ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, December 4, 2024

ಕಛೇರಿಯಂಗಳಕ್ಕೆ ಬಂದ ಬುಲ್‌ಬುಲ್‌ ಸಂಸಾರ !

  ಕಛೇರಿಯಂಗಳಕ್ಕೆ  ಬಂದ  ಬುಲ್‌ಬುಲ್‌ ಸಂಸಾರ !!!

ಡಾ.ಎಲ್.ಶಶಿಕುಮಾರ್

ವೈಜ್ಞಾನಿಕ ಅಧಿಕಾರಿ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ

ಜಲಪುರಿ, ಕೆಪಿಎ ಆವರಣ, ಮೈಸೂರು

ಮೊ: 7204932795

ಮುಂಗಾರು ಮಳೆ ಸಕಲ ಜೀವರಾಶಿಗೂ ಜೀವನೋತ್ಸಹ ತುಂಬುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈ ವರ್ಷದ ಕಳೆದ ಜುಲೈ ತಿಂಗಳ ಕೊನೆಯ ವಾರದಲ್ಲಿ ಎರಡು ಗಂಡು-ಹೆಣ್ಣು ಜೋಡಿಯ ಬುಲ್‌ಬುಲ್ ಪಕ್ಷಿಗಳು ಮೈಸೂರಿನ ಜಲಪುರಿಯ ಕರ್ನಾಟಕ ರಾಜ್ಯ ಪೊಲೀಸ್ ಆಕಾಡೆಮಿ ಆವರಣದಲ್ಲಿರುವ ನಮ್ಮ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸುತ್ತ ಹಾರಾಡುವುದನ್ನು ನಾನು ಆಕಸ್ಮಿಕವಾಗಿ ಕಂಡೆನು. ಮೊದಲಿನಿಂದಲೂ ನನಗೆ ಪಕ್ಷಿಗಳೆಂದರೆ ಪಂಚಪ್ರಾಣ. ಅದರಲ್ಲೂ ಈ ಅತಿಥಿಗಳ ಆಗಮನದಿಂದ ಸಂತೋಷವಾಗಿ ಅವುಗಳ ಆಗುಹೋಗುಗಳ ಬಗ್ಗೆ ಕೆಲಸದ ನಡುವೆಯೂ ಗಮನಿಸಲು ಶುರು ಮಾಡಿದೆ.

ಕಛೇರಿಯ ಹಚ್ಚ ಹಸಿರಿನ ಪರಿಸರದಲ್ಲಿ ಎರಡೂ ಜೋಡಿಗಳು ಆಗಾಗ್ಗೆ ಪ್ರಣಯದಲ್ಲಿ ತೊಡಗಿ ಸ್ವಚ್ಛಂದವಾಗಿ ಹಾರಾಡುತ್ತಿದ್ದವು. ನೋಡ ನೋಡುತ್ತಿದ್ದಂತೆ ಕೆಲವು ದಿನಗಳ ಬಳಿಕ ಆ ಗಂಡು ಮತ್ತು ಹೆಣ್ಣು ಹಕ್ಕಿಗಳು ಕಛೇರಿಯ ಒಳಗಿರುವ ಚಿಕ್ಕ ಹೂದೋಟದಲ್ಲಿದ್ದ ದಾಸವಾಳ ಗಿಡಕ್ಕೆ ಆಗಾಗ್ಗೆ ಭೇಟಿ ಕೊಡಲು ಶುರುಮಾಡಿದವು. ಮೊದಮೊದಲು ಇವು ಯಾವ ಕಾರಣಕ್ಕೆ ದಾಸವಾಳ ಗಿಡಕ್ಕೆ ಬಂದು ಹೋಗುತ್ತಿವೆ ಎಂಬುದು ತಿಳಿಯಲಿಲ್ಲ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಅವು ತಮ್ಮ ಗೂಡಿಗೆ ಸುರಕ್ಷಿತ ತಾಣದ ಹುಡುಕಾಟ ನಡೆಸುತ್ತಿವೆ ಎನ್ನುವುದು ತಿಳಿಯಿತು. ಉಷಾ ಮಾನವನ ಆಸು ಪಾಸು ಅಷ್ಟೇನೂ ಅವುಗಳಿಗೆ ತೊಂದರೆ ಇಲ್ಲದಿರುವದು ಖಾತ್ರಿಯಾಯಿತು. ಎರಡು ಹಕ್ಕಿಗಳು ಹುಲ್ಲು, ಕಡ್ಡಿಗಳನ್ನು ಒಂದಾದ ಮೇಲೊಂದರಂತೆ ತಮ್ಮ ಕೊಕ್ಕಿನಿಂದ ಹಿಡಿದು ತಂದು ಗೂಡು ಕಟ್ಟಲು ಆರಂಭಿಸಿದವು. ದಿನಗಳು ಕಳೆದಂತೆ ಬಹಳಷ್ಟು ಎಲೆಗಳಿಂದ ಕೂಡಿದ್ದ ಕೊಂಬೆಗಳ ಮಧ್ಯೆ ಒಂದು ಕಪ್ ಆಕಾರದ ಗೂಡು ಕಂಡು ಬಂದಿತು. ಇದರಿಂದ ನನಗೆ ಅವುಗಳ ಮೇಲಿನ ಆಸಕ್ತಿ ಇನ್ನಷ್ಟು ಹೆಚ್ಚಾಯಿತು.

ಹೆಚ್ಚಿನ ವಿನಯ ಮತ್ತು ನಿರ್ಭಿತ ಸ್ವಭಾವವನ್ನು ಹೊಂದಿದ ಈ ಅತಿಥಿ ಪಕ್ಷಿಗಳ ಆಕಾರ, ಬಣ್ಣ, ಗಾತ್ರ ಹಾಗೂ ಇತರೆ ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಿಕೊಂಡು ಹತ್ತಿರದ ಗ್ರಂಥಾಲಯಕ್ಕೆ ಭೇಟಿ ನೀಡಿ ಪಕ್ಷಗಳ ಕುರಿತ ಪುಸ್ತಕಗಳನ್ನು ಗಮನಿಸಿದಾಗ ಅವುಗಳು “ಕೆಂಪು ಮೀಸಿಯ ಬುಲ್ಬುಲ್” (ಕೆಂಪು-ವಿಸ್ಕರ್ಡ್ ಬುಲ್ಬುಲ್) ಹಕ್ಕಿಗಳು ಎಂಬುದು ಗೊತ್ತಾಯಿತು. ಇದರ ವೈಜ್ಞಾನಿಕ ಹಸಿರು “ಪಿಕ್ನೋನೋಟಸ್ ಜೋಕೋಸಸ್” ಎಂದು. ಇದು ಬುಲ್ಬುಲ್ ಕುಟುಂಬದ ಸದಸ್ಯನಾಗಿದ್ದು ಸಾಮಾನ್ಯವಾಗಿ ಏಷಿಯಾ ಖಂಡದಲ್ಲಿ ಕಂಡುಬರುತ್ತದೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಕೆಂಪು ಮೀಸೆಯ ಬುಲ್‌ಬುಲ್‌ ಪಕ್ಷಿಯು ಗುಬ್ಬಚ್ಚಿಗಿಂತಲೂ ಕೊಂಚ ದೊಡ್ಡದು ಹಾಗೂ ಮೈನಾಗಿಂತಲೂ ಕೊಂಚ ಸಣ್ಣ ಗಾತ್ರದ ಹಕ್ಕಿ. ಇದರ ಗಾತ್ರ ಸುಮಾರು 20ಸೆ.ಮೀ. ಕಪ್ಪು ಬಣ್ಣದ ಜುಟ್ಟು, ಬಿಳಿಯ ಎದೆಭಾಗ, ಕೆಂಪು ಬಣ್ಣದ ಗಲ್ಲ (ಕೆನ್ನೆ), ಕಂದು ಬಣ್ಣದ ಬೆನ್ನು ಹಾಗೂ ಬಾಲ ಈ ಹಕ್ಕಿಯ ಪ್ರಮುಖ ಗುರುತಿನ ಚಿಹ್ನೆಗಳಾಗಿವೆ. ಗಾತ್ರದಲ್ಲಿ ಗಂಡು ಹಕ್ಕಿಯು ಹೆಣ್ಣು ಹಕ್ಕಿಗಿಂತ ಚಿಕ್ಕದಾಗಿರುತ್ತದೆ. ಈ ಹಕ್ಕಿಯು ಹಣ್ಣು, ಮಕರಂದ ಹಾಗೂ ಕ್ರಿಮಿಕೀಟಗಳನ್ನು ಆಹಾರವಾಗಿ ಸೇವಿಸುತ್ತದೆ. ಈ ಪುಟ್ಟ ಹಕ್ಕಿಯನ್ನು ನಗರಗಳ ಉದ್ಯಾವನಗಳಲ್ಲಿಯೂ ಕಾಣಬಹುದಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇವುಗಳ ಸಂತಾನಾಭಿವೃದ್ಧಿ ವರ್ಷಕ್ಕೆ ಒಂದು ಅಥವಾ ಎರಡು ಭಾರಿ ಸಂಭವಿಸಬಹುದು. ಬಟ್ಟಲಿನಾಕಾರದ  ಗೂಡನ್ನು ಹುಲ್ಲು, ಬೇರು, ಕಡ್ಡಿ, ತೊಗಟೆಪಟ್ಟಿ ಹಾಗೂ ಕಾಗದಗಳಿಂದ ನಿರ್ಮಿಸುತ್ತದೆ. ಗೂಡು ಕಟ್ಟುವ ಕೌಶಲ್ಯ ನಿಜವಾಗಿಯೂ ಬೆರಗುಗೊಳಿಸುವಂತಹದ್ದು. ಗೂಡು ನಿರ್ಮಿಸಿದ ಕೆಲವೇ ದಿನಗಳಲ್ಲಿ ಹೆಣ್ಣು ಪಕ್ಷಿಯು ಮೊಟ್ಟೆಗಳನ್ನಿಟ್ಟು ಕಾವು ಕೊಡಲು ಆರಂಭಿಸಿತು. ಕೆಲವು ಸಂದರ್ಭದಲ್ಲಿ ತಾಯಿ ಪಕ್ಷಿಯು ಆಹಾರಕ್ಕೆಂದು ಹೊರಗಡೆ ಹೋಗುತ್ತಿತ್ತು. ಆ ಸಂದರ್ಭದಲ್ಲಿ ನಾನು ಕುತೂಹಲದಿಂದ ಗೂಡನ್ನು ಗಮನಿಸಿದಾಗ ಮೂರು ಮೊಟ್ಟೆಗಳು ಕಾಣಿಸಿದವು. ಮೊಟ್ಟೆಗಳು ಮಸುಕು ಮಸುಕಾದ ಬೂದು ಬಣ್ಣವನ್ನು ಹೊಂದಿದ್ದು ಅಲ್ಲಲ್ಲಿ ಕಪ್ಪು ಮಚ್ಚೆಗಳಿಂದ ಕೂಡಿದ್ದವು. ಗೂಡಿನಲ್ಲಿ ಮೊಟ್ಟೆಗಳನ್ನು ನೋಡಿ ನಾನು ಪುಳಕಿತನಾದೆ ಎಂಬುದರಲ್ಲಿ ಬೇರೆ ಮಾತಿಲ್ಲ.

ಹೀಗೆ ಸರಿಸುಮಾರು ಹತ್ತು ದಿನಗಳ ಬಳಿಕ ನಾನು ಎಂದಿನಂತೆ ಕಛೇರಿಗೆ ಹೋದಾಗ ಪುಟ್ಟ ಮರಿಗಳು ಪಿಚುಗುಟ್ಟುವ ಶಬ್ದವನ್ನು ಕೇಳಿ ಆಶ್ಚರ್ಯವಾಯಿತು. ಆಗಲೇ ಕೆಲವು ನನ್ನ ಸಹೋದ್ಯೋಗಿ ಮಿತ್ರರು ಕುತೂಹಲದಿಂದ ದಾಸವಾಳದ ಗಿಡದ ಗೂಡಿನಲ್ಲಿದ್ದ ಮರಿಗಳನ್ನು ನೋಡುತ್ತಾ ಅವುಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಎಲ್ಲರೂ ಸಂಜೆ ನಿರ್ಗಮಿಸಿದ ಬಳಿಕ ನಾನು ನಮ್ಮ ಕಛೇರಿಯ ಸಹಾಯಕರಾದ ಶ್ರೀ ರವಿ ಎಸ್. ತಾರಿಹಾಳನ ಸಹಾಯ ಪಡೆದು ಗೂಡಿನಲ್ಲಿದ್ದ ಮೂರು ಪುಟ್ಟ ಪಕ್ಷಿಗಳ ಫೋಟೋವನ್ನು ಕ್ಲಿಕ್ಕಿಸಿಕೊಂಡೆ. ಇದರಿಂದ ನನಗೆ ಬಹಳ ಆನಂದವೆನಿಸಿತು.

ಪೋಟೊ ತೆಗೆದ ಕೆಲವು ನಿಮಿಷಗಳ ಬಳಿಕ ಪುಟ್ಟ ಮರಿಗಳ ತಂದೆತಾಯಿಗಳಿಬ್ಬರು ತಮ್ಮ ತಮ್ಮ ಕೊಕ್ಕಿನಲ್ಲಿ ಕೀಟಗಳ ಹುಳಗಳನ್ನು ಹಿಡಿದುಕೊಂಡು ಗೂಡಿನ ಬಳಿ ಬಂದವು. ಮರಿಗಳ ಫೋಟೋ ಕ್ಲಿಕ್ಕಿಸಿಕೊಂಡದ್ದು ಅವುಗಳಿಗೆ ತಿಳಿಯಲಿಲ್ಲ! ಇಲ್ಲದಿದ್ದರೆ ಅವುಗಳ ಆಕ್ರಂದನವನ್ನು ನಾವು ಕೇಳಬೇಕಿತ್ತು. ಈ ಸಂದರ್ಭದಲ್ಲಿ ತೇಜಸ್ವಿಯವರ ಕಾಡಿನ ಕತೆಗಳಲ್ಲಿ ಮಾರನನ್ನು ಕಾಡು ಕೋಳಿಯೊಂದು ತನ್ನ ಅದ್ಭುತ ನಟನೆಯಿಂದ ಹೊಂಡಕ್ಕೆ ಬೀಳಿಸಿ, ಆತನ ಕುಡಿದ ಅಮಲನ್ನು ಇಳಿಸಿದ  ತಮಾಷೆಯ ಪ್ರಸಂಗದ ನೆನಪಾಯಿತು. ಎರಡು ಸಹ ಅತ್ಯಂತ ಗಾಬರಿ ಹಾಗೂ ಕಾಳಜಿಯಿಂದ ಗೂಡಿಗೆ ಬಂದವು. ಬಂದೊಡನೆ ತಮ್ಮ ಮರಿಗಳಿಗೆ ಆಹಾರವನ್ನು ನೀಡಿದ ರೀತಿ ಹಾಗೂ ಮರಿಗಳು ಅದನ್ನು ಪಡೆದ ಪರಿ ಅತ್ಯಂತ ಮನೋಹರವಾಗಿತ್ತು.

ಹೀಗೆಯೇ ನಿತ್ಯವೂ ಗಂಡು ಹೆಣ್ಣುಗಳೆರಡು ಕ್ರಮವಾಗಿ ಒಂದಾದ ಮೇಲೊಂದರಂತೆ ಹಣ್ಣು, ಮಕರಂಧ ಹಾಗೂ ಬಗೆ ಬಗೆಯ ಕೀಟಗಳ ಹುಳುಗಳನ್ನು ಕೊಕ್ಕಿನಿಂದ ಹಿಡಿದು ತಂದು ಚಿಲಿಪಿಲಿ ಎನ್ನುತ್ತಾ ತಮ್ಮ ಗೂಡಿನ ಬಳಿ ಬರುತ್ತಿದ್ದವು. ಬಾಯಿ ತೆರೆದು ಆಹಾರಕ್ಕಾಗಿ ಕಾಯುತ್ತಿದ್ದ ತಮ್ಮ ಎಲ್ಲಾ ಮೂರು ಮರಿಗಳಿಗೆ ಕ್ರಮವಾಗಿ ತಂದ ಆಹಾರವನ್ನು ಅಕ್ಕರೆಯಿಂದ ನೀಡುತ್ತಿದ್ದವು. ಅದರಲ್ಲೂ ತಾಯಿ ಹಕ್ಕಿಯು ಅತ್ಯಂತ ಜೋಪಾನವಾಗಿ ತನ್ನ ಮರಿಗಳನ್ನು ಪೋಷಿಸುತ್ತಿರುವುದು ಕಂಡುಬಂತು. ಒಟ್ಟು ಮೂರು ಮರಿಗಳು ಹಾಗೂ ತಂದೆತಾಯಿ ಹಕ್ಕಿಗಳ ಇಂಪಾದ ಚಿಲಿಪಿಲಿ ಧ್ವನಿಯು ಇಡೀ ಕಛೇರಿಗೆ ಒಂದು ರೀತಿಯ ಹೊಸ ಕಳೆಯನ್ನು ತಂದುಕೊಟ್ಟಿತ್ತು!. ಕಛೇರಿಯ ಪ್ರತಿಯೊಬ್ಬ ಸಿಬ್ಬಂದಿಯೂ ಓಡಾಡುವಾಗ ಹಕ್ಕಿಗಳ ಗೂಡು ಹಾಗೂ ಮರಿಗಳನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಾ ತಮ್ಮ ಕೆಲಸದಲ್ಲಿ ತಲ್ಲೀನರಾಗಿರುತ್ತಿದ್ದರು.

ಸರಿಸುಮಾರು ಒಂದುವಾರದ ಬಳಿಕ ನೋಡನೋಡುತ್ತಿದ್ದಂತೆ ಎಲ್ಲಾ ಮೂರು ಮರಿಗಳು ಸ್ವಲ್ಪ ದೊಡ್ಡದಾಗಿ ಬೆಳೆದವು. ಅವುಗಳ ಆಕಾರ, ಬಣ್ಣ, ರೂಪ ಹಾಗೂ ಗಾತ್ರಗಳೆಲ್ಲವೂ ಬದಲಾದಂತೆ ಕಂಡಿತು. ಪುಟ್ಟ ಪುಟ್ಟ ರೆಕ್ಕೆಗಳು ಸಹ ಮೂಡಿಬಂದವು. ಮತ್ತೆರಡು ದಿನಗಳ ನಂತರ ಮರಿಗಳು ಇನ್ನಷ್ಟು ಬೆಳೆದಿದ್ದರಿಂದ ಅವುಗಳಿಗೆ ಗೂಡಿನಲ್ಲಿರಲು ಸ್ಥಳದ ಅಭಾವ ಉಂಟಾಗಿದ್ದನ್ನು ನಾನು ಗಮನಿಸಿದೆ. ನೋಡನೋಡುತ್ತಿದ್ದಂತೆ ಮರಿಗಳು ಗೂಡಿನಿಂದ ಸ್ವಲ್ಪ ದೂರದಲ್ಲಿ ಹಾರಿ ಸಾಲಾಗಿ ಬಂದು ಸಣ್ಣ ಗಿಡದ ಕೊಂಬೆಯ ಮೇಲೆ ಚಿವ್‌ಗುಡುತ್ತಾ ಕುಳಿತವು. ಮರಿಗಳು ಬೆಳೆದು ಸ್ವಲ್ಪ ದೊಡ್ಡವರಾಗಿದ್ದರೂ ಸಹ ತಂದೆ ತಾಯಿ ಪಕ್ಷಿಗಳು ತಮ್ಮ ಮಕ್ಕಳನ್ನು ಇನ್ನಷ್ಟು ಚೆನ್ನಾಗಿ ಬೆಳೆಸುವಲ್ಲಿ ನಿರತವಾಗಿದ್ದರ ದೃಶ್ಯ ಕಂಡುಬಂತು. ಅವುಗಳು ಇಲ್ಲದ ಸಮಯ ನೋಡಿ ಮರಿಗಳ ಪೋಟೋ ಕ್ಲಿಕ್ಕಿಸಿಕೊಂಡೆ. ಮರಿಗಳಿಗೆ ಪುಟ್ಟ ರೆಕ್ಕೆಗಳು ಮೂಡಿ ಬಂದಿದ್ದರೂ, ಬಾಲದ ಬೆಳವಣಿಗೆ ಇನ್ನೂ ಸಂಪೂರ್ಣವಾಗಿ ಆಗಿರಲಿಲ್ಲ.

ಆಶ್ಚರ್ಯದ ಸಂಗತಿ ಏನಂದರೆ ಮಾರನೇ ದಿನ ಮರಿಗಳು ಹಾರಲು ಪ್ರಯತ್ನಿಸಿ ಕಿಟಕಿ ಹಾಗೂ ನೆಲದ ಮೇಲೆ ದೊಪ್ಪನೆ ಬೀಳುತ್ತಿದ್ದವು. ಕೂಡಲೆ ತಂದೆತಾಯಿಗಳು ಪುರ‍್ರನೆ ಹಾರಿಬಂದು ಮೂರು ಮರಿಗಳು ಒಂದೇ ಜಾಗದಲ್ಲಿ ಸಾಲಾಗಿ ಕುಳಿತುಕೊಳ್ಳುವಂತೆ ಎಚ್ಚರಿಕೆ ನೀಡುತ್ತಾ ಆಹಾರವನ್ನು ತಂದುಕೊಡುತ್ತಿದ್ದವು. ತಂದೆತಾಯಿಗಳ ಮಾತನ್ನು ಮರಿಗಳು ಕಟ್ಟುನಿಟ್ಟಾಗಿ ಚಾಚು ತಪ್ಪದೆ ಕೂಡಲೆ ಪಾಲಿಸುತ್ತಿದ್ದನ್ನು ಕಂಡು ನಾನು ಮತ್ತು ನನ್ನ ಸಹೋದ್ಯೋಗಿ ಮಿತ್ರರು ಅಚ್ಚರಿಪಟ್ಟೆವು.

ಹೀಗೆ ಎರಡು ಮೂರು ದಿನಗಳ ಬಳಿಕ ಮರಿಗಳಿಗೆ ಬಾಲವು ಬಹುತೇಕ ಬೆಳೆದಿದ್ದನ್ನು ಗಮನಿಸಿದೆ. ವಾರದ ಕೊನೆಯ ದಿನವಾದ ಭಾನುವಾರದಂದು ಕಛೇರಿಗೆ ರಜೆ ಇತ್ತು. ಮಾರನೆದಿನ ಎಂದಿನಂತೆ ಸೋಮವಾರದಂದು ಕಛೇರಿಗೆ ಬಂದಾಗ ಅಲ್ಲಿ ಮರಿಗಳಾಗಲಿ ಅಥವಾ ಅದರ ತಂದೆತಾಯಿಗಳಾಗಲಿ ಕಾಣಸಿಗಲಿಲ್ಲ. ಬಹುಶಃ ಮರಿಗಳಿಗೆ ರೆಕ್ಕೆಗಳು ಸಂಪೂರ್ಣವಾಗಿ ಬೆಳೆದು ಹಾರಿಹೋಗಿದ್ದವು. ಆದರೆ ಅಪರೂಪದ ಅತಿಥಿಗಳಾಗಿ ಬಂದು ಹಾದು ಹೋದ ಕೆಂಪು ಮೀಸೆಯ ಬುಲ್ಬುಲ್‌ಗಳು ನನ್ನ ಮನಸ್ಸಿನಿಂದ ಮಾತ್ರ ಎಲ್ಲಿಯೂ ಹಾರಿಹೋಗದೆ ಸ್ಥಿರವಾಗಿವೆ.

ಕೆಂಪುಮೀಸೆಯ ಬುಲ್ಬುಲ್‌ಗಳ ಸಂಖ್ಯೆ ಕ್ಷೀಣಿಸಲು ಅವುಗಳು ನೆಲೆ ನಾಶವೇ ಪ್ರಮುಖ ಕಾರಣವಾಗಿದೆ. ಇಷ್ಟೆ ಅಲ್ಲದೆ ಗೊಬ್ಬರ, ಕೀಟನಾಶಕ ತಿಂದು ಅವುಗಳು ಸಾಯುತ್ತಿವೆ. ಸ್ನೇಹಜೀವಿಯಾದ ಬುಲ್ಬುಲ್‌ಗಳನ್ನು ಕಳೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸುವ ಅಗತ್ಯವಿದೆ. ಪ್ರಕೃತಿಯ ಕೊಂಡಿಯಾಗಿರುವ ಕೆಂಪು ಮೀಸೆಯ ಬುಲ್ಬುಲ್‌ಗಳ ಸಂರಕ್ಷಣೆಗೆ ನಾವು ಮೊದಲು ಮುಂದಾಗೋಣ. ಪರಿಸರ ಸ್ನೇಹಿ ಯೋಜನೆಗಳನ್ನು ಹೆಚ್ಚು ಹೆಚ್ಚಾಗಿ ರೂಡಿಸಿಕೊಳ್ಳುವುದರ ಮೂಲಕ ಪುಟ್ಟ ಪಕ್ಷಿಗಳಾದ ಬುಲ್ಬುಲ್ ಗಳನ್ನು ಪ್ರಕೃತಿಯ ಒಳಿತಿಗಾಗಿ ರಕ್ಷಿಸಲು ತುರ್ತು ಕೈಜೋಡಿಸೋಣ.





No comments:

Post a Comment