ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, December 4, 2022

ಸವಿಜ್ಞಾನ ಡಿಸೆಂಬರ್ - 2022 ರ ಲೇಖನಗಳು

 ಸವಿಜ್ಞಾನ ಡಿಸೆಂಬರ್ - 2022 ರ ಲೇಖನಗಳು

Ø ಸಂಪಾದಕರ ಡೈರಿಯಿಂದ .....

Ø ಮೊನಾರ್ಕ್ ಚಿಟ್ಟೆಗಳವಲಸೆಯ ನಿಗೂಢತೆ !

Ø ಭವಿಷ್ಯದ ತಂತ್ರಜ್ಞಾನ - ಮುಖ ಗುರುತಿಸುವ ತಂತ್ರಜ್ಞಾನ

Ø ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ!!!

Ø ವಿಜ್ಞಾನ ಎಂಬ ವಿಸ್ಮಯ

Ø ಅಸಾಧಾರಣ ಪ್ರತಿಭೆಯುಳ್ಳವಿಶೇಷವಾದ ಮೀನು - ಆರ್ಚರ್ ಮೀನು 

ಸಾಧಕ ಶಿಕ್ಷಕರ ಪರಿಚಯ : ಡಾ. ನವೀನ್ ಕುಮಾರ್ R U

Ø ಪದಬಂಧ - 12

Ø ವಿಜ್ಞಾನ ಒಗಟುಗಳು : ಡಿಸೆಂಬರ್ 2022

Ø ವ್ಯಂಗ್ಯ ಚಿತ್ರಗಳು - ಡಿಸೆಂಬರ್ 2022

Ø ಪ್ರಮುಖ ದಿನಾಚರಣೆಗಳು ಡಿಸೆಂಬರ್ 2022

 

ಸಂಪಾದಕರ ಡೈರಿಯಿಂದ .....

 ಸವಿಜ್ಞಾನ ಎರಡು ವರ್ಷಗಳನ್ನು ಪೂರೈಸಿ ಮುಂದಿನ ತಿಂಗಳು ಮೂರನೆ ವರ್ಷಕ್ಕೆ ಅಂಬೆಗಾಲಿಡುತ್ತಿರುವ ಶುಭ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ವಿಜ್ಞಾನೋತ್ಸವಗಳು, ಮಕ್ಕಳ ಹಬ್ಬಗಳು ನಡೆಯುತ್ತಿವೆ. ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ‘ ಹಾಗೂ ಅಭಿಮಾನಿ ಓದುಗರಿಗೆ ನಮ್ಮ ಶುಭ ಹಾರೈಕೆಗಳು. 

ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ಡಿಸೆಂಬರ್‌ ತಿಂಗಳ ಸಂಚಿಕೆ ನಿಮ್ಮ ಮುಂದಿದೆ. ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ, ಮೊನಾರ್ಕ್ ಚಿಟ್ಟೆಗಳ ಚಿಟ್ಟೆಗಳ ವಲಸೆಯ ನಿಗೂಢತೆ ! ಕುರಿತ ಸುಂದರ ಲೇಖನವನ್ನು ದೂರದ ಅಮೇರಿಕಾದಿಂದಲೇ ಬರೆದಿದ್ದಾರೆ, ಸವಿಜ್ಞಾನದ ಪ್ರಧಾನ ಸಂಪಾದಕರಾದ ಡಾ. ಟಿ.ಎ. ಬಾಲಕೃಷ್ಣ ಅಡಿಗರು. ಭವಿಷ್ಯದ ತಂತ್ರಜ್ಞಾನ - ಮುಖ ಗುರುತಿಸುವ ತಂತ್ರಜ್ಞಾನದ ಹಿಂದಿನ ಅಚ್ಚರಿಯ ಮಾಹಿತಿಗಳನ್ನು ಚಿತ್ರಿಸಿದ್ದಾರೆ, ಲೇಖಕ   ಗಜಾನನ ಎನ್. ಭಟ್ಟರು. ಈ ಸಂಚಿಕೆಗಾಗಿ ವಿಶ್ವದಾಖಲೆ ಮಾಡಿದ ಗಾಡ್ವಿಟ್‌ ಪಕ್ಷಿಯ ಅದ್ಭುತ ಸಾಧನೆಯ ಕುರಿತ “ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ!!!” ಎಂಬ ಲೇಖನವನ್ನು ನಾನು ಬರೆದಿದ್ದೇನೆ. ಬದುಕಿನಲ್ಲಿ ಮಹತ್ತರ ಬದಲಾವಣೆ ತಂದ ವಿಜ್ಞಾನ ಎಂಬ ವಿಸ್ಮಯದ ಮೇಲೆ ಬೆಳಕು ಚೆಲ್ಲಿದ್ದಾರೆ ಲೇಖಕಿ ಶ್ರೀಮತಿ  ಬಿ.ಎನ್. ರೂಪ ಅವರು. “ಅಸಾಧಾರಣ ಪ್ರತಿಭೆಯುಳ್ಳ ವಿಶೇಷವಾದ ಮೀನು - ಆರ್ಚರ್ ಮೀನು” ಕುರಿತ ವಿಶೇಷ ಮಾಹಿತಿಯನ್ನು ನೀಡಿದ್ದಾರೆ ಶ್ರೀಯುತ ಅನಿಲ್‌ ಕುಮಾರ್‌ ಅವರು. 

    ಇವೆಲ್ಲದರ ಜೊತೆಗೆ, ಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುವಂತೆ ಡಿಸೆಂಬರ್‌ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ಎಂದಿನಂತೆ ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ. 

    ೩ನೇ ವರ್ಷಕ್ಕೆ ಕಾಲಿಡುತ್ತಿರುವ ಕ್ಷಣಗಳಲ್ಲಿ ಹೊಸದನ್ನು ನೀಡುವ ಕುರಿತಂತೆ ನಿಮ್ಮ ಕ್ರಿಯಾಶೀಲ ಆಲೋಚನೆಗಳು. ಸಲಹೆಗಳನ್ನು ಎದುರು ನೋಡುತ್ತಿದ್ದೇವೆ. ಜೊತೆಗೆ ಜನಸಾಮಾನ್ಯರಲ್ಲಿ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಓದುಗರಾಗಿ, ಲೇಖಕರಾಗಿ ನಮ್ಮೊಂದಿಗೆ ಕೈ ಜೋಡಿಸುವ ನಿರೀಕ್ಷೆಯೊಂದಿಗೆ . . .  

ಪ್ರಧಾನ ಸಂಪಾದಕರ ಪರವಾಗಿ 

ರಾಮಚಂದ್ರಭಟ್‌ ಬಿ.ಜಿ.

ಮೊನಾರ್ಕ್ ಚಿಟ್ಟೆಗಳ ವಲಸೆಯ ನಿಗೂಢತೆ !

ಮೊನಾರ್ಕ್ ಚಿಟ್ಟೆಗಳ ವಲಸೆಯ ನಿಗೂಢತೆ !

ಡಾ. ಟಿ.ಎ. ಬಾಲಕೃಷ್ಣ ಅಡಿಗ 

ಬೆಂಗಳೂರಿನ ಬಿಡುವಿಲ್ಲದ ಜೀವನ ಶೈಲಿಯಿಂದ ಕೊಂಚ ಬಳಲಿದ್ದ ನನಗೆ ಪರಿಹಾರದ ರೂಪದಲ್ಲಿ ದೂರದ ಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾದ ಆಸ್ಟಿನ್ ನಲ್ಲಿ ನೆಲಸಿರುವ ನನ್ನ ಮಗನಿಂದ ದಸರೆಯ ವೇಳೆಗೆ ಅಲ್ಲಿಗೆ ಬರುವಂತೆ ಸಲಹೆಯೊಂದು ಬಂದಿತ್ತು. ಅವನ ಒತ್ತಾಯ ಮತ್ತು ಒತ್ತಾಸೆಗೆ ಮಣಿದು ನಾನು ಮತ್ತು ನನ್ನ ಶ್ರೀಮತಿ 2022ರ ಅಕ್ಟೋಬರ್ 8ರ ತಡ ರಾತ್ರಿ  'ಎಮಿರೇಟ್ಸ್' ವಿಮಾನದಲ್ಲಿ ಬೆಂಗಳೂರನ್ನು ಬಿಟ್ಟು 9ರ ಸಂಜೆ ಹ್ಯೂಸ್ಟನ್ ತಲುಪಿದಾಗ, ಅಲ್ಲಿಯ ಕಾಲಮಾನದ ಪ್ರಕಾರ ಸಂಜೆ 6.00 ಘಂಟೆ ಅಗಿತ್ತು. ಅಲ್ಲಿ ನಮ್ಮನ್ನು ಸ್ವಾಗತಿಸಿದ ನಮ್ಮ ಮಗ ತನ್ನ ಕಾರಿನಲ್ಲಿ ಆಸ್ಟಿನ್ ಗೆ ಕರೆದೊಯ್ದ. ಮನೆತಲುಪಿದಾಗ ರಾತ್ರಿ 9.00 ಘಂಟೆ ಆಗಿತ್ತು.

ಮರುದಿನ ಬೆಳಿಗ್ಗೆ ಕಾಫಿಯ ನಂತರ ವಾಯುವಿಹಾರಕ್ಕೆ ಹೋಗುವ ಸಲುವಾಗಿ ಬಾಗಿಲು ತೆರೆದು ಹೊರ ಬಂದ ನನಗೆ ಅಚ್ಚರಿಯೊಂದು ಕಾದಿತ್ತು. ಮನೆಯ ಹೊರಗಿನ ಪುಟ್ಟ ಉದ್ಯಾನದಲ್ಲಿ ಅರಳಿದ್ದ ಲ್ಯಾವೆಂಡರ್ (Lavandula angustifolia) ಹೂವುಗಳ ಸುತ್ತ ಹಾರಾಡುತ್ತಿದ್ದ ಕಿತ್ತಲೆ ಬಣ್ಣದ ರೆಕ್ಕೆಗಳನ್ನು ಹೊಂದಿದ್ದ ಸುಂದರ ಚಿಟ್ಟೆಗಳ ಗುಂಪು ನನ್ನ ಗಮನಕ್ಕೆ ಬಂತು. ಸುಮಾರು ಮುಕ್ಕಾಲು ಘಂಟೆಯ ವಾಯು ವಿಹಾರದ ನಂತರ ಮನೆಗೆ ವಾಪಸಾದಾಗ ಆ ಗಿಡಗಳ  ಸುತ್ತ ಹಾರಾಡುತ್ತಿದ್ದ ಚಿಟ್ಟೆಗಳ ಸಂಖ್ಯೆ ಹೆಚ್ಚಾಗಿತ್ತು. ಅಲ್ಲೇ ಕೆಲ ಹೊತ್ತು ಚಿಟ್ಟೆಗಳನ್ನು ನೋಡುತ್ತಾ ನಿಂತು, ನಂತರ ಒಳಗೆ ಬಂದೆ. ಮಾರನೆಯ ದಿನವೂ ಇದೇ ಪರಿಸ್ಥಿತಿ. ಎಚ್ಚರಿಕೆಯಿಂದ ಒಂದು ಚಿಟ್ಟೆಯನ್ನು ಹಿಡಿದು ಸೂಕ್ಷ್ಮವಾಗಿ ಪರಿಶೀಲಿಸಿದೆ. ನಾನು ಚಿಟ್ಟೆಗಳ ಬಗ್ಗೆ ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದ ಮೊನಾರ್ಕ್ ಚಿಟ್ಟೆಯ ವರ್ಣಸಂಯೋಜನೆಯನ್ನು ಅದು ಹೋಲುತ್ತಿತ್ತು ! ಅಂದೇ ಜಾಲತಾಣದಲ್ಲಿ ಹುಡುಕಾಟ ನಡೆಸಿ ನನ್ನ ಅನುಮಾನವನ್ನು ಪರಿಹರಿಸಿಕೊಂಡೆ. ಉದ್ಯಾನದಲ್ಲಿ ನಾನು ಕಂಡ ಚಿಟ್ಟೆಗಳು ಮೊನಾರ್ಕ್ ಚಿಟ್ಟೆಗಳೇ ಆಗಿದ್ದುವು ! ಬಹುದೂರ ವಲಸೆ ಹೋಗುವ ತಮ್ಮ ಪ್ರವೃತ್ತಿಗೆ ಹೆಸರುವಾಸಿಯಾದ ಈ ಮೊನಾರ್ಕ್ ಚಿಟ್ಟೆಗಳ ಬಗ್ಗೆ ನನ್ನಲ್ಲಿ ಮೂಡಿದ ಕುತೂಹಲದ ಫಲವಾಗಿ ನಾನು ನಡೆಸಿದ ಅಧ್ಯಯನವೇ ಈ ಲೇಖನಕ್ಕೆ ಪ್ರೇರಣೆ !

 

ವೀಡಿಯೊ : ಲ್ಯಾವೆಂಡರ್ ಗಿಡಗಳ ಸುತ್ತ ಮೊನಾರ್ಕ್ ಚಿಟ್ಟೆಗಳು https://youtu.be/FNJS_mz6EF8

 

ಅತಿ ಹೆಚ್ಚು ಅಧ್ಯಯನಕ್ಕೊಳಗಾದ ಚಿಟ್ಟೆಗಳಿವು !

 

ಮೊನಾರ್ಕ್ ಚಿಟ್ಟೆಗಳು ಉತ್ತರ ಅಮೆರಿಕಾದಲ್ಲಿ ಅತ್ಯಂತ ಚಿರಪರಿಚಿತವಾದ ಚಿಟ್ಟೆಗಳ ಒಂದು ವಿಧ. ಅಷ್ಟೇ ಅಲ್ಲ, ವಿಶ್ವದಾದ್ಯಂತ ಅತಿ ಹೆಚ್ಚು ವಿವರವಾಗಿ ಅಧ್ಯಯನ ಮಾಡಲಾದ ಚಿಟ್ಟೆಗಳ ಪ್ರಭೇದವೂ ಹೌದು. ಅಮೆರಿಕಾದ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ 'ರಾಜ್ಯದ ಕೀಟ' ಎಂಬ ಮಾನ್ಯತೆ ಪಡೆದಿರುವ  ಹೆಗ್ಗಳಿಕೆ ಈ ಚಿಟ್ಟೆಯದು ! ಈ ಚಿಟ್ಟೆ ಡನಾಸ್ ಪ್ಲೆಕ್ಸಿಪ್ಪಸ್ (Danaus plexippus) ಎಂಬ ಪ್ರಭೇದಕ್ಕೆ ಸೇರುತ್ತದೆ.

ಕೇವಲ ಅರ್ಧ ಗ್ರಾಂ ತೂಕ ಇರುವ ಈ ಚಿಟ್ಟೆಯ ರೆಕ್ಕೆಯ ವಿಸ್ತೀರ್ಣ 9 ರಿಂದ 11ಸೆಂ.ಮೀ. ಇರುತ್ತದೆ. ಮಿಕ್ಕ ಚಿಟ್ಟೆಗಳಂತೆ ಆರು ಕಾಲುಗಳಿದ್ದರೂ, ಮುಂದಿನ ಒಂದು ಜೊತೆ ಕಾಲುಗಳು ಚಿಕ್ಕದಿದ್ದು ತಲೆಯ ಕೆಳಗೆ ಮಡಚಿಕೊಂಡಂತೆ ಇರುತ್ತವೆ. ರೆಕ್ಕೆಗಳು ಕಿತ್ತಲೆ ಬಣ್ಣದಿಂದ ಕೂಡಿದ್ದು, ಕಡು ಕಪ್ಪು ಬಣ್ಣದ ನಾಳ ಜಾಲಗಳನ್ನು(veins) ಹೊಂದಿದೆ. ಗಂಡು ಚಿಟ್ಟೆಗಳ ಹಿಂಬದಿ ರೆಕ್ಕೆಗಳ ಒಂದು ನಾಳದ ಮೇಲೆ ಸುಗಂಧ

ಬೀರುವ ಒಂದು ಕಪ್ಪು ಬಣ್ಣದ ಬಿಂದು ಕಂಡು ಬರುತ್ತದೆ. ಹೆಣ್ಣು ಚಿಟ್ಟೆಗಳ ರೆಕ್ಕೆಗಳ ನಾಳಗಳ ಉದ್ದಕ್ಕೂ ಕಪ್ಪು ಫಲಕಗಳಿರುತ್ತವೆ. ಗಂಡು ಚಿಟ್ಟೆಗಳು ಹೆಣ್ಣು ಚಿಟ್ಟೆಗಳಿಗಿಂತ ಕೊಂಚ ದೊಡ್ಡದಾಗಿರುತ್ತವೆ. ರೆಕ್ಕೆಯ ಮೇಲಿರುವ ಫಲಕಗಳು ವಾಯುಗಾಮಿ (aerodynamic) ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಉದರಭಾಗದ ಮೇಲ್ಮೈಯಲ್ಲಿರುವ ಫಲಕಗಳ ಸೂಕ್ಷ್ಮ ರಚನೆ ದೇಹದ ಶಾಖವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ.

  

 

 

ಚಿತ್ರ 1 : ಮೊನಾರ್ಕ್ ಚಿಟ್ಟೆಗಳು

ಮೊನಾರ್ಕ್ ಚಿಟ್ಟೆಗಳ ಈ ಹೆಸರಿನ ಹಿಂದೆ ಒಂದು ಐತಿಹ್ಯವಿದೆ. ದಕ್ಷಿಣ ಫ್ರಾನ್ಸ್ ನಲ್ಲಿ ಆರೇಂಜ್ ಎಂಬ ಹೆಸರಿನ ಒಂದು ಪ್ರದೇಶವಿದೆ. ಅಲ್ಲಿ ರಾಜನಾಗಿದ್ದ ವಿಲಿಯಮ್ಸ್ III ಎಂಬಾತನ ಬಗ್ಗೆ  ಉತ್ತರ ಅಮೆರಿಕಾದ ಜನರಿಗೆ ವಿಶೇಷ ಅಭಿಮಾನ. ಆ ಅಭಿಮಾನದ ದ್ಯೋತಕವೇ ಈ ಕಿತ್ತಳೆ ಬಣ್ಣದ, ರಾಜ ಗಾಂಭೀರ್ಯದ ಚಿಟ್ಟೆಗೆ ಮೊನಾರ್ಕ್ ಎಂಬ ಹೆಸರಿಡಲು ಕಾರಣ ! ತಮ್ಮ ರೂಪಪರಿವರ್ತನೆಯ ವಿಧಾನ, ಕುತೂಹಲಕಾರಿ ಮಿಮಿಕ್ರಿ ಹಾಗೂ ಅಚ್ಚರಿ ಮೂಡಿಸುವ ವಲಸೆ ಪ್ರಕ್ರಿಯೆಗಳಿಂದಾಗಿ ಇವುಗಳನ್ನು ಚಿಟ್ಟೆಗಳ ರಾಜ ಎಂದು ಪರಿಗಣಿಸಬಹುದು.

 

ಪ್ಯೂಪಾ ಹಂತದಿಂದ ಬೇಸಿಗೆಯ ಅಂತ್ಯಕ್ಕೆ ಅಥವಾ ಚಳಿಗಾಲದ ಪ್ರಾರಂಭಕ್ಕೆ ಹೊರಬರುವ ಚಿಟ್ಟೆಗಳಿಗೆ ಕ್ರೈಸಲೈಡ್ ಗಳು(chrysalides) ಎಂದು ಕರೆಯಲಾಗುತ್ತದೆ. ಇವು ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಚಿಟ್ಟೆಗಳಿಗಿಂತ ಜೈವಿಕವಾಗಿ ಹಾಗೂ ವರ್ತನೆಯಲ್ಲಿ ಭಿನ್ನವಾಗಿರುತ್ತವೆ. ನೋಡಲು ಬೇಸಿಗೆಯ ಪ್ರೌಢ ಚಿಟ್ಟೆಗಳಂತೆ ಕಂಡುಬಂದರೂ, ಇವು ಮುಂಬರುವ ವಸಂತದವರೆಗೆ ಸಂತಾನಾಭಿವೃದ್ಧಿ ಮಾಡುವುದಿಲ್ಲ. ಬದಲಿಗೆ, ತಮ್ಮ ಸಣ್ಣ ದೇಹವನ್ನು ಮುಂದಿನ ದೀರ್ಘ ಹಾರಾಟಕ್ಕೆ ಅನುವಾಗುವಂತೆ ಅಣಿಗೊಳಿಸಿಕೊಳ್ಳುತ್ತವೆ. ಶೀತಲ ಹವಾಮಾನದಲ್ಲಿ ಇವು ಹಾರುವುದೇ ಇಲ್ಲ !

 ವಲಸೆ ವೀರರು !

ಎಷ್ಟು ದೂರದ ಪ್ರಯಾಣವಾದರೂ, ಅದು ಮೊದಲನೇ ಹೆಜ್ಜೆಯಿಂದಲೇ ಪ್ರಾರಂಭ ಅಲ್ಲವೇ ? ಈ ಚಿಟ್ಟೆಗಳ ವಿಶಿಷ್ಟ ವಲಸೆ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆಯೇ ಮೊಟ್ಟೆ. ಇಲ್ಲಿ ಹೇರಳವಾಗಿ ಬೆಳೆಯುವ ಮಿಲ್ಕ್ ವೀಡ್(Asclepias) ಸಸ್ಯದ ಎಲೆಗಳ ಮೆಲ್ಮೈಯಲ್ಲಿ ಇಡಲಾಗುವ ಗುಂಡು ಸೂಜಿಯ ಮೇಲ್ತುದಿಯ ಗಾತ್ರದ ಮೊಟ್ಟೆಗಳು ನಾಲ್ಕು ದಿನದಲ್ಲೇ ಒಡೆದು 2 mm ಉದ್ದ ಇರುವ ಕಂಬಳಿ ಹುಳುಗಳು ಹೊರಬರುತ್ತವೆ. ಒಡೆದ ಮೊಟ್ಟೆಯ ಪೊರೆಯೇ ಇವುಗಳಿಗೆ ಮೊದಲ ಅಹಾರ. ಮುಂದಿನ ಎರಡು ವಾರ ಕಾಲ ನಿರಂತರವಾಗಿ ಆ ಸಸ್ಯದ ಎಲೆ ಮತ್ತು ಹೂವುಗಳನ್ನು ಸೇವಿಸುತ್ತ ಅವುಗಳಲ್ಲಿರುವ ಕಾರ್ಡಿಯಕ್ ಗ್ಲೈಕೋಸೈಡ್(cardiac glycoside) ಎಂಬ ರಾಸಾಯನಿಕವನ್ನು ತಮ್ಮ ದೇಹದಲ್ಲಿ ಉಳಿಸಿಕೊಳ್ಳುತ್ತವೆ. ಒಗಚು ರುಚಿಯಿರುವ ಇದರಿಂದಾಗಿ ಮುಂದೆ ಯಾವುದೇ ಭಕ್ಷಕ ಪ್ರಾಣಿ ಇವುಗಳನ್ನು ತಿನ್ನುವುದಿಲ್ಲ ! ಬಿಡುವಿಲ್ಲದ ಆಹಾರ ಸೇವನೆಯಿಂದಾಗಿ ಮರಿಗಳು ಗಾತ್ರದಲ್ಲಿ 20 ಪಟ್ಟು ಮತ್ತು ತೂಕದಲ್ಲಿ ಸುಮಾರು 2700 ಪಟ್ಟು ಬೆಳೆಯುತ್ತವೆ. ಈ ಅವಧಿಯಲ್ಲಿ ಐದು ಬಾರಿ ಪೊರೆ ಬಿಡುತ್ತವೆ. ಪ್ರತಿ ಬಾರಿ ಬಿಟ್ಟ ಪೊರೆಯನ್ನೇ ಆಹಾರವಾಗಿಯೂ ಬಳಸುತ್ತವೆ. ಹೀಗಾಗಿ, ತ್ಯಾಜ್ಯ ಮರುಬಳಕೆಗೆ ಈ ಮರಿಗಳು ಒಂದು ಉತ್ತಮ ನಿದರ್ಶನವಾಗಿವೆ.

  ಚಿತ್ರ 2 : ಡಿಂಬ-ಕಂಬಳಿ ಹುಳು


ಈ ಕಂಬಳಿ ಹುಳುಗಳು ಪ್ಯೂಪಾ(chrysalis) ಆಗಿ ಪರಿವರ್ತನೆ ಹೊಂದುವ ಪ್ರಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಐದನೇ ಬಾರಿ ಪೊರೆ ಬಿಡುವ ಸುಮಾರು 10 ಘಂಟೆಗಳ ಮುನ್ನ ಪ್ರತಿಯೊಂದು ಹುಳ ರೇಷ್ಮೆಯಂಥ ಎಳೆಯೊಂದನ್ನು ತನ್ನ ಸುತ್ತ ಸ್ರವಿಸಿಕೊಳ್ಳುತ್ತದೆ. ಮುಂದೆ ನಡೆಯುವುದೆಲ್ಲಾ  ನಾಟಕೀಯ ಬೆಳವಣಿಗೆ ! ತಲೆಯ ಭಾಗದಲ್ಲಿ ಒಂದು ಸೀಳಿನ ಮೂಲಕ ದೇಹ ತುಂಡಾಗುತ್ತದೆ. ತನ್ನ ಹೊರಕಂಕಾಲವನ್ನು ಕಳಚುತ್ತಿದ್ದಂತೆ ಒಳಗಿರುವ ಪ್ಯೂಪ ಕಾಣಿಸುತ್ತದೆ. ಮುಂದಿನ ಎರಡು ವಾರದ ಒಳಗೆ ಚಿಟ್ಟೆ ಬೆಳೆದಿರುತ್ತದೆ. ಚಿಟ್ಟೆ ಹೊರಬರುವ ಮುನ್ನ ವಿಶಿಷ್ಟವಾದ ಕಿತ್ತಳೆ ಮತ್ತು ಕಪ್ಪು ಬಣ್ಣಗಳು ಕಾಣಿಸಿಕೊಳ್ಳುತ್ತವೆ.

ಚಳಿಗಾಲದಲ್ಲಿ ಶಿಶಿರ ನಿದ್ರೆಗೆ ಒಳಗಾಗುವ ಪ್ರೌಢ ಚಿಟ್ಟೆಗಳು ಮುಂದಿನ ಫೆಬ್ರುವರಿ/ಮಾರ್ಚ್ ವೇಳೆಗೆ ಎಚ್ಚರಗೊಳ್ಳುತ್ತವೆ. ನಂತರ ದಕ್ಷಿಣದ ಟೆಕ್ಸಾಸ್ ನ ಕಡೆಗೆ ಅವುಗಳ ವಲಸೆ ಪ್ರಾರಂಭ. ಏಪ್ರಿಲ್ ವೇಳೆಗೆ ಮೊಟ್ಟೆಗಳನ್ನಿಡುವ ಪ್ರಕ್ರಿಯೆಯಿಂದ ಮತ್ತೆ ಸಂತಾನಭಿವೃದ್ಧಿ ಪ್ರಾರಂಭ. ಅದಾದ ನಂತರ, ಪ್ರೌಢ ಚಿಟ್ಟೆಗಳು ಸಾಯುತ್ತವೆ. ಈ ಮೊಟ್ಟೆಗಳು ಮೊದಲ ಪೀಳಿಗೆಯ ಮೊದಲ ಹಂತ. ಈ ಮೊಟ್ಟೆಗಳು ಒಡೆದು  ಡಿಂಬ, ಪ್ಯೂಪ ಮತ್ತು ಪ್ರೌಢ ಎಂಬ ಮುಂದಿನ ಮೂರು ಹಂತಗಳನ್ನು ಮುಗಿಸಿ, ಉತ್ತರ ದಿಕ್ಕಿನೆಡೆಗೆ ಮತ್ತೆ ವಲಸೆ ಪ್ರಾರಂಭ. ಸುಮಾರು ಐದಾರು ವಾರ ಬದುಕುಳಿಯುವ ಇವು ಮೊಟ್ಟೆಗಳನ್ನು ಇಟ್ಟ ನಂತರ ಸಾಯುತ್ತವೆ. ಈ ಮೊಟ್ಟೆಗಳು ಮೊದಲನೇ ಹಂತದ ಎರಡನೇ ಪೀಳಿಗೆಯನ್ನು ಪ್ರತಿನಿಧಿಸುತ್ತವೆ. ಇದು ಹೀಗೇ ಮುಂದುವರೆದು ನಾಲ್ಕನೇ ಪೀಳಿಗೆಯ ಚಿಟ್ಟೆಗಳು ಹೊರಬರುತ್ತವೆ. ಸುಮಾರು 8 ರಿಂದ 9 ತಿಂಗಳುಗಳ ಕಾಲ ಬದುಕುವ ಈ ಪ್ರೌಢ ಚಿಟ್ಟೆಗಳ ಪೀಳಿಗೆಯನ್ನು 'ಮಹಾ ಪೀಳಿಗೆ' ಎಂದು ಕರೆಯಲಾಗುತ್ತದೆ. ಕೆಲವು ವಾರಗಳ ಕಾಲ ಮಕರಂದ ಹೀರುತ್ತಾ, ದಪ್ಪವಾಗಿ ಬೆಳೆಯುತ್ತವೆ. ತಮ್ಮ ಚಳಿಗಾಲದ ವಿಶ್ರಾಂತಿಯ ತಾಣಗಳಿಗೆ ಹೋಗಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತವೆ.

ಉದರ ಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬು ಇವುಗಳ ಚಳಿಗಾಲದ ಉಳಿವಿಗೆ ಪೂರಕ. ಈ ಸಂಗ್ರಹವೇ ಇವುಗಳ 3000 ಮೈಲಿಗಳಿಗೂ ಹೆಚ್ಚಿನ ದೂರದ ದಕ್ಷಿಣದೆಡೆಗಿನ ವಲಸೆಗೆ ಇಂಧನ ! ಅಷ್ಟೇ ಅಲ್ಲ, ಮುಂದಿನ ವಸಂತದಲ್ಲಿ ಉತ್ತರ ದಿಕ್ಕಿನೆಡೆಗಿನ ಹಾರಾಟಕ್ಕೂ ಇದೇ ಸಂಗ್ರಹ ಬಳಕೆಯಾಗುತ್ತದೆ. ಕೆಲವು ಸಂಶೋಧಕರ ಪ್ರಕಾರ, ವಲಸೆ ಹೋಗುವಾಗ ತಮ್ಮ ದೇಹದಲ್ಲಿನ  ಇಂಧನವನ್ನು ಉಳಿಸಿಕೊಳ್ಳಲು ಈ ಚಿಟ್ಟೆಗಳು ಗಾಳಿಯಲ್ಲಿ ತೇಲುತ್ತಾ ಸಾಗುತ್ತವಂತೆ ! ಕ್ಯಾಲಿಫೋರ್ನಿಯಾದ ಪಶ್ಚಿಮಕ್ಕಿರುವ ಬೆಟ್ಟಗುಡ್ಡ ಪ್ರದೇಶದ ಚಿಟ್ಟೆಗಳು ಅಲ್ಲಿನ ಕರಾವಳಿಯತ್ತ ವಲಸೆ ಬಂದು, ನೀಲಗಿರಿ, ಪೈನ್ ಮತ್ತು ಸೈಪ್ರಸ್ ಗಿಡಗಳಲ್ಲಿ ವಿಶ್ರಮಿಸುತ್ತವೆ. ಪೂರ್ವಕ್ಕಿರುವ ಪ್ರದೇಶದ ಚಿಟ್ಟೆಗಳು ಮಧ್ಯ ಮೆಕ್ಸಿಕೋದ ಬೆಟ್ಟಗಳೆಡೆಗೆ ವಲಸೆ ಹೋಗುತ್ತವೆ.

 

ಉಷ್ಣವಲಯದ ಬಹುತೇಕ ಕೀಟಗಳಿಗೆ ಹೋಲಿಸಿದರೆ ಮೊನಾರ್ಕ್ ಚಿಟ್ಟೆಗಳು ತೀವ್ರ ಚಳಿಗಾಲವನ್ನು ತಡೆದುಕೊಳ್ಳಲಾರವು. ಹಿಗಾಗಿ, ಅವು ಚಳಿಗಾಲದಲ್ಲಿ ವಿಶ್ರಾಂತಿಯ ತಾಣಗಳಲ್ಲಿ ವಿರಮಿಸುತ್ತವೆ. ಸಾವಿರಾರು ಮೈಲಿ ದೂರ ಇರುವ, ತಾವು ಈ ಹಿಂದ ನೋಡಿಲ್ಲದ ಮಧ್ಯ ಮೆಕ್ಸಿಕೋದ ಜ್ವಾಲಾಮುಖಿ ಬೆಟ್ಟಗಳನ್ನು ತಲುಪುತ್ತವೆ. ಈ ತಾಣವನ್ನು ತಲುಪುವ ಹಾದಿಯಲ್ಲಿ ಟೆಕ್ಸಾಸ್ ರಾಜ್ಯದ ಮೂಲಕ ಹಾದು ಹೋಗುತ್ತವೆ. ವಲಸೆಯ ಈ ಭಾಗ ಒಂದು ಶಂಕುವಿನ ಆಕಾರದಲ್ಲಿರುವುದರಿಂದ ಇದನ್ನು 'ಟೆಕ್ಸಾಸ್ ನ ಆಲಿಕೆ' (the Texas Funnel) ಎಂದು ಕರೆಯಲಾಗುತ್ತದೆ (ಚಿತ್ರ ನೋಡಿ).

ಚಿತ್ರ 3 : ದಿ ಟೆಕ್ಸಾಸ್ ಫನಲ್


  

ಮೆಕ್ಸಿಕೋದ ವಿಶ್ರಾಂತಿ ತಾಣಗಳಲ್ಲಿನ ಗುಣಲಕ್ಷಣಗಳು ಮತ್ತು ಹವಾಮಾನ, ಈ ಚಿಟ್ಟೆಗಳ ಉಳಿವಿಗೆ ಪೂರಕವಾಗಿವೆ. ಸಮುದ್ರ ಮಟ್ಟದಿಂದ 3000ಮೀ ಎತ್ತರದಲ್ಲಿರುವ ಇಲ್ಲಿನ ಒಯಾಮೆಲ್ ಫಿರ್() ನ ಕಾಡುಗಳಲ್ಲಿ ಇರುವ ಮರಗಳಲ್ಲಿ ಅವು ಗುಂಪು ಸೇರುತ್ತವೆ. ಈ ಅವಧಿಯಲ್ಲಿ ಮೂರರಿಂದ ನಾಲ್ಕು ಬಾರಿ ಸಂತಾನಭಿವೃದ್ಧಿ ನಡೆಸುತ್ತವೆ. ಹೀಗಾಗಿ, ಮಿಲಿಯನ್ ಗಟ್ಟಲೆ ಸಂಖ್ಯೆಯಲ್ಲಿ ಅಲ್ಲಿ ಕಂಡು ಬರುತ್ತವೆ. ಎಲ್ಲವೂ ಅಲ್ಲಿ 'ಶಿಶಿರ ನಿದ್ರೆ'ಗೆ ಜಾರುತ್ತವೆ.

ಮೆಕ್ಸಿಕೋಗೆ ಪ್ರತಿ ಚಳಿಗಾಲದಲ್ಲಿ ವಲಸೆ ಬರುವ ಚಿಟ್ಟೆಗಳು ಹಿಂದಿನ ವಸಂತದಲ್ಲಿ ಅಲ್ಲಿಂದ ಹೊರಟ ಚಿಟ್ಟೆಗಳ ಮೂರನೇ ಅಥವಾ ನಾಲ್ಕನೇ ತಲೆಮಾರಿನವು ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ ?ತಮ್ಮ 'ಶಿಶಿರ ನಿದ್ರೆ'ಗೆ ಇವು ಪ್ರತಿ ವರ್ಷ ಅದೇ ತಾಣಗಳನ್ನು ಹೇಗೆ ಗುರುತಿಸುತ್ತವೆ ಎಂಬುದು ಇಂದಿಗೂ ನಿಗೂಢ !

ದುರಂತದ ಸಂಗತಿಯೆಂದರೆ, ಇತ್ತೀಚಿನ ವರ್ಷಗಳಲ್ಲಿ ಈ ಚಿಟ್ಟೆಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿರುವುದು. ಕಾಡುಗಳ ನಾಶ ಹಾಗೂ ಹವಾಮಾನ ಬದಲಾವಣೆ ಇದಕ್ಕೆ ಕಾರಣ ಎನ್ನಲಾಗಿದೆ. ಇದನ್ನು ಗಮನಿಸಿ ಐ.ಯು.ಸಿ.ಎನ್ (I U C N )  2022ರ ಜುಲೈ ತಿಂಗಳಲ್ಲಿ ಈ ಚಿಟ್ಟೆಗಳನ್ನು "ಆತಂಕಿತ ಪ್ರಭೇದ"ಗಳ (endangered species) ಪಟ್ಟಿಗೆ ಸೇರಿಸಿದೆ.


ಭವಿಷ್ಯದ ತಂತ್ರಜ್ಞಾನ - ಮುಖ ಗುರುತಿಸುವ ತಂತ್ರಜ್ಞಾನ

ಭವಿಷ್ಯದ ತಂತ್ರಜ್ಞಾನ - ಮುಖ ಗುರುತಿಸುವ ತಂತ್ರಜ್ಞಾನ


ಲೇಖಕರು:    ಗಜಾನನ ಎನ್. ಭಟ್. (ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು) 

                ಸರಕಾರಿ ಪ್ರೌಢಶಾಲೆ, ಉಮ್ಮಚಗಿ, 

                ಯಲ್ಲಾಪುರ ತಾ. ಶಿರಸಿ, ಉತ್ತರ ಕನ್ನಡ



ಇಂದು ವಿಜ್ಞಾನ ತಂತ್ರಜ್ಞಾನ ಅಪರಿಮಿತವಾದ ಸಾಧನಾ ಪಥದಲ್ಲಿ ಸಾಗಿದೆ. ಮಾನವ ಪ್ರತಿಯೊಂದನ್ನು ಬೆರಳ ತುದಿಯಲ್ಲಿ ಪಡೆಯುವ ಮಟ್ಟಿಗೆ ತಾಂತ್ರಿಕವಾಗಿ ಸುಧಾರಿಸಿದ್ದಾನೆ. ಈ ಮೂಲಕವಾಗಿ ತನ್ನ ಜೀವನವನ್ನು ಸರಳೀಕರಿಸಿದ್ದಾನೆ. ತಂತ್ರಜ್ಞಾನ ಸುಧಾರಿಸುತ್ತಾ ಸಾಗಿದಂತೆಲ್ಲ ಮಾನವನ ಸಂಕುಚಿತ ಮನೋಭಾವವು ಹೆಚ್ಚುತ್ತಾ ಸಾಗಿರುವುದು ದೌರ್ಭಾಗ್ಯವೇ ಸರಿ. ಇದರ ಪರಿಣಾಮವಾಗಿ ತಂತ್ರಜ್ಞಾನ ಆಧಾರಿತ ಕ್ರೈಮ್ ಗಳು ಹೆಚ್ಚುತ್ತಿವೆ. ವಿಶ್ವವ್ಯಾಪಿಯಾಗಿ ಸೈಬರ್ ಕ್ರೈಮ್ ಗಳ ಪ್ರಮಾಣ ಅತಿಯಾಗಿ ಕಂಡುಬರುತ್ತಿದೆ. ಇದಕ್ಕೆಲ್ಲ ತಕ್ಕಮಟ್ಟಿಗಿನ ನಿಯಂತ್ರಣ ಸಾಧಿಸಲು ತಂತ್ರಜ್ಞಾನದಲ್ಲಿ ಮುಖ ಗುರುತಿಸುವ ತಾಂತ್ರಿಕತೆ ಅಳವಡಿಸಿಕೊಳ್ಳಲಾಗುತ್ತಿದೆ.



ಮುಖ ಗುರುತಿಸುವ ತಂತ್ರಜ್ಞಾನವು ಬಯೋಮೆಟ್ರಿಕ್ ತಂತ್ರಜ್ಞಾನದ ಭಾಗವಾಗಿದ್ದು ವ್ಯಕ್ತಿಯ ಮುಖ ಚರ್ಚೆಯನ್ನು ಸ್ಪಷ್ಟವಾಗಿ ಗುರುತಿಸಿ ಇದರ ಪ್ರತಿಫಲವನ್ನು ವಿವಿಧ ಕ್ಷೇತ್ರಗಳಲ್ಲಿ ಸಾಂದರ್ಭಿಕವಾಗಿ ಯುಕ್ತ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಇದು ಒಳಗೊಂಡಿದೆ.ಪ್ರಸ್ತುತ ಈ ತಂತ್ರಜ್ಞಾನವನ್ನು ಕಾನೂನಾತ್ಮಕವಾಗಿ ಅಂಗೀಕರಿಸಿದ್ದು, ಅಪರಾಧಿ ಪತ್ತೆ ಕ್ಷೇತ್ರಗಳಲ್ಲಿ ಇವುಗಳಲ್ಲಿ ಬಳಸಿಕೊಳ್ಳಲು ಮುಕ್ತ ಅವಕಾಶಗಳನ್ನು ಒದಗಿಸಿದೆ.


ಮುಖ ಗುರುತಿಸುವ ತಂತ್ರಜ್ಞಾನ ಹೇಗೆ ಕಾರ್ಯ ನಿರ್ವಹಿಸುತ್ತದೆ....?

ಮುಖ ಚರ್ಯೆ ತಂತ್ರಜ್ಞಾನವನ್ನು ಮುಖ ಗುರುತಿಸುವ ತಂತ್ರಜ್ಞಾನ ಎಂದು ವೈಜ್ಞಾನಿಕವಾಗಿ ಸಂಬೋಧಿಸಬಹುದು. ಇದು ಕೃತಕ ಬುದ್ದಮತ್ತೆ(AI) ತಂತ್ರಜ್ಞಾನ ಆಧರಿಸಿದೆ. ಮನುಷ್ಯನ ಮುಖ ಚರ್ಯೆಯನ್ನು ಡಿಜಿಟಲ್‌ ಸಂಕೇತ ರೂಪದಲ್ಲಿ ಪರಿವರ್ತಿಸಿ ಗಣಕಯಂತ್ರದ ತಂತ್ರಾಂಶ ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಮಾರ್ಪಡಿಸುತ್ತದೆ.

 
ಮುಖ ಚರ್ಯೆ ತಂತ್ರಜ್ಞಾನ ಮುಖ ಚರ್ಯೆಯನ್ನು ಗಣಕಯಂತ್ರ ರೀಡ್ ಮಾಡಬಹುದಾದ ಸಂಖ್ಯಾ ಅಭಿವ್ಯಕ್ತಿಗೆ ತರ್ಜುಮೆಗೊಳಿಸುತ್ತದೆ.ಈ ವಿಸ್ತೃತ ಪಕ್ರಿಯೆಯನ್ನು ನಮ್ಮ ನರವ್ಯೂಹ ವ್ಯವಸ್ಥೆಗೆ ಹೋಲಿಸಬಹುದು.ನಮ್ಮ ನರವ್ಯೂಹ ವ್ಯವಸ್ಥೆಯು ಪಂಚೇಂದ್ರಿಯಗಳು ಗ್ರಹಿಸಿದ ಮಾಹಿತಿ, ಸಂವೇದನೆಯನ್ನು ವಿದ್ಯುತ್ ಸಂಕೇತ ರೂಪಕ್ಕೆ ಪರಿವರ್ತಿಸಿ ಕೇಂದ್ರ ನರವ್ಯೂಹ ವ್ಯವಸ್ಥೆಯು ಸುಲಭವಾಗಿ ಅರ್ಥೈಸಲು ನೆರವಾಗುವ ವ್ಯವಸ್ಥೆ ಅಲ್ಲಿದೆ.ಇದನ್ನೇ ಹೋಲುವ ತಂತ್ರಜ್ಞಾನವನ್ನು ಮುಖ ಗುರುತಿಸುವ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಮುಖ ಚರ್ಯೆ ಗುರುತಿಸುವ ತಂತ್ರಾಂಶದ ನಿಖರತೆಯೇನು...?

ಈ ತಂತ್ರಾಂಶ ಕಾರ್ಯ ನಿರ್ವಹಿಸುವ ನಿಖರತೆಯ ಆಧಾರದ ಮೇಲೆ ಇದರ ಪರಿಣಾಮ ಅವಲಂಬಿಸಿದೆ. ತಂತ್ರಾಂಶವು ಪ್ರತಿಶತ ನೂರರಷ್ಟು ನಿಖರತೆ ನೀಡಿದರೆ ಮಾತ್ರ ಇದರ ಸಂಪೂರ್ಣ ಪ್ರತಿಫಲವನ್ನು ನಿರ್ದಿಷ್ಟಪಡಿಸಿದ ಕ್ಷೇತ್ರದಲ್ಲಿ ಪಡೆಯಲು ಸಾಧ್ಯವಿದೆ.

ಇಂತಹ ತಂತ್ರಾಂಶ ತಯಾರಿಸುವ ವಿವಿಧ ಸಾಪ್ಟ್ವೇರ್ ಕಂಪನಿಗಳು ತಮ್ಮ ಉತ್ಪನ್ನದ ತಂತ್ರಾಂಶದ ಕಾರ್ಯ ಸಾಮರ್ಥ್ಯವನ್ನು ಆಧರಿಸಿ ನಿಖರತೆಯನ್ನು ನಿಗದಿಪಡಿಸಿವೆ.

ಮೈಕ್ರೊಸಾಫ್ಟ್‌ ಕಂಪ್ಯೂಟರ್ ವಿಷನ್ ಕಂಪನಿಯು 96 ಶೇಕಡಾ ನಿಖರತೆ ನೀಡಿದರೆ, ಲಂಬಾ ಲ್ಯಾಪ್ಸ ಕಂಪನಿಯು ಶೇಕಡಾ 99, ಇನ್ಫೆರೆಡೋ ಕಂಪನಿಯು ಶೇಕಡಾ 100, face ++ ಕಂಪನಿಯು ಶೇಕಡಾ 99 ,eye recognize ಕಂಪನಿಯು ಶೇಕಡಾ 99, ಕೈರೋಸ್ ಕಂಪನಿಯು ಶೇಕಡಾ 62 ರಷ್ಟು ವಿಶ್ವಾಸಾರ್ಹತೆಯನ್ನು ತನ್ನ ಉತ್ಪನ್ನವಾದ ಮುಖ ಗುರುತಿಸುವ ತಂತ್ರಾಂಶಕ್ಕೆ ಒದಗಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಮುಖಚರ್ಯೆ ತಂತ್ರಾಂಶದ ಉಪಯೋಗಗಳು....

ಶೇಕಡಾ 100 ರಷ್ಟು ವಿಶ್ವಾಸಾರ್ಹತೆ, ನಿಖರತೆ ಹೊಂದಿರುವ ತಂತ್ರಾಂಶವನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲು ವಿಫುಲ ಅವಕಾಶಗಳಿವೆ.ಅವುಗಳಲ್ಲಿ ಪ್ರಮುಖವಾದವುಗಳೆಂದರೆ....

1) ಜಾತ್ರೆ, ಸಮಾರಂಭ ಮುಂತಾದ ಸಂದರ್ಭಗಳಲ್ಲಿ ನಾಪತ್ತೆಯಾದ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು.

2) ವಿವಿಧ ವ್ಯವಹಾರ ಪ್ರದೇಶಗಳಲ್ಲಿ ಕಳ್ಳತನವಾದ ಸಂದರ್ಭ ಅಥವಾ ವ್ಯಾವಹಾರಿಕ ದಗಲ್ಬಾಜಿತನಗಳನ್ನು ಸುಲಭವಾಗಿ ಪತ್ತೆಮಾಡಬಹುದು.

3) ವೈದ್ಯಕೀಯ ಚಿಕಿತ್ಸೆಯನ್ನು ಉತ್ತಮ ಪಡಿಸಲು ಯಶಸ್ವಿಯಾಗಿ ಬಳಸಬಹುದು.

4) ವಿವಿಧ ಕ್ಷೇತ್ರಗಳಲ್ಲಿ ರಕ್ಷಣಾ ವ್ಯವಸ್ಥೆ ಬಲಪಡಿಸಲು ಉಪಯೋಗಿಸಬಹುದು.

5) ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧ ಖರೀದಿ ತಾಣಗಳಲ್ಲಿ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಬಲಪಡಿಸಬಹುದು.

6) ಮುಖ ಚರ್ಯೆ ಗುರುತಿಸುವ ಪದ್ದತಿಯಿಂದ ಬೆರಳಚ್ಚು ತಂತ್ರಜ್ಞಾನ ಆಧಾರಿತ ಬಯೋಮೆಟ್ರಿಕ್ ನ್ಯೂನತೆಗಳಿಗೆ ಪರಿಹಾರ ಕಾಣಬಹುದು. ಕೈಯಿಂದ ಮುಟ್ಟುವಿಕೆಯ ಮೂಲಕ ಬಳಸುವ ಅಥವಾ ನಿರ್ವಹಿಸುವ ಸಮಸ್ಯೆಯನ್ನು ನಿವಾರಿಸಬಹುದು. ಕೆಲವು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಸುಲಭವಾಗಿ ತಪ್ಪಿಸಬಹುದು.

7) ನಿರ್ದಿಷ್ಟ ಸಂಸ್ಥೆಯ ಕಾರ್ಯ ಸಾಮರ್ಥ್ಯ ಹೆಚ್ಚಿಸಬಹುದು ಹಾಗೂ ಸಾಕಷ್ಟು ಸಮಯ ಉಳಿಸುವುದು ಸಾಧ್ಯವಿದೆ.

8) ಗೂಗಲ್ ಸರ್ಚ ಎಂಜಿನ್‌ ತೆರವುಗೊಳಿಸಲು, ನಮ್ಮ ಖಾಸಗಿ ಮೊಬೈಲ್, ಗಣಕಯಂತ್ರದ ರಕ್ಷಣಾ ಸಾಧನವಾಗಿ ಬಳಸಬಹುದು.

ಮುಖ ಚರ್ಯೆ ತಂತ್ರಜ್ಞಾನದ ತಂತ್ರಾಂಶವು ಶೈಶವಾಸ್ಥೆಯಲ್ಲಿದೆ ಎಂದೇ ಹೇಳಬಹುದು. ಹಾಗಾಗಿ ಇದರಲ್ಲಿ ಇನ್ನೂ ಗುರುತರವಾದ ಸುಧಾರಣೆಯ ಅಗತ್ಯವಿದೆ. ಅಂತಹ ಸಾಧ್ಯತೆಗಳು ಭವಿಷ್ಯದಲ್ಲಿ ಜನಸಾಮಾನ್ಯರ ಬದುಕಿನ ಹಾಸು ಹೊಕ್ಕಾಗಲಿವೆ. ಆಗ ರಕ್ಷಣಾ ಕ್ಷೇತ್ರಗಳೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರಗತಿಯಲ್ಲಿ ಅನೂಹ್ಯ ಬದಲಾವಣೆಗಳು ಉಂಟಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ!!!

ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ!!! 

  ಲೇಖಕರು : ಬಿ.ಜಿ.ರಾಮಚಂದ್ರ ಭಟ್

 



ಅದು ಅಕ್ಟೋಬರ್‌ ತಿಂಗಳ 24 ತಾರೀಖು. ಜಗತ್ತಿನಾದ್ಯಂತ ಪಕ್ಷಿಪ್ರೇಮಿಗಳಲ್ಲಿ ಮಹಾ ಸಂಚಲನ. ಹುಚ್ಚೇ ಹಿಡಿಯಿತೇನೋ ಎನ್ನುವಷ್ಟು ಉನ್ಮಾದ!!! ಅಸಾಧ್ಯವಾದದ್ದೊಂದು ಅಂದು ಘಟಿಸಿಯೇ ಬಿಟ್ಟಿತ್ತು. ನೀರೀಕ್ಷೆ ಹುಸಿಯಾಗಲಿಲ್ಲ. ಕೊರೆವ ಚಳಿಯಲ್ಲೂ ಮೈಯಲ್ಲಿ ಬಿಸಿರಕ್ತ ಸಂಚಾರವಾದ ಭಾವ . ವಿಶ್ವದಾಖಲೆಯೊಂದಕ್ಕೆ ಸಾಕ್ಷಿಯಾದ ಕ್ಷಣ!!!. 5 ತಿಂಗಳ ಪಕ್ಷಿಯೊಂದು ಎಲ್ಲೂ ನಿಲ್ಲದೆ, ಅರೆ ಕ್ಷಣವೂ ವಿರಮಿಸದೇ, ತಾಸೊಂದಕ್ಕೆ ಸುಮಾರು 51 km ಗೂ ಹೆಚ್ಚಿನ ವೇಗದೊಂದಿಗೆ 11 ದಿನಗಳ ಸುದೀರ್ಘ ಪ್ರಯಾಣದಲ್ಲಿ 13,560km ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿತ್ತು!!!.
 
ದಾಖಲೆ ಸೃಜಿಸಿದ ಗಾಡ್‌ವಿಟ್‌ನ ಈ ಪ್ರಯಾಣವನ್ನು ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್, ನ್ಯೂಜಿಲೆಂಡ್‌ನ ಮ್ಯಾಸ್ಸೆ ವಿಶ್ವವಿದ್ಯಾಲಯ, ಚೀನಾದ ಫುಡಾನ್ ವಿಶ್ವವಿದ್ಯಾಲಯ ಮತ್ತು ಗ್ಲೋಬಲ್ ಫ್ಲೈವೇ ನೆಟ್‌ವರ್ಕ್ ಸಂಸ್ಥೆಗಳನ್ನು ಒಳಗೊಂಡ ಟ್ರ್ಯಾಕಿಂಗ್ ಅಧ್ಯಯನ ತಂಡಗಳು ದಾಖಲಿಸಿವೆ. ಗಾಡ್ವಿಟ್‌ನ ಈ ಮಹಾಯಾನದ ಸಂಭ್ರಮವನ್ನು ಜಗತ್ತಿನಾದ್ಯಂತ ಪಕ್ಷಿಪ್ರೇಮಿಗಳು ಆಚರಿಸಿದರು; ನ್ಯೂಜಿಲೆಂಡ್‌ನ ಪುಕೊರೊಕೊರೊ ಮಿರಾಂಡಾ ಶೋರ್‌ಬರ್ಡ್ ಕೇಂದ್ರವು "ದೀರ್ಘ-ಪ್ರಯಾಣದ ಚಾಂಪಿಯನ್" ಸಾಧನೆಯ ನೆನಪನ್ನು ವಿಶಿಷ್ಟವಾಗಿ ಆಚರಿಸುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ಅಯ್ಯೋ ಇದು ಅಲಾಸ್ಕಾದ ಮೂಳೆ ಕೊರೆವ ಮಹಾ ಚಳಿ!!! ಈ ಚಳಿ ಸಹಿಸಲಾರೆ ಎನ್ನುತ್ತಿದೆಯೇ ಈ ಸಾಹಸಿಯ ಮನಸ್ಸು? ನನ್ನ ರೆಕ್ಕೆಗಳು ಸಾವಿರಾರು ಮೈಲಿ ಹಾರುವಷ್ಟು ಬಲಿಷ್ಟವೇ? ಹಾರಿ ಸಾಮರ್ಥ್ಯ ಪರೀಕ್ಷಿಸಲೇ? ಎಂಬೆಲ್ಲಾ ಆಲೋಚನೆಗಳು ತೀರಾ ಎಳೆಯ - ಸುಮಾರು 5 ತಿಂಗಳ ವಯಸ್ಸಿನ B 6 ಎಂದು ಗುರುತಿಸಲಾಗುವ ಪುಟ್ಟ ಹಕ್ಕಿಗೆ ಬಂದಿರಬಹುದು!!.


ಅಲಾಸ್ಕಾದಲ್ಲಿ ಟ್ಯಾಗ್ ಮಾಡಲಾದ ಈ ಗೆರೆ ಬಾಲದ ಗಾಡ್ವಿಟ್ ಹಕ್ಕಿ ( ಲಿಮೋಸಾ ಲ್ಯಾಪ್ಪೋನಿಕಾ), ತನ್ನ ಮಹಾಯಾನಕ್ಕೆ ಆಹಾರ ಶಕ್ತಿಯನ್ನು ಸಂಗ್ರಹಿಸಿ ಸಿದ್ಧಗೊಳ್ಳಲಾರಂಭಿಸಿತು. ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಆರ್ನಿಥಾಲಜಿಯ ಪಕ್ಷಿ ಟ್ರ್ಯಾಕಿಂಗ್ ಯೋಜನೆಯ ಮಾಹಿತಿಯ ಪ್ರಕಾರ, ಅಕ್ಟೋಬರ್ 13 ರಂದು ಅಲಾಸ್ಕಾದ ಯುಕಾನ್ ಕುಸ್ಕೋಕ್ವಿಮ್ ಡೆಲ್ಟಾದ (Yukon Kuskokwim Delta) ವಿಸ್ತಾರವಾದ ಜೌಗು ಪ್ರದೇಶದಿಂದ ಹಕ್ಕಿ ತನ್ನ ಮಹಾಯಾನವನ್ನು ಪ್ರಾರಂಭಿಸಿತು. ಬಹುಶಃ ಕವಿಋಷಿ ಹೇಳಿದಂತೆ ನಿಸರ್ಗ ದೇವತೆ ತನ್ನ ಸೃಷಿಯ ಹೊಸ ಸಾಧ್ಯತೆಯೊಂದಕ್ಕೆ ರುಜು ಮಾಡಿರಬೇಕು!! ನಂತರ ಅದು ನೈರುತ್ಯಕ್ಕೆ ಅಲ್ಯೂಷಿಯನ್ ದ್ವೀಪಗಳಿಗೆ (Aleutian Islands), ಹವಾಯಿಯ ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರದ ಮೇಲಿನಿಂದ ನ್ಯೂ ಕ್ಯಾಲೆಡೋನಿಯಾಕ್ಕೆ ಟ್ಯಾಸ್ಮನ್ ಸಮುದ್ರದ ಮೇಲಿಂದ ತನ್ನ ವಿಶ್ವದಾಖಲೆಯ ಮಹಾಯಾನವನ್ನು ಮುಂದುವರೆಸಿತು.

ಡಾ. ವೊಹ್ಲರ್ ರವರು ಹೇಳಿದಂತೆ ಗಾಡ್‌ವಿಟ್‌ಗಳು ಸಾಮಾನ್ಯವಾಗಿ ನ್ಯೂಜಿಲೆಂಡ್‌ನತ್ತ ಪ್ರಯಾಣಿಸುತ್ತವೆ. ಆದರೆ ಪಕ್ಷಿಯು ದಾರಿಯಲ್ಲಿ 90 ಡಿಗ್ರಿ ತಿರುಗಿ ಪೂರ್ವ ಟ್ಯಾಸ್ಮೆನಿಯಾದ ಅನ್ಸನ್ಸ್ ಕೊಲ್ಲಿಯ (Ansons Bay) ಸುಂದರ ತೀರದಲ್ಲಿ ಇಳಿಯಿತು. ಈ "90ಡಿಗ್ರಿ ತಿರುವು" ತನ್ನ ಪ್ರಬೇಧದ "ಹಾರಾಟದ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು" ಜಗತ್ತಿಗೆ ತಿಳಿಸುವ ಪ್ರಯತ್ನದಂತಿತ್ತು. ಈ ಭಗೀರಥ ಪ್ರಯತ್ನದಲ್ಲಿ ಈಶಾನ್ಯ ಟ್ಯಾಸ್ಮೆನಿಯಾದ ಕೊಲ್ಲಿಯನ್ನು ಮುಟ್ಟುವ ಮೊದಲು ಕನಿಷ್ಠ 13,560km (8,435 ಮೈಲುಗಳು) ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿತು.

ವಿಜ್ಞಾನಿಗಳು ಪಕ್ಷಿಯನ್ನು ಅದರ ಬೆನ್ನಿನ ಕೆಳಭಾಗಕ್ಕೆ ಜೋಡಿಸಲಾದ ಅತ್ಯಾಧುನಿಕ 5G ಉಪಗ್ರಹ ಟ್ಯಾಗ್ ಬಳಸಿ ಟ್ರ್ಯಾಕ್ ಮಾಡುತ್ತಾರೆ. ಗಾಡ್ವಿಟ್‌ ಹವಾಯಿಯ ಪಶ್ಚಿಮಕ್ಕೆ, ತೆರೆದ ಸಾಗರದ ಮೇಲೆ ಮುಂದುವರೆದು ಅಕ್ಟೋಬರ್ 19 ರಂದು ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿಯ ಮೇಲೆ ಹಾರಿ ಕೊನೆಗೆ ಅಕ್ಟೋಬರ್ 24ರಂದು ಟಾಸ್ಮೇನಿಯ ತಲುಪಿತು. ಉಪಗ್ರಹ ದತ್ತಾಂಶವು ಈ ವಲಸೆ ಹಕ್ಕಿ ಟ್ಯಾಸ್ಮೆನಿಯಾವನ್ನು ತಲುಪಲು 11 ದಿನಗಳು ಮತ್ತು ಒಂದು ಗಂಟೆ ತೆಗೆದುಕೊಂಡಿರುವುದಾಗಿ ದಾಖಲಿಸಿದೆ. ಅದೆಂತಹ ಅಸಾಧಾರಣ ಬಂಢ ಸಾಹಸ ಈ ಪುಟ್ಟ ಹಕ್ಕಿಯದ್ದು? ಅಲಾಸ್ಕಾದಿಂದ ಟಾಸ್ಮೇನಿಯಕ್ಕೆ ಕಡಿಮೆ ದೂರವೇ? ಆಹಾರವಿಲ್ಲದೆ ದಣಿವರಿಯದ ಮಹಾವಲಸೆ ಹಾರಾಟವನ್ನು ಊಹಿಸಲೂ ಸಾಧ್ಯವಿಲ್ಲ. ತನ್ನ ಸುಧೀರ್ಘ ಪ್ರಯಾಣದ ಸಮಯದಲ್ಲಿ ಆಹಾರ, ನಿದ್ದೆ ಅಥವಾ ದಣಿವಾರಿಸಲೂ ಎಲ್ಲೂ ನಿಲ್ಲಲಿಲ್ಲ ಎನ್ನುವುದೇ ಅಚ್ಚರಿ. ಅದೆಲ್ಲಿ ಶಕ್ತಿ ಅಡಗಿತ್ತೋ? ಈ ಪಕ್ಷಿಯ ಅದ್ಭುತ ಸಾಮರ್ಥ್ಯದ ಮುಂದೆ ನಾವೆಷ್ಟು ಅಲ್ಪರು ಎನ್ನುವುದನ್ನು ಸೂಚಿಸುತ್ತದೆ.

"ವಯಸ್ಕ ಪಕ್ಷಿಗಳು ನಿಯಮಿತವಾಗಿ ಈ ಬಗೆಯ ಹಾರಾಟಗಳನ್ನು ಮಾಡುತ್ತವೆ ಎನ್ನುವುದು ನಮಗೆ ತಿಳಿದಿದೆ, ಆದರೆ ಈ ಎಳೆಯ ಗೆರೆ ಬಾಲದ ಗಾಡ್‌ವಿಟ್ ಹಕ್ಕಿಯ ಅಲಾಸ್ಕಾ ಪಯಣವನ್ನು ಈ ಹಿಂದೆಂದೂ ಪತ್ತೆಹಚ್ಚಲಾಗಿಲ್ಲ" ಎಂದು ಈ ವರ್ಷದ ಆರಂಭದಲ್ಲಿ ಪಕ್ಷಿಯನ್ನು ಮೊದಲು ಟ್ಯಾಗ್ ಮಾಡಿದ ಸ್ವತಂತ್ರ ಸಂಶೋಧಕರಾದ ಜೆಸ್ಸಿ ಕಾಂಕ್ಲಿನ್ ನ್ಯೂಸ್‌ವೀಕ್‌ನೊಂದಿಗೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.

ಗೆರೆಬಾಲದ ಗಾಡ್‌ವಿಟ್‌ಗಳು ಒಂದೇ ಸಂಗಾತಿಯೊಂದಿಗೆ ಜೀವನವನ್ನು ಕಳೆಯುತ್ತವೆ. ಸಾಮಾನ್ಯವಾಗಿ ಹೆಣ್ಣು ಗಾತ್ರದಲ್ಲಿ ಗಂಡಿಗಿಂತ ದೊಡ್ಡದಾಗಿರುತ್ತದೆ. ಹೆಸರೇ ಹೇಳುವಂತೆ ಬಿಳಿ ಬಾಲವು ಕಂದು ಕಪ್ಪು ಗೆರೆಗಳಿಂದ ಕೂಡಿರುತ್ತದೆ. ಗಂಡಿನ ಮೈಬಣ್ಣ ಸಾಮಾನ್ಯವಾಗಿ ಹೆಣ್ಣಿಗಿಂತ ಗಾಢವಾಗಿರುತ್ತದೆ. ಪ್ರೌಢಹಕ್ಕಿಯಲ್ಲಿ ಬಿಚ್ಚಿದ ರೆಕ್ಕೆ ಸುಮಾರು ಎಂಭತ್ತು ಸೆ.ಮೀ ಇದ್ದರೆ, ಕಾಲುಗಳು ಬೂದು ಅಥವಾ ನೀಲಿಬಣ್ಣದ್ದಾಗಿರಬಹುದು. ಸುಮಾರು 230 - 450 g ತೂಕದ ಪಕ್ಷಿ ಹಾರಾಟದ ನಂತರ ಅರ್ಧದಷ್ಟು ತೂಕ ಕಳೆದುಕೊಳ್ಳುತ್ತದೆ. ತೂಕ ಹೆಚ್ಚಿರುವವರಿಗೆ ಇದು ಸ್ಫೂರ್ತಿ ನೀಡೀತು!!!.

ಅಡ್ಡಗೆರೆ ಬಾಲದ ಗಾಡ್ವಿಟ್ ಆಸ್ಟ್ರೇಲಿಯಾದಲ್ಲಿ ಸಂತಾನೋತ್ಪತ್ತಿ ಮಾಡದ ವಲಸೆಗಾರ. ಪ್ರತಿ ವರ್ಷ ಸ್ಕ್ಯಾಂಡಿನೇವಿಯಾ, ಉತ್ತರ ಏಷ್ಯಾ ಮತ್ತು ಅಲಾಸ್ಕಾದಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಬಾರ್-ಟೈಲ್ಡ್ ಗಾಡ್‌ವಿಟ್‌ಗಳು ನದೀಮುಖದ ಮಣ್ಣಿನ ಚಪ್ಪಟೆಗಳು, ಕಡಲತೀರಗಳು ಮತ್ತು ಮ್ಯಾಂಗ್ರೋವ್‌ಗಳಲ್ಲಿ ವಾಸಿಸುತ್ತವೆ. ಆಸ್ಟ್ರೇಲಿಯಾದ ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿ ಅವು ಸಾಮಾನ್ಯವಾಗಿವೆ. ಅವು ಗುಂಪುಗುಂಪಾಗಿ ವಾಸಿಸುವ ಸಾಮಾಜಿಕ ಪಕ್ಷಿಗಳು ಮತ್ತು ದೊಡ್ಡ ಹಿಂಡುಗಳಲ್ಲಿ ಮತ್ತು ಇತರ ವೇಡರ್‌ಗಳ ಜೊತೆ ಹೆಚ್ಚಾಗಿ ಕಂಡುಬರುತ್ತವೆ.


ಹಸಿರು ಹೊದ್ದ, ಹಾವಸೆಯಿಂದ ಅಥವಾ ಇತರೆ ಸಸ್ಯಗಳಿಂದ ಕೂಡಿದ ಹೆಚ್ಚು ಆಳವಿರದ ಗುಳಿಯಂತಹ ಗೂಡುಕಟ್ಟುತ್ತವೆ. ಮೇ - ಜೂನ್ ತಿಂಗಳು ಇವುಗಳ ಪ್ರಣಯ ಕಲಾ ಪ್ರದರ್ಶನದ ಕಾಲ. ಗಂಡುಹಕ್ಕಿ ಗೂಡಿನ ಬಳಿ ವೃತ್ತಾಕಾರವಾಗಿ ಚಲಿಸುತ್ತಾ ಜೋರಾಗಿ ಕೂಗುತ್ತಾ ಹೆಣ್ಣಿಗೆ ಪ್ರೀತಿಯ ಕರೆ ನೀಡುತ್ತದೆ. ಗಂಡಿನ ಪ್ರಣಯ ಚೇಷ್ಟೆಗಳಿಗೊಲಿದ ಹೆಣ್ಣು ಇದರ ಫಲವಾಗಿ 2 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಅವು ಸುಮಾರು 20-22 ದಿನಗಳವರೆಗೆ ಕಾವುಕೊಡುತ್ತವೆ. ಎರಡೂ ಹಕ್ಕಿಗಳು ಮೊಟ್ಟೆಗಳ ಕಾವು ಮತ್ತು ಮರಿಗಳ ಆರೈಕೆಯನ್ನು ಹಂಚಿಕೊಳ್ಳುತ್ತವೆ. ಎಂತಹ ಪ್ರೀತಿ ಅವುಗಳದು!!! ತೆರೆದ ಕಂಗಳೊಂದಿಗೆ ಮೊಟ್ಟೆಯೊಡೆದು ಹೊರ ಬಂದ ಮರಿಗಳು ಬದುಕಿನ ಹೋರಾಟಕ್ಕೆ ಸನ್ನದ್ದಾಗಿರುತ್ತವೆ. ಆಗತಾನೇ ಹೊರಬಂದ ಮರಿಗಳು ಆಹಾರದ ಹುಡುಕಾಟಕ್ಕೆ ಹತ್ತಿರದ ಜವುಗು ಪ್ರದೇಶಗಳೆಡೆಗೆ ಸಾಗಲು ತನ್ನ ಅಪ್ಪ ಅಮ್ಮಂದಿರನ್ನು ಹಿಂಬಾಲಿಸ ಬಲ್ಲವು!!!. ಎಳೆಯ ಮರಿಗಳು ಕೇವಲ 1 ತಿಂಗಳೊಳಗೆ ಪೂರ್ಣ ಸ್ವಾವಲಂಬಿಗಳಾಗುತ್ತವೆ. 2 ವರ್ಷದೊಳಗೆ ಲೈಂಗಿಕ ಪರಿಪಕ್ವತೆಯನ್ನು ತಲುಪುತ್ತವೆ.


ಮೃದ್ವಂಗಿಗಳು, ಹುಳುಗಳು ಮತ್ತು ಜಲವಾಸಿ ಕೀಟಗಳು ಗೆರೆಬಾಲದ ಗಾಡ್ವಿಟ್ ಗಳ ಆಹಾರ. ಪಕ್ಷಿಗಳು ಆಳವಿಲ್ಲದ ಅಥವಾ ತೆರೆದ ಮಣ್ಣಿನಲ್ಲಿ ಓಡಾಡುತ್ತವೆ ಮತ್ತು ಆಹಾರವನ್ನು ಹುಡುಕಲು ತಮ್ಮ ಉದ್ದನೆಯ ಕೊಕ್ಕುಗಳನ್ನು ಬಳಸುತ್ತವೆ. ಆಹಾರಕ್ಕಾಗಿ ವಲಸೆ ಹೋಗುವ ಈ ಪಕ್ಷಿಗಳ ತಂಡದಲ್ಲಿ ಸಂತಾನಾಭಿವೃದ್ಧಿ ಮಾಡದ ವಲಸಿಗ ಮತ್ತು ವರ್ಷಪೂರ್ತಿ ಉಳಿಯುವ ಎಳೆಯ ಪಕ್ಷಿಗಳಿರುತ್ತವೆ.


ವರ್ಗೀಕರಣ : Bar-tailed Godwit Limosa lapponica Scolopacidae
ಸಾಮ್ರಾಜ್ಯ : ಪ್ರಾಣಿ
ವಂಶ : ಕಾರ್ಡೇಟಾ
ವರ್ಗ : ಏವ್ಸ್‌ 
ಗಣ : ಕ್ಯಾರಾಡ್ರಿಫಾರ್ಮ್ಸ್
ಕುಟುಂಬ : ಸ್ಕೋಲೋಪಾಸಿಡೆ
ಜಾತಿ : ಲಿಮೋಸಾ
ಪ್ರಬೇಧ : ಲ್ಯಾಪ್ಪೋನಿಕಾ

ಗಾಡವಿಟ್‌ ಹಕ್ಕಿಯ ಈ ಸಾಹಸ ಗಾಥೆ ಎಂತಹವರಲ್ಲೂ ಅಚ್ಚರಿ ತಾರದಿರದು. ಸ್ಫೂರ್ತಿ ತುಂಬದಿರದು. ಜಗತ್ತನ್ನೇ ತನ್ನೆಡೆಗೆ ಸೆಳೆದ ಪುಟ್ಟ ಹಕ್ಕಿ ತೂಕದಲ್ಲಿ ಯಕಶ್ಚಿತ್‌ ಎನಿಸುವ ಅರ್ಧ ಕೆ.ಜಿಯಷ್ಷೂ ತೂಕವಿಲ್ಲದ ಮಹಾಸಾಹಸಿ. ಇದನ್ನು ಜಗತ್ತಿನ ಸ್ಫೂರ್ತಿಯ ಚಿಲುಮೆ ಎನ್ನದಿರಲಾದೀತೇ? ಸಾಧನೆಯ ಹಸಿವನ್ನು ಜಗಕ್ಕೆ ತುಂಬಿದ ಈ ಹಕ್ಕಿ ಆಧುನಿಕ ಜಗತ್ತಿಗೆ ಹೊಸ ಸಾಧ್ಯತೆಗಳ ಭಂಡಾರವನ್ನೇ ತೆರೆದಿದೆ.

ಇನ್ನಷ್ಟು ಮಾಹಿತಿಗಾಗಿ :

https://www.youtube.com/watch?v=uY8M2aNFVtk


https://animalia.bio/bar-tailed-godwit

https://www.bto.org/develop-your-skills/bird-identification/videos/identifying-black-tailed-and-bar-tailed-godwit

ವಿಜ್ಞಾನ ಎಂಬ ವಿಸ್ಮಯ

ವಿಜ್ಞಾನ ಎಂಬ ವಿಸ್ಮಯ

ಲೇಖಕರು: 

ಬಿ.ಎನ್. ರೂಪ ,

ಸಹಾಯಕ ಶಿಕ್ಷಕರು,

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ,

ಬೆಂಗಳೂರು ದಕ್ಷಿಣ ತಾಲ್ಲೂಕು-2.


ವಿಜ್ಞಾನ ಪದದಲ್ಲಿ ಇದೆ ಜ್ಞಾನ,

ನಮ್ಮನ್ನು ಅಲೌಕಿಕ ದಿಂದ ಲೌಕಿಕದೆಡೆಗೆ,

ಸೆಳೆಯುವ ಸುಜ್ಞಾನ,

ನಮ್ಮನ್ನು ರೋಮಾಂಚನಗೊಳಿಸುವ ಜ್ಞಾನಾಮೃತ,

ವಿಶ್ವದ ಸಕಲ ಜ್ಞಾನದ ಭಂಡಾರ.

 

ವಿಶ್ವದಲ್ಲಿ ನಡೆಯುವ ವಿದ್ಯಮಾನಕ್ಕೆ ಉತ್ತರದ ಹೆದ್ದಾರಿ ನೀ,

ಕತ್ತಲನ್ನು ಓಡಿಸಿ ಬೆಳಕಿನೆಡೆಗೆ ಕೊಂಡೊಯ್ಯುವ,

ಸತ್ಯದೆಡೆಗೆ ನಮ್ಮನ್ನು ಕೊಂಡೊಯ್ಯುವ,

ವಿಶ್ವದ ಸಕಲ ಜ್ಞಾನದ ಭಂಡಾರ.

 

ನಮ್ಮಲ್ಲಿ  ವೈಜ್ಞಾನಿಕ ವೈಚಾರಿಕತೆ,

 ವೈಜ್ಞಾನಿಕ ಮನೋಭಾವ ಬೆಳೆಸುವ ಹೆದ್ದಾರಿ,

ನಮ್ಮ ದೈನಂದಿನ ಜೀವನದ ಹಾದಿಯನ್ನು ಸುಲಭಗೊಳಿಸುವ ಸುಜ್ಞಾನ,

ವಿಶ್ವದ ಸಕಲ ಜ್ಞಾನದ ಭಂಡಾರ.

 

ಹೊಸ ಅನ್ವೇಷಣೆ ,ಸಂಶೋಧನೆ, ಆವಿಷ್ಕಾರಕ್ಕೆ ನಾಂದಿ ಹಾಡುವ,

 ಈ ಭೂಮಿಯಲ್ಲಿ ನಡೆಯುವ ಪ್ರಕ್ರಿಯೆಗೆ ಉತ್ತರ ಸಿಗುವಂತೆ ಮಾಡುವ ಜ್ಞಾನ,

ವಿಶ್ವದ ಸಕಲ ಜ್ಞಾನದ ಭಂಡಾರ,

ನೀ ವಿಶ್ವದ ಸಕಲ ಜ್ಞಾನದ ಭಂಡಾರ

 

 ನಮ್ಮ ಬದುಕು ವಿಜ್ಞಾನಮಯವೇ ಆಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.  ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವರೆಗೂ ವಿಜ್ಞಾನ ಬದುಕಿನ ಹಾಸುಹೊಕ್ಕಾಗಿದೆ. ವಿಜ್ಞಾನದ ಹಲವು ಆವಿಷ್ಕಾರಗಳನ್ನು ಬಳಸಿಕೊಂಡು ಬದುಕನ್ನು ಹೆಚ್ಚು ಸಂತೃಪ್ತಿಯೊಂದಿಗೆ ಅಸ್ವಾದಿಸುತ್ತಾ ಬಂದಿದ್ದೇವೆ. ಹುಟ್ಟಿನಿಂದ ಸಾಯುವವರೆಗೂ ವಿಜ್ಞಾನದ ಹಲವಾರು ಪ್ರಕ್ರಿಯೆಗಳನ್ನು ವೈಚಾರಿಕತೆಯೊಂದಿಗೆ ಮೇಳೈಸಿಕೊಂಡು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದೇವೆ.

ನಮ್ಮ ಆಹಾರ, ಉಡುಗೆ,ಕೃಷಿ ,ನೀರಾವರಿ, ನಾವು ಬಳಸುವ ವಿವಿಧ ವಿದ್ಯುತ್ ಪರಿಕರಗಳು, ಮೋಟಾರುಗಳು  ವಿಜ್ಞಾನದ ದೇಣಿಗೆಯಾಗಿವೆ.

ಇಂದಿನ ನಮ್ಮ ಆಧುನಿಕ ಜೀವನ ಶೈಲಿ ಇಷ್ಟೊಂದು ಆರಾಮದಾಯಕ ಹಾಗೂ ಸುಸೂತ್ರವಾಗಿರುವುದಕ್ಕೆ ವಿಜ್ಞಾನದ ಕೊಡುಗೆಯೇ ಕಾರಣ.

ಅಡುಗೆ ಮನೆಯಲ್ಲಿ ಪಾತ್ರೆಗಳು ಸಂಗ್ರಹಾಗಾರಗಳು, ರುಚಿಕರ ಪದಾರ್ಥಗಳು. ಶಾಖದ ಬಳಕೆ, ಇಂಧನದ ಆಯ್ಕೆ , ಅದರ ದಹನ, ಜೀರ್ಣಕ್ರಿಯೆ, ಆಹಾರವನ್ನುವಿಭಜಿಸುವುದು, ಸ್ವಾದಕಾರಕಗಳು, ರುಚಿ ಹೆಚ್ಚಿಸುವ ವಿವಿಧ ಪ್ರಕ್ರಿಯೆಗಳು,  ಸೇರಿಸುವ ವಸ್ತುಗಳು, ಆಹಾರ ವಸ್ತುಗಳು , ಹಣ್ಣು ತರಕಾರಿಗಳ ವಿವಿಧ ಸಂಯೋಜನೆ , ಧಾನ್ಯಗಳ ಮಾರ್ಪಾಡು,  ಸೌರ ಉಪಕರಣಗಳಿಂದ ನೀರನ್ನು ಕಾಸುವುದು, ವಿದ್ಯುತ್ ಉಪಕರಣಗಳು, ಪಳೆಯುಳಿಕೆ ಇಂಧನಗಳ ಬಳಕೆ, ಟೂತ್‌ಪೇಸ್ಟ್ ಬಳಸಿ ಬಾಯಿಯಲ್ಲಿ ಬ್ಯಾಕ್ಟೀರಿಯಾ ನಾಶ. ಇಗೆ ಒಂದೇ ಎರಡೇ ?

ಪ್ರಯಾಣಕ್ಕೆ ಬಳಸುವ ವಿವಿಧ ಬಗೆಯ ಸಾರಿಗೆ ವ್ಯವಸ್ಥೆ, ಸುಧಾರಿತ ಇಂಧನ ವ್ಯವಸ್ಥೆ ,  ವಸ್ತುಗಳು  ಸಾಗಾಣಿಕೆ, ವಿವಿಧ ಬಗೆಯ ಕೃತಕ ಮತ್ತು ನೈಸರ್ಗಿಕ ನೂಲುಗಳು , ಅವುಗಳಿಂದ ಬಟ್ಟೆ ಮತ್ತು ಜವಳಿ, ರಂಗುಗಳು, ಲೋಹಗಳ ವೈವಿಧ್ಯಮಯ ಬಳಕೆ, ಮೂಲ ವಿಜ್ಞಾನದಿಂದ ಬೇರೆಯಾಗಿ ಬೆಳೆದ ತಂತ್ರಜ್ಞಾನ ಇಂದು ಅಂಗಳದಿಂದ ತಿಂಗಳನನ್ನೂ ದಾಟಿ ಹೋಗುವಷ್ಟು ಸಾಮರ್ಥ್ಯ ನೀಡಿದೆ.

ಲಸಿಕೆಗಳ ಬಳಕೆ, ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ರೊಬೊಟಿಕ್ಸ್  ಬಳಕೆ   ಆರೋಗ್ಯ ಕ್ಷೇತ್ರದಲ್ಲಿನ ಉತ್ಕ್ರಾಂತಿಗೆ ಕಾರಣವಾಗಿದೆ. ಇದು ಮಾನವರ ಜೀವಿತಾವಧಿಯನ್ನೂ ಹೆಚ್ಚಿಸಿದೆ.

ನಾವು ಬೆಳೆಯುವ ವಿವಿಧ ಬಗೆಯ ಉಚ್ಚ ಗುಣಮಟ್ಟದ ಪೋಷಕಾಂಶಗಳುಳ್ಳ ಧಾನ್ಯಗಳು, ರಸಗೊಬ್ಬರಗಳು, ನೀರಾವರಿ ವಿಧಾನಗಳು, ಆಹಾರದ ಬಳಕೆ, ಸಾವಯವ ವಸ್ತುಗಳ ಬಳಕೆ, ಮನೆಯ ಒಳಗೆ ಮತ್ತು ಹೊರಗೆ ಬಳಸುವ ಸಾಬೂನುಗಳು ಮತ್ತು ಮಾರ್ಜಕಗಳು, ಶಾಂಪೂ, ಟೂತ್ ಪೇಸ್ಟ್, ಆಹಾರದ ಸಂರಕ್ಷಕಗಳು ಹುದುಗುವಿಕೆ ಇತ್ಯಾದಿ ಅಂತ್ಯವಿಲ್ಲದ ಅನುಕೂಲಗಳ ಅನಂತಗಳು ನಮ್ಮ ಬದುಕಿಗೆ ಹೊಸ ರಂಗು ತುಂಬಿವೆ.  ವೈಜ್ಞಾನಿಕ ಸಂಸ್ಕೃತಿಗೆ ಮುನ್ನುಡಿ ಬರೆದಿವೆ.


ದಿನದಿಂದ ದಿನಕ್ಕೆ ಅಗಣಿತ ಶಾಖೆಗಳಾಗಿ ಟಿಸಿಲೊಡೆಯುತ್ತಾ ಪ್ರವರ್ಧಮಾನಕ್ಕೆ ಬರುತ್ತಾ ಹೊಸ ಮನ್ವಂತರಕ್ಕೆ ಕಾರಣವಾದ  ವಿಜ್ಞಾನಕ್ಕೆ ಅನಂತ ಧನ್ಯವಾದಗಳು

ಅಸಾಧಾರಣ ಪ್ರತಿಭೆಯುಳ್ಳ ವಿಶೇಷವಾದ ಮೀನು - ಆರ್ಚರ್ ಮೀನು

ಅಸಾಧಾರಣ ಪ್ರತಿಭೆಯುಳ್ಳ ವಿಶೇಷವಾದ ಮೀನು - ಆರ್ಚರ್ ಮೀನು

ಲೇಖಕರು:   ಅನಿಲ್ ಕುಮಾರ್ ಸಿ.ಎನ್.  
ಸರ್ಕಾರಿ ಪ್ರೌಢಶಾಲೆ
ರಾಮನಗರ ತಾ
ರಾಮನಗರ ಜಿಲ್ಲೆ


ಡಾ|| ರಾಜ್‍ಕುಮಾರ್ ಅಭಿನಯದ ಬಬ್ರುವಾಹನ ಚಲನಚಿತ್ರದಲ್ಲಿ, ಬಬ್ರುವಾಹನನು ನೀರಿನಲ್ಲಿ ಕಂಬದ ಮೇಲೆ ತಿರುಗುತ್ತಿರುವ ಮೀನಿನ ಬಿಂಬವನ್ನು ನೋಡಿ, ಮೀನಿನ ಕಣ್ಣಿಗೆ ಗುರಿ ಇಟ್ಟು ಬಾಣ ಹೊಡೆಯುತ್ತಾನೆ. ಚಲನಚಿತ್ರ ನೋಡಿದ ಯಾರಿಗೆ ತಾನೇ ದೃಶ್ಯವನ್ನು ಮರೆಯಲು ಸಾಧ್ಯ ಹೇಳಿ.  ಬಬ್ರುವಾಹನನು ತಂದೆ ಅರ್ಜುನನಂತೆ  ಅಪ್ರತಿಮ ಬಿಲ್ವಿದ್ಯೆ ನಿಪುಣನೆಂದು ಸಾರಿ ಹೇಳುತ್ತದೆ. ಇದೇ ರೀತಿ ನಾನು ನಿಮಗೆ ಪರಿಚಯಿಸಲು ಇಚ್ಛಿಸುವ ವಿಶೇಷವಾದ ಜೀವಿಗೂ ಅಂತಹುದೇ ಕಲೆ ಇದೆ ಎಂದರೆ ತಪ್ಪಾಗಲಾರದು.                

ಆಸ್ಟ್ರೇಲಿಯಾ, ಪಾಲಿನೇಷ್ಯಾ, ಮ್ಯಾನ್ಮಾರ್, ಆಗ್ನೇಯ ಚೀನಾ, ಥೈಲ್ಯಾಂಡ್, ಫಿಲಿಪೈನ್ಸ್ ಮತ್ತು ಭಾರತದಂತಹ ದೇಶಗಳಲ್ಲಿನ ಶಾಂತ ನೀರಿನಲ್ಲಿ, ಆರ್ಚರ್ ಮೀನು ಎಂದು ಕರೆಯಲ್ಪಡುವ ಅಸಾಮಾನ್ಯ ಮೀನು ಇದೆ. ಆರ್ಚರ್ ಮೀನು ಇತರ ಮೀನುಗಳಿಗಿಂತ ಭಿನ್ನ ಏಕೆಂದರೆ, ಅದು ನೀರಿನ ಹೊರಗೆ ವಾಸಿಸುವ ಕೀಟ, ಚಿಟ್ಟೆ, ಜೇಡ ಅಥವಾ ಅಂತಹುದೇ ಜೀವಿಗಳನ್ನು ತನ್ನ ಬೇಟೆಯನ್ನಾಗಿಸಿಕೊಂಡಿದೆ. ಆರ್ಚರ್ ಮೀನು ಕೊಳದ ದಂಡೆಯ ಮೇಲಿರುವ ಕೊಂಬೆ ಅಥವಾ ರೆಂಬೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಕೀಟಗಳನ್ನು ತನ್ನ ಆಹಾರವಾಗಿ ಆರಿಸಿಕೊಳ್ಳುತ್ತದೆ. ಕೀಟಗಳು ಆರ್ಚರ್ ಮೀನಿನ ಶಕ್ತಿಯುತ ನೀರಿನ ಸ್ಪ್ರೇಗೆ ಗುರಿಯಾಗಿ ನೀರಿನ ಮೇಲ್ಮೈ ಮೇಲೆ ಬೀಳುತ್ತವೆ. ಹೀಗೆ ಕೆಳಕ್ಕುರುಳಿದ ಕೀಟವನ್ನು ತನ್ನ ಆಹಾರವಾಗಿಸಿಕೊಳ್ಳುತ್ತದೆ. ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಬೆಳಕು ವಿಭಿನ್ನ ಸಾಂದ್ರತೆಗಳುಳ್ಳ ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮಕ್ಕೆ ಓರೆಯಾಗಿ ದಾಟುವಾಗ ತನ್ನ ಪ್ರಸರಣ ದಿಕ್ಕನ್ನು ಬದಲಾಯಿಸುತ್ತದೆ. ಅಂದರೆ ವಕ್ರೀಭವನ ಹೊಂದುತ್ತದೆ. ಇದರಿಂದ ಮರದ ಮೇಲಿನ ಕೀಟದ ಸ್ಥಾನವನ್ನು ನಿಖರವಾಗಿ ಗುರುತಿಸುವುದು ಕಷ್ಟಕರವಾಗಿರುತ್ತದೆ. ಹೀಗಿದ್ದಾಗ್ಯೂ ಆರ್ಚರ್ ಮೀನು ನೀರಿನಲ್ಲಿದ್ದು ಕೊಂಡು ತನ್ನ ಬೇಟೆಗೆ ನಿಖರವಾಗಿ, ಬಹಳ  ಪ್ರಬಲವಾದ ನೀರಿನ ಸ್ಪ್ರೇ ಮಾಡಿ ತನ್ನ ಬೇಟೆಯನ್ನು ಕೆಳಗುರುಳುವಂತೆ ಮಾಡುತ್ತದೆ ಮತ್ತು ಬಹಳ ವೇಗವಾಗಿ ಕೀಟ. ಬಿದ್ದ ಸ್ಥಳಕ್ಕೆ ತಕ್ಷಣ ತಲುಪಿ, ಬೇಟೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗುತ್ತದೆ. ವಿಶೇಷವಾದ ಲಕ್ಷಣ ಎಲ್ಲರನ್ನು ಬೆರಗುಗೊಳಿಸುತ್ತದೆ ಅಲ್ಲವೇ?


ಆರ್ಚರ್ ಮೀನಿಗೆ ಇದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಮೂಡದೇ ಇರದು. ಬೆಳಕು ಒಂದು ಮಾಧ್ಯಮದಮೇಲ್ಮೈ ಗೆ  ಲಂಬವಾಗಿ ಹಾದು ಹೋದರೆ ವಕ್ರೀಭವನ ಹೊಂದುವುದಿಲ್ಲವೆಂದು ನಮಗೆಲ್ಲ ತಿಳಿದಿದೆ. ಅಂದರೆ ಮೀನು ಲಂಬದ ದಿಕ್ಕಿನಲ್ಲಿ ನೀರನ್ನು ಚಿಮ್ಮಿದ್ದೆ ಆದರೆ, ಅದು ವಕ್ರೀಭವನ ಹೊಂದದೆ ನೇರ ದಿಕ್ಕಿನಲ್ಲಿ ಚಲಿಸಿ ಬೇಟೆಯನ್ನು ಕೆಳಗೆ ಬೀಳಿಸಬಹುದು. ಆದರೆ ಮೀನು ಓರೆಯಾಗಿ ಅಂದರೆ ಪತನ ಕೋನ 40° ಯಷ್ಟು ಇದ್ದಾಗಲೂ ಸಹ ಯಾವುದೇ ತೊಂದರೆಯಿಲ್ಲದೇ ಅದರ ಬೇಟೆಗೆ ಗುರಿಯಿಟ್ಟು ನೀರನ್ನು ಚಿಮ್ಮತ್ತದೆ. ಆದರೆ ಇಂದಿಗೂ ಅರ್ಥವಾಗದೇ ಉಳಿದಿರುವ ಸಂಗತಿ ಎಂದರೆ ಮೀನು ನೀರಿನಲ್ಲಿದ್ದು ಕೊಂಡು ಬೆಳಕಿನ ವಕ್ರೀಭವನದಿಂದ ನಿಖರತೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ, ತನ್ನ ಬೇಟೆಯ ನಿಖರವಾದ ಸ್ಥಾನವನ್ನು ಗುರುತಿಸಿ, ದೂರವನ್ನು ಅಂದಾಜಿಸಿ, ನೀರಿನ ವೇಗವನ್ನು ಸರಿಹೊಂದಿಸಿ ಬೇಟೆಯ ಮೇಲೆ ನೀರಿನ ಪ್ರಹಾರ ಮಾಡುವುದು ಹೇಗೆ ಸಾಧ್ಯವಾಯಿತೆಂಬುದು.

 ಬದುಕಿನ ಹೋರಾಟದಲ್ಲಿ ಹೊಂದಾಣಿಕೆ ಅತ್ಯಂತ ಅವಶ್ಯಕ. ಡಾರ್ವಿನ್‌ ಹೇಳಿದಂತೆ ಯೋಗ್ಯ ಜೀವಿಯ ಉಳಿವು ಇಲ್ಲಿ ಕಾಣಸಿಗುತ್ತದೆ. ಕಾಲಾಂತರದಲ್ಲಿ ಮೀನು ಅದೆಷ್ಟು ಪ್ರಯತ್ನಗಳ ನಂತರ ಇವೆಲ್ಲ ಸವಾಲುಗಳನ್ನು ಬಹಳ ಸಲೀಸಾಗಿ ಎದುರಿಸಿ ತನ್ನ ಬೇಟೆಯನ್ನು ಪಡೆಯುವಲ್ಲಿ ಸಫಲವಾಗಿದೆಯೋ. ಆರ್ಚರ್ ಮೀನು ಬೇಟೆಯನ್ನು ಕೆಳಗುರುಳಿಸುವ ರೋಚಕ ವಿಡಿಯೋದ ಲಿಂಕ್ ಕೆಳಗಿದೆ. ನೋಡಿ ಆನಂದಿಸಿ.

https://youtu.be/f8oV4RBYR9U