ಅಕ್ಟೋಬರ್ 2026ರ ಸಂಚಿಕೆ
ವಿಜ್ಞಾನ • ಸಮಾಜ • ಸಂವೇದನೆ
ವಿಜ್ಞಾನ • ಸಮಾಜ • ಸಂವೇದನೆ
ಪಾಪ!! ಗ್ರಹದ ಪಟ್ಟ ಕಳೆದುಕೊಂಡ ಪುಟ್ಟ ಪ್ಲೂಟೋ
ಸೌರವ್ಯೂಹದ ಕುಟುಂಬದಲ್ಲಿ
ಗ್ರಹಗಳೆಲ್ಲ ಒಂದೇ ರೀತಿಯವಲ್ಲ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ಗಳಂಥ
ದೈತ್ಯ ಗ್ರಹಗಳಿವೆ; ಭೂಮಿ, ಶುಕ್ರ, ಮಂಗಳ ಮತ್ತು ಬುಧದಂಥ ಶಿಲಾಮಯ ಗ್ರಹಗಳಿವೆ. ಆದರೆ ಇವುಗಳಿಗಿಂತ ಬಹಳ ದೂರದಲ್ಲಿ,
ಸೂರ್ಯನ ಬೆಳಕು ಮಂದವಾಗಿ ತಲುಪುವ ಹಿಮಾವೃತ ಪ್ರದೇಶದಲ್ಲಿ, ಒಂದು ಪುಟ್ಟ ಲೋಕ ಸದ್ದಿಲ್ಲದೆ ಸುತ್ತುತ್ತಿದೆ. ಅದೇ ಪ್ಲೂಟೋ.
ಒಂದು ಕಾಲದಲ್ಲಿ ನಮ್ಮ
ಪಠ್ಯಪುಸ್ತಕಗಳಲ್ಲಿ ಸೌರವ್ಯೂಹದ ಒಂಬತ್ತನೆಯ ಗ್ರಹವಾಗಿ ಸ್ಥಾನ ಪಡೆದಿದ್ದ ಪ್ಲೂಟೋ, 2006ರಲ್ಲಿ ಆ
ಸ್ಥಾನವನ್ನು ಕಳೆದುಕೊಂಡಿತು. ಅಂದಿನಿಂದ ವಿಜ್ಞಾನಾಸಕ್ತರ ನಡುವೆ ಒಂದು ಪ್ರಶ್ನೆ ಆಗಾಗ
ಕೇಳಿಬರುತ್ತದೆ: ಪ್ಲೂಟೋ ನಿಜವಾಗಿಯೂ ಗ್ರಹವಲ್ಲವೇ? ಅಥವಾ
ವಿಜ್ಞಾನಿಗಳು ಅದರ ಮೇಲಿದ್ದ ಗ್ರಹದ ಪಟ್ಟವನ್ನಷ್ಟೇ ತೆಗೆದುಹಾಕಿದರೇ? ಪ್ಲೂಟೋ ತನ್ನ
ಗ್ರಹ ಎಂಬ ಸ್ಥಾನಮಾನ ಕಳೆದುಕೊಂಡಾಗ ನಿಜಕ್ಕೂ ದುಃಖವಾಗಿತ್ತು. ಅದೆಂತ ಸಮಸ್ಯೆಯಪ್ಪಾ ಇದಕ್ಕೆ ?
ಅದೆಷ್ಟೋ ವರ್ಷಗಳವರೆಗೆ ಅದು ಗ್ರಹವೇ ಎಂದು ಹೇಳುತ್ತಿದ್ದೆವು.
ನಕ್ಷತ್ರಗಳು ಬಹುತೇಕ ಒಂದೇ
ಸ್ಥಾನದಲ್ಲಿರುವಂತೆ ಕಾಣಿಸಿದರೂ, ಸೌರವ್ಯೂಹದ ವಸ್ತುಗಳು ಹಿನ್ನೆಲೆ ನಕ್ಷತ್ರಗಳಿಗೆ ಹೋಲಿಸಿದರೆ
ಸ್ಥಾನ ಬದಲಾಯಿಸುತ್ತವೆ. ಹೀಗೆ ಸಾವಿರಾರು ಚಿತ್ರಗಳನ್ನು ಪರಿಶೀಲಿಸಿದ ನಂತರ, 1930ರ ಫೆಬ್ರವರಿ 18ರಂದು ಟಾಂಬಾಗ್ ಹೊಸ ಆಕಾಶಕಾಯವೊಂದನ್ನು
ಗುರುತಿಸಿದರು. ಅದರ ಆವಿಷ್ಕಾರವನ್ನು ಮಾರ್ಚ್ 13ರಂದು ಅಧಿಕೃತವಾಗಿ
ಪ್ರಕಟಿಸಲಾಯಿತು. ಆದರೆ ಈ ಆವಿಷ್ಕಾರದಲ್ಲಿ ಒಂದು ಸಣ್ಣ ವ್ಯಂಗ್ಯವಿದೆ. ಲೋವೆಲ್ ಊಹಿಸಿದ್ದ
ಗ್ರಹದ ಸ್ಥಾನವನ್ನು ಕಂಡುಹಿಡಿಯುವುದು ಒಂದು ಸಾಧನೆಯಾಗಿದ್ದರೂ, ನಂತರದ
ಅಧ್ಯಯನಗಳು ಪ್ಲೂಟೋ ಅಷ್ಟು ದೊಡ್ಡದಾದ ವಸ್ತುವಲ್ಲ ಎಂಬುದನ್ನು ತೋರಿಸಿದವು. ನೆಪ್ಚೂನ್‌ನ
ಚಲನೆಯಲ್ಲಿ ಕಂಡ ವ್ಯತ್ಯಾಸಗಳಿಗೆ ಪ್ಲೂಟೋ ಕಾರಣವೆಂಬ ಆರಂಭಿಕ ನಿರೀಕ್ಷೆಯೂ ಸರಿಯಾಗಿರಲಿಲ್ಲ.
ಹೊಸ ಗ್ರಹಕ್ಕೆ ಯಾವ ಹೆಸರು ಇಡಬೇಕು
ಎಂಬ ಪ್ರಶ್ನೆ ಎದುರಾದಾಗ,
ಪುರಾಣಗಳ ದೇವತೆಗಳ ಹೆಸರುಗಳನ್ನು ಪರಿಗಣಿಸಲಾಯಿತು. ಕೊನೆಗೆ Pluto ಎಂಬ ಹೆಸರು ಆಯ್ಕೆಯಾಯಿತು. ರೋಮನ್ ಪುರಾಣದಲ್ಲಿ ಪ್ಲೂಟೋ ಭೂಗತ ಲೋಕದ ದೇವತೆ. ಈ
ಹೆಸರನ್ನು ಸೂಚಿಸಿದವರು ವೆನೆಷಿಯಾ ಬರ್ನಿ ಎಂಬ 11 ವರ್ಷದ ಬ್ರಿಟಿಷ್
ಬಾಲಕಿ! ತನ್ನ ತಾತನೊಂದಿಗೆ ಈ ಹೊಸ ಆಕಾಶಕಾಯದ ಬಗ್ಗೆ ಮಾತನಾಡುತ್ತಿದ್ದಾಗ ಅವಳು ಪ್ಲೂಟೋ ಎಂಬ
ಹೆಸರನ್ನು ಸೂಚಿಸಿದಳು. ಅವಳ ತಾತ ಈ ಸಲಹೆಯನ್ನು ಖಗೋಳ ವಿಜ್ಞಾನಿಗಳಿಗೆ ತಲುಪಿಸಿದರು. ಹೆಸರು
ವಿಜ್ಞಾನಿಗಳಿಗೆ ಇಷ್ಟವಾಯಿತು; ಪ್ಲೂಟೋ ಅಧಿಕೃತವಾಗಿ ಆ ಹೆಸರನ್ನು
ಪಡೆದುಕೊಂಡಿತು. ಇದರಲ್ಲಿ ಮತ್ತೊಂದು ಕುತೂಹಲಕರ ವಿಚಾರವಿದೆ. Pluto
ಎಂಬ ಹೆಸರಿನ ಮೊದಲ ಎರಡು ಅಕ್ಷರಗಳು, ಪರ್ಸಿವಲ್
ಲೋವೆಲ್ ಅವರ ಹೆಸರಿನ ಮೊದಲಕ್ಷರಗಳೂ ಆಗಿವೆ. ಹೀಗಾಗಿ ಆ ಹೆಸರಿನಲ್ಲಿ ಲೋವೆಲ್ ಅವರ ನೆನಪೂ
ಉಳಿಯಿತು.
ಪ್ಲೂಟೋ ಸೂರ್ಯನಿಂದ ಸರಾಸರಿ ಸುಮಾರು 590 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಸೂರ್ಯನ ಬೆಳಕು ಭೂಮಿಗೆ ತಲುಪಲು ಸುಮಾರು ಎಂಟು ನಿಮಿಷ ಬೇಕಾದರೆ, ಪ್ಲೂಟೋಗೆ ತಲುಪಲು ಐದು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.ಪ್ಲೂಟೋ ಸೂರ್ಯನನ್ನು ಒಂದು ಸುತ್ತು ಸುತ್ತಲು ಭೂಮಿಯ ಸುಮಾರು 248 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ, ಪ್ಲೂಟೋ ಪತ್ತೆಯಾದ 1930ರಿಂದ ಅದು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಒಂದು ಪೂರ್ಣ ಸುತ್ತು ಸುತ್ತುವುದನ್ನು 2178ರ ವೇಳೆಗೆ ಮಾತ್ರ ಪೂರ್ಣಗೊಳಿಸುತ್ತದೆ! ಭೂಗ್ರಹದ ಜೀವಿಯೊಂದು ಫೋಟೋದಲ್ಲಿ ಒಂದು ದಿನವನ್ನು ಕಳೆದರೆ ಸುಮಾರು 250 ವರ್ಷಗಳ ಆಯಸ್ಸನ್ನು ಕಳೆದಂತೆ!!! ಮನುಷ್ಯನೊಬ್ಬ ಅಲ್ಲಿಗೆ ಹೋಗಿ ಒಂದು ವರ್ಷ ಕಳೆದು ಭೂಮಿಗೆ ಬಂದರೆ ಇಲ್ಲಿ ಅದೆಷ್ಟು ತಲೆಮಾರು ಸಾಗಿರುತ್ತವೋ???!!!! ಅದರ ಗಾತ್ರವೂ ನಿರೀಕ್ಷೆಗಿಂತ ಚಿಕ್ಕದು. ಪ್ಲೂಟೋನ ವ್ಯಾಸ ಸುಮಾರು 2,377 ಕಿಲೋಮೀಟರ್. ಇದು ಭೂಮಿಯ ಚಂದ್ರನಿಗಿಂತಲೂ ಚಿಕ್ಕದು. ಪ್ಲೂಟೋಗೆ ಚಾರನ್ ಸೇರಿದಂತೆ ಐದು ತಿಳಿದಿರುವ ನೈಸರ್ಗಿಕ ಉಪಗ್ರಹಗಳಿವೆ. ಅವುಗಳಲ್ಲಿ ಚಾರನ್ ದೊಡ್ಡದಾಗಿದ್ದು, ಪ್ಲೂಟೋಗೆ ಹೋಲಿಸಿದರೆ ಅದರ ಗಾತ್ರ ಗಮನಾರ್ಹವಾಗಿದೆ. ಇವೆರಡರ ನಡುವಿನ ಗುರುತ್ವಾಕರ್ಷಣೆಯ ಸಂಬಂಧವೂ ವಿಶೇಷವಾಗಿದೆ.
ಪ್ಲೂಟೋನ ಮೇಲ್ಮೈಯಲ್ಲಿ ನೈಟ್ರೋಜನ್, ಮೀಥೇನ್ ಮತ್ತು
ಕಾರ್ಬನ್ ಮಾನಾಕ್ಸೈಡ್‌ನ ಮಂಜುಗಡ್ಡೆಗಳಿವೆ. ಅಲ್ಲಿ ತಾಪಮಾನ ಸಾಮಾನ್ಯವಾಗಿ ಮೈನಸ್ 220ರಿಂದ ಮೈನಸ್ 240 ಡಿಗ್ರಿ ಸೆಲ್ಸಿಯಸ್‌ನ
ಆಸುಪಾಸಿನಲ್ಲಿರುತ್ತದೆ. ಭೂಮಿಯ ಮೇಲೆ ನೀರು ಮಂಜುಗಡ್ಡೆಯಾಗುವ ತಾಪಮಾನಕ್ಕಿಂತಲೂ ಇದು ಬಹಳ
ಕಡಿಮೆ.
2015ರಲ್ಲಿ ನಾಸಾದ New
Horizons ಬಾಹ್ಯಾಕಾಶ ನೌಕೆ ಪ್ಲೂಟೋವನ್ನು ಸಮೀಪದಿಂದ ಹಾದುಹೋಯಿತು. ಅದಕ್ಕೂ
ಮೊದಲು ಪ್ಲೂಟೋ ದೂರದರ್ಶಕಗಳಲ್ಲಿ ಅಸ್ಪಷ್ಟವಾದ ಚುಕ್ಕಿಯಂತೆ ಮಾತ್ರ ಕಾಣಿಸುತ್ತಿತ್ತು. ಆದರೆ
ನ್ಯೂ ಹರೈಸನ್ಸ್ ಕಳುಹಿಸಿದ ಚಿತ್ರಗಳು ವಿಜ್ಞಾನಿಗಳನ್ನೂ ಸಾರ್ವಜನಿಕರನ್ನೂ ಬೆರಗುಗೊಳಿಸಿದವು.
ಪ್ಲೂಟೋನ ಮೇಲ್ಮೈಯಲ್ಲಿ ಹೃದಯದ ಆಕಾರದಂತೆ ಕಾಣುವ ವಿಶಾಲ ಪ್ರದೇಶವಿದೆ. ಇದನ್ನು Tombaugh Regio ಎಂದು ಕರೆಯಲಾಗುತ್ತದೆ. ಪ್ಲೂಟೋವನ್ನು ಕಂಡುಹಿಡಿದ ಕ್ಲೈಡ್ ಟಾಂಬಾಗ್ ಅವರ ಗೌರವಾರ್ಥ ಈ ಹೆಸರು ಇಡಲಾಗಿದೆ. ಈ ಪ್ರದೇಶದ ಒಂದು ಭಾಗವಾದ ಸ್ಪುಟ್ನಿಕ್ ಪ್ಲಾನಿಟಿಯಾ, ನೈಟ್ರೋಜನ್ ಮಂಜುಗಡ್ಡೆಯಿಂದ ಆವೃತವಾಗಿದೆ. ಇದನ್ನು ನೋಡಿದಾಗ ಪ್ಲೂಟೋ ತನ್ನ ಎದೆಯ ಮೇಲೆ ಹೃದಯದ ಗುರುತನ್ನು ಧರಿಸಿದ ಪುಟ್ಟ ಲೋಕದಂತೆ ಕಾಣುತ್ತದೆ. ಆದರೆ ಆ ಹೃದಯದ ಆಕಾರದ ಹಿಂದೆ ಹಿಮದ ಹರಿವು, ಮೇಲ್ಮೈಯ ಭೂವೈಜ್ಞಾನಿಕ ಚಟುವಟಿಕೆ ಮತ್ತು ವಾತಾವರಣದ ಬದಲಾವಣೆಗಳಂಥ ಸಂಕೀರ್ಣ ಪ್ರಕ್ರಿಯೆಗಳಿವೆ.
ಪ್ಲೂಟೋ ಸಂಪೂರ್ಣವಾಗಿ ಸತ್ತ, ಚಟುವಟಿಕೆಯಿಲ್ಲದ
ಹಿಮದ ಉಂಡೆಯಲ್ಲ ಎಂಬುದಕ್ಕೂ ನ್ಯೂ ಹೊರೈಸನ್ಸ್‌ನ ವೀಕ್ಷಣೆಗಳು ಸಾಕ್ಷ್ಯ ನೀಡಿವೆ. ಅದರ
ಮೇಲ್ಮೈಯಲ್ಲಿ ಪರ್ವತಗಳು, ಬಯಲು ಪ್ರದೇಶಗಳು ಮತ್ತು ವಿಭಿನ್ನ
ಭೂವೈಜ್ಞಾನಿಕ ಲಕ್ಷಣಗಳು ಕಂಡುಬಂದಿವೆ. ಅದರ ಒಳಭಾಗದಲ್ಲಿ ದ್ರವ ನೀರಿನ ಸಾಗರವಿರಬಹುದೆಂಬ
ಸಾಧ್ಯತೆಯನ್ನೂ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ; ಆದರೆ
ಅದನ್ನು ಇನ್ನೂ ನೇರವಾಗಿ ದೃಢಪಡಿಸಲಾಗಿಲ್ಲ.
2006ರಲ್ಲಿ ಅಂತರಾಷ್ಟ್ರೀಯ ಖಗೋಳ ಒಕ್ಕೂಟವು ಗ್ರಹಕ್ಕೆ ಮೂರು ಪ್ರಮುಖ ಮಾನದಂಡಗಳನ್ನು ನಿಗದಿಪಡಿಸಿತು.
ಒಂದು ಆಕಾಶಕಾಯವು ಸೂರ್ಯನನ್ನು ಸುತ್ತಬೇಕು; ತನ್ನ
ಗುರುತ್ವಾಕರ್ಷಣೆಯಿಂದ ಬಹುತೇಕ ಗೋಳಾಕಾರವನ್ನು ಪಡೆದಿರಬೇಕು; ಮತ್ತು
ತನ್ನ ಕಕ್ಷೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುತ್ವಾಕರ್ಷಣೆಯ ದೃಷ್ಟಿಯಿಂದ ಪ್ರಾಬಲ್ಯ
ಸಾಧಿಸಿರಬೇಕು.
ಪ್ಲೂಟೋ ಮೊದಲ ಎರಡು ಮಾನದಂಡಗಳನ್ನು
ಪೂರೈಸುತ್ತದೆ. ಆದರೆ ತನ್ನ ಕಕ್ಷೆಯ ಸುತ್ತಮುತ್ತಲಿನ ಇತರ ವಸ್ತುಗಳನ್ನು ತೆರವುಗೊಳಿಸಿ
ಪ್ರಾಬಲ್ಯ ಸಾಧಿಸಿಲ್ಲ. ಅದು ನೆಪ್ಚೂನ್ ಆಚೆಯ ಕೈಪರ್ ಪಟ್ಟಿಯಲ್ಲಿರುವ ಅನೇಕ ಹಿಮಾವೃತ
ವಸ್ತುಗಳೊಂದಿಗೆ ತನ್ನ ಪ್ರದೇಶವನ್ನು ಹಂಚಿಕೊಂಡಿದೆ. ಹೀಗಾಗಿ ಅದನ್ನು ಕುಬ್ಜ ಗ್ರಹ ಎಂದು
ವರ್ಗೀಕರಿಸಲಾಯಿತು.
ಪ್ಲೂಟೋನ ಗಾತ್ರ ಕಡಿಮೆಯಾಗಲಿಲ್ಲ; ಅದರ ಮೇಲ್ಮೈ ಬದಲಾಗಲಿಲ್ಲ; ಅದರ ಸೂರ್ಯನ ಸುತ್ತಲಿನ ಪ್ರಯಾಣವೂ ನಿಲ್ಲಲಿಲ್ಲ. ಬದಲಾದದ್ದು ನಮ್ಮ ವೈಜ್ಞಾನಿಕ ವರ್ಗೀಕರಣ ಮಾತ್ರ! ಹಾಗೆ ನೋಡಿದರೆ, ಪ್ಲೂಟೋಗೆ ಗ್ರಹದ ಪಟ್ಟ ಹೋದರೂ ಅದರ ವೈಜ್ಞಾನಿಕ ಮಹತ್ವ ಕಡಿಮೆಯಾಗಿಲ್ಲ. ಬದಲಾಗಿ, ಅದು ಸೌರವ್ಯೂಹದ ಹೊರವಲಯವನ್ನು ಅರ್ಥಮಾಡಿಕೊಳ್ಳಲು ನಮಗೆ ಹೊಸ ಕಿಟಕಿಯನ್ನು ತೆರೆದಿದೆ. ಹೀಗೆ ವೈಜ್ಞಾನಿಕ ಲೋಕದ ಅಧ್ಯಯನದ ಯಾತ್ರೆ ಮುಂದುವರಿಯುತ್ತಲೇ ಇದೆ. ಕಳೆದುಕೊಂಡಲ್ಲೇ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಅಂದರೆ ಇದೆ ಅಲ್ಲವೇ?
ನೆಪ್ಚೂನ್ ಆಚೆ ಪ್ಲೂಟೋನಂಥ ಇನ್ನೂ ಅನೇಕ ಆಕಾಶಕಾಯಗಳಿವೆ . ಅವುಗಳಲ್ಲಿ ಕೆಲವು ಬಹಳ ದೊಡ್ಡವು.
ಅವುಗಳ ಚಲನೆಯಲ್ಲಿನ ಕೆಲವು ಕುತೂಹಲಕಾರಿ ಮಾದರಿಗಳು ವಿಜ್ಞಾನಿಗಳಲ್ಲಿ ಮತ್ತೊಂದಿಷ್ಟು ಕುತೂಹಲಕರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸೌರವ್ಯೂಹದ ಅಂಚಿನಲ್ಲಿ ನಮಗೆ ಇನ್ನೂ ಕಾಣದಿರುವ ಒಂದು ದೊಡ್ಡ ಗ್ರಹ ಅಡಗಿದೆಯೇ?
ಇದಕ್ಕೆ ಉತ್ತರ ಕಾಲ ಗರ್ಭದಲ್ಲಿ ಅಡಗಿದೆ. ಮಾನವನ ನಿರಂತರ ಕುತೂಹಲ ಪ್ರವೃತ್ತಿ ಮುಂದುವರಿದಂತೆ ಇನ್ನೊಂದಷ್ಟು ಸಂಶೋಧನಾ ಉಪಕರಣಗಳು ಆವಿಷ್ಕರಿಸುತ್ತಾ ಹೋದಂತೆ, ತಂತ್ರಜ್ಞಾನದ ಸಹಕಾರದೊಂದಿಗೆ ಅಧ್ಯಯನಗಳು ಖಂಡಿತಾ ಹೊಸದನ್ನು ತೋರಿಸಿಯೇ ತೋರಿಸಿಯಾವು.
ಮುಂದಿನ ಭಾಗದಲ್ಲಿ: ನೆಪ್ಚೂನ್
ಆಚೆಗಿನ ರಹಸ್ಯ — ಪ್ಲಾನೆಟ್ ನೈನ್‌ನ ಹುಡುಕಾಟ.
ಪತ್ರ ರಂಧ್ರಗಳು ಎಂಬ ಸಸ್ಯಗಳ ಜೀವನಾಡಿಗಳು
ಲೇಖಕರು : ಶಶಿಕುಮಾರ್ ಬಿ. ಎಸ್.
ಗ್ರೀಕ್ ಭಾಷೆಯಲ್ಲಿ "Stoma" ಎಂದರೆ "ಬಾಯಿ" ಎಂದರ್ಥ. ಸಸ್ಯಗಳು ತಮ್ಮ ಸುತ್ತಮುತ್ತಲಿನ
ವಾತಾವರಣದೊಂದಿಗೆ ಮಾತನಾಡುವ, ಉಸಿರಾಡುವ ಮತ್ತು
ವ್ಯವಹಾರ ನಡೆಸುವ ಬಾಯಿಗಳೇ ಈ ಪತ್ರ ರಂಧ್ರಗಳು. ಒಂದು ಚದರ ಸೆಂಟಿಮೀಟರ್ ಎಲೆಯಲ್ಲಿ ಸುಮಾರು 1000 ರಿಂದ 60,000 ಸ್ಟೊಮೇಟಾಗಳವರೆಗೆ
ಇರಬಹುದು. ಇವುಗಳಿಲ್ಲದೆ ಸಸ್ಯದ ಜೀವನವೇ ಅಸಾಧ್ಯ.
ಪತ್ರ ರಂಧ್ರಗಳ ರಚನೆ : ಪತ್ರ ರಂಧ್ರವು ಒಂಟಿಯಾಗಿರುವ ರಂಧ್ರವಲ್ಲ. ಇದು ಒಂದು ಸಂಪೂರ್ಣ ಘಟಕ.
ರಂಧ್ರ ಅಥವಾ Ostiole: ಇದು ಎರಡು ಕೋಶಗಳ ನಡುವಿನ ಸಣ್ಣ ತೆರಪು. ಇದರ ಮೂಲಕವೇ ಅನಿಲಗಳ
ವಿನಿಮಯ ನಡೆಯುತ್ತದೆ.
ಕಾವಲು ಕೋಶಗಳು Guard Cells: ರಂಧ್ರದ ಎರಡೂ ಬದಿಯಲ್ಲಿ ಮೂತ್ರಪಿಂಡದ ಆಕಾರದಲ್ಲಿರುವ 2 ವಿಶೇಷ ಜೀವಕೋಶಗಳು ಇರುತ್ತವೆ. ಇವೇ ರಂಧ್ರವನ್ನು ತೆರೆದು ಮುಚ್ಚುವ
ಕೆಲಸ ಮಾಡುತ್ತವೆ. ಈ ಕೋಶಗಳ ಒಳಗಿನ ಗೋಡೆ ದಪ್ಪವಾಗಿರುತ್ತದೆ ಮತ್ತು ಹೊರಗಿನ ಗೋಡೆ
ತೆಳುವಾಗಿರುತ್ತದೆ. ಕ್ಲೋರೋಪ್ಲಾಸ್ಟ್‌ಗಳನ್ನು ಹೊಂದಿರುವುದರಿಂದ ಇವು ದ್ಯುತಿಸಂಶ್ಲೇಷಣೆ ಕೂಡ
ಮಾಡಬಲ್ಲವು.
ಸಹಾಯಕ ಕೋಶಗಳು Subsidiary
Cells: ಕೆಲವು ಸಸ್ಯಗಳಲ್ಲಿ ಕಾವಲು ಕೋಶಗಳ
ಸುತ್ತಲೂ 3-4 ಸಹಾಯಕ ಕೋಶಗಳು ಇರುತ್ತವೆ. ಇವು ಕಾವಲು ಕೋಶಗಳಿಗೆ ನೀರು ಮತ್ತು
ಪೋಷಕಾಂಶ ಒದಗಿಸಲು ಸಹಾಯ ಮಾಡುತ್ತವೆ.
ಕಾವಲು ಕೋಶಗಳು ಊದಿಕೊಂಡಾಗ ರಂಧ್ರ
ತೆರೆಯುತ್ತದೆ. ತೆಳುವಾದಾಗ ಮುಚ್ಚುತ್ತದೆ. ಈ ತೆರೆಯುವ-ಮುಚ್ಚುವ ಪ್ರಕ್ರಿಯೆಯೇ ಸಸ್ಯದ ಬದುಕಿನ
ಕೀಲಿಕೈ.
ಒಮ್ಮೆ ಶಿಕ್ಷಕರ ಪ್ರಾಯೋಗಿಕ ತರಬೇತಿ ಕಾರ್ಯಾಗಾರದಲ್ಲಿ ಸೂಕ್ಷ್ಮದರ್ಶಕದ ಮೂಲಕ ಪತ್ರ ರಂಧ್ರಗಳನ್ನು ವೀಕ್ಷಿಸುವ ಚಟುವಟಿಕೆಯನ್ನು ನಡೆಸಿದವು ಆ ಸಂದರ್ಭದಲ್ಲಿ ಮೊಬೈಲ್ ನಿಂದ ಪಡೆದಂತಹ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ ನೀವೂ ನಿಮ್ಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಯನ್ನು ನಡೆಸಿ ಮೊಬೈಲ್ ಮೂಲಕ ಪಡೆದುಕೊಂಡ ಚಿತ್ರಗಳನ್ನು ಗುಂಪಿನಲ್ಲಿ ಹಂಚಿಕೊಳ್ಳಿ ಇದರಿಂದ ವಿದ್ಯಾರ್ಥಿಗಳು ತುಂಬಾ ಸಂತೋಷ ಪಡುವುದರ ಜೊತೆಗೆ ಪುನರ್ಮನನಕ್ಕೆ ಸಹಾಯಕವಾದೀತು.
ಚಿತ್ರದಲ್ಲಿ ಕಾವಲು ಕೋಶಗಳಲ್ಲಿರುವ ಕ್ಲೋರೊಪ್ಲಾಸ್ಟ್ ಗಳನ್ನು ಗಮನಿಸಿ. ಇವು ಸಸ್ಯಗಳಿಗೆ ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಸಹಾಯಕವಾಗಿವೆ.
ಪತ್ರ ರಂಧ್ರಗಳ ವಿಧಗಳು
ಎಲೆಯ ಯಾವ ಭಾಗದಲ್ಲಿ ರಂಧ್ರಗಳು ಇವೆ
ಎಂಬುದರ ಆಧಾರದ ಮೇಲೆ 4 ಮುಖ್ಯ ವಿಧಗಳಿವೆ:
ಕೆಳ ಪತ್ರರಂಧ್ರಗಳು (Hypostomatic): ಬಹಳಷ್ಟು ದ್ವಿದಳ ಸಸ್ಯಗಳ ಎಲೆಗಳ ಕೆಳಭಾಗದಲ್ಲಿ ಮಾತ್ರ ರಂಧ್ರಗಳು ಇರುತ್ತವೆ. ಉದಾ: ಮಾವು, ಜೋಳ. ಇದು ನೀರಿನ ಆವಿಯಾಗುವಿಕೆಯನ್ನು ಕಡಿಮೆ ಮಾಡಲು ಸಹಾಯ
ಮಾಡುತ್ತದೆ.
2. ಮೇಲಿನ ಪತ್ರರಂಧ್ರಗಳು (Epistomatic) : ಜಲಸಸ್ಯಗಳು ಮತ್ತು ಏಕದಳ ಸಸ್ಯಗಳ ಎಲೆಗಳ ಮೇಲ್ಭಾಗದಲ್ಲಿ ಮಾತ್ರ ರಂಧ್ರಗಳು ಇರುತ್ತವೆ.
ಉದಾ: ಭತ್ತ, ಜಲಕುಮುದಿನಿ.
3. ಉಭಯ ಪತ್ರರಂಧ್ರಗಳು (Amphistomatic) : ಎಲೆಗಳ ಎರಡೂ ಬದಿಗಳಲ್ಲೂ ರಂಧ್ರಗಳು ಇರುತ್ತವೆ. ಉದಾ: ಸೂರ್ಯಕಾಂತಿ, ಆಲೂಗೆಡ್ಡೆ.
4. ಪತ್ರರಂಧ್ರ ರಹಿತ (Astomatic) : ಕೆಲವು ಜಲಸಸ್ಯಗಳಲ್ಲಿ ರಂಧ್ರಗಳೇ ಇರುವುದಿಲ್ಲ. ಉದಾ: ವಾಲಿಸ್ನೇರಿಯಾ. ಇವು ನೀರಿನಿಂದಲೇ
ನೇರವಾಗಿ ಅನಿಲಗಳನ್ನು ಹೀರಿಕೊಳ್ಳುತ್ತವೆ.
ಇದಲ್ಲದೆ, ಕಾವಲು ಕೋಶಗಳ ಜೋಡಣೆ ಆಧಾರದ ಮೇಲೆ Anomocytic,
Anisocytic, Paracytic, Diacytic ಎಂದು ಇನ್ನೂ 4 ವಿಧಗಳಿವೆ.
ಪತ್ರ ರಂಧ್ರಗಳ ಪ್ರಮುಖ ಕಾರ್ಯಗಳು
ಪತ್ರ ರಂಧ್ರಗಳು ಸಸ್ಯದ ದೇಹದಲ್ಲಿನ
"ಗೇಟ್ ಕೀಪರ್"ಗಳಿದ್ದಂತೆ. ಇವುಗಳ 4 ಮುಖ್ಯ ಕಾರ್ಯಗಳು:
ಅ. ಅನಿಲ ವಿನಿಮಯ Gas Exchange -
ಇದು ಅತ್ಯಂತ ಮುಖ್ಯ ಕಾರ್ಯ.
- ದ್ಯುತಿಸಂಶ್ಲೇಷಣೆಗಾಗಿ CO2 ಒಳಗೆ: ಸಸ್ಯಗಳು ಆಹಾರ ತಯಾರಿಸಲು CO2 ಬೇಕು. ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್ ರಂಧ್ರಗಳ ಮೂಲಕ ಎಲೆಯ
ಒಳಗಿರುವ ಮೆಸೊಫಿಲ್ ಕೋಶಗಳಿಗೆ ಹೋಗುತ್ತದೆ.
- O2 ಮತ್ತು ನೀರಿನ ಆವಿ
ಹೊರಗೆ: ದ್ಯುತಿಸಂಶ್ಲೇಷಣೆಯ ಉಪಉತ್ಪನ್ನವಾದ ಆಕ್ಸಿಜನ್ ಮತ್ತು ಉಸಿರಾಟದಲ್ಲಿ ಉತ್ಪತ್ತಿಯಾಗುವ CO2 ಇವುಗಳ ಮೂಲಕ ಹೊರಹೋಗುತ್ತವೆ.
ಸಸ್ಯವು ತಿನ್ನುವುದು ಮತ್ತು
ಉಸಿರಾಡುವುದು ಎರಡೂ ಈ ಒಂದೇ ರಂಧ್ರದ ಮೂಲಕ ನಡೆಯುತ್ತದೆ.
ಆ. ಬಾಷ್ಪವಿಸರ್ಜನೆ Transpiration
: ಎಲೆಯ ಒಳಗಿರುವ ನೀರು ರಂಧ್ರಗಳ ಮೂಲಕ ಆವಿಯಾಗಿ
ಹೊರಹೋಗುವುದೇ ಬಾಷ್ಪವಿಸರ್ಜನೆ . ಇದು 3 ಕಾರಣಗಳಿಗೆ ಮುಖ್ಯ:
1. ತಂಪಾಗಿಸುವುದು: ಬೇಸಿಗೆಯಲ್ಲಿ ನಮಗೆ
ಬೆವರುವಂತೆ, ಸಸ್ಯಕ್ಕೆ ಇದು ತಂಪು ನೀಡುತ್ತದೆ.
2. ನೀರಿನ ಹೀರುವಿಕೆ: ಬೇರುಗಳಿಂದ ನೀರು
ಎಲೆಯ ತುದಿಯವರೆಗೆ ಹೋಗಲು "ಎಳೆತ" ಸೃಷ್ಟಿಸುತ್ತದೆ. ಇದನ್ನು Transpiration
pull ಎನ್ನುತ್ತಾರೆ.
3. ಖನಿಜಗಳ ಸಾಗಣೆ: ನೀರಿನ ಜೊತೆಗೆ
ಬೇರಿನಿಂದ ಹೀರಿದ ಖನಿಜ ಲವಣಗಳು ಇಡೀ ಸಸ್ಯಕ್ಕೆ ತಲುಪುತ್ತವೆ.
ಇ. ನೀರಿನ ಸಮತೋಲನ : ಕಾವಲು ಕೋಶಗಳು ನೀರಿನ ಲಭ್ಯತೆಗೆ ಅನುಗುಣವಾಗಿ ರಂಧ್ರವನ್ನು ತೆರೆದು
ಮುಚ್ಚುತ್ತವೆ. ಬಿಸಿಲು ಜಾಸ್ತಿಯಾದಾಗ, ನೀರಿನ ಕೊರತೆಯಾದಾಗ ರಂಧ್ರ ಮುಚ್ಚಿ ನೀರಿನ ನಷ್ಟವನ್ನು ತಡೆಯುತ್ತದೆ. ಇದು ಸಸ್ಯದ
ಬದುಕುಳಿಯುವ ತಂತ್ರ.
ಈ. ಇತರೆ ಅನಿಲಗಳ ವಿನಿಮಯ : ಪರಿಸರದಲ್ಲಿರುವ ಸಲ್ಫರ್ ಡೈಆಕ್ಸೈಡ್, ಓಝೋನ್ ನಂತಹ ಮಾಲಿನ್ಯಕಾರಕ ಅನಿಲಗಳು ಕೂಡ ರಂಧ್ರಗಳ ಮೂಲಕ
ಒಳಹೋಗುತ್ತವೆ. ಆದ್ದರಿಂದ ಸಸ್ಯಗಳು ವಾಯು ಮಾಲಿನ್ಯದ ಸೂಚಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ.
ಪತ್ರ ರಂಧ್ರಗಳ ತೆರೆಯುವಿಕೆ ಮತ್ತು
ಮುಚ್ಚುವಿಕೆಯ ಕ್ರಿಯಾವಿಧಾನ
ಇದು ಬಹಳ ಸಂಕೀರ್ಣವಾದ ಜೈವಿಕ ರಸಾಯನ
ಪ್ರಕ್ರಿಯೆ. ಸರಳವಾಗಿ ಹೀಗೆ ಅರ್ಥ ಮಾಡಿಕೊಳ್ಳಬಹುದು:
ಪತ್ರರಂಧ್ರ ತೆರೆಯುವುದು ಹೇಗೆ?
ಸೂರ್ಯೋದಯವಾದಾಗ ಕಾವಲು ಕೋಶಗಳಲ್ಲಿ
ದ್ಯುತಿಸಂಶ್ಲೇಷಣೆ ಆರಂಭವಾಗುತ್ತದೆ. CO2 ಬಳಕೆಯಾಗುವುದರಿಂದ ಕೋಶದ ಒಳಗೆ pH ಹೆಚ್ಚುತ್ತದೆ.
ಇದರಿಂದ K+
ಅಯಾನುಗಳು ಮತ್ತು Cl- ಅಯಾನುಗಳು ಕಾವಲು ಕೋಶಗಳ ಒಳಗೆ ಹೋಗುತ್ತವೆ. ಇದರಿಂದ ಅಭಿಸರಣಾ (ಆಸ್ಮೋಟಿಕ್) ಒತ್ತಡ ಹೆಚ್ಚಿ, ನೀರು ಒಳಹೋಗುತ್ತದೆ. ಕೋಶಗಳು ಉಬ್ಬಿ, ಬಾಗಿದ ಆಕಾರ ಪಡೆದು ರಂಧ್ರ ತೆರೆಯುತ್ತದೆ.
ಸಂಜೆತ್ತಲಾಗುತ್ತಿದ್ದಂತೆ
ಈ ರಂಧ್ರ ಮುಚ್ಚುವುದು ಹೇಗೆ?
ಬೆಳಕು ಕಡಿಮೆಯಾದಾಗ, ABA ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು K+ ಅಯಾನುಗಳನ್ನು ಹೊರಹಾಕುತ್ತದೆ. ನೀರು ಹೊರಹೋಗಿ ಕೋಶಗಳು ಕುಗ್ಗಿ ಚಪ್ಪಟೆಯಾಗಿ ರಂಧ್ರ ಮುಚ್ಚುತ್ತದೆ. ಈ ಪ್ರಕ್ರಿಯೆಯ ಮೇಲೆ ಬೆಳಕು, CO2 ಪ್ರಮಾಣ, ತಾಪಮಾನ, ಗಾಳಿಯ ತೇವಾಂಶ ಮತ್ತು ನೀರಿನ ಲಭ್ಯತೆ ನೇರವಾಗಿ ಪ್ರಭಾವ ಬೀರುತ್ತವೆ.
ಪರಿಸರ ಮತ್ತು ಪತ್ರ ರಂಧ್ರಗಳ ಸಂಬಂಧ
ಬಿಸಿಲು ಮತ್ತು ತಾಪಮಾನ: ಹೆಚ್ಚಿನ ಬೆಳಕು
ಮತ್ತು ಸೂಕ್ತ ತಾಪಮಾನದಲ್ಲಿ ರಂಧ್ರಗಳು ಹೆಚ್ಚು ತೆರೆದುಕೊಳ್ಳುತ್ತವೆ. 30-35°C ಅತ್ಯುತ್ತಮ.
ನೀರಿನ ಕೊರತೆ: ಬರಗಾಲದಲ್ಲಿ ABA ಹಾರ್ಮೋನ್ ಹೆಚ್ಚಿ ರಂಧ್ರಗಳು ಮುಚ್ಚುತ್ತವೆ. ಇದರಿಂದ ಸಸ್ಯಗಳು
ಬದುಕುಳಿಯುತ್ತವೆ. ಆದರೆ ದ್ಯುತಿಸಂಶ್ಲೇಷಣೆ ಕೂಡ ಕಡಿಮೆಯಾಗುತ್ತದೆ.
CO2 ಪ್ರಮಾಣ:
ವಾತಾವರಣದಲ್ಲಿ CO2 ಹೆಚ್ಚಿದರೆ
ಸಸ್ಯಗಳು ರಂಧ್ರವನ್ನು ಸ್ವಲ್ಪ ಮುಚ್ಚಿಕೊಳ್ಳುತ್ತವೆ. ಏಕೆಂದರೆ ಕಡಿಮೆ ಸಮಯದಲ್ಲಿ ಬೇಕಾದಷ್ಟು ಸಿಗುತ್ತದೆ. ಇದರಿಂದ ನೀರಿನ ನಷ್ಟ ಕಡಿಮೆಯಾಗುತ್ತದೆ. ಜಾಗತಿಕ
ತಾಪಮಾನದ ಅಧ್ಯಯನದಲ್ಲಿ ಇದು ಮುಖ್ಯ ಅಂಶ.
ಗಾಳಿ: ಗಟ್ಟಿಯಾದ ಗಾಳಿ ಇದ್ದಾಗ
ಬಾಷ್ಪೋತ್ಸರ್ಜನೆ ವೇಗವಾಗಿ ನಡೆದು ರಂಧ್ರಗಳು ಬೇಗ ಮುಚ್ಚುತ್ತವೆ.
ಪತ್ರ ರಂಧ್ರಗಳ ಕೃಷಿ ಮತ್ತು
ವಿಜ್ಞಾನದಲ್ಲಿನ ಮಹತ್ವ :
ಬೆಳೆ ಇಳುವರಿ: ಯಾವ ಸಸ್ಯದಲ್ಲಿ ಎಷ್ಟು
ರಂಧ್ರಗಳಿವೆ ಮತ್ತು ಅವು ಎಷ್ಟು ಸಮರ್ಥವಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ಬೆಳೆಯ ಇಳುವರಿ
ಅವಲಂಬಿತವಾಗಿರುತ್ತದೆ. ವಿಜ್ಞಾನಿಗಳು ಈಗ "ಜಲದಕ್ಷ" ತಳಿಗಳನ್ನು
ಅಭಿವೃದ್ಧಿಪಡಿಸುತ್ತಿದ್ದಾರೆ. ಇವು ಕಡಿಮೆ ನೀರಿನಲ್ಲಿ ಹೆಚ್ಚು ಆಹಾರ ತಯಾರಿಸುತ್ತವೆ.
ಬರ ನಿರೋಧಕ ತಳಿಗಳು: ABA ಹಾರ್ಮೋನ್‌ಗೆ ಹೆಚ್ಚು ಪ್ರತಿಕ್ರಿಯಿಸುವ ಕಾವಲು ಕೋಶಗಳನ್ನು
ಹೊಂದಿರುವ ತಳಿಗಳು ಬರವನ್ನು ತಡೆದುಕೊಳ್ಳುತ್ತವೆ.
ವಾಯು ಮಾಲಿನ್ಯ ಅಧ್ಯಯನ: ರಸ್ತೆ ಬದಿಯ
ಮರಗಳ ಎಲೆಗಳಲ್ಲಿನ ರಂಧ್ರಗಳು ಮುಚ್ಚಿಕೊಂಡಿದ್ದರೆ, ಆ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಿದೆ ಎಂದು ಅರ್ಥ.
ಸೂಕ್ಷ್ಮದರ್ಶಕದ ಅಧ್ಯಯನ:
ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಟ್ರೇಡಿಸ್ಕಾಂಟಿಯ ಎಲೆಯನ್ನು ತೆಗೆದುಕೊಂಡು ರಂಧ್ರಗಳ
ಚಲನೆಯನ್ನು ನೇರವಾಗಿ ನೋಡಬಹುದು. ಇದು ಜೀವಶಾಸ್ತ್ರದ ಅತ್ಯಂತ ಸುಂದರ ಪ್ರಯೋಗಗಳಲ್ಲಿ ಒಂದು.
ಪತ್ರ ರಂಧ್ರಗಳು ಮತ್ತು ಮನುಷ್ಯ :
ನಾವು ಉಸಿರಾಡುವ ಪ್ರತಿ 5 ಆಕ್ಸಿಜನ್ ಅಣುಗಳಲ್ಲಿ 4 ಅಣುಗಳು ಸಸ್ಯಗಳಿಂದ ಬಂದಂತವು
ಮತ್ತು ಆ ಸಸ್ಯಗಳು ಆಕ್ಸಿಜನ್‌ವನ್ನು ಬಿಡಲು ಬಳಸಿದ್ದು ಈ ಪುಟ್ಟ ರಂಧ್ರಗಳನ್ನೇ. ಹವಾಮಾನ
ಬದಲಾವಣೆಯ ಸಂದರ್ಭದಲ್ಲಿ ಸಸ್ಯಗಳು ವಾತಾವರಣದಿಂದ CO2 ಅನ್ನು ಹೀರಿಕೊಂಡು ಸಂಗ್ರಹಿಸುತ್ತವೆ. ಈ ಪ್ರಕ್ರಿಯೆಯ ಸಂಪೂರ್ಣ ಹೊಣೆಗಾರಿಕೆ ಪತ್ರ
ರಂಧ್ರಗಳ ಮೇಲಿದೆ. ಆದ್ದರಿಂದ ಮರಗಳನ್ನು ಕಡಿಯುವುದು ಎಂದರೆ ಭೂಮಿಯ ಶ್ವಾಸಕೋಶದಲ್ಲಿರುವ
ರಂಧ್ರಗಳನ್ನು ಮುಚ್ಚಿದಂತೆ.
ಪತ್ರ ರಂಧ್ರಗಳು ಗಾತ್ರದಲ್ಲಿ ಬಹಳ
ಚಿಕ್ಕವು. ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಇವುಗಳ ಮಹತ್ವ ಅಗಾಧ. ಸಸ್ಯದ ಆಹಾರ, ನೀರು, ಉಸಿರು, ತಾಪಮಾನ ಎಲ್ಲವೂ ಇವುಗಳ ಮೇಲೆ ಅವಲಂಬಿತವಾಗಿದೆ. ಪ್ರಕೃತಿಯು ಎಷ್ಟು ಚಾಣಾಕ್ಷವಾಗಿ ವಿನ್ಯಾಸ ಮಾಡಿದೆ ಎಂದರೆ, ನೀರನ್ನು ಉಳಿಸಿಕೊಳ್ಳುತ್ತಲೇ ಆಹಾರ ತಯಾರಿಸುವ ಮತ್ತು ಅನಿಲ ವಿನಿಮಯ
ಮಾಡುವ ವ್ಯವಸ್ಥೆಯನ್ನು ಒಂದೇ ರಚನೆಯಲ್ಲಿ ಇಟ್ಟಿದೆ. "ಚಿಕ್ಕದರಲ್ಲಿ ದೊಡ್ಡ ರಹಸ್ಯವಿದೆ" ಎಂಬ ಮಾತಿಗೆ ಪತ್ರ ರಂಧ್ರಗಳೇ ಸಾಕ್ಷಿ. ನಾವು ಮರದ
ಎಲೆಯನ್ನು ಮುಟ್ಟಿದಾಗ, ನಮಗೆ ಗೊತ್ತಿಲ್ಲದೆಯೇ
ಲಕ್ಷಾಂತರ ರಂಧ್ರಗಳು ತೆರೆದು ಮುಚ್ಚಿ ಭೂಮಿಯ ಉಸಿರನ್ನು ನಡೆಸುತ್ತಿರುತ್ತವೆ. ಆದ್ದರಿಂದ
ಮುಂದಿನ ಬಾರಿ ನೀವು ಒಂದು ಎಲೆಯನ್ನು ನೋಡಿದಾಗ, ಅದರ ಮೇಲೆ ಕಾಣದ ಲಕ್ಷಾಂತರ ರಂಧ್ರಗಳು" ಜೀವನಕ್ಕಾಗಿ ಹೋರಾಡುತ್ತಿವೆ ಎಂದು ನೆನಪಿಡಿ.
ಅವುಗಳನ್ನು ರಕ್ಷಿಸುವುದು ಎಂದರೆ ನಮ್ಮ ಭವಿಷ್ಯವನ್ನು ರಕ್ಷಿಸಿದಂತೆ.
ಜೇನುದನಿಗಳು
ಜೇನು ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರ ಮಧುರವಾದ ಸಿಹಿ ಎಂಥವರನ್ನೂ ಆಕರ್ಷಿಸಿಬಿಡುತ್ತದೆ. ಜೇನುದನಿ ಅಂದರೇನು ಎಂದು ತಮಗೆ ಆಶ್ಚರ್ಯವಾಗಿರಬಹುದಲ್ಲವೇ? ಖಂಡಿತವಾಗಿಯೂ ಆಗಿರಲೇಬೇಕು. ನಾನೀಗ ಹೇಳಹೊರಟಿರುವುದು ಒಂದು ಹಕ್ಕಿಯ ಬಗ್ಗೆ! ಇಂಗ್ಲೀಷ್ ನಲ್ಲಿ ಹನಿಬಜರ‍್ಡ್ ಎಂದು ಕರೆಯುವ ಒಂದು ಬಗೆಯ ರ‍್ಯಾಪ್ಟರ್. ಇದಕ್ಕೂ ಹನಿ ಬ್ಯಾಡ್ಜರ್ ಗೂ ಸಂಬಂಧವಿಲ್ಲ!!!. ಇದು ಹದ್ದು, ಗಿಡುಗ ರೀತಿಯ ಮಾಂಸಹಾರಿ ಪಕ್ಷಿ. ಇದರ ವೈಜ್ಞಾನಿಕ ಹೆಸರು ಪರ್ನಿಸ್ ಟಿಲೊರೈನ್ಕಸ್ (Pernis ptilorhynchus) ಭಾರತದಲ್ಲಿ ಸುಮಾರು ಆರು ಬಜರ‍್ಡ್ ಪ್ರಬೇಧಗಳಿದ್ದರೂ ಅದರಲ್ಲಿ ಜೇನುದನಿ ಅಥವಾ ಹನಿಬಜರ‍್ಡ್ ಒಂದೇ. ಇದಕ್ಕೆ ಏಕೆ ಜೇನು ಪದ ಸೇರಿಕೊಂಡಿತು ಎಂದು ನೋಡಿದಾಗ ಜೇನು ಗೂಡುಗಳೇ ಇವುಗಳ ಆಹಾರದ ಮೂಲ. ಜೇನುನೊಣ ಹಿಡುಕಗಳ ಬಗ್ಗೆ ತಿಳಿದಿದ್ದೇವೆ. ಇದು ಭಕ್ಷಿಸುವುದು ಜೇನು ನೊಣಗಳನ್ನಲ್ಲ! ಬದಲಾಗಿ ಜೇನುನೊಣಗಳ ಲಾರ್ವಾ ಅಂದರೆ ಹುಳುಗಳನ್ನು!
ಬನ್ನಿ ಇದರ ಪರಿಚಯ ಮಾಡಿಕೊಳ್ಳೋಣ. ಇದು ಸುಮಾರು ಹದ್ದಿನಷ್ಟೆ ಗಾತ್ರವನ್ನು ಹೊಂದಿವೆ. ತಲೆ ಪಾರಿವಾಳದಂತೆ ಸಣ್ಣದಾಗಿದ್ದು ದೇಹ ಸಾಮಾನ್ಯ ಹದ್ದುವಿನಷ್ಟೆ ಇರುತ್ತದೆ. ಕೊಕ್ಕು ಹುಳುಗಳನ್ನು ಗೂಡಿನ ಸಣ್ಣ ಸಣ್ಣ ಕೋಣೆಗಳಿಂದ ಎಳೆದು ತಿನ್ನಲು ಸಹಕಾರಿಯಾಗುವಂತೆ ಚೂಪಾಗಿಯೂ ಚಿಕ್ಕದಾಗಿಯೂ ಇದೆ. ದೃಷ್ಟಿ ಸಾಮರ್ಥ್ಯ ಅತ್ಯಂತ ತೀಕ್ಣವಾಗಿದೆ.
ದೇಹದ ಗರಿಗಳು ತಿಳಿ ಮತ್ತು ಕಡುಗಂದು ಬಣ್ಣವನ್ನು ಹೊಂದಿದ್ದು ಕುತ್ತಿಗೆ, ಎದೆ ಮತ್ತು ಹೊಟ್ಟೆ ಗರಿಗಳು ಬಿಳಿಮಿಶ್ರಿತವಾಗಿವೆ. ಈ ಹಕ್ಕಿಗಳ ಜಾತಿಯ ಎಲ್ಲಾ ಹದ್ದುಗಳಲ್ಲಿ ಕಣ್ಣಿನ ರೆಪ್ಪೆಯ ಜೊತೆಗೆ ಮತ್ತೊಂದು ಪೊರೆಯಿದ್ದು ವಿಶಿಷ್ಟ ರಕ್ಷಣೆಯನ್ನು ಕೊಡುತ್ತದೆ. ಚೂಪಾದ ಉಗುರುಗಳನ್ನು ಹೊಂದಿರುವ ಬಲಿಷ್ಟ ಕಾಲುಗಳು ಗೂಡಿಗೆ ಚುಚ್ಚಿ. ಕಿತ್ತು. ಹಿಡಿದು ತರಲು ಸಹಕಾರಿಯಾಗಿವೆ.
ಎಲ್ಲಾ ಮಾಂಸಹಾರಿ ಪಕ್ಷಿಗಳು ಇತರ ಪಕ್ಷಿ ಅಥವಾ ಪ್ರಾಣಿಗಳನ್ನು ಬೇಟೆಯಾಡಿ ಭಕ್ಷಿಸಿದರೆ ಇವುಗಳ ಆಹಾರ ಕ್ರಮ ವಿಶಿಷ್ಟವಾಗಿದೆ. ಇವು ಜೇನು ಮತ್ತು ಕಡಜಗಳ ಲಾರ್ವಾಗಳನ್ನು ತಿನ್ನುವುದು ವಿಶಿಷ್ಟ. ಜೇನುಹುಳುಗಳು ಮಾನವನಿಗೆ ಕಚ್ಚಿದರೆ ಅದರ ಪರಿಣಾಮ ಘೋರ! ಒಂದೋ ಎರಡೋ ಕಚ್ಚಿದರೆ ಉರಿಯಿಂದ, ನೋವಿನಿಂದ ಒದ್ದಾಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುತ್ತದೆ. ಇನ್ನು ಅತ್ಯಂತ ವಿಷಪೂರಿತ ಕಡಜ ಅದುವೆ ವಿಶ್ವದಲ್ಲೆ ಅತ್ಯಂತ ವಿಷಪೂರಿತವಾದ ಹೆಗ್ಗಡಜ(ಹಾರ್ನೆಟ್ ವಾಸ್ಪ್), ಇದರ ಲಾರ್ವಾಗಳನ್ನೂ ಸಹ ಬಿಡದೆ ತಿನ್ನುತ್ತವೆ. ಕೆಲವೊಮ್ಮೆ ಗೂಡಿನ ಭಾಗವನ್ನು ಕಿತ್ತು ತಿಂದು ಹಾಕುತ್ತವೆ. ಜೇನಿನ ರುಚಿ ಇವುಗಳಿಗೆ ಹತ್ತಿರುವುದು ಜೀವವೈವಿದ್ಯತೆಗೆ ಮತ್ತು ವಿಕಾಸದ ಹಾದಿಯಲ್ಲಿ ಆಹಾರದ ಹಂಚಿಕೆಗೆ ದಾರಿ ಮಾಡಿರುವುದು ಪರಮಾಶ್ಚರ್ಯ!
ಕಡಜ ಮತ್ತು ಜೇನು ಹುಳುಗಳ ಹೊಟ್ಟೆಯ ಕೊನೆಯಲ್ಲಿ ಇರುವ ಮುಳ್ಳು ವಿಷದ ಚೀಲವನ್ನು ಹೊಂದಿದ್ದು ಅವು ಕಚ್ಚಿದಾಗ ಮನುಷ್ಯ ಮತ್ತು ಇತರ ಪ್ರಾಣಿಗಳಿಗೆ ಚುಚ್ಚಿ ಉಪದ್ರವ ಕೊಡುತ್ತವೆ. ಆದರೆ ಬಜರ‍್ಡ್ ಅಂದರೆ ಜೇನುದನಿಗಳಿಗೆ ತೊಂದರೆಯಾಗುವುದಿಲ್ಲವೇ ಎಂದು ಆಶ್ಚರ್ಯವಾಗುವುದಿಲ್ಲವೇ? ಹೌದು! ನನಗಂತು ಆಗಿತ್ತು. ಆದರೆ ಜೇನುದನಿಗಳ ರಕ್ಷಣಾ ಕ್ರಮ ತಿಳಿದು ಮೂಖವಿಶ್ಮಿತನಾದೆ. ಒಂದನೆಯ ರಕ್ಷಣೆ ಎಂದರೆ ಈ ಪಕ್ಷಿಗಳಿಗೆ ಗರಿಗಳು ಇರುವುದು. ಎರಡನೆಯದು ಒಂದಷ್ಟು ಜೇನುಹುಳಗಳು ಅಥವಾ ಕಡಜಗಳು ಕಚ್ಚದರೆ ಅವುಗಳ ವಿಷವನ್ನು ತಡೆದುಕೊಳ್ಳುವ ಸಾಮರ್ಥ್ಯ. ಅದರಲ್ಲೂ ಕಚ್ಚಿಸಿಕೊಳ್ಳಲು ಇರುವ ಜಾಗ ಅಂದರೆ ಗರಿಗಳ ಒಳಗೆ ಪ್ರವೇಶಿಸಿ ಚರ್ಮಕ್ಕೆ ಚುಚ್ಚುವುದು. ಇನ್ನು ಕಣ್ಣಿನಲ್ಲಿರುವ ವಿಶಿಷ್ಟ ಪೊರೆಯೂ ಸಹ ಜೇನುಹುಳುಗಳು ಕಚ್ಚದಂತೆ ರಕ್ಷಣೆ ಕೊಡುತ್ತದೆ!
ಅರಣ್ಯಗಳಲ್ಲಿರುವ ಎತ್ತರದ ಮರಗಳ ಕೊಂಬೆಗಳಲ್ಲಿ ಗೂಡು ನಿರ್ಮಿಸಿ ಎರಡು ಮೊಟ್ಟೆಗಳನ್ನು ಇಟ್ಟು ಮರಿಮಾಡಿಕೊಳ್ಳುತ್ತವೆ. ಸುಮಾರು 33 ಅಡಿಗಳಿಂದ 65 ಅಡಿಗಳಷ್ಟು ಎತ್ತರದ ಮರಗಳು ಅವಶ್ಯ. ಮರಿಗಳಿಗೆ ಜೇನು ಅಥವಾ ಕಡಜಗಳ ಗೂಡನ್ನು ಕಿತ್ತು ತಂದು ಅದರಲ್ಲಿರುವ ಲಾರ್ವಾಹುಳುಗಳನ್ನು ತಿನ್ನಿಸುತ್ತವೆ. ಏಕೆಂದರೆ ಪ್ರೊಟೀನ್‌ಗಳ ಕಣಜ. ಸಣ್ಣ ಹೆಂಟೆಗೊದ್ದ, ಹಾವುರಾಣಿ, ಕಪ್ಪೆಗಳನ್ನು ಹಿಡಿದು ತಂದು ತಿನ್ನಿಸುತ್ತವೆ. ಜೇನುದನಿಗಳ ಜೀವನ ಹೇಗಿದೆ ಅಲ್ಲವೇ?
ಕಣ್ಣಿಗೆ ಕಾಣದ ವೈರಸ್‌ಗಳ ಜಗತ್ತು
ಕೆ.ಪಿ.ಎಸ್ ಜೀವನ್ ಭೀಮನಗರ
ಬೆಂಗಳೂರು ದಕ್ಷಿಣ ವಲಯ -4
ಭೂಮಿ, ನಮ್ಮ ಸೌರಮಂಡಲದ ಅತ್ಯಂತ ವಿಶಿಷ್ಟ ಗ್ರಹ. ವೈವಿಧ್ಯತೆಯನ್ನು ತೋರಿಸುವ ಜೀವಿಗಳ ತಾಣ. ಬೇರೆ ವಿವಿಧ ಗ್ಯಾಲಕ್ಸಿಗಳಲ್ಲಿ ನಮ್ಮ ಭೂಮಿಯ ರೀತಿಯ ವಿಶಿಷ್ಟ ಗ್ರಹ ಇರಬಹುದೇನೋ? ನಮಗೆ ಗೊತ್ತಿಲ್ಲ. ನಮ್ಮ ವೈಜ್ಞಾನಿಕ ಪ್ರಪಂಚದಲ್ಲಿ ಈನಿಟ್ಟಿನಲ್ಲಿ ಪ್ರಪಂಚಾದ್ಯಂತ ಸಂಶೋಧನೆ ನಡೆಯುತ್ತಿದೆ. ಅನೇಕ ವಿಧದ ಜೀವಿಗಳನ್ನು ನಾವು ನೋಡಿದ್ದೇವೆ, ಜೀವಿಗಳ ಇರುವಿಕೆ ಬಗ್ಗೆ ಕೇಳಿದ್ದೇವೆ, ಹಾಗೂ ಕೆಲವು ಜೀವಿಗಳ ಬಗ್ಗೆ ನಮಗೆ ಕೌತುಕತೆ ಸಹ ಇದೆ.


ಮಾನವ ಹರ್ಪಿಸ್ ವೈರಸ್ ಕುಟುಂಬ - ಹರ್ಪಿಸ್ಟೈರಿಡೆ
