ಮೊನಾರ್ಕ್ ಚಿಟ್ಟೆಗಳ ವಲಸೆಯ ನಿಗೂಢತೆ !
ಡಾ. ಟಿ.ಎ. ಬಾಲಕೃಷ್ಣ ಅಡಿಗ
ಬೆಂಗಳೂರಿನ ಬಿಡುವಿಲ್ಲದ
ಜೀವನ ಶೈಲಿಯಿಂದ ಕೊಂಚ ಬಳಲಿದ್ದ ನನಗೆ ಪರಿಹಾರದ ರೂಪದಲ್ಲಿ ದೂರದ ಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾದ
ಆಸ್ಟಿನ್ ನಲ್ಲಿ ನೆಲಸಿರುವ ನನ್ನ ಮಗನಿಂದ ದಸರೆಯ ವೇಳೆಗೆ ಅಲ್ಲಿಗೆ ಬರುವಂತೆ ಸಲಹೆಯೊಂದು ಬಂದಿತ್ತು.
ಅವನ ಒತ್ತಾಯ ಮತ್ತು ಒತ್ತಾಸೆಗೆ ಮಣಿದು ನಾನು ಮತ್ತು ನನ್ನ ಶ್ರೀಮತಿ 2022ರ ಅಕ್ಟೋಬರ್ 8ರ ತಡ ರಾತ್ರಿ 'ಎಮಿರೇಟ್ಸ್' ವಿಮಾನದಲ್ಲಿ ಬೆಂಗಳೂರನ್ನು ಬಿಟ್ಟು 9ರ ಸಂಜೆ
ಹ್ಯೂಸ್ಟನ್ ತಲುಪಿದಾಗ, ಅಲ್ಲಿಯ ಕಾಲಮಾನದ ಪ್ರಕಾರ ಸಂಜೆ 6.00 ಘಂಟೆ ಅಗಿತ್ತು. ಅಲ್ಲಿ ನಮ್ಮನ್ನು
ಸ್ವಾಗತಿಸಿದ ನಮ್ಮ ಮಗ ತನ್ನ ಕಾರಿನಲ್ಲಿ ಆಸ್ಟಿನ್ ಗೆ ಕರೆದೊಯ್ದ. ಮನೆತಲುಪಿದಾಗ ರಾತ್ರಿ 9.00 ಘಂಟೆ
ಆಗಿತ್ತು.
ಮರುದಿನ ಬೆಳಿಗ್ಗೆ ಕಾಫಿಯ ನಂತರ ವಾಯುವಿಹಾರಕ್ಕೆ
ಹೋಗುವ ಸಲುವಾಗಿ ಬಾಗಿಲು ತೆರೆದು ಹೊರ ಬಂದ ನನಗೆ ಅಚ್ಚರಿಯೊಂದು ಕಾದಿತ್ತು. ಮನೆಯ ಹೊರಗಿನ ಪುಟ್ಟ
ಉದ್ಯಾನದಲ್ಲಿ ಅರಳಿದ್ದ ಲ್ಯಾವೆಂಡರ್ (Lavandula
angustifolia) ಹೂವುಗಳ ಸುತ್ತ ಹಾರಾಡುತ್ತಿದ್ದ
ಕಿತ್ತಲೆ ಬಣ್ಣದ ರೆಕ್ಕೆಗಳನ್ನು ಹೊಂದಿದ್ದ ಸುಂದರ ಚಿಟ್ಟೆಗಳ ಗುಂಪು ನನ್ನ ಗಮನಕ್ಕೆ ಬಂತು. ಸುಮಾರು
ಮುಕ್ಕಾಲು ಘಂಟೆಯ ವಾಯು ವಿಹಾರದ ನಂತರ ಮನೆಗೆ ವಾಪಸಾದಾಗ ಆ ಗಿಡಗಳ ಸುತ್ತ ಹಾರಾಡುತ್ತಿದ್ದ ಚಿಟ್ಟೆಗಳ ಸಂಖ್ಯೆ ಹೆಚ್ಚಾಗಿತ್ತು.
ಅಲ್ಲೇ ಕೆಲ ಹೊತ್ತು ಚಿಟ್ಟೆಗಳನ್ನು ನೋಡುತ್ತಾ ನಿಂತು, ನಂತರ ಒಳಗೆ ಬಂದೆ. ಮಾರನೆಯ ದಿನವೂ ಇದೇ ಪರಿಸ್ಥಿತಿ.
ಎಚ್ಚರಿಕೆಯಿಂದ ಒಂದು ಚಿಟ್ಟೆಯನ್ನು ಹಿಡಿದು ಸೂಕ್ಷ್ಮವಾಗಿ ಪರಿಶೀಲಿಸಿದೆ. ನಾನು ಚಿಟ್ಟೆಗಳ ಬಗ್ಗೆ
ಪಾಠ ಮಾಡುವಾಗ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದ ಮೊನಾರ್ಕ್ ಚಿಟ್ಟೆಯ ವರ್ಣಸಂಯೋಜನೆಯನ್ನು ಅದು ಹೋಲುತ್ತಿತ್ತು
! ಅಂದೇ ಜಾಲತಾಣದಲ್ಲಿ ಹುಡುಕಾಟ ನಡೆಸಿ ನನ್ನ ಅನುಮಾನವನ್ನು ಪರಿಹರಿಸಿಕೊಂಡೆ. ಉದ್ಯಾನದಲ್ಲಿ ನಾನು
ಕಂಡ ಚಿಟ್ಟೆಗಳು ಮೊನಾರ್ಕ್ ಚಿಟ್ಟೆಗಳೇ ಆಗಿದ್ದುವು ! ಬಹುದೂರ ವಲಸೆ ಹೋಗುವ ತಮ್ಮ ಪ್ರವೃತ್ತಿಗೆ
ಹೆಸರುವಾಸಿಯಾದ ಈ ಮೊನಾರ್ಕ್ ಚಿಟ್ಟೆಗಳ ಬಗ್ಗೆ ನನ್ನಲ್ಲಿ ಮೂಡಿದ ಕುತೂಹಲದ ಫಲವಾಗಿ ನಾನು ನಡೆಸಿದ
ಅಧ್ಯಯನವೇ ಈ ಲೇಖನಕ್ಕೆ ಪ್ರೇರಣೆ !
ವೀಡಿಯೊ : ಲ್ಯಾವೆಂಡರ್ ಗಿಡಗಳ ಸುತ್ತ ಮೊನಾರ್ಕ್ ಚಿಟ್ಟೆಗಳು https://youtu.be/FNJS_mz6EF8
ಅತಿ ಹೆಚ್ಚು ಅಧ್ಯಯನಕ್ಕೊಳಗಾದ ಚಿಟ್ಟೆಗಳಿವು !
ಮೊನಾರ್ಕ್ ಚಿಟ್ಟೆಗಳು ಉತ್ತರ ಅಮೆರಿಕಾದಲ್ಲಿ ಅತ್ಯಂತ ಚಿರಪರಿಚಿತವಾದ ಚಿಟ್ಟೆಗಳ ಒಂದು ವಿಧ. ಅಷ್ಟೇ ಅಲ್ಲ, ವಿಶ್ವದಾದ್ಯಂತ ಅತಿ ಹೆಚ್ಚು ವಿವರವಾಗಿ ಅಧ್ಯಯನ ಮಾಡಲಾದ ಚಿಟ್ಟೆಗಳ ಪ್ರಭೇದವೂ ಹೌದು. ಅಮೆರಿಕಾದ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ 'ರಾಜ್ಯದ ಕೀಟ' ಎಂಬ ಮಾನ್ಯತೆ ಪಡೆದಿರುವ ಹೆಗ್ಗಳಿಕೆ ಈ ಚಿಟ್ಟೆಯದು ! ಈ ಚಿಟ್ಟೆ ಡನಾಸ್ ಪ್ಲೆಕ್ಸಿಪ್ಪಸ್ (Danaus plexippus) ಎಂಬ ಪ್ರಭೇದಕ್ಕೆ ಸೇರುತ್ತದೆ.
ಕೇವಲ ಅರ್ಧ ಗ್ರಾಂ ತೂಕ ಇರುವ ಈ ಚಿಟ್ಟೆಯ
ರೆಕ್ಕೆಯ ವಿಸ್ತೀರ್ಣ 9 ರಿಂದ 11ಸೆಂ.ಮೀ. ಇರುತ್ತದೆ. ಮಿಕ್ಕ ಚಿಟ್ಟೆಗಳಂತೆ ಆರು ಕಾಲುಗಳಿದ್ದರೂ,
ಮುಂದಿನ ಒಂದು ಜೊತೆ ಕಾಲುಗಳು ಚಿಕ್ಕದಿದ್ದು ತಲೆಯ ಕೆಳಗೆ ಮಡಚಿಕೊಂಡಂತೆ ಇರುತ್ತವೆ. ರೆಕ್ಕೆಗಳು
ಕಿತ್ತಲೆ ಬಣ್ಣದಿಂದ ಕೂಡಿದ್ದು, ಕಡು ಕಪ್ಪು ಬಣ್ಣದ ನಾಳ ಜಾಲಗಳನ್ನು(veins) ಹೊಂದಿದೆ. ಗಂಡು ಚಿಟ್ಟೆಗಳ
ಹಿಂಬದಿ ರೆಕ್ಕೆಗಳ ಒಂದು ನಾಳದ ಮೇಲೆ ಸುಗಂಧ
ಬೀರುವ ಒಂದು ಕಪ್ಪು ಬಣ್ಣದ ಬಿಂದು ಕಂಡು ಬರುತ್ತದೆ.
ಹೆಣ್ಣು ಚಿಟ್ಟೆಗಳ ರೆಕ್ಕೆಗಳ ನಾಳಗಳ ಉದ್ದಕ್ಕೂ ಕಪ್ಪು ಫಲಕಗಳಿರುತ್ತವೆ. ಗಂಡು ಚಿಟ್ಟೆಗಳು ಹೆಣ್ಣು
ಚಿಟ್ಟೆಗಳಿಗಿಂತ ಕೊಂಚ ದೊಡ್ಡದಾಗಿರುತ್ತವೆ. ರೆಕ್ಕೆಯ ಮೇಲಿರುವ ಫಲಕಗಳು ವಾಯುಗಾಮಿ
(aerodynamic) ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಉದರಭಾಗದ ಮೇಲ್ಮೈಯಲ್ಲಿರುವ ಫಲಕಗಳ ಸೂಕ್ಷ್ಮ
ರಚನೆ ದೇಹದ ಶಾಖವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ.
ಚಿತ್ರ 1 : ಮೊನಾರ್ಕ್ ಚಿಟ್ಟೆಗಳು
ಮೊನಾರ್ಕ್ ಚಿಟ್ಟೆಗಳ ಈ ಹೆಸರಿನ ಹಿಂದೆ ಒಂದು ಐತಿಹ್ಯವಿದೆ. ದಕ್ಷಿಣ ಫ್ರಾನ್ಸ್ ನಲ್ಲಿ ಆರೇಂಜ್ ಎಂಬ ಹೆಸರಿನ ಒಂದು ಪ್ರದೇಶವಿದೆ. ಅಲ್ಲಿ ರಾಜನಾಗಿದ್ದ ವಿಲಿಯಮ್ಸ್ III ಎಂಬಾತನ ಬಗ್ಗೆ ಉತ್ತರ ಅಮೆರಿಕಾದ ಜನರಿಗೆ ವಿಶೇಷ ಅಭಿಮಾನ. ಆ ಅಭಿಮಾನದ ದ್ಯೋತಕವೇ ಈ ಕಿತ್ತಳೆ ಬಣ್ಣದ, ರಾಜ ಗಾಂಭೀರ್ಯದ ಚಿಟ್ಟೆಗೆ ಮೊನಾರ್ಕ್ ಎಂಬ ಹೆಸರಿಡಲು ಕಾರಣ ! ತಮ್ಮ ರೂಪಪರಿವರ್ತನೆಯ ವಿಧಾನ, ಕುತೂಹಲಕಾರಿ ಮಿಮಿಕ್ರಿ ಹಾಗೂ ಅಚ್ಚರಿ ಮೂಡಿಸುವ ವಲಸೆ ಪ್ರಕ್ರಿಯೆಗಳಿಂದಾಗಿ ಇವುಗಳನ್ನು ಚಿಟ್ಟೆಗಳ ರಾಜ ಎಂದು ಪರಿಗಣಿಸಬಹುದು.
ಪ್ಯೂಪಾ ಹಂತದಿಂದ ಬೇಸಿಗೆಯ
ಅಂತ್ಯಕ್ಕೆ ಅಥವಾ ಚಳಿಗಾಲದ ಪ್ರಾರಂಭಕ್ಕೆ ಹೊರಬರುವ ಚಿಟ್ಟೆಗಳಿಗೆ ಕ್ರೈಸಲೈಡ್ ಗಳು(chrysalides)
ಎಂದು ಕರೆಯಲಾಗುತ್ತದೆ. ಇವು ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಚಿಟ್ಟೆಗಳಿಗಿಂತ ಜೈವಿಕವಾಗಿ ಹಾಗೂ ವರ್ತನೆಯಲ್ಲಿ
ಭಿನ್ನವಾಗಿರುತ್ತವೆ. ನೋಡಲು ಬೇಸಿಗೆಯ ಪ್ರೌಢ ಚಿಟ್ಟೆಗಳಂತೆ ಕಂಡುಬಂದರೂ, ಇವು ಮುಂಬರುವ ವಸಂತದವರೆಗೆ
ಸಂತಾನಾಭಿವೃದ್ಧಿ ಮಾಡುವುದಿಲ್ಲ. ಬದಲಿಗೆ, ತಮ್ಮ ಸಣ್ಣ ದೇಹವನ್ನು ಮುಂದಿನ ದೀರ್ಘ ಹಾರಾಟಕ್ಕೆ ಅನುವಾಗುವಂತೆ
ಅಣಿಗೊಳಿಸಿಕೊಳ್ಳುತ್ತವೆ. ಶೀತಲ ಹವಾಮಾನದಲ್ಲಿ ಇವು ಹಾರುವುದೇ ಇಲ್ಲ !
ಎಷ್ಟು ದೂರದ ಪ್ರಯಾಣವಾದರೂ, ಅದು ಮೊದಲನೇ
ಹೆಜ್ಜೆಯಿಂದಲೇ ಪ್ರಾರಂಭ ಅಲ್ಲವೇ ? ಈ ಚಿಟ್ಟೆಗಳ ವಿಶಿಷ್ಟ ವಲಸೆ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆಯೇ
ಮೊಟ್ಟೆ. ಇಲ್ಲಿ ಹೇರಳವಾಗಿ ಬೆಳೆಯುವ ಮಿಲ್ಕ್ ವೀಡ್(Asclepias)
ಸಸ್ಯದ ಎಲೆಗಳ ಮೆಲ್ಮೈಯಲ್ಲಿ ಇಡಲಾಗುವ ಗುಂಡು ಸೂಜಿಯ ಮೇಲ್ತುದಿಯ ಗಾತ್ರದ ಮೊಟ್ಟೆಗಳು ನಾಲ್ಕು ದಿನದಲ್ಲೇ
ಒಡೆದು 2 mm ಉದ್ದ ಇರುವ ಕಂಬಳಿ ಹುಳುಗಳು ಹೊರಬರುತ್ತವೆ. ಒಡೆದ ಮೊಟ್ಟೆಯ ಪೊರೆಯೇ ಇವುಗಳಿಗೆ ಮೊದಲ
ಅಹಾರ. ಮುಂದಿನ ಎರಡು ವಾರ ಕಾಲ ನಿರಂತರವಾಗಿ ಆ ಸಸ್ಯದ ಎಲೆ ಮತ್ತು ಹೂವುಗಳನ್ನು ಸೇವಿಸುತ್ತ ಅವುಗಳಲ್ಲಿರುವ
ಕಾರ್ಡಿಯಕ್ ಗ್ಲೈಕೋಸೈಡ್(cardiac glycoside) ಎಂಬ ರಾಸಾಯನಿಕವನ್ನು ತಮ್ಮ ದೇಹದಲ್ಲಿ ಉಳಿಸಿಕೊಳ್ಳುತ್ತವೆ.
ಒಗಚು ರುಚಿಯಿರುವ ಇದರಿಂದಾಗಿ ಮುಂದೆ ಯಾವುದೇ ಭಕ್ಷಕ ಪ್ರಾಣಿ ಇವುಗಳನ್ನು ತಿನ್ನುವುದಿಲ್ಲ ! ಬಿಡುವಿಲ್ಲದ
ಆಹಾರ ಸೇವನೆಯಿಂದಾಗಿ ಮರಿಗಳು ಗಾತ್ರದಲ್ಲಿ 20 ಪಟ್ಟು ಮತ್ತು ತೂಕದಲ್ಲಿ ಸುಮಾರು 2700 ಪಟ್ಟು ಬೆಳೆಯುತ್ತವೆ.
ಈ ಅವಧಿಯಲ್ಲಿ ಐದು ಬಾರಿ ಪೊರೆ ಬಿಡುತ್ತವೆ. ಪ್ರತಿ ಬಾರಿ ಬಿಟ್ಟ ಪೊರೆಯನ್ನೇ ಆಹಾರವಾಗಿಯೂ ಬಳಸುತ್ತವೆ.
ಹೀಗಾಗಿ, ತ್ಯಾಜ್ಯ ಮರುಬಳಕೆಗೆ ಈ ಮರಿಗಳು ಒಂದು ಉತ್ತಮ ನಿದರ್ಶನವಾಗಿವೆ.
ಈ ಕಂಬಳಿ ಹುಳುಗಳು ಪ್ಯೂಪಾ(chrysalis) ಆಗಿ ಪರಿವರ್ತನೆ ಹೊಂದುವ ಪ್ರಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಐದನೇ ಬಾರಿ ಪೊರೆ ಬಿಡುವ ಸುಮಾರು 10 ಘಂಟೆಗಳ ಮುನ್ನ ಪ್ರತಿಯೊಂದು ಹುಳ ರೇಷ್ಮೆಯಂಥ ಎಳೆಯೊಂದನ್ನು ತನ್ನ ಸುತ್ತ ಸ್ರವಿಸಿಕೊಳ್ಳುತ್ತದೆ. ಮುಂದೆ ನಡೆಯುವುದೆಲ್ಲಾ ನಾಟಕೀಯ ಬೆಳವಣಿಗೆ ! ತಲೆಯ ಭಾಗದಲ್ಲಿ ಒಂದು ಸೀಳಿನ ಮೂಲಕ ದೇಹ ತುಂಡಾಗುತ್ತದೆ. ತನ್ನ ಹೊರಕಂಕಾಲವನ್ನು ಕಳಚುತ್ತಿದ್ದಂತೆ ಒಳಗಿರುವ ಪ್ಯೂಪ ಕಾಣಿಸುತ್ತದೆ. ಮುಂದಿನ ಎರಡು ವಾರದ ಒಳಗೆ ಚಿಟ್ಟೆ ಬೆಳೆದಿರುತ್ತದೆ. ಚಿಟ್ಟೆ ಹೊರಬರುವ ಮುನ್ನ ವಿಶಿಷ್ಟವಾದ ಕಿತ್ತಳೆ ಮತ್ತು ಕಪ್ಪು ಬಣ್ಣಗಳು ಕಾಣಿಸಿಕೊಳ್ಳುತ್ತವೆ.
ಚಳಿಗಾಲದಲ್ಲಿ ಶಿಶಿರ ನಿದ್ರೆಗೆ ಒಳಗಾಗುವ
ಪ್ರೌಢ ಚಿಟ್ಟೆಗಳು ಮುಂದಿನ ಫೆಬ್ರುವರಿ/ಮಾರ್ಚ್ ವೇಳೆಗೆ ಎಚ್ಚರಗೊಳ್ಳುತ್ತವೆ. ನಂತರ ದಕ್ಷಿಣದ ಟೆಕ್ಸಾಸ್
ನ ಕಡೆಗೆ ಅವುಗಳ ವಲಸೆ ಪ್ರಾರಂಭ. ಏಪ್ರಿಲ್ ವೇಳೆಗೆ ಮೊಟ್ಟೆಗಳನ್ನಿಡುವ ಪ್ರಕ್ರಿಯೆಯಿಂದ ಮತ್ತೆ ಸಂತಾನಭಿವೃದ್ಧಿ
ಪ್ರಾರಂಭ. ಅದಾದ ನಂತರ, ಪ್ರೌಢ ಚಿಟ್ಟೆಗಳು ಸಾಯುತ್ತವೆ. ಈ ಮೊಟ್ಟೆಗಳು ಮೊದಲ ಪೀಳಿಗೆಯ ಮೊದಲ ಹಂತ.
ಈ ಮೊಟ್ಟೆಗಳು ಒಡೆದು ಡಿಂಬ, ಪ್ಯೂಪ ಮತ್ತು ಪ್ರೌಢ
ಎಂಬ ಮುಂದಿನ ಮೂರು ಹಂತಗಳನ್ನು ಮುಗಿಸಿ, ಉತ್ತರ ದಿಕ್ಕಿನೆಡೆಗೆ ಮತ್ತೆ ವಲಸೆ ಪ್ರಾರಂಭ. ಸುಮಾರು
ಐದಾರು ವಾರ ಬದುಕುಳಿಯುವ ಇವು ಮೊಟ್ಟೆಗಳನ್ನು ಇಟ್ಟ ನಂತರ ಸಾಯುತ್ತವೆ. ಈ ಮೊಟ್ಟೆಗಳು ಮೊದಲನೇ ಹಂತದ
ಎರಡನೇ ಪೀಳಿಗೆಯನ್ನು ಪ್ರತಿನಿಧಿಸುತ್ತವೆ. ಇದು ಹೀಗೇ ಮುಂದುವರೆದು ನಾಲ್ಕನೇ ಪೀಳಿಗೆಯ ಚಿಟ್ಟೆಗಳು
ಹೊರಬರುತ್ತವೆ. ಸುಮಾರು 8 ರಿಂದ 9 ತಿಂಗಳುಗಳ ಕಾಲ ಬದುಕುವ ಈ ಪ್ರೌಢ ಚಿಟ್ಟೆಗಳ ಪೀಳಿಗೆಯನ್ನು 'ಮಹಾ
ಪೀಳಿಗೆ' ಎಂದು ಕರೆಯಲಾಗುತ್ತದೆ. ಕೆಲವು ವಾರಗಳ ಕಾಲ ಮಕರಂದ ಹೀರುತ್ತಾ, ದಪ್ಪವಾಗಿ ಬೆಳೆಯುತ್ತವೆ.
ತಮ್ಮ ಚಳಿಗಾಲದ ವಿಶ್ರಾಂತಿಯ ತಾಣಗಳಿಗೆ ಹೋಗಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತವೆ.
ಉದರ ಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬು ಇವುಗಳ
ಚಳಿಗಾಲದ ಉಳಿವಿಗೆ ಪೂರಕ. ಈ ಸಂಗ್ರಹವೇ ಇವುಗಳ 3000 ಮೈಲಿಗಳಿಗೂ ಹೆಚ್ಚಿನ ದೂರದ ದಕ್ಷಿಣದೆಡೆಗಿನ
ವಲಸೆಗೆ ಇಂಧನ ! ಅಷ್ಟೇ ಅಲ್ಲ, ಮುಂದಿನ ವಸಂತದಲ್ಲಿ ಉತ್ತರ ದಿಕ್ಕಿನೆಡೆಗಿನ ಹಾರಾಟಕ್ಕೂ ಇದೇ ಸಂಗ್ರಹ
ಬಳಕೆಯಾಗುತ್ತದೆ. ಕೆಲವು ಸಂಶೋಧಕರ ಪ್ರಕಾರ, ವಲಸೆ ಹೋಗುವಾಗ ತಮ್ಮ ದೇಹದಲ್ಲಿನ ಇಂಧನವನ್ನು ಉಳಿಸಿಕೊಳ್ಳಲು ಈ ಚಿಟ್ಟೆಗಳು ಗಾಳಿಯಲ್ಲಿ ತೇಲುತ್ತಾ
ಸಾಗುತ್ತವಂತೆ ! ಕ್ಯಾಲಿಫೋರ್ನಿಯಾದ ಪಶ್ಚಿಮಕ್ಕಿರುವ ಬೆಟ್ಟಗುಡ್ಡ ಪ್ರದೇಶದ ಚಿಟ್ಟೆಗಳು ಅಲ್ಲಿನ
ಕರಾವಳಿಯತ್ತ ವಲಸೆ ಬಂದು, ನೀಲಗಿರಿ, ಪೈನ್ ಮತ್ತು ಸೈಪ್ರಸ್ ಗಿಡಗಳಲ್ಲಿ ವಿಶ್ರಮಿಸುತ್ತವೆ. ಪೂರ್ವಕ್ಕಿರುವ
ಪ್ರದೇಶದ ಚಿಟ್ಟೆಗಳು ಮಧ್ಯ ಮೆಕ್ಸಿಕೋದ ಬೆಟ್ಟಗಳೆಡೆಗೆ ವಲಸೆ ಹೋಗುತ್ತವೆ.
ಉಷ್ಣವಲಯದ ಬಹುತೇಕ ಕೀಟಗಳಿಗೆ ಹೋಲಿಸಿದರೆ ಮೊನಾರ್ಕ್ ಚಿಟ್ಟೆಗಳು ತೀವ್ರ ಚಳಿಗಾಲವನ್ನು ತಡೆದುಕೊಳ್ಳಲಾರವು. ಹಿಗಾಗಿ, ಅವು ಚಳಿಗಾಲದಲ್ಲಿ ವಿಶ್ರಾಂತಿಯ ತಾಣಗಳಲ್ಲಿ ವಿರಮಿಸುತ್ತವೆ. ಸಾವಿರಾರು ಮೈಲಿ ದೂರ ಇರುವ, ತಾವು ಈ ಹಿಂದ ನೋಡಿಲ್ಲದ ಮಧ್ಯ ಮೆಕ್ಸಿಕೋದ ಜ್ವಾಲಾಮುಖಿ ಬೆಟ್ಟಗಳನ್ನು ತಲುಪುತ್ತವೆ. ಈ ತಾಣವನ್ನು ತಲುಪುವ ಹಾದಿಯಲ್ಲಿ ಟೆಕ್ಸಾಸ್ ರಾಜ್ಯದ ಮೂಲಕ ಹಾದು ಹೋಗುತ್ತವೆ. ವಲಸೆಯ ಈ ಭಾಗ ಒಂದು ಶಂಕುವಿನ ಆಕಾರದಲ್ಲಿರುವುದರಿಂದ ಇದನ್ನು 'ಟೆಕ್ಸಾಸ್ ನ ಆಲಿಕೆ' (the Texas Funnel) ಎಂದು ಕರೆಯಲಾಗುತ್ತದೆ (ಚಿತ್ರ ನೋಡಿ).
ಚಿತ್ರ
3 : ದಿ ಟೆಕ್ಸಾಸ್
ಫನಲ್
ಮೆಕ್ಸಿಕೋದ ವಿಶ್ರಾಂತಿ ತಾಣಗಳಲ್ಲಿನ ಗುಣಲಕ್ಷಣಗಳು ಮತ್ತು ಹವಾಮಾನ, ಈ ಚಿಟ್ಟೆಗಳ ಉಳಿವಿಗೆ ಪೂರಕವಾಗಿವೆ. ಸಮುದ್ರ ಮಟ್ಟದಿಂದ 3000ಮೀ ಎತ್ತರದಲ್ಲಿರುವ ಇಲ್ಲಿನ ಒಯಾಮೆಲ್ ಫಿರ್() ನ ಕಾಡುಗಳಲ್ಲಿ ಇರುವ ಮರಗಳಲ್ಲಿ ಅವು ಗುಂಪು ಸೇರುತ್ತವೆ. ಈ ಅವಧಿಯಲ್ಲಿ ಮೂರರಿಂದ ನಾಲ್ಕು ಬಾರಿ ಸಂತಾನಭಿವೃದ್ಧಿ ನಡೆಸುತ್ತವೆ. ಹೀಗಾಗಿ, ಮಿಲಿಯನ್ ಗಟ್ಟಲೆ ಸಂಖ್ಯೆಯಲ್ಲಿ ಅಲ್ಲಿ ಕಂಡು ಬರುತ್ತವೆ. ಎಲ್ಲವೂ ಅಲ್ಲಿ 'ಶಿಶಿರ ನಿದ್ರೆ'ಗೆ ಜಾರುತ್ತವೆ.
ಮೆಕ್ಸಿಕೋಗೆ ಪ್ರತಿ ಚಳಿಗಾಲದಲ್ಲಿ ವಲಸೆ ಬರುವ ಚಿಟ್ಟೆಗಳು ಹಿಂದಿನ ವಸಂತದಲ್ಲಿ ಅಲ್ಲಿಂದ ಹೊರಟ ಚಿಟ್ಟೆಗಳ ಮೂರನೇ ಅಥವಾ ನಾಲ್ಕನೇ ತಲೆಮಾರಿನವು ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ ?ತಮ್ಮ 'ಶಿಶಿರ ನಿದ್ರೆ'ಗೆ ಇವು ಪ್ರತಿ ವರ್ಷ ಅದೇ ತಾಣಗಳನ್ನು ಹೇಗೆ ಗುರುತಿಸುತ್ತವೆ ಎಂಬುದು ಇಂದಿಗೂ ನಿಗೂಢ !
ದುರಂತದ ಸಂಗತಿಯೆಂದರೆ, ಇತ್ತೀಚಿನ ವರ್ಷಗಳಲ್ಲಿ ಈ ಚಿಟ್ಟೆಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿರುವುದು. ಕಾಡುಗಳ ನಾಶ ಹಾಗೂ ಹವಾಮಾನ ಬದಲಾವಣೆ ಇದಕ್ಕೆ ಕಾರಣ ಎನ್ನಲಾಗಿದೆ. ಇದನ್ನು ಗಮನಿಸಿ ಐ.ಯು.ಸಿ.ಎನ್ (I U C N ) 2022ರ ಜುಲೈ ತಿಂಗಳಲ್ಲಿ ಈ ಚಿಟ್ಟೆಗಳನ್ನು "ಆತಂಕಿತ ಪ್ರಭೇದ"ಗಳ (endangered species) ಪಟ್ಟಿಗೆ ಸೇರಿಸಿದೆ.
Very interesting article sir
ReplyDeleteವಿಶಿಷ್ಟ ಲೇಖನಕ್ಕೆ ಧನ್ಯವಾದಗಳು ಸರ್.
ReplyDeleteಪ್ರಪಂಚದ ಪ್ರಬೇಧಗಳಲ್ಲೊಂದಾದ Monark ನ್ನು ಪರಿಪರಿಯಾಗಿ ಪರಿಚಯಿಸಿದ ಪರಮ ಪೂಜ್ಯ ಗುರುಗಳಿಗೆ ಪ್ರಣಾಮಗಳು.
ReplyDeleteಈ ವಿಶೇಷ ಚಿಟ್ಟೆಯ ಪ್ರಬೇಧ ಅಳಿವಿನಂಚಿಗೆ ಸಾಗದಿರಲಿ ಪ್ರಕೃತಿಯಲಿ .
ಇನ್ನಷ್ಟು ಲೇಖನಗಳ ನಿರೀಕ್ಷೆಯಲ್ಲಿ ತಮ್ಮಿಂದ ಮೂಡಿಬರಲಿ ಸರ್.
ಧನ್ಯವಾದಗಳು..
ಅದ್ಬುತವಾದ ವಿಶ್ಲೇಷಣೆ...
ReplyDeleteಬಹಳ ಉಪಯುಕ್ತ ಮಾಹಿತಿ. ಎಂದಿನಂತೆ ತಮ್ಮ ಲೇಖನ ಬಹಳ ಸೊಗಸಾಗಿದೆ
ReplyDeleteಮೊನಾರ್ಕ್ ಚಿಟ್ಟೆಗಳ ಬಗ್ಗೆ ತುಂಬಾ ಸೊಗಸಾದ, ಉಪಯುಕ್ತ ಮತ್ತು ವಿವರವಾದ ಮಾಹಿತಿಯನ್ನೊಳಗೊಂಡ ಲೇಖನಕ್ಕೆ ಧನ್ಯವಾದಗಳು.
ReplyDelete