"ಜನಸಂಖ್ಯೆ ನಿಯಂತ್ರಿಸಿ,ಇರುವ ಜೀವ ಸಂಕುಲ ಉಳಿಸಿ".
ಬಿ ಆರ್ ಪಿ ಶಿರಹಟ್ಟಿ
ಸಾ.ಪೊ ರಾಮಗೇರಿ, ತಾಲ್ಲೂಕು ಲಕ್ಷ್ಮೇಶ್ವರ, ಜಿಲ್ಲಾ ಗದಗ.
ದೂರವಾಣಿ 9742193758
ಮಿಂಚಂಚೆ basu.ygp@gmail.com.
ಜುಲೈ-11: ವಿಶ್ವ ಜನಸಂಖ್ಯಾ ದಿನ, ತನ್ನಿಮಿತ್ತ ವಿಶೇಷ ಲೇಖನ.
"ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ
ವಾಸಿಸುತ್ತಿದ್ದಾರೆ ಮತ್ತು ಹೆಚ್ಚಾಗಿ ಬಡತನದ ಸ್ಥಿತಿಯಲ್ಲಿದ್ದಾರೆ. ಮಾನವ ಅಭಿವೃದ್ಧಿಯಲ್ಲಿನ ಇಂತಹ
ಅಸಮಾನತೆಗಳು, ಅಶಾಂತಿ ಮತ್ತು ಪ್ರಪಂಚದ ಕೆಲವು ಭಾಗಗಳಲ್ಲಿ ಜನಸಂಖ್ಯೆ, ಹಿಂಸಾಚಾರಕ್ಕೆ ಪ್ರಾಥಮಿಕ
ಕಾರಣಗಳಲ್ಲಿ ಒಂದಾಗಿದೆ" ಎಂದು 'ಎ.ಪಿ.ಜೆ. ಅಬ್ದುಲ್ ಕಲಾಂ' ಹೇಳಿದ್ದಾರೆ. ಹೌದು
ಪ್ರಪಂಚದಾದ್ಯಂತ ಲಭ್ಯವಿದ್ದ ಭೂಮಿಯಲ್ಲಿ ಜನರು ಇರಲು ಜಾಗ ಸಿಗದೆ ಇರುವುದರಿಂದ ಬದುಕು ಕಟ್ಟಿಕೊಳ್ಳಲು
ಸಾಧ್ಯವಾಗದ ದುಸ್ತರ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಅದಕ್ಕಾಗಿ ನಮ್ಮ ಭೂಮಿ ತಾಯಿಯು ತುಂಬಾ ಜನರಿಗೆ ಆಹಾರವನ್ನು ನೀಡಲು ಸಾಧ್ಯವಾಗುತ್ತಿಲ್ಲ.
ನಮ್ಮ ಪ್ರಕೃತಿಯ ಸಲುವಾಗಿ ಜಾಗತಿಕ ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಸರ್ಕಾರದೊಂದಿಗೆ
ಕೈಜೋಡಿಸಿ ಜನಸಂಖ್ಯೆ ನಿಯಂತ್ರಣದ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಹಾಗೆಯೇ ನಾವು ಜಾಗತಿಕ
ಜನಸಂಖ್ಯೆಯ ಬೆಳವಣಿಗೆಯ ದರವನ್ನು ಕಡಿಮೆ ಮಾಡುವುದನ್ನು ಮುಂದುವರಿಸಬೇಕಾಗಿದೆ.ಹೀಗಾಗಿ ಜನಸಂಖ್ಯಾ ಹೆಚ್ಚಳದಿಂದಾಗಿ ಉಂಟಾಗುತ್ತಿರುವ ಜಾಗತಿಕ ಹಾಗೂ
ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಪ್ರಪಂಚದಾದ್ಯಂತ ಜುಲೈ
11 ರಂದು "ವಿಶ್ವ ಜನಸಂಖ್ಯೆ" ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಜನಸಂಖ್ಯಾ ದಿನವು ಕುಟುಂಬ ಯೋಜನೆ, ಲಿಂಗ ಸಮಾನತೆ, ಬಡತನ, ತಾಯಿಯ
ಆರೋಗ್ಯ ಮತ್ತು ಮಾನವ ಹಕ್ಕುಗಳ ಪ್ರಾಮುಖ್ಯತೆಯಂತಹ ವಿವಿಧ ಜನಸಂಖ್ಯೆಯ ಸಮಸ್ಯೆಗಳ ಕುರಿತು ಜನರಲ್ಲಿ
ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
#ವಿಶ್ವ ಜನಸಂಖ್ಯಾ ದಿನ ಆಚರಣೆಯ ಇತಿಹಾಸ:
ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಭವಿಷ್ಯದಲ್ಲಿ ಉಂಟಾಗಬಹುದಾದ
ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆ ಈ ದಿನವನ್ನು ಆಚರಿಸಲು ನಿರ್ಧರಿಸಿತು.ಜುಲೈ
11, 1987 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು
ತಲುಪಿತ್ತು. ಜನಸಂಖ್ಯೆ ಈ ರೀತಿ ಹೆಚ್ಚುತ್ತಾ ಹೋದರೆ ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ
ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ 'ವಿಶ್ವಸಂಸ್ಥೆ ಅಭಿವೃದ್ಧಿ ಕಾರ‍್ಯಕ್ರಮ (ಯುಎನ್‌ಡಿಪಿ)
ಮಂಡಳಿ'ಯ ಮೂಲಕ 1989, ಜುಲೈ 11ರಂದು ಮೊದಲ ಬಾರಿಗೆ ಜನಸಂಖ್ಯಾ ದಿನವನ್ನು ಆಚರಿಸಿತು. ಈಗ ಜಗತ್ತಿನಾದ್ಯಂತ
200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸುತ್ತಾ ಜನರಲ್ಲಿ ಜನಸಂಖ್ಯಾ ಸ್ಫೋಟದ ಬಗ್ಗೆ ಜನರಲ್ಲಿ
ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.
#ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತ:
ಭಾರತ ಭವಿಷ್ಯದ ಜನಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದತ್ತ ದಾಪುಗಾಲು
ಇಟ್ಟಾಗಿದೆ.ಇದೀಗ ಭಾರತ ಜನಸಂಖ್ಯೆಯಲ್ಲಿ ಏಪ್ರಿಲ್
24, 2023 ರಿಂದ, ಚೀನಾ ಶೀಘ್ರದಲ್ಲೇ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ತನ್ನ
ದೀರ್ಘಕಾಲದ ಸ್ಥಾನಮಾನವನ್ನು ಬಿಟ್ಟುಕೊಡುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ, ಭಾರತದ ಜನಸಂಖ್ಯೆಯು
1,425,775,850 ರಷ್ಟು ಇದೆ.ಈಗ ಎರಡನೇ ಸ್ಥಾನದಲ್ಲಿ ಚೀನಾ ದೇಶವಿದೆ. ಆದರೆ ಭಾರತದಲ್ಲಿ ಜನಸಂಖ್ಯಾ
ನಿಯಂತ್ರಿಸದೆ ಹೋದರೆ ಭಾರತವು 2027ರ ವೇಳೆಗೆ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ನಂಬರ್ 1 ಸ್ಥಾನಕ್ಕೆ
ಏರಿದೆ ಅಂದಾಜಿಸಲಾಗಿತ್ತು.ಆದರೆ ಈಗಾಗಲೇ ಆ ಸ್ಥಾನ ತಲುಪಿದೆ. ಜೊತೆಗೆ 2019ರಿಂದ 2050ರ ಅವಧಿಯಲ್ಲಿ
ಭಾರತದ ಜನಸಂಖ್ಯೆಗೆ ಹೆಚ್ಚುವರಿಯಾಗಿ 27 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದೆ. ಪ್ರಸಕ್ತ ಶತಮಾನದ ಅಂತ್ಯಕ್ಕೆ
ಅಂದರೆ 2100ನೇ ಇಸವಿಗೆ ವಿಶ್ವದ ಜನಸಂಖ್ಯೆ 1100 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ
ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ ಅಧ್ಯಯನ ವರದಿ ತಿಳಿಸಿದೆ.
ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಪರಿಣಾಮಗಳ ಬಗ್ಗೆ, ಭವಿಷ್ಯವನ್ನು ನೆನಸಿಕೊಂಡರೆ
ಮನಸ್ಸಿಗೆ ತುಂಬಾ ಕಳವಳ ಉಂಟಾಗುತ್ತದೆ.ಹಾಗಾದರೆ ಕಳವಳಕ್ಕೆ ಕಾರಣ ಮತ್ತು ಪರಿಣಾಮಗಳೇನು? ಎಂದು ತಿಳಿಯೋಣ.....
*ಜನನ ಪ್ರಮಾಣ ಮತ್ತು ಜೀವಿತಾವಧಿಯಲ್ಲಿನ ಹೆಚ್ಚಳ ಮತ್ತು ಅನಕ್ಷರತೆ ಜನಸಂಖ್ಯೆಯ
ಸ್ಫೋಟಕ್ಕೆ ಪ್ರಮುಖ ಕಾರಣಗಳಾಗಿವೆ. ಇದು ನಿರುದ್ಯೋಗ, ಬಡತನ ಮತ್ತು ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತದೆ.
*ಜನಸಂಖ್ಯೆ ಹೆಚ್ಚಳದಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಪ್ರಮುಖ
ಸಮಸ್ಯೆಯಾಗಿದೆ. ಭಾರತದಲ್ಲಿ ಜನಸಂಖ್ಯೆಯ ಹೆಚ್ಚಳವು ಬಡತನ ಮತ್ತು ಅನಕ್ಷರತೆಗೆ ಕಾರಣವಾಗುವುದರಿಂದ
ಜನಸಂಖ್ಯೆಯ ಸ್ಫೋಟವು ತೀವ್ರ ಕಳವಳದ ವಿಷಯವಾಗಿದೆ. ಈ ಪರಿಸ್ಥಿತಿಯಲ್ಲಿ ಜನಸಂಖ್ಯೆಯ ತ್ವರಿತ ಬೆಳವಣಿಗೆಯೊಂದಿಗೆ
ದೇಶದ ಆರ್ಥಿಕತೆಯನ್ನು ನಿಭಾಯಿಸುವುದು ಕಷ್ಟವಾಗಿದೆ.
*ಜನಸಂಖ್ಯಾ ಹೆಚ್ಚಳದಿಂದಾಗಿ ಜೀವಂತ ಜನರ ಸಂಖ್ಯೆಯು, ಭೂಮಿಯು ತಡೆದುಕೊಳ್ಳಲಾಗದ
ಸಾಮರ್ಥ್ಯವನ್ನು ಮೀರುತ್ತದೆ. ಇದು ನಮ್ಮಂತಹ ದೇಶಕ್ಕೆ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ.
*ಪ್ರತಿನಿತ್ಯ ಸಾವಿರಾರು ಮಕ್ಕಳು ಜನಿಸುತ್ತಿದ್ದು, ಏತನ್ಮಧ್ಯೆ ಸಾವಿನ
ಪ್ರಮಾಣ ಕಡಿಮೆಯಾಗಿ ಜನಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ ಕಾರಣ ವೈದ್ಯಕೀಯ ಸೌಲಭ್ಯ. ಇದು ಒಳ್ಳೆಯದೇ
ಆಗಿದ್ದರೂ, ಹಲವು ರೀತಿಯಲ್ಲಿ ನಮ್ಮ ಜನಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ಅತಿ ಹೆಚ್ಚು ಜನಸಂಖ್ಯೆಯನ್ನು
ಹೊಂದಿರುವ ಮೊದಲ ಎರಡು ದೇಶಗಳೆಂದರೆ ಚೀನಾ ಮತ್ತು ಭಾರತ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
*ಜನಸಂಖ್ಯೆ ಹೆಚ್ಚಳದಿಂದ ಯಾವುದೇ ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ
ಮತ್ತು ಶೈಕ್ಷಣಿಕವಾಗಿ ತತ್ತರಿಸಿ, ಹಿಂದುಳಿಯುತ್ತಾ ಹೋಗುತ್ತದೆ.ದೇಶದಲ್ಲಿನ ಸಂಪನ್ಮೂಲಗಳ ಸೌಲಭ್ಯದ
ಅಭಾವ ಉಂಟಾಗುತ್ತದೆ. ಜನಸಂಖ್ಯಾ ಸ್ಫೋಟವು ಒಂದು ಅಪಾಯದ ಸೂಚನೆಯಾಗಿದ್ದು ದೇಶದ ಪ್ರಗತಿಗೆ ಶಾಪವಾಗಿ
ಪರಿಗಣಿಸಲಾಗುತ್ತದೆ.
#ಯಾಕಾಗಿ ಈ ಆಚರಣೆ:
ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುವುದರಿಂದ ಜನರಲ್ಲಿ ಜಾಗೃತಿ ಮೂಡಿಸುವ
ಉದ್ದೇಶದಿಂದ ನಾವು ಜಾಗತಿಕ ಜನಸಂಖ್ಯೆಯ ಬೆಳವಣಿಗೆಯ ದರವನ್ನು ಕಡಿಮೆ ಮಾಡುವುದನ್ನು ಮುಂದುವರಿಸಬೇಕಾಗಿದೆ.
ಹಾಗಾಗಿ ನಮಗೆ ಈ ಕೆಳಗಿನ ಅಂಶಗಳಿಂದ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ.
*ಲಿಂಗ ಅಸಮಾನತೆ ಹೋಗಲಾಡಿಸುವುದು.
*ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಸಂತಾನೋತ್ಪತ್ತಿ ಹಾಗೂ ಆರೋಗ್ಯದ ಬಗ್ಗೆ
ಅರಿವು ಮೂಡಿಸುವುದು.
*ಜನರಿಗೆ ಆರೋಗ್ಯ ಸೌಲಭ್ಯ ದೊರೆಯಲು ಅನೇಕ ಯೋಜನೆಗಳನ್ನು ರೂಪಿಸುವುದು.
*ಹೆಣ್ಣು ಮಗುವಿನ ಆರೋಗ್ಯ ಹಾಗೂ ಆಕೆಯ ಹಕ್ಕುಗಳನ್ನು ರಕ್ಷಿಸುವುದು.
*ಲೈಂಗಿಕ ಶಿಕ್ಷಣ ನೀಡುವ ಮೂಲಕ ಸಂತಾನೋತ್ಪತ್ತಿ ಹಾಗೂ ಲೈಂಗಿಕ ಕಾಯಿಲೆ
ಕುರಿತು ಅರಿವು ಮೂಡಿಸುವುದು.
*ಲೈಂಗಿಕವಾಗಿ ಹರಡುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು.
*ಲೈಂಗಿಕ ಶಿಕ್ಷಣದ ಕೊರತೆ, ಆರೋಗ್ಯಕ್ಕಾಗಿ ಹಕ್ಕು, ಹುಟ್ಟಲಿರುವ ಮಗುವಿನ
ಲಿಂಗ ಪತ್ತೆ, ಗರ್ಭನಿರೋಧಕ ವಸ್ತುಗಳ ಬಳಕೆ ಇವುಗಳ ಕುರಿತು ಕೂಡ ಈ ದಿನ ಬೆಳಕು ಚೆಲ್ಲಬೇಕಾಗಿದೆ.
ಒಟ್ಟಾರೆಯಾಗಿ ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸಲು, ನಾವು ಮೊದಲು
ಜಾಗೃತರಾಗಿರಬೇಕು ಮತ್ತು ಜನರು ಸಹ ಜಾಗೃತರಾಗಬೇಕು ಏಕೆಂದರೆ ನಾವು ಜಾಗೃತರಾದಾಗ ಮಾತ್ರ ಇತರರಿಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಈಗಿನಿಂದಲೇ
ಎಲ್ಲ ಕ್ರಮಗಳನ್ನು ತೆಗೆದುಕೊಂಡು ಎಲ್ಲಾ ರಂಗಗಳಲ್ಲೂ ಜನಸಂಖ್ಯಾ ಶಿಕ್ಷಣ ನೀಡಬೇಕಾದ ಅನಿವಾರ್ಯತೆ
ಎದುರಾಗಿದೆ.ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾವು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಬಾರದು.ಹಾಗೆಯೇ
ಜನರೂ ಕೂಡ ಇದಕ್ಕಾಗಿ ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಯಶಸ್ವಿಗೊಳಿಸಬೇಕು.
ಇದರಿಂದ ಜೀವ ಸಂಕುಲ ಉಳಿಯಲು ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ಸಾಧ್ಯ ಎಂಬುದು ನನ್ನ ಆಶಯ.
#ವಿಶ್ವ ಜನಸಂಖ್ಯಾ ದಿನದ ಘೋಷಣೆಗಳು:
~ಸುಸ್ಥಿರ ಭವಿಷ್ಯಕ್ಕಾಗಿ ಸುಸ್ಥಿರ ಬೆಳವಣಿಗೆ..!
~ಸಣ್ಣ ಕುಟುಂಬ, ಸಂತೋಷದ ಕುಟುಂಬ..!
~ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ.
~ಭವಿಷ್ಯವನ್ನು ಸುರಕ್ಷಿತಗೊಳಿಸಿ, ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಿ.
~ನೀವು ಗುಣಿಸುವ ಮೊದಲು ಯೋಚಿಸಿ, ಜಗತ್ತನ್ನು ಉಳಿಸಿ.
~ನಿಮ್ಮ ಕುಟುಂಬವನ್ನು ಯೋಜಿಸಿ, ನಿಮ್ಮ ಭವಿಷ್ಯವನ್ನು ಯೋಜಿಸಿ.
~ಜನಸಂಖ್ಯೆ ನಿಯಂತ್ರಣ: ಉತ್ತಮ ಜಗತ್ತಿಗೆ ಕೀಲಿಕೈ.
~ನಿಮ್ಮ ಕುಟುಂಬದ ಗಾತ್ರವು ನಿಮ್ಮ ಕೈಯಲ್ಲಿದೆ, ಗ್ರಹವನ್ನು ಉಳಿಸಿ.
~ಕಡಿಮೆ ಜನರು, ಹೆಚ್ಚು ಸಂಪನ್ಮೂಲಗಳು.
#ಕೊನೆಯ ಮಾತು:
"ಜನರ ಆರೋಗ್ಯವನ್ನು ಸುಧಾರಿಸುವ ಮೂಲಕ, ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಹಾಗೂ ಅವರಿಗೆ ಶಿಕ್ಷಣ ನೀಡಿದಾಗ ಮಾತ್ರ ಜನಸಂಖ್ಯೆಯ ಬೆಳವಣಿಗೆಯು ಕಡಿಮೆಯಾಗುತ್ತದೆ" ಎಂದು ಬಿಲ್ ಗೇಟ್ಸ್ ಹೇಳಿದ ಮಾತನ್ನು ಇಲ್ಲಿ ಸ್ಮರಿಸಬಹುದು.
No comments:
Post a Comment