ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, December 4, 2024

ಮರೆಯಬಾರದ ಮಹಾವಿಜ್ಞಾನಿ ಯಲ್ಲಪ್ರಾಗಡ ಸುಬ್ಬರಾವ್

 ಮರೆಯಬಾರದ ಮಹಾವಿಜ್ಞಾನಿ ಯಲ್ಲಪ್ರಾಗಡ ಸುಬ್ಬರಾವ್


ತಾಂಡವಮೂರ್ತಿ ಎ ಎನ್‌

ಸಹಶಿಕ್ಷಕರು, 

ಸರ್ಕಾರಿ ಪದವಿಪೂರ್ವ ಕಾಲೇಜು,

ನೆಲಮಂಗಲ




ನ್ಯುಮೋನಿಯಾ ಸೊಂಕಿಗೆ ರಾಮಾಬಾಣವಾಗಿ ಬಳಸುವ ಪ್ರತಿಜೀವಕ ಟೆಟ್ರಾಸೈಕ್ಲಿನ್‌ ನಿಮಗೆ ಪರಿಚಯವಿದೆಯೇ?.ವಿಶ್ವ ಆರೋಗ್ಯ ಸಂಸ್ಥೆ ಮಾನ್ಯ ಮಾಡಿರುವ ಆನೆಕಾಲು ರೋಗಕ್ಕೆಔಷದವಾಗಿ ಬಳಸುವ ದುಂಡುಹುಳು ಪ್ರತಿರೋಧಕ ಡೈಥೈಲ್‌ ಕಾರ್ಬಮಝೈನ್ ಬಗ್ಗೆ ತಿಳಿದಿದಿಯೇ?.ರಕ್ತಹೀನತೆಯನ್ನು ತಡೆಗಟ್ಟಲು ಬಳಸುವ ಫೊಲಿಕ್‌ ಆಮ್ಲದ ಬಗ್ಗೆಯಾದರೂ ತಿಳಿದಿದೆಯೇ?.ಈ ಎಲ್ಲಾ ಸಂಶೋಧನೆಗಳ ಹಿಂದಿನ ಪ್ರೇರಕಶಕ್ತಿ ಯಲ್ಲಪ್ರಾಗಡ ಸುಬ್ಬರಾವ್‌ ರ ಪರಿಚಯ ನಿಮಗಿದೆಯೇ?.ಹಾಗಾದರೆ,ಎಲ್ಲಾ ಭಾರತೀಯರೂ ಮರೆಯಬಾರದ ಪ್ರಾತಸ್ಮರಣೀಯ ವಿಜ್ಞಾನಿ ಯಲ್ಲಪ್ರಾಗಡ ಸುಬ್ಬರಾವ್‌ ರ ಜೀವನ ಸಾಧನೆಗಳ ಬಗ್ಗೆ ತಿಳಿಯೋಣ ಬನ್ನಿ.

ಆರಂಭಿಕ ಜೀವನ ಮತ್ತು ಶಿಕ್ಷಣ



ಯಲ್ಲಪ್ರಾಗಡ ಸುಬ್ಬರಾವ್  ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ಬ್ರಿಟಿಷ್ ಆಡಳಿತದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದಭೀಮಾವರಂನಲ್ಲಿ12 ಜನವರಿ 1895ರಲ್ಲಿ ಜನಿಸಿದರು. ಅವರು ರಾಜಮಂಡ್ರಿಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ತಮ್ಮ ಹತ್ತಿರದ ಬಂಧುಗಳ ಅಕಾಲಿಕ ಮರಣದ ನಡುವೆಯೂ ಪ್ರಯಾಸದಿಂದ ಮುಂದುವರಿಸಿ  ಅಂತಿಮವಾಗಿ ಮದ್ರಾಸ್‌ನ ಹಿಂದೂ ಹೈಸ್ಕೂಲ್‌ನಿಂದ  ಮೂರನೇ ಪ್ರಯತ್ನದಲ್ಲಿ ಮೆಟ್ರಿಕ್ಯುಲೇಷನ್ ಪಡೆದರು. ಅವರು ಪ್ರೆಸಿಡೆನ್ಸಿ ಕಾಲೇಜಿನಿಂದ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮದ್ರಾಸ್ ವೈದ್ಯಕೀಯ ಕಾಲೇಜಿಗೆ ಪ್ರವೇಶಪಡೆದರು, ಅಲ್ಲಿ ಅವರು ತಮ್ಮ ಸ್ನೇಹಿತರು ಮತ್ತು ಕಸ್ತೂರಿ ಸೂರ್ಯನಾರಾಯಣ ಮೂರ್ತಿಯವರ ಬೆಂಬಲದಿಂದ ಶಿಕ್ಷಣವನ್ನುಪಡೆದರು, ನಂತರ ಕಸ್ತೂರಿ ಸೂರ್ಯನಾರಾಯಣ ಮೂರ್ತಿ ಅವರ ಮಗಳನ್ನು ಮದುವೆಯಾದರು.

ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಲು ಗಾಂಧೀಜಿಯವರ ಕರೆಗೆ ಓಗೊಟ್ಟು  ಅವರು ಖಾದಿ ಶಸ್ತ್ರಚಿಕಿತ್ಸಾ ಉಡುಗೆಯನ್ನು ಧರಿಸಲು ಪ್ರಾರಂಭಿಸಿದರು; ಇದು ಅವರ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾದ M. C. ಬ್ರಾಡ್‌ಫೀಲ್ಡ್‌ರ ಅಸಮಾಧಾನಕ್ಕೆ ಕಾರಣವಾಯಿತು. ಪರಿಣಾಮವಾಗಿ, ಅವರು ತಮ್ಮ ಲಿಖಿತ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದರೂ, ಅವರಿಗೆ ಕಡಿಮೆ LMS(Licentiate in Medicine and Surgery) ಪ್ರಮಾಣಪತ್ರವನ್ನು ನೀಡಲಾಯಿತು ಮತ್ತು ಪೂರ್ಣ MBBS ಪದವಿಯನ್ನು ನಿರಾಕರಿಸಲಾಯಿತು. ಸುಬ್ಬರಾವ್ ಮದ್ರಾಸ್ ವೈದ್ಯಕೀಯ ಸೇವೆಯನ್ನು ಪ್ರವೇಶಿಸಲು ಪ್ರಯತ್ನಿಸಿದರು ಯಶಸ್ವಿಯಾಗಲಿಲ್ಲ. ನಂತರ ಅವರು ಮದ್ರಾಸಿನಲ್ಲಿರುವ ಡಾ. ಲಕ್ಷ್ಮೀಪತಿ ಅವರ ಆಯುರ್ವೇದ ಕಾಲೇಜಿನಲ್ಲಿ ಅಂಗರಚನಾಶಾಸ್ತ್ರದ ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು ಆಯುರ್ವೇದ ಔಷಧಿಗಳ ಗುಣಪಡಿಸುವ ಶಕ್ತಿಗಳಿಂದ ಆಕರ್ಷಿತರಾದರು ಮತ್ತು ಆಯುರ್ವೇದವನ್ನು ಆಧುನಿಕ ನೆಲೆಯಲ್ಲಿ ಪ್ರಸ್ತುತಪಡಿಸಲು ಸಂಶೋಧನೆಯಲ್ಲಿ ತೊಡಗಿದರು. ಕಾಕಿನಾಡದಲ್ಲಿರುವ ಮಲ್ಲಾಡಿ ಸತ್ಯಲಿಂಗಂ ನಾಯ್ಕರ್ ಚಾರಿಟೀಸ್‌ನ ಬೆಂಬಲದ ಭರವಸೆ ಮತ್ತು ಅವರ ಮಾವನವರು ಒದಗಿಸಿದ ಹಣಕಾಸಿನ ನೆರವಿನಿಂದ ಸುಬ್ಬರಾವ್ 26 ಅಕ್ಟೋಬರ್ 1922 ರಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ಬೋಸ್ಟನ್‌ಗೆ ಆಗಮಿಸಿದರು.

ವೃತಿ ಮತ್ತು ಸಾಧನೆ

ಹಾರ್ವರ್ಡ್ ವೈದ್ಯಕೀಯ ಶಾಲೆಯಿಂದ ಡಿಪ್ಲೊಮಾವನ್ನು ಗಳಿಸಿದ ನಂತರ ಅವರು ಕಿರಿಯ ಅಧ್ಯಾಪಕರಾಗಿ ಹಾರ್ವರ್ಡ್ ನಲ್ಲಿ ತಮ್ಮ ಸೇವೆಯನ್ನು ಪಾರಂಭಿಸಿದರು. ಸೈರಸ್ ಫಿಸ್ಕೆಯೊಂದಿಗೆ, ಅವರು ಫಿಸ್ಕೆ-ಸುಬ್ಬರಾವ್ ವಿಧಾನ ಎಂದು ಕರೆಯಲ್ಪಡುವ ದೇಹದ ದ್ರವಗಳು ಮತ್ತು ಅಂಗಾಂಶಗಳಲ್ಲಿ ರಂಜಕವನ್ನು ಅಂದಾಜು ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ಅವರು ಸ್ನಾಯುವಿನ ಚಟುವಟಿಕೆಯಲ್ಲಿ ಫಾಸ್ಫೋಕ್ರಿಯೆಟಿನ್(phosphocreatine) ಮತ್ತು ಅಡೆನೊಸಿನ್ ಟ್ರೈಫಾಸ್ಫೇಟ್ (ATP) ಪಾತ್ರವನ್ನು ಸಹ ಕಂಡುಹಿಡಿದರು, ಇದು 1930 ರ ದಶಕದಲ್ಲಿ ಜೀವರಸಾಯನಶಾಸ್ತ್ರ ಪಠ್ಯದ ಭಾಗವಾಗಿ ಸೇರ್ಪಡೆಯಾಯಿತು.ಈ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿ 1930ರಲ್ಲಿ ಪಿಎಚ್‌ಡಿ ಪಡೆದರು.ಹಾರ್ವರ್ಡ್‌ನಲ್ಲಿ ಖಾಯಂ ಅಧ್ಯಾಪಕ ಸ್ಥಾನವನ್ನು ಪಡೆಯಲು ವಿಫಲರಾದ ನಂತರ ಅವರು ಅಮೇರಿಕನ್ ಸೈನಾಮಿಡ್‌ನ ವಿಭಾಗವಾದ ಲೆಡರ್ಲೆ ಲ್ಯಾಬೊರೇಟರೀಸ್‌ಗೆ ಸೇರಿದರು (ಈಗ ವೈತ್‌(Wyeth) ವಿಭಾಗವು ಫಿಜರ್‌(Pfizer)ನ ಒಡೆತನದಲ್ಲಿದೆ).

 ಲೆಡರ್ಲೆಯಲ್ಲಿ, ಅವರು ಫೋಲಿಕ್ ಆಮ್ಲಮತ್ತು ವಿಟಮಿನ್ B9 ಸಂಶ್ಲೇಷಿಸಲು ಒಂದು ವಿಧಾನವನ್ನು ಅಭಿವೃದ್ಧಿಪಡಿಸಿದರು,ತಮ್ಮಈ ಸಂಶೋಧನೆಗೆ ಲೂಸಿ ವಿಲ್ಸ್ ಅವರ ರಕ್ತಹೀನತೆಯ ವಿರುದ್ಧ ರಕ್ಷಣಾತ್ಮಕ ಏಜೆಂಟ್ ಆಗಿ ಕೆಲಸ ಮಾಡುವ ಫೋಲಿಕ್ ಆಮ್ಲವನ್ನು ಪ್ರತ್ಯೇಕಿಸುವ ಸಂಶೋಧನಾ ಕಾರ್ಯವನ್ನು  ಆಧಾರವಾಗಿಟ್ಟುಕೊಂಡರು. ಫೋಲಿಕ್ ಆಮ್ಲದ ಮೇಲೆ ಕೆಲಸ ಮಾಡಿದ ನಂತರ ಡಾ. ಸಿಡ್ನಿ ಫಾರ್ಬರ್ ಅವರಿಂದ ಮಹತ್ವದ ಹೊಳಹುಗಳನ್ನು ಪಡೆದು  ಪ್ರಮುಖ ಕ್ಯಾನ್ಸರ್ ನಿರೋಧಕ ಔಷಧ ಮೆಥೊಟ್ರೆಕ್ಸೇಟ್ ಅನ್ನು ಅಭಿವೃದ್ಧಿಪಡಿಸಿದರು - ಇದು ಮೊದಲ ಕ್ಯಾನ್ಸರ್ ಕಿಮೊಥೆರಪಿ ಔಷದಗಳಲ್ಲಿ ಒಂದಾಗಿದೆ ಮತ್ತು ಪ್ರಸ್ತುತ ಈಗಲೂ ವ್ಯಾಪಕವಾಗಿ ವೈದ್ಯಕೀಯ ಬಳಕೆಯಲ್ಲಿದೆ.ದುಂಡುಹುಳು ಪ್ರತಿರೋಧಕ(anthelmintic) ಡೈಥೈಲ್‌ ಕಾರ್ಬಮಝೈನ್ ( diethylcarbamazine) ಗೆ ಆಧಾರವನ್ನು ಸಹ ಸುಬ್ಬರಾವ್ ಕಂಡುಹಿಡಿದರು, ಇದನ್ನು ನಂತರ ವಿಶ್ವ ಆರೋಗ್ಯ ಸಂಸ್ಥೆಯು ಫಿಲೇರಿಯಾಸಿಸ್(ಆನೆಕಾಲು ರೋಗ) ಚಿಕಿತ್ಸೆಗೆ ಔಷದವಾಗಿ ಶಿಫಾರಸು ಮಾಡಿತು.

 ಸುಬ್ಬರಾ ಮಾರ್ಗದರ್ಶನದಲ್ಲಿ, ಬೆಂಜಮಿನ್ ಡುಗ್ಗರ್ ಅವರು ವಿಶ್ವದ ಮೊದಲ ಟೆಟ್ರಾಸೈಕ್ಲಿನ್ ಪ್ರತಿಜೀವಕ ಕ್ಲೋರ್ ಟೆಟ್ರಾಸೈಕ್ಲಿನ್(Chlortetracycline ) ಅನ್ನು 1945 ರಲ್ಲಿ ಕಂಡುಹಿಡಿದರು. ಡುಗ್ಗರ್ ಅವರು ಮಿಸೌರಿ ವಿಶ್ವವಿದ್ಯಾನಿಲಯದಲ್ಲಿ ಸ್ಯಾನ್‌ಬಾರ್ನ್ ಫೀಲ್ಡ್‌ನಿಂದ ಸಂಗ್ರಹಿಸಿದ ಮಣ್ಣಿನ ಮಾದರಿಯಿಂದ ಬೆಳೆಸಿದ ಆಕ್ಟಿನೊಮೈಸಿಟ್‌ನ ಉತ್ಪನ್ನದಿಂದ ಟೆಟ್ರಾಸೈಕ್ಲಿನ್ ಪ್ರತಿಜೀವಕವನ್ನು ಅಭಿವೃದ್ಧಿಪಡಿಸಿದರು. ಔಷಧವನ್ನು ಮೊದಲು ನ್ಯೂಯಾರ್ಕ್‌ನ ಹಾರ್ಲೆಮ್ ಆಸ್ಪತ್ರೆಯಲ್ಲಿ ಬಳಸಲಾಯಿತು ಮತ್ತು ಅದು ಉತ್ತಮ ಯಶಸ್ಸನ್ನು ಕಂಡಿತು.

ಸುಬ್ಬಾರಾವ್ ಅವರ ಸಮಕಾಲೀನರಾದ ಸೈರಸ್ ಎಚ್. ಫಿಸ್ಕೆ ಅವರು ವೃತ್ತಿವೈಷಮ್ಯದಿಂಸುಬ್ಬರಾವರ ಅನೇಕ ಪ್ರಮುಖ ಸಂಶೋಧನಾ ಕಾರ್ಯಗಳನ್ನು ನಿಗ್ರಹಿಸಿದರು ಮತ್ತು ನಾಶಪಡಿಸಿದರು. ಸುಬ್ಬರಾವ್ ಅವರ ಸಹೋದ್ಯೋಗಿ, ಜಾರ್ಜ್ ಹಿಚಿಂಗ್ಸ್ ಅವರ ಅಭಿಪ್ರಾಯದಂತೆ ಈ ವೃತ್ತಿವೈಷಮ್ಯದಿಂದ, ಸುಬ್ಬರಾವ್‌ ರಿಂದ ಪ್ರತ್ಯೇಕಿಸಲ್ಪಟ್ಟ ಕೆಲವು ನ್ಯೂಕ್ಲಿಯೊಟೈಡ್ಗಳನ್ನು ವರ್ಷಗಳ ನಂತರ ಇತರ ಸಂಶೋಧಕರು ಮರುಶೋಧಿಸಬೇಕಾಯಿತು ಏಕೆಂದರೆ ಫಿಸ್ಕೆ, ಸುಬ್ಬರಾವ್‌ ರ ಕೆಲವು ಮಹತ್ವದ ಸಂಶೋಧನೆಗಳು ಬೆಳಕಿಗೆ ಬರದಂತೆ ತಡೆಹಿಡಿದರು.ಸುಬ್ಬರಾವ್‌ ರವರ  ಗೌರವಾರ್ಥವಾಗಿ ಶಿಲೀಂಧ್ರಗಳ ಒಂದು ಜಾತಿಗೆ ಸುಬ್ಬರೊಮೈಸಸ್(Subbaromyces) ಎಂದು ಹೆಸರಿಸಲಾಗಿದೆ.ಇವರ ಗೌರವಾರ್ಥವಾಗಿ ತಾಂಜಾನಿಯಾದ ಜಿಗಿಯುವ ಜೇಡಗಳ ಒಂದು ಜಾತಿಗೆ ಟಾಂಜಾನಿಯಾ ಯೆಲ್ಲಾಪ್ರಗಡೈ ಎಂದು ಹೆಸರಿಸಲಾಗಿದೆ.

 ಈಷ್ಟೆಲ್ಲಾ ಸಾಧನೆಗೈದ ಸುಬ್ಬರಾವ್‌ ತಮ್ಮ 53ನೇ ವಯಸ್ಸಿನಲ್ಲಿ 8 ಆಗಷ್ಟ್‌ 1948 ರಂದು ಅಮೇರಿಕಾದ ನ್ಯೂಯಾರ್ಕ್‌ ನಲ್ಲಿ ನಿಧನರಾದರು.

                                                               

No comments:

Post a Comment