ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, May 4, 2024

ನಿಸರ್ಗದ ಜಲಗಾರ ರಣಹದ್ದು!!!

 

ನಿಸರ್ಗದ ಜಲಗಾರ ರಣಹದ್ದು!!!‌ 

                                                                                                               ರಾಮಚಂದ್ರ ಭಟ್‌ ಬಿ.ಜಿ. 

ಬೋರ್ಡ್‌ ಪರೀಕ್ಷೆ ಹತ್ತಿರ ಬಂದಂತೆ ಮಗನ ಪರೀಕ್ಷಾ ಸಿದ್ಧತೆ ತಿಳಿದುಕೊಳ್ಳಲು ಕರೆದೆ. ಜೀವಕ್ರಿಯೆಗಳ ಬಗ್ಗೆ ಕೇಳುತ್ತಾ HCl ನ  ಕಾರ್ಯವನ್ನು ಕುರಿತು ಪ್ರಶ್ನೆ  ಕೇಳಿದೆ . ಅದಕ್ಕೆ ಉತ್ತರಿಸುತ್ತಾ ಮಗ ಕೌಂಟರ್‌ ಪ್ರಶ್ನೆ ಹಾಕಿದ . 

" ಅಪ್ಪಾ ಹದ್ದಿನ ಜೀರ್ಣಾಂಗ ವ್ಯವಸ್ಥೆಯಲ್ಲೂ ಅದೇ HCl ಇರುತ್ತಾ?" 

 ಮಗನ ಪ್ರಶ್ನೆ ಕೇಳುತ್ತಾ ಅವನ ಮುಖವನ್ನು ದಿಟ್ಟಿಸಿದೆ. ಅದೇನೋ ವಿಡಿಯೋ ನೋಡಿಯೋ ಇನ್ಯಾವುದೋ ಮಾಹಿತಿ ನೋಡಿಯೋ ಪ್ರಶ್ನೆ ಕೇಳುತ್ತಾ ಇದ್ದಾನೆ ಎನ್ನುವುದು ಖಾತ್ರಿ ಆಯ್ತು. 

"ಹೌದಪ್ಪಾ ಇರುತ್ತೆ" .

" ಹಾಗಿದ್ರೆ ಅದರ pH ಮೌಲ್ಯ ನಮ್ಮಷ್ಟೇ ಇರುತ್ತಾ?  " 

ನನ್ನೊಳಗೆ ಜಿಜ್ಞಾಸೆ ನಡೆಯಲಾರಂಭಿಸಿತು .  ಹೌದಲ್ಲವಾ  ? HCl ಅಂದ ಮೇಲೆ ಒಂದೇ ಇರಬೇಕಲ್ವಾ?  ನನಗೆ ಈ ಆಲೋಚನೆ ಬರಲೇ ಇಲ್ವಲ್ಲ ಎಂದು ಯೋಚಿಸುತ್ತಿದ್ದಾಗ , ಮಗ ಮತ್ತೆ ಹೇಳಿದ, 

"ಅಪ್ಪಾ ಅವು ಕೊಳೆತಿದ್ದನ್ನೆಲ್ಲ ತಿನ್ನುತ್ತವಲ್ಲ ? ಹಾಗಾಗಿ  ಆ ಆಮ್ಲ ನಮ್ಮದಕ್ಕಿಂತ ಪ್ರಬಲವಾಗಿರಬೇಕಲ್ಲ? " 

ಓಹ್‌ !!!  ಹೌದಲ್ಲ?

ಇದ್ದಕ್ಕಿದ್ದಂತೆ ಹೊಸ ಆಲೋಚನೆ ಹೊಳೆಯಲಾರಂಭಿಸಿತು. ಮಗನ ಪ್ರಶ್ನೆರಣಹದ್ದಿನ ಹಿಂದೆ ಹೋಗುವಂತೆ  ಮಾಡಿತು. ಅದಕ್ಕೆ ವಿಲಿಯಂ ವರ್ಡ್ಸ್‌ ವರ್ತ್‌ ವೇದಾಂತಿಯಂತೆ "Child is Father of man " ಎಂದು ಹೇಳಿದ್ದು  ಸುಳ್ಳಲ್ಲ 



ಕೊಳೆತ ಶವ ಭಕ್ಷಕ ಪ್ರಾಣಿಗಳು ನಮಗೆ ಅದೆಷ್ಟೇ ಅಸಹ್ಯ ಹುಟ್ಟಿಸಿದರೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಕಾರಣವಾದ ಇವುಗಳ ಕಾರ್ಯ ಸ್ತುತ್ಯರ್ಹ. ಸಣ್ಣಪುಟ್ಟ ಆಹಾರ ಸೇವನೆ ಇಷ್ಟೆಲ್ಲ ಸೋಂಕಿತ ಮಾಂಸ ಸೇವನೆ ರಣಹದ್ದುಗಳಿಗೆ ಹೊಟ್ಟೆ ನೋವು ತರುವುದಿಲ್ಲವೇ? ಆರೋಗ್ಯ ಹದಗೆಡದೇ?


ಕೊಳೆಯುತ್ತಿರುವ ಜೀವಿಗಳ ದೇಹದಲ್ಲಿ ಬೊಟುಲಿಸಮ್, ಆಂಥ್ರಾಕ್ಸ್, ರೇಬೀಸ್, ಕಾಲರಾ, ಹೆಪಟೈಟಿಸ್ ಮತ್ತು ಪೋಲಿಯೊಗಳಂತಹ ಅನೇಕ ಮಾರಣಾಂತಿಕ ರೋಗಕಾರಕ ರೋಗಾಣುಗಳಿರುತ್ತವೆ. ಇಂತಹ ಸಾಂಕ್ರಾಮಿಕ ರೋಗಾಣುಗಳು ಸುಲಭವಾಗಿ ಪರಿಸರ ವ್ಯವಸ್ಥೆಯನ್ನು ಧ್ವಂಸ ಮಾಡಬಲ್ಲವು. ಇಂತಹ ಸೂಕ್ಷ್ಮಾಣುಜೀವಿಗಳನ್ನು ಜೀರ್ಣಿಸಿ ಪರಿಸರ ವ್ಯವಸ್ಥೆ ಸುಗಮವಾಗಿ ನಡೆಯಲು ಈ ಜೀವಿಗಳು ವಿಕಾಸದ ಹಾದಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಅಪೂರ್ವ. ಇವು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ರಣಹದ್ದುಗಳ ಜಠರದಲ್ಲಿರುವ HClಆಮ್ಲpH ಮೌಲ್ಯವು  0 ಮತ್ತು 1 ರ ನಡುವೆ ಇದ್ದು ಇದು ಬ್ಯಾಟರಿ ಆಮ್ಲದಂತೆಯೇ ಇರುತ್ತದೆ! ಇದು ಇದು ಎಲ್ಲಾ ಕಶೇರುಕಗಳಲ್ಲಿನ ಆಮ್ಲಕ್ಕಿಂತ ಹೆಚ್ಚು ವಿನಾಶಕಾರಿಯಾಗಿದ್ದು ಲೋಹವನ್ನೂ ಕರಗಿಸಬಲ್ಲುದು. ಮೂಳೆಗಳಂತಹ ವಸ್ತುಗಳನ್ನೂ ಕರಗಿಸಬಲ್ಲುದು.‌ ಜೊತೆಗೆ ಹಾನಿಕಾರಕ ಸೂಕ್ಷ್ಮಜೀವಿಗಳನ್ನೂ ಜೀರ್ಣ ಮಾಡಬಲ್ಲದು. ಇದರಿಂದಾಗಿಯೇ ರಣಹದ್ದುಗಳು ತನ್ನ ಬಲಿಯನ್ನು ತಿನ್ನುವುದರ ಜೊತೆಗೆ ಕೊಳೆಯುತ್ತಿರುವ ಜೀವಿಗಳನ್ನೂ ತಿಂದು ಕಲುಷಿತ ಪರಿಸರವನ್ನು ಸ್ವಚ್ಛಗೊಳಿಸುತ್ತದೆ.  

ಹೀಗೆ ಮನುಷ್ಯರು ಮತ್ತು ಇತರ ಪ್ರಾಣಿಗಳನ್ನು ಅನೇಕ ರೋಗಗಳು ಹತ್ತಿರ ಸುಳಿಯದಂತೆ ರಕ್ಷಿಸುತ್ತವೆ. ಕೆಲವೊಮ್ಮೆ ಈ ರಣಹದ್ದುಗಳು ಜೀರ್ಣವಾಗದ ಗರಿಗಳಂತಹ ವಸ್ತುಗಳನ್ನು ಹೊರ ಹಾಕುವ ಸಂದರ್ಭಗಳಲ್ಲಿ ತಮ್ಮ ಕಾಲ್ಗಳ ಮೇಲೆ ಪ್ರಬಲ ಆಮ್ಲವನ್ನು ವಾಂತಿ ಮಾಡಿ ತಮ್ಮ ಕಾಲುಗಳನ್ನು ಸ್ಯಾನಿಟೈಸ್‌ ಮಾಡಿ ಸ್ವಚ್ಛಗೊಳಿಸುತ್ತವೆ!. ಅವುಗಳ ವಾಂತಿ ಕೆಲವು ದಿನಗಳವರೆಗೂ ದುರ್ವಾಸನೆ ಬೀರುವುದರಿಂದ ಅವುಗಳ ತಂಟೆಗೆ ಯಾವ ಪ್ರಾಣಿಯೂ ಬಾರದು!! ಎಷ್ಟೇ ಪ್ರಬಲ ಜಠರ ವ್ಯವಸ್ಥೆ ಇದ್ದರೂ ವೃದ್ಧಾಪ್ಯದಲ್ಲಿ ರೋಗನಿರೋಧಕ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಕೊಳೆಯುತ್ತಿರುವ ಆಹಾರದ ಬದಲಾಗಿ ತಾಜಾ ಮಾಂಸ ಸೇವನೆ ಮಾಡಿ ಆರೋಗ್ಯವನ್ನು  ಕಾಪಾಡಿಕೊಳ್ಳುತ್ತವೆ.  

ಇವು ಇತರ ಪ್ರಾಣಿಗಳಿಗೆ ನಿಲುಕದ ಕಲ್ಲುಬಂಡೆ ಅಥವಾ ಎತ್ತರವಾದ ದೈತ್ಯವೃಕ್ಷಗಳ ತುದಿಯಲ್ಲಿ ಕಾಗೆ ಗೂಡಿನಂತಹ ಪುಟ್ಟಗೂಡು ನಿರ್ಮಿಸುತ್ತವೆ. ಒಂದೇ ಕಡೆ ಹಲವು ಗೂಡುಗಳೂ ಇರುವುದುಂಟು. ಒಂದು ಅಥವಾ ಎರಡು ಮೊಟ್ಟೆಯನ್ನಿಟ್ಟು ಏಳರಿಂದ ಎಂಟು ವಾರಗಳ ತನಕ ಕಾವುಕೊಟ್ಟು ಮರಿ ಮಾಡುತ್ತವೆ. ಹದ್ದು ಹಾರುವ ಎತ್ತರಕ್ಕೆ ಕೊನೆಯೇ ಇಲ್ಲ. ಸಂಪಾತಿ ಮತ್ತು ಜಠಾಯುಗಳ ನಡುವಿನ ಹಾರಾಟದ ಸ್ಪರ್ಧೆ ನೆನಪಾಯಿತೇ? 12 ಕಿ.ಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ತಾಸಿಗೆ 60-80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮೀ ಸುತ್ತಳತೆಯಲ್ಲಿ ಗಸ್ತು ಹೊಡೆಯುತ್ತಾ ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಆಹಾರದ ಮುಂದೆ ಪ್ರತ್ಯಕ್ಷವಾಗುತ್ತವೆ.  ಕೊಳೆತ ಪ್ರಾಣಿಗಳ ದೇಹವನ್ನು ತಿನ್ನುವುದರಿಂದ ಹರಡಬಹುದಾದ ರೋಗ-ರುಜಿನಗಳಿಂದ ಊರನ್ನು ರಕ್ಷಿಸುವ ಮೂಲಕ ನಿಸರ್ಗದ ಜಲಗಾರರಾಗಿವೆ. ಧಾರ್ಮಿಕವಾಗಿಯೂ ಇವುಗಳ ಪಾತ್ರ ಮಹತ್ವದ್ದು. ಪಾರ್ಸಿ ಜನಾಂಗದವರ ದೇಹ ಇವುಗಳಿಗೇ ಮೀಸಲು. ರಣಹದ್ದುಗಳೇ ಅಂತ್ಯ ಸಂಸ್ಕಾರ ನಡೆಸುತ್ತವೆ!!. ಜೀಮೂತವಾಹನನ ನೆನಪಾಗುತ್ತಿದೆಯೆ? 

ರಣಹದ್ದುಗಳು ಇಂದು ಅಳಿವಿನ ಅಂಚಿಗೆ ತಲುಪಿವೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಸಂಪೂರ್ಣ ಕಣ್ಮರೆಯಾದರೂ ಅಚ್ಚರಿಯಿಲ್ಲ. ಈ ದಿಸೆಯಲ್ಲಿ ಹದ್ದುಗಳ ಸಂರಕ್ಷಣೆಗಾಗಿಯೇ ಬೆಂಗಳೂರಿಗೆ ಸಮೀಪದ ಶೋಲೆಯ ರಾಮ್‌ಗಡ್‌ ಎಂದೇ ಹೆಸರಾದ ರಾಮನಗರದ ರಾಮದೇವರ ಬೆಟ್ಟದಲ್ಲಿ ಇವುಗಳಿಗಾಗಿಯೇ ಅಭಯಾರಣ್ಯವೊಂದನ್ನು ಸ್ಥಾಪಿಸಲಾಗಿದೆ.  ಪರಿಸರಕ್ಕಾಗಿ ಅವು ಮಾಡುವ ಪ್ರಮುಖ ಕೆಲಸಕ್ಕಾಗಿ ಜಲಗಾರ ರಣಹದ್ದುಗಳಿಗೆ ಧನ್ಯವಾದ ಹೇಳಲೇಬೇಕು

ಜೀವಸತ್ವಗಳ ಅಂತಃಸತ್ವ

 ಜೀವಸತ್ವಗಳ ಅಂತಃಸತ್ವ 

ಲೇಖಕರು : ರಮೇಶ,ವಿ ಬಳ್ಳಾ 

 ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

(ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ

 ಮೊ: ೯೭೩೯೦೨೨೧೮೬

ಈ ಹೊತ್ತು ನಮ್ಮ ಬಹಳಷ್ಟು ತಂದೆತಾಯಿಗಳ ಆರೋಪ ಅಂದರೆ ‘ಮಕ್ಕಳು ಸರಿಯಾಗಿ ಹೊತ್ತುಹೊತ್ತಿಗೆ ಊಟ ಮಾಡಲ್ಲ, ಸೊಪ್ಪು ಕಾಳುಪಲ್ಯ, ರೊಟ್ಟಿ, ಚಪಾತಿ ತಿನ್ನೋದೆ ಇಲ್ಲ, ಬರೀ ಮ್ಯಾಗಿ, ಚಿಪ್ಸ್, ಬಿಸ್ಕತ್, ಕುರುಕುರೆ ಹಾಳುಮುಳು ತಿಂದು ತಿರುಗಾಡ್ತಾರೆ’ ಅನ್ನೋದು.

ನಿಜ ! ಇವತ್ತು ಉಳ್ಳವರ ಬಹಳಷ್ಟು ಮಕ್ಕಳು ಸರಿಯಾಗಿ ಊಟ ಮಾಡಲ್ಲ. ಒಂದ್ಹೊತ್ತು ಊಟಕ್ಕೆ ಪರದಾಡುವವರ ಮಕ್ಕಳ ಪಾಡಂತೂ ಹೇಳತೀರದು. ಊಟ ಮಾಡುವುದು ಎಂದರೆ ಏನೇನೋ ತಿನ್ನುವುದಲ್ಲ. ತಿಂದದ್ದೆಲ್ಲವೂ ಉತ್ತಮ ಆಹಾರ ಎಂದು ಹೇಳಲಿಕ್ಕಾಗದು. ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿರಬೇಕಾಗುತ್ತದೆ. ಅಂದಾಗ ಮಾತ್ರ ವ್ಯಕ್ತಿಯ ದೈಹಿಕ ಬೆಳವಣಿಗೆ, ಕೆಲಸ ಮಾಡುವ ಶಕ್ತಿ ಸಾಮರ್ಥ್ಯ ಹಾಗೂ ರೋಗನಿರೋಧಕತೆ ಹೊಂದಲು ಸಾಧ್ಯ.

ಸಂಪೂರ್ಣ ಅಥವಾ ಸಮತೋಲಿತ ಆಹಾರ ಎಂದಾಗ ಅದರಲ್ಲಿ ಎಲ್ಲ ಪ್ರಮುಖ ಆಹಾರ ಘಟಕಗಳಿರಬೇಕಾದ್ದು ಅವಶ್ಯ. ನಾವು ತಿನ್ನುವ ಆಹಾರದಲ್ಲಿ ಎಲ್ಲ ಪೋಷಕಾಂಶಗಳು ಇರಲು ಸಾಧ್ಯವಿಲ್ಲ. ಪ್ರತಿಯೊಂದು ಪೋಷಕಾಂಶವು ದೇಹದಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತವೆ. ಕೆಲವು ದೇಹ ನಿರ್ಮಾಣ(ಪ್ರೋಟಿನ್, ಖನಿಜ, ನೀರು) ಕಾರ್ಯದಲ್ಲಿ ತೊಡಗಿ ದೇಹ ನಿರ್ಮಾತೃಗಳಾದರೆ, ಮತ್ತೆ ಕೆಲವು ದೇಹದ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿ(ಕಾರ್ಬೋಹೈಡ್ರೇಟ್,ಲಿಪಿಡ್) ನೀಡುತ್ತವೆ. ಹಾಗೆಯೇ ಜೀವಿಯ ದೇಹದ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ಸಂಘಟಿಸಿ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ದೇಹದ ವ್ಯವಸ್ಥಿತ ಬೆಳವಣಿಗೆ ಹಾಗೂ ಸಂವರ್ಧನೆಗೆ ಸತ್ವ ನೀಡಿ ಪೋಷಿಸುವ ಮೂಲಕ ಜೀವಿಯನ್ನು ಜೀವಂತವಾಗಿಸುವ ‘ಜೀವಸತ್ವಗಳು’ ಆಹಾರದ ಪ್ರಮುಖ ಘಟಕಗಳಾಗಿವೆ. 

ನಮ್ಮ ದೇಹಕ್ಕೆ ಕೆಲ ಪೋಷಕಗಳು ತುಂಬಾ ಅವಶ್ಯವಾಗಿ ಗರಿಷ್ಠ ಪ್ರಮಾಣದಲ್ಲಿ ಬೇಕಾಗುತ್ತವೆ. ಮತ್ತೆ ಕೆಲವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವುದಿಲ್ಲ. ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶಗಳಾದ ಜೀವಸತ್ವಗಳು ಬಹುಮಟ್ಟಿಗೆ ನಮ್ಮ ದೇಹದಲ್ಲಿ ತಯಾರಾಗುವಂತಹುಗಳಲ್ಲ. ಹಾಗಾಗಿ ಹೊರಗಿನಿಂದ ಆಹಾರದ ಮೂಲಕವೇ ಪಡೆಯಬೇಕಾಗುತ್ತದೆ. ಕಾರ್ಬಾನಿಕ ಸಂಯುಕ್ತಗಳಾದ ಇವುಗಳನ್ನು ವಿಲೀನಗೊಳ್ಳುವ ಗುಣದ ಆಧಾರದ ಮೇಲೆ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು(ಜೀವಸತ್ವ ಎ,ಡಿ,ಇ,&ಕೆ) ಹಾಗೂ ನೀರಿನಲ್ಲಿ ಕರಗುವ ಜೀವಸತ್ವಗಳು(ಬಿ ಗುಂಪಿನ & ಸಿ ಜೀವಸತ್ವ) ಎಂದು ವಿಂಗಡಿಸಲಾಗಿದೆ.

ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು : ನಾವು ಸೇವಿಸುವ ಆಹಾರದಲ್ಲಿ ಕೊಬ್ಬಿನಾಂಶ(ಎಣ್ಣೆ)ಇರಲೇಬೇಕಾದುದು ಅತೀ ಅವಶ್ಯ, ಏಕೆಂದರೆ ಕೊಬ್ಬಿನ ಮೂಲಕವೇ ಜೀವಸತ್ವಗಳನ್ನು ಜೀವಕೋಶಗಳು ಹೀರಿಕೊಳ್ಳುತ್ತವೆ.

ಜೀವಸತ್ವ ‘ಎ’-ಬೀಟಾ ಕೆರೋಟಿನ್ ಎಂತಲೂ ಕರೆಯಲ್ಪಡುವ ಇದು ಕಣ್ಣು ಮತ್ತು ಚರ್ಮದ  ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ. ೧೯೧೩ ರಲ್ಲಿ ಮ್ಯಾಕ್ ಕಾಲಮ್ ಈ ಜೀವಸತ್ವವನ್ನು ಕಂಡುಹಿಡಿದರೆ, ೧೯೩೧ ರಲ್ಲಿ ಕಾರಿಯರ್ ಇದರ ರಚನೆ ಬಗ್ಗೆ ವಿಸ್ತೃತ ವಿವರ ನೀಡುತ್ತಾರೆ. ಕೊಬ್ಬಿರುವ ಆಹಾರ ಪದಾರ್ಥಗಳಾದ ಹಾಲು, ಹಾಲಿನ ಉತ್ಪನ್ನಗಳು, ತತ್ತಿ, ಮೀನೆಣ್ಣೆ, ಮಾಂಸಗಳಲ್ಲಿ ಮತ್ತು ಹಸಿರು ಹಳದಿ ಬಣ್ಣಗಳ ತಪ್ಪಲು ಪಲ್ಯಗಳಲ್ಲಿ, ತರಕಾರಿ ಹಣ್ಣುಗಳಲ್ಲಿ ‘ಎ’ಜೀವಸತ್ವ ಹೇರಳವಾಗಿರುತ್ತದೆ. ಇದರ ವೈಜ್ಞಾನಿಕ ಹೆಸರು ರೆಟಿನಾಲ್.೧೨ ರಿಂದ ೧೫ ವಯೋಮಾನದ ಗುಂಪಿನವರಿಗೆ ದೈನಂದಿನ ಅವಶ್ಯಕತೆಯಾಗಿ ಅತೀ ಹೆಚ್ಚು ಅಂದರೆ ೭೫೦ ಮಿ ಗ್ರಾಂ ಜೀವಸತ್ವ ಬೇಕಾಗುತ್ತದೆ. ಹಾಗಾಗಿ ಕುಂಬಳಕಾಯಿ, ಗಜ್ಜರಿ, ಪಪ್ಪಾಯ, ಮಾವು, ಹಲಸು, ಅನಾನಸ್‌ಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಇಲ್ಲದಿದ್ದರೆ ನ್ಯೂನತಾಕಾಯಿಲೆಗಳು ಬರುವ ಸಾಧ್ಯತೆಗಳಿರುತ್ತವೆ.  ಮುಖ್ಯವಾಗಿ ನಾವು ಕೇಳಿರುವ ‘ರಾತ್ರಿಕುರುಡು’ತನ ಅಥವಾ ನಿಶಾಂಧತೆ ವಿಟಾಮಿನ್ ಎ ಕೊರತೆಯಿದ ಬರುವಂತಾದ್ದಾಗಿದೆ.

ಜೀವಸತ್ವ ‘ಡಿ’- ಮಕ್ಕಳು ಹೊರಗಡೆ ಓಡಾಡಿಕೊಂಡು ಆಟವಾಡುತ್ತಾ ಬೆಳೆದರೆ ಗಟ್ಟಿಮುಟ್ಟಾಗಿರುತ್ತವೆ, ‘ಕೋಣೆ ಕೂಸು ಕೊಳೀತು, ಓಣಿ ಕೂಸು ಬೆಳೀತು’ಎನ್ನುವ ಹಿರಿಯರ ಮಾತುಗಳು ಆಗಾಗ ನಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ಏಕೆಂದರೆ ಇಂದಿನ ನಮ್ಮ ಮಕ್ಕಳು ಹೊರಗಡೆ ಆಟವಾಡುವುದೇ ಕಡಿಮೆ. ಬರೀ ಓದು, ಅಭ್ಯಾಸ, ಕಂಪ್ಯೂಟರ್ ಅಂತಾ ಮನೆಯ ಒಳಗಡೆನೇ ಬಹಳ ಹೊತ್ತು ಕಳೆಯುತ್ತವೆ. ಹಾಗಾಗಿ ನೈಸರ್ಗಿಕವಾಗಿ ಸೂರ್ಯನ ಪ್ರಕಾಶದಿಂದ ದೊರೆಯುವ ವಿಟಮಿನ್ ಡಿ ಯಿಂದ ನಮ್ಮ ಮಕ್ಕಳು ವಂಚಿತವಾಗುತ್ತವೆ ಅಂತಲೇ ಹೇಳಬಹುದು.

ಹೌದು ! ಜೀವಸತ್ವ ಡಿ ಯನ್ನು ‘ಸೂರ್ಯರಶ್ಮಿ ಜೀವಸತ್ವ’ಎಂದೇ ಕರೆಯುತ್ತಾರೆ. ಸೂರ್ಯಪ್ರಕಾಶವು ದೇಹದ ಚರ್ಮದಡಿಯಲ್ಲಿನ ೭-D ಹೈಡ್ರೊಕೊಲೆಸ್ಟ್ರಾಲ್ ಎಂಬ ರಾಸಾಯನಿಕವನ್ನು ಜೀವಸತ್ವ ಡಿ ಯನ್ನಾಗಿ ಮಾಡುತ್ತದೆ. ಈ ಡಿ ಜೀವಸತ್ವವು ಕರುಳಿನಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕಗಳ ಹೀರುವಿಕೆಗೆ, ಡಿಎನ್‌ಎ ಸಂಶ್ಲೇಷಣೆಗೆ ಸಹಕರಿಸುವುದಲ್ಲದೆ ಎಲುಬುಗಳ ಗಟ್ಟಿತನಕ್ಕೆ ಕಾರಣವಾಗುತ್ತದೆ. ಬೆಣ್ಣೆ ತುಪ್ಪ, ಗಿಣ್ಣು, ಮೀನೆಣ್ಣೆ, ಮೊಟ್ಟೆಯ ಹಳದಿ ಭಾಗವು ಡಿ ಜೀವಸತ್ವವನ್ನು ಹೊಂದಿವೆ. ಇವುಗಳ ಸೇವನೆಯಿಂದ ಮಕ್ಕಳನ್ನು ಹಕ್ಕಿರೋಗ(ರಿಕೇಟ್ಸ್) ಕಾಯಿಲೆಯಿಂದ ಪಾರುಮಾಡಬಹುದು. ಕ್ಯಾಲ್ಸಿಯಂ ಕೊರತೆಯಿಂದ ವಯಸ್ಕ ಮಹಿಳೆಯರಲ್ಲಿ ಮೂಳೆಗಳು ಕುಗ್ಗಿ ದುರ್ಬಲಗೊಳ್ಳುತ್ತವೆ. ವಿಕಾರ ಶರೀರ, ತೀವ್ರ ನರಳಾಟಿಕೆಯಿಂದ ಅಸ್ಟಿಯೋಮಲೇಸಿಯಾ ಕಾಯಿಲೆಯ ಲಕ್ಷಣಗಳು ಗೋಚರವಾಗುತ್ತವೆ. ಈ ನ್ಯೂನತೆ ಬಾರದಿರಲು ಡಿ ಜೀವಸತ್ವ ತುಂಬಾ ಪ್ರಯೋಜನಕಾರಿಯಾಗಿದೆ.

ಜೀವಸತ್ವ ‘ಇ’- ನಾವು ಪ್ರಧಾನವಾಗಿ ಬಳಸುವ ಆಹಾರಧಾನ್ಯಗಳು ಏಕದಳಗಳಾಗಿವೆ. ಇವೆಲ್ಲವೂ ಜೀವಸತ್ವ ಇ ಯನ್ನು ಹೊಂದಿವೆ. ಮಾನವನಿಗೆ ಉಪಯುಕ್ತವಾದ ಈ ಏಕದಳ ಧಾನ್ಯಗಳು ತುಂಬಾ ಮಹತ್ವವನ್ನು ಹೊಂದಿವೆ. ಸಮುದ್ರದಂಚಿನ ಪಾಚಿಗಳಲ್ಲೂ ವಿಶೇಷವಾಗಿ ವಿಟಾಮಿನ್ ಇ ಇರುವುದುಂಟು.’ಇ’ಜೀವಸತ್ವವು ಮಾನವನ ಲೈಂಗಿಕಶಕ್ತಿ ವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಸಂತಾನೋತ್ಪತ್ತಿಯ ಸರಾಗ ಕ್ರಿಯೆಗೆ ಇದು ಸಹಕರಿಸುತ್ತದೆ. ಇದನ್ನು ಬ್ಯೂಟಿ ವಿಟಾಮಿನ್ ಎಂದು ಕರೆಯಲಾಗುತ್ತದೆ.

ಜೀವಸತ್ವ ‘ಕೆ’- ಗಾಯವಾಗಿ ರಕ್ತಸ್ರಾವವಾದಾಗ ನಾವು ತುಂಬಾ ಗಾಬರಿ ಬೀಳುತ್ತೇವೆ. ತಕ್ಷಣ ರಕ್ತ ಹೆಪ್ಪುಗಟ್ಟಿ ಸ್ರಾವ ನಿಲ್ಲದಿದ್ದರೆ ನಮ್ಮ ಆತಂಕ ಹೆಚ್ಚುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಮಹತ್ವದ ಪಾತ್ರವಹಿಸುವುದು ವಿಟಾಮಿನ್ ‘ಕೆ’. ಈ ಜೀವಸತ್ವವನ್ನು ಹೆನ್ರಿಕ್ ಡಾಮ್ ೧೯೩೫ರಲ್ಲಿ ಕಂಡುಹಿಡಿದರು. ಇದನ್ನು ನ್ಯಾಪ್ತಾಕಿನಾಯಿನ್ ಎಂತಲೂ ಕರೆಯುವರು. ಇದು ಕೆಲ ಬ್ಯಾಕ್ಟೇರಿಯಾಗಳ ದೇಹದಲ್ಲಿ ಸಂಶ್ಲೇಷಣೆಗೊಳ್ಳುತ್ತದೆಂದು ಹೇಳಲಾಗುತ್ತದೆ. ಬಹುತೇಕ ಎಲ್ಲ ತರಕಾರಿ, ಹಸಿರು ತಪ್ಪಲು ಪಲ್ಯಗಳಲ್ಲಿ ಈ ಜೀವಸತ್ವದಿರುವಿಕೆಯನ್ನು ಕಾಣಬಹುದಾಗಿದೆ. ಚಪಾತಿ ತಿನ್ನುವ ಬಹಳಷ್ಟು ಜನರಿಗೆ ‘ಕೆ’ಜೀವಸತ್ವ ಗೋಧಿಯ ಮೂಲಕ ಲಭ್ಯವಾಗುತ್ತದೆ. ಹಾಲು, ಹಾಲಿನ ಉತ್ಪನ್ನಗಳು, ಲೆಗ್ಯೂಮ್ ಧಾನ್ಯಗಳು, ಟೊಮೆಟೊ, ಸೊಯಾಬಿನ್, ಮಾಂಸಗಳಲ್ಲಿ ‘ಕೆ’ ಜೀವಸತ್ವ ಹೇರಳವಾಗಿರುತ್ತದೆ.

ನೀರಿನಲ್ಲಿ ಕರಗುವ ಜೀವಸತ್ವಗಳಾದ ‘ಬಿ’ಮತ್ತು ‘ಸಿ’ ಗುಂಪಿನ ಜೀವಸತ್ವಗಳು ಒಂದೇ ರೀತಿಯ ಆಹಾರ ಪದಾರ್ಥಗಳಲ್ಲಿ ಸಿಗುವುದಿಲ್ಲ. ಹಾಲು, ಮೊಸರು, ಹಸಿರು ತರಕಾರಿ, ಮೊಟ್ಟೆ ಮುಂತಾದವುಗಳಲ್ಲಿ ‘ಬಿ’ ಜೀವಸತ್ವವಿದ್ದರೆ, ಹುಳಿ ಹಣ್ಣುಗಳಲ್ಲಿ ‘ಸಿ’ಜೀವಸತ್ವವನ್ನು ಕಾಣಬಹುದಾಗಿದೆ.

ಜೀವಸತ್ವ ‘ಬಿ’- ಇದು ಒಂದು ಸಂಕೀರ್ಣವಾದ ಜೀವಸತ್ವ. ಅಂದರೆ ಬಿ ಜೀವಸತ್ವವು ಥಯಾಮಿನ್, ರೈಬೊಪ್ಲಾವಿನ್, ನಿಯಾಸಿನ್, ಪಾಲಿಕ್‌ಆಸಿಡ್, ಸಯನೊಕೊಬಾಲಮಿನ್ ಇತ್ಯಾದಿಗಳನ್ನು ಒಳಗೊಂಡಿದೆ. ಹಾಗಾಗಿ ಇದು ನಿರ್ವಹಿಸುವ ಕಾರ್ಯಗಳು ಹತ್ತುಹಲವು. ಮಾನವನ ದೇಹದ ಬಹುತೇಕ ಜೈವಿಕ ಕಾರ್ಯಗಳ ನಿರ್ವಹಣೆಗೆ ಹಾಗೂ ಬೆಳವಣಿಗೆಯಲ್ಲಿ ಜೀವಸತ್ವ ‘ಬಿ’ ಬಹುಮುಖ್ಯ ಪಾತ್ರವಹಿಸುತ್ತದೆ.

ವಿಟಾಮಿನ್ ಬಿ ೧ (ಥಯಾಮಿನ್)- ನರಕೋಶಗಳ ಸಹಜ ಕಾರ್ಯನಿರ್ವಹಣೆಗೆ ಹಾಗೂ ಚಯಾಪಚಯ ಕ್ರಿಯೆಗೆ ಇದು ಸಹಕಾರಿ. ದೇಹದ ದಣಿವು, ಆಯಾಸ ನೀಗಿಸಿ ಸಹಜ ಜೀರ್ಣಕ್ರಿಯೆಗೆ ಇದು ಬೇಕೆ ಬೇಕು. ಅಕ್ಕಿ, ಗೋಧಿ, ಯಿಸ್ಟ್, ಬೀನ್ಸ್, ಯಕೃತ್, ಹಾಲು, ಧಾನ್ಯಗಳಲ್ಲಿ ಥಯಾಮಿನ್ ಯಥೇಚ್ಛವಾಗಿರುತ್ತದೆ. ಇದರ ಕೊರತೆಯಿಂದ ಬೆರಿ ಬೆರಿ ಎಂಬ ನ್ಯೂನತಾ ಕಾಯಿಲೆ ಕಾಣಿಸಿಕೊಳ್ಳುತ್ತದೆ. 

ವಿಟಾಮಿನ್ ಬಿ ೨ (ರೈಬೊಪ್ಲಾವಿನ್)- ಪ್ರೋಟಿನ್ ಮತ್ತು ಕೊಬ್ಬುಗಳ ಪಚನಕ್ರಿಯೆಗೆ ಇದು ಸಹಕಾರಿ. ದೇಹದ ಸಹಜ ಬೆಳವಣಿಗೆಯನ್ನು ವೃದ್ಧಿಸಿ, ನಾಲಿಗೆ, ಕರ‍್ನಿಯಾದ ಊರಿಯೂತಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಬಾಯಿ ಮೂಲೆಗಳಲ್ಲಿನ ಬಿರುಕುಗಳು ಬಾರದಂತೆ ರಕ್ಷಿಸುತ್ತದೆ. ಹಾಲು, ಮೊಟ್ಟೆ, ಯಕೃತ್, ಹಸಿರು ತರಕಾರಿಗಳಲ್ಲಿ ರೈಬೊಪ್ಲಾವಿನ್ ಹೆಚ್ಚಾಗಿರುತ್ತದೆ.

ವಿಟಮಿನ್ ಬಿ ೩ (ನಿಯಾಸಿನ್)– ಇದು ಪ್ರಮುಖವಾಗಿ ನಿಕೊಟಿನಿಕ್ ಆಮ್ಲವನ್ನು ಹೊಂದಿದ ಒಂದು ಜೀವಸತ್ವ. ಕಾರ್ಬೋಹೈಡ್ರೇಟ್, ಪ್ರೋಟಿನ್ ಮತ್ತು ಕೊಬ್ಬುಗಳ ಉತ್ಕರ್ಷಣೆ(oxidation)ಗೆ ಇದು ಸಹಾಯಕವಾಗಿದೆ. ಇದರಲ್ಲಿ ಪ್ರತಿಪೆಲಾಗ್ರ(antipellagra) ಅಂಶವಿರುವುದು ಕಂಡುಬಂದಿದೆ. ಪೆಲಾಗ್ರ ಎಂಬುದು ಬೊಜ್ಜು ಮೈಯ, ಚರ್ಮ ಬಿರಿದು, ಕೊನೆಗೆ ಮೆದುಳಿಗೆ ರೋಗ ತಗಲುವ ಸ್ಥಿತಿಯೇ ಆಗಿದೆ. ಒಂದು ವೇಳೆ ಇದರ ಕೊರತೆಯುಂಟಾದಲ್ಲಿ ೩-ಆ  ಲಕ್ಷಣಗಳು ಕಂಡುಬರುತ್ತವೆ. ಅಂದರೆ ಡರ್ಮಟೈಟಿಸ್, ಡಯೆರಿಯಾ ಮತ್ತು ಡಿಮೆಂಶಿಯಾ ರೋಗಲಕ್ಷಣಗಳು ಗೋಚರಿಸುತ್ತವೆ. ಮಾಂಸ, ಮೊಟ್ಟೆ, ಹಾಲು, ಹಣ್ಣು, ಯಕೃತ್, ಗೋವಿನಜೋಳ, ಯಿಸ್ಟ್ಗಳಲ್ಲಿ ಈ ಜೀವಸತ್ವ ಹೇರಳವಾಗಿದೆ. ಇದರಿಂದ ಪೆಲಾಗ್ರ ಕಾಯಿಲೆ ದೂರವಿಡಬಹುದು.

ವಿಟಮಿನ್ ಬಿ ೫ (ಪೆಂಟೊತೆನಿಕ್ ಆಸಿಡ್)- ಇದು ಎಲ್ಲ ಆಹಾರ ಪದಾರ್ಥಗಳಲ್ಲೂ ಲಭ್ಯವಿರುತ್ತದೆ. ಸಾಮಾನ್ಯವಾಗಿ ದವಸಧಾನ್ಯಗಳು, ಮೊಟ್ಟೆ, ಮಾಂಸಗಳಲ್ಲಿದ್ದರೂ ಅತ್ಯಧಿಕ ಪ್ರಮಾಣದಲ್ಲಿ ಅಣಬೆ, ಯಿಸ್ಟ್, ಯಕೃತ್‌ಗಳಲ್ಲಿ ಕಂಡುಬರುತ್ತದೆ.  ಈ ಜೀವಸತ್ವವು ದೇಹದ ಸಾಮಾನ್ಯ ಬೆಳವಣಿಗೆಗೆ ಸಹಕರಿಸುತ್ತದೆ.

ವಿಟಮಿನ್ ಬಿ ೬ (ಪೆರಿಡಾಕ್ಸಿನ್)- ಇದು ಹತ್ತಿರ ಸಂಬಂಧಿ ಸಂಯುಕ್ತಗಳಾದ ಪೆರಿಡಾಕ್ಸಿನ್, ಪೆರಿಡಾಕ್ಸಲ್ ಮತ್ತು ಪೆರಿಡಾಕ್ಸಮಾಯಿನ್ ಗುಂಪುಗಳನ್ನು ಒಳಗೊಂಡಿದೆ. ಸಹಕಿಣ್ವcoenzyme)ವಾಗಿ ರಕ್ತ, ಕೇಂದ್ರನರವ್ಯೂಹ ಮತ್ತು ಚರ್ಮ ಚಯಾಪಚಯ ಪ್ರತಿಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಬಿ೬ನ ಮಹತ್ವವು ರಕ್ತಾಂಶ ಮತ್ತು ನ್ಯೂಕ್ಲಿಕ್ ಆಸಿಡ್‌ಗಳ ಜೈವಿಕಸಂಶ್ಲೇಷಣೆ(biosynthesis)ಯಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. 

ವಿಟಮಿನ್ ಬಿ ೭ (ಬಯೋಟಿನ್)- ಇದು ಕೂಡ ಸಹಕಿಣ್ವವಾಗಿ ಕಾರ್ಯ ಮಾಡುತ್ತದೆ. ಇದರ ಅಗತ್ಯತೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆಯಲ್ಲಿ ಕಂಡುಬರುತ್ತದೆ. ಅಲ್ಲದೇ ದೇಹ ನಿರ್ಮಾಣ ಚೋದಕಗಳ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮೊಟ್ಟೆಯ ಹಳದಿ ಭಾಗ, ಹಸಿರು ಸೊಪ್ಪು, ತರಕಾರಿ, ಕಾಳುಗಳಲ್ಲಿ ಈ ಅಂಶ ಹೇರಳವಾಗಿರುತ್ತದೆ.

ವಿಟಮಿನ್ ಬಿ ೯ (ಪಾಲಿಕ್ ಆಸಿಡ್)- ಶಾಲಾ ಮಕ್ಕಳಿಗೆ  ಇಂದು ಪಾಲಿಕ್ ಆಸಿಡ್ ಅಂಶವುಳ್ಳ ಮಾತ್ರೆಗಳ ನೀಡುವುದನ್ನು ಸರ್ಕಾರ ಯೋಜನೆ ರೂಪಿಸಿದೆ. ಬಡಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಗಳಲ್ಲಿ ರಕ್ತಹೀನತೆ ಪ್ರಮುಖವಾದುದು. ರಕ್ತಹೀನತೆಗಳಲ್ಲಿ ವಿವಿಧ ಬಗೆಗಳಿವೆ. ರಕ್ತದಲ್ಲಿನ ಕೆಂಪು ರಕ್ತಕಣಗಳ ಪಕ್ವತೆ ಹಾಗೂ ಸಂಖ್ಯಾವೃದ್ಧಿಗೆ ಪಾಲಿಕ್ ಆಸಿಡ್ ಅವಶ್ಯವಾಗಿದೆ. ಇದನ್ನು ‘ಬಿ ಸಂಕಿರ್ಣ’ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಹಸಿರು ತರಕಾರಿ, ಸೊಪ್ಪು, ಮೊಳಕೆ ಕಾಳು, ಬಾಳೆಹಣ್ಣು, ಮಾಂಸ, ಯಕೃತ್, ಹೂಕೋಸುಗಳಲ್ಲಿ ಇದರ ಲಭ್ಯತೆಯನ್ನು ಕಾಣಬಹುದು. ಇವುಗಳ ನಿಯಮಿತ, ನಿರ್ಧಿಷ್ಟ ಸೇವನೆಯಿಂದ ಮ್ಯಾಕ್ರೊಸಿಯಾಟಿಕ್ ಅನಿಮಿಯಾದಂತಹ ಕಾಯಿಲೆಗಳಿಂದ ದೂರವಿರಬಹುದು, ಜೊತೆಗೆ ರಕ್ತದಲ್ಲಿನ ಹಿಮೊಗ್ಲೊಬಿನ್ ಮಟ್ಟ ಹಾಗೂ ಆರ್‌ಬಿಸಿಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಬಹುದು.

ವಿಟಮಿನ್ ಬಿ ೧೨ (ಸಿಯಾನೊಕೊಬಾಲಮಿನ್)- ಕೊಬಾಮೈಡ್ ಸೈನಾಯ್ಡ್ ಎಂತಲೂ ಕರೆಯಲ್ಪಡುವ ಬಿ೧೨ವು ರಕ್ತದಲ್ಲಿ ಕೆಂಪುರಕ್ತಕಣಗಳ ರಚನೆ ಹಾಗೂ ನರ ಅಂಗಾಂಶಗಳ ಸಮರ್ಪಕ ಕಾರ್ಯನಿರ್ವಹಣೆಗೆ ಸಹಾಯಕ. ಯಕೃತ್, ತುಪ್ಪ, ಹಾಲು, ಮೀನು ಮೊಟ್ಟೆ ಮಾಂಸಗಳು ಬಿ೧೨ದಿಂದ ಸಮೃದ್ಧವಾಗಿವೆ. ಇದರ ಕೊರತೆಯಾದಲ್ಲಿ ಪರ‍್ನಿಸಿಯಸ್ ಅನಿಮಿಯಾ ಬಂದೊದಗಬಹುದು.

ಜೀವಸತ್ವ ‘ಸಿ’ (ಅಸ್ಕಾರ್ಬಿಕ್ ಆಸಿಡ್)- ಇದು ಮಾನವನಿಗೆ ಅತ್ಯಂತ ಚಿರಪರಿಚಿತವಾದ ಪ್ರಾರಂಭಿಕ ಜೀವಸತ್ವವಾಗಿದೆ. ದೇಹದಲ್ಲಿನ ಸರ್ವ ಜೀವಕೋಶಗಳ ಮಸಮರ್ಪಕ ಕಾರ್ಯನಿರ್ವಹಣೆಗೆ ‘ಸಿ’ ಜೀವಸತ್ವ ಅತೀ ಮುಖ್ಯವಾಗಿದೆ. ಎಲ್ಲ ಜೀವಕೋಶಗಳನ್ನು ಒಟ್ಟುಗೂಡಿಸಿ, ಬಂಧಿಸಲು ಅವಶ್ಯಕವಾದ ಜಿಗುಟು ಪದಾರ್ಥದ ಉತ್ಪಾದನೆ ವಿಟಮಿನ್ ಸಿ ಯಿಂದಾಗುತ್ತದೆ. ಹರಿದ-ಮುರಿದ ಭಾಗಗಳು, ಗಾಯಗಳ ರಿಪೇರಿ, ರಕ್ತನಾಳಗಳ ಸಂರಕ್ಷಣೆಯ ಜವಾಬ್ದಾರಿ ಸಿ ಜೀವಸತ್ವದ್ದಾಗಿದೆ.ದೇಹಕ್ಕೆ ರೋಗ ಬಂದೊದಗಿದಾಗ ರೋಗನಿರೋಧಕತೆಯನ್ನುಂಟು ಮಾಡಿ,ರೋಗಕಾರಕಗಳ ಜೊತೆ ಹೋರಾಡುವ ಗುಣ ಹೊಂದಿದೆ.ಹಲ್ಲುಗಳು,ಕೀಲುಗಳ ಆರೋಗ್ಯಕ್ಕೆ ‘ಸಿ’ಜೀವಸತ್ವ ಅವಶ್ಯಕವಾಗಿದೆ. ಮೂತ್ರಕೋಶದಲ್ಲಿನ ಕಲ್ಲುಗಳ ರಚನೆಯನ್ನು ಇದು ತಡೆಯುತ್ತದೆ. ವಸಡುಗಳಲ್ಲಿ ರಕ್ತಸ್ರಾವದಿಂದ ಹಲ್ಲುಗಳು ಹಾಳಾಗುವುದನ್ನು ನಿಲ್ಲಿಸುತ್ತದೆ. ಮೂಳೆಗಳ ಜೋಡಣೆಗೆ ಅಗತ್ಯವಾದ ಕೊಲೆಜಿನ್ ಎಂಬ ಅಂಟು ಪದಾರ್ಥದ ಕೊರತೆಯನ್ನು ನೀಗಿಸುತ್ತದೆ.

 ಹುಳಿ ಹಣ್ಣುಗಳಾದ(ಸಿಟ್ರಸ್‌ಫ್ರುಟ್ಸ್)ಲಿಂಬೆ, ಮೊಸಂಬೆ, ಕಿತ್ತಳೆ, ಸೀಬೆ, ನೇರಳೆ, ಟೊಮೆಟೊ, ಮಾವು, ನೆಲ್ಲಿ ಮುಂತಾದವುಗಳ ನಿಯಮಿತ ಸೇವನೆಯಿಂದ ನ್ಯೂನತಾಕಾಯಿಲೆಯಾದ ‘ಸ್ಕರ್ವಿ’ಯಿಂದ ದೂರ ಇರಬಹುದು. ಮಕ್ಕಳಿಗೆ ಹೆಚ್ಚೆಚ್ಚು ಈ ಹಣ್ಣುಗಳನ್ನು ತಿನ್ನಿಸುವುದು ಒಳಿತು. ಏಕೆಂದರೆ ಮಕ್ಕಳಲ್ಲಿ ರೋಗನಿರೋಧಕಶಕ್ತಿ ಕಡಿಮೆ ಇರುತ್ತದೆ.

ಆಹಾರ ಸೇವನೆ ರೀತಿ ನೀತಿಗಳು, ವಿಧಾನಗಳು, ಪ್ರಮಾಣಗಳ ಜ್ಞಾನ ಕೊರತೆಯಿಂದ ಅಪೌಷ್ಠಿಕತೆ ಇಂದು ಎಲ್ಲರನ್ನು ಕಾಡುತ್ತಿದೆ. ಪ್ರಮುಖ ಆಹಾರಾಂಶಗಳಾದ ಜೀವಸತ್ವಗಳ ಅಂತಃಸತ್ವ ಅದ್ಭುತ, ಅಗಾಧ ಪೋಷಕಗಳಿಂದ ಆವೃತವಾಗಿವೆ. ಇದನ್ನು ಅರಿತು ವೈಜ್ಞಾನಿಕ ರೀತಿಯಲ್ಲಿ ಆಹಾರ ಪದ್ಧತಿ, ಜೀವನಶೈಲಿ ರೂಢಿಸಿಕೊಂಡಲ್ಲಿ ಆರೋಗ್ಯಯುತ ಜೀವನ ನಡೆಸಬಹುದು.




                            @@@@@@@@

                                      

ಮರು ವರ್ಗೀಕರಿಸಿದ ಜೀವಸತ್ವಗಳ ಹೆಸರುಗಳ ಪಟ್ಟಿ
ಹಿಂದಿನ ಹೆಸರುರಾಸಾಯನಿಕ ಹೆಸರುಹೆಸರು ಬದಲಾವಣೆಗೆ ಕಾರಣ[೪೮]
ಜೀವಸತ್ವ B4ಅಡೆನೈನ್‌DNA ಚಯಾಪಚಯಜ
ಜೀವಸತ್ವ B8ಅಡೆನಿಲಿಕ್‌ ಆಮ್ಲDNA ಚಯಾಪಚಯಜ
ಜೀವಸತ್ವ Fಅಗತ್ಯವಾದ ಮೇದಸ್ಸಿನ ಆಮ್ಲಗಳುಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿವೆ (
ಜೀವಸತ್ವದ ವಿವರಣೆಗೆ ಪೂರಕವಾಗಿಲ್ಲ).
ಜೀವಸತ್ವ Gರಿಬೋಫ್ಲಾವಿನ್‌ಜೀವಸತ್ವ B2 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ Hಬಯೋಟಿನ್‌‌ಜೀವಸತ್ವ B7 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ Jಕ್ಯಾಟೆಕಾಲ್lಫ್ಲಾವಿನ್‌‌ಪ್ರೋಟೀನ್‌ ಚಯಾಪಚಯಜ
ಜೀವಸತ್ವ L1[೪೯]ಆಂಥ್ರಾನಿಲಿಕ್‌ ಆಮ್ಲಪ್ರೋಟೀನ್‌ ಚಯಾಪಚಯಜ
ಜೀವಸತ್ವ L2[೪೯]ಅಡೆನೈಲ್‌ಥಿಯೋಮೀಥೈಲ್‌ಪೆಂಟೋಸ್‌RNA ಪ್ರೋಟೀನ್‌ ಚಯಾಪಚಯಜ
ಜೀವಸತ್ವ Mಫಾಲಿಕ್ ಆಮ್ಲಜೀವಸತ್ವ B9 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ Oಕಾರ್ನಿಟಿನ್‌ಪ್ರೋಟೀನ್‌ ಚಯಾಪಚಯಜ
ಜೀವಸತ್ವ Pಫ್ಲಾವೊನೈಡ್‌ಗಳುಜೀವಸತ್ವವಲ್ಲವೆಂದು ನಿರ್ಧರಿಸಲಾಗಿದೆ
ಜೀವಸತ್ವ PPನಿಯಾಸಿನ್ಜೀವಸತ್ವ B3 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ US-ಮೀಥೈಲ್‌ಮೆಥಿಯೋನೈನ್‌ಪ್ರೋಟೀನ್‌ ಚಯಾಪಚಯಜ
 

                                    

   ಆಧಾರ ;  

೧) ಜೀವಸತ್ವಗಳ ಮಹತ್ವ-ಸುಶೀಲಾ ಹಿರೇಗೌಡರ&ಮೀನಾಕ್ಷಿ ಕೇಸರಿ.

 ೨) ಜೀವಜಗತ್ತು-ವಿಶ್ವಕೋಶ. 

೩) ಕಾಲೇಜ್ ಬಾಟನಿ -ಬಿ ಪಿ ಪಾಂಡೆ 

  ೪) ಇಗ್ನೋ ಬಯಾಲಜಿ. 

೫) ಕರ್ನಾಟಕ ವಿಜ್ಞಾನ ಪಠ್ಯಗಳು.  

  ೬) ಜೀವಕ್ಕೆ ಬೇಕು ಜೀವಸತ್ವಗಳು-ಡಾ.ಉಮಾ,ಎಸ್ ಹಿರೇಮಠ 

೭) ಅಂತರ್ಜಾಲ ತಾಣಗಳು.

ನೀಲಕಂಠನ ನಡಿಗೆ ನಮ್ಮ ಮನೆಯ ಕಡೆಗೆ.


 

    ನೀಲಕಂಠನ ನಡಿಗೆ ನಮ್ಮ ಮನೆಯ ಕಡೆಗೆ

ಲೇಖಕರು: ಸುರೇಶ ಸಂಕೃತಿ.

ಕರ್ನಾಟಕದ ರಾಜ್ಯಪಕ್ಷಿಯಾದ ನೀಲಕಂಠ ಪಕ್ಷಿಯನ್ನು ಇಂಗ್ಲಿಷಿನಲ್ಲಿ ಇಂಡಿಯನ್‌ ರೋಲರ್‌, ಬ್ಲೂ ಜಾಯ್‌ ಎಂದು ಕರೆಯುತ್ತಾರೆಇದರ ವೈಜ್ಞಾನಿಕ ಹೆಸರು Coracias benghalensis. ಮುಖ ಮತ್ತು ಕಂಠ ಕಂದು ಬಣ್ಣವಾದರೂ ಇದನ್ನು ನೀಲಕಂಠನೆಂದು ಕರೆಯುತ್ತಾರೆ! 


ಎದೆಯಿಂದ ಹೊಟ್ಟೆಯವರೆಗೂ ಹಾಗೂ ಬೆನ್ನಿನ ಭಾಗ ಕಂದು ಬಣ್ಣ
. ರೆಕ್ಕೆಗಳು ಕಡು ನೀಲಿ ಮತ್ತು ತಿಳಿ ನೀಲಿಯ ಸಂಯೋಜಿತ ಆಕರ್ಷಕ ವಿನ್ಯಾಸ ಹೊಂದಿವೆ. ಹಾರುತ್ತಾ ಹಾರುತ್ತಾ ಗಾಳಿಯಲ್ಲಿ ಲಾಗ ಹಾಕುವಸರ್ರನೆ ಕೆಳಗಿಳಿಯುವ ಗುಣಗಳಿಂದಲೆ ಇಂಗ್ಲಿಷಿನಲ್ಲಿ ಅದನ್ನು ರೋಲರು ಎಂದು ಕರೆಯುವುದು

ಎಂಟರಿಂದ ಹತ್ತು ಇಂಚು ಉದ್ದವಿರುವ ಇದು ಹೊಸಬರಿಗೆ ಮೀಂಚುಳ್ಳಿ(ಕಿಂಗ್‌ ಫಿಶರ್)‌ ಅನ್ನಿಸಬಹುದು. ಆದರೆ ಮಿಂಚುಳ್ಳಿಗೆ ಉದ್ದವಾದ ನೀಳ ಕೊಕ್ಕಿದೆ. ಇದಕ್ಕೆ ಮೊಂಡಾದ ಚೂಪಾದ ಕೊಕ್ಕಿದ್ದು ಮೇಲಿನ ಕೊಕ್ಕಿನ ತುದಿ  ಕೆಳಕ್ಕೆ ಬಾಗಿದ ಸೂಜಿಯಂತೆ ಕಾಣುತ್ತದೆಕಾಗೆಯಂತೆಯೇ ಹಾರುವ ಇದರ ಕೂಗು ಕೆಲವು ಸಲ ಚ್ಯಾವ್‌ ಎಂತಲೂ, ಮತ್ತೆ ಕೆಲವು ಸಲ ಕ್ಯಾವ್‌ ಎಂದು ಕೇಳಿಸುತ್ತದೆಆಕರ್ಷಕವಾದ ಈ ನೀಲಕಂಠ ಪಕ್ಷಿಯ ಬಗ್ಗೆ ಬೇಕಾದಷ್ಟು ವರದಿಗಳು ಪತ್ರಿಕೆಗಳಲ್ಲಿ ನಾವು ಓದುತ್ತಲೇ ಇರುತ್ತೇವೆ. ನಾನು ಕೂಡ ಈ ಹಿಂದೆ ವೈಜ್ಞಾನಿಕ ಪತ್ರಿಕೆಯೊಂದಕ್ಕೆ ನೀಲಕಂಠನ ಬಗ್ಗೆ ಬರೆದಿದ್ದು ಉಂಟು.  

ನಾನು ಬರೆದ ಲೇಖನ ಪ್ರಕಟವಾಯಿತಾದರೂ ನಾನೇ ಸೆರೆ ಹಿಡಿದ ಚಿತ್ರಗಳು ಅದರಲ್ಲಿ ಪ್ರಕಟವಾಗಿರಲಿಲ್ಲವಾದ್ದರಿಂದ ನನಗದು ಸಮಾಧಾನ ನೀಡಿರಲಿಲ್ಲ. ನೀಲಕಂಠ ಪಕ್ಷಿಯ ಒಳ್ಳೆಯ ಚಿತ್ರವನ್ನು ಸೆರೆಹಿಡಿಯಬೇಕೆಂಬ ಒಂದೇ ಕಾರಣಕ್ಕೆ ಹೊಲ ಗದ್ದೆ ತೋಟಗಳಲ್ಲಿ ನಾನು ಬಹಳ ಅಲೆದಿದ್ದೆ. ನನ್ನಲ್ಲಿರುವ ಸೀಮಿತ ಛಾಯಗ್ರಹಣ ಪರಿಕರಗಳ ಕಾರಣದಿಂದ ಪಕ್ಷಿಗಳ ಛಾಯಗ್ರಹಣದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದೆ

ಇತ್ತೀಚೆಗೆ ನಮ್ಮ ಮನೆಯ ಹಿಂದೆಯೆ ಒಣಗಿ ಬೋಳಾಗಿರುವ ಒಂದು ತೆಂಗಿನ ಮರದ ತುದಿಯಲ್ಲಿ ಒಂದು ನೀಲಕಂಠ ಪಕ್ಷಿಗಳ ಜೋಡಿಯ ಚಟುವಟಿಕೆಯನ್ನು ಗಮನಿಸಿದೆ. ಇದರ ಒಂದು ಒಳ್ಳೆಯ ಚಿತ್ರಕ್ಕಾಗಿ  ಎಲ್ಲೆಲ್ಲೋ ಅಲೆದು ಏನೇನೋ ಸರ್ಕಸ್‌ ಮಾಡಿದ್ದ ನನಗೆ  ಇಂದು ಬೆಳಗೆದ್ದು ನೋಡಿದರೆ ಮನೆಯ ಮುಂದೆಯೆ ಇರುವ ವಿದ್ಯುತ್‌ ಕಂಬದ ಮೇಲೆ ಕುಳಿತ ನೀಲಕಂಠನ ದರ್ಶನವಾಗಿ ಖುಷಿ ಎನಿಸಿತು. ಅಂಗೈಯಲ್ಲೇ ಬೆಣ್ಣೆ ಇಟ್ಕೊಂಡು ಊರೆಲ್ಲ ಅಲೆಯೋದೇಕೆ? ದಂತೆ  ನಮ್ಮ ಮನೆಯ ಕಾಂಪೌಂಡಿನ ಒಳಗಿರುವ ಮಾವಿನ ಮರಕ್ಕೆ, ಕರಿಬೇವಿನ ಮರಕ್ಕೆ, ಮುಂದಿರುವ ಅಂಟುವಾಳದ ಮರಕ್ಕೆ  ಕಾಗೆ ಗುಬ್ಬಚ್ಚಿ ಬಿಟ್ಟು ವಿವಿಧ ಬಗೆಯ ಪಕ್ಷಿಗಳು ದಿನ ನಿತ್ಯ ಭೇಟಿ ಕೊಡುತ್ತಿರುತ್ತವೆ.  ಬೆಳವ, ಮುನಿಯ, ಕಾಜಾಣ, ಕೋಗಿಲೆ, ವಿವಿಧ ಬಗೆಯ ಸನ್‌ ಬರ್ಡುಗಳು, ಓರಿಯಂಟಲ್ ಬೀ ಈಟರ್‌,‌ ಬುಲ್ ಬುಲ್ಗಳು, ರಾಟವಾಳ, ಪಾರಿವಾಳ ಮುಂತಾದವು.    ತನ್ನ ಗೂಡು ಕಟ್ಟಲೆಂದು ಸನ್‌ ಬರ್ಡ್‌  ರೆಕ್ಕೆ ಬಡಿದು ಹಾರುತ್ತಿದ್ದರೂ ಹೆಲಿಕ್ಯಾಪ್ಟರಿನಂತೆ  ಗಾಳಿಯಲ್ಲಿ ನಿಂತಲ್ಲೆ ನಿಂತು ನಮ್ಮ ಮನೆಯ ಪೋರ್ಟಿಕೋದ ಸೀಲಿಂಗಿಗೆ ಕಟ್ಟಿದ ಜೇಡರ ಬಲೆಯನ್ನು   ಸಂಗ್ರಹಿಸುವ ದೃಶ್ಯ ನೋಡಲು ಬಲು ಆಕರ್ಷಕ.

ಜೆಸಿಬಿಯೊಂದು ದಡಬಡಾಯಿಸ್ತಾ ಪಕ್ಕದ ಸೈಟಿನ ಸ್ವಚ್ಚತಾ ಕಾರ್ಯದಲ್ಲಿ ತೊಡಗಿತ್ತು.  ಹಾಗೆಯೆ ನಾನು ಮರೆಯಲ್ಲಿ ನಿಂತು ಗಮನಿಸತ್ತಿದ್ದಂತೆ  ಜೆಸಿಬಿ ನೆಲ ಕೆರೆದಾಗ ಹೊರಬರುವ ಹುಳಹುಪ್ಪಟೆಗಳನ್ನು ಒಂದಲ್ಲ  ಎರಡು ನೀಲಕಂಠ ಪಕ್ಷಿಗಳು  ಹೆಕ್ಕಿ  ಆ ಒಣ ತೆಂಗಿನ ಮರದ ತುದಿಯ  ಗೂಡಿಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದವುಆ ಸೈಟಿನ ಪಕ್ಕದಲ್ಲಿ ನೆಟ್ಟಿದ್ದ ಒಂದು ಒಣ ಮರದ ಕಂಬದ ತುದಿಯನ್ನು ಅವುಗಳು ಲ್ಯಾಂಡಿಂಗ್‌ ಪ್ಯಾಡ್‌ ಮಾಡಿಕೊಂಡಿದ್ದವು

  ಈ ಮರದ ಕಂಬ ನಮ್ಮ ಅಡುಗೆ ಮನೆಯ ಕಿಟಕಿಯಿಂದ ಕೇವಲ ನಲವತ್ತು ಅಡಿಯ ದೂರದಲ್ಲಿದ್ದು ತೀರ ಹತ್ತಿರದಿಂದ ನೀಲಕಂಠ ಪಕ್ಷಿಯ ಚಿತ್ರಗಳನ್ನು ತೆಗೆಯಲು ನಾನು ಅಡುಗೆ ಮನೆಯ  ಪ್ಲಾಟ್ಪಾರಂನ್ನು ಆಶ್ರಯಿಸಬೇಕಾಯಿತು. ಜೂಮ್‌ ಲೆಂಸ್‌ ಅಳವಡಿಸಿದ ಮತ್ತು ಕ್ಲಿಕ್‌ ಮಾಡಲು ರಿಮೋಟ್‌ ಜೋಡಿಸಿದ ಕ್ಯಾಮರಾವನ್ನು ಸೈಲೆಂಟ್‌ ಮೋಡಿಗೆ ಹಾಕಿ ಆ ಒಣ ಮರದ ತುದಿಗೆ ಕಿಟಕಿಯ ಮೂಲಕ ಫೋಕಸ್‌ ಮಾಡಿದೆ. ಫೋಕಸ್‌ ಲಾಕ್‌ ತಂತ್ರ ಯೋಜಿಸಿ, ಪ್ರಿಫೋಕಸ್‌ ವಿಧಾನದಿಂದ ಶೂಟಿಂಗ್‌ ಮಾಡಲು ನಿರ್ಧರಿಸಿ , RAW ಫೈಲ್‌ನಲ್ಲಿ ಚಿತ್ರಳನ್ನು ತೆಗೆಯಲು ಪ್ರಾರಂಭಿಸಿದೆ  

       ಮಾರ್ಚಿಯಿಂದ ಜೂನ್‌ ವರೆಗೆ ನೀಲಕಂಠಗಳ ಸಂತಾನೋತ್ಪತ್ತಿಯ ಕಾಲಗಂಡು ಪಕ್ಷಿ ತನ್ನ ವಿಶಿಷ್ಟವಾದ ಗಾಳಿಯಲ್ಲಿ ನೆಗೆಯುವ, ಲಾಗ ಹಾಕುವ, ಸರ್ರನೆ ಮೇಲಿಂದ ಜಾರಿದಂತೆ ಹಾರುವ ಮುಂತಾದ ಏರೋಬಿಕ್ಸಗಳನ್ನು ತೋರಿಸುವ ಮೂಲಕ ಹೆಣ್ಣು ಪಕ್ಷಿಯನ್ನು ಆಕರ್ಷಿಸಿತ್ತದೆ. ಒಮ್ಮೆ ಜೋಡಿಯಾದ ಹಕ್ಕಿಗಳು ಜೀವಜೋಡಿಯಾಗಿ ಬಾಳುತ್ತವೆ. ಇವು ಒಣಮರದ ಕೊಳೆತು ಮೆದುವಾದ ಭಾಗವನ್ನು ಕೊರೆದು ಗೂಡನ್ನಾಗಿಸಕೊಳ್ಳುತ್ತವೆಈ ಗೂಡಿನಲ್ಲಿ ಹೆಣ್ಣು ಮೂರರಿಂದ ಐದರವರೆಗೆ ಮೊಟ್ಟಗಳನ್ನು ಇಡುತ್ತದೆ. ಸುಮಾರು ಎರಡುವಾರಗಳಲ್ಲಿ ಮೊಟ್ಟೆಯೊಡದು ಹೊರ ಬರುವ ಮರಿಗಳನ್ನು ಗಂಡು ಹೆಣ್ಣು ಎರಡೂ ಗುಟುಕು ನೀಡಿ ಸಲಹುತ್ತವೆ. ಒಂದು ತಿಂಗಳ ಅವಧಿಯಲ್ಲಿ ಮರಿಗಳು ಬೆಳೆದು ಗೂಡಿನಿಂದ ಹೊರಸಾಗುತ್ತವೆ. ನೀಲಕಂಠ ಪಕ್ಷಿಯ ಜೀವಿತಾವಧಿ  ಹದಿನೇಳು ವರ್ಷಗಳೆಂದು ಅಂದಾಜು ಮಾಡಲಾಗಿದೆ.   

ನೀಲಕಂಠಗಳು ಸಾಮಾನ್ಯವಾಗಿ ಕೀಟಭಕ್ಷಕಗಳಾಗಿದ್ದು ರೈತನ ಮಿತ್ರನೆಂದೆ ಕರೆಯಲಾಗುತ್ತದೆ. ಉಳುಮೆ ಮಾಡುವಾಗ ನೇಗಿಲು ಅಥವಾ ಟ್ರಾಕ್ಟರನ್ನು ಹಿಂಬಾಲಿಸಿ ಉತ್ತ ನೆಲದಿಂದ ಮೇಲೆ ಬರುವು ಕೀಟಗಳನ್ನು ಭಕ್ಷಿಸುವುದರಿಂದ ಕೀಟ ನಿಯಂತ್ರಗಳಾಗಿಯೂ ಇವು ಸಹಕರಿಸುತ್ತವೆಜೇಡ, ಮಿಡಿತೆ,ಕಪ್ಪೆ, ಓತಿಕ್ಯಾತ,ಸಣ್ಣಹಾವು, ಹಾವುರಾಣಿ, ಏಡಿ, ಚೇಳು ಈ ಎಲ್ಲವನ್ನು ಹಿಡಿದು ಭಕ್ಷಿಸುತ್ತವೆ.

      ನೀಲಕಂಠ ಪಕ್ಷಿಯನ್ನು ಅದರ ಹೆಸರಿನ ಕಾರಣದಿಂದ ಶಿವನ ರೂಪವೆಂದು ಕೆಲವರು ಭಾವಿಸಿದರೆ ವಿಷ್ಣುರೂಪವೆಂದು ಮತ್ತೆ ಕೆಲವರು ಭಾವಿಸುತ್ತಾರೆ.   ರಾಮನು ಲಂಕೆಗೆ ದಂಡೆತ್ತಿ ಹೋಗುವ ಮುನ್ನ ನೀಲಕಂಠನ ದರ್ಶನವಾಯಿತಂತೆ. ಪಾಂಡವರು ತಮ್ಮ ಅಜ್ಞಾತವಾಸವನ್ನು ಮುಗಿಸಿ ಶಮಿ ವೃಕ್ಷದಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಗಳನ್ನು ತೆಗೆದುಕೊಂಡು ಹಸ್ತಿನಾವತಿಯ ಕಡೆಗೆ ಹೊರಟಾಗ ಹಿಮಾಲಯದ ಕಡೆಗೆ ಹಾರತ್ತಾ  ಹೊರಟ ನೀಲಕಂಠ ಪಕ್ಷಿಯ ದರ್ಶನವಾಗಿ ಶುಭ ಸೂಚನೆ ನೀಡಿತಂತೆ. ಇಂದೂ ಸಹ ನೀಲಕಂಠನ ದರ್ಶನ ಶುಭಸೂಚಕೆವೆಂದು ಜನರು ನಂಬುತ್ತಾರೆದಸೆರೆಯ ಸಮಯದಲ್ಲಿ ನೀಲಕಂಠನನ್ನು ದರ್ಶನ ಮಾಡುವುದು ಪುಣ್ಯಪ್ರದವೆಂಬ ನಂಬಿಕೆ ಆಂಧ್ರದಲ್ಲಿದೆ. ಇದನ್ನು ಬಂಡವಾಳ ಮಾಡಿಕೊಂಡವರು ನೀಲಕಂಠ ಪಕ್ಷಿಯನ್ನು ಹಿಡಿದು ಪಂಜರದಲ್ಲಿರಿಸಿ ಜನರಿಂದ ಹಣ ಪಡೆದು  ತೋರಿಸಿ ದುಡ್ಡುಮಾಡುವ ದಂಧೆಗೆ ಇಳಿದ್ದಿದ್ದರುಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಈ ಪಕ್ಷಿಯ ಅಸ್ತಿತ್ವಕ್ಕೆ ಹೊಡೆತ ಬೀಳಲು ಶುರುವಾಯಿತು.   ತೆಲುಗಿನಲ್ಲಿ  ಪಾಲ ಪಿಟ್ಟ( ಹಾಲು ಹಕ್ಕಿ) ಎಂದು ಕರೆಯುವ ಇದರ ರೆಕ್ಕೆಗಳನ್ನು ಮೇವಿನೊಂದಿಗೆ ಹಸುಗಳಿಗೆ ಉಣಿಸಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ ಎಂಬ ಮೂಡನಂಬಿಕೆಯು ಸಹ ಆಂಧ್ರದಲ್ಲಿ ಇದ್ದಿತು. ಬ್ರಿಟಿಷರ ಈಸ್ಟ್‌ ಇಂಡಿಯ ಕಂಪನಿಯ ಆಡಳಿತದ ಕಾಲದಲ್ಲಿ ಇದರ ಆಕರ್ಷಕ ರೆಕ್ಕೆಗಳನ್ನು ಬ್ರಿಟನ್ನಿಗೆ ಸಾಗಿಸಿ ಮಾರುವ ದಂದೆಯೂ ಸಹ ಈ ಪಕ್ಷಿಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದ್ದಿತು. ಇಂದು ನೀಲಕಂಠ ಪಕ್ಷಿ ಕಾನೂನಿನ ಅಡಿಯಲ್ಲಿ ಸಂರಕ್ಷಿತ ಪಕ್ಷಿ. ಜೀವಂತ ಅಥವಾ ಮೃತ ಪಕ್ಷಿಯನ್ನಾಗಲಿ ಅದರ ರೆಕ್ಕೆಪುಕ್ಕಗಳನ್ನಾಗಲಿ ಇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾದ. ಹೀಗಾಗಿ ನೀಲಕಂಠಗಳ ಸಂಖ್ಯೆ ಈಗ ಸುಸ್ಥಿರವಾಗಿದೆಯಾದ್ದರಿಂದ ಅಳಿವಿನ ಅಂಚಿಗೆ ತಳ್ಳಲ್ಪಟ್ಟಿರುವ ಜೀವಿಗಳನ್ನು ನಮೂದಿಸುವ The IUCN Red List ನಿಂದ ಹೊರಗೆ ಉಳಿದ ಜೀವಿಯಾಗಿದೆ ಎಂಬುದು ಸಂತಸದಾಯಕ ವಿಚಾರವಾಗಿದೆ.