತ್ತಿತ್ತು. ಇಲ್ಲಿನ ಸಂಪನ್ಮೂಲ ವ್ಯಕ್ತಿಗಳಿಗೆ ಕನ್ನಡ, ತೆಲುಗು, ತಮಿಳು ಮತ್ತು ಇಂಗ್ಲೀಷ್ಗಳು ಸಲೀಸು. ನಾವೇಕೆ ಬಹುಭಾಷಿಗರಾಗಲಿಲ್ಲ ಎಂಬ ಕೊರಗೂ ಉಂಟಾಯಿತು. ಸೂಜಿಗಣ್ಣಿನ ಕೆಂಪು ಬಣ್ಣದ ತಲೆಯ ಮುಂಭಾಗ ಸ್ವಲ್ಪ ಕೂದಲಿಲ್ಲದ ( ಏಕೆ ಕಳೆದುಕೊಂಡಿರಬಹುದು ಎಂಬ ಪ್ರಶ್ನೆಯೊಂದಿಗೆ) ಅಸ್ಸಾಂ ರಾಜ್ಯದ ಶಿಕ್ಷಕರ ಪರಿಚಯ ಬಹಳ ಭಾವಸ್ಪರ್ಶಿಯಾಗಿತ್ತು ಅವರು ನೋಟ ಮತ್ತು ಹಲವಾರು ವಿಚಾರ ವಿನಿಮಯಗಳು ನಮ್ಮನ್ನು ನಗುವಿನ ಅಲೆಯಲ್ಲಿ ತೇಲಿಸಿತ್ತು.
ರಚನಾವಾದವನ್ನಾಧರಿಸಿದ ತರಬೇತಿ ...ನಮ್ಮಲ್ಲಿ ಮಕ್ಕಳಲ್ಲಿ ಉಂಟಾದ ಕಲಿಕಾ ನ್ಯೂನತೆಗಳಿಗೆ ಪರಿಹಾರವಾಗಿತ್ತು. ಜ್ಞಾನವನ್ನು ಮಕ್ಕಳಿಗೆ ತಮ್ಮ ಸ್ವಂತ ಅನುಭವಗಳಿಂದ ಕಟ್ಟಬೇಕೇ ವಿನಹಃ ತರಗತಿಯಲ್ಲಿ ಶಿಕ್ಷಕರಿಂದ ಏಕಮುಖವಾಗಿ ಉಪನ್ಯಾಸ ಪದ್ದತಿಯ ಮುಖಾಂತರವಲ್ಲ . ಬಹಳ ಸೂಕ್ಷ್ಮವಾಗಿ ,ಸೂಕ್ತವಾಗಿ ಮಕ್ಕಳು ಜ್ಞಾನವನ್ನು ಕಟ್ಟುವಂತಹ ವಾತಾವರಣವನ್ನು ಶಿಕ್ಷಕರು ಸೃಷ್ಟಿಸಬೇಕೆಂದು ತರಬೇತಿಯ ಮುಖ್ಯಸ್ಥರಾದ ಶ್ರೀ ಮಂಜುನಾಥ ಸರ್ ಸೋದಾಹರಣವಾಗಿ ಬಿಚ್ಚಿಟ್ಟರು.
ತರಬೇತಿಯನ್ನು ವಿಜ್ಞಾನದ ಮಾದರಿ ಮತ್ತು ಚಟುವಟಿಕೆಗಳನ್ನು ಮಾಡಿ ಕಲಿಯುತ್ತಾ ಆನಂದಿಸಿದೆವು. 'ಲೋಟದಲ್ಲಿ ನೀರು ತುಂಬುವ ಆಟ, ಹಡಗಿನಾಕಾರದ ಹಾಳೆಯಲ್ಲಿ ಕಬ್ಬಿಣದ ಗುಂಡುಗಳನ್ನು ನಿಧಾನವಾಗಿ ಹಾಕುತ್ತ ಮುಳುಗಿಸುವುದು, ಕಡಿಮೆ ವೆಚ್ಚದ ಕಿರು ಸೂಕ್ಷ್ಮದರ್ಶಕ , ದ್ರಾವಣದಲ್ಲಿ ಗುಲಾಬಿ ಬಣ್ಣವನ್ನು ಮಾಯ ಮಾಡುವ ಚಟುವಟಿಕೆ, ಕೊನೆಗೆ ಶಬ್ದದ ಕಂಪನಗಳನ್ನು ಬೆಳಕಿನಿಂದ ನೋಡುವಾಗ ಖುಷಿ ಹೇಳ ತೀರದು. ಧ್ವನಿ ಪೆಟ್ಟಿಗೆ ಕಾರ್ಯನಿರ್ವಹಿಸುವ ಮಾದರಿಯಲ್ಲಿ ಎಲ್ಲರೂ ಬಿಟ್ಟುಬಿಡದೆ ಊದುತ್ತಾ ಗದ್ದಲವೆಬ್ಬಿಸುತ್ತಾ ಮಕ್ಕಳಾದರು. ಸುರೇಶ ಸರ್ ಕೈಗೆಟುಕುವ ವೆಚ್ಚದ ಮಾದರಿಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಪ್ರೀತಿಯಿಂದ ನೀಡಿ ನಮ್ಮ ಮನ ಗೆದ್ದರು. ಪ್ರತಿ ಚಟುವಟಿಕೆಗಳಲ್ಲಿ ನಮ್ಮ ಪ್ರಾರಂಭಿಕ ಊಹೆಗಳು ಸೋತವು , ವೈಜ್ಞಾನಿಕ ಸತ್ಯಗಳು ನಮ್ಮನ್ನು ಎಚ್ಚರಿಸಿದವು. ಏಕೆಂದರೆ ಕಬ್ಬಿಣದ ಗುಂಡುಗಳನ್ನು ಹಾಕುವಾಗ ನಾವು ಊಹೆ ಮಾಡಿದ್ದೇ ಬೇರೆ, ಅಲ್ಲಿ ಆಗಿದ್ದೇ ಬೇರೆ!!
ಪ್ರಯೋಗಗಳೇ ವಿಜ್ಞಾನ ಕಲಿಕೆಯ ಜೀವಾಳ. ಸಭಾಂಗಣದಲ್ಲಿದ್ದ ಅನುರಣ ಮಾದರಿ , ಗುರುತ್ವ ಮಾದರಿ , ಡೈನಮೋ , ಮೋಟರ್ …. ಮೊದಲಾದ ಮಾದರಿಗಳು ನಮ್ಮನ್ನು ಕೈ ಬೀಸೀ ಕರೆಯುತ್ತಿದ್ದವು. ರಸಾಯನಶಾಸ್ತ್ರದ ಪ್ರಯೋಗಾಲಯಗಳಲ್ಲಿ ಶ್ರೀ ಸುಧಾಕರ್ ಸರ್ ಅವರು ಮಂತ್ರವಾದಿಗಳಂತೆ ಸೋಡಿಯಂ ಕ್ರಯೊಲೈಟನ್ನು ದ್ರವ ಸ್ಥಿತಿಯಿಂದ ಕೊಠಡಿ ಉಷ್ಣತೆಯಲ್ಲಿ ಘನ ಸ್ಥಿತಿಗೆ ಬಂದದ್ದು ನೋಡಿ ಆಶ್ಚರ್ಯವಾಯಿತು. 5 E [ ENGAGE, EXPLORE, EXPLAIN, ELABORATE EVALUATE ] ಪಾಠದ ಮಾದರಿ ಪ್ರಾಯೋಗಿಕವಾಗಿ ಅದ್ಭುತವಾಗಿತ್ತು.
ಜೀವಂತ ಮೆದುಳು ಒಂದೆಡೆ ಆದರೆ ಜೀವಶಾಸ್ತ್ರದ ಪ್ರಯೋಗಾಲಯದಲ್ಲಿ ಮೀನು, ಕುರಿ, ಜಿರಳೆ ವಿಶೇಷವಾಗಿ ಡಾಲ್ಫಿನ್ ಮೆದುಳಿನ ಮಾದರಿ ಹಲವು ಪ್ರಶ್ನೆಗಳನ್ನ ಹುಟ್ಟಿಸಿತು.
ನಿಸರ್ಗ ನಡಿಗೆಯಲ್ಲಿ ಪರಿಸರ ಶಾಸ್ತ್ರದ ಉಪಾನ್ಯಾಸಕರಾದ ಶ್ರೀ ಸತ್ಯನಾರಾಯಣ ಸರ್ ನಾವು ನೋಡಿರದ ಕದಂಬ ( ವಾಯು ಶುದ್ಧಿ ) , ಮಹಾಗನಿ, ಬಬುಲ್ ಮರಗಳ ಪರಿಚಯ ಮತ್ತು ಔಷಧಿ ಸಸ್ಯಗಳ ಜೊತೆಗೆ ಆಕಾಶ ಮಲ್ಲಿಗೆಗಳ ಪರಿಚಯ ಮಾಡಿಕೊಟ್ಟರು. ಕ್ಯಾಂಪಸ್ ನ ಪಂಚವಟಿ ಉದ್ಯಾನದಲ್ಲಿ ಅರಳಿ , ಆಲ, ಬಸರಿ ಮತ್ತು ಎರಡು ರೀತಿಯ ಅತ್ತಿಮರಗಳ ಕಾಂಡದಿಂದ ಔಷಧಿ ತಯಾರಿಸುವುದರ ಬಗ್ಗೆ ಮಾಹಿತಿ ತಿಳಿಸಿದಾಗ ಖುಷಿಯಾಯಿತು. ಶಿಕ್ಷಕರ ವಸತಿ ಗೃಹದ ಮುಂದೆ ದೊಡ್ಡದಾದ ಚದುರಂಗ ಆಟ ಆಡುವುದೇ ಒಂದು ಮೋಜು... 2 ಘನಾಕೃತಿಗಳಿಂದ 1 ತ್ರಿಭುಜ ಪಾದ ಗೋಪುರ ತಯಾರಿಸುವುದು, ಭಿನ್ನರಾಶಿ, ಪೈ ಬೆಲೆ, ಕಗ್ಗಂಟ್ಟಾದ ಕಬ್ಬಿಣದ ಕೊಂಡಿಗಳನ್ನು ಬಿಡಿಸುವ ಸ್ಪರ್ಧೆ, ಶ್ರೀನಿವಾಸ್ ರಾಮಾನುಜರ ಮ್ಯಾಜಿಕ್ ಸಂಖ್ಯೆಗಳು ವಿಷಯದ ಹಂಗು ಮೀರಿ ಹೊಸ ಅನುಭವವನ್ನು ಕಟ್ಟಿ ಕೊಟ್ಟವು.
ಶರ್ಮಿಳ ಮೇಡಂ ಅವರು ಹೊಸ ಪಜಲ್‌ಗಳನ್ನು ( puzzle ] ಸೃಷ್ಟಿಸಿ ಸವಾಲೆಸೆದರು. ಮತ್ತೊಂದು ವಿಶೇಷವೆಂದರೆ ಆಕರ್ಷಣೀಯವಾದ ಕಲ್ಲಿನ ಮೇಲೆ ಬಣ್ಣದ ಚಿತ್ರಗಳು ಮಾಸದಂತೆ ಇಂದೀಕರಿಸಿದ್ದು, ಕರೋನಾ ಸಂದರ್ಭದಲ್ಲಿ ಅನುಪಯುಕ್ತ ವಸ್ತುಗಳಿಂದ ಹಳ್ಳಿಯ ಚಿತ್ರಣವನ್ನು ತಯಾರಿಸುವ ವಿಧಾನಗಳನ್ನು ಹೇಳಿಕೊಡುವುದನ್ನು ಮರೆಯಲಿಲ್ಲ ನಮ್ಮ ಆಯಿಷ ಮೇಡಂ.... .ಒಂದು ಹಾಳೆಯನ್ನು ಪುನಃ ಅಂಟಿಸದೆ ಕತ್ತರಿಸಿ ಇಡೀ ದೇಹವನ್ನು ಅದರ ಒಳಗೆ ಹೋಗಿಸುವಂತ ಸವಾಲೆಸೆದಾಗ ತಲೆ ಗಿರ್ರನೆ ತಿರುಗಿ ಕಂಗಾಲಾದೆವು. ದುರ್ಗಪ್ರಸಾದ ರವರು ಇದಕ್ಕೆ ಪರಿಹಾರ ನೀಡಿದ್ದು ಯಾವುದೇ ಸಮಸ್ಯೆಗೆ ಇರುವ ಅನಂತ ಸಾಧ್ಯತೆಗಳನ್ನು ತೆರೆದಿಟ್ಟಿತು.
ಎಲ್ಲಿಯೂ ನಿಲ್ಲದಿರು ! ವಿಜ್ಞಾನ ಪ್ರಯೋಗ ಸಿದ್ದಾಂತ ಪದ
ಗಳಲಿ ಪಥವಳೆವ ಬೆಳೆಯುವ ವಿಶ್ವಾನ್ವೇಷಕಂ ನಡೆಗೆ
ಮೊದಲಿಹುದೇ ? ಕೊನೆಯುಂಟೇ ? ಗತಿಶೀಲ ವರ್ತಮಾ
ನಂ ಮಾತ್ರಂ ಶಾಶ್ವತಂ ನೀ ಸಾಕ್ಷಿ.... ಅತ್ರಿ ಸೂನು II
No comments:
Post a Comment