Saturday, January 4, 2025

ಚಳಿ ಚಳಿಯಾಗಿದೆ ಈ ಚಳಿಯ . . . ಆಹಾ!

 ಚಳಿ ಚಳಿಯಾಗಿದೆ  ಈ ಚಳಿಯ . . . ಆಹಾ!

                    ಲೇಖಕರು : ಡಾ|| ಎಂ.ಜೆ. ಸುಂದರ್‌ರಾಮ್

                        ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು 





ಮೈ ಗಡಗಡ ನಡುಕ, ಹಲ್ಲು ಕಟಕಟ ಕಡಿತ, ಜ್ವರ, ತಲೆನೋವು, ಆಲಸ್ಯ, ಹೊಟ್ಟೆ ತೊಳಸುವುದು, ಮೈ ಕೈ ನೋವು, ವಾಂತಿ, ಭೇದಿ, ದೇಹದ ಉಷ್ಣತೆ 104Fಕ್ಕೆ ಏರುತ್ತದೆ. ಬೆವರಿ, ಮೈಯೆಲ್ಲ ಒದ್ದೆಯಾಗುತ್ತದೆ. ಸುಸ್ತು, ನಿಶ್ಶಕ್ತಿ... ಇವೆಲ್ಲ ಮಲೇರಿಯದ ರೋಗಲಕ್ಷಣಗಳು. ಅಲೆಕ್ಸಾಂಡರ್, ಚೆಂಗಿಸ್‌ಖಾನ್ ಮುಂತಾದ ಯೋಧರು ಈ ರೋಗಕ್ಕೆ ಬಲಿಯಾಗಿದ್ದಾರೆ. ಈ ರೋಗವು ಆಹುತಿ ತೆಗೆದುಕೊಂಡಿರುವಷ್ಟು ಜನರನ್ನು ಇನ್ಯಾವ ರೋಗವೂ ತೆಗೆದುಕೊಂಡಿಲ್ಲ. ಎರಡನೇ ಮಹಾಯುದ್ಧದಲ್ಲಿ ಬಂದೂಕಿನಿದ ಸತ್ತ ಸೈನಿಕರಿಗಿಂತ ಮಲೇರಿಯದಿಂದ ಅಸುನೀಗಿದ ಸೈನಿಕರ ಸಂಖ್ಯೆ ಐದುಪಟ್ಟು ಹೆಚ್ಚಾಗಿತ್ತಂತೆ! 

ಮಲೇರಿಯ ರೋಗಕ್ಕೆ ಕಾರಣವೇನು? ಇದು ರೋಗಿಯಿಂದ ಆರೋಗ್ಯ ವಂತನಿಗೆ ಹೇಗೆ ಹರಡುತ್ತದೆ ಎಂಬ ವಿಷಯಗಳು ಯಾರಿಗೂ ಗೊತ್ತಿರದೆ ಬಹು ಕಾಲದವರೆಗೂ ನಿಗೂಢವಾಗಿಯೇ ಇತ್ತು. ಈ ರೋಗವು ಸಾಮಾನ್ಯವಾಗಿ ಜೌಗುಪ್ರದೇಶ ಗಳಲ್ಲಿ ಕಂಡುಬರುವುದರಿಂದ ಇಲ್ಲಿ ನಿಂತ ನೀರು ಸುತ್ತ ಮುತ್ತಲ ಗಾಳಿಯನ್ನು ಮಲಿನವಾಗಿಸುತ್ತದೆಯೆಂದು ಜನ ನಂಬಿದ್ದರು. ಇಟಲಿ ಭಾಷೆಯಲ್ಲಿ ‘ಮಾಲ’ (mala) ಎಂದರೆ ‘ಕೆಟ್ಟ’ ಅಥವ ‘ಮಲಿನ’ ಎಂದೂ, ‘ಏರಿಯ’ (aria) ಎಂದರೆ ‘ಗಾಳಿ’ ಎಂದೇ ಜನಸಾಮಾನ್ಯರಲ್ಲಿ ರೂಢಿಯಲ್ಲಿತ್ತು. ಮಲೇರಿಯ ಎಂದರೆ ‘ಜೌಗುಪ್ರದೇಶದ ಮಲಿನ ಗಾಳಿ’ ಎಂದರ್ಥ. ಮಲಿನ ಗಾಳಿಗೂ ಮಲೇರಿಯಗೂ ಯಾವ ಸಂಬಂಧವಿಲ್ಲ ವೆಂಬುದು ನಮಗೆ ಈಗ ಗೊತ್ತಿದ್ದರೂ ಅದೇ ಹಳೆಯ ನಾಮಕರಣವನ್ನು ಉಳಿಸಿಕೊಳ್ಳಲಾಗಿದೆ. 

ವಿಜ್ಞಾನಿಗಳು ಸುಮ್ಮನೆ ಕಾಲಹರಣ ಮಾಡುತ್ತ ಕೂರಲಿಲ್ಲ. ಅನೇಕ ವಿಜ್ಞಾನಿಗಳು ಕೂಡಲೆ ತಮ್ಮ ಪತ್ತೆದಾರಿ ಸಂಶೋಧನೆಯನ್ನು ಪ್ರಾರಂಭಿಸಿದರು.  1880ರಲ್ಲಿ ಆಲ್ಜೀರಿಯದ ಸೈನ್ಯವೈದ್ಯರಾದ ಆಲ್ಫೊನ್ಸ್ ಲಾವಿರಾನ್ (Alphonse Laveran) ಎಂಬುವರು ಮಲೇರಿಯ ರೋಗಿಗಳ ರಕ್ತವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದಾಗ ಅವರಿಗೆ ಅನೇಕ ಸೂಕ್ಷ್ಮಜೀವಿಗಳು ಗೋಚರಿಸಿದವು. ಆರೋಗ್ಯವಂತರ ರಕ್ತದಲ್ಲಿ ಇವು ಕಂಡುಬರಲಿಲ್ಲವಾದ್ದರಿಂದ ಇವೇ ಮಲೇರಿಯ ರೋಗಕ್ಕೆ ಕಾರಣ ವಾಗಿರವಾಗಿರಬೇಕೆಂದು ಅವರು ಸಂಶಯ ಪಟ್ಟರು. ಈ ರೋಗಾಣುಗಳಿಗೆ ಪ್ಲಾಸ್ಮೋಡಿಯಂ (Plasmodium) ಎಂದು ನಾಮಕರಣ ಮಾಡಲಾಯಿತು. ಆದರೆ ಸಮಸ್ಯೆ ಹಾಗೆಯೇ ಉಳಿಯಿತು. ಈ ರೋಗ ರೋಗಿಯಿಂದ ಆರೋಗ್ಯವಂತನಿಗೆ ಹೇಗೆ ಹರಡುತ್ತದೆ ಎಂಬುದು ಒಗಟಾಗಿಯೇ ಉಳಿಯಿತು.

ಭಾರತದ ಅಲ್ಮೊರಾದಲ್ಲಿ ಜನಿಸಿದ ರೊನಾಲ್ಡ್ ರಾಸ್ (Ronald Ross) ಎಂಬ ಬ್ರಿಟಿಷ್ ಸೈನ್ಯದ ವೈದ್ಯರು ಈ ಸಂಶೋಧನೆಯನ್ನು ಮುಂದು ವರಿಸಲು ನಿಶ್ಚಯಿಸಿದರು. ತಮ್ಮ ಜೀವನದ ಬಹಳಷ್ಟು ಭಾಗವನ್ನು ಇವರು ಭಾರತದಲ್ಲೇ ಕಳೆದರು. ಸೊಳ್ಳೆಗಳು ಹೇರಳವಾಗಿದ್ದ ಸ್ಥಳಗಳಲ್ಲಿ ಹೆಚ್ಚು ಜನ ಮಲೇರಿಯದಿಂದ ಪೀಡಿತರಾಗುವುದನ್ನು ಅವರು ಗಮನಿಸಿದ್ದರು. ಈ ಸ್ಥಳಗಳಲ್ಲಿ ತಂಗಿದ್ದ ಕೊಳಚೆ ನೀರನ್ನು ಸ್ವಯಂಸೇವಕರಿಗೆ ಕುಡಿಸಿ ಅವರಿಗೆ ಮಲೇರಿಯ ಸೋಂಕುವುದೋ ಎಂದು ಪರೀಕ್ಷಿಸಿದರು. ಆದರೆ ಅವರ‍್ಯಾರಿಗೂ ಮಲೇರಿಯ ಸೋಂಕಲಿಲ್ಲ.

1894ರಲ್ಲಿ ರಾಸ್ ಇಂಗ್ಲೆಂಡಿನ ಹೆಸರಾಂತ ವೈದ್ಯ ಮ್ಯಾನ್ಸನ್‌ರನ್ನು ಭೇಟಿಯಾದರು. ಮ್ಯಾನ್ಸನ್ ಮಲೇರಿಯ ಬಗ್ಗೆ ಅಪಾರ ಪಾಂಡಿತ್ಯವನ್ನು ಸಂಪಾದಿಸಿ ಕಲೆಹಾಕಿದ್ದರು. ಇವರಿಬ್ಬರ ಭೇಟಿಯೇ ರಾಸ್‌ರ ಸಂಶೋ ಧನೆಗೆ ತಿರುವು ನೀಡಿತು. ಇದಕ್ಕೆ ಮೊದಲು ಮ್ಯಾನ್ಸನ್ ಆನೆಕಾಲು ರೋಗಕ್ಕೆ ಕಾರಣ ವಾದ  ಫೈಲೇರಿಯ (Filaria) ಹುಳುವನ್ನು ಸೊಳ್ಳೆಗಳು ಹರಡುತ್ತವೆ ಎಂದು ಸಂಶೋಧನೆಯ ಮೂಲಕ ನಿರೂಪಿಸಿದ್ದರು. ಅದೇ ರೀತಿ ಪ್ಲಾಸ್ಮೋಡಿಯಂ ಅನ್ನೂ ಸೊಳ್ಳೆಗಳೇ ಹರಡ ಬಹುದೇನೋ ಎಂದು ತಮ್ಮ ಸಂಶಯವನ್ನು ವ್ಯಕ್ತಪಡಿಸಿದ್ದರು. ಸೊಳ್ಳೆಗಳು ಮಲೇರಿಯವನ್ನು ಹರಡುತ್ತವೆ ಎಂಬ ವಿಷಯ ಅಂದು ಹಾಸ್ಯಾಸ್ಪದವಾಗಿತ್ತು.

ರಾಸ್ 31 ವಿವಿಧ ಪ್ರಬೇಧಗಳ ಸೊಳ್ಳೆಗಳನ್ನು ಹಿಡಿದು, ಅವನ್ನು ಕೊಯ್ದು ಪ್ಲಾಸ್ಮೋಡಿಯಂಗಾಗಿ ಹುಡುಕಾಡಿದರು. ಆದರೆ, ಅವರಿಗೆ ಅವುಗಳಲ್ಲಿ ಯಾವುದೇ ಸುಳಿವೂ ಸಿಗಲಿಲ್ಲ. ಸಿಕಂದರಾಬಾದ್‌ನಲ್ಲಿದ್ದಾಗ ರಾಸ್ ಸ್ವತಃ ಸೊಳ್ಳೆಪರದೆ ಬಳಸಿ, ಕೊಠಡಿಯ ಕಿಟಕಿಗಳ ಬಾಗಿಲನ್ನು ಮುಚ್ಚಿ ಮಲಗುತ್ತಿದ್ದರು. ಆದರೂ ಅವರಿಗೆ ಮಲೇರಿಯ ಸೋಂಕಿತು! ಇದರಿಂದ ಹತಾಶರಾದ ರಾಸ್ ಮಲೇರಿಯ ಬಗ್ಗೆ ಸಂಶೋಧನೆಯನ್ನು ಮುಂದುವರಿಸುವ ಆಸಕ್ತಿಯನ್ನು ಕಳೆದುಕೊಂಡು, ಸಂಶೋಧನೆ ಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದರು. ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಮ್ಯಾನ್ಸನ್ ರಿಗೂ ತಿಳಿಸಿದರು. ರಾಸ್ ತಮ್ಮ ಸಂಶೋಧನೆ ಯನ್ನು ಈ ಹಂತದಲ್ಲಿ ನಿಲ್ಲಿಸುವುದು ಮ್ಯಾನ್ಸನ್ ರಿಗೆ ಸರಿಯೆನಿಸಲಿಲ್ಲ. ಅದನ್ನು ನಿಲ್ಲಿಸಬಾರದೆಂದು ಮ್ಯಾನ್ಸನ್ ರಾಸ್‌ರಿಗೆ ತಿಳಿಸಿ, ಅವರ ಸಂಶೋ ಧನೆಗಳು ಸರಿಯಾದ ದಿಕ್ಕಿನಲ್ಲಿ ಮುಂದುವರಿದಿದ್ದು, ಅವು ಶೀಘ್ರವೇ ಒಳ್ಳೆಯ ಫಲಿತಾಂಶವನ್ನು ಕೊಡುವುವೆಂದು ಮ್ಯಾನ್ಸನ್ ರವರು ರಾಸ್‌ರನ್ನು ಉತ್ತೇಜಿಸಿದರು.


ಮ್ಯಾನ್ಸನ್‌ರವರ ಪ್ರೋತ್ಸಾಹದಿಂದ ಉತ್ತೇಜಿತರಾದ ರಾಸ್, ಅವರ ಸಲಹೆಯಂತೆ ತಮ್ಮ ಸಂಶೋಧನೆಯನ್ನು ಮುಂದುವರಿಸಲು ತೀರ್ಮಾನಿಸಿದರು. ರಾಸ್‌ಗೆ ಹೊಸ ಪ್ರಬೇಧದ 5 ಸೊಳ್ಳೆಗಳನ್ನು ಯಾರೋ ಒದಗಿಸಿದರು. ಇದುವರೆಗೂ ಇಂತಹ ಸೊಳ್ಳೆಗಳನ್ನು ಅವರು ನೋಡಿರಲಿಲ್ಲ.
ಇವುಗಳ ರೆಕ್ಕೆಗಳು ಕಂದು ಬಣ್ಣದ್ದಾಗಿದ್ದು ಅನಾಫಿಲೀಸ್ (Anopheles) ಪ್ರಬೇಧಕ್ಕೆ ಸೇರಿದ ಸೊಳ್ಳೆಗಳಾಗಿದ್ದವು. ‘ಸೊಳ್ಳೆಗಳನ್ನು ಮಲೇರಿಯ ರೋಗಿಗಳ ರಕ್ತ ವನ್ನು ಹೀರಲು ಬಿಡು. ಅವನ್ನು ನಂತರ ನೀರಿನ ಸೀಸೆಯಲ್ಲಿಟ್ಟು, ಅದರಲ್ಲಿ ಅವು ಮೊಟ್ಟೆಯಿಡಲು ಬಿಡು. ಆ ಮೊಟ್ಟೆಗಳು ಒಡೆದು ಮರಿಗಳಾಗಲಿ. ಆ ನೀರನ್ನು ಆರೋಗ್ಯವಂತರಿಗೆ ಕುಡಿಸಿ ಏನಾಗುವುದೋ ನೋಡು’ ಎಂದು ಮ್ಯಾನ್ಸನ್ ರಾಸ್‌ಗೆ ಸಲಹೆ ಮಾಡಿದರು.

ಅದೇ ರೀತಿ, ರಾಸ್ ಹಣದಾಸೆ ತೋರಿಸಿ, ಒಬ್ಬ ಸ್ವಯಂಸೇವಕನಿಗೆ ಸೊಳ್ಳೆ ನೀರನ್ನು ಕುಡಿಸಿದರು. ಆದರೆ ಮಲೇರಿಯ ರೋಗ ಸೋಂಕಲಿಲ್ಲ. ಇನ್ನೂ ಕೆಲವು ಸ್ವಯಂಸೇವಕರಿಗೆ ಕುಡಿಸಿದರು. ಅವರಿಗೂ ರೋಗ ಸೋಂಕಲಿಲ್ಲ. ಸೊಳ್ಳೆಗಳ ಜೀರ್ಣಾಂಗವ್ಯೂಹವನ್ನು ಕೊಯ್ದು ನೋಡಲು ನಿಶ್ಚಯಿಸಿದರು. ಅದರಂತೆ ಕೂಡಲೇ ಎರಡು ಸೊಳ್ಳೆಗಳನ್ನು ಕೊಯ್ದು ಪರೀಕ್ಷಿಸಿದರು. ಆದರೆ ಅವರಿಗೆ ಅವುಗಳಲ್ಲಿ ಅಂತಹ ವಿಶೇಷತೆಯೇನೂ ಕಾಣಿಸಲಿಲ್ಲ. ಮೂರು ದಿನಗಳ ಬಳಿಕ ಇನ್ನೊಂದು ಸೊಳ್ಳೆಯನ್ನು ಕೊಯ್ದು ನೋಡಿದಾಗ ಅವುಗಳಲ್ಲಿ ನೀರ್ಗುಳ್ಳೆಗಳು (vacuoles) ಗೋಚರಿಸಿದವು. ನಾಲ್ಕನೇ ದಿನ ಮತ್ತೊಂದು ಸೊಳ್ಳೆಯನ್ನು ಕೊಯ್ದರು. ಅದರ ಜಠರಭಿತ್ತಿಯಲ್ಲಿ ಗುಂಡಾಕಾರದ ಗಂಟುಗಳು ಕಂಡವು. ಅವನ್ನು ಒಡೆದಾಗ ಒಳಗೆ ಅನೇಕ ಅರ್ಧ ಚಂದ್ರಾಕಾರದ ಕರಿಕಾಯಗಳು ಗೋಚರಿಸಿದವು. ಐದನೇ ದಿನ ಉಳಿದಿದ್ದ ಸೊಳ್ಳೆಯನ್ನೂ ಕೊಯ್ದರು. ಇದರ ಜಠರಭಿತ್ತಿಯಲ್ಲಿ ಇನ್ನೂ ದೊಡ್ಡ ಗಂಟುಗಳು ಬೆಳೆದಿರುವುನ್ನು ಕಂಡು ರಾಸ್‌ಗೆ ಸಂತೋಷವಾಯಿತು. ಮಲೇರಿಯ ರೋಗಾಣುಗಳನ್ನು ಹರಡುವುದು ಅನಾಫಿಲೀಸ್ ಸೊಳ್ಳೆ ಎಂದು ಅವರಿಗೆ ಆಗ ಖಚಿತವಾಯಿತು. ಇದುವರೆಗೂ ತಾವು ಸಂಶೋಧನೆಗೆ ಬಳಸಿದ ಸೊಳ್ಳೆಗಳೆಲ್ಲ ಬೇರೆ ಬೇರೆ ಪ್ರಬೇಧಗಳಿಗೆ ಸೇರಿದ್ದವಾದ್ದರಿಂದ ತಮಗೆ ಅವುಗಳಲ್ಲಿ ಮಲೇರಿಯ ರೋಗಾಣುಗಳು ಸಿಗಲಿಲ್ಲ ಎಂದು ರಾಸ್‌ಗೆ ಅರಿವಾಯಿತು. 

    1898ನೇ ಜುಲೈ 4ರಂದು ಅನಾಫಿಲೀಸ್ ಸೊಳ್ಳೆಯ ತಲೆಯನ್ನು ಕೊಯ್ದು ನೋಡಿದಾಗ ರಾಸ್‌ಗೆ ಅದರ ಜೊಲ್ಲುಗ್ರಂಥಿಗಳು ಗೋಚರಿಸಿದವು. ಅವುಗಳ ಮೇಲೆ ಹೇರಳವಾದ ರೋಗಾಣುಗಳು ದಟ್ಟವಾಗಿ ನೆಲೆಸಿದ್ದವು. ಸೊಳ್ಳೆ ಮನುಷ್ಯನ ರಕ್ತವನ್ನು ಹೀರುವಾಗ, ತನ್ನ ಮೂತಿಯನ್ನು ಚುಚ್ಚಿ, ಒಂದು ತೊಟ್ಟು ಜೊಲ್ಲುರಸವನ್ನು ಸುರಿಸುತ್ತದೆ. ಈ ದ್ರವದಲ್ಲಿ ಹೆಪ್ಪುರೋಧಕ ಅಂಶ ವಿದ್ದು, ಅದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಆ ತೊಟ್ಟು ಜೊಲ್ಲು ರಸದ ಮೂಲಕ ಸಾವಿರಾರು ಪ್ಲಾಸ್ಮೋಡಿಯಂ ರೋಗಾಣುಗಳು ಅವನ ರಕ್ತವನ್ನು ಸೇರುತ್ತವೆ ಎಂದು ರಾಸ್ ಕಂಡುಹಿಡಿದರು. 

ಮಲೇರಿಯ ರೋಗಾಣುಗಳನ್ನು ಹರಡುವುದರಲ್ಲಿ ಅನಾಫಿಲೀಸ್ ಸೊಳ್ಳೆಯ ಪಾತ್ರವನ್ನು ಸಂಶೋಧನೆಗಳ ಮೂಲಕ ಸಂಶಯಾತೀತವಾಗಿ ಸಾಬೀತು ಪಡಿಸಿದ್ದ ಹಿನ್ನೆಲೆಯಲ್ಲಿ, 1902ರಲ್ಲಿ ರಾಸ್‌ಗೆ ನೊಬೆಲ್ ಪ್ರಶಸ್ತಿ ದೊರಕಿತು. (ರಾಸ್‌ಗೆ ತಮ್ಮ ಗುರುಗಳಾದ ಲೆವಿರಾನ್‌ಗಿಂತ ಐದು ವರ್ಷ ಮುಂಚೆಯೇ ನೊಬೆಲ್ ಪ್ರಶಸ್ತಿ ದಕ್ಕಿತು! ಪ್ಲಾಸ್ಮೋಡಿಯಂನ ಜೊತೆಗೆ, ಇತರ ರೋಗಕಾರಕ ಏಕಕೋಶ ಜೀವಿಗಳ ಮೇಲೆ ನಡೆಸಿದ ಸಂಶೋಧನೆಗಳನ್ನು ಗುರುತಿಸಿ, ಲೆವಿರಾನ್‌ಗೆ ನೊಬೆಲ್ ಪ್ರಶಸ್ತಿ ದೊರಕಿತು).

ಒಮ್ಮೆ, ಸ್ಪೇನ್ ದೇಶದ ಸೈನ್ಯ ಯುದ್ಧಕ್ಕೆ ಹೊರಟಾಗ ಅದರಲ್ಲೊಬ್ಬ ಸೈನಿಕನಿಗೆ ಮಲೇರಿಯರೋಗ ಸೋಂಕಿತಂತೆ. ಅವನು ಬದುಕಲಾರನೆಂದು ತಿಳಿದು, ಉಳಿದ ಸೈನಿಕರು ಅವನನ್ನು ಅಲ್ಲೇ ತೊರೆದು ಮುನ್ನಡೆದರಂತೆ. ಆ ರೋಗಿ ಬಾಯಾರಿಕೆಯಿಂದ ಬಳಲಿ, ಪಕ್ಕದ ಕೊಳಕ್ಕೆ ಪ್ರಯಾಸಪಟ್ಟು ತೆವಳಿಕೊಂಡುಹೋಗಿ ಆ ನೀರನ್ನು ಸಮೃದ್ಧಿಯಾಗಿ ಕುಡಿದನಂತೆ. ಅದು ಕಹಿಯಾಗಿತ್ತಂತೆ. ಕೂಡಲೇ ಗಾಢನಿದ್ರೆ ಬಂದು, ಅಲ್ಲೇ ಮಲಗಿಬಿಟ್ಟನಂತೆ. ಬಹಳ ಕಾಲದ ನಂತರ ಎಚ್ಚರವಾದಾಗ ಅವನಿಗೆ ಮಲೇರಿಯ ಮಾಯವಾಗಿ ಮೊದಲಿನಂತೆ ಆರೋಗ್ಯವಂತನಾದನಂತೆ! ಕೊಳದ ದಡದಲ್ಲಿ ಹೆಮ್ಮರದ ಕಾಂಡವೊಂದು ಸಿಡಿಲಿನಾರ್ಭಟಕ್ಕೆ ಸೀಳಲ್ಪಟ್ಟು ನೀರಲ್ಲಿ ಬಿದ್ದಿದ್ದು, ಅದರ ತೊಗಟೆಗಳು ನೀರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ತೇಲುತ್ತಿದ್ದವಂತೆ. ಅದರ ಒಂದು ತುಣುಕನ್ನು ತಿಂದಾಗ ಅದೂ ಕಹಿಯಾಗಿತ್ತಂತೆ. ಆ ತೊಗಟೆಗೆ ಮಲೇರಿಯವನ್ನು ಗುಣಪಡಿಸುವ ವಿಶೇಷ ಗುಣವಿದೆಯೆಂದೂ, ನೀರಲ್ಲಿ ಬಿದ್ದ ಅವು ನೀರನ್ನು ಕಹಿ ಮಾಡಿದ್ದವು ಎಂದೂ ಅವನು ಆಗ ಗ್ರಹಿಸಿದನಂತೆ. ಆ ಮರದ ಹೆಸರೇ ಕ್ವಿನಕ್ವಿನ (Quina quina). ಅಂದಿನಿಂದ ಮಲೇರಿಯವನ್ನು ಗುಣಪಡಿಸಲು ಈ ಮರದ ತೊಗಟೆಯನ್ನು ಔಷಧಿಯಂತೆ ಉಪಯೋಗಿಸುತ್ತಿದ್ದಾರೆ. 

ಮಲೇರಿಯ ಹರಡಿದಂತೆ, ಕ್ವಿನಕ್ವಿನ ಮರದ ತೊಗಟೆಗೆ ಎಲ್ಲೂ ಇಲ್ಲದ ವಿಪರೀತ ಬೇಡಿಕೆಯುಂಟಾಯಿತು. ಈ ತೊಗಟೆಯನ್ನು ವಿದೇಶಗಳಿಗೆ ಹೇರಳವಾಗಿ ಮಾರಾಟ ಮಾಡಲಾರಂಭಿಸಿದರು. ಇದನ್ನು ಮನಗಂಡ ಕೆಲವು ಅಪ್ರಾಮಾಣಿಕ ವ್ಯಾಪಾರಿಗಳು ಈ ತೊಗಟೆಯನ್ನೇ ಹೋಲುವ ಸಿಂಕೋನ (Sincona) ಎಂಬ ಮತ್ತೊಂದು ಮರದ ತೊಗಟೆಗಳನ್ನು ಕಲಬೆರಕೆ ಮಾಡಿ ಮಾರಲಾರಂಭಿಸಿದರು. ಕ್ವಿನಕ್ವಿನ ತೊಗಟೆ ಮಲೇರಿಯವನ್ನು ಗುಣಪಡಿಸ ದೆಂದೂ ಸಿಂಕೋನ ತೊಗಟೆಗಳೇ ಮಲೇರಿಯ ರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆಂದೂ ಅನೇಕ ವೈದ್ಯರಿಗೆ ಕ್ರಮೇಣ ಮನವರಿಕೆಯಾಯಿತು. ಸಿಂಕೋನ ತೊಗಟೆಯಲ್ಲಿ ಕ್ವಿನೈನ್ (quinine) ಎಂಬ, ಮಲೇರಿಯ ರೋಗಾಣುಗಳನ್ನು ನಾಶಮಾಡಬಲ್ಲ ರಾಸಾಯನಿಕ ಇದರಲ್ಲಡಕವಾಗಿದೆಯೆಂದೂ ಇದೊಂದೇ ಔಷಧವು ಮಲೇರಿಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲದೆಂದೂ ತಿಳಿದುಬಂದಿತು. 

ಕ್ವಿನಕ್ವಿನ ತೊಗಟೆ ಸಾಕಷ್ಟು ದೊರಕಿದ್ದರೆ, ಸಿಂಕೋನದ ರೋಗನಿವಾರಕ ಶಕ್ತಿ ಬೆಳಕಿಗೆ ಬರುತ್ತಲೇ ಇರಲಿಲ್ಲ. ಸುಮಾರು 3 ಶತಮಾನಗಳವರೆಗೆ ರೋಗಿಗಳಿಗೆ ಸರಿಯಾದ ಔಷಧವೇ ಇಲ್ಲದೆ, ಅನೇಕರು ಸಾವನ್ನಪ್ಪುತ್ತಿದ್ದರು. ಈ ರೀತಿಯ ಆಕಸ್ಮಿಕಗಳು ಕಾಲಾನುಕಾಲಕ್ಕೆ ಉದ್ಭವಿಸಿ ವಿಜ್ಞಾನವನ್ನು ಶ್ರೀಮಂತಗೊಳಿಸಿವೆ. ಒಂದು ರೀತಿಯಲ್ಲಿ ಸೆರೆಂಡಿಪಿಟಿ ಇಲ್ಲೂ ತನ್ನ ಪವಾಡವನ್ನು ಪ್ರದರ್ಶಿಸಿದೆ!











ಬರಲಿದೆ, ಮಾನವ ಭ್ರೂಣದ‌ ಬೆಳವಣಿಗೆಗೊಂದು ಪಾಸ್‌ ಬಟನ್ !

ಬರಲಿದೆ, ಮಾನವ ಭ್ರೂಣದ‌ ಬೆಳವಣಿಗೆಗೊಂದು ಪಾಸ್‌ ಬಟನ್ !

ಲೇಖಕರು : ಡಾ. ಟಿ.ಎ.ಬಾಲಕೃಷ್ಣ ಅಡಿಗ
                 ಪ್ರಾಣಿವಿಜ್ಞಾನ ಪ್ರಾಧ್ಯಾಪಕರು ಹಾಗೂ
        ವಿಜ್ಞಾನ ಸಂವಹನಕಾರರು

 

         ಸ್ತನಿಗಳೂ ಸೇರಿದಂತೆ ಅನೇಕ ಪ್ರಾಣಿ ಪ್ರಭೇದಗಳಲ್ಲಿ ಪೋಷಕ ಪ್ರಾಣಿ ಹಾಗೂ ಮರಿಜೀವಿಗಳ ಉಳಿವಿನ ಸಾಧ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಭ್ರೂಣದ ಬೆಳವಣಿಗೆಯ ಅವಧಿಯನ್ನು ನಿಯಂತ್ರಿಸುವ ವಿಶೇಷ ವ್ಯವಸ್ಥೆಯೊಂದು ಇರುವುದನ್ನು ಗಮನಿಸಬಹುದು. ಪರಿಸರದ ವೈಪರೀತ್ಯಗಳಿಗೆ ಅನುಗುಣವಾಗಿ, ಕೆಲವು ವಾರಗಳ ಅಥವಾ ತಿಂಗಳುಗಳ ಕಾಲ ಭ್ರೂಣದ ಬೆಳವಣಿಗೆ ಸ್ಥಗಿತಗೊಂಡು, ಸುತ್ತಲಿನ ಪರಿಸ್ಥಿತಿ ಅನುಕೂಲಕರವಾದ ನಂತರ ಮತ್ತೆ ಬೆಳವಣಿಗೆ ಪ್ರಾರಂಭವಾಗುವ ಈ ಪ್ರಕ್ರಿಯೆಗೆ ಭ್ರೂಣೀಯ ಸುಪ್ತಾವಸ್ಥೆ (embryonic diapause) ಎಂದು ಕರೆಯಲಾಗುತ್ತದೆ. ಭ್ರೂಣದ ಕೆಲ ವಿಶಿಷ್ಟ ಜೀವಕೋಶಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳು ಇದಕ್ಕೆ ಕಾರಣ ಎಂಬುದನ್ನು ಪತ್ತೆ ಮಾಡಲಾಗಿದೆ. ಇಂಥ ಒಂದು ವ್ಯವಸ್ಥೆ ಮಾನವ ಭ್ರೂಣದ‌ ಜೀವಕೋಶಗಳಲ್ಲಿಯೂ ಇರಬಹುದೇ ಎಂಬ ಪ್ರಶ್ನೆಗೆ ಇತ್ತೀಚಿನವರೆಗೂ ಉತ್ತರ ದೊರೆತಿರಲಿಲ್ಲ.

     ಮಾನವನ ಭ್ರೂಣದ ಬೆಳವಣಿಗೆ ಹಾಗೂ ಸಂತಾನೋತ್ಪತ್ತಿ ತಂತ್ರಜ್ಞಾನಗಳಿಗೆ ಸಂಬಂಧಿಸಿದ ನಮ್ಮ ತಿಳುವಳಿಕೆಯನ್ನು ಬದಲಾಯಿಸಬಲ್ಲಂತ ಸಂಶೋಧನೆಯೊಂದನ್ನು ವಿಜ್ಞಾನಿಗಳ ತಂಡವೊಂದು ಇತ್ತೀಚೆಗೆ ಪ್ರಕಟಿಸಿದೆ. ಭ್ರೂಣದ ಬೆಳವಣಿಗೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬಲ್ಲ ನೈಸರ್ಗಿಕ ತಂತ್ರನವೊಂದನ್ನು ಪತ್ತೆ ಮಾಡಲಾಗಿದೆ. ಆಸ್ಟ್ರಿಯಾ ದೇಶದ ಮ್ಯಾಕ್ಸ್‌ ಪ್ಲಾಂಕ್‌ ಇನ್ಸ್ಟಿಟ್ಯೂಟ್‌ ಆಫ್‌ ಮಾಲಿಕ್ಯುಲಾರ್‌ ಜೆನಿಟಿಕ್ಸ್‌ ಹಾಗೂ ಇನ್ಸ್ಟಿಟ್ಯೂಟ್‌ ಆಫ್‌ ಮಾಲಿಕ್ಯುಲಾರ್‌ ಬಯೋಟೆಕ್ನಾಲಜಿಯ ವಿಜ್ಞಾನಿಗಳು ನಡೆಸಿದ ಸುದೀರ್ಘ ಸಂಶೋಧನೆಯ ಇತ್ತೀಚಿನ ಫಲಿತಾಂಶಗಳ ಪ್ರಕಾರ ಮಾನವ ಭ್ರೂಣದ‌ ಜೀವಕೋಶಗಳಲ್ಲಿಯೂ ಇಂಥದ್ದೇ ನಿಯಂತ್ರಣ ವ್ಯವಸ್ಥೆ ಒಂದನ್ನು ಪ್ರೇರೇಪಿಸಬಹುದು. ನೇರವಾಗಿ ಮಾನವ ಭ್ರೂಣದ ಮೇಲೆ ಪ್ರಯೋಗ ನಡೆಸುವುದು ಅಸಾಧ್ಯವಾದ್ದರಿಂದ ಈ ವಿಜ್ಞಾನಿಗಳು ಪರ್ಯಾಯವಾಗಿ ಆಕರ ಜೀವಕೋಶಗಳನ್ನು(stem cells) ಹಾಗೂ ಬ್ಲಾಸ್ಟಾಯ್ಡ್ ಗಳು(blastoids) ಎಂದು ಕರೆಯಲಾಗುವ ಆಕರ ಜೀವಕೋಶ-ಆಧಾರಿತ ಬ್ಲಾಸ್ಟೋಸಿಸ್ಟ್(blastocyst)‌ ಮಾದರಿಗಳನ್ನು ತಮ್ಮ ಪ್ರಯೋಗಗಳಿಗೆ ಬಳಸಿಕೊಂಡರು. ಒಂದು ನಿರ್ದಿಷ್ಟ ಜೀವರಾಸಾಯನಿಕ ಪಥಮಾರ್ಗ(pathway) ಭ್ರೂಣದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂಬ ಅಂಶವನ್ನು ತಮ್ಮ ಸಂಶೋಧನೆಗಳಿಂದ ಅವರು ಕಂಡುಕೊಂಡರು. ಸ್ತನಿ ಪ್ರಾಣಿಗಳಲ್ಲಿ ಭ್ರೂಣದ ಬೆಳವಣಿಗೆಯನ್ನು ನಿಯಂತ್ರಿಸುವ ಈ ಪ್ರಮುಖ ಪಥಮಾರ್ಗಕ್ಕೆ ಎಮ್‌ಟಾರ್‌ ಪಥಮಾರ್ಗ ( M Tor pathway) ಎಂದು ಹೆಸರಿಸಲಾಗಿದೆ. ಪ್ರಯೋಗಕ್ಕೆ ಬಳಸಲಾದ ಬ್ಲಾಸ್ಟಾಯ್ಡ್‌ನ ಜೀವಕೋಶಗಳಲ್ಲಿ ಈ ಎಮ್‌ಟಾರ್‌ ಸಂಕೇತಿಸುವ ಪಥಮಾರ್ಗ ಎಂಬ ʼವಿರಾಮದ ಗುಂಡಿʼ (pause button)ಯನ್ನು ಬಳಸುವ ಮೂಲಕ ಸುಪ್ತಾವಸ್ಥೆಯನ್ನು ಹೋಲುವ ಸ್ಥಿತಿಯನ್ನು ಪ್ರೇರೇಪಿಸಬಹುದು ಎಂಬುದನ್ನು ಅವರು ಕಂಡುಕೊಂಡರು. ಆಕರ ಜೀವಕೋಶಗಳು ಮತ್ತು ಬ್ಲಾಸ್ಟಾಯ್ಡ್‌ ಗಳಿಗೆ ಎಮ್‌ಟಾರ್ ನಿಯಂತ್ರಕಗಳನ್ನು ಒದಗಿಸಿದಾಗ ಭ್ರೂಣದ ಬೆಳವಣಿಗೆ ವಿಳಂಬಿತಗೊಂಡಿದ್ದನ್ನು ಗಮನಿಸಿದರು. ಭ್ರೂಣಕೋಶಗಳ ವಿಭಜನೆಯ ವೇಗ ಕುಂಠಿತಗೊಳ್ಳುವುದರ ಜೊತೆಗೆ, ಭ್ರೂಣವು ಗರ್ಭಕೋಶದ ಭಿತ್ತಿಯಲ್ಲಿ ನೆಲೆಗೊಳ್ಳುವ ಪ್ರಕ್ರಿಯೆಯೂ (implantation) ಮುಂದೂಡಿಕೆಯಾದುದು ಕಂಡುಬಂದಿತು. ಆದರೆ, ಭ್ರೂಣವು ಸುಪ್ತಾವಸ್ಥಯನ್ನು ತಲುಪುವ ಸಾಧ್ಯತೆ ಒಟ್ಟು ಬೆಳವಣಿಗೆಯ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಾಗಿದ್ದುದು ಕಂಡುಬಂದಿತು.


 

ಈ ಒಂದು ಸಂಶೋಧನೆಯು ಮಾನವರಲ್ಲಿ ಕೃತಕ ಗರ್ಭಧಾರಣೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸುಧಾರಣೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯಬಹುದೆಂಬ ನಿರೀಕ್ಷೆ ವಿಜ್ಞಾನಿಗಳದ್ದು. ಎಮ್‌ಟಾರ್‌ ಪಥಮಾರ್ಗ ʼವಿರಾಮದ ಗುಂಡಿʼಯನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ವಿಶೇಷವಾಗಿ  ಅಂತಃ ಪ್ರನಾಳೀಯ ನಿಷೇಚನ (In Vitro Fertilization – I.V.F.) ತಂತ್ರಜ್ಞಾನದಲ್ಲಿ ಭ್ರೂಣವನ್ನು ಸೂಕ್ತ ಸಮಯದಲ್ಲಿ ಗರ್ಭಕೋಶದಲ್ಲಿ ನೆಲೆಗೊಳಿಸುವ ಪ್ರಕ್ರಿಯೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಬಹುದು. ಅಲ್ಲದೆ, ಭ್ರೂಣವನ್ನು ಅತ್ಯಂತ ಸೂಕ್ತ ಸಮಯದಲ್ಲಿ ನೆಲೆಗೊಳಿಸುವ ಮೂಲಕ, ಈ ಪ್ರಕ್ರಿಯೆಯ ಯಶಸ್ಸಿನ ಗತಿಯನ್ನು ಹೆಚ್ಚಿಸಬಹುದು ಹಾಗೂ ಗರ್ಭಧಾರಣೆಯನ್ನು ಖಚಿತ ಪಡಿಸಿಕೊಳ್ಳಬಹುದು.

 ಮಾನವ ಭ್ರೂಣದ ಬೆಳವಣಿಗೆಯ ಈ ʼವಿರಾಮದ ಗುಂಡಿʼ ಯ ವಿಧಾನದ ಬಳಕೆಯು ವಿಶೇಷವಾಗಿ ಕ್ಯಾನ್ಸರ್‌ಗೆ  ಚಿಕಿತ್ಸೆ  ಪಡೆಯುತ್ತಿರುವ ಸ್ತ್ರೀಯರಲ್ಲಿ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಕೊಡುಗೆಯಾಗಲಿದೆ. ಅಲ್ಲದೆ, ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ʼಅವಶ್ಯಕತೆಗೆ ಅನುಗುಣವಾದ” ಔಷಧಿಗಳ ತಯಾರಿಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

 ಈ ತಂತ್ರಜ್ಞಾನವು ತನ್ನ ಸಂಭವನೀಯ ಪ್ರಯೋಜನಗಳ ಜೊತೆಗೇ ಕೆಲವು ನೈತಿಕ ಮೌಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಬೆಳವಣಿಗೆಯ ಹಂತಗಳಲ್ಲಿ ಹಸ್ತಕ್ಷೇಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಜಿಜ್ಞಾಸೆಯೊಂದು ಪ್ರಮುಖವಾಗಿ ಕಾಡುತ್ತಿದೆ. ವಿಧಾನವನ್ನು ಬಳಸುವಾಗ ವಹಿಸಬೇಕಾದ ಎಚ್ಚರಿಕೆ, ವಿವೇಚನೆಗಳ ಬಗ್ಗೆ ಚರ್ಚೆ ಎದ್ದಿದೆ. ತಂತ್ರಜ್ಞಾನದ ಬಳಕೆಯಿಂದಾಗುವ ಹಸ್ತಕ್ಷೇಪಗಳ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಭವಿಷ್ಯದಲ್ಲಿ ಸಂಶೋಧನೆಗಳು ನಡೆಯಬೇಕಿದೆ. ತಂತ್ರಜ್ಞಾನದ ಅಭಿವೃದ್ಧಿಯು ಸಾಮಾಜಿಕ ಮೌಲ್ಯಗಳ ಹಾಗೂ ನೈತಿಕ ಪ್ರಮಾಣಗಳ ಜೊತೆಗೆ ಸಮತೋಲನ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ವಿಜ್ಞಾನಿಗಳ, ನೀತಿ ನಿರೂಪಕರ ಹಾಗೂ ನೈತಿಕ ಮೌಲ್ಯ ಪ್ರತಿಪಾದಕರ ನಡುವೆ ಸಮನ್ವಯ ಮೂಡಬೇಕಾದ ಅವಶ್ಯಕತೆಯಂತೂ ಇದೆ.

 

                                 ----/////------

 

ಬಾಹ್ಯಾಕಾಶದಲ್ಲಿ ಇಸ್ರೋದ ಡಾಕಿಂಗ್‌ ಪ್ರಯೋಗ ಎಂಬ ಮಹಾ ಸಾಹಸ


 ಬಾಹ್ಯಾಕಾಶದಲ್ಲಿ ಇಸ್ರೋದ ಡಾಕಿಂಗ್ಪ್ರಯೋಗ  ಎಂಬ ಮಹಾ ಸಾಹಸ 

ಲೇಖಕರು : ರಾಮಚಂದ್ರ ಭಟ್  . ಬಿ.ಜಿ.






 

ಚಂದ್ರಯಾನದ ಯಶಸ್ಸು ಇಸ್ರೋ ವಿಜ್ಞಾನಿಗಳ ಪಾಲಿಗೆ ವೇಗವರ್ಧಕವಾಗಿ ಹೊಸ ಹುಮ್ಮಸ್ಸನ್ನು ಹಲವು ಪಟ್ಟು ಹೆಚ್ಚಿಸಿದೆ. ಇದರ ಬೆನ್ನು ಬೆನ್ನಿಗೇ, ಕೆಳಗಿನ ಹಲವಾರು ಯೋಜನೆಗಳಿಗೆ ತ್ವರಿತವಾಗಿ ಚಾಲನೆ ದೊರೆಯುತ್ತಿದೆ.

ನಿಸಾರ್ (NISAR) : ಇದು ನಾಸಾದೊಂದಿಗಿನ ಜಂಟಿ ಯೋಜನೆಯಾಗಿದ್ದು, ಈ ಸಿಂಥೆಟಿಕ್ ಅಪರ್ಚರ್‌ ರಾಡಾರ್‌ ಉಪಗ್ರಹವನ್ನು ಮಾರ್ಚ್202ರಲ್ಲಿ, ಉಡಾವಣೆ ಮಾಡಲು ನಿರ್ಧರಿಸಲಾಗಿದೆ.

    

ಕ್ಷ-ಕಿರಣ ಪೋಲರಿಮೀಟರ್ ( X-ray Polarimeter ) ಉಪಗ್ರಹ: ಜನವರಿ  1, 2024 ರಂದು ಉಡಾವಣೆ ಮಾಡಲಾದ ಈ ಉಪಗ್ರಹವು ಕಾಸ್ಮಿಕ್ಕ್ಷ-ಕಿರಣಗಳ ಧ್ರುವೀಕರಣವನ್ನು ಅಧ್ಯಯನ ಮಾಡುತ್ತದೆ.

ಗಗನ್ಯಾನ್ -2: ಈ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು 2025ರ ಮಧ್ಯದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ವೀನಸ್ ಆರ್ಬಿಟರ್‌ ಮಿಷನ್ ( ಶುಕ್ರಯಾನ ) : ಈ ಗ್ರಹದ ಪರಿಶೋಧನಾ ಕಾರ್ಯಾ ಚರಣೆಯನ್ನು 2025ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಮಾರ್ಸ್ ಆರ್ಬಿಟರ್‌ ಮಿಷನ್-2 : (ಮಂಗಳಯಾನ-2): ಈ ಗ್ರಹದ ಪರಿಶೋಧನಾ ಕಾರ್ಯಾಚರಣೆಯನ್ನು 2026ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಆದಿತ್ಯ ಎಲ್-1 ಮಿಷನ್‌ : ಇದರ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋ ಯೋಜಿಸಿದೆ.ಅದು ಹಲವಾರು ಮಾಹಿತಿಗಳನ್ನು ಒದಗಿಸುತ್ತಿದೆ.  ಹೀಗೆ. ಒಂದೇ ಎರಡೇ. ಹಲವಾರು ಭವಿಷ್ಯದ ಯೋಜನೆಗಳು ಕುಡಿಯೊಡೆದಿವೆ.

ಹೊಸ ವರ್ಷದ ಹೊಸ್ತಿಲಲ್ಲಿ ಮತ್ತೊಂದು ಯೋಜನೆ ಸಿದ್ಧಗೊಂಡು ಈಗಾಗಲೇ ಯಶಸ್ವಿಯಾಗಿ ಬಾಹ್ಯಾಕಾಶವನ್ನು ಸೇರಿದೆ. ಅದೇ SpaDeX or Space Docking Experiment ಎಂಬ ಡಾಕಿಂಗ್ವ್ಯವಸ್ಥೆ. 

ಮಿಷನ್ ಪಿಎಸ್‌ಎಲ್‌ವಿ ಉಡಾವಣೆ ಮಾಡಿದ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್‌ನ ಪ್ರದರ್ಶನಕ್ಕಾಗಿ ಇದು ಕಡಿಮೆ ವೆಚ್ಚದ ಪರಿಣಾಮಕಾರಿ ತಂತ್ರಜ್ಞಾನ ಪ್ರದರ್ಶಕ ಯೋಜನೆಯಾಗಿದೆ. ಈ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳಾದಗಳಾದ ಚಂದ್ರನ ಮೇಲೆ ಭಾರತ, ಚಂದ್ರನಿಂದ ಮಣ್ಣಿನ ಮಾದರಿ ತರುವುದು, ಭಾರತೀಯಅಂತರಿಕ್ಷ ನಿಲ್ದಾಣದ (Bharatiya Antariksh Station - BAS) ನಿರ್ಮಾಣ ಮತ್ತು ಕಾರ್ಯಾಚರಣೆ ಮೊದಲಾದ ಕಾರ್ಯಗಳಿಗೆ ಅತ್ಯಗತ್ಯ. ಒಂದು ಸಾಮಾನ್ಯ ಉದ್ದೇಶಕ್ಕಾಗಿ ಬಹು ರಾಕೆಟ್ ಉಡಾವಣೆಗಳ ಅಗತ್ಯವಿದ್ದಾಗ ಬಾಹ್ಯಾಕಾಶದಲ್ಲಿ ಡಾಕಿಂಗ್‌ ತಂತ್ರಜ್ಞಾನವು ಅತ್ಯಗತ್ಯ.

೨೦೨೪ರ ಡಿಸೆಂಬರ್ 30ರ ರಾತ್ರಿತಲಾ ೨೨೦kg ತೂಕದ ಎರಡುಪುಟ್ಟ ಉಪಗ್ರಹ ಗಳನ್ನು ಹೊತ್ತ PSLV-C60 ರಾಕೆಟ್ ಉಡಾವಣೆಯಾಗಿದೆಈ ಮಿಷನ್ ಅಥವಾ ಯೋಜನೆಯ ಮೂಲಕ, ರಷ್ಯಾ, ಅಮೇರಿಕ ಮತ್ತು ಚೀನಾ ದೇಶಗಳ ನಂತರ ಭಾರತವು ಬಾಹ್ಯಾಕಾಶ ಡಾಕಿಂಗ್‌ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರ ಎನಿಸಿಕೊಳ್ಳಲಿದೆ

ಶ್ರೀಹರಿಕೋಟಾದ ಮೊದಲ ಉಡಾವಣಾ ಕೇಂದ್ರದಿಂದ ರಾತ್ರಿ10 ಗಂಟೆಯ ನಂತರ PSLV-C60 ರಾಕೆಟ್, ಸುಮಾರು 15 ನಿಮಿಷಗಳ ನಂತರ ಉಪಗ್ರಹಗಳನ್ನು 475km ವೃತ್ತಾಕಾರದ ಕಕ್ಷೆಗೆ ಸೇರಿಸಿತು.. ಮೊದಲ ಉಪಗ್ರಹವು ಉಡಾವಣೆಯಾದ 15.1 ನಿಮಿಷಗಳ ನಂತರ ಬೇರ್ಪಟ್ಟರೆ, ಎರಡನೆಯದು 15.2 ನಿಮಿಷಗಳಲ್ಲಿ ಪ್ರತ್ಯೇಕಗೊಂಡಿತು. ಒಂದನ್ನು ಟಾರ್ಗೆಟ್ಅಥವಾ ಗುರಿ ಎಂದರೆ, ಮತ್ತೊಂದನ್ನು ಚೇಸರ್ಅಥವಾ ಬೆನ್ನಟ್ಟುವ ಉಪಗ್ರಹ ಎಂದು ಕರೆಯಲಾಗಿದೆ.  


ಕಕ್ಷೆಗೆ ತಲುಪಿದ ಎರಡು ಉಪಗ್ರಹಗಳು ಒಂದೇ ರಾಕೆಟ್ನಲ್ಲಿ ನಭಕ್ಕೆ ಹಾರಿದರೂ ಬಾಹ್ಯಾಕಾಶಕ್ಕೆ  ಹೋದಮೇಲೆ ಪ್ರತ್ಯೇಕವಾಗಿವೆ. ಎಂಟು ದಿನಗಳ ನಂತರ, ಜನವರಿ ೭ ರಂದು ಇವುಗಳನ್ನು ಒಂದಕ್ಕೊಂದು ಜೋಡಿಸಲಾಗುತ್ತದೆ  ಅಥವಾ ಡಾಕ್ ಮಾಡಲಾಗುತ್ತದೆ. ಬಾಹ್ಯಾಕಾಶದಲ್ಲಿ ನಾವು ಬೇಕಾದಷ್ಟು ಬಾಹ್ಯಾಕಾಶ ನೌಕೆಗಳನ್ನು ಹಾರಿಸಿದ್ದೇವೆ. ಆದರೆ ಇವು ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ನೋಡಿಕೊಳ್ಳುವುದೂ ಮುಖ್ಯ. ಕೆಲವೊಮ್ಮೆ  ಅನಿವಾರ್ಯ ಕಾರಣಗಳಿಗೆ ಇವುಗಳನ್ನ ಜೋಡಿಸುವ ಅಂದರೆ ಡಾಕಿಂಗ್ ಮಾಡಬೇಕಾಗುತ್ತದೆ. ಉದಾಹರಣೆಗೆ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಒಂದು ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಹೋದಾಗ ಅವರ ಬಾಹ್ಯಾಕಾಶ ನೌಕೆಯನ್ನು  ಅಂತಾರಾಷ್ಟ್ರೀಯ  ಬಾಹ್ಯಾಕಾಶ ನಿಲ್ದಾಣಕ್ಕೆ  ಜೋಡಿಸಲಾಯಿತು. ಆಮೇಲೆ, ಅವರು ಆ ಅಂತಾರಾಷ್ಟ್ರೀಯ  ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದರು. ಇಂಟರ್ಸ್ಟೆಲ್ಲಾರ್‌  ಸಿನಿಮವನ್ನು ನೀವು ನೋಡಿರಬಹುದು. ಈ ಅದ್ಭುತ ದೃಶ್ಯ ಕಾವ್ಯದಲ್ಲಿ ಇಂತಹ ಅನೇಕ ರೋಮಾಂಚಕ ಸನ್ನಿವೇಶವೇಶಗಳಿವೆ.

ಸ್ಪೇಡೆಕ್ಸ್ ಅಂದರೆ ಬಾಹ್ಯಾಕಾಶ ಡಾಕಿಂಗ್ ಎಕ್ಸ್ಪೆರಿಮೆಂಟ್ SpaDeX or Space Docking Experiment ಅಂತ ಅರ್ಥ. ಇದು ಕೇಳಲು ಬಹಳ ಸರಳ.  ಆದರೆ,  ರೈಲು ಬೋಗಿಗಳನ್ನು ಒಂದಕ್ಕೊಂದು ಜೋಡಿಸಿದಷ್ಟು ಸರಳವಲ್ಲ ! ಡಾಕಿಂಗ್ ಆಗುವಾಗ ಎರಡು ಬಾಹ್ಯಾಕಾಶ ನೌಕೆಗಳು ಗಂಟೆಗೆ 28,800 ಕಿಲೋಮೀಟರ್ ವೇಗದಲ್ಲಿ  ಚಲಿಸುತ್ತಿರುತ್ತವೆ. ಇಲ್ಲದಿದ್ದರೆ, ಭುಮಿಯ ಗುರುತ್ವ ಸೆಳೆತಕ್ಕೆ ಒಳಗಾಗಿ ಭೂಮಿಯತ್ತ ಅಪ್ಪಳಿಸುತ್ತವೆ. ಬಂದೂಕಿನಿಂದ ಸಿಡಿದ ಗುಂಡಿನ ವೇಗದಲ್ಲಿ ಚಲಿಸುವ ಇವುಗಳ ವೇಗವನ್ನು 0.036 km/h ಗೆ ಇಳಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಇದಕ್ಕೆ ಬೇಕು ಸ್ವಲ್ಪ ಹೆಚ್ಚು ಕಡಿಮೆಯಾದರೂ ಎರಡು ಬಾಹ್ಯಾಕಾಶ ನೌಕೆಗಳು  ಬಾಹ್ಯಾಕಾಶದಲ್ಲಿ ಛಿದ್ರವಾಗಿ ಹೇಳ ಹೆಸರಿಲ್ಲದಂತಾಗಿ ಅಪಾರ ಶ್ರಮ, ಹಣ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಗುತ್ತದೆ. ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡಿರುವ ಭಾರತ ಅದಕ್ಕಾಗಿ ಅಗತ್ಯ  ಸಿದ್ಧತೆಗಳನ್ನು ಮಾಡುತ್ತಿದೆ. ಇಡೀ ಬಾಹ್ಯಾಕಾಶ ನಿಲ್ದಾಣವನ್ನು ಒಂದೇ ಉಡ್ಡಯನದಲ್ಲಿ ಕಳಿಸುವುದು ಅಸಾಧ್ಯ. ಹಾಗಾಗಿ, ಬಿಡಿ ಘಟಕಗಳನ್ನು ಒಂದೊಂದಾಗಿ ಕಳುಹಿಸಿ ಬಾಹ್ಯಾಕಾಶದಲ್ಲಿ ಜೋಡಿಸಬೇಕು. ಇದರಲ್ಲಿ ಯಶಸ್ಸು ಸಿಗಲೂಬಹುದು. ಕೆಲವೊಮ್ಮೆ ವಿಫಲವಾಗಲೂಬಹುದು. ಹೀಗಾಗಿ, ಇದೊಂದು ರೀತಿಯ ಜೂಜೇ ಸರಿ.!!!! ಭಾರತ ಈಗ ಇಸ್ರೋ ಮೂಲಕ ಬಾಹ್ಯಾಕಾಶದಲ್ಲಿ ಇಂಥ ವೈಜ್ಞಾನಿಕ  ಜೂಜಾಟ ನಡೆಸಿದೆ!!!. ಸೋಲೇ ಗೆಲುವಿನ ಸೋಪಾನ . ಸೋಲಿನಿಂದ ಧೃತಿಗೆಡಬಾರದು.  ಚಂದ್ರಯಾನದ ಸಂದರ್ಭದಲ್ಲಿ ರಷ್ಯಾ ಸೋತ ಘಟನೆಯನ್ನು ಸ್ಮರಿಸಿಕೊಳ್ಳಬಹುದು. ಇಲ್ಲಿ ಭಾರತ ಯಶಸ್ವಿಯಾದದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.


ಆಂಧ್ರಪ್ರದೇಶದ ಶೀಹರಿಕೋಟಾದ ಉಡ್ಡಯನ ಕೇಂದ್ರದಿಂದ ನೌಕೆ ಉಡ್ಡಯನ ಗೊಂಡಿತು. ೩ ಹಂತಗಳಲ್ಲಿ PSLV ರಾಕೆಟ್ತನ್ನಲ್ಲಿರುವ ಅನ್ಸಿಮ್ಮೆಟ್ರಿಕಲ್ಹೈಡ್ರೈಡ್ಆಫ್ಡೈ ಮೀಥೈಲ್ಹೈಡ್ರಜೀನ್ಮತ್ತು ಡೈ ನೈಟ್ರೋಜನ್ಟೆಟ್ರಾಕ್ಸೈಡ್ಇಂಧನಗಳನ್ನು ದಹಿಸಿ, ವಿಕಾಸ್ಇಂಜಿನ್ನ ಮೂಲಕ ಸುಮಾರು ೮೦೦kN ನೂಕು ಬಲ (ಥ್ರಸ್ಟ್‌) ಪಡೆದು, ೩೬ ನಿಮಿಷಗಳಲ್ಲಿ ಭೂಮಿಯಿಂದ ‌470km ದೂರದ ನಿಗದಿತ  ಕಕ್ಷೆಗೆ ೨ ಉಪಗ್ರಹಗಳನ್ನು ಸೇರಿಸಿತು. ಇದು ಅಂದಾಜು ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ. SpaDeX ಕಾರ್ಯಾಚರಣೆಯಲ್ಲಿ ಸ್ವತಂತ್ರವಾಗಿ ಮತ್ತು ಏಕಕಾಲದಲ್ಲಿ 470ಕಿಮೀ ವೃತ್ತಾಕಾರದ ಕಕ್ಷೆಯಲ್ಲಿ 55° ಯಷ್ಟು ಓರೆಯಾಗಿ, ಸುಮಾರು 220kg ತೂಗುವ ಟಾರ್ಗೆಟ್‌ ಮತ್ತು ಚೇಸರ್‌ ಎಂಬ ೨ ಸಣ್ಣ ಬಾಹ್ಯಾಕಾಶ ನೌಕೆಗಳನ್ನು PSLV-C 60 ಹೊತ್ತೊಯ್ದಿದೆ. ಉಡಾವಣಾ ವಾಹನದಿಂದ ಬೇರ್ಪಡುವ ಸಮಯದಲ್ಲಿ ಇವುಗಳ ನಡುವೆ ಸಣ್ಣ ಸಾಪೇಕ್ಷ ವೇಗವನ್ನು ನೀಡಲು PSLV ವಾಹನಕ್ಕೆ ನಿರ್ದೇಶಿಲಾಗುತ್ತದೆ. ಈ ಹಂತದಲ್ಲಿ, ಟಾರ್ಗೆಟ್‌ ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್‌ ವ್ಯವಸ್ಥೆಯನ್ನು ಬಳಸಿಕೊಂಡು ಟಾರ್ಗೆಟ್‌ ನಡುವಿನ ಸಾಪೇಕ್ಷ ವೇಗವನ್ನು ೨೦ ಕಿಲೋಮೀಟರ್ಗೆ  ಸರಿದೂಗಿಸ ಲಾಗುತ್ತದೆ.ಈ ಡ್ರಿಫ್ಟ್ಅರೆಸ್ಟ್‌ ಕುಶಲತೆಯ ಕೊನೆಯಲ್ಲಿ, ಟಾರ್ಗೆಟ್‌ ಮತ್ತು ಚೇಸರ್‌ ಒಂದೇ ಕಕ್ಷೆಯಲ್ಲಿ ಒಂದೇ ರೀತಿಯ ವೇಗದೊಂದಿಗೆ ಇರುತ್ತವೆ.ಆದರೆ, ಫಾರ್ರೆಂಡೆಜ್ವಸ್ ಎಂದು ಕರೆಯಲ್ಪಡುವ ಸುಮಾರು 20ಕಿ.ಮೀ.ಎರಡು ಬಾಹ್ಯಾಕಾಶ ನೌಕೆಗಳ ನಡುವಿನ ಸಣ್ಣ ಸಾಪೇಕ್ಷ ವೇಗವನ್ನು ನೀಡುವ ಮತ್ತು ನಂತರ ಸರಿದೂಗಿಸುವ ಇದೇ ರೀತಿಯ ತಂತ್ರದೊಂದಿಗೆ, ಚೇಸರ್ 5ಕಿಮೀ, 1.5ಕಿಮೀ, 500ಮೀ, 225ಮೀ, 15ಮೀ ಮತ್ತು 3 ಅಂತರ-ಉಪಗ್ರಹದ ಅಂತರವನ್ನು ಹಂತಹಂತವಾಗಿ ಕಡಿಮೆಗೊಳಿಸುವುದರೊಂದಿಗೆ ಗುರಿಯನ್ನು ಸಮೀಪಿಸುತ್ತದೆ. ಅಂತಿಮವಾಗಿ, ಎರಡು ಬಾಹ್ಯಾಕಾಶ ನೌಕೆಗಳ ಡಾಕಿಂಗ್‌ಗೆ ಕಾರಣವಾಗುತ್ತದೆ. ಯಶಸ್ವಿ ಡಾಕಿಂಗ್‌ ಮತ್ತು ರಿಜಿಡೈಸೇಶನ್‌ ನಂತರ, ಎರಡು ಉಪಗ್ರಹಗಳ ನಡುವಿನ ವಿದ್ಯುತ್‌ ವರ್ಗಾವಣೆಯನ್ನು ಅನ್‌ಡಾಕ್‌ ಮಾಡುವ ಮೊದಲು ಮತ್ತು ಎರಡು ಉಪಗ್ರಹಗಳನ್ನು ಬೇರ್ಪಡಿಸುವ ಮೊದಲು ಪ್ರದರ್ಶಿಸಲಾಗುತ್ತದೆ. ಎರಡು ವರ್ಷಗಳವರೆಗೆ ನಿರೀಕ್ಷಿತ ಮಿಷನ್‌ ಜೀವಿತಾವಧಿಯಲ್ಲಿ ಆಯಾ ಪೇಲೋಡ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.

ಈ ಮಿಷನ್ನ ಮುಖ್ಯ ಉದ್ದೇಶಗಳೇನು?

ಸ್ಪಾಡೆಕ್ಸ್‌ (SpaDeX) ಮಿಷನ್‌ನ ಪ್ರಾಥಮಿಕ ಉದ್ದೇಶವು ಭೂಮಿಯ ವೃತ್ತಾಕಾರದ ಕೆಳ-ಕಕ್ಷೆಯಲ್ಲಿ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಸೇರಿಸುವ ಮತ್ತು ಪ್ರತ್ಯೇಕಿಸುವ ಡಾಕಿಂಗ್‌ ಮತ್ತು ಅನ್‌ಡಾಕಿಂಗ್‌ಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದಾಗಿದೆ. ಅಲ್ಲದೇ ಡಾಕ್‌ ಮಾಡಲಾದ ಬಾಹ್ಯಾಕಾಶ ನೌಕೆಗಳ ನಡುವೆ ವಿದ್ಯುತ್‌ ಶಕ್ತಿಯ ವರ್ಗಾವಣೆಯು ಬಾಹ್ಯಾಕಾಶದಲ್ಲಿ ರೋಬೋಟಿಕ್ಸ್‌ನಂತಹ ಭವಿಷ್ಯದ ಸಾಧನ(ಅಪ್ಲಿಕೇಶನ್‌)ಗಳಿಗೆ ಅವಶ್ಯಕವಾಗಿದೆ. ಸಂಯೋಜಿತ ಬಾಹ್ಯಾಕಾಶ ನೌಕೆ ನಿಯಂತ್ರಣ, ಮತ್ತು ಅನ್‌ಡಾಕ್‌ ಮಾಡಿದ ನಂತರ ಪೇಲೋಡ್‌ ಕಾರ್ಯಾಚರಣೆಗಳಲ್ಲೂ ಇದು ಮಹತ್ತರ ಪಾತ್ರ ವಹಿಸುತ್ತದೆ.

ಡಾಕಿಂಗ್ ತಂತ್ರಜ್ಞಾನದ ಉಪಯೋಗಗಳು:

1. ಸ್ಯಾಟಲೈಟ್ ಸಮಸ್ಯೆಗಳನ್ನು ಪರಿಶೀಲನೆ ಮತ್ತು ರಿಪೇರಿ.

2. ಸ್ಯಾಟಲೈಟ್ ಬ್ಯಾಟರಿ ಚಾರ್ಜಿಂಗ್ ಅಥವಾ ಇಂಧನ ತುಂಬುವ ಮೂಲಕ ಅದರ ಜೀವಿತಾವಧಿ ಹೆಚ್ಚಿಸುವುದು.

3. ಅಂತರಿಕ್ಷ ಕಸದ ವಿಲೇವಾರಿ

4. ಚಂದ್ರಯಾನ್-4 ಮಿಷನ್‌ನಲ್ಲಿ ಚಂದ್ರನ ಮಣ್ಣಿನ ಮಾದರಿ ಸಂಗ್ರಹಿಸಲು ಅಗತ್ಯ.

5. ಭಾರತೀಯ ಅಂತರಿಕ್ಷ ಸ್ಟೇಷನ್ ನಿರ್ಮಾಣ ಮತ್ತು ಗಗನಯಾನ್ ಮಿಷನ್‌ಗಳಿಗೆ ಸಹಾಯ.

ಈ ಮಿಷನ್ ಯಶಸ್ವಿಯಾಗಿ ಪೂರ್ಣಗೊಳ್ಳುವುದನ್ನು ಜನವರಿ 7, 2025ರಂದು ಡಾಕಿಂಗ್ ಪರಿಣಾಮದಿಂದ ನಿರ್ಣಯಿಸಲಾಗುವುದು. ಈ ಐತಿಹಾಸಿಕ ಸಾಧನೆಯು ಭಾರತವನ್ನು ಅಂತರಿಕ್ಷ ಕ್ಷೇತ್ರದಲ್ಲಿ ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ.

ಯು. ರ್.ರಾವ್ ಉಪಗ್ರಹ ಕೇಂದ್ರದ (ಯುಆರ್‌ಎಸ್‌ಸಿ) ನಿರ್ದೇಶಕ ಎಂ ಶಂಕರನ್, 'ಚೇಸರ್' ಮತ್ತು' ಟಾರ್ಗೆಟ್' ಬಾಹ್ಯಾಕಾಶ ನೌಕೆಗಳನ್ನು ಸಣ್ಣ ಸಾಪೇಕ್ಷ ವೇಗದಲ್ಲಿ ಉಡಾವಣೆಮಾಡಲಾಗಿದೆ. ಇದು ಭವಿಷ್ಯದ ಸಂಭಾವ್ಯ ಡಾಕಿಂಗ್ರ್ಯಾ ಕಾರ್ಯಾಚರಣೆಗಳಿಗಾಗಿ ಪರಸ್ಪರ ಸಮೀಪ ಚಲಿಸಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದ್ದಾರೆ

ಯಶಸ್ವಿ PSLV-C60 ಉಡಾವಣೆಯ ನಂತರ ಮಾತನಾಡಿದ ಇಸ್ರೋದ ಸೋಮನಾಥ್, ಮೈಲಿಗಲ್ಲಿನ ಮಹತ್ವವನ್ನು ಹೀಗೆ ವಿವರಿಸಿದರು. "ನೀವೆಲ್ಲರೂ ಸ್ಪಾಡೆಕ್ಸ್ (ಸ್ಪೇಸ್ ಡಾಕಿಂಗ್ಪ್ರಯೋಗ) ರಾಕೆಟ್‌ನಉಡಾವಣೆಯನ್ನು ನೋಡಿದ್ದೀರಿ.ಇದು ಸತೀಶ್ ಧವನ್ಬಾಹ್ಯಾಕಾಶ ಕೇಂದ್ರದಿಂದ ನಡೆಸಿದ 99ನೇ ಉಡಾವಣೆ. ಮುಂದಿನ ವರ್ಷದ ಆರಂಭದಲ್ಲಿ 100ನೇ ಉಡಾವಣೆಗೆ ಸಿದ್ಧರಾಗಿದ್ದೇವೆ." 


ಮುಂದುವರೆದು
, ಸೋಮನಾಥ್ ಅವರುಸೋಮವಾರದ PSLV-C60 ಮಿಷನ್ಹೆಚ್ಚು ಸಂಕೀರ್ಣವಾದ ಡಾಕಿಂಗ್ಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತದೆ,ಮುಂದಿನ ದಿನಗಳಲ್ಲಿ ಡಾಕಿಂಗ್ಸಿಸ್ಟಮ್ಗಳ ಪ್ರಭೇದಗಳು ಇರುತ್ತವೆ" ಇವು ಸಂಶೋಧನೆ,  ತಂತ್ರಜ್ಞಾನ, ಶಿಕ್ಷಣ, ವ್ಯಾಪಾರ ಮೊದಲಾದ ಹತ್ತು ಹಲವು ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.

ಒಟ್ಟಿನಲ್ಲಿ ಇದು ಸಂಪೂರ್ಣ ಸ್ವದೇಶೀ ಡಾಕಿಂಗ್ ತಂತ್ರಜ್ಞಾನವಾಗಿದ್ದು, ಈ ಮೂಲಕ ಎರಡು ಉಪಗ್ರಹಗಳನ್ನು ಸಂಪೂರ್ಣ ಸ್ವನಿಯಂತ್ರಣ (ಆಟೋನಮಸ್( ವ್ಯವಸ್ಥೆಯಿಂದ ಡಾಕ್ ಮಾಡುವುದು ಸಾಧ್ಯವಾಗಿದೆ. ಈ ತಂತ್ರಜ್ಞಾನ ಕ್ಯಾಮೆರಾ, ಲೇಸರ್, ಸೆನ್ಸರ್, ಸಾಫ್ಟ್ವೇರ್, ಮತ್ತು ಕಂಪ್ಯೂಟರ್ ಅಲ್ಗೋರಿಥಂಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇಸ್ರೋ ಈ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದಿದ್ದು, ಹೆಮ್ಮೆಯ ವಿಷಯವಾಗಿದೆ. ದೇಶೀಯ ಮಟ್ಟದಲ್ಲಿ ಅದನ್ನು ಯಶಸ್ವಿಯಾಗಿ ಬಳಸುತ್ತಿದೆ. ಭವಿಷ್ಯದ ಹಲವು ಮಹತ್ತರ ಬದಲಾವಣೆಗಳಿಗೆ ಇದು ದಿಕ್ಸೂಚಿಯಾಗಿದೆ