ಒಗಟುಗಳು
ಶಂಕುಗಳಿವೆ ನನ್ನಲ್ಲಿ ನಾ ಪ್ರಾಣಿಯಲ್ಲ
ಸೂಜಿಗಳು ನನ್ನಲ್ಲಿವೆ ಆದರೂ ನಾ ದರ್ಜಿಯಲ್ಲ
ಸೂಚಿಪರ್ಣಗಳಿದ್ದರೂ ಪರ್ಣಪಾತಿಗಳಲ್ಲ
ಬೀಜಗಳಿದ್ದರೂ ಹಣ್ಣುಗಳಿಲ್ಲದ ಸಸ್ಯವರ್ಗ ನಾ
ಸುಳಿವ ಹಿಡಿದು ನನ್ನ ಹುಡುಕಿ ಓ ಜಾಣ ಜಾಣೆಯರೆ
ನಾ ವೈದ್ಯನಲ್ಲ ಆದರೂ ನೋವಿಲ್ಲದ ಶಸ್ತ್ರ ಚಿಕಿತ್ಸೆ ಮಾಡಬಲ್ಲೆ,
ನಾ ಆಭರಣ ಪ್ರಿಯನಲ್ಲ ಆದರೂ ಮೈತುಂಬಾ ಉಂಗುರಗಳ ಸಿಂಗಾರ
ರಕ್ತ ಹೀರಬಲ್ಲೆ ಆದರೆ ನಾ ತಿಗಣೆಯಲ್ಲ
ಹೆಪ್ಪುಗಟ್ಟದಂತೆ ಮಾಡಿ ರಕ್ತ ಸರಾಗವಾಗಿ ಹೀರಬಲ್ಲೆ
ರೈತನ ಮಿತ್ರನೂ ನನ್ನ ವಂಶಜನೆ
ಈ ಸುಳಿವು ಹಿಡಿದು ನನ್ನ ಕಂಡುಹಿಡಿ ಓ ಮನುಜ !!!
ಇದಕ್ಕೂ ಕನಿಷ್ಠ ತಾಪವಿರದು
ಇದೇ ಅನಿಲದ ಗಾತ್ರ ಶೂನ್ಯ ಮಾಡಬಲ್ಲ ತಾಪ
ಚಾರ್ಲ್ಸ್ ನಿಯಮಕ್ಕೂ ತಾಪದ ಏಕಮಾನಕ್ಕೂ ಇದೆ ಸಹ ಸಂಬಂಧ
ವಿವರಿಸಿ ಹೇಳಬಲ್ಲಿರೇ ನನ್ನ ಕಥೆಯ?
ಆಮ್ಲ ಪ್ರತ್ಯಾಮ್ಲಗಳ ಸಂಗಮ ನಾ
ಬೇಕಿಂಗ್ ಸೋಡಾ ತಯಾರಿಕೆಯಲು ನಾ ಹುಟ್ಟಿ ಬರುವೆ
ಕಾಸಿದಿರೋ ನೀರಾಗದೆ ಅನಿಲವಾಗುವ ಘನ ಮಹಿಮ ನಾ
ನನ್ನೊಬ್ಬ ಜ್ಞಾತಿ ಕೀಟ ವಿಕರ್ಷಕ ಗುಣದವರು
ಮತ್ತೊಬ್ಬರು C10H16O ಸೂತ್ರದವರು
ವಿಜ್ಞಾನದ ಈ ಒಗಟ ಒಡೆದು
ಗುರುತುಹಿಡಿಯಿರಿ ಓ ಜಾಣ ಜಾಣೆಯರೇ
ವಿದ್ಯುತ್ತಿನ ಪ್ರಿಯ ಸುಖ ವಾಹಕ
ನಾ ಸಿಹಿ ಬರ್ಫಿಯ ಹೊದಿಕೆಯಾಗಬಲ್ಲೆ
ಎಚ್ಚರ ! ಗಾಳಿಗೆ ತೆರೆದಿಟ್ಟಿರೋ
ಹೊಳೆವ ನನ್ನ ಮೈ ಕಪ್ಪುಗಟ್ಟೀತು
ಆಭರಣ ತಯಾರಿಕೆಯಲ್ಲೂ ನನ್ನ ಪಾಲುಂಟು
ವ್ಯಾಪಾರದಲ್ಲೂ ನನಗೆ ಬೆಲೆಯುಂಟು
ಇಷ್ಟು ಸುಳಿವು ಸಾಲದೇ ಜಾಣ?
ಹೂಡು ನಿನ್ನ ತಿಳಿವಿನ ಹೂ ಬಾಣ
No comments:
Post a Comment