ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Monday, May 4, 2026

ಭಾರತದ ಥೋರಿಯಂ ಮೌನ ಕ್ರಾಂತಿ

 ಭಾರತದ ಥೋರಿಯಂ ಮೌನ ಕ್ರಾಂತಿ

                    
        -   ಲೇಖನ : ರಾಮಚಂದ್ರ ಭಟ್ ಬಿ.ಜಿ.




ದೊಡ್ಡ ಕನಸು ಕಾಣಿರಿ. ಕನಸುಗಳು ಚಿಂತನೆಗಳಾಗಿ,ಚಿಂತನೆಗಳು ಕ್ರಿಯೆಗಳಾಗಿ ಯಶಸ್ಸನ್ನು ರೂಪಿಸುತ್ತವೆ.”  ಡಾ. ಎ.ಪಿ.ಜೆ. ಅಬ್ದುಲ್ ಕಲಾಂ

ಇತ್ತೀಚೆಗೆ ಪತ್ರಿಕೆ, ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿಯೊಂದು ವಿಜ್ಞಾನ ಜಗತ್ತಿನಲ್ಲಿ ಭಾರೀ ಸಂಚಲನವನ್ನು ಉಂಟು ಮಾಡಿತು. ರೋಮಾಂಚನದೊಂದಿಗೆ ಮನದಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಿತು.

ಅದು ೧೯೫೦ರ ದಶಕ ಹೊಸದಾಗಿ ಸ್ವಾತಂತ್ರ್ಯ ಪಡೆದ ಭಾರತ ಬಡತನ, ವಿದ್ಯುತ್ ಕೊರತೆ ಮತ್ತು ತಾಂತ್ರಿಕ ಹಿನ್ನಡೆಯ ಕತ್ತಲೆಯಲ್ಲಿತ್ತು. ಅಭಿವೃದ್ಧಿಯ ಕನಸನ್ನು ಊಹಿಸುವುದೇ ಅಸಾಧ್ಯ. ಇಂತಹ ಕಾಲದಲ್ಲಿ, ವಿಜ್ಞಾನಿಯೊಬ್ಬರು ಶಕ್ತಿಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಕನಸು ಕಾಣುತ್ತಿದ್ದರು. ಅಷ್ಟೇ ಅಲ್ಲದೆ ಅದಕ್ಕಾಗಿ ಸೂಕ್ತ ಯೋಜನೆಯನ್ನೂ ಹಾಕಿಕೊಂಡರು. ಅಸಾಧ್ಯೆಂದರೂ, ಜನ ನಕ್ಕರೂ ಭಾರತ ನೂರಾರು ವರ್ಷಗಳ ಮುಂದಿನ ವೈಜ್ಞಾನಿಕ ಕ್ಷೇತ್ರದ ಪ್ರಗತಿಯ ಭವಿಷ್ಯದ ಕನಸು ಕಂಡ, ದೂರದರ್ಶಿತ್ವ , ವಿಚಕ್ಷಣಾ ಶಕ್ತಿಯ ಆ ವಿಜ್ಞಾನಿಯೇ ಹೋಮಿ ಜೆ ಭಾಭಾ. ಭಾರತದ ಬಳಿ ಯುರೇನಿಯಂ ಕಡಿಮೆ ಇದ್ದರೂ, ಅಪಾರ ಥೋರಿಯಂ ಸಂಪತ್ತು ನಮ್ಮ ಮಣ್ಣಿನೊಳಗೇ ಅಡಗಿದೆ ಎಂಬುದನ್ನು ಅವರು ಬಹಳ ಬೇಗ ಗುರುತಿಸಿದ್ದರು. “ಇಂದು ಸಂಪನ್ಮೂಲ ಕಡಿಮೆ ಇರಬಹುದು; ಆದರೆ ನಾಳೆಯ ಭಾರತ ಶಕ್ತಿಶಾಲಿಯಾಗಬೇಕು” ಎಂಬ ಮಹಾಕನಸಿನೊಂದಿಗೆ 1954ರಲ್ಲಿ ಅವರು ಭಾರತದ ಅಣುಶಕ್ತಿ ಭವಿಷ್ಯಕ್ಕೆ ಅಡಿಪಾಯ ಹಾಕಿದ ಮೂರು ಹಂತಗಳ ಯೋಜನೆಯನ್ನು ರೂಪಿಸಿದರು. ಭಾಭಾ ಅವರ ಯೋಜನೆ ಕೇವಲ ವಿದ್ಯುತ್ ಉತ್ಪಾದನೆಗಾಗಿ ಅಲ್ಲ; ಅದು ಆತ್ಮನಿರ್ಭರ ಮತ್ತು ವೈಜ್ಞಾನಿಕ ಭಾರತ ನಿರ್ಮಾಣದ ದಿಟ್ಟ ಕನಸಾಗಿತ್ತು.

ಮೊದಲ ಹಂತದಲ್ಲಿ ಯುರೇನಿಯಂ ಬಳಕೆ, ನಂತರ ಪ್ಲುಟೋನಿಯಂ ಉತ್ಪಾದನೆ, ಕೊನೆಯಲ್ಲಿ ಭಾರತದ ಅಪಾರ ಥೋರಿಯಂ ಸಂಪತ್ತನ್ನು ಶಾಶ್ವತ ಶಕ್ತಿಯಾಗಿ ಪರಿವರ್ತಿಸುವ ಅವರ ದೂರದೃಷ್ಟಿತ್ವ ಆ ಕಾಲದಲ್ಲೇ ಜಗತ್ತಿಗೇ ಅಚ್ಚರಿ ಮೂಡಿಸಿತ್ತು. ಇಂದು ವಿಶ್ವವೇ ಶುದ್ಧಶಕ್ತಿ ಹುಡುಕುತ್ತಿರುವಾಗ, ದಶಕಗಳ ಹಿಂದೆಯೇ ಥೋರಿಯಂ ಮಹತ್ವವನ್ನು ಕಂಡ ಭಾಭಾ ಅವರ ದೂರದೃಷ್ಟಿ ಭಾರತದ ವಿಜ್ಞಾನ ಇತಿಹಾಸದಲ್ಲಿ ದೀಪಸ್ತಂಭದಂತೆ ಹೊಳೆಯುತ್ತಿದೆ. ಭಾರತವು ವಿಶ್ವದ ಸುಮಾರು 25% ಥೋರಿಯಂ ಸಂಪತ್ತನ್ನು ಹೊಂದಿದೆ. ಕೇರಳ, ತಮಿಳುನಾಡು ಮತ್ತು ಒಡಿಶಾ ಕರಾವಳಿಯ ಮೊನಾಜೈಟ್ ಮರಳಿನಿಂದ ಥೋರಿಯಂ ಅನ್ನು ಪಡೆಯಲಾಗುತ್ತದೆ.

 ಭವಿಷ್ಯದ ಭಾರತವನ್ನು ಬೆಳಗಿಸುವ ಶಕ್ತಿ ಕಲ್ಲಿದ್ದಲು ಅಲ್ಲ, ಕಚ್ಚಾ ತೈಲವೂ ಅಲ್ಲ; ನಮ್ಮ ಮಣ್ಣಿನಲ್ಲೇ ಮಲಗಿರುವ ಥೋರಿಯಂ!” ಈ ಮಾತುಗಳು ಇಂದು ಕೇವಲ ಕನಸಾಗಿ ಉಳಿದಿಲ್ಲ. 2026ರ ಏಪ್ರಿಲ್ 6ರಂದು ತಮಿಳುನಾಡಿನ ಕಲ್ಪಕ್ಕಂನಲ್ಲಿ ಭಾರತದ ಸ್ವದೇಶಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಯಶಸ್ವಿಯಾಗಿ ಮೊದಲ ಕ್ರಾಂತಿಗಾತ್ರ ಅಥವಾ ಕ್ರಿಟಿಕಾಲಿಟಿ (first criticality) ಹಂತವನ್ನು ತಲುಪಿದೆ. ಇದು ನಿಯಂತ್ರಿತ ಪರಮಾಣು ವಿದಳನಕ್ರಿಯೆಯು ನಿರಂತರವಾಗಿ ನಡೆಯುವ ಹಂತವಾಗಿದೆ. ಇದು ಭಾರತದ ಪರಮಾಣುಶಕ್ತಿ ಯೋಜನೆಯಲ್ಲಿಐತಿಹಾಸಿಕ ಮೈಲುಗಲ್ಲು.

ಈ ಸಾಧನೆ ಕೇವಲ ತಾಂತ್ರಿಕ ವಿಜಯವಲ್ಲ, ಇದು ಭಾರತದ ಶಕ್ತಿ ಸ್ವಾವಲಂಬನೆ, ವೈಜ್ಞಾನಿಕ ಸ್ವಾಭಿಮಾನ ಮತ್ತು ದೀರ್ಘಕಾಲೀನ ಇಂಧನ ಭದ್ರತೆಯಲ್ಲಿನ ಹೊಸ ಅಧ್ಯಾಯವಾಗಿದೆ. ಭಾರತದ ಪರಮಾಣುಶಕ್ತಿಯ ಪಿತಾಮಹರೆನಿಸಿದ ಹೋಮಿ ಜಹಾಂಗೀರ್ ಭಾಭಾ ಅವರು 1950ರ ದಶಕದಲ್ಲಿ ರೂಪಿಸಿದ ಮೂರು ಹಂತದ ಪರಮಾಣುಶಕ್ತಿ ಯೋಜನೆಯ ಎರಡನೇ ಹಂತವನ್ನು ಭಾರತವು ಈಗ ಅಧಿಕೃತವಾಗಿ ಪ್ರವೇಶಿಸಿದೆ.  

 ಹೋಮಿ ಭಾಭಾರವರ ಪರಮಾಣುಶಕ್ತಿ ಯೋಜನೆಮೂರು ಹಂತಗಳು:

1. ಮೊದಲ ಹಂತ: ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಬಳಸಿ ಸಂಪೀಡಿತ ಭಾರಜಲ ಕ್ರಿಯಾಕಾರಿ (Pressurised Heavy Water Reactors-PHWR) ಮೂಲಕ ವಿದ್ಯುತ್ ಉತ್ಪಾದನೆ. ಇಲ್ಲಿ ಪ್ಲುಟೋನಿಯಂ-239 ಉಪ ಉತ್ಪನ್ನವಾಗಿ ದೊರೆಯುತ್ತದೆ.

2. ಎರಡನೇ ಹಂತ (ಪ್ರಸ್ತುತ): ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳಲ್ಲಿ ಪ್ಲುಟೋನಿಯಂ ಬಳಸಿ ಹೆಚ್ಚು ಪರಮಾಣು ಇಂಧನವನ್ನು ‘ಬ್ರೀಡ್’ ಮಾಡುವುದು (ಬಳಸುವುದಕ್ಕಿಂತ ಹೆಚ್ಚು ಉತ್ಪಾದಿಸುವುದು!!!). ಕಲ್ಪಕ್ಕಂ PFBR ಈ ಹಂತವನ್ನು  ಯಶಸ್ವಿಯಾಗಿ ತಲುಪಿದೆ.

3. ಮೂರನೇ ಹಂತ: ಥೋರಿಯಂ-232 ಅನ್ನು ಯುರೇನಿಯಂ-233 ಆಗಿ ಪರಿವರ್ತಿಸಿ ಭಾರೀ ಪ್ರಮಾಣದ ವಿದ್ಯುತ್ ಉತ್ಪಾದನೆ. ಇದು ಸಾವಿರಾರು ವರ್ಷಗಳ ಕಾಲ ಶಕ್ತಿ ಭದ್ರತೆಯನ್ನು ಖಚಿತಪಡಿಸುತ್ತದೆ!!. ವಿಶ್ವಕ್ಕೇ ನಾವು ಶಕ್ತಿಯನ್ನು ಒದಗಿಸಬಲ್ಲೆವು!!





ಈ ಯೋಜನೆಯು ವಿಶ್ವದಲ್ಲಿಯೇ ಅನನ್ಯವಾದುದು. ಬಹುತೇಕ ದೇಶಗಳು ಯುರೇನಿಯಂ ಆಧಾರಿತ ತಂತ್ರಜ್ಞಾನವನ್ನು ಅವಲಂಬಿಸಿದ್ದರೆ, ಭಾರತ ತನ್ನದೇ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬನೆ ಸಾಧಿಸುವ ಮೇಕ್‌ ಇನ್‌ ಇಂಡಿಯಾ ದಾರಿಯನ್ನು ಆಯ್ಕೆ ಮಾಡಿತು.

 “ಬ್ರೀಡರ್” ರಿಯಾಕ್ಟರ್: ಇಂಧನವನ್ನು ಸೃಷ್ಟಿಸುವ ಅದ್ಭುತ ತಂತ್ರಜ್ಞಾನ !!

ಸಾಮಾನ್ಯ ಪರಮಾಣು ರಿಯಾಕ್ಟರ್‌ಗಳು ಇಂಧನವನ್ನು ಬಳಸುತ್ತವೆ. ಆದರೆ ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳು ಬಳಸುವುದಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತವೆ. ನಿಮಗೆ ಇನ್ನೂ ಸರಳವಾಗಿ ಹೇಳಬೇಕೆಂದರೆ, ಒಂದು ಬೀಜವನ್ನು ಬಿತ್ತಿದರೆ ಒಂದು ಗಿಡ ಬೆಳೆಯುತ್ತದೆ. ಅದೇ ನೂರಾರು ಹೊಸ ಬೀಜಗಳನ್ನು ನೀಡುವ ಮರವಾಗಿ ಬೆಳೆಯುವಂತೆ!

ಕಲ್ಪಕ್ಕಂ PFBR 500 MWe ಸಾಮರ್ಥ್ಯದ್ದಾಗಿದೆ. ಇದು ಸೋಡಿಯಂ ಶೈತ್ಯನ ವ್ಯವಸ್ಥೆಯನ್ನು ಬಳಸುತ್ತದೆ ಮತ್ತು ಮಿಶ್ರ ಆಕ್ಸೈಡ್‌ (MOX) ಇಂಧನವನ್ನು ಬಳಸುತ್ತದೆ. ಇದು ಪ್ಲುಟೋನಿಯಂ ಬಳಸಿ ಕಾರ್ಯನಿರ್ವಹಿಸುತ್ತಾ, ಥೋರಿಯಂ ಹೊದಿಕೆಯ ಮೂಲಕ ಯುರೇನಿಯಂ-233 ಉತ್ಪಾದಿಸುತ್ತದೆ. ಇದು ಮೂರನೇ ಹಂತ ಬಾಗಿಲನ್ನು ತೆರೆಯುತ್ತದೆ.

 ವಿಶ್ವದಲ್ಲಿ ವಾಣಿಜ್ಯ ಮಟ್ಟದ ಫಾಸ್ಟ್ ಬ್ರೀಡರ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಡೆಸುತ್ತಿರುವ ದೇಶಗಳು ಅತ್ಯಂತ ಕಡಿಮೆ. ರಷ್ಯಾದ ನಂತರ ಭಾರತ ಈ ಕ್ಷೇತ್ರದಲ್ಲಿ ಪ್ರಮುಖ ಸ್ಥಾನಕ್ಕೇರಿದೆ. ಇದು ಸಂಪೂರ್ಣ ಭಾರತೀಯ ತಂತ್ರಜ್ಞಾನ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (IGCAR), ಭಾರತೀಯ ನಾಭಿಕಿಯ ವಿದ್ಯುತ್ ನಿಗಮ್ ಲಿಮಿಟೆಡ್ (Bharatiya Nabhikiya Vidyut Nigam Limited-BHAVINI) ಮತ್ತು ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ (DAE) ಗಳ ಸಹಕಾರದ ಫಲ.

ಕಲ್ಪಕ್ಕಂ ಸಾಧನೆಯ ಮಹತ್ವ ಮತ್ತು ಸವಾಲುಗಳು

ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (Atomic Energy Regulatory Board-AERB) ಯ ಕಠಿಣ ಸುರಕ್ಷತಾ ಪರೀಕ್ಷೆಗಳ ನಂತರವೇ 2026ರ ಏಪ್ರಿಲ್ 6ರಂದು ಸಂಜೆ 8:25ಕ್ಕೆ PFBR ಕ್ರಾಂತಿಗಾತ್ರ ಅಥವಾ ಕ್ರಿಟಿಕಾಲಿಟಿ ಹಂತವನ್ನು ತಲುಪಿದ್ದನ್ನು ಘೋಷಿಸಲಾಯಿತು. 2004ರಲ್ಲಿ ಇದರ ನಿರ್ಮಾಣ ಆರಂಭವಾಗಿದ್ದು, ಹಲವು ವಿಳಂಬಗಳ ನಂತರ ಈ ಯಶಸ್ಸು ದೊರೆತಿದೆ. ಇದು ಭಾರತೀಯ ವಿಜ್ಞಾನಿಗಳ ದಶಕಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆಗೆ ಸೋಲೊಪ್ಪದ ಕೃತುಶಕ್ತಿಗೆ ಸಾಕ್ಷಿಯಾಗಿದೆ.

ಪ್ರಮುಖ ಲಾಭಗಳು:

·        ಅಪಾರ ಥೋರಿಯಂ ಸಂಪತ್ತು: ಭಾರತ ಜಗತ್ತಿನ ಪ್ರಮುಖ ಥೋರಿಯಂ ಭಂಡಾರಗಳಲ್ಲೊಂದು. ಇದು ದೀರ್ಘಕಾಲೀನ ಇಂಧನ ಭದ್ರತೆಗೆ ಬಲವಾದ ಆಧಾರ.

·        ಕಡಿಮೆ ವಿಕಿರಣ ತ್ಯಾಜ್ಯ: ಯುರೇನಿಯಂ ಆಧಾರಿತ ವ್ಯವಸ್ಥೆಗಳಿಗಿಂತ ದೀರ್ಘಕಾಲ ಅಪಾಯಕಾರಿ ವಿಕಿರಣ ತ್ಯಾಜ್ಯದ ಪ್ರಮಾಣ ಕಡಿಮೆಯಾಗುತ್ತದೆ.

·        ಕಡಿಮೆ ಕಾರ್ಬನ್ ಉತ್ಸರ್ಜನೆ: ಪರಿಸರ ಸ್ನೇಹಿ ಶಕ್ತಿಯಾಗಿ, ಭಾರತದ “ನೆಟ್‌ ಜೀರೋ2070” ಗುರಿ ಸಾಧನೆಯಲ್ಲಿ ಮಹತ್ವದ ಪಾತ್ರವಹಿಸಬಲ್ಲದು.

·        ನಿರಂತರ ವಿದ್ಯುತ್ ಉತ್ಪಾದನೆ: ಸೌರ ಮತ್ತು ಗಾಳಿ ಶಕ್ತಿಯಂತೆ ಹವಾಮಾನಕ್ಕೆ ಅವಲಂಬಿತವಾಗಿರದೆ, ದಿನದ 24 ಗಂಟೆಯೂ ಸ್ಥಿರ “ ಕನಿಷ್ಟ - ಬೇಸ್‌ಲೋಡ್” ವಿದ್ಯುತ್ ಒದಗಿಸುವ ಸಾಮರ್ಥ್ಯ.

·        ಆಧುನಿಕ ಸುರಕ್ಷತಾ ವ್ಯವಸ್ಥೆಗಳು: ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಹುಪದರ ರಕ್ಷಣಾ ಕ್ರಮಗಳಿಂದ ಹೆಚ್ಚಿನ ಭದ್ರತೆ ಸಾಧ್ಯ.

ಮುಂದಿನ ಹೆಜ್ಜೆಗಳು: AHWR ಮತ್ತು ಥೋರಿಯಂ ಆರ್ಥಿಕತೆ

ಈಗ ನಮ್ಮ ಗಮನ ಉನ್ನತೀಕರಿಸಿದ ಭಾರಜಲ ಕ್ರಿಯಾಕಾರಿ (Advanced Heavy Water Reactor -AHWR) ಕಡೆಗೆ. ಇದು ಥೋರಿಯಂ ಆಧಾರಿತ ರಿಯಾಕ್ಟರ್ ಆಗಿದ್ದು, ಯಶಸ್ವಿಯಾದರೆ ಭಾರತವನ್ನು ಜಗತ್ತಿನ ಮೊದಲ ಪ್ರಮುಖ ಥೋರಿಯಂ ಆಧಾರಿತ ಶಕ್ತಿ ಉತ್ಪಾದಕ ರಾಷ್ಟ್ರವಾಗಿಸುತ್ತದೆ. AHWRಯು ಥೋರಿಯಂ ನೇರವಾಗಿ ಬಳಸುವ ಸಾಮರ್ಥ್ಯ ಹೊಂದಿದೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಗುರಿಗಳು ಸಾಕಾರವಾಗುತ್ತಿದ್ದಂತೆ- ವಿದ್ಯುತ್ ಕೊರತೆ ಇತಿಹಾಸವಾಗುತ್ತದೆ ಮತ್ತು ಭಾರತ “ಇಂಧನ ರಾಜ” ಎನಿಸಿಕೊಳ್ಳುತ್ತದೆ. 2031-32ರ ವೇಳೆಗೆ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 22.48 GWಗೆ ಏರಿಸುವುದು (ಪ್ರಸ್ತುತ ಸುಮಾರು 8 GW) ಸಮೀಪದ ಗುರಿಯಾಗಿದೆ. ಥೋರಿಯಂ ತಕ್ಷಣ ಇಂಧನವಲ್ಲ, ಆದರೆ ಅದನ್ನು ಯುರೇನಿಯಂ-233ಗೆ ಪರಿವರ್ತಿಸಿದರೆ ಅದ್ಭುತ ಶಕ್ತಿ ಮೂಲ. ಇದು ಹೆಚ್ಚು ದಕ್ಷತೆ, ಕಡಿಮೆ ತ್ಯಾಜ್ಯ, ಕಡಿಮೆ ವಿಕಿರಣ ಹೊಸೂಸುತ್ತದೆ.

ಈ ಮಹತ್ವದ ಸಾಧನೆಯ ಹಿಂದೆ ಸಾವಿರಾರು ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ತಂತ್ರಜ್ಞರ ನಿರಂತರ ತಪಸ್ಸಿದೆ. ಪರಮಾಣುಶಕ್ತಿ ಕ್ಷೇತ್ರದಲ್ಲಿ ಅತಿಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಪ್ರತಿಯೊಂದು ಹಂತದಲ್ಲೂ ಸುರಕ್ಷತೆಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ವರ್ಷಗಳ ಕಾಲ ಪ್ರಯೋಗಾಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಮತ್ತು ಕ್ರಿಯಾಕಾರಿಗಳ ನೆರಳಿನಲ್ಲಿ ದುಡಿದ ಅವರ ಪರಿಶ್ರಮವೇ ಇಂದು ಭಾರತದ ವೈಜ್ಞಾನಿಕ ಆತ್ಮವಿಶ್ವಾಸವಾಗಿದೆ.

“ದೂರದೃಷ್ಟಿ ಮತ್ತು ನಿರಂತರ ಪರಿಶ್ರಮವೇ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ.” ಇಂದು ಅನೇಕ ಯುವಕರು ತಂತ್ರಜ್ಞಾನ, ಐಟಿ ಕ್ಷೇತ್ರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಮೂಲ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಇಂಜಿನಿಯರಿಂಗ್‌ನಲ್ಲಿ ತೊಡಗಿಕೊಳ್ಳುವುದು ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ.

ಭಾಭಾ, ಸಾರಾಭಾಯಿ, ಕಲಾಂ ಅವರಂತಹ ವ್ಯಕ್ತಿಗಳು ಸೀಮಿತ ಸಂಪನ್ಮೂಲಗಳ ನಡುವೆಯೂ ದೊಡ್ಡ ಕನಸುಗಳನ್ನು ನನಸು ಮಾಡಲು ದೃಢ ಸಂಕಲ್ಪ ಮಾಡಿದರು. ಇಂದಿನ ಯುವಕರು ಅವರನ್ನು ಹೆಜ್ಜೆಗಳ ಜಾಡನ್ನು ಅನುಸರಿಸಿ, ಥೋರಿಯಂ ಯುಗವನ್ನು ಪೂರ್ಣಗೊಳಿಸುವಲ್ಲಿ ಪಾತ್ರ ವಹಿಸಬೇಕಿದೆ. ಕಲ್ಪಕ್ಕಂನಲ್ಲಿ ಹೊತ್ತಿಸಿದ ಪರಮಾಣು ಜ್ವಾಲೆ ಕೇವಲ ಕ್ರಿಯಾಕಾರಿಗಷ್ಟೇ ಸೀಮಿತವಾಗಿಲ್ಲ. ಅದು ಭಾರತದ ವೈಜ್ಞಾನಿಕ ಆತ್ಮವಿಶ್ವಾಸದ ದಿವ್ಯಜ್ಯೋತಿ. ಮುಂದಿನ ದಿನಗಳಲ್ಲಿ ಭಾರತದ ಮನೆಗಳನ್ನು ಬೆಳಗಿಸುವ ವಿದ್ಯುತ್ ಶಕ್ತಿಯನ್ನು ನಮ್ಮ ಕರಾವಳಿಯ ಮಾನೋಜೈಟ್‌ ಮರಳಿನಲ್ಲಿರುವ ಥೋರಿಯಂನಿಂದ ಬರಬಹುದು ಇದು ಈಗ ಕೇವಲ ಕನಸಲ್ಲ, ಸಾಕಾರವಾಗುತ್ತಿರುವ ವೈಜ್ಞಾನಿಕ ಸತ್ಯ. ಈ ಸಾಧನೆಯು ಭಾರತವನ್ನು “ವಿಕಸಿತ ರಾಷ್ಟ್ರ”ದತ್ತ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು. ಜೈ ಹಿಂದ್!!

 

 

 

 

 

 

 

 

 

 

ಇವಳು ಮೇರಿಯಲ್ಲ, ಟೈಫಾಯಿಡ್ ಮಾರಿ!

ಇವಳು ಮೇರಿಯಲ್ಲಟೈಫಾಯಿಡ್ ಮಾರಿ!

ಲೇಖಕರು : ಡಾ|| ಎಂ.ಜೆ. ಸುಂದರ್ ರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು 

    


ನ್ಯೂಯಾರ್ಕ್‌ನಲ್ಲಿ ಚಾರ್ಲ್ಸ್ ಹೆನ್ರಿ ವಾರೆನ್ ಎಂಬ ಅತಿ ಶ್ರೀಮಂತ ವ್ಯಾಪಾರಿ ಇದ್ದ. ಇವನು 1906ರಲ್ಲಿ ಹತ್ತಿರದ ದ್ವೀಪದಲ್ಲಿ ತಾತ್ಕಾಲಿಕವಾಗಿ ವಿಶ್ರಾಂತಿದಾಮವೊಂದನ್ನು ಬಾಡಿಗೆಗೆ ಪಡೆದು, ತನ್ನ ಹನ್ನೊಂದು ಸದಸ್ಯರ ವಿಶಾಲ ಪರಿವಾರ ಸಮೇತ ಮೋಜು, ವಿಶ್ರಾಂತಿಗಾಗಿ ಆಗಮಿಸಿದನು. ತನ್ನ ಪರಿವಾರಕ್ಕೆ ತಿಂಡಿ ತಿನಿಸು, ಊಟೋಪಚಾರಗಳನ್ನು ಪೂರೈಸಲು ಮೇರಿ ಮಾಲನ್ (Mary Mallon) ಎಂಬ ಅಡುಗೆಯವಳನ್ನೂ ಜೊತೆಗೆ ಕರೆದೊಯ್ದಿದ್ದನು. ಕೆಲವು ದಿನ ಎಲ್ಲರೂ ತಿಂದು ತೇಗಿ, ಸಂತೋಷದಿಂದ ಕಾಲ ಕಳೆದರು. ನಂತರ, ವಾರೆನ್‌ನ ಮಗಳಿಗೆ ಟೈಫಾಯಿಡ್ ಬಂದು ಹಾಸಿಗೆ ಹಿಡಿದಳು. 4-5 ದಿನಗಳ ನಂತರ ಮತ್ತೊಬ್ಬ ಮಗಳಿಗೂ ಟೈಫಾಯಿಡ್ ಸೋಂಕಿತು. ಕ್ರಮೇಣ ಮನೆಯ ತೋಟಗಾರನೂ ಟೈಫಾಯಿಡ್‌ನಿಂದ ನರಳಲಾರಂಭಿಸಿದ. ಇದೇ ರೀತಿ ಆ ಪರಿವಾರದ ಆರು ಮಂದಿಗೆ ಟೈಫಾಯಿಡ್ ತಗುಲಿ, ಹಾಸಿಗೆ ಹಿಡಿದರು.

ಟೈಫಾಯಿಡ್ ರೋಗ ಕಲುಷಿತ ಆಹಾರ ಅಥವಾ ನೀರಿನ ಮೂಲಕ ಹರಡುವುದನ್ನು ತಿಳಿದಿದ್ದ ಆ ಮನೆಯ ಮಾಲೀಕನಿಗೆ ಕಳವಳ ಪ್ರಾರಂಭವಾಯಿತು. ತನ್ನ ಮನೆಗೆ ಬಾಡಿಗೆಗೆ ಬಂದ ಕುಟುಂಬದಲ್ಲಿ ಈ ರೀತಿ ಇಷ್ಟೊಂದು ಜನ ರೋಗಕ್ಕೊಳಗಾದರೆಂಬ ವಿಷಯ ತಿಳಿದರೆ ಮುಂದೆ ತನ್ನ ಮನೆಗೆ ಬಾಡಿಗೆದಾರರು ಬರಲಾರರೆಂದು ಹೆದರಿ, ಕೂಡಲೇ ಈ ರೋಗದ ಮೂಲವನ್ನು ಶೋಧಿಸಲು ಪರಿಣತನೊಬ್ಬನನ್ನು ಕರೆಸಿದನು. ಕೊಳಾಯಿ, ತೊಟ್ಟಿ, ಬಚ್ಚಲುಮನೆ, ಶೌಚಾಲಯ ಮುಂತಾದ ನೀರು ಬರುವ, ತಂಗುವ ಎಲ್ಲ ಮೂಲಗಳನ್ನೂ ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು. ಅವೆಲ್ಲವೂ ಸರಿಯಾಗಿಯೇ ಇರುವಂತೆ ಕಂಡುಬಂದವು. ಟೈಫಾಯಿಡ್ ಹರಡಲು ಇವು ಯಾವುದೂ ಕಾರಣವಾಗಿರಲಿಲ್ಲ. ಇದರಿಂದ ಸಮಾಧಾನಗೊಳ್ಳದ ಮಾಲೀಕ ಇದಕ್ಕೆ ಸರಿಯಾದ ಕಾರಣವರಿಯಲು ಟೈಫಾಯಿಡ್ ಬಗ್ಗೆ ವಿಶೇಷ ಅನುಭವವಿದ್ದ ಜಾರ್ಜ್ ಸೋಪರ್ (George Soper) ಎಂಬ ಸಿವಿಲ್ ಇಂಜಿನಿಯರ್‌ನನ್ನು ನೇಮಿಸಿದನು.

ಸೋಪರ್ ತಮ್ಮ ಪತ್ತೇದಾರಿ ಕೆಲಸವನ್ನು ಪ್ರಾರಂಭಿಸಿದರು. ಆ ಪರಿವಾರದಲ್ಲಿ ಟೈಫಾಯಿಡ್ ಕಾಣಿಸಿಕೊಂಡ ಸುಮಾರು ಮೂರು ವಾರಗಳ ತರುವಾಯ ಮೇರಿ ತನ್ನ ಕೆಲಸ ಬಿಟ್ಟು ಹೋದಳು. ಮನೆಯಲ್ಲಿನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಸೋಪರ್‌ಗೆ ಏಕೋ ಮೇರಿಯ ಮೇಲೆ ಸಂದೇಹ ಬಂದಿತು. ಅವಳ ಔದ್ಯೋಗಿಕ ಚರಿತ್ರೆಯ ಜಾಡು ಹಿಡಿದು ಹೊರಟರು.

ಐರ್ಲೆಂಡ್‌ನಲ್ಲಿ ಹುಟ್ಟಿದ ಮೇರಿ, 1883ರಲ್ಲಿ, ತನ್ನ 15ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ವಲಸೆಬಂದು, ಅಲ್ಲಿ ಶ್ರೀಮಂತ ಕುಟುಂಬಗಳನ್ನೇ ಹುಡುಕಿ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದಳು. 1900ರಿಂದ 1907ರ ವರೆಗೆ ಅವಳು ನ್ಯೂಯಾರ್ಕ್‌ನಲ್ಲಿ ಏಳು ಕುಟುಂಬಗಳಲ್ಲಿ ಅಡುಗೆಯವಳಾಗಿ ಕೆಲಸ ಮಾಡಿದ್ದಳು.

1900ರಲ್ಲಿ, ಅವಳು ಕೆಲಸಕ್ಕೆ ಸೇರಿದ ಎರಡು ವಾರಗಳಲ್ಲಿ ಆ ಮನೆಯವರಿಗೆ ಟೈಫಾಯಿಡ್ ರೋಗ ತಗುಲಿತ್ತು. 1901ರಲ್ಲಿ ಅವಳು ಸೇರಿದ್ದ ಮತ್ತೊಂದು ಕುಟುಂಬದಲ್ಲಿ ಎಲ್ಲ ಸದಸ್ಯರೂ ಟೈಫಾಯಿಡ್‌ನಿಂದ ಪೀಡಿತರಾಗಿದ್ದು, ಒಬ್ಬರು ಸತ್ತಿದ್ದರು. ಆ ಮನೆಯನ್ನೂ ಬಿಟ್ಟು ಅವಳು ಮತ್ತೊಂದು ಮನೆ ಸೇರಿದಳು. ಆ ಮನೆಯ 8 ಸದಸ್ಯರಲ್ಲಿ 7 ಸದಸ್ಯರು ಟೈಫಾಯಿಡ್‌ನಿಂದ ನರಳಿದರು. 1906ರಲ್ಲಿ ಆ ಮನೆಯನ್ನೂ ಬಿಟ್ಟು, ಮೇರಿ ಮತ್ತೊಂದು ಮನೆ ಸೇರಿದಳು. 11 ಜನವಿದ್ದ ಆ ಮನೆಯಲ್ಲಿ 10 ಜನ ಟೈಫಾಯಿಡ್‌ನಿಂದ ನರಳಿ ಆಸ್ಪತ್ರೆ ಸೇರಿದರು. ಆ ಮನೆಯನ್ನೂ ಬಿಟ್ಟು, ಕೊನೆಗೆ, ಮೇರಿ ವಾರೆನ್ ಅವರ ಮನೆ ಸೇರಿದ್ದಳು. ಹೀಗೆ, ಅವಳು ಕೆಲಸ ಮಾಡಿದ ಏಳು ಮನೆಗಳಲ್ಲೂ ಟೈಫಾಯಿಡ್ ಅವಳನ್ನು ಹಿಂಬಾಲಿಸಿಕೊಂಡು ಬಂದಿರುವುದು ಗೋಚರಿಸಿತು. ಆ ತಾಣಗಳಲ್ಲಿ ಒಟ್ಟು 22 ಜನ ಟೈಫಾಯಿಡ್‌ನಿಂದ ನರಳಿದ್ದು, ಬಾಲಕಿಯೊಬ್ಬಳು ಸತ್ತಿದ್ದ ವಿಷಯ ಸೋಪರ್‌ಗೆ ತಿಳಿದುಬಂದಿತು.

ಮೇರಿ ಇದುವರೆಗೂ ಒಮ್ಮೆಯೂ ಟೈಫಾಯಿಡ್‌ನಿಂದ ನರಳಿರಲಿಲ್ಲವೆಂಬುದೂ ಸೋಪರ್‌ಗೆ ತಿಳಿದುಬಂದಿತು. ಆದರೂ ಅವಳ ರಕ್ತ, ಮಲಮೂತ್ರಗಳ ತಪಾಸಣೆ ಮಾಡಿ, ತನ್ನ ಸಂಶಯವನ್ನು ನಿವಾರಿಸಿಕೊಳ್ಳಬೇಕಾಗಿತ್ತು. ಈ ತಪಾಸಣೆಯಿಂದ ಮೇರಿ ಟೈಫಾಯಿಡ್ ರೋಗಕಾರಕಗಳ ವಾಹಕಳಾಗಿರಬಹುದೆಂಬ ಸಂಶಯವನ್ನು ನಿವಾರಿಸಿಕೊಳ್ಳಬೇಕಾಗಿತ್ತು. ಇದಕ್ಕಾಗಿ, ಮೇರಿ ಇರುವೆಡೆಯನ್ನು ಪತ್ತೆಮಾಡಬೇಕಾಗಿತ್ತು. 

1907ನೇ ಇಸವಿಯಲ್ಲಿ, ಸೋಪರ್ ಅವರ ಬಡಾವಣೆಯಲ್ಲಿ ಯಾರಿಗೋ ಟೈಫಾಯಿಡ್ ರೋಗ ಸೋಂಕಿರುವ ಸುದ್ದಿ ಸೋಪರ್‌ಗೆ ಗೊತ್ತಾಯಿತು. ವಿಚಾರಣೆ ನಡೆಸಿದಾಗ, ಆ ಮನೆಯಲ್ಲಿ ಇಬ್ಬರಿಗೆ ಟೈಫಾಯಿಡ್ ಸೋಂಕಿರರುವುದು ಕಂಡುಬಂದಿತು. ಮನೆಯ ಕೆಲಸದವಳು ಹಾಸಿಗೆ ಹಿಡಿದಿದ್ದಳು. ಮನೆಯೊಡೆಯನ 25-26 ವಯಸ್ಸಿನ ಮಗಳು ನರಳುತ್ತಿದ್ದಳು. ಇವಳಿಗೆ ರೋಗ ತೀವ್ರವಾಗಿ, ಎರಡು ದಿನಗಳ ನಂತರ ಸಾವನ್ನಪ್ಪಿದ್ದಳು. ಇವಳನ್ನು ಶುಶ್ರೂಷೆ ಮಾಡುತ್ತಿದ್ದ ನರ್ಸ್‌ಗೆ ರೋಗ ಸೋಂಕಿತು. ಇದನ್ನು ಕೇಳಿದ ಸೋಪರ್‌ಗೆ ಬೇಸರವಾಯಿತು. ಅದೇ ಸಮಯದಲ್ಲಿ ಸೋಪರ್‌ಗೆ ಮಿಂಚಿನಂತೆ ಮತ್ತೊಂದು ಸುದ್ದಿ ಬಂದಿತು. ಮೇರಿಯನ್ನು ಹೋಲುವ ಹೊಸ ಅಡುಗೆಯವಳು ಕೆಲವೇ ದಿನಗಳ ಹಿಂದೆ ಆ ಮನೆಗೆ ಕೆಲಸಕ್ಕೆ ಸೇರಿದ್ದಳೆಂಬ ಆ ಸುದ್ದಿ ಸೋಪರ್ ರ ಕುತೂಹಲ ಕೆರಳಿಸಿತು.

ಸೋಪರ್ ಕೂಡಲೇ ಆ ಮನೆಗೆ ಹೋಗಿ, ಅವಳೊಡನೆ ತನ್ನ ಪರಿಚಯ ಮಾಡಿಕೊಂಡು, ತಾವು ಬಂದ ಉದ್ದೇಶವನ್ನು ಪ್ರಸ್ತಾಪಿಸಿದರು. ಅವಳು ಟೈಫಾಯಿಡ್ ರೋಗಕಾರಕಗಳನ್ನು ಹೊತ್ತು, ಅವನ್ನು ಇತರರಿಗೆ ಹರಡುತ್ತಿರಬಹುದೆಂಬ ಸಂಶಯವಿರುವುದರಿಂದ ಅವಳ ಮಲ ಮೂತ್ರಗಳನ್ನು ಪರೀಕ್ಷಿಸಬೇಕಾಗುತ್ತದೆಂದೂ, ಅದಕ್ಕೆ ಅವಳ ಸಹಕಾರ ಬೇಕೆಂದೂ ತಿಳಿಸಿದರು. ಇದನ್ನು ಕೇಳುತ್ತಿದ್ದಂತೆ, ಸಿಟ್ಟಿನಿಂದ ಕೆಂಡಾಮಂಡಲವಾದ ಮೇರಿ, ಕೈಗೆ ಸಿಕ್ಕ ಸೌಟನ್ನು ಎತ್ತಿಕೊಂಡು ಸೋಪರ್‌ರನ್ನು ಬಡಿಯಲು ನುಗ್ಗಿದಳು. ಗಾಬರಿಗೊಂಡ ಸೋಪರ್ ಅಲ್ಲಿಂದ ಪರಾರಿಯಾದರು!

ಆದರೆ ಸೋಪರ್ ಛಲ ಬಿಡಲಿಲ್ಲ. ನ್ಯೂಯಾರ್ಕ್ ಆರೋಗ್ಯ ಇಲಾಖೆಯ ಮುಖ್ಯಸ್ಥ ಹರ್ಮನ್ ಬಿಗ್ಸ್ (Herman Biggs) ಗೆ ತಮ್ಮ ಸಂಶಯ ಮತ್ತು ಸಂಶೋಧನೆಯನ್ನು ವಿವರಿಸಿದರು. ಬಿಗ್ಸ್ ಈ ಒಗಟನ್ನು ಬಿಡಿಸುವ ಜವಾಬ್ದಾರಿಯನ್ನು ಜೋಸೆಫೈನ್ ಬೇಕರ್ ಎಂಬ ವೈದ್ಯರಿಗೆ ವಹಿಸಿದರು. ಬೇಕರ್ ಮೇರಿಯನ್ನು ಕಂಡಾಗ ಅವಳು ಅವರೊಡನೆ ಮಾತನಾಡಲು ನಿರಾಕರಿಸಿದಳು. ಬೇಕರ್ ಐವರು ಪೊಲೀಸ್ ಅಧಿಕಾರಿಗಳ ಸಹಾಯದಿಂದ ಅವಳನ್ನು ಬಲವಂತವಾಗಿ ಆಂಬುಲೆನ್ಸ್‌ನಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಲು ಸಿದ್ಧತೆ ನಡೆಸಿದರು. ಇದನ್ನರಿತ ಮೇರಿ ಬೇಕರ್‌ರನ್ನೂ ಸೌಟಿನಿಂದ ಹೊಡೆಯಲು ಮುನ್ನುಗ್ಗಿದಳು. ಕ್ಷಣಕಾಲ ತಬ್ಬಿಬ್ಬಾದ ಬೇಕರ್ ಸುಧಾರಿಸಿಕೊಳ್ಳುವ ಮೊದಲೇ ಮೇರಿ ಅಲ್ಲಿಂದ ಅದೃಶ್ಯಳಾಗಿದ್ದಳು! ಹುಡುಕಿದಾಗ, ಮನೆಯ ಹೊರಗೆ, ಬೇಲಿಯ ಕೆಳಗೆ ಅವಿತುಕೊಂಡಿದ್ದದ್ದು ಕಂಡುಬಂದಿತು. ಅವಳನ್ನು ಹಿಡಿದು ಆಂಬುಲೆನ್ಸ್‌ನೊಳಗೆ ದಬ್ಬಿ, ಆಸ್ಪತ್ರೆಗೆ ಕರೆದೊಯ್ದರು.

ತನಗೆ ಇದುವರೆಗೂ ಒಮ್ಮೆಯೂ ಟೈಫಾಯಿಡ್ ತಗುಲಿಲ್ಲವೆಂತಲೂ, ತಾನು ಆರೋಗ್ಯವಾಗಿರುವುದಾಗಿಯೂ ವಾದಿಸಿದ ಮೇರಿ, ತನ್ನನ್ನು ಅನವಶ್ಯಕವಾಗಿ ಪರೀಕ್ಷೆಗೊಳಪಡಿಸುತ್ತಿರುವುದಾಗಿ ಬೇಕರನನ್ನು ದೂರಿದಳು. ಆದರೆ ಆಸ್ಪತ್ರೆಯ ಸಂಶೋಧನೆಯಲ್ಲಿ, ಅವಳ ಮಲದಲ್ಲಿ ಟೈಫಾಯಿಡ್ ರೋಗಾಣುಗಳು ಪ್ರತ್ಯಕ್ಷವಾಗಿದ್ದವು!

ಮೇರಿಯ ಮಲದಲ್ಲಿ ಟೈಫಾಯಿಡ್ ರೋಗಾಣುಗಳು ಪತ್ತೆಯಾದೊಡನೆ, ಅವಳನ್ನು ಐಸೊಲೇಷನ್ ಆಸ್ಪತ್ರೆಗೆ ಸೇರಿಸಲಾಯಿತು. ಸುಮಾರು ಎರಡು ವರ್ಷಗಳ ವರೆಗೆ ಪ್ರತಿ ವಾರವೂ ಅವಳ ಮಲಪರೀಕ್ಷೆ ನಡೆಸಲಾಯಿತು. 163 ಸ್ಯಾಂಪಲ್‌ಗಳ ಪೈಕಿ 120 ಸ್ಯಾಂಪಲ್‌ಗಳಲ್ಲಿ ಟೈಫಾಯಿಡ್ ರೋಗಾಣುಗಳು ಗೋಚರಿಸಿದವು. ಇವನ್ನು ದೇಹದಲ್ಲಿ ಹೊತ್ತಿದ್ದೂ ಅವಳಿಗೆ ರೋಗ ಸೋಂಕದಿದ್ದುದು ವೈದ್ಯರಿಗೆ ಆಶ್ಚರ್ಯವನ್ನುಂಟುಮಾಡಿತು. ವಾಹಕರು ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳದಿದ್ದರೆ ರೋಗಕಾರಕಗಳು ಇವರ ಮೂಲಕ ಆಹಾರವನ್ನು ಸೇರಿ, ರೋಗವನ್ನು ಹರಡಬಲ್ಲವೆಂದು ಸಂಶೋಧನೆಗಳ ಮೂಲಕ ಗೊತ್ತಾಯಿತು. ಮೇರಿ ಮಲವಿಸರ್ಜನೆಯ ನಂತರ ತನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುತ್ತಿರಲಿಲ್ಲವೆಂಬುದು ಕಂಡುಬಂದಿತು. ಇಂತಹ ಅಶುದ್ಧ ಅಡುಗೆಯವರ ಮೂಲಕ ರೋಗಾಣುಗಳು ಆಹಾರವನ್ನು ಸೇರಿ, ಅದರ ಮೂಲಕ ರೋಗ ಹರಡುವ ಸಾಧ್ಯತೆಯಿರುವುದನ್ನು ವೈದ್ಯರು ಕಂಡುಹಿಡಿದರು.

ಮೂರು ವರ್ಷಗಳ ಕಾಲ (1907-1910) ದೂರದ ದ್ವೀಪದ ಐಸೊಲೇಷನ್ ಆಸ್ಪತ್ರೆಯಲ್ಲಿ ತಂಗಿದ್ದ ಮೇರಿಗೆ ಸ್ವಾತಂತ್ರ್ಯ ಬೇಕಾಗಿತ್ತು. ತನ್ನನ್ನು ಒಬ್ಬ ಅಪರಾಧಿಯಂತೆ ಕಾಣುತ್ತಿರುವುದನ್ನು ಮೇರಿ ಪ್ರಶ್ನಿಸಿದಳು. ತಾನು ಇನ್ನೆಂದೂ ಅಡುಗೆ ಮಾಡುವುದಿಲ್ಲವೆಂದು ಲಿಖಿತವಾಗಿ ಒಪ್ಪಿಕೊಂಡರೆ ಅವಳನ್ನು ಬಿಡುಗಡೆ ಮಾಡುವುದಾಗಿ ನ್ಯಾಯಾಲಯ ತಿಳಿಸಿತು. ಅದೇ ರೀತಿ, ತಾನು ಇನ್ನೆಂದೂ ಅಡುಗೆ ಕೆಲಸ ಮಾಡುವುದಿಲ್ಲವೆಂದೂ, ತನ್ನನ್ನು ಸಂಪರ್ಕಿಸಿದವರಿಗೆ ರೋಗ ಹರಡದಂತೆ ಸ್ವಚ್ಛತೆಯಿಂದ ವರ್ತಿಸುವ ಮುಂಜಾಗ್ರತಾ ಕ್ರಮಗಳನ್ನು ತಾನು ಅಳವಡಿಸಿಕೊಳ್ಳುವುದಾಗಿಯೂ ಮೇರಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಹೊರಬಂದಳು.

ಅವಳ ಬಿಡುಗಡೆಯಾಗಿ 5 ವರ್ಷಗಳ ನಂತರ ಆಸ್ಪತ್ರೆಯೊಂದರಲ್ಲಿ ಮತ್ತೆ ದಿಢೀರನೆ ಟೈಫಾಯಿಡ್ ಭುಗಿಲೆದ್ದಿತ್ತು. 25 ರೋಗಿಗಳು ನರಳಿ, ಅವರಲ್ಲಿ ಇಬ್ಬರು ಮೃತಪಟ್ಟರು. ಆಸ್ಪತ್ರೆಯ ಆಡಳಿತ ಮಂಡಳಿ ಕೂಡಲೇ ವಿಚಾರಣೆ ನಡೆಸಿತು. ಆಗ, ಆಸ್ಪತ್ರೆಗೆ ಹೊಸದಾಗಿ ಕೆಲಸಕ್ಕೆ ಸೇರಿದ್ದ ಮಿಸ್ ಬ್ರೌನ್ ಎಂಬ ಅಡುಗೆಯವಳ ಕೊಳಕುತನವೇ ರೋಗ ಹರಡಲು ಕಾರಣವೆಂದು ವಿಚಾರಣೆಯಿಂದ ತಿಳಿದು ಬಂದಿತು. ಬ್ರೌನ್‌ಳನ್ನು ಕರೆಸಿ, ಹೆಚ್ಚಿನ ಮಾಹಿತಿಗಾಗಿ ಪ್ರಶ್ನಿಸಿದಾಗ ಅವಳೇ ಮೇರಿ ಎಂದು ಗೊತ್ತಾಯಿತು! ತನ್ನ ಹೆಸರನ್ನು ಬದಲಿಸಿಕೊಂಡು ಮತ್ತೆ ಅಡುಗೆ ಕೆಲಸದಲ್ಲಿ ತೊಡಗಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡ ಅವಳನ್ನು ಕೂಡಲೇ ಮತ್ತೊಮ್ಮೆ ಐಸೊಲೇಷನ್ ಆಸ್ಪತ್ರೆಗೆ ರವಾನಿಸಲಾಯಿತು! ಈ ಸಲ ಅವಳು ಅಲ್ಲಿ 23 ವರ್ಷಗಳ (1915-1938) ಕಾಲ ಜೀವಿಸಿದಳು. ಒಟ್ಟಿಗೆ ಮೇರಿ 26 ವರ್ಷಗಳ ದೀರ್ಘಕಾಲ ಐಸೊಲೇಷನ್ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದಳು. ಇದಕ್ಕೆ ಮುಂಚೆ ಅವಳಿಂದ ಒಟ್ಟಿಗೆ 47 ಮಂದಿಗೆ ಟೈಫಾಯಿಡ್ ರೋಗ ಸೋಂಕಿದ್ದು, ಅವರಲ್ಲಿ ಮೂವರು ಸತ್ತಿದ್ದರು!

ಬ್ರಹ್ಮಾಂಡದಲ್ಲೊಂದು ಎರಿಡಾನಸ್‌ ಎಂಬ ಶೂನ್ಯ ಲೋಕ

 ಬ್ರಹ್ಮಾಂಡದಲ್ಲೊಂದು ಎರಿಡಾನಸ್‌ ಎಂಬ ಶೂನ್ಯ ಲೋಕ

 

ಲೇಖಕರು: ಕೃಷ್ಣ ಸುರೇಶ.




ನಾವೆಲ್ಲರೂ ವಾಸಿಸುವ ಭೂಮಿ ಸೂರ್ಯನನ್ನು ಸುತ್ತುವ ೮ ಗ್ರಹಗಳಲ್ಲಿ ಒಂದು. ಸೂರ್ಯ ಮತ್ತು ಅದರ ಸುತ್ತ ಸುತ್ತವ ಗ್ರಹಗಳು ಅವುಗಳ ಉಪಗ್ರಹಗಳು ಕ್ಷುದ್ರ ಗ್ರಹಗಳು, ಮುಂತಾದವುಗಳ ಪರಿವಾರವನ್ನು ಸೌರವ್ಯೂಹ ಎಂದು ಕರೆಯಲಾಗುತ್ತದೆ. ನಮಗೆಲ್ಲ ತಿಳಿದಿರುವಂತೆ ಆಕಾಶದಲ್ಲಿ ನಮಗೆ ಕಾಣುವ ನಕ್ಷತ್ರಗಳಂತೆಯೆ ಸೂರ್ಯ ಒಂದು ನಕ್ಷತ್ರ. ಸೂರ್ಯನಂತಹ ಮತ್ತು ಅದಕ್ಕಿಂತ ಹಲವಾರು ಪಟ್ಟು ದೊಡ್ಡದಾದ, ಚಿಕ್ಕದಾದ ಬಿಲಿಯಾಂತರ ನಕ್ಷತ್ರಗಳ ಸಮೂಹವೇ ಒಂದು ಗೆಲಾಕ್ಸಿ ಅಥವಾ ನಕ್ಷತ್ರ ಮಂಡಲ. ನಮ್ಮ ಸೂರ್ಯನಿರುವ ನಕ್ಷತ್ರ ಮಂಡಲದ ಹೆಸರು ಹಾಲುಹಾದಿ ಅಥವಾ ಮಿಲ್ಕೀವೇ. ಇದರಲ್ಲಿ ಒಂದು ನೂರು ಬಿಲಿಯನ್ನಿಗೂ ಮೀರಿ ನಕ್ಷತ್ರಗಳಿರಬಹುದೆಂದು ಅಂದಾಜಿಸಿದ್ದಾರೆ. ದೀರ್ಘವೃತ್ತೀಯ, ಸುರುಳಿ ಮತ್ತು ಅವ್ಯವಸ್ಥಿತ ಎಂಬ ಮೂರು ವಿಧದ ಗೆಲಾಕ್ಸಿಗಳಲ್ಲಿ ನಮ್ಮದು ಸುರುಳಿ ಗೆಲಾಕ್ಸಿ. ಇದರ ವಿಸ್ತಾರ ಎಷ್ಟಿದೆಯೆಂದರೆ ಮಿಲ್ಕೀವೇಯ ಒಂದು ಒಂದು ಅಂಚಿನಿಂದ ಹೊರಟು ಬೆಳಕಿನ ವೇಗದಲ್ಲಿ ಚಲಿಸುತ್ತಾ ಮತ್ತೊಂದು ಅಂಚನ್ನು ಮುಟ್ಟಲು ಒಂದು ಲಕ್ಷ ವರ್ಷಗಳು ಬೇಕಾಗುತ್ತದೆ. ನಮ್ಮ ವಿಶ್ವದಲ್ಲಿ ಇಂತಹ ಬಿಲಿಯನ್ ಬಿಲಿಯನ್ ಗಟ್ಟಳೆ ಗೆಲಾಕ್ಸಿಗಳಿವೆ ಎಂದರೆ ನಮ್ಮ ವಿಶ್ವದ ವ್ಯಾಪ್ತಿ ವಿಸ್ತಾರವನ್ನು ನೀವು ಊಹಿಸಿಬಲ್ಲಿರಾ?. ಆಧುನಿಕ ಕಾಸ್ಮಾಲಜಿಯ ಪ್ರಕಾರ ಇಷ್ಟೊಂದು ವಿಸ್ತಾರವಾದ ವಿಶ್ವದ ಉಗಮವು ಸುಮಾರು ಹದಿನಾಲ್ಕು ಬಿಲಿಯನ್‌ ವರ್ಷಗಳ ಹಿಂದೆ ಆಯಿತು. ಈ ಸೃಷ್ಟಿಗೆ ಮೊದಲು ಒಂದು ಸಣ್ಣ ಸೂಜಿಯ ಮೊನೆಯ ಗಾತ್ರದಲ್ಲಿದ್ದ ವಿಶ್ವವು ಅಪಾರ ರಾಶಿಯ ಮತ್ತು ಒತ್ತಡದಿಂದ ಕೂಡಿದ ಸಂಪೀಡಿತ ಗೋಲವಾಗಿತ್ತು. ಅದು ಇದ್ದಕ್ಕಿಂದ್ದಂತೆ ಭೀಷಣವಾಗಿ ಸ್ಪೋಟಿಸಿತು. ಈ ವಿದ್ಯಮಾನವನ್ನು ಮಹಾ ಸ್ಫೋಟ ಅಥವಾ ಬಿಗ್‌ ಬ್ಯಾಂಗ್‌ ಎಂದು ಕರೆಯಲಾಗಿದೆ. ಹೀಗೆ ಬಿಗ್‌ ಬ್ಯಾಂಗ್‌ ಸ್ಫೋಟದೊಂದಿಗೆ ಆರಂಭಿಸಿ ಕಾಲ ಮತ್ತು ಅವಕಾಶಗಳು ವಿಸ್ತಾರವಾಗುತ್ತಾ ಹೋಗಿ ಮೂಲಭೂತ ಕಣಗಳು, ಆ ಮೂಲಭೂತ ಕಣಗಳಿಂದ ದ್ಯವ್ಯವೂ ಮತ್ತದರಿಂದ ರಾಶಿ, ಗುರುತ್ವವೂ, ನಕ್ಷತ್ರಗಳು ನಕ್ಷತ್ರಮಂಡಲಗಳು ನಾವು ವಾಸಿಸುತ್ತಿರವ ನಕ್ಷತ್ರ ಮಂಡಲ, ಸೌರವ್ಯೂಹ, ಭೂಮಿ ಮತ್ತಿತರ ಗ್ರಹಗಳು ಸೃಷ್ಟಿಯಾದವು. ಇಂದು ನಾವು ಕಾಣುತ್ತಿರುವ ಅತಿ ವಿಸ್ತಾರವಾದ ವಿಶ್ವವು ಇಂದಿಗೂ ಗಾತ್ರದಲ್ಲಿ ಬೆಳೆಯುತ್ತಾ, ವಿಸ್ತಾರವಾಗುತ್ತಲೇ ಹೋಗುತ್ತಿದೆ.

  ರಾತ್ರಿಯಾಕಾಶದಲ್ಲಿ ನಮ್ಮ ಬರಿಗಣ್ಣಿಗೆ ಕಾಣುವ ನಕ್ಷತ್ರಗಳ ಸಂಖ್ಯೆಯನ್ನು ಎಣಿಸಲು ಅಸಾಧ್ಯವೆಂದು ನಮಗೆಲ್ಲ ಗೊತ್ತು. ರಾತ್ರಿಯಾಕಾಶದಲ್ಲಿ ನಮ್ಮ ಬರಿಗಣ್ಣಿಗೆ ಕಾಣುವ ನಕ್ಷತ್ರಗಳು ಗುಂಪುಗುಂಪಾಗಿರುವುದನ್ನು ಗಮನಿಸಿ ನಾವು ಕೆಲವು ಚಿತ್ತಾರಗಳನ್ನು ಚಿತ್ರಾಕೃತಿಗಳನ್ನು ಕಲ್ಪಿಸಿಕೊಳ್ಳಬಹುದು. ಹೀಗೆ ನಮ್ಮ ಪೂರ್ವಿಕರು ಕಲ್ಪಿಸಿಕೊಂಡ ಚಿತ್ರ ಆಕೃತಿಯ ನಕ್ಷತ್ರಗಳ ಗುಂಪನ್ನು ನಕ್ಷತ್ರ ಪುಂಜಗಳೆಂದು ಕರೆಯಲಾಗುತ್ತದೆ. ವರ್ಷವಿಡಿ ಆಕಾಶ ಗೋಲದಲ್ಲಿ ಬರಿಗಣ್ಣಿಗೆ ಕಾಣವ ನಕ್ಷತ್ರಗಳನ್ನು ೮೮ ಗುಂಪುಗಳನ್ನಾಗಿ ಮಾಡಿದೆ. ಇವುಗಳಲ್ಲಿ ೧೨ ಗುಂಪುಗಳನ್ನು ರಾಶಿ ನಕ್ಷತ್ರ ಪುಂಜಗಳೆಂದು ಕರೆಯಲಾಗುತ್ತದೆ. ಇನ್ನು ನಮ್ಮ ಬರಿಗಣ್ಣಿಗೆ ಕಾಣದ ನಕ್ಷತ್ರಗಳನ್ನು ನೋಡಲು ದೂರದರ್ಶಕ ಬೇಕಾಗುತ್ತದೆ. ಆಕಾಶದ ಯಾವ ಭಾಗಕ್ಕೆ ಆಗಲಿ ನಾವು ದೂರದರ್ಶಕವನ್ನು ತಿರುಗಿಸಿ ನೋಡಿದಾಗ ದೂರ ದೂರದವರೆಗೂ ಎಲ್ಲೆಲ್ಲಿಯೂ ನಕ್ಷತ್ರಗಳು, ಗೆಲಾಕ್ಸಿಗಳು, ನೀಹಾರಿಕೆಗಳು ಒತ್ತೊತ್ತಾಗಿ ಕಾಣುತ್ತವೆ. ಇದಕ್ಕೆ ಆದಿಅಂತ್ಯಗಳೆಂಬುದೇ ಇಲ್ಲವೆನಿಸುತ್ತದೆ. ಕಾಣುವ ನೋಟದಲ್ಲಿ ಎಲ್ಲಿಯೂ ಖಾಲಿ ಎಂಬುದೇ ಇಲ್ಲ! ಹೀಗೆ ಬ್ರಹ್ಮಾಂಡವು ಗೆಲಾಕ್ಸಿಗಳನ್ನು ಹೆಣೆದಿರುವ ಬಲೆಯಂತಿರುವುದರಿಂದ ಇದನ್ನು ವಿಶ್ವ ಬಲೆ ಎಂದು ಕರೆಯುತ್ತಾರೆ. ಇವೆಲ್ಲವೂ ಸೃಷ್ಟಿಯಾದದ್ದು ಈ ಹಿಂದೆ ತಿಳಿಸಿದಂತೆ ಮಹಾಸ್ಫೋಟವೆಂಬ ವಿದ್ಯಮಾನದಿಂದಾಗಿದೆ. ಹಾಗೆ ನೋಡಿದರೆ ನಾವು ವಾಸಿಸುವ ಭೂಮಿಯಾಗಲಿ, ಸೌರವ್ಯೂಹವಾಗಲಿ ವಿಶ್ವದ ಗಾತ್ರಕ್ಕೆ ಹೋಲಿಸಿದರೆ ನಗಣ್ಯವೆನಿಸುವ ಒಂದು ಕ್ಷುದ್ರ ಕಣವೆಂದೇ ಹೇಳಬೇಕು. ಹೀಗಿರುವಾಗ ಭೂಮಿಗೆ ಹೋಲಿಸಿದರೇನೆ ನಗಣ್ಯವೆನಿಸುವ ಹುಲುಮಾನವರಾದ ನಮ್ಮ ಅಸ್ತಿತ್ವವನ್ನು ವಿಶ್ವದ ಮಹತ್ತಿಗೆ ಹೋಲಿಸಲಾದೀತೆ?

 https://www.youtube.com/watch?v=7otjrP5O0Ys


ಎರಿಡಾನಸ್‌ ನಕ್ಷತ್ರಪುಂಜ

ಗೋಚರ ಬೆಳಕನ್ನು ಗುರ್ತಿಸುವ ಪ್ರಮಾಣಿತ ದೂರದರ್ಶಕದಿಂದ ಗ್ರಹಗಳು, ನಕ್ಷತ್ರಗಳು, ನೀಹಾರಿಕೆ ಮತ್ತು ಗೆಲಕ್ಸಿಗಳನ್ನು ನೋಡಬಹುದು ಮತ್ತು ಅವುಗಳ ನಡುವಿನ ಹಿನ್ನೆಲೆಯು ಬಹುತೇಕ  ಕತ್ತಲೆಯಾಗಿರುವುದನ್ನೂ ಗಮಿನಿಸಬಹುದು. ಆದಾಗ್ಯೂ, ಸಾಕಷ್ಟು ಸೂಕ್ಷ್ಮವಾದ ರೇಡಿಯೋ ದೂರದರ್ಶಕವು ಬಹುತೇಕ ಏಕರೂಪವಾಗಿರುವ ಮತ್ತು ಯಾವುದೇ ನಕ್ಷತ್ರ, ಗೆಲಕ್ಸಿ ಅಥವಾ ಇತರ ವಸ್ತುವಿನೊಂದಿಗೆ ಸಂಬಂಧ ಹೊಂದಿರದ ಮಸುಕಾದ ಈ ಹಿನ್ನೆಲೆಯು ಹೊಳಪನ್ನು ಹೊಂದಿರುವುದನ್ನು ಪತ್ತೆ ಮಾಡುತ್ತದೆ. ಈ ಹೊಳಪು ವಿದ್ಯುತ್ಕಾಂತೀಯ ರೋಹಿತದ ಮೈಕ್ರೋವೇವ್ ಆವೃತ್ತಿಯಲ್ಲಿ ಪ್ರಬಲವಾಗಿ ಗೋಚರಿಸುತ್ತದೆ. ಇದರ ಶಕ್ತಿಯ ಸಾಂದ್ರತೆಯು ಬ್ರಹ್ಮಾಂಡದ ಇತಿಹಾಸದಲ್ಲಿ ಎಲ್ಲಾ ನಕ್ಷತ್ರಗಳು ಹೊರಸೂಸುವ ಎಲ್ಲಾ ಫೋಟಾನ್‌ಗಳ ಶಕ್ತಿಯನ್ನು ಮೀರುತ್ತದೆ. 1964 ರಲ್ಲಿ ಅಮೇರಿಕನ್ ರೇಡಿಯೋ ಖಗೋಳಶಾಸ್ತ್ರಜ್ಞರಾದ ಅರ್ನೋ ಅಲನ್ ಪೆನ್ಜಿಯಾಸ್ ಮತ್ತು ರಾಬರ್ಟ್ ವುಡ್ರೋ ವಿಲ್ಸನ್ ಅವರಿಂದ CMB ಯು ಆಕಸ್ಮಿಕವಾಗಿ ಆವಿಷ್ಕರಿಸಲ್ಪಟ್ಟಿತು. ಮಹಾ ಸ್ಫೋಟದ ನಂತರದ ಅರಂಭದಲ್ಲಿ ವಿಶ್ವವು ಅಪಾರಕ ಮತ್ತು ಅತಿ ತಾಪದ ಸ್ಥಿತಿಯಲ್ಲಿತ್ತು. ಕಾಲಕ್ರಮೇಣ ಅದು ತಂಪಾಗುತ್ತಾ ಹೋಗಿ ತಾಪವು ಸಾಪೇಕ್ಷ ಸೊನ್ನೆ ಅಥವಾ -೨೭೩ ಕೆಲ್ವಿನ್ ಗೆ ಇಳಿದಾಗ ಮಹಾಸ್ಫೋಟದಿಂದ ಬಂದ ಅದರ ಬಹುಪಾಲು ಶಕ್ತಿಯು ಬೆಳಕಾಗಿ  ಮಾರ್ಪಟ್ಟು ವಿಶ್ವದಲ್ಲಿ ಚದುರಿ ಹೋಯಿತು ಎಂದು ಖಗೋಳ ವಿಜ್ಞಾನಿಗಳ ಅಭಿಮತವಾಗಿದೆ. ಇದರ ವಿಕಿರಣಗಳ ಕುರುಹನ್ನು ವಿಶ್ವದಾದ್ಯಂತ ಇಂದಿಗೂ ದೂರದರ್ಶಕದ ಮೂಲಕ ಸೂಕ್ಷ್ಮ ತರಂಗಗಳ ರೂಪದಲ್ಲಿ ಗುರುತಿಸಬಹುದಾಗಿದೆ. ಇದನ್ನು cosmic microwave background (CMB) ಎಂದು ಗುರುತಿಸಲಾಗಿದೆ. ಕಾಸ್ಮಿಕ್ ಮೈಕ್ರೋವೇವ್ ಹಿನ್ನೆಲೆ (CMB), ಅಥವಾ ಅವಶೇಷ ವಿಕಿರಣವು ಮೈಕ್ರೋವೇವ್ ವಿಕಿರಣವಾಗಿದ್ದು, ಇದು ವೀಕ್ಷಿಸಬಹುದಾದ ವಿಶ್ವದಲ್ಲಿನ ಎಲ್ಲಾ ಜಾಗವನ್ನು ತುಂಬುತ್ತದೆ. CMB ಯಲ್ಲಿ ಕಂಡುಬರುವ ತಾಪದ ಏರಿಳಿತಗಳನ್ನು ಅಧ್ಯಯನ ಮಾಡುವ ಮೂಲಕ ಆರಂಭದ ವಿಶ್ವದ ಸ್ಥಿತಿಗತಿಗಳನ್ನು ತಿಳಿಯಲು ಸಾಧ್ಯವಾಗಿದೆ.  ವಿಶೇಷವೆಂದರೆ ವಿಶ್ವದ ಕೆಲವು ಕಡೆಗಳಲ್ಲಿ CMB ಯಲ್ಲಿ ಸಾಮಾನ್ಯಕ್ಕಿಂತ ಅತಿ ಕಡಿಮೆ ತಾಪಮಾನವಿರುವುದನ್ನು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ತಮೋ ದ್ರವ್ಯದ ಸರ್ವೇಕ್ಷಣೆಯಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ತಾಪಮಾನದಲ್ಲಿನ ಈ ವೈಪ್ಯರಿತ್ಯ ಇರುವೆಡೆ ಗೆಲಾಕ್ಸಿಗಳಾದಿಯಾಗಿ ಇತರೆ ಆಕಾಶಕಾಯಗಳ ಸಾಂದ್ರತೆ ಕನಿಷ್ಠ ಅಥವಾ ಇಲ್ವವೇ ಇಲ್ಲ ಎನ್ನುವಷ್ಟು ಶೂನ್ಯತೆ ಆವರಿಸಿರುವುದು ಕಂಡುಬಂದಿದೆ.

ಎರಿಡಾನಸ್‌ ಸೂಪರ್‌ ವಾಯ್ಡ್‌
ವಿಶ್ವ ಬಲೆಯಲ್ಲಿರುವ ಗೆಲಾಕ್ಸಿಗಳು ಮತ್ತು ಗೆಲಾಕ್ಸಿಗಳ ಬೃಹತ್‌ ಗುಂಪುಗಳನ್ನು ಗುರುತ್ವದಿಂದ ಪರಸ್ಪರ
ಒಟ್ಟೊಟ್ಟಿಗಿರುವಂತೆ ಮಾಡುತ್ತಿರುವುದು ಇಂದಿಗೂ ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗದ ತಮೋ ದ್ರವ್ಯ
(Block Matter). ಹೀಗಿದ್ದರೂ ತಮೋ ಚೇತನ (Block Energy) ಎಂಬ ವಿಸ್ಮಯದ ಶಕ್ತಿಯು
ವಿಶ್ವ ಬಲೆಯಲ್ಲಿನ ಗೆಲಾಕ್ಷಿಗಳು, ಮತ್ತು ಗೆಲಾಕ್ಸಿ ಗುಂಪುಗಳನ್ನು ದೂರ ಸರಿಯುವಂತೆ ಮಾಡುತ್ತದೆ.
ಹೀಗಾಗಿ ವಿಶ್ವ ಬಲೆಯು ಹಗ್ಗ ಜಗ್ಗಾಟದಲ್ಲಿ ಸಿಲುಕಿರುವ ಗೆಲಾಕ್ಷಿಗಳು, ಮತ್ತು ಗೆಲಾಕ್ಸಿ ಗುಂಪುಗಳ
ಸಮೂಹವಾಗಿದೆ. ಇಂತಹ ಸಮೂಹಗಳ ನಡುವೆ ಕೆಲವು ಕಡೆ ನಕ್ಷತ್ರಗಳು, ಗೆಲಾಕ್ಸಿಗಳು, ಗೆಲಾಕ್ಸಿ
ಗುಂಪುಗಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ವಿಶ್ವದಲ್ಲಿರಬಹುದಾದ ತಮೋ ದ್ರವ್ಯದ ಸರ್ವೇಕ್ಷಣೆ
ನಡೆಸಿದ ನಂತರ ಅದು ಇರುವ ಸ್ಥಳಗಳ ನಕಾಶೆಯನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದ
ವಿಜ್ಞಾನಿಗಳು ಇವನ್ನು ಪತ್ತೆ ಹಚ್ಚಿದ್ದಾರೆ. ಅಂದರೆ  ಅಂತಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸಾಮಾನ್ಯ ದ್ರವ್ಯ,
ಇರುವುದು ಪತ್ತೆಯಾಗಿದೆ.  ಇದರ ಸಂಶೋಧನೆಯಲ್ಲಿ ನಿರತರಾಗಿರುವ ಆಂಡ್ರಾಸ್ ಕೊವಾಕ್ಸ್ ಅವರು
ಹೇಳುವಂತೆ CMB ತಂಪು ವಲಯದ ಸಮಸ್ಯೆ ಎಂಬುದರ ದೀರ್ಘ ಇತಿಹಾಸದಲ್ಲಿ ಇದು ಸಾಕಷ್ಟು
ಹೊಸ ಅಂಶವಾಗಿದೆ. ಮುಂದಿನ ದಿನಗಳಲ್ಲಿ, ಕನಿಷ್ಠ ಒಂದು ಸೂಪರ್‌ವಾಯ್ಡ್ ಇದೆ ಎಂಬುದನ್ನು ಸಹ
ಇದು ಜನರಿಗೆ ಖಚಿತಪಡುಸುತ್ತದೆ.

 ೧. ವಿಶ್ವದಲ್ಲಿ CDM (Lambda cold dark matter) ರಚನೆಯಿದೆ, 

೨. ವಿಶ್ವದಲ್ಲಿ ಅತಿ ವಿಸ್ತಾರವಾಗಿ ಗೆಲಾಕ್ಸಿಗಳ ವಿತರಣೆಯನ್ನು ಗಮನಿಸಲಾಗಿದೆ.

೩. ವಿಶ್ವದಲ್ಲಿ ಅಪಾರ ಪ್ರಮಾಣದ ಹೈಡ್ರೋಜನ್‌, ಹೀಲಿಯಂ ಮತ್ತು ಲೀಥಿಯಂಗಳ ಭಂಡಾರವಿರುವುದನ್ನು ಗಮನಿಸಲಾಗಿದೆ.

೪. ವಿಶ್ವದಲ್ಲಿರುವ ಗೆಲಾಕ್ಸಿಗಳು ಮತ್ತು ಸೂಪರ್‌ ನೋವಾಗಳ ಅಧ್ಯಯನದಿಂದ ವಿಶ್ವದ ವಿಸ್ತಾರದ ವೇಗದಲ್ಲಿ ವರ್ಧನೆಯಾಗುತ್ತಿದೆ. ಈ ಅಂಶಗಳ ಆಧಾರದ ಮೇಲೆ  ನಮ್ಮ ವಿಶ್ವವನ್ನು ವಿವರಿಸುವುದನ್ನು ಲ್ಯಾಂಬ್ಡ CDM ಮಾದರಿ ಎಂದು ಕರೆಯಲಾಗುತ್ತದೆ.

ಲ್ಯಾಂಬ್ಡ CDM ಮಾದರಿಯ ವಿಶ್ವ

 ದಕ್ಷಿಣಾಕಾಶದಲ್ಲಿನ ಕಾಣುವ ಎರಿಡಾನಸ್‌ ನಕ್ಷತ್ರ ಪುಂಜದ ನೇರದಲ್ಲಿ ನಮ್ಮಿಂದ ಸುಮಾರು ಎರಡು ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಸಿಗಾರ್‌ ಆಕಾರದಲ್ಲಿ ಒಂದು ಶೂನ್ಯ ಲೋಕವು ವಿಶ್ವಬಲೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು ೧.೮ ಬಿಲಿಯನ್‌ ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾಗಿದ್ದು ಆಸುಪಾಸಿಗೆ ಹೋಲಿಸಿದರೆ ಇಲ್ಲಿ ಸುಮಾರು ೩೦% ರಷ್ಟು ಕಡಿಮೆ ಪ್ರಮಾಣದಲ್ಲಿ ಗೋಚರ ದ್ರವ್ಯ ಮತ್ತು ತಮೋ ದ್ರವ್ಯವಿರುವುದು ಪತ್ತೆಯಾಗಿದೆ. ತಮೋ ಚೇತನದ ಸಮೀಕ್ಷೆಯನ್ನು ನಡೆಸಲು ಚಿಲಿದೇಶದ ಆಂಡಿಸ್‌ ಪರ್ವತ ಶಿಖರದಲ್ಲಿ ಡಿ-ಇಕ್ಯಾಮ್ ಎಂಬ 570-ಮೆಗಾಪಿಕ್ಸೆಲ್ ಸಾಮರ್ಥ್ಯದ ಡಿಜಿಟಲ್ ಕ್ಯಾಮೆರಾವನ್ನು ಸ್ಥಾಪಿಸಲಾಗಿದೆ. ಇದನ್ನು ಬಳಸಿಕೊಂಡು ವಿಶ್ವಬಲೆಯೊಳಗಿನ ಲಕ್ಷಾಂತರ ಗೆಲಕ್ಸಿಗಳು, ಸೂಪರ್‌ನೋವಾಗಳನ್ನು ದಾಖಲಿಸಲಾಗುತ್ತಿದೆ. ಅತಿ ವಿಸ್ತಾರವಾದ ವಿಶ್ವ ಮಟ್ಟದಲ್ಲಿ ಏರ್ಪಡುವ ತಮೋ ಶಕ್ತಿ ಮತ್ತು ತಮೋ ದ್ರವ್ಯಗಳ ನಡುವಿನ ಹಗ್ಗ ಜಗ್ಗಾಟದ ಕಾರಣದಿಂದ ಆಳಾಂತರಿಕ್ಷದಲ್ಲಿ  ರಂಧ್ರಗಳನ್ನು ಏರ್ಪಡಿಸುತ್ತಿದೆಯೆ? ನಿರಂತರವಾಗಿ ವಿಸ್ತಾರವಾಗುತ್ತಿರುವ ವಿಶ್ವದ ಬೆಳವಣಿಗೆಯ ವೇಗದ ಮೇಲೆ ಈ ರಂಧ್ರಗಳ ಪರಿಣಾಮವೇನು ಎಂಬ ಪ್ರಶ್ನೆಗಳು ಇಲ್ಲಿ ಖಗೋಳ ವಿಜ್ಞಾನಿಗಳನ್ನು ಕಾಡಿದ್ದೂ ಇದೆ. 

  ದ್ಯುತಿ ಕಣಗಳು ಅಂತರಿಕ್ಷದಲ್ಲಿ  ಸ್ಥಿರ ಗುರುತ್ವ ಇರುವಂತಹ ನಕ್ಷತ್ರ, ಕಪ್ಪು ಕುಳಿ, ಗೆಲಾಕ್ಸಿಗೆ ಅಂದರೆ
ಪ್ರಚ್ಛನ್ನ ಕೂಪಕ್ಕೆ(
Potential well)  ಬೀಳುತ್ತಾ ಚೈತನ್ಯವನ್ನು ಪಡೆಯುತ್ತವೆ ಮತ್ತು ಅಲ್ಲಿಂದ ಹೊರ
ಬರುವಾಗ ಹೆಚ್ಚಿನ ಚೈತನ್ಯವನ್ನು ಕಳೆದುಕೊಂಡು ಹೊರಬರುತ್ತವೆ. ಇದನ್ನು ಗುರುತ್ವ ಕೆಂಪು ಪಲ್ಲಟ
ಎಂದು ಕರೆಯಲಾಗುತ್ತದೆ. ಚರಗುರುತ್ವ ಇರುವೆಡೆ ಮತ್ತು ಅಗಾಧ ವೇಗದಲ್ಲಿ ವಿಶ್ವವು ವಿಕಸನವಾಗು
ತ್ತಿರುವ ಬೃಹತ್ ಗೆಲಾಕ್ಸಿಗುಚ್ಛಗಳ ನಡುವೆ ದ್ಯುತಿ ಕಣಗಳು ಚಲಿಸುತ್ತಾ
ಪ್ರಚ್ಛನ್ನ ಕೂಪಕ್ಕೆ ಬೀಳುವಾಗ
ಗಳಿಸುವ ಚೈತನ್ಯ ಮತ್ತು ಅದರಿಂದ ಹೊರಬರುವಾಗ ಬಿಡುಗಡೆ ಮಾಡುವ ಚೈತನ್ಯ ಅಲ್ಲಿನ ಪರಿಸ್ಥಿತಿ
ಯನ್ನು ಅವಲಂಬಿಸಿ
  ಅದು ಗಳಿಸಿದ್ದಕ್ಕಿಂತ ಹೆಚ್ಚಿರಬಹುದು ಇಲ್ಲವೇ ಕಡಿಮೆ ಇರಬಹುದು. ಇದನ್ನು
ಸಂಚಯಿತ ಸಾಕ್ಸ್‌ ವೂಲ್ಫ್‌ (cumulative sachs-wolfe effect) ಪರಿಣಾಮ ಎಂದು ಕರೆಯಲಾಗು
ತ್ತದೆ.
ಫೋಟಾನುಗಳು ಎರಿಡಾನಿಸ್‌ ವಾಯ್ಡನ್ನು ಪ್ರವೇಶಿಸಿದ ನಂತರ ಮುಂದೆ ಸಾಗಲು  ಅತಿ
ಪ್ರಯಾಸ ಪಡಬೇಕಾಗುತ್ತದೆ. ಅತಿ ಸಾಂದ್ರ ಪ್ರದೇಶದಿಂದ ಕಡಿಮೆ ಸಾಂದ್ರತೆಯ ಪ್ರದೇಶಕ್ಕೆ ಚಲಿಸ
ಬೇಕಾಗಿರುವುದರಿಂದ ಈ ಪ್ರದೇಶವು ಫೋಟಾನುಗಳಿಗೆ ಬೆಟ್ಟದಂತೆ ವರ್ತಿಸಿ ಅವುಗಳಿಗೆ ಹೆಚ್ಚಿನ ಚೈತನ್ಯ
ನಷ್ಟವಾಗುತ್ತದೆ
. ಈ ಶೂನ್ಯ ಲೋಕದ ಸುತ್ತಲಿನ ಕಾಯಗಳು ಒಡ್ಡುವ ಗುರುತ್ವವು ಇದಕ್ಕೆ ಕಾರಣವಾಗಿ
ರುತ್ತದೆ. ಹೊಸ ಆವಿಸ್ಕಾರಗಳು
ಎರಿಡಾನಸ್‌  ಸೂಪರ್‌ ವಾಯ್ಡನ್ನು ದೈತ್ಯಾಕಾರದ ರಂಧ್ರವೆಂದು ಧೃಡ
ಪಡಿಸುತ್ತದೆ. ಆದರೆ
ಎರಿಡಾನಸ್‌  ಸೂಪರ್‌ ವಾಯ್ಡನಲ್ಲಿ ಗಮನಿಸಿದ ಫೋಟಾನುಗಳ ಶಕ್ತಿ ಬದಲಾವಣೆ
ಮತ್ತು ತಮೋ ಚೈತನ್ಯ ಪರಿ ಪ್ರಮಾಣಗಳನ್ನು ವಿವರಿಸಲು ಯತ್ನಿಸುವ ಪ್ರಸ್ತುತದಲ್ಲಿನ ವಿಶ್ವ ವಿಜ್ಞಾನ
ಸಿದ್ಧಾಂತದ
ಲ್ಯಾಂಬ್ಡ CDM ಮಾದರಿಗೂ ಇರುವ  ವಿರೋಧಾಭಾಸಗಳನ್ನು ಪರಿಹರಿಸುವಲ್ಲಿ ಈ
ಆವಿಷ್ಕಾರಗಳು ಅಪೂರ್ಣವೆನಿಸುತ್ತವೆ.



 




            ಅಂತರಿಕ್ಷದಲ್ಲಿನ ಅನಿಯಮಿತ ಸಂಖ್ಯೆಯ ಗೆಲಾಕ್ಷಿಗಳ ಗುಚ್ಛ