ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, June 4, 2021

ಮ್ಯೂಕರ್ ಎಂಬ ಅವಕಾಶವಾದಿ ಶಿಲೀಂಧ್ರ

ಮ್ಯೂಕರ್ ಎಂಬ ಅವಕಾಶವಾದಿ ಶಿಲೀಂಧ್ರ

ಲೇಖಕರು :  ತಾಂಡವಮೂರ್ತಿ ಎನ್.

ಸಹ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆಕಾರಮಂಗಲ

ಬಂಗಾರಪೇಟೆ ತಾಲ್ಲೂಕುಕೋಲಾರ ಜಿಲ್ಲೆ. 

ಒಂದು ಮಳೆ ಬಿತ್ತೋ ಇವುಗಳ ಸಂತಾನ ಅದೆಲ್ಲಿಂದ ಎದ್ದು ಬರುತ್ತೋ ? ಅಕ್ಷೋಹಿಣಿ ಸೈನ್ಯವೇ ಎದ್ದು ಬಂದಂತೆ ಧುತ್ತನೆ ಪ್ರತ್ಯಕ್ಷವಾಗುತ್ತವೆ. ಬಾಲ್ಯದಲ್ಲಿ ಇದೊಂದು ಪವಾಡದಂತೆ ಗೋಚರಿಸುತ್ತಿತ್ತು. ಉಪ್ಪಿನಕಾಯಿ ಜಾಡಿ, ಸಂಗ್ರಹಿಸಿದ ಹಣ್ಣು ತರಕಾರಿಗಳು ಕಾಳು ಕಡ್ಡಿಗಳು ಹೀಗೆ ಎಲ್ಲೆಲ್ಲಿ ಇವು ಕಂಡು ಬಂದಿಲ್ಲ ಹೇಳಿ? ಅದೆಷ್ಟು ಆಹಾರ ಪದಾರ್ಥಗಳನ್ನು ಹಾಳು ಮಾಡಿ ಅಜ್ಜಿಯ ಬಾಯಿಯಿಂದಿವು ಬೈಸಿಕೊಂಡಿಲ್ಲ? ಭಾರೀ ರೇಜಿಗೆಯ ವಿಷಯ!!

ಅಯ್ಯೋ ಏನು ಹೇಳೋಕೆ ಹೊರಟೆ ಅಂದುಕೊಂಡ್ರಾ? ಹೆಸರು ಕೇಳಿದರೆ ಪ್ರಪಂಚವೇ ಹೌ ಹಾರಿ ಮಾರು ದೂರ ಓಡಬೇಕು. ಬಹುಷಃ ವಿಷಯ ಗಂಭೀರ ಅಂತ ಅನಿಸ್ತಾ? ಅದೇ ಫಂಗಸ್ಬ್ಲ್ಯಾಕ್ಫಂಗಸ್‌ !! ಅದು ಆಯ್ತು ಅಂದ್ರೆ , ಈಗ ವೈಟ್ಫಂಗಸ್‌,  ಯೆಲ್ಲೋ ಫಂಗಸ್ ಯಮಳರ ಜಮಾನ !! ಈ ನಿಸರ್ಗದ ಬತ್ತಳಿಕೆಯಲ್ಲಿ ಏನೇನಿದೆಯೋ ಅಂತ ಅನಿಸ್ತಾ ಇದೆಯಲ್ವಾ?

ಶಿಲೀಂಧ್ರಗಳು ಮೂಲತಃ ಕೊಳೆತಿನಿಗಳು. ಬೆರಳೆಣಿಕೆಯಷ್ಟು ಶಿಲೀಂಧ್ರಗಳು ಸಂಪೂರ್ಣ ಪರಾವಲಂಬಿಗಳಾಗಿದ್ದುಮತ್ತೆ ಕೆಲವು ಅವಕಾಶವಾದಿ ಪರಾವಲಂಬಿಗಳಾಗಿವೆ (facultative pathogen). ಅಂತಹ ಅವಕಾಶವಾದಿ ಪರಾವಲಂಬಿಗಳಲ್ಲಿ ಪ್ರಚಲಿತ ಕೊವಿಡ್ ಸಂಕಷ್ಟದಲ್ಲಿ ಸದ್ದು ಮಾಡುತ್ತಿರುವ ಮ್ಯೂಕರ್ (ಕಪ್ಪು ಶಿಲೀಂಧ್ರ) ಸಹ ಒಂದು.

ಬೂಷ್ಟ್ ಗುಂಪಿಗೆ ಸೇರಿದ ಶಿಲೀಂಧ್ರ ಸಾಮಾನ್ಯವಾಗಿ ಕೊಳೆಯುತ್ತಿರುವ ತರಕಾರಿಹಣ್ಣು ಮತ್ತು ಆಹಾರ ಪದಾರ್ಥಗಳ ಮೇಲೆ ಬೆಳೆಯುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಇವೆಲ್ಲವೂ ಬಾಲ್ಯದಿಂದಲೇ ನಮಗಂಟಿಕೊಂಡೇ ಬಂದಿರುವ ನೆನಪುಗಳಲ್ಲವೇ?

ವರ್ಗೀಕರಣ

ಸಾಮ್ರಾಜ್ಯ ಮೈಕೋಟ

ವಂಶ ಮ್ಯೂಕರೋ ಮೈಕೋಟ(ಜೈಗೋ ಮೈಕೋಟ)

ವರ್ಗ ಜೈಗೋಮೈಸಿಟಿಸ್

ಗಣ ಮ್ಯೂಕರೇಲ್ಸ್

ಕುಟುಂಬ ಮ್ಯೂಕರೇಸಿ

ಜಾತಿ ಮ್ಯೂಕರ್

ಮ್ಯೂಕರೇಸಿ ಕುಟುಂಬದಲ್ಲಿ ಮ್ಯೂಕರ್ರೈಜೋಪಸ್(bread mold), ಅಬ್ಸಿಡಿಯಾ ಎಂಬ ಜಾತಿಗಳಿವೆಮ್ಯೂಕರ್ ಜಾತಿಯಲ್ಲಿ ಸುಮಾರು 40 ಪ್ರಭೇದಗಳಿದ್ದು, ಮೂಲತಃ ಕೊಳೆತಿನಿ ಪೋಷಣೆಯ ಮೂಲಕ ಆಹಾರವನ್ನು ಪಡೆಯುತ್ತವೆ. ಇವುಗಳ ಕಾಯ ಮೈಸೀಲಿಯಂ ಎಂಬ ಎಳೆಗಳ ಗುಚ್ಛದಿಂದಾಗಿದೆ. ಸಾಮಾನ್ಯವಾಗಿ ಮೈಸೀಲಿಯಂನ ಎಳೆಗಳು(ಹೈಫಾ) ಹತ್ತಿಯಂತೆ ಬಿಳುಪಾಗಿದ್ದು, ಬೀಜಾಣುಗಳನ್ನು ಉತ್ಪಾದಿಸುವ ಬೀಜಕದಾನಿಗಳು sporangiophores ಎಂಬ ವಿಶೇಷವಾದ ಹೈಫಾಗಳ ಮೇಲೆ ಕಂಡುಬರುತ್ತವೆ. ಬೀಜಾಣುಗಳು ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಇದನ್ನು ಕಪ್ಪುಶಿಲೀಂಧ್ರ ಎನ್ನಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಬೂಷ್ಟ್‌ಗಳಲ್ಲಿ ಪ್ರಾರಂಭದಲ್ಲಿ ಮೈಸಿಲಿಯಂ ಬೆಳವಣಿಗೆಯಾಗುವುದರಿಂದ ಬಿಳಿ ಬಣ್ಣದಲ್ಲಿ ಗೋಚರಿಸುತ್ತವೆ. ನಂತರ ಬೀಜಾಣುಗಳ ಬಣ್ಣವನ್ನು ಆಧರಿಸಿ ಶಿಲೀಂಧ್ರದ ಜಾತಿಯನ್ನು  ಗುರುತಿಸಬಹುದು. ಮ್ಯೂಕರ್/ರೈಜೋಪಸ್ ಜಾತಿಯ ಬೂಷ್ಟ್‌ಗಳು ಕಪ್ಪು ಬಣ್ಣದ ಬೀಜಾಣುಗಳನ್ನು ಉತ್ಪಾದಿಸುತ್ತವೆಪೆನ್ಸೀಲಿಯಂ ಮತ್ತು ಆಸ್ಪರ್‌ಜಿಲ್ಲಸ್ ಜಾತಿಯ ಶಿಲೀಂಧ್ರಗಳು ಹಸಿರು/ಹಳದಿ ಮಿಶ್ರಿತ ಹಸಿರು ಬಣ್ಣದ ಬೀಜಾಣುಗಳನ್ನು ಉತ್ಪಾದಿಸುತ್ತವೆ. ಮ್ಯೂಕರ್ ಮತ್ತು ರೈಜೋಪಸ್‌ಗಳಿಗಿರುವ ಪ್ರಮುಖ ವ್ಯತ್ಯಾಸವೆಂದರೆ, ರೈಜೋಪಸ್‌ನಲ್ಲಿ ಕಂಡುಬರುವ ರೈಜಾಯಿಡ್ ಮತ್ತು ಸ್ಟೋಲಾನ್‌ಗಳೆಂಬ ರಚನೆಗಳು ಮ್ಯೂಕರ್‌ನಲ್ಲಿ ಕಂಡುಬರುವುದಿಲ್ಲಉಳಿದಂತೆ ಎರಡರಲ್ಲೂ ಒಂದೇ ತೆರನಾದ ಬೀಜಕದಾನಿಗಳು ಕಂಡುಬರುತ್ತವೆ.

ಮ್ಯೂಕರ್‌ನ ಬಹುತೇಕ ಪ್ರಭೇದಗಳು ಮನುಷ್ಯನಂತಹ ಬಿಸಿರಕ್ತ ಪ್ರಾಣಿಗಳಲ್ಲಿ ಸೊಂಕು ಉಂಟುಮಾಡಲಾರವು. ಮ್ಯೂಕರ್ ಇಂಡಿಕಸ್ (Mucor indicus) ನಂತಹ ಉಷ್ಣ ಸಹಿಷ್ಣು ಪ್ರಭೇದಗಳು ಮಾತ್ರ ಮೂಲತಹಃ ಕೊಳೆತಿನಿಗಳಾದರೂ ರೋಗ ನಿರೋಧಕ ಶಕ್ತಿ ಕುಂದಿರುವ ಮನುಷ್ಯರಲ್ಲಿ ಅವಕಾಶವಾದಿ ಪರಾವಲಂಬಿಗಳಾಗಿ (facultative pathogen) ಬದಲಾಗಿ ಮ್ಯೂಕರ್ ಮೈಕೋಸಿಸ್‌ನಂತಹ ರೋಗವನ್ನುಂಟು ಮಾಡುತ್ತವೆ.

ಪ್ರಸರಣೆ

ಮ್ಯೂಕರ್‌ನ ಬೀಜಾಣುಗಳು ಕಲುಷಿತಗಾಳಿ ಮತ್ತು ಕಲುಷಿತ ನೀರಾವಿಯ ಮೂಲಕ ಪ್ರಸಾರವಾಗುತ್ತವೆಮ್ಯೂಕರ್ ಮೈಕೋಸಿಸ್ ಮ್ಯೂಕರ್ ಅಲ್ಲದೆ ಮ್ಯೂಕರೇಸಿ ಕುಟುಂಬದ ರೈಜೋಪಸ್ ಮತ್ತು ಅಬ್ಸಿಡಿಯಾ ಪ್ರಭೇದಗಳಿಂದಲೂ ಬರುವ ಸಾಧ್ಯತೆಯಿದೆ.

ಯಾರಲ್ಲಿ ಸೊಂಕು ಕಂಡುಬರುತ್ತದೆ

ರೋಗ ನಿರೋಧಕ ಶಕ್ತಿ ಕುಂದಿರುವ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಅದರಲ್ಲೂ ಮಧುಮೇಹ, ಏಡ್ಸ್, ಕ್ಯಾನ್ಸರ್, ಅಂಗಾಗ ಕಸಿ ಮಾಡಿಸಿಕೊಂಡು ಸ್ಟಿರಾಯ್ಡ್ ಚಿಕೆತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಈ ಅವಕಾಶವಾದಿ ಸೊಂಕನ್ನು ಉಂಟುಮಾಡುತ್ತದೆ.

ರೋಗಲಕ್ಷಣಗಳು

ಸಾಮಾನ್ಯವಾಗಿ ಸೊಂಕು ಮೊದಲಿಗೆ ಮೂಗಿಗೆ ತಗುಲುವುದರಿಂದ ಮೂಗಿನ ಸುತ್ತ ಕಂಡುಬರುವ ಸೈನಸ್ ಉರಿಯೂತಕ್ಕೆ ಒಳಗಾಗುತ್ತದೆ, ನಂತರ ಸೊಂಕು ಸೈನಸ್‌ನಿಂದ ಕಣ್ಣಿಗೆ ಮತ್ತು ಮಿದುಳಿಗೆ ವ್ಯಾಪಿಸುತ್ತದೆ. ಕೆನ್ನೆಯ ಮೂಳೆ ಮತ್ತು ಕಣ್ಣಿನ ಸುತ್ತ ಬಾವು ಬರುವುದು, ರಕ್ತ ಹೆಪ್ಪುಗಟ್ಟುವುದು, ಮೂಗಿನಿಂದ ಕಪ್ಪು ದ್ರವ ವಿಸರ್ಜನೆಯಾಗುವುದು, ದೃಷ್ಟಿ ಮಂಜಾಗುವುದು, ತಲೆನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಕ್ಷಣವೇ ಚಿಕಿತ್ಸೆ ಸಿಗದಿದ್ದರೆ ಕೆಲವೇ ದಿನಗಳಲ್ಲಿ ದೃಷ್ಟಿ ನಾಶವಾಗುವುದು. ಸೊಂಕು ಮೆದುಳಿಗೆ ವ್ಯಾಪಿಸಿ ಸಾವು ಸಹ ಸಂಭವಿಸಬಹುದು.

ಚಿಕಿತ್ಸೆ

ಮ್ಯೂಕರ್ ಮೈಕೊಸಿಸ್‌ನ ಚಿಕಿತ್ಸೆಗೆ ಲಭ್ಯವಿರುವ ಏಕೈಕ  ಔಷದ ಅಂಫೋಟೆರಿಸಿನ್-ಬಿ. ಇದು ಶಿಲೀಂಧ್ರ ನಾಶಕವಾಗಿದ್ದು ಸ್ಟ್ರೆಪ್ಟೋಮೈಸಿಸ್ ನೊಡೊಸಸ್ (Streptomyces nodosus) ಎಂಬ ಬ್ಯಾಕ್ಟೀರಿಯಾದಿಂದ ಪಡೆದು ಇದನ್ನು ಸಂಸ್ಕರಿಸಲಾಗುತ್ತದೆ. ಇದನ್ನು ಚುಚ್ಚುಮದ್ದಿನ ರೂಪದಲ್ಲಿ ಅಭಿದಮನಿಯ ಮೂಲಕ (intra venous) ಕೊಡಲಾಗುತ್ತದೆ. ಸೋಂಕಿನ ತೀವ್ರತೆಗೆ ಅನುಗುಣವಾಗಿ 20 ರಿಂದ 60 ಡೋಸ್ ಗಳಷ್ಟು ಚುಚ್ಚುಮದ್ದನ್ನು ನೀಡಬೇಕಾಗಬಹುದು.

ಮ್ಯೂಕರ್ ಮೈಕೋಸಿಸ್‌ನಿಂದ ಪಾರಾಗಬೇಕಾದರೆ ಕೋವಿಡ್‌ನಿಂದ ಚೇತರಿಸಿಕೂಳ್ಳುತ್ತಿರುವ ಅದರಲ್ಲೂ ಮಧುಮೇಹ, ಕ್ಯಾನ್ಸರ್, ಅಂಗಾಂಗ ಕಸಿ ಮಾಡಿಸಿಕೊಂಡಿರುವ ರೋಗ ನಿರೋಧಕ ಶಕ್ತಿ ಕುಂದಿರುವ ವ್ಯಕ್ತಿಗಳ ಚಿಕಿತ್ಸೆಯಲ್ಲಿ ನಿಷ್ಕ್ರಿಮೀಕರಿಸಿದ ನೀರನ್ನು ಬಳಸಬೇಕು, ಸ್ಟಿರಾಯ್ಡ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಿತವಾಗಿ ಬಳಸಬೇಕು ಮತ್ತು ಸ್ಚಚ್ಛ ನಿಷ್ಕ್ರೀಮೀಕರಿಸಿದ ವಾತಾವರಣದಲ್ಲಿ ಚಿಕಿತ್ಸೆಗೆ ಒಳಗಾಗಬೇಕು. ಇಂತಹ ಅವಕಾಶವಾದಿಯಿಂದ ತಪ್ಪಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಮುಂಜಾಗರೂಕತಾ ಕ್ರಮವಾಗಿ ಕೋವಿಡ್ಲಸಿಕೆ ತೆಗೆದುಕೊಳ್ಳೋಣ. ವಾತಾವರಣ ಶುಭ್ರವಾಗಿರಿಸೋಣ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸೋಣ.

Source: Doc. RNDr. Josef Reischig, CSc., 

7 comments:

 1. Nice article.. narration ultimately done.. keep doing writing sir... thank you for the good article

  ReplyDelete
 2. Excellent science article in simple kannada....keep it up sir...pls tag whenever publish more articles like this....🙏🙏

  ReplyDelete
 3. Good information at present situation.
  So nice article.

  ReplyDelete
 4. Very good, timely information. Thank you sir

  ReplyDelete
 5. Very good, timely information. Thank you sir

  ReplyDelete