ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, June 4, 2021

ಕಾಲುಗಳಿಂದ ರುಚಿ ನೋಡುವ ಪ್ರಾಣಿ......ಅಕ್ಟೋಪಸ್ !

ಕಾಲುಗಳಿಂದ ರುಚಿ ನೋಡುವ ಪ್ರಾಣಿ......ಅಕ್ಟೋಪಸ್ ! 

ಲೇಖಕರು:    ಗಜಾನನ ಎನ್. ಭಟ್. (ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

                ಸರಕಾರಿ ಪ್ರೌಢಶಾಲೆ, ಉಮ್ಮಚಗಿ, 

                ಯಲ್ಲಾಪುರ ತಾ. ಶಿರಸಿ, ಉತ್ತರ ಕನ್ನಡ

ಜೀವಜಗತ್ತು ವಿಶೇಷಗಳ ಆಗರ. ದೈವಸೃಷ್ಟಿಯಲ್ಲಿ ಪ್ರತಿಯೊಂದೂ ವಿಶಿಷ್ಟ. ಒಂದು ಪ್ರಬೇಧದ ಜೀವಿಗಳಿಗಿಂತ ಇನ್ನೊಂದು ವಿಭಿನ್ನ. ಅಂತಹ ವಿಶಿಷ್ಟ, ವಿಚಿತ್ರ, ಜೀವಿಗಳಲ್ಲಿ ಅಕ್ಟೋಪಸ್ ಎಂಬ ಪ್ರಾಣಿಗಳ ಪ್ರಬೇಧವು ಅಗ್ರ ಸ್ಥಾನ ಪಡೆಯುತ್ತದೆ.

ಸಾಗರದ ಕುತೂಹಲಕಾರಿ ಪ್ರಾಣಿಗಳಲ್ಲೊಂದು ಎಂದು ಪರಿಗಣಿಸಲಾಗುವ ಅಕ್ಟೋಪಸ್ ಎಂಟು ಕಾಲುಗಳನ್ನು ಹೊಂದಿದೆ. ಇದರ ಕಾಲುಗಳ ಚಲನೆಯನ್ನು ನೋಡುವುದೇ ಮನಮೋಹಕ. ಕಾಲುಗಳು ಚಲನೆಯ ಜೊತೆಗೆ ಆಹಾರ ಸಂಗ್ರಹಿಸಲೂ ನೆರವಾಗುತ್ತದೆ. ಆಕ್ಟೋಪಸ್‌ಗಳು ವಿಶಾಲವಾದ ಸಮುದ್ರದಲ್ಲಿ ದಿನದ ಬಹುಪಾಲು ಸಮಯ ಆಹಾರದ ಬೇಟೆಗಾಗಿ ಸಂಚರಿಸುತ್ತಿರುವುದರಿಂದ ಒಂದೇ ಕಡೆ ನೆಲೆ ನಿಲ್ಲುವುದು ಅಪರೂಪ. ಕನಿಷ್ಠ 8 ರಿಂದ 10 ದಿನಗಳಿಗೆ ಒಮ್ಮೆ ಅವು ತಮ್ಮ ಆವಾಸವನ್ನು ಬದಲಿಸುತ್ತವೆ!. ಕಸದ ರಾಶಿಗಳು, ಕಲ್ಲಿನ ಪೊಟರೆಗಳು, ಮರಳಿನ ದಿಬ್ಬಗಳು ಮುಂತಾದ ಭೂಪ್ರದೇಶವನ್ನು ತಮ್ಮ ನೆಲೆಯಾಗಿಸಿಕೊಳ್ಳುತ್ತವೆ.

ಮೂರು ಹೃದಯಗಳನ್ನು ಹೊಂದಿರುವುದು ಈ ಪ್ರಾಣಿಯ ಪ್ರಮುಖ ವಿಶೇಷ. ಒಂದು ಹೃದಯವು ದೇಹದ ಎಂಟೂ ಕಾಲುಗಳಿಗೆ ರಕ್ತ ಪೂರೈಕೆ ಮಾಡಿದರೆ, ಉಳಿದೆರಡು ಹೃದಯಗಳು ಕಿವಿರುಗಳ ದೇಹದ ಇತರ ಭಾಗಗಳಿಗೆ ರಕ್ತ ಪೂರೈಕೆ ಮಾಡುತ್ತದೆ. ನೀರಿನಲ್ಲಿ ಈಜುವಾಗ ಹೆಚ್ಚು ರಕ್ತ ಸಂಚಾರದ ಅವಶ್ಯಕತೆ ಉಂಟಾಗುವುದರಿಂದ ಆಕ್ಟೋಪಸ್‌ಗಳು ಈಜುವುದಕ್ಕಿಂತ ತೆವಳಿಕೊಂಡು ಹೋಗುವುದೇ ಹೆಚ್ಚು. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಇವು 9 ಮಿದುಳುಗಳನ್ನು ಹೊಂದಿದ್ದು, ಇವುಗಳಲ್ಲಿ 8 ಚಿಕ್ಕ ಮಿದುಳುಗಳಾಗಿದ್ದು, ಇವು ಕಾಲುಗಳ ಮೂಲಕ ಚಲನೆಯನ್ನು ನಿಯಂತ್ರಣ ಮಾಡಿದರೆ, ಉಳಿದೊಂದು ಮಿದುಳು ಕೇಂದ್ರ ಮಿದುಳಾಗಿದ್ದು ಉಳಿದ ಎಲ್ಲಾ ಮಿದುಳುಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಒಟ್ಟು ನ್ಯೂರಾನ್‌ಗಳಲ್ಲಿ ಮೂರನೇ ಎರಡರಷ್ಟು ಕಾಲುಗಳಲ್ಲಿಯೇ ಇವೆ. ಈ ಕಾರಣಕ್ಕಾಗಿ, ಆಕ್ಟೋಪಸ್‌ನ ಕಾಲುಗಳೂ “ಸ್ವತಂತ್ರವಾಗಿ ಯೋಚಿಸಬಲ್ಲುವು” ಎಂಬ ಜನಪ್ರಿಯ ಮಾತಿದೆ !

ಈ ಪ್ರಾಣಿಯ ಎಂಟೂ ಕಾಲುಗಳ ಕೆಳಭಾಗದಲ್ಲಿ ಹೀರುಬಟ್ಟಲುಗಳಿರುತ್ತವೆ. ಅವುಗಳಲ್ಲಿ ರುಚಿಗ್ರಾಹಕ ಜೀವಕೋಶಗಳಿರುತ್ತವೆ. ಈ ಕೋಶಗಳ ಸಹಾಯದಿಂದ ಆಕ್ಟೋಪಸ್ ತನ್ನ ಕಾಲಿನಿಂದ ಮುಟ್ಟುವ ವಸ್ತುವಿನ ರುಚಿಯನ್ನು ತಿಳಿಯುತ್ತದೆ !

ಆಕ್ಟೋಪಸ್‌ಗಳ ಜೀವಿತಾವಧಿ ಕೇವಲ 3 ರಿಂದ 5 ವರ್ಷಗಳು. ಕೇವಲ ಆರು ತಿಂಗಳು ಬದುಕುವ ಪ್ರಬೇಧಗಳೂ ಇವೆ. ಅವುಗಳಲ್ಲಿನ ವೈವಿಧ್ಯತೆಗನುಗುಣವಾಗಿ ಸುಮಾರು 300 ಪ್ರಬೇಧಗಳನ್ನು ಜೀವವಿಜ್ಞಾನಿಗಳು ಗುರುತಿಸಿದ್ದಾರೆ. ಅಕಶೇರುಕ ಗುಂಪಿಗೆ ಸೇರಿದ ಪ್ರಾಣಿಗಳಲ್ಲಿ ಇವು ಅತೀ ಬುದ್ಧಿವಂತ ಎಂಬುದು ಜೀವಶಾಸ್ತ್ರಜ್ಞರ ಅಭಿಪ್ರಾಯ.

ಹೆಚ್ಚಿನ ಅಕ್ಟೋಪಸ್‌ಗಳು ಆಕ್ರಮಣಕಾರಿಯಾಗಿದ್ದು, ತನ್ನ ವೈರಿಗಳಿಂದ ಅಪಾಯಕ್ಕೊಳಗಾಗುವ ಸಂದರ್ಭದಲ್ಲಿ ಖಂಡಿತವಾಗಿಯೂ ದಾಳಿ ನಡೆಸುವ ಸಾಧ್ಯತೆಯಿರುತ್ತದೆ. ಇವು ವಿಷಕಾರಿಯಾದರೂ ಹೆಚ್ಚಿನವು ಮಾರಣಾಂತಿಕ ಅಪಾಯಗಳನ್ನು ಉಂಟುಮಾಡುವುದಿಲ್ಲ. ಇವು ಕಚ್ಚಿದಾಗ ಭಾವು ಹಾಗೂ ರಕ್ತ ಸೋರಿಕೆ ಉಂಟಾಗಬಹುದು. ಆದರೆ, ನೀಲಿ ರಿಂಗಿನ ಅಕ್ಟೋಪಸ್ (Hapalochlaena lunutata)ಗಳು ಭಾರಿ ವಿಷಕಾರಿ ಹಾಗೂ ಅಪಾಯಕಾರಿಯಾದುವು. ಇವು ವಿಷವನ್ನು ಉಗುಳುವ ಸಾಮರ್ಥ್ಯ ಹೊಂದಿದ್ದು, ಕೆಲವೇ ನಿಮಿಷಗಳಲ್ಲಿ ಮನುಷ್ಯನನ್ನು ಕೊಲ್ಲಬಲ್ಲವು. ಇವುಗಳ ವಿಷ ನ್ಯೂರೋಟಾಕ್ಸಿನ್ ಹೊಂದಿದ್ದು, ಶ್ವಾಶಕೋಸ ಮತ್ತು ನರಕೋಶಗಳಿಗೆ ತೀವ್ರತರ ಸಮಸ್ಯೆಯನ್ನು ಉಂಟುಮಾಡಬಹುದು. ಅಲ್ಲದೆ, ಪಾರ್ಶ್ವವಾಯು ಉಂಟುಮಾಡಲು ಕಾರಣವಾಗಬಹುದು.

ಜೀವನದಲ್ಲಿ ಒಮ್ಮೆ ಮಾತ್ರ ಸಂತಾನೋತ್ಪತ್ತಿ ನಡೆಸುವುದು ಅಕ್ಟೋಪಸ್‌ಗಳ ಜೀವನದ ಇನ್ನೊಂದು ಅಚ್ಚರಿ. ಗಂಡು ತನ್ನ ವೀರ್ಯಗಳ ಗುಚ್ಚವನ್ನು ಉತ್ಪತ್ತಿ ಮಾಡಿ ಪಾದಗಳ ಮುಖಾಂತರ ಹೆಣ್ಣಿನ ಜನನಾಂಗ ವ್ಯೂಹಕ್ಕೆ ವರ್ಗಾವಣೆ ಮಾಡಲು ಕಾತರಿಸುತ್ತಿರುತ್ತದೆ. ಸಂತಾನೋತ್ಪತ್ತಿ ಪ್ರಕ್ರಿಯೆಯ ನಂತರ ಗಾತ್ರದಲ್ಲಿ ಚಿಕ್ಕದಾಗಿರುವ ಗಂಡು ಅಕ್ಟೋಪಸ್ ದೂರ ಸಾಗಿ, ಏಕಾಂಗಿಯಾಗಿದ್ದು ಕೊನೆಗೆ ಪ್ರಾಣ ಬಿಡುತ್ತದೆ. ಕೆಲವು ಪ್ರಬೇಧಗಳಲ್ಲಿ ಹೆಣ್ಣು ಅಕ್ಟೋಪಸ್ ಗಂಡಿನ ಕತ್ತು ಹಿಡಿದು ಸಾಯಿಸಿ ತಿನ್ನುವಂತಹ ವಿಚಿತ್ರ ಘಟನೆಗಳೂ ಜರುಗುತ್ತವೆ. ಹೆಣ್ಣು ಕೂಡಾ ಗುಂಪುಗಳಲ್ಲಿ ಸಹಸ್ರಾರು ಮೊಟ್ಟೆಗಳನ್ನು ಇಟ್ಟು, ಅವು ಮರಿಗಳಾದ ನಂತರ, ತಾನು ಆಹಾರ ತಿನ್ನುವುದನ್ನು ನಿಲ್ಲಿಸುತ್ತವೆ, ದೇಹದ ಜೀವಕೋಶಗಳು ಕ್ರಮೇಣ ನಶಿಸಿ ಹೋಗುತ್ತಿದ್ದಂತೆ, ತಾಯಿ ಪ್ರಾಣಿ ಸಾವಿನೆಡೆಗೆ ಪಯಣಿಸುತ್ತದೆ. ಮರಿಗಳಿಗೆ ತಮ್ಮ ತಂದೆ ತಾಯಿಯನ್ನು ನೋಡುವ ಸೌಭಾಗ್ಯ ದೊರೆಯುವುದಿಲ್ಲ. ಹಾಗಾಗಿ, ಈ ಜೀವಿಗಳಲ್ಲಿ ಪೋಷಕರ ಪಾಲನೆಯ ಕಾಳಜಿ ತಮ್ಮ ಮರಿಗಳಿಗೆ ಲಭ್ಯವಾಗುವುದಿಲ್ಲ.

ಅಕ್ಟೋಪಸ್‌ಗಳು ಮಾಂಸಹಾರಿಗಳಾಗಿದ್ದು, ತಮ್ಮ ದೇಹ ತೂಕದ ಮೂರರಷ್ಟನ್ನು ಆಹಾರ ಸೇವಿಸಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವು ಸಂಕೀರ್ಣವಾದ ನರವ್ಯೂಹ ವ್ಯವಸ್ಥೆ ಹೊಂದಿದ್ದು, ಕೆಲವು ಮೂಲಭೂತ ಅಂಶಗಳನ್ನು ಕಲಿಯಲು ಹಾಗೂ ನೆನಪಿನಲ್ಲಿಡಲು ಸಹಾಯಕ. ಈ ಜೀವಿಗಳ ಪ್ರಯೋಗಾಲಯ ಅಧ್ಯಯನದ ಪ್ರಕಾರ, ವಿವಿಧ ಆಕಾರ ಮತ್ತು ನಮೂನೆಗಳನ್ನು  ಹೊಂದಿದ್ದು, ವಿಜ್ಞಾನಿಗಳ ಪ್ರಕಾರ ಖುಷಿ, ಸಿಟ್ಟು, ತಪ್ಪಿತಸ್ಥ, ಮುಂತಾದ ಭಾವನೆಗಳನ್ನು  ಪ್ರದರ್ಶಿಸುವ ಸಾಮರ್ಥ್ಯ ಹೊಂದಿವೆ. ಇವುಗಳ ದೃಷ್ಟಿ ಮಂದವಾಗಿದ್ದು ಹೆಚ್ಚಿನ ತರಂಗಾಂತರಗಳಲ್ಲಿ ವಸ್ತುಗಳನ್ನು ನೋಡಬಹುದಾದ ದೃಷ್ಟಿ ಸಾಮರ್ಥ್ಯವನ್ನು ಹೊಂದಿವೆ. ಇತರ ಜೀವಿಗಳಂತೆ ನೋವನ್ನು ಅನುಭವಿಸುವ, ಅದರ ಅನುಭವವನ್ನು ಪಡೆಯುವ ಲಕ್ಷಣಗಳನ್ನು ಅಕ್ಟೋಪಸ್‌ಗಳು ತೋರುತ್ತವೆ.

ಹೀಗೆ ಈ ಜೀವಿಗಳು ಬಹಳಷ್ಟು ವಿಶೇಷತೆಗಳ ಆಗರವಾಗಿವೆ. ಅಕ್ಟೋಪಸ್‌ಗಳ  ಮೇಲೆ ಹೆಚ್ಚು, ಹೆಚ್ಚು ಸಂಶೋಧನೆಗಳು ಜೀವ ವಿಜ್ಞಾನಿಗಳಿಂದ ನಡೆದದ್ದಾದರೆ ಮತ್ತಷ್ಟು ಕುತೂಹಲಕಾರಿಯಾದ ವಿಷಯಗಳನ್ನು ಹೊರಗೆಳೆಯುವುದು ಸಾಧ್ಯವಿದೆ.

Source: Dancing Octopus, DaugaardDK

ನೆಲದ ಮೇಲೆ ಆಕ್ಟೋಪಸ್ ತೆವಳಿಕೊಂಡು ಚಲಿಸವ ವೀಡಿಯೋ ನೋಡಿ. 



ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: 



1 comment: