ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, May 4, 2024

ಜೀವಸತ್ವಗಳ ಅಂತಃಸತ್ವ

 ಜೀವಸತ್ವಗಳ ಅಂತಃಸತ್ವ 

ಲೇಖಕರು : ರಮೇಶ,ವಿ ಬಳ್ಳಾ 

 ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

(ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ

 ಮೊ: ೯೭೩೯೦೨೨೧೮೬

ಈ ಹೊತ್ತು ನಮ್ಮ ಬಹಳಷ್ಟು ತಂದೆತಾಯಿಗಳ ಆರೋಪ ಅಂದರೆ ‘ಮಕ್ಕಳು ಸರಿಯಾಗಿ ಹೊತ್ತುಹೊತ್ತಿಗೆ ಊಟ ಮಾಡಲ್ಲ, ಸೊಪ್ಪು ಕಾಳುಪಲ್ಯ, ರೊಟ್ಟಿ, ಚಪಾತಿ ತಿನ್ನೋದೆ ಇಲ್ಲ, ಬರೀ ಮ್ಯಾಗಿ, ಚಿಪ್ಸ್, ಬಿಸ್ಕತ್, ಕುರುಕುರೆ ಹಾಳುಮುಳು ತಿಂದು ತಿರುಗಾಡ್ತಾರೆ’ ಅನ್ನೋದು.

ನಿಜ ! ಇವತ್ತು ಉಳ್ಳವರ ಬಹಳಷ್ಟು ಮಕ್ಕಳು ಸರಿಯಾಗಿ ಊಟ ಮಾಡಲ್ಲ. ಒಂದ್ಹೊತ್ತು ಊಟಕ್ಕೆ ಪರದಾಡುವವರ ಮಕ್ಕಳ ಪಾಡಂತೂ ಹೇಳತೀರದು. ಊಟ ಮಾಡುವುದು ಎಂದರೆ ಏನೇನೋ ತಿನ್ನುವುದಲ್ಲ. ತಿಂದದ್ದೆಲ್ಲವೂ ಉತ್ತಮ ಆಹಾರ ಎಂದು ಹೇಳಲಿಕ್ಕಾಗದು. ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿರಬೇಕಾಗುತ್ತದೆ. ಅಂದಾಗ ಮಾತ್ರ ವ್ಯಕ್ತಿಯ ದೈಹಿಕ ಬೆಳವಣಿಗೆ, ಕೆಲಸ ಮಾಡುವ ಶಕ್ತಿ ಸಾಮರ್ಥ್ಯ ಹಾಗೂ ರೋಗನಿರೋಧಕತೆ ಹೊಂದಲು ಸಾಧ್ಯ.

ಸಂಪೂರ್ಣ ಅಥವಾ ಸಮತೋಲಿತ ಆಹಾರ ಎಂದಾಗ ಅದರಲ್ಲಿ ಎಲ್ಲ ಪ್ರಮುಖ ಆಹಾರ ಘಟಕಗಳಿರಬೇಕಾದ್ದು ಅವಶ್ಯ. ನಾವು ತಿನ್ನುವ ಆಹಾರದಲ್ಲಿ ಎಲ್ಲ ಪೋಷಕಾಂಶಗಳು ಇರಲು ಸಾಧ್ಯವಿಲ್ಲ. ಪ್ರತಿಯೊಂದು ಪೋಷಕಾಂಶವು ದೇಹದಲ್ಲಿ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುತ್ತವೆ. ಕೆಲವು ದೇಹ ನಿರ್ಮಾಣ(ಪ್ರೋಟಿನ್, ಖನಿಜ, ನೀರು) ಕಾರ್ಯದಲ್ಲಿ ತೊಡಗಿ ದೇಹ ನಿರ್ಮಾತೃಗಳಾದರೆ, ಮತ್ತೆ ಕೆಲವು ದೇಹದ ಚಟುವಟಿಕೆಗಳಿಗೆ ಬೇಕಾಗುವ ಶಕ್ತಿ(ಕಾರ್ಬೋಹೈಡ್ರೇಟ್,ಲಿಪಿಡ್) ನೀಡುತ್ತವೆ. ಹಾಗೆಯೇ ಜೀವಿಯ ದೇಹದ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ಸಂಘಟಿಸಿ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ದೇಹದ ವ್ಯವಸ್ಥಿತ ಬೆಳವಣಿಗೆ ಹಾಗೂ ಸಂವರ್ಧನೆಗೆ ಸತ್ವ ನೀಡಿ ಪೋಷಿಸುವ ಮೂಲಕ ಜೀವಿಯನ್ನು ಜೀವಂತವಾಗಿಸುವ ‘ಜೀವಸತ್ವಗಳು’ ಆಹಾರದ ಪ್ರಮುಖ ಘಟಕಗಳಾಗಿವೆ. 

ನಮ್ಮ ದೇಹಕ್ಕೆ ಕೆಲ ಪೋಷಕಗಳು ತುಂಬಾ ಅವಶ್ಯವಾಗಿ ಗರಿಷ್ಠ ಪ್ರಮಾಣದಲ್ಲಿ ಬೇಕಾಗುತ್ತವೆ. ಮತ್ತೆ ಕೆಲವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವುದಿಲ್ಲ. ಕಡಿಮೆ ಪ್ರಮಾಣದಲ್ಲಿ ಬೇಕಾಗುವ ಪೋಷಕಾಂಶಗಳಾದ ಜೀವಸತ್ವಗಳು ಬಹುಮಟ್ಟಿಗೆ ನಮ್ಮ ದೇಹದಲ್ಲಿ ತಯಾರಾಗುವಂತಹುಗಳಲ್ಲ. ಹಾಗಾಗಿ ಹೊರಗಿನಿಂದ ಆಹಾರದ ಮೂಲಕವೇ ಪಡೆಯಬೇಕಾಗುತ್ತದೆ. ಕಾರ್ಬಾನಿಕ ಸಂಯುಕ್ತಗಳಾದ ಇವುಗಳನ್ನು ವಿಲೀನಗೊಳ್ಳುವ ಗುಣದ ಆಧಾರದ ಮೇಲೆ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು(ಜೀವಸತ್ವ ಎ,ಡಿ,ಇ,&ಕೆ) ಹಾಗೂ ನೀರಿನಲ್ಲಿ ಕರಗುವ ಜೀವಸತ್ವಗಳು(ಬಿ ಗುಂಪಿನ & ಸಿ ಜೀವಸತ್ವ) ಎಂದು ವಿಂಗಡಿಸಲಾಗಿದೆ.

ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು : ನಾವು ಸೇವಿಸುವ ಆಹಾರದಲ್ಲಿ ಕೊಬ್ಬಿನಾಂಶ(ಎಣ್ಣೆ)ಇರಲೇಬೇಕಾದುದು ಅತೀ ಅವಶ್ಯ, ಏಕೆಂದರೆ ಕೊಬ್ಬಿನ ಮೂಲಕವೇ ಜೀವಸತ್ವಗಳನ್ನು ಜೀವಕೋಶಗಳು ಹೀರಿಕೊಳ್ಳುತ್ತವೆ.

ಜೀವಸತ್ವ ‘ಎ’-ಬೀಟಾ ಕೆರೋಟಿನ್ ಎಂತಲೂ ಕರೆಯಲ್ಪಡುವ ಇದು ಕಣ್ಣು ಮತ್ತು ಚರ್ಮದ  ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ. ೧೯೧೩ ರಲ್ಲಿ ಮ್ಯಾಕ್ ಕಾಲಮ್ ಈ ಜೀವಸತ್ವವನ್ನು ಕಂಡುಹಿಡಿದರೆ, ೧೯೩೧ ರಲ್ಲಿ ಕಾರಿಯರ್ ಇದರ ರಚನೆ ಬಗ್ಗೆ ವಿಸ್ತೃತ ವಿವರ ನೀಡುತ್ತಾರೆ. ಕೊಬ್ಬಿರುವ ಆಹಾರ ಪದಾರ್ಥಗಳಾದ ಹಾಲು, ಹಾಲಿನ ಉತ್ಪನ್ನಗಳು, ತತ್ತಿ, ಮೀನೆಣ್ಣೆ, ಮಾಂಸಗಳಲ್ಲಿ ಮತ್ತು ಹಸಿರು ಹಳದಿ ಬಣ್ಣಗಳ ತಪ್ಪಲು ಪಲ್ಯಗಳಲ್ಲಿ, ತರಕಾರಿ ಹಣ್ಣುಗಳಲ್ಲಿ ‘ಎ’ಜೀವಸತ್ವ ಹೇರಳವಾಗಿರುತ್ತದೆ. ಇದರ ವೈಜ್ಞಾನಿಕ ಹೆಸರು ರೆಟಿನಾಲ್.೧೨ ರಿಂದ ೧೫ ವಯೋಮಾನದ ಗುಂಪಿನವರಿಗೆ ದೈನಂದಿನ ಅವಶ್ಯಕತೆಯಾಗಿ ಅತೀ ಹೆಚ್ಚು ಅಂದರೆ ೭೫೦ ಮಿ ಗ್ರಾಂ ಜೀವಸತ್ವ ಬೇಕಾಗುತ್ತದೆ. ಹಾಗಾಗಿ ಕುಂಬಳಕಾಯಿ, ಗಜ್ಜರಿ, ಪಪ್ಪಾಯ, ಮಾವು, ಹಲಸು, ಅನಾನಸ್‌ಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಇಲ್ಲದಿದ್ದರೆ ನ್ಯೂನತಾಕಾಯಿಲೆಗಳು ಬರುವ ಸಾಧ್ಯತೆಗಳಿರುತ್ತವೆ.  ಮುಖ್ಯವಾಗಿ ನಾವು ಕೇಳಿರುವ ‘ರಾತ್ರಿಕುರುಡು’ತನ ಅಥವಾ ನಿಶಾಂಧತೆ ವಿಟಾಮಿನ್ ಎ ಕೊರತೆಯಿದ ಬರುವಂತಾದ್ದಾಗಿದೆ.

ಜೀವಸತ್ವ ‘ಡಿ’- ಮಕ್ಕಳು ಹೊರಗಡೆ ಓಡಾಡಿಕೊಂಡು ಆಟವಾಡುತ್ತಾ ಬೆಳೆದರೆ ಗಟ್ಟಿಮುಟ್ಟಾಗಿರುತ್ತವೆ, ‘ಕೋಣೆ ಕೂಸು ಕೊಳೀತು, ಓಣಿ ಕೂಸು ಬೆಳೀತು’ಎನ್ನುವ ಹಿರಿಯರ ಮಾತುಗಳು ಆಗಾಗ ನಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ಏಕೆಂದರೆ ಇಂದಿನ ನಮ್ಮ ಮಕ್ಕಳು ಹೊರಗಡೆ ಆಟವಾಡುವುದೇ ಕಡಿಮೆ. ಬರೀ ಓದು, ಅಭ್ಯಾಸ, ಕಂಪ್ಯೂಟರ್ ಅಂತಾ ಮನೆಯ ಒಳಗಡೆನೇ ಬಹಳ ಹೊತ್ತು ಕಳೆಯುತ್ತವೆ. ಹಾಗಾಗಿ ನೈಸರ್ಗಿಕವಾಗಿ ಸೂರ್ಯನ ಪ್ರಕಾಶದಿಂದ ದೊರೆಯುವ ವಿಟಮಿನ್ ಡಿ ಯಿಂದ ನಮ್ಮ ಮಕ್ಕಳು ವಂಚಿತವಾಗುತ್ತವೆ ಅಂತಲೇ ಹೇಳಬಹುದು.

ಹೌದು ! ಜೀವಸತ್ವ ಡಿ ಯನ್ನು ‘ಸೂರ್ಯರಶ್ಮಿ ಜೀವಸತ್ವ’ಎಂದೇ ಕರೆಯುತ್ತಾರೆ. ಸೂರ್ಯಪ್ರಕಾಶವು ದೇಹದ ಚರ್ಮದಡಿಯಲ್ಲಿನ ೭-D ಹೈಡ್ರೊಕೊಲೆಸ್ಟ್ರಾಲ್ ಎಂಬ ರಾಸಾಯನಿಕವನ್ನು ಜೀವಸತ್ವ ಡಿ ಯನ್ನಾಗಿ ಮಾಡುತ್ತದೆ. ಈ ಡಿ ಜೀವಸತ್ವವು ಕರುಳಿನಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕಗಳ ಹೀರುವಿಕೆಗೆ, ಡಿಎನ್‌ಎ ಸಂಶ್ಲೇಷಣೆಗೆ ಸಹಕರಿಸುವುದಲ್ಲದೆ ಎಲುಬುಗಳ ಗಟ್ಟಿತನಕ್ಕೆ ಕಾರಣವಾಗುತ್ತದೆ. ಬೆಣ್ಣೆ ತುಪ್ಪ, ಗಿಣ್ಣು, ಮೀನೆಣ್ಣೆ, ಮೊಟ್ಟೆಯ ಹಳದಿ ಭಾಗವು ಡಿ ಜೀವಸತ್ವವನ್ನು ಹೊಂದಿವೆ. ಇವುಗಳ ಸೇವನೆಯಿಂದ ಮಕ್ಕಳನ್ನು ಹಕ್ಕಿರೋಗ(ರಿಕೇಟ್ಸ್) ಕಾಯಿಲೆಯಿಂದ ಪಾರುಮಾಡಬಹುದು. ಕ್ಯಾಲ್ಸಿಯಂ ಕೊರತೆಯಿಂದ ವಯಸ್ಕ ಮಹಿಳೆಯರಲ್ಲಿ ಮೂಳೆಗಳು ಕುಗ್ಗಿ ದುರ್ಬಲಗೊಳ್ಳುತ್ತವೆ. ವಿಕಾರ ಶರೀರ, ತೀವ್ರ ನರಳಾಟಿಕೆಯಿಂದ ಅಸ್ಟಿಯೋಮಲೇಸಿಯಾ ಕಾಯಿಲೆಯ ಲಕ್ಷಣಗಳು ಗೋಚರವಾಗುತ್ತವೆ. ಈ ನ್ಯೂನತೆ ಬಾರದಿರಲು ಡಿ ಜೀವಸತ್ವ ತುಂಬಾ ಪ್ರಯೋಜನಕಾರಿಯಾಗಿದೆ.

ಜೀವಸತ್ವ ‘ಇ’- ನಾವು ಪ್ರಧಾನವಾಗಿ ಬಳಸುವ ಆಹಾರಧಾನ್ಯಗಳು ಏಕದಳಗಳಾಗಿವೆ. ಇವೆಲ್ಲವೂ ಜೀವಸತ್ವ ಇ ಯನ್ನು ಹೊಂದಿವೆ. ಮಾನವನಿಗೆ ಉಪಯುಕ್ತವಾದ ಈ ಏಕದಳ ಧಾನ್ಯಗಳು ತುಂಬಾ ಮಹತ್ವವನ್ನು ಹೊಂದಿವೆ. ಸಮುದ್ರದಂಚಿನ ಪಾಚಿಗಳಲ್ಲೂ ವಿಶೇಷವಾಗಿ ವಿಟಾಮಿನ್ ಇ ಇರುವುದುಂಟು.’ಇ’ಜೀವಸತ್ವವು ಮಾನವನ ಲೈಂಗಿಕಶಕ್ತಿ ವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಸಂತಾನೋತ್ಪತ್ತಿಯ ಸರಾಗ ಕ್ರಿಯೆಗೆ ಇದು ಸಹಕರಿಸುತ್ತದೆ. ಇದನ್ನು ಬ್ಯೂಟಿ ವಿಟಾಮಿನ್ ಎಂದು ಕರೆಯಲಾಗುತ್ತದೆ.

ಜೀವಸತ್ವ ‘ಕೆ’- ಗಾಯವಾಗಿ ರಕ್ತಸ್ರಾವವಾದಾಗ ನಾವು ತುಂಬಾ ಗಾಬರಿ ಬೀಳುತ್ತೇವೆ. ತಕ್ಷಣ ರಕ್ತ ಹೆಪ್ಪುಗಟ್ಟಿ ಸ್ರಾವ ನಿಲ್ಲದಿದ್ದರೆ ನಮ್ಮ ಆತಂಕ ಹೆಚ್ಚುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಮಹತ್ವದ ಪಾತ್ರವಹಿಸುವುದು ವಿಟಾಮಿನ್ ‘ಕೆ’. ಈ ಜೀವಸತ್ವವನ್ನು ಹೆನ್ರಿಕ್ ಡಾಮ್ ೧೯೩೫ರಲ್ಲಿ ಕಂಡುಹಿಡಿದರು. ಇದನ್ನು ನ್ಯಾಪ್ತಾಕಿನಾಯಿನ್ ಎಂತಲೂ ಕರೆಯುವರು. ಇದು ಕೆಲ ಬ್ಯಾಕ್ಟೇರಿಯಾಗಳ ದೇಹದಲ್ಲಿ ಸಂಶ್ಲೇಷಣೆಗೊಳ್ಳುತ್ತದೆಂದು ಹೇಳಲಾಗುತ್ತದೆ. ಬಹುತೇಕ ಎಲ್ಲ ತರಕಾರಿ, ಹಸಿರು ತಪ್ಪಲು ಪಲ್ಯಗಳಲ್ಲಿ ಈ ಜೀವಸತ್ವದಿರುವಿಕೆಯನ್ನು ಕಾಣಬಹುದಾಗಿದೆ. ಚಪಾತಿ ತಿನ್ನುವ ಬಹಳಷ್ಟು ಜನರಿಗೆ ‘ಕೆ’ಜೀವಸತ್ವ ಗೋಧಿಯ ಮೂಲಕ ಲಭ್ಯವಾಗುತ್ತದೆ. ಹಾಲು, ಹಾಲಿನ ಉತ್ಪನ್ನಗಳು, ಲೆಗ್ಯೂಮ್ ಧಾನ್ಯಗಳು, ಟೊಮೆಟೊ, ಸೊಯಾಬಿನ್, ಮಾಂಸಗಳಲ್ಲಿ ‘ಕೆ’ ಜೀವಸತ್ವ ಹೇರಳವಾಗಿರುತ್ತದೆ.

ನೀರಿನಲ್ಲಿ ಕರಗುವ ಜೀವಸತ್ವಗಳಾದ ‘ಬಿ’ಮತ್ತು ‘ಸಿ’ ಗುಂಪಿನ ಜೀವಸತ್ವಗಳು ಒಂದೇ ರೀತಿಯ ಆಹಾರ ಪದಾರ್ಥಗಳಲ್ಲಿ ಸಿಗುವುದಿಲ್ಲ. ಹಾಲು, ಮೊಸರು, ಹಸಿರು ತರಕಾರಿ, ಮೊಟ್ಟೆ ಮುಂತಾದವುಗಳಲ್ಲಿ ‘ಬಿ’ ಜೀವಸತ್ವವಿದ್ದರೆ, ಹುಳಿ ಹಣ್ಣುಗಳಲ್ಲಿ ‘ಸಿ’ಜೀವಸತ್ವವನ್ನು ಕಾಣಬಹುದಾಗಿದೆ.

ಜೀವಸತ್ವ ‘ಬಿ’- ಇದು ಒಂದು ಸಂಕೀರ್ಣವಾದ ಜೀವಸತ್ವ. ಅಂದರೆ ಬಿ ಜೀವಸತ್ವವು ಥಯಾಮಿನ್, ರೈಬೊಪ್ಲಾವಿನ್, ನಿಯಾಸಿನ್, ಪಾಲಿಕ್‌ಆಸಿಡ್, ಸಯನೊಕೊಬಾಲಮಿನ್ ಇತ್ಯಾದಿಗಳನ್ನು ಒಳಗೊಂಡಿದೆ. ಹಾಗಾಗಿ ಇದು ನಿರ್ವಹಿಸುವ ಕಾರ್ಯಗಳು ಹತ್ತುಹಲವು. ಮಾನವನ ದೇಹದ ಬಹುತೇಕ ಜೈವಿಕ ಕಾರ್ಯಗಳ ನಿರ್ವಹಣೆಗೆ ಹಾಗೂ ಬೆಳವಣಿಗೆಯಲ್ಲಿ ಜೀವಸತ್ವ ‘ಬಿ’ ಬಹುಮುಖ್ಯ ಪಾತ್ರವಹಿಸುತ್ತದೆ.

ವಿಟಾಮಿನ್ ಬಿ ೧ (ಥಯಾಮಿನ್)- ನರಕೋಶಗಳ ಸಹಜ ಕಾರ್ಯನಿರ್ವಹಣೆಗೆ ಹಾಗೂ ಚಯಾಪಚಯ ಕ್ರಿಯೆಗೆ ಇದು ಸಹಕಾರಿ. ದೇಹದ ದಣಿವು, ಆಯಾಸ ನೀಗಿಸಿ ಸಹಜ ಜೀರ್ಣಕ್ರಿಯೆಗೆ ಇದು ಬೇಕೆ ಬೇಕು. ಅಕ್ಕಿ, ಗೋಧಿ, ಯಿಸ್ಟ್, ಬೀನ್ಸ್, ಯಕೃತ್, ಹಾಲು, ಧಾನ್ಯಗಳಲ್ಲಿ ಥಯಾಮಿನ್ ಯಥೇಚ್ಛವಾಗಿರುತ್ತದೆ. ಇದರ ಕೊರತೆಯಿಂದ ಬೆರಿ ಬೆರಿ ಎಂಬ ನ್ಯೂನತಾ ಕಾಯಿಲೆ ಕಾಣಿಸಿಕೊಳ್ಳುತ್ತದೆ. 

ವಿಟಾಮಿನ್ ಬಿ ೨ (ರೈಬೊಪ್ಲಾವಿನ್)- ಪ್ರೋಟಿನ್ ಮತ್ತು ಕೊಬ್ಬುಗಳ ಪಚನಕ್ರಿಯೆಗೆ ಇದು ಸಹಕಾರಿ. ದೇಹದ ಸಹಜ ಬೆಳವಣಿಗೆಯನ್ನು ವೃದ್ಧಿಸಿ, ನಾಲಿಗೆ, ಕರ‍್ನಿಯಾದ ಊರಿಯೂತಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಬಾಯಿ ಮೂಲೆಗಳಲ್ಲಿನ ಬಿರುಕುಗಳು ಬಾರದಂತೆ ರಕ್ಷಿಸುತ್ತದೆ. ಹಾಲು, ಮೊಟ್ಟೆ, ಯಕೃತ್, ಹಸಿರು ತರಕಾರಿಗಳಲ್ಲಿ ರೈಬೊಪ್ಲಾವಿನ್ ಹೆಚ್ಚಾಗಿರುತ್ತದೆ.

ವಿಟಮಿನ್ ಬಿ ೩ (ನಿಯಾಸಿನ್)– ಇದು ಪ್ರಮುಖವಾಗಿ ನಿಕೊಟಿನಿಕ್ ಆಮ್ಲವನ್ನು ಹೊಂದಿದ ಒಂದು ಜೀವಸತ್ವ. ಕಾರ್ಬೋಹೈಡ್ರೇಟ್, ಪ್ರೋಟಿನ್ ಮತ್ತು ಕೊಬ್ಬುಗಳ ಉತ್ಕರ್ಷಣೆ(oxidation)ಗೆ ಇದು ಸಹಾಯಕವಾಗಿದೆ. ಇದರಲ್ಲಿ ಪ್ರತಿಪೆಲಾಗ್ರ(antipellagra) ಅಂಶವಿರುವುದು ಕಂಡುಬಂದಿದೆ. ಪೆಲಾಗ್ರ ಎಂಬುದು ಬೊಜ್ಜು ಮೈಯ, ಚರ್ಮ ಬಿರಿದು, ಕೊನೆಗೆ ಮೆದುಳಿಗೆ ರೋಗ ತಗಲುವ ಸ್ಥಿತಿಯೇ ಆಗಿದೆ. ಒಂದು ವೇಳೆ ಇದರ ಕೊರತೆಯುಂಟಾದಲ್ಲಿ ೩-ಆ  ಲಕ್ಷಣಗಳು ಕಂಡುಬರುತ್ತವೆ. ಅಂದರೆ ಡರ್ಮಟೈಟಿಸ್, ಡಯೆರಿಯಾ ಮತ್ತು ಡಿಮೆಂಶಿಯಾ ರೋಗಲಕ್ಷಣಗಳು ಗೋಚರಿಸುತ್ತವೆ. ಮಾಂಸ, ಮೊಟ್ಟೆ, ಹಾಲು, ಹಣ್ಣು, ಯಕೃತ್, ಗೋವಿನಜೋಳ, ಯಿಸ್ಟ್ಗಳಲ್ಲಿ ಈ ಜೀವಸತ್ವ ಹೇರಳವಾಗಿದೆ. ಇದರಿಂದ ಪೆಲಾಗ್ರ ಕಾಯಿಲೆ ದೂರವಿಡಬಹುದು.

ವಿಟಮಿನ್ ಬಿ ೫ (ಪೆಂಟೊತೆನಿಕ್ ಆಸಿಡ್)- ಇದು ಎಲ್ಲ ಆಹಾರ ಪದಾರ್ಥಗಳಲ್ಲೂ ಲಭ್ಯವಿರುತ್ತದೆ. ಸಾಮಾನ್ಯವಾಗಿ ದವಸಧಾನ್ಯಗಳು, ಮೊಟ್ಟೆ, ಮಾಂಸಗಳಲ್ಲಿದ್ದರೂ ಅತ್ಯಧಿಕ ಪ್ರಮಾಣದಲ್ಲಿ ಅಣಬೆ, ಯಿಸ್ಟ್, ಯಕೃತ್‌ಗಳಲ್ಲಿ ಕಂಡುಬರುತ್ತದೆ.  ಈ ಜೀವಸತ್ವವು ದೇಹದ ಸಾಮಾನ್ಯ ಬೆಳವಣಿಗೆಗೆ ಸಹಕರಿಸುತ್ತದೆ.

ವಿಟಮಿನ್ ಬಿ ೬ (ಪೆರಿಡಾಕ್ಸಿನ್)- ಇದು ಹತ್ತಿರ ಸಂಬಂಧಿ ಸಂಯುಕ್ತಗಳಾದ ಪೆರಿಡಾಕ್ಸಿನ್, ಪೆರಿಡಾಕ್ಸಲ್ ಮತ್ತು ಪೆರಿಡಾಕ್ಸಮಾಯಿನ್ ಗುಂಪುಗಳನ್ನು ಒಳಗೊಂಡಿದೆ. ಸಹಕಿಣ್ವcoenzyme)ವಾಗಿ ರಕ್ತ, ಕೇಂದ್ರನರವ್ಯೂಹ ಮತ್ತು ಚರ್ಮ ಚಯಾಪಚಯ ಪ್ರತಿಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಬಿ೬ನ ಮಹತ್ವವು ರಕ್ತಾಂಶ ಮತ್ತು ನ್ಯೂಕ್ಲಿಕ್ ಆಸಿಡ್‌ಗಳ ಜೈವಿಕಸಂಶ್ಲೇಷಣೆ(biosynthesis)ಯಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. 

ವಿಟಮಿನ್ ಬಿ ೭ (ಬಯೋಟಿನ್)- ಇದು ಕೂಡ ಸಹಕಿಣ್ವವಾಗಿ ಕಾರ್ಯ ಮಾಡುತ್ತದೆ. ಇದರ ಅಗತ್ಯತೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆಯಲ್ಲಿ ಕಂಡುಬರುತ್ತದೆ. ಅಲ್ಲದೇ ದೇಹ ನಿರ್ಮಾಣ ಚೋದಕಗಳ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮೊಟ್ಟೆಯ ಹಳದಿ ಭಾಗ, ಹಸಿರು ಸೊಪ್ಪು, ತರಕಾರಿ, ಕಾಳುಗಳಲ್ಲಿ ಈ ಅಂಶ ಹೇರಳವಾಗಿರುತ್ತದೆ.

ವಿಟಮಿನ್ ಬಿ ೯ (ಪಾಲಿಕ್ ಆಸಿಡ್)- ಶಾಲಾ ಮಕ್ಕಳಿಗೆ  ಇಂದು ಪಾಲಿಕ್ ಆಸಿಡ್ ಅಂಶವುಳ್ಳ ಮಾತ್ರೆಗಳ ನೀಡುವುದನ್ನು ಸರ್ಕಾರ ಯೋಜನೆ ರೂಪಿಸಿದೆ. ಬಡಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಗಳಲ್ಲಿ ರಕ್ತಹೀನತೆ ಪ್ರಮುಖವಾದುದು. ರಕ್ತಹೀನತೆಗಳಲ್ಲಿ ವಿವಿಧ ಬಗೆಗಳಿವೆ. ರಕ್ತದಲ್ಲಿನ ಕೆಂಪು ರಕ್ತಕಣಗಳ ಪಕ್ವತೆ ಹಾಗೂ ಸಂಖ್ಯಾವೃದ್ಧಿಗೆ ಪಾಲಿಕ್ ಆಸಿಡ್ ಅವಶ್ಯವಾಗಿದೆ. ಇದನ್ನು ‘ಬಿ ಸಂಕಿರ್ಣ’ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಹಸಿರು ತರಕಾರಿ, ಸೊಪ್ಪು, ಮೊಳಕೆ ಕಾಳು, ಬಾಳೆಹಣ್ಣು, ಮಾಂಸ, ಯಕೃತ್, ಹೂಕೋಸುಗಳಲ್ಲಿ ಇದರ ಲಭ್ಯತೆಯನ್ನು ಕಾಣಬಹುದು. ಇವುಗಳ ನಿಯಮಿತ, ನಿರ್ಧಿಷ್ಟ ಸೇವನೆಯಿಂದ ಮ್ಯಾಕ್ರೊಸಿಯಾಟಿಕ್ ಅನಿಮಿಯಾದಂತಹ ಕಾಯಿಲೆಗಳಿಂದ ದೂರವಿರಬಹುದು, ಜೊತೆಗೆ ರಕ್ತದಲ್ಲಿನ ಹಿಮೊಗ್ಲೊಬಿನ್ ಮಟ್ಟ ಹಾಗೂ ಆರ್‌ಬಿಸಿಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಬಹುದು.

ವಿಟಮಿನ್ ಬಿ ೧೨ (ಸಿಯಾನೊಕೊಬಾಲಮಿನ್)- ಕೊಬಾಮೈಡ್ ಸೈನಾಯ್ಡ್ ಎಂತಲೂ ಕರೆಯಲ್ಪಡುವ ಬಿ೧೨ವು ರಕ್ತದಲ್ಲಿ ಕೆಂಪುರಕ್ತಕಣಗಳ ರಚನೆ ಹಾಗೂ ನರ ಅಂಗಾಂಶಗಳ ಸಮರ್ಪಕ ಕಾರ್ಯನಿರ್ವಹಣೆಗೆ ಸಹಾಯಕ. ಯಕೃತ್, ತುಪ್ಪ, ಹಾಲು, ಮೀನು ಮೊಟ್ಟೆ ಮಾಂಸಗಳು ಬಿ೧೨ದಿಂದ ಸಮೃದ್ಧವಾಗಿವೆ. ಇದರ ಕೊರತೆಯಾದಲ್ಲಿ ಪರ‍್ನಿಸಿಯಸ್ ಅನಿಮಿಯಾ ಬಂದೊದಗಬಹುದು.

ಜೀವಸತ್ವ ‘ಸಿ’ (ಅಸ್ಕಾರ್ಬಿಕ್ ಆಸಿಡ್)- ಇದು ಮಾನವನಿಗೆ ಅತ್ಯಂತ ಚಿರಪರಿಚಿತವಾದ ಪ್ರಾರಂಭಿಕ ಜೀವಸತ್ವವಾಗಿದೆ. ದೇಹದಲ್ಲಿನ ಸರ್ವ ಜೀವಕೋಶಗಳ ಮಸಮರ್ಪಕ ಕಾರ್ಯನಿರ್ವಹಣೆಗೆ ‘ಸಿ’ ಜೀವಸತ್ವ ಅತೀ ಮುಖ್ಯವಾಗಿದೆ. ಎಲ್ಲ ಜೀವಕೋಶಗಳನ್ನು ಒಟ್ಟುಗೂಡಿಸಿ, ಬಂಧಿಸಲು ಅವಶ್ಯಕವಾದ ಜಿಗುಟು ಪದಾರ್ಥದ ಉತ್ಪಾದನೆ ವಿಟಮಿನ್ ಸಿ ಯಿಂದಾಗುತ್ತದೆ. ಹರಿದ-ಮುರಿದ ಭಾಗಗಳು, ಗಾಯಗಳ ರಿಪೇರಿ, ರಕ್ತನಾಳಗಳ ಸಂರಕ್ಷಣೆಯ ಜವಾಬ್ದಾರಿ ಸಿ ಜೀವಸತ್ವದ್ದಾಗಿದೆ.ದೇಹಕ್ಕೆ ರೋಗ ಬಂದೊದಗಿದಾಗ ರೋಗನಿರೋಧಕತೆಯನ್ನುಂಟು ಮಾಡಿ,ರೋಗಕಾರಕಗಳ ಜೊತೆ ಹೋರಾಡುವ ಗುಣ ಹೊಂದಿದೆ.ಹಲ್ಲುಗಳು,ಕೀಲುಗಳ ಆರೋಗ್ಯಕ್ಕೆ ‘ಸಿ’ಜೀವಸತ್ವ ಅವಶ್ಯಕವಾಗಿದೆ. ಮೂತ್ರಕೋಶದಲ್ಲಿನ ಕಲ್ಲುಗಳ ರಚನೆಯನ್ನು ಇದು ತಡೆಯುತ್ತದೆ. ವಸಡುಗಳಲ್ಲಿ ರಕ್ತಸ್ರಾವದಿಂದ ಹಲ್ಲುಗಳು ಹಾಳಾಗುವುದನ್ನು ನಿಲ್ಲಿಸುತ್ತದೆ. ಮೂಳೆಗಳ ಜೋಡಣೆಗೆ ಅಗತ್ಯವಾದ ಕೊಲೆಜಿನ್ ಎಂಬ ಅಂಟು ಪದಾರ್ಥದ ಕೊರತೆಯನ್ನು ನೀಗಿಸುತ್ತದೆ.

 ಹುಳಿ ಹಣ್ಣುಗಳಾದ(ಸಿಟ್ರಸ್‌ಫ್ರುಟ್ಸ್)ಲಿಂಬೆ, ಮೊಸಂಬೆ, ಕಿತ್ತಳೆ, ಸೀಬೆ, ನೇರಳೆ, ಟೊಮೆಟೊ, ಮಾವು, ನೆಲ್ಲಿ ಮುಂತಾದವುಗಳ ನಿಯಮಿತ ಸೇವನೆಯಿಂದ ನ್ಯೂನತಾಕಾಯಿಲೆಯಾದ ‘ಸ್ಕರ್ವಿ’ಯಿಂದ ದೂರ ಇರಬಹುದು. ಮಕ್ಕಳಿಗೆ ಹೆಚ್ಚೆಚ್ಚು ಈ ಹಣ್ಣುಗಳನ್ನು ತಿನ್ನಿಸುವುದು ಒಳಿತು. ಏಕೆಂದರೆ ಮಕ್ಕಳಲ್ಲಿ ರೋಗನಿರೋಧಕಶಕ್ತಿ ಕಡಿಮೆ ಇರುತ್ತದೆ.

ಆಹಾರ ಸೇವನೆ ರೀತಿ ನೀತಿಗಳು, ವಿಧಾನಗಳು, ಪ್ರಮಾಣಗಳ ಜ್ಞಾನ ಕೊರತೆಯಿಂದ ಅಪೌಷ್ಠಿಕತೆ ಇಂದು ಎಲ್ಲರನ್ನು ಕಾಡುತ್ತಿದೆ. ಪ್ರಮುಖ ಆಹಾರಾಂಶಗಳಾದ ಜೀವಸತ್ವಗಳ ಅಂತಃಸತ್ವ ಅದ್ಭುತ, ಅಗಾಧ ಪೋಷಕಗಳಿಂದ ಆವೃತವಾಗಿವೆ. ಇದನ್ನು ಅರಿತು ವೈಜ್ಞಾನಿಕ ರೀತಿಯಲ್ಲಿ ಆಹಾರ ಪದ್ಧತಿ, ಜೀವನಶೈಲಿ ರೂಢಿಸಿಕೊಂಡಲ್ಲಿ ಆರೋಗ್ಯಯುತ ಜೀವನ ನಡೆಸಬಹುದು.




                            @@@@@@@@

                                      

ಮರು ವರ್ಗೀಕರಿಸಿದ ಜೀವಸತ್ವಗಳ ಹೆಸರುಗಳ ಪಟ್ಟಿ
ಹಿಂದಿನ ಹೆಸರುರಾಸಾಯನಿಕ ಹೆಸರುಹೆಸರು ಬದಲಾವಣೆಗೆ ಕಾರಣ[೪೮]
ಜೀವಸತ್ವ B4ಅಡೆನೈನ್‌DNA ಚಯಾಪಚಯಜ
ಜೀವಸತ್ವ B8ಅಡೆನಿಲಿಕ್‌ ಆಮ್ಲDNA ಚಯಾಪಚಯಜ
ಜೀವಸತ್ವ Fಅಗತ್ಯವಾದ ಮೇದಸ್ಸಿನ ಆಮ್ಲಗಳುಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿವೆ (
ಜೀವಸತ್ವದ ವಿವರಣೆಗೆ ಪೂರಕವಾಗಿಲ್ಲ).
ಜೀವಸತ್ವ Gರಿಬೋಫ್ಲಾವಿನ್‌ಜೀವಸತ್ವ B2 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ Hಬಯೋಟಿನ್‌‌ಜೀವಸತ್ವ B7 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ Jಕ್ಯಾಟೆಕಾಲ್lಫ್ಲಾವಿನ್‌‌ಪ್ರೋಟೀನ್‌ ಚಯಾಪಚಯಜ
ಜೀವಸತ್ವ L1[೪೯]ಆಂಥ್ರಾನಿಲಿಕ್‌ ಆಮ್ಲಪ್ರೋಟೀನ್‌ ಚಯಾಪಚಯಜ
ಜೀವಸತ್ವ L2[೪೯]ಅಡೆನೈಲ್‌ಥಿಯೋಮೀಥೈಲ್‌ಪೆಂಟೋಸ್‌RNA ಪ್ರೋಟೀನ್‌ ಚಯಾಪಚಯಜ
ಜೀವಸತ್ವ Mಫಾಲಿಕ್ ಆಮ್ಲಜೀವಸತ್ವ B9 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ Oಕಾರ್ನಿಟಿನ್‌ಪ್ರೋಟೀನ್‌ ಚಯಾಪಚಯಜ
ಜೀವಸತ್ವ Pಫ್ಲಾವೊನೈಡ್‌ಗಳುಜೀವಸತ್ವವಲ್ಲವೆಂದು ನಿರ್ಧರಿಸಲಾಗಿದೆ
ಜೀವಸತ್ವ PPನಿಯಾಸಿನ್ಜೀವಸತ್ವ B3 ಎಂದು ಮರುವರ್ಗೀಕರಣಗೊಂಡಿದೆ
ಜೀವಸತ್ವ US-ಮೀಥೈಲ್‌ಮೆಥಿಯೋನೈನ್‌ಪ್ರೋಟೀನ್‌ ಚಯಾಪಚಯಜ
 

                                    

   ಆಧಾರ ;  

೧) ಜೀವಸತ್ವಗಳ ಮಹತ್ವ-ಸುಶೀಲಾ ಹಿರೇಗೌಡರ&ಮೀನಾಕ್ಷಿ ಕೇಸರಿ.

 ೨) ಜೀವಜಗತ್ತು-ವಿಶ್ವಕೋಶ. 

೩) ಕಾಲೇಜ್ ಬಾಟನಿ -ಬಿ ಪಿ ಪಾಂಡೆ 

  ೪) ಇಗ್ನೋ ಬಯಾಲಜಿ. 

೫) ಕರ್ನಾಟಕ ವಿಜ್ಞಾನ ಪಠ್ಯಗಳು.  

  ೬) ಜೀವಕ್ಕೆ ಬೇಕು ಜೀವಸತ್ವಗಳು-ಡಾ.ಉಮಾ,ಎಸ್ ಹಿರೇಮಠ 

೭) ಅಂತರ್ಜಾಲ ತಾಣಗಳು.

No comments:

Post a Comment