ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, April 4, 2024

ಬೆಳಕು ಸೂಸುವ ಸಸ್ಯಗಳು


ಬೆಳಕು ಸೂಸುವ ಸಸ್ಯಗಳು 

          ಲೇಖನ ಡಾ. ಬಾಲಕೃಷ್ಣ ಅಡಿಗ ಟಿ.ಎ.

 




    ನಿಮ್ಮ ಮನೆಯಂಗಳದಲ್ಲಿರುವ ಉದ್ಯಾನವನದಲ್ಲಿ ರಾತ್ರಿಯಾಗುತ್ತಿದ್ದಂತೆ ತಮ್ಮದೇ ಬೆಳಕನ್ನು ಹೊರಸೂಸುವ ಸಸ್ಯಗಳನ್ನು ಬೆಳೆಯುವಂತಾದರೆ ಹೇಗಿರುತ್ತದೆ ? ಅಂಥ ಸಸ್ಯಗಳ ಮಧ್ಯೆ ವಾಯುವಿಹಾರ ಮಾಡುವ ಕನಸು ಕಾಣಬಹುದೆ ? ಕುಲಾಂತರಿ ತಂತ್ರಜ್ಞಾನ ಬಳಸಿ ಇದು ಸಾಧ್ಯ ಎಂದು ಇಂಗ್ಲೆಂಡಿನ ವಿಜ್ಞಾನಿಯೊಬ್ಬರು ತೋರಿಸಿಕೊಟ್ಟಿದ್ದಾರೆ. 

ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಸಂಶ್ಲೇಷಿತ ಜೀವ ವಿಜ್ಞಾನ ವಿಭಾಗದ ಕರೇನ್ ಸಾರ್ಕಿಸ್ಯಾನ್ (Karen Sarkisyan)  ತನ್ನ ಪ್ರಯೋಗಾಲಯದ ಕತ್ತಲ ಕೋಣೆಯಲ್ಲಿ ಬೆಳಕು ಸೂಸುತ್ತಿರುವ ಪೆಟೂನಿಯಾ (Petunia) ಸಸ್ಯಗಳಿಗಿಂತ ಹೆಚ್ಚು ಸ್ಪೂರ್ತಿ ನೀಡುವ ಬೇರೊಂದು ವಿಷಯವೇ ಕಾಣುತ್ತಿಲ್ಲ. 2009ರಲ್ಲಿ ಬಿಡುಗಡೆಯಾದ 'ಅವತಾರ್‌' ಚಲನಚಿತ್ರದಂತೆ, ಹೆಚ್ಚು ಜನರು ಈ ಒಂದು ಅಚ್ಚರಿಯನ್ನು ಅನುಭವಿಸ ಬೇಕೆಂಬುದು ಆವನ ಇಚ್ಛೆ. ಸಾರ್ಕಿಸ್ಥಾನ್ ಪೆಟೂನಿಯಾ ಸಸ್ಯಗಳಲ್ಲಿ ವಿಶಿಷ್ಟ ಪ್ರಯೋಗ ನಡೆಸಿ ಅವು ಜೀವದೀಪ್ತಿ (bio luminescence) ಮಾಡುವಲ್ಲಿ ಯಶಸ್ವಿಯಾದವರು. ಆತ ಸ್ಥಾಪಿಸಿದ ಇಡಾಹೊ ಮೂಲದ ಲೈಟ್ ಬಯೋ(light bio)  ಎಂಬ ಬಯೋ ಟೆಕ್ ಸಂಸ್ಥೆ ಅಮೆರಿಕಾದ ಕೃಷಿ ಇಲಾಖೆಯಿಂದ ಜೀವದೀಪ್ತಿ ಹೊರಸೂಸುವ ಪೆಟೂನಿಯಾ ಸಸ್ಯಗಳನ್ನು ಅಮೆರಿಕಾದಲ್ಲಿ ಮಾರಾಟ ಮಾಡಲು ಇತ್ತೀಚೆಗಷ್ಟೇ ಅನುಮತಿ ಪಡೆದಿದೆ.

ಲೈಟ್ ಬಯೋ ಸಂಸ್ಥೆಯ ವಿಜ್ಞಾನಿಗಳು ಹಾಗೂ ಇಂಜಿನಿಯರುಗಳು ಪೆಟೂನಿಯಾ ಸಸ್ಯಗಳಲ್ಲಿ ಕುಲಾಂತರಿ ತಂತ್ರಜ್ಞಾನ ಬಳಸಿ ಗಾಢ ಹಸುರು ಬಣ್ಣದ ಬೆಳಕನ್ನು ಹೊರಸೂಸುವ ತಳಿಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವದೀಪ್ತಿ ಹೊರಸೂಸುವ ನಿಯೋನೋಥೋಪಾನಸ್‌ ನಂಬಿ (Neonothopanus nambi) 2 ಸೇರಿದ ಶಿಲೀಂದ್ರ ವೊಂದರಿಂದ ಪಡೆದ

ಸೇರಿದ ಶಿಲೀಂದ್ರವೊಂದರಿಂದ ಪಡೆದ ವಂಶವಾಹಿಗಳನ್ನು ಪೆಟೂನಿಯಾ ಸಸ್ಯಗಳಿಗೆ ವರ್ಗಾಯಿಸಿ, ಈ ಕುಲಾಂತರಿ ಸಸ್ಯಗಳನ್ನು ಪಡೆಯಲಾಗಿದೆ. ಹಗಲಿನಲ್ಲಿ ತೆಳು ಕಂದು ಬಣ್ಣ ಹೊಂದಿರುವ ಈ ಶಿಲೀಂದ್ರ ಪ್ರಭೇದವು ರಾತ್ರಿಯ ವೇಳೆ ಕಡು ಹಸುರು ಬಣ್ಣದ ಬೆಳಕನ್ನು ಹೊರಸೂಸುತ್ತದೆ. ಸಮಶೀತೋಷ್ಣ ಕಾಡುಗಳಲ್ಲಿ ಕಂಡುಬರುವ ಈ ಶಿಲೀಂದ್ರಗಳಿಂದ ಪಡೆದ ಸ್ವಾಭಾವಿಕ ವ್ಯವಸ್ಥೆಯೊಂದನ್ನು ಪೆಟೂನಿಯಾ ಸಸ್ಯಗಳಿಗೆ ವರ್ಗಾಯಿಸುವ ಮೂಲಕ ಇದನ್ನು ಸಾಧಿಸಲಾಗಿದೆ.

 ಒಂದು ಅಂದಾಜಿನ ಪ್ರಕಾರ, ಬ್ಯಾಕ್ಟಿರಿಯಾಗಳು, ಶಿಲೀಂದ್ರಗಳು, ಲೋಳೆಮೀನುಗಳು, ಹುಳುಗಳು, ಸಂಧಿಪದಿಗಳು, ಮೀನುಗಳು ಹಾಗೂ ಉಭಯವಾಸಿಗಳು ಸೇರಿದಂತೆ ಸುಮಾರು 1500 ಪ್ರಭೇಧದ ಜೀವಿಗಳಲ್ಲಿ ಹೀಗೆ ಬೆಳಕನ್ನು ಹೊರ ಸೂಸುವ ಸಾಮರ್ಥ್ಯವಿದೆ. ಈ ಎಲ್ಲ ಜೀವಿಗಳಲ್ಲಿ ಕಂಡುಬರುವ ಲೂಸಿಫೆರಿನ್(luciferin) ಎಂಬ ವಸ್ತು, ಲೂಸಿಫೆರೇಸ್ ಎಂಬ ಕಿಣ್ವದ ಸಹಾಯದಿಂದ ಆಕ್ಸಿಜನ್ ಜೊತೆಗೆ ವರ್ತಿಸಿದಾಗ ಬೇಳಕಿನ ರೂಪದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕೆಲವು ಬ್ಯಾಕ್ಟಿರಿಯಾ ಹಾಗೂ ಶಿಲೀಂದ್ರದ ಪ್ರಭೇದಗಳನ್ನು ಹೊರತು ಪಡಿಸಿದರೆ, ಉಳಿದ ಜೀವಿಗಳಲ್ಲಿ ಜೀವದೀಪ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 2018ರಲ್ಲಿ ಸಾರ್ಕಿಸ್ಯಾನ್ ಮತ್ತು ಅವರ ತಂಡದ ವಿಜ್ಞಾನಿಗಳು ನಿಯೋನೋಥೋಪಾನಸ್ ನಂಬಿ ಪ್ರಭೇದದ ಶಿಲೀಂದ್ರಗಳಲ್ಲಿ ಜೀವದೀಪ್ತಿಗೆ ಕಾರಣವಾಗುವ ಕಿಣ್ವಗಳನ್ನು ಗುರುತಿಸಿದರು. ಎರಡು ವರ್ಷಗಳ ನಂತರ ಈ ಕಿಣ್ವಗಳಿಗೆ ಸಂಬಂಧಿಸಿದ ವಂಶವಾಹಿಗಳನ್ನು ಜೊಗೆಸೊಪ್ಪಿನ ಗಿಡಗಳಿಗೆ ವರ್ಗಾಯಿಸಿದರು. ಮುಂದಿನ ಪೀಳಿಗೆಯ ಸಸ್ಯಗಳಲ್ಲಿ ರಾತ್ರಿಯ ವೇಳೆ ಬೇರು ಕಾಂಡ ಮತ್ತು ಎಲೆಗಳಿಂದ ಗಾಢ ಹಸುರು ಬಣ್ಣದ ಬೆಳಕು ಗಾಢ ಹಸುರು ಬಣ್ಣದ ಬೆಳಕು ಹೊರಬರುತ್ತಿರುವುದನ್ನು ಗಮನಿಸಿದರು. ಇದಕ್ಕೆ ಮುಂಚೆಯೂ ಇಂಥ ಹಲವಾರು ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದರೂ ಅವು ಸಂಪೂರ್ಣ ಯಶಸ್ಸು ಕಂಡಿರಲಿಲ್ಲ. ಬ್ಯಾಕ್ಟಿರಿಯಾ ಮತ್ತು ಮಿಂಚುಹುಳುಗಳಿಂದ ಪಡೆದ ವಂಶವಾಹಿಗಳನ್ನು ನ್ಯಾನೋ ಕಣಗಳ ಸಹಾಯದಿಂದ ಕೆಲ ಸಸ್ಯಗಳಲ್ಲಿ ಅಳವಡಿಸಿ, ಅವು ಬೆಳಕನ್ನು ಹೊರಸೂಸುವಂತೆ ಮಾಡುವ ಪ್ರಯತ್ನಗಳು ಯಶಸ್ಸು ಕಂಡವಾದರೂ, ಬೆಳಕು ಕೇವಲ ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಿದ್ದುದು ಕಂಡು ಬಂತು. ದೀರ್ಘಕಾಲ ಈ ಬೆಳಕನ್ನು ಹಿಡಿದಿಡಲು ಕೆಲ ವಿಶೇಷವಾದ ರಾಸಾಯನಿಕಗಳನ್ನು ಆ ಸಸ್ಯಗಳ ಮೇಲೆ ಬಳಸಬೇಕಾಗಿ ಬಂದಿತ್ತು. ವಾಣಿಜ್ಯಾತ್ಮಕ ದೃಷ್ಟಿಯಿಂದ ಇದು ಸ್ವೀಕಾರಾರ್ಹವಾಗಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸಾರ್ಕಿಸ್ಯಾನ್ ಮತ್ತು ಸಂಗಡಿಗರು ಪ್ರಯತ್ನಶೀಲರಾದರು. ಆ ಶಿಲೀಂದ್ರದಲ್ಲಿ ಜೀವದೀಪ್ತಿಗೆ ಕಾರಣವಾಗುವ ಜೀವರಾಸಾಯನಿಕ ಪಥಮಾರ್ಗವನ್ನು ಕಂಡುಹಿಡಿದ ನಂತರ, ಅದೇ ಪಥಮಾರ್ಗ ಪೆಟೂನಿಯಾ ಸಸ್ಯಗಳಲ್ಲಿಯೂ ತನ್ನ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿ, ಅವರು ಸಸ್ಯಗಳಲ್ಲಿ ಸಹಜವಾಗಿ ಕಂಡುಬರುವ ಕೃಫೀಕ್ ಆಮ್ಲ (caffeic acid) ಎಂಬ ರಾಸಾಯನಿಕವನ್ನು ಬಳಸಿಕೊಂಡರು. ಶಿಲೀಂದ್ರಗಳಲ್ಲಿ ಈ ರಾಸಾಯನಿಕವು ನಾಲ್ಕು ಕಿಣ್ವಗಳನ್ನು ಬಳಸಿಕೊಂಡು ಲ್ಯೂಸಿಫೆರಿನ್ ಆಗಿ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಪತ್ತೆ ಹಚ್ಚಿದರು. ಇದೇ ನಾಲ್ಕು ಕಿಣ್ವಗಳಿಗೆ ಸಂಬಂಧಿಸಿದ ವಂಶವಾಹಿಗಳನ್ನು ಪೆಟೂನಿಯಾ ಸಸ್ಯಗಳಲ್ಲಿ ಅಳವಡಿಸಿ ಅಲ್ಲಿಯೂ ಜೀವದೀಪ್ತಿ ಹೊರಸೂಸುವಂತೆ ಮಾಡುವ ಪ್ರಯತ್ನದಲ್ಲಿ ಯಶಸ್ಸು ಪಡೆದರು. ಅದರ ಫಲವೇ ಹಸುರು ಬಣ್ಣದ ಬೆಳಕನ್ನು ಹೊರಸೂಸುವ ಪೆಟೂನಿಯಾ ಕುಲಾಂತರಿ ಸಸ್ಯಗಳು. ವಿಶೇಷವೆಂದರೆ, ಈ ಕುಲಾಂತರಿ ಪೆಟೂನಿಯಾ ಸಸ್ಯಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಜೀವದೀಪ್ತಿಯನ್ನು ಹೊರಸೂಸುವ ಸಾಮರ್ಥ್ಯವನ್ನು ಪಡೆದಿರುತ್ತವೆ. 

ಕುಲಾಂತರಿ ತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯಗಳಲ್ಲಿ ಬದಲಾವಣೆ ತರುವ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ವಿಶ್ವದಾದ್ಯಂತ ಇಂದು 12ಕ್ಕೂ ಕುಲಾಂತರಿ ಅಹಾರ ಸಸ್ಯಗಳು ಬಳಕೆಯಲ್ಲಿವೆ. ಅಲಂಕಾರಿಕ ಸಸ್ಯಗಳ ಕೆಲವು ಕುಲಾಂತರಿ ಪ್ರಭೇದಗಳೂ ಬಳಕೆಗೆ ಬಂದಿವೆ. ಅಮೆರಿಕಾದಲ್ಲಿ ಯಾವುದೇ ಕುಲಾಂತರಿ ಸಸ್ಯವನ್ನು ಬಳಕೆಗೆ ಬಿಡುವ ಮುನ್ನ ಸರ್ಕಾರದ ಅನುಮತಿ ಅತ್ಯಗತ್ಯ. ಪೆಟೂನಿಯಾ ಕುಲಾಂತರಿ ಸಸ್ಯಗಳು ಯಾವುದೇ ಸ್ಥಳೀಯ ಸಸ್ಯ  ಪ್ರಭೇದಗಳಿಗೆ ಸ್ಪರ್ಧೆ ಒಡ್ಡುವುದಾಗಲೀ,ರೋಗ ಉಂಟುಮಾಡುವುದಾಗಲೀ ಕಂಡುಬಂದಿಲ್ಲವಾದ್ದರಿಂದ, ಇವುಗಳ ಸಾರ್ವಜನಿಕ ಬಳಕೆಗೆ ಅನುಮತಿ ದೊರೆತಿದೆ. ಈಗ ಲೈಟ್ ಬಯೋ ಸಂಸ್ಥೆಯು ರಾತ್ರಿ ಬೆಳಕು ಸೂಸುವ ಕುಲಾಂತರಿ ಪೆಟೂನಿಯಾ ಸಸ್ಯಗಳನ್ನು ಬೃಹತ್‌ ಮಟ್ಟದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ. ಸಸ್ಯಗಳನ್ನು ಕೊಂಡು ತಮ್ಮ ತೋಟಗಳಲ್ಲಿ ಬೆಳೆಯ ಬಯಸುವರಿಗಾಗಿ ಬುಕಿಂಗ್ ಪ್ರಾರಂಭಿಸಿದೆ. ಸುಮಾರು 10,000ಕ್ಕೂ ಹೆಚ್ಚು ಮಂದಿ ಈಗಾಗಲೇ ಬುಕಿಂಗ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಂಸ್ಥೆ ಹೊರಹಾಕಿದೆ. ಒಂದೆರಡು ವರ್ಷಗಳಲ್ಲಿ ಇನ್ನಿತರ ದೇಶಗಳಲ್ಲಿಯೂ ಈ ಕುಲಾಂತರಿ ಸಸ್ಯಗಳನ್ನು ಬೆಳೆಯುವ ಪದ್ಧತಿ ಪ್ರಾರಂಭವಾಗಬಹುದು. ಆಗ, ಅಂಗಳದ ತೋಟಗಳಲ್ಲಿ ರಾತ್ರಿಯ ಹೊತ್ತು ತಮ್ಮದೇ ಬೆಳಕಿನಿಂದ ಕಂಗೊಳಿಸುವ ಸಸ್ಯಗಳನ್ನು ನೋಡಿ ನಲಿಯುವುದು ಎಲ್ಲರಿಗೂ ಸಾಧ್ಯವಾಗಬಹುದು !

No comments:

Post a Comment