ಚಳಿ ಚಳಿಯಾಗಿದೆ ಈ ಚಳಿಯ . . . ಆಹಾ!
ಲೇಖಕರು : ಡಾ|| ಎಂ.ಜೆ. ಸುಂದರ್‌ರಾಮ್
ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು
ಮೈ ಗಡಗಡ ನಡುಕ, ಹಲ್ಲು ಕಟಕಟ ಕಡಿತ, ಜ್ವರ, ತಲೆನೋವು, ಆಲಸ್ಯ, ಹೊಟ್ಟೆ ತೊಳಸುವುದು, ಮೈ ಕೈ ನೋವು, ವಾಂತಿ, ಭೇದಿ, ದೇಹದ ಉಷ್ಣತೆ 104A Fಕ್ಕೆ ಏರುತ್ತದೆ. ಬೆವರಿ, ಮೈಯೆಲ್ಲ ಒದ್ದೆಯಾಗುತ್ತದೆ. ಸುಸ್ತು, ನಿಶ್ಶಕ್ತಿ... ಇವೆಲ್ಲ ಮಲೇರಿಯದ ರೋಗಲಕ್ಷಣಗಳು. ಅಲೆಕ್ಸಾಂಡರ್, ಚೆಂಗಿಸ್‌ಖಾನ್ ಮುಂತಾದ ಯೋಧರು ಈ ರೋಗಕ್ಕೆ ಬಲಿಯಾಗಿದ್ದಾರೆ. ಈ ರೋಗವು ಆಹುತಿ ತೆಗೆದುಕೊಂಡಿರುವಷ್ಟು ಜನರನ್ನು ಇನ್ಯಾವ ರೋಗವೂ ತೆಗೆದುಕೊಂಡಿಲ್ಲ. ಎರಡನೇ ಮಹಾಯುದ್ಧದಲ್ಲಿ ಬಂದೂಕಿನಿದ ಸತ್ತ ಸೈನಿಕರಿಗಿಂತ ಮಲೇರಿಯದಿಂದ ಅಸುನೀಗಿದ ಸೈನಿಕರ ಸಂಖ್ಯೆ ಐದುಪಟ್ಟು ಹೆಚ್ಚಾಗಿತ್ತಂತೆ!
ಮಲೇರಿಯ ರೋಗಕ್ಕೆ ಕಾರಣವೇನು? ಇದು ರೋಗಿಯಿಂದ ಆರೋಗ್ಯ ವಂತನಿಗೆ ಹೇಗೆ ಹರಡುತ್ತದೆ ಎಂಬ ವಿಷಯಗಳು ಯಾರಿಗೂ ಗೊತ್ತಿರದೆ ಬಹು ಕಾಲದವರೆಗೂ ನಿಗೂಢವಾಗಿಯೇ ಇತ್ತು. ಈ ರೋಗವು ಸಾಮಾನ್ಯವಾಗಿ ಜೌಗುಪ್ರದೇಶ ಗಳಲ್ಲಿ ಕಂಡುಬರುವುದರಿಂದ ಇಲ್ಲಿ ನಿಂತ ನೀರು ಸುತ್ತ ಮುತ್ತಲ ಗಾಳಿಯನ್ನು ಮಲಿನವಾಗಿಸುತ್ತದೆಯೆಂದು ಜನ ನಂಬಿದ್ದರು. ಇಟಲಿ ಭಾಷೆಯಲ್ಲಿ ‘ಮಾಲ’ (mala) ಎಂದರೆ ‘ಕೆಟ್ಟ’ ಅಥವ ‘ಮಲಿನ’ ಎಂದೂ, ‘ಏರಿಯ’ (aria) ಎಂದರೆ ‘ಗಾಳಿ’ ಎಂದೇ ಜನಸಾಮಾನ್ಯರಲ್ಲಿ ರೂಢಿಯಲ್ಲಿತ್ತು. ಮಲೇರಿಯ ಎಂದರೆ ‘ಜೌಗುಪ್ರದೇಶದ ಮಲಿನ ಗಾಳಿ’ ಎಂದರ್ಥ. ಮಲಿನ ಗಾಳಿಗೂ ಮಲೇರಿಯಗೂ ಯಾವ ಸಂಬಂಧವಿಲ್ಲ ವೆಂಬುದು ನಮಗೆ ಈಗ ಗೊತ್ತಿದ್ದರೂ ಅದೇ ಹಳೆಯ ನಾಮಕರಣವನ್ನು ಉಳಿಸಿಕೊಳ್ಳಲಾಗಿದೆ.
ಭಾರತದ ಅಲ್ಮೊರಾದಲ್ಲಿ ಜನಿಸಿದ ರೊನಾಲ್ಡ್ ರಾಸ್ (Ronald Ross) ಎಂಬ ಬ್ರಿಟಿಷ್ ಸೈನ್ಯದ ವೈದ್ಯರು ಈ ಸಂಶೋಧನೆಯನ್ನು ಮುಂದು ವರಿಸಲು ನಿಶ್ಚಯಿಸಿದರು. ತಮ್ಮ ಜೀವನದ ಬಹಳಷ್ಟು ಭಾಗವನ್ನು ಇವರು ಭಾರತದಲ್ಲೇ ಕಳೆದರು. ಸೊಳ್ಳೆಗಳು ಹೇರಳವಾಗಿದ್ದ ಸ್ಥಳಗಳಲ್ಲಿ ಹೆಚ್ಚು ಜನ ಮಲೇರಿಯದಿಂದ ಪೀಡಿತರಾಗುವುದನ್ನು ಅವರು ಗಮನಿಸಿದ್ದರು. ಈ ಸ್ಥಳಗಳಲ್ಲಿ ತಂಗಿದ್ದ ಕೊಳಚೆ ನೀರನ್ನು ಸ್ವಯಂಸೇವಕರಿಗೆ ಕುಡಿಸಿ ಅವರಿಗೆ ಮಲೇರಿಯ ಸೋಂಕುವುದೋ ಎಂದು ಪರೀಕ್ಷಿಸಿದರು. ಆದರೆ ಅವರ‍್ಯಾರಿಗೂ ಮಲೇರಿಯ ಸೋಂಕಲಿಲ್ಲ.
ರಾಸ್ 31 ವಿವಿಧ ಪ್ರಬೇಧಗಳ ಸೊಳ್ಳೆಗಳನ್ನು ಹಿಡಿದು, ಅವನ್ನು ಕೊಯ್ದು ಪ್ಲಾಸ್ಮೋಡಿಯಂಗಾಗಿ ಹುಡುಕಾಡಿದರು. ಆದರೆ, ಅವರಿಗೆ ಅವುಗಳಲ್ಲಿ ಯಾವುದೇ ಸುಳಿವೂ ಸಿಗಲಿಲ್ಲ. ಸಿಕಂದರಾಬಾದ್‌ನಲ್ಲಿದ್ದಾಗ ರಾಸ್ ಸ್ವತಃ ಸೊಳ್ಳೆಪರದೆ ಬಳಸಿ, ಕೊಠಡಿಯ ಕಿಟಕಿಗಳ ಬಾಗಿಲನ್ನು ಮುಚ್ಚಿ ಮಲಗುತ್ತಿದ್ದರು. ಆದರೂ ಅವರಿಗೆ ಮಲೇರಿಯ ಸೋಂಕಿತು! ಇದರಿಂದ ಹತಾಶರಾದ ರಾಸ್ ಮಲೇರಿಯ ಬಗ್ಗೆ ಸಂಶೋಧನೆಯನ್ನು ಮುಂದುವರಿಸುವ ಆಸಕ್ತಿಯನ್ನು ಕಳೆದುಕೊಂಡು, ಸಂಶೋಧನೆ ಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದರು. ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಮ್ಯಾನ್ಸನ್ ರಿಗೂ ತಿಳಿಸಿದರು. ರಾಸ್ ತಮ್ಮ ಸಂಶೋಧನೆ ಯನ್ನು ಈ ಹಂತದಲ್ಲಿ ನಿಲ್ಲಿಸುವುದು ಮ್ಯಾನ್ಸನ್ ರಿಗೆ ಸರಿಯೆನಿಸಲಿಲ್ಲ. ಅದನ್ನು ನಿಲ್ಲಿಸಬಾರದೆಂದು ಮ್ಯಾನ್ಸನ್ ರಾಸ್‌ರಿಗೆ ತಿಳಿಸಿ, ಅವರ ಸಂಶೋ ಧನೆಗಳು ಸರಿಯಾದ ದಿಕ್ಕಿನಲ್ಲಿ ಮುಂದುವರಿದಿದ್ದು, ಅವು ಶೀಘ್ರವೇ ಒಳ್ಳೆಯ ಫಲಿತಾಂಶವನ್ನು ಕೊಡುವುವೆಂದು ಮ್ಯಾನ್ಸನ್ ರವರು ರಾಸ್‌ರನ್ನು ಉತ್ತೇಜಿಸಿದರು.
ಅದೇ ರೀತಿ, ರಾಸ್ ಹಣದಾಸೆ ತೋರಿಸಿ, ಒಬ್ಬ ಸ್ವಯಂಸೇವಕನಿಗೆ ಸೊಳ್ಳೆ ನೀರನ್ನು ಕುಡಿಸಿದರು. ಆದರೆ ಮಲೇರಿಯ ರೋಗ ಸೋಂಕಲಿಲ್ಲ. ಇನ್ನೂ ಕೆಲವು ಸ್ವಯಂಸೇವಕರಿಗೆ ಕುಡಿಸಿದರು. ಅವರಿಗೂ ರೋಗ ಸೋಂಕಲಿಲ್ಲ. ಸೊಳ್ಳೆಗಳ ಜೀರ್ಣಾಂಗವ್ಯೂಹವನ್ನು ಕೊಯ್ದು ನೋಡಲು ನಿಶ್ಚಯಿಸಿದರು. ಅದರಂತೆ ಕೂಡಲೇ ಎರಡು ಸೊಳ್ಳೆಗಳನ್ನು ಕೊಯ್ದು ಪರೀಕ್ಷಿಸಿದರು. ಆದರೆ ಅವರಿಗೆ ಅವುಗಳಲ್ಲಿ ಅಂತಹ ವಿಶೇಷತೆಯೇನೂ ಕಾಣಿಸಲಿಲ್ಲ. ಮೂರು ದಿನಗಳ ಬಳಿಕ ಇನ್ನೊಂದು ಸೊಳ್ಳೆಯನ್ನು ಕೊಯ್ದು ನೋಡಿದಾಗ ಅವುಗಳಲ್ಲಿ ನೀರ್ಗುಳ್ಳೆಗಳು (vacuoles) ಗೋಚರಿಸಿದವು. ನಾಲ್ಕನೇ ದಿನ ಮತ್ತೊಂದು ಸೊಳ್ಳೆಯನ್ನು ಕೊಯ್ದರು. ಅದರ ಜಠರಭಿತ್ತಿಯಲ್ಲಿ ಗುಂಡಾಕಾರದ ಗಂಟುಗಳು ಕಂಡವು. ಅವನ್ನು ಒಡೆದಾಗ ಒಳಗೆ ಅನೇಕ ಅರ್ಧ ಚಂದ್ರಾಕಾರದ ಕರಿಕಾಯಗಳು ಗೋಚರಿಸಿದವು. ಐದನೇ ದಿನ ಉಳಿದಿದ್ದ ಸೊಳ್ಳೆಯನ್ನೂ ಕೊಯ್ದರು. ಇದರ ಜಠರಭಿತ್ತಿಯಲ್ಲಿ ಇನ್ನೂ ದೊಡ್ಡ ಗಂಟುಗಳು ಬೆಳೆದಿರುವುನ್ನು ಕಂಡು ರಾಸ್‌ಗೆ ಸಂತೋಷವಾಯಿತು. ಮಲೇರಿಯ ರೋಗಾಣುಗಳನ್ನು ಹರಡುವುದು ಅನಾಫಿಲೀಸ್ ಸೊಳ್ಳೆ ಎಂದು ಅವರಿಗೆ ಆಗ ಖಚಿತವಾಯಿತು. ಇದುವರೆಗೂ ತಾವು ಸಂಶೋಧನೆಗೆ ಬಳಸಿದ ಸೊಳ್ಳೆಗಳೆಲ್ಲ ಬೇರೆ ಬೇರೆ ಪ್ರಬೇಧಗಳಿಗೆ ಸೇರಿದ್ದವಾದ್ದರಿಂದ ತಮಗೆ ಅವುಗಳಲ್ಲಿ ಮಲೇರಿಯ ರೋಗಾಣುಗಳು ಸಿಗಲಿಲ್ಲ ಎಂದು ರಾಸ್‌ಗೆ ಅರಿವಾಯಿತು.
1898ನೇ ಜುಲೈ 4ರಂದು ಅನಾಫಿಲೀಸ್ ಸೊಳ್ಳೆಯ ತಲೆಯನ್ನು ಕೊಯ್ದು ನೋಡಿದಾಗ ರಾಸ್‌ಗೆ ಅದರ ಜೊಲ್ಲುಗ್ರಂಥಿಗಳು ಗೋಚರಿಸಿದವು. ಅವುಗಳ ಮೇಲೆ ಹೇರಳವಾದ ರೋಗಾಣುಗಳು ದಟ್ಟವಾಗಿ ನೆಲೆಸಿದ್ದವು. ಸೊಳ್ಳೆ ಮನುಷ್ಯನ ರಕ್ತವನ್ನು ಹೀರುವಾಗ, ತನ್ನ ಮೂತಿಯನ್ನು ಚುಚ್ಚಿ, ಒಂದು ತೊಟ್ಟು ಜೊಲ್ಲುರಸವನ್ನು ಸುರಿಸುತ್ತದೆ. ಈ ದ್ರವದಲ್ಲಿ ಹೆಪ್ಪುರೋಧಕ ಅಂಶ ವಿದ್ದು, ಅದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಆ ತೊಟ್ಟು ಜೊಲ್ಲು ರಸದ ಮೂಲಕ ಸಾವಿರಾರು ಪ್ಲಾಸ್ಮೋಡಿಯಂ ರೋಗಾಣುಗಳು ಅವನ ರಕ್ತವನ್ನು ಸೇರುತ್ತವೆ ಎಂದು ರಾಸ್ ಕಂಡುಹಿಡಿದರು.
ಒಮ್ಮೆ, ಸ್ಪೇನ್ ದೇಶದ ಸೈನ್ಯ ಯುದ್ಧಕ್ಕೆ ಹೊರಟಾಗ ಅದರಲ್ಲೊಬ್ಬ ಸೈನಿಕನಿಗೆ ಮಲೇರಿಯರೋಗ ಸೋಂಕಿತಂತೆ. ಅವನು ಬದುಕಲಾರನೆಂದು ತಿಳಿದು, ಉಳಿದ ಸೈನಿಕರು ಅವನನ್ನು ಅಲ್ಲೇ ತೊರೆದು ಮುನ್ನಡೆದರಂತೆ. ಆ ರೋಗಿ ಬಾಯಾರಿಕೆಯಿಂದ ಬಳಲಿ, ಪಕ್ಕದ ಕೊಳಕ್ಕೆ ಪ್ರಯಾಸಪಟ್ಟು ತೆವಳಿಕೊಂಡುಹೋಗಿ ಆ ನೀರನ್ನು ಸಮೃದ್ಧಿಯಾಗಿ ಕುಡಿದನಂತೆ. ಅದು ಕಹಿಯಾಗಿತ್ತಂತೆ. ಕೂಡಲೇ ಗಾಢನಿದ್ರೆ ಬಂದು, ಅಲ್ಲೇ ಮಲಗಿಬಿಟ್ಟನಂತೆ. ಬಹಳ ಕಾಲದ ನಂತರ ಎಚ್ಚರವಾದಾಗ ಅವನಿಗೆ ಮಲೇರಿಯ ಮಾಯವಾಗಿ ಮೊದಲಿನಂತೆ ಆರೋಗ್ಯವಂತನಾದನಂತೆ! ಕೊಳದ ದಡದಲ್ಲಿ ಹೆಮ್ಮರದ ಕಾಂಡವೊಂದು ಸಿಡಿಲಿನಾರ್ಭಟಕ್ಕೆ ಸೀಳಲ್ಪಟ್ಟು ನೀರಲ್ಲಿ ಬಿದ್ದಿದ್ದು, ಅದರ ತೊಗಟೆಗಳು ನೀರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ತೇಲುತ್ತಿದ್ದವಂತೆ. ಅದರ ಒಂದು ತುಣುಕನ್ನು ತಿಂದಾಗ ಅದೂ ಕಹಿಯಾಗಿತ್ತಂತೆ. ಆ ತೊಗಟೆಗೆ ಮಲೇರಿಯವನ್ನು ಗುಣಪಡಿಸುವ ವಿಶೇಷ ಗುಣವಿದೆಯೆಂದೂ, ನೀರಲ್ಲಿ ಬಿದ್ದ ಅವು ನೀರನ್ನು ಕಹಿ ಮಾಡಿದ್ದವು ಎಂದೂ ಅವನು ಆಗ ಗ್ರಹಿಸಿದನಂತೆ. ಆ ಮರದ ಹೆಸರೇ ಕ್ವಿನಕ್ವಿನ (Quina quina). ಅಂದಿನಿಂದ ಮಲೇರಿಯವನ್ನು ಗುಣಪಡಿಸಲು ಈ ಮರದ ತೊಗಟೆಯನ್ನು ಔಷಧಿಯಂತೆ ಉಪಯೋಗಿಸುತ್ತಿದ್ದಾರೆ.
ಮಲೇರಿಯ ಹರಡಿದಂತೆ, ಕ್ವಿನಕ್ವಿನ ಮರದ ತೊಗಟೆಗೆ ಎಲ್ಲೂ ಇಲ್ಲದ ವಿಪರೀತ ಬೇಡಿಕೆಯುಂಟಾಯಿತು. ಈ ತೊಗಟೆಯನ್ನು ವಿದೇಶಗಳಿಗೆ ಹೇರಳವಾಗಿ ಮಾರಾಟ ಮಾಡಲಾರಂಭಿಸಿದರು. ಇದನ್ನು ಮನಗಂಡ ಕೆಲವು ಅಪ್ರಾಮಾಣಿಕ ವ್ಯಾಪಾರಿಗಳು ಈ ತೊಗಟೆಯನ್ನೇ ಹೋಲುವ ಸಿಂಕೋನ (Sincona) ಎಂಬ ಮತ್ತೊಂದು ಮರದ ತೊಗಟೆಗಳನ್ನು ಕಲಬೆರಕೆ ಮಾಡಿ ಮಾರಲಾರಂಭಿಸಿದರು. ಕ್ವಿನಕ್ವಿನ ತೊಗಟೆ ಮಲೇರಿಯವನ್ನು ಗುಣಪಡಿಸ ದೆಂದೂ ಸಿಂಕೋನ ತೊಗಟೆಗಳೇ ಮಲೇರಿಯ ರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆಂದೂ ಅನೇಕ ವೈದ್ಯರಿಗೆ ಕ್ರಮೇಣ ಮನವರಿಕೆಯಾಯಿತು. ಸಿಂಕೋನ ತೊಗಟೆಯಲ್ಲಿ ಕ್ವಿನೈನ್ (quinine) ಎಂಬ, ಮಲೇರಿಯ ರೋಗಾಣುಗಳನ್ನು ನಾಶಮಾಡಬಲ್ಲ ರಾಸಾಯನಿಕ ಇದರಲ್ಲಡಕವಾಗಿದೆಯೆಂದೂ ಇದೊಂದೇ ಔಷಧವು ಮಲೇರಿಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲದೆಂದೂ ತಿಳಿದುಬಂದಿತು.
ಕ್ವಿನಕ್ವಿನ ತೊಗಟೆ ಸಾಕಷ್ಟು ದೊರಕಿದ್ದರೆ, ಸಿಂಕೋನದ ರೋಗನಿವಾರಕ ಶಕ್ತಿ ಬೆಳಕಿಗೆ ಬರುತ್ತಲೇ ಇರಲಿಲ್ಲ. ಸುಮಾರು 3 ಶತಮಾನಗಳವರೆಗೆ ರೋಗಿಗಳಿಗೆ ಸರಿಯಾದ ಔಷಧವೇ ಇಲ್ಲದೆ, ಅನೇಕರು ಸಾವನ್ನಪ್ಪುತ್ತಿದ್ದರು. ಈ ರೀತಿಯ ಆಕಸ್ಮಿಕಗಳು ಕಾಲಾನುಕಾಲಕ್ಕೆ ಉದ್ಭವಿಸಿ ವಿಜ್ಞಾನವನ್ನು ಶ್ರೀಮಂತಗೊಳಿಸಿವೆ. ಒಂದು ರೀತಿಯಲ್ಲಿ ಸೆರೆಂಡಿಪಿಟಿ ಇಲ್ಲೂ ತನ್ನ ಪವಾಡವನ್ನು ಪ್ರದರ್ಶಿಸಿದೆ!
No comments:
Post a Comment