ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, September 4, 2022

ಸಿರಿಗೆರೆಯ ಸಿರಿ ಗುರು ಟಿ.ಪಿ. ಉಮೇಶ್

 ಸಿರಿಗೆರೆಯ ಸಿರಿ ಗುರು ಟಿ.ಪಿ. ಉಮೇಶ್

ಲೇಖನ : ಆಶಾ C.H.M.

 ಈ ಬಾರಿಯ ರಾಷ್ಟ್ರಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಶ್ರೀಯುತ ಟಿ.ಪಿ. ಉಮೇಶ್ ರವರು ಪ್ರಸ್ತುತ ಚಿತ್ರದುರ್ಗದ GLPS ಅಮೃತಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಕುಗ್ರಾಮ ಅಮೃತಾಪುರದಲ್ಲಿ ಹೈಟೆಕ್ ಶಾಲೆ ನಿರ್ಮಿಸಿ, ಮಕ್ಕಳ ಪ್ರಗತಿಗೆ ಸಂಪೂರ್ಣ ಅರ್ಪಿಸಿಕೊಂಡಿರುವ ಉಮೇಶ್ ಮಿತ ಬಾಷಿ, ನಿಶ್ಕಲ್ಮಷ ಹೃದಯಿ, ಸದಾ ಮಕ್ಕಳ ಒಳಿತನ್ನು ಬಯಸುವ ವ್ಯಕ್ತಿ. ಇವರ ಸಾಧನೆ ಎಲ್ಲಾ ಶಿಕ್ಷಕರಿಗೂ ಸ್ಫೂರ್ತಿಯ ಸೆಲೆ. 

ಯಾವಾಗಲಾದರೂ ಅವರನ್ನು ಸಂಪರ್ಕಿಸಲು ಕರೆ ಮಾಡಿದರೆ, ನಾನು ಶಾಲೆಯಲ್ಲಿರುವೆ ನಂತರ ಕರೆ ಮಾಡುವೆ ಅಂತ ಹೇಳಿ, ಶಾಲೆಯಲ್ಲಿ ಎಲ್ಲಾ ಕೆಲಸಗಳನ್ನ ಮುಗಿಸಿ, ಶಾಲೆ ಬಿಟ್ಟ ನಂತರ ಕರೆ ಮಾಡುತ್ತಿದ್ದ ನಿಜ ಕಾಯಕಯೋಗಿ, ಕವಿ ಗೆಳೆಯ, ಸೌಮ್ಯ ಸ್ವಭಾವದ ಚಿಂತಕ, ಮಾತುಗಾರ, ಶಿಕ್ಷಣ ಪ್ರೇಮಿ. ಒಂದರಿಂದ ಐದನೇ ತರಗತಿಯವರೆಗೆ ಇರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಡಿಜಿಟಲ್‌- ಲ್ಯಾಪ್ ಟಾಪ್ ಮೂಲಕ ಶಿಕ್ಷಣ, ಕ್ರೀಡಾ ಸಾಮಗ್ರಿಗಳು, ಸ್ವಚ್ಛತೆ ಇತ್ಯಾದಿ ನೋಡಿ ಮನ ತುಂಬಿ ಬಂತು. ಇಚ್ಛಾಶಕ್ತಿ ಮತ್ತು ಸರ್ಕಾರ ನೀಡುವ ಸಂಬಳಕ್ಕೆ ನ್ಯಾಯ ಒದಗಿಸುವ ಮನಸ್ಸು ಇದ್ದರೆ ಏನು ಬೇಕಾದರು ಮಾಡಬಹುದು ಎಂಬುದಕ್ಕೆ ಟಿ.ಪಿ. ಉಮೇಶ್ ಸರ್ ಸಾಕ್ಷಿಯಾಗಿದ್ದಾರೆ.


ಅಮೃತಾಪುರ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ, ಹಿಂದುಳಿದ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ  ಗ್ರಾಮ.‌ ಬಡತನ, ಅನಕ್ಷರಸ್ಥ ಹಿನ್ನೆಲೆಯ ಮಕ್ಕಳೇ ಹೆಚ್ಚು. ಇಲ್ಲಿ ಮೊದಲು ೪೦ ಮಕ್ಕಳು ಶಾಲೆಗೆ ಬರುತ್ತಿದ್ದರು. ಉಮೇಶ್ ಶಾಲೆಗೆ ಬಂದ ನಂತರ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಮುಂದಾದರು. ಈಗ  ಮಕ್ಕಳ ಮನೆ ಮತ್ತು ಒಂದರಿಂದ ಐದನೆಯ ತರಗತಿವರೆಗಿನ   ೮೦ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.



   ಶಾಲಾ ಕಟ್ಟಡ ಆಗಲೋ ಈಗಲೋ ಬಿದ್ದು ಹೋಗುವ ಭಯಆಗ  ದೇವಾಲಯದ ಆವರಣದಲ್ಲಿ ಪಾಠ ಮಾಡಬೇಕಾದ  ಪರಿಸ್ಥಿತಿಇಂತಹ ಸಂದರ್ಭದಲ್ಲಿ  ಅಮೇರಿಕಾ ಮೂಲದ ಓಸಾಟ್ ( One School at a time )  ಮತ್ತು ರೋಟರಿ ಕ್ಲಬ್  ಸಹಯೋಗದೊಂದಿಗೆ ೩೦ ಲಕ್ಷಗಳಷ್ಟು ಮೌಲ್ಯದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣದಲ್ಲಿ ಉಮೇಶ್ ಪಾತ್ರ ಮಹತ್ತರವಾದುದು.






ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಚಿಗುರು ಪತ್ರಿಕೆಯನ್ನು ಮಕ್ಕಳಿಗೆ ನೀಡುವುದರ ಮೂಲಕ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತಿದ್ದಾರೆ.



ಹಟ್ಟಿ ಮಕ್ಕಳ ಭಾಷ ಸಾಮರ್ಥ್ಯ, ಬರವಣಿಗೆ, ಹಾಗು ಓದಿನಲ್ಲಿ ಆಸಕ್ತಿ ಹೆಚ್ಚಿಸಲು ಸುಮಾರು 2016 ನೇ ಇಸವಿಯಿಂದ ಆಕಾಶವಾಣಿ ರೇಡಿಯೋ ಕಾರ್ಯಕ್ರಮಗಳನ್ನು ಬಳಸಿಕೊಂಡು ಯಶಸ್ಸುಸಾಧಿಸಿದ್ದಾರೆ

ಪ್ರತಿ ತಿಂಗಳಿಗೊಮ್ಮೆ ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಸಂಸ್ಥೆಗಳಾದ - ಪೊಲೀಸ್ ಠಾಣೆ, ಅಸ್ಪತ್ರೆ, ಪೋಸ್ಟ್ ಆಫೀಸ್, ಬಸ್ ನಿಲ್ದಾಣ, ಬ್ಯಾಂಕ್, ತೋಟ ಹೀಗೆ ಸ್ಥಳೀಯ ಕ್ಷೇತ್ರ ಪ್ರವಾಸದ ಜೊತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾರೆ

ಕಳೆದ 12 ವರ್ಷಗಳಿದಲೂ ಸಹ ಕಲಿಕೋತ್ಸವ ಅಥವಾ ಕಲಿಕಾ ಮೇಳ ಎಂಬ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ, ಕನ್ನಡ ಸಾಹಿತ್ಯದ ಹಿರಿಮೆ, ಗರಿಮೆಯನ್ನ ವಿದ್ಯಾರ್ಥಿಗಳು ಮೂಲಕ ಇಡಿ ಹಳ್ಳಿಯ ಜನರಿಗೆ ತಿಳಿಸುವ ವಿನೂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ದಾನಿಗಳ ನೆರವಿನಿಂದ ಮೂರು ಲ್ಯಾಪ್ಟಾಪ್ ಸೌಲಭ್ಯದ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯಅತ್ಯಾಧುನಿಕ ಪೀಠೋಪಕರಣ- ಪಾಠೋಪಕರಣಗಳಿಂದ ಮಾದರಿ ಶಾಲೆಯಾಗಿದೆ. ಮಾಡಿ ಕಲಿ, ನೋಡಿ ಕಲಿ ಇಲ್ಲಿ ಅಕ್ಷರಶಃ ಕಾರ್ಯರೂಪಕ್ಕೆ ತರಲಾಗಿದೆ. ನಗರದ ಕಾನ್ವೆಂಟ್ ಗಳಿಗಿಂತಲೂ ಉತ್ತಮ ಸೌಲಭ್ಯ ಒದಗಿಸಿಪ್ರತಿಯೊಂದು ಮಗುವು   ಉಲ್ಲಾಸ ಮತ್ತು ಸಂತೋಷದಿಂದ ಕಲಿಯುವಂತಹ ವಾತಾವರಣ ನಿರ್ಮಿಸುವಲ್ಲಿ ಉಮೇಶ್ ಸಾಕಷ್ಟು ಶ್ರಮಿಸಿದ್ದಾರೆ. ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯಗಳ ಮೂಲಕ ಕಿರಿಯ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಕೊರೊನ ಕಾಲದಲ್ಲಿ   ಶಿಕ್ಷಣಇಲಾಖೆ ಆನ್ ಲೈನ್ ತರಗತಿ, ಜಗಲಿ ಪಾಠ, ವಠಾರ ಪಾಠ ಮುಂತಾದ ನೂತನ ಉಪಕ್ರಮಗಳನ್ನು ರೂಪಿಸಿತ್ತು. ಆಗ ಉಮೇಶ್  'ಮಿಸ್ ಕಾಲ್ ಮಾಡಿ ಪಾಠ ಕೇಳಿ' ಎಂದು ಮಕ್ಕಳ ಪೋಷಕರಿಗೆ ಕರೆ ನೀಡಿದ್ದರುಮೊಬೈಲ್ ಹೊಂದದ ಪೋಷಕರ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕಲಿಕಾ ಪೂರಕ ವಾತಾವರಣ ರೂಪಿಸಿದ್ದರು

ಶ್ರಿಯುತರು, ತೊಡರನಾಳ್ ಗ್ರಾಮದ ಪರಮೇಶ್ವರಪ್ಪ ಜಯಮ್ಮ ದಂಪತಿಗಳ ಹಿರಿಯಪುತ್ರ. ತಂದೆ ತಾಯಿಯ ಸಂಸ್ಕಾರ, ಗುರುಹಿರಿಯರ ಸನ್ಮಾರ್ಗದರ್ಶನ ಸಾಧನೆಗೆ ಪೂರಕವಾಗಿದೆ. ಇವರ ಕೆಲಸಗಳಲ್ಲಿ ಸದಾ ಬೆನ್ನೆಲುಬಾಗಿ ಜೊತೆಗಿರುವವರು ಧರ್ಮಪತ್ನಿ ಶ್ರಿಮತಿ ಅನಿತ ಉಮೇಶ್ T. P. ಇವರು ಸಹ ತುಪ್ಪದಳ್ಳಿಯ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

ಸಿರಿಗೆರೆ ಬಿ ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಉಮೇಶ್ ಎಂ ., ಎಂ ಇಡಿ ಪದವೀಧರರು. ೧೯೯೮-೯೯ನೇ ಸಾಲಿನಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಂಬತ್ತನೆಯ ರ್ಯಾಂಕ್ ಪಡೆದು ಶ್ರೀ ತರಳಬಾಳು ಜಗದ್ಗುರು  ವಿದ್ಯಾಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿ, ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದಲೇ  ಬಂಗಾರದ ಪದಕವನ್ನು ಪಡೆದುಕೊಂಡಿದ್ದರು. ಸಿರಿಗೆರೆಯ ಶ್ರೀ ಜಗದ್ಗುರುಗಳ ಆಶೀರ್ವಾದ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಾತಾವರಣವೇ ನನ್ನೆಲ್ಲ ಸಾಧನೆಗೆ ಪ್ರೇರಣೆ ಎನ್ನುವ ಉಮೇಶ್, 'ಉಮೇಶ ಪ್ರಿಯ ಶಿವಮೂರ್ತಿ ಪ್ರಭುವೇ' ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿ, ಆಧುನಿಕ ವಚನ ಸಂಕಲವನ್ನು  ಪ್ರಕಟಿಸಿದ್ದಾರೆ. ಇವರ ಲೇಖನಿಯಿಂದ  ಮಕ್ಕಳ ಕಥೆ, ಕವಿತೆ ಸೇರಿದಂತೆ ಈಗಾಗಲೇ ಆರು  ಕೃತಿಗಳು ಹೊರಬಂದಿವೆ. ಮೈಸೂರು ದಸರಾ ಕವಿಗೋಷ್ಠಿ ಜೊತೆಗೆ  ರಾಜ್ಯ ಮಟ್ಟದ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಕ್ರಿಯಾಶೀಲ ಶಿಕ್ಷಕ, ಸೃಜನಶೀಲ ಬರಹಗಾರ, ಸಂಘಟನಾ ಚತುರನಾದ  ಉಮೇಶ್ ಸದಾ ಹೊಸತನಕ್ಕೆ ತುಡಿಯುವವರು.‌ ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ತನ್ನ ವೃತ್ತಿಯಲ್ಲಿ ಸಾರ್ಥಕತೆ ಕಂಡವರು.‌

 ಇವರ ನಿಷ್ಕಾಮಕರ್ಮಕ್ಕೆ ಒಲಿದ ಪ್ರಶಸ್ತಿಗಳು ಹಲವಾರು. ರೋಟರಿ ಸಂಸ್ಥೆ ಕೊಡಲ್ಪಡುವ 'ನೇಷನ್ ಬಿಲ್ಡರ್ ಅವಾರ್ಡ್' ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಕಳೆದ ವರ್ಷ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಉಮೇಶ್ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಚೇತೋಹಾರಿ ಕಲಿಕೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.

ಅವರ ಶೈಕ್ಷಣಿಕೆ ಸೇವೆಗೆ ರಾಷ್ಟ್ರ ಪ್ರಶಸ್ತಿಯ ಗೌರವ ಮತ್ತಷ್ಟು ಉತ್ಸಾಹವನ್ನು ತುಂಬಲಿ. ಇನ್ನಷ್ಟು ಶಿಕ್ಷಕರನ್ನು ಸಾಧನಾ ಪಥದತ್ತ ಮುನ್ನಡೆಸುವ ಶಕ್ತಿ ತುಂಬಲಿ. ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆಗಳು ಅವರಿಂದ ಬರಲಿ ಎಂದು ಸೆಪ್ಟಂಬರ್‌ ಐದರಂದು ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸಲಿರುವ ಈ ಶುಭ ಸಂದರ್ಭದಲ್ಲಿ ಸವಿಜ್ಞಾನ ತಂಡವು ಶುಭ ಹಾರೈಸುತ್ತದೆ.  

ಲೇಖನ :

ಆಶಾ. CHM

ವಿದ್ಯಾ ವಿಕಾಸ ವಿದ್ಯಾಸಂಸ್ಥೆ

ಚಿತ್ರದುರ್ಗ

 

 

3 comments:

  1. This comment has been removed by the author.

    ReplyDelete
  2. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾದ ತಮಗೆ ಅಭಿನಂದನೆಗಳು 👏👏💐💐
    ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿಯಾದ ತಾವು,ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರ ಪರಿಚಯ ಮಾಡಿಕೊಟ್ಟಿರುವುದು ತುಂಬಾ ವಿಶೇಷವಾಗಿದೆ.

    ReplyDelete