ಬಿಕ್ಕಟ್ಟಿನಿಂದ ಇಕ್ಕಟ್ಟಿನೆಡೆಗೆ………
ಲೇಖಕರು : ರೋಹಿತ್ ವಿ. ಸಾಗರ್
ಪ್ರಾಂಶುಪಾಲರು, ಹೊಂಗಿರಣ ಪದವಿ ಪೂರ್ವ ಕಾಲೇಜು
ಅಮಟೆಕೊಪ್ಪ, ಸಾಗರ, ಶಿವಮೊಗ್ಗ ಜಿಲ್ಲೆ
ಮಾನವ
ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದಂತೆ, ತನ್ನ ವಿನಾಶಕ್ಕೆ
ತಾನೇ ಹೇಗೆ ಕಾರಣನಾಗುತ್ತಿದ್ದಾನೆ ಎಂಬದಕ್ಕೆ ಬೈಜಿಕ ಶಕ್ತಿಯ ಅನ್ವೇಷಣೆ ಒಂದು ಜ್ವಲಂತ
ಉದಾಹರಣೆ. ಅದರ ಹಿಂದಿನ ರೋಚಕ ಕತೆಯನ್ನು ನಿಮ್ಮ ಮುಂದಿಟ್ಟಿದ್ದಾರೆ, ʼಸವಿಜ್ಞಾನʼ
ತಂಡದ ಶಿಕ್ಷಕ, ರೋಹಿತ್ ಸಾಗರ್ ಅವರು.
ತನ್ನ ಮಡಿಲಿನಲಿ ಹಲವು ಜೀವಿಗಳಿಗೆ ಬದುಕು ಕೊಟ್ಟಿರುವ ನಿಸರ್ಗ, ಅವಕ್ಕೆ ಬೇಕಾದ ಹಲವು ಸವಲತ್ತುಗಳನ್ನೂ
ಒದಗಿಸಿಕೊಟ್ಟಿದೆ. ಅದರಲ್ಲಿ, ಮಾನವನೆಂಬ ಪ್ರಾಣಿಗೆ ಮಾತ್ರ ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಬುದ್ಧಿಯನ್ನು
ನೀಡಿಬಿಟ್ಟಿದೆ. ಮಂಗನಾಗಿದ್ದಾಗ ತನ್ನ ಸ್ನಾಯು ಬಲದಿಂದಲೇ ಆಹಾರ ಸಂಪಾದಿಸಿ ಜೀವನ ನಡೆಸುತ್ತಿದ್ದ
ಈ ಮಾನವ, ನಿಸರ್ಗದೊಂದಿಗೆ ಹೊಂದಿಕೊಂಡು ಸರಿಯಾಗಿಯೇ ಇದ್ದ. ಯಾವಾಗ ಎರೆಡೇ ಕಾಲುಗಳ ಮೇಲೆ ನಿಲ್ಲ ತೊಡಗಿದನೋ,
ಖಾಲಿ ಕೂತ ಎರೆಡು ಕೈಗಳು ನಿಸರ್ಗವನ್ನೇಕೆ ಆಳಬಾರದು ಎಂಬ ಹೊಸ ಲಹರಿಯೊಂದಕ್ಕೆ ಶುರುವಿಟ್ಟುಕೊಂಡವು.
ತನ್ನ ಕೆಲಸ ಕಾರ್ಯಗಳಲ್ಲಿ ಬಳಸುತ್ತಿದ್ದ ಸ್ನಾಯುಬಲವನ್ನು ಕಡಿಮೆ ಮಾಡಿಕೊಳ್ಳಲು ಚಕ್ರ, ಸಲಾಕೆ, ಮುಂತಾದ
ಆಯುಧಗಳನ್ನು ಮಾಡಿಕೊಂಡ. ಒಣಗಿದ ಕಟ್ಟಿಗೆಗಳಿಂದ ಬೆಂಕಿಯನ್ನು ಹುಟ್ಟಿಸಿಕೊಂಡ. ಅದೇ ಬೆಂಕಿಯಿoದ ಅದೇ
ಕಾಡನ್ನು ಸುಟ್ಟ. ಒಂದಾದ ಮೇಲೊಂದರoತೆ ಶಕ್ತಿಯ ಹೊಸ ಆಕರಗಳನ್ನು ಕಂಡು ಹಿಡಿಯ ತೊಡಗಿದ ಮಾನವನಿಗೆ
ಅಪಾರ ಯಶಸ್ಸು ತಂದುಕೊಟ್ಟ ಆಕರಗಳೆಂದರೆ ಕಲ್ಲಿದ್ದಲು, ಮತ್ತು ಪೆಟ್ರೋಲಿಯಂ. ಇವೆರೆಡು ಭೂಗರ್ಭದಲ್ಲಿ
ಹುದುಗಿರುವುದನ್ನು ಹುಡುಕಿದ ಮಾನವ ಅದನ್ನು ಬಗೆದು ಉಪಯೋಗಿಸಲು ಶುರುಮಾಡಿದ.
ಅಲ್ಲಿಂದ ಮುಂದೆ, ಆತ ಕೇವಲ ಪ್ರಾಣಿಯಾಗಿ ಉಳಿಯಲಿಲ್ಲ ಬದಲಿಗೆ
ನಿಸರ್ಗದ ಒಡೆಯನಂತಾಗಿಬಿಟ್ಟ. ಕಂಡ ಕಂಡಲೆಲ್ಲ, ಗಣಿಗಳನ್ನು, ತೈಲಬಾವಿಗಳನ್ನು ತೋಡಿ, ಭೂಗರ್ಭವನ್ನೇ
ಬರಿದು ಮಾಡ ತೊಡಗಿದ. ಯಾವಾಗ ಅದು ಖಾಲಿಯಾಗಬಹುದೆಂಬ ಅನುಮಾನ ಮೂಡಿತೋ, ಆಗ ಹೊಸ ಚಿಂತನೆಗಳಿಗೆ ಇಡೀ
ಮನುಕುಲವೇ ಒಂದಾಗಿ ನಿಂತಿತು. ಅಷ್ಟರಲ್ಲೇ ಪರಿಚಯವಾಗಿದ್ದ ವಿದ್ಯುತ್ ಶಕ್ತಿಯನ್ನು ಹರಿಯುವ ನೀರಿನಿಂದ
ಪಡೆಯಬಹುದೆಂದು ಯಾರೋ ತೋರಿಸಿಕೊಟ್ಟರು. ತಕ್ಷಣ ಒಟ್ಟಾದ ಜನ ತಮ್ಮಷ್ಟಕ್ಕೆ ತಾವು ಹರಿಯುತ್ತಿದ್ದ ನದಿಗಳಿಗೆ
ದೊಡ್ಡ ದೊಡ್ಡ ಆಣೆಕಟ್ಟುಗಳನ್ನು ಕಟ್ಟಿ ಎಕರೆಗಟ್ಟಲೆ ಅರಣ್ಯಗಳನ್ನು, ಲಕ್ಷಗಟ್ಟಲೆ ಜನರ ಮನೆ-ಮಠಗಳನ್ನು
ಮುಳುಗಿಸಿ, ಪ್ರಪಂಚದ ಹಲವಾರು ಕಡೆಗಳಲ್ಲಿ ವಿದ್ಯುತ್ತನ್ನ ಉತ್ಪಾದಿಸಿ ಮನಸೋ ಇಚ್ಛೆ ಬಳಸತೊಡಗಿಸದರು.
ಆದರೆ, ಜನಸಂಖ್ಯೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋದಂತೆ ಕ್ರಮೇಣ ಪೆಟ್ರೋಲಿಯಂ, ಕಲ್ಲಿದ್ದಲುಗಳು
ಬರಿದಾಗುತ್ತಿರುವುದು ಅಂಗೈ ಹುಣ್ಣಿನಂತಾಗಿಬಿಟ್ಟಿತು. ಅಲ್ಲದೆ, ಆಗಲೆ ನಿದ್ದೆಯಿಂದೆದ್ದ ಕೆಲವು ಜವಾಬ್ದಾರಿಯುತ
ವಿಜ್ಞಾನಿಗಳು ಪ್ರೆಟ್ರೋಲಿಯಂನoತಹ ಇಂಧನಗಳುನ್ನು ಶಕ್ತಿಯ ಆಕರಗಳನ್ನಾಗಿ ಬಳಸುವುದರಿಂದ ಅತಿಯಾದ ಪ್ರಮಾಣದಲ್ಲಿ
ಕಾರ್ಬನ್ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತಿರುವುದನ್ನು ತೋರಿಸಿಕೊಟ್ಟರು. ಅದರ
ಪರಿಣಾಮವಾಗಿಯೇ ಜಾಗತಿಕವಾಗಿ ತಾಪಮಾನ ಏರುತ್ತಿರುವುದನ್ನೂ ಪುರಾವೆಗಳೊಂದಿಗೆ ನಿರೂಪಿಸಿದರು. ಇದೇ
ಮುಂದುವರೆದರೆ ಧ್ರುವಗಳಲ್ಲಿರುವ ಮಂಜುಗಡ್ಡೆಗಳು ನೀರಾಗಿ ಸಮುದ್ರ ಸೇರಿ, ಏರುವ ಸಮುದ್ರ ಮಟ್ಟದಿಂದ
ಹಲವು ದ್ವೀಪಗಳೇ ಮುಳುಗಿಹೋಗಲಿವೆ ಎಂಬ ಎಚ್ಚರಿಕೆಯನ್ನೂ ಆ ವಿಜ್ಞಾನಿಗಳು ನೀಡಿದ್ದರು. ಜೊತೆಗೆ, ವಿದ್ಯುತ್‌ನ
ಪೂರೈಕೆ ಅಳತೆಮೀರಿ ಬೆಳೆಯುತ್ತಿದ್ದ ಜನರ ಸಂತತಿಗೆ ಸಾಲದಾಯಿತು. ಹೊಸ ಆಣೆಕಟ್ಟು ಕಟ್ಟಲು ಜಾಗವೂ ಇಲ್ಲದಂತಹ
ಸ್ಥಿತಿಗೆ ಬಂದು ನಿಂತಾಗ, ಅಪಾರ ಶಕ್ತಿಯನ್ನು ಕಡಿಮೆ ಕಚ್ಚಾ ವಸ್ತುವಿನಿಂದ ತಯಾರಿಸಬಹುದಾದ ಹೊಸತೊಂದು
ದಾರಿ ಮರುಭೂಮಿಯಲ್ಲೊಂದು ಓಯಸಿಸ್‌ನಂತೆ ಗೋಚರವಾಗತೊಡಗಿತ್ತು.
ಕ್ರಿ.ಶ.೧೯೩೮ ಅದು ಇಪ್ಪತ್ತನೇ ಶತಮಾನದ ಪ್ರಾರಂಭದ ಸಮಯ,
ಇನ್ನೇನು ದ್ವಿತೀಯ ಮಹಾಯುದ್ಧ ಪ್ರಾರಂಭವಾಗಿ ಬಿಡಬಹುದೇನೋ ಎಂಬ ಊಹೆಗಳಿಗೆ ರೆಕ್ಕೆಪುಕ್ಕಗಳು ಬಲಿತಿದ್ದ
ಕಾಲ. ಜರ್ಮನಿಯ ಆಟ್ಟೋ ಹಾಹ್ನ್ ಮತ್ತು ಸ್ಟ್ರಾಸ್‌ಮನ್ ಎಂಬ ವಿಜ್ಞಾನಿಗಳು ಯುರೇನಿಯಮ್ ಎಂಬ ಭಾರವಾದ
ಮೂಲವಸ್ತುವಿನ ಪರಮಾಣು ಬೀಜಕ್ಕೆ ಮಂದಗತಿಯ ನ್ಯೂಟ್ರಾನ್ ಎಂಬ ಕಣವನ್ನು ತಾಡಿಸಿದಾಗ ಅದು ಎರೆಡು ಸಮಭಾಗಗಳಾಗಿ
ಒಡೆಯುತ್ತದೆ ಅದರೊಂದಿಗೆ ಅಪಾರ ಪ್ರಮಾಣದ ಶಕ್ತಿಯನ್ನೂ, ಶಾಖವನ್ನೂ ಹೊರಹಾಕುತ್ತದೆ ಎಂದು ತೋರಿಸಿಕೊಟ್ಟರು.
ಈ ಪ್ರಕ್ರಿಯೆಯನ್ನು ಬೈಜಿಕ ವಿದಳನ ಎಂದು ಕರೆದ ಅವರು, ಉತ್ಪಾದನೆಯಾದ ಶಕ್ತಿಯನ್ನು ಬೈಜಿಕ ಶಕ್ತಿ
ಎಂದು ಕರೆದರು. ಅದೇ ಸಮಯದಲ್ಲಿ ಜರ್ಮನಿಯಲ್ಲಿ ನಾಜಿಗಳ ಕಾಟ ತಡೆಯಲಾದರೆ ಹಲವಾರು ಪ್ರಬುದ್ಧ ವಿಜ್ಞಾನಿಗಳು
ಅಮೇರಿಕಾಗೆ ಪಲಾಯನ ಮಾಡುತ್ತಿದ್ದರು. ಅವರಲ್ಲಿ ಒಬ್ಬ ಸಿಲಾರ್ಡ್ ಎಂಬಾತ. ನಾಜಿಗಳ ಉಪಟಳದಿಂದ ಬೇಸತ್ತ
ಈತನ ಚಿಂತನೆಗಳು ಬೈಜಿಕ ವಿದಳನ ಪ್ರಕ್ರಿಯೆಯ ಹೊಸ ಸಾಧ್ಯತೆಗಳ ಬಗ್ಗೆ ಆವಿಷ್ಕಾರಕ್ಕೆ ಅಡಿಯಿಟ್ಟವು.
ಅದಕ್ಕಾಗಿ ಆತ ಅಗತ್ಯವಿದ್ದ ವಿಜ್ಞಾನಿಗಳ ಬಲ ಮತ್ತು ಭಾರಿ ಬಂಡವಾಳಕ್ಕಾಗಿ ಅಮೇರಿಕಾ ಸರಕಾರದ ಬೆಂಬಲವನ್ನು
ಕೋರಿದ. ಅಂದು ಆತ ಶುರುವಿಡಲು ಹೊರಟಿದ್ದು ಅಪಾರ ಶಕ್ತಿಶಾಲಿಯಾದ ಬೈಜಿಕ ಬಾಂಬಿನ ಸಂಶೋಧನೆಯನ್ನು.
ಯಾವಾಗ ಅಮೇರಿಕಾ ಸರ್ಕಾರ ಇದನ್ನು ಕಡೆಗಣಿಸಿತೋ, ಕೂಡಲೆ ಸಿಲಾರ್ಡ್ ಆಗಿನ ಸುಪ್ರಸಿದ್ಧ ವಿಜ್ಞಾನಿ
ಐನ್‌ಸ್ಟೀನ್ ಬಳಿಹೋಗಿ ಆ ಬಾಂಬಿನ ರಹಸ್ಯ ನಾಜಿಗಳಿಗೆ ದೊರೆಯುವ ಮುಂಚೆಯೇ ತಾವು ಬಾಂಬನ್ನು ತಯಾರಿಸದಿದ್ದರೆ,
ಅವರು ವಿಶ್ವವನ್ನು ವಿನಾಶ ಮಾಡಿಬಿಡುತ್ತಾರೆ ಎಂದು ವಿವರಿಸುತ್ತಾನೆ. ಸ್ವತ: ನಾಜಿಗಳಿಂದ ಕಂಗೆಟ್ಟಿದ್ದ
ಐನ್‌ಸ್ಟೈನ್ ಆಗಿನ ಅಮೇರಿಕ ಅಧ್ಯಕ್ಷ ರೂಸ್‌ವೆಲ್ಟ್ ಗೆ ಆ ಸಂಶೋಧನೆಯ ಕುರಿತು ಶಿಫಾರಸ್ಸು ಪತ್ರವನ್ನು
ನೀಡುತ್ತಾರೆ. ತಕ್ಷಣ ಶುರುವಾಗಿದ್ದೇ ಅಮೇರಿಕಾದ ಹೊಸ ಬೈಜಿಕ ಬಾಂಬು ತಯಾರಿಕಾ ಯೋಜನೆ – ಮ್ಯಾನ್ಹಟನ್.
ಈ ಮ್ಯಾನ್ಹಟನ್ ಎಂಬುದು ಯಾವುದೋ ಊರಿನ ಅಥವಾ ಮತ್ತಾವುದೋ ವಿಶಿಷ್ಟ ಅರ್ಥ ನೀಡುವಂತಹ ಪದವಲ್ಲ. ಕೇವಲ
ಈ ಬೈಜಿಕ ಬಾಂಬು ತಯಾರಿಕೆಯ ಗೌಪ್ಯತೆಯನ್ನು ಕಾಪಾಡಲಿಕ್ಕಾಗಿ ಈ ಹೆಸರನ್ನು ಇಡಲಾಯಿತು. ಜನರಲ್ ಲೆಸ್ಸಿ
ಗ್ರೋವ್ಸ್ ಹಾಗೂ ರಾಬರ್ಟ್ ಓಪನ್ ಹೀಮರ್ ಈ ಯೋಜನೆಯ ಸೇನಾ ಮತ್ತು ವೈಜ್ಞಾನಿಕ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು.
ಅಮೇರಿಕಾದ ವಿಶಾಲ ನದಿಬಯಲುಗಳಲ್ಲಿ ಮೂರು ಅಜ್ಞಾತ ನಗರಗಳನ್ನೇ ಈ ಯೋಜನೆಗಾಗಿ ನಿರ್ಮಿಸಲಾಯಿತು. ಸಾವಿರಾರು
ವಿಜ್ಞಾನಿಗಳ ಹಾಗೂ ಸೈನಿಕರ ಹೆಸರು ಬದಲಾಯಿಸಿ ಅಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಇನ್ನು ಈ ಬೈಜಿಕ
ಬಾಂಬು ತಯಾರಿಕೆಗೆ ನೈಸರ್ಗಿಕವಾಗಿ ದೊರೆಯುವ ಯುರೇನಿಯಂನ್ನು ಅಥವಾ ಅದರಿಂದಲೇ ಕೃತಕವಾಗಿ ತಯಾರಿಸಬಹುದಾದ
ಪ್ಲುಟೋನಿಯಂನ್ನು ಕಚ್ಚಾವಸ್ತುವಾಗಿ ಬಳಸಲಾಯಿತು. ಜಗತ್ತಿನ ಅತ್ಯುತ್ತಮ ವಿಜ್ಞಾನಿಗಳ ಈ ಅವಿರತ ಪ್ರಯತ್ನದ
ಫಲವಾಗಿ ೧೯೪೫ ರ ಜುಲೈ ಹೊತ್ತಿಗೆ ವಿಶ್ವದ ಮೊಟ್ಟಮೊದಲ ಅಣ್ವಸ್ತ್ರ, ಅಂದರೆ ಬೈಜಿಕ ಬಾಂಬು ನಿರ್ಮಾಣಗೊಂಡಿತು.
ಆ ತಿಂಗಳ ೧೬ರಂದು ಅಲ್ಮಗೆಂಡೋ ಮರುಭೂಮಿಯಲ್ಲಿ ಇದರ ಪರೀಕ್ಷಾರ್ಥ ಸ್ಪೋಟ ನಡೆಯಿತು. ಅತಿ ಸಣ್ಣದಾಗಿದ್ದ
ಆ ಬಾಂಬು ಏಕಕಾಲದಲ್ಲಿ ಸಾವಿರ ಸೂರ್ಯರು ಹುಟ್ಟಿಸಬಹುದಾದಷ್ಟು ಬೆಳಕನ್ನೂ, ಅಗಾಧ ಶಕ್ತಿ, ಶಾಖವನ್ನೂ
ಅಣಬೆಯಾಕಾರದ ಹೊಗೆಯ ಕಾರ್ಮೊಡಗಳನ್ನೂ ಉಂಟುಮಾಡಿತು. ಬಾಂಬಿನ ಸಿಡಿತದ ಜಾಗದಲ್ಲಿನ ಉಷ್ಣತೆ ಕೋಟಿಗಳ
ಲೆಕ್ಕದಲ್ಲಿತ್ತು.
ಈ ಈ ಬಾಂಬಿನ ಪರೀಕ್ಷೆ ಯಶಸ್ವಿಯಾದಾಗ, ಪರ್ಲ್ ಹಾರ್ಬರ್ ಮೇಲಿನ ಜಪಾನಿನ ಅಪ್ರಚೋದಿತ ಆಕ್ರಮಣದಿಂದ
ಹೆಡೆ ಕಟ್ಟಿದ ಹಾವಿನಂತಾಗಿದ್ದ ಅಮೇರಿಕಾ ಹಿಂದು-ಮುಂದು ಯೋಚಿಸದೆ, ಕ್ಯಾಪ್ಟನ್ ಟಿಬೆಟ್ ಎಂಬ ಪೈಲಟ್‌ನಿಂದ
ಚಾಲಿತವಾದ ಎನೋಲಾಗೇ ಎಂಬ ವಿಮಾನದ ಮೂಲಕ ೧೯೪೫ರ ಆಗಸ್ಟ್ ೬ ರಂದು ಜಪಾನಿನ ಮುಖ್ಯ ನಗರ ಹಿರೋಷಿಮಾದ
ಮೇಲೆ ‘ಲಿಟಲ್ ಬಾಯ್’ ಎಂದು ಹೆಸರಿಡಲಾದ ೧೦ ಅಡಿ ಉದ್ದ, ೩ ಅಡಿ ಅಗಲದ ೪೫೦೦ ಕೆ.ಜಿ. ತೂಕದ ಯುರೇನಿಯಂ
ಪರಮಾಣು ಬಾಂಬನ್ನು ಪ್ರಯೋಗಿಸಿಬಿಟ್ಟಿತು. ಆಮೇಲೆ ನಡೆದದ್ದು ಘೋರ ಅನಾಹುತ, ಮನುಕುಲದಲ್ಲಿ ಕಂಡು ಕೇಳರಿಯದಂತಹ
ಅಮಾನವೀಯ, ಊಹಿಸಲಸಾಧ್ಯವಾದ ದುರಂತ. ಹತ್ತು ಸಾವಿರ ದೊಡ್ಡ ಬಾಂಬುಗಳನ್ನು ಏಕಕಾಲದಲ್ಲಿ ಸಿಡಿಸಿದಾಗ
ಆಗುವ ದುರಂತಕ್ಕಿಂತಲೂ ಒಂದು ಪಟ್ಟು ಹೆಚ್ಚು ಪರಿಣಾಮವನ್ನು ಅದು ಉಂಟುಮಾಡಿತು. ಅಷ್ಟಕ್ಕೇ ಸುಮ್ಮನಾಗದ
ಅಮೇರಿಕಾ ‘ಲಿಟಲ್ ಬಾಯ್’ಗಿಂತ ಎರೆಡು ಪಟ್ಟು ದೊಡ್ಡದಾಗಿದ್ದ “ಫ್ಯಾಟ್ ಮ್ಯಾನ್’ ಎಂಬ ಪ್ಲುಟೋನಿಯಂ
ಪರಮಾಣು ಬಾಂಬನ್ನು ಜಪಾನಿನ ಇನ್ನೊಂದು ಮುಖ್ಯನಗರ ನಾಗಸಾಕಿಯ ಮೇಲೆ ಕೇವಲ ಮೂರೇ ದಿನಗಳ ಅಂತರದಲ್ಲಿ
ಅಂದರೆ ಆಗಸ್ಟ್ ೯ರಂದು ಪ್ರಯೋಗಿಸಿತು. ಅದರ ಪರಿಣಾಮ ಏನಾಗಿರಬಹುದೆಂದು ಹೇಳಲು ಪದಗಳು ಸಾಕಾಗಲಾರವು.
ಜಪಾನಿನ ಎರೆಡೂ ಮುಖ್ಯ ನಗರಗಳು ಸಂಪೂರ್ಣ ನೆಲಸಮವಾದುವು. ಏನಾಗುತ್ತಿದೆ ಎಂದು ಅರಿಯುವ ಮುನ್ನವೇ ಬರೋಬ್ಬರಿ
ಎರೆಡೂವರೆ ಲಕ್ಷ ಜನರ ಹೆಣಗಳು ಕರಕಲಾಗಿ ಬಿದ್ದಿದ್ದವು. ಎಣಿಸಲೂ ಸಾಧ್ಯವಿಲ್ಲದಷ್ಟು ಜನ ಗಾಯಗೊಂಡಿದ್ದರು.
ಇದಾದ ಮರುಕ್ಷಣದಲ್ಲೇ ಅಮೇರಿಕಾದ ಮುಂದೆ ಜಪಾನ್ ಮಂಡಿಯೂರಿತ್ತು.
ದ್ವಿತೀಯ ಮಹಾಯುದ್ಧ ಕೊನೆಗೊಂಡ ನಂತರ ಪುರುಸೊತ್ತಿನಲ್ಲಿ
ಯೋಚಿಸಿದ ವಿಜ್ಞಾನಿಗಳಿಗೆ ಆಮೇಲೆ ಅರ್ಥವಾಗತೊಡಗಿತು, ಪ್ರಪಂಚದಲ್ಲಿ ಶುರುವಾಗಿದ್ದ ಶಕ್ತಿಯ ಬಿಕ್ಕಟ್ಟಿಗೆ
ಹೊಸ ಪರಿಹಾರ ದೊರೆತಿದೆ ಎಂದು. ಅದೇ ಬೈಜಿಕ ವಿದಳನ ತಂತ್ರಜ್ಞಾನವನ್ನು ಉಪಯೋಗಿಸಿ ಹುಟ್ಟುವ ಅಪಾರ
ಶಕ್ತಿಯನ್ನೇ ಏಕೆ ಬಳಸಿಕೊಳ್ಳಬಾರದು ಎಂಬ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದೇ ಬೈಜಿಕ ವಿದ್ಯುತ್.
ಅಗಾಧ ಶಕ್ತಿಯನ್ನು ಕಡಿಮೆ ಕಚ್ಚಾವಸ್ತುವಿನಿಂದ ಪಡೆಯಬಹುದಾದ ಈ ಬೈಜಿಕ ವಿದ್ಯುತ್ತಿನ ಉತ್ಪಾದನೆ ವಿಶ್ವದ
ಬಹುತೇಕ ವಿಜ್ಞಾನಿಗಳು ಕಟಬದ್ಧರಾಗಿ ದುಡಿಯತೊಡಗಿದರು. ಅವುಗಳ ಫಲವಾಗಿ ಪರಮಾಣು ಬಾಂಬಿನಲ್ಲಿ ನಡೆಯುವ
ಅನಿಯಂತ್ರಿತ ವಿದಳನ ಕ್ರಿಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ನಿಧಾನವಾಗಿ ನಡೆಯುವಂತೆ ಮಾಡಿದಲ್ಲಿ
ಉಂಟಾಗುವ ಸ್ಪೋಟವನ್ನು ತಡೆದು, ಉತ್ಪಾದನೆಯಾಗುವ ಶಾಖಶಕ್ತಿಯನ್ನು ಬಳಸಿಕೊಳ್ಳಬಹುದು ಎಂಬ ಸತ್ಯ ಹೊರಬಂದಿತು.
ಅದಕ್ಕಾಗಿಯೇ ವಿಶೇಷ ತಂತ್ರಜ್ಞಾನಗಳು ಜನ್ಮ ತಳೆಯತೊಡಗಿದವು. ಅವುಗಳಲ್ಲಿ ಕೊನೆಗೆ ಗಟ್ಟಿಯಾಗಿ ಉಳಿದದ್ದು
ಬೈಜಿಕ ಕ್ರಿಯಾಕಾರಿಗಳ ತಂತ್ರಜ್ಞಾನ.
ಈ ಬೈಜಿಕ ಕ್ರಿಯಾಕಾರಿಗಳ ಗರ್ಭದಲ್ಲಿ ಯುರೇನಿಯಂನಂಥ ವಿದಳನ ಹೊಂದಬಲ್ಲ ವಸ್ತುವನ್ನು ಶೇಖರಿಸಲಾಗುತ್ತದೆ.
ಅಲ್ಲಿ ನಿಧಾನಗತಿಯಲ್ಲಿ ಸಾಗುವ ನ್ಯೂಟ್ರಾನುಗಳನ್ನು ಹೊರಗಿನಿಂದ ತಾಡಿಸಲಾಗುತ್ತದೆ. ಅಲ್ಲಿಂದ ಪ್ರಾರಂಭವಾಗುವ
ವಿದಳನವನ್ನು ಕ್ಯಾಡ್ಮಿಯಂ ಬೋರಾನ್ ಮಿಶ್ರಿತ ಉಕ್ಕು ಅಥವಾ ಕ್ಯಾಡ್ಮಿಯಂನAತಹ ನ್ಯೂಟ್ರಾನುಬಂಧಕ ರಾಸಾಯನಿಕಗಳಿಂದ
ಮಾಡಲ್ಪಟ್ಟ ನಿಯಂತ್ರಣ ಸರಳುಗಳ ಸಹಾಯದಿಂದ ನಿಯಂತ್ರಿಸಲಾಗುತ್ತದೆ. ಈ ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾಗುವ
ಅಪಾರ ಶಾಖದಿಂದ, ಕ್ರಿಯಾಕಾರಿಯಲ್ಲಿರುವ ನೀರನ್ನು ಬಿಸಿ ಮಾಡಲಾಗುತ್ತದೆ. ಅದರಿಂದ ಆವಿಯ ರೂಪ ತಾಳಿದ
ನೀರು ಹಗುರವಾಗಿರುವುದರಿಂದ ಕೊಳವೆಗಳ ಮೂಲಕ ಬಿರುಸಾಗಿ ಮೇಲೇರತೊಡಗುತ್ತದೆ. ಅದು, ಆ ಕೊಳವೆಯ ತುದಿಯಲ್ಲಿರುವ
ಟರ್ಬೈನ್‌ನ್ನು ತಿರುಗುವಂತೆ ಮಾಡುತ್ತದೆ. ಶಾಖದ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ಜೋರಾಗಿ ಬರುವ
ಆವಿ ಆ ಟರ್ಬೈನ್‌ನ್ನು ವೇಗವಾಗಿ ತಿರುಗುವಂತೆ ಮಾಡುತ್ತದೆ. ಆ ಟರ್ಬೈನ್‌ನ್ನು ವಿದ್ಯುತ್‌ಜನಕಕ್ಕೆ
ಹೊಂದಿಸಿರುತ್ತಾರೆ. ಟರ್ಬೈನ್‌ನ ತಿರುಗುವಿಕೆಯಿಂದ ವಿದ್ಯುತ್ ಜನಕದಲ್ಲಿ ವಿದ್ಯುತ್ ತಯಾರಾಗುತ್ತದೆ.
ಟರ್ಬೈನ್‌ನ್ನು ತಿರುಗಿಸಿ ದಾಟಿದ ಆವಿಯನ್ನು ಮತ್ತೆ ತಂಪು ಮಾಡಿದರೆ ಅದು ನೀರಾಗುತ್ತದೆ ಆ ನೀರನ್ನು
ಮತ್ತೆ ಕ್ರಿಯಾಕಾರಿಯ ಒಳಕ್ಕೆ ಕಳಿಸಲಾಗುತ್ತದೆ. ಈ ರೀತಿಯಾಗಿ ಅತಿ ಕಡಿಮೆ ಕಚ್ಚಾವಸ್ತುವಿನಿಂದ ಅಪಾರ
ಶಕ್ತಿಯನ್ನು ಶಾಖ ಮತ್ತು ವಿದ್ಯುತ್ತಿನ ರೂಪದಲ್ಲಿ ಪಡೆಯಬಹುದಾಗಿದೆ.
ಆದರೆ, ಇದರ ಒಂದು ಕರಾಳ ಮುಖವೆಂದರೆ ಈ ವಿದಳನ ಕ್ರಿಯೆಯಲ್ಲಿ
ಉತ್ಪತ್ತಿಯಾಗುವ ವಿಕಿರಣಗಳು ಬಲು ಅಪಾಯಕಾರಿಯಾಗಿರುತ್ತವೆ. ಆ ವಿಕಿರಣಗಳು ಕ್ಯಾನ್ಸರ್ ರೋಗವನ್ನು
ಉಂಟುಮಾಡುವುದಲ್ಲದೆ, ಇಡೀ ಆ ರೋಗಿಯ ವಂಶವನ್ನೇ ರೋಗಗ್ರಸ್ಥವನ್ನಾಗಿ ಮಾಡಿಬಿಡುತ್ತದೆ. ಹಿರೋಷಿಮಾ,
ನಾಗಾಸಾಕಿಗಳಲ್ಲಿ ೧೯೪೫ರಲ್ಲಿ ಸ್ಪೋಟಿಸಿದ ಬಾಂಬ್‌ಗಳ ವಿಕಿರಣಗಳೂ ಈಗಲೂ ಅಲ್ಲಿನ ಜನರನ್ನು ಅಂಗವೈಕಲ್ಯ,
ಬುದ್ಧಿಮಾಂದ್ಯತೆ, ಬಂಜೆತನ, ಕ್ಯಾನ್ಸರ್‌ಗಳ ರೂಪದಲ್ಲಿ ಕಾಡುತ್ತಿವೆ. ಆದ್ದರಿಂದ, ಈ ವಿಕಿರಣಗಳ ತೊಂದರೆ
ತಡೆಯಲು, ಕ್ರಿಯಾಕಾರಿಗಳ ಸುತ್ತ ಉಕ್ಕು, ಸೀಸ ಮುಂತಾದ ಲೋಹಗಳ ಅತೀ ದಪ್ಪನೆಯ ಕವಚವನ್ನು ಹಾಕಲಾಗಿರುತ್ತದೆ.
ಅಷ್ಟೇ ಅಲ್ಲದೆ, ಅಲ್ಲಿ ಕೆಲಸ ಮಾಡುವವರಿಗೆ ವಿಕಿರಣದಿಂದ ರಕ್ಷಣೆ ಒದಗಿಸುವ ಮುಖವಾಡ ಹಾಗೂ ಗೌನುಗಳನ್ನು
ನೀಡಲಾಗಿರುತ್ತದೆ. ಜೊತೆಗೆ, ಆ ಕ್ರಿಯಾಕಾರಿಯನ್ನು ಹೊಂದಿರುವ ಕಟ್ಟಡದ ಗೋಡೆಗಳು ೨ ರಿಂದ ೩ ಅಡಿಗಳಷ್ಟು
ದಪ್ಪನಾಗಿದ್ದು ಒಳಗಿನ ವಿಕಿರಣಗಳು ಪರಿಸರವನ್ನು ಸೇರದಂತೆ ನೋಡಿಕೊಳ್ಳುತ್ತವೆ. ಇಷ್ಟಾದ ಮೇಲೂ, ಬೈಜಿಕ
ವಿದ್ಯುತ್ತನ್ನು ಉತ್ಪಾದಿಸಿ ಮನುಕುಲದ ಎಲ್ಲಾ ಶಕ್ತಿಯ ಅವಶ್ಯಕತೆಯನ್ನು ಪೂರೈಸಿಬಿಡಬಹುದು ಎಂದು ನಿಟ್ಟುಸಿರು
ಬಿಡುವುದಕ್ಕೆ ಮುನ್ನವೇ ಅದರೆ ಹೊಸ ಹೊಸ ಅನಾನುಕೂಲತೆಗಳು ಕಾಣಿಸಿಕೊಳ್ಳತೊಡಗಿದವು. ಬೈಜಿಕ ಶಕ್ತಿಯನ್ನು
ಉತ್ಪಾದಿಸಿ ಬಿಡೋಣ ಎನ್ನುವವರದ್ದು ಒಂದು ಗುಂಪಾಗಿ, ಅದನ್ನು ವಿರೋಧಿಸುವವರು ಇನ್ನೊಂದು ಗುಂಪಾಗಿ
ವಾದ ವಿವಾದಗಳನ್ನು ನಡೆಸಿದ್ದಾರೆ, ನಡೆಸುತ್ತಿದ್ದಾರೆ.
ಬೈಜಿಕ ಶಕ್ತಿ ಅಪಾರವಾಗಿ ದೊರೆಯುತ್ತೆಯಾದರೂ, ಅದರಿಂದ ಖಂಡಿತವಾಗಿಯೂ
ಬಹಳಷ್ಟು ಅಪಾಯಗಳು ಉಂಟಾಗುತ್ತವೆ ಎಂಬುದಂತೂ ಸತ್ಯ. ವಿದಳನ ಕ್ರಿಯೆ ನಡೆಯುವಾಗ ಕೊನೆಯಲ್ಲಿ ಉಳಿಯುವ
ಶೇಷವಸ್ತುಗಳೂ ಸಹ ವಿಕಿರಣವನ್ನು ಹೊರಹಾಕುತ್ತವೆ ಹಾಗಾದರೆ, ಶೇಷವಸ್ತುಗಳನ್ನೆಲ್ಲಾ ಏನು ಮಾಡುವುದು?
ಎಂಬ ಪ್ರಶ್ನೆಗೆ ದೊಡ್ಡ ದೊಡ್ಡ ದಪ್ಪನೆಯ ಪೆಟ್ಟಿಗೆಗಳಲ್ಲಿ ತುಂಬಿ ಭೂಮಿಯಾಳದಲ್ಲಿ ಹೂತುಬಿಡೋಣವೇ,
ದಟ್ಟ ಅರಣ್ಯದ ಮಧ್ಯದಲ್ಲಿ ಮತ್ತೊಂದು ಕಟ್ಟಡ ಕಟ್ಟಿ ಮುಚ್ಚಿಟ್ಟು ಬಿಡೋಣವೇ ಎಂದು ಹಲವರು ಹಲುಬಿರಬಹುದು.
ಅದನ್ನು ಭಾರತದಲ್ಲಿಯೂ ಪಾಲಿಸಿರಬಹುದು. ಆದರೆ, ಇದು ಎಷ್ಟು ಕಾಲದವರೆಗೆ ಸಾಧ್ಯ ಎಂಬುದು ಪ್ರಶ್ನೆ.
ಏಕೆಂದರೆ ಆ ಬಚ್ಚಿಟ್ಟ ವಿಕಿರಣದ ಕಟ್ಟಡ ಅಥವಾ ಪೆಟ್ಟಿಗೆ ಭೂಕಂಪಕ್ಕೆ ಸಿಕ್ಕಿ ಬಿಟ್ಟರೆ, ಅಷ್ಟೇ ಏಕೆ,
ಕಾರ್ಯ ನಿರ್ವಹಿಸುತ್ತಿರುವ ಬೈಜಿಕ ಕ್ರಿಯಾಕಾರಿಯೇ ಭೂಕಂಪಕ್ಕೋ, ಸುನಾಮಿಗೋ ಸಿಕ್ಕಿ ಬಿಟ್ಟರೆ, ಆಮೇಲೆ
ಸುತ್ತಮುತ್ತಲಿನ ಜನ, ಅವರ ಮಕ್ಕಳು, ಮೊಮ್ಮೊಕ್ಕಳು ಎಲ್ಲರೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ
ಉದಾಹರಣೆಗಳು ಈಗಾಗಲೇ ನಮ್ಮ ಕಣ್ಣ ಮುಂದೆ ನಡೆದು ಹೋಗಿವೆ.
೧೯೮೬ರ ಏಪ್ರಿಲ್‌ನಲ್ಲಿ ರಷ್ಯಾದ ಬೈಜಿಕ ವಿದ್ಯುತ್ ಕ್ರಿಯಾಕಾರಕವೊಂದರಲ್ಲಿ ಯಾವನೋ ಒಬ್ಬ ಕಾರ್ಮಿಕನಿಂದಾದ
ಸಣ್ಣ ತಪ್ಪಿನಿಂದಾಗಿ, ಭಾರಿ ದಪ್ಪನೆಯ ಗೋಡೆಗಳಿಂದ ಕಟ್ಟಿದ ಇಡೀ ಸ್ಥಾವರವೇ ನುಚ್ಚುನೂರಾಗುವಂತಹ ಸ್ಪೋಟ
ಸಂಭವಿಸಿತು. ಅಲ್ಲಿಂದ ಸಿಡಿದ ವಿಕಿರಣಯುಕ್ತ ರಾಸಾಯನಿಕಗಳು ಸುತ್ತಲಿನ ೨೦ ಕಿ.ಮಿ. ವ್ಯಾಪ್ತಿಯ ಪ್ರದೇಶದಲ್ಲಿ
ಚೆಲ್ಲಾಡಿಬಿಟ್ಟವು. ಸ್ಥಳದಲ್ಲಿ ಗಾಯಗೊಂಡು ಸತ್ತದ್ದು ಕೇವಲ ೩೦ ಜನ, ಆದರೆ, ಆ ವಿಕಿರಣಶೀಲ ವಸ್ತುಗಳಿಂದ
ವರ್ಷಗಟ್ಟಲೇ ಹೊರಬಂದ ವಿಕಿರಣಗಳು ಲಕ್ಷಗಟ್ಟಲೆ ಜನರನ್ನೂ, ಅವರ ಹಲವು ತಲೆಮಾರುಗಳನ್ನೂ ರೋಗಗ್ರಸ್ಥರನ್ನಾಗಿಸಿಬಿಟ್ಟವು.
ಇದಾದ ೨೫ ವರ್ಷಗಳ ನಂತರ ಜಪಾನ್‌ನಲ್ಲಿ ೨೦೧೧ರ ಏಪ್ರಿಲ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪ, ಅದರಿಂದುಂಟಾದ
ಸುನಾಮಿಯಿಂದ ಅಲ್ಲಿನ ಫುಕೋಷಿಮಾ ಅಣು ವಿದ್ಯುತ್ ಸ್ಥಾವರದ ನಾಲ್ಕೂ ಕ್ರಿಯಾಕಾರಿ ಕಟ್ಟಡಗಳು ಒಂದರ
ಹಿಂದೊಂದರಂತೆ ಸ್ಪೋಟಗೊಂಡವು. “ಮಚ್ಚಿನೇಟಿನೊಡನೆ ಕೊಡಲಿಯೇಟು” ಎಂಬಂತೆ ಭೂಕಂಪ, ಸುನಾಮಿಗಳಿಂದ ಲಕ್ಷಾಂತರ
ಜನ ಜೀವ ತೆತ್ತರೆ, ಅಲ್ಲಿ ಬದುಕುಳಿದವರಿಗೆ ಕಣ್ಣಿಗೆ ಕಾಣದ ಆ ವಿಕಿರಣಗಳಿಂದ ಭವಿಷ್ಯದಲ್ಲೂ ಕಾಡುವ
ಅಗೋಚರ, ಘೋರ ಪರಿಣಾಮಗಳು ಸಾವಿಗಿಂತಲೂ ಕಠೋರವಾದವು ಎಂದರೂ ತಪ್ಪಾಗಲಾರದು. ಅಲ್ಲಿ ಒಂದೊಂದೇ ಕಟ್ಟಡ
ಸ್ಪೋಟಗೊಂಡಂತೆ ವಿಶ್ವದ ಮೂಲೆ ಮೂಲೆಯ ಜನರೂ ಬೊಬ್ಬಿಡುತ್ತಿದ್ದದು ಆ ಘಟನೆಯ ಭೀಕರತೆಗೆ ಹಿಡಿಸ ಕೈಗನ್ನಡಿಯಾಗಿತ್ತು.
ಶಕ್ತಿಗಾಗಿ ನಮ್ಮಲ್ಲಿ ಬಿಕ್ಕಟ್ಟಿದೆ, ಅದಕ್ಕಾಗಿ ಇಡೀ ಮನುಕುಲವನ್ನೇ
ಇಕ್ಕಟ್ಟಿಗೆ ಸಿಲುಕಿಸುವ ದುಸ್ಸಾಹಸ ನಮಗೆ ಬೇಡವೆನಿಸುತ್ತದೆ. ಏನೂ ಅರಿಯದ ನಮ್ಮ ಮುಂದಿನ ಪೀಳಿಗೆಯ
ಮಕ್ಕಳಿಗೆ ಬೈಜಿಕ ಕಸವನ್ನೋ, ವಿಕಿರಣಗಳ ಸಮೂಹವನ್ನೋ, ಹಾಳುಬಿದ್ದ ಬೈಜಿಕ ಕ್ರಿಯಾಕಾರಿಗಳನ್ನೋ ಉಡುಗೊರೆಗಳನ್ನಾಗಿ
ಕೊಡುವುದು ಬೇಡ. ಅವರದಲ್ಲದ ತಪ್ಪಿಗೆ ಅವರಿಗೇಕೆ ಶಿಕ್ಷೆಯಾಗಬೇಕು? ಅವರಿಗಾಗಿ ಒಳಿತನ್ನು ಉಳಿಸಿಕೊಡುವುದು
ನಮ್ಮ ಕರ್ತವ್ಯವಾಗಿದೆಯಲ್ಲವೇ?. ಒಮ್ಮೆ ಯೋಚಿಸಿ, ಮಹಾಯುದ್ಧದಲ್ಲಿ ಮಲಗಿದ್ದ ಅಮೇರಿಕಾವನ್ನು ಕೆಣಕಿದ್ದು
ಯಾರು? ಈಗಲೂ ಅಲ್ಲಿ ವಿಕಿರಣಗಳಿಂದ ಶಿಕ್ಷೆ ಅನುಭವಿಸುತ್ತಿರುವವರು ಯಾರು? ಎಂದು. ಜೊತೆಗೆ ಫುಕೋಷಿಮಾದಲ್ಲಿ
ಬೈಜಿಕ ವಿದ್ಯುತ್ ಬಳಸಿದವರು ಯಾರು, ಮುಂದೆ ಅಲ್ಲಿ ಪರದಾಡುವವರು ಯಾರು ಎಂದು ಯೋಚಿಸಿದಾಗ ಪ್ರಾಯಶ:
ಅರ್ಥವಾಗಿಬಿಡುತ್ತದೆ, ಹಿರೋಷಿಮಾದಲ್ಲಿನ ಬೈಜಿಕ ಶಕ್ತಿಯ ಒಂದು ರೂಪದ ಪರಿಣಾಮ ಮತ್ತು ಪುಕೋಷಿಮಾದಲ್ಲಿನ
ಬೈಜಿಕ ಶಕ್ತಿಯ ಇನ್ನೊಂದು ರೂಪದ ಪರಿಣಾಮವೇನು ಎಂದು, ಕೊನೆಯಲ್ಲಿ ಅದು ಮನುಕುಲದ ನಾಶ ಎಂದು !
ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ಮಾನವಕುಲಕ್ಕೆ ಎಷ್ಟು ಉಪಯುಕ್ತವಾಗಿರುತ್ತವೆಯೋ ಅಷ್ಟೇ ವಿನಾಶಕಾರಿ ಆಗಬಲ್ಲದು. ತುಂಬಾ ವಿವರವಾಗಿ ವಿಶ್ಲೇಷಣೆ ಮಾಡಿದ್ದೀರಿ. ಉಪಯುಕ್ತ ಮಾಹಿತಿ. ಧನ್ಯವಾದಗಳು ಸರ್
ReplyDelete