ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, January 4, 2024

ಕಾಗೆ ಕಾಗೆ ಕವ್ವ... ಎಲ್ಲಿ ಹೋದಿಯವ್ವ

 ಕಾಗೆ ಕಾಗೆ ಕವ್ವ... ಎಲ್ಲಿ ಹೋದಿಯವ್ವ....


ಲೇಖಕರು : ರಮೇಶ, ವಿ,ಬಳ್ಳಾ

                                                ಅಧ್ಯಾಪಕರು

                                         ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು 

                               (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ 

                                                                        ಮೊ: 9739022186


    ಬಾಲ್ಯದ ಆ ದಿನಗಳು ಇನ್ನೂ ನೆನಪಿವೆ. ರೊಟ್ಟಿ, ಮೊಸರು ಚಟ್ನಿ ಹಚ್ಚಿಕೊಂಡು ಮಾಳಿಗೆ ಏರುವ ಕಲ್ಲು ಮೆಟ್ಟಿಲುಗಳ ಮೇಲೆ ಕುಳಿತು ಊಟ ಮಾಡುವುದೆಂದರೆ ಖುಷಿಯೋ ಖುಷಿ. ಒಂದು ತುಣುಕು ರೊಟ್ಟಿ ಮುರಿದು ಬಾಯಲ್ಲಿ ಹಾಕಿಕೊಂಡರೆ ಸಾಕು ಅಗಿಯಲು ಸ್ವಲ್ಪ ಹೊತ್ತು ಬೇಕಾಗುತ್ತಿತ್ತು. ಅಲ್ಲಿಯವರೆಗೆ ಕೈ ಸುಮ್ಮನಿರದೇ ಮತ್ತೆ ಒಂದು ತುಣುಕು ಮುರಿಯುತ್ತಿತ್ತು. ಅದನ್ನು ಅಲ್ಲಿಯೇ ಓಡಾಡುತ್ತ ತಿರುಗುವ ಹಾಗೂ ಕೆಲ ಸಾರಿ ಊಟ ಮಾಡುವ ನಮ್ಮನ್ನೇ ನೋಡುತ್ತ ಜೊಲ್ಲು ಸುರಿಸುವ ಓಣಿಯ ಆ ನಾಯಿಗಳನ್ನು ಛೂ.. ಛೂ... ಎಂದು ಕರೆದು ರೊಟ್ಟಿ ತುತ್ತು ಹಾಕುತ್ತ ಮಜಾ ನೋಡುವ ನಮ್ಮ ಸಡಗರ ಒಂದು ಕಡೆಯಾದರೆ, ಆ ರೊಟ್ಟಿಗಾಗಿ ಕಾದು ಮರದಲ್ಲಿ ಕುಳಿತು ಕಾವ್.. ಕಾವ್.. ಎನ್ನುತ್ತಾ ಒಮ್ಮೆಲೆ ಹಾರಿ ಹೊತ್ತೊಯ್ಯುತ್ತಿದ್ದ ಆ ಪಕ್ಷಿಗಳು ನಾಯಿಗಳನ್ನು ಗೋಳು ಹೊಯ್ಯುತ್ತಿದ್ದವು. ಒಂದೊಂದು ಸಾರಿ ಆ ಕಪ್ಪು ಬಣ್ಣದ ಹಕ್ಕಿಗಳು ನಮ್ಮ ಹತ್ತಿರದ ಸಂಬಂಧಿಗಳಂತೆ, ಮನೆಯ ಸುತ್ತ ಗಿಡಮರ ಮುಳ್ಳು ಕಂಟೆಗಳ ಹಾಗೂ ವಿದ್ಯುತ್ ಕಂಬಗಳ ಆಸುಪಾಸಿನಲ್ಲಿ ಗುಂಪಾಗಿ ಜೋರು ದನಿ ಮಾಡುವ ಅವು ತೀರ ಚಿರಪರಿಚಿತವೆಂಬಂತೆ ಕಾಣುತ್ತಿದ್ದವು. ಅವೇ ಕಾಗೆಗಳು. ಆದರೆ ಆ ಕಾಗೆಗಳ ಕಲರವ ಇಂದು ಕೇಳುತ್ತಿಲ್ಲ. ಕಾವ್.. ಕಾವ್.. ದನಿಯ ಸುಳಿವು ಸಿಗುತ್ತಿಲ್ಲ. ಆ ಕಪ್ಪು ಹಕ್ಕಿಗಳು ಎಲ್ಲಿ ಹೋದವೋ ಹುಡುಕಬೇಕಿದೆ.



ಒಂದು ಹಂತದಲ್ಲಿ ಕಾಗೆಗಳೆಂದರೆ ಅವುಗಳಿಲ್ಲದ ಜಾಗಗಳೇ ಇಲ್ಲ ಎಂಬಂತಿತ್ತು. ಅವು ಸರ್ವವ್ಯಾಪಿಯಾಗಿ. ಮಾನವ ಮತ್ತು ಅವನ ನಾಗರಿಕತೆಯ ಜೊತೆ ಜೊತೆಗೆ ವಿಶಿಷ್ಟವಾಗಿ ಗುರುತಿಸಿಕೊಂಡು ಅವಿನಾಭಾವ ಸಂಬಂಧ ಹೊಂದಿದ ಜೀವಿಗಳಾಗಿದ್ದವು. ಕಾಗೆಗಳದು ಗುಂಪುಗಳಲ್ಲಿ ಜೀವಿಸುವ ಮತ್ತು ಮಾನವನ ವಾಸ ನೆಲೆಗಳ ಹತ್ತಿರವೇ ಹೆಚ್ಚೆಚ್ಚು ಕಾಣಿಸುವ ಪಕ್ಷಿ ಸಂಕುಲದ ದೊಡ್ಡ ಬಳಗವಾಗಿದೆ. ಇದನ್ನು ಹೆಚ್ಚು ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ ಎನಿಸಿದರೂ ನಮ್ಮ ನಡುವಿನ ಈ ಜೀವಿಗಳ ಕಾವ್.. ಕಾವ್.. ಸದ್ದು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸಿದೆ ಎನಿಸುತ್ತದೆ. ಆ ಕಾರಣಕ್ಕಾಗಿ ಅವುಗಳತ್ತ ನಮ್ಮ ದೃಷ್ಠಿ ಹರಿಸಬೇಕಾಗಿದೆ. 

ಮನೆ ಕಾಗೆ (house crow) ಎಂತಲೇ ಸಾಮನ್ಯವಾಗಿ ಕರೆಯಲಾಗುವ ಕಾರ್ವಿಡೀ ಕುಟುಂಬದ ಈ ಬೂದು ಬಣ್ಣದ ಕತ್ತು ಹೊಂದಿದ ಕುರೂಪ ಪಕ್ಷಿ ಎಲ್ಲರಿಗೂ ಪರಿಚಿತ. ಹಳ್ಳಿಗಾಡಿನ ಹನುಮಂತನಿಂದ ಹಿಡಿದು, ಪಟ್ಟಣದ ಪ್ರತೀಕ್ಷಾಳವರೆಗೂ ತನ್ನ ಗುರುತು ಉಳಿಸಿದ ಜೀವಿ ಇದು. ಇದರ ವೈಜ್ಞಾನಿಕ ಹೆಸರು ಕಾರ್ವಸ್ ಸ್ಪ್ಲೆಂಡೆನ್ಸ್ (Corvus splendens).  ಇದೇ ಪ್ರಭೇಧದ ಇನ್ನೊಂದು ಕಾಗೆ ಕಪ್ಪು ಬಣ್ಣದಿಂದ ಕೂಡಿದ್ದು ಕಾಡಿನ ಕಾಗೆ (Corvus macrorhynchosಎಂತಲೇ ಪರಿಚಿತ. ಇದರ ಮೈಬಣ್ಣ ಸಂಪೂರ್ಣ ಕಪ್ಪಾಗಿದ್ದು ಮನೆ ಕಾಗೆಯ ಕತ್ತಿನ ಭಾಗದ ಬೂದು ಬಣ್ಣ ಇದನ್ನು ಪ್ರತ್ಯೇಕವಾಗಿ ನೋಡಲು ಸಹಾಯಕವಾಗುತ್ತದೆ. ಈ ಎರಡು ಕಾಗೆಗಳಲ್ಲದೇ ಒಟ್ಟು 120 ಪ್ರಭೇಧಗಳ ಕಾಗೆಗಳು ನೋಡಲು ಕಾಣಸಿಗುತ್ತವೆ. ಕಾಗೆ ಇದರ ಮೂಲ ಏಷ್ಯಾ ಆಗಿದ್ದರೂ ದಕ್ಷಿಣ ಅಮೇರಿಕಾವನ್ನು ಬಿಟ್ಟು ಉಳಿದೆಡೆ ಜಗತ್ತಿನ ಬಹುತೇಕ ಎಲ್ಲ ಭಾಗಗಳಲ್ಲೂ ಇವೆ ಎಂದು ಹೇಳಲಾಗುತ್ತದೆ.

ಕಾಗೆಗಳು ದೊಡ್ಡ ಗಾತ್ರದಿಂದ ಹಿಡಿದು ಮಧ್ಯಮ ಗಾತ್ರದ ದುಂಡಾದ ತಲೆ ಭಾಗವನ್ನು ಹೊಂದಿದೆ. ಮನೆ ಕಾಗೆಯ ಗಂಟಲು, ಎದೆಯ ಮೇಲ್ಭಾಗ, ಮುಂಡ ಭಾಗ, ಕಾಲುಗಳು, ಬಾಲ ಕಪ್ಪು ಬಣ್ಣದಿಂದ ಕೂಡಿದ್ದು, ಕತ್ತು ಭಾಗ ಮತ್ತು ಸ್ತನಭಾಗ ಮಾತ್ರ ತಿಳಿ ಬೂದು ಬಣ್ಣದ ಹೊಳಪು ಹೊಂದಿದೆ. 15-16 ಇಂಚಿನ ದೇಹದ ಕಪ್ಪನೆ ಹೊಳೆಯುವ ರೆಕ್ಕೆ ಪುಕ್ಕಗಳು ನವಿಲುನಂತಹ ಸೌಂದರ್ಯದ ಪಕ್ಷಿಯ ಮುಂದೆ ಇವುಗಳ ಆಕರ್ಷಣೆಯನ್ನು ಗೌಣವಾಗಿಸುತ್ತವೆ. ಶಂಕುವಿನಾಕಾರದ ಇದರ ಕೊಕ್ಕು ಹುಳು ಹುಪ್ಪಡಿಗಳನ್ನು ಹೆಕ್ಕಿ ತಿನ್ನಲು ಹೇಳಿ ಮಾಡಿಸಿದಂತಿದೆ. ಈ ಭಾರತೀಯ ಕಾಗೆ ಪ್ರಭೇದವು ನೇಪಾಳ, ಪಾಕಿಸ್ತಾನ, ಬಾಂಗ್ಲಾದಲ್ಲೂ ಕಂಡು ಬರುತ್ತದೆ. ಇದರ ಇನ್ನು ಕೆಲ ಉಪವರ್ಗಗಳು ಶ್ರೀಲಂಕಾ, ಮಯನ್ಮಾರ್, ಥೈಲ್ಯಾಂಡ್, ಮಾಲ್ಡಿವ್ಸ್ ಭಾಗಗಳಲ್ಲೂ ತಮ್ಮ ಸ್ಥಳೀಯ ವೈಶಿಷ್ಟ್ಯತೆಯೊಂದಿಗೆ ಹಾಗೂ ಕೆ¯ ಭಿನ್ನತೆಯೊಂದಿಗೆ ಕಂಡು ¨ರುತ್ತವೆ. 

ಕಾಗೆಗಳು ಬಲು ವಿಶಿಷ್ಟ ಬುದ್ಧಿಮತ್ತೆಯ ಜೀವಿಗಳೆಂದೇ ವಿಜ್ಞಾನಿಗಳು ಗುರುತಿಸುತ್ತಾರೆ. ವಾನರಗಳ ಮೆದುಳು, ಈ ಕಾಗೆಯ ಮೆದುಳು ಒಂದು ಹಂತದಲ್ಲಿ ಸಮವಾಗಿಯೇ ಇದ್ದರೂ ಜೀವ ವಿಕಾಸದ ಹಾದಿಯಲ್ಲಿ ಮಾತ್ರ ಇವು ಕಾಗೆಗಳಾಗಿಯೇ ಉಳಿಯಬೇಕಾಯಿತು ಎನ್ನಲಾಗುತ್ತದೆ. ಹಾಗಾಗಿ ಇವುಗಳನ್ನು ಆಕಾಶದ ಮಂಗಗಳು (feathered apes) ಎನ್ನಲಾಗುತ್ತದೆ. ಆ ಜಾಣ್ಮೆಯ ಪ್ರತೀಕವಾಗಿ ಏನೋ ಮಾನವನ ಸನಿಹ ಸಂಬಂಧಿಯಂತೆ ಒಡನಾಟ ತೋರುವ ಈ ಕಾಗೆಗಳು ಮಾನವ ಪರಿಸರವನ್ನು ಹೆಚ್ಚು ಇಷ್ಟಪಡುತ್ತವೆ. ಕೂಡಿ ಬಾಳುವ ತತ್ವವನ್ನು ಸಾರಿ ಹೇಳುತ್ತವೆ. ಒಂದಗುಳ ಕಂಡರೆ ಸಾಕು ತನ್ನ ಬಳಗವನ್ನೆಲ್ಲ ಕೂಗಿ ಕರೆದು ಹಂಚಿಕೊಂಡು ತಿಂದು ಬದುಕುತ್ತವೆ. ಇಂತಹ ಉದಾರ ಗುಣ, ಭಾತೃತ್ವ ಪಕ್ಷಿ ಸಂತತಿಯಲ್ಲಿ ವಿಶಿಷ್ಟವಾಗಿದೆ.

ಮನೆಯ ಮುಂದಿನ ಮರಗಳಲ್ಲಿ ಆಶ್ರಯ ಪಡೆದು ಬದುಕು ಸಾಗಿಸುವ ಇವುಗಳ ಜೀವನ ವೈಶಿಷ್ಟಗಳು ಹಲವು. ಕಾಗೆಗಳ ಮೆದುಳು ಅತ್ಯಂತ ಸಮೃದ್ಧವಾಗಿ ವಿಕಾಸಗೊಂಡಿದೆ. ಮುಂಭಾಗದ ಮೆದುಳು ಹೇರಳವಾದ ನರಕೋಶಗಳನ್ನು ಹೊಂದಿ ಮಾನವನಷ್ಟೇ ಬುದ್ಧಿಶಾಲಿ ಎನಿಸಿದೆ. ಒಂದೇ ಬಾರಿಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಇದು, ಜೀವನದುದ್ಕ್ಕೂ ಒಂದು ಸಂಗಾತಿಯನ್ನು ಮಾತ್ರ ಆಯ್ದುಕೊಳ್ಳುತ್ತದೆ. ಅಂದಾಜು 20 ಧ್ವನಿಗಳ ಆಲಾಪ ಮಾಡುವ ಇದು ವಿಭಿನ್ನ ವ್ಯತ್ಯಾಸ ಹೊಂದಿದ ಶಬ್ದ ತರಂಗಗಳನ್ನುಂಟು ಮಾಡಿದರೂ ಕೇಳಲು ಒಂದೇ ಧ್ವನಿ ಎನ್ನುವಂತಿರುತ್ತದೆ. ಪರಿಸರದ ಒಂದು ಅವಲೋಕನಕಾರರಾಗಿ ಸೂಕ್ಷ್ಮತೆಯನ್ನು ಹೊಂದಿದ ಕಾಗೆಗಳ ವಿಶಿಷ್ಟ ನಡುವಳಿಕೆಗಳು ಆಗಾಗ ವ್ಯಕ್ತವಾಗುತ್ತಲೇ ಇರುತ್ತವೆ.

 ಸ್ಥಳೀಯ ಪರಿಸರದ ಒಂದು ಭಾಗವಾಗಿ ತನ್ನ ತಳಿ ವೃಧ್ಧಿಸುವ ಕಾರ್ಯದಲ್ಲಿ ಮಗ್ನವಾಗುವ ಈ ಕಾಗೆಗಳು 3-4 ಮೀಟರ್ ಎತ್ತರದ ಮರಗಳ ರೆಂಬೆ ಕೊಂಬೆಗಳಲ್ಲಿ ಗೂಡು ಕಟ್ಟುತ್ತವೆ. ದಪ್ಪ ಕಡ್ಡಿಗಳ ಅರೆಬರೆ ವಿನ್ಯಾಸದ ಅಷ್ಟೊಂದು ನಾಜೂಕಲ್ಲದ ಇವುಗಳ ಗೂಡುಗಳು, ಇವುಗಳು ಅಶಿಸ್ತಿನ ಒರಟು ಜೀವಿಗಳೆಂದು ತೋರಿಸುತ್ತವೆ. ಕೆಲ ಸಾರಿ ಎತ್ತರದ ಸೂಕ್ತ ಕಟ್ಟಡವಾಗಿರಬಹುದು ಅಥವಾ ಗೋಪುರಗಳಾಗಿರಬಹುದು ಅಲ್ಲೂ ಗೂಡು ನಿರ್ಮಿಸಿ 3-5 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ನಿಜಕ್ಕೂ ಕಾಗೆ ಒಂದು ಅತ್ಯಂತ ಬುದ್ಧಿವಂತ ಪ್ರಾಣಿ ಎನಿಸಿಕೊಂಡರೂ ಕೆಲ ಸಾರಿ ಮೋಸ ಹೋಗುವುದು ಇದೆ. ಇವು ಎಷ್ಟು ಹೊಂದಾಣಿಕೆ ಹಾಗೂ ಸಹಜೀವನದ ಜೀವಿಗಳೆಂದರೆ ಕೋಗಿಲೆ ಇಡುವ ಮೊಟ್ಟೆಗಳನ್ನು ಮರಿ ಮಾಡಿಕೊಡುತ್ತವೆ. ಆ ಮೂಲಕ ಮೋಸದ ಬಲೆಗೆ ಬಿದ್ದರೂ ತಾಯಿ ಹೃದಯದ ಭಾವವನ್ನು ತಳೆದು ಪಕ್ಷಿಜೀವಿ ಪ್ರಪಂಚದಲ್ಲಿ ಅನನ್ಯವಾಗಿ ಗುರುತಿಸಲ್ಪಡುತ್ತವೆ. 

ನಮ್ಮ ಸಂಸ್ಕøತಿ ಸಂಸ್ಕಾರದ ಅವಿಭಾಜ್ಯ ಅಂಗವೆಂಬಂತೆ ಪ್ರಾಚೀನ ಕಾಲದಿಂದಲೂ ಪ್ರಸ್ತುತ ಜನಜೀವನದುದ್ದಕ್ಕೂ ಕಾಗೆ ತನ್ನ ಗುರುತು ಉಳಿಸುತ್ತಾ ಸಾಗಿದೆ. ತೀರಿದ ಪೂರ್ವಜರನ್ನು ಕಾಗೆಗಳಲ್ಲಿ ಕಾಣುವ ನಮ್ಮ ಭಾರತೀಯ ಪರಂಪರೆ ವಿಶಿಷ್ಟವಾದದ್ದು. ಮಾತಾ-ಪಿತೃಗಳ ಶ್ರಾದ್ಧ ಕರ್ಮಗಳಲ್ಲಿ ವಿಶಿಷ್ಟ ಆಚರಣೆಯಾದ ಪಿಂಡ ಬಿಡುವ ಪದ್ಧತಿಯ ವೇಳೆ ಈ ಕಾಗೆಗಳು ಬಂದು ತುತ್ತು ತಿಂದರೆ ಅದು ಪೂರ್ವಜರಿಗೆ ಅರ್ಪಿತವಾದಂತೆ ಎಂಬ ನಂಬಿಕೆ ಇದೆ. ಹಾಗೆಯೇ ಇದರ ಜೊತೆ ಜೊತೆಗೆ ಇನ್ನು ಹತ್ತು ಹಲವು ನಂಬಿಕೆಗಳು ಇದಕ್ಕೆ ತಳಕು ಹಾಕಿಕೊಂಡು ನಮ್ಮ ಬದುಕಿನ ಹಲವು ಮಗ್ಗಲುಗಳಲ್ಲಿ ತನ್ನ ಛಾಪು ಮೂಡಿಸಿದೆ. ಕಾಗೆ ಮನೆ ಮಾಳಿಗೆ ಮೇಲೆ ಕುಳಿತು ಕೂಗಿದರೆ ಅಂದು ಮನೆಗೆ ಬೀಗರು ಬರುತ್ತಾರೆ ಎಂಬುದು ಇದರಲ್ಲೊಂದು. ಅಷ್ಟೇ ಏಕೆ ಅಪಶಕುನದ ಹಕ್ಕಿಯಾಗಿಯೂ ಕೇಡುತನದ ಜೀವಿ ಎಂಬಂತೆ ಹಲವು ಬಾರಿ ಬಿಂಬಿತವಾಗಿದೆ. ಮನೆಯೊಳಗೆ ಅಪ್ಪಿತಪ್ಪಿ ಪ್ರವೇಶವಾದದ್ದಾದರೆ ಅದು ಕೇಡುಗಾಲವೆಂದು ಆರು ತಿಂಗಳು ಮನೆ ಖಾಲಿ ಮಾಡುವುದು ಇದೆ. ಇದಲ್ಲದೇ ಹೊರಗಡೆ ಓಡಾಡುವಾಗ ಕಾಗೆ ನೆತ್ತಿ ಬಡಿದು ಹೋದರೆ ಆ ವ್ಯಕ್ತಿಯ ಸಾವಿನ ಸುಳ್ಳು ಸುದ್ಧಿ ಹಬ್ಬಿಸಿ ಪಾರು ಮಾಡುವುದು ವಾಡಿಕೆಯಾಗಿ ಬೆಳೆದು ಬಂದಿದೆ. ಆದರೆ ಈ ಎಲ್ಲ ಸತ್ಯ ಮಿಥ್ಯಗಳ ಹಾಗೂ ಪವಿತ್ರ ಅಪವಿತ್ರಗಳ ತೊಳಲಾಟದಲ್ಲಿ ನಮ್ಮ ಜಾನಪದರ ಹಾಗೂ ಪುರಾತನರ ಜೀವನದ ಒಂದು ಭಾಗವೆಂಬಂತೆ ಹಾಸುಹೊಕ್ಕಾಗಿ ಆಪ್ತತೆ ಹೊಂದಿದ ಈ ನತದೃಷ್ಟ ಪಕ್ಷಿಗಳು ಇಂದು ಮರೆಯಾಗುತ್ತಿವೆ.





 ಕರ್ಕಶ ದನಿಯ ಈ ಕಪ್ಪು ಬಣ್ಣದ ಕಾಗೆಗಳು ನಿಕೃಷ್ಟವೆಂಬಂತೆ ರೂಢಿಯಲ್ಲಿ ಬೆಳೆದು ಬಂದಿವೆ. ಆದರೆ ಅವುಗಳಿಂದಾಗುವ ಅನುಕೂಲಗಳು ಹಲವು. ರೈತನ ಹೊಲದ ಕ್ರಿಮಿಕೀಟಗಳನ್ನು ಭಕ್ಷಿಸಿ ನೆರವಾಗುತ್ತವೆ. ಆಹಾರದ ಯಾವುದೇ ಮಡಿವಂತಿಕೆ ಇವಕ್ಕಿಲ್ಲ. ಸಿಕ್ಕಿದ್ದನ್ನೇಲ್ಲ ತಿನ್ನುವ ಇವು ಹುಳು ಹುಪ್ಪಡಿಗಳು, ತರಕಾರಿ, ಕಾಳುಕಡಿ ತ್ಯಾಜ್ಯ ಪದಾರ್ಥಗಳು, ಮಾಂಸ ಭಕ್ಷಗಳು, ಸತ್ತ ಜೀವಿಯ ದೇಹದ ತುಣುಕುಗಳು ಎಲ್ಲ ತಿನ್ನುವ ಇವು ಪರಿಸರದ ಶುಚಿಕಾರರಾಗಿ ತೋರುತ್ತವೆ. ಹಾಗೇ ಕೆಲ ಸಾರಿ ರೈತನಿಗೆ ಬೇಸರವನ್ನು ತರಿಸಿ ಫಸಲು ಹಾಳು ಮಾಡುವುದು ಇದೆ.


ಮನೆ ಕಾಗೆಯ ಬಗ್ಗೆ ಚರ್ಚಿಸುವ ಹೊತ್ತಿನಲ್ಲಿ ಅವುಗಳ ಒಡನಾಟದ ಸುಳಿವು ಸಿಗುತ್ತಿಲ್ಲವೆಂಬ ಕೊರಗು ಇತ್ತಿತ್ತಲಾಗಿ ಹೆಚ್ಚು ಕಾಡುತ್ತಿದೆ. ಒಂದು ಕಾಲದಲ್ಲಿ ಮಾನವನಷ್ಟೇ ಕಾಗೆಗಳ ಸಂಖ್ಯೆ ಇತ್ತೇನೋ ಅನಿಸುವಷ್ಟು ಹೇರಳತೆ ಇತ್ತು. ಅವುಗಳ ನೈಜ ನಿರ್ಧಿಷ್ಟ ಸಂಖ್ಯೆ ಇಲ್ಲ ಆದರೆ ಅಂದಾಜು ಮಾತ್ರ. ಗಮನಿಸಿದಾಗ ಇಂದಿನ ಸಂಖ್ಯೆ ಕಳವಳಕಾರಿಯಾಗಿದೆ. ನಮ್ಮ ಮಕ್ಕಳು ಕಾಗೆ ಕಾಗೆ ಕವ್ವ. .., ಯಾರ ಬಂದಾರವ್ವ ಎಂದು ಹಾಡುವುದು ಮಾತ್ರ ಇಂದು ಕೇಳುತ್ತಿದೆ. ಅವುಗಳನ್ನು ಚೆನ್ನಾಗಿ ಸನಿಹದಿಂದ ನೋಡಿ ಅನುಭವಿಸುವ ಕಾಲ ಇಲ್ಲವಾಗುತ್ತಿದೆ ಏನೋ ಅನಿಸುತ್ತದೆ. ಕಾರಣ ನಮ್ಮ ನಗರೀಕರಣ ಹಾಗೂ ಬದಲಾದ ಜೀವನಶೈಲಿಯಿಂದಾಗಿ ಅವುಗಳ ವಾಸನೆಲೆಗಳ ಅವನತಿಯಾಗುತ್ತಿವೆ. ಅವುಗಳಿಗೆ ಸೂಕ್ತ ಗಿಡಮರಗಳ ಹಸಿರು ಪರಿಸರವಿಲ್ಲದೇ ಬನಗುಡುತ್ತಿವೆ. ಹಾಗಾಗಿ ನಾವಿಂದು ಕಾಗೆ ಕಾಗೆ ಕವ್ವ... ಎಲ್ಲಿ ಹೋದಿಯವ್ವ... ಎಂದು ಹೇಳಬೇಕಾಗಿದೆ. 

ಆಕರಗಳು :

ಕರ್ನಾಟಕದ ಪಕ್ಷಿಗಳು – ಅರ್ಲಿ ಬರ್ಡ ಕೈಪಿಡಿ

ಸಾಮಾನ್ಯ ಪಕ್ಷಿಗಳು- ಸಲೀಂ ಅಲಿ, ಅಯಿಬ್ ಫತೇಅಲಿ

ಹಂಪಿಜೀವಜಾಲ ಜಾನಪದ –ಮೊಗಳ್ಳಿ ಗಣೇಶ

ಜಾಲತಾಣ

                                      

   














1 comment:

  1. ಕಾಗೆ ಬಗ್ಗೆ ಕಳಕಳಿಯುಕ್ತ ಲೇಖನ, ನಾವು ಗಮನಿಸಿದ್ದೇವೆ. ಕಾರಣಗಳು ಮತ್ತು ಪರಿಹಾರ ಉಪಾಯಗಳ ಬಗ್ಗೆ ಏನಾದರು ಮಾಹಿತಿ ಇದ್ದಿದ್ದರೆ ಚನ್ನಾಗಿತ್ತು.

    ReplyDelete