ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, July 4, 2023

2023- ಜುಲೈ ತಿಂಗಳ ಲೇಖನಗಳು

 2023 ಜುಲೈ ತಿಂಗಳ ಲೇಖನಗಳು 

ಒಗಟುಗಳು : ರಾಮಚಂದ್ರ ಭಟ್.ಬಿ.ಜಿ.

ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್

ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್  

                                ಲೇಖಕರು : ಡಾ..ಟಿ.ಎ.ಬಾಲಕೃಷ್ಣ ಅಡಿಗ

ಮಾನವ ಶರೀರಕ್ರಿಯಾಶಾಸ್ತ್ರ, ತಳಿವಿಜ್ಞಾನ, ಜೀವಮಾಪನಶಾಸ್ತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ತನ್ನ ಜೀವನದ ಕೊನೆಯ ಭಾಗದಲ್ಲಿ ಭಾರತಕ್ಕೆ ಬಂದು, ಇಲ್ಲಿಯ ಪೌರತ್ವ ಪಡೆದು, ಇಲ್ಲಿಯೇ ಕೊನೆಯುಸಿರೆಳೆದ ಖ್ಯಾತಿವೆತ್ತ ವಿಜ್ಞಾನಿ ಜೆ.ಬಿ.ಎಸ್. ಹಾಲ್ಡೇನ್ ಅವರ ಬಗ್ಗೆ ಈ ಲೇಖನ ಬರೆದವರು ಡಾ.ಟಿ.ಎ. ಬಾಲಕೃಷ್ಣ ಅಡಿಗ ಅವರು.

ವಿಜ್ಞಾನದ ಪ್ರತಿಯೊಂದು ಶಾಖೆಯಲ್ಲಿಯೂ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ನಾವಿಂದು ನೋಡುತ್ತಿದ್ದೇವೆ. ತಮ್ಮ ಅಮೂಲ್ಯ ಕೊಡುಗೆಗಳ ಮೂಲಕ ಅನೇಕ ಭಾರತೀಯ ವಿಜ್ಞಾನಿಗಳು ಭಾರತದ ಸ್ಥಾನವನ್ನು ವಿಜ್ಞಾನದ ಭೂಪಠದಲ್ಲಿ ಉತ್ತುಂಗಕ್ಕೆ ಏರಿಸಿದ್ದಾರೆ. ನಮ್ಮ ದೇಶದ ಸಾಕಷ್ಟು ಮಂದಿ ವಿಜ್ಞಾನಿಗಳು ಬೇರೆ, ಬೇರೆ ದೇಶಗಳಿಗೆ ಹೋಗಿ, ಅಲ್ಲಿಯ ಪೌರತ್ವ ಪಡೆದು, ತಮ್ಮ ಸಂಶೋಧನೆಗಳನ್ನು ಮುಂದುವರೆಸುತ್ತಾ ಹೆಸರು ಗಳಿಸಿರುವ ಚಿತ್ರಣ ಒಂದು ಕಡೆ ಇದ್ದರೆ, ಕೆಲ ವಿದೇಶೀಯ ವಿಜ್ಞಾನಿಗಳು ನಮ್ಮ ದೇಶದ ಸಂಸ್ಕೃತಿಗೆ ಮಾರು ಹೋಗಿ, ಇಲ್ಲಿಯೇ ಬಂದು ನೆಲಸಿ, ಭಾರತೀಯ ಪೌರತ್ವ ಪಡೆದು ತಮ್ಮ ಸಂಶೋಧನೆಗಳನ್ನು ನಡೆಸಿದ ದೃಷ್ಟಾಂತಗಳೂ ನಮ್ಮ ಮುಂದೆ ಇವೆ. ಅಂಥ ಉದಾಹರಣೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರೆಂದರೆ, ಹೆಸರಾಂತ ಜೀವವಿಜ್ಞಾನಿ, ಜೆ.ಬಿ.ಎಸ್. ಹಾಲ್ಡೇನ್ ಅವರದ್ದು.

1892ರಲ್ಲಿ ಜನಿಸಿದ ಜಾನ್ ಬರ್ಡೋಸ್ ಸ್ಯಾಂಡರ್ಸನ್ ಹಾಲ್ಡೇನ್ (John Burdos Sanderson Haldane ತನ್ನ ಪ್ರಾರಂಭದ ವಿದ್ಯಾಭ್ಯಾಸವನ್ನು ಆಕ್ಸಫರ್ಡ್ನಲ್ಲಿ ಮುಗಿಸಿದ. ಸ್ನಾತಕೋತ್ತರ ಪದವಿ ಪಡೆದ ನಂತರ ಕೇಂಬ್ರಿಡ್ಜ್ನಲ್ಲಿ ಜೀವರಸಾಯನಶಾಸ್ತ್ರದ ಅಧ್ಯಾಪಕನಾಗಿ ತನ್ನ ವೃತ್ತಿ ಪ್ರಾರಂಭಿಸಿದ. ನಂತರ, ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಟ್‌ನಲ್ಲಿ ಶರೀರಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲವು ವರ್ಷ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಮಾನವ ಶರೀರಶಾಸ್ತ್ರದ ಬಗ್ಗೆ ಸಂಶೋಧನ ಕಾರ್ಯದಲ್ಲಿ ತೊಡಗಿಸಿಕೊಂಡ. ಅವನ ತಂದೆ ಜಾನ್ ಸ್ಕಾಟ್ ಹಾಲ್ಡೇನ್() ಕೂಡ ಒಬ್ಬ ಪ್ರಖ್ಯಾತ ವಿಜ್ಞಾನಿಯಾಗಿದ್ದ. ಮಾನವ ಶರೀರಶಾಸ್ತ್ರದಲ್ಲಿನ ತನ್ನ ಸಂಶೋಧನೆಗಳಿಂದ ಆತ ಅಪಾರ ಹೆಸರು ಗಳಿಸಿದ್ದ. ತನ್ನ ತಂದೆಯ ಜೊತೆಯಲ್ಲಿಯೇ ¸ಂಶೋಧನೆಯನ್ನು ಮುಂದುವರೆಸಿದ ಹಾಲ್ಡೇನ್, ಮಾನವನ ಉಸಿರಾಟ ಕ್ರಿಯೆಯ ಬಗ್ಗೆ ವಿಶೇಷ ಅಧ್ಯಯನವನ್ನು ನಡೆಸಿದ. ಅವನ ಈ ಸಂಶೋಧನೆಗಳು ಉಸಿರಾಟ ಕ್ರಿಯೆಯ ಮೇಲೆ ಗಾಳಿಯ ಒತ್ತಡದ ಪರಿಣಾಮಗಳನ್ನು ನಿರೂಪಿಸಿದ್ದವು.

 



ಇದಲ್ಲದೆ, ಆಕ್ಸಿಜನ್‌ನ ಹೆಚ್ಚು ಒತ್ತಡ ಇರುವ ಪರಿಸರಗಳಲ್ಲಿ ಮಾನವನ ರಕ್ತದ ಒತ್ತಡದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಿದ ಹಾಲ್ಡೇನ್, ಅಂಥಾ ಸಂದರ್ಭಗಳಲ್ಲಿ ನೀಡಬಹುದಾದ ಸೂಕ್ತ ಚಿಕಿತ್ಸೆಗಳ ಬಗ್ಗೆಯೂ ತಿಳಿಸಿಕೊಟ್ಟ. ಅದೇ ರೀತಿ, ಧನುರ್ವಾಯು ಚಿಕಿತ್ಸೆಯಲ್ಲಿ ಬಳಸಬಹುದಾದ ಕೆಲವು ಸರಳ ವಿಧಾನಗಳನ್ನೂ ಸೂಚಿಸಿದ. ಕೃತಕ ಹೃದಯ-ಶ್ವಾಸಕೋಶ ಯಂತ್ರದ (Heart-lung machine) ಕಾರ್ಯತಂತ್ರಗಳನ್ನು ಸೂತ್ರದ ರೂಪದಲ್ಲಿ ತೋರಿಸಿಕೊಟ್ಟಿದ್ದು, ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ.

ಹಾಲ್ಡೇನ್‌ನಲ್ಲಿ ಅಪಾರ ಆಸಕ್ತಿ ಮೂಡಿಸಿದ ಇನ್ನೊಂದು ಅಧ್ಯಯನ ಕ್ಷೇತ್ರ ಎಂದರೆ ತಳಿವಿಜ್ಞಾನ. ಆನುವಂಶೀಯತೆಗೆ ಸಂಬಂಧಿಸಿದತೆ ಮನುಷ್ಯರ ನಡುವೆ ಇರುವ ಭಿನ್ನತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಹಾಲ್ಡೇನ್, ಈ ವ್ಯತ್ಯಾಸಗಳ ಆಧಾರದ ಮೇಲೆ ರಚಿತವಾದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಮಾತ್ರ ಸಮರ್ಪಕವಾಗಿರಬಲ್ಲುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ !

ಪೋಷಕ ಜೀವಿಗಳಲ್ಲಿರುವ ವಂಶವಾಹಿ ಸಮೂಹಗಳ ಅಭಿವ್ಯಕ್ತಿಯಿಂದ ಹುಟ್ಟುವ ಸಂತತಿ ಎಂತಹುದು ? ಅದು, ಮಾತಾಪಿತೃಗಳ ಯಾವ ಗುಣಗಳನ್ನ ಪಡೆಯಬಹುದು? ಯಾವುದನ್ನು ಪಡೆಯಲಾರದು? ಎಂದು ಮುಂತಾದ ಲಿಂಗ ನಿರ್ಧಾರಕ ಸೂತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳುವಲ್ಲಿ ಹಾಲ್ಡೇನ್ ಯಶಸ್ವಿಯಾಗಿದ್ದ. ಇದಲ್ಲದೆ, 1920ರಲ್ಲಿ ಆರ್.ಎ.ಫಿಶರ್ ಮತ್ತು ಸೀವಾಲ್ ರೈಟ್ (R.A.Fisher and Sewall Wrightಎಂಬ ಇಬ್ಬರು ವಿಜ್ಞಾನಿಗಳ ಜೊತೆ ಸೇರಿ ತಳಿವಿಜ್ಞಾನದಲ್ಲಿ ಗಣಿತ ಸೂತ್ರಗಳನ್ನು ಬಳಸಲು ಅನುಕೂಲವಾಗುವಂಥ ಸಿದ್ಧಾಂತಗಳನ್ನು ಹಾಲ್ಡೇನ್ ರೂಪಿಸಿದ. ಒಂದು ಜೀವಿಸಮುದಾಯದಲ್ಲಿ ವಂಶವಾಹಿಗಳ ಕಲಸುವಿಕೆಯಿಂದಾಗಿ ಎಷ್ಟು ಬಗೆಯ ಭಿನ್ನತೆಗಳು ಉಂಟಾಗಬಹುದು? ಅವುಗಳಲ್ಲಿ ಅಳಿಯುವ ಹಾಗೂ ಉಳಿಯುವ ಪ್ರಮಾಣಗಳೇನು? ಎಂಬುದನ್ನು ತಿಳಿದುಕೊಳ್ಳಲು ಈ ಸಿದ್ಧಾಂತಗಳು ಉಪಯುಕ್ತ ಎನ್ನಿಸಿವೆ. ಇವುಗಳನ್ನು ಆಧಾರವಾಗಿಟ್ಟುಕೊಂಡು, ಆಧುನಿಕ ತಳಿವಿಜ್ಞಾನದ ಹಿನ್ನೆಲೆಯಲ್ಲಿ ಚಾರ್ಲ್ಸ್ ಡಾರ್ವಿನ್ನನ ‘ನೈಸರ್ಗಿಕ ಆಯ್ಕೆ’ಯ ಸಿದ್ದಾಂತವನ್ನು ವಿವರವಾಗಿ ವಿಶ್ಲೇಷಿಸಿದ ಹಾಲ್ಡೇನ್, ಇದಕ್ಕೆ ಸಂಬಂಧಿಸಿದ ಎಂಬ ಅಮೂಲ್ಯ ಕೃತಿಯೊಂದನ್ನು ಪ್ರಕಟಿಸಿದ.

ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಜೀವಿಗಳ ಉಗಮಕ್ಕೆ ಸಂಬAಧಿಸಿದAತೆ ಆತ ಪ್ರ‍್ರತಿಪಾದಿಸಿರುವ ‘ ಜೀವದ ರಾಸಾಯನಿಕ ಉಗಮ ಸಿದ್ಧಾಂತ’. ಈ ಭೂಮಿಯ ಮೇಲೆ ಜೀವ ಹೇಗೆ ಹುಟ್ಟಿತು? ಮೊದಲಿನಿಂದಲೇ ಅದು ಸಸ್ಯ ಹಾಗೂ ಪ್ರಾಣಿಗಳ ರೂಪದಲ್ಲಿಯೇ ಇದ್ದಿತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬಂದ ಈ ಸಿದ್ಧಾಂತದಲ್ಲಿ ಭೂಮಿಯ ಮೇಲೆ ಜೀವದ ಹುಟ್ಟಿಗೆ ಕಾರಣವಾಗಿರಬಹುದಾದ ಪ್ರಾಚೀನ ಸ್ಥಿತಿಯನ್ನು ಹಾಲ್ಡೇನ್ ಕಲ್ಪಿಸಿಕೊಟ್ಟಿದ್ದಾರೆ.

1928ರಲ್ಲಿ ಹಾಲ್ಡೇನ್ ಪ್ರತಿಪಾದಿಸಿದ ‘ಜೀವದ ರಾಸಾಯನಿಕ ಉಗಮ’ ಸಿದ್ಧಾಂತವು, ಅದಕ್ಕೆ ಕೆಲ ವರ್ಷಗಳ ಹಿಂದೆ, 1922ರಲ್ಲಿ ರಷ್ಯಾದ ಎ.ಐ.ಒಪಾರಿನ್ (A.I.Oparinಎಂಬ ವಿಜ್ಞಾನಿ ಪ್ರತಿಪಾದಿಸಿದ ಸಿದ್ಧಾಂತಕ್ಕೆ ಬಹಳಷ್ಟು ಪೂರಕವಾಗಿದೆ. ಈ ಸಿದ್ಧಾಂತದ ಪ್ರಕಾರ, ಭೂಮಿಯ ಮೇಲೆ ಜೀವದ ಉಗಮವಾಗಿದ್ದು ಸುಮಾರು 400 ಕೋಟಿೆ ವರ್ಷಗಳ ಹಿಂದೆ. ಆಗಿನ ಭೂಮಿಯು ಒಂದು ತೀವ್ರ ತಾಪಮಾನವಿದ್ದ ಬೆಂಕಿಯ ಚೆಂಡಿನAತಿತ್ತು. ಭೂಮಿಯ ತಾಪಮಾನ ಕ್ರಮೇಣ ಕಡಿಮೆಯಾದಂತೆ, ಅದರಲ್ಲಿದ್ದ ಮೂಲವಸ್ತುಗಳು ಒಂದನ್ನೊದು ಸೇರಿಕೊಳ್ಳತೊಡಗಿದವು. ಜೀವಿಗಳಿಗೆಲ್ಲ ಮೂಲವಾದ ವಸ್ತುವಿಶೇಷಗಳಾದ ಹೈಡ್ರೋಜನ್, ಆಕ್ಸಿಜನ್, ಕಾರ್ಬನ್, ಹಾಗೂ ನೈಟ್ರೋಜನ್, ಇವುಗಳ ವಿಶಿಷ್ಟ ಸಂಯೋಜನೆಯೇ ಮೊಟ್ಟಮೊದಲ ಆದಿ ಜೀವಕೋಶದ ಉಗಮಕ್ಕೆ ಕಾರಣ ಎಂಬುದು ಈ ಸಿದ್ಧಾಂತದ ವಿವರಣೆ.

ಈ ಸಿದ್ಧಾಂತದ ಪ್ರಕಾರ, ಜೀವಿಗಳ ಉಗಮವಾದಾಗ ಭೂಮಿಯ ವಾತಾವರಣದಲ್ಲಿ ಮೀಥೇನ್, ಅಮೋನಿಯ, ಕಾರ್ಬನ್ ಡೈಆಕ್ಸೈಡ್, ನೀರಾವಿ ಮುಂತಾದ ಅನಿಲಗಳು ಮಾತ್ರ ಇದ್ದವು. ಆಕ್ಸಿಜನ್ ಮುಕ್ತ ರೀತಿಯಲ್ಲಿ ಇರಲಿಲ್ಲ. ಮುಂದೆ ಭೂಮಿಯ ವಾತಾವರಣದಲ್ಲಿ ಕ್ರಮೇಣ ಉಂಟಾದ ಬದಲಾವಣೆಗಳ ಫಲವಾಗಿ ಅನೇಕ ರೀತಿಯ ರಾಸಾಯನಿಕ ಸಂಯೋಜನೆಗಳು ನಡೆದು, ಅಂತಿಮವಾಗಿ ಮೊದಲ ಜೀವಕೋಶ ಭೂಮಿಯ ಮೇಲೆ ಕಾಣಿಸಿಕೊಂಡಿತು ಎಂಬುದು ಈ ಸಿದ್ಧಾಂತದ ಸಾರಾಂಶ. ಮುಂದೆ, ಹೆರಾಲ್ಡ್ ಯೂರಿ ಮತ್ತು ಸ್ಟ್ಯಾನ್ಲಿ ಮಿಲ್ಲರ್ (Harold Yuri and Stanley Miller), ಸಿಡ್ನಿ ಫಾಕ್ಸ್ (Sydney Fox), ಷೆರಾರ್ಡ್(Sherardಮುಂತಾದ ವಿಜ್ಞಾನಿಗಳು ತಾವು ನಡೆಸಿದ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಹಾಲ್ಡೇನ್ ಪ್ರತಿಪಾದಿಸಿದ ಈ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ.

ಹೀಗೆ, ಜೀವವಿಜ್ಞಾನದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ಪ್ರಖ್ಯಾತಿ ಪಡೆದ ಹಾಲ್ಡೇನ್ ಅನೇಕ ಉತ್ತಮ ಕೃತಿಗಳನ್ನು ರಚಿಸಿ, ಅವುಗಳ ಮೂಲಕವೂ ವಿಜ್ಞಾನ ಕ್ಷೇತ್ರಕ್ಕೆ ಚಿರಪರಿಚಿತನಾಗಿದ್ದಾನೆ. ಕಿಣ್ವಗಳ ಕಾರ್ಯವೈವಿಧ್ಯವನ್ನು ತಿಳಿಸುವ Enzymes ಎಂಬ ಕೃತಿ ಅವನಿಗೆ ಅಪಾರ ಜನಮನ್ನಣೆಯನ್ನು ತಂದಿತ್ತಿದೆ. ಜೂಲಿಯನ್ ಹಕ್‌ಸ್ಲೀ() ಎಂಬ ವಿಜ್ಞಾನಿಯ ಜೊತೆಗೂಡಿ ರಚಿಸಿದ Animal Biology ಎಂಬ ಕೃತಿ ಪ್ರಾಣಿ ಪ್ರಪಂಚದ ವೈವಿಧ್ಯತೆ ಮತ್ತು ಅಚ್ಚರಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಾಲ್ಡೇನ್ ರಚಿಸಿದ ಇತರ ಜನಪ್ರಿಯ ಕೃತಿಗಳೆಂದರೆ,‘ Possible Words‘(1927), ‘Science and Ethics‘(1928),‘The Causes of Evolution’ (1938), ‘Science In War and Peace ‘ (1940) ಹಾಗೂ New Paths in Genetics‘ (1941).  

ಮಹಾನ್ ಮಾನವತಾವಾದಿಯಾಗಿದ್ದ ಹಾಲ್ಡೇನ್ 1930g ದಶಕದಲ್ಲಿ ಕಮ್ಯೂನಿಸಮ್‌ನ ತತ್ವಗಳಿಗೆ ಮಾರುಹೋಗಿ, ತನ್ನನ್ನು ಒಬ್ಬ ಮಾರ್ಕ್ಸ್ವಾದಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದ. ಕಮ್ಮುನಿಷ್ಟರ ಮುಖವಾಣಿಯಾಗಿದ್ದ ‘Daily Mirror‘ ಪತ್ರಿಕೆಯ ಸಂಪಾದಕನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ. ಅಲ್ಲಿ ಅವನಿಗೆ ಕ್ರಮೇಣ ಭರಮನಿರಸನ ಉಂಟಾಗತೊಡಗಿತು. ತನ್ನ ಸಮಕಾಲೀನನಾಗಿದ್ದ ರಷ್ಯಾದ ಖ್ಯಾತ ವಿಜ್ಞಾನಿ ಲೈಸೆಂಕೋ (Lysenko)ಗೆ ದೊರಕುತ್ತಿದ್ದ ಮನ್ನಣೆ ಅವನ ಈ ಭ್ರಮನಿರಸನಕ್ಕೆ ಪ್ರಮುಖ ಕಾರಣವಾಗಿತ್ತು. ಇದರೊಂದಿಗೆ, ಕಮ್ಯೂನಿಸಮ್ ಜೊತೆಗಿನ ಅವನ ಸಂಬಧ ಕಡಿದುಬಿತ್ತು.

ತನ್ನ ವೃತ್ತಿ ಜೀವನಕ್ಕೆ ಸಂಬAಧಿಸಿದAತೆ ಬ್ರಿಟಿಷ್ ಸರ್ಕಾರದ ಕೆಲವು ಧೋರಣೆಗಳು ಸರಿಹೊಂದುತ್ತಿಲ್ಲ ಎಂದು ಅನಿಸಿದ ಕಾರಣ, 1957ರಲ್ಲಿ ಹಾಲ್ಡೇನ್ ಲಂಡನ್ ಬಿಟ್ಟು ಭಾರತಕ್ಕೆ ವಲಸೆ ಬಂದು ಕೊಲ್ಕತ್ತಾದಲ್ಲಿ ನೆಲೆಸಿದ. ಅಲ್ಲಿಜೀವಮಾಪನ (biometryಕ್ಷೇತ್ರದಲ್ಲಿ ತನ್ನ ಸಂಶೋಧನೆಯನ್ನು ಮುಂದುವರೆಸಿದ. ಕೆಲ ವರ್ಷಗಳ ನಂತರ,  ಒರಿಸ್ಸಾದ ಭುವನೇಶ್ವರ ವಿಶ್ವವಿದ್ಯಾಲಯದಲ್ಲಿ ತಳಿವಿಜ್ಞಾನ ಹಾಗೂ ಜೀವಮಾಪನ ವಿಜ್ಞಾನದ ಮುಖ್ಯಸ್ಥನಾಗಿ  ಸೇರಿ, ತನ್ನ ಉಳಿದ ಜೀವಿತಾವಧಿಯನ್ನು ಅಲ್ಲಿಯೇ ಕಳೆದ.

ಭಾರತಕ್ಕೆ ಬಂದು ನೆಲಸಿದ ಮೇಲೆ ಹಾಲ್ಡೇನ್ ಭಾರತೀಯ ಜೀವನ ಶೈಲಿಗೆ ಮಾರು ಹೋದ. ತಾನೂ ಭಾರತೀಯ ಜೀವನಶೈಲಿಯನ್ನೇ ಅಳವಡಿಸಿಕೊಂಡ. ಭಾರತೀಯ ಉಡುಗೆಗಳನ್ನೇ ಧರಿಸುತ್ತಿದ್ದ. 1961ರಲ್ಲಿ ಭಾರತೀಯ ಪೌರತ್ವವನ್ನೂ ಪಡೆದುಕೊಂಡ.     


ತನ್ನ ವಿಶ್ಲೇಷಣಾತ್ಮಕ ಆಲೋಚನಾ ಶಕ್ತಿ, ಅಪಾರ ತಿಳುವಳಿಕೆ, ಧೀಮಂತ ಬರವಣಿಗೆ ಹಾಗೂ ಪ್ರಭಾವಪೂರ್ಣ ವ್ಯಕ್ತಿತ್ವದಿಂದ ವಿಜ್ಞಾನ ಪ್ರಪಂಚದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಹಾಲ್ಡೇನ್ ಅನಿರೀಕ್ಷಿತವಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, 1964ರಲ್ಲಿ ಭಾರತದಲ್ಲೇ ಕೊನೆಯುಸಿರೆಳೆದ.

ರಕ್ತ ಪರಿಚಲನೆಯನ್ನು ಕಂಡುಹಿಡಿದ ವಿಲಿಯಮ್ ಹಾರ್ವೆ

  ರಕ್ತ ಪರಿಚಲನೆಯನ್ನು ಕಂಡುಹಿಡಿದ ವಿಲಿಯಮ್ ಹಾರ್ವೆ

ಲೇ : ರಾಮಚಂದ್ರ ಭಟ್‌ ಬಿ.ಜಿ.





 ಲಂಡನ್ನಲ್ಲಿರುವ ತನ್ನ  ಮನೆಯೊಳಗೆ ಒಬ್ಬಂಟಿಯಾಗಿಯೇ ಲೆಕ್ಕವಿಲ್ಲದಷ್ಟು ಶಸ್ತ್ರ ಚಿಕಿತ್ಸಾ ಪ್ರಯೋಗಗಳನ್ನು ಕೈಗೊಳ್ಳುತ್ತಲೇ ಇದ್ದ. ನಾಯಿಗಳು, ಈಲ್‌ಗಳು, ಕಾಗೆಗಳು ಮತ್ತು ಕಣಜಗಳು ಸೇರಿದಂತೆ ಅನೇಕ ಪ್ರಾಣಿಗಳ ಅಂಗಚ್ಛೇದ ಮಾಡಿ ಅವುಗಳ ಹೃದಯ ಬಡಿತವನ್ನು ಗಮನಿಸಿದ. ಗಲ್ಲಿಗೇರಿಸಲ್ಪಟ್ಟ ವ್ಯಕ್ತಿಗಳ ಶವಗಳನ್ನು ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ ಪ್ರಯೋಗಾಲಯಕ್ಕೆ ತಂದು, ಆ ದೇಹಗಳನ್ನು ಕೊಯ್ದು ನಿರಂತರ ಅಧ್ಯಯನ ನಡೆಸುತ್ತಿದ್ದ!!! ಅಂತೂ ಹೊಸ ಹೊಳಹೊಂದು ಪ್ರತ್ಯಕ್ಷವಾಗಿಯೇ ಬಿಟ್ಟಿತ್ತು. ಅದುವರೆಗೂ ಅರಿಸ್ಟಾಟಲ್‌ ಮತ್ತು ಗೇಲೆನ್‌ರವರ ಸಿದ್ಧಾಂತಗಳೇ ಅಂತಿಮ ಸತ್ಯವೆಂದು ನಂಬಿದ್ದ ವೈದ್ಯ ಲೋಕಕ್ಕೆ ಆತ ಮರ್ಮಾಘಾತವನ್ನುನೀಡಿದ್ದ. ಅದಕ್ಕೆ ಕಾರಣವಾದದ್ದು ಅವರು ಕಂಡುಹಿಡಿದ ರಕ್ತ ಪರಿಚಲನೆ !!! ಈ ವ್ಯಕ್ತಿಯೇ ವಿಲಿಯಂ ಹಾರ್ವೆ .

ಹಾರ್ವೆ ಮೊದಲ ಬಾರಿಗೆ ಅಪಧಮನಿಗಳು ಮತ್ತು ಅಭಿದಮನಿ ರಕ್ತನಾಳಗಳು ಇಡೀ ದೇಹದ ಮೂಲಕ ರಕ್ತವನ್ನು ಪರಿಚಲನೆ ಮಾಡುತ್ತವೆ ಎಂದು ತೋರಿಸಿಕೊಟ್ಟ. ಹೃದಯದ ಬಡಿತವು ಇಡೀ ದೇಹದ ಮೂಲಕ ನಿರಂತರ ರಕ್ತ ಪರಿಚಲನೆಯನ್ನುಉಂಟುಮಾಡುತ್ತದೆ ಎಂದು  ತೋರಿಸಿಕೊಟ್ಟ. ಹೃದಯ ಮತ್ತು ರಕ್ತ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆಎನ್ನುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸಾಧಿಸಿಯೇ ಬಿಟ್ಟಿದ್ದ ವಿಲಿಯಂ ಹಾರ್ವೆ. ಅಪಧಮನಿಗಳು ಮತ್ತು ಅಭಿಧಮನಿಗಳಲ್ಲಿ ಹರಿಯುವ ರಕ್ತವು ಒಂದೇ.ಹೃದಯದ ಬಡಿತದಿಂದಲೇ ಏರ್ಪಡುತ್ತದೆ. ಎನ್ನುವುದನ್ನು ಹಾರ್ವೆಯವರು ತಮ್ಮ  ನಿರಂತರ ಸಂಶೋಧನೆಗಳಿಂದ ಕಂಡುಕೊಂಡಿದ್ದ. ಈ ಕಾರಣಕ್ಕಾಗಿ, ಮಹಾನ್‌ ಶಸ್ತ್ರಚಿಕಿತ್ಸಾ ತಜ್ಞನಾಗಿದ್ದ ವಿಲಿಯಮ್‌ ಹಾರ್ವೆಯನ್ನು ಆಧುನಿಕ  ಪ್ರಾಯೋಗಿಕ ಶರೀರ ಕ್ರಿಯಾ ವಿಜ್ಞಾನದ ( modern experimental physiology ) ಜನಕ ಎಂದು ಗುರುತಿಸಲಾಗುತ್ತದೆ.

ವಿಲಿಯಮ್‌ ಹಾರ್ವೆ ಆಗ್ನೇಯ ಇಂಗ್ಲೆಂಡಿನ ಕೆಂಟ್‍ನಲ್ಲಿ ಯಫೋಕ್ಸ್‍ಸ್ಟನ್ನಿನಲ್ಲಿ  1578 ಏಪ್ರಿಲ್ 1 ರಂದು ಜನಿಸಿದ. ಕೇಂಬ್ರಿಜ್‍ನ ಕಾಲೇಜಿನಲ್ಲಿ, ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಾಗಿದ್ದ ಗ್ರೀಕ್ ಮತ್ತು ಲ್ಯಾಟಿನ್ಭಾಷೆಗಳನ್ನೂ ಇತರ ವಿಷಯಗಳನ್ನೂ ನಾಲ್ಕು ವರ್ಷಗಳ ಕಾಲ ವ್ಯಾಸಂಗಮಾಡಿ ಹಾರ್ವೆ 1597ರಲ್ಲಿ ಬಿ.ಎ.ಪದವಿ ಗಳಿಸಿದ.  ಇಟಲಿಯ ಪ್ರಸಿದ್ಧವಾದ ಪಡುವ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಂಗರಚನಾ ಶಾಸ್ತ್ರದ ವ್ಯಾಸಂಗಮಾಡಿದ. ಎಂ.ಡಿ. ಪದವಿಯ ಸಹಿತ ಇಂಗ್ಲೆಂಡಿಗೆ ಮರಳಿ ಲಂಡನ್ನಿನಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದ.  1607ರಲ್ಲಿ ಲಂಡನ್ನಿನ ಸೇಂಟ್ ಬಾರ್ಥೋಲೋಮ್ಯು ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಈ ಹುದ್ದೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದ. ಪ್ರಸವ ಶಾಸ್ತ್ರದಲ್ಲೂ ಅವದ್ದು ಎತ್ತಿದ ಕೈ. ರೋಗಶಾಸ್ತ್ರವನ್ನೂ ಅಧ್ಯಯನ ಮಾಡಿದ್ದ. ವೈದ್ಯಶಾಸ್ತ್ರದಲ್ಲಿದ್ದ ಈತನ ಪರಿಣಿತಿ ಇವನ್ನು ರಾಜಮನೆತನದ ವೈದ್ಯನಾಗಿ ನೇಮಕಗೊಳ್ಳುವಂತೆ ಮಾಡಿತ್ತು.

 ಯಾವುದೇ ಅಧ್ಯಯನದಲ್ಲೂ ಗೇ ಪೂರ್ಣವಾಗಿ ನಂಬಿಕೆ ಬರುವವರೆಗೆ ಆತುರಾತುರವಾಗಿ ಏನನ್ನೂ ಆತ ಬಹಿರಂಗಗೊಳಿಸುತ್ತಿರಲಿಲ್ಲ. ಮೇಲಿಂದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿ ಪರೀಕ್ಷಿಸಿ ಅಂತಿಮವಾಗಿ ತಮ್ಮ ಪ್ರತಿಪಾದನೆಯನ್ನುಪೂರಕ ಸಾಕ್ಷ್ಯಗಳೊಂದಿಗೆ ವೈದ್ಯಲೋಕದೆ ಎದುರು ಅನಾವರಣಗೊಳಿಸುತ್ತಿದ್ದ. ಅದಕ್ಕೆ ಅವನು ರಚಿಸಿದ ಗ್ರಂಥವೇ ಸಾಕ್ಷಿಯಾಗಿದೆ.ಹಾರ್ವೆ  ತನ್ನ ಡಿ ಮೋಟು ಕಾರ್ಡಿಸ್ ಎಂಬ 72ಪುಟಗಳಗ್ರಂಥದಲ್ಲಿ ಹೇಳಿರುವ ವಿಷಯವನ್ನು 12 ವರ್ಷಗಳಷ್ಟು ಮುಂಚೆಯೇ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸಿನಲ್ಲಿ ಉಪನ್ಯಾಸವಾಗಿ ತಿಳಿಯಪಡಿಸಿದ್ದರೂ  ಪುಸ್ತಕ ರೂಪದಲ್ಲಿ ಬರೆದು ಪ್ರಚುರಪಡಿಸಿದ್ದು 1628ರಲ್ಲಿ. ಈ ಗ್ರಂಥದ ಮೊದಲ 19 ಪುಟಗಳಲ್ಲಿ ಹೃದಯ ಮತ್ತು ರಕ್ತ ಪರಿಚಲನೆ ವಿಷಯದಲ್ಲಿ ಅರಿಸ್ಟಾಟಲ್, ಗೇಲನ್‍ ಮುಂತಾದವರು ತಿಳಿಸಿದ್ದ ವಿಚಾರಗಳನ್ನೂ,   1550ರಿಂದ ಈಚೆಗೆ ವೆಸೇಲಿಯಸ್, ಫ್ಯಾಬ್ರೀಷಿಯಸ್‌ ಮೊದಲಾದವರ ಸಂಶೋಧನೆಗಳನ್ನುಚರ್ಚಿಸಿದ್ದಾನೆ.ನಂತರ,  ತಾನು ಸಂಶೋಧನೆಯಲ್ಲಿ  ಕಂಡುಕೊಂಡ ವಿಷಯಗಳನ್ನು ಹಂತ ಹಂತವಾಗಿ ವಿವರಿಸುತ್ತ, ರಕ್ತ ಪರಿಚಲಿಸುತ್ತಿದೆ ಎಂಬ ನಿರ್ಧಾರಕ್ಕೆ ಏಕೆ ಬರಬೇಕು?  ಎನ್ನುವುದನ್ನು  ಶಂಕೆಗೆ ಆಸ್ಪದವಿಲ್ಲದ ರೀತಿಯಲ್ಲಿ  ಪ್ರತಿಪಾದಿಸುತ್ತಾನೆ. ಡಿ ಮೋಟು ಕಾರ್ಡಿಸ್  ಮತ್ತು ರಿಯೋಲಾನ್ ಎಂಬವರಿಗೆ ಹಾರ್ವೆ ಬರೆದ ಪತ್ರಗಳಿಂದ ಪ್ರಯೋಗಾತ್ಮಕ ವ್ಯಾಸಂಗವಿಧಾನ ಬಳಕೆಗೆ ಬಂದಿರುವುದು ತಿಳಿದು ಬರುತ್ತದೆ.


William Harvey dissecting the body of Thomas Parr

    16ನೆಯ ಶತಮಾನದವರೆಗೂ ಅಂಗಶಾಸ್ತ್ರಜ್ಞರು ಹಾಗೂ ವೈದ್ಯರಿಗೆ ರಕ್ತವು ರಕ್ತನಾಳಗಳಲ್ಲಿ ಚಲಿಸುತ್ತದೆ ಎಂಬುದಷ್ಟೇ ತಿಳಿದಿತ್ತು. ಹೃದಯಕ್ಕೆ ಸಂಕೋಚನ-ವ್ಯಾಕೋಚನಸಾಮರ್ಥ್ಯವಿದ್ದು, ಅದು ಸಂಕೋಚಿಸುವುದರಿಂದಲೇ ರಕ್ತಚಲನೆಗೆ ಬೇಕಾಗುವ ಒತ್ತಡ ಒದಗುತ್ತದೆ ಎಂಬುದು ಆಗ ಆಅವರಿಗೆ ತಿಳಿದಿರಲಿಲ್ಲ.ಅಪಧಮನಿಗಳ ಮೂಲಕ ದೇಹದಲ್ಲೆಲ್ಲ ಪ್ರವಹಿಸುವ ರಕ್ತ,  ವಿವಿಧೆಡೆಗಳಲ್ಲಿ ಉಪಯೋಗಗೊಂಡು ಉಳಿದದ್ದು ಅಭಿಧಮನಿಗಳ ಮೂಲಕ ಹೃದಯಕ್ಕೆ ಹಿಂತಿರುಗಿಬರುತ್ತದೆ.  ಕವಾಟಗಳಿರುವುದರಿಂದ ಹಿಮ್ಮುಖವಾಗಿ  ಹರಿಯಲು ಸಾಧ್ಯವಿಲ್ಲ. ಆದ್ದರಿಂದ,  ಇವುಗಳಲ್ಲಿ ರಕ್ತ ಒಂದು ಸಲ ಹಿಂದಕ್ಕೆ ಇನ್ನೊಂದು ಮುಂದಕ್ಕೆ ಹರಿಯುತ್ತದೆ ಎನ್ನುವ ತಪ್ಪು ಅಭಿಪ್ರಾಯ ಅಂದಿನ ವೈದ್ಯರಲ್ಲಿತ್ತು.

ಈ ವಿಷಯಗಳನ್ನೆಲ್ಲ ವಿವಿಧ ಗ್ರಂಥಗಳ ಅಧ್ಯಯನದಿಂದಲೂ, ನಿರಂತರ ಚಿಂತನೆಯಿಂದಲೂ  ಹಾರ್ವೆ ತರ್ಕಿಸಿದ. ನಾಯಿ, ಹಂದಿ, ಹಾವು, ಕಪ್ಪೆ, ಮೀನು, ಏಡಿ, ಮೃದ್ವಂಗಿಗಳು, ಕೀಟ ಮೊದಲಾದ ಜೀವಿಗಳ ಅಧ್ಯಯನದಿಂದ ತಮ್ಮ ಆಲೋಚನೆಗಳು ಸರಿಯಾಗಿವೆ ಎಂಬುದನ್ನು ಕಂಡುಕೊಂಡ.ಮೊಟ್ಟೆಯೊಳಗೆ ಇರುವ ಕೋಳಿಯ ಭ್ರೂಣದ ಹೃದಯ ಮಿಡಿಯುತ್ತಿರುವುದನ್ನು ದೊರೆ ಚಾರ್ಲ್ಸ್‌ ಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ.


William Harvey demonstrating his theory of circulation of the blood before Charles I

ಹಾರ್ವೆಗೆ ರಕ್ತನಾಳಗಳ ಪರಿಚಯವಿದ್ದರೂ, ಸೂಕ್ಷ್ಮದರ್ಶಕದ ಆವಿಷ್ಕಾರವಾಗಿರದ ಕಾರಣದಿಂದ ಲೋಮನಾಳಗಳ ರಚನೆಯ ಮಾಹಿತಿ ಇರಲಿಲ್ಲ. ಹಾರ್ವೆಯ ನಿಧನದ ನಂತರ ಪ್ರಖ್ಯಾತ  ಅಂಗರಚನಾ ಶಾಸ್ತ್ರಜ್ಞ,  ಮಾಲ್ಪೀಜಿ (1628-94)  ಸೂಕ್ಷ್ಮದರ್ಶಕ ಬಳಸಿ ರಕ್ತನಾಳಗಳನ್ನು  ಅಧ್ಯಯನ ಮಾಡಿ, ಅಪಧಮನಿ ಮತ್ತು ಅಭಿಧಮನಿಗಳನ್ನು ಸಂಪರ್ಕಿಸುವ ಲೋಮನಾಳಗಳನ್ನು ಕಂಡುಹಿಡಿದರು.


ಈ ಮಧ್ಯೆ ಅರಿಸ್ಟಾಟಲ್, ಗೇಲೆನ್‍ ಅವರ ಬೋಧನೆಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತ ಮಾಡಿದ್ದರಿಂದ  ಸಾಕಷ್ಟು ರೋಗಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೂ ಒಳಗಾಗಬೇಕಾಯಿತು. ಸ್ನೇಹಿತನಂತೆ ಇದ್ದ ಚಾರ್ಲ್ಸ್ ದೊರೆಯ ಕೊಲೆಯೂ ಹಾರ್ವೆಗೆ ಆಘಾತವನ್ನು ಉಂಟು ಮಾಡಿತ್ತು. .ಕೀಟಗಳ ಪ್ರಜನನ ಕ್ರಿಯೆ ಕುರಿತು ಹಾರ್ವೆ  ಸಂಶೋಧನೆ ನಡೆಸಿ, ಗ್ರಂಥವೊಂದನ್ನು ರಚಿಸಿದ್ದರು. ಇಂಗ್ಲೆಂಡಿನ ಪ್ರಕ್ಷುಬ್ದ ರಾಜಕೀಯ ಪರಿಸ್ಥಿತಿಯ ಸಂದರ್ಭದಲ್ಲಿ  ಹಾರ್ವೆ ದೊರೆಯ ಒಡನಾಡಿ ಎಂದು ತಿಳಿದು ಕ್ರುದ್ಧರಾದ ಜನ 1642ರಲ್ಲಿ ಲಂಡನ್ನಿನ ಇವ ಮನೆಯನ್ನು ಲೂಟಿ ಮಾಡಿದರು. ಆ ದಾಳಿಯಲ್ಲಿ ಸಂಶೋಧನೆಯ ಹಸ್ತಪ್ರತಿಗಳು  ಪೂರ್ಣವಾಗಿ ನಾಶವಾದುವು. ಇದು ಕೇವಲ ಹಾರ್ವೆಗೆ ಅಷ್ಟೇ ಅಲ್ಲ,  ಇಡೀ ಸಂಶೋಧನಾ ಕ್ಷೇತ್ರಕ್ಕೆ ಆದ ತುಂಬಲಾರದ ನಷ್ಟವೇ ಸರಿ. ಆದರೂ, ಹಾರ್ವೆ ನ್ನ ಸಂಶೋಧನಾ ಪ್ರವೃತ್ತಿಯಿಂದ ವಿಮುಖನಾಗಲಿಲ್ಲ. ಹಾಗೆಯೇ ನ್ನು ಹಿಂಬಾಲಿಸುತ್ತಿದ್ದ ದುರಾದೃಷ್ಟವೂ  ಅಷ್ಟಕ್ಕೆ ಸುಮ್ಮನಾಗಲಿಲ್ಲ. ಶ್ವಾಸಕ್ರಿಯೆ,ರೋಗಶಾಸ್ತ್ರ ಮೊದಲಾದ ಹಲವು ವಿಷಯಗಳ ೇಲೆ ಸುಧೀರ್ಘ ಸಂಶೋಧನೆ ನಡೆಸಿ ಆತ ಗ್ರಂಥಗಳನ್ನುರಚಿಸಿದ್ದ. ಇವೆಲ್ಲವೂ ಲಂಡನ್ನಿನ ಭೀಕರ ಅಗ್ನಿ ದುರಂತದಲ್ಲಿ ನಾಶವಾಗಿ ಹೋದವು. ಹೀಗೆ, ಸಾಲು ಸಾಲು ದುರಂತಗಳು, ಅವನ್ನು ತೀವ್ರವಾಗಿ ಘಾಸಿಗೊಳಪಡಿಸಿರಬೇಕು. ಇವೆಲ್ಲದರ ಫಲವೋ ಎಂಬಂತೆ ಸಮಾಜಕ್ಕೆ ತನ್ನ ಬದುಕನ್ನು ಸಮರ್ಪಿಸಿದ ವಿಲಿಯಂ ಹಾರ್ವೆ 1657 ಜೂನ್ 3ರಂದು ಲಂಡನ್ನಿನಲ್ಲಿ ನಿಧನನಾದ.

 

ನೈಟ್‍ಜಾರ್: ಏನಿದು ನಿಂದು ಕಾರ್‌ ಬಾರ್ ?

 ನೈಟ್‍ಜಾರ್: ಏನಿದು ನಿಂದು ಕಾರ್‌ ಬಾರ್ ?

                                                     ಲೇಖಕರು : ಶ್ರೀ ಕೃಷ್ಣ ಚೈತನ್ಯ

                                                                                 

ಹಲವು ಬಾರಿ ತಮ್ಮ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡ ಹಕ್ಕಿಯೊಂದನ್ನು ಕೊನೆಗೂ ಪತ್ತೆ ಮಾಡಿ ಅದರ ಫೋಟೋ ಕ್ಲಿಕ್ಕಿಸಿದಾಗ ಉಂಟಾದ ಸಂತಸವನ್ನು ಆ ಹಕ್ಕಿಯ ಬಗ್ಗೆ ವಿವರಗಳ ಜೊತೆಗೆ ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ, ವನ್ಯಜೀವಿ ತಜ್ಞ ಹಾಗೂ ಶಿಕ್ಷಕ, ಕೃಷ್ಣ ಚೈತನ್ಯ ಅವರು.

 

ಒಮ್ಮೆ ನಾಗಮಂಗಲದಲ್ಲಿ ಪಕ್ಷಿಗಳ ಫೋಟೊಗ್ರಫಿಗೆಂದು ಸೂಳೆಕೆರೆಯ ಬಳಿ ಅಡ್ಡಾಡುತ್ತಿದ್ದೆ. ಅದು ದೊಡ್ಡಕೆರೆ. ಕೆರೆಯ ಏರಿಯೇ ಸುಮಾರು ಒಂದು-ಒಂದುವರೆ ಕಿಲೋಮೀಟರ್ ಉದ್ದವಿದೆ. ನಾನು ಕುಣಿಗಲ್ ಕೆರೆ ನೋಡಿಲ್ಲದಿದ್ದರೂ, ಅದರ ಕುರಿತು ಇರು ಜನಪದ ಹಾಡು “ಮೂಡಲ್ ಕುಣಿಗಲ್ ಕೆರೆ ನೋಡರ‍್ಗ್ ಒಂದು ಐಭೋಗ” ನೆನಪಾಗದೇ ಇರದು. ಅದರ ಕೆಳಬದಿಯಲ್ಲಿ ಹಳ್ಳ, ತೋಟ ಮತ್ತು ಕೃಷಿಗೆ ಯೋಗ್ಯವಲ್ಲದ ಕಲ್ಲುಭೂಮಿ ಇದೆ. ಅಲ್ಲಿ ಒಂದು ಬಗೆಯ ಹುಲ್ಲು ಮಳೆಗಾಲದಲ್ಲಿ ಎದೆಯ ಮಟ್ಟಕ್ಕೆ ಬೆಳೆದು ಬೇಸಿಗೆಯಲ್ಲಿ ಒಣಗುತ್ತದೆ. ಅದರ ಗರಿಗಳು ಒರಟಾಗಿರುವುದರಿಂದಲೂ, ದಂಟು ದಪ್ಪವಾಗಿರುವುದರಿಂದಲೂ ಅದನ್ನು ದನಗಳೂ ತಿನ್ನುವುದಿಲ್ಲ.

ಆಕ್ಟೋಬರ್ ತಿಂಗಳಾದ್ದರಿಂದ ಬಯಲು ಸೀಮೆಯಲ್ಲಿ ಬೆಳಗಿನ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತಿತ್ತು. ಬೆಳಿಗ್ಗೆ ೭ ಗಂಟೆಯಿಂದಲೂ ನಡೆದು ನಡೆದೂ ಫೋಟೊ ತೆಗೆಯುತ್ತಿದ್ದುದರಿಂದ 9.30ಕ್ಕೆಲ್ಲಾ ಹೊಟ್ಟೆ ಹಸಿದು ಸುಸ್ತಾಗುತ್ತಿತ್ತು. ಆಗಲೇ ಸೂರ್ಯನ ಕಾವು ಹೆಚ್ಚಿ, ಅದರ ಶಾಖಕ್ಕೆ ಮೈ ಬೆವರಲು ಪ್ರಾರಂಭಿಸಿತ್ತು. ಹೊಲಗಳನ್ನು ದಾಟಿ ಹಳ್ಳದಲ್ಲಿ ಸಿಕ್ಕ ಪಕ್ಷಿಗಳನ್ನು ನನ್ನಕ್ಯಾಮರದಲ್ಲಿ ಕ್ಲಿಕ್ಕಿಸಿದ ನಂತರ ಆ ವಿಶಾಲವಾದ ಕಲ್ಲುಭೂಮಿಯಲ್ಲಿ ಬೆಳೆದಿದ್ದ ಹುಲ್ಲಿನ ತೆಂಡೆಗಳ ನಡುವೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ಪಕ್ಷಿ ಮೇಲೆ ಹಾರಿ, ಸ್ವಲ್ಪ ದೂರದಲ್ಲಿ ಹುಲ್ಲಗಳ ಮದ್ಯದಲ್ಲೇ ಕುಳಿತುಕೊಂಡಿತು. ನೆಲದ ಬಣ್ಣ ಮತ್ತು ಪಕ್ಷಿಯ ಬಣ್ಣ ಒಂದೇ ತೆರನಾಗಿದ್ದುದರಿಂದ ಗುರುತಿಸಲು ಕಷ್ಟವಾಗುತ್ತಿತ್ತು. ಹಾರಾಡುತ್ತಿದ್ದಾಗ ಅದರ ರೆಕ್ಕೆಯಲ್ಲಿ ಬಿಳಿ ಬಣ್ಣದ ದೊಡ್ಡ ಮಚ್ಚೆ ಕಾಣುತ್ತಿತ್ತು. ಇದ್ಯಾವ ಪಕ್ಷಿ ನೋಡೋಣ, ಎಂದು ಹಿಂಬಾಲಿಸಿ ಅದು ಕುಳಿತುಕೊಂಡ ಜಾಗವನ್ನು ಸಮೀಪಿಸಲು ಪ್ರಾರಂಭಿಸಿದೆ. ಅದು ಮತ್ತೆ, ಮತ್ತೆ ಹಾರಿ ಸ್ವಲ್ಪ ದೂರಕ್ಕೆ ಹೋಗಿ ಕುಳಿತುಕೊಂಡಿತು. ನಾನು ಹಿಂಬಾಲಿಸಿದಷ್ಟೂ, ಆ ಪಕ್ಷಿ ಹಾರುತ್ತಲೇ ಗಾಳಿಪಟ ಗೋತ ಹೊಡೆದಂತೆ ಒಂದೊಂದು ಕಡೆ ಕುಳಿತು ಬಿಡುತ್ತಿತ್ತು. ಕೊನೆಗೆ ಒಂದುಕಡೆ ಅದು ಕುಳಿತ ಜಾಗವನ್ನು ನೋಡಿ, ದೂರದಿಂದಲೇ ಕ್ಯಾಮೆರಾವನ್ನು ಜ಼ೂಮ್ ಮಾಡಿ ಫೋಟೊ ತೆಗೆದೆ. ಅಂತೂ ಕೊನೆಗೆ ಹಕ್ಕಿ ಸಿಕ್ಕಿತಲ್ಲಾ ಎಂದು ಸ್ಕ್ರೀನ್ ಪರಿಸೀಲಿಸಿದಾಗ ಬೆಸ್ತು ಬೀಳುವ ಸರದಿ ನನ್ನದಾಗಿತ್ತು. ಏಕೆಂದರೆ, ನಾನು ಹಕ್ಕಿ ಎಂದುಕೊಂಡು ಕ್ಲಿಕ್ಕಿಸಿದ್ದು ಅದೇ ಬಣ್ಣದ ಒಂದು ಕಲ್ಲಾಗಿತ್ತು.


ಛಲ ಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಅಲ್ಲಿಗೆ ಹೋದಾಗ ಹುಡುಕಲು ಆರಂಭಿಸಿದೆ. ಇದರ ಹುಡುಕಾಟದಲ್ಲಿ ಹೊಟ್ಟೆ ಹಸಿಯುತ್ತಿದ್ದುದು ಮರೆತು ಹೋಗಿತ್ತು. ಹೆಜ್ಜೆ ಹೆಜ್ಜೆಯಷ್ಟು ದೂರಕ್ಕೆ ಇದ್ದ ಹುಲ್ಲಿನ ತೆಂಡೆಗಳು ಹುಡುಕಾಟವನ್ನು ಮತ್ತಷ್ಟು ಜಟಿಲಗೊಳಿಸಿತ್ತು. ಸ್ವಲ್ಪ ಹೊತ್ತು ಹುಡುಕಿದ ಮೇಲೆ ಮತ್ತೆ ಕಾಣಿಸಿದಾಗ, ಫೋಟೊ ತೆಗೆಯಲು ಅಣಿಯಾದೆ. ಕೊನೆಗೆ ಅದು ಕುಳಿತುಕೊಂಡ ಜಾಗಕ್ಕೆ, ನೆಲದ ಮೇಲೆ ಏನಿದೆ ಎಂದೂ ನೋಡದೆ, ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತಾ ಹೋದೆ. ಹಕ್ಕಿ ಕುಳಿತದ್ದು ಕಾಣಿಸಿ, ಹತ್ತು ಹದಿನೈದು ಫೋಟೊ ತೆಗೆದು ಮನೆಗೆ ವಾಪಾಸಾದೆ. ಸಲೀಂ ಅಲಿಯವರ ಪುಸ್ತಕವನ್ನ ಜಾಲಾಡಿಸಿದಾಗ ಸಿಕ್ಕ ಹಕ್ಕಿ ಕ್ವಿಲ್ ಆಗಿತ್ತು. ನಾನು ನೋಡಿದ ಹಕ್ಕಿ ಇದಲ್ಲವಲ್ಲ ಎಂದು ತರ್ಕಿಸುತ್ತಾ, ಆ ಹಕ್ಕಿ ಮತ್ತೆ ನನ್ನನ್ನು ಬೇಸ್ತು ಬೀಳಿಸಿತಲ್ಲಾ, ಎಂದು ಕುಳಿತೆ. ಆ ಪಕ್ಷಿಯೂ ನನಗೆ ಸಿಗದಿದ್ದುದರಿಂದ, ಮತ್ತೆ ಹೋದರಾಯಿತು ಎಂದು ಪತ್ನಿಯ ಮನೆಯಿಂದ ಹಿಂದಿರುಗಿದೆ.         

ಬೇಸಿಗೆ ರಜೆಗೆ ಮತ್ತೆ ಅದೇ ಜಾಗಕ್ಕೆ ಹೋಗಿ, ಆ ಪಕ್ಷಿಯ ಹುಡುಕಾಟದ ತವಕದಲ್ಲಿದ್ದೆ. ಎಂದಿನಂತೆ, ಅದೇ ಜಾಗಕ್ಕೆ ಹೋಗಿ ಹುಡುಕಲಾರಂಭಿಸಿದೆ. ಆ ಹಕ್ಕಿ ಸಿಕ್ಕಿತು! ಈ ಬಾರಿ ಅದರ ಫೋಟೊ ತೆಗೆಯಲೇಬೇಕೆಂಬ ಹಠದಿಂದ ಅದು ಕುಳಿತುಕೊಳ್ಳುತ್ತಿದ್ದ ಜಾಗವನ್ನು, ಅಲ್ಲಿಂದ ಅದು ಓಡಿ ಹೋಗಿ ಕುಳಿತುಕೊಳ್ಳುವ ದಾರಿಗಳನ್ನು ಪರಿಶೀಲಿಸಿ ಪತ್ತೆ ಹಚ್ಚಿದೆ. ಬೇಸಿಗೆಯಾದ್ದರಿಂದ ಹುಲ್ಲಿನ ತೆಂಡೆಗಳೆಲ್ಲ ಒಣಗಿದ್ದುದು ಆ ಪಕ್ಷಿಯನ್ನು ಪತ್ತೆ ಮಾಡಲು ಸುಲಭವಾಗಿತ್ತು. ಅಂತೂ ಸಾಕಷ್ಟು ಆಟ ಆಡಿಸಿ ಅದು ಕೊನೆಗೆ ಸಿಕ್ಕಿದಾಗ ಸಿಗುವ ಆನಂದ, ಓ ಎಂದುಕೊಂಡೆ. ಆ ಹಕ್ಕಿಯೇ ನತ್ತಿಂಗ ಅಂದರೆ ನೈಟ್‌ ಜಾರ್.‌ ಪಾರಿವಾಳದಷ್ಟು ಗಾತ್ರವಿದ್ದು, ಕಂದು, ಕಪ್ಪು ಮತ್ತು ಬಿಳಿಬಣ್ಣದ ಪುಕ್ಕಗಳನ್ನು ಹೊಂದಿರುವುದರಿಂದ ಕಂದುಬಣ್ನದ ಕಲ್ಲುಗಳೊಂದಿಗಿನ ಪರಿಸರಕ್ಕೆ ಚೆನ್ನಾಗಿ ಬೆರೆತು ಹೋಗುತ್ತದೆ. ಭಾರತದಲ್ಲಿ ಸುಮಾರು ಏಳು ಪ್ರಬೇಧಗಳು ಕಂಡುಬರುವ ಇವು ಹಗಲಿನ ವೇಳೆಯಲ್ಲಿ ಸುಮ್ಮನೆ ಕುಳಿತು ಬಿಡುವುದರಿಂದ ಇವುಗಳ ಇರುವಿಕೆಯನ್ನು ಪತ್ತೆ ಹಚ್ಚುವುದೇ ಕಷ್ಟದ ಕೆಲಸ.

ಹಗಲಿನ ವೇಳೆಯಲ್ಲಿ ಹಾರಾಡುವ ಕೀಟಗಳನ್ನು ಹಿಡಿಯಲು ಮೈನ, ಬುಲ್‌ ಬುಲ್‌, ನೊಣಹಿಡುಕಗಳು, ಇತ್ಯಾದಿಬೇಕಾದಷ್ಟು ಪಕ್ಷಿಗಳಿವೆ. ಆದರೆ, ರಾತ್ರಿ ವೇಳೆಯೂ ಪತಂಗಗಳು ಮತ್ತಿತರ ಕೀಟಗಳು ಹಾರಾಡುತ್ತವೆ ಅಲ್ಲವೆ? ರಾತ್ರಿಯ ವೇಳೆಯಲ್ಲಿ ತೆಂಗು, ಹೂವಿನ ಬೆಳೆ, ತರಕಾರಿ ಬೆಳೆ ಮತ್ತು ಹಣ್ಣಿನ ಬೆಳೆಗಳಿಗೆ ದಾಳಿಇಡುತ್ತವೆ, ಅಷ್ಟೇ ಅಲ್ಲ, ಆ ಗಿಡಗಳ ಎಲೆಗಳ ಕೆಳಗೆ ನೂರಾರು ಮೊಟ್ಟೆ ಇಟ್ಟು, ಅವುಗಳಿಂದ ಬರುವ ಮರಿಗಳು ಬೆಳೆಯನ್ನೇ ನುಣ್ಣಗೆ ತಿಂದುಬಿಡುತ್ತವೆ.. ಇವುಗಳನ್ನು ನಿಯಂತ್ರಿಸಲು ಯಾರಾದರೂ ಬೇಕಲ್ಲವೆ, ಅವೇ ಈ ನೈಟ್‍ಜಾರ್ ಹಕ್ಕಿಗಳು.

ಪಾರಿವಾಳಕ್ಕಿಂತ ಸ್ವಲ್ಪ ಸಣ್ಣಗಾತ್ರದಲ್ಲಿರುವ ಇವು ಹಗಲಿನ ವೇಳೆಯಲ್ಲಿ ತಟಸ್ಥವಾಗಿ ನೆಲದ ಮೇಲೆಯೋ, ಮರದ ಕೊಂಬೆ ಮೇಲೆಯೋ ಕುಳಿತುಕೊಂಡಿದ್ದು, ಸಂಜೆಯಾದಂತೆ ಕ್ರಿಯಾಶೀಲವಾಗುತ್ತವೆ. ಕಣ್ಣುಗಳನ್ನು ಅರೆ ಅಥವಾ ಪೂರ್ತಿ ಮುಚ್ಚಿಕೊಂಡಿದ್ದು ಬೆಳಗಿನಿಂದ ಸಂಜೆಯವರೆಗೆ ಕಾಯುತ್ತಾ ಸಂಜೆಯಾದಂತೆ ನಕ್ಷತ್ರ ಮತ್ತು ಚಂದ್ರನ ಬೆಳಕಿಗೆ, ಕೆಲವೊಮ್ಮೆ ವಾಹನಗಳ ಬೆಳಕಿಗೆ ಹಾರಿ ಬರುವ ಕೀಟಗಳನ್ನು ಹಿಡಿದು ತಿನ್ನುತ್ತವೆ. ರಾತ್ರಿಯ ವೇಳೆ ಹಾರಾಡುವಾಗ ಇವುಗಳ ಕಣ್ಣುಗಳು ಪ್ರಾಣಿಗಳ ಕಣ್ಣು ಹೊಳೆಯುವ ಹಾಗೆ ಹೊಳೆಯುತ್ತವೆ. ಅಂದರೆ, ಇವುಗಳಲ್ಲಿ ರಾಡ್(ಕಂಬಿ) ಎಂಬ ಗ್ರಾಹಕ ಕೋಶಗಳು ಹೆಚ್ಚಾಗಿದ್ದು ನಿಶಾಚರಿಗಳಾಗಿವೆ.

ಇಂಥ ಹಕ್ಕಿಗಳು ಇಲ್ಲದಿದ್ದಲ್ಲಿ ಇನ್ನೆಷ್ಟು ಕಂಬಳಿಹುಳು, ಕೀಟಗಳು ಮತ್ತು ದುಂಬಿಗಳು ಹೆಚ್ಚಾಗಿ, ಬೆಳೆ, ಸಸ್ಯಗಳಿಗೆ ಮತ್ತು ಆಹಾರ ಪದಾರ್ಥಗಳಿಗೆ ಕಂಟಕವಾಗುತ್ತಿದ್ದುದು ಸತ್ಯ ಅಲ್ಲವೇ?