Friday, June 4, 2021

ಸವಿಜ್ಞಾನ ಇ-ಪತ್ರಿಕೆಯ ಜೂನ್ - 2021ರ ಲೇಖನಗಳು

ಸವಿಜ್ಞಾನ ಇ-ಪತ್ರಿಕೆಯ ಜೂನ್ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

1. ಪ್ರಾಣಿಪ್ರಪಂಚದಲ್ಲಿ ಸುವರ್ಣ ಅನುಪಾತದ ಪ್ರಯೋಗ  - ಡಾ.ಬಾಲಕೃಷ್ಣ ಅಡಿಗ

2. ಆಹಾ ! ಗುಲಗಂಜಿ !!  - ರಾಮಚಂದ್ರ ಭಟ್ ಬಿ.ಜಿ

3. ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಸರಳವೋ ಸಂಕೀರ್ಣವೋ ?  - ಡಾ. ಪ್ರಸನ್ನ ಕುಮಾರ್  

4. ಶಿಕ್ಷಣದಲ್ಲಿ ಆಟಿಕೆಗಳ ಬಳಕೆ – ಒಂದು ಪ್ರಯೋಗ  - ಸಿ. ಎನ್. ಅನಿಲ್ ಕುಮಾರ್

5. ಕಾಲುಗಳಿಂದ ರುಚಿ ನೋಡುವ ಪ್ರಾಣಿ......ಅಕ್ಟೋಪಸ್ ! - ಗಜಾನನ ಭಟ್

6. ಪರಿವರ್ತನೆಯ ಹರಿಕಾರ ಪರಮೇಶ್ವರಯ್ಯ - ಗುರುದತ್

7. ಮ್ಯೂಕರ್ ಎಂಬ ಅವಕಾಶವಾದಿ ಶಿಲೀಂಧ್ರ - ತಾಂಡವಮೂರ್ತಿ ಎ. ಎನ್.

ಒಗಟುಗಳು - ರಾಮಚಂದ್ರ ಭಟ್ ಬಿಜಿ ಮತ್ತು ಶ್ರೀನಿವಾಸರೆಡ್ಡಿ ತುಮಕೂರು

ವ್ಯಂಗ್ಯಚಿತ್ರಗಳು - ಶ್ರೀಮತಿ ಬಿ. ಜಯಶ್ರೀ ಶರ್ಮ


ಸಂಪಾದಕರ ಡೈರಿಯಿಂದ

ಜೂನ್ ತಿಂಗಳು ಬಂತೆಂದರೆ, ನಮಗೆ ನೆನಪಾಗುವುದು ‘ವಿಶ್ವ ಪರಿಸರ ದಿನಾಚರಣೆ. ‘ ಆದರೆ, ಅದರ ಹೊಸ್ತಿಲಲ್ಲೇ ನಾವು ಖ್ಯಾತ ಪರಿಸರವಾದಿ, ವೃಕ್ಷಪ್ರೇಮಿ ಸುಂದರಲಾಲ್ ಬಹುಗುಣ ಅವರನ್ನು ಕಳೆದುಕೊಂಡದ್ದು ಅತ್ಯಂತ ಖೇದದ ಸಂಗತಿ. ತಮ್ಮ “ಚಿಪ್ಕೋ” ಚಳುವಳಿಯ ಮೂಲಕ ಮನೆಮಾತಾಗಿದ್ದ ಬಹುಗುಣರ ಸಾವು ಪರಿಸರ ಕ್ಷೇತ್ರದಲ್ಲಿ ಒಂದು ಶೂನ್ಯವನ್ನೇ ಸೃಷ್ಟಿಸಿದೆ.  ಮರಗಳನ್ನು ಅಪ್ಪಿಕೊಳ್ಳುತ್ತಾ, ಮಾನವ ಮತ್ತು ಪರಿಸರದ ನಡುವಿನ ಸಂಬಂಧಗಳನ್ನು ನೆನಪಿಸಿದ ಆ ಮಹಾ ಚೇತನಕ್ಕೆ “ಸವಿಜ್ಞಾನ” ತಂಡದ ಪರವಾಗಿ ಭಾವಪೂರ್ಣ ವಿದಾಯ. ಅವರ ಪರಿಸರ ಕಾಳಜಿಯ ಕೆಲವು ಅಂಶಗಳನ್ನಾದರೂ ಅಳವಡಿಸಿಕೊಂಡು, ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ಜೂನ್ ತಿಂಗಳ ‘ಸವಿಜ್ಞಾನ’ ನಿಮ್ಮ ಓದಿಗಾಗಿ ಹಲವು ಬಗೆಯ ವಿಷಯ ವೈವಿಧ್ಯವನ್ನು ಒಳಗೊಂಡು ಸಿದ್ಧವಾಗಿದೆ. ಈ ವರ್ಷದ ‘ವಿಶ್ವ ಪರಿಸರ ದಿನ’ದ ಘೋಷವಾಕ್ಯವಾದ ಪರಿಸರವ್ಯವಸ್ಥೆಯ ಮರುಸ್ಥಾಪನೆಯನ್ನು ಗಮನದಲ್ಲಿರಿಸಿಕೊಂಡು ಡಾ. ಪ್ರಸನ್ನಕುಮಾರ್ ಬರೆದಿರುವ ವಿಶ್ಲೇಷಣಾತ್ಮಕವಾದ ಲೇಖನ ಈ ಸಂಚಿಕೆಯ ವಿಶೇಷ. ಜೊತೆಗೆ, ಪ್ರಾಣಿಗಳಲ್ಲಿ ಸುವರ್ಣ ಅನುಪಾತದ ಬಗ್ಗೆ, ಆಕ್ಟೋಪಸ್ ಬಗ್ಗೆ, ಮ್ಯೂಕರ್ ಶಿಲೀಂದ್ರದ ಬಗ್ಗೆ ಹಾಗೂ ಗುಲಗಂಜಿಯ ಬಗ್ಗೆ ಮಾಹಿತಿಪೂರ್ಣ ಲೇಖನಗಳಿವೆ. ಶಿಕ್ಷಣದಲ್ಲಿ ಆಟಿಕೆಗಳ ಬಳಕೆಯ ಕುರಿತು ಒಂದು ಲೇಖನವಿದೆ. ಶಿಕ್ಷಕ ಬಂಧುಗಳಿಗೆ ಪ್ರೇರೇಪಣೆಯಾಗಬಲ್ಲ ತೆರೆ ಮರೆಯ ಸಾಧಕ, ಶಿಕ್ಷಕ ಪರಮೇಶ್ವರಯ್ಯ ಅವರ ಸಾಧನೆಯ ಒಂದು ಕಿರು ನೋಟವೂ ಇದೆ. ನಿಮ್ಮ ಮೆಚ್ಚುಗೆಯ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ಇದು ‘ಸವಿಜ್ಞಾನ’ದ ಆರನೆಯ ಸಂಚಿಕೆ. ವಿಜ್ಞಾನದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಲೇಖನಗಳಿರುವ ಈ ಸಂಚಿಕೆ ಎಂದಿನಂತೆ ನಿಮಗೆ ಇಷ್ಟವಾಗಬಹುದೆಂಬ ನಂಬಿಕೆ ನಮ್ಮದು.  ಸಂಚಿಕೆಯ ಹೂರಣದ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬ್ಲಾಗ್‌ನಲ್ಲಿಯೂ ಸೂಚಿಸಬೇಕೆಂದು ನಮ್ಮ ಕೋರಿಕೆ.   

ಡಾ, ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


ಪ್ರಾಣಿ ಪ್ರಪಂಚದಲ್ಲಿ ಸುವರ್ಣ ಅನುಪಾತದ ಪ್ರಯೋಗ !

ಪ್ರಾಣಿ ಪ್ರಪಂಚದಲ್ಲಿ ಸುವರ್ಣ ಅನುಪಾತದ ಪ್ರಯೋಗ !

ಲೇಖಕರು: ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು 




ಕಳೆದ ಸಂಚಿಕೆಯ ಲೇಖನದಲ್ಲಿ ಸಸ್ಯಗಳಲ್ಲಿ ಕೊಂಬೆಗಳ, ಎಲೆಗಳ, ಪುಶ್ಪದಳಗಳ ಹಾಗೂ ಬೀಜಗಳ ಜೋಡಣೆಯಲ್ಲಿ ಯಾವರೀತಿ ಫಿಬೋನಾಚಿ ಸಂಖ್ಯೆಗಳ ಹಾಗೂ ಸುವರ್ಣ ಅನುಪಾತದ ಪಾಲನೆಯಾಗಿದೆ ಮತ್ತು ಇದರಿಂದ ಸಸ್ಯಗಳಿಗೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಹಲವಾರು ಉದಾಹರಣೆಗಳ ಸಹಾಯದಿಂದ ತಿಳಿದುಕೊಂಡೆವು ಅಲ್ಲವೇ? ಅದೇ ರೀತಿ, ಸುವರ್ಣ ಅನುಪಾತದ ಪ್ರಭಾವ ಪ್ರಾಣಿ ಪ್ರಪಂಚದಲ್ಲಿಯೂ ಕೂಡ ಇದೆ ಎಂಬುದಕ್ಕೆ ನಮಗೆ ನೂರಾರು ಕುತೂಹಲಕರ ಉದಾಹರಣೆಗಳು ಕಾಣಸಿಗುತ್ತವೆ !

ಆಹಾ ! ಗುಲಗಂಜಿ!!

ಆಹಾ ! ಗುಲಗಂಜಿ!! 

ಲೇಖಕರು:    ರಾಮಚಂದ್ರ ಭಟ್ ಬಿ.ಜಿ.

ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,

ಮೈಸೂರು  ರಸ್ತೆ, ಬೆಂಗಳೂರು

ಮೂಡಣದಲ್ಲಿ ಅರುಣನೆದ್ದು ಬೆಳ್ಳನೆಯ ಬೆಳಗನ್ನು ಚೆಲ್ಲುವ ಹೊತ್ತನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಕಾಲಭೈರವೇಶ್ವರ ಸ್ವಾಮಿಯ ನೆಲೆವೀಡಾದ ಆದಿಚುಂಚನಗಿರಿಯ ಹಸಿರು ಸಿರಿ ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಹಸಿರು ಹೊದ್ದ ಭೂರಮೆಯ ಸೌಂದರ‍್ಯವನ್ನು ಮಳೆಯ ತುಂತುರು ಇಮ್ಮಡಿಸಿತ್ತು. ಇಂತಿಪ್ಪ ಇಳೆಯ ಮಡಿಲಿಗೆ ಮಳೆಯೊಡನೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿಜ್ಞಾನ ಸಂಪನ್ಮೂಲ ಶಿಕ್ಷಕರು ತರಬೇತಿಗಾಗಿ ಆಗಮಿಸಿದ್ದರು. ರಾಜ್ಯಮಟ್ಟದ ಈ ತರಬೇತಿಯನ್ನು ಹೆಚ್ಚು ಆಕರ್ಷಣೀಯವಾಗಿಸುವ ಮತ್ತು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನಮ್ಮದಾಗಿತ್ತು. ಈ ಉದ್ದೇಶದಿಂದ ನಾವು ವೈವಿಧ್ಯಮಯ ಚಟುವಟಿಕೆಗಳನ್ನು ರೂಪಿಸಿಕೊಂಡಿದ್ದೆವು. ಅವುಗಳಲ್ಲಿ ಸ್ಥಳೀಯ ಪರಿಸರದ ಅಧ್ಯಯನವನ್ನೂ ಸೇರಿಸಿದ್ದೆವು.

ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ – ಸರಳವೋ…? ಸಂಕೀರ್ಣವೋ…??

ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಸರಳವೋ? ಸಂಕೀರ್ಣವೋ??

ಲೇಖಕರು:     ಡಾ. ಡಿ. ಆರ್. ಪ್ರಸನ್ನಕುಮಾರ್

ಪರಿಸರ ಶಿಕ್ಷಣದ ಹವ್ಯಾಸಿ ಲೇಖಕರು


 1972 ಜೂನ್ 5 ರಿಂದ 10 ರವರೆಗೆ ಸ್ವೀಡನ್ ದೇಶದ ಸ್ಟಾಕ್ ಹೋಮ್ ನಲ್ಲಿ ನಡೆದ ಮಾನವ-ಪರಿಸರವನ್ನು ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮೊತ್ತ ಮೊದಲಬಾರಿಗೆ ಮಾನವರನ್ನು ಹಾಗೂ ಪರಿಸರವನ್ನು ಕುರಿತು ಚಿಂತನೆ ನೆಡೆಯಿತು. ಜಾಗತಿಕ ಸಮ್ಮೇಳನದಲ್ಲಿ ಪರಿಸರ ಶಿಕ್ಷಣವನ್ನು ಒಳಗೊಂಡಂತೆ ಐದು ಮುಖ್ಯ ಪಾರಿಸಾರಿಕ ವಿಷಯಗಳ ಬಗ್ಗೆ ಗಹನವಾದ ಚರ್ಚೆ ನಡೆಯಿತು. ಪಾರಿಸಾರಿಕ ವಿಷಯಗಳನ್ನು ಅಂತರರಾಷ್ಟ್ರೀಯ ರಾಜನೈತಿಕ ಕಾರ್ಯಸೂಚಿಯಲ್ಲಿ ಸೇರಿಸಿದ ಹೆಗ್ಗಳಿಕೆ ಸಮ್ಮೇಳನದ್ದು.  ಹೀಗಾಗಿ ಸಮ್ಮೇಳನವು ಪರಿಸರದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಮಾನವ ಪರಿಸರದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಜನರನ್ನು ಪ್ರೋತ್ಸಾಹಿಸಲು ಹಾಗೂ ಮಾರ್ಗದರ್ಶನ ನೀಡಲು ಸರ್ವಸಮ್ಮತವಾದ ದೃಷ್ಟಿಕೋನದ ಮತ್ತು ತತ್ವಗಳ ಅವಶ್ಯಕತೆ ಇದೆ ಎಂಬುದರ ಆಧಾರದ ಮೇಲೆ ಅನೇಕ ಮುಖ್ಯ ಅಂಶಗಳನ್ನು ಪ್ರಕಟಿಸಲಾಯಿತು. ಇದರಿಂದಾಗಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳಿಗೆ ರಾಷ್ಟ್ರೀಯ ನೀತಿಗಳನ್ನು ರಚಿಸಲು ಒತ್ತಾಸೆಯಾಯಿತು. ಸಮ್ಮೇಳನದಿಂದಾಗಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಆರಂಭವಾಯಿತು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು, ಜಾಗತಿಕ ಸಮ್ಮೇಳನದ ನೆನಪಿಗಾಗಿ ಪ್ರತಿವರ್ಷ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಹಾಗೂ ಪ್ರತಿ ದಶಕದ ಆಚರಣೆಗಳನ್ನು ಒಂದು ಘೋಷವಾಕ್ಯದಡಿಯಲ್ಲಿ ಒಟ್ಟುಗೂಡಿಸುತ್ತದೆ.

ಶಿಕ್ಷಣದಲ್ಲಿ ಆಟಿಕೆಗಳ ಬಳಕೆ – ಒಂದು ಪ್ರಯೋಗ

ಶಿಕ್ಷಣದಲ್ಲಿ ಆಟಿಕೆಗಳ ಬಳಕೆ ಒಂದು ಪ್ರಯೋಗ

ಲೇಖಕರು:   ಅನಿಲ್ ಕುಮಾರ್ ಸಿ.ಎನ್. 
ಸರ್ಕಾರಿ ಪ್ರೌಢಶಾಲೆ  ಅರಳಾಳುಸಂದ್ರ,
ರಾಮನಗರ ತಾ|| 
ರಾಮನಗರ ಜಿಲ್ಲೆ 

 ಆಟಿಕೆಗಳು ಅಂದ್ರೆ ಏನೋ ಖುಷಿ, ಮನಸ್ಸಿಗೆ ಹಿತ, ಕೈಗೆ ಸಿಕ್ಕ ಆಟಿಕೆಯನ್ನು ಹಿಡಿದು ಒಮ್ಮೆಯಾದರು ಆಟವಾಡಿಯೇ ತೀರಬೇಕೆನ್ನುವ ಬಯಕೆ. ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಮಕ್ಕಳಿಗೆ ಆಟಿಕೆಗಳೊಂದಿಗೆ ಸಮಯ ಕಳೆಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಆಟಿಕೆಗಳನ್ನು ಇಷ್ಟ ಪಡುವಷ್ಟು ಅಥವಾ ಅದರೊಟ್ಟಿಗೆ ಕಾಲ ಕಳೆಯುವುದಕ್ಕೆ ತೋರಿಸುವಷ್ಟು ಅಸಕ್ತಿಯನ್ನು ಪಾಠ ಕಲಿಯಲು ನೀಡುವುದಿಲ್ಲ ಎಂದು ಶಿಕ್ಷಕರಾದ ನಾವುಗಳು ಬಹಳಷ್ಟು ಬಾರಿ ಗಮನಿಸಿ, ಮಕ್ಕಳಿಗೂ ಹೇಳಿದ್ದುಂಟು. ಹೌದಲ್ವಾ?

ಕಾಲುಗಳಿಂದ ರುಚಿ ನೋಡುವ ಪ್ರಾಣಿ......ಅಕ್ಟೋಪಸ್ !

ಕಾಲುಗಳಿಂದ ರುಚಿ ನೋಡುವ ಪ್ರಾಣಿ......ಅಕ್ಟೋಪಸ್ ! 

ಲೇಖಕರು:    ಗಜಾನನ ಎನ್. ಭಟ್. (ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

                ಸರಕಾರಿ ಪ್ರೌಢಶಾಲೆ, ಉಮ್ಮಚಗಿ, 

                ಯಲ್ಲಾಪುರ ತಾ. ಶಿರಸಿ, ಉತ್ತರ ಕನ್ನಡ

ಜೀವಜಗತ್ತು ವಿಶೇಷಗಳ ಆಗರ. ದೈವಸೃಷ್ಟಿಯಲ್ಲಿ ಪ್ರತಿಯೊಂದೂ ವಿಶಿಷ್ಟ. ಒಂದು ಪ್ರಬೇಧದ ಜೀವಿಗಳಿಗಿಂತ ಇನ್ನೊಂದು ವಿಭಿನ್ನ. ಅಂತಹ ವಿಶಿಷ್ಟ, ವಿಚಿತ್ರ, ಜೀವಿಗಳಲ್ಲಿ ಅಕ್ಟೋಪಸ್ ಎಂಬ ಪ್ರಾಣಿಗಳ ಪ್ರಬೇಧವು ಅಗ್ರ ಸ್ಥಾನ ಪಡೆಯುತ್ತದೆ.

ಸಾಗರದ ಕುತೂಹಲಕಾರಿ ಪ್ರಾಣಿಗಳಲ್ಲೊಂದು ಎಂದು ಪರಿಗಣಿಸಲಾಗುವ ಅಕ್ಟೋಪಸ್ ಎಂಟು ಕಾಲುಗಳನ್ನು ಹೊಂದಿದೆ. ಇದರ ಕಾಲುಗಳ ಚಲನೆಯನ್ನು ನೋಡುವುದೇ ಮನಮೋಹಕ. ಕಾಲುಗಳು ಚಲನೆಯ ಜೊತೆಗೆ ಆಹಾರ ಸಂಗ್ರಹಿಸಲೂ ನೆರವಾಗುತ್ತದೆ. ಆಕ್ಟೋಪಸ್‌ಗಳು ವಿಶಾಲವಾದ ಸಮುದ್ರದಲ್ಲಿ ದಿನದ ಬಹುಪಾಲು ಸಮಯ ಆಹಾರದ ಬೇಟೆಗಾಗಿ ಸಂಚರಿಸುತ್ತಿರುವುದರಿಂದ ಒಂದೇ ಕಡೆ ನೆಲೆ ನಿಲ್ಲುವುದು ಅಪರೂಪ. ಕನಿಷ್ಠ 8 ರಿಂದ 10 ದಿನಗಳಿಗೆ ಒಮ್ಮೆ ಅವು ತಮ್ಮ ಆವಾಸವನ್ನು ಬದಲಿಸುತ್ತವೆ!. ಕಸದ ರಾಶಿಗಳು, ಕಲ್ಲಿನ ಪೊಟರೆಗಳು, ಮರಳಿನ ದಿಬ್ಬಗಳು ಮುಂತಾದ ಭೂಪ್ರದೇಶವನ್ನು ತಮ್ಮ ನೆಲೆಯಾಗಿಸಿಕೊಳ್ಳುತ್ತವೆ.

ಪರಿವರ್ತನೆಯ ಹರಿಕಾರ ಪರಮೇಶ್ವರಯ್ಯ

ಪರಿವರ್ತನೆಯ ಹರಿಕಾರ ಪರಮೇಶ್ವರಯ್ಯ

ಲೇಖಕರು: ಗುರುದತ್ತ ಎ


ರಾಜ್ಯದ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳ ನಡುವೆ ಸರ್ಕಾರಿ ಶಾಲೆಗಳು ಅಳಿವಿನಂಚಿಗೆ ಸೇರುವ ಅಪಾಯದಲ್ಲಿವೆ. ಶಿಕ್ಷಕರು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿದರೆ ಅಸಾಧ್ಯವಾದುದೇನು? ಸಾಧಿಸಿದರೆ ಸಬಳವನ್ನೂ ನುಂಗಬಹುದು ಎನ್ನುವುದು ಸುಳ್ಳೇ? ತಮ್ಮ ಸಾಧನೆಯಿಂದ ಪ್ರಪಂಚದ ಶಿಕ್ಷಣತಜ್ಞರನ್ನೇ ತಮ್ಮತ್ತ ಸೆಳೆಯಬಲ್ಲರು. ಇತರ ಶಿಕ್ಷಕರಿಗೆ ಮಾದರಿಯಾಗಿ ಸ್ಫೂರ್ತಿ ತುಂಬಬಲ್ಲರು. ಶಿಕ್ಷಣ ಕ್ಷೇತ್ರದಲ್ಲಿ ಸಂಚಲನವನ್ನು ಹುಟ್ಟುಹಾಕಿ ಹೊಸ ಮನ್ವಂತರಕ್ಕೆ ಮಹಾಭಾಷ್ಯ ಬರೆಯಬಲ್ಲರು.

ಮ್ಯೂಕರ್ ಎಂಬ ಅವಕಾಶವಾದಿ ಶಿಲೀಂಧ್ರ

ಮ್ಯೂಕರ್ ಎಂಬ ಅವಕಾಶವಾದಿ ಶಿಲೀಂಧ್ರ

ಲೇಖಕರು :  ತಾಂಡವಮೂರ್ತಿ ಎನ್.

ಸಹ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆಕಾರಮಂಗಲ

ಬಂಗಾರಪೇಟೆ ತಾಲ್ಲೂಕುಕೋಲಾರ ಜಿಲ್ಲೆ. 

ಒಂದು ಮಳೆ ಬಿತ್ತೋ ಇವುಗಳ ಸಂತಾನ ಅದೆಲ್ಲಿಂದ ಎದ್ದು ಬರುತ್ತೋ ? ಅಕ್ಷೋಹಿಣಿ ಸೈನ್ಯವೇ ಎದ್ದು ಬಂದಂತೆ ಧುತ್ತನೆ ಪ್ರತ್ಯಕ್ಷವಾಗುತ್ತವೆ. ಬಾಲ್ಯದಲ್ಲಿ ಇದೊಂದು ಪವಾಡದಂತೆ ಗೋಚರಿಸುತ್ತಿತ್ತು. ಉಪ್ಪಿನಕಾಯಿ ಜಾಡಿ, ಸಂಗ್ರಹಿಸಿದ ಹಣ್ಣು ತರಕಾರಿಗಳು ಕಾಳು ಕಡ್ಡಿಗಳು ಹೀಗೆ ಎಲ್ಲೆಲ್ಲಿ ಇವು ಕಂಡು ಬಂದಿಲ್ಲ ಹೇಳಿ? ಅದೆಷ್ಟು ಆಹಾರ ಪದಾರ್ಥಗಳನ್ನು ಹಾಳು ಮಾಡಿ ಅಜ್ಜಿಯ ಬಾಯಿಯಿಂದಿವು ಬೈಸಿಕೊಂಡಿಲ್ಲ? ಭಾರೀ ರೇಜಿಗೆಯ ವಿಷಯ!!

ವಿಜ್ಞಾನದ ಒಗಟುಗಳು - ಜೂನ್ 2021

 

1.      ನನಗೋ ಹಸಿರು ಅನಿಲದ ಒಲವು

ಈಗ ನನ್ನೊಳಗೋ ಎಲೆಕ್ಟ್ರಾನ್ ಗಳಿಗಿಂತ ಹೆಚ್ಚು ಪ್ರೋಟಾನುಗಳು

ಅವುಗಳಿಗಿಂತ ಹೆಚ್ಚು ನ್ಯೂಟ್ರಾನುಗಳು

ನಮ್ಮಿಬ್ಬರ ನಡುವಿನ  ನಂಟೋ  ಪ್ರಬಲ

ಮ್ಮ ರುಚಿ ಮರೆ ಜನ ಇರಲಾರರು

ಬಿಡಿಸ ಬಲ್ಲಿರೋ ಈ ಚತುರ ಸಿಕ್ಕು?

 

2.  ನನ್ನೊಳು ಅಡಗಿವೆ ಎರಡು ಮುಖ್ಯ ಭಾಗಗಳು.

ಒಂದರ ಮೊಗವೋ ಆಗಸದತ್ತ

ಇನ್ನೊಂದಕೋ ಭೂಮಿಯನ್ನೇ ಬಗೆವ ಉತ್ಸಾಹ

ಸೂಕ್ತ ಅನುಕೂಲ ದೊರೆತಲ್ಲಿ ಮೊಳೆವೆ ನಾ ತ್ರಿವಿಕ್ರಮನಂತೆ

ಆದರೆ ನಾನಡಗಿರುವೆ ಫಲದೊಳಗೆ 

ಗುರುತಿಸಿ ಹೇಳಬಲ್ಲಿರೇ ಜಾಣ ಜಾಣೆಯರು ನಮ್ಮವರನ್ನು?

  

3. ಶತ್ರುವಿನ ಶತ್ರು ಮಿತ್ರನೆಂಬ ತಂತ್ರದ ಫಲ ನಾನು

ಜೀವಿಗಳ ಜೀವರಾಸಾಯನಿಕ ಪಥವ ನಾಶಗೊಳಿಸಬಲ್ಲೆ

ನಾನೇ ಮೊದಲಲ್ಲದಿದ್ದರೂ ಜೀವಿಗಳಿಂದಲೇ ಹುಟ್ಟಿದ ಮೊದಲಿಗನೆ ನಾ

ಜಗ ಗೆಲ್ಲ ಹೊರಟ ವೀರನ ಹೆಸರುಳ್ಳವನೇ ನನ್ನ ಆವಿಷ್ಕಾರಿ

ಓ ಜಾಣ ಜಾಣೆಯರೇ ಒಡೆಯಬಲ್ಲಿರೇ ಈ ಒಗಟನು?

 

4. ಹಲವು ಜೀವಕೋಶಗಳ ಸಮುಚ್ಚಯವಿದು.

ಜೀವ ಹೋದರೂ ಬೃಹತ್ ಜೀವಕ್ಕೆ ಆಧಾರ

ರಾಸಾಯನಿಕಗಳ ಸಂಗ್ರಹ ಜೀವ ಕಳೆದರೂ ನೀರ ಸಾಗಿಸಲು ಸಹಕಾರಿ

ಕೈಗಾರಿಕಾ ಕಚ್ಚಾವಸ್ತು ರಸವಾಗಿ ಮಾನವನ ಮೈ ಮುಚ್ಚ ಬಲ್ಲದು.

ಜಾಣ ಜಾಣೆಯರೇ ವಿವರಿಸಬಲ್ಲಿರಾ ಈ ಒಗಟ?

ರಾಮಚಂದ್ರ ಭಟ್ ಬಿ. ಜಿ 

 

1.      ಬೆಳಕಿನ ರಾಶಿಯ ಸುತ್ತ ಸುತ್ತುತ್ತಲಿವೆ

ಈ ಆರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು....

ದಿನ ಕಳೆದು ವರ್ಷಗಳುರುಳಿದರೂ  ಹಾರಾಟಕ್ಕಿಲ್ಲ ವಿಶ್ರಾಂತಿ ...!

ಎಂದಿಗೂ  ಭೇಟಿಯಾಗದ ಇವು ದೂರಕೂ ಸರಿಯವು

ಬಲ್ಲಿದರು ರಟ್ಟು ಮಾಡುವಿರೆ ಈ ಗುಟ್ಟು

2.      ನಾವೇಳು ಜನ ಸ್ನೇಹಿತರು, ನಮ್ಮ ಮನೆಗಳು  ಬಲ ಭಾಗದಲ್ಲಿವೆ

ಸಾಧಾರಣವಾಗಿ ಯಾರ ಜೊತೆಗೂ  ಜಗಳವಿಲ್ಲ

ಕೊಡು-ಕೊಳ್ಳುವ ವ್ಯವಹಾರವಿಲ್ಲ

ಹಾಗಾದರೆ ಹೇಳಿವಿರೇ ನಾವು  ಯಾರು  ಎಂದು?

3.      ನನ್ನನ್ನು  ಹುರಿಯಲು ಗಾಳಿ ಬೇಕಿಲ್ಲ   ...

ಆದರೆ ನನ್ನ ಸ್ನೇಹಿತನ ಗಾಳಿ ಇಲ್ಲದೆ ಕಾಸಲಾರರು

ಯಾಕೆ ಹೀಗೆ ಮಾಡುವರೋ ಹೇಳ್ರಪ್ಪ ದಯವಿಟ್ಟು

ಗುರುತು ಸಿಕ್ಕೀತು ಹಿಡಿದರೆ ಬಿಡದೆ ಪಟ್ಟು !!

ಶ್ರೀನಿವಾಸ್. ವಿ.

ಶ್ರೀ ಶಿವಾನಂದ ಪ್ರೌಢ ಶಾಲೆ, ಸತ್ಯಮಂಗಲ. ತುಮಕೂರು.