ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, September 4, 2022

ಬ್ರಹ್ಮಾಂಡದ ಸೃಷ್ಟಿರಹಸ್ಯ

 ಬ್ರಹ್ಮಾಂಡದ ಸೃಷ್ಟಿರಹಸ್ಯ

                               ಲೇಖಕರು :ಶ್ರೀಮತಿ ಬಿ.ಎನ್‌. ರೂಪ

ಇಂದು ನಾವು ಆಧುನಿಕ ವಿಜ್ಞಾನ ಎಂದು ಪರಿಗಣಿಸುವ ಕೆಲವು ಮೂಲತತ್ವಗಳನ್ನು, ಸುಮಾರು ೪೦೦ ವಷಗಳ ಹಿಂದೆ, ಗೆಲಿಲಿಯೋ ಎಂಬ ವಿಜ್ಞಾನಿ ಒಟ್ಟುಗೂಡಿಸಿ ವಿವರಿಸಲು ಪ್ರಯತ್ನಿಸಿದ್ದರು. ಅವರು ವಿವರಿಸಲು ಪ್ರಯತ್ನಿಸಿದ ಆ ವಿಷಯವಾದರೂ ಯಾವುದು? ಅದೊಂದು ಮಾನವೀಯತೆಯಷ್ಟೇ ಹಳೆಯದಾದ ಪ್ರಶ್ನೆ, ನಾವು ಯಾವ ಘಟಕಗಳಿಂದ ಕೂಡಿದ್ದೇವೆ ? ಬ್ರಹ್ಮಾಂಡದ ಮೂಲಭೂತ ರಚನಾತ್ಮಕ ಘಟಕಗಳು ಯಾವುವು ? 

ಇವುಗಳಿಂದಲೇ ನೀವು, ನಾನು, ನಕ್ಷತ್ರಗಳು ಮತ್ತು ಉಳಿದೆಲ್ಲವೂ ನಿರ್ಮಿತವಾಗಿವೆ. ಗೆಲಿಲಿಯೋನ ನಂತರ ಸಾವಿರಾರು ಸಿದ್ಧಾಂತಗಳು ಮತ್ತು ಪ್ರಯೋಗಗಳು ಬೆಳಕಿಗೆ ಬಂದಿವೆ. ದ್ರವ್ಯದ ಮೂಲಭೂತ ರಚನೆಯನ್ನು ಅರ್ಥ ಮಾಡಿಕೊಳ್ಳುವತ್ತ ನಮ್ಮನ್ನು ಕೊಂಡೊಯ್ಯುತ್ತಿವೆ.

ಪ್ರಸ್ತುತ ಬ್ರಹ್ಮಾಂಡವನ್ನು ವಿವರಿಸುವಂಥ ಒಂದು ಸೂತ್ರವನ್ನು ರೂಪಿಸಲಾಗಿದ್ದು, ಅದು ಹೀಗಿದೆ:



ಈ ಸೂತ್ರವು ಹಲವಾರು ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡುತ್ತದೆ. ಇದನ್ನು ವಿಜ್ಞಾನದಲ್ಲಿ ಅಭೂತಪೂರ್ವವಾದ,  ಸರ್ವಕಾಲಿಕವಾದ ಅತ್ಯಂತ ಯಶಸ್ವೀ ವೈಜ್ಞಾನಿಕ ಸೂತ್ರ ಎಂದು ಪರಿಗಣಿಸಲಾಗಿದೆ. ಇದನ್ನು ಬ್ರಹ್ಮಾಂಡದ ‘ಪ್ರಮಾಣಿತ ಮಾದರಿʼಎಂದು ಕರೆಯಲಾಗುತ್ತದೆ. ಇದನ್ನು ಅರ್ಥೈಸಿಕೊಳ್ಲುವ ಪ್ರಯತ್ನ ಮಾಡೋಣ.


ಈ ಮಾದರಿಯು ವೃತ್ತಾಕಾರವಾಗಿದ್ದು, ಬ್ರಹ್ಮಾಂಡದಲ್ಲಿ ದ್ರವ್ಯ ಸ್ಥಿತಿಯಲ್ಲಿರುವ ೧೨ಕಣಗಳು ಹಾಗೂ ಮೂರು ವಿದದ ಬಲಗಳೊಂದಿಗೆ ಹಿಡಿದಿಟ್ಟುಕೊಂಡಿರುವ  ಹಿಗ್ಸ್-ಬೋಸಾನ್‌ ಎಂಬ ವಿಶೇಷ ಕಣದ ಬಗ್ಗೆ ವಿವರಿಸುತ್ತದೆ. ಇದರೊಂದಿಗೆ ನಾಲ್ಕನೆಯ ಬಗೆಯ ಬಲವೊಂದಿದೆ. ಅದೇ ಗುರುತ್ವಾಕರ್ಷಣ ಬಲ. ಬ್ರಹ್ಮಾಂಡದಲ್ಲಿ ಗುರುತ್ವಾಕರ್ಷಣ ಬಲ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಐನ್ಸ್‌ಸ್ಟೀನ್ ಅವರ ಸಾಪೇಕ್ಷ ಸಿದ್ಧಾಂತವು ಗುರುತ್ವಾಕರ್ಷಣ ಬಲದ ಬಗ್ಗೆ ವಿವರಿಸುತ್ತದೆಯಾದರೂ. ಅದನ್ನು ಈ ಪ್ರಮಾಣಿತ ಮಾದರಿಯಲ್ಲಿ ಸೇರಿಸಿಲ್ಲ. ಇದಕ್ಕೆ ಕಾರಣವೆಂದರೆ, ಇದು ದುರ್ಬಲ ಹಾಗೂ ಉಪ-ಪರಮಾಣ್ವಿಕ ಕಣಗಳ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ  ಎಂಬ ಸೂಕ್ಷ್ಮ ಅಂಶ.

ಪ್ರಮಾಣಿತ ಮಾದರಿಯ ಪ್ರಕಾರ, ದ್ರವ್ಯವು ಕಣಗಳಿಂದ ಮಾಡಲಾಗಿಲ್ಲ ಬದಲಿಗೆ, ಕ್ಷೇತ್ರಗಳಿಂದಾಗಿದೆ. ಈ ಕ್ಷೇತ್ರ್ರಗಳ ನಡುವಿನ ಪರಸ್ಪರ ಪ್ರತಿಕ್ರಿಯೆಯು ಬೌದ್ಧಿಕ ಮಟ್ಟದಲ್ಲಿ ಕಣಗಳ ರೂಪದಲ್ಲಿ ವ್ಯಕ್ತಪಡಿಸುತ್ತದೆ. ಹೀಗಾಗಿ, ಈ ಪ್ರಮಾಣಿತ ಮಾದರಿಯು ಬ್ರಹ್ಮಾಂಡವನ್ನು ಕಣಗಳ ಭಾಷೆಯ ಮೂಲಕ ವಿವರಿಸುತ್ತದೆ.

ಪ್ರತಿಯೊಂದು ಕಣವೂ ಒಂದು ಫರ್ಮಿಯಾನ್ ಅಥವಾ ಬೋಸಾನ್‌ ಆಗಿರುತ್ತದೆ. ಉಪಪರಮಾಣು ಘಟಕಗಳಲ್ಲಿ ಇಲೆಕ್ಟ್ರಾನ್‌ ಒಂದು ಅಪ್ ‌ಕ್ವಾರ್ಕ್ ಮತ್ತು ಒಂದು ಡೌನ್‌ ಕ್ವಾರ್ಕ್ ಅನ್ನು ಹೊಂದಿರುತ್ತದೆ. ಪ್ರೋಟಾನ್‌, ಎರಡು ಅಪ್ ‌ಕ್ವಾರ್ಕ್ ಮತ್ತು ಒಂದು ಡೌನ್‌ ಕ್ವಾರ್ಕ್ ಹೊಂದಿದ್ದರೆ, ನ್ಯೂಟ್ರಾನ್‌ ಎರಡು ಡೌನ್‌ ಕ್ವಾರ್ಕ್ ಮತ್ತು ಒಂದು ಅಪ್ ‌ಕ್ವಾರ್ಕ್ ಗಳಿಂದಾಗಿದೆ.  ಕೇಂದ್ರ ಭಾಗದಲ್ಲಿ ಪ್ರೋಟಾನ್‌ ಮತ್ತು ನ್ಯೂಟ್ರಾನ್‌ ಒಟ್ಟಿಗೆ ಬಂಧಿಸಲ್ಪಟ್ಟರೆ, ಇಲೆಕ್ಟ್ರಾನ್‌ಗಳು ಸುತ್ತುತ್ತಿರುತ್ತವೆ.

ಕೆಲವು ಪರಮಾಣುಗಳು ನಿರ್ದಿಷ್ಟ ಅನುಪಾತದಲ್ಲಿ ಸಂಯೋಜನೆಗೊಂಡು ವಸ್ತು(ದ್ರವ್ಯ)ವನ್ನು ರೂಪಿಸುತ್ತವೆ. ಇದು ನಮ್ಮ ಸುತ್ತಲಿನ ಪ್ರಪಂಚದ ಸೌಂದರ್ಯ ಮತ್ತು ಸಂಕೀರ್ಣತೆಗೆ ಕಾರಣವಾಗುತ್ತದೆ. ದ್ರವ್ಯದ ಮತ್ತೊಂದು ವೈವಿಧ್ಯತೆಯೇ ನ್ಯೂಟ್ರಿನೋ. ಇದು ಇತರ ಕಣಗಳಿಗಿಂತ  ಭಿನ್ನವಾಗಿದೆ. ನ್ಯೂಟ್ರಿನೋಗಳು ಹಗುರವಾಗಿರುತ್ತವೆ ಮತ್ತು ಯಾವುದೇ ಪದಾರ್ಥಗಳೊಂದಿಗೆ ವರ್ತಿಸುವುದಿಲ್ಲ ಅಥವಾ ಸಂಯೋಜಿಸುವುದೂ ಇಲ್ಲ. ಸೂರ್ಯನಿಂದ ಬರುವ ಟ್ರಿಲ್ಲಿಯನ್‌ಗಟ್ಟಲೆ ನ್ಯೂಟ್ರಿನೋಗಳು  ಬ್ರಹ್ಮಾಂಡದ ಎಲ್ಲಾ ವಸ್ತುಗಳಲ್ಲಿರುವ ದ್ರವ್ಯಗಳ ಮೂಲಕ ಹಾದು ಹೋಗುತ್ತವೆ.

ಪ್ರಕೃತಿಯು ದ್ರವ್ಯದ ಈಗಿರುವ ನಾಲ್ಕು ಸ್ಥಿತಿಗಳ ಜೊತೆಗೆ ಇನ್ನೆರಡು ಸ್ಥಿತಿಗಳನ್ನು ಉಂಟು ಮಾಡಿದೆ. ಇಲೆಕ್ಟ್ರಾನ್ ಗಳ ಜೊತೆಗೆ, ಅವುಗಳಂತೆಯೇ ವರ್ತಿಸುವ ಆದರೆ, ಇಲೆಕ್ಟ್ರಾನ್ ಗಿಂತ ಹೆಚ್ಚು ರಾಶಿಯನ್ನು ಹೊಂದಿರುವ ಮುವಾನ್ ಮತ್ತು ಟೌ ಎಂಬ ಎರಡು ಬಗೆಯ ಕಣಗಳನ್ನು ಗುರುತಿಸಲಾಗಿದೆ. ಮುವಾನ್‌ಗಳು ಇಲೆಕ್ಟ್ರಾನ್‌ಗಳಿಗಿಂತ ೨೦೦ಪಟ್ಟು ಹೆಚ್ಚು ರಾಶಿಯನ್ನು ಹೊಂದಿದ್ದರೆ, ಟೌ ಗಳು ಇಲೆಕ್ಟ್ರಾನ್‌ಗಳಿಗಿಂತ ೩೫೦೦ ಪಟ್ಟು ಹೆಚ್ಚು ರಾಶಿಯನ್ನು ಹೊಂದಿವೆ.

ಇವುಗಳ ಜೊತೆಗೆ, ಡೌನ್‌ ಕ್ವಾರ್ಕ್‌ಗೆ ಸೇರಿದ ವಿಚಿತ್ರ ಕ್ವಾರ್ಕ್‌ ಹಾಗೂ ಬಾಟಮ್‌ ಕ್ವಾರ್ಕ್‌ ಎಂಬ ಎರಡು ಭಾರವಾದ ಆವೃತ್ತಿಗಳಿವೆ. ಹಾಗೆಯೇ ಆಪ್ ಕ್ವಾರ್ಕ್‌ ಮತ್ತು ಚಾರ್ಮ್‌ ಕ್ವಾರ್ಕ್‌ ಎಂಬ ಎರಡು ಭಾರವಾದ ಆವೃತ್ತಿಗಳಿವೆ. ಸಾಲದ್ದಕ್ಕೆ, ಮ್ಯುಯಾನ್‌ ನ್ಯೂಟ್ರಿನೋ  ಮತ್ತು ಟೌ ನ್ಯುಟ್ರಿನೋ ಎಂಬ ಎರಡು ಬಗೆಯ ನ್ಯುಟ್ರಿನೋ ಗಳನ್ನೂ ಗುರುತಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈಗ ನಾವು ಬ್ರಹ್ಮಾಂಡದ ಬಗ್ಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಬ್ರಹ್ಮಾಂಡದಲ್ಲಿರುವ ವಿವಿಧ ಬಗೆಯ ಬಲಗಳಾದ ನ್ಯೂಕ್ಲೀಯ ಅಥವಾ ಬೈಜಿಕಬಲ, ಗುರುತ್ವ ಬಲ ಹಾಗೂ ವಿದ್ಯುತ್‌ ಕಾಂತಿಯ ಬಲಗಳೆಂಬ ಪ್ರಮುಖ ಮೂರು ಬಗೆಯ ಬಲಗಳಿವೆ. ವಿವಿಧ ಬಲಗಳು ಇಲ್ಲದಿದ್ದರೆ, ಎಲ್ಲಾ ಕಣಗಳು ಕಾಸ್ಮಾಸ್‌ ನಲ್ಲಿ ಕಳೆದುಹೋದ ಆತ್ಮಗಳಂತೆ ಅಲೆದಾಡಬೇಕಿತ್ತು! ಈ ಎಲ್ಲ ವಿಧದ ಬಲಗಳು ಬೋಸಾನ್ ಎಂಬ ಕಣಗಳೊಂದಿಗೆ ಸೇರಿಕೊಂಡಿರುತ್ತವೆ.

ಮೊದಲನೆಯದಾಗಿ ಎಲ್ಲ ಧಾತುಗಳ ರಾಸಾಯನಿಕ ಲಕ್ಷಣಗಳಿಗೆ ಕಾರಣವಾಗಿರುವ ಬಲವೇ, ವಿದ್ಯುತ್‌ ಕಾಂತೀಯ ಬಲ. ಯಾವ ವಸ್ತು ವಿದ್ಯುದಾವೇಶವನ್ನು ಹೊಂದಿರುತ್ತದೆಯೋ, ಅದು ಈ ಬಲವನ್ನು ಅನುಭವಿಸುತ್ತದೆ.

ಎರಡನೆಯದಾಗಿ ಬಲಗಳಲ್ಲಿ ಪ್ರಬಲವಾದ ಬೈಜಿಕಬಲವು ಕ್ವಾರ್ಕ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಪರಮಾಣುವಿನ ಕೇಂದ್ರದಲ್ಲಿ ಇರುವ ಪ್ರೋಟಾನ್‌ ಮತ್ತು ನ್ಯೂಟ್ರಾನ್‌ಗಳನ್ನು ಇದು ಅತ್ಯಂತ ಪ್ರಬಲವಾಗಿ ಹಿಡಿದಿಟ್ಟುಕೊಂಡಿರುತ್ತದೆ. ಈ ನ್ಯೂಕ್ಲೀಯ ಶಕ್ತಿಯೇ ಪರಮಾಣು ಬಾಂಬಿನ ಜೀವಾಳ.

ಅತ್ಯಂತ ದುರ್ಬಲವಾದ ಮೂರನೇ ವಿಧದ ಬಲವು ಪರಮಾಣುಗಳ ನಡುವಿನ ಅಂತರದ ಮೇಲೆ ಪರಿಣಾಮ ಬೀರುತ್ತದೆ. ಇದು ಕ್ವಾರ್ಕ್‌ಗಳನ್ನು ಬದಲಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ, ದುರ್ಬಲ ಬಲ ಬೈಜಿಕ ಸಮ್ಮಿಳನ ಕ್ರಿಯೆಗೆ ನೆರವಾಗುತ್ತದೆ. ಇದು ಸೂರ್ಯ ಹಾಗೂ ಇತರ ನಕ್ಷತ್ರಗಳಲ್ಲಿ ನಡೆಯುವ ಕ್ರಿಯೆಗೆ ಹಾಗೂ ಶಕ್ತಿಯ ಬಿಡುಗಡೆಗೆ ಕಾರಣವಾಗಿದೆ. ದುರ್ಬಲ ಬಲವು ನ್ಯೂಟ್ರಿನೋಗಳನ್ನು ಒಳಗೊಂಡಂತೆ ಎಲ್ಲ ಕಣಗಳ ಮೇಲೆ ವರ್ತಿಸುತ್ತದೆ.

ವಿಜ್ಞಾನಿಗಳು ಹಲವು ಬಗೆಯ ವೇಗವರ್ಧಕಗಳನ್ನು ಹಾಗೂ ಉಪಕರಣಗಳನ್ನು ಬಳಸಿ, ೨೦೧೨ರಲ್ಲಿ ಜಿನೀವಾದಲ್ಲಿ ಹೊಸ ಬಗೆಯ ಕಣವೊಂದನ್ನು ಪತ್ತೆ ಮಾಡಿದರು. ಈ ಕಣವನ್ನು ಹಿಗ್ಸ್-‌ ಬೋಸಾನ್‌ ಎಂದು ಕರೆಯಲಾಗಿದೆ. ಇದಕ್ಕೆ ʼದೇವಕಣʼ ಎಂದೂ ಹೆಸರಿದೆ. ಇಡೀ ಬ್ರಹ್ಮಾಂಡವೇ ಈ ದೇವಕಣಗಳಿಂದ ರಚಿತವಾಗಿದೆ ಎಂಬುದು ಈಗಿನ ನಂಬಿಕೆ. ಹಿಗ್ಸ್-ಬೋಸಾನ್‌ ಕಣಗಳು ಇಡೀ ವಿಶ್ವವನ್ನು ವ್ಯಾಪಿಸಿವೆ  ಮತ್ತು ಎಲ್ಲದರಲ್ಲೂ ಕಂಡು ಬರುತ್ತವೆ ಎಂಬುದನ್ನು ವಿಜ್ಞಾನಿಗಳು ದೃಢೀಕರಿಸಿದ್ದಾರೆ. ಹೀಗೆ ಬ್ರಹ್ಮಾಂಡದ ರಚನೆಯಲ್ಲಿ ಅನೇಕ ಕಣಗಳು, ಅವುಗಳ ನಡುವಣ ಅಂತರ್‌ ವರ್ತನೆಗಳು ನಡೆಯುತ್ತಲೇ ಇವೆ. ಇವುಗಳ ಹಿಂದೆ ಹೊರಟ ವಿಜ್ಞಾನಿಗಳ ಅಂತರ್‌ ಚಕ್ಷುಗಳಿಗೆ ಗೋಚರಿಸಿ ಇನ್ನೆಂತಹ ರಹಸ್ಯಗಳು ಹೊರಹೊಮ್ಮುತ್ತವೋ ಎನ್ನುವುದನ್ನು ಕುತೂಹಲದಿಂದ ಕಾಯೋಣ.

ನಮ್ಮ ಬ್ರಹ್ಮಾಂಡವೇ ದೇವರ ಕಣಗಳಿಂದ ರಚಿತವಾಗಿದೆ. ಗಮನಾರ್ಹ ವೈಶಿಷ್ಟತೆ ಎಂದರೆ ಮೇಲಿನ ಎಲ್ಲಾ ಕಣಗಳು ದ್ರವ್ಯರಾಶಿಯನ್ನುಹೊಂದಿಲ್ಲ.

ಹಿಗ್ಸ್ ಬೋಸಾನ್ ಕಣವು ಇಡೀ ವಿಶ್ವವನ್ನು ವ್ಯಾಪಿಸುತ್ತದೆ.

ದೇವರ ಕಣ ಎಲ್ಲರಲ್ಲೂ ಕಂಡುಬರುತ್ತದೆ ಎಂದು ದೃಢೀಕರಿಸಲಾಗಿದೆ .

ಈ ಲೇಖನದ ಉದ್ದೇಶ ನಮ್ಮ ಬ್ರಹ್ಮಾಂಡವನ್ನು ತಿಳಿದುಕೊಳ್ಳಲು ಕುತೂಹಲವನ್ನು ಪ್ರೇರೇಪಿಸುವುದೇ ಆಗಿದೆ.

ಬಿ .  ಎನ್.  ರೂಪ

ಸಹಶಿಕ್ಷಕರು,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ

ಬೆಂಗಳೂರು ದಕ್ಷಿಣ ವಲಯ 2

1 comment:

  1. Great article on Higgs Boson and how it could have been responsible for creating the universe. No wonder why its called "The God Particle"

    ReplyDelete