ಬೆಳಕು ಸೂಸುವ ಸಸ್ಯಗಳು


ಬೆಳಕು ಸೂಸುವ ಸಸ್ಯಗಳು 

          ಲೇಖನ ಡಾ. ಬಾಲಕೃಷ್ಣ ಅಡಿಗ ಟಿ.ಎ.

 




    ನಿಮ್ಮ ಮನೆಯಂಗಳದಲ್ಲಿರುವ ಉದ್ಯಾನವನದಲ್ಲಿ ರಾತ್ರಿಯಾಗುತ್ತಿದ್ದಂತೆ ತಮ್ಮದೇ ಬೆಳಕನ್ನು ಹೊರಸೂಸುವ ಸಸ್ಯಗಳನ್ನು ಬೆಳೆಯುವಂತಾದರೆ ಹೇಗಿರುತ್ತದೆ ? ಅಂಥ ಸಸ್ಯಗಳ ಮಧ್ಯೆ ವಾಯುವಿಹಾರ ಮಾಡುವ ಕನಸು ಕಾಣಬಹುದೆ ? ಕುಲಾಂತರಿ ತಂತ್ರಜ್ಞಾನ ಬಳಸಿ ಇದು ಸಾಧ್ಯ ಎಂದು ಇಂಗ್ಲೆಂಡಿನ ವಿಜ್ಞಾನಿಯೊಬ್ಬರು ತೋರಿಸಿಕೊಟ್ಟಿದ್ದಾರೆ. 

ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಸಂಶ್ಲೇಷಿತ ಜೀವ ವಿಜ್ಞಾನ ವಿಭಾಗದ ಕರೇನ್ ಸಾರ್ಕಿಸ್ಯಾನ್ (Karen Sarkisyan)  ತನ್ನ ಪ್ರಯೋಗಾಲಯದ ಕತ್ತಲ ಕೋಣೆಯಲ್ಲಿ ಬೆಳಕು ಸೂಸುತ್ತಿರುವ ಪೆಟೂನಿಯಾ (Petunia) ಸಸ್ಯಗಳಿಗಿಂತ ಹೆಚ್ಚು ಸ್ಪೂರ್ತಿ ನೀಡುವ ಬೇರೊಂದು ವಿಷಯವೇ ಕಾಣುತ್ತಿಲ್ಲ. 2009ರಲ್ಲಿ ಬಿಡುಗಡೆಯಾದ 'ಅವತಾರ್‌' ಚಲನಚಿತ್ರದಂತೆ, ಹೆಚ್ಚು ಜನರು ಈ ಒಂದು ಅಚ್ಚರಿಯನ್ನು ಅನುಭವಿಸ ಬೇಕೆಂಬುದು ಆವನ ಇಚ್ಛೆ. ಸಾರ್ಕಿಸ್ಥಾನ್ ಪೆಟೂನಿಯಾ ಸಸ್ಯಗಳಲ್ಲಿ ವಿಶಿಷ್ಟ ಪ್ರಯೋಗ ನಡೆಸಿ ಅವು ಜೀವದೀಪ್ತಿ (bio luminescence) ಮಾಡುವಲ್ಲಿ ಯಶಸ್ವಿಯಾದವರು. ಆತ ಸ್ಥಾಪಿಸಿದ ಇಡಾಹೊ ಮೂಲದ ಲೈಟ್ ಬಯೋ(light bio)  ಎಂಬ ಬಯೋ ಟೆಕ್ ಸಂಸ್ಥೆ ಅಮೆರಿಕಾದ ಕೃಷಿ ಇಲಾಖೆಯಿಂದ ಜೀವದೀಪ್ತಿ ಹೊರಸೂಸುವ ಪೆಟೂನಿಯಾ ಸಸ್ಯಗಳನ್ನು ಅಮೆರಿಕಾದಲ್ಲಿ ಮಾರಾಟ ಮಾಡಲು ಇತ್ತೀಚೆಗಷ್ಟೇ ಅನುಮತಿ ಪಡೆದಿದೆ.

ಲೈಟ್ ಬಯೋ ಸಂಸ್ಥೆಯ ವಿಜ್ಞಾನಿಗಳು ಹಾಗೂ ಇಂಜಿನಿಯರುಗಳು ಪೆಟೂನಿಯಾ ಸಸ್ಯಗಳಲ್ಲಿ ಕುಲಾಂತರಿ ತಂತ್ರಜ್ಞಾನ ಬಳಸಿ ಗಾಢ ಹಸುರು ಬಣ್ಣದ ಬೆಳಕನ್ನು ಹೊರಸೂಸುವ ತಳಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವದೀಪ್ತಿ ಹೊರಸೂಸುವ ನಿಯೋನೋಥೋಪಾನಸ್‌ ನಂಬಿ (Neonothopanus nambi) 2 ಸೇರಿದ ಶಿಲೀಂದ್ರ ವೊಂದರಿಂದ ಪಡೆದ

ಸೇರಿದ ಶಿಲೀಂದ್ರವೊಂದರಿಂದ ಪಡೆದ ವಂಶವಾಹಿಗಳನ್ನು ಪೆಟೂನಿಯಾ ಸಸ್ಯಗಳಿಗೆ ವರ್ಗಾಯಿಸಿ, ಈ ಕುಲಾಂತರಿ ಸಸ್ಯಗಳನ್ನು ಪಡೆಯಲಾಗಿದೆ. ಹಗಲಿನಲ್ಲಿ ತೆಳು ಕಂದು ಬಣ್ಣ ಹೊಂದಿರುವ ಈ ಶಿಲೀಂದ್ರ ಪ್ರಭೇದವು ರಾತ್ರಿಯ ವೇಳೆ ಕಡು ಹಸುರು ಬಣ್ಣದ ಬೆಳಕನ್ನು ಹೊರಸೂಸುತ್ತದೆ. ಸಮಶೀತೋಷ್ಣ ಕಾಡುಗಳಲ್ಲಿ ಕಂಡುಬರುವ ಈ ಶಿಲೀಂದ್ರಗಳಿಂದ ಪಡೆದ ಸ್ವಾಭಾವಿಕ ವ್ಯವಸ್ಥೆಯೊಂದನ್ನು ಪೆಟೂನಿಯಾ ಸಸ್ಯಗಳಿಗೆ ವರ್ಗಾಯಿಸುವ ಮೂಲಕ ಇದನ್ನು ಸಾಧಿಸಲಾಗಿದೆ.

 ಒಂದು ಅಂದಾಜಿನ ಪ್ರಕಾರ, ಬ್ಯಾಕ್ಟಿರಿಯಾಗಳು, ಶಿಲೀಂದ್ರಗಳು, ಲೋಳೆಮೀನುಗಳು, ಹುಳುಗಳು, ಸಂಧಿಪದಿಗಳು, ಮೀನುಗಳು ಹಾಗೂ ಉಭಯವಾಸಿಗಳು ಸೇರಿದಂತೆ ಸುಮಾರು 1500 ಪ್ರಭೇಧದ ಜೀವಿಗಳಲ್ಲಿ ಹೀಗೆ ಬೆಳಕನ್ನು ಹೊರ ಸೂಸುವ ಸಾಮರ್ಥ್ಯವಿದೆ. ಈ ಎಲ್ಲ ಜೀವಿಗಳಲ್ಲಿ ಕಂಡುಬರುವ ಲೂಸಿಫೆರಿನ್(luciferin) ಎಂಬ ವಸ್ತು, ಲೂಸಿಫೆರೇಸ್ ಎಂಬ ಕಿಣ್ವದ ಸಹಾಯದಿಂದ ಆಕ್ಸಿಜನ್ ಜೊತೆಗೆ ವರ್ತಿಸಿದಾಗ ಬೇಳಕಿನ ರೂಪದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕೆಲವು ಬ್ಯಾಕ್ಟಿರಿಯಾ ಹಾಗೂ ಶಿಲೀಂದ್ರದ ಪ್ರಭೇದಗಳನ್ನು ಹೊರತು ಪಡಿಸಿದರೆ, ಉಳಿದ ಜೀವಿಗಳಲ್ಲಿ ಜೀವದೀಪ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 2018ರಲ್ಲಿ ಸಾರ್ಕಿಸ್ಯಾನ್ ಮತ್ತು ಅವರ ತಂಡದ ವಿಜ್ಞಾನಿಗಳು ನಿಯೋನೋಥೋಪಾನಸ್ ನಂಬಿ ಪ್ರಭೇದದ ಶಿಲೀಂದ್ರಗಳಲ್ಲಿ ಜೀವದೀಪ್ತಿಗೆ ಕಾರಣವಾಗುವ ಕಿಣ್ವಗಳನ್ನು ಗುರುತಿಸಿದರು. ಎರಡು ವರ್ಷಗಳ ನಂತರ ಈ ಕಿಣ್ವಗಳಿಗೆ ಸಂಬಂಧಿಸಿದ ವಂಶವಾಹಿಗಳನ್ನು ಜೊಗೆಸೊಪ್ಪಿನ ಗಿಡಗಳಿಗೆ ವರ್ಗಾಯಿಸಿದರು. ಮುಂದಿನ ಪೀಳಿಗೆಯ ಸಸ್ಯಗಳಲ್ಲಿ ರಾತ್ರಿಯ ವೇಳೆ ಬೇರು ಕಾಂಡ ಮತ್ತು ಎಲೆಗಳಿಂದ ಗಾಢ ಹಸುರು ಬಣ್ಣದ ಬೆಳಕು ಗಾಢ ಹಸುರು ಬಣ್ಣದ ಬೆಳಕು ಹೊರಬರುತ್ತಿರುವುದನ್ನು ಗಮನಿಸಿದರು. ಇದಕ್ಕೆ ಮುಂಚೆಯೂ ಇಂಥ ಹಲವಾರು ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದರೂ ಅವು ಸಂಪೂರ್ಣ ಯಶಸ್ಸು ಕಂಡಿರಲಿಲ್ಲ. ಬ್ಯಾಕ್ಟಿರಿಯಾ ಮತ್ತು ಮಿಂಚುಹುಳುಗಳಿಂದ ಪಡೆದ ವಂಶವಾಹಿಗಳನ್ನು ನ್ಯಾನೋ ಕಣಗಳ ಸಹಾಯದಿಂದ ಕೆಲ ಸಸ್ಯಗಳಲ್ಲಿ ಅಳವಡಿಸಿ, ಅವು ಬೆಳಕನ್ನು ಹೊರಸೂಸುವಂತೆ ಮಾಡುವ ಪ್ರಯತ್ನಗಳು ಯಶಸ್ಸು ಕಂಡವಾದರೂ, ಬೆಳಕು ಕೇವಲ ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಿದ್ದುದು ಕಂಡು ಬಂತು. ದೀರ್ಘಕಾಲ ಈ ಬೆಳಕನ್ನು ಹಿಡಿದಿಡಲು ಕೆಲ ವಿಶೇಷವಾದ ರಾಸಾಯನಿಕಗಳನ್ನು ಆ ಸಸ್ಯಗಳ ಮೇಲೆ ಬಳಸಬೇಕಾಗಿ ಬಂದಿತ್ತು. ವಾಣಿಜ್ಯಾತ್ಮಕ ದೃಷ್ಟಿಯಿಂದ ಇದು ಸ್ವೀಕಾರಾರ್ಹವಾಗಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಾರ್ಕಿಸ್ಯಾನ್ ಮತ್ತು ಸಂಗಡಿಗರು ಪ್ರಯತ್ನಶೀಲರಾದರು. ಆ ಶಿಲೀಂದ್ರದಲ್ಲಿ ಜೀವದೀಪ್ತಿಗೆ ಕಾರಣವಾಗುವ ಜೀವರಾಸಾಯನಿಕ ಪಥಮಾರ್ಗವನ್ನು ಕಂಡುಹಿಡಿದ ನಂತರ, ಅದೇ ಪಥಮಾರ್ಗ ಪೆಟೂನಿಯಾ ಸಸ್ಯಗಳಲ್ಲಿಯೂ ತನ್ನ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿ, ಅವರು ಸಸ್ಯಗಳಲ್ಲಿ ಸಹಜವಾಗಿ ಕಂಡುಬರುವ ಕೃಫೀಕ್ ಆಮ್ಲ (caffeic acid) ಎಂಬ ರಾಸಾಯನಿಕವನ್ನು ಬಳಸಿಕೊಂಡರು. ಶಿಲೀಂದ್ರಗಳಲ್ಲಿ ಈ ರಾಸಾಯನಿಕವು ನಾಲ್ಕು ಕಿಣ್ವಗಳನ್ನು ಬಳಸಿಕೊಂಡು ಲ್ಯೂಸಿಫೆರಿನ್ ಆಗಿ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಪತ್ತೆ ಹಚ್ಚಿದರು. ಇದೇ ನಾಲ್ಕು ಕಿಣ್ವಗಳಿಗೆ ಸಂಬಂಧಿಸಿದ ವಂಶವಾಹಿಗಳನ್ನು ಪೆಟೂನಿಯಾ ಸಸ್ಯಗಳಲ್ಲಿ ಅಳವಡಿಸಿ ಅಲ್ಲಿಯೂ ಜೀವದೀಪ್ತಿ ಹೊರಸೂಸುವಂತೆ ಮಾಡುವ ಪ್ರಯತ್ನದಲ್ಲಿ ಯಶಸ್ಸು ಪಡೆದರು. ಅದರ ಫಲವೇ ಹಸುರು ಬಣ್ಣದ ಬೆಳಕನ್ನು ಹೊರಸೂಸುವ ಪೆಟೂನಿಯಾ ಕುಲಾಂತರಿ ಸಸ್ಯಗಳು. ವಿಶೇಷವೆಂದರೆ, ಈ ಕುಲಾಂತರಿ ಪೆಟೂನಿಯಾ ಸಸ್ಯಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಜೀವದೀಪ್ತಿಯನ್ನು ಹೊರಸೂಸುವ ಸಾಮರ್ಥ್ಯವನ್ನು ಪಡೆದಿರುತ್ತವೆ. 

ಕುಲಾಂತರಿ ತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯಗಳಲ್ಲಿ ಬದಲಾವಣೆ ತರುವ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ವಿಶ್ವದಾದ್ಯಂತ ಇಂದು 12ಕ್ಕೂ ಕುಲಾಂತರಿ ಅಹಾರ ಸಸ್ಯಗಳು ಬಳಕೆಯಲ್ಲಿವೆ. ಅಲಂಕಾರಿಕ ಸಸ್ಯಗಳ ಕೆಲವು ಕುಲಾಂತರಿ ಪ್ರಭೇದಗಳೂ ಬಳಕೆಗೆ ಬಂದಿವೆ. ಅಮೆರಿಕಾದಲ್ಲಿ ಯಾವುದೇ ಕುಲಾಂತರಿ ಸಸ್ಯವನ್ನು ಬಳಕೆಗೆ ಬಿಡುವ ಮುನ್ನ ಸರ್ಕಾರದ ಅನುಮತಿ ಅತ್ಯಗತ್ಯ. ಪೆಟೂನಿಯಾ ಕುಲಾಂತರಿ ಸಸ್ಯಗಳು ಯಾವುದೇ ಸ್ಥಳೀಯ ಸಸ್ಯ  ಪ್ರಭೇದಗಳಿಗೆ ಸ್ಪರ್ಧೆ ಒಡ್ಡುವುದಾಗಲೀ,ರೋಗ ಉಂಟುಮಾಡುವುದಾಗಲೀ ಕಂಡುಬಂದಿಲ್ಲವಾದ್ದರಿಂದ, ಇವುಗಳ ಸಾರ್ವಜನಿಕ ಬಳಕೆಗೆ ಅನುಮತಿ ದೊರೆತಿದೆ. ಈಗ ಲೈಟ್ ಬಯೋ ಸಂಸ್ಥೆಯು ರಾತ್ರಿ ಬೆಳಕು ಸೂಸುವ ಕುಲಾಂತರಿ ಪೆಟೂನಿಯಾ ಸಸ್ಯಗಳನ್ನು ಬೃಹತ್‌ ಮಟ್ಟದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ. ಸಸ್ಯಗಳನ್ನು ಕೊಂಡು ತಮ್ಮ ತೋಟಗಳಲ್ಲಿ ಬೆಳೆಯ ಬಯಸುವರಿಗಾಗಿ ಬುಕಿಂಗ್ ಪ್ರಾರಂಭಿಸಿದೆ. ಸುಮಾರು 10,000ಕ್ಕೂ ಹೆಚ್ಚು ಮಂದಿ ಈಗಾಗಲೇ ಬುಕಿಂಗ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಂಸ್ಥೆ ಹೊರಹಾಕಿದೆ. ಒಂದೆರಡು ವರ್ಷಗಳಲ್ಲಿ ಇನ್ನಿತರ ದೇಶಗಳಲ್ಲಿಯೂ ಈ ಕುಲಾಂತರಿ ಸಸ್ಯಗಳನ್ನು ಬೆಳೆಯುವ ಪದ್ಧತಿ ಪ್ರಾರಂಭವಾಗಬಹುದು. ಆಗ, ಅಂಗಳದ ತೋಟಗಳಲ್ಲಿ ರಾತ್ರಿಯ ಹೊತ್ತು ತಮ್ಮದೇ ಬೆಳಕಿನಿಂದ ಕಂಗೊಳಿಸುವ ಸಸ್ಯಗಳನ್ನು ನೋಡಿ ನಲಿಯುವುದು ಎಲ್ಲರಿಗೂ ಸಾಧ್ಯವಾಗಬಹುದು !

LIQUID 3 ಎಂಬ ಪವರ್‌ ಹೌಸ್‌ !!!!

 LIQUID 3 ಎಂಬ ಪವರ್‌ ಹೌಸ್‌ !!!! 

                         ಲೇ : ರಾಮಚಂದ್ರ ಭಟ್‌ ಬಿ.ಜಿ. 

ಸರ್‌, ಇದು ದ್ರವ ರೂಪೀ ವೃಕ್ಷ ಭವಿಷ್ಯದ ಪವರ್‌ ಹೌಸ್‌ !!!

ಇತ್ತೀಚೆಗೆ ನಾನು ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ತೀರ್ಪುಗಾರನಾಗಿ ಭೇಟಿ ನೀಡಿದ್ದೆ. ಅಲ್ಲಿ ವಿದ್ಯಾರ್ಥಿನಿಯೊಬ್ಬಳು ಈ ರೀತಿ ಹೇಳಿದಾಗ ಒಂದು ಕ್ಷಣ ಅವಾಕ್ಕಾದೆ !!! ಇದೇನು ರೀಲ್‌ ಬಿಡ್ತಾ ಇದ್ದಾಳಾ? ಅಥವಾ ನಮ್ಮನ್ನು ಯಾಮಾರಿಸುತ್ತಾ ಇದ್ದಾಳೇನು? ಎಂದು ಯೋಚಿಸುವಂತಾಯಿತು. ನೀವೂ ಆ ರೀತಿ ಯೋಚಿಸದಿರಿ. ನಮ್ಮ ಬದುಕನ್ನು ಪ್ರಭಾವಿಸಬಲ್ಲ ೨೦೨೧ರ ಅದ್ಭುತ ಆವಿಷ್ಕಾರದ ಕುರಿತ ಮಾದರಿಯೊಂದನ್ನು ತಂಡವೊಂದು ಪ್ರದರ್ಶಿಸಿತ್ತು. ಬಯೋ ರಿಯಾಕ್ಟರ್‌ -ಲಿಕ್ವಿಡ್‌ ಟ್ರೀ ಎಂಬ ಪರಿಕಲ್ಪನೆಯೊಂದು ನನ್ನ ಗಮನ ಸೆಳೆಯಿತು. ದ್ರವ ರೂಪದ ವೃಕ್ಷಸಸ್ಯ !! ಇದು ಸಾಧ್ಯವೇ? ಇದು ಭವಿಷ್ಯದ ಶಕ್ತಿಯ ಮುಗ್ಗಟ್ಟನ್ನು ಎದುರಿಸಲು ಸೂಕ್ತ ಉಪಾಯ ಎಂದು ಅನಿಸಿತು. ಈ ಕುರಿತು ಒಂದಷ್ಟು ಮಾಹಿತಿ ಸಂಗ್ರಹಿಸಲಾರಂಭಿಸಿದೆ .

ಸರ್ಬಿಯಾವು 2020 ರಲ್ಲಿ ವಿಶ್ವದ 28 ನೇ ಮಾಲಿನ್ಯಕಾರಕ ಗಾಳಿಯನ್ನು ಹೊಂದಿರುವ ದೇಶವಾಗಿತ್ತು.  ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಗಾಳಿ ಗುಣಮಟ್ಟದ ಮಾರ್ಗಸೂಚಿ ಮೌಲ್ಯಕ್ಕಿಂತ 4.9 ಪಟ್ಟು ಹೆಚ್ಚು ಮಲಿನತೆಯನ್ನು ಅಲ್ಲಿನ ಗಾಳಿ ಹೊಂದಿತ್ತು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ ವಿಶ್ವದ ಅತಿ ಮಾಲಿನ್ಯಕಾರಿ ನಗರಗಳಲ್ಲಿ ಒಂದು ಎಂಬ ಕುಪ್ರಸಿದ್ಧಿಗೆ ಪಾತ್ರವಾಗಿತ್ತು. ಇಂತಹ ಹಣೆಪಟ್ಟಿ ಕಳಚುವುದು ಹೇಗೆ ಎಂಬುದೇ ಅಲ್ಲಿನ ಆಡಳಿತಗಾರರಿಗಿದ್ದ ದೊಡ್ಡ ತಲೆನೋವಾಗಿತ್ತು..  2019 ರಲ್ಲಿ, ಜಾಗತಿಕ ಆರೋಗ್ಯ ಮತ್ತು ಮಾಲಿನ್ಯ ಕ್ಕಾಗಿ ಹುಟ್ಟು ಹಾಕಲಾದ ಸಂಘಟನೆ (Global Alliance for Health and Pollution) ಸಂಸ್ಥೆಯು ಮಾಲಿನ್ಯ ಮತ್ತು ಆರೋಗ್ಯ ಸೂಚಕಗಳ ವಿಶ್ವ, ಪ್ರಾದೇಶಿಕ ಮತ್ತು ದೇಶಗಳ ವರದಿಯ ವಿಶ್ಲೇಷಣೆಯನ್ನು ಪ್ರಕಟಿಸಿತು. ಈ ವರದಿಯಲ್ಲಿ, ಸರ್ಬಿಯಾ ಯುರೋಪ್‌ನಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸಾವುಗಳನ್ನು ಹೊಂದಿರುವ ನಂಬರ್‌ 1 ದೇಶವಾಗಿತ್ತು. ಪ್ರತಿ 100,000 ಜನರಿಗೆ 175 ಸಾವುಗಳು ಸಂಭವಿಸುತ್ತಿದ್ದವು.  ಒಟ್ಟಾರೆಯಾಗಿ, ಸರ್ಬಿಯಾವು ಗಂಭೀರವಾದ ಗಾಳಿ ಮಾಲಿನ್ಯದ ಸಮಸ್ಯೆಯನ್ನು ಹೊಂದಿತ್ತು.

 ಹಲವು ಬಗೆಯ ಪ್ರಯೋಗಗಳು ನಡೆಯುತ್ತಲೇ ಇದ್ದವು.  ಆದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ.  ಆಗ ಅಲ್ಲಿನ ಜೀವವಿಜ್ಞಾನಿಯಾದ ಡಾ. ಇವಾನ್ ಸ್ಪಾಸೊಜೆವಿಕ್  ಮೊದಲ ಯಶಸ್ಸನ್ನು ಕಂಡರು. ಅವರು ವಿನ್ಯಾಸ ಮಾಡಿದ LIQUID 3  ಎಂಬ ಸಂಶೋಧನೆಗೆ - ಅದರ ಸೃಜನಾತ್ಮಕ, ಪ್ರಾಯೋಗಿಕ ಮತ್ತು ನವೀನ ವಿನ್ಯಾಸದ ಕಾರಣದಿಂದಾಗಿ, UNDP, ಪರಿಸರ ಸಂರಕ್ಷಣೆ ಸಚಿವಾಲಯ ಮತ್ತು ಜಾಗತಿಕ ಪ್ರಾಯೋಜಕತ್ವದಿಂದ ರಚಿಸಲಾದ ಕ್ಲೈಮೇಟ್ ಸ್ಮಾರ್ಟ್ ಅರ್ಬನ್ ಡೆವಲಪ್‌ಮೆಂಟ್ ಯೋಜನೆಯಿಂದ 11 ಅತ್ಯುತ್ತಮ ನವೀನ ಮತ್ತು ಹವಾಮಾನ-ಸ್ಮಾರ್ಟ್ ಪರಿಹಾರಗಳಲ್ಲಿ ಒಂದೆಂಬ ಮನ್ನಣೆ ದೊರೆಯಿತು. ಇದೇನು ಹೊಸ ಆವಿಷ್ಕಾರವಲ್ಲ. ಇದರ ವಿವಿಧ ರೂಪಗಳು ಆಗಲೇ ಬಳಕೆಯಲ್ಲಿದ್ದವು. ಆದರೆ ಈ ಬಗೆಯ ದೃಷ್ಟಿಕೋನ ಇರಲಿಲ್ಲವಷ್ಟೇ . ಅದಕ್ಕೇ ಅಲ್ಲವೇ ಹೇಳೋದು “ Necessity is the mother of invention” ಎಂದು . ಪ್ಲೇಟೋ ತನ್ನ “ರಿಪಬ್ಲಿಕ್‌” ಕೃತಿಯಲ್ಲಿ  "our need will be the real creator" ಎಂದು ಹೇಳಿದ್ದಾನೆ. ಸಮಸ್ಯೆ ಸುಳಿದಾಗ ಜ್ಞಾನೋದಯವಾಗಲೇಬೇಕಲ್ಲ ! ಇಂತಹ ವಿಷಮ ಸ್ಥಿತಿ ಬಂದೊದಗಿದಾಗ ಸಮರೋಪಾದಿಯಲ್ಲಿ ಸಂಶೋಧನೆಗಳು ನಡೆಯಲಾರಂಭಿಸಿದವು. ಕಲುಷಿತ ವಾಯುವನ್ನು ಶುದ್ಧೀಕರಿಸುವ ಸಸ್ಯಗಳು ಎಲ್ಲೆಡೆ ಇದ್ದರೆ ಎಷ್ಟು ಚೆನ್ನ?" ಆಗ ಹೊಳೆದದ್ದೇ ಸಿಹಿನೀರಿನ ಕಕೋಶೀಯ ಸೂಕ್ಷ್ಮಶೈವಲಗಳು. ಇವು ಸೆರ್ಬಿಯಾದ ಕೊಳಗಳು ಮತ್ತು ಜಲಾಶಯಗಳಲ್ಲಿ ಯಥೇಚ್ಛವಾಗಿ  ಬೆಳೆಯುತ್ತಿದ್ದವು. ಪರಿಸರದ ವಿವಿಧ ತಾಪಮಾನಗಳಿಗೂ ಹೊಂದಾಣಿಕೆ ಮಾಡಿಕೊಂಡಿದ್ದವು. ಜೊತೆಗೆ ಟ್ಯಾಪ್ ನೀರಿನಲ್ಲಿಯೂ ಎಗ್ಗಿಲ್ಲದೇ ಬೆಳೆದು ಡಾರ್ವಿನ್ನನ survival of fittest  ತತ್ವಕ್ಕೆ ಬದ್ಧವಾಗಿದ್ದದ್ದನ್ನು ಸಾರಿ ಹೇಳುತ್ತಿದ್ದವು. ಇವುಗಳಿಗೆ ಯಾವುದೇ ವಿಶೇಷ ನಿರ್ವಹಣೆ ಅಗತ್ಯವಿರಲಿಲ್ಲ - ಶೈವಲಗಳನ್ನು ಅತ್ಯುತ್ತಮ ಗೊಬ್ಬರವಾಗಿ ಬಳಸಬಹುದು, ಒಂದೂವರೆ ತಿಂಗಳಿಗೊಮ್ಮೆ ನೀರು ಬದಲಾವಣೆ ಮಾಡಿದರೆ ಸಾಕಿತ್ತು.  ವಿಫುಲವಾಗಿ ಬೆಳೆಯುತ್ತಿರುವ ಸೂಕ್ಷ್ಮ ಶೈವಲಗಳನ್ನು ಬಳಸಿ ಪ್ರಸ್ತುತ ಬೃಹದಾಕಾರವಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯು ರೂಪಿತವಾಯಿತು. ಸೆರ್ಬಿಯಾದಲ್ಲಿ ಮೈಕ್ರೋಅಲ್ಗೆಗಳ ಬಳಕೆಯನ್ನು ನಪ್ರಿಯಗೊಳಿಸುವ ಮತ್ತು ವಿಸ್ತರಿಸುವ ಗುರಿಯನ್ನು ಹೊಂದಿತ್ತು. ಅವುಗಳನ್ನು ತ್ಯಾಜ್ಯನೀರಿನ ಸಂಸ್ಕರಣೆಯಲ್ಲಿ, ಹೊಲಗಳಲ್ಲಿ ಮಿಶ್ರಗೊಬ್ಬರವಾಗಿ, ಜೀವರಾಶಿ ಮತ್ತು ಜೈವಿಕ ಇಂಧನಗಳ ಉತ್ಪಾದನೆಗೆ ಮತ್ತು ಕಾರ್ಖಾನೆಗಳಿಂದ ಹೊರಬರುವ ನಿಷ್ಕಾಸ ಅನಿಲಗಳಿಂದ ಉಂಟಾಗುವ ಗಾಳಿಯ ಮಾಲಿನ್ಯವನ್ನು ತೊಡೆಯಲೂ ಬಳಸಬಹುದು. ಹಾಗಾಗಿ ಇವುಗಳನ್ನು ದ್ಯುತಿ ಜೈವಿಕ ಸ್ಥಾವರ ಅಥವಾ ಫೋಟೋ ಬಯೋ ರಿಯಾಕ್ಟರ್‌ ಎನ್ನಬಹುದು. ಇದೊಂದು ಅಕ್ವೇರಿಯಂನಂತಹ ವ್ಯವಸ್ಥೆ .

ಆರು ನೂರು ಲೀಟರ್ ನೀರಿನ ಅಕ್ವೇರಿಯಂನಲ್ಲಿ ಬೆಳೆಸಲಾಗುವ ಸೂಕ್ಷ್ಮಶೈವಲಗಳು ಪಾರಿಸಾರಿಕವಾಗಿ ಎರಡು 10 ವರ್ಷ ವಯಸ್ಸಿನ ಮರಗಳು ಅಥವಾ 200 ಚದರ ಮೀಟರ್ ಹುಲ್ಲುಹಾಸು ಉಂಟು ಮಾಡಬಲ್ಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಬೃಹತ್ ವೃಕ್ಷಗಳು  ಮತ್ತು ಹುಲ್ಲು ಎರಡೂ ದ್ಯುತಿಸಂಶ್ಲೇಷಣೆಯನ್ನು ನಡೆಸಿ ಕಾರ್ಬನ್‌ ಡೈಆಕ್ಸೈಡ್ ಅನ್ನು ಹೀರುತ್ತವೆ. ಆದಾಗ್ಯೂ, ಮೈಕ್ರೋಅಲ್ಗೆಗಳ ಹಿರಿಮೆ ಎಂದರೆ, ಅವು ಮರಗಳಿಗಿಂತ 10 ರಿಂದ 50 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿವೆ ಎನ್ನುವುದು!!!.  LIQUID 3 ರ ಹಿಂದಿನ ಉದ್ದೇಶ ಅರಣ್ಯಗಳನ್ನು ಅಥವಾ ಮರಗಳನ್ನು ನೆಡುವ ಯೋಜನೆಗಳನ್ನು ಬದಲಿಸುವುದಲ್ಲ, ಆದರೆ ಮರಗಳನ್ನು ನೆಡಲು ಸ್ಥಳಾವಕಾಶವಿಲ್ಲದ ನಗರಗಳ ಪಾರಿಸಾರಿಕ ವ್ಯವಸ್ಥೆಯನ್ನು ಸುಧಾರಿಸುವುದು.  ಬೆಲ್‌ಗ್ರೇಡ್‌ನಂತಹ ತೀವ್ರವಾದ ಮಾಲಿನ್ಯದ ಪರಿಸ್ಥಿತಿಗಳಲ್ಲಿ, ಅನೇಕ ಮರಗಳು ಬದುಕಲು ಸಾಧ್ಯವಿಲ್ಲ!!! ಈ ಮರಗಳೇ ಬದುಕಲೂ ಸಾಧ್ಯವಿಲ್ಲದಂತಹ ಪರಿಸರ ವ್ಯವಸ್ಥೆಯನ್ನು ನಾವು ಸೃಷ್ಟಿಸಿದ್ದೇವೆ ಎಂದರೆ ಮನುಷ್ಯನ ವಿನಾಶಕಾರಿ ಶಕ್ತಿ ಎಷ್ಟಿರಬಹುದು!!! ಆದರೆ ಈ ಸೂಕ್ಷ್ಮ ಶೈವಲಗಳು ಹೆಚ್ಚಿನ ಮಟ್ಟದ ಮಾಲಿನ್ಯವಿದ್ದರೂ ಬದುಕಲು ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎನ್ನುವುದೇ ಸಮಾಧಾನಕರ ಚೇತೋಹಾರಿ ಸಂಗತಿ .

ಲಿಕ್ವಿಡ್ 3 ಅನ್ನು ಬೆಲ್‌ಗ್ರೇಡ್‌ನ ಮೇಕೆಡೊನ್ಸ್ಕಾ ಸ್ಟ್ರೀಟ್‌ನಲ್ಲಿರುವ ಸ್ಟಾರಿ ಗ್ರಾಡ್ ಪುರಸಭೆಯ ಮುಂಭಾಗದಲ್ಲಿ ಇರಿಸಲಾಗಿದೆ, ಇದು ಸದಾ ಗಿಜಿಗುಟ್ಟುವ ನಗರ ಪ್ರದೇಶವಾಗಿದ್ದು, ಅಲ್ಲಿ CO2 ಹೊರಸೂಸುವಿಕೆ ಸಾಂದ್ರತೆಗಳು ಹೆಚ್ಚು. ಇಲ್ಲಿ ಈ LIQUID3 ಯೋಜನೆಯನ್ನು ಬಹುಕ್ರಿಯಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.  ಇದು ಮೊಬೈಲ್ ಫೋನ್‌ಗಳಿಗೆ ಚಾರ್ಜರ್‌ಗಳನ್ನು ಹೊಂದಿದೆ, ಜೊತೆಗೆ ಸೌರ ಫಲಕವನ್ನು ಹೊಂದಿದೆ, ರಾತ್ರಿಯಲ್ಲೂ ಕಾರ್ಯನಿರ್ವಹಿಸುಂತೆ ಮಾಡಲು ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ.

ಸೂಕ್ಷ್ಮ ಶೈವಲಗಳ ವಿಶೇಷತೆಯೇನು?

ಇವು ಆಕ್ಸಿಜನ್‌ ಕಾರ್ಖಾನೆಗಳು: ಇವು ದ್ಯುತಿಸಂಶ್ಲೇಷಣೆ (Photosynthesis) ಪ್ರಕ್ರಿಯೆಯನ್ನು ನಡೆಸುತ್ತವೆ. ಆದರೆ ಮರಗಳಿಗಿಂತ ಭಿನ್ನವಾಗಿ, ಸೂಕ್ಷ್ಮ ಶೈವಲಗಳು ಜಾಗದ ಅಗತ್ಯವಿಲ್ಲದೆ ವೇಗವಾಗಿ ಬೆಳೆಯಬಲ್ಲವು ಮತ್ತು ವಾತಾವರಣದಿಂದ ಕಾರ್ಬನ್‌ ಡೈ ಆಕ್ಸೈಡ್‌ ಹೀರಿ ನಮಗೆ ಉಸಿರಾಡಲು ಆಕ್ಸಿಜನ್‌ ಒದಗಿಸುತ್ತವೆ . ಈ ಮೂಲಕ ಗಾಳಿಯನ್ನು ಸ್ವಚ್ಛಗೊಳಿಸುವಲ್ಲಿ ಪರಿಣಾಮಕಾರಿಯಾಗಿವೆ.

  • ಪೋಷಕಾಂಶಗಳ ಕಣಜ : ಸೂಕ್ಷ್ಮ ಶೈವಲಗಳು ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಕೊಬ್ಬಿನಾಮ್ಲಗಳಂತಹ ಅನೇಕ ಪೌಷ್ಟಿಕ ಸೂಕ್ಷ್ಮ ಪೋಷಕಾಂಶಗಳ ಉತ್ತಮ ಕರಗಳಾಗಿವೆ.
  • ಜೈವಿಕ ಇಂಧನದ ಭವಿಷ್ಯ : ಸೂಕ್ಷ್ಮ ಶೈವಲಗಳುಗಳನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಬಹುದು, ಇದು ಪರಿಸರ ಸ್ನೇಹಿ ಇಂಧನ ಮೂಲವಾಗಿವೆ.
  • ತಾಪ ನಿಯಂತ್ರಕ : ಸೂಕ್ಷ್ಮ ಶೈವಲಗಳು ವಾತಾವರಣದಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ, ಇದರಿಂದ ಹಸಿರುಮನೆ ಪರಿಣಾಮವನ್ನು ನಿಯಂತ್ರಿಸುತ್ತವೆ.

ಇಷ್ಟೇ ಅಲ್ಲದೆ ಸೂಕ್ಷ್ಮ ಶೈವಲಗಳ ಅನ್ವಯಗಳು ಅಪಾರ 

  • ಆಹಾರ ಮತ್ತು ಪಾನೀಯ ಉದ್ಯಮಗಳಲ್ಲಿ : ಸ್ಪೈರುಲಿನಗಳಂತಹ ಸೂಕ್ಷ್ಮ ಶೈವಲಗಳು ಪ್ರೋಟೀನ್‌, ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವನ್ನು ಆರೋಗ್ಯಕರ ಪಾನೀಯಗಳಲ್ಲಿ ಬಳಸಲಾಗುತ್ತದೆ.
  • ಮೀನು ಸಾಕಣೆ : ಮೀನುಗಳಿಗೆ ಆಹಾರವಾಗಿ ಸೂಕ್ಷ್ಮ ಶೈವಲಗಳನ್ನು ಬಳಸಲಾಗುತ್ತದೆ.
  • ಕಾಸ್ಮೆಟಿಕ್ ಉದ್ಯಮ : ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಸೂಕ್ಷ್ಮ ಶೈವಲಗಳುಗಳನ್ನು ಬಳಸಲಾಗುತ್ತದೆ.
    ಸೂಕ್ಷ್ಮ ಶೈವಲಗಳು ತಂತ್ರಜ್ಞಾನದ ಉಗಮ :

ಸೂಕ್ಷ್ಮ ಶೈವಲಗಳ ಬಳಕೆ ಶತಮಾನಗಳಿಂದಲೂ ತಿಳಿದಿದೆ. 17 ನೇ ಶತಮಾನದಲ್ಲಿ ಲೀವನ್‌ ಹುಕ್‌ (Anton van Leeuwenhoek ) ಅವರು ಸೂಕ್ಷ್ಮದರ್ಶಕವನ್ನು ಕಂಡುಹಿಡಿದ ನಂತರ ಅವುಗಳನ್ನು ವಿವರವಾಗಿ ಅಧ್ಯಯನಕ್ಕೆ ವೇದಿಕೆಯೊಂದು ಸೃಷ್ಟಿಯಾಯಿತು. 20 ನೇ ಶತಮಾನದಲ್ಲಿ, ವಿಜ್ಞಾನಿಗಳು ಸೂಕ್ಷ್ಮ ಶೈವಲಗಳು ಆಹಾರ ಮತ್ತು ಇಂಧನಕ್ಕೆ ಒಂದು ಉತ್ತಮ ಮೂಲವಾಗಬಹುದು ಎಂದು ಕಂಡುಹಿಡಿದರು.

ಸೂಕ್ಷ್ಮ ಶೈವಲಗಳು ತಂತ್ರಜ್ಞಾನದ ಉಗಮದಲ್ಲಿ ಕೆಲವು ಪ್ರಮುಖ ಹಂತಗಳು:

  • 1940 ರ ದಶಕ : ವಿಜ್ಞಾನಿಗಳು ಕ್ಲೋರೆಲ್ಲ - Chlorella ಸೂಕ್ಷ್ಮ ಶೈವಲಗಳನ್ನು ಬೆಳೆಸಲು ಪ್ರಾರಂಭಿಸಿದರು.
  • 1950 ರ ದಶಕ : Spirulina ಸೂಕ್ಷ್ಮ ಶೈವಲಗಳನ್ನು ಆಹಾರ ಪೂರಕವಾಗಿ ಬಳಸಲು ಪ್ರಾರಂಭಿಸಲಾಯಿತು.
  • 1970 ರ ದಶಕ : ಸೂಕ್ಷ್ಮ ಶೈವಲಗಳಿಂದ ಜೈವಿಕ ಇಂಧನವನ್ನು ಉತ್ಪಾದಿಸುವ ಸಂಶೋಧನೆ ಪ್ರಾರಂಭವಾಯಿತು.
  • 1980 ರ ದಶಕ : ಸೂಕ್ಷ್ಮ ಶೈವಲಗಳನ್ನು ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ತಗ್ಗಿಸಲು ಬಳಸಬಹುದು ಎಂದು ಕಂಡುಹಿಡಿಯಲಾಯಿತು.
  • 1990 ರ ದಶಕ : ಸೂಕ್ಷ್ಮ ಶೈವಲಗಳನ್ನು ಬೆಳೆಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಯಿತು.
  • 2000 ರ ದಶಕ : ಸೂಕ್ಷ್ಮ ಶೈವಲಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲು ಪ್ರಾರಂಭವಾಯಿತು.
  • 2010 ರ ದಶಕ : ಸೂಕ್ಷ್ಮ ಶೈವಲಗಳ ತಂತ್ರಜ್ಞಾನವು ವಾಣಿಜ್ಯೀಕರಣಗೊಳ್ಳಲು ಪ್ರಾರಂಭವಾಯಿತು.

ಇಂದು, ಸೂಕ್ಷ್ಮ ಶೈವಲಗಳನ್ನು ಬಳಸುವ ತಂತ್ರಜ್ಞಾನವು ತ್ವರಿತವಾಗಿ ಬೆಳೆಯುತ್ತಿದೆ. ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸೂಕ್ಷ್ಮ ಶೈವಲಗಳನ್ನು ಬೆಳೆಸಲು ಮತ್ತು ಅವುಗಳಿಂದ ಉತ್ಪನ್ನಗಳನ್ನು ಉತ್ಪಾದಿಸಲು ಹೊಸ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗಾಗಿ ತಂತ್ರಜ್ಞಾನ ಮತ್ತು ಪಾರಿಸಾರಿಕ ಅಂಶಗಳ ಸಮನ್ವಯವುಳ್ಳ ಇವು ಭವಿಷ್ಯದ ಪವರ್‌ ಹೌಸ್‌ ಎಂಬ ಅಭಿಧಾನಕ್ಕೆ ಪಾತ್ರವಾಗಿರುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ.

C ಎಂಬ ಸಿಹಿ ನೀಡಿದ ಡೇನಿಸ್‌ ರಿಚ್ಚಿ

 C  ಎಂಬ ಸಿಹಿ ನೀಡಿದ ಡೇನಿಸ್‌ ರಿಚ್ಚಿ -

ಲೇಖಕರು: ಸುರೇಶ ಸಂಕೃತಿ

       “ ಸಸಿ ನೆಟ್ಟವರು ಯಾರೋ ಪುಣ್ಯಾತ್ಮರು, ಅದು ಬೆಳದು ನಿಂತು ಫಲ ನೀಡುವಾಗ ಅದರ ಫಲಾನುಭವಿಗಳು ಮತ್ಯಾರೋ” ಅನ್ನುವ  ಒಂದು  ಮಾತು ಇದೆ.  ಈ ಮಾತು ಡೇನಿಸ್‌ ರಿಚ್ಚಿ ಮಹಾಶಯನ ಕಥೆಗೆ ಚೆನ್ನಾಗಿಯೇ ಅನ್ವಯವಾಗುತ್ತದೆ.  

ಡೇನಿಸ್‌ ಮ್ಯಾಕ್ ಅಲ್ಸ್ಟೇರ್‌ ರಿಚ್ಚಿ ಜನಿಸಿದ್ದು‌ ನ್ಯೂಯಾರ್ಕ್‌ ಬಳಿಯ ಬ್ರಾಂಕ್ಸವಿಲ್ಲೆಯಲ್ಲಿ  1941ರ ಸೆಪ್ಟೆಂಬರ್ 9ರಂದು. ತಂದೆ ಅಲ್ಸ್ಟೇರ್‌ ಇ  ರಿಚ್ಚಿಯವರು ಬೆಲ್‌ ಲ್ಯಾಬಿನಲ್ಲಿ ಪ್ರತಿಷ್ಠಿತ ವಿಜ್ಞಾನಿಯಾಗಿದ್ದವರು.  ಸ್ವಿಚ್ಚಿಂಗ್‌ ಸರ್ಕ್ಯೂಟುಗಳ ಅಧ್ಯಾಯನಶೀಲರಿಗೆ ಬೈಬಲ್‌ ಎಂದೇ ಪರಿಗಣಿಸಲಾದ The Design of Switching Circuits ಎಂಬ ಗ್ರಂಥದ ಬರಹಗಾರರಲ್ಲಿ ಒಬ್ಬರಾಗಿದ್ದರು. 

 ಡೇನಿಸ್‌ ರಿಚ್ಚಿಯವರು ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ 1963ರಲ್ಲಿ ಭೌತಶಾಸ್ತ್ರದಲ್ಲಿ ಪದವಿಯನ್ನು ಪೂರೈಸಿದರು. ನಂತರ ಅನ್ವಯಿಕ ಗಣಿತದಲ್ಲಿ ಡಾಕ್ಟರೇಟಗೆ ಸಂಶೋಧನೆ ಮಾಡುತ್ತಲೇ ತಮ್ಮ ತಂದೆಯವರು ಕೆಲಸ ಮಾಡುತ್ತಿದ್ದ ಬೆಲ್‌ ಲ್ಯಾಬ್ ನ ಕಂಪ್ಯೂಟಿಂಗ್ ಸೈನ್ಸ್‌ ರೀಸರ್ಚ್‌ ಇನ್ಸಟ್ಯೂಟ್‌  ಸೇರಿದರು.  ಮುಂದಿನ ದಿನಗಳಲ್ಲಿ ಬೆಲ್‌ ಲ್ಯಾಬ್‌, ಜಿಇ, ಎಮ್‌ಐಟಿ ಸಹಯೋಗದಲ್ಲಿ ಮಲ್ಟೆಕ್ಸ್‌ ಆಪರೇಟಿಂಗ್‌ ಸಿಸ್ಟಂನ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಲ್ಟೆಕ್ಸ್‌ ಗೆ ಕೆಲಸ ನಿರ್ವಹಿಸುತ್ತಿರುವಾಗ ರಿಚ್ಚಿಯವರಿಗೆ ಕೆನೆತ್‌ ಥಾಂಸನ್‌ ರವರ ಪರಿಚಯವಾಯಿತು. ಮಲ್ಟೆಕ್ಸ್‌ಗೆ ಬೇಕಾಗಿದ್ದ ಬಿಸಿಪಿಎಲ್‌ ಎನ್ನುವ ಪ್ರೊಗ್ರಾಮಿಂಗ್‌ ಲಾಂಗ್ವೇಜ್‌ ಅಭಿವೃದ್ಧಿಯಲ್ಲಿ . ಕೆನತ್‌ ಥಾಂಸನ್‌ ತೊಡಗಿದ್ದರು. ಮುಂದೆ ಅದನ್ನು  ಸುಧಾರಣೆಗೊಳಿಸಿ ಬಿ ಲಾಂಗ್ವೇಜ್‌ ಎಂದು ಅವರು 1969ರಲ್ಲಿ ಪ್ರಸ್ತುತಪಡಿಸಿದರು.

ಯಾವುದಾರೂ ಒಂದು  ಪ್ರೋಗ್ರಾಮಿಂಗ್‌ ಲಾಂಗ್ವೇಜಿನಲ್ಲಿ ನಾವು ಬರೆದ ಕೋಡನ್ನು ಮೊದಲಿಗೆ ಅಸೆಂಬ್ಲಿ ಲಾಂಗ್ವೇಜಿಗೆ ನಂತರ ಕಂಪ್ಯೂಟರ್‌ ಹಾರ್ಡವೇರಿಗೆ ಅರ್ಥವಾಗುವ ಮೆಷಿನ್‌ ಲಾಂಗ್ವೇಜಿಗೆ ಬದಲಾಯಿಸಿಕೊಡಬೇಕಾಗುತ್ತದೆ, ತದನಂತರ ಅದನ್ನು ಕಂಪ್ಯೂಟರ್‌ನ ಸಿಪಿಯು ವಿಶ್ಲೇ಼ಷಣೆ/ ಸಂಶ್ಲೇಷಣೆ  ಮಾಡಿ ಮೆಷಿನ್‌ ಲಾಂಗ್ವೇಜಿನಲ್ಲಿ ವಾಪಸ್ಸು ನೀಡುತ್ತದೆ. ಅದಾದ ಮೇಲೆ ಈ ಫಲಿತಾಂಶವನ್ನು ಮೆಷಿನ್‌ ಲಾಂಗ್ವೇಜಿನಿಂದ ಅಸೆಂಬ್ಲಿ ಲಾಗ್ವೇಜಿಗೆ ತಂದು ನಂತರ ಮಾನವ ಗ್ರಹಿಕೆಯ ರೂಪಕ್ಕೆ ಬದಲಾಯಿಸಬೇಕಾಗುತ್ತದೆ. ಎಕ್ಸಿಕ್ಯೂಷನ್‌ ಎನ್ನುವ ಈ ಚಟುವಟಿಕೆಯನ್ನು ನಡೆಸುವ ಸಾಫ್ಟ್‌ ವೇರನ್ನು ಕಂಪೈಲರ್‌ ಎಂದು ಕರೆಯುತ್ತಾರೆ. ಹೀಗೆ ಕಂಪೈಲರುಗಳು ಕಂಪ್ಯೂಟರ್‌ ಭಾಷೆಯೆ ಅನುವಾದಕಗಳಾಗಿ, ದುಭಾಷಿಗಳಾಗಿ ವರ್ತಿಸುತ್ತವೆ.. ಮಲ್ಟೆಕ್ಸ್ ಓಎಸ್‌ ಗೆ ಅಗತ್ಯವಾದ  ಇಂತಹ ಕಂಪೈಲರನ್ನು ಈ ರಿಚ್ಚಿ ಥಾಂಸನ್ ಜೋಡಿ ಮೊದಲಿಗೆ ಅಭಿವೃದ್ಧಿಪಡಿಸಿತು.

  

 ಕಂಪ್ಯೂಟರ್‌ ಪ್ರೋಗ್ರಾಮ್‌ ಕೋಡ್‌ ಬರೆಯಲು ಬಳಸುವ ಮಾಹಿತಿ ರೂಪವನ್ನು ಡೇಟಾ ಟೈಪ್‌ ಎಂದು ಕರೆಯಲಾಗುತ್ತದೆ. ಅಕ್ಷರಗಳನ್ನು cha̧r  ಸಂಖ್ಯೆಗಳನ್ನು iņt  ಅಕ್ಷರಗಳನ್ನು ಸಂಖ್ಯೆಗಳೊಂದಿಗೆ  ಹೊಸೆದ ದಾರರೂಪವನ್ನು striņg,  ದಶಮಾಂಶವನ್ನು floa̧t. ನಿಜ/ಸುಳ್ಳು, ಸರಿ/ತಪ್ಪು Boolean  ಎಂದು ಕೋಡಿನಲ್ಲಿ ಸೂಚಿಸಲಾಗುತ್ತದೆ. ಇವೇ ಮುಂತಾದ ಡೇಟಾ ಟೈಪುಗಳ ಕೊಡುಗೆ ನೀಡಿದ್ದು ಮತ್ತು ಕಂಪ್ಯೂಟರಿನ ಭಾಷೆಯ ಅನೇಕ ವ್ಯಾಕರಣ ಸಿದ್ಧಾಂತಗಳನ್ನು ರೂಪಿಸಿದ್ದು  ರಿಚ್ಚಿ ಮತ್ತು ಥಾಂಸನ್ ಜೋಡಿಯೇ. 

ಮುಂದೆ ಡೇನಿಸ್‌ ರಿಚ್ಚಿ ಮತ್ತು ಕೆನತ್‌ ಥಾಂಸನ್ ಜೋಡಿಯು ಆರಂಭದಲ್ಲಿ ಬಿ ಲಾಂಗ್ವೇಜನ್ನು ಬಳಸಿಕೊಂಡು ಮೂಲ ಯುನಿಕ್ಸ್‌ ಆಪರೇಟಿಂಗ್‌ ಸಿಸ್ಟಂವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ  ಕಂಪ್ಯೂಟರ್‌ ಜಗತ್ತಿಗೆ ಅಮೂಲ್ಯ ಕೊಡುಗೆಯನ್ನು ನೀಡಿತು.  ಬಹಳ ಮಹತ್ತರ ವಿಚಾರವೆಂದರೆ ಬಿ ಲಾಂಗ್ವೇಜನ್ನು ಆಧರಿಸಿ ಮುಂದೆ ರಿಚ್ಚಿ ಅಭಿವೃದ್ಧಿ ಪಡಿಸಿದ  ಹೊಸ ಭಾಷೆಗೆ ಸಿ ಎಂದು ನಾಮಕರಣ ಮಾಡಿ 1972 ಪ್ರಸ್ತುತಪಡಿಸಲಾಯಿತು.  ಇದರೊಂದಿಗೆ  ಕಂಪ್ಯೂಟರ್‌ ಜಗತ್ತಿನ ಒಂದು ಕ್ರಾಂತಿಕಾರಕ ಬೆಳವಣಿಗೆಯೇ ಆಯಿತು.  ಏಕೆಂದರೆ ಇಂದು ವ್ಯಾಪಕವಾಗಿ ಬಳಕೆಯಲ್ಲಿರುವ C+̧̧+ Ç#̤ Cocoa java̤ java scripţ  Python ̧  Peŗļ ̧   PHP ಮುಂತಾದವುಗಳಿಗೆ ಆಧಾರ C ನೇ ಆಗಿದೆ.  ಯಾವುದೇ ಕಂಪ್ಯೂಟರಿಗೆ ಹೊಂದಿಕೆಯಾಗುವ (Portability)  C ನ ವಿಶೇಷ ಗುಣ ಇಂದು ಜಗತಿನಾದ್ಯಂತ ಕಂಪ್ಯೂಟರುಗಳು C ಯನ್ನು ಬಳಸುವಂತಾಗಿದೆ. ಯಾವುದೇ ಕಂಪ್ಯೂಟರ್‌ ಲಾಂಗ್ವೇಜ್‌ ಕಲಿಯಬೇಕಾದವರಿಗೆ C ಪ್ರಾಥಮಿಕವಾದ ಬಾಲಬೋಧೆ ಆಗಿದೆಯೆಂದರೆ ತಪ್ಪಲ್ಲ. ನಮಗೆ ಇಂತಹ ʼಸಿಹಿʼ ನೀಡಿ, ಇಂದಿನ ಕಂಪ್ಯೂಟರ್‌ ಸಾಫ್ಟ್‌ ವೇರ್‌ ಅಭಿವೃದ್ಧಿಗೆ ಅಗತ್ಯವಾದ  ತಳಪಾಯವನ್ನು ಇರಿಸಿದವರು ಡೇನಿಸ್‌ ರಿಚ್ಚಿ. ಇವೆಲ್ಲಕ್ಕಿಂತ ಹೆಚ್ಚಿನದೆಂದರೆ ಡೇನಿಸ್‌ ರಿಚ್ಚಿ C ಯನ್ನು ಓಪನ್‌ ಸೋರ್ಸಿನಿಲ್ಲಿರಿಸಿದ್ದು. ಅಂದರೆ  ಬಡವ ಬಲ್ಲಿದರೆನ್ನದೆ ಜಗತ್ತಿನ  ಯಾವುದೇ ಮೂಲೆಯ ವ್ಯಕ್ತಿ ರೂಪಾಯಿ ಖರ್ಚಿಲ್ಲದೆ ಕೋಡನ್ನು ಬರೆಯಬಹುದು, ತಿದ್ದಬಹುದು, ಉಚಿತವಾಗಿ ಸಾಫ್ಟವೇರ್‌ ಬಳಸಬಹುದು,  ಎಂಬ ಕಲ್ಪನೆಗೆ ನಾಂದಿ ಹಾಡಿದ್ದು ಒಂದು ಪುರಷಾರ್ಥವೆಂದರೆ ತಪ್ಪಲ್ಲ. ರಿಚ್ಚಿಯಂತಹವರ ಕೊಡುಗೆಗಳನ್ನು ಜಾಣತನದಿಂದ ವ್ಯವಾಹಾರಿಕವಾಗಿ  ಬಳಸಿಕೊಂಡು ಬಿಲಿಯನೇರುಗಳಾದ  ಬಿಲ್‌ ಗೇಟ್ಸ್‌ ಮತ್ತು ಸ್ಟೀವ್‌ ಜಾಬ್ಸ್‌ ಗೆ ಹೋಲಿಸಿದರೆ  ಜನಮಾನಸದಲ್ಲಿ ರಿಚ್ಚಿ ಇಲ್ಲಿ ವಿಭಿನ್ನವಾಗಿ  ಎತ್ತರದಲ್ಲಿ ನಿಲ್ಲುತ್ತಾರೆ. ರಿಚ್ಚಿಯವರ  ಸಂಶೋಧನೆಯ ಉದ್ಧೇಶ ರಿಚ್‌ ಅಂಡ್‌ ಫೇಮಾಗುವುದಲ್ಲ.  ಬದಲಾಗಿ ಅದೊಂದು ಕುತೋಹಲ ತಣಿಸುವ ಜ್ಞಾನಾರ್ಜನೆಯ ತಪಸ್ಸು, ಜನಸೇವೆ.  ವರ್ಡ್‌ ಪ್ರೊಸಸರನ್ನು ಅಭಿವೃದ್ಧಿ ಪಡಿಸಲೆಂದು ರಿಚ್ಚಿ ಮತ್ತು ಥಾಂಸನ್ನ ಜೋಡಿಯು ತಮಗೆ  ನೀಡಿದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ಖರ್ಚಿಲ್ಲದೇ ಉಪ ಉತ್ಪನ್ನವೆನ್ನುವ ಹಾಗೆ ಅಭಿವೃದ್ಧಿ ಪಡಿಸಲಾದ ಯುನಿಕ್ಸ್ ಮತ್ತು ಸಿ ‌ ಇಲ್ಲದೆಯೆ ಇಂದಿನ  ಕಂಪ್ಯೂಟರ್‌ ಜಗತ್ತನ್ನು ಕಲ್ಪಿಸಿಕೊಳ್ಳುವುದೆ ಕಷ್ಟವೆನ್ನಬಹುದು.

#include <stdio.h>

                     int main()

           {   

    int number1, number2, sum;   

       printf("Enter two integers: ");

              scanf("%d %d", &number1, &number2);

                 // calculate the sum

                 sum = number1 + number2;        

    printf("%d + %d = %d", number1, number2, sum);

    return 0;

           }

ಎರಡು ಅಂಕೆಗಳ ಮೊತ್ತ ಕಂಡು ಹಿಡಿಯುವ ಒಂದು ಸರಳ ಕೋಡ್‌, ಸಿ ಲಾಂಗ್ವೇಜಿನಲ್ಲಿ.

      ಬಿ ಲಾಂಗ್ವೇಜಿನಲ್ಲಿದ್ದ ಯುನಿಕ್ಸ್‌ ಓಎಸನ್ನು ಮುಂದೆ ರಿಚ್ಚಿಯು ಸಂಪೂರ್ಣವಾಗಿ  ಸಿ ಲಾಂಗ್ವೇಜಿನಲ್ಲಿ ಬರೆದು ಮೇಲ್ದರ್ಜೆಗೇರಸಿ ಓಪನ್‌ ಸೋರ್ಸಿನಲ್ಲಿರಿಸಿ.ಬಿಡುಗಡೆಗೊಳಿಸಿದರು. ಇಂದು ಯುನಿಕ್ಸನ ಕೆರ್ನಲನ್ನು  ಆಧಾರವಾಗಿ ಹೊಂದಿರುವ ಅದರ ವಿಭಿನ್ನ ಅವತಾರಗಳು ಜಗತ್ತಿನಾಂದ್ಯಂತ ಜನಪ್ರಿಯ ಆಪರೇಟಿಂಗ್‌ ಸಿಂಸ್ಟಂ ಆಗಿವೆ. ಲಿನಿಕ್ಸ್‌, ಫೆದೋರ, ರೆಡ್‌ ಹ್ಯಾಟ್‌, ಉಬುಂಟು ಮತ್ತು ಅದರ ಅವತರಣಿಕೆಗಳು ಮುಂತಾದವು. ಇವೆಲ್ಲವೂ ಉಚಿತ ಆಪರೇಟಿಂಗ್‌ ಸಿಸ್ಟಂಗಳೆನ್ನುವುದನ್ನು ನಾವು ಗಮನಿಸಬೇಕು. ಯುನಿಕ್ಸ್‌ ಅದರ ಅನೇಕ ಅವತಾರಗಳು ಇಂದು ಜಗತ್ತಿನಾಂದ್ಯಂತ ಅನೇಕ ಲ್ಯಾಪ್ ಟಾಪುಗಳು,ಡೆಸ್ಕ್‌ ಟಾಪುಗಳು, ಸರ್ವರುಗಳು, ಮುಂತಾದವುಗಳಲ್ಲಿ ಬಳಕೆಯಲ್ಲಿವೆ. ಯುನಿಕ್ಸಿನ ಕೆರ್ನಲ್ ಎಷ್ಟು ಗಟ್ಟಿ ಮತ್ತು ಸುರಕ್ಷಿತವೆಂದರೆ ಯುನಿಕ್ಸಿನ ಯಂತ್ರಗಳ ಮೇಲೆ ಸೈಬರ್‌ ದಾಳಿ ನಡೆಸುವುದು ಸುಲಭಸಾಧ್ಯವಲ್ಲ.

        ಡೇನಿಸ್‌ ರಿಚ್ಚಿಯವರನ್ನು 1983ರಲ್ಲಿ ಬೆಲ್‌ ಲ್ಯಾಬಿನ ಫೆಲೋ ಎಂದು ನಾಮಕರಣಮಾಡಿ ಗೌರಿವಿಸಲಾಯಿತು. ಅದೇ ವರ್ಷ ಸಿ ಲಾಂಗ್ವೇಜ್‌ ಮತ್ತು ಯುನಿಕ್ಸಿನ ಪ್ರಸ್ತುತಿಗಾಗಿ ರಿಚ್ಚಿ ಮತ್ತು ಥಾಂಸನ್‌ ಜೋಡಿಯನ್ನು ಪ್ರತಿಷ್ಟಿತ ಟ್ಯೂರಿಂಗ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 1988 ರಲ್ಲಿ ಅಮೇರಿಕಾದ ನ್ಯಾಷನಲ್ ಅಕಾಡೆಮಿ ಆಫ್‌ ಟೆಕ್ನಾಲಜಿಗೆ ಡೇನಿಸ್‌ ರಿಚ್ಚಿ ಸದಸ್ಯರಾಗಿ ಆಯ್ಕೆ ಆದರು. 1999ರಲ್ಲಿ ಅಂದಿನ ಅಮೆರಿಕಾದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ರವರು  ರಿಚ್ಚಿ ಮತ್ತು ಥಾಂಸನ್‌ ಜೋಡಿಯನ್ನು ಪ್ರತಿಷ್ಟಿತ  ಅಮೆರಿಕಾದ ರಾಷ್ಟ್ರೀಯ ತಾಂತ್ರಿಕ ಪ್ರಶಸ್ತಿ ನೀಡಿ ಗೌರವಿಸಿದರು. ಅವರು ತೀರಿಹೋಗು ಕೆಲವೇ ತಿಂಗಳುಗಳಿಗೆ ಮೊದಲು 2011ರ ಮೇ 19ರಂದು ಜಪಾನ್‌ ಸರ್ಕಾರ ರಾಷ್ಟ್ರೀಯ ಮೆಡಲ್‌ ನೀಡಿ ಅವರನ್ನು ಗೌರಿವಿಸಿತ್ತು.  ತಾಂತ್ರಿಕ ಜಗತ್ತನಲ್ಲಿ ಇಷ್ಟೆಲ್ಲ ಸಾಧಿಸಿದರು ವೈಯಕ್ತಿಕ ಜೀವನದಲ್ಲಿ ಒಂಟಿಯಾಗಿದ್ದ ರಿಚ್ಚಿಯವರು 2011ರ ಅಕ್ಟೋಬರ್‌ 12 ರಂದು ಒಂಟಿಯಾಗಿಯೇ  ಇಹಲೋಕವನ್ನು ತ್ಯಜಿಸಿದರು.  ವಿಶ್ವವಿದ್ಯಾಲಕ್ಕೆ ಸಲ್ಲಿಸಲು ಮರೆತರೋ ಏನೋ, ತಾವು ಪಿಎಚ್ಡಿಗಾಗಿ ಬರೆದಿದ್ದ ಥೀಸಿಸನ್ನು ಸಹ  ಸಲ್ಲಿಸಿರಲಿಲ್ಲ. ಅವರ ಮರಣಾನಂತರ ಸಾರ್ವಜನಿಕರ ಒತ್ತಾಯದ ಮೇರೆಗೆ ಅವರ ಸಹೋದರ ಸಹೋದರಿಯರು ಬಹಳ ಶ್ರಮವಹಿಸಿ ಅವರು ಬರೆದಿಟ್ಟಿದ್ದ ಥೀಸಿಸನ್ನು ಪತ್ತೆ ಮಾಡಿ ವಿಶ್ವವಿದ್ಯಾಲಯಕ್ಕೆ ಸಲ್ಲಸಿದರು!

  

"ಆರೋಗ್ಯವಾಗಿದ್ರೆ ಬಡವನೂ ಶ್ರೀಮಂತ"

 "ಆರೋಗ್ಯವಾಗಿದ್ರೆ ಬಡವನೂ ಶ್ರೀಮಂತ"

ಎಪ್ರಿಲ್‌  07-ವಿಶ್ವ ಆರೋಗ್ಯ ದಿನದ ನಿಮಿತ್ತ ವಿಶೇಷ ಲೇಖನ.

✍️ಲೇಖನ:- ಬಸವರಾಜ ಎಮ್ ಯರಗುಪ್ಪಿ

ಬಿ ಆರ್ ಪಿ ಶಿರಹಟ್ಟಿ. 

ಸಾ.ಪೊ ರಾಮಗೇರಿ,ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ. 

ಮಿಂಚಂಚೆ- basu.ygp@gmail.com


"ಮನುಷ್ಯನಿಗೆ ಆರೋಗ್ಯವೇ ಶ್ರೇಷ್ಠ ಉಡುಗೊರೆ; ಸಂತೃಪ್ತಿಯೇ ಶ್ರೇಷ್ಠ ಸಂಪತ್ತು; ವಿಶ್ವಾಸಾರ್ಹತೆಯೇ ಶ್ರೇಷ್ಠ ಸಂಬಂಧ" ಎಂದು - ಗೌತಮ ಬುದ್ಧ ಹೇಳಿರುವ ನುಡಿಯ ಉಲ್ಲೇಖ  ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಇಂದಿಗೂ ಈ ಮಾತು ಅನ್ವಯಿಸುತ್ತದೆ. ಅದೆ ರೀತಿಯಾಗಿ ‘ಆರೋಗ್ಯ ನಿಜವಾದ ಸಂಪತ್ತೇ ಹೊರತು, ಚಿನ್ನ, ಬೆಳ್ಳಿಯ ತುಂಡುಗಳಲ್ಲ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು. ಕೋವಿಡ್-19 ಸಾಂಕ್ರಾಮಿಕ ಆರಂಭದ ಬಳಿಕ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಿದೆಯೇನೋ ಎಂದು ಅನಿಸುವುದು ಸುಳ್ಳಲ್ಲ.ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯದ ಜೊತೆಗೆ ಜೀವನಶೈಲಿಯು ತುಂಬಾ ಮುಖ್ಯ. 

ಉತ್ತಮ ಆರೋಗ್ಯವು ನಾವು ಖರೀದಿಸಬಹುದಾದ ವಸ್ತುವಲ್ಲ. ಆದಾಗ್ಯೂ,ಇದು ಅತ್ಯಂತ ಮೌಲ್ಯಯುತವಾದ ಉಳಿತಾಯ ಖಾತೆಯಾಗಿರುತ್ತದೆ. ಆದರೆ ಪ್ರಪಂಚದ ಎಲ್ಲಾ ಹಣವು ನಿಮಗೆ ಉತ್ತಮ ಆರೋಗ್ಯವನ್ನು ಮರಳಿ ಖರೀದಿಸಲು ಸಾಧ್ಯವಿಲ್ಲ.ಆದ್ದರಿಂದ ಪ್ರತಿವರ್ಷ ಏಪ್ರಿಲ್ 07 ರಂದು ವಿಶ್ವ ಆರೋಗ್ಯ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಗತ್ತಿನಾದ್ಯಂತ ಇತರ ಆರೋಗ್ಯ ಸಂಬಂಧಿತ ಸಂಸ್ಥೆಗಳು ಆಚರಿಸುತ್ತವೆ.ಪ್ರಪಂಚದಾದ್ಯಂತದ ಬಡತನದಿಂದ ಬಳಲುತ್ತಿರುವ ಪ್ರದೇಶಗಳ ಜನರಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಆರೋಗ್ಯ ದಿನಾಚರಣೆಯ ಹಿಂದಿನ ಪ್ರಮುಖ ಉದ್ದೇಶದ ಜೊತೆಗೆ ಗುರಿಯೂ ಆಗಿದೆ.

#ಪ್ರಥಮ ವಿಶ್ವ ಆರೋಗ್ಯ ದಿನ:

1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಒಂದು ವಿಷಯದ ಮೇಲ್ಪಂಕ್ತಿಯನ್ನು ಆರಿಸಿ ಆ ವಿಷಯದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ಅನುಷ್ಠಾನಗೊಳಿಸಲು ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ.  


ಆರೋಗ್ಯ ಎಂದರೆ ನಮ್ಮ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕವಾಗಿ ಮಾನಸಿಕ ಸಮತೋಲನ ಹೊಂದಿರುವುದೇ ಆಗಿದೆ. ಸಂಪೂರ್ಣ ಯೋಗಕ್ಷೇಮದತ್ತ ಜನರ ಗಮನವನ್ನು ಸೆಳೆಯಲು, ವಿಶ್ವ ಆರೋಗ್ಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. 


#ಯಾತಕ್ಕಾಗಿ ಈ ಆಚರಣೆ...? 

ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. 


#ಆರೋಗ್ಯವೇ ಭಾಗ್ಯ:

ಈ ನುಡಿಯನ್ನು ನಾವು ಆಗಾಗ್ಗೆ ಕೇಳುತ್ತಾ ಇರುತ್ತೇವೆ. ಇದು ಆರೋಗ್ಯದ ಮಹತ್ವ ಬಗ್ಗೆ ಮಾಹಿತಿ ನೀಡುವ ಸಾರ್ವತ್ರಿಕವಾದ ಮಾತಾಗಿದೆ. ಈ ಹಿಂದೆ ವಿಶ್ವ ಸಂಸ್ಥೆ ಆರೋಗ್ಯ ಎಂದರೆ “ರೋಗವಿಲ್ಲದಿರುವುದೇ ಆರೋಗ್ಯ” ಎಂಬ ವ್ಯಾಖ್ಯಾನ ನೀಡಿತ್ತು. ಆದರೆ ಈಗ ಬದಲಾದ ಪರಿಸ್ಥಿತಿ ಮತ್ತು ಕಾಲಘಟ್ಟದಲ್ಲಿ ಈ ವ್ಯಾಖ್ಯಾನ ತನ್ನ ಅರ್ಥವನ್ನು ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈಗ ದುರ್ಬಿನು ಹಾಕಿ ಹುಡುಕಿದರೂ ನಮಗೆ ಆರೋಗ್ಯವಂತ ವ್ಯಕ್ತಿ ಸಿಗುವುದು ಕಷ್ಟ. ಒಂದು ವೇಳೆ ಆತ ಅಥವಾ ಆಕೆ ದೈಹಿಕವಾಗಿ ಆರೋಗ್ಯವಂತನಾಗಿದ್ದರೂ ಮಾನಸಿಕವಾಗಿ ಬಹಳಷ್ಟು ಒತ್ತಡ ಅಥವಾ ಆತಂಕದಿಂದ ಇರುತ್ತಾನೆ. ಈ ನಿಟ್ಟಿನಲ್ಲಿ ನಾವು ಒಬ್ಬ ವ್ಯಕ್ತಿ ಪರಿಪೂರ್ಣ ಆರೋಗ್ಯವಂತ ಎಂದು ಪ್ರಾಮಾಣೀಕರಿಸಬೇಕಾದರೆ ಆತ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಆರೋಗ್ಯವಂತನಾಗಿರಲೇ ಬೇಕು.


#2024 ರ ವಿಶ್ವ ಆರೋಗ್ಯ ದಿನಾಚರಣೆ ಥೀಮ್:

ವಿಶ್ವ ಆರೋಗ್ಯ ದಿನವನ್ನು ಆಚರಿಸಲು ನಿರ್ದಿಷ್ಟ ಥೀಮ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸುತ್ತದೆ. ಹಾಗಾಗಿ 2024ನೇ ಇಸ್ವಿಯ ಥೀಮ್ - "ನನ್ನ ಆರೋಗ್ಯ, ನನ್ನ ಹಕ್ಕು"(My health, my right) ಅಂದರೆ ಆರೋಗ್ಯವೂ ಮಾನವನ ಹಕ್ಕಾಗಿದೆ.ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಮತ್ತು ಶಿಕ್ಷಣಕ್ಕೆ ಪ್ರವೇಶವನ್ನು ಹೊಂದಿರಬೇಕು ಎಂಬ ಅಂಶವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಈ ವರ್ಷದ ಥೀಮ್ ಒತ್ತಿ ಹೇಳಿದೆ.

#ಆರೋಗ್ಯದ ರಕ್ಷಣೆಗಿರುವ ಕ್ರಮಗಳು:

“ಬೇಗ ಮಲಗಿ ಬೇಗ ಏಳು” ಎಂಬ ಹಿರಿಯರ ಮಾತನ್ನು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಸಿಕೊಂಡು ಈ ಕೆಳಗಿನ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. 

1)ಧೂಮಪಾನ ಮಧ್ಯಪಾನದಿಂದ ದೂರವಿಡಿ.

2)ಒತ್ತಡದ ಜೀವನ ಶೈಲಿಗೆ ತಿಲಾಂಜಲಿ ನೀಡಿ. 

3)ಆದಷ್ಟು ಹಸಿ ತರಕಾರಿ, ಹಸಿರು ಸೊಪ್ಪು, ಕಾಳು ಬೇಳೆ ಇರುವ ಆಹಾರ ಸೇವಿಸಿರಿ.

4)ಸ್ವಯಂ ಔಷಧಿಗಾರಿಕೆ ಮಾಡುವುದೇ ಬೇಡ. 

5)ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಸ್ವಿಮ್ಮಿಂಗ್, ಸೈಕ್ಲಿಂಗ್, ಮುಂತಾದವುಗಳನ್ನು ಅಳವಡಿಸಿಕೊಳ್ಳಿ. 

6)ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸಿ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಉಪಕರಣ ಬರುವುದು ಸಹಜ. ಆದರೆ ದೈನಂದಿನ ಜೀವನದ ಅತಿ ಅನಿವಾರ್ಯದಲ್ಲಿ ಮಾತ್ರ ಬಳಸಿ. 

ಒಟ್ಟಾರೆಯಾಗಿ  ಸಮುದಾಯ ಆರೋಗ್ಯವಾಗಿಲ್ಲದಾಗ ಸುಂದರ ಸದೃಢ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ “ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ” ಎಂಬ ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ದಿನದ ಆಚರಣೆಯ ಧ್ಯೇಯ ವಾಕ್ಯಕ್ಕೆ ನ್ಯಾಯ ಒದಗಿದಂತಾಗುತ್ತದೆ. ಇಲ್ಲವಾದಲ್ಲಿ ಎಲ್ಲರಿಗೂ ಆರೋಗ್ಯ ಎನ್ನುವುದು ಮರೀಚಿಕೆಯಾಗುವ ಎಲ್ಲ ಸಾಧ್ಯತೆಗಳು ಇವೆ. ಹೀಗಾಗಿ ಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಒಳಗೊಂಡಿರುತ್ತದೆ.  ಆರೋಗ್ಯದ ನಿಜವಾದ ಅರ್ಥ, ಕಾಳಜಿ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ವ್ಯಕ್ತಿ ಮಾಡಬೇಕಾದ ಕರ್ತವ್ಯದ ಬಗ್ಗೆ ಅರಿವು ಮೂಡಿದಾಗ ಮಾತ್ರ ಈ ದಿನಾಚರಣೆ ಸಾರ್ಥಕವಾಗಲು ಸಾಧ್ಯ. "ಅಂತಸ್ತು ಒಬ್ಬರ ಸಾಮಾಜಿಕ ಸ್ಥಾನಮಾನ ಹೇಳುತ್ತೆ, ಆದ್ರೆ ಆರೋಗ್ಯ ಅದನ್ನೆಲ್ಲಾ ಮೀರಿದ್ದಾಗಿದೆ".ಹಾಗಾಗಿ ಆರೋಗ್ಯವಾಗಿದ್ರೆ ಬಡವನೂ ಸಿರಿವಂತನಾಗಬಹುದು. ಸರಿ ತಾನೆ..?

#ಕೊನೆಯ ಮಾತು:

"ಶಿಕ್ಷಣದ ಹೊರತಾಗಿ ಉತ್ತಮ ಆರೋಗ್ಯ ಬೇಕು.ಅದಕ್ಕಾಗಿ ಕ್ರೀಡೆಗಳನ್ನು ಆಡಬೇಕು" ಎಂದು ಕಪಿಲ್ ದೇವ್ ಅವರ ಅಭಿಪ್ರಾಯವಾಗಿದೆ.  



ಹೂ ಬಿಡೋದು ಸಾಯುವುದಕ್ಕಾ..... ?????

 ಹೂ ಬಿಡೋದು ಸಾಯುವುದಕ್ಕಾ..... ?????


                                                         
ಲೇಖಕರು ರಮೇಶ,ವಿ ಬಳ್ಳಾ  ಅಧ್ಯಾಪಕರು 

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು  

                                                          (ಪ್ರೌಢ ವಿಭಾಗ) ಗುಳೇದಗುಡ್ಡ  ಜಿ: 

ಬಾಗಲಕೋಟ


      ಒಂದು ಮರದ ಸೊಬಗು ಅದು ಬಿಡುವ ಹೂ, ಕಾಯಿ, ಹಣ್ಣುಗಳಿಂದ ಎಂಬುದು ಎಲ್ಲರ ಅಭಿಮತ. ಜೊತೆಗೆ ನಳನಳಿಸುವ ಹಸಿರು ಎಲೆಯ ವಿಶಿಷ್ಟ ರಚನೆಯಿಂದಲೂ ಆಗಿರಬಹುದು. ಯಾವಾಗ ಗಿಡದ ಮೊಗ್ಗು ಕುಡಿಯೊಡೆದು ಹೂ ಅರಳಿ ತನ್ನ ಸೌಂದರ್ಯ ಬೀರುತ್ತದೆಯೋ, ಆಗ ಮರಗಳಿಗೆ ಹೊಸ ಚೈತನ್ಯ ಬರುತ್ತದೆ. ಹಳತನ್ನು ಕಳಚಿ, ಹೊಸತನ್ನು ಅಪ್ಪಿಕೊಂಡು ನವ ವಧುವಿನಂತೆ ಶೃಂಗಾರಗೊAಡು ನೋಡುಗರ ಮನಕ್ಕೆ ಮುದ ನೀಡುತ್ತದೆ. ಸುತ್ತಲಿನ ಪರಿಸರದಲ್ಲಿ ನವೋಲ್ಲಾಸ ತುಂಬಿ ವಾತಾವರಣದಲ್ಲಿ ತನ್ನದೇ ಆದ ಘಮದೊಂದಿಗೆ ಬೆರಗುಗೊಳಿಸುತ್ತದೆ. ಇದು ಬಹುತೇಕ ಸಸ್ಯಗಳಲ್ಲಿ ನಡೆಯುವ ಸಾಮಾನ್ಯ ಸಂಗತಿ. ಆದರೆ ಅದೇ ಹೂ ಅರಳುವಿಕೆ ಅಥವಾ ಹೂ ಬಿಡುವಿಕೆ ಆ ಮರದ ಕೊರಳಿಗೆ ಉರುಳಾಗಿ ಅವನತಿಗೆ ಕಾರಣವಾಗುತ್ತದೆ ಎಂದರೆ ? ಅದ್ಹೇಗೆ ಸಾಧ್ಯ ಎನ್ನುವಿರಾ ! ಈ ವಿಚಾರವನ್ನು ಸಾಧಿಸ ಹೊರಟ ಸಸ್ಯಸಂಕುಲದ ಅತ್ಯಂತ ಚಿರಪರಿಚಿತ ಸಸ್ಯವೊಂದರ ಜೀವನದ ದುಃಖಾಂತ್ಯ ವಿಚಾರ ಇಲ್ಲಿದೆ ನೋಡಿ.

ಬಿದಿರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಆದರೆ ಅದರ ನೈಜ ಬದುಕಿನ ಬಗ್ಗೆ ತಿಳಿದಿರಲಿಕ್ಕಿಲ್ಲ ಅಷ್ಟೆ. ಹುಲ್ಲು ಜಾತಿಗೆ ಸೇರಿದ ಅತ್ಯಂತ ಎತ್ತರವಾಗಿ ಬೆಳೆಯಬಲ್ಲ ಏಕೈಕ ಹುಲ್ಲು ಈ ಬಿದಿರು. ಸಾಮಾನ್ಯವಾಗಿ ಕೆರೆ, ನದಿ, ಉದ್ಯಾನ, ಹೊಲಗಳ ಬದು ಎಲ್ಲೆಂದರಲ್ಲಿ ಇದನ್ನು ಕಾಣಬಹುದು. ಉದ್ದನೆಯ ನೀಳ ಎಲೆಗಳುಳ್ಳ, ತೆಳು ಹುಲ್ಲಿನ ಬಿದಿರು ಎತ್ತರದ ಕಾಂಡಗಳನ್ನು ಸಣ್ಣ ಸಣ್ಣ ಗಿಣ್ಣುಗಳಲ್ಲಿ ವಿಭಜಿಸುತ್ತದೆ. ಆ ಗಿಣ್ಣುಗುಂಟ ಮೊನೆಯಾಕಾರದ ತರಚು ಮುಳ್ಳುಗಳು, ಮಧ್ಯೆ ಅಲ್ಲಲ್ಲಿ ಎಳೆಯಂತೆ ಚಾಚಿಕೊಂಡಿರುವ ಎಲೆಯ ಕಾಂಡದ ದಂಟುಗಳು. ಇಷ್ಟೆಲ್ಲಾ ಇರುವ ಬಿದಿರಿನ ಒಡಲಾಳ ಹತ್ತಾರು ಸೂಕ್ಷ್ಮ ಹಾಗೂ ಪರಿಸರದ ಜೀವಜಂತುಗಳ ಆಶ್ರಯ ತಾಣವೂ ಹೌದು. ಆದರೆ ಅದರ ಬದುಕಿನ ಅಂತ್ಯ ಮಾತ್ರ ಬೆರಗು ಹುಟ್ಟಿಸುವಂತಹದ್ದು.

ಕೆಲ ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ಧಿ ಮಾಡಿದ್ದು ತಾವೂ ಕೇಳಿರಬಹುದು. ಪಶ್ಚಿಮಘಟ್ಟ ಸಾಲುಗಳಲ್ಲಿಮಲೆನಾಡಿನ ಕೆಲ ಭಾಗಗಳಾದ ಶಿವಮೊಗ್ಗಚಿಕ್ಕಮಗಳೂರುಬಾಬಬುಡನ್‌ಗಿರಿಉತ್ತರಕನ್ನಡದಾಂಡೇಲಿ ಮುಂತಾದೆಡೆ ಸಾವಿರಾರು ಹೆಕ್ಟೇರ್‌ಗಳಲ್ಲಿ ಬಿದಿರು ಸಾಮೂಹಿಕ ಅಂತ್ಯ ಕಂಡಿತು. ಕಾಡ್ಗಿಚ್ಚಿನ ಕೆನ್ನಾಲಿಗೆ ಚಾಚುತ್ತಾ ಅಪಾರ ಪ್ರಮಾಣದಲ್ಲಿ ಪರಿಸರದಲ್ಲಿ ತಲ್ಲಣವನ್ನುಂಟು ಮಾಡಿತು. 

 ಇದಕ್ಕೆ ಕಾರಣ ಇಷ್ಟೆ, ಯಾವಾಗ ಬಿದಿರು ಹೂ ಬಿಟ್ಟು ನಳನಳಿಸುತ್ತದೆಯೋ ಆವಾಗಲೇ ಅದರ ಅಂತ್ಯ ಶುರುವಾದ ಹಾಗೆ. ಸಾಮಾನ್ಯವಾಗಿ ಬಿದಿರು ಹೂ ಬಿಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ಮನುಷ್ಯನ ಹಾಗೆ ಹುಟ್ಟು ಸಾವುಗಳನ್ನು ಕಾಣುವ ಬಿದಿರು ಅಂತ್ಯ ಕಾಲದಲ್ಲಿ ಹೂ ಬಿಡುತ್ತದೆ. ಬಿದಿರಿನ ಸರಾಸರಿ ಆಯಸ್ಸು ೪೦ ರಿಂದ ೬೦ ವರ್ಷಗಳು. ಆ ಸಮಯಕ್ಕೆ ಸರಿಯಾಗಿ ಬಿದಿರು ಮೆಳೆಗಳಲ್ಲಿ ಅದು ಉದುರಿಸುವ ಬೀಜಗಳು ನೋಡಲು ಗೋಧಿ ಕಾಳಿನಂತಿರುತ್ತವೆ. ಇದೇ ಬೀಜಗಳನ್ನು ಸಂಗ್ರಹಹಿಸಿ ನಾಟಿ ಮಾಡಿ ಮತ್ತೆ ಬಿದಿರು ಬೆಳೆಸಬಹುದಾಗಿದೆ. ಕೆಲ ಕಡೆಗಳಲ್ಲಿ ಜನ ಈ ಬೀಜಗಳನ್ನು ‘ಬಿದಿರಕ್ಕಿ’ಎಂದು ಕರೆಯುತ್ತಾರೆ. ಹಾಗೆಯೇ ಈ ಅಕ್ಕಿಯಿಂದ ಅನ್ನವನ್ನು ಮಾಡಿಕೊಂಡು ಊಟ ಮಾಡುವವರೂ ಇದ್ದಾರೆ. ಈ ಅಕ್ಕಿ ತುಂಬಾ ಉಷ್ಣವಾದ ಕಾರಣ ತಿನ್ನುವವರು ಕಡಿಮೆ. ಮತ್ತೆ ಕೆಲವರು ಅದರಲ್ಲಿ ಮೊಸರು, ಮಜ್ಜಿಗೆ ಇತರ ತಂಪುಕಾರಿ ಪದಾರ್ಥಗಳನ್ನು ಬೆರೆಸಿಕೊಂಡು ಊಟ ಮಾಡುವವರೂ ಇದ್ದಾರೆ. ಒಟ್ಟಾರೆ ಬಿದಿರು ಹೂ ಬಿಟ್ಟು, ಬೀಜ ಉದುರಿಸಿ, ಒಣಗಿ ನಿಂತಿತೆAದರೆ ಅದರ ಅಂತ್ಯವಾಯಿತೆAದೆ ಅರ್ಥ.

ಕಾಡಿನ ಹಾದಿಯಲ್ಲಿ ಒಣಗಿ ನಿಂತ ಬಿದಿರು ಮೇಳೆ ಗಾಳಿ ರಭಸಕ್ಕೆ ತಾಕಿ ಘರ್ಷಿಸಿ ಕಾಡ್ಗಿಚ್ಚಾಗಿ ಹಬ್ಬಿತೆಂದರೆ ತೀವ್ರ ನಷ್ಟವನ್ನುಂಟು ಮಾಡುತ್ತದೆ. ಅರಣ್ಯ ಇಲಾಖೆಯವರಿಗೆ ಇದೊಂದು ತಲೆ ನೋವಿನ ಸಂಗತಿ. ಒಣಗಿದ ಬಿದಿರು ಮೇಳೆಯನ್ನು ಕಡಿದು ಹಾಕಲೂ ಆಗದೇ ಕಾನೂನಿನ ನಿಯಮಗಳ ಸುಳಿಯಲ್ಲಿ ಪರಿತಪಿಸಬೇಕಾಗುತ್ತದೆ. ಕೂಡಲೇ ಕಡಿದದ್ದಾದರೆ ಅಲ್ಲಿರುವ ಸೂಕ್ಷ್ಮಜೀವಿ ಪರಿಸರದ ವೈವಿಧ್ಯತೆಗೆ ದಕ್ಕೆ ತಂದAತಾಗುತ್ತದೆ. ಹಾಗಾಗಿ ಭಾರತೀಯ ವನ್ಯಜೀವಿ ಮಂಡಳಿಯ ನೀತಿ ನಿರೂಪಣೆಗನುಗುಣವಾಗಿ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ.

ಬಿದಿರು ಸಾಮಾನ್ಯ ಹುಲ್ಲು ಆದರೆ ಅದರ ಮಹತ್ವ ಅಷ್ಟಿಷ್ಟಲ್ಲ. ಪ್ರಾಚೀನ ನಾಗರೀಕತೆಯಿಂದ ನಮ್ಮೊಡನೆ ಅವಿನಾಭಾವ ಸಂಬAಧವನ್ನು ಗಟ್ಟಿಯಾಗಿಸಿಕೊಂಡು ಬಂದ ಬಿದಿರು ಪ್ರಸ್ತುತ ಔದ್ಯೋಗಿಕ ಜಗತ್ತನ್ನು ಆವರಿಸಿದೆ. ನಾವು ನಿತ್ಯ ಬಳಸುವ ಕಾಗದ, ಬಂಬೂಗಳು ಮನೆ ದೊಡ್ಡಿ ನಿರ್ಮಾಣ ಕಾರ್ಯಕ್ಕೆ ಅಷ್ಟೇ ಏಕೆ ಕರಕುಶಲ ಕೈಗಾರಿಕೆಗಳಲ್ಲಿ ಅಲಂಕಾರಿಕ ವಸ್ತು ಸಾಮಗ್ರಿಗಳನ್ನು ತಯಾರಿಸುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಕುರ್ಚಿ, ಸೋಫಾ, ಟೀಪಾಯ್, ಬುಟ್ಟಿ, ಟ್ರೇ, ಬ್ಯಾಂಗಲ್ ಸ್ಟ್ಯಾಂಡ್, ಏಣಿ ಮುಂತಾದ ಸಲಕರಣೆಗಳು ಇದರಿಂದ ತಯಾರಾಗುತ್ತವೆ. ನೂರಾರು ಜನರ ಹೊಟ್ಟೆಯನ್ನು ತುಂಬಿಸುವ ಬಿದಿರು ತೊಟ್ಟಿಲಿನಿಂದ ಚಟ್ಟವೇರುವವರೆಗೂ ನಮ್ಮ ಬದುಕಿನ ಹಾಸುಹೊಕ್ಕಾಗಿ ಬದುಕಿನ ಎಲ್ಲ ಮಗ್ಗುಲುಗಳಲ್ಲೂ ತನ್ನ ಅನಿವಾರ್ಯತೆಯನ್ನು ಸಾಬೀತುಪಡಿಸಿದೆ.

ದೇಶದ ಉದ್ದಗಲಕ್ಕೂ ಸುಮಾರು ೯.೫ ಮಿಲಿಯನ್ ಹೆಕ್ಟೇರ್ ಬಿದಿರು ಆವರಿಸಿದೆ. ಪರಿಸರದ ಸಮತೋಲನ ತಪ್ಪದ ಹಾಗೆ ನಿಗಾ ವಹಿಸಬೇಕಾಗಿದೆ. ಆನೆಗಳು ಬಿದಿರುಪ್ರಿಯ ಪಾಣಿಗಳು. ಆಹಾರದ ಕೊರತೆಯಿಂದ ಇತ್ತೀಚೆಗೆ  ನಾಡನ್ನು ಪ್ರವೇಶಿಸುವುದನ್ನು ಕೇಳಿದ್ದೇವೆ. ಅವುಗಳ ಪ್ರಮುಖ ಆಹಾರವೇ ಈ ಬಿದಿರು. ಅದರ ಕೊರತೆಯಾದರೆ ಅಸಮತೋಲನ ಉಂಟಾಗುತ್ತದೆ. ಸುಮಾರು ೧೩೬ ಪ್ರಬೇಧಗಳ ಬಿದಿರು ನಮ್ಮ ದೇಶದಲ್ಲಿದ್ದರೂ ಕರ್ನಾಟಕದ ಮಟ್ಟಿಗೆ ಕೆಲವೇ ಕೆಲವು ಬಿದಿರುಗಳು ಬೆಳೆಯಲು ವಾತಾವರಣ ಸೂಕ್ತವಾಗಿದೆ. ಹೆಬ್ಬಿದಿರು, ಕಿರುಬಿದಿರು, ಸಾಮೆ(ಮಾರಿಹಾಳ) ಬಿದಿರುಗಳನ್ನು ಅಲ್ಲಲ್ಲಿ ಕಾಣಬಹುದು. ಅದರಲ್ಲೂ ಕರಾವಳಿ ಭಾಗದ ಮನೆಯ ಕೈತೋಟ, ಹಿತ್ತಿಲುಗಳಲ್ಲಿ ಸಾಮೆ ಬಿದಿರು ಸಾಮಾನ್ಯ.

ಪ್ರಕೃತಿಯ ನಿಯಮ ಮೀರಿ ಯಾವೂದು ನಡೆಯಲು ಸಾಧ್ಯವಿಲ್ಲ. ಪ್ರಕೃತಿಯಿಂದ ಬಂದದ್ದು ಮರಳಿ ಪ್ರಕೃತಿಗೇ ಸೇರಬೇಕು. ಹೂ ಬಿಡುವ ಮೂಲಕ ಸಾವು ಕಾಣುವ ಬಿದಿರು, ಮತ್ತೆ ಪ್ರಕೃತಿ ಮಡಿಲು ತುಂಬಬೇಕಾದರೆ ಬಿದಿರು ಸಸಿ ನಾಟಿ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು. ಇಲಾಖೆ ಸರ್ಕಾರದ ಮಟ್ಟದಲ್ಲಿ ಕಾನೂನಿನ ಕೆಲ ವಿಚಾರಗಳಲ್ಲಿ ಸಡಿಲತೆ ತಂದು, ಪರಿಸರದ ಸಮತೋಲನದಲ್ಲುಂಟಾಗುವ ನಷ್ಟ ತಪ್ಪಿಸಬೇಕು. ಸಾಮಾನ್ಯ ಜನರು ಬಿದಿರು ಬೆಳೆಯಲು ಮನಸ್ಸು ಮಾಡಬೇಕು. ಆ ಮೂಲಕ ನಮ್ಮ ಬಿದಿರು ಸಂತತಿ ರಕ್ಷಿಸಬೇಕು.

 

                                   *******

ಆಕರಗಳು : ೧) ಸಸ್ಯ ಪರಿಸರ - ಕೃಷ್ಣಾನಂದ ಕಾಮತ್

೨) ಅಂತ್ಯ ಕಂಡ ಬಿದಿರು - ಶರತ್ ಹೆಗ್ಡೆ

೩) ಬಿದಿರಿನ ಚಿಗುರು - ರಮೇಶ ಉತ್ತಮಗೌಢ

೪) ಬಿದಿರಿಗೆ ಬರವೇ ? ಕೃಷ್ಣಿ ಶಿರೂರ

೫) ಬಿದಿರಿಗೂ ಮೇಳ - ಸಂಧ್ಯಾ ಹೆಗಡೆ ಆಲ್ಮನೆ