ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, September 4, 2022

ಸವಿಜ್ಞಾನ ಸೆಪ್ಟೆಂಬರ್ - 2022 ರ ಲೇಖನಗಳು

 ಸವಿಜ್ಞಾನ ಸೆಪ್ಟೆಂಬರ್ - 2022 ರ ಲೇಖನಗಳು

ಸಂಪಾದಕರ ಡೈರಿಯಿಂದ . . . - ಡಾ. ಬಾಲಕೃಷ್ಣ ಅಡಿಗ

ಅಶ್ರು ವಾಯು, ಏನಿದರ ಮರ್ಮ ? ಲೇಖಕರು : ಶ್ರೀಮತಿ ನಾಗವೇಣಿ. ಬಿ

ನಾವು ಬಂದದ್ದು ದಕ್ಷಿಣ ಅಮೇರಿಕಾದಿಂದ ! ಲೇಖಕರು : ತಾಂಡವಮೂರ್ತಿ.ಎ.ಎನ್.

ಬಿಕ್ಕಟ್ಟಿನಿಂದ ಇಕ್ಕಟ್ಟಿನೆಡೆಗೆ……… ಲೇಖಕರು : ರೋಹಿತ್ ವಿ. ಸಾಗರ್ 

ಬ್ರಹ್ಮಾಂಡದ ಸೃಷ್ಟಿರಹಸ್ಯ ..... ಲೇಖಕರು :ಶ್ರೀಮತಿ ಬಿ.ಎನ್‌. ರೂಪ

ಸಿರಿಗೆರೆಯ ಸಿರಿ ಗುರು ಟಿ.ಪಿ. ಉಮೇಶ್ . . . ಲೇಖನ : ಆಶಾ C.H.M.

ಒಗಟುಗಳು ...... - ಶ್ರೀ ರಾಮಚಂದ್ರ ಭಟ್ ಬಿ. ಜಿ.

ವ್ಯಂಗ್ಯಚಿತ್ರಗಳು ...... - ಶ್ರೀಮತಿ ಜಯಶ್ರೀ ಬಿ ಶರ್ಮ ಮತ್ತು  ಶ್ರೀ ವಿಜಯ್ ಕುಮಾರ್ ಹೆಚ್.ಜಿ. 

ಸೆಪ್ಟೆಂಬರ್ ತಿಂಗಳಿನ ಪ್ರಮುಖ ದಿನಾಚರಣೆಗಳು ...... - ಶ್ರೀ ರಾಮಚಂದ್ರ ಭಟ್ ಬಿ. ಜಿ.

ಸಂಪಾದಕರ ಡೈರಿಯಿಂದ . . .

 ಸಂಪಾದಕರ ಡೈರಿಯಿಂದ . . . . . . . . .

‘ಸವಿಜ್ಞಾನ’ದ ಸೆಪ್ಟೆಂಬರ್ ತಿಂಗಳ ಸಂಚಿಕೆ ಪ್ರಕಟವಾಗಿದೆ. ಈ ವೇಳೆಗಾಗಲೇ ರಾಷ್ಟ್ರ ಹಾಗೂ ರಾಜ್ಯ ಮಟ್ಟದ “ಅತ್ಯುತ್ತಮ ಶಿಕ್ಷಕರ” ಪಟ್ಟಿ ಬಿಡುಗಡೆಯಾಗಿದೆ. ಪ್ರಶಸ್ತಿಗೆ ಭಾಜನರಾದ ಎಲ್ಲ ಶಿಕ್ಷಕ ಬಂಧುಗಳಿಗೆ ‘ಸವಿಜ್ಞಾನ’ ತಂಡದಿಂದ ಹಾರ್ದಿಕ ಅಭಿನಂದನೆಗಳು. ರಾಷ್ಟ್ರಮಟ್ಟದಲ್ಲಿ ಈ ಬಾರಿಯ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರದುರ್ಗದ ಅಮೃತಾಪುರದ ಶಿಕ್ಷಕ ಟಿ.ಪಿ. ಉಮೇಶ್ ಅವರನ್ನು ಈ ಸಂಚಿಕೆಯಲ್ಲಿ ಪರಿಚಯಿಸಿದ್ದಾರೆ, ಚಿತ್ರದುರ್ಗದ ವಿದ್ಯಾ ವಿಕಾಸ ಸಂಸ್ಥೆಯ ಶಿಕ್ಷಕಿ, ಸಿ.ಹೆಚ್,ಎಂ, ಆಶಾ ಅವರು.

ಈ ಸಂಚಿಕೆಯ ಇನ್ನೊಂದು ವಿಶೇಷವೆಂದರೆ, ಇಬ್ಬರು ವಿಜ್ಞಾನ ಶಿಕ್ಷಕಿಯರು ತಮ್ಮ ಲೇಖನಗಳ ಮೂಲಕ ‘ಸವಿಜ್ಞಾನ’ದ ಲೇಖಕಿಯರ ಬಳಗಕ್ಕೆ ಸೇರ್ಪಡೆಯಾಗಿರುವುದು. ಶ್ರೀಮತಿ ಬಿ. ನಾಗವೇಣಿ ಅವರು ಆಶ್ರುವಾಯುವಿನ ಬಗ್ಗೆ ಬರೆದಿದ್ದರೆ, ಶ್ರೀಮತಿ ಬಿ.ಎನ್.ರೂಪ ಅವರು ಬ್ರಹ್ಮಾಂಡದ ಸೃಷ್ಟಿ ರಹಸ್ಯದ ಬಗ್ಗೆ ಇತ್ತೀಚಿನ ಸಂಶೋಧನೆಗಳ ಬಗ್ಗೆ ಲೇಖನ ಬರೆದಿದ್ದಾರೆ. ಈ ಇಬ್ಬರು ಶಿಕ್ಷಕಿಯರೂ ಈ ಬಾರಿಯ ಜಿಲ್ಲಾಮಟ್ಟದ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾಗಿರುವುದು ‘ಸವಿಜ್ಞಾನ’ಕ್ಕೆ ಹೆಮ್ಮೆಯ ಸಂಗತಿ.

ಬೈಜಿಕ ಶಕ್ತಿ ಬಳಕೆಗೆ ಬಂದ ಸಂದರ್ಭವನ್ನು ಹಾಗೂ ಅದರ ಪರಿಣಾಮಗಳನ್ನು ವಿವರಿಸುವ ರೋಹಿತ ಸಾಗರ್ ಅವರ ಲೇಖನ, ದಕ್ಷಿಣ ಅಮೆರಿಕಾ ಮೂಲದ ನಮ್ಮ ಆಹಾರ ಸಸ್ಯಗಳ ಪರಿಚಯ ಮಾಡಿಕೊಡುವ ತಾಂಡವಮೂರ್ತಿ ಅವರ ಲೇಖನ, ಈ ಸಂಚಿಕೆಯ ಇತರ ವೈಶಿಷ್ಟ್ಯಗಳು.

ಇವೆಲ್ಲದರ ಜೊತೆಗೆ, ಸೆಪ್ಟೆಂಬರ್ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ, ವಿಜ್ಞಾನಕ್ಕೆ ಸಂಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿ

ಪ್ರಧಾನ ಸಂಪಾದಕರು

ಅಶ್ರು ವಾಯು, ಏನಿದರ ಮರ್ಮ ?

 ಅಶ್ರು ವಾಯು, ಏನಿದರ ಮರ್ಮ ?

ಲೇಖಕರು : ಶ್ರೀಮತಿ ನಾಗವೇಣಿ. ಬಿ

ಪೋಲೀಸರಿಂದ ಅಶ್ರುವಾಯು ಪ್ರಯೋಗ ಎಂಬ ಸುದ್ದಿಯನ್ನು ಆಗಾಗ ಕೇಳಿದ್ದೇವೆ. ಇದರ ರಾಸಾಯನಿಕ ಸಂಯೋಜನೆ ಹಾಗೂ ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ, ಶಿಕ್ಷಕಿ ಶ್ರೀಮತಿ
ಬಿ. ನಾಗವೇಣಿ ಅವರು.

ಎಲ್ಲಿಯಾದರೂ ಗಲಭೆ, ಧಂಗೆ ಅಥವಾ ಮುಷ್ಕರ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಂಡಿರುವ ಸಾರ್ವಜನಿಕರ ತೀವ್ರವಾದ ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದಾಗ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೋಲೀಸರು ಸಾಮಾನ್ಯವಾಗಿ ಲಾಠಿ ಪ್ರಹಾರ ಮಾಡುವುದು ನಮಗೆ ತಿಳಿದಿದೆ. ಲಾಠಿ ಪ್ರಹಾರಕ್ಕೂ ಪ್ರತಿಭಟನಕಾರರು ಬಗ್ಗದೇ ಹೋದರೆ ಪೋಲೀಸರು ಬಳಸುವ ಒಂದು ಪರಿಣಾಮಕಾರಿ ಅಸ್ತ್ರವೇ ಆಶ್ರುವಾಯು ಪ್ರಯೋಗ ಅಥವಾ ಟಿಯರ್‌ ಗ್ಯಾಸ್.

ಈ ಟಿಯರ್‌ ಗ್ಯಾಸ್‌ ಎಂದರೆ ಏನು?  ಕಣ್ಣಿಗೆ, ಬಾಯಿಗೆ ಗಂಟಲಿಗೆ, ಶ್ವಾಸಕೋಶಕ್ಕೆ ಮತ್ತು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವ ರಾಸಾಯನಿಕಗಳ ಒಂದು ಗುಂಪಿಗೆ ಒಟ್ಟಾಗಿ ಈ ಹೆಸರಿದೆ. ಅವುಗಳಲ್ಲಿ ಪ್ರಮುಖವಾದುವು ಕ್ಲೋರೋಅಸಿಟೋಫೀನೋನ್, ಕ್ಲೋರೋಬೆನ್‌ ಜಾಲ್‌ ಮೆಲನೋ  ನೈಟ್ರೈಲ್‌ ಹಾಗೂ ಕ್ಲೋರೋಪಿಕ್ರಿನ್.

ಇವು ಸಾಮಾನ್ಯವಾಗಿ ದ್ರವ ರೂಪ ಅಥವಾ ಹರಳಿನಾಕಾರದಲ್ಲಿರುತ್ತವೆ. ಶಾಖ ತಗುಲಿದಾಗ ನೀರಾವಿಯಂಥ ಹೊಗೆಯನ್ನುಂಟುಮಾಡಿ ತಮ್ಮ ಪರಿಣಾಮವನ್ನು ಪ್ರದರ್ಶಿಸುತ್ತವೆ. ಮೊದಲು ಕಣ್ಣಿಗೆ ಆಕ್ರಮಣ ಮಾಡುತ್ತವೆ. ಸ್ಪರ್ಶಿಸಿದ‌ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಪರಿಣಾಮ ಬೀರುತ್ತವೆ. ಕಣ್ಣುಗಳಲ್ಲಿ ತುರಿಕೆ, ನೀರು ಸೋರುವುದು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಬಾಧಿತ ವ್ಯಕ್ತಿಗಳು ಚಡಪಡಿಸಲು ಪ್ರಾರಂಭಿಸುತ್ತಾರೆ. ಸುಮಾರು ೧೫ರಿಂದ ೩೦ ನಿಮಿಷ ಪರಿಣಾಮ ಉಳಿಯುತ್ತದೆ. ಟಿಯರ್‌ ಗ್ಯಾಸ್‌ ಆಮ್ಲೀಯ ಗುಣ ಹೊಂದಿದ್ದು ವಿನಿಗರ್‌ ರೀತಿಯ ವಾಸನೆ ಹೊಂದಿರುತ್ತದೆ.

ಕ್ಲೋರೋಬೆನ್‌ ಜಾಲ್‌ ಮೆಲನೋ  ನೈಟ್ರೈಲ್ ಅನ್ನು ಆವಿಷ್ಕರಿಸಿದವರು. ಅಮೆರಿಕಾದ ಬೆನ್‌ ಕಾರ್ಸೆನ್‌ (Ben Corsen) ಹಾಗೂ ರೋಜರ್‌ ಸ್ಟೌಟನ್‌ (Roger Stoughton)  ಎಂಬ ವಿಜ್ಞಾನಿಗಳು. ಇದರ ಅಣು ಸೂತ್ರ C10 H5 Cl N2 ಕಂಡುಹಿಡಿದರು.

ಇಂಥ ರಾಸಾಯನಿಕಗಳಿಗೆ ಪದೇ, ಪದೇ ಒಡ್ಡಿಕೊಂಡರೆ, ಅದರಿಂದ ತೀವ್ರ ಪರಿಣಾಮಗಳಿಗೆ ಒಳಗಾಗಬೇಕಾಗಬಹುದು. ಅಂಧತ್ವ ಉಂಟಾಗುವ ಸಾಧ್ಯತೆಯೂ ಇದೆ. ಗಂಟಲು, ಶ್ವಾಸಕೋಶಗಳ ಅಂಗಾಂಶಗಳು ಸುಟ್ಟು ಹೋಗಬಹುದು. ಉಸಿರಾಟ ಸಮಸ್ಯೆ ಉಂಟಾಗಿ, ಅದರಿಂದ ಸಾವು ಸಂಭವಿಸಬಹುದು.

ಶ್ರೀಮತಿ ಬಿ.ನಾಗವೇಣಿ ಅವರು 2022 ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ”  ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ʼಸವಿಜ್ಞಾನʼ ತಂಡದ ಪರವಾಗಿ ಹಾರ್ದಿಕ ಅಭಿನಂದನೆಗಳು.

 

 ಲೇಖಕರು : ಶ್ರೀಮತಿ ನಾಗವೇಣಿ.ಬಿ.

ಸಹಶಿಕ್ಷಕಿ,

ಕರ್ನಾಟಕ ಪಬ್ಲಿಕ್‌ ಶಾಲೆ

ಬಸವನಗುಡಿ, ಬೆಂಗಳೂರು-೪

ನಾವು ಬಂದದ್ದು ದಕ್ಷಿಣ ಅಮೇರಿಕಾದಿಂದ !

 ನಾವು ಬಂದದ್ದು ದಕ್ಷಿಣ ಅಮೇರಿಕಾದಿಂದ !

ಲೇಖಕರು : ತಾಂಡವಮೂರ್ತಿ.ಎ.ಎನ್.

ಪ್ರಕೃತಿಯಲ್ಲಿರುವ ಅಗಾಧ ಪ್ರಮಾಣದ ಸಸ್ಯ ಪ್ರಭೇದಗಳಲ್ಲಿ ನಮಗೆ ಆಹಾರವಾಗಿ ಒದಗುತ್ತಿರುವ ಸಸ್ಯ ಪ್ರಭೇದಗಳು ಕೆಲವೇ ಕುಟುಂಬಗಳಿಗೆ ಸೀಮಿತವಾಗಿವೆ. ಅವುಗಳಲ್ಲಿ ಒಂದು ಪ್ರಮುಕ ಕುಟುಂಬ ಸೊಲನೇಸಿ. ಬಹುತೇಕ ದಕ್ಷಿಣ ಅಮೇರಿ ಮೂಲದ ಈ ಕುಟುಂಬಕ್ಕೆ ಸೇರಿದ ಕೆಲ ಪ್ರಮುಖ ಸಸ್ಯ ಪ್ರಭೇದಗಳ ಪರಿಚಯ ಮಾಡಿಕೊಟ್ಟಿದ್ದಾರೆ, ಶಿಕ್ಷಕ ತಾಂಡವಮೂರ್ತಿ ಅವರು.

ಮಾನವನ ನಾಗರೀಕತೆಯನ್ನು ಗಾಢವಾಗಿ ಪ್ರಭಾವಿಸಿದ ಸಸ್ಯ ಕುಟುಂಬಗಳಲ್ಲಿ ಆಹಾರದ ಮೂಲವಾಗಿ ಪೋಷಿಸುವ ಪ್ರಭೇದಗಳ ಜೊತೆಗೆ ವ್ಯಸನಕಾರಕ ಹಾಗೂ ವಿಷಕಾರಿ ಆಲ್ಕಲಾಯಿಡ್ಗಳ ಮೂಲವಾಗಿರುವ ವೈವಿಧ್ಯಮಯ ಪ್ರಭೇದದ ಸಸ್ಯಗಳನ್ನು ಹೊಂದಿರುವ ಸೊಲನೇಸಿ() ಕುಟುಂಬ ಪ್ರಮುಖವಾದುದು. ಪ್ರಪಂಚದ ಎಲ್ಲಾ ನಾಗರೀಕತೆ ಮತ್ತು ಜನಾಂಗಗಳಲ್ಲಿ ಈ ಕುಟುಂಬದ ಸಸ್ಯಗಳ ಬಳಕೆ ಹಾಸು ಹೊಕ್ಕಾಗಿದೆ. ಬದನೆಯೊಂದನ್ನು ಹೊರತು ಪಡಿಸಿ ವಾಣಿಜ್ಯಿಕವಾಗಿ ಪ್ರಮುಖವಾದ ಈ ಕುಟುಂಬದ ಪ್ರಭೇದಗಳು ದಕ್ಷಿಣ ಅಮೇರಿಕ ಮೂಲದವು. ವಸಾಹತು ಯುಗದಲ್ಲಿ ಈ ಪ್ರಭೇದಗಳು ಪ್ರಪಂಚದಾದ್ಯಂತ ಯೂರೋಪಿಯನ್ ವಸಾಹತು ಶಾಹಿಗಳಿಂದ ವ್ಯಾಪಕವಾಗಿ ಪ್ರಸಾರಗೊಂಡು ಜನಪ್ರಿಯವಾದವು. ಸುಮಾರು 98 ಜಾತಿ(genera) ಮತ್ತು 2700 ಪ್ರಭೇದಗಳನ್ನು ಒಳಗೊಂಡಿರುವ ಈ ಕುಟುಂಬದ ಪ್ರಮುಖ, ಉಪಯುಕ್ತ ಸಸ್ಯ  ಪ್ರಭೇದಗಳ ಪರಿಚಯ ಇಲ್ಲಿದೆ.

ಸಸ್ಯ ವರ್ಗೀಕರಣದಲ್ಲಿ ಸೊಲನೇಸಿ ಕುಟುಂಬದ ಸ್ಥಾನ ಮಾನ

Kingdom/ಸಾಮ್ರಾಜ್ಯ  - Plantae/ಸಸ್ಯ ಸಾಮ್ರಾಜ್ತ

Division/ವಂಶ       - Angiospermae/ಆವೃತ ಬೀಜ ಸಸ್ಯಗಳು

Class/ವರ್ಗ           - Magnoliopsida (Dicotyledons)/ದ್ವಿದಳ ಸಸ್ಯಗಳು

Order/ಗಣ           - Solanales/ಸೊಲನೇಲಿಸ್

Family/ಕುಟುಂಬ      - Solanaceae/ಸೊಲನೇಸಿ

ಪ್ರಮುಖಜಾತಿಗಳು (genera)

ಸೊಲನಮ್/ Solanum

ಕ್ಯಾಪ್ಸಿಕಮ್/ Capsicum

ನಿಕೋಟಿಯಾನ/ Nicotiana

ದತೂರ/Datura

ಲೈಸಿಯಮ್/Lycium

ಹೆಚ್ಚು ಬಳಕೆಯಲ್ಲಿರುವ ಈ ಕುಟುಂಬದ ಸಸ್ಯಗಳ ಪರಿಚಯ ಮಾಡಿಕೊಳ್ಳೋಣ.

ಆಲೂಗಡ್ಡೆ (Solanum tuberosum)  

ದಕ್ಷಿಣ ಅಮೇರಿಕ ಮೂಲದ ಈ ಸಸ್ಯವು ಸುಮಾರು 7000 ವರ್ಷಗಳಿಂದಲೂ ಆಹಾರದ ಮೂಲವಾಗಿ ಬಳಕೆಯಲ್ಲಿದೆ.16ನೇ     ಶತಮಾನದಲ್ಲಿ ಸ್ಪಾನಿಷರು ಈ ಸಸ್ಯವನ್ನು ಯುರೋಪ್ ಗೆ ಪರಿಚಯಿಸಿದರು, ನಂತರ ವಸಾಹತು ಯುಗದಲ್ಲಿ ಜಗತ್ತಿನ ಇತರ ಭಾಗಗಳಿಗೆ ಆಲೂಗಡ್ಡೆಯ ಪರಿಚಯವಾಯಿತು. ಭಾರತದಲ್ಲಿ ಮೊದಲು ವಸಾಹತು ಸ್ಥಾಪಿಸಿದ ಪೋರ್ಚುಗೀಸರು ಆಲೂಗಡ್ಡೆಯನ್ನು ಇಲ್ಲಿ ಪರಿಚಯಿಸಿದರು.

ಈ ಸಸ್ಯದ ಗಡ್ಡೆ(tuber) ಮೂಲತ ಕಾಂಡದ ರೂಪಾಂತರವಾಗಿದ್ದು ಖಾದ್ಯ ಯೋಗ್ಯವಾಗಿದೆ. ಮೆಕ್ಕೆ ಜೋಳ, ಗೋಧಿ, ಭತ್ತದ ನಂತರ ಪ್ರಪಂಚದ ನಾಲ್ಕನೇ ಪ್ರಮುಖ ಆಹಾರ ಬೆಳೆಯಾಗಿದೆ. ಅಪೇಕ್ಷಿತ ತಳೀಕರಣದಿಂದ ಪ್ರಪಂಚದಾದ್ಯಂತ ಸುಮಾರು 5000 ಬಗೆಯ ಆಲೂಗಡ್ಡೆ ತಳಿಗಳು ರೂಪುಗೊಂಡಿವೆ. ಅಮೇರಿಕಾ ಮೂಲದ್ದಾದರೂ ಯೂರೋಪಿಯನ್ನರ ಪ್ರಮುಖ ಆಹಾರ ಮೂಲವಾಗಿದೆ. ಪ್ರಸ್ತುತ ಚೀನಾ ಮತ್ತು ಭಾರತ ಆಲೂಗಡ್ಡೆಯ ಪ್ರಮುಖ ಉತ್ಪಾದಕ ರಾಷ್ಟ್ರಗಳಾಗಿ ಗುರುತಿಸಿಕೊಂಡಿವೆ.

ಟೊಮ್ಯಾಟೊ (Solanum lycopersicum)

ಇದು ಸಹ ದಕ್ಷಿಣ ಅಮೇರಿಕಾ ಮೂಲದ ಸಸ್ಯ.ಅಜ್ಟೆಕ್ ನಾಗರೀಕತೆಯ ಕಾಲದಿಂದಲೂ ಆಹಾರವಾಗಿ ಬಳಕೆಯಲ್ಲಿದೆ.ಕೊಲಂಬಸ್ ನ ಅಮೇರಿಕಾ ಅನ್ವೇಷಣೆಯ ನಂತರ 16ನೇ ಶತಮಾನದಲ್ಲಿ ಸ್ಪಾನಿಷರಿಂದ ಟೊಮ್ಯಾಟೊ ಯುರೋಪ್ ಗೆ, ನಂತರ ವಸಾಹತು ಯುಗದಲ್ಲಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿಯೂ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು. ಟೊಮ್ಯಾಟೊ ಮೂಲತ: ಒಂದು ಬೆರಿ ಹಣ್ಣು,ಸಸ್ಯದ ಕಾಂಡ ದುರ್ಬಲವಾಗಿದ್ದು ಬೆಳವಣಿಗೆಗೆ ಆಧಾರ ಅವಶ್ಯಕ.ಟೊಮ್ಯಾಟೊ ಎಲ್ಲಾ ಶೈಲಿಯ ಆಹಾರಗಳಲ್ಲೂ ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ.ಇದರ ಹುಳಿ ಮಿಶ್ರಿತ ಪರಿಮಳ ಆಹಾರದ ರುಚಿಯನ್ನು ಹೆಚ್ಚಿಸುವುದರಿಂದ ವ್ಯಾಪಕವಾಗಿ ಬಳಕೆಯಾಗುವ ತರಕಾರಿಯಾಗಿ ಪ್ರಪಂಚದಾದ್ಯಂತ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ. ಎಲೆ ಮತ್ತು ಪಕ್ವಗೊಳ್ಳದ ಕಾಯಿಗಳಲ್ಲಿ ಟೊಮ್ಯಾಟಿನ್ ಎಂಬ ಆಲ್ಕಲಾಯಿಡ್ ಹೆಚ್ಚಾಗಿ ಸಂಗ್ರಹವಾಗುವುದರಿಂದ ತಿನ್ನಲು ಯೋಗ್ಯವಲ್ಲ. ಪಕ್ವಗೊಂಡ ಹಣ್ಣಿನಲ್ಲಿ ಟೊಮ್ಯಾಟಿನ್ ಇರುವುದಿಲ್ಲ.

ಬದನೆ (Solanum melongena).

ದಕ್ಷಿಣ ಏಷ್ಯಾ ಮತ್ತು ಆಫ್ರಿಕಾ ಮೂಲದ ಪ್ರಮುಖ ತರಕಾರಿ ಬೆಳೆಯಾದ ಬದನೆಕಾಯಿಯೂ ಸಹ ಟೊಮ್ಯಾಟೊದಂತೆಯೇ ಬೆರಿಹಣ್ಣು.ಮಸಾಲೆ ಮತ್ತು ಖಾದ್ಯ ತೈಲವನ್ನು ಹೀರಿಕೊಳ್ಳುವ ಬದನೆ ಕಾಯಿಯ ಸ್ಪಂಜಿನಂತಹ ಅಂಗಾಂಶವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ಸಸ್ಯದ ಎಲೆ ಮತ್ತು ಹೂವುಗಳಲ್ಲಿ ಸೊಲನಿನ್ ಎಂಬ ವಿಷಕಾರಿ ಆಲ್ಕಲಾಯಿಡ್ ಸಂಗ್ರಹವಾಗುವುದರಿಂದ ಮನುಷ್ಯರಿಗೆ ಮತ್ತು ಜಾನುವಾರುಗಳು ತಿನ್ನಲು ಯೋಗ್ಯವಲ್ಲ. ಬದನೆ ಕಾಯಿಯಲ್ಲಿ ಹಿಸ್ಟಮಿನ್ ಎಂಬ ರಾಸಾಯನಿಕವಿರುವುದರಿಂದ ಕೆಲವರಿಗೆ ಇದರ ಸೇವನೆ ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಬದನೆ ಕಾಯಿಯನ್ನು ಕತ್ತರಿಸಿ ಗಾಳಿಗೆ ತೆರೆದಿಟ್ಟಾಗ ಉತ್ಕರ್ಷಣೆಯಿಂದ ಕಂದು ಬಣ್ಣಕ್ಕೆ ತಿರುಗುತ್ತದೆ.

ಕ್ಯಾಪ್ಸಿಕಮ್ (ಕಾಯಿ ಮೆಣಸು)/Capsicum

ಇದೂ ಸಹ ದಕ್ಷಿಣ ಅಮೇರಿಕ ಮೂಲದ ಸಸ್ಯ.16ನೇ ಶತಮಾನದ ನಂತರ ಸ್ಪಾನಿಷರ ಮೂಲಕ ಯುರೋಪ್ ಮತ್ತು ಇತರ ಖಂಡಗಳಿಗೆ ಪರಿಚಯವಾಯಿತು.ಇದರ ಖಾದ್ಯ ಯೋಗ್ಯ ಭಾಗವು ಟೊಮ್ಯಾಟೊ ಮತ್ತು ಬದನೆ ಕಾಯಿಯಂತೆ ಬೆರಿಹಣ್ಣು.ಇದರಲ್ಲಿ ಕಡ್ಡಿ ಮೆಣಸು (Chilli capsicum) ಮತ್ತು ದಪ್ಪ ಮೆಣಸು (Bell capsicum) ಎಂಬ ಪ್ರಭೇದಗಳಿವೆ. ಸಾಮಾನ್ಯವಾಗಿ ಕಡ್ಡಿ ಮೆಣಸಿನಲ್ಲಿ ಖಾರದ ಸಂವೇದನೆಗೆ ಕಾರಣವಾದ ಕ್ಯಾಸ್ಪೈಸಿನ್ ಎಂಬ ಆಲ್ಕಲಾಯಿಡ್ ಹೆಚ್ಚಿನ ಪ್ರಮಾನದಲ್ಲಿರುತ್ತದೆ. ಸ್ತನಿಗಳಲ್ಲಿ ಬಾಯಿ ಮತ್ತು ಜೀರ್ಣನಾಳದ ಉರಿ ಸಂವೇದನೆಗೆ ಕ್ಯಾಸ್ಪೈಸಿನ್ ಕಾರಣವಾಗುತ್ತದೆ, ಆದರೆ ಪಕ್ಷಿಗಳಲ್ಲಿ ಇದರ ಪ್ರಭಾವ ಭಾಧಿಸುವುದಿಲ್ಲ. ಪ್ರಪಂಚದಾದ್ಯಂತ ಎಲ್ಲಾ ಶೈಲಿಯ ಆಹಾರಗಳಲ್ಲಿ ಕ್ಯಾಪ್ಸಿಕಮ್ ಆಹಾರದ ರುಚಿಯನ್ನು ಹೆಚ್ಚಿಸಲು ವ್ಯಾಪಕವಾಗಿ ಬಳಕೆಯಾಗುತ್ತದೆ.

ತಂಬಾಕು (Nicotiana tabacum)

ವ್ಯಸನಕಾರಕ ನಿಕೋಟಿನ್ ಎಂಬ ಆಲ್ಕಲಾಯಿಡ್ ನ ಮೂಲವಾದ ಈ ಸಸ್ಯವು ಸಹ ಅಮೇರಿಕಾ ಮೂಲದ್ದು.16ನೇ ಶತಮಾನದ ನಂತರ ಯೂರೋಪ್ ಮತ್ತು ಇತರ ಖಂಡಗಳಿಗೆ ಪರಿಚಯವಾಯಿತು.ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸಾವುಗಳಿಗೆ ತಂಬಾಕು ಕಾರಣವಾಗುತ್ತದೆ.ವಾರ್ಷಿಕ ಸರಾಸರಿ 6 ಮಿಲಿಯನ್ ಜನರ ಸಾವಿಗೆ ತಂಬಾಕು  ವ್ಯಸನದಿಂದ ಸಾವಿಗೀಡಾಗುತ್ತಾರೆ. ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿ ತಂಬಾಕು ವ್ಯಸನ ವಿವಿಧ ರೂಪಗಳಲ್ಲಿ (ಬೀಡಿ, ಸಿಗರೇಟ್, ಗುಟ್ಕಾ, ಪಾನ್, ಜಗಿಯುವ ತಂಬಾಕು, ಇತ್ಯಾದಿ) ಬಳಕೆಯಲ್ಲಿದೆ. ಕ್ಯಾನ್ಸರ್, ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣವಾದ ತಂಬಾಕು ಸೇವನೆ ಸಾಮಾಜಿಕ,ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದರೂ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ತಂಬಾಕು ಲಾಬಿ ವಿಶ್ವ ಆರ್ಥಿಕತೆಯನ್ನು ಪ್ರಭಾವಿಸುವುದರಿಂದ ಯಾವ ದೇಶವೂ ಸಂಪೂರ್ಣವಾಗಿ ತಂಬಾಕನ್ನು ನಿರ್ಬಂಧಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ.

ಒಟ್ಟಾರೆ ವೈವಿಧ್ಯಮಯ, ವೈರುಧ್ಯಮಯ ಪ್ರಭೇದಗಳನ್ನೊಳಗೊಂಡ ಸೊಲನೇಸಿ ಕುಟುಂಬ ಮಾನವನ ಪೋಷಣೆಗೆ ಸಹಕಾರಿಯಾಗಿರುವುದಲ್ಲದೆ, ವ್ಯಸನಕಾರಕ ಆಲ್ಕಲಾಯಿಡ್ ಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡುತ್ತವೆ.ಜಾಗತಿಕ ಆರ್ಥಿಕತೆಯಲ್ಲಿಯೂ ಪ್ರಮುಖ ಪಾತ್ರ ವಹಿಸುವ ಸೋಲನೇಸಿ ಕುಟುಂಬ ಸದಸ್ಯರು ಮಾನವ ನಾಗರೀಕತೆಯ ವಿಕಾಸದಲ್ಲಿ ಹಾಸುಹೊಕ್ಕಾಗಿ ತಮ್ಮ ಛಾಪು ಮೂಡಿಸಿವೆ. ಅಲ್ಲವೇ?  

ಲೇಖಕರು : ತಾಂಡವಮೂರ್ತಿ.ಎ.ಎನ್.
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಕಾರಮಂಗಲ
ಬಂಗಾರಪೇಟೆ(ತಾ.), ಕೋಲಾರ(ಜಿಲ್ಲೆ)

ಬಿಕ್ಕಟ್ಟಿನಿಂದ ಇಕ್ಕಟ್ಟಿನೆಡೆಗೆ………

 ಬಿಕ್ಕಟ್ಟಿನಿಂದ ಇಕ್ಕಟ್ಟಿನೆಡೆಗೆ………

ಲೇಖಕರು : ರೋಹಿತ್ ವಿ. ಸಾಗರ್
ಪ್ರಾಂಶುಪಾಲರು, ಹೊಂಗಿರಣ ಪದವಿ ಪೂರ್ವ ಕಾಲೇಜು
ಅಮಟೆಕೊಪ್ಪ, ಸಾಗರ, ಶಿವಮೊಗ್ಗ ಜಿಲ್ಲೆ

ಮಾನವ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದಂತೆ, ತನ್ನ ವಿನಾಶಕ್ಕೆ ತಾನೇ ಹೇಗೆ ಕಾರಣನಾಗುತ್ತಿದ್ದಾನೆ ಎಂಬದಕ್ಕೆ ಬೈಜಿಕ ಶಕ್ತಿಯ ಅನ್ವೇಷಣೆ ಒಂದು ಜ್ವಲಂತ ಉದಾಹರಣೆ. ಅದರ ಹಿಂದಿನ ರೋಚಕ ಕತೆಯನ್ನು ನಿಮ್ಮ ಮುಂದಿಟ್ಟಿದ್ದಾರೆ, ʼಸವಿಜ್ಞಾನʼ ತಂಡದ ಶಿಕ್ಷಕ, ರೋಹಿತ್‌ ಸಾಗರ್‌ ಅವರು.

ತನ್ನ ಮಡಿಲಿನಲಿ ಹಲವು ಜೀವಿಗಳಿಗೆ ಬದುಕು ಕೊಟ್ಟಿರುವ ನಿಸರ್ಗ, ಅವಕ್ಕೆ ಬೇಕಾದ ಹಲವು ಸವಲತ್ತುಗಳನ್ನೂ ಒದಗಿಸಿಕೊಟ್ಟಿದೆ. ಅದರಲ್ಲಿ, ಮಾನವನೆಂಬ ಪ್ರಾಣಿಗೆ ಮಾತ್ರ ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಬುದ್ಧಿಯನ್ನು ನೀಡಿಬಿಟ್ಟಿದೆ. ಮಂಗನಾಗಿದ್ದಾಗ ತನ್ನ ಸ್ನಾಯು ಬಲದಿಂದಲೇ ಆಹಾರ ಸಂಪಾದಿಸಿ ಜೀವನ ನಡೆಸುತ್ತಿದ್ದ ಈ ಮಾನವ, ನಿಸರ್ಗದೊಂದಿಗೆ ಹೊಂದಿಕೊಂಡು ಸರಿಯಾಗಿಯೇ ಇದ್ದ. ಯಾವಾಗ ಎರೆಡೇ ಕಾಲುಗಳ ಮೇಲೆ ನಿಲ್ಲ ತೊಡಗಿದನೋ, ಖಾಲಿ ಕೂತ ಎರೆಡು ಕೈಗಳು ನಿಸರ್ಗವನ್ನೇಕೆ ಆಳಬಾರದು ಎಂಬ ಹೊಸ ಲಹರಿಯೊಂದಕ್ಕೆ ಶುರುವಿಟ್ಟುಕೊಂಡವು. ತನ್ನ ಕೆಲಸ ಕಾರ್ಯಗಳಲ್ಲಿ ಬಳಸುತ್ತಿದ್ದ ಸ್ನಾಯುಬಲವನ್ನು ಕಡಿಮೆ ಮಾಡಿಕೊಳ್ಳಲು ಚಕ್ರ, ಸಲಾಕೆ, ಮುಂತಾದ ಆಯುಧಗಳನ್ನು ಮಾಡಿಕೊಂಡ. ಒಣಗಿದ ಕಟ್ಟಿಗೆಗಳಿಂದ ಬೆಂಕಿಯನ್ನು ಹುಟ್ಟಿಸಿಕೊಂಡ. ಅದೇ ಬೆಂಕಿಯಿoದ ಅದೇ ಕಾಡನ್ನು ಸುಟ್ಟ. ಒಂದಾದ ಮೇಲೊಂದರoತೆ ಶಕ್ತಿಯ ಹೊಸ ಆಕರಗಳನ್ನು ಕಂಡು ಹಿಡಿಯ ತೊಡಗಿದ ಮಾನವನಿಗೆ ಅಪಾರ ಯಶಸ್ಸು ತಂದುಕೊಟ್ಟ ಆಕರಗಳೆಂದರೆ ಕಲ್ಲಿದ್ದಲು, ಮತ್ತು ಪೆಟ್ರೋಲಿಯಂ. ಇವೆರೆಡು ಭೂಗರ್ಭದಲ್ಲಿ ಹುದುಗಿರುವುದನ್ನು ಹುಡುಕಿದ ಮಾನವ ಅದನ್ನು ಬಗೆದು ಉಪಯೋಗಿಸಲು ಶುರುಮಾಡಿದ.

ಅಲ್ಲಿಂದ ಮುಂದೆ, ಆತ ಕೇವಲ ಪ್ರಾಣಿಯಾಗಿ ಉಳಿಯಲಿಲ್ಲ ಬದಲಿಗೆ ನಿಸರ್ಗದ ಒಡೆಯನಂತಾಗಿಬಿಟ್ಟ. ಕಂಡ ಕಂಡಲೆಲ್ಲ, ಗಣಿಗಳನ್ನು, ತೈಲಬಾವಿಗಳನ್ನು ತೋಡಿ, ಭೂಗರ್ಭವನ್ನೇ ಬರಿದು ಮಾಡ ತೊಡಗಿದ. ಯಾವಾಗ ಅದು ಖಾಲಿಯಾಗಬಹುದೆಂಬ ಅನುಮಾನ ಮೂಡಿತೋ, ಆಗ ಹೊಸ ಚಿಂತನೆಗಳಿಗೆ ಇಡೀ ಮನುಕುಲವೇ ಒಂದಾಗಿ ನಿಂತಿತು. ಅಷ್ಟರಲ್ಲೇ ಪರಿಚಯವಾಗಿದ್ದ ವಿದ್ಯುತ್ ಶಕ್ತಿಯನ್ನು ಹರಿಯುವ ನೀರಿನಿಂದ ಪಡೆಯಬಹುದೆಂದು ಯಾರೋ ತೋರಿಸಿಕೊಟ್ಟರು. ತಕ್ಷಣ ಒಟ್ಟಾದ ಜನ ತಮ್ಮಷ್ಟಕ್ಕೆ ತಾವು ಹರಿಯುತ್ತಿದ್ದ ನದಿಗಳಿಗೆ ದೊಡ್ಡ ದೊಡ್ಡ ಆಣೆಕಟ್ಟುಗಳನ್ನು ಕಟ್ಟಿ ಎಕರೆಗಟ್ಟಲೆ ಅರಣ್ಯಗಳನ್ನು, ಲಕ್ಷಗಟ್ಟಲೆ ಜನರ ಮನೆ-ಮಠಗಳನ್ನು ಮುಳುಗಿಸಿ, ಪ್ರಪಂಚದ ಹಲವಾರು ಕಡೆಗಳಲ್ಲಿ ವಿದ್ಯುತ್ತನ್ನ ಉತ್ಪಾದಿಸಿ ಮನಸೋ ಇಚ್ಛೆ ಬಳಸತೊಡಗಿಸದರು. ಆದರೆ, ಜನಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋದಂತೆ ಕ್ರಮೇಣ ಪೆಟ್ರೋಲಿಯಂ, ಕಲ್ಲಿದ್ದಲುಗಳು ಬರಿದಾಗುತ್ತಿರುವುದು ಅಂಗೈ ಹುಣ್ಣಿನಂತಾಗಿಬಿಟ್ಟಿತು. ಅಲ್ಲದೆ, ಆಗಲೆ ನಿದ್ದೆಯಿಂದೆದ್ದ ಕೆಲವು ಜವಾಬ್ದಾರಿಯುತ ವಿಜ್ಞಾನಿಗಳು ಪ್ರೆಟ್ರೋಲಿಯಂನoತಹ ಇಂಧನಗಳುನ್ನು ಶಕ್ತಿಯ ಆಕರಗಳನ್ನಾಗಿ ಬಳಸುವುದರಿಂದ ಅತಿಯಾದ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್  ಉತ್ಪತ್ತಿಯಾಗುತ್ತಿರುವುದನ್ನು ತೋರಿಸಿಕೊಟ್ಟರು. ಅದರ ಪರಿಣಾಮವಾಗಿಯೇ ಜಾಗತಿಕವಾಗಿ ತಾಪಮಾನ ಏರುತ್ತಿರುವುದನ್ನೂ ಪುರಾವೆಗಳೊಂದಿಗೆ ನಿರೂಪಿಸಿದರು. ಇದೇ ಮುಂದುವರೆದರೆ ಧ್ರುವಗಳಲ್ಲಿರುವ ಮಂಜುಗಡ್ಡೆಗಳು ನೀರಾಗಿ ಸಮುದ್ರ ಸೇರಿ, ಏರುವ ಸಮುದ್ರ ಮಟ್ಟದಿಂದ ಹಲವು ದ್ವೀಪಗಳೇ ಮುಳುಗಿಹೋಗಲಿವೆ ಎಂಬ ಎಚ್ಚರಿಕೆಯನ್ನೂ ಆ ವಿಜ್ಞಾನಿಗಳು ನೀಡಿದ್ದರು. ಜೊತೆಗೆ, ವಿದ್ಯುತ್‌ನ ಪೂರೈಕೆ ಅಳತೆಮೀರಿ ಬೆಳೆಯುತ್ತಿದ್ದ ಜನರ ಸಂತತಿಗೆ ಸಾಲದಾಯಿತು. ಹೊಸ ಆಣೆಕಟ್ಟು ಕಟ್ಟಲು ಜಾಗವೂ ಇಲ್ಲದಂತಹ ಸ್ಥಿತಿಗೆ ಬಂದು ನಿಂತಾಗ, ಅಪಾರ ಶಕ್ತಿಯನ್ನು ಕಡಿಮೆ ಕಚ್ಚಾ ವಸ್ತುವಿನಿಂದ ತಯಾರಿಸಬಹುದಾದ ಹೊಸತೊಂದು ದಾರಿ ಮರುಭೂಮಿಯಲ್ಲೊಂದು ಓಯಸಿಸ್‌ನಂತೆ ಗೋಚರವಾಗತೊಡಗಿತ್ತು.

ಕ್ರಿ.ಶ.೧೯೩೮ ಅದು ಇಪ್ಪತ್ತನೇ ಶತಮಾನದ ಪ್ರಾರಂಭದ ಸಮಯ, ಇನ್ನೇನು ದ್ವಿತೀಯ ಮಹಾಯುದ್ಧ ಪ್ರಾರಂಭವಾಗಿ ಬಿಡಬಹುದೇನೋ ಎಂಬ ಊಹೆಗಳಿಗೆ ರೆಕ್ಕೆಪುಕ್ಕಗಳು ಬಲಿತಿದ್ದ ಕಾಲ. ಜರ್ಮನಿಯ ಆಟ್ಟೋ ಹಾಹ್ನ್ ಮತ್ತು ಸ್ಟ್ರಾಸ್‌ಮನ್ ಎಂಬ ವಿಜ್ಞಾನಿಗಳು ಯುರೇನಿಯಮ್ ಎಂಬ ಭಾರವಾದ ಮೂಲವಸ್ತುವಿನ ಪರಮಾಣು ಬೀಜಕ್ಕೆ ಮಂದಗತಿಯ ನ್ಯೂಟ್ರಾನ್ ಎಂಬ ಕಣವನ್ನು ತಾಡಿಸಿದಾಗ ಅದು ಎರೆಡು ಸಮಭಾಗಗಳಾಗಿ ಒಡೆಯುತ್ತದೆ ಅದರೊಂದಿಗೆ ಅಪಾರ ಪ್ರಮಾಣದ ಶಕ್ತಿಯನ್ನೂ, ಶಾಖವನ್ನೂ ಹೊರಹಾಕುತ್ತದೆ ಎಂದು ತೋರಿಸಿಕೊಟ್ಟರು. ಈ ಪ್ರಕ್ರಿಯೆಯನ್ನು ಬೈಜಿಕ ವಿದಳನ ಎಂದು ಕರೆದ ಅವರು, ಉತ್ಪಾದನೆಯಾದ ಶಕ್ತಿಯನ್ನು ಬೈಜಿಕ ಶಕ್ತಿ ಎಂದು ಕರೆದರು. ಅದೇ ಸಮಯದಲ್ಲಿ ಜರ್ಮನಿಯಲ್ಲಿ ನಾಜಿಗಳ ಕಾಟ ತಡೆಯಲಾದರೆ ಹಲವಾರು ಪ್ರಬುದ್ಧ ವಿಜ್ಞಾನಿಗಳು ಅಮೇರಿಕಾಗೆ ಪಲಾಯನ ಮಾಡುತ್ತಿದ್ದರು. ಅವರಲ್ಲಿ ಒಬ್ಬ ಸಿಲಾರ್ಡ್ ಎಂಬಾತ. ನಾಜಿಗಳ ಉಪಟಳದಿಂದ ಬೇಸತ್ತ ಈತನ ಚಿಂತನೆಗಳು ಬೈಜಿಕ ವಿದಳನ ಪ್ರಕ್ರಿಯೆಯ ಹೊಸ ಸಾಧ್ಯತೆಗಳ ಬಗ್ಗೆ ಆವಿಷ್ಕಾರಕ್ಕೆ ಅಡಿಯಿಟ್ಟವು. ಅದಕ್ಕಾಗಿ ಆತ ಅಗತ್ಯವಿದ್ದ ವಿಜ್ಞಾನಿಗಳ ಬಲ ಮತ್ತು ಭಾರಿ ಬಂಡವಾಳಕ್ಕಾಗಿ ಅಮೇರಿಕಾ ಸರಕಾರದ ಬೆಂಬಲವನ್ನು ಕೋರಿದ. ಅಂದು ಆತ ಶುರುವಿಡಲು ಹೊರಟಿದ್ದು ಅಪಾರ ಶಕ್ತಿಶಾಲಿಯಾದ ಬೈಜಿಕ ಬಾಂಬಿನ ಸಂಶೋಧನೆಯನ್ನು. ಯಾವಾಗ ಅಮೇರಿಕಾ ಸರ್ಕಾರ ಇದನ್ನು ಕಡೆಗಣಿಸಿತೋ, ಕೂಡಲೆ ಸಿಲಾರ್ಡ್ ಆಗಿನ ಸುಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನ್ ಬಳಿಹೋಗಿ ಆ ಬಾಂಬಿನ ರಹಸ್ಯ ನಾಜಿಗಳಿಗೆ ದೊರೆಯುವ ಮುಂಚೆಯೇ ತಾವು ಬಾಂಬನ್ನು ತಯಾರಿಸದಿದ್ದರೆ, ಅವರು ವಿಶ್ವವನ್ನು ವಿನಾಶ ಮಾಡಿಬಿಡುತ್ತಾರೆ ಎಂದು ವಿವರಿಸುತ್ತಾನೆ. ಸ್ವತ: ನಾಜಿಗಳಿಂದ ಕಂಗೆಟ್ಟಿದ್ದ ಐನ್‌ಸ್ಟೈನ್ ಆಗಿನ ಅಮೇರಿಕ ಅಧ್ಯಕ್ಷ ರೂಸ್‌ವೆಲ್ಟ್ ಗೆ ಆ ಸಂಶೋಧನೆಯ ಕುರಿತು ಶಿಫಾರಸ್ಸು ಪತ್ರವನ್ನು ನೀಡುತ್ತಾರೆ. ತಕ್ಷಣ ಶುರುವಾಗಿದ್ದೇ ಅಮೇರಿಕಾದ ಹೊಸ ಬೈಜಿಕ ಬಾಂಬು ತಯಾರಿಕಾ ಯೋಜನೆ ಮ್ಯಾನ್ಹಟನ್.

ಈ ಮ್ಯಾನ್ಹಟನ್ ಎಂಬುದು ಯಾವುದೋ ಊರಿನ ಅಥವಾ ಮತ್ತಾವುದೋ ವಿಶಿಷ್ಟ ಅರ್ಥ ನೀಡುವಂತಹ ಪದವಲ್ಲ. ಕೇವಲ ಈ ಬೈಜಿಕ ಬಾಂಬು ತಯಾರಿಕೆಯ ಗೌಪ್ಯತೆಯನ್ನು ಕಾಪಾಡಲಿಕ್ಕಾಗಿ ಈ ಹೆಸರನ್ನು ಇಡಲಾಯಿತು. ಜನರಲ್ ಲೆಸ್ಸಿ ಗ್ರೋವ್ಸ್ ಹಾಗೂ ರಾಬರ್ಟ್ ಓಪನ್ ಹೀಮರ್ ಈ ಯೋಜನೆಯ ಸೇನಾ ಮತ್ತು ವೈಜ್ಞಾನಿಕ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು. ಅಮೇರಿಕಾದ ವಿಶಾಲ ನದಿಬಯಲುಗಳಲ್ಲಿ ಮೂರು ಅಜ್ಞಾತ ನಗರಗಳನ್ನೇ ಈ ಯೋಜನೆಗಾಗಿ ನಿರ್ಮಿಸಲಾಯಿತು. ಸಾವಿರಾರು ವಿಜ್ಞಾನಿಗಳ ಹಾಗೂ ಸೈನಿಕರ ಹೆಸರು ಬದಲಾಯಿಸಿ ಅಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಇನ್ನು ಈ ಬೈಜಿಕ ಬಾಂಬು ತಯಾರಿಕೆಗೆ ನೈಸರ್ಗಿಕವಾಗಿ ದೊರೆಯುವ ಯುರೇನಿಯಂನ್ನು ಅಥವಾ ಅದರಿಂದಲೇ ಕೃತಕವಾಗಿ ತಯಾರಿಸಬಹುದಾದ ಪ್ಲುಟೋನಿಯಂನ್ನು ಕಚ್ಚಾವಸ್ತುವಾಗಿ ಬಳಸಲಾಯಿತು. ಜಗತ್ತಿನ ಅತ್ಯುತ್ತಮ ವಿಜ್ಞಾನಿಗಳ ಈ ಅವಿರತ ಪ್ರಯತ್ನದ ಫಲವಾಗಿ ೧೯೪೫ ರ ಜುಲೈ ಹೊತ್ತಿಗೆ ವಿಶ್ವದ ಮೊಟ್ಟಮೊದಲ ಅಣ್ವಸ್ತ್ರ, ಅಂದರೆ ಬೈಜಿಕ ಬಾಂಬು ನಿರ್ಮಾಣಗೊಂಡಿತು. ಆ ತಿಂಗಳ ೧೬ರಂದು ಅಲ್ಮಗೆಂಡೋ ಮರುಭೂಮಿಯಲ್ಲಿ ಇದರ ಪರೀಕ್ಷಾರ್ಥ ಸ್ಪೋಟ ನಡೆಯಿತು. ಅತಿ ಸಣ್ಣದಾಗಿದ್ದ ಆ ಬಾಂಬು ಏಕಕಾಲದಲ್ಲಿ ಸಾವಿರ ಸೂರ್ಯರು ಹುಟ್ಟಿಸಬಹುದಾದಷ್ಟು ಬೆಳಕನ್ನೂ, ಅಗಾಧ ಶಕ್ತಿ, ಶಾಖವನ್ನೂ ಅಣಬೆಯಾಕಾರದ ಹೊಗೆಯ ಕಾರ್ಮೊಡಗಳನ್ನೂ ಉಂಟುಮಾಡಿತು. ಬಾಂಬಿನ ಸಿಡಿತದ ಜಾಗದಲ್ಲಿನ ಉಷ್ಣತೆ ಕೋಟಿಗಳ ಲೆಕ್ಕದಲ್ಲಿತ್ತು.
ಈ ಈ ಬಾಂಬಿನ ಪರೀಕ್ಷೆ ಯಶಸ್ವಿಯಾದಾಗ, ಪರ್ಲ್ ಹಾರ್ಬರ್ ಮೇಲಿನ ಜಪಾನಿನ ಅಪ್ರಚೋದಿತ ಆಕ್ರಮಣದಿಂದ ಹೆಡೆ ಕಟ್ಟಿದ ಹಾವಿನಂತಾಗಿದ್ದ ಅಮೇರಿಕಾ ಹಿಂದು-ಮುಂದು ಯೋಚಿಸದೆ, ಕ್ಯಾಪ್ಟನ್ ಟಿಬೆಟ್ ಎಂಬ ಪೈಲಟ್‌ನಿಂದ ಚಾಲಿತವಾದ ಎನೋಲಾಗೇ ಎಂಬ ವಿಮಾನದ ಮೂಲಕ ೧೯೪೫ರ ಆಗಸ್ಟ್ ೬ ರಂದು ಜಪಾನಿನ ಮುಖ್ಯ ನಗರ ಹಿರೋಷಿಮಾದ ಮೇಲೆ ‘ಲಿಟಲ್ ಬಾಯ್’ ಎಂದು ಹೆಸರಿಡಲಾದ ೧೦ ಅಡಿ ಉದ್ದ, ೩ ಅಡಿ ಅಗಲದ ೪೫೦೦ ಕೆ.ಜಿ. ತೂಕದ ಯುರೇನಿಯಂ ಪರಮಾಣು ಬಾಂಬನ್ನು ಪ್ರಯೋಗಿಸಿಬಿಟ್ಟಿತು. ಆಮೇಲೆ ನಡೆದದ್ದು ಘೋರ ಅನಾಹುತ, ಮನುಕುಲದಲ್ಲಿ ಕಂಡು ಕೇಳರಿಯದಂತಹ ಅಮಾನವೀಯ, ಊಹಿಸಲಸಾಧ್ಯವಾದ ದುರಂತ. ಹತ್ತು ಸಾವಿರ ದೊಡ್ಡ ಬಾಂಬುಗಳನ್ನು ಏಕಕಾಲದಲ್ಲಿ ಸಿಡಿಸಿದಾಗ ಆಗುವ ದುರಂತಕ್ಕಿಂತಲೂ ಒಂದು ಪಟ್ಟು ಹೆಚ್ಚು ಪರಿಣಾಮವನ್ನು ಅದು ಉಂಟುಮಾಡಿತು. ಅಷ್ಟಕ್ಕೇ ಸುಮ್ಮನಾಗದ ಅಮೇರಿಕಾ ‘ಲಿಟಲ್ ಬಾಯ್’ಗಿಂತ ಎರೆಡು ಪಟ್ಟು ದೊಡ್ಡದಾಗಿದ್ದ “ಫ್ಯಾಟ್ ಮ್ಯಾನ್’ ಎಂಬ ಪ್ಲುಟೋನಿಯಂ ಪರಮಾಣು ಬಾಂಬನ್ನು ಜಪಾನಿನ ಇನ್ನೊಂದು ಮುಖ್ಯನಗರ ನಾಗಸಾಕಿಯ ಮೇಲೆ ಕೇವಲ ಮೂರೇ ದಿನಗಳ ಅಂತರದಲ್ಲಿ ಅಂದರೆ ಆಗಸ್ಟ್ ೯ರಂದು ಪ್ರಯೋಗಿಸಿತು. ಅದರ ಪರಿಣಾಮ ಏನಾಗಿರಬಹುದೆಂದು ಹೇಳಲು ಪದಗಳು ಸಾಕಾಗಲಾರವು. ಜಪಾನಿನ ಎರೆಡೂ ಮುಖ್ಯ ನಗರಗಳು ಸಂಪೂರ್ಣ ನೆಲಸಮವಾದುವು. ಏನಾಗುತ್ತಿದೆ ಎಂದು ಅರಿಯುವ ಮುನ್ನವೇ ಬರೋಬ್ಬರಿ ಎರೆಡೂವರೆ ಲಕ್ಷ ಜನರ ಹೆಣಗಳು ಕರಕಲಾಗಿ ಬಿದ್ದಿದ್ದವು. ಎಣಿಸಲೂ ಸಾಧ್ಯವಿಲ್ಲದಷ್ಟು ಜನ ಗಾಯಗೊಂಡಿದ್ದರು. ಇದಾದ ಮರುಕ್ಷಣದಲ್ಲೇ ಅಮೇರಿಕಾದ ಮುಂದೆ ಜಪಾನ್ ಮಂಡಿಯೂರಿತ್ತು.

ದ್ವಿತೀಯ ಮಹಾಯುದ್ಧ ಕೊನೆಗೊಂಡ ನಂತರ ಪುರುಸೊತ್ತಿನಲ್ಲಿ ಯೋಚಿಸಿದ ವಿಜ್ಞಾನಿಗಳಿಗೆ ಆಮೇಲೆ ಅರ್ಥವಾಗತೊಡಗಿತು, ಪ್ರಪಂಚದಲ್ಲಿ ಶುರುವಾಗಿದ್ದ ಶಕ್ತಿಯ ಬಿಕ್ಕಟ್ಟಿಗೆ ಹೊಸ ಪರಿಹಾರ ದೊರೆತಿದೆ ಎಂದು. ಅದೇ ಬೈಜಿಕ ವಿದಳನ ತಂತ್ರಜ್ಞಾನವನ್ನು ಉಪಯೋಗಿಸಿ ಹುಟ್ಟುವ ಅಪಾರ ಶಕ್ತಿಯನ್ನೇ ಏಕೆ ಬಳಸಿಕೊಳ್ಳಬಾರದು ಎಂಬ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದೇ ಬೈಜಿಕ ವಿದ್ಯುತ್. ಅಗಾಧ ಶಕ್ತಿಯನ್ನು ಕಡಿಮೆ ಕಚ್ಚಾವಸ್ತುವಿನಿಂದ ಪಡೆಯಬಹುದಾದ ಈ ಬೈಜಿಕ ವಿದ್ಯುತ್ತಿನ ಉತ್ಪಾದನೆ ವಿಶ್ವದ ಬಹುತೇಕ ವಿಜ್ಞಾನಿಗಳು ಕಟಬದ್ಧರಾಗಿ ದುಡಿಯತೊಡಗಿದರು. ಅವುಗಳ ಫಲವಾಗಿ ಪರಮಾಣು ಬಾಂಬಿನಲ್ಲಿ ನಡೆಯುವ ಅನಿಯಂತ್ರಿತ ವಿದಳನ ಕ್ರಿಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ನಿಧಾನವಾಗಿ ನಡೆಯುವಂತೆ ಮಾಡಿದಲ್ಲಿ ಉಂಟಾಗುವ ಸ್ಪೋಟವನ್ನು ತಡೆದು, ಉತ್ಪಾದನೆಯಾಗುವ ಶಾಖಶಕ್ತಿಯನ್ನು ಬಳಸಿಕೊಳ್ಳಬಹುದು ಎಂಬ ಸತ್ಯ ಹೊರಬಂದಿತು. ಅದಕ್ಕಾಗಿಯೇ ವಿಶೇಷ ತಂತ್ರಜ್ಞಾನಗಳು ಜನ್ಮ ತಳೆಯತೊಡಗಿದವು. ಅವುಗಳಲ್ಲಿ ಕೊನೆಗೆ ಗಟ್ಟಿಯಾಗಿ ಉಳಿದದ್ದು ಬೈಜಿಕ ಕ್ರಿಯಾಕಾರಿಗಳ ತಂತ್ರಜ್ಞಾನ.

ಈ ಬೈಜಿಕ ಕ್ರಿಯಾಕಾರಿಗಳ ಗರ್ಭದಲ್ಲಿ ಯುರೇನಿಯಂನಂಥ ವಿದಳನ ಹೊಂದಬಲ್ಲ ವಸ್ತುವನ್ನು ಶೇಖರಿಸಲಾಗುತ್ತದೆ. ಅಲ್ಲಿ ನಿಧಾನಗತಿಯಲ್ಲಿ ಸಾಗುವ ನ್ಯೂಟ್ರಾನುಗಳನ್ನು ಹೊರಗಿನಿಂದ ತಾಡಿಸಲಾಗುತ್ತದೆ. ಅಲ್ಲಿಂದ ಪ್ರಾರಂಭವಾಗುವ ವಿದಳನವನ್ನು ಕ್ಯಾಡ್ಮಿಯಂ ಬೋರಾನ್ ಮಿಶ್ರಿತ ಉಕ್ಕು ಅಥವಾ ಕ್ಯಾಡ್ಮಿಯಂನAತಹ ನ್ಯೂಟ್ರಾನುಬಂಧಕ ರಾಸಾಯನಿಕಗಳಿಂದ ಮಾಡಲ್ಪಟ್ಟ ನಿಯಂತ್ರಣ ಸರಳುಗಳ ಸಹಾಯದಿಂದ ನಿಯಂತ್ರಿಸಲಾಗುತ್ತದೆ. ಈ ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅಪಾರ ಶಾಖದಿಂದ, ಕ್ರಿಯಾಕಾರಿಯಲ್ಲಿರುವ ನೀರನ್ನು ಬಿಸಿ ಮಾಡಲಾಗುತ್ತದೆ. ಅದರಿಂದ ಆವಿಯ ರೂಪ ತಾಳಿದ ನೀರು ಹಗುರವಾಗಿರುವುದರಿಂದ ಕೊಳವೆಗಳ ಮೂಲಕ ಬಿರುಸಾಗಿ ಮೇಲೇರತೊಡಗುತ್ತದೆ. ಅದು, ಆ ಕೊಳವೆಯ ತುದಿಯಲ್ಲಿರುವ ಟರ್ಬೈನ್‌ನ್ನು ತಿರುಗುವಂತೆ ಮಾಡುತ್ತದೆ. ಶಾಖದ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ಜೋರಾಗಿ ಬರುವ ಆವಿ ಆ ಟರ್ಬೈನ್‌ನ್ನು ವೇಗವಾಗಿ ತಿರುಗುವಂತೆ ಮಾಡುತ್ತದೆ. ಆ ಟರ್ಬೈನ್‌ನ್ನು ವಿದ್ಯುತ್‌ಜನಕಕ್ಕೆ ಹೊಂದಿಸಿರುತ್ತಾರೆ. ಟರ್ಬೈನ್‌ನ ತಿರುಗುವಿಕೆಯಿಂದ ವಿದ್ಯುತ್ ಜನಕದಲ್ಲಿ ವಿದ್ಯುತ್ ತಯಾರಾಗುತ್ತದೆ. ಟರ್ಬೈನ್‌ನ್ನು ತಿರುಗಿಸಿ ದಾಟಿದ ಆವಿಯನ್ನು ಮತ್ತೆ ತಂಪು ಮಾಡಿದರೆ ಅದು ನೀರಾಗುತ್ತದೆ ಆ ನೀರನ್ನು ಮತ್ತೆ ಕ್ರಿಯಾಕಾರಿಯ ಒಳಕ್ಕೆ ಕಳಿಸಲಾಗುತ್ತದೆ. ಈ ರೀತಿಯಾಗಿ ಅತಿ ಕಡಿಮೆ ಕಚ್ಚಾವಸ್ತುವಿನಿಂದ ಅಪಾರ ಶಕ್ತಿಯನ್ನು ಶಾಖ ಮತ್ತು ವಿದ್ಯುತ್ತಿನ ರೂಪದಲ್ಲಿ ಪಡೆಯಬಹುದಾಗಿದೆ.

ಆದರೆ, ಇದರ ಒಂದು ಕರಾಳ ಮುಖವೆಂದರೆ ಈ ವಿದಳನ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ವಿಕಿರಣಗಳು ಬಲು ಅಪಾಯಕಾರಿಯಾಗಿರುತ್ತವೆ. ಆ ವಿಕಿರಣಗಳು ಕ್ಯಾನ್ಸರ್ ರೋಗವನ್ನು ಉಂಟುಮಾಡುವುದಲ್ಲದೆ, ಇಡೀ ಆ ರೋಗಿಯ ವಂಶವನ್ನೇ ರೋಗಗ್ರಸ್ಥವನ್ನಾಗಿ ಮಾಡಿಬಿಡುತ್ತದೆ. ಹಿರೋಷಿಮಾ, ನಾಗಾಸಾಕಿಗಳಲ್ಲಿ ೧೯೪೫ರಲ್ಲಿ ಸ್ಪೋಟಿಸಿದ ಬಾಂಬ್‌ಗಳ ವಿಕಿರಣಗಳೂ ಈಗಲೂ ಅಲ್ಲಿನ ಜನರನ್ನು ಅಂಗವೈಕಲ್ಯ, ಬುದ್ಧಿಮಾಂದ್ಯತೆ, ಬಂಜೆತನ, ಕ್ಯಾನ್ಸರ್‌ಗಳ ರೂಪದಲ್ಲಿ ಕಾಡುತ್ತಿವೆ. ಆದ್ದರಿಂದ, ಈ ವಿಕಿರಣಗಳ ತೊಂದರೆ ತಡೆಯಲು, ಕ್ರಿಯಾಕಾರಿಗಳ ಸುತ್ತ ಉಕ್ಕು, ಸೀಸ ಮುಂತಾದ ಲೋಹಗಳ ಅತೀ ದಪ್ಪನೆಯ ಕವಚವನ್ನು ಹಾಕಲಾಗಿರುತ್ತದೆ. ಅಷ್ಟೇ ಅಲ್ಲದೆ, ಅಲ್ಲಿ ಕೆಲಸ ಮಾಡುವವರಿಗೆ ವಿಕಿರಣದಿಂದ ರಕ್ಷಣೆ ಒದಗಿಸುವ ಮುಖವಾಡ ಹಾಗೂ ಗೌನುಗಳನ್ನು ನೀಡಲಾಗಿರುತ್ತದೆ. ಜೊತೆಗೆ, ಆ ಕ್ರಿಯಾಕಾರಿಯನ್ನು ಹೊಂದಿರುವ ಕಟ್ಟಡದ ಗೋಡೆಗಳು ೨ ರಿಂದ ೩ ಅಡಿಗಳಷ್ಟು ದಪ್ಪನಾಗಿದ್ದು ಒಳಗಿನ ವಿಕಿರಣಗಳು ಪರಿಸರವನ್ನು ಸೇರದಂತೆ ನೋಡಿಕೊಳ್ಳುತ್ತವೆ. ಇಷ್ಟಾದ ಮೇಲೂ, ಬೈಜಿಕ ವಿದ್ಯುತ್ತನ್ನು ಉತ್ಪಾದಿಸಿ ಮನುಕುಲದ ಎಲ್ಲಾ ಶಕ್ತಿಯ ಅವಶ್ಯಕತೆಯನ್ನು ಪೂರೈಸಿಬಿಡಬಹುದು ಎಂದು ನಿಟ್ಟುಸಿರು ಬಿಡುವುದಕ್ಕೆ ಮುನ್ನವೇ ಅದರೆ ಹೊಸ ಹೊಸ ಅನಾನುಕೂಲತೆಗಳು ಕಾಣಿಸಿಕೊಳ್ಳತೊಡಗಿದವು. ಬೈಜಿಕ ಶಕ್ತಿಯನ್ನು ಉತ್ಪಾದಿಸಿ ಬಿಡೋಣ ಎನ್ನುವವರದ್ದು ಒಂದು ಗುಂಪಾಗಿ, ಅದನ್ನು ವಿರೋಧಿಸುವವರು ಇನ್ನೊಂದು ಗುಂಪಾಗಿ ವಾದ ವಿವಾದಗಳನ್ನು ನಡೆಸಿದ್ದಾರೆ, ನಡೆಸುತ್ತಿದ್ದಾರೆ.

ಬೈಜಿಕ ಶಕ್ತಿ ಅಪಾರವಾಗಿ ದೊರೆಯುತ್ತೆಯಾದರೂ, ಅದರಿಂದ ಖಂಡಿತವಾಗಿಯೂ ಬಹಳಷ್ಟು ಅಪಾಯಗಳು ಉಂಟಾಗುತ್ತವೆ ಎಂಬುದಂತೂ ಸತ್ಯ. ವಿದಳನ ಕ್ರಿಯೆ ನಡೆಯುವಾಗ ಕೊನೆಯಲ್ಲಿ ಉಳಿಯುವ ಶೇಷವಸ್ತುಗಳೂ ಸಹ ವಿಕಿರಣವನ್ನು ಹೊರಹಾಕುತ್ತವೆ ಹಾಗಾದರೆ, ಶೇಷವಸ್ತುಗಳನ್ನೆಲ್ಲಾ ಏನು ಮಾಡುವುದು? ಎಂಬ ಪ್ರಶ್ನೆಗೆ ದೊಡ್ಡ ದೊಡ್ಡ ದಪ್ಪನೆಯ ಪೆಟ್ಟಿಗೆಗಳಲ್ಲಿ ತುಂಬಿ ಭೂಮಿಯಾಳದಲ್ಲಿ ಹೂತುಬಿಡೋಣವೇ, ದಟ್ಟ ಅರಣ್ಯದ ಮಧ್ಯದಲ್ಲಿ ಮತ್ತೊಂದು ಕಟ್ಟಡ ಕಟ್ಟಿ ಮುಚ್ಚಿಟ್ಟು ಬಿಡೋಣವೇ ಎಂದು ಹಲವರು ಹಲುಬಿರಬಹುದು. ಅದನ್ನು ಭಾರತದಲ್ಲಿಯೂ ಪಾಲಿಸಿರಬಹುದು. ಆದರೆ, ಇದು ಎಷ್ಟು ಕಾಲದವರೆಗೆ ಸಾಧ್ಯ ಎಂಬುದು ಪ್ರಶ್ನೆ. ಏಕೆಂದರೆ ಆ ಬಚ್ಚಿಟ್ಟ ವಿಕಿರಣದ ಕಟ್ಟಡ ಅಥವಾ ಪೆಟ್ಟಿಗೆ ಭೂಕಂಪಕ್ಕೆ ಸಿಕ್ಕಿ ಬಿಟ್ಟರೆ, ಅಷ್ಟೇ ಏಕೆ, ಕಾರ್ಯ ನಿರ್ವಹಿಸುತ್ತಿರುವ ಬೈಜಿಕ ಕ್ರಿಯಾಕಾರಿಯೇ ಭೂಕಂಪಕ್ಕೋ, ಸುನಾಮಿಗೋ ಸಿಕ್ಕಿ ಬಿಟ್ಟರೆ, ಆಮೇಲೆ ಸುತ್ತಮುತ್ತಲಿನ ಜನ, ಅವರ ಮಕ್ಕಳು, ಮೊಮ್ಮೊಕ್ಕಳು ಎಲ್ಲರೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಉದಾಹರಣೆಗಳು ಈಗಾಗಲೇ ನಮ್ಮ ಕಣ್ಣ ಮುಂದೆ ನಡೆದು ಹೋಗಿವೆ.

೧೯೮೬ರ ಏಪ್ರಿಲ್‌ನಲ್ಲಿ ರಷ್ಯಾದ ಬೈಜಿಕ ವಿದ್ಯುತ್ ಕ್ರಿಯಾಕಾರಕವೊಂದರಲ್ಲಿ ಯಾವನೋ ಒಬ್ಬ ಕಾರ್ಮಿಕನಿಂದಾದ ಸಣ್ಣ ತಪ್ಪಿನಿಂದಾಗಿ, ಭಾರಿ ದಪ್ಪನೆಯ ಗೋಡೆಗಳಿಂದ ಕಟ್ಟಿದ ಇಡೀ ಸ್ಥಾವರವೇ ನುಚ್ಚುನೂರಾಗುವಂತಹ ಸ್ಪೋಟ ಸಂಭವಿಸಿತು. ಅಲ್ಲಿಂದ ಸಿಡಿದ ವಿಕಿರಣಯುಕ್ತ ರಾಸಾಯನಿಕಗಳು ಸುತ್ತಲಿನ ೨೦ ಕಿ.ಮಿ. ವ್ಯಾಪ್ತಿಯ ಪ್ರದೇಶದಲ್ಲಿ ಚೆಲ್ಲಾಡಿಬಿಟ್ಟವು. ಸ್ಥಳದಲ್ಲಿ ಗಾಯಗೊಂಡು ಸತ್ತದ್ದು ಕೇವಲ ೩೦ ಜನ, ಆದರೆ, ಆ ವಿಕಿರಣಶೀಲ ವಸ್ತುಗಳಿಂದ ವರ್ಷಗಟ್ಟಲೇ ಹೊರಬಂದ ವಿಕಿರಣಗಳು ಲಕ್ಷಗಟ್ಟಲೆ ಜನರನ್ನೂ, ಅವರ ಹಲವು ತಲೆಮಾರುಗಳನ್ನೂ ರೋಗಗ್ರಸ್ಥರನ್ನಾಗಿಸಿಬಿಟ್ಟವು. ಇದಾದ ೨೫ ವರ್ಷಗಳ ನಂತರ ಜಪಾನ್‌ನಲ್ಲಿ ೨೦೧೧ರ ಏಪ್ರಿಲ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪ, ಅದರಿಂದುಂಟಾದ ಸುನಾಮಿಯಿಂದ ಅಲ್ಲಿನ ಫುಕೋಷಿಮಾ ಅಣು ವಿದ್ಯುತ್ ಸ್ಥಾವರದ ನಾಲ್ಕೂ ಕ್ರಿಯಾಕಾರಿ ಕಟ್ಟಡಗಳು ಒಂದರ ಹಿಂದೊಂದರಂತೆ ಸ್ಪೋಟಗೊಂಡವು. “ಮಚ್ಚಿನೇಟಿನೊಡನೆ ಕೊಡಲಿಯೇಟು” ಎಂಬಂತೆ ಭೂಕಂಪ, ಸುನಾಮಿಗಳಿಂದ ಲಕ್ಷಾಂತರ ಜನ ಜೀವ ತೆತ್ತರೆ, ಅಲ್ಲಿ ಬದುಕುಳಿದವರಿಗೆ ಕಣ್ಣಿಗೆ ಕಾಣದ ಆ ವಿಕಿರಣಗಳಿಂದ ಭವಿಷ್ಯದಲ್ಲೂ ಕಾಡುವ ಅಗೋಚರ, ಘೋರ ಪರಿಣಾಮಗಳು ಸಾವಿಗಿಂತಲೂ ಕಠೋರವಾದವು ಎಂದರೂ ತಪ್ಪಾಗಲಾರದು. ಅಲ್ಲಿ ಒಂದೊಂದೇ ಕಟ್ಟಡ ಸ್ಪೋಟಗೊಂಡಂತೆ ವಿಶ್ವದ ಮೂಲೆ ಮೂಲೆಯ ಜನರೂ ಬೊಬ್ಬಿಡುತ್ತಿದ್ದದು ಆ ಘಟನೆಯ ಭೀಕರತೆಗೆ ಹಿಡಿಸ ಕೈಗನ್ನಡಿಯಾಗಿತ್ತು.

ಶಕ್ತಿಗಾಗಿ ನಮ್ಮಲ್ಲಿ ಬಿಕ್ಕಟ್ಟಿದೆ, ಅದಕ್ಕಾಗಿ ಇಡೀ ಮನುಕುಲವನ್ನೇ ಇಕ್ಕಟ್ಟಿಗೆ ಸಿಲುಕಿಸುವ ದುಸ್ಸಾಹಸ ನಮಗೆ ಬೇಡವೆನಿಸುತ್ತದೆ. ಏನೂ ಅರಿಯದ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಬೈಜಿಕ ಕಸವನ್ನೋ, ವಿಕಿರಣಗಳ ಸಮೂಹವನ್ನೋ, ಹಾಳುಬಿದ್ದ ಬೈಜಿಕ ಕ್ರಿಯಾಕಾರಿಗಳನ್ನೋ ಉಡುಗೊರೆಗಳನ್ನಾಗಿ ಕೊಡುವುದು ಬೇಡ. ಅವರದಲ್ಲದ ತಪ್ಪಿಗೆ ಅವರಿಗೇಕೆ ಶಿಕ್ಷೆಯಾಗಬೇಕು? ಅವರಿಗಾಗಿ ಒಳಿತನ್ನು ಉಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆಯಲ್ಲವೇ?. ಒಮ್ಮೆ ಯೋಚಿಸಿ, ಮಹಾಯುದ್ಧದಲ್ಲಿ ಮಲಗಿದ್ದ ಅಮೇರಿಕಾವನ್ನು ಕೆಣಕಿದ್ದು ಯಾರು? ಈಗಲೂ ಅಲ್ಲಿ ವಿಕಿರಣಗಳಿಂದ ಶಿಕ್ಷೆ ಅನುಭವಿಸುತ್ತಿರುವವರು ಯಾರು? ಎಂದು. ಜೊತೆಗೆ ಫುಕೋಷಿಮಾದಲ್ಲಿ ಬೈಜಿಕ ವಿದ್ಯುತ್ ಬಳಸಿದವರು ಯಾರು, ಮುಂದೆ ಅಲ್ಲಿ ಪರದಾಡುವವರು ಯಾರು ಎಂದು ಯೋಚಿಸಿದಾಗ ಪ್ರಾಯಶ: ಅರ್ಥವಾಗಿಬಿಡುತ್ತದೆ, ಹಿರೋಷಿಮಾದಲ್ಲಿನ ಬೈಜಿಕ ಶಕ್ತಿಯ ಒಂದು ರೂಪದ ಪರಿಣಾಮ ಮತ್ತು ಪುಕೋಷಿಮಾದಲ್ಲಿನ ಬೈಜಿಕ ಶಕ್ತಿಯ ಇನ್ನೊಂದು ರೂಪದ ಪರಿಣಾಮವೇನು ಎಂದು, ಕೊನೆಯಲ್ಲಿ ಅದು ಮನುಕುಲದ ನಾಶ ಎಂದು !

 

ಬ್ರಹ್ಮಾಂಡದ ಸೃಷ್ಟಿರಹಸ್ಯ

 ಬ್ರಹ್ಮಾಂಡದ ಸೃಷ್ಟಿರಹಸ್ಯ

                               ಲೇಖಕರು :ಶ್ರೀಮತಿ ಬಿ.ಎನ್‌. ರೂಪ

ಇಂದು ನಾವು ಆಧುನಿಕ ವಿಜ್ಞಾನ ಎಂದು ಪರಿಗಣಿಸುವ ಕೆಲವು ಮೂಲತತ್ವಗಳನ್ನು, ಸುಮಾರು ೪೦೦ ವಷಗಳ ಹಿಂದೆ, ಗೆಲಿಲಿಯೋ ಎಂಬ ವಿಜ್ಞಾನಿ ಒಟ್ಟುಗೂಡಿಸಿ ವಿವರಿಸಲು ಪ್ರಯತ್ನಿಸಿದ್ದರು. ಅವರು ವಿವರಿಸಲು ಪ್ರಯತ್ನಿಸಿದ ಆ ವಿಷಯವಾದರೂ ಯಾವುದು? ಅದೊಂದು ಮಾನವೀಯತೆಯಷ್ಟೇ ಹಳೆಯದಾದ ಪ್ರಶ್ನೆ, ನಾವು ಯಾವ ಘಟಕಗಳಿಂದ ಕೂಡಿದ್ದೇವೆ ? ಬ್ರಹ್ಮಾಂಡದ ಮೂಲಭೂತ ರಚನಾತ್ಮಕ ಘಟಕಗಳು ಯಾವುವು ? 

ಇವುಗಳಿಂದಲೇ ನೀವು, ನಾನು, ನಕ್ಷತ್ರಗಳು ಮತ್ತು ಉಳಿದೆಲ್ಲವೂ ನಿರ್ಮಿತವಾಗಿವೆ. ಗೆಲಿಲಿಯೋನ ನಂತರ ಸಾವಿರಾರು ಸಿದ್ಧಾಂತಗಳು ಮತ್ತು ಪ್ರಯೋಗಗಳು ಬೆಳಕಿಗೆ ಬಂದಿವೆ. ದ್ರವ್ಯದ ಮೂಲಭೂತ ರಚನೆಯನ್ನು ಅರ್ಥ ಮಾಡಿಕೊಳ್ಳುವತ್ತ ನಮ್ಮನ್ನು ಕೊಂಡೊಯ್ಯುತ್ತಿವೆ.

ಪ್ರಸ್ತುತ ಬ್ರಹ್ಮಾಂಡವನ್ನು ವಿವರಿಸುವಂಥ ಒಂದು ಸೂತ್ರವನ್ನು ರೂಪಿಸಲಾಗಿದ್ದು, ಅದು ಹೀಗಿದೆ:



ಈ ಸೂತ್ರವು ಹಲವಾರು ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡುತ್ತದೆ. ಇದನ್ನು ವಿಜ್ಞಾನದಲ್ಲಿ ಅಭೂತಪೂರ್ವವಾದ,  ಸರ್ವಕಾಲಿಕವಾದ ಅತ್ಯಂತ ಯಶಸ್ವೀ ವೈಜ್ಞಾನಿಕ ಸೂತ್ರ ಎಂದು ಪರಿಗಣಿಸಲಾಗಿದೆ. ಇದನ್ನು ಬ್ರಹ್ಮಾಂಡದ ‘ಪ್ರಮಾಣಿತ ಮಾದರಿʼಎಂದು ಕರೆಯಲಾಗುತ್ತದೆ. ಇದನ್ನು ಅರ್ಥೈಸಿಕೊಳ್ಲುವ ಪ್ರಯತ್ನ ಮಾಡೋಣ.


ಈ ಮಾದರಿಯು ವೃತ್ತಾಕಾರವಾಗಿದ್ದು, ಬ್ರಹ್ಮಾಂಡದಲ್ಲಿ ದ್ರವ್ಯ ಸ್ಥಿತಿಯಲ್ಲಿರುವ ೧೨ಕಣಗಳು ಹಾಗೂ ಮೂರು ವಿದದ ಬಲಗಳೊಂದಿಗೆ ಹಿಡಿದಿಟ್ಟುಕೊಂಡಿರುವ  ಹಿಗ್ಸ್-ಬೋಸಾನ್‌ ಎಂಬ ವಿಶೇಷ ಕಣದ ಬಗ್ಗೆ ವಿವರಿಸುತ್ತದೆ. ಇದರೊಂದಿಗೆ ನಾಲ್ಕನೆಯ ಬಗೆಯ ಬಲವೊಂದಿದೆ. ಅದೇ ಗುರುತ್ವಾಕರ್ಷಣ ಬಲ. ಬ್ರಹ್ಮಾಂಡದಲ್ಲಿ ಗುರುತ್ವಾಕರ್ಷಣ ಬಲ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಐನ್ಸ್‌ಸ್ಟೀನ್ ಅವರ ಸಾಪೇಕ್ಷ ಸಿದ್ಧಾಂತವು ಗುರುತ್ವಾಕರ್ಷಣ ಬಲದ ಬಗ್ಗೆ ವಿವರಿಸುತ್ತದೆಯಾದರೂ. ಅದನ್ನು ಈ ಪ್ರಮಾಣಿತ ಮಾದರಿಯಲ್ಲಿ ಸೇರಿಸಿಲ್ಲ. ಇದಕ್ಕೆ ಕಾರಣವೆಂದರೆ, ಇದು ದುರ್ಬಲ ಹಾಗೂ ಉಪ-ಪರಮಾಣ್ವಿಕ ಕಣಗಳ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ  ಎಂಬ ಸೂಕ್ಷ್ಮ ಅಂಶ.

ಪ್ರಮಾಣಿತ ಮಾದರಿಯ ಪ್ರಕಾರ, ದ್ರವ್ಯವು ಕಣಗಳಿಂದ ಮಾಡಲಾಗಿಲ್ಲ ಬದಲಿಗೆ, ಕ್ಷೇತ್ರಗಳಿಂದಾಗಿದೆ. ಈ ಕ್ಷೇತ್ರ್ರಗಳ ನಡುವಿನ ಪರಸ್ಪರ ಪ್ರತಿಕ್ರಿಯೆಯು ಬೌದ್ಧಿಕ ಮಟ್ಟದಲ್ಲಿ ಕಣಗಳ ರೂಪದಲ್ಲಿ ವ್ಯಕ್ತಪಡಿಸುತ್ತದೆ. ಹೀಗಾಗಿ, ಈ ಪ್ರಮಾಣಿತ ಮಾದರಿಯು ಬ್ರಹ್ಮಾಂಡವನ್ನು ಕಣಗಳ ಭಾಷೆಯ ಮೂಲಕ ವಿವರಿಸುತ್ತದೆ.

ಪ್ರತಿಯೊಂದು ಕಣವೂ ಒಂದು ಫರ್ಮಿಯಾನ್ ಅಥವಾ ಬೋಸಾನ್‌ ಆಗಿರುತ್ತದೆ. ಉಪಪರಮಾಣು ಘಟಕಗಳಲ್ಲಿ ಇಲೆಕ್ಟ್ರಾನ್‌ ಒಂದು ಅಪ್ ‌ಕ್ವಾರ್ಕ್ ಮತ್ತು ಒಂದು ಡೌನ್‌ ಕ್ವಾರ್ಕ್ ಅನ್ನು ಹೊಂದಿರುತ್ತದೆ. ಪ್ರೋಟಾನ್‌, ಎರಡು ಅಪ್ ‌ಕ್ವಾರ್ಕ್ ಮತ್ತು ಒಂದು ಡೌನ್‌ ಕ್ವಾರ್ಕ್ ಹೊಂದಿದ್ದರೆ, ನ್ಯೂಟ್ರಾನ್‌ ಎರಡು ಡೌನ್‌ ಕ್ವಾರ್ಕ್ ಮತ್ತು ಒಂದು ಅಪ್ ‌ಕ್ವಾರ್ಕ್ ಗಳಿಂದಾಗಿದೆ.  ಕೇಂದ್ರ ಭಾಗದಲ್ಲಿ ಪ್ರೋಟಾನ್‌ ಮತ್ತು ನ್ಯೂಟ್ರಾನ್‌ ಒಟ್ಟಿಗೆ ಬಂಧಿಸಲ್ಪಟ್ಟರೆ, ಇಲೆಕ್ಟ್ರಾನ್‌ಗಳು ಸುತ್ತುತ್ತಿರುತ್ತವೆ.

ಕೆಲವು ಪರಮಾಣುಗಳು ನಿರ್ದಿಷ್ಟ ಅನುಪಾತದಲ್ಲಿ ಸಂಯೋಜನೆಗೊಂಡು ವಸ್ತು(ದ್ರವ್ಯ)ವನ್ನು ರೂಪಿಸುತ್ತವೆ. ಇದು ನಮ್ಮ ಸುತ್ತಲಿನ ಪ್ರಪಂಚದ ಸೌಂದರ್ಯ ಮತ್ತು ಸಂಕೀರ್ಣತೆಗೆ ಕಾರಣವಾಗುತ್ತದೆ. ದ್ರವ್ಯದ ಮತ್ತೊಂದು ವೈವಿಧ್ಯತೆಯೇ ನ್ಯೂಟ್ರಿನೋ. ಇದು ಇತರ ಕಣಗಳಿಗಿಂತ  ಭಿನ್ನವಾಗಿದೆ. ನ್ಯೂಟ್ರಿನೋಗಳು ಹಗುರವಾಗಿರುತ್ತವೆ ಮತ್ತು ಯಾವುದೇ ಪದಾರ್ಥಗಳೊಂದಿಗೆ ವರ್ತಿಸುವುದಿಲ್ಲ ಅಥವಾ ಸಂಯೋಜಿಸುವುದೂ ಇಲ್ಲ. ಸೂರ್ಯನಿಂದ ಬರುವ ಟ್ರಿಲ್ಲಿಯನ್‌ಗಟ್ಟಲೆ ನ್ಯೂಟ್ರಿನೋಗಳು  ಬ್ರಹ್ಮಾಂಡದ ಎಲ್ಲಾ ವಸ್ತುಗಳಲ್ಲಿರುವ ದ್ರವ್ಯಗಳ ಮೂಲಕ ಹಾದು ಹೋಗುತ್ತವೆ.

ಪ್ರಕೃತಿಯು ದ್ರವ್ಯದ ಈಗಿರುವ ನಾಲ್ಕು ಸ್ಥಿತಿಗಳ ಜೊತೆಗೆ ಇನ್ನೆರಡು ಸ್ಥಿತಿಗಳನ್ನು ಉಂಟು ಮಾಡಿದೆ. ಇಲೆಕ್ಟ್ರಾನ್ ಗಳ ಜೊತೆಗೆ, ಅವುಗಳಂತೆಯೇ ವರ್ತಿಸುವ ಆದರೆ, ಇಲೆಕ್ಟ್ರಾನ್ ಗಿಂತ ಹೆಚ್ಚು ರಾಶಿಯನ್ನು ಹೊಂದಿರುವ ಮುವಾನ್ ಮತ್ತು ಟೌ ಎಂಬ ಎರಡು ಬಗೆಯ ಕಣಗಳನ್ನು ಗುರುತಿಸಲಾಗಿದೆ. ಮುವಾನ್‌ಗಳು ಇಲೆಕ್ಟ್ರಾನ್‌ಗಳಿಗಿಂತ ೨೦೦ಪಟ್ಟು ಹೆಚ್ಚು ರಾಶಿಯನ್ನು ಹೊಂದಿದ್ದರೆ, ಟೌ ಗಳು ಇಲೆಕ್ಟ್ರಾನ್‌ಗಳಿಗಿಂತ ೩೫೦೦ ಪಟ್ಟು ಹೆಚ್ಚು ರಾಶಿಯನ್ನು ಹೊಂದಿವೆ.

ಇವುಗಳ ಜೊತೆಗೆ, ಡೌನ್‌ ಕ್ವಾರ್ಕ್‌ಗೆ ಸೇರಿದ ವಿಚಿತ್ರ ಕ್ವಾರ್ಕ್‌ ಹಾಗೂ ಬಾಟಮ್‌ ಕ್ವಾರ್ಕ್‌ ಎಂಬ ಎರಡು ಭಾರವಾದ ಆವೃತ್ತಿಗಳಿವೆ. ಹಾಗೆಯೇ ಆಪ್ ಕ್ವಾರ್ಕ್‌ ಮತ್ತು ಚಾರ್ಮ್‌ ಕ್ವಾರ್ಕ್‌ ಎಂಬ ಎರಡು ಭಾರವಾದ ಆವೃತ್ತಿಗಳಿವೆ. ಸಾಲದ್ದಕ್ಕೆ, ಮ್ಯುಯಾನ್‌ ನ್ಯೂಟ್ರಿನೋ  ಮತ್ತು ಟೌ ನ್ಯುಟ್ರಿನೋ ಎಂಬ ಎರಡು ಬಗೆಯ ನ್ಯುಟ್ರಿನೋ ಗಳನ್ನೂ ಗುರುತಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈಗ ನಾವು ಬ್ರಹ್ಮಾಂಡದ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಬ್ರಹ್ಮಾಂಡದಲ್ಲಿರುವ ವಿವಿಧ ಬಗೆಯ ಬಲಗಳಾದ ನ್ಯೂಕ್ಲೀಯ ಅಥವಾ ಬೈಜಿಕಬಲ, ಗುರುತ್ವ ಬಲ ಹಾಗೂ ವಿದ್ಯುತ್‌ ಕಾಂತಿಯ ಬಲಗಳೆಂಬ ಪ್ರಮುಖ ಮೂರು ಬಗೆಯ ಬಲಗಳಿವೆ. ವಿವಿಧ ಬಲಗಳು ಇಲ್ಲದಿದ್ದರೆ, ಎಲ್ಲಾ ಕಣಗಳು ಕಾಸ್ಮಾಸ್‌ ನಲ್ಲಿ ಕಳೆದುಹೋದ ಆತ್ಮಗಳಂತೆ ಅಲೆದಾಡಬೇಕಿತ್ತು! ಈ ಎಲ್ಲ ವಿಧದ ಬಲಗಳು ಬೋಸಾನ್ ಎಂಬ ಕಣಗಳೊಂದಿಗೆ ಸೇರಿಕೊಂಡಿರುತ್ತವೆ.

ಮೊದಲನೆಯದಾಗಿ ಎಲ್ಲ ಧಾತುಗಳ ರಾಸಾಯನಿಕ ಲಕ್ಷಣಗಳಿಗೆ ಕಾರಣವಾಗಿರುವ ಬಲವೇ, ವಿದ್ಯುತ್‌ ಕಾಂತೀಯ ಬಲ. ಯಾವ ವಸ್ತು ವಿದ್ಯುದಾವೇಶವನ್ನು ಹೊಂದಿರುತ್ತದೆಯೋ, ಅದು ಈ ಬಲವನ್ನು ಅನುಭವಿಸುತ್ತದೆ.

ಎರಡನೆಯದಾಗಿ ಬಲಗಳಲ್ಲಿ ಪ್ರಬಲವಾದ ಬೈಜಿಕಬಲವು ಕ್ವಾರ್ಕ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಪರಮಾಣುವಿನ ಕೇಂದ್ರದಲ್ಲಿ ಇರುವ ಪ್ರೋಟಾನ್‌ ಮತ್ತು ನ್ಯೂಟ್ರಾನ್‌ಗಳನ್ನು ಇದು ಅತ್ಯಂತ ಪ್ರಬಲವಾಗಿ ಹಿಡಿದಿಟ್ಟುಕೊಂಡಿರುತ್ತದೆ. ಈ ನ್ಯೂಕ್ಲೀಯ ಶಕ್ತಿಯೇ ಪರಮಾಣು ಬಾಂಬಿನ ಜೀವಾಳ.

ಅತ್ಯಂತ ದುರ್ಬಲವಾದ ಮೂರನೇ ವಿಧದ ಬಲವು ಪರಮಾಣುಗಳ ನಡುವಿನ ಅಂತರದ ಮೇಲೆ ಪರಿಣಾಮ ಬೀರುತ್ತದೆ. ಇದು ಕ್ವಾರ್ಕ್‌ಗಳನ್ನು ಬದಲಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ, ದುರ್ಬಲ ಬಲ ಬೈಜಿಕ ಸಮ್ಮಿಳನ ಕ್ರಿಯೆಗೆ ನೆರವಾಗುತ್ತದೆ. ಇದು ಸೂರ್ಯ ಹಾಗೂ ಇತರ ನಕ್ಷತ್ರಗಳಲ್ಲಿ ನಡೆಯುವ ಕ್ರಿಯೆಗೆ ಹಾಗೂ ಶಕ್ತಿಯ ಬಿಡುಗಡೆಗೆ ಕಾರಣವಾಗಿದೆ. ದುರ್ಬಲ ಬಲವು ನ್ಯೂಟ್ರಿನೋಗಳನ್ನು ಒಳಗೊಂಡಂತೆ ಎಲ್ಲ ಕಣಗಳ ಮೇಲೆ ವರ್ತಿಸುತ್ತದೆ.

ವಿಜ್ಞಾನಿಗಳು ಹಲವು ಬಗೆಯ ವೇಗವರ್ಧಕಗಳನ್ನು ಹಾಗೂ ಉಪಕರಣಗಳನ್ನು ಬಳಸಿ, ೨೦೧೨ರಲ್ಲಿ ಜಿನೀವಾದಲ್ಲಿ ಹೊಸ ಬಗೆಯ ಕಣವೊಂದನ್ನು ಪತ್ತೆ ಮಾಡಿದರು. ಈ ಕಣವನ್ನು ಹಿಗ್ಸ್-‌ ಬೋಸಾನ್‌ ಎಂದು ಕರೆಯಲಾಗಿದೆ. ಇದಕ್ಕೆ ʼದೇವಕಣʼ ಎಂದೂ ಹೆಸರಿದೆ. ಇಡೀ ಬ್ರಹ್ಮಾಂಡವೇ ಈ ದೇವಕಣಗಳಿಂದ ರಚಿತವಾಗಿದೆ ಎಂಬುದು ಈಗಿನ ನಂಬಿಕೆ. ಹಿಗ್ಸ್-ಬೋಸಾನ್‌ ಕಣಗಳು ಇಡೀ ವಿಶ್ವವನ್ನು ವ್ಯಾಪಿಸಿವೆ  ಮತ್ತು ಎಲ್ಲದರಲ್ಲೂ ಕಂಡು ಬರುತ್ತವೆ ಎಂಬುದನ್ನು ವಿಜ್ಞಾನಿಗಳು ದೃಢೀಕರಿಸಿದ್ದಾರೆ. ಹೀಗೆ ಬ್ರಹ್ಮಾಂಡದ ರಚನೆಯಲ್ಲಿ ಅನೇಕ ಕಣಗಳು, ಅವುಗಳ ನಡುವಣ ಅಂತರ್‌ ವರ್ತನೆಗಳು ನಡೆಯುತ್ತಲೇ ಇವೆ. ಇವುಗಳ ಹಿಂದೆ ಹೊರಟ ವಿಜ್ಞಾನಿಗಳ ಅಂತರ್‌ ಚಕ್ಷುಗಳಿಗೆ ಗೋಚರಿಸಿ ಇನ್ನೆಂತಹ ರಹಸ್ಯಗಳು ಹೊರಹೊಮ್ಮುತ್ತವೋ ಎನ್ನುವುದನ್ನು ಕುತೂಹಲದಿಂದ ಕಾಯೋಣ.

ನಮ್ಮ ಬ್ರಹ್ಮಾಂಡವೇ ದೇವರ ಕಣಗಳಿಂದ ರಚಿತವಾಗಿದೆ. ಗಮನಾರ್ಹ ವೈಶಿಷ್ಟತೆ ಎಂದರೆ ಮೇಲಿನ ಎಲ್ಲಾ ಕಣಗಳು ದ್ರವ್ಯರಾಶಿಯನ್ನುಹೊಂದಿಲ್ಲ.

ಹಿಗ್ಸ್ ಬೋಸಾನ್ ಕಣವು ಇಡೀ ವಿಶ್ವವನ್ನು ವ್ಯಾಪಿಸುತ್ತದೆ.

ದೇವರ ಕಣ ಎಲ್ಲರಲ್ಲೂ ಕಂಡುಬರುತ್ತದೆ ಎಂದು ದೃಢೀಕರಿಸಲಾಗಿದೆ .

ಈ ಲೇಖನದ ಉದ್ದೇಶ ನಮ್ಮ ಬ್ರಹ್ಮಾಂಡವನ್ನು ತಿಳಿದುಕೊಳ್ಳಲು ಕುತೂಹಲವನ್ನು ಪ್ರೇರೇಪಿಸುವುದೇ ಆಗಿದೆ.

ಬಿ .  ಎನ್.  ರೂಪ

ಸಹಶಿಕ್ಷಕರು,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ

ಬೆಂಗಳೂರು ದಕ್ಷಿಣ ವಲಯ 2

ಸಿರಿಗೆರೆಯ ಸಿರಿ ಗುರು ಟಿ.ಪಿ. ಉಮೇಶ್

 ಸಿರಿಗೆರೆಯ ಸಿರಿ ಗುರು ಟಿ.ಪಿ. ಉಮೇಶ್

ಲೇಖನ : ಆಶಾ C.H.M.

 ಈ ಬಾರಿಯ ರಾಷ್ಟ್ರಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಶ್ರೀಯುತ ಟಿ.ಪಿ. ಉಮೇಶ್ ರವರು ಪ್ರಸ್ತುತ ಚಿತ್ರದುರ್ಗದ GLPS ಅಮೃತಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಕುಗ್ರಾಮ ಅಮೃತಾಪುರದಲ್ಲಿ ಹೈಟೆಕ್ ಶಾಲೆ ನಿರ್ಮಿಸಿ, ಮಕ್ಕಳ ಪ್ರಗತಿಗೆ ಸಂಪೂರ್ಣ ಅರ್ಪಿಸಿಕೊಂಡಿರುವ ಉಮೇಶ್ ಮಿತ ಬಾಷಿ, ನಿಶ್ಕಲ್ಮಷ ಹೃದಯಿ, ಸದಾ ಮಕ್ಕಳ ಒಳಿತನ್ನು ಬಯಸುವ ವ್ಯಕ್ತಿ. ಇವರ ಸಾಧನೆ ಎಲ್ಲಾ ಶಿಕ್ಷಕರಿಗೂ ಸ್ಫೂರ್ತಿಯ ಸೆಲೆ. 

ಯಾವಾಗಲಾದರೂ ಅವರನ್ನು ಸಂಪರ್ಕಿಸಲು ಕರೆ ಮಾಡಿದರೆ, ನಾನು ಶಾಲೆಯಲ್ಲಿರುವೆ ನಂತರ ಕರೆ ಮಾಡುವೆ ಅಂತ ಹೇಳಿ, ಶಾಲೆಯಲ್ಲಿ ಎಲ್ಲಾ ಕೆಲಸಗಳನ್ನ ಮುಗಿಸಿ, ಶಾಲೆ ಬಿಟ್ಟ ನಂತರ ಕರೆ ಮಾಡುತ್ತಿದ್ದ ನಿಜ ಕಾಯಕಯೋಗಿ, ಕವಿ ಗೆಳೆಯ, ಸೌಮ್ಯ ಸ್ವಭಾವದ ಚಿಂತಕ, ಮಾತುಗಾರ, ಶಿಕ್ಷಣ ಪ್ರೇಮಿ. ಒಂದರಿಂದ ಐದನೇ ತರಗತಿಯವರೆಗೆ ಇರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಡಿಜಿಟಲ್‌- ಲ್ಯಾಪ್ ಟಾಪ್ ಮೂಲಕ ಶಿಕ್ಷಣ, ಕ್ರೀಡಾ ಸಾಮಗ್ರಿಗಳು, ಸ್ವಚ್ಛತೆ ಇತ್ಯಾದಿ ನೋಡಿ ಮನ ತುಂಬಿ ಬಂತು. ಇಚ್ಛಾಶಕ್ತಿ ಮತ್ತು ಸರ್ಕಾರ ನೀಡುವ ಸಂಬಳಕ್ಕೆ ನ್ಯಾಯ ಒದಗಿಸುವ ಮನಸ್ಸು ಇದ್ದರೆ ಏನು ಬೇಕಾದರು ಮಾಡಬಹುದು ಎಂಬುದಕ್ಕೆ ಟಿ.ಪಿ. ಉಮೇಶ್ ಸರ್ ಸಾಕ್ಷಿಯಾಗಿದ್ದಾರೆ.


ಅಮೃತಾಪುರ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ, ಹಿಂದುಳಿದ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ  ಗ್ರಾಮ.‌ ಬಡತನ, ಅನಕ್ಷರಸ್ಥ ಹಿನ್ನೆಲೆಯ ಮಕ್ಕಳೇ ಹೆಚ್ಚು. ಇಲ್ಲಿ ಮೊದಲು ೪೦ ಮಕ್ಕಳು ಶಾಲೆಗೆ ಬರುತ್ತಿದ್ದರು. ಉಮೇಶ್ ಶಾಲೆಗೆ ಬಂದ ನಂತರ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಮುಂದಾದರು. ಈಗ  ಮಕ್ಕಳ ಮನೆ ಮತ್ತು ಒಂದರಿಂದ ಐದನೆಯ ತರಗತಿವರೆಗಿನ   ೮೦ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.



   ಶಾಲಾ ಕಟ್ಟಡ ಆಗಲೋ ಈಗಲೋ ಬಿದ್ದು ಹೋಗುವ ಭಯಆಗ  ದೇವಾಲಯದ ಆವರಣದಲ್ಲಿ ಪಾಠ ಮಾಡಬೇಕಾದ  ಪರಿಸ್ಥಿತಿಇಂತಹ ಸಂದರ್ಭದಲ್ಲಿ  ಅಮೇರಿಕಾ ಮೂಲದ ಓಸಾಟ್ ( One School at a time )  ಮತ್ತು ರೋಟರಿ ಕ್ಲಬ್  ಸಹಯೋಗದೊಂದಿಗೆ ೩೦ ಲಕ್ಷಗಳಷ್ಟು ಮೌಲ್ಯದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣದಲ್ಲಿ ಉಮೇಶ್ ಪಾತ್ರ ಮಹತ್ತರವಾದುದು.






ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಚಿಗುರು ಪತ್ರಿಕೆಯನ್ನು ಮಕ್ಕಳಿಗೆ ನೀಡುವುದರ ಮೂಲಕ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತಿದ್ದಾರೆ.



ಹಟ್ಟಿ ಮಕ್ಕಳ ಭಾಷ ಸಾಮರ್ಥ್ಯ, ಬರವಣಿಗೆ, ಹಾಗು ಓದಿನಲ್ಲಿ ಆಸಕ್ತಿ ಹೆಚ್ಚಿಸಲು ಸುಮಾರು 2016 ನೇ ಇಸವಿಯಿಂದ ಆಕಾಶವಾಣಿ ರೇಡಿಯೋ ಕಾರ್ಯಕ್ರಮಗಳನ್ನು ಬಳಸಿಕೊಂಡು ಯಶಸ್ಸುಸಾಧಿಸಿದ್ದಾರೆ

ಪ್ರತಿ ತಿಂಗಳಿಗೊಮ್ಮೆ ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಸಂಸ್ಥೆಗಳಾದ - ಪೊಲೀಸ್ ಠಾಣೆ, ಅಸ್ಪತ್ರೆ, ಪೋಸ್ಟ್ ಆಫೀಸ್, ಬಸ್ ನಿಲ್ದಾಣ, ಬ್ಯಾಂಕ್, ತೋಟ ಹೀಗೆ ಸ್ಥಳೀಯ ಕ್ಷೇತ್ರ ಪ್ರವಾಸದ ಜೊತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾರೆ

ಕಳೆದ 12 ವರ್ಷಗಳಿದಲೂ ಸಹ ಕಲಿಕೋತ್ಸವ ಅಥವಾ ಕಲಿಕಾ ಮೇಳ ಎಂಬ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ, ಕನ್ನಡ ಸಾಹಿತ್ಯದ ಹಿರಿಮೆ, ಗರಿಮೆಯನ್ನ ವಿದ್ಯಾರ್ಥಿಗಳು ಮೂಲಕ ಇಡಿ ಹಳ್ಳಿಯ ಜನರಿಗೆ ತಿಳಿಸುವ ವಿನೂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ದಾನಿಗಳ ನೆರವಿನಿಂದ ಮೂರು ಲ್ಯಾಪ್ಟಾಪ್ ಸೌಲಭ್ಯದ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯಅತ್ಯಾಧುನಿಕ ಪೀಠೋಪಕರಣ- ಪಾಠೋಪಕರಣಗಳಿಂದ ಮಾದರಿ ಶಾಲೆಯಾಗಿದೆ. ಮಾಡಿ ಕಲಿ, ನೋಡಿ ಕಲಿ ಇಲ್ಲಿ ಅಕ್ಷರಶಃ ಕಾರ್ಯರೂಪಕ್ಕೆ ತರಲಾಗಿದೆ. ನಗರದ ಕಾನ್ವೆಂಟ್ ಗಳಿಗಿಂತಲೂ ಉತ್ತಮ ಸೌಲಭ್ಯ ಒದಗಿಸಿಪ್ರತಿಯೊಂದು ಮಗುವು   ಉಲ್ಲಾಸ ಮತ್ತು ಸಂತೋಷದಿಂದ ಕಲಿಯುವಂತಹ ವಾತಾವರಣ ನಿರ್ಮಿಸುವಲ್ಲಿ ಉಮೇಶ್ ಸಾಕಷ್ಟು ಶ್ರಮಿಸಿದ್ದಾರೆ. ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯಗಳ ಮೂಲಕ ಕಿರಿಯ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕೊರೊನ ಕಾಲದಲ್ಲಿ   ಶಿಕ್ಷಣಇಲಾಖೆ ಆನ್ ಲೈನ್ ತರಗತಿ, ಜಗಲಿ ಪಾಠ, ವಠಾರ ಪಾಠ ಮುಂತಾದ ನೂತನ ಉಪಕ್ರಮಗಳನ್ನು ರೂಪಿಸಿತ್ತು. ಆಗ ಉಮೇಶ್  'ಮಿಸ್ ಕಾಲ್ ಮಾಡಿ ಪಾಠ ಕೇಳಿ' ಎಂದು ಮಕ್ಕಳ ಪೋಷಕರಿಗೆ ಕರೆ ನೀಡಿದ್ದರುಮೊಬೈಲ್ ಹೊಂದದ ಪೋಷಕರ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕಲಿಕಾ ಪೂರಕ ವಾತಾವರಣ ರೂಪಿಸಿದ್ದರು

ಶ್ರಿಯುತರು, ತೊಡರನಾಳ್ ಗ್ರಾಮದ ಪರಮೇಶ್ವರಪ್ಪ ಜಯಮ್ಮ ದಂಪತಿಗಳ ಹಿರಿಯಪುತ್ರ. ತಂದೆ ತಾಯಿಯ ಸಂಸ್ಕಾರ, ಗುರುಹಿರಿಯರ ಸನ್ಮಾರ್ಗದರ್ಶನ ಸಾಧನೆಗೆ ಪೂರಕವಾಗಿದೆ. ಇವರ ಕೆಲಸಗಳಲ್ಲಿ ಸದಾ ಬೆನ್ನೆಲುಬಾಗಿ ಜೊತೆಗಿರುವವರು ಧರ್ಮಪತ್ನಿ ಶ್ರಿಮತಿ ಅನಿತ ಉಮೇಶ್ T. P. ಇವರು ಸಹ ತುಪ್ಪದಳ್ಳಿಯ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

ಸಿರಿಗೆರೆ ಬಿ ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಉಮೇಶ್ ಎಂ ., ಎಂ ಇಡಿ ಪದವೀಧರರು. ೧೯೯೮-೯೯ನೇ ಸಾಲಿನಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಂಬತ್ತನೆಯ ರ್ಯಾಂಕ್ ಪಡೆದು ಶ್ರೀ ತರಳಬಾಳು ಜಗದ್ಗುರು  ವಿದ್ಯಾಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿ, ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದಲೇ  ಬಂಗಾರದ ಪದಕವನ್ನು ಪಡೆದುಕೊಂಡಿದ್ದರು. ಸಿರಿಗೆರೆಯ ಶ್ರೀ ಜಗದ್ಗುರುಗಳ ಆಶೀರ್ವಾದ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಾತಾವರಣವೇ ನನ್ನೆಲ್ಲ ಸಾಧನೆಗೆ ಪ್ರೇರಣೆ ಎನ್ನುವ ಉಮೇಶ್, 'ಉಮೇಶ ಪ್ರಿಯ ಶಿವಮೂರ್ತಿ ಪ್ರಭುವೇ' ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿ, ಆಧುನಿಕ ವಚನ ಸಂಕಲವನ್ನು  ಪ್ರಕಟಿಸಿದ್ದಾರೆ. ಇವರ ಲೇಖನಿಯಿಂದ  ಮಕ್ಕಳ ಕಥೆ, ಕವಿತೆ ಸೇರಿದಂತೆ ಈಗಾಗಲೇ ಆರು  ಕೃತಿಗಳು ಹೊರಬಂದಿವೆ. ಮೈಸೂರು ದಸರಾ ಕವಿಗೋಷ್ಠಿ ಜೊತೆಗೆ  ರಾಜ್ಯ ಮಟ್ಟದ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಕ್ರಿಯಾಶೀಲ ಶಿಕ್ಷಕ, ಸೃಜನಶೀಲ ಬರಹಗಾರ, ಸಂಘಟನಾ ಚತುರನಾದ  ಉಮೇಶ್ ಸದಾ ಹೊಸತನಕ್ಕೆ ತುಡಿಯುವವರು.‌ ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ತನ್ನ ವೃತ್ತಿಯಲ್ಲಿ ಸಾರ್ಥಕತೆ ಕಂಡವರು.‌

 ಇವರ ನಿಷ್ಕಾಮಕರ್ಮಕ್ಕೆ ಒಲಿದ ಪ್ರಶಸ್ತಿಗಳು ಹಲವಾರು. ರೋಟರಿ ಸಂಸ್ಥೆ ಕೊಡಲ್ಪಡುವ 'ನೇಷನ್ ಬಿಲ್ಡರ್ ಅವಾರ್ಡ್' ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಕಳೆದ ವರ್ಷ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಉಮೇಶ್ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಚೇತೋಹಾರಿ ಕಲಿಕೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಅವರ ಶೈಕ್ಷಣಿಕೆ ಸೇವೆಗೆ ರಾಷ್ಟ್ರ ಪ್ರಶಸ್ತಿಯ ಗೌರವ ಮತ್ತಷ್ಟು ಉತ್ಸಾಹವನ್ನು ತುಂಬಲಿ. ಇನ್ನಷ್ಟು ಶಿಕ್ಷಕರನ್ನು ಸಾಧನಾ ಪಥದತ್ತ ಮುನ್ನಡೆಸುವ ಶಕ್ತಿ ತುಂಬಲಿ. ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆಗಳು ಅವರಿಂದ ಬರಲಿ ಎಂದು ಸೆಪ್ಟಂಬರ್‌ ಐದರಂದು ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸಲಿರುವ ಈ ಶುಭ ಸಂದರ್ಭದಲ್ಲಿ ಸವಿಜ್ಞಾನ ತಂಡವು ಶುಭ ಹಾರೈಸುತ್ತದೆ.  

ಲೇಖನ :

ಆಶಾ. CHM

ವಿದ್ಯಾ ವಿಕಾಸ ವಿದ್ಯಾಸಂಸ್ಥೆ

ಚಿತ್ರದುರ್ಗ