ನೀರಲ್ಲೇ ಓಡುತ್ತೆ ಈ ರೈಲು !
ಇದೇನು ರೈಲು ನೀರಲ್ಲಿ ಅಂದರೆ ನೀರಿನಿಂದ ಓಡುತ್ತಾ ?
ವಿದ್ಯುತ್ ಅಥವಾ ಕಾಂತ ಶಕ್ತಿ ಅಥವಾ ಕನಿಷ್ಟ ಪಕ್ಷ ಕಲ್ಲಿದ್ದಲೋ, ಡೀಸೆಲೋ ಬೇಡವೇ? ಹಳಿ ಇಲ್ಲದ
ರೈಲು ಬಿಡುತ್ತಿದ್ದೇನೆ ಎಂದುಕೊಂಡಿರಾ? ಖಂಡಿತಾ ಇಲ್ಲ ಇದು ಸದ್ಯದಲ್ಲೇ ಭಾರತದ ನೆಲದಲ್ಲಿ
ನೀರಿನಿಂದಲೇ ಓಡುವ ಹೈಡ್ರೋಜನ್ ರೈಲು!!! ಇದು ಪರಿಸರ ಸ್ನೇಹಿಯಾದ ಹಸಿರು ರೈಲು.
ಜಗತ್ತಲ್ಲಿ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನವೂ ಅಗ್ರ ಪಂಕ್ತಿಯಲ್ಲಿದೆ. ತಂತ್ರಜ್ಞಾನ ಅಭಿವೃದ್ಧಿಹೊಂದಿದಂತೆ ನಾವೂ ಸಾಂಪ್ರದಾಯಿಕ ಇಂಧನಗಳಾದ ಕಲ್ಲಿದ್ದಲು, ಡೀಸೆಲ್‌ಗಳಿಂದ ಅದೆಷ್ಟೋ ಮುಂದಕ್ಕೆ ಸಾಗಿದ್ದೇವೆ. ಭಾರತವೀಗ ಬುಲೆಟ್ ರೈಲಿನ ಕನಸನ್ನು ನನಸಾಗಿಸಿ ಹೊರಟಿದೆ. ಇದರ ಜೊತೆಗೆ ನಮ್ಮಲ್ಲಿ ಡೀಸೆಲ್, ವಿದ್ಯುತ್‌ಗಳನ್ನು ಬಳಸದ ರೈಲನ್ನು ಪರಿಚಯಿಸುವ ಪ್ರಯತ್ನಗಳು ಆರಂಭಗೊಂಡಿವೆ.
ಎಲ್ಲವೂ ಯೋಜನೆಯಂತೆ ಅನುಷ್ಠಾನಗೊಂಡರೆ, 2025ರ ವೇಳೆಗೆ
ಈ ವಿಶೇಷ ರೈಲು ಹಳಿಗಳ ಮೇಲೆ ಓಡಾಡಲಿದೆ. ಪ್ರಯಾಣಿಕರನ್ನು ಒಂದು
ಕಡೆಯಿಂದ ಮತ್ತೊಂದು ಕಡೆಗೆ ಹೊತ್ತೊಯ್ಯಲಿದೆ.
ಈ ರೈಲಿನ ಓಡಾಟ
ಪರಿಸರಕ್ಕೆ ಯಾವ ರೀತಿಯ ಸಮಸ್ಯೆಯನ್ನೂ ತಾರದು. ಏಕೆಂದರೆ ಇಲ್ಲಿ
ಮಾಲಿನ್ಯಕಾರಕವೆನಿಸುವ ಯಾವುದೇ ಕಾರ್ಬನ್ ತ್ಯಾಜ್ಯ ಬಿಡುಗಡೆಯಾಗುವುದಿಲ್ಲ. ಇದೇನು
ಕನಸೇ? ನನಸೇ? ಇಂತಹ ಅದ್ಭುತವನ್ನು ಸಾಧಿಸುವುದರ ಮೂಲಕ
ಭಾರತ 2030ರ ವೇಳೆಗೆ ತಾನು ಅಂದುಕೊಂಡಂತೆ ಜೀರೋ ಕಾರ್ಬನ್ ಎಮಿಷನ್ ಅನ್ನು ಮುಟ್ಟುವ ಪ್ರಯತ್ನದತ್ತ ದಾಪುಗಾಲಿಡಲಿದೆ. ಹಾಗಾದ್ರೆ ಯಾವುದು ಈ ಹೊಸ ರೈಲ್ವೆ ಯೋಜನೆ? ಇದರಿಂದ ಆಗುವ ಅನುಕೂಲಗಳೇನು? ಈ ತಂತ್ರಜ್ಞಾನವನ್ನು ಜಗತ್ತಿನ ಬೇರೆ ಯಾವುದಾದರೂ ದೇಶ ಅಳವಡಿಸಿಕೊಂಡಿದೆಯೇ? ಯಾವ ಶಕ್ತಿಯ ಆಕರ , ತಂತ್ರಜ್ಞಾನದಿಂದ ಈ ರೈಲುಗಳು ಚಲಿಸುತ್ತವೆ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ವಂದೇ ಭಾರತ ರೈಲು, ಬುಲೆಟ್ ರೈಲುಗಳ ಬಗ್ಗೆ ಇತ್ತೀಚೆಗೆ
ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ
ಹೈಡ್ರೋಜನ್ ರೈಲುಗಳ ಬಗ್ಗೆ ಕೂಡ ಚರ್ಚೆಗಳು ಆರಂಭವಾಗಿವೆ. ಈ
ನಡುವೆ ಭಾರತವು ಇನ್ನು ಕೆಲವೇ ದಿನಗಳಲ್ಲಿ ಹರಿಯಾಣದ ಜಿಂದ್ ಹಾಗೂ ಸೋನೆಪತ್ ನಡುವಿನ 90 ಕಿಲೋಮೀಟರ್ ಗಳ ರೈಲು ಹಳಿಯ ಮೇಲೆ ಈ ಪರಿಸರ
ಸ್ನೇಹಿ ಹೈಡ್ರೋಜನ್ ರೈಲಿನ ಪರೀಕ್ಷೆಯನ್ನು ನಡೆಸಲಿದೆ.
ಇದೇ ಮಾರ್ಗವನ್ನು ಆಯ್ಕೆ ಮಾಡಲು ಪ್ರಮುಖ
ಕಾರಣವೆಂದರೆ, ಆ ಮಾರ್ಗದಲ್ಲಿ ಕಡಿಮೆ ಸಂಖ್ಯೆಯ ರೈಲುಗಳು ಪ್ರಯಾಣಿಸುತ್ತವೆ. ಹಾಗಾಗಿ ಸಂಚಾರ
ವ್ಯತ್ಯಯವಿಲ್ಲದೇ ಸೂಕ್ತವಾಗಿ ಪ್ರಾಯೋಗಿಕ ಪ್ರಯತ್ನವನ್ನು ನಡೆಸಬಹುದು.
ಸೆಪ್ಟೆಂಬರ್ 2022 ರಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಪರಿಚಯಿಸಿದ ಮೊದಲ ದೇಶ ಜರ್ಮನಿ. ಫ್ರೆಂಚ್
ಕಂಪನಿ ಅಲ್‌ಸ್ಟೋಮ್ ಅಭಿವೃದ್ಧಿಪಡಿಸಿದ ಜರ್ಮನ್ ರೈಲು ಒಮ್ಮೆ ತುಂಬಿದ ಇಂಧನದಿಂದ 1175 ಕಿಮೀ ದೂರದ ಚಲಿಸಿ ದಾಖಲೆ
ನಿರ್ಮಿಸಿದೆ. ಎರಡನೆಯದಾಗಿ ಚೀನೀ ರೈಲು ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ ಮತ್ತು 600 ಕಿಮೀವರೆಗೂ ಮತ್ತೆ ಇಂಧನ ತುಂಬದೆ ಓಡಬಲ್ಲುದು. ಈ ಮೂಲಕ ಈ
ಎರಡು ದೇಶಗಳು ತಮ್ಮ ರೈಲ್ವೆಯಲ್ಲಿ ಕಾರ್ಬನ್ ಫ್ರೀ ವಾತಾವರಣವನ್ನು ನಿರ್ಮಾಣ ಮಾಡಿವೆ. ಹೈಡ್ರೋಜನ್ ರೈಲುಗಳು ಜರ್ಮನಿ ಮತ್ತು ಚೈನಾಗಳ ನಂತರ ಈಗ ಭಾರತದಲ್ಲೂ ಓಡಲಿವೆ.
ಹೈಡ್ರೋಜನ್‌ನಿಂದ ಚಲಿಸುವ ಈ ಸಾರಿಗೆಯಿಂದ ಯಾವುದೇ ಹಸಿರುಮನೆ ಅನಿಲಗಳು ಹೊರಹೊಮ್ಮುವುದಿಲ್ಲ.
ಇಲ್ಲಿ ಹೈಡ್ರೋಜನ್ ಇಂಧನ ಕೋಶಗಳನ್ನು ಬಳಸಲಾಗುತ್ತದೆ. ಹೈಡ್ರೋಜನ್ ಅನಿಲವನ್ನು ನೀರಿನ ವಿದ್ಯುತ್‌ವಿಭಜನೆಯ
ಮೂಲಕ ಪಡೆಯುತ್ತಾರೆ.
ಹೈಡ್ರೋಜನ್ ಪರಮಾಣು ಅಯಾನೀಕರಣಗೊಂಡು ಪ್ರೋಟಾನ್, ಎಲೆಕ್ಟ್ರಾನ್ಗಳಾಗಿ ಬೇರೆ
ಬೇರೆಯಾಗಿ ಇಂಧನಕೋಶ
ಕಾರ್ಯ ನಿರ್ವಹಿಸುತ್ತದೆ. ಹೈಡ್ರೋಜನ್, ಆಕ್ಸಿಜನ್‌ನೊಂದಿಗೆ ಸೇರಿ ನೀರನ್ನೇ ತ್ಯಾಜ್ಯವಾಗಿ ಹೊರ
ಹಾಕುತ್ತವೆ!! ನೀರನ್ನೇ ಉಂಡು ನೀರನ್ನೇ ಹೊರಹಾಕುವ ಈ ತಂತ್ರಜ್ಞಾನ ವಿಶೇಷವಷ್ಟೇ ಅಲ್ಲ ಅದ್ಭುತವೂ
ಹೌದು. ಬೈಜಿಕ ಸಮ್ಮಿಲನದಿಂದ ನಕ್ಷತ್ರಗಳ ಶಕ್ತಿಯ ಆಕರವಾಗಿದ್ದ ಹೈಡ್ರೋಜನ್ ಇದುವರೆಗೂ
ಬಾಹ್ಯಾಕಾಶ ಯಾನದಲ್ಲಿ ಶಕ್ತಿಯ ಆಕರವಾಗಿ ಬಳಕೆಯಲ್ಲಿತ್ತು. ಇಂಥಹ ಹೈಡ್ರೋಜನ್ ಜನ ಸಾಮಾನ್ಯರ
ಬಳಕೆಗೆ ಬರುವ ದಿನ ಹತ್ತಿರ ಬಂದೇ ಬಿಟ್ಟಿದೆ.
ಹೈಡ್ರೋಜನ್ ರೈಲು ಓಡಾಡಲು ಯಾವುದೇ ರೀತಿಯ ವಿದ್ಯುದೀಕರಣ
ವ್ಯವಸ್ಥೆಯೂ ಬೇಕಿಲ್ಲ. ಇದು ಪೆಟ್ರೋಲ್ ಇಂಜಿನ್‌ಗಳಂತೆಯೇ ಆದರೆ ಭಿನ್ನ ರೀತಿಯ ಹೈಡ್ರೋಜನ್ ಅಂತರ್ದಹನ
ಇಂಜಿನ್ ತಂತ್ರಜ್ಞಾನವನ್ನು ಹೊಂದಿರುವಂತಹ ಇಂಜಿನ್. ಈಗಾಗಲೇ ಕಾರುಗಳಲ್ಲಿ ಈ ರೀತಿಯ ಇಂಜಿನ್ ಬಳಕೆಯ ಪ್ರಯೋಗ ನಡೆಯುತ್ತಿದೆ.
ಕೇಂದ್ರ ಸಾರಿಗೆ ಸಚಿವರಾದ ಶ್ರೀಮಾನ್ ನಿತಿನ್
ಗಡ್ಕರಿಯವರು ಈಗಾಗಗಲೇ ಈ ಕುರಿತು ಆಸ್ಥೆ ವಹಿಸಿ ಈ ತಂತ್ರಜ್ಞಾನ, ಜೊತೆಗೆ ಎಥನಾಲನ್ನು ಬಳಸುವ
ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ದೆಹಲಿಯಂತಹ ಮಹಾನಗರಗಳ ವಾಯು
ಮಾಲಿನ್ಯ ಅದರಿಂದ ಉಂಟಾದ ಸಮಸ್ಯೆಗಳನ್ನು ಹೈಡ್ರೋಜನ್ ಇಂಧನ ಬಳಸುವ ಇಂಜಿನ್ ನಿವಾರಿಸುತ್ತದೆ. ಹೈಡ್ರೋಜನ್‌ನ ಕ್ಯಾಲೋರಿ ಮೌಲ್ಯ ಇತರೆಲ್ಲಾ ಇಂಧನಗಳಿಗಿಂತ
ಹೆಚ್ಚು.
ಇಂಧನ |
ಕ್ಯಾಲೋರಿಫಿಕ್ ಮೌಲ್ಯಗಳು
(ಅಂದಾಜು.) |
ಜೈವಿಕ ಅನಿಲ |
35000 - 40000 |
CNG |
50000 |
ಕಲ್ಲಿದ್ದಲು |
25000 - 33000 |
ಹಸುವಿನ ಸಗಣಿ |
6000 - 8000 |
ಡೀಸೆಲ್ |
45000 |
ಹೈಡ್ರೋಜನ್ |
150000 |
ಸೀಮೆಎಣ್ಣೆ |
45000 |
ಎಲ್.ಪಿ.ಜಿ |
55000 |
ಮೀಥೇನ್ |
50000 |
ಪೆಟ್ರೋಲ್ |
45000 |
ಮರ |
17000 - 22000 |
Sir your article on hydrogen fuel is informative more over your style of narration makes the reader to move on to the article easily. Congratulations sir
ReplyDeleteಭಾರತದಲ್ಲಿ ಭವಿಷ್ಯದಲ್ಲಿ ಹೈಡ್ರೋಜನ್ H2, ಇಂಧನವನ್ನು ಬಳಸಿ ಚಲಾಯಿಸುವಂತಹ ವಾಹನಗಳು ಎಲ್ಲಾ ಜನರ ಬಳಕೆಗೆ ಸಾಧ್ಯವಾಗುವಂತಹ ತಂತ್ರಜ್ಞಾನದಿಂದ ಶೀಘ್ರವಾಗಿ ಬರಲಿ ಎಂದು ಆಶಿಸೋಣ.. ಲೇಖನದ ಮಾಹಿತಿಯು ಪ್ರಸ್ತುತ ಸನ್ನಿವೇಶಕ್ಕೆ ಬಹಳ ಉತ್ತಮವಾಗಿ ಮೂಡಿಬಂದಿದೆ... ಧನ್ಯವಾದಗಳು ರಾಮಚಂದ್ರ ಭಟ್ ಸರ್ 💐💐
ReplyDelete