Wednesday, December 4, 2024

ಪೆಪ್ಟಿಕ್ ಅಲ್ಸರ್‌ಗೆ ಹೆಲಿಕೊಬ್ಯಾಕ್ಟರ್ ಕಾರಣ!

 ಪೆಪ್ಟಿಕ್ ಅಲ್ಸರ್‌ಗೆ ಹೆಲಿಕೊಬ್ಯಾಕ್ಟರ್ ಕಾರಣ!


ಲೇಖಕರು : ಡಾ|| ಎಂ.ಜೆ. ಸುಂದರ್‌ರಾಮ್

ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು





ಮನುಷ್ಯನಲ್ಲಿ ಅತ್ಯಾಮ್ಲತೆ, ಮಾನಸಿಕ ಒತ್ತಡ, ಮಸಾಲೆಯುಕ್ತ ಆಹಾರ ಸೇವನೆಯಿಂದ ಪೆಪ್ಟಿಕ್‌ಅಲ್ಸರ್ ಉಂಟಾಗುತ್ತದೆ ಎಂದೂ, ಸಿಗರೇಟು, ಕುಡಿತ ಮುಂತಾದ ದುಶ್ಚಟಗಳಿಂದ ಅದು ಉಲ್ಬಣಗೊಳ್ಳುತ್ತದೆಂದೂ, ಇದೊಂದು ನಿಡುಗಾಲದ ವ್ಯಾಧಿ, ಅದಕ್ಕೆ ಶಾಶ್ವತ ಪರಿಹಾರವಿಲ್ಲವೆಂದೂ 20ನೆಯ ಶತಮಾನದ ಕೊನೆವರೆಗೂ ವೈದ್ಯರು ನಂಬಿದ್ದರು. ಅಲ್ಸರ್ ರೋಗಿಗಳು ಈ ರೋಗದೊಡನೆ ಹೊಂದಾಣಿಕೆ  ಮಾಡಿಕೊಂಡು ಬಾಳಬೇಕೆಂದೂ, ಆಮ್ಲತೆಯ ಉತ್ಪತ್ತಿ ಕುಗ್ಗಿಸಿಕೊಂಡು, ಅಲ್ಸರನ್ನು ನಿಭಾಯಿಸಬಹುದೆಂದೂ ರೋಗಿಗಳಿಗೆ ವೈದ್ಯರು ಉಪದೇಶಿಸುತ್ತಿದ್ದರು. 

ಅಲ್ಸರ್ ರೋಗಿಗಳನ್ನು ಪರೀಕ್ಷಿಸಿ ಔಷಧಕೊಡುತ್ತಿದ್ದ ಆಸ್ಟ್ರೇಲಿಯದ ‘ಸಾಧಾರಣ’ ವೈದ್ಯರಾದ ರಾಬಿನ್ ವಾರೆನ್ (Robin Warren) ಗೆ ಜಠರದ ಒಳಪದರವನ್ನು ಲೇಪಿಸಿದ್ದ ಲೋಳೆ ಪದರದಲ್ಲಿ (mucus ) ಸುರುಳಿಯಾಕಾರದ ಹೆಲಿಕೊಬ್ಯಾಕ್ಟರ್ ಪೈಲೋರಿ (Helicobacter pylori) ಎಂಬ ಬ್ಯಾಕ್ಟೀರಿಯ ಗೋಚರಿಸಿದವು. ಅಲ್ಸರ್ ಸಾಮಾನ್ಯವಾಗಿ ಜಠರದ ಈ ಭಾಗದಲ್ಲೇ ಕಾಣಿಸಿಕೊಳ್ಳುತ್ತಿದ್ದುದರಿಂದ ಅಲ್ಸರ್‌ಗೆ ಇವೇ ಕಾರಣವಿರಬಹುದೆಂದು ಅವರು ತರ್ಕಿಸಿದರು. ತಮ್ಮ ವಾದವನ್ನು ಮೊದಲು ಬಹಿರಂಗ ಪಡಿಸಿದಾಗ ಅವರ  ಸಹೋದ್ಯೋಗಿಗಳು ವಾರೆನ್‌ರನ್ನು ಹಾಸ್ಯಮಾಡಿ, ಲೇವಡಿ ಮಾಡಿ, ಕಟುವಾಗಿಟೀಕಿಸಿದರು. 


ಹೈಡ್ರೊಕ್ಲೋರಿಕ್ ಆಮ್ಲ HCl, ಜಠರಾಗ್ನಿಯಲ್ಲಿ ಬ್ಯಾಕ್ಟೀರಿಯ ಬದುಕುಳಿಯಲಾರದೆ ಭಸ್ಮವಾಗಿ ಬಿಡುವುವೆಂದು ವೈದ್ಯರು ನಂಬಿದ್ದರು.  

ವಾರೆನ್‌ಗೆ ಬ್ಯಾರಿ ಮಾರ್ಷಲ್ ( Barry Marshal ) ಎಂಬ ಎಳೆಯವಯಸ್ಸಿನ ಮತ್ತೊಬ್ಬ ವೈದ್ಯ ಸಕ್ರಿಯವಾಗಿ ಜೊತೆಗೂಡಿದರು. ಇವರಿಬ್ಬರೂ ಯಾರಿಗೂ ಜಗ್ಗದೆ, ಬಗ್ಗದೆ, ಕುಗ್ಗದೆ ಅತ್ಯಂತ ಸಹನೆಯಿಂದ ಸಂಶೋಧನೆಯನ್ನು ಮುಂದುವರಿಸಿದರು. ವಾರೆನ್ ಮತ್ತು ಮಾರ್ಷಲ್ ೧೯೮೨ರಲ್ಲಿ ತಮ್ಮ ಸಂಶೋಧನೆಯನ್ನು ೧೦೦ ರೋಗಿಗಳಿಗೆ ಸೀಮಿತಗೊಳಿಸಿಕೊಂಡರು. ಅಂತರ್ದರ್ಶಕ (endosope) ಎಂಬ, ಅಂಗಗಳ ಒಳಭಾಗಗಳನ್ನು ವೀಕ್ಷಿಸುವ, ದೀಪವಿರುವ ಕೊಳವೆಯ ಸಣ್ಣ ಉಪಕರಣವನ್ನು ಬಳಸಿದರು. ಅವರು ಸೀಮಿತಗೊಳಿಸಿಕೊಂಡಿದ್ದ ೧೦೦ ರೋಗಿಗಳಲ್ಲಿ ೮೦ ರೋಗಿಗಳು ಅಲ್ಸರ್‌ನಿಂದ ನರಳುತ್ತಿದ್ದರು. ಇವರೆಲ್ಲರಲ್ಲೂ ಹೆಲಿಕೊ ಬ್ಯಾಕ್ಟರ್‌ ಇದ್ದು, ಅಲ್ಸರ್‌ಗೂ ಈ ರೋಗಾಣುವಿಗೂ ಇರುವ ಸಂಬಂಧವನ್ನು ಬಲಪಡಿಸಿತು. 

ಮಾರ್ಷಲ್ ತಮ್ಮೆಲ್ಲ ಕೌಶಲ, ಅನುಭವ ಮತ್ತು ಸಾಮರ್ಥ್ಯವನ್ನು ಬಳಸಿ, ಅನೇಕ ರೀತಿಗಳಲ್ಲಿ ಹೆಲಿಕೊಬ್ಯಾಕ್ಟರನ್ನು ಕೃಷಿ  ಮಾಡಲೆತ್ನಿಸಿದರು. ಆದರೂ ಅವರ ಎಲ್ಲ ಪ್ರಯತ್ನಗಳೂ ವಿಫಲವಾದವು. ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ೪೮ ಗಂಟೆಗಳಲ್ಲಿ ಬ್ಯಾಕ್ಟೀರಿಯಗಳು ವೃದ್ಧಿಯಾಗುತ್ತಿದ್ದವು. 48 ಗಂಟೆಗಳಲ್ಲಿ ಅವು ಕೃಷಿಯಾಗದಿದ್ದರೆ ಅವನ್ನು ಕಸವೆಂದು ಪರಿಗಣಿಸಿ ಹೊರಗೆಸೆಯುತ್ತಿದ್ದರು.

1982 ರ ಏಪ್ರಿಲ್ ೯ರಂದು ಶುಭ ಶುಕ್ರವಾರ(Good Friday ) ದಿಂದ ೧೨ರಂದು ಈಸ್ಟರ್ (easter) ಹಬ್ಬದ ವರೆಗೆ ಕಚೇರಿಗಳಿಗೆ ರಜೆಯಿತ್ತು . ಎಲ್ಲರೂ ವಸ್ತುಗಳನ್ನು ಅಲ್ಲಲ್ಲಿ, ಹಾಗೇ ಬಿಟ್ಟು ವಿಹಾರ ಕೇಂದ್ರಗಳಿಗೆ ಧಾವಿಸಿದರು. ಏಪ್ರಿಲ್ ೧೩ರಂದು, ರಜೆ ಮುಗಿಸಿದ ಮಾರ್ಷಲ್ ಪ್ರಯೋಗಾಲಯಕ್ಕೆ ಬಂದರು. ರಜೆಗೆ ಮುನ್ನ ಹೆಲಿಕೊಬ್ಯಾಕ್ಟರ್‌ನ ಗಾಜಿನ ತಟ್ಟೆಗಳು ಮೂಲೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇಸರದಿಂದ ಅವನ್ನು ದಿಟ್ಟಿಸಿ ನೋಡಿದಾಗ ಅವುಗಳಲ್ಲಿ ಹೆಲಿಕೊಬ್ಯಾಕ್ಟರ್ ಸೊಂಪಾಗಿ ವೃದ್ಧಿಯಾಗಿತ್ತು! ಹೆಲಿಕೊಬ್ಯಾಕ್ಟರ್‌ನ ವೃದ್ಧಿಗೆ ಹೆಚ್ಚು ಸಮಯಬೇಕೆಂದು ಮಾರ್ಷಲ್‌ಗೆ ಆಗ ಮನವರಿಕೆಯಾಯಿತು. 

ಜಠರರಸವು  ದಟ್ಟವಾದ ಮಾಂಸದ ತುಂಡನ್ನು ಕೆಲವೇ ನಿಮಿಷಗಳಲ್ಲಿ ಜೀರ್ಣಿಸುವಷ್ಟು ಶಕ್ತಿಶಾಲಿಯಾಗಿರುವಾಗ ಹೆಲಿಕೊಬ್ಯಾಕ್ಟರ್ ತನ್ನನ್ನು ಹೇಗೆ ರಕ್ಷಿಸಿಕೊಳ್ಳುತ್ತದೆಂದು ವೈದ್ಯರು ಮಾರ್ಷಲ್‌ಗೆ ಸವಾಲು ಹಾಕಿದರು. ಜಠರ, ಜಠರ ರಸದ ಪ್ರಭಾವದಿಂದ ತನ್ನನ್ನು ರಕ್ಷಿಸಿಕೊಳ್ಳಲು ದಟ್ಟವಾದ ಲೋಳೆಪದರವನ್ನು ಸ್ರವಿಸುತ್ತದೆ. ಇದು, ಜಠರದ ಒಳಸ್ತರಿಯನ್ನು ಸವರಿ, ಅಡ್ಡವಾಗಿ ಹರಡುತ್ತದೆ. ಹೆಲಿಕೊಬ್ಯಾಕ್ಟರ್ ಈ ಲೋಳೆಪದರವನ್ನು ಕೊರೆದು, ಒಳಗೆ ಹುದುಗಿ ತನ್ನನ್ನು ಜಠರ ರಸದಿಂದ ರಕ್ಷಿಸಿಕೊಳ್ಳುತ್ತದೆ. ಜೊತೆಗೆ, ನಮ್ಮ ಜೊಲ್ಲಿನಲ್ಲಿ ಯೂರಿಯ ಎಂಬ ರಾಸಾಯನಿಕವಸ್ತು ಹೇರಳವಾಗಿದೆ. ಜೊಲ್ಲು, ಜಠರವನ್ನು ಪ್ರವೇಶಿಸಿದಾಗ ಹೆಲಿಕೊಬ್ಯಾಕ್ಟರ್ ಯೂರಿಯೇಸ್ ಎಂಬ ಕಿಣ್ವವನ್ನು ಸ್ರವಿಸುತ್ತದೆ. ಇದು, ಯೂರಿಯವನ್ನು ಅಮೋನಿಯ ಮತ್ತು ಕಾರ್ಬನ್‌ ಡೈಯಾಕ್ಸೆಡ್ ಆಗಿ ಒಡೆಯುತ್ತದೆ. ಪ್ರತ್ಯಾಮ್ಲಗಳಾದ ಇವೆರಡೂ ಹೆಲಿಕೊಬ್ಯಾಕ್ಟರನ್ನು ಸುತ್ತುವರಿದು, ಹೈಡ್ರೊಕ್ಲೋರಿಕ್ ಆಮ್ಲವನ್ನು ತಟಸ್ಥಗೊಳಿಸುತ್ತವೆ. ನಂತರ ಹೆಲಿಕೊಬ್ಯಾಕ್ಟರ್ ಲೋಳೆಪದರವನ್ನು ಹೊಕ್ಕು ಅಲ್ಲಿ ವಾಸಿಸುತ್ತದೆಂದು ಮಾರ್ಷಲ್ ಮತ್ತು ವಾರೆನ್‌ ಸಂಶೋಧನೆಗಳ ಮೂಲಕ ಕಂಡುಹಿಡಿದರು. 

೧೯೮೫ರಲ್ಲಿ ಮಾರ್ಷಲ್ ತಮ್ಮ  ಜಠರದ ಒಳದರ್ಶನ ಮಾಡಿಸಿಕೊಂಡು ಅದರ ಆರೋಗ್ಯವನ್ನು ಖಚಿತಪಡಿಸಿಕೊಂಡರು. ತಮ್ಮ ಸಹೋದ್ಯೋಗಿಗಳನ್ನು ಪ್ರಯೋಗಾಲಯಕ್ಕೆ ಕರೆಸಿಕೊಂಡರು. ಬೀಕರನ್ನು ಕೈಯಲ್ಲಿ ಎತ್ತಿಹಿಡಿದು, ಸಹೋದ್ಯೋಗಿಗಳನ್ನು ಉದ್ದೇಶಿಸಿ, ‘ಮಿತ್ರರೆ, ಈ ಬೀಕರಿನಲ್ಲಿ ನೀರಿದೆ. ಇದಕ್ಕೆ ಈಗ ಹೆಲಿಕೊಬ್ಯಾಕ್ಟರ್ ರೋಗಾಣುಗಳನ್ನು ಬೆರೆಸುತ್ತಿದ್ದೇನೆ’ ಎನ್ನುತ್ತ, ಸುಮಾರು ೩೦ ಮಿಲಿಲೀಟರ್‌ನಷ್ಟು ಹೆಲಿಕೊಬ್ಯಾಕ್ಟರನ್ನು ಬೀಕರ್ ನೀರಿಗೆ ಬೆರೆಸಿ ಕದಡಿ, ‘ಈಗ ಏನು ಮಾಡುವೆನೆಂದು ನೋಡಿ’ ಎನ್ನುತ್ತ, ಆ ನೀರನ್ನು ಗಟಗಟನೆ ಕುಡಿದೇಬಿಟ್ಟರು! ಸಹೋದ್ಯೋಗಿಗಳೆಲ್ಲ ದಿಗ್ಭ್ರಾಂತರಾಗಿ, ಬೆವತುಹೋದರು.‌








ಮೂರು ದಿನಗಳು ಉರುಳಿದವು. ಅಲ್ಸರ್‌ನ ರೋಗಲಕ್ಷಣಗಳು ಒಂದೊಂದಾಗಿ  ಕಾಣಿಸಿಕೊಳ್ಳಲಾರಂಭಿಸಿದವು. ಹೊಟ್ಟೆನೋವು, ವಾಕರಿಕೆ, ಉರಿತ, ವಾಂತಿ ಪ್ರಾರಂಭವಾದವು. ಹೊಟ್ಟೆಯಲ್ಲಿ ತಳಮಳ, ಉಬ್ಬರ, ಉಸಿರಲ್ಲ್ಲಿ ದುರ್ವಾಸನೆಯಿತ್ತು. ಹೆಲಿಕೊಬ್ಯಾಕ್ಟರ್ ತಂಡತಂಡವಾಗಿ ಜಠರದ ಒಳಪದರವನ್ನು ಕೊರೆದು ಕೀಳುತ್ತಿರುವ ಭಯಂಕರ ದೃಶ್ಯವನ್ನು ಸಹೋದ್ಯೋಗಿಗಳು ಮಾನೀಟರ್‌ನಲ್ಲಿ ವೀಕ್ಷಿಸಿ ನಡುಗಿಹೋದರು. ತಮ್ಮ ಜೀವವನ್ನೂ ಲೆಕ್ಕಿಸದೆ ಮಾರ್ಷಲ್ ನಡೆಸಿದ ಈ ಘೋರ ಪ್ರಯೋಗದಿಂದ ವೈದ್ಯ ಸಮುದಾಯ ಮೈಕೊಡವಿಕೊಂಡು ಎಚ್ಚೆತ್ತಿತು. ಶತಮಾನಗಳಿಂದ ಬೇರೂರಿದ್ದ ವೈದ್ಯರ ಮೂಢನಂಬಿಕೆ ಸಡಿಲಿಸಿ, ಕಳಚಿಬಿತ್ತು. ವೈದ್ಯರು ಮಾರ್ಷಲ್ ಮತ್ತು ವಾರೆನ್‌ರ ವಾದವನ್ನು ಒಪ್ಪಿದರು. 

ಇಪ್ಪತ್ತ ಮೂರು ವರ್ಷಗಳ ಕಾಲ ಏಕಾಂಗಿಯಾಗಿ ಹೋರಾಡಿ, ಇಡೀ ವೈದ್ಯಸಮುದಾಯದ ಹಗೆತನವನ್ನೆದುರಿಸಿ, ತಮ್ಮ ಸಿದ್ಧಾಂತವನ್ನು ಛಲಬಿಡದೆ ನಿರೂಪಿಸಿ, ವೈದ್ಯ ಸಮುದಾಯದ ಮೂಢ ನಂಬಿಕೆಯನ್ನು ಇವರಿಬ್ಬರೂ ಬುಡಸಹಿತ ಕಿತ್ತೊಗೆದರು. ಇವರ ಈ ದೃಢ ಸಾಧನೆಯನ್ನು ಗುರುತಿಸಿ, ಮೆಚ್ಚಿದ ನೊಬೆಲ್ ಸಮಿತಿ ೨೦೦೫ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.



ನೀರಲ್ಲೇ ಓಡುತ್ತೆ ಈ ರೈಲು .!

 ನೀಲ್ಲೇ ಓಡುತ್ತೆ ಈ ರೈಲು !

       ಲೇಖನ: ರಾಮಚಂದ್ರ ಭಟ್‌ ಬಿ.ಜಿ.








     ಇದೇನು ರೈಲು ನೀರಲ್ಲಿ ಅಂದರೆ ನೀರಿನಿಂದ ಓಡುತ್ತಾ ? ವಿದ್ಯುತ್‌ ಅಥವಾ ಕಾಂತ ಶಕ್ತಿ ಅಥವಾ ಕನಿಷ್ಟ ಪಕ್ಷ ಕಲ್ಲಿದ್ದಲೋ, ಡೀಸೆಲೋ ಬೇಡವೇ? ಹಳಿ ಇಲ್ಲದ ರೈಲು ಬಿಡುತ್ತಿದ್ದೇನೆ ಎಂದುಕೊಂಡಿರಾ? ಖಂಡಿತಾ ಇಲ್ಲ ಇದು ಸದ್ಯದಲ್ಲೇ ಭಾರತದ ನೆಲದಲ್ಲಿ ನೀರಿನಿಂದಲೇ ಓಡುವ ಹೈಡ್ರೋಜನ್‌ ರೈಲು!!! ಇದು ಪರಿಸರ ಸ್ನೇಹಿಯಾದ ಹಸಿರು ರೈಲು.

ಜಗತ್ತಲ್ಲಿ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನವೂ ಅಗ್ರ ಪಂಕ್ತಿಯಲ್ಲಿದೆ. ತಂತ್ರಜ್ಞಾನ ಅಭಿವೃದ್ಧಿಹೊಂದಿದಂತೆ ನಾವೂ ಸಾಂಪ್ರದಾಯಿಕ ಇಂಧನಗಳಾದ ಕಲ್ಲಿದ್ದಲು, ಡೀಸೆಲ್‌ಗಳಿಂದ ಅದೆಷ್ಟೋ ಮುಂದಕ್ಕೆ ಸಾಗಿದ್ದೇವೆ. ಭಾರತವೀಗ ಬುಲೆಟ್ ರೈಲಿನ ಕನಸನ್ನು  ನನಸಾಗಿಸಿ ಹೊರಟಿದೆ. ಇದರ ಜೊತೆಗೆ ನಮ್ಮಲ್ಲಿ ಡೀಸೆಲ್, ವಿದ್ಯುತ್‌ಗಳನ್ನು ಬಳಸದ ರೈಲನ್ನು ಪರಿಚಯಿಸುವ ಪ್ರಯತ್ನಗಳು ಆರಂಭಗೊಂಡಿವೆ.


ಎಲ್ಲವೂ ಯೋಜನೆಯಂತೆ ಅನುಷ್ಠಾನಗೊಂಡರೆ, 2025ವೇಳೆಗೆ ಈ ವಿಶೇಷ ರೈಲು ಹಳಿಗಳ ಮೇಲೆ ಓಡಾಡಲಿದೆ.  ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊತ್ತೊಯ್ಯಲಿದೆ.  ರೈಲಿನ ಓಡಾ ಪರಿಸರಕ್ಕೆ ಯಾವ ರೀತಿಯ ಸಮಸ್ಯೆಯನ್ನೂ ತಾರದು. ಏಕೆಂದರೆ ಇಲ್ಲಿ ಮಾಲಿನ್ಯಕಾರಕವೆನಿಸುವ ಯಾವುದೇ ಕಾರ್ಬನ್ ತ್ಯಾಜ್ಯ ಬಿಡುಗಡೆಯಾಗುವುದಿಲ್ಲ. ಇದೇನು ಕನಸೇ? ನನಸೇ? ಇಂತಹ ಅದ್ಭುತವನ್ನು ಸಾಧಿಸುವುದರ ಮೂಲಕ ಭಾರತ 2030 ವೇಳೆಗೆ ತಾನು ಅಂದುಕೊಂಡಂತೆ ಜೀರೋ ಕಾರ್ಬನ್‌ ಎಮಿಷನ್ ನ್ನು ಮುಟ್ಟುವ ಪ್ರಯತ್ನದತ್ತ ದಾಪುಗಾಲಿಡಲಿದೆ. ಹಾಗಾದ್ರೆ ಯಾವುದು ಈ ಹೊಸ ರೈಲ್ವೆ ಯೋಜನೆ? ಇದರಿಂದ ಆಗುವ ಅನುಕೂಲಗಳೇನು?ತಂತ್ರಜ್ಞಾನವನ್ನು ಜಗತ್ತಿನ ಬೇರೆ ಯಾವುದಾದರೂ ದೇಶ ಅಳವಡಿಸಿಕೊಂಡಿದೆಯೇ?  ಯಾವ ಶಕ್ತಿಯ ಆಕರ , ತಂತ್ರಜ್ಞಾನದಿಂದ ಈ ರೈಲುಗಳು ಚಲಿಸುತ್ತವೆ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ವಂದೇ ಭಾರತ ರೈಲು, ಬುಲೆಟ್‌ ರೈಲುಗಳ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಹೈಡ್ರೋಜನ್ ರೈಲುಗಳ ಬಗ್ಗೆ ಕೂಡ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಭಾರತವು ಇನ್ನು ಕೆಲವೇ ದಿನಗಳಲ್ಲಿ ಹರಿಯಾಣದ ಜಿಂದ್ ಹಾಗೂ ಸೋನೆಪತ್ ನಡುವಿನ 90 ಕಿಲೋಮೀಟರ್ ಗಳ ರೈಲು ಹಳಿಯ ಮೇಲೆ ಈ ಪರಿಸರ ಸ್ನೇಹಿ ಹೈಡ್ರೋಜನ್ ರೈಲಿನ ಪರೀಕ್ಷೆಯನ್ನು ನಡೆಸಲಿದೆ. ಇದೇ ಮಾರ್ಗವನ್ನು ಆಯ್ಕೆ  ಮಾಡಲು ಪ್ರಮುಖ ಕಾರಣವೆಂದರೆ, ಆ ಮಾರ್ಗದಲ್ಲಿ ಕಡಿಮೆ ಸಂಖ್ಯೆಯ ರೈಲುಗಳು ಪ್ರಯಾಣಿಸುತ್ತವೆ. ಹಾಗಾಗಿ ಸಂಚಾರ ವ್ಯತ್ಯಯವಿಲ್ಲದೇ ಸೂಕ್ತವಾಗಿ ಪ್ರಾಯೋಗಿಕ ಪ್ರಯತ್ನವನ್ನು ನಡೆಸಬಹುದು. 
ಸೆಪ್ಟೆಂಬರ್ 2022 ರಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಪರಿಚಯಿಸಿದ ಮೊದಲ ದೇಶ ಜರ್ಮನಿ. ಫ್ರೆಂಚ್ ಕಂಪನಿ ಅಲ್‌ಸ್ಟೋಮ್ ಅಭಿವೃದ್ಧಿಪಡಿಸಿದ ಜರ್ಮನ್ ರೈಲು ಒಮ್ಮೆ ತುಂಬಿದ ಇಂಧನದಿಂದ 1175 ಕಿಮೀ ದೂರದ ಚಲಿಸಿ ದಾಖಲೆ ನಿರ್ಮಿಸಿದೆ. ಎರಡನೆಯದಾಗಿ ಚೀನೀ ರೈಲು ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ ಮತ್ತು 600 ಕಿಮೀವರೆಗೂ ಮತ್ತೆ ಇಂಧನ ತುಂಬದೆ ಓಡಬಲ್ಲುದು.   ಮೂಲಕ ಎರಡು ದೇಶಗಳು ತಮ್ಮ ರೈಲ್ವೆಯಲ್ಲಿ ಕಾರ್ಬನ್ ಫ್ರೀ ವಾತಾವರಣವನ್ನು ನಿರ್ಮಾಣ ಮಾಡಿವೆ. ಹೈಡ್ರೋಜನ್ ರೈಲುಗಳು ಜರ್ಮನಿ ಮತ್ತು ಚೈನಾಗಳ ನಂತರ ಈಗ ಭಾರತದಲ್ಲೂ ಓಡಲಿವೆ. ಹೈಡ್ರೋಜನ್‌ನಿಂದ ಚಲಿಸುವ ಈ ಸಾರಿಗೆಯಿಂದ ಯಾವುದೇ ಹಸಿರುಮನೆ ಅನಿಲಗಳು ಹೊರಹೊಮ್ಮುವುದಿಲ್ಲ. ಇಲ್ಲಿ ಹೈಡ್ರೋಜನ್ ಇಂಧನ ಕೋಶಗನ್ನು ಬಳಸಲಾಗುತ್ತದೆ.  ಹೈಡ್ರೋಜನ್ ಅನಿಲವನ್ನು ನೀರಿನ ವಿದ್ಯುತ್‌ವಿಭಜನೆಯ ಮೂಲಕ ಪಡೆಯುತ್ತಾರೆ. 


ಹೈಡ್ರೋಜನ್ ಪರಮಾಣು ಅಯಾನೀಕರಣಗೊಂಡು ಪ್ರೋಟಾನ್, ಎಲೆಕ್ಟ್ರಾನ್‌ಳಾಗಿ ಬೇರೆ ಬೇರೆಯಾಗಿ ಇಂಧನಕೋಶ ಕಾರ್ಯ ನಿರ್ವಹಿಸುತ್ತದೆ. ಹೈಡ್ರೋಜನ್‌, ಆಕ್ಸಿಜನ್‌ನೊಂದಿಗೆ ಸೇರಿ ನೀರನ್ನೇ ತ್ಯಾಜ್ಯವಾಗಿ ಹೊರ ಹಾಕುತ್ತವೆ!! ನೀರನ್ನೇ ಉಂಡು ನೀರನ್ನೇ ಹೊರಹಾಕುವ ಈ ತಂತ್ರಜ್ಞಾನ ವಿಶೇಷವಷ್ಟೇ ಅಲ್ಲ ಅದ್ಭುತವೂ ಹೌದು. ಬೈಜಿಕ ಸಮ್ಮಿಲನದಿಂದ ನಕ್ಷತ್ರಗಳ ಶಕ್ತಿಯ ಆಕರವಾಗಿದ್ದ ಹೈಡ್ರೋಜನ್‌ ಇದುವರೆಗೂ ಬಾಹ್ಯಾಕಾಶ ಯಾನದಲ್ಲಿ ಶಕ್ತಿಯ ಆಕರವಾಗಿ ಬಳಕೆಯಲ್ಲಿತ್ತು. ಇಂಥಹ ಹೈಡ್ರೋಜನ್‌ ಜನ ಸಾಮಾನ್ಯರ ಬಳಕೆಗೆ ಬರುವ ದಿನ ಹತ್ತಿರ ಬಂದೇ ಬಿಟ್ಟಿದೆ.   
 ಹೈಡ್ರೋಜನ್ ರೈಲು ಓಡಾಡಲು ಯಾವುದೇ ರೀತಿಯ ವಿದ್ಯುದೀಕರಣ ವ್ಯವಸ್ಥೆಯೂ ಬೇಕಿಲ್ಲ. ಇದು ಪೆಟ್ರೋಲ್ ಇಂಜಿನ್‌ಗಳಂತೆಯೇ ಆದರೆ ಭಿನ್ನ ರೀತಿಯ ಹೈಡ್ರೋಜನ್ ಅಂತರ್ದಹನ ಇಂಜಿನ್‌ ತಂತ್ರಜ್ಞಾನವನ್ನು ಹೊಂದಿರುವಂತಹ ಇಂಜಿನ್. ಈಗಾಗಲೇ ಕಾರುಗಳಲ್ಲಿ ಈ ರೀತಿಯ ಇಂಜಿನ್ ಬಳಕೆಯ ಪ್ರಯೋಗ ನಡೆಯುತ್ತಿದೆ. ಕೇಂದ್ರ ಸಾರಿಗೆ ಸಚಿವರಾದ ಶ್ರೀಮಾನ್‌  ನಿತಿನ್‌ ಗಡ್ಕರಿಯವರು ಈಗಾಗಗಲೇ ಈ ಕುರಿತು ಆಸ್ಥೆ ವಹಿಸಿ ಈ ತಂತ್ರಜ್ಞಾನ, ಜೊತೆಗೆ ಎಥನಾಲನ್ನು ಬಳಸುವ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ದೆಹಲಿಯಂತಹ ಮಹಾನಗರಗಳ ವಾಯು ಮಾಲಿನ್ಯ ಅದರಿಂದ ಉಂಟಾದ ಸಮಸ್ಯೆಗಳನ್ನು ಹೈಡ್ರೋಜನ್ ಇಂಧನ ಬಳಸುವ ಇಂಜಿನ್ ನಿವಾರಿಸುತ್ತದೆ. ಹೈಡ್ರೋಜನ್‌ನ ಕ್ಯಾಲೋರಿ ಮೌಲ್ಯ ಇತರೆಲ್ಲಾ ಇಂಧನಗಳಿಗಿಂತ ಹೆಚ್ಚು.

ಇಂಧನ

ಕ್ಯಾಲೋರಿಫಿಕ್ ಮೌಲ್ಯಗಳು (ಅಂದಾಜು.)

ಜೈವಿಕ ಅನಿಲ

35000 - 40000

CNG 

50000

ಕಲ್ಲಿದ್ದಲು

25000 - 33000

ಹಸುವಿನ ಸಗಣಿ

6000 - 8000

ಡೀಸೆಲ್

45000

ಹೈಡ್ರೋಜನ್

150000

ಸೀಮೆಎಣ್ಣೆ

45000

ಎಲ್.ಪಿ.ಜಿ

55000

ಮೀಥೇನ್

50000

ಪೆಟ್ರೋಲ್

45000

ಮರ

17000 - 22000


ಅಷ್ಟೇ ಅಲ್ಲ. ಈ ಇಂಜಿನ್ಗಳು ಶಬ್ದ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ನಿಮಗೆ ಇಲೆಕ್ಟ್ರಿಕ್‌ ವಾಹನ ಓಡಿಸಿದ ಅನುಭವವೂ ಇರಬಹುದು. ಎಲೆಕ್ಟ್ರಿಕ್ ವಾಹನ ಶಬ್ದರಹಿತವಾಗಿ ಓಡುತ್ತದೆ. ಹಾಗೆಯೇ ಈ ರೈಲು ಇಂಜಿನ್‌ನಲ್ಲಿಯೂ ಯಾವುದೇ ರೀತಿಯ ಸದ್ದು ಕೂಡ ಇರೋದಿಲ್ಲ. ಈ ರೈಲುಗಳು ಓಡಾಡುವಾಗ ರೈಲ್ವೆ ಹಳಿಗಳ ಪಕ್ಕದಲ್ಲೇ ನಿಮ್ಮ ಮನೆ ಇದ್ದರೂ ರೈಲು ನಮ್ಮ ಮನೆ ದಾಟಿ ಹೋಗುವುದೇ ನಿಮ್ಮ ಗಮನಕ್ಕೆ ಬಾರದಂತೆ ಚಲಿಸುತ್ತದೆ. ಈಗಿನ ರೈಲುಗಳಂತೆ ನೀವು ರೈಲಿನ ಶಬ್ದಕ್ಕಂಬೇಕಿಲ್ಲ. ನೀರೇ ಇಂಧನವಾಗಿರುವುದರಿಂದ ರೈಲುಗಳು ಮಿತವ್ಯಯಿಯೂ ಹೌದು. ಸದ್ಯದ ಮಾಹಿತಿಯ ಪ್ರಕಾರ ಹೈಡ್ರೋಜನ್ ರೈಲು ತಯಾರು ಮಾಡಲು ಸುಮಾರು 80 ಕೋಟಿ ರೂಪಾಯಿಗಳಾಗುತ್ತದೆ ಎಂದು ಅಂದಾಜಿಸಲಾಗಿದೆ.  ಜಲವಿಭನೆಯ ಮೂಲಕ ಇಂಧನ ವಾಗಿ ಬಳಸಲು ಬೇಕಾದ ವ್ಯವಸ್ಥೆಗೆ ಸುಮಾರು 70 ಕೋಟಿಯಷ್ಟು ಅಂದರೆ ಒಟ್ಟು ಒಂದು ಹೈಡ್ರೋಜನ್ ರೈಲಿನ  ಸಂಪೂರ್ಣವಾಗಿ ನಿರ್ಮಾಣಕ್ಕೆ 150 ಕೋಟಿ ರೂಪಾಯಿಗಳಷ್ಟು ಹಣ ಖರ್ಚಾಗುತ್ತದೆ ಎಂದು ಅಂದಾಜಿಸಿದೆ.  ಹೀಗೆ ಒಮ್ಮೆ 150 ಕೋಟಿ ರೂಪಾಯಿಗಳನ್ನ ಖರ್ಚು ಮಾಡಿಬಿಟ್ರೆ ಅದಾದ ಬಳಿಕ ಕೇವಲ  ನಿರ್ವಹಣಾ ಖರ್ಚು ಮಾತ್ರ ಇರುತ್ತದೆ. ಅದಕ್ಕೆ ಇಂಧನದ ಖರ್ಚು ಇರೋದಿಲ್ಲ. ಈ ರೀತಿಯ ಹೈಡ್ರೋಜನ್ ರೈಲುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸುತ್ತಾ ಹೋದಂತೆ ಇಂಧನ ತಯಾರಿ ಘಟಕಗಳ ನಿರ್ಮಾಣದ ವೆಚ್ಚ  ಕಡಿಮೆಯಾಗುತ್ತಾ ಹೋಗುತ್ತದೆ.  ಇದು ಭವಿಷ್ಯದಲ್ಲಿ ರೈಲು ಪ್ರಯಾಣ ಅತ್ಯಂತ ಅಗ್ಗವಾಗುವುದರೊಂದಿಗೆ ವಿಶ್ವದಾದ್ಯಂತ ಭಾರತದ ತಂತ್ರಜ್ಞಾನ ವಿನಿಮಯ, ವ್ಯಾಪಾರ, ರಫ್ತು, ಉದ್ಯೋಗಾವಕಾಶಗಳು ವಿಫುಲವಾಗಿ ಹೆಚ್ಚುವುದರಲ್ಲಿ ಸಂಶಯವಿಲ್ಲ. ರೈಲ್ವೆ ಇಲಾಖೆಯ ಆರ್ಥಿಕ ಪರಿಸ್ಥಿತಿಯೂ ಸಾಕಷ್ಟು ಸುಧಾರಿಸಲಿದೆ. ರೈಲ್ವೆ ಇಲಾಖೆ ಲಾಭದೊಂದಿಗೆ ಅತ್ಯಾಧುನಿಕ ಸೇವೆಗಳನ್ನು ಒದಗಿಸಬಲ್ಲದು. ಇದೇ ಅಲ್ಲವೇ ಸಂಶೋಧನೆಯ ಫಲ, ವಿಜ್ಞಾನ- ತಂತ್ರಜ್ಞಾನದ ಮಹತ್ತು?

ಹೈಡ್ರೋಜನ್ ರೈಲುಗಳ ಬಳಕೆಯು ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನೇ ಪ್ರಭಾವಿಸುವುದರ ಜೊತೆಗೆ ಇಂಧನ ಕ್ಷೇತ್ರವನ್ನು ಹಸಿರು ಕ್ರಾಂತಿಯ ದಿಕ್ಕಿನತ್ತ ಮುನ್ನಡೆಸಲಿದೆ.
 

ಇನ್ ಸ್ಪೈರ್ ಅವಾರ್ಡ್ಸ ಮಾನಕ್ ಪ್ರಶಸ್ತಿಗಳ ಬೆನ್ನೇರಿ ನಮ್ಮ ರಾಜ್ಯ ರಾಜಧಾನಿಯಿಂದ ರಾಷ್ಟ್ರ ರಾಜಧಾನಿಯತ್ತ ನಮ್ಮ ರಾಜ್ಯ ವಿದ್ಯಾರ್ಥಿಗಳ ಪಯಣ


 

ಇನ್ಸ್ಪೈರ್ ಅವಾರ್ಡ್ಸ ಮಾನಕ್  ಪ್ರಶಸ್ತಿಗಳ  ಬೆನ್ನೇರಿ  ನಮ್ಮ ರಾಜ್ಯ ರಾಜಧಾನಿಯಿಂದ ರಾಷ್ಟ್ರ ರಾಜಧಾನಿಯತ್ತ ನಮ್ಮ ರಾಜ್ಯ ವಿದ್ಯಾರ್ಥಿಗಳ ಪಯಣ

ಲೇಖನ ವರದಿ:

ಶ್ರೀ ಲಕ್ಷ್ಮೀ ಪ್ರಸಾದ್ ನಾಯಕ್,
ಸಹ ಶಿಕ್ಷಕರು ವಿಜ್ಞಾನ, ಸರ್ಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ-ಕನ್ನಡ), ಕೆಂಗೇರಿ, ಬೆಂಗಳೂರು ದಕ್ಷಿಣ ಜಿಲ್ಲೆ.

 

ದಿನಾಂಕ.17/09/2024  ರಿಂದ 19/9/2024

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ      ನೆರವಿನಿಂದ ನಡೆಯುವ ಪ್ರಮುಖ ವೈಜ್ಞಾನಿಕ ಕಾರ್ಯಕ್ರಮ ಇನ್ ಸ್ಪೈರ್ ಅವಾರ್ಡ್ಸ್ ಮಾನಕ್ ವಸ್ತು ಪ್ರದರ್ಶನ   (ಸ್ಪೂರ್ತಿ ಸಂಶೋಧನೆಗಾಗಿ ವಿಜ್ಞಾನ ಅನ್ವೇಷಣೆಯಲ್ಲಿಅವಿಷ್ಕಾರ) ಭಾರತಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮುಖಾಂತರ 2009-10 ರಿಂದ ಇನ್ ಸ್ಪೈರ್ ಅವಾರ್ಡ್ಸ ಮಾನಕ್  ಯೋಜನೆಯನ್ನು ಜಾರಿಗೆ ತಂದಿದೆವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸಾಮಾಜಿಕ ಅವಶ್ಯಕತೆಗಳನ್ನು ಬಗೆಹರಿಸಲು ಶಾಲಾಮಕ್ಕಳಲ್ಲಿ ಸೃಜನಶೀಲ ಸಂಸ್ಕೃತಿ ಮತ್ತು ನಾವೀನ್ಯತೆಯ ಚಿಂತನೆಯನ್ನು ಬೆಳೆಸುವ ಮಹತ್ವವಾದ ರಾಷ್ಟ್ರೀಯ ಗುರಿಯನ್ನು ಹೊಂದಿದೆ.

ಹೌದು ಸ್ನೇಹಿತರೇ, 2020-21ನೇ ಸಾಲಿನ 9 ನೇ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ವಸ್ತು ಪ್ರದರ್ಶನ  (NLEPC-9) ಮತ್ತು ಮಾದರಿ ಸ್ಪರ್ಧೆಯಲ್ಲಿ ನಮ್ಮ ರಾಜ್ಯದ ತಂಡದ ಉಸ್ತುವಾರಿ ಶಿಕ್ಷಕನಾಗಿ ಭಾಗವಹಿಸಿದ್ದ ನನಗೆ ಈ ಬಾರಿ ನಮ್ಮ ಬೆಂಗಳೂರು ನಗರ ಜಿಲ್ಲೆಯ ಡಯಟ್ ನೋಡಲ್ ಅಧಿಕಾರಿಯಾದ  ಹೊಳ್ಳ ಸರ್ ರವರು ನನಗೆ ಕರೆ ಮಾಡಿ ನಾಯಕ್ ರೇ ನಿಮಗೆ ಇನ್ನೊಮ್ಮೆ  ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ವಸ್ತು ಪ್ರದರ್ಶನ ದಲ್ಲಿ ಭಾಗವಹಿಸುವ ಸದವಕಾಶ ಇದೆ. ನೀವು ಬೆಂಗಳೂರು , ಕೋಲಾರ ಮತ್ತು ಹಾಸನ ಜಿಲ್ಲೆಯ ಒಟ್ಟು 4 ವಿದ್ಯಾರ್ಥಿಗಳನ್ನು ನವದೆಹಲಿಯಲ್ಲಿ ದಿನಾಂಕ.17/9/2024 ರಿಂದ 19/9/2024ರವರಗೆ ನಡೆಯುವ 2023-24ನೇ ಸಾಲಿನ 11 ನೇ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ವಸ್ತು ಪ್ರದರ್ಶನ  (NLEPC-11) ದಲ್ಲಿ ಭಾಗವಹಿಸಲು ಕರೆದುಕೊಂಡು ಹೋಗಿ ಬನ್ನಿ ಎಂದು ತಿಳಿಸಿದರು. ಈಗಾಗಲೇ ರಾಜ್ಯ ಪಠ್ಯಪುಸ್ತಕ ಸಮಿತಿಯ ರಚನಾಕಾರ್ಯ ಪರಿಷ್ಕರಣೆ ಕಾರ್ಯ, ಟಾಲ್ಪ್ ತರಬೇತಿ, ಶಿಕ್ಷಕರ ವಿಷಯಾಧಾರಿತ ತರಬೇತಿ, ಸಂವೇದ ತರಗತಿಗಳು ಹೀಗೆ ಹಲವಾರು ರೀತಿಯಲ್ಲಿ ಇಲಾಖೆಯ ಕೆಲಸಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತೊಡಗಿಸಿಕೊಂಡ ನನಗೆ ಇದು ಉತ್ತಮ ಅವಕಾಶವಾಗಿತ್ತು,  ಹಿಂದು ಮುಂದು ನೋಡದೆ ತಕ್ಷಣ ಆಯ್ತು ಸರ್ ಎಂದು ಹೇಳಿಬಿಟ್ಟೆ . ಅದರಂತೆ ನಾನು ಎಲ್ಲ ಮಕ್ಕಳ ಪೋಷಕರ ಮತ್ತು ಮಾರ್ಗದರ್ಶಿ ಶಿಕ್ಷಕರನ್ನು ಸಂಪರ್ಕಿಸಿ ವಾಟ್ಸ್ ಅಪ್ ಗುಂಪು ಮಾಡಿ, ಅವರಿಗೆ ನನಗೆ ಇಲಾಖಾ ಅಧಿಕಾರಿಗಳು ನೀಡುವ  ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ .

ದೆಹಲಿಯ ಪ್ರಯಾಣದ ದಿನ ಬಂದೇ ಬಿಟ್ಟಿತು ದಿನಾಂಕ 14/09/2024 ರಂದು 11 ನೇ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ಸ ಮಾನಕ್ ವಸ್ತು ಪ್ರದರ್ಶನ  (NLEPC-9)ದಲ್ಲಿ ಪಾಲ್ಗೊಳ್ಳಲು ನಮ್ಮ ರಾಜ್ಯದ ತಂಡದ ಎಲ್ಲಾ ಉಸ್ತುವಾರಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನೇತೃತ್ವವನ್ನು  ವಹಿಸಿಕೊಂಡಿದ್ದ ಡಿ.ಎಸ್.ಇ.ಆರ್.ಟಿಯ ಹಿರಿಯ ಸಹಾಯಕ ನಿರ್ದೇಶಕರಾದ  ಶ್ರೀಮತಿ ವಾಣಿ ಮೇಡಂ ನೇತತ್ವದಲ್ಲಿ ನಮ್ಮ ರಾಜ್ಯದ ವಿವಿಧ  ಜಿಲ್ಲೆಗಳ  11ನೇ NLEPCಗೆ ಆಯ್ಕೆಯಾದ 35 ವಿದ್ಯಾರ್ಥಿಗಳು ಹಾಗೂ 10 ಉಸ್ತುವಾರಿ ಶಿಕ್ಷಕರನ್ನು ಒಳಗೊಂಡ ಒಟ್ಟು 45  ಜನರ ತಂಡ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಮ್ಮ ಲಗೇಜು ಮಾದರಿಗಳೊಂದಿಗೆ ಆಗಮಿಸಿ ಬೆಳಿಗ್ಗೆ ತಲುಪಿ ಪ್ರಯಾಣಕ್ಕೆ ಸಿದ್ದವಾಗಿತ್ತು.  ಕೆಲವು ವಿದ್ಯಾರ್ಥಿಗಳ ಜೊತೆಯಲ್ಲಿ ಪೋಷಕರ ಮತ್ತು ಮಾರ್ಗದರ್ಶಿ ಶಿಕ್ಷಕರು ಬೀಳ್ಕೊಡಲು ಆಗಮಿಸಿದ್ದರು. ಎಲ್ಲ ವಿದ್ಯಾರ್ಥಿಗಳ ಮುಖದಲ್ಲಿ ಸಾಧಿಸುವ ಛಲ, ಆತ್ಮವಿಶ್ವಾಸ ಮತ್ತು ಖುಷಿ ಕಂಡು ಬಂತು.  ಈ ಕಾರ‍್ಯಕ್ರಮದ ತಯಾರಿ  ಅಷ್ಟು ಸುಲಭವಾಗಿರಲಿಲ್ಲ ಕಳೆದ ಹಲವು ದಿನಗಳಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿ.ಎಸ್.ಇ.ಆರ್.ಟಿ) ಮಾನ್ಯ ನಿರ್ದೇಶಕರಾದ ಶ್ರೀಮತಿ ಸುಮಂಗಲ ಮೇಡಂರವರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯದ ತಂಡದ ಉಸ್ತುವಾರಿ ವಹಿಸಿದ್ದ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ವಾಣಿ ಮೇಡಂವರು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿರುವ ವಿಷಯ ನಮಗೆಲ್ಲ ತಿಳಿದಿತ್ತು. ಅವರು ನಮ್ಮೆಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಇದ್ದು ನಮಗೆ ಕಾಲಕಾಲಕ್ಕೆ ಸೂಕ್ತ ಆದೇಶ ಸೂಚನೆ ನೀಡುತ್ತಿದ್ದರು .‌

  

ಬೆಳಿಗ್ಗೆ 11.30ಕ್ಕೆ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲು 12649 ಬೆಂಗಳೂರಿನ ಯಶವಂತಪುರ ಜಂಕ್ಷನ್ ಗೆ ಬಂತು. ಕಳೆದ ಬಾರಿ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣಿಸಿದ ನಮಗೆ ಈ ಬಾರಿ 3 ಟಯರ್ ಎ.ಸಿ ಕೋಚ್ ನಲ್ಲಿ ಪ್ರಯಾಣಿಸುವ ಭಾಗ್ಯ, ಎಲ್ಲಾ ತಂಡಗಳ  ಉಸ್ತುವಾರಿ ಶಿಕ್ಷಕರು 3 ಟಯರ್ ಎ.ಸಿ ಕೋಚ್  ಟಿಕೆಟ್ ಗಳನ್ನು ಮೊದಲೇ ಮುಂಗಡ ಟಿಕೇಟ್ ಬುಕ್ಕ್ಕಿಂಗ್ ಮಾಡಿಸಿದ್ದರು.  . ಎಲ್ಲಾ ವಿದ್ಯಾರ್ಥಿಗಳನ್ನು ಅವರ  ಲಗೇಜು ಮತ್ತು ಮಾದರಿಗಳ ಜೊತೆಯಲ್ಲಿ ನಾನು ಮತ್ತು ರಾಜ್ಯ ತಂಡದ ಉಸ್ತುವಾರಿ ಶಿಕ್ಷಕರಾದ ಶ್ರೀ ಜಗದೀಶ ರವರ ನೇತ್ರತ್ವದಲ್ಲಿ ರೈಲಿಗೆ  ಸುರಕ್ಷಿತವಾಗಿ ಹತ್ತಿಸಿದೆವು. ಎಲ್ಲಾಉಸ್ತುವಾರಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅವರ ವಸ್ತು ಪ್ರದರ್ಶನದ  ಮಾದರಿಗಳು ಬಂದಿರುವುದನ್ನು ಹಾಜರಾತಿಯನ್ನು ಕರೆಯುವುದರ ಮೂಲಕ ಖಾತ್ರಿ ಪಡಿಸಿಕೊಂಡು ಶ್ರೀಮತಿ ವಾಣಿ ಮೇಡಂರವರು ಪ್ರಯಾಣದ ಸಂದರ್ಭದಲ್ಲಿ ಉಸ್ತುವಾರಿ ಶಿಕ್ಷಕರ ಜವಾಬ್ದಾರಿ ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಚನೆಯನ್ನು ನೀಡಿದರು. ಬಂದಂತಹ ಎಲ್ಲಾ ಶಿಕ್ಷಕರು ,ವಿದ್ಯಾರ್ಥಿಗಳು ಪರಸ್ಪರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು . 

ನಮ್ಮ ರೈಲು ಮಧ್ಯಾಹ್ನ 1.50 ರ ಸುಮಾರಿಗೆ  ದೆಹಲಿಯತ್ತ ಹೊರಟಿತು. ರೈಲಿನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ತಿಂಡಿ ಊಟ . ನೀರು ಮತ್ತು ಹಣ್ಣನ್ನು ಸಮಯ ಸಮಯಕ್ಕೆ ರೈಲಿನ ಸಿಬ್ಬಂದಿ ನೀಡುತ್ತಿದ್ದರು . ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರು ಹಾಡುಗಳು , ಮಿಮಿಕ್ರಿ , ನೃತ್ಯ, ಅಂತ್ಯಾಕ್ಷರಿ ಸಣ್ಣಸಣ್ಣ ಆಟಗಳನ್ನು ಆಡುತ್ತಾ ಖುಷಿಯಾಗಿ ರೈಲು  ಪ್ರಯಾಣದ ಆನಂದ ಅನಭವಿಸುತ್ತಿದ್ದರು  .ಅಲ್ಲದೇ ಹಿರಿಯ ಉಪನ್ಯಾಸಕರಾದ ವಾಣಿ ಮೇಡಂರವರ ಹಾಗೂ ಉಸ್ತುವಾರಿ ಶಿಕ್ಷಕರ ನೇತೃತ್ವದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ  ತಮ್ಮ ತಮ್ಮ ಮಾದರಿಗಳ ಕುರಿತು ಮಾಹಿತಿಯನ್ನು ನೀಡಲು ತಿಳಿಸಿ ಸ್ಪರ್ಧೆಯಲ್ಲಿ ತೀರ್ಪುಗಾರರೊಂದಿಗೆ ಯಾವ ರೀತಿಯಾಗಿ ಸಂವಹನ ಮಾಡಬೇಕೆಂದು ಹಾಗೂ ಪ್ರಶ್ನೆಗಳಿಗೆ ಯಾವ ರೀತಿಯಾಗಿ ಉತ್ತರಿಸಬೇಕು ಎಂದು ತಿಳಿಸಿ ಆತ್ಮವಿಶ್ವಾಸ ತುಂಬಿ ಸಜ್ಜುಗೊಳಿಸಲಾಯಿತು.   

 

 ದಿನಾಂಕ 14 ಮತ್ತು 15 ನೇ ಸೆಪ್ಟೆಂಬರ್ ಪ್ರಯಾಣದ ನಂತರ 16ನೇ ತಾರೀಕು ಬೆಳಗ್ಗೆ 8ಗಂಟೆಗೆ ತಲುಪಬೇಕಾದ ರೈಲು 4 ಗಂಟೆತಡವಾಗಿ ಅಪರಾಹ್ನ  1 ಗಂಟೆಗೆ ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪಿತು. ಅಲ್ಲಿಂದ  ಲಗೇಜ್  ಮತ್ತು ಮಾದರಿಗಳನ್ನು ನಮಗಾಗಿಯೇ  ವ್ಯವಸ್ಥಿತಗೊಳಿಸಲಾಗಿದ್ದ ಹವಾನಿಯಂತ್ರಿತ  ಬಸ್ಸಿನಲ್ಲಿರಿಸಿ ನವದೆಹಲಿಯ ಗಾಂಧಿಸ್ಮೃತಿ ಭವನ್ ಗೆ 2.00 ಗಂಟೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಪ್ರಗತಿ ಮೈದಾನಕ್ಕೆ ಹೋಗಿ ಅಲ್ಲಿ ಮೊದಲ ಮಹಡಿಯಲ್ಲಿನ ಬೃಹತ್ ವಸ್ತು ಪ್ರದರ್ಶನ  ಸಭಾಂಗಣದಲ್ಲಿ ನೋಂದಣಿ ಮಾಡಿಸಿದ ನಂತರ ವಿದ್ಯಾರ್ಥಿಗಳು ತಮ್ಮ ತಂಡದ ಉಸ್ತುವಾರಿ ಶಿಕ್ಷಕರೊಂದಿಗೆ ಸೇರಿ ಮಾದರಿಗಳನ್ನು ತಮಗೆ ನೀಡಲಾದ ಸ್ಥಳದಲ್ಲಿ ಮರುದಿನದ ಸ್ಪರ್ಧೆಗೆ  ಸಜ್ಜುಗೊಳಿಸಿದರು. ಅಲ್ಲಿಂದ ಮರಳಿ ಗಾಂಧಿಸ್ಮೃತಿ ಭವನ್ ಗೆ ಬಂದು ವಿಶ್ರಾಂತಿ ಪಡೆಯಲಾಯಿತು. 

 


 
ಬೆಳಿಗಗ್ಗ   ವಾಸ್ತವ್ಯ ಹೂಡಿದ್ದ ಗಾಂಧಿಸ್ಮೃತಿ ಭವನ್

ಮರುದಿನ ಬೆಳಿಗ್ಗೆ ಬೇಗ ಎದ್ದು 6ಗಂಟೆಗೆ ವಿದ್ಯಾರ್ಥಿಗಳೊಂದಿಗೆ ಬೆಳಗಿನ ವಾಕಿಂಗ್ ಮಾಡಿ ಸಮೀಪದಲ್ಲಿರುವ ಮಹಾತ್ನಗಾಂಧೀಜಿಯವರ ರಾಜ್ ಘಾಟ್ ಸಮಾಧಿ, ಇಂದಿರಾ ಗಾಂದಿಯವರ ಶಕ್ತಿ ಸ್ಥಳ ಸಮಾಧಿ, ರಾಜೀವ್ ಗಾಂದಿಯವರ ವೀರ ಭೂಮಿ ಸಮಾಧಿ ವೀಕ್ಷಿಸಿದೆವು.

 


 

 ಪ್ರಯಾಣಕ್ಕೆ ಸಿದ್ದವಾದ ಬಸ್, ಪ್ರಗತಿಮೈದಾನದತ್ತ ಉತ್ಸಾಹ ದಿಂದ ಮುನ್ನುಗುತ್ತಿರುವ ನಮ್ಮ ರಾಜ್ಯದ ತಂಡ

 

ಬೆಳಿಗ್ಗೆ ಉಸ್ತುವಾರಿ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಬೇಗ ಸಿದ್ಧರಾಗಿ ನೀಡಲಾದ ಟೀಶರ್ಟ್ ಮತ್ತು ಗುರುತಿನ ಕಾರ್ಡ ಧರಿಸಿ ಪ್ರಗತಿ ಮೈದಾನ ತಲುಪಿದಾಗ ಸಮಯ ಬೆಳಿಗ್ಗೆ 8.30 ಆಗಿತ್ತು.ಪ್ರಗತಿ ಮೈದಾನದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅವರ ಹೆಸರಿನ ಬ್ಯಾನರ್ ಹಾಕಿ ಮಾದರಿ ಇಡಲು ವಸ್ತುಪ್ರದರ್ಶನ ಮಳಿಗೆಗಳನ್ನು ಬಹಳ ಸುಂದರವಾಗಿ ವ್ಯವಸ್ಥೆ ಮಾಡಿದ್ದರು. ಪ್ರವೇಶದ್ವಾರದಲ್ಲಿ ಎಲ್ಲ ಮಕ್ಕಳ ಫೋಟೋಗಳನ್ನು ಒಳಗೊಂಡ ಸಾಧನ ತಾರೆಗಳ ಬೆಳಕಿನ ಮರವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದರು.

 

 


ವಸ್ತುಪ್ರದರ್ಶನಕ್ಕೆ ತಯಾರಾಗಿರುವ ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ

 


ನಮ್ಮ ಎಲ್ಲ ವಿದ್ಯಾರ್ಥಿಗಳು ಆಯಾ ಜಿಲ್ಲೆಗಳ ಉಸ್ತುವಾರಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಮಗೆ ನೀಡಲಾದ  ಮಳಿಗೆಯಲ್ಲಿ ತಮ್ಮ ಮಾದರಿಗಳನ್ನು ಸಿದ್ಧಪಡಿಸಿ ತಯಾರಾಗಿದ್ದರು .    

 ವಿಜ್ಞಾನವು ಇಡೀ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಭಾಷೆಯ ಧರ್ಮದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಲ್ಲಿ ಸೇರಿಸಿತ್ತು. ಅಲ್ಲಿ ಸಂವಹನಕ್ಕೆ ಭಾಷೆ ಅಡಚಣೆಯಾಗಲಿಲ್ಲ , ಎಲ್ಲರಿಗೂ ಮೈ ರೋಮಾಂಚನ  ವಿಶೇಷವಾದ ಅನುಭವ. ಕಾರ್ಯಕ್ರಮದ ಉದ್ಘಾಟನೆ ನಂತರ ತೀರ್ಪುಗಾರರು ಪ್ರತಿಯೊಬ್ಬ ವಿದ್ಯಾರ್ಥಿಯ  ಮಳಿಗೆಗಳ  ಹತ್ತಿರ ಬಂದು ಅವರ ಮಾದರಿಗಳ ಬಗ್ಗೆ ಕೇಳಿ ತಿಳಿದು ಮಾದರಿಯ ಕಾರ್ಯವನ್ನು ವೀಕ್ಷಿಸಿ ನಂತರ ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನವನ್ನು ಮಾಡುತ್ತಿದ್ದರು. ತೀರ್ಪುಗಾರರಾರ  ತಂಡ ದಲ್ಲಿ ಎನ್ .ಐ.ಎಫ್. ನ ಮೂವರು ಉಪನ್ಯಾಸಕರು ಇರುತ್ತಿದ್ದರು ಏಕಕಾಲದಲ್ಲಿ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳ ಮಾದರಿಗಳ ತೀರ್ಪು ನಡೆಯುತ್ತಿತ್ತು.

 

ತೀರ್ಪುಗಾರರು ಮೌಲ್ಯಮಾಪನವನ್ನು ಮಾಡುತ್ತಿರುವುದು

ವಸ್ತುಪ್ರದರ್ಶನದಲ್ಲಿ ವಿವಿಧ ರಾಜ್ಯಗಳ ಶಾಲೆಗಳ , ಕೇಂದ್ರೀಯ ವಿದ್ಯಾಲಯ, ಎ.ಐನ  ಮತ್ತು ಕಳೆದ ಬಾರಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ  ಮಾದರಿಗಳು ಸೇರಿ 360 ಮಾದರಿಗಳ ಪ್ರದರ್ಶನ ಗೊಂಡಿದ್ದವು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಅಭಯ್ ಕರಂಧೀಕರ್ ರವರು ಮಕ್ಕಳ ಮಳಿಗೆಗಳಿಗೆ ಭೇಟಿ ನೀಡಿ  ಅವರ ಮಾದರಿಗಳ ಬಗ್ಗೆ ಮಾಹಿತಿಯನ್ನು ಕೇಳುತ್ತಿದ್ದರು. ಮಕ್ಕಳು ಉತ್ಸಾಹದಿಂದ ತಮ್ಮ ತಮ್ಮ ಮಳಿಗೆಗಳಿಗೆ ಅವರನ್ನು ಕರೆಸಿಕೊಂಡು ಸೆಲ್ಫಿ ಫೋಟೊಗಳನ್ನು ತೆಗೆದುಕೊಂಡು ತಮ್ಮ ಪ್ರಾಜೆಕ್ಟ್ ಬಗ್ಗೆ ವಿವರವನ್ನು ತಿಳಿಸಿದರು . 

ದೆಹಲಿಗೆ ಬಂದ ಮೂರನೇ ದಿನ ಅಂದರೆ 18/9/2024 ರಂದು ಬೆಳಿಗ್ಗೆ ಉಪಹಾರ ಚೋಲೆ ಬಟೂರೆಯನ್ನು ಸವಿದು  ಪ್ರಗತಿ ಮೈದಾನಕ್ಕೆ ಪ್ರಯಾಣ ಬೆಳೆಸಿದೆವು. ಈ ದಿನ ಸಾರ್ವಜನಿಕರಿಗೆ ವೀಕ್ಷಣಾ ಅವಕಾಶವಿತ್ತು, ಎಲ್ಲಾ ವಿದ್ಯಾರ್ಥಿಗಳು  ತಮ್ಮ ಸ್ಟಾಲ್ ಗಳ ಹತ್ತಿರ ಬಂದ ಜನರಿಗೆ ಮಾಹಿತಿ ನೀಡಿ ಅವರ  ಅಭಿಪ್ರಾಯಗಳನ್ನು ಪುಸ್ತಕದಲ್ಲಿ ಬರೆಸುತ್ತಿದ್ದರು. ಸರಳ , ಹೆಚ್ಚು ವೆಚ್ಚವಿಲ್ಲದ ಹಾಗೂ ಸಮಾಜಕ್ಕೆ ಉಪಯುಕ್ತವಾದ ಮಾದರಿಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಒಂದಕ್ಕೊಂದು ಭಿನ್ನ ಹಾಗೂ ನಾವಿನ್ಯಯುತ ಮಾದರಿಗಳು ನಮ್ಮೆಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ಅಲ್ಲಿ ಹಬ್ಬದ ವಾತಾವರಣವಿತ್ತು. 

ಸಂಜೆ 5ಗಂಟೆಗೆ ಎಲ್ಲಾ ಮಾದರಿಗಳನ್ನು ಪ್ಯಾಕ್ ಮಾಡಿ  ಗಾಂಧಿಸ್ಮೃತಿ ಭವನ್ ಗೆ ಹೊರಟೆವು.  ಉತ್ತಮವಾದ 38 ಮಾದರಿಗಳು ಯಾವುವು ಎಂದು ಆಯ್ಕೆ ಸಮಿತಿ ತಿಳಿಸಿರಲಿಲ್ಲ . ಎಲ್ಲರಿಗೂ ತಿಳಿದುಕೊಳ್ಳುವ ಕುತೂಹಲ.  ಆ ದಿನ ಎಲ್ಲಾ ಮಕ್ಕಳಿಗೆ ಭಾಗವಹಿಸುವಿಕೆಯ ಪ್ರಶಂಸನಾ  ಪ್ರಶಸ್ತಿ ಪತ್ರಗಳನ್ನು ರಾಜ್ಯ ಉಸ್ತುವಾರಿ ಅಧಿಕಾರಿಗಳಿಗೆ ನೀಡಿದರು. ಗಾಂಧಿಸ್ಮೃತಿ ಭವನ್ ಗೆ ಬಂದು ಊಟ ಮಾಡಿ ಹರಟೆ ಹೊಡೆದು ಮಲಗಿದೆವು.

19/9/2024 ರಂದು ವಿಗ್ಯಾನ್ ಭವನದಲ್ಲಿ ಬೆಳಿಗ್ಗೆ11.30 ರಿಂದ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ವಿಗ್ಯಾನ್ ಭವನಕ್ಕೆ ಆಹ್ವಾನ ಪತ್ರಿಕೆ ಮತ್ತು ಗುರುತಿನ ಕಾರ್ಡ್ ಬಿಟ್ಟು ಏನನ್ನೂ ತೆಗೆದುಕೊಂಡು ಹೋಗುವಂತಿರಲಿಲ್ಲ. ಎಲ್ಲ ತಪಾಸಣೆಗಳ ನಂತರ ಸುಸಜ್ಜಿತವಾದ ಭವ್ಯವಾದ ಭವನದ  ಸಭಾಂಗಣವನ್ನು ಪ್ರವೇಶಿಸಿದೆವು. ನಾವು ನಮ್ಮ ರಾಜ್ಯದವರಿಗೆ ಮೀಸಲಾಗಿರಿಸದ  ಆಸನಗಳಲ್ಲಿ ಆಸೀನರಾದೆವು . ಕಾರ್ಯಕ್ರಮವು 11.30 ಗಂಟೆಯ ನಂತರ  ಪ್ರಾರಂಭವಾಯಿತು.  


 ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ರಾಜ್ಯ ಸಚಿವರಾದ ಶ್ರೀಯುತ ಡಾ ಜಿತೇಂದ್ರ ಸಿಂಗ್ , ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಶ್ರೀ ಅಭಯ್ ಕರಂಧೀಕರ್  ಎನ್.ಐ.ಎಫ್.ನ ಮುಖ್ಯಸ್ಥರಾದ ಡಾ.ಗೋಯಲ್  ರವರು ವೇದಿಕೆಯ ಮೇಲೆ  ಉಪಸ್ಥಿತರಿದ್ದರು ನಿರೂಪಕಿ ಪ್ರಶಸ್ತಿಗೆ ಆಯ್ಕೆಯಾದ 38 ವಿದ್ಯಾರ್ಥಿಗಳು ಮತ್ತು ಅವರ ಮಾದರಿಗಳನ್ನು ಹೆಸರಿಸಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮುಂದಿನ ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು,  ನಮ್ಮ ರಾಜ್ಯದ 2 ವಿದ್ಯಾರ್ಥಿಗಳ ಹೆಸರನ್ನು ಹೇಳಿದಾಗ ನಮ್ಮೆಲ್ಲರ ಸಂತೋಷಕ್ಕೆ ಪಾರವಿರಲಿಲ್ಲ ಮತ್ತು ಹೆಮ್ಮೆ ಅನಿಸಿತು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಮಾನ್ಯ ಸಚಿವರಿಂದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ಸ್ವೀಕರಿಸಿದರು ಕೊನೆಯಲ್ಲಿ ಚಿನ್ನ ಬೆಳ್ಳಿ ಮತ್ತು ಕಂಚು ಪದಕ ವಿಜೇತ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.


ಪ್ರಶಸ್ತಿ ವಿಜೇತ
2 ವಿದ್ಯಾರ್ಥಿಗಳು ಹಾಗೂ ಸ್ವಚ್ ಭಾರತ್ ಪರಿಕ್ಪನೆಯ ಚಿತ್ರಕಲೆ ಸ್ಪರ್ಧೆಯ ವಿಜೇತರ ವಿವರ,  ಸ್ವಚ್ ಭಾರತ್ ಪರಿಕ್ಪನೆಯ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತನಾದ ನಮ್ಮ ರಾಜ್ಯದ ಹಾವೇರಿ ಜಿಲ್ಲೆಯ ಪ್ರವೀಣ್ ನಾಯಕ್

ಉಡುಪಿ ಜಿಲ್ಲೆ ಕುಕ್ಕಂಜೆ ಸರ್ಕಾರಿ ಪ್ರೌಢ ಶಾಲೆಯ ಅಮೂಲ್ಯ ಹೆಗ್ಡೆ ಕಂಚಿನ ಪದಕ ತೃತೀಯ ಬಹುಮಾನ ಮತ್ತು ಬೆಳಗಾಂ ಜಿಲ್ಲೆಯ ಕುಮಾರಿ ಈಶ್ವರಿ ಮೊರೆ ಸ್ವಚ್ ಭಾರತ್ ಪರಿಕ್ಪನೆಯ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತನಾದ ನಮ್ಮ ರಾಜ್ಯದ ಹಾವೇರಿ ಜಿಲ್ಲೆಯ ಪ್ರವೀಣ್ ನಾಯಕ್ .

ಎಲ್ಲರೂ ಫೋಟೋಗಳನ್ನು ತೆಗೆಸಿಕೊಂಡು ನಂತರ ಊಟಕ್ಕೆ ಹೊರಟೆವು ಕೂಟದಲ್ಲಿ ವಿವಿಧ ರುಚಿಯಾದ ಭಕ್ಷ್ಯಗಳ ಇದ್ದವು ಊಟ ಮುಗಿಸಿ  ದೆಹಲಿಯ ಐತಿಹಾಸಿಕ ಸ್ಥಳಗಳನ್ನು (ಕುತುಬ್ ಮಿನಾರ್ , ಕೆಂಪು ಕೋಟೆ, ಲೋಟಸ್ ಮಹಲ್, ಸಂಸತ್) ವೀಕ್ಷಿಸಿ ಗಾಂಧಿಸ್ಮೃತಿ ಭವನ್ ಗೆ ಬಂದು ಮರುದಿನ ಪ್ರಯಾಣಕ್ಕೆ ಲಗೇಜುಗಳನ್ನು ಸಜ್ಜುಗೊಳಿಸಿ ರಾತ್ರಿ ವಿಶ್ರಾಂತಿ ತೆಗೆದುಕೊಂಡೆವು.

20/9/2024 ರಂದು ಬೇಗ ಎದ್ದು ಲಗೇಜು ಮತ್ತು ಪ್ರಾಜೆಕ್ಟ್ ಗಳ ಜತೆಗೆ  7 ಗಂಟೆಗೆ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ತಲುಪಿದೆವು. ಎಲ್ಲಾ ವಿದ್ಯಾರ್ಥಿಗಳು  ಶಿಕ್ಷಕರ ಉಸ್ತುವಾರಿಯಲ್ಲಿ ತಮ್ಮತಮ್ಮ ಲಗೇಜುಗಳನ್ನು ರೈಲಿನಲ್ಲಿ ಇರಿಸಿ ಆಸೀನರಾದೆವು. ಬೆಳಿಗ್ಗೆ 8.30 ಕ್ಕೆ ರೈಲು ಬೆಂಗಳೂರಿಗೆ ಹೊರಟಿತು.  18/9/2022ರ ಸಂಜೆ ರೈಲು ಕರ್ನಾಟಕ ಪ್ರವೇಶಿಸಿತು ಆಯಾ ಜಿಲ್ಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಜಿಲ್ಲೆಯ ಸಮೀಪದ ರೈಲ್ವೆ ಸ್ಟೇಷನ್ ನಲ್ಲಿ ಭಾರವಾದ ಮನಸ್ಸಿನಿಂದ ಇಳಿಯುತ್ತಿದ್ದರು. ಒಟ್ಟಾರೆ ಹೇಳುವುದಾದರೆ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಜೀವನದಲ್ಲಿ ಮರೆಯಲಾಗದ ಅದ್ಭುತವಾದ ಅನುಭವ ಆಗಿತ್ತು. 22/9/2024ರ ಬೆಳಿಗಿನ ಜಾವ 6.30 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದೆವು.  ಈ ಅವಕಾಶವನ್ನು ಕಲ್ಪಿಸಿದ ನಮ್ಮ ರಾಜ್ಯ ಸರ್ಕಾರ ,ನಮ್ಮ ಶಿಕ್ಷಣ ಇಲಾಖೆ ಡಿ.ಎಸ್.ಇ.ಆರ್.ಟಿ  ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಯ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.

ನಮ್ಮ ರಾಜ್ಯದ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ  ಮಧು ಬಂಗಾರಪ್ಪ ಸರ್ ರವರು ವಿದ್ಯಾರ್ಥಿಗಳ ಆಸಕ್ತಿ, ಪ್ರತಿಭೆಯನ್ನು ಗುರುತಿಸಿರುವ ಶಿಕ್ಷಕರು, ಮಾರ್ಗದರ್ಶಕರು, ಪೋಷಕರು, ಡಿ.ಎಸ್..ಆರ್.ಟಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್)ಸೇರಿ ಈ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.