ನಿಸರ್ಗದ ಜಲಗಾರ ರಣಹದ್ದು!!!
ರಾಮಚಂದ್ರ ಭಟ್ ಬಿ.ಜಿ.ಬೋರ್ಡ್ ಪರೀಕ್ಷೆ ಹತ್ತಿರ ಬಂದಂತೆ ಮಗನ ಪರೀಕ್ಷಾ ಸಿದ್ಧತೆ ತಿಳಿದುಕೊಳ್ಳಲು ಕರೆದೆ. ಜೀವಕ್ರಿಯೆಗಳ ಬಗ್ಗೆ ಕೇಳುತ್ತಾ HCl ನ ಕಾರ್ಯವನ್ನು ಕುರಿತು ಪ್ರಶ್ನೆ ಕೇಳಿದೆ . ಅದಕ್ಕೆ ಉತ್ತರಿಸುತ್ತಾ ಮಗ ಕೌಂಟರ್ ಪ್ರಶ್ನೆ ಹಾಕಿದ .
" ಅಪ್ಪಾ ಹದ್ದಿನ ಜೀರ್ಣಾಂಗ ವ್ಯವಸ್ಥೆಯಲ್ಲೂ ಅದೇ HCl ಇರುತ್ತಾ?"
ಮಗನ ಪ್ರಶ್ನೆ ಕೇಳುತ್ತಾ ಅವನ ಮುಖವನ್ನು ದಿಟ್ಟಿಸಿದೆ. ಅದೇನೋ ವಿಡಿಯೋ ನೋಡಿಯೋ ಇನ್ಯಾವುದೋ ಮಾಹಿತಿ ನೋಡಿಯೋ ಪ್ರಶ್ನೆ ಕೇಳುತ್ತಾ ಇದ್ದಾನೆ ಎನ್ನುವುದು ಖಾತ್ರಿ ಆಯ್ತು.
"ಹೌದಪ್ಪಾ ಇರುತ್ತೆ" .
" ಹಾಗಿದ್ರೆ ಅದರ pH ಮೌಲ್ಯ ನಮ್ಮಷ್ಟೇ ಇರುತ್ತಾ? "
ನನ್ನೊಳಗೆ ಜಿಜ್ಞಾಸೆ ನಡೆಯಲಾರಂಭಿಸಿತು . ಹೌದಲ್ಲವಾ ? HCl ಅಂದ ಮೇಲೆ ಒಂದೇ ಇರಬೇಕಲ್ವಾ? ನನಗೆ ಈ ಆಲೋಚನೆ ಬರಲೇ ಇಲ್ವಲ್ಲ ಎಂದು ಯೋಚಿಸುತ್ತಿದ್ದಾಗ , ಮಗ ಮತ್ತೆ ಹೇಳಿದ,
"ಅಪ್ಪಾ ಅವು ಕೊಳೆತಿದ್ದನ್ನೆಲ್ಲ ತಿನ್ನುತ್ತವಲ್ಲ ? ಹಾಗಾಗಿ ಆ ಆಮ್ಲ ನಮ್ಮದಕ್ಕಿಂತ ಪ್ರಬಲವಾಗಿರಬೇಕಲ್ಲ? "
ಓಹ್ !!! ಹೌದಲ್ಲ?
ಇದ್ದಕ್ಕಿದ್ದಂತೆ ಹೊಸ ಆಲೋಚನೆ ಹೊಳೆಯಲಾರಂಭಿಸಿತು. ಮಗನ ಪ್ರಶ್ನೆರಣಹದ್ದಿನ ಹಿಂದೆ ಹೋಗುವಂತೆ ಮಾಡಿತು. ಅದಕ್ಕೆ ವಿಲಿಯಂ ವರ್ಡ್ಸ್ ವರ್ತ್ ವೇದಾಂತಿಯಂತೆ "Child is Father of man " ಎಂದು ಹೇಳಿದ್ದು ಸುಳ್ಳಲ್ಲ
ಕೊಳೆತ
ಶವ ಭಕ್ಷಕ ಪ್ರಾಣಿಗಳು ನಮಗೆ ಅದೆಷ್ಟೇ ಅಸಹ್ಯ ಹುಟ್ಟಿಸಿದರೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಕಾರಣವಾದ ಇವುಗಳ ಕಾರ್ಯ
ಸ್ತುತ್ಯರ್ಹ. ಸಣ್ಣಪುಟ್ಟ ಆಹಾರ ಸೇವನೆ ಇಷ್ಟೆಲ್ಲ ಸೋಂಕಿತ ಮಾಂಸ ಸೇವನೆ ರಣಹದ್ದುಗಳಿಗೆ ಹೊಟ್ಟೆ
ನೋವು ತರುವುದಿಲ್ಲವೇ? ಆರೋಗ್ಯ ಹದಗೆಡದೇ?
ಕೊಳೆಯುತ್ತಿರುವ ಜೀವಿಗಳ ದೇಹದಲ್ಲಿ ಬೊಟುಲಿಸಮ್, ಆಂಥ್ರಾಕ್ಸ್, ರೇಬೀಸ್, ಕಾಲರಾ, ಹೆಪಟೈಟಿಸ್ ಮತ್ತು ಪೋಲಿಯೊಗಳಂತಹ ಅನೇಕ ಮಾರಣಾಂತಿಕ ರೋಗಕಾರಕ ರೋಗಾಣುಗಳಿರುತ್ತವೆ. ಇಂತಹ ಸಾಂಕ್ರಾಮಿಕ ರೋಗಾಣುಗಳು ಸುಲಭವಾಗಿ ಪರಿಸರ ವ್ಯವಸ್ಥೆಯನ್ನು ಧ್ವಂಸ ಮಾಡಬಲ್ಲವು. ಇಂತಹ ಸೂಕ್ಷ್ಮಾಣುಜೀವಿಗಳನ್ನು ಜೀರ್ಣಿಸಿ ಪರಿಸರ ವ್ಯವಸ್ಥೆ ಸುಗಮವಾಗಿ ನಡೆಯಲು ಈ ಜೀವಿಗಳು ವಿಕಾಸದ ಹಾದಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಅಪೂರ್ವ. ಇವು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ರಣಹದ್ದುಗಳ ಜಠರದಲ್ಲಿರುವ HClಆಮ್ಲದ pH ಮೌಲ್ಯವು 0 ಮತ್ತು 1 ರ ನಡುವೆ ಇದ್ದು ಇದು ಬ್ಯಾಟರಿ ಆಮ್ಲದಂತೆಯೇ ಇರುತ್ತದೆ! ಇದು ಇದು ಎಲ್ಲಾ ಕಶೇರುಕಗಳಲ್ಲಿನ ಆಮ್ಲಕ್ಕಿಂತ ಹೆಚ್ಚು ವಿನಾಶಕಾರಿಯಾಗಿದ್ದು ಲೋಹವನ್ನೂ ಕರಗಿಸಬಲ್ಲುದು. ಮೂಳೆಗಳಂತಹ ವಸ್ತುಗಳನ್ನೂ ಕರಗಿಸಬಲ್ಲುದು. ಜೊತೆಗೆ ಹಾನಿಕಾರಕ ಸೂಕ್ಷ್ಮಜೀವಿಗಳನ್ನೂ ಜೀರ್ಣ ಮಾಡಬಲ್ಲದು. ಇದರಿಂದಾಗಿಯೇ ರಣಹದ್ದುಗಳು ತನ್ನ ಬಲಿಯನ್ನು ತಿನ್ನುವುದರ ಜೊತೆಗೆ ಕೊಳೆಯುತ್ತಿರುವ ಜೀವಿಗಳನ್ನೂ ತಿಂದು ಕಲುಷಿತ ಪರಿಸರವನ್ನು ಸ್ವಚ್ಛಗೊಳಿಸುತ್ತದೆ.
ಹೀಗೆ ಮನುಷ್ಯರು ಮತ್ತು ಇತರ ಪ್ರಾಣಿಗಳನ್ನು ಅನೇಕ ರೋಗಗಳು ಹತ್ತಿರ ಸುಳಿಯದಂತೆ ರಕ್ಷಿಸುತ್ತವೆ. ಕೆಲವೊಮ್ಮೆ ಈ ರಣಹದ್ದುಗಳು ಜೀರ್ಣವಾಗದ ಗರಿಗಳಂತಹ ವಸ್ತುಗಳನ್ನು ಹೊರ ಹಾಕುವ ಸಂದರ್ಭಗಳಲ್ಲಿ ತಮ್ಮ ಕಾಲ್ಗಳ ಮೇಲೆ ಪ್ರಬಲ ಆಮ್ಲವನ್ನು ವಾಂತಿ ಮಾಡಿ ತಮ್ಮ ಕಾಲುಗಳನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸುತ್ತವೆ!. ಅವುಗಳ ವಾಂತಿ ಕೆಲವು ದಿನಗಳವರೆಗೂ ದುರ್ವಾಸನೆ ಬೀರುವುದರಿಂದ ಅವುಗಳ ತಂಟೆಗೆ ಯಾವ ಪ್ರಾಣಿಯೂ ಬಾರದು!! ಎಷ್ಟೇ ಪ್ರಬಲ ಜಠರ ವ್ಯವಸ್ಥೆ ಇದ್ದರೂ ವೃದ್ಧಾಪ್ಯದಲ್ಲಿ ರೋಗನಿರೋಧಕ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ ಕೊಳೆಯುತ್ತಿರುವ ಆಹಾರದ ಬದಲಾಗಿ ತಾಜಾ ಮಾಂಸ ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತವೆ.
ಇವು ಇತರ ಪ್ರಾಣಿಗಳಿಗೆ ನಿಲುಕದ ಕಲ್ಲುಬಂಡೆ ಅಥವಾ ಎತ್ತರವಾದ ದೈತ್ಯವೃಕ್ಷಗಳ ತುದಿಯಲ್ಲಿ ಕಾಗೆ ಗೂಡಿನಂತಹ ಪುಟ್ಟಗೂಡು ನಿರ್ಮಿಸುತ್ತವೆ. ಒಂದೇ ಕಡೆ ಹಲವು ಗೂಡುಗಳೂ ಇರುವುದುಂಟು. ಒಂದು ಅಥವಾ ಎರಡು ಮೊಟ್ಟೆಯನ್ನಿಟ್ಟು ಏಳರಿಂದ ಎಂಟು ವಾರಗಳ ತನಕ ಕಾವುಕೊಟ್ಟು ಮರಿ ಮಾಡುತ್ತವೆ. ಹದ್ದು ಹಾರುವ ಎತ್ತರಕ್ಕೆ ಕೊನೆಯೇ ಇಲ್ಲ. ಸಂಪಾತಿ ಮತ್ತು ಜಠಾಯುಗಳ ನಡುವಿನ ಹಾರಾಟದ ಸ್ಪರ್ಧೆ ನೆನಪಾಯಿತೇ? 12 ಕಿ.ಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ತಾಸಿಗೆ 60-80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮೀ ಸುತ್ತಳತೆಯಲ್ಲಿ ಗಸ್ತು ಹೊಡೆಯುತ್ತಾ ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಆಹಾರದ ಮುಂದೆ ಪ್ರತ್ಯಕ್ಷವಾಗುತ್ತವೆ. ಕೊಳೆತ ಪ್ರಾಣಿಗಳ ದೇಹವನ್ನು ತಿನ್ನುವುದರಿಂದ ಹರಡಬಹುದಾದ ರೋಗ-ರುಜಿನಗಳಿಂದ ಊರನ್ನು ರಕ್ಷಿಸುವ ಮೂಲಕ ನಿಸರ್ಗದ ಜಲಗಾರರಾಗಿವೆ. ಧಾರ್ಮಿಕವಾಗಿಯೂ ಇವುಗಳ ಪಾತ್ರ ಮಹತ್ವದ್ದು. ಪಾರ್ಸಿ ಜನಾಂಗದವರ ದೇಹ ಇವುಗಳಿಗೇ ಮೀಸಲು. ರಣಹದ್ದುಗಳೇ ಅಂತ್ಯ ಸಂಸ್ಕಾರ ನಡೆಸುತ್ತವೆ!!. ಜೀಮೂತವಾಹನನ ನೆನಪಾಗುತ್ತಿದೆಯೆ?
ರಣಹದ್ದುಗಳು ಇಂದು ಅಳಿವಿನ ಅಂಚಿಗೆ ತಲುಪಿವೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಸಂಪೂರ್ಣ ಕಣ್ಮರೆಯಾದರೂ ಅಚ್ಚರಿಯಿಲ್ಲ. ಈ ದಿಸೆಯಲ್ಲಿ ಹದ್ದುಗಳ ಸಂರಕ್ಷಣೆಗಾಗಿಯೇ ಬೆಂಗಳೂರಿಗೆ ಸಮೀಪದ ಶೋಲೆಯ ರಾಮ್‌ಗಡ್ ಎಂದೇ ಹೆಸರಾದ ರಾಮನಗರದ ರಾಮದೇವರ ಬೆಟ್ಟದಲ್ಲಿ ಇವುಗಳಿಗಾಗಿಯೇ ಅಭಯಾರಣ್ಯವೊಂದನ್ನು ಸ್ಥಾಪಿಸಲಾಗಿದೆ. ಪರಿಸರಕ್ಕಾಗಿ ಅವು ಮಾಡುವ ಪ್ರಮುಖ ಕೆಲಸಕ್ಕಾಗಿ ಜಲಗಾರ ರಣಹದ್ದುಗಳಿಗೆ ಧನ್ಯವಾದ ಹೇಳಲೇಬೇಕು
No comments:
Post a Comment