ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, December 4, 2024

ಪೆಪ್ಟಿಕ್ ಅಲ್ಸರ್‌ಗೆ ಹೆಲಿಕೊಬ್ಯಾಕ್ಟರ್ ಕಾರಣ!

 ಪೆಪ್ಟಿಕ್ ಅಲ್ಸರ್‌ಗೆ ಹೆಲಿಕೊಬ್ಯಾಕ್ಟರ್ ಕಾರಣ!


ಲೇಖಕರು : ಡಾ|| ಎಂ.ಜೆ. ಸುಂದರ್‌ರಾಮ್

ನಿವೃತ್ತ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕರು





ಮನುಷ್ಯನಲ್ಲಿ ಅತ್ಯಾಮ್ಲತೆ, ಮಾನಸಿಕ ಒತ್ತಡ, ಮಸಾಲೆಯುಕ್ತ ಆಹಾರ ಸೇವನೆಯಿಂದ ಪೆಪ್ಟಿಕ್‌ಅಲ್ಸರ್ ಉಂಟಾಗುತ್ತದೆ ಎಂದೂ, ಸಿಗರೇಟು, ಕುಡಿತ ಮುಂತಾದ ದುಶ್ಚಟಗಳಿಂದ ಅದು ಉಲ್ಬಣಗೊಳ್ಳುತ್ತದೆಂದೂ, ಇದೊಂದು ನಿಡುಗಾಲದ ವ್ಯಾಧಿ, ಅದಕ್ಕೆ ಶಾಶ್ವತ ಪರಿಹಾರವಿಲ್ಲವೆಂದೂ 20ನೆಯ ಶತಮಾನದ ಕೊನೆವರೆಗೂ ವೈದ್ಯರು ನಂಬಿದ್ದರು. ಅಲ್ಸರ್ ರೋಗಿಗಳು ಈ ರೋಗದೊಡನೆ ಹೊಂದಾಣಿಕೆ  ಮಾಡಿಕೊಂಡು ಬಾಳಬೇಕೆಂದೂ, ಆಮ್ಲತೆಯ ಉತ್ಪತ್ತಿ ಕುಗ್ಗಿಸಿಕೊಂಡು, ಅಲ್ಸರನ್ನು ನಿಭಾಯಿಸಬಹುದೆಂದೂ ರೋಗಿಗಳಿಗೆ ವೈದ್ಯರು ಉಪದೇಶಿಸುತ್ತಿದ್ದರು. 

ಅಲ್ಸರ್ ರೋಗಿಗಳನ್ನು ಪರೀಕ್ಷಿಸಿ ಔಷಧಕೊಡುತ್ತಿದ್ದ ಆಸ್ಟ್ರೇಲಿಯದ ‘ಸಾಧಾರಣ’ ವೈದ್ಯರಾದ ರಾಬಿನ್ ವಾರೆನ್ (Robin Warren) ಗೆ ಜಠರದ ಒಳಪದರವನ್ನು ಲೇಪಿಸಿದ್ದ ಲೋಳೆ ಪದರದಲ್ಲಿ (mucus ) ಸುರುಳಿಯಾಕಾರದ ಹೆಲಿಕೊಬ್ಯಾಕ್ಟರ್ ಪೈಲೋರಿ (Helicobacter pylori) ಎಂಬ ಬ್ಯಾಕ್ಟೀರಿಯ ಗೋಚರಿಸಿದವು. ಅಲ್ಸರ್ ಸಾಮಾನ್ಯವಾಗಿ ಜಠರದ ಈ ಭಾಗದಲ್ಲೇ ಕಾಣಿಸಿಕೊಳ್ಳುತ್ತಿದ್ದುದರಿಂದ ಅಲ್ಸರ್‌ಗೆ ಇವೇ ಕಾರಣವಿರಬಹುದೆಂದು ಅವರು ತರ್ಕಿಸಿದರು. ತಮ್ಮ ವಾದವನ್ನು ಮೊದಲು ಬಹಿರಂಗ ಪಡಿಸಿದಾಗ ಅವರ  ಸಹೋದ್ಯೋಗಿಗಳು ವಾರೆನ್‌ರನ್ನು ಹಾಸ್ಯಮಾಡಿ, ಲೇವಡಿ ಮಾಡಿ, ಕಟುವಾಗಿಟೀಕಿಸಿದರು. 


ಹೈಡ್ರೊಕ್ಲೋರಿಕ್ ಆಮ್ಲ HCl, ಜಠರಾಗ್ನಿಯಲ್ಲಿ ಬ್ಯಾಕ್ಟೀರಿಯ ಬದುಕುಳಿಯಲಾರದೆ ಭಸ್ಮವಾಗಿ ಬಿಡುವುವೆಂದು ವೈದ್ಯರು ನಂಬಿದ್ದರು.  

ವಾರೆನ್‌ಗೆ ಬ್ಯಾರಿ ಮಾರ್ಷಲ್ ( Barry Marshal ) ಎಂಬ ಎಳೆಯವಯಸ್ಸಿನ ಮತ್ತೊಬ್ಬ ವೈದ್ಯ ಸಕ್ರಿಯವಾಗಿ ಜೊತೆಗೂಡಿದರು. ಇವರಿಬ್ಬರೂ ಯಾರಿಗೂ ಜಗ್ಗದೆ, ಬಗ್ಗದೆ, ಕುಗ್ಗದೆ ಅತ್ಯಂತ ಸಹನೆಯಿಂದ ಸಂಶೋಧನೆಯನ್ನು ಮುಂದುವರಿಸಿದರು. ವಾರೆನ್ ಮತ್ತು ಮಾರ್ಷಲ್ ೧೯೮೨ರಲ್ಲಿ ತಮ್ಮ ಸಂಶೋಧನೆಯನ್ನು ೧೦೦ ರೋಗಿಗಳಿಗೆ ಸೀಮಿತಗೊಳಿಸಿಕೊಂಡರು. ಅಂತರ್ದರ್ಶಕ (endosope) ಎಂಬ, ಅಂಗಗಳ ಒಳಭಾಗಗಳನ್ನು ವೀಕ್ಷಿಸುವ, ದೀಪವಿರುವ ಕೊಳವೆಯ ಸಣ್ಣ ಉಪಕರಣವನ್ನು ಬಳಸಿದರು. ಅವರು ಸೀಮಿತಗೊಳಿಸಿಕೊಂಡಿದ್ದ ೧೦೦ ರೋಗಿಗಳಲ್ಲಿ ೮೦ ರೋಗಿಗಳು ಅಲ್ಸರ್‌ನಿಂದ ನರಳುತ್ತಿದ್ದರು. ಇವರೆಲ್ಲರಲ್ಲೂ ಹೆಲಿಕೊ ಬ್ಯಾಕ್ಟರ್‌ ಇದ್ದು, ಅಲ್ಸರ್‌ಗೂ ಈ ರೋಗಾಣುವಿಗೂ ಇರುವ ಸಂಬಂಧವನ್ನು ಬಲಪಡಿಸಿತು. 

ಮಾರ್ಷಲ್ ತಮ್ಮೆಲ್ಲ ಕೌಶಲ, ಅನುಭವ ಮತ್ತು ಸಾಮರ್ಥ್ಯವನ್ನು ಬಳಸಿ, ಅನೇಕ ರೀತಿಗಳಲ್ಲಿ ಹೆಲಿಕೊಬ್ಯಾಕ್ಟರನ್ನು ಕೃಷಿ  ಮಾಡಲೆತ್ನಿಸಿದರು. ಆದರೂ ಅವರ ಎಲ್ಲ ಪ್ರಯತ್ನಗಳೂ ವಿಫಲವಾದವು. ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ೪೮ ಗಂಟೆಗಳಲ್ಲಿ ಬ್ಯಾಕ್ಟೀರಿಯಗಳು ವೃದ್ಧಿಯಾಗುತ್ತಿದ್ದವು. 48 ಗಂಟೆಗಳಲ್ಲಿ ಅವು ಕೃಷಿಯಾಗದಿದ್ದರೆ ಅವನ್ನು ಕಸವೆಂದು ಪರಿಗಣಿಸಿ ಹೊರಗೆಸೆಯುತ್ತಿದ್ದರು.

1982 ರ ಏಪ್ರಿಲ್ ೯ರಂದು ಶುಭ ಶುಕ್ರವಾರ(Good Friday ) ದಿಂದ ೧೨ರಂದು ಈಸ್ಟರ್ (easter) ಹಬ್ಬದ ವರೆಗೆ ಕಚೇರಿಗಳಿಗೆ ರಜೆಯಿತ್ತು . ಎಲ್ಲರೂ ವಸ್ತುಗಳನ್ನು ಅಲ್ಲಲ್ಲಿ, ಹಾಗೇ ಬಿಟ್ಟು ವಿಹಾರ ಕೇಂದ್ರಗಳಿಗೆ ಧಾವಿಸಿದರು. ಏಪ್ರಿಲ್ ೧೩ರಂದು, ರಜೆ ಮುಗಿಸಿದ ಮಾರ್ಷಲ್ ಪ್ರಯೋಗಾಲಯಕ್ಕೆ ಬಂದರು. ರಜೆಗೆ ಮುನ್ನ ಹೆಲಿಕೊಬ್ಯಾಕ್ಟರ್‌ನ ಗಾಜಿನ ತಟ್ಟೆಗಳು ಮೂಲೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇಸರದಿಂದ ಅವನ್ನು ದಿಟ್ಟಿಸಿ ನೋಡಿದಾಗ ಅವುಗಳಲ್ಲಿ ಹೆಲಿಕೊಬ್ಯಾಕ್ಟರ್ ಸೊಂಪಾಗಿ ವೃದ್ಧಿಯಾಗಿತ್ತು! ಹೆಲಿಕೊಬ್ಯಾಕ್ಟರ್‌ನ ವೃದ್ಧಿಗೆ ಹೆಚ್ಚು ಸಮಯಬೇಕೆಂದು ಮಾರ್ಷಲ್‌ಗೆ ಆಗ ಮನವರಿಕೆಯಾಯಿತು. 

ಜಠರರಸವು  ದಟ್ಟವಾದ ಮಾಂಸದ ತುಂಡನ್ನು ಕೆಲವೇ ನಿಮಿಷಗಳಲ್ಲಿ ಜೀರ್ಣಿಸುವಷ್ಟು ಶಕ್ತಿಶಾಲಿಯಾಗಿರುವಾಗ ಹೆಲಿಕೊಬ್ಯಾಕ್ಟರ್ ತನ್ನನ್ನು ಹೇಗೆ ರಕ್ಷಿಸಿಕೊಳ್ಳುತ್ತದೆಂದು ವೈದ್ಯರು ಮಾರ್ಷಲ್‌ಗೆ ಸವಾಲು ಹಾಕಿದರು. ಜಠರ, ಜಠರ ರಸದ ಪ್ರಭಾವದಿಂದ ತನ್ನನ್ನು ರಕ್ಷಿಸಿಕೊಳ್ಳಲು ದಟ್ಟವಾದ ಲೋಳೆಪದರವನ್ನು ಸ್ರವಿಸುತ್ತದೆ. ಇದು, ಜಠರದ ಒಳಸ್ತರಿಯನ್ನು ಸವರಿ, ಅಡ್ಡವಾಗಿ ಹರಡುತ್ತದೆ. ಹೆಲಿಕೊಬ್ಯಾಕ್ಟರ್ ಈ ಲೋಳೆಪದರವನ್ನು ಕೊರೆದು, ಒಳಗೆ ಹುದುಗಿ ತನ್ನನ್ನು ಜಠರ ರಸದಿಂದ ರಕ್ಷಿಸಿಕೊಳ್ಳುತ್ತದೆ. ಜೊತೆಗೆ, ನಮ್ಮ ಜೊಲ್ಲಿನಲ್ಲಿ ಯೂರಿಯ ಎಂಬ ರಾಸಾಯನಿಕವಸ್ತು ಹೇರಳವಾಗಿದೆ. ಜೊಲ್ಲು, ಜಠರವನ್ನು ಪ್ರವೇಶಿಸಿದಾಗ ಹೆಲಿಕೊಬ್ಯಾಕ್ಟರ್ ಯೂರಿಯೇಸ್ ಎಂಬ ಕಿಣ್ವವನ್ನು ಸ್ರವಿಸುತ್ತದೆ. ಇದು, ಯೂರಿಯವನ್ನು ಅಮೋನಿಯ ಮತ್ತು ಕಾರ್ಬನ್‌ ಡೈಯಾಕ್ಸೆಡ್ ಆಗಿ ಒಡೆಯುತ್ತದೆ. ಪ್ರತ್ಯಾಮ್ಲಗಳಾದ ಇವೆರಡೂ ಹೆಲಿಕೊಬ್ಯಾಕ್ಟರನ್ನು ಸುತ್ತುವರಿದು, ಹೈಡ್ರೊಕ್ಲೋರಿಕ್ ಆಮ್ಲವನ್ನು ತಟಸ್ಥಗೊಳಿಸುತ್ತವೆ. ನಂತರ ಹೆಲಿಕೊಬ್ಯಾಕ್ಟರ್ ಲೋಳೆಪದರವನ್ನು ಹೊಕ್ಕು ಅಲ್ಲಿ ವಾಸಿಸುತ್ತದೆಂದು ಮಾರ್ಷಲ್ ಮತ್ತು ವಾರೆನ್‌ ಸಂಶೋಧನೆಗಳ ಮೂಲಕ ಕಂಡುಹಿಡಿದರು. 

೧೯೮೫ರಲ್ಲಿ ಮಾರ್ಷಲ್ ತಮ್ಮ  ಜಠರದ ಒಳದರ್ಶನ ಮಾಡಿಸಿಕೊಂಡು ಅದರ ಆರೋಗ್ಯವನ್ನು ಖಚಿತಪಡಿಸಿಕೊಂಡರು. ತಮ್ಮ ಸಹೋದ್ಯೋಗಿಗಳನ್ನು ಪ್ರಯೋಗಾಲಯಕ್ಕೆ ಕರೆಸಿಕೊಂಡರು. ಬೀಕರನ್ನು ಕೈಯಲ್ಲಿ ಎತ್ತಿಹಿಡಿದು, ಸಹೋದ್ಯೋಗಿಗಳನ್ನು ಉದ್ದೇಶಿಸಿ, ‘ಮಿತ್ರರೆ, ಈ ಬೀಕರಿನಲ್ಲಿ ನೀರಿದೆ. ಇದಕ್ಕೆ ಈಗ ಹೆಲಿಕೊಬ್ಯಾಕ್ಟರ್ ರೋಗಾಣುಗಳನ್ನು ಬೆರೆಸುತ್ತಿದ್ದೇನೆ’ ಎನ್ನುತ್ತ, ಸುಮಾರು ೩೦ ಮಿಲಿಲೀಟರ್‌ನಷ್ಟು ಹೆಲಿಕೊಬ್ಯಾಕ್ಟರನ್ನು ಬೀಕರ್ ನೀರಿಗೆ ಬೆರೆಸಿ ಕದಡಿ, ‘ಈಗ ಏನು ಮಾಡುವೆನೆಂದು ನೋಡಿ’ ಎನ್ನುತ್ತ, ಆ ನೀರನ್ನು ಗಟಗಟನೆ ಕುಡಿದೇಬಿಟ್ಟರು! ಸಹೋದ್ಯೋಗಿಗಳೆಲ್ಲ ದಿಗ್ಭ್ರಾಂತರಾಗಿ, ಬೆವತುಹೋದರು.‌








ಮೂರು ದಿನಗಳು ಉರುಳಿದವು. ಅಲ್ಸರ್‌ನ ರೋಗಲಕ್ಷಣಗಳು ಒಂದೊಂದಾಗಿ  ಕಾಣಿಸಿಕೊಳ್ಳಲಾರಂಭಿಸಿದವು. ಹೊಟ್ಟೆನೋವು, ವಾಕರಿಕೆ, ಉರಿತ, ವಾಂತಿ ಪ್ರಾರಂಭವಾದವು. ಹೊಟ್ಟೆಯಲ್ಲಿ ತಳಮಳ, ಉಬ್ಬರ, ಉಸಿರಲ್ಲ್ಲಿ ದುರ್ವಾಸನೆಯಿತ್ತು. ಹೆಲಿಕೊಬ್ಯಾಕ್ಟರ್ ತಂಡತಂಡವಾಗಿ ಜಠರದ ಒಳಪದರವನ್ನು ಕೊರೆದು ಕೀಳುತ್ತಿರುವ ಭಯಂಕರ ದೃಶ್ಯವನ್ನು ಸಹೋದ್ಯೋಗಿಗಳು ಮಾನೀಟರ್‌ನಲ್ಲಿ ವೀಕ್ಷಿಸಿ ನಡುಗಿಹೋದರು. ತಮ್ಮ ಜೀವವನ್ನೂ ಲೆಕ್ಕಿಸದೆ ಮಾರ್ಷಲ್ ನಡೆಸಿದ ಈ ಘೋರ ಪ್ರಯೋಗದಿಂದ ವೈದ್ಯ ಸಮುದಾಯ ಮೈಕೊಡವಿಕೊಂಡು ಎಚ್ಚೆತ್ತಿತು. ಶತಮಾನಗಳಿಂದ ಬೇರೂರಿದ್ದ ವೈದ್ಯರ ಮೂಢನಂಬಿಕೆ ಸಡಿಲಿಸಿ, ಕಳಚಿಬಿತ್ತು. ವೈದ್ಯರು ಮಾರ್ಷಲ್ ಮತ್ತು ವಾರೆನ್‌ರ ವಾದವನ್ನು ಒಪ್ಪಿದರು. 

ಇಪ್ಪತ್ತ ಮೂರು ವರ್ಷಗಳ ಕಾಲ ಏಕಾಂಗಿಯಾಗಿ ಹೋರಾಡಿ, ಇಡೀ ವೈದ್ಯಸಮುದಾಯದ ಹಗೆತನವನ್ನೆದುರಿಸಿ, ತಮ್ಮ ಸಿದ್ಧಾಂತವನ್ನು ಛಲಬಿಡದೆ ನಿರೂಪಿಸಿ, ವೈದ್ಯ ಸಮುದಾಯದ ಮೂಢ ನಂಬಿಕೆಯನ್ನು ಇವರಿಬ್ಬರೂ ಬುಡಸಹಿತ ಕಿತ್ತೊಗೆದರು. ಇವರ ಈ ದೃಢ ಸಾಧನೆಯನ್ನು ಗುರುತಿಸಿ, ಮೆಚ್ಚಿದ ನೊಬೆಲ್ ಸಮಿತಿ ೨೦೦೫ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.



No comments:

Post a Comment