ಬರಲಿದೆ,
ಮಾನವ ಭ್ರೂಣದ ಬೆಳವಣಿಗೆಗೊಂದು ಪಾಸ್ ಬಟನ್ !
ಲೇಖಕರು
: ಡಾ. ಟಿ.ಎ.ಬಾಲಕೃಷ್ಣ ಅಡಿಗ
ಪ್ರಾಣಿವಿಜ್ಞಾನ ಪ್ರಾಧ್ಯಾಪಕರು
ಹಾಗೂ
ವಿಜ್ಞಾನ ಸಂವಹನಕಾರರು
ಸ್ತನಿಗಳೂ ಸೇರಿದಂತೆ ಅನೇಕ ಪ್ರಾಣಿ ಪ್ರಭೇದಗಳಲ್ಲಿ ಪೋಷಕ ಪ್ರಾಣಿ ಹಾಗೂ ಮರಿಜೀವಿಗಳ ಉಳಿವಿನ ಸಾಧ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಭ್ರೂಣದ ಬೆಳವಣಿಗೆಯ ಅವಧಿಯನ್ನು ನಿಯಂತ್ರಿಸುವ ವಿಶೇಷ ವ್ಯವಸ್ಥೆಯೊಂದು ಇರುವುದನ್ನು ಗಮನಿಸಬಹುದು. ಪರಿಸರದ ವೈಪರೀತ್ಯಗಳಿಗೆ ಅನುಗುಣವಾಗಿ, ಕೆಲವು ವಾರಗಳ ಅಥವಾ ತಿಂಗಳುಗಳ ಕಾಲ ಭ್ರೂಣದ ಬೆಳವಣಿಗೆ ಸ್ಥಗಿತಗೊಂಡು, ಸುತ್ತಲಿನ ಪರಿಸ್ಥಿತಿ ಅನುಕೂಲಕರವಾದ ನಂತರ ಮತ್ತೆ ಬೆಳವಣಿಗೆ ಪ್ರಾರಂಭವಾಗುವ ಈ ಪ್ರಕ್ರಿಯೆಗೆ ಭ್ರೂಣೀಯ ಸುಪ್ತಾವಸ್ಥೆ (embryonic diapause) ಎಂದು ಕರೆಯಲಾಗುತ್ತದೆ. ಭ್ರೂಣದ ಕೆಲ ವಿಶಿಷ್ಟ ಜೀವಕೋಶಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳು ಇದಕ್ಕೆ ಕಾರಣ ಎಂಬುದನ್ನು ಪತ್ತೆ ಮಾಡಲಾಗಿದೆ. ಇಂಥ ಒಂದು ವ್ಯವಸ್ಥೆ ಮಾನವ ಭ್ರೂಣದ ಜೀವಕೋಶಗಳಲ್ಲಿಯೂ ಇರಬಹುದೇ ಎಂಬ ಪ್ರಶ್ನೆಗೆ ಇತ್ತೀಚಿನವರೆಗೂ ಉತ್ತರ ದೊರೆತಿರಲಿಲ್ಲ.
ಮಾನವನ ಭ್ರೂಣದ ಬೆಳವಣಿಗೆ ಹಾಗೂ ಸಂತಾನೋತ್ಪತ್ತಿ ತಂತ್ರಜ್ಞಾನಗಳಿಗೆ ಸಂಬಂಧಿಸಿದ ನಮ್ಮ ತಿಳುವಳಿಕೆಯನ್ನು ಬದಲಾಯಿಸಬಲ್ಲಂತ ಸಂಶೋಧನೆಯೊಂದನ್ನು ವಿಜ್ಞಾನಿಗಳ ತಂಡವೊಂದು ಇತ್ತೀಚೆಗೆ ಪ್ರಕಟಿಸಿದೆ. ಭ್ರೂಣದ ಬೆಳವಣಿಗೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬಲ್ಲ ನೈಸರ್ಗಿಕ ತಂತ್ರನವೊಂದನ್ನು ಪತ್ತೆ ಮಾಡಲಾಗಿದೆ. ಆಸ್ಟ್ರಿಯಾ ದೇಶದ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲಾರ್ ಜೆನಿಟಿಕ್ಸ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲಾರ್ ಬಯೋಟೆಕ್ನಾಲಜಿಯ ವಿಜ್ಞಾನಿಗಳು ನಡೆಸಿದ ಸುದೀರ್ಘ ಸಂಶೋಧನೆಯ ಇತ್ತೀಚಿನ ಫಲಿತಾಂಶಗಳ ಪ್ರಕಾರ ಮಾನವ ಭ್ರೂಣದ ಜೀವಕೋಶಗಳಲ್ಲಿಯೂ ಇಂಥದ್ದೇ ನಿಯಂತ್ರಣ ವ್ಯವಸ್ಥೆ ಒಂದನ್ನು ಪ್ರೇರೇಪಿಸಬಹುದು. ನೇರವಾಗಿ ಮಾನವ ಭ್ರೂಣದ ಮೇಲೆ ಪ್ರಯೋಗ ನಡೆಸುವುದು ಅಸಾಧ್ಯವಾದ್ದರಿಂದ ಈ ವಿಜ್ಞಾನಿಗಳು ಪರ್ಯಾಯವಾಗಿ ಆಕರ ಜೀವಕೋಶಗಳನ್ನು(stem cells) ಹಾಗೂ ಬ್ಲಾಸ್ಟಾಯ್ಡ್ ಗಳು(blastoids) ಎಂದು ಕರೆಯಲಾಗುವ ಆಕರ ಜೀವಕೋಶ-ಆಧಾರಿತ ಬ್ಲಾಸ್ಟೋಸಿಸ್ಟ್(blastocyst) ಮಾದರಿಗಳನ್ನು ತಮ್ಮ ಪ್ರಯೋಗಗಳಿಗೆ ಬಳಸಿಕೊಂಡರು. ಒಂದು ನಿರ್ದಿಷ್ಟ ಜೀವರಾಸಾಯನಿಕ ಪಥಮಾರ್ಗ(pathway) ಭ್ರೂಣದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂಬ ಅಂಶವನ್ನು ತಮ್ಮ ಸಂಶೋಧನೆಗಳಿಂದ ಅವರು ಕಂಡುಕೊಂಡರು. ಸ್ತನಿ ಪ್ರಾಣಿಗಳಲ್ಲಿ ಭ್ರೂಣದ ಬೆಳವಣಿಗೆಯನ್ನು ನಿಯಂತ್ರಿಸುವ ಈ ಪ್ರಮುಖ ಪಥಮಾರ್ಗಕ್ಕೆ ಎಮ್‌ಟಾರ್ ಪಥಮಾರ್ಗ ( M Tor pathway) ಎಂದು ಹೆಸರಿಸಲಾಗಿದೆ. ಪ್ರಯೋಗಕ್ಕೆ ಬಳಸಲಾದ ಬ್ಲಾಸ್ಟಾಯ್ಡ್‌ನ ಜೀವಕೋಶಗಳಲ್ಲಿ ಈ ಎಮ್‌ಟಾರ್ ಸಂಕೇತಿಸುವ ಪಥಮಾರ್ಗ ಎಂಬ ʼವಿರಾಮದ ಗುಂಡಿʼ (pause button)ಯನ್ನು ಬಳಸುವ ಮೂಲಕ ಸುಪ್ತಾವಸ್ಥೆಯನ್ನು ಹೋಲುವ ಸ್ಥಿತಿಯನ್ನು ಪ್ರೇರೇಪಿಸಬಹುದು ಎಂಬುದನ್ನು ಅವರು ಕಂಡುಕೊಂಡರು. ಆಕರ ಜೀವಕೋಶಗಳು ಮತ್ತು ಬ್ಲಾಸ್ಟಾಯ್ಡ್ ಗಳಿಗೆ ಎಮ್‌ಟಾರ್ ನಿಯಂತ್ರಕಗಳನ್ನು ಒದಗಿಸಿದಾಗ ಭ್ರೂಣದ ಬೆಳವಣಿಗೆ ವಿಳಂಬಿತಗೊಂಡಿದ್ದನ್ನು ಗಮನಿಸಿದರು. ಭ್ರೂಣಕೋಶಗಳ ವಿಭಜನೆಯ ವೇಗ ಕುಂಠಿತಗೊಳ್ಳುವುದರ ಜೊತೆಗೆ, ಭ್ರೂಣವು ಗರ್ಭಕೋಶದ ಭಿತ್ತಿಯಲ್ಲಿ ನೆಲೆಗೊಳ್ಳುವ ಪ್ರಕ್ರಿಯೆಯೂ (implantation) ಮುಂದೂಡಿಕೆಯಾದುದು ಕಂಡುಬಂದಿತು. ಆದರೆ, ಭ್ರೂಣವು ಸುಪ್ತಾವಸ್ಥಯನ್ನು ತಲುಪುವ ಸಾಧ್ಯತೆ ಒಟ್ಟು ಬೆಳವಣಿಗೆಯ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತವಾಗಿದ್ದುದು ಕಂಡುಬಂದಿತು.
ಈ ಒಂದು ಸಂಶೋಧನೆಯು ಮಾನವರಲ್ಲಿ ಕೃತಕ ಗರ್ಭಧಾರಣೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಸುಧಾರಣೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯಬಹುದೆಂಬ ನಿರೀಕ್ಷೆ ವಿಜ್ಞಾನಿಗಳದ್ದು. ಎಮ್‌ಟಾರ್ ಪಥಮಾರ್ಗ ʼವಿರಾಮದ ಗುಂಡಿʼಯನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ವಿಶೇಷವಾಗಿ ಅಂತಃ ಪ್ರನಾಳೀಯ ನಿಷೇಚನ (In Vitro Fertilization – I.V.F.) ತಂತ್ರಜ್ಞಾನದಲ್ಲಿ ಭ್ರೂಣವನ್ನು ಸೂಕ್ತ ಸಮಯದಲ್ಲಿ ಗರ್ಭಕೋಶದಲ್ಲಿ ನೆಲೆಗೊಳಿಸುವ ಪ್ರಕ್ರಿಯೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಬಹುದು. ಅಲ್ಲದೆ, ಭ್ರೂಣವನ್ನು ಅತ್ಯಂತ ಸೂಕ್ತ ಸಮಯದಲ್ಲಿ ನೆಲೆಗೊಳಿಸುವ ಮೂಲಕ, ಈ ಪ್ರಕ್ರಿಯೆಯ ಯಶಸ್ಸಿನ ಗತಿಯನ್ನು ಹೆಚ್ಚಿಸಬಹುದು ಹಾಗೂ ಗರ್ಭಧಾರಣೆಯನ್ನು ಖಚಿತ ಪಡಿಸಿಕೊಳ್ಳಬಹುದು.
ಮಾನವ ಭ್ರೂಣದ ಬೆಳವಣಿಗೆಯ ಈ ʼವಿರಾಮದ ಗುಂಡಿʼ ಯ ವಿಧಾನದ ಬಳಕೆಯು ವಿಶೇಷವಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಸ್ತ್ರೀಯರಲ್ಲಿ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಕೊಡುಗೆಯಾಗಲಿದೆ. ಅಲ್ಲದೆ, ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ʼಅವಶ್ಯಕತೆಗೆ ಅನುಗುಣವಾದ” ಔಷಧಿಗಳ ತಯಾರಿಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಈ ತಂತ್ರಜ್ಞಾನವು ತನ್ನ ಸಂಭವನೀಯ ಪ್ರಯೋಜನಗಳ ಜೊತೆಗೇ ಕೆಲವು ನೈತಿಕ ಮೌಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಬೆಳವಣಿಗೆಯ ಹಂತಗಳಲ್ಲಿ ಹಸ್ತಕ್ಷೇಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಜಿಜ್ಞಾಸೆಯೊಂದು ಪ್ರಮುಖವಾಗಿ ಕಾಡುತ್ತಿದೆ. ವಿಧಾನವನ್ನು ಬಳಸುವಾಗ ವಹಿಸಬೇಕಾದ ಎಚ್ಚರಿಕೆ, ವಿವೇಚನೆಗಳ ಬಗ್ಗೆ ಚರ್ಚೆ ಎದ್ದಿದೆ. ತಂತ್ರಜ್ಞಾನದ ಬಳಕೆಯಿಂದಾಗುವ ಹಸ್ತಕ್ಷೇಪಗಳ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಭವಿಷ್ಯದಲ್ಲಿ ಸಂಶೋಧನೆಗಳು ನಡೆಯಬೇಕಿದೆ. ತಂತ್ರಜ್ಞಾನದ ಅಭಿವೃದ್ಧಿಯು ಸಾಮಾಜಿಕ ಮೌಲ್ಯಗಳ ಹಾಗೂ ನೈತಿಕ ಪ್ರಮಾಣಗಳ ಜೊತೆಗೆ ಸಮತೋಲನ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ವಿಜ್ಞಾನಿಗಳ, ನೀತಿ ನಿರೂಪಕರ ಹಾಗೂ ನೈತಿಕ ಮೌಲ್ಯ ಪ್ರತಿಪಾದಕರ ನಡುವೆ ಸಮನ್ವಯ ಮೂಡಬೇಕಾದ ಅವಶ್ಯಕತೆಯಂತೂ ಇದೆ.
----/////------
No comments:
Post a Comment