ವಿಜ್ಞಾನ ಲೋಕದ ನ್ಯೂಕ್ಲಿಯಸ್ ಈತ!!!
ರಾಮಚಂದ್ರ ಭಟ್ ಬಿ.ಜಿ.
ಅದೊಂದು ದಿನ ತರಗತಿಯಲ್ಲಿ ಪರಮಾಣು ರಚನೆಯ ಬಗ್ಗೆ ತಿಳಿಸಿಕೊಡುತ್ತಿದ್ದೆ. ಅನೀರೀಕ್ಷಿತವಾಗಿ” ಸರ್ ಕಣ್ಣಿಗೇ ಕಾಣದ ಪರಮಾಣುವಿನಲ್ಲಿ ಅದಕ್ಕಿಂತಲೂ ಅತಿಚಿಕ್ಕ ಬೀಜಕೇಂದ್ರ ಇರೋದು ಹೇಗೆ ಗೊತ್ತಾಗುತ್ತೆ ಸರ್? ಇದನ್ನು ನಾವು ನಂಬೋದು ಹೇಗೆ ಸರ್?” ಎಂಬ ಕುತೂಹಲದ ಪ್ರಶ್ನೆಯ ಕೂರಂಬೊಂದು ನನ್ನೆಡೆಗೆ ತೂರಿ ಬಂತು. ಜೆ.ಜೆ.ಯ ಕತೆ ಮುಂದುವರೆದು ಆತನ ಅತಿ ಪ್ರಿಯಶಿಷ್ಯನೆನಿಸಿದ ಮತ್ತೊಬ್ಬ ಪ್ರತಿಭೆಯ ಜೀವನ ದರ್ಶನಕ್ಕೆ ಕಾರಣವಾಯಿತು.
"ಪರಮಾಣು ಭೌತಶಾಸ್ತ್ರದ ಪಿತಾಮಹ" ಎಂದೇ ಹೆಸರಾದ, "ಮೈಕೆಲ್
ಫ್ಯಾರಡೆಯ ನಂತರದ ಶ್ರೇಷ್ಠ ಪ್ರಯೋಗತಜ್ಞ (experimental physicist) " ಎಂಬ ಹೊಗಳಿಕೆಗೆ ಪಾತ್ರರಾದ ಇವರು
ವಿಕಿರಣಪಟುತ್ವದಿಂದ ಧಾತುಗಳು ದ್ರವ್ಯಾಂತರಣಗೊಳ್ಳುತ್ತವೆ ವಿಘಟನೆ (disintegrate)ಗೊಳ್ಳುತ್ತವೆ ಎನ್ನುವುದನ್ನು
ಕಂಡುಹಿಡಿದರು. ವಿಕಿರಣಪಟು ಧಾತುಗಳ ವಿಶಿಷ್ಟ
ಗುಣವಾದ ಅರ್ಧಾಯುಷ್ಯವನ್ನು ಕಂಡುಹಿಡಿದಿದ್ದು ಕೂಡ ಇದೇ ಮಹಾನ್
ವಿಜ್ಞಾನಿ. ಇದರಿಂದಾಗಿ ಭೂಮಿಯ ಆಯಸ್ಸನ್ನು ನಿಖರವಾಗಿ ಲೆಕ್ಕಾಚಾರ ಹಾಕುವುದು
ಸಾಧ್ಯವಾಯಿತು!! ಅಚ್ಚರಿ ಎಂದರೆ ಇದಕ್ಕಾಗಿ ಅವರು ಬಳಸಿದ್ದು ಸಿಗರೇಟ್ ಪ್ಯಾಕ್ ಮತ್ತು ಟಿನ್ ಕ್ಯಾನ್‌ಗಳು ಎನ್ನುವುದೇ ಅಚ್ಚರಿ!!! ಇವೆಲ್ಲವುಗಳಿಗೆ ಮುಕುಟವಿಟ್ಟಂತಹ ಎಂದರೆ ನ್ಯೂಕ್ಲಿಯಸ್‌ನ ಆವಿಷ್ಕಾರ. ಇವರ ಪರಿಚಯ ಈಗ ನಿಮಗೆ ಸಿಕ್ಕಿರಬೇಕು.
ಅವರೇ ಉತ್ಕೃಷ್ಟ ಸಂಶೋಧನೆಗಳ ಸರದಾರ ಎನಿಸಿದ ರುದರ್ ಫೋರ್ಡ್.
ಇಂತಹ
ಅದ್ಭುತ ವಿಜ್ಞಾನಿಯ ಜೀವನಯಾನ ಅತ್ಯಂತ ಕುತೂಹಲಕಾರವಾದದ್ದು, ಅದ್ಭುತವಾದದ್ದು
ರೋಚಕವಾದುದ್ದು ಮತ್ತು ಸ್ಫೂರ್ತಿದಾಯಕ ಎನಿಸುವಂತದ್ದು.
ಅರ್ನೆಸ್ಟ್
ರುದರ್ ಫೋರ್ಡ್ 1871 ರ ಆಗಸ್ಟ್ 30 ರಂದು ನ್ಯೂಜಿಲ್ಯಾಂಡ್‍ನ ನೆಲ್ಸನ್ ಎಂಬ ಊರಿನಲ್ಲಿ
ಜನಿಸಿದರು. 12 ಮಕ್ಕಳ ದೊಡ್ಡ
ಕುಟುಂಬದಲ್ಲಿ ಹುಟ್ಟಿದ ರುದರ್ಫೋರ್ಡ್ ತನ್ನ ತಂದೆಗೆ ನಾಲ್ಕನೆಯ ಮಗು. ತಂದೆ ಜೇಮ್ಸ್ ರುದರ್
ಫೋರ್ಡ್, ಸ್ಕಾಟಿಶ್ ಬಡ ರೈತ. ತಾಯಿ ಮಾರ್ತಾ ರುದರ್ ಫೋರ್ಡ್,
ಇಂಗ್ಲಿಷ್ ಶಿಕ್ಷಕಿ. ಬಾಲ್ಯದಲ್ಲಿ ತುಂಟನಾಗಿದ್ದ ಹಳ್ಳಿಯ ಈ ಬಾಲಕ ಒರಟನೂ
ಹೌದು. ಆತನಿಗೆ ರಗ್ಬಿ ಮತ್ತು ಮೀನು ಹಿಡಿಯುವುದೆಂದರೆ ಪಂಚಪ್ರಾಣ.
ಜನನಿ ತಾನೇ ಮೊದಲ ಗುರುವು ಎಂಬಂತೆ, ತಾಯಿಯೇ ಆತನ ಮೊದಲ ಗುರು.ಆತನಿಗೆ ಪದೇ ಪದೇ ನೀಡುತ್ತಿದ್ದ
ಉಪದೇಶ “ಜ್ಞಾನವೇ ಶಕ್ತಿ”
ಎನ್ನುವುದು. ಮೊದಲಿನಿಂದಲೂ ಆತ ಕಲಿಕೆಯಲ್ಲಿ ಮುಂದಿದ್ದ. “ಹಣವಿಲ್ಲದ ನಾವು
ಸದಾ ಆಲೋಚನೆಯನ್ನೇ ಮಾಡಬೇಕು” ಎಂದು ಹೇಳುತ್ತಿದ್ದ. ಇದು ಆತನ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಬಡತನದ ಜೊತೆಗಿನ ಈ ತುಂಬು ಕುಟುಂಬದ ಬದುಕು ಹಣವಿಲ್ಲದಿದ್ದರೂ ಬದುಕುವುದನ್ನು ಕಲಿಸಿತು. ಹೀಗಾಗಿ ಶಿಷ್ಯವೇತನವನ್ನೇ ಅವಲಂಬಿಸಿ ಮಾಸ್ಟರ್ ಡಿಗ್ರಿಯವರೆಗೂ ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ.
ಇಂಥ ರುದರ್‌ಫೋರ್ಡರ ಜೀವನಕ್ಕೆ ತಿರುವು ಸಿಕ್ಕಿದ್ದು ಜುಲೈ 1895ರಲ್ಲಿ ಮೆಕ್ಲಾರೆನ್ ಎಂಬಾತ ಮದುವೆಯಾದಾಗ!!! ಆ ಮದುವೆಗೂ ಈ ರುದರ್ ಫೋರ್ಡರ ಬದುಕಿಗೂ ಏನು ಸಂಬಂಧ? ಎತ್ತಣ ಮಾಮರ? ಎತ್ತಣ ಕೋಗಿಲೆ? ಎಂದು
ಯೋಚಿಸುತ್ತಿದ್ದೀರಾ? ಅದು ಮೆಕ್ಲಾರೆನ್‌ರ
ದುರಾದೃಷ್ಟವೋ ರುದರ್ಫೋರ್ಡರ ಅದೃಷ್ಟವೋ ಹೇಳಲಾಗದು. ಮೆಕ್‌ಲಾರೆನ್‌ಗೆ
ವಿದೇಶದಲ್ಲಿ ಅಧ್ಯಯನಕ್ಕೆ ಹೋಗಲು ಸ್ಕಾಲರ್ಶಿಪ್ ದೊರಕಿತ್ತು. ಮದುವೆಯಿಂದಾಗಿ ಈ ಶಿಷ್ಯವೇತನ ಅಮಾನ್ಯಗೊಂಡಿತು!!!
ಆಗ 24ರ ಹರೆಯದ ರುದರ್
ಫೋರ್ಡರು 1894ರಲ್ಲಿ 1851ರಾಯಲ್
ಎಕ್ಸಿಬಿಷನ್ ರಿಸರ್ಚ್ ಫೆಲೋಶಿಪ್ ( 1851 Exhibition Science Scholarship) ಶಿಷ್ಯವೇತನಕ್ಕೆ ಆಯ್ಕೆಯಾದರು. ಈ ಸುದ್ದಿ ಬಂದಾಗ ರುದರ್ ಫೋರ್ಡರು ಹೊಲದಲ್ಲಿ ಸನಿಕೆಯಿಂದ ಆಲೂಗಡ್ಡೆ
ಕೀಳುತ್ತಾ ಇದು ನಾನು ತೆಗೆಯುವ ಕೊನೆಯ ಆಲೂಗಡ್ಡೆ ಎಂದು ಜೋರಾಗಿ ಕಿರುಚುತ್ತ ಹೇಳಿದರಂತೆ!!
ಅತ್ಯಂತ ಪ್ರತಿಭಾವಂತನಾಗಿದ್ದ ಈತನಿಗೆ
ಇಂಜಿನಿಯರಿಂಗ್ ವೃತ್ತಿ ಕೈಬೀಸಿ ಕರೆಯುತ್ತಿತ್ತು. ಆದರೆ ಇಂಜಿನಿಯರಿಂಗ್
ನಲ್ಲಿ ಆತನಿಗೆ ಆಸಕ್ತಿಯೇ ಇರಲಿಲ್ಲ. ಆಗ ನ್ಯೂಜಿಲ್ಯಾಂಡ್
ದೇಶದಲ್ಲಿದ್ದ ಇಂಜಿನಿಯರ್‌ಗಳ ಸಂಖ್ಯೆ ಕೇವಲ 126!!! ಮನಸ್ಸು ಮಾಡಿದ್ದಿದ್ದರೆ
ಇಂಜಿನಿಯರ್ ಆಗಿ ಕೈ ತುಂಬಾ ಸಂಪಾದನೆ ಮಾಡಬಹುದಾಗಿತ್ತು. ಇದನ್ನು ಒಲ್ಲದ ರುದರ್ ಫೋರ್ಡ್ ಶಾಲಾ
ಶಿಕ್ಷಕನಾಗಲು ಬಯಸಿದರು!!! ಆದರೆ ನಿಯತಿ ಬೇರೆಯದೇ ಆಗಿತ್ತು. ಶಿಕ್ಷಕನಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ತರುವುದರಲ್ಲಿ ಆತ
ವಿಫಲನಾದ!! ತರಲೆ ವಿದ್ಯಾರ್ಥಿಗಳೊಂದಿಗಿನ ಸಮಸ್ಯೆಯಿಂದ ಬೇಸತ್ತು ಕೊನೆಗೆ ಈ ವೃತ್ತಿಗೇ ಶರಣು ಹೊಡೆದ.
ಕಾಲೇಜು ಹಾಸ್ಟೆಲ್ ನಲ್ಲಿ ಇರುತ್ತಿದ್ದ ರುದರ್ ಫೋರ್ಡ್ ಮೇರಿ ನ್ಯೂಟನ್ ಎಂಬ ತರುಣಿಯೊಂದಿಗೆ
ಅನುರಕ್ತನಾದ. ಈಕೆ ಕಾಲೇಜಿನ ಬೋರ್ಡಿಂಗ್ ಹೌಸಿನ ಒಡತಿಯ ಮಗಳು. ಈಕೆಯ ಪ್ರೇಮಪಾಶದಿಂದ ಬಂಧಿತನಾದ
ಚಿಗುರು ಮೀಸೆಯ ಚೆಲುವಾಂತ ಚೆನ್ನಿಗ ರುದರ್ ಫೋರ್ಡ್ 1894ರಲ್ಲಿ
ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಆದರೆ ಆಕೆಯಿಂದ ದೊರೆತ ಉತ್ತರ ಆತನ ಕೋಮಲ
ಹೃದಯವನ್ನು ಹಿಂಡಿ ಹಿಪ್ಪೆ ಮಾಡಿತು. ಮೇರಿಗೆ ತನ್ನಿನಿಯನ ಮೇಧಾ ಶಕ್ತಿಯಲ್ಲಿ
ಅಪಾರ ನಂಬಿಕೆ ಇತ್ತು. ತನ್ನಿಂದಾಗಿ ಆತನ ಶೈಕ್ಷಣಿಕ ಭವಿಷ್ಯ
ಕಮರುವುದು ಆಕೆಗೆ ಒಂದಿನಿತೂ ಇಷ್ಟವಿರಲಿಲ್ಲ. " ಮದುವೆಯ ಬಂಧಕ್ಕೆ
ಒಳಗಾಗುವುದು ಮೂರ್ಖತನ " ಎಂದು ಹೇಳಿ ಆತನನ್ನು ಮದುವೆಯಾಗಲು
ನಿರಾಕರಿಸಿದಳು!!! ಇದು ಆತನ ಭವಿಷ್ಯಕ್ಕೆ ನೂತನ ಅವಕಾಶವೊಂದರ ಬಾಗಿಲು ತೆರೆಸಿತು. ತನ್ನ ಪ್ರೇಮ ಪ್ರಕರಣ ಹೀಗೆ ವಿಫಲಗೊಂಡದ್ದು ಆತನಿಗೆ ಇನ್ನಿಲ್ಲದ
ನೋವು ತಂದಿತು. ಪರಿಪರಿಯಾಗಿ ಬೇಡಿದರೂ ಮೇರಿ ಒಪ್ಪಲಿಲ್ಲ. ಕೊನೆಗೆ ನಿನ್ನ ಶಿಕ್ಷಣ
ಪೂರ್ಣಗೊಂಡು ಉತ್ತಮ ಉದ್ಯೋಗ ದೊರೆಯುವವರೆಗೂ ನಾನು ನಿನಗಾಗಿಯೇ ಕಾಯುತ್ತೇನೆ ಎನ್ನುವ ಭರವಸೆಯನ್ನು ಕೊಟ್ಟಳು. ಅಂತೂ ಆಶಾಕಿರಣವೊಂದು
ಚಿಗುರಿತು. ತನ್ನ ಸ್ವಾರ್ಥಕ್ಕಿಂತ ಇನಿಯನ ಬದುಕಿನ ಯಶಸ್ಸಿಗೆ ಆಕೆ ಮಾಡಿದ ಈ ತ್ಯಾಗ
ಮರೆಯಲಾಗದ್ದು. ಪ್ರಪಂಚಕ್ಕೆ ಒಬ್ಬ ಅದ್ಭುತ ವಿಜ್ಞಾನಿಯನ್ನು ನೀಡಲು
ಹೇತುವಾಯ್ತು. ಮಂದೆ ರುದರ್ಫೋರ್ಡ್ ಏರಿದ ಎತ್ತರವನ್ನು ಗಮನಿಸಿದರೆ ತ್ಯಾಗಮಯಿ ಮಮತಾಮಯಿ ಮೇರಿಯ
ಅಪ್ಪಟ ಚಿನ್ನದಂತಹ ಗುಣ ಎಷ್ಟು ಉದಾತ್ತವಾಗಿತ್ತು ಎನ್ನುವುದು ವೇದ್ಯವಾಗುತ್ತದೆ.
ಈ
ಶಿಷ್ಯವೇತನದಿಂದಾಗಿ ಆತ ಪ್ರಪಂಚದ ಯಾವುದೇ ಮೂಲೆಗೂ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವ ಅವಕಾಶವೊಂದು ಲಭ್ಯವಾಯಿತು. ಈ ಅವಕಾಶವೇ ಆತನನ್ನು
ಕೇಂಬ್ರಿಡ್ಜ್ ನ ಕ್ಯಾವೆಂಡಿಷ್ ಲ್ಯಾಬೋರೇಟರಿಯ
ಮುಖ್ಯಸ್ಥನಾಗಿದ್ದ ಮಹಾನ್ ವಿಜ್ಞಾನಿ ಜೆ.ಜೆ. ಥಾಮ್ಸನ್ ರವರ ಸಂಪರ್ಕಕ್ಕೆ ಬರುವಂತೆ ಮಾಡಿತು. ಜೆ ಜೆ ಯವರ ಸಾಧನೆಯನ್ನು ನನ್ನ ಹಿಂದಿನ ಲೇಖನದಲ್ಲಿ ಓದಿದ್ದೀರಿ. ಪ್ರೊಫೆಸರ್ ಜೆ.ಜೆ.ಯವರ ಪ್ರೀತಿ, ಗೌರವಗಳಿಗೆ ಪಾತ್ರನಾದ ರುದರ್‌ಫೋರ್ಡರ ಬದುಕಿನ ಗ್ರಾಫ್ ಏರು ಗತಿಯಲ್ಲಿ ಸಾಗುವುದರಲ್ಲಿತ್ತು. ರುದರ್ಫೋರ್ಡರಿಗೆ ಜೆ.ಜೆ.ಯವರನ್ನು ನೋಡುತ್ತಿದ್ದಂತೆ, “
ಈತ ಪಳೆಯುಳಿಕೆಯಂತಿಲ್ಲ!! ಸದಾ ಕ್ರಿಯಾಶೀಲ ಮತ್ತು
ಸೂಕ್ತ ಮಾರ್ಗದರ್ಶನ ನೀಡುವ ನಿಜವಾದ ಗುರು” ಎನ್ನುವ ಭಾವವೊಂದು ಮನಸ್ಸಿನಲ್ಲಿ ಮೂಡಿತಂತೆ!!. ಬಹುಶಃ ರಾಮಕೃಷ್ಣ ಪರಮಹಂಸರನ್ನು
ವಿವೇಕಾನಂದರು ಪರೀಕ್ಷಿಸಿದಂತೆ ಈತನೂ ತನ್ನ ಗುರುವಿನ ವ್ಯಕ್ತಿತ್ವವನ್ನು
ಪರೀಕ್ಷಿಸಿದನೇನೋ?
ಸರಿಯಾದ ಸಮಯಕ್ಕೆ ಇಂಗ್ಲೆಂಡಿಗೆ ಬಂದ ರುದರ್ ಫೋರ್ಡ್ರನ್ನು ಅವಕಾಶಗಳ ಮಹಾಪೂರವೇ ಕಾಯುತ್ತಿತ್ತು. ಆಗ ತಾನೇ ಕ್ಷ-ಕಿರಣದ ಆವಿಷ್ಕಾರವಾಗಿತ್ತು. ವಿಲಿಯಂ
ಕ್ರೂಕ್ಸ್ ರವರ ನಿರ್ವಾತ ನಳಿಕೆಗಳನ್ನು ಅತ್ಯುಚ್ಛ ಶಕ್ತಿಯ ಪ್ರಬಲ ಕ್ಷ-ಕಿರಣಗಳನ್ನು ಉತ್ಪಾದಿಸಲು ಬಳಸುತ್ತಿದ್ದರು. ರುದರ್ ಇದನ್ನು
ಬಳಸಿ ರೇಡಿಯೋ ಸಿಗ್ನಲ್ಗಳ ಬಗ್ಗೆ ಅಧ್ಯಯನ ನಡೆಸಲಾರಂಭಿಸಿದರು. ಥಾಮ್ಸನ್‌ನ ಪ್ರೋತ್ಸಾಹದೊಂದಿಗೆ, ರುದರ್‌ಫೋರ್ಡ್ ನಿಸ್ತಂತು ಸಂವಹನಕ್ಕಾಗಿ ರೇಡಿಯೋ ತರಂಗಗಳನ್ನು ಉತ್ಪಾದಿಸಿದರು. 1896 ರಲ್ಲಿ ಬ್ರಿಟಿಷ್ ಅಸೋಸಿಯೇಷನ್‌ನ ಸಭೆಯಲ್ಲಿ ತನ್ನ
ಫಲಿತಾಂಶಗಳನ್ನು ಪ್ರಸ್ತುತಪಡಿಸಿದಾಗ 800 ಮೀ ಸಾಗುವ ರೇಡಿಯೊ
ತರಂಗಗಳನ್ನು ಪ್ರದರ್ಶಿಸಿದರೆ, ಗುಗ್ಲಿಯೆಲ್ಮೊ ಮಾರ್ಕೋನಿಯ ರೇಡಿಯೊ ತರಂಗಗಳು ಸುಮಾರು 16 ಕಿಮೀಗಳವರೆಗೆ ಸಂದೇಶವನ್ನು ಕಳುಹಿಸಿದವು. ಇದು ಮುಂದೆ ಮಾರ್ಕೊನಿಗೆ ನೊಬೆಲ್ ಪ್ರಶಸ್ತಿ ತಂದು ಕೊಟ್ಟಿತು.
ಅದೇ ಸಂದರ್ಭದಲ್ಲಿ ಹೆನ್ರಿ ಬೆಕ್ವೆರೆಲ್ ಯುರೇನಿಯಂನಂತಹ ಭಾರಧಾತುವು ನಿರ್ದಿಷ್ಟ ವಿಕಿರಣಗಳನ್ನು
ಹೊರಹೊಮ್ಮಿಸುವ ವಿದ್ಯಮಾನವಾದ ವಿಕಿರಣ ಪಟುತ್ವವನ್ನು ಆಕಸ್ಮಿಕವಾಗಿ
ಕಂಡುಹಿಡಿದರು. 1897ರಲ್ಲಿ ಫ್ರಾನ್ಸ್‌ನಲ್ಲಿದ್ದ ಪೋಲ್ಯಾಂಡ್ ದೇಶದ ಮೇರಿ ಕ್ಯೂರಿಯೂ ಯುರೇನಿಯಂ ಧಾತುವನ್ನು ಅಧ್ಯಯನ ಮಾಡುತ್ತಿದ್ದರು.
ಮೇರಿಕ್ಯೂರಿಯವರು ಥೋರಿಯಂನಿಂದಲೂ ಕೂಡ ಇದೇ ಬಗೆಯ ವಿಕಿರಣಗಳನ್ನು ಹೊರಹೊಮ್ಮುವುದನ್ನು
ಕಂಡುಕೊಂಡರು. ಇದರಿಂದ ಉತ್ತೇಜಿತರಾದ ರುದರ್ಫೋರ್ಡ್‌ರವರ ಆಸಕ್ತಿ ಆ ಕಡೆ ಹರಿಯಿತು. ಈ ವಿಕಿರಣಪಟು ವಿಕಿರಣಗಳು ಅನಿಲಗಳ ಮೇಲೆ ಯಾವ
ಪ್ರಭಾವ ಬೀರುತ್ತವೆ ಎನ್ನುವ ಕುರಿತು ತಮ್ಮ ಅಧ್ಯಯನವನ್ನು
ಮುಂದುವರಿಸಿದ್ದರು. 1998ರ ಸೆಪ್ಟೆಂಬರ್ 1 ರಂದು ರುದರ್ ಫೋರ್ಡರು ತಮ್ಮ
ಸಂಶೋಧನೆಯನ್ನು ಪ್ರಕಟಿಸಿದರು. ವಿಕಿರಣಪಟು ಧಾತುಗಳಿಂದ ಹೊರಹೊಮ್ಮುತ್ತಿದ್ದ ಎಲ್ಲ ವಿಕಿರಣಗಳ ಗುಣ ಸ್ವಭಾವಗಳು ಒಂದೇ
ತೆರನಾಗಿರಲಿಲ್ಲ. ಅವುಗಳಲ್ಲಿ
ಭಾರವಾದ ಆಲ್ಫಾಕಿರಣಗಳು ಮತ್ತು ಹಗುರವಾದ ಬೀಟಾ ಕಿರಣಗಳೆಂಬ ೨ ವಿಧಗಳನ್ನು ಗುರುತಿಸಿದರು. ಅಲ್ಫಾ ಕಣಗಳು ಅತಿ
ತೆಳುವಾದ ಹಾಳೆಗಳ ಮೂಲಕ ಹಾದುಹೋದರೆ ಬೀಟಾ ಕಣಗಳು ಹೆಚ್ಚಿನ ದಪ್ಪ
ಹಾಳೆಗಳ ಮೂಲಕ ಹಾದು ಹೋಗುತ್ತದೆ ಎನ್ನುವುದನ್ನು ಕಂಡುಕೊಂಡರು. ಮರು
ವರ್ಷವೇ ಪಾಲ್ ವಿಲ್ಲಾರ್ಡ್ ಎನ್ನುವರು ಇನ್ನೂ ಹೆಚ್ಚಿನ ಶಕ್ತಿಯ ವಿಕಿರಣಗಳನ್ನು ಸಂಶೋಧಿಸಿದರು. ರುದರ್ ಫೋರ್ಡರು ಅದಕ್ಕೆ ಗ್ಯಾಮಾ ವಿಕಿರಣಗಳು ಎಂಬ ಹೆಸರನ್ನು ನೀಡಿದರು.
ಈ ರೀತಿಯಾಗಿ ಒಂದರ ಮೇಲೊಂದರಂತೆ ಅದ್ಭುತ ಆವಿಷ್ಕಾರಗಳನ್ನು ಮಾಡುತ್ತಿದ್ದರೆ,
ದೂರದ ಕೆನಡಾದಲ್ಲಿ ಅವರನ್ನು ಪ್ರೊಫೆಸರ್ ಹುದ್ದೆ ಕಾಯುತ್ತಿತ್ತು. ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ನಿವೃತ್ತರಾದರು. ಆಗ ವಿಶ್ವವಿದ್ಯಾನಿಲಯದ ಇಲಾಖಾ
ಮುಖ್ಯಸ್ಥರುಗಳು ಈ ಹುದ್ದೆಗೆ ಯೋಗ್ಯ ಅಭ್ಯರ್ಥಿಯನ್ನು ಶಿಫಾರಸು ಮಾಡುವಂತೆ ಜೆ.ಜೆ
ಥಾಮ್ಸನ್ ರವರನ್ನು ಪತ್ರ ಮುಖೇನ ಕೋರಿದರು. ಜೆ.ಜೆ.ಯವರ ಪತ್ರ
ತಮ್ಮ ಪ್ರಿಯ ಶಿಷ್ಯನ ರುದರ್ ಫೋರ್ಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಪತ್ರದಲ್ಲಿ ಅವರು “ನನ್ನೊಬ್ಬ ಶಿಷ್ಯನಿದ್ದಾನೆ. ಸಂಶೋಧನಾ ಸಾಮರ್ಥ್ಯದಲ್ಲಿ, ಕ್ರಿಯಾಶೀಲತೆಯಲ್ಲಿ, ಉತ್ಸಾಹದಲ್ಲಿ ರುದರ್‌ಫೋರ್ಡನನ್ನು
ಮೀರಿಸುವ ಇನ್ನೊಬ್ಬ ಅಭ್ಯರ್ಥಿ ನಿಮಗೆ ದೊರಕಲಾರ“ ಎಂದು ಬಣ್ಣಿಸಿ ಶಿಷ್ಯನ ಹೆಸರನ್ನು
ಶಿಫಾರಸು ಮಾಡಿದರು. ಆದರೆ ರುದರ್ ಫೋರ್ಡರಿಗೆ ಅತ್ತ
ಹೋಗುವ ಪೂರ್ಣ ಮನಸ್ಸು ಇರಲಿಲ್ಲ. ಇದರಿಂದ ಇದ್ದ ಸ್ಕಾಲರ್ಶಿಪ್
ಕೈತಪ್ಪಿ ಹೋಗುವ ಭಯವಿತ್ತು. ಜೊತೆಗೆ
ಅಲ್ಲಿಗೆ ಹೋಗುವ ಆಸಕ್ತಿಯೂ ಇತ್ತು!!!. ಏಕೆಂದರೆ, ತನಗಾಗಿ
ಕಾಯುತ್ತಿರುವ ಗೆಳತಿ ಮೇರಿಯನ್ನು ಮದುವೆಯಾಗುವ ಅವಕಾಶವೂ ಇತ್ತು. ಕೊನೆಗೂ ಈ ಹುದ್ದೆಗೆ ಒಪ್ಪಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಮೆಕ್‌ಗಿಲ್ ವಿಶ್ವವಿದ್ಯಾಲಯವನ್ನು ಸೇರಿದರು. ತಮ್ಮ
ಭಾವೀ ಪತ್ನಿಗೆ ಪತ್ರ ಬರೆದು ಈ ಸಂತಸದ ಸುದ್ದಿಯನ್ನು ತಿಳಿಸಿದರು. ಆದರೆ, ಹಣದ
ಅಡಚಣೆಯಿಂದಾಗಿ ಮದುವೆಗೆ ಮತ್ತೂ ಒಂದುವರೆ ವರ್ಷ ಕಾಯಬೇಕಾಯಿತು.
ಕೊನೆಗೂ 1900 ರಲ್ಲಿ ತಮ್ಮ ಮನದನ್ನೆಯನ್ನು ವರಿಸಿದರು .
ಅದು ಅವರ ಸಂಶೋಧನೆ ತುರೀಯಾವಸ್ಥೆಯಲ್ಲಿದ್ದ ಕಾಲ. 1898-1907 ಅವಧಿಯಲ್ಲಿ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ನೂರಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. 1902ರಲ್ಲೇ 14 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ತಮ್ಮ ಸಂಶೋಧನಾ ಪ್ರವೃತ್ತಿಯಿಂದ ಯುವ ಸಮೂಹವನ್ನು ಆಕರ್ಷಿಸಿದರು. ಹಾಗೂ ಅವರೇ ಉತ್ತಮ ಮಾರ್ಗದರ್ಶನ ನೀಡಿ ತಮ್ಮ ವಿದ್ಯಾರ್ಥಿಗಳ ಸಂಶೋಧನೆಗಳ ಗೌರವವನ್ನು ಅವರಿಗೇ ನೀಡಿದರು. ಇದು ಸಂಶೋಧನಾ ಕ್ಷೇತ್ರದಲ್ಲಿ ದುರ್ಲಭವಾದ ಅತಿ ದೊಡ್ಡ ಗುಣ. ಅಂದಿನ ದಿನಗಳಲ್ಲಿ ಮಹಿಳಾ ವಿಜ್ಞಾನಿಗಳು ಅಪರೂಪ. ತಮ್ಮ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಒದಗಿಸಿ ಅನೇಕ ಮಹಿಳಾ ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದರು. ಕೆನಡಾದಲ್ಲಿ ಫ್ರೆಡರಿಕ್ ಸಾಡಿ (1877-1965) ಎಂಬ ಕಿರಿಯ ಸಹೋದ್ಯೋಗಿಯ ಜೊತೆ ಸಂಶೋಧನೆಗೈದು ಯುರೇನಿಯಮ್ ಹೊರಹೊಮ್ಮಿಸುವ ಉಷ್ಣಶಕ್ತಿಯ ಕಾರಣವಾಗಿ ಸಂಭವಿಸುವ ಪರಮಾಣವಿನ ವಿಘಟನೆ ಕುರಿತ ಸಿದ್ಧಾಂತವನ್ನು ಮಂಡಿಸಿದರು.
ಓವನ್ಸ್ ತನ್ನ ಪ್ರಯೋಗವೊಂದರಲ್ಲಿ ಥೋರಿಯಂ ಆಕ್ಸೈಡ್ ನಿಂದ ಹೊರಬರುವ ವಿಕಿರಣಗಳು ಗಾಳಿಯಿಂದ
ಹೊಯ್ದಾಡುವ ವಿಚಿತ್ರವಾದ ವರ್ತನೆಯನ್ನು ಗಮನಿಸಿದರು. ಗಾಳಿಯ
ಪ್ರಭಾವಕ್ಕೆ ಒಳಗಾಗದ ವಿಕಿರಣಗಳ ಈ ವರ್ತನೆ ಅಚ್ಚರಿಯನ್ನು ಉಂಟು
ಮಾಡಿತು. ಇದಕ್ಕೆ ಕಾರಣ ತಿಳಿಯಲಿಲ್ಲ. ಇದನ್ನು ಅಧ್ಯಯನ ಮಾಡಿದ ರುದರ್ಫೋರ್ಡ್, ಇದು
ಥೋರಿಯಂ ಆಕ್ಸೈಡ್ ನಿಂದ ಹೊರಬಂದದ್ದು ಅನಿಲವೇ ಹೊರತು ವಿಕಿರಣಗಳಲ್ಲ ಎಂದು ತರ್ಕಿಸಿದರು. ಮುಂದೆ ಇದು ವಿಕಿರಣಪಟು ಧಾತುವಾದ ರೆಡಾನ್ ಎನ್ನುವುದನ್ನು ಕಂಡುಹಿಡಿದರು. ಈ ಅನಿಲವನ್ನು
ಎಲೆಕ್ಟ್ರೋಸ್ಕೋಪಿನ ಮೇಲೆ ಹಾಯಿಸಿದಾಗ ಕೆಲವೇ ನಿಮಿಷಗಳಲ್ಲಿ ತನ್ನ ವಿಕಿರಣಪಟು ಗುಣವನ್ನು
ನಿಲ್ಲಿಸಿತು.!!! ಇದು ಮತ್ತೊಂದು ನಂಬಲಸಾಧ್ಯವಾದ ಅಚ್ಚರಿಯ ಸಂಶೋಧನೆಯಾಗಿತ್ತು.
ಈ ನಿಗೂಢತೆಯ ಹಿಂದೆ ಬಿದ್ದ ರುದರ್ಫೋರ್ಡರಿಗೆ
ವಿಕಿರಣಪಟು ಧಾತುಗಳ ವಿಶಿಷ್ಟ ಗುಣವಾದ ಅರ್ಧಾಯುಷ್ಯದ
ಪರಿಚಯವಾಯಿತು!!
ಅರ್ಧಾಯುಷ್ಯದ ಸಂಶೋಧನೆಯೂ ಹಲವಾರು ರೀತಿಯಲ್ಲಿ ಅದ್ಭುತ ಸಂಶೋಧನೆಯೇ ಆಗಿತ್ತು. ಸಂಶೋಧನೆ ಮುಂದುವರೆಸಿದ ರುದರ್ ಫೋರ್ಡ್ ರವರು ಯುರೇನಿಯಂನ ಅದುರಾದ ಪಿಚ್ ಬ್ಲೆಂಡನ್ನು ಅಧ್ಯಯನ ಮಾಡಿ ಅದರ ವಯಸ್ಸು 700 ಮಿಲಿಯನ್ ಎಂದು ಲೆಕ್ಕ ಹಾಕಿದರು!!. ಇದು ಅದುವರೆಗಿನ ಸಂಶೋಧನೆಯೊಂದನ್ನು ತಲೆಕೆಳಗೆ ಮಾಡಿತು. ಅಲ್ಲಿಯವರೆಗೂ ವಿಜ್ಞಾನಿಗಳು ಭೂಮಿಯ ವಯಸ್ಸನ್ನು ನೂರು ಮಿಲಿಯನ್ ವರ್ಷಗಳೆಂದು ಲೆಕ್ಕ ಹಾಕಿದ್ದರು. ಭೂಮಿಯ ಮೇಲಿನ ಪಿಚ್ ಬ್ಲೆಂಡಿನ ವಯಸ್ಸೇ 700 ಮಿಲಿಯನ್ ಆಗಿದ್ದರೆ, ಭೂಮಿಯ ಆಯಸ್ಸು 1೦೦ ಮಿಲಿಯನ್ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಹಜವಾಗಿಯೇ ಎದ್ದು ಬಿಟ್ಟಿತು. ರುದರ್‌ಫೋರ್ಡರ ಸಂಶೋಧನೆಯಿಂದ ಭೂಮಿಯ ವಯಸ್ಸು 4.5 ಬಿಲಿಯನ್ ವರ್ಷಗಳಷ್ಟು ಹಿಂದಕ್ಕೆ ಒಯ್ದು ಬಿಟ್ಟಿತು. ಈಗ ನಾವು ರುದರ್ ಫೋರ್ಡರ ಲೆಕ್ಕಾಚಾರವನ್ನೇ ಒಪ್ಪಿಕೊಂಡಿದ್ದೇವೆ. ಕೆನಡಾದಲ್ಲಿ ರುದರ್ಫೋರ್ಡರು ವಿಜ್ಞಾನಿಯಾಗಿ ಅಪಾರ ಯಶಸ್ಸನ್ನು ಗಳಿಸಿದರು. ಆದರೆ ದೂರದ ಕೆನಡಾದಲ್ಲಿ ಅವರಿಗೆ ಒಂಟಿತನ ಕಾಡುತ್ತಿತ್ತು. ಮನಸ್ಸು ಪದೇ ಪದೇ ಇಂಗ್ಲೆಂಡಿಗೆ ಹಿಂದಿರುಗಲು ಬಯಸುತ್ತಿತ್ತು. ಕೊನೆಗೂ 19೦7ರಲ್ಲಿ ರುದರ್ಫೋರ್ಡರು ಮ್ಯಾಂಚೆಸ್ಟರಿಗೆ ಹಿಂದಿರುಗಿದರು. ಅಲ್ಲಿ ಸಂಶೋಧನೆ ಮುಂದುವರೆಸಿ ಆಲ್ಫಾಕಣಗಳು ಧನ ವಿದ್ಯುದಾವಿಷ್ಟ ಹೀಲಿಯಂ ಬೀಜಗಳೆಂದು ರುಜುವಾತು ಮಾಡಿದರು. ಈ ಅಯಾನುಗಳನ್ನು ಎಣಿಸಲು ತಮ್ಮ ವಿದ್ಯಾರ್ಥಿಯಾಗಿದ್ದ ಜರ್ಮನ್ ಭೌತವಿಜ್ಞಾನಿ ಹ್ಯಾನ್ಸ್ ಗೈಗರ್ (1882-1945) ಜೊತೆಗೂಡಿ ಗೈಗರ್ ಕೌಂಟರ್ ಎಂಬ ಸಾಧನವನ್ನು ರೂಪಿಸಿದರು. ಈ ಕ್ರಾಂತಿಕಾರಿ ಸಂಶೋಧನೆ ಪರಮಾಣು ಬಗೆಗಿನ ಪರಿಕಲ್ಪನೆಯನ್ನು ಅರಿಯಲು ಕಾರಣವಾಯಿತು. ಆಲ್ಫಾ ಕಣಗಳನ್ನು ಬಳಸಿ ಪರಮಾಣುವಿನ ನ್ಯೂಕ್ಲಿಯಸ್ ಅನ್ನು ಕಂಡು ಹಿಡಿದರು.
ಪರಮಾಣುವೊಂದು
ಸೂಕ್ಷ್ಮಾತಿ ಸೂಕ್ಷ್ಮ ಸೌರಮಂಡಲ. ಇದರ ಪೂರ್ಣ ರಾಶಿ ನ್ಯೂಕ್ಲಿಯಸ್‌ನಲ್ಲೇ ಸಾಂದ್ರೀಕರಿಸಿದೆ. ಇದನ್ನು ಸುತ್ತುವರಿದು ಎಲೆಕ್ಟ್ರಾನ್ ‘ಗ್ರಹ’ಗಳು
ಪರಿಭ್ರಮಿಸುತ್ತಿವೆ ಎಂಬ ತೀರ್ಮಾನಕ್ಕೆ ಬಂದರು. ತನ್ನ ಶಿಷ್ಯ ನೀಲ್ಸ್
ಬೋರ್ (1882-1962) ಜೊತೆಗೂಡಿ ರುದರ್ಫೋರ್ಡ್-ಬೋರ್
ಪರಮಾಣು ಪರಿಕಲ್ಪನೆಯನ್ನು ನೀಡಿದರು.
ಮೊದಲನೆಯ ಮಹಾಯುದ್ಧದ ವೇಳೆ (1914-18) ಇವರು ಬ್ರಿಟಿಷ್ ನೌಕಾದಳಕ್ಕಾಗಿ ಜಲಾಂತರ್ಗಾಮೀ ನೌಕೆಗಳನ್ನು ಪತ್ತೆ ಹಚ್ಚುವ ವಿಧಾನಗಳ ಕುರಿತಂತೆ ಸಂಶೋಧನೆಯನ್ನು ನಡೆಸಿದರು. 1919ರಲ್ಲಿ ಅವರು ಹಗುರ ಧಾತುವಾದ ನೈಟ್ರೋಜನ್ ಅನ್ನು ಆಲ್ಫಾ ಕಣದಿಂದ ತಾಡಿಸಿ ಒಡೆದರು. 1920ರಲ್ಲಿ ನ್ಯೂಟ್ರಾನ್‌ಗಳ ಇರುವಿಕೆಯನ್ನು ಅವರು ಊಹಿಸಿದರು. ಅವರ ಶಿಷ್ಯ ನೊಬೆಲ್ ಪ್ರಶಸ್ತಿ ವಿಜೇತ ಚಾಡ್ವಿಕ್ ಆಲ್ಫಾ ಕಣಗಳನ್ನು ಬಳಸಿ ನ್ಯೂಟ್ರಾನ್ ಕಣವನ್ನು ಕಂಡುಹಿಡಿದರು. ವಿಕಿರಣಶೀಲ ಧಾತುಗಳ ವಿಘಟನೆ ಮತ್ತು ದ್ರವ್ಯಾಂತರಣವನ್ನು ಅರ್ಥಮಾಡಿಕೊಳ್ಳಲು ಅವರ ಈ ಸಂಶೋಧನೆಯು ಮಹತ್ತರ ಕೊಡುಗೆ ನೀಡಿದುದಲ್ಲದೇ 20 ನೇ ಶತಮಾನದ ಆಧುನಿಕ ಭೌತಶಾಸ್ತ್ರಕ್ಕೂ ಭದ್ರ ಬುನಾದಿ ಹಾಕಿತು. ಹಾಗಾಗಿ ಅವರನ್ನು ನ್ಯೂಕ್ಲಿಯ ಭೌತಶಾಸ್ತ್ರದ ಪಿತಾಮಹ ಎಂದು ಕರೆಯಲಾಯಿತು.
ಹೀಗೆ
ಅವಿರತವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡ ರುದರ್‌ಫೋರ್ಡರನ್ನು ಪ್ರಶಸ್ತಿಗಳೂ ಬೆಂಬತ್ತಿದವು. 1908ರಲ್ಲಿ ರುದರ್‌ಫೋರ್ಡ್ ವಿಕಿರಣಗಳ ಕುರಿತ ಅಧ್ಯಯನಕ್ಕೆ ಸರ್ವೋಚ್ಛ
ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. 1914 ರಲ್ಲಿ ನೈಟ್ ಪದವಿ ಪಡೆದರು. 1931 ರಲ್ಲಿ ರುದರ್‌ಫೋರ್ಡ್ ನ್ಯೂಜಿಲೆಂಡ್ ದೇಶದ ಬ್ಯಾರನ್
ಆಫ್ ನೆಲ್ಸನ್ ಪ್ರಶಸ್ತಿಗೆ ಭಾಜನರಾದರು.
ಅವರ ಗೌರವಾರ್ಥವಾಗಿ ಪರಮಾಣು ಸಂಖ್ಯೆ 104 ಹೊಂದಿರುವ ಧಾತುವಿಗೆ ರುದರ್ಫೋರ್ಡಿಯಮ್ ಎಂದು ನಾಮಕರಣ ಮಾಡಲಾಯಿತು. ಬಿಡುವಿಲ್ಲದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ರುದರ್‌ಫೋರ್ಡರು ಅನೇಕ ಶ್ರೇಷ್ಠ ವಿಜ್ಞಾನಿಗಳನ್ನು ಬೆಳೆಸಿದರು. ಅವರ ಸಂಶೋಧನೆಗೆ ಮಾರ್ಗ ದರ್ಶನ ನೀಡಿದರು.
ರುದರ್ಫೋರ್ಡ್ ಹರ್ನಿಯ ಸಮಸ್ಯೆಯಿಂದ ಬಳಲುತ್ತಿದ್ದರು. ಬಿಡುವಿಲ್ಲದ ಕೆಲಸದ ನಡುವೆ ಬಹುಶಃ ಅರೋಗ್ಯದೆಡೆಗೆ ಅಷ್ಟಾಗಿ ಗಮನ ನೀಡದೆ ಇರುವುದರಿಂದ ಹರ್ನಿಯ ಉಲ್ಭಣಿಸಿತು.1937ರಲ್ಲಿ ಅಕಾಲಿಕ ಮರಣಕ್ಕೀಡಾದರು.
ಮೊದಲನೆಯ ಮಹಾಯುದ್ಧದ ಮೊದಲು , "ಮನುಷ್ಯನು ತನ್ನ ನೆರೆಹೊರೆಯವರೊಂದಿಗೆ ಶಾಂತಿಯಿಂದ ಬದುಕುವವರೆಗೆ ಪರಮಾಣುವಿನಿಂದ ಶಕ್ತಿಯನ್ನು ಹೊರತೆಗೆಯುವುದನ್ನು ಯಾರೂ ಕಂಡುಹಿಡಿಯುವುದಿಲ್ಲ" ಎಂದು ಪರಮಾಣು ಶಕ್ತಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಇದು ಕೆಲವೇ ವರ್ಷಗಳಲ್ಲಿ ನಿಜವಾಯಿತು!!!
1937 ರಲ್ಲಿ ಅವರ ಮರಣದ ನಂತರ, ಅವರನ್ನು ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಐಸಾಕ್ ನ್ಯೂಟನ್ ಬಳಿ ಮೇರಿ ನ್ಯೂಟನ್‌ರ ಪತಿಯನ್ನು ಸಮಾಧಿ ಮಾಡಲಾಯಿತು!! ಇದರೊಂದಿಗೆ ವಿಜ್ಞಾನರಂಗದ ಧ್ರುವತಾರೆಯೊಂದು ಅಸ್ತಂಗತವಾಯಿತು.
Very informative article sir. Thank u
ReplyDeleteThank you madam
Deleteಈಗಲೂ ಅದೇ ಪ್ರಶ್ನೆ .. ಕಣ್ಣಿಗೆ ಕಾಣದ ಪರಮಾಣುವನ್ನು ಹೇಗೆ ಒಳ ಹೊಕ್ಕು ನೋಡಿದರು ಅಂತ... ನಿಮ್ಮ ಎಲ್ಲಾ ಲೇಖನಗಳು ಬಹಾಳ ಸ್ಪೂರ್ತಿದಾಯಕ ವಾಗಿದೆ
ReplyDeleteThank You sir
DeleteGot much about the great scientist. very informative. let your pen, pen many such articles.
ReplyDeleteThank you sir
Deleteವಿಜ್ಞಾನ ಲೋಕದ ನ್ಯೂಕ್ಲಿಯಸ್ ಈತ!!!
ReplyDeleteವಿಜ್ಞಾನ ಲೋಕದ ನ್ಯೂಕ್ಲಿಯಸ್ ಈತ!!! ಅದ್ಭುತವಾದ ಲೇಖನ ಗುರೂಜಿ ಒಬ್ಬ ವಿಜ್ಞಾನಿಯ ಜೀವನದ ಚಿತ್ರಣವನ್ನು ಕಣ್ಣಿಗೆ ಕಟ್ವುವ .
ವಿವರಣೆ ತುಂಬಾ ಕುತೂಹಲ ಮತ್ತು ಪ್ರೇರಣಾದಾಯಕವಾಗಿತ್ತು.. ಸಾಮಾನ್ಯರಲ್ಲಿ ಅಸಮಾನ್ಯತೆಯನ್ನು ಪ್ರದರ್ಶಿಸುವುದು ಮತ್ತು ಜೀವನದಲ್ಲಿ ಬರುವ ಅಡ್ಡತಡೆಗಳಿಗೆ ಬಗ್ಗದೆ ಜಗ್ಗದೆ ಸದಾವಕಾಶಕ್ಕೆ ಕಾಯದೆ ಸಿಕ್ಕ ಅವಕಾಶಗನ್ನೆ ಬಳಸಿಕೊಂಡು.. ತನ್ನ ಮೊದಲ ಗುರು ತಾಯಿ ನುಡಿಗಳ ಅರ್ಥ ತಿಳಿದುಕೊಂಡು ಯಶಸ್ವಿಯಾದ ಅಪ್ರತಿಮ ಸಾಧಕನಿವನ್ನು, ಭೂಮಿ ಆಯುಷ್ಯದ ಲೇಖಾಚಾರವನ್ನೆ ಬುಡಮೇಲು ಮಾಡಿದವ ಇತಾ.. ಕಣ್ಣಿಗೆ ಕಾಣದ ಕಣದ ಜೀವಾಳುವಿನ ಬೇನುಹತಿ ಸಾಧನೆಯ ಶಿಖರವೆರಿದ ಮಾಹಾಚಲಗಾರನಿವನ್ನು.. ಇಂತಹ ಪ್ರೇರಣಾದಾಯಕ ಇತಿಹಾಸದ ಗರ್ಭದಲ್ಲಿ ಅಡಗಿರುವ ಕುತೂಹಲ ವೈಜ್ಞಾನಿಕ ಲೇಖನಗಳು ತಮ್ಮ ಕಲಮ್ಮು ದಿಂದ ಮುಂದ್ದೆನು ಬರಲಿ ಗುರೂಜಿ. ಧನ್ಯವಾದಗಳು 🙏
ಡಾ.ಶಶಿಧರ ಕುಂಬಾರ ಸಶಿ ವಿಜ್ಞಾನ
ಸರಕಾರಿ ಪ್ರೌಢಶಾಲೆ ಹಿರೇಪಡಸಲಗಿ. ಜಮಖಂಡಿ ತಾ. ಬಾಗಲಕೋಟೆ ಜಿಲ್ಲೆ.
ಧನ್ಯವಾದಗಳು ಸರ್.
Deletenice sir thank you. gold foil used by him were sent to him from Hydrabad Charminar area. some where I read. Interesting no.
ReplyDeleteyes sir . Once VSS Shastri sir narrated that story
Delete