ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ – ಸರಳವೋ…? ಸಂಕೀರ್ಣವೋ…??
ಲೇಖಕರು: ಡಾ. ಡಿ. ಆರ್. ಪ್ರಸನ್ನಕುಮಾರ್
ಪರಿಸರ ಶಿಕ್ಷಣದ ಹವ್ಯಾಸಿ ಲೇಖಕರು
1972ರ ಜೂನ್ 5 ರಿಂದ 10 ರವರೆಗೆ ಸ್ವೀಡನ್ ದೇಶದ ಸ್ಟಾಕ್ ಹೋಮ್ ನಲ್ಲಿ ನಡೆದ ‘ಮಾನವ-ಪರಿಸರ’ವನ್ನು ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮೊತ್ತ ಮೊದಲಬಾರಿಗೆ ಮಾನವರನ್ನು ಹಾಗೂ ಪರಿಸರವನ್ನು ಕುರಿತು ಚಿಂತನೆ ನೆಡೆಯಿತು. ಈ ಜಾಗತಿಕ ಸಮ್ಮೇಳನದಲ್ಲಿ ‘ಪರಿಸರ ಶಿಕ್ಷಣ’ವನ್ನು ಒಳಗೊಂಡಂತೆ ಐದು ಮುಖ್ಯ ಪಾರಿಸಾರಿಕ ವಿಷಯಗಳ ಬಗ್ಗೆ ಗಹನವಾದ ಚರ್ಚೆ ನಡೆಯಿತು. ಪಾರಿಸಾರಿಕ ವಿಷಯಗಳನ್ನು ಅಂತರರಾಷ್ಟ್ರೀಯ ರಾಜನೈತಿಕ ಕಾರ್ಯಸೂಚಿಯಲ್ಲಿ ಸೇರಿಸಿದ ಹೆಗ್ಗಳಿಕೆ ಈ ಸಮ್ಮೇಳನದ್ದು. ಹೀಗಾಗಿ ಈ ಸಮ್ಮೇಳನವು ಪರಿಸರದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಮಾನವ ಪರಿಸರದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಜನರನ್ನು ಪ್ರೋತ್ಸಾಹಿಸಲು ಹಾಗೂ ಮಾರ್ಗದರ್ಶನ ನೀಡಲು ಸರ್ವಸಮ್ಮತವಾದ ದೃಷ್ಟಿಕೋನದ ಮತ್ತು ತತ್ವಗಳ ಅವಶ್ಯಕತೆ ಇದೆ ಎಂಬುದರ ಆಧಾರದ ಮೇಲೆ ಅನೇಕ ಮುಖ್ಯ ಅಂಶಗಳನ್ನು ಪ್ರಕಟಿಸಲಾಯಿತು. ಇದರಿಂದಾಗಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳಿಗೆ ರಾಷ್ಟ್ರೀಯ ನೀತಿಗಳನ್ನು ರಚಿಸಲು ಒತ್ತಾಸೆಯಾಯಿತು. ಈ ಸಮ್ಮೇಳನದಿಂದಾಗಿ ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಆರಂಭವಾಯಿತು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು, ಈ ಜಾಗತಿಕ ಸಮ್ಮೇಳನದ ನೆನಪಿಗಾಗಿ ಪ್ರತಿವರ್ಷ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಹಾಗೂ ಪ್ರತಿ ದಶಕದ ಆಚರಣೆಗಳನ್ನು ಒಂದು ಘೋಷವಾಕ್ಯದಡಿಯಲ್ಲಿ ಒಟ್ಟುಗೂಡಿಸುತ್ತದೆ.
ಈ ವರ್ಷದ ಹಾಗೂ ಈ ದಶಕದ ಘೋಷವಾಕ್ಯ “ಪರಿಸರ ವ್ಯವಸ್ಥೆಗಳ ಪುನಃಸ್ಥಾಪನೆ” ಇದರ ಸಾಕಾರಕ್ಕಾಗಿ “ಪುನರ್ ಕಲ್ಪನೆ, ಪುನರ್ ಸೃಷ್ಟಿ, ಪುನರ್ ಸ್ಥಾಪನೆ” ಎಂಬ ಅಡಿನುಡಿ. ಇತ್ತೀಚೆಗೆ ದಿನಾಚರಣೆಗಳನ್ನು ತಾತ್ವಿಕ ಮತ್ತು ಮೌಲಿಕ ತಳಹದಿಯಲ್ಲಿ ಅರ್ಥೈಸದೇ, ಕೇವಲ ಆಚರಣೆಗಾಗಿ ಆಚರಣೆ ಎಂದು ಸಂಭ್ರಮಿಸುತ್ತಿರುವುದರಿಂದಲೋ ಏನೋ,
ಉತ್ತಮ ಉದ್ದೇಶದ ಪ್ರಯತ್ನಗಳೂ ಸಹ ಅರ್ಥಹೀನವಾಗುತ್ತಿವೆ. ಇಂತಹ ಸಂಧರ್ಭಗಳಲ್ಲಿ, ‘ಇದು ಸಾಧ್ಯವೇ’ ಎನ್ನುವ ಅನುಮಾನಗಳ ನಡುವೆ ‘ಇದು ಎಷ್ಟು ಸಂಕೀರ್ಣದ ಕಾರ್ಯ’ ಎಂಬುದನ್ನು ಅರ್ಥೈಸಿಕೊಳ್ಳುತ್ತಾ, ಇದಕ್ಕೆ ನಾವು ಕೈಜೋಡಿಸದಿದ್ದರೆ ಮುಂದಿನ ದುರಂತಗಳಲ್ಲಿ ನಮ್ಮ ಪಾಲೂ ಇರುತ್ತದೆ ಎಂಬ ಸಾಮುದಾಯಿಕ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸಿಕೊಳ್ಳುತ್ತಾ, ಕೈಲಾದ ಮಟ್ಟಿಗೆ ಪ್ರಯತ್ನಿಸಬಾರದೇಕೆ ಎಂಬ ಆಶಾವಾದವನ್ನು ಪ್ರೇರೇಪಿಸುವುದು ಈ ಲೇಖನದ ಉದ್ದೇಶ.
ಮೊದಲಿಗೆ ಈ ಪರಿಸರದ ವ್ಯವಸ್ಥೆಗಳ ಅಗಾಧತೆ ಮತ್ತು ಸಂಕೀರ್ಣತೆ ನಮ್ಮ ಅರಿವಿಗೆ ಬರಬೇಕು. ‘ಸುತ್ತಮುತ್ತ ಕಾಣುವುದೆಲ್ಲಾ ಪರಿಸರ’
ಎಂಬ ಸರಳ ಅರ್ಥದ ಆಳದಲ್ಲಿರುವ ಅನೇಕ ಸೂಕ್ಷ್ಮ ಪ್ರತಿವರ್ತನೆಗಳೂ ನಮಗೆ ಸ್ಪಷ್ಟವಾಗಿ ಅರ್ಥವಾಗಬೇಕು. ಇಲ್ಲದಿದ್ದಲ್ಲಿ ಪುನಃಸ್ಥಾಪನೆಯ ಹೆಸರಿನಲ್ಲಿ ನಾವು ಇನ್ನಷ್ಟು ಘಾಸಿಮಾಡುವ ಅಪಾಯವಿದೆ. ರೋಗ ಗುಣಪಡಿಸುವ ಉಮೇದಿನಲ್ಲಿ ತಿಳಿಯದಿರುವ ಶಸ್ತ್ರಚಿಕಿತ್ಸೆಗೆ
ತೊಡಗಿದಂತಾಗಬಾರದಲ್ಲವೇ? ಹಾಗಿದ್ದಲ್ಲಿ ಇದನ್ನು ಸಂಪೂರ್ಣವಾಗಿಯಲ್ಲದಿದ್ದರೂ ಸ್ಥೂಲವಾಗಿಯಾದರೂ ಅರ್ಥಮಾಡಿಕೊಳ್ಳೋಣ.
ಜೀವಿ ಜೀವಿಗಳ ನಡುವೆ ಇರುವ ಸಂಬಂಧ ಹಾಗೂ ಜೀವಿಗಳು-ಅವುಗಳ ಭೌತಿಕ ಮತ್ತು ರಾಸಾಯನಿಕ ಪರಿಸರಕ್ಕೂ ಇರುವ ಸಂಬಂಧಗಳನ್ನು ಕುರಿತ ಅಧ್ಯಯನವನ್ನು ‘ಇಕಾಲಜಿ’ ಎನ್ನಲಾಯ್ತು. ಗ್ರೀಕ್ ಭಾಷೆಯಲ್ಲಿ ‘ಇಕೋ’ ಎಂದರೆ ಮನೆ, ಇಕಾಲಜಿ ಎಂದರೆ ಮನೆಯ ಅಥವಾ ಜೀವಿಗಳಿರುವ ಪರಿಸರದ ಅಧ್ಯಯನ. 1870ರಲ್ಲಿ ಜರ್ಮನಿಯ ಜೀವವಿಜ್ಞಾನಿ ‘ಅರ್ನೆಸ್ಟ್ ಹೆಕಲ್’ ಈ ಪದವನ್ನು ಬಳಕೆಗೆ ತಂದರು. ಕನ್ನಡದಲ್ಲಿ ‘ಜೀವಪರಿಸ್ಥಿತಿಶಾಸ್ತ್ರ’ ಎನ್ನೋಣ. ಜೀವಿ ಅಥವಾ ಜೀವಜಾತಿಯನ್ನು ಕುರಿತ ಅಧ್ಯಯನವನ್ನು ಪ್ರಾರಂಭಿಸಿದವರು ‘ಆಟೆಕಾಲಜಿ’ ಅಂತಲೂ ಹಲವು ಜೀವಜಾತಿಗಳ ಅಧ್ಯಯನ
ಮಾಡಿದವರು ಇದನ್ನು ‘ಸಿನ್ ಎಕಾಲಜಿ’ ಎಂತಲೂ ಇದನ್ನು ಪ್ರತ್ಯೇಕಿಸುತ್ತಾ ಬಂದರು. ಈ ಪರಿಸರ ಅಧ್ಯಯನದ ಕಾಲಘಟ್ಟಗಳಲ್ಲಿ ಪರಿಸರಕ್ಕಾಗಿ ಒಂದು ಶಾಸ್ತ್ರ ಹುಟ್ಟಿದ್ದು 1935ರಲ್ಲಿ, ಬ್ರಿಟಿಷ್ ಪರಿಸರ ತಜ್ಞರಾದ ಟ್ಯಾನ್ಸ್ ಲೇ ‘ಪರಿಸರ ವ್ಯವಸ್ಥೆ’ ಎನ್ನುವ ಪದವನ್ನು ಬಳಕೆಗೆ ತಂದರು. ಜೀವಿಗಳು ಮತ್ತು ನಿರ್ಜೀವ ವಸ್ತುಗಳು ನಿರಂತರ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರದೇಶದಲ್ಲಿ ಒಂದು ವಿಧವಾದ ವ್ಯವಸ್ಥಿತವಾದ ಭೌತ, ರಾಸಾಯನಿಕ, ಜೈವಿಕ ಪ್ರಕ್ರಿಯೆಗಳನ್ನು
ಗಮನಿಸಬಹುದು. ಹಾಗಾಗಿ ಇದನ್ನು ‘ಪರಿಸರ ವ್ಯವಸ್ಥೆ’ ಎಂದರು. ಇದು ಜೀವಗೋಳದ ರಚನಾತ್ಮಕ ಹಾಗೂ ಕ್ರಿಯಾತ್ಮಕ ಘಟಕ. ಇದೊಂದು ಮುಕ್ತ ವ್ಯವಸ್ಥೆ. ಇಲ್ಲಿ ಹೊರಗಿನಿಂದ ಸಂಪನ್ಮೂಲಗಳು ಒಳಬರಬಹುದು, ಇಲ್ಲವೆ ಒಳಗಿನಿಂದ ಹೊರ ಹೋಗಬಹುದು. ಉದಾಹರಣೆಗೆ ಹುಲ್ಲುಗಾವಲು ಪರಿಸರ ವ್ಯವಸ್ಥೆಯಲ್ಲಿ, ಸೂರ್ಯನ ಶಕ್ತಿ ಹೊರಗಿನಿಂದ ಬಂದರೆ ನೀರಿನ ಆವೀಕರಣ ಒಳಗಿನಿಂದ ಹೊರಹೋಗುವ ಅಂಶವಾಗುತ್ತದೆ. ಜೀವಿ-ನಿರ್ಜೀವಿಗಳ ಸಹಜ ಪ್ರತಿವರ್ತನೆಗಳನ್ನು, ಅವುಗಳ ಹಿಂದಿನ ಕಾಣದ ಮರ್ಮಗಳನ್ನು ಅರಿತಾಗಲೇ ಈ ವ್ಯವಸ್ಥೆಯ ಒಳ-ಹೊರಗನ್ನು ಅರಿಯಲು ಸಾಧ್ಯ.
ನಿಸರ್ಗದಲ್ಲಿ ಅಂದರೆ ನಮ್ಮ ಸುತ್ತ ಮುತ್ತ ನಡೆಯುವ ಪ್ರತಿ ಕಾರ್ಯವೂ ಈ ವ್ಯವಸ್ಥೆಯ ಭಾಗವೇ!
ನಮ್ಮ ಸ್ನಾನದ ಮನೆಯಿಂದ ಹೊರಹೋದ ಸಾಬೂನಿನ ನೀರು ಮತ್ತು ಭೂ-ಕಕ್ಷೆಯಿಂದ ಹೊರಹೋದ ರಾಕೆಟ್ ಎಲ್ಲಕ್ಕೂ ಇಲ್ಲಿ ಅದರದೇ ಆದ ಪ್ರಮಾಣದ ಪರಿಣಾಮ ಇದೆ. ಒಂದು ಗಿಡದಲ್ಲಿ ಅರಳುವ ಹೂ, ಅದನ್ನಾಶ್ರಯಿಸಿರುವ
ಚಿಟ್ಟೆ, ಅದಕ್ಕೆ ಸಂದೇಶ ಕಳುಹಿಸಿದ ರಾಸಾಯನಿಕ, ಅದನ್ನು ಹೊತ್ತೊಯ್ದ ಗಾಳಿ, ಗಿಡವು ನೀರು ಲವಣಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಚಿಟ್ಟೆಯ ರುಚಿಗೆ ತಕ್ಕಂತೆ ಮಕರಂದವಾಗಿಸಿದ ಬಗೆ, ಆ ಗಿಡದ ಎಲೆಗಳು ಚಿಟ್ಟೆಯ ಮರಿಗಳಿಗೆ ಆಹಾರವಾಗಿ, ಆ ಹುಳುಗಳನ್ನು ಹಿಡಿದು ತಿಂದ ಪಕ್ಷಿಗೆ ಆಹಾರ ಲಭಿಸಿ, ಪಕ್ಷಿಯ ಹಿಕ್ಕೆ ಮತ್ತೆ ಅದೇ ಗಿಡಕ್ಕೆ ಗೊಬ್ಬರವಾಗಿ ಮತ್ತೊಂದು ಹೂ ಅರಳುವ ಸೋಜಿಗ ನಮ್ಮ ಅರಿವಿಗೆ ಬರಬೇಕಿದೆ…….ನೋಡಿ ಸರಳವಾದ ಹೂ ಅರಳುವ ಪ್ರಕ್ರಿಯೆ ಹೇಗೆ ಸಂಕೀರ್ಣವಾಗುತ್ತಿದೆ….! ಇನ್ನು ಭೂತಾಪ ಏರಿಕೆ, ಓಝೋನ್ ನಾಶದ ಹಿಂದಿನ ಪ್ರಕ್ರಿಯೆಗಳ ಸಂಕೀರ್ಣತೆ ಹೇಗಿರಬೇಡ?
ಹಲವು ಪರಿಸರ ವ್ಯವಸ್ಥೆಗಳು ನಿಸರ್ಗ ನಿರ್ಮಿತ ಅಂದರೆ, ಕಾಡು,
ಸಾಗರ ಅಂತಿಟ್ಟುಕೊಳ್ಳಿ, ಕೆಲವು ಪರಿಸರ ವ್ಯವಸ್ಥೆಗಳು ಮಾನವ ನಿರ್ಮಿತವಾಗಿಯೂ ಇರಬಹುದು. ಉದಾಹರಣೆಗೆ, ನಮ್ಮ ಕೃಷಿ ವ್ಯವಸ್ಥೆ, ನಗರ ವ್ಯವಸ್ಥೆ, ಉದ್ಯಾನವನ, ಕೆರೆ-ಕಟ್ಟೆಗಳು ಇತ್ಯಾದಿ. ಆದರೆ, ಮೇಲೆ ತಿಳಿಸಿದ ಸಂಕೀರ್ಣ ಪ್ರಕ್ರಿಯೆ ಅಂತರ್ವರ್ತನೆ ಇಲ್ಲದೆ ಯಾವ ವ್ಯವಸ್ಥೆಯೂ ಕಾರ್ಯಾಚರಿಸದು. ಈ ಸೂಕ್ಷ್ಮ ಸಂಬಂಧಗಳು ಸೃಷ್ಟಿಯಾದಲ್ಲಿ ಮಾತ್ರ ಆ ವ್ಯವಸ್ಥೆ ಜೀವಂತ ಮತ್ತು ಸಹಜ.
ಈಗ ಎದುರಾಗಿರುವ ಪ್ರಶ್ನೆ “ಈ ಪರಿಸರ ವ್ಯವಸ್ಥೆಗಳನ್ನು ಪುನರ್ ಸ್ಥಾಪಿಸಬೇಕೇಕೆ? ಅವುಗಳಿಗೆ ಈಗಾಗಿರುವ ಹಾನಿಯೇನು? ಅದಕ್ಕೆ ಕಾರಣವೇನು? ಎಂಬುದು. ಮಾನವನ ಹಸ್ತಕ್ಷೇಪದಿಂದಾಗಿ
ಜಗತ್ತಿನ ಬಹುತೇಕ ಪರಿಸರ ವ್ಯವಸ್ಥೆಗಳು ಸಮತೋಲನ ಕಳೆದುಕೊಂಡು ವಿನಾಶದ ಅಂಚಿಗೆ ಅಂದರೆ ದುರಸ್ತಿಪಡಿಸಲು ಸಾಧ್ಯವಾಗದ ಮಟ್ಟಿಗೆ ಹಾನಿಗೊಳಗಾಗಿ ನಿರ್ನಾಮವಾಗುವ ಹಂತವನ್ನು ತಲುಪಿಬಿಟ್ಟಿವೆ ಎಂಬುದು ಅಧ್ಯಯನಗಳಿಂದ ತಿಳಿದಿರುವ ಸಂಗತಿ. ಇದನ್ನು ‘ಪರಿಸರ ವ್ಯವಸ್ಥೆಯ ಕುಸಿತ’ ಎಂದು ಕರೆಯಬಹುದು. ಪರಿಸರ ವ್ಯವಸ್ಥೆಗಳು ಹಲವು ಬಾರಿ ನೈಸರ್ಗಿಕ ಮತ್ತು ಮಾನವ ಚಟುವಟಿಕೆಯಿಂದುಂಟಾಗುವ ಅನೇಕ ಒತ್ತಡಗಳನ್ನು ಎದುರಿಸಿ ನಿಲ್ಲುತ್ತವೆ. ಬೆಂಕಿಬಿದ್ದು ನಾಶವಾಗಿದ್ದ ಕಾಡಿನ ಅದೇ ಭಾಗವನ್ನು ಹಸಿರು ಕ್ರಮೇಣ ಆವರಿಸುತ್ತದೆ. ಅಂದರೆ ಅನೇಕ ಪರಿಸರ ವ್ಯವಸ್ಥೆಗಳಿಗೆ ತಮಗೆ ತಾವೇ ದುರಸ್ತಿಯಾಗುವ ಸ್ವಯಂ ದುರಸ್ತಿಯ ಸಾಮರ್ಥ್ಯ ಇದೆ ಎಂದರ್ಥ. ಆದರೆ ಈ ಸಾಮರ್ಥ್ಯಕ್ಕೆ ಒಂದು ಮಿತಿ ಇದೆ.
ನಮ್ಮ ಒತ್ತಡವು ಆ ಮಿತಿಯನ್ನು ದಾಟಿದರೆ ಪರಿಸರ ವ್ಯವಸ್ಥೆ ಕುಸಿಯುತ್ತದೆ. ನದಿಗೆ ಹರಿಸಿದ ಕಲುಷಿತ ನೀರನ್ನು ನದಿ ತನ್ನ ಹರಿವಿನ ಮಾರ್ಗದಲ್ಲಿ ಶುದ್ಧಗೊಳಿಸಬಹುದು. ಆದರೆ ಆ ಶುದ್ಧಗೊಳಿಸಿಕೊಳ್ಳುವ ಸಾಮರ್ಥ್ಯವನ್ನು ಮೀರಿದ ಪ್ರಮಾಣದಲ್ಲಿ ನಾವು ಮಲಿನಗೊಳಿಸಿದರೆ ಅದು ಸಹಜ ವೇಗದಲ್ಲಿ ಸರಿಪಡಿಸಿಕೊಂಡು ಮತ್ತೆ ಸುಸ್ಥಿತಿಗೆ ಬರುವಲ್ಲಿ ಸೋಲುತ್ತದೆ. ಕ್ರಮೇಣ ಸಾಯುತ್ತದೆ ಸಹ. ಹೀಗೆ ಅವನತಿಯಾದ ಅಥವಾ ಅವನತಿಯಾಗುತ್ತಿರುವ ಪರಿಸರ ವ್ಯವಸ್ಥೆ ಅಥವಾ ಆವಾಸಗಳು ತಮ್ಮ ಮೂಲ ರಚನೆಯನ್ನು ಮರಳಿ ಪಡೆದು, ಜೀವಜಾತಿಗಳನ್ನು ಮತ್ತು ಅಂತರ್ವರ್ತನೆಗಳನ್ನು
ಮರುಸ್ಥಾಪಿಸಿ, ತನ್ನ ಮೂಲಸ್ಥಿತಿಗೆ ಮರಳುವುದಕ್ಕೆ ಅಂದರೆ ಸಮತೋಲನವನ್ನು ಸ್ಥಾಪಿಸುವುದನ್ನು ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯೆನ್ನಬಹುದು.
ಯಾವುದೇ ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಹರಿವು,
ಪೌಷ್ಟಿಕಾಂಶಗಳ ಆವರ್ತ, ರಾಸಾಯನಿಕ ಚಕ್ರಗಳ ಚಲನೆ ಇತ್ಯಾದಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗಿದ್ದಾಗ ಮಾತ್ರ ಒಂದು ಪರಿಸರ ವ್ಯವಸ್ಥೆಯು ಜೀವಂತವಾಗಿದೆ ಅಥವಾ ಸಕ್ರಿಯವಾಗಿದೆ ಎಂಬುದನ್ನು ಗಮನಿಸಬಹುದು. ಚೈತನ್ಯಶೀಲವಾಗಿರುವ ವ್ಯವಸ್ಥೆಗಳು ಸುಸ್ಥಿತಿಯಲ್ಲಿದ್ದರೆ, ಆ ವ್ಯವಸ್ಥೆ ನಿರಂತರವಾಗಿ ಸಮತೋಲನದಲ್ಲಿರುತ್ತದೆ. ನೈಸರ್ಗಿಕ ಸನ್ನಿವೇಶಗಳಲ್ಲಿ ಪರಿಸರ ವ್ಯವಸ್ಥೆ ಸ್ವಯಂನಿಯಂತ್ರಿತ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ. ಅಂದರೆ ಯಾವುದೇ ಜೈವಿಕ ಅಥವಾ ಅಜೈವಿಕ ಅಂಶ ಸಮತೋಲನವನ್ನು ಹಾಳುಮಾಡದಂತೆ ಅಥವಾ ಇಡೀ ವ್ಯವಸ್ಥೆ ಮೇಲೆ ಪ್ರಭುತ್ವ ಸಾಧಿಸಲು ಅವಕಾಶ ಕೊಡುವುದಿಲ್ಲ. ಇದು ನೈಸರ್ಗಿಕ ನಿಯಂತ್ರಣ. ಆದರೆ ಮಾನವನ ಹಸ್ತಕ್ಷೇಪ ವ್ಯವಸ್ಥೆಯ ಪ್ರಕ್ರಿಯೆಗಳನ್ನು ಘಾಸಿಗೊಳಿಸುತ್ತದೆ. ಹಾಗಾಗಿ ಪರಿಸರ ವ್ಯವಸ್ಥೆಗೆ ತನ್ನನ್ನು ಅತಿಕ್ರಮಿಸುವ ಅಂಶವನ್ನು ನಿಯಂತ್ರಿಸುವ ವಿಶೇಷ ಶಕ್ತಿ ಕಳೆದುಹೋಗಿರುತ್ತದೆ. ಇಂತಹ ನಿಶ್ಯಕ್ತ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವುದು ಅಥವಾ ಸಮತೋಲನಕ್ಕೆ ತರುವುದು ತುಂಬಾ ಕ್ಲಿಷ್ಟಕರವಾದ ಸಂಗತಿ ಏಕೆಂದರೆ ಪ್ರತಿ ಪರಿಸರ ವ್ಯವಸ್ಥೆಗಳ ಚೌಕಟ್ಟುಗಳ ಪರಿಮಿತಿಯಲ್ಲಿ ಅಲ್ಲಿನ ಪರಿಕಲ್ಪನೆಗಳನ್ನು
ಅರ್ಥಮಾಡಿಕೊಂಡು, ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ನಿರ್ವಹಣಾ ವಿಧಾನಗಳನ್ನು ಆಯ್ಕೆ ಮಾಡಿ, ಅನುಷ್ಠಾನಗೊಳಿಸುವುದು ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟ. ಹರಿದುಬಿದ್ದ ಜೇಡರಬಲೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಪ್ರಯತ್ನದಂತೆ!.
ಪರಿಸರ ವ್ಯವಸ್ಥೆ ಒಂದು ಅಪಕ್ವ ಹಂತದಿಂದ ಸ್ಥಿರ ಅಥವಾ ಅಂತಿಮ ಹಂತಕ್ಕೆ ತಲುಪುತ್ತದೆ. ಇದನ್ನು ಪಾರಿಸಾರಿಕ ಅನುಕ್ರಮಣ ಎಂದು ಕರೆಯುತ್ತಾರೆ. ಅಂತಿಮವಾಗಿ ಈ ಅನುಕ್ರಮಣಿಕೆ, ಸ್ವಯಂ ನಿರಂತರತೆಯನ್ನು ಸಾಧಿಸಿ ಸ್ಥಿರ ಹಂತವನ್ನು ತಲುಪುತ್ತದೆ. ಕೋಟ್ಯಂತರ ವರ್ಷಗಳಿಂದ ಈ ಪ್ರಕ್ರಿಯೆ ಚಾಲನೆಯಲ್ಲಿದೆ ಎಂಬುದನ್ನು ಮರೆಯಬೇಡಿ. ಈ ಅನುಕ್ರಮಣ ಉಂಟಾಗುವುದಕ್ಕೆ ಹೊಸದಾದ ಅವಕಾಶಗಳು, ಹೊಸದಾದ ಸಮುದಾಯಗಳು, ಹೊಸ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರತಿಯೊಂದು ಜೀವಿಯ ಪಾತ್ರವು, ಆ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಹಿರಿದಾಗಿರುತ್ತದೆ. ಅದಕ್ಕಾಗಿ ಅವುಗಳು ಬದಲಾಗುತ್ತವೆ ಅಥವಾ ಆ ಪರಿಸರದ ಅಂಶಗಳನ್ನೇ ತಮಗೆ ಅನುಕೂಲವಾಗುವಂತೆ ಬದಲಿಸುತ್ತವೆ. ಈ ವ್ಯವಸ್ಥೆಯಲ್ಲಿ ಮಾನವರಿಂದ ಹಠಾತ್ತನೆ ಆಗುವ ವ್ಯತ್ಯಾಸಗಳಿಂದ ಪರಿಸರ ವ್ಯವಸ್ಥೆಗಳು ಸಮತೋಲನ ತಪ್ಪಿದರೆ
ನಂತರ ಹಿಂದಿನ ಸ್ಥಿತಿಗೆ ಮರಳಲು ನಿರ್ದಿಷ್ಟ ಅವಧಿ ಅವಶ್ಯಕ. ಆದರೆ ಮಾನವನ ಚಟುವಟಿಕೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ, ಭೂತಾಪ ಏರಿಕೆ, ವಾಯುಗುಣ ಬದಲಾವಣೆ, ಮಾಯವಾಗುತ್ತಿರುವ ಅರಣ್ಯಗಳು ಮತ್ತು ಜೀವವೈವಿಧ್ಯ, ಮರುಭೂಮಿ ವಿಸ್ತರಣೆ, ಇವುಗಳಿಂದ ಹಲವು ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮಗಳನ್ನು ಸರಿಪಡಿಸುವುದು ದುಸ್ತರವೇ ಸರಿ. ಏಕೆಂದರೆ ಅವುಗಳನ್ನು ದುರಸ್ತಿ ಮಾಡಲು ಬೇಕಿರುವ ಸಮಯ ಹಾಳುಗೆಡವಲು ತೆಗೆದುಕೊಂಡ ಸಮಯದ ಸಾವಿರದಷ್ಟು!
ಇಲ್ಲಿಗೆ ಪರಿಸರ ವ್ಯವಸ್ಥೆಯ ಸ್ವಲ್ಪ ಭಾಗ ಅರ್ಥವಾಯಿತು! ಇನ್ನು ಅರ್ಥವಾಗಬೇಕಿರುವ ಉಳಿದ ಭಾಗ ಇದರ ಪುರ್ನಸ್ಥಾಪನೆ ಹೇಗೆ?
ಎಂಬುದು. ಪರಿಸರ ವ್ಯವಸ್ಥೆಯ ಸ್ವಯಂ ದುರಸ್ತಿಯ ಎಲ್ಲ ಅಂಶಗಳನ್ನು ಪ್ರಕ್ರಿಯೆಗಳನ್ನು
ಅರ್ಥೈಸಿಕೊಳ್ಳುವುದೇ ದೊಡ್ಡ ಸವಾಲು!. ಮಳೆಗಾಲದಲ್ಲಿ ಭೂಮಿಯಿಂದ ಹೊರಬರುವ ಮಳೆಹುಳುಗಳು, ಅವುಗಳು ಹೊರಬರುವ ಕಾಲಕ್ಕೆ ಸರಿಯಾಗಿ ಮೊಟ್ಟೆಯೊಡೆದು ಮರಿಗಳು ಹೊರಬಂದಿರಬೇಕೆಂದು
ನಿರ್ಧರಿಸಿ, ಆ ಸಮಯಕ್ಕೆ ಪೂರ್ವಸಿದ್ಧತೆ ಮಾಡಿಕೊಂಡಿರುವ ಪಕ್ಷಿಯ ಆಲೋಚನೆ ನಮ್ಮದಾಗಬೇಕು. ಘಟಿಸುವ ಪ್ರತಿ ಘಟನೆಯ ಹಿಂದೆ ಅಡಗಿರುವ ವ್ಯವಸ್ಥಿತ ನಿರ್ಧಾರಗಳನ್ನು ಗಣಿಸದಿದ್ದರೆ, ನಮ್ಮ ಅವೈಜ್ಞಾನಿಕ ಶುಶ್ರೂಷೆಯಿಂದಲೇ ವ್ಯವಸ್ಥೆ ಸಾವನ್ನಪ್ಪಬಹುದು. ಪರಿಸರ ವ್ಯವಸ್ಥೆಯ ಸ್ವಯಂ ದುರಸ್ತಿಯ ಮಜಲುಗಳೇ ಹೀಗೆ. ನೇರವಾಗಿ ಅರ್ಥವಾದರೂ ಅದರ ಹಿಂದೆ ಮತ್ತೊಂದು ಗೂಡಾರ್ಥವಿದೆ ಎಂಬುದನ್ನು ಮೊದಲು ಅರಿಯಬೇಕು. ಇವುಗಳನ್ನು ನಿರ್ಧರಿಸುವುದು ಕಷ್ಟ, ಏಕೆಂದರೆ ಅನೇಕ ಅಂಶಗಳ ನಡುವಿನ ಅನೇಕ ಸಂಬಂಧಗಳ ಜೀವಜಾಲದ ಪರಿಸರ ವ್ಯವಸ್ಥೆ ಅತ್ಯಂತ ಸಂಕೀರ್ಣ. ಬಹಳ ಸಲ ವ್ಯವಸ್ಥೆ ಹಾನಿಯ ಮಿತಿಯನ್ನು ತಲುಪಿದಾಗ ಇಲ್ಲವೇ ದಾಟಿ ಮುನ್ನಡೆದಾಗ ಮಾತ್ರ ಮಿತಿಯೂ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಮೀನುಗಳೆಲ್ಲಾ ಸತ್ತು ತೇಲುವವರೆಗೆ ನಮಗೆ ಆ ನದಿಯ ಅಥವಾ ಕೊಳದಲ್ಲಾದ ಮಾನವ ಹಸ್ತಕ್ಷೇಪದ ಅರಿವಾಗುವುದಿಲ್ಲ. ಅಷ್ಟರಲ್ಲಿ ಸರಿಪಡಿಸಲಾಗದ ನಷ್ಟ ಸಂಭವಿಸಿರುತ್ತದೆ ಅಥವಾ ಮೂಲಸ್ಥಿತಿಗೆ ಮರಳಲು ಸಾಧ್ಯವಾಗದ ಬದಲಾವಣೆಗಳು ಆರಂಭವಾಗಿಬಿಟ್ಟಿರುತ್ತವೆ. ಅಮೇರಿಕಾದ ಡ್ರಮ್ಮರ್ ಗಳು ‘ಕ್ಯಾಲ್ವೀನಿಯಾ ಮೇಜರ್’
ಮರದ ಪೂರೈಕೆ ಕುಸಿದಿದೆ ಎಂದ ಮೇಲಷ್ಟೇ ನಮಗೆ ಡೂಡೋ ಪಕ್ಷಿಯ ಅವಸಾನ ಅರ್ಥವಾಗಿದ್ದು. ಜಪಾನ್ ನ ಮಿನಿಮಾಟ ದುರಂತವಾದ ಮೇಲಷ್ಟೇ ಜಗತ್ತಿಗೆ ಪಾದರಸದ ಹಿಂದಿನ ಸತ್ಯ ಅರಿವಾಗಿದ್ದು. ರಾಬಿನ್ ಗಳು ಹಾಡದಿದ್ದಾಗ ಮಾತ್ರ ನಮಗೆ ಡಿ.ಡಿ.ಟಿ. ಅವುಗಳ ಕತ್ತುಹಿಸುಕಿದ್ದ ಸಂಗತಿ ಅರಿವಾದದ್ದು ಅಲ್ಲವೇ?
ಕೆಲವು ಜೀವಿಗಳು ತಮ್ಮ ಇರುವಿಕೆ ಇಲ್ಲದಿರುವಿಕೆ ಅಥವಾ ನಡುವಳಿಕೆಗಳಿಂದಾಗಿ ಪರಿಸರ ವ್ಯವಸ್ಥೆಯ ಸ್ಥಿತಿಗತಿಗಳನ್ನು
ಸೂಚಿಸುತ್ತವೆ. ಉದಾಹರಣೆಗೆ, ಶಿಲಾವಲ್ಕಗಳು ಇರುವ ಅಥವಾ ಇಲ್ಲದಿರುವ ಜಾಗದಲ್ಲಿ ವಾಯುಮಾಲಿನ್ಯ ಇದೆಯೋ ಇಲ್ಲವೋ ಎಂದು ಹೇಗೆ ಸರಳವಾಗಿ ಊಹಿಸಬಹುದೋ ಹಾಗೆ. ಅಂದರೆ ಒಂದು ಪರಿಸರ ವ್ಯವಸ್ಥೆ ನಾಶವಾಗುತ್ತಿರುವ ಮುನ್ನವೇ ನಮಗೆ ಹಲವು ಸಂಕೇತಗಳನ್ನು ನೀಡುತ್ತದೆ. ಆದರೆ ಆ ಸಂಕೇತಗಳನ್ನು ಗ್ರಹಿಸುವ ಸಂವೇದನೆ, ಸಂಶ್ಲೇಷಿಸುವ ಜ್ಞಾನ, ಕೌಶಲಗಳನ್ನು ಹೊಂದಿದ್ದೇವೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಏಕೆಂದರೆ ಈ ಗ್ರಹಿಕೆಯ ಸಾಮರ್ಥ್ಯದ ಮೇಲೆ ಇಡೀ ರಾಷ್ಟ್ರದ / ವಿಶ್ವದ ಪಾರಿಸಾರಿಕ ನೀತಿ ರೂಪುಗೊಂಡಿರುತ್ತದೆ.
‘ಪರಿಸರ ಸಂರಕ್ಷಣೆ ಮಾಡೋಣ’ ಎಂಬ ವಿಶಾಲಾರ್ಥದಲ್ಲಿ ಮಾತನಾಡುವ ನಾವು ಅದರ ಆಳ ಅಗಲ ಮತ್ತು ಅದಕ್ಕಾಗಿ ನಾವು ಮಾಡಬೇಕಾದ ತ್ಯಾಗವನ್ನು ಮರೆತುಬಿಡುತ್ತೇವೆ. ಅಡುಗೆಗೆ ಉರುವಲಿನ ಅಗತ್ಯವಿದೆ ಎಂಬ ಒಂದೇ ಕಾರಣಕ್ಕೆ ಬೇಯಿಸಿದ ಆಹಾರವನ್ನು ಸೇವಿಸುವುದನ್ನೇ ಬಿಟ್ಟಿದ್ದ, ಇತ್ತೀಚೆಗೆ ನಮ್ಮನಗಲಿದ ಸುಂದರಲಾಲ್ ಬಹುಗುಣರಾಗಬೇಕೋ, ಬೇಯಿಸಲು ಬಳಸುವ ಉರುವಲಿನ ಸಂಪೂರ್ಣ ಕ್ಷಮತೆಯನ್ನು ಬಳಸಿ, ಅತ್ಯಂತ ಕಡಿಮೆ ಮಾಲಿನ್ಯ ಮಾಡುವರಾಗಬೇಕೋ ಎಂಬುದು ನಮ್ಮ ಆಯ್ಕೆಯ ಎರಡು ಧ್ರುವಗಳು. ಈ ಆಯ್ಕೆಯ ಸಮತೋಲನದಲ್ಲಿಯೇ ಪರಿಸರ ವ್ಯವಸ್ಥೆಯ ಸಮತೋಲನವೂ ಅಡಗಿದೆ ಎಂಬ ಸರಳ ಸತ್ಯ ಎಲ್ಲರಿಗೂ ಅರ್ಥವಾಗಬೇಕಲ್ಲವೇ? ನಮ್ಮ ಇಂದಿನ ಆಯ್ಕೆಗಳು ಮುಂದಿನ ಜನಾಂಗದ ಅಂದರೆ ಎಲ್ಲ ಜೀವಿಗಳ ಬದುಕಿನ ಸುಸ್ಥಿರತೆಯನ್ನು ನಿರ್ಧರಿಸಬಲ್ಲವು ಎಂಬ ಜಾಗೃತ ಮನೋಸ್ಥಿತಿ ನಮ್ಮದಾಗಬೇಕಿದೆ.
ಯಾವುದೇ ಪರಿಸರ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲು ಏನು ಮಾಡಬೇಕೆಂದು ಕೇಳಿದರೆ, “ನಮ್ಮ ಹಸ್ತಕ್ಷೇಪದ ಪ್ರಮಾಣವನ್ನು ಕಡಿಮೆ ಮಾಡುವುದೇ ನಾವು ಮಾಡುವ ಮಹದುಪಕಾರ” ಎಂದು ಪ್ರತಿಕ್ರಿಯಿಸಬೇಕಿದೆ. ಉದಾಹರಣೆಗೆ ಇತ್ತೀಚೆಗೆ ಬೀಜದ ಉಂಡೆಗಳನ್ನು ಕಾಡಿನ ಜಾಗಗಳಲ್ಲಿ ಎಸೆಯುವ ಕಾರ್ಯ ಚಾಲನೆಯಲ್ಲಿದೆ. ಆಯಾ ಪರಿಸರಕ್ಕೆ ಒಗ್ಗದ ಅಂದರೆ ಆ ಪರಿಸರ ವ್ಯವಸ್ಥೆಯ ಭಾಗವಲ್ಲದ ಬೀಜದುಂಡೆಯನ್ನು ಅಲ್ಲಿ ಹಾಕಿದರೆ ಅದು ನಾವು ಮಾಡಿದ ಉಪಕಾರವೇ?
ಇದರ ಬದಲು ಸುಮ್ಮನಿದ್ದರೆ ಹೆಚ್ಚು ಉಪಕಾರವಾಗುತ್ತಿತ್ತು ಅಲ್ಲವೇ. ಹುಲ್ಲುಗಾವಲಿನಲ್ಲಿ ಕಾಡು ಬೆಳೆಸುವ, ಕೆರೆಯನ್ನು ಮುಚ್ಚಿ ಉದ್ಯಾನವನ ಬೆಳೆಸುವ, ಅನ್ಯದೇಶೀಯ ಮರಗಳನ್ನು ಹಸುರೀಕರಣದ ನೆಪದಲ್ಲಿ ನೆಡುವ, ಇಲ್ಲಿನ ಕಸವನ್ನು ಅಲ್ಲಿ ಹಾಕುವ, ಇಲ್ಲಿನ ಸಮಸ್ಯೆಯನ್ನು ಮತ್ತೆಲ್ಲಿಗೋ ವರ್ಗಾಯಿಸುವ ನಮಗೆ ಪರಿಸರ ವ್ಯವಸ್ಥೆಯ ವ್ಯಾಕರಣ ಅರ್ಥವಾಗಲು ನಂತರ ಘಟಿಸುವ ಅನರ್ಥಗಳು ಹೆಚ್ಚಬೇಕೇ? ದೃಷ್ಟಾಂತಗಳಿಂದ ಕಲಿಯುವ ವಿನಯ ಹೆಚ್ಚಾಗಬೇಕಿದೆ. ಪರಿಸರ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವ ಉಮೇದಿನಲ್ಲಿ ಬೆಟ್ಟದ ರಚನೆ ಅರ್ಥಮಾಡಿಕೊಳ್ಳದೆ
ಇಳಿಜಾರಿನಲ್ಲಿ ಇಂಗು ಗುಂಡಿ ಮಾಡಿ ಇಡೀ ಬೆಟ್ಟ ಕುಸಿಯುವಂತೆ ಮಾಡುವ
ಆತುರತೆ ನಿಧಾನವಾಗಬೇಕಿದೆ. ನದಿಗಳ ಹರಿವಿನ ದಿಕ್ಕನ್ನು ಬದಲಿಸುವ ಮುನ್ನ ನಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬೇಕಿದೆ. ಉದ್ವಿಗ್ನತೆಯಿಂದ ಯುದ್ಧಮಾಡುವ ಮನಸ್ಸುಗಳ ಜಾಗವನ್ನು ಸಾಂತ್ವನ ಆಕ್ರಮಿಸಬೇಕಿದೆ. ಧಾವಂತದಿಂದುಂಟಾದ ಮಾಲಿನ್ಯ ಸಮಾಧಾನದಿಂದ ಶಮನವಾಗಬೇಕಿದೆ.
ಸೂಕ್ಷ್ಮ ಜೀವಿಗಳಿಂದ ಹಿಡಿದು ಮಾನವನವರೆಗೆ ಸಮಸ್ತ ಜೀವ ಸಂಕುಲ,
ಆಯಾ ಪರಿಸರದ ಲಯಕ್ಕೆ ಹೊಂದಿಕೊಂಡು ಬದುಕುವುದನ್ನು ಕಲಿಯಬೇಕಿದೆ. ಜೀವವೈವಿಧ್ಯತೆಯ ಅಗಾಧತೆಯನ್ನು ಅಮೂಲಾಗ್ರವಾಗಿ ಅರಿಯಬೇಕಿದೆ. ವರ್ಷವಿಡೀ ಮಳೆಸುರಿಯುವ ಜಾಗದಲ್ಲೂ, ವರ್ಷವಿಡೀ ಒಂದು ಹನಿ ಮಳೆಯನ್ನು ಕಾಣದ ಜಾಗದಲ್ಲೂ, ಜ್ವಾಲಾಮುಖಿಯ ಬಾಯಿಯಲ್ಲೂ, ಸಾಗರದ ಗಾಢಾಂಧಕಾರದ ತಳದಲ್ಲೂ ಜೀವಿಗಳು ಜೀವಿಸಿರುವ ಪರಿ ಸುಲಭವಾಗಿ ಅರ್ಥವಾಗುವ ವಿಷಯವಲ್ಲಾ. ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡದಿದ್ದರೂ ಪರವಾಗಿಲ್ಲಾ, ಗುರುತಿಸಲು ಸಾಧ್ಯವೇ ಎಂಬ ಪ್ರಶ್ನೆಗೇ ನಮ್ಮಲ್ಲಿ ಉತ್ತರವಿಲ್ಲಾ. ಇನ್ನು ‘ಪರಿಸರವನ್ನು ಪುನಃಸ್ಥಾಪಿಸೋಣ’ ಎಂಬ ಘೋಷವಾಕ್ಯ ಸ್ವಲ್ಪ ಮಟ್ಟಿಗೆ ಅಹಂಕಾರಯುತವಾಗಿದೆ ಎನಿಸುತ್ತಿದೆಯೇ? ಹಿಂದೊಮ್ಮೆ ಇದೇ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮವು “ಭೂಮಿಗೊಂದು ಅವಕಾಶ ಕೊಡಿ” ಎಂಬ ಘೋಷವಾಕ್ಯ ಕೊಟ್ಟಿತ್ತು. “ಬದುಕುವ ಅವಕಾಶ ಕೊಟ್ಟ ಭೂಮಿಗೆ ನಾವೇ ಬದುಕಲು ಅವಕಾಶ ಕೊಡುವ ಆಲೋಚನೆ” ಅಂದರೆ ಹೆತ್ತ ತಾಯಿಗೆ ವಿಷವಿಡುವುದನ್ನು ನೋಡಿದ ಮೇಲೆ ಇನ್ನೇನನ್ನು ಕೋರಲು ಸಾಧ್ಯ? ‘ಜೀವಕೊಟ್ಟವಳನ್ನು ಬದುಕಲು ಬಿಡು’ ಎನ್ನುವ ಪ್ರಾರ್ಥನೆ.
ಪರಿಸರ ವ್ಯವಸ್ಥೆಯನ್ನು ಬದಲಿಸಬಲ್ಲೆವು ಎಂಬುದಕ್ಕಿಂತ ಅದನ್ನು ಹೆಚ್ಚು ಅರಿಯಲು ಪ್ರಯತ್ನಿಸುವೆವು, ಅದನ್ನು ಗೌರವಿಸುವೆವು ಎನ್ನುವ ಮನೋಧೋರಣೆ ಮೊಳೆಯಬೇಕಿದೆ. ಪ್ರತಿ ಮಾನವನ ಅಂದರೆ ಈ ವ್ಯವಸ್ಥೆಯ ಭಾಗವಾಗಿರುವ ಒಂದು ಜೀವಿಯ ಹಸ್ತಕ್ಷೇಪದಿಂದಾಗಿ ಅನೇಕ ಪರಿಸರ ವ್ಯವಸ್ಥೆಯ ಸೂಕ್ಷ್ಮ ಸಂಬಂಧಗಳು ಸಡಿಲವಾಗುತ್ತಿವೆ. ಆ ಪ್ರತೀ ಸಂಬಂಧದ ಮೌಲ್ಯಗಳನ್ನು ಗೌರವಿಸದಿದ್ದಲ್ಲಿ ಕಟ್ಟುವುದಕ್ಕಿಂತ ಕೆಡವುವ ಪ್ರಕ್ರಿಯೆ ವೇಗವಾಗುತ್ತವೆ. ಪ್ರತೀ ಪರಿಸರ ದಿನಾಚರಣೆಯ ತಾತ್ವಿಕ ಹಿನ್ನಲೆಯೇ ಇಂತಹ ಮನಸ್ಸುಗಳನ್ನು ಕಟ್ಟುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎನ್ನುವ ಕೂಗು ಅರಣ್ಯರೋಧನವಾಗುವ ಮುನ್ನ ನಮ್ಮ ಕಿವಿಯಿಂದ ಹೃದಯಕ್ಕಿಳಿದು, ಮೌಲ್ಯಗಳನ್ನು ಉದ್ದೀಪಿಸಿ, ನಮ್ಮ ಮೆದುಳಿನ ಆಲೋಚನೆಗಳನ್ನು ಬದಲಿಸಿ, ನಮ್ಮ ಕೈಗಳಿಂದ ಬದಲಾವಣೆಯ ಕೆಲಸ ಮಾಡಿಸಿ, ನಮ್ಮ ಕಾಲುಗಳನ್ನು ಸುಸ್ಥಿರ ಮಾರ್ಗದಲ್ಲಿ ಮುನ್ನೆಡೆಸಲಿ……!
ನಾವು ತಿನ್ನುವ ಎಲ್ಲ ಧಾನ್ಯ ತರಕಾರಿ ಹಣ್ಣುಗಳ ಹಿಂದೆ ಆ ಹೂಗಳ ಪರಾಗಸ್ಪರ್ಷಮಾಡಿದ ಕೀಟಗಳ ಶ್ರಮವನ್ನು ನೆನೆಯಬೇಕಲ್ಲವೇ? ಅವುಗಳಿಲ್ಲದಿದ್ದರೆ ಶೇ.90 ರಷ್ಟು ಆಹಾರ ಉತ್ಪಾದನೆಯಾಗುವುದಿಲ್ಲ ಎಂದರೆ ಜಾಗತಿಕ ಹಸಿವಿನ ಸಮಸ್ಯೆ ನೀಗಿಸುತ್ತಿರುವ ಅವರಿಗೆ ನಾವು ಕೊಟ್ಟ ಬಳುವಳಿ ಡಿ.ಡಿ.ಟಿ ಅನ್ನುವ ಕೀಟನಾಶಕ ! ನಿರಂತರ ಕೆಲಸಮಾಡಿ ಟನ್ ಗಟ್ಟಲೆ ಮಣ್ಣನ್ನು ಗೊಬ್ಬರವಾಗಿಸುವ ಎರೆಹುಳುವಿನ ಕ್ಷಮತೆ, ಸದಾ ಕೆಲಸಮಾಡುವ ಇರುವೆಗಳ ದಣಿವರಿಯದ ದುಡಿಮೆ, ಕಣ್ಣಿಗೆ ಕಾಣದ, ನಮ್ಮ ಜೀವನ ಸುಗಮಗೊಳಿಸಿರುವ ಹೆಸರೇ ಇಲ್ಲದ ಅಸಂಖ್ಯಾತ ಸೂಕ್ಷ್ಮಜೀವಿಗಳ, ಸಸ್ಯ-ಪ್ರಾಣಿ ಪ್ಲವಕಗಳ, ಕೀಟಗಳ ತ್ಯಾಗ, ನಮ್ಮನ್ನು ನಮ್ಮ ಪಾರಿಸಾರಿಕ ಕಾಳಜಿಯನ್ನು ಮತ್ತಷ್ಟು ಪಕ್ವವಾಗಿಸಲಿ. ಅರಿವು ಅನುಷ್ಠಾನವಾಗಲಿ. ದಿನಾಚರಣೆಯ ಆಶಯ ಅನುದಿನವೂ ಆಚರಣೆಗೆ ಬರಲಿ…!
ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು |
ಮೃತನ ಮಣ್ಣಿಂದ ಹೊಸಹುಲ್ಲು
ಮೊಳೆಯುವುದು | |
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ |
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ | |
ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ – ಸರಳವೋ…? ಸಂಕೀರ್ಣವೋ…??
ಪರಿಸರ ಸಂರಕ್ಷಣೆ ಕುರಿತು ನೈಜ ಒಳನೋಟ ನೀಡುವ ಲೇಖನ. ಧನ್ಯವಾದಗಳು
ReplyDeleteಒಂದೇ ಗುಕ್ಕಿಗೆ ಓದಿ ಮುಗಿಸಿದ್ದೀರಿ... ನಿಮ್ಮ ಸ್ಪಂದನೆಗೆ ಧನ್ಯವಾದ ಭಟ್ಟರೇ....🙏
DeleteExcellent scientific article in my kannada...thanks Prasanna...look forward to more...🙏🙏🙏
ReplyDeleteThanks .....I didn't recognise....as it shows unknown
Delete👌👌👌
ReplyDeleteThanks
Deleteಸನ್ಮಿತ್ರ ಪ್ರಸನ್ನ, ಪರಿಸರದ ಕಾಳಜಿಯ ಹಿಂದೆ ಸಕಲ ಜೀವಸಂಕುಲದ ಹಿತ ಅಡಗಿರುವುದನ್ನು ಮನವರಿಕೆ ಮಾಡುವ ನಿನ್ನ ಧಾವಂತ ಅಭಿನಂದನೀಯ ಹಾಗೂ ಅನುಕರಣೀಯ..ಪ್ರಾಣಿಸಂಕುಲದಲ್ಲೇ ಅತ್ಯಂತ ಸ್ವಾರ್ಥ ಜೀವಿ ಮಾನವನ ದುರಾಸೆ, ಇಷ್ಟೆಲ್ಲಾ ಅವನತಿಗೆ ಕಾರಣವಾಗಿರುವುದು ವಿಪರ್ಯಾಸವೇ ಸರಿ.ನೀನೇ ಬರೆದಿರುವಂತೆ,"ಪರಿಸರ ಕಾಳಜಿಯ ಅರಿವು ನಮ್ಮ ಹೃದಯಕ್ಕಿಳಿದು ಮೌಲ್ಯಗಳನ್ನು ಉದ್ದೀಪಿಸಿ,ನಮ್ಮ ಮೆದುಳಿನ ಆಲೋಚನೆಗಳನ್ನು ಬದಲಿಸಿ,ನಮ್ಮ ಕೈಗಳಿಂದ ಬದಲಾವಣೆಯ ಕೆಲಸ ಮಾಡಿಸಿ,ನಮ್ಮ ಕಾಲುಗಳನ್ನು ಸುಸ್ಥಿರ ಮಾರ್ಗದಲ್ಲಿ ಮುನ್ನೆಡೆಸಿ ನಮ್ಮ ಹಸ್ತಕ್ಷೇಪದ ಪ್ರಮಾಣವನ್ನು ಕಡಿಮೆ ಮಾಡುವುದೇ ನಾವು ಮಾಡುವ ಮಹದುಪಕಾರ..!!" ಎನ್ನುವ ನಿನ್ನ ಕಳಕಳಿ ಎಲ್ಲರ ಮನದಾಳಕ್ಕೆ ಇಳಿಯಲಿ ಎಂಬುದೇ ನನ್ನ ಬಯಕೆ.
ReplyDeleteಗೊತ್ತಾಯ್ತು ಕಣೋ....ಅವತ್ತೇ ಧನ್ಯವಾದ ತಿಳಿಸಿದೆ.... ಎಲ್ಲೋ ಕಾಣ್ತಾ ಇಲ್ಲಪ್ಪಾ.....
Deleteಗೊತ್ತಾಯ್ತು ಕಣೋ....ಅವತ್ತೇ ಧನ್ಯವಾದ ತಿಳಿಸಿದೆ.... ಎಲ್ಲೋ ಕಾಣ್ತಾ ಇಲ್ಲಪ್ಪಾ.....
Deleteನಿಜವಾಗಿಯೂ ಪರಿಸರದ ಬಗ್ಗೆ ಕಾಳಜಿ ಇರುವುದಾದರೆ,"ನಮ್ಮ ಹಸ್ತಕ್ಷೇಪದ ಪ್ರಮಾಣವನ್ನು ಕಡಿಮೆ ಮಾಡುವುದೇ ನಾವು ಮಾಡುವ ಮಹದುಪಕಾರ” ಈ ನಿಮ್ಮ ಮಾತು ಬಹಳ ಅರ್ಥಪೂರ್ಣ ವಾಗಿದೆ. ಸಕಾಲಿಕ, ಮಾಹಿತಿಪೂರ್ಣ,ಚಿಂತನೆಗೆ ಹಚ್ಚುವ ಉತ್ತಮ ವೈಜ್ಞಾನಿಕ ಲೇಖನ
ReplyDeleteಧನ್ಯವಾದಗಳು ಮೇಡಂ.... ನಿಮ್ಮ ಸ್ಪಂದನೆಗೆ ....
DeleteNice sir. It's 100℅true.but when people can understand that's don't know. Sir but long essay nice
ReplyDeleteಸಂಬಂಧಗಳನ್ನು ಅವುಗಳ ಸೂಕ್ಷ್ಮತೆಯನ್ನು ವಿವರಿಸಲು ಪ್ರಯತ್ನಿಸಿದ್ದೇ ಲೇಖನ ಧೀರ್ಘವಾಗಲು ಕಾರಣ......
DeleteVery nice prasanna 👍
ReplyDelete,👍
DeleteThanks.....
ReplyDeleteನಿಸರ್ಗದ ನೋವಿಗೆ ಧ್ವನಿಯಾಗಿ ನಿಮ್ಮ ಲೇಖನ ಮೂಡಿಬಂದಿದೆ. ಪರಿಸರದ ಘಟಕಗಳ ನಡುವಿನ ಸೂಕ್ಷ್ಮ ಮತ್ತು ಸಂಕೀರ್ಣ ಅಂತರ್ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದೀರಿ.ಎತ್ತಣ drummer ಎತ್ತಣ ಡೋ ಡೋ ಎತ್ತಣಿಂದೆತ್ತ ಸಂಬಂಧ? ಈ ಸೂಕ್ಷ್ಮ ಸಂಬಂಧಗಳ ಪ್ರತಿಯೊಂದು ಕೊಂಡಿ ಸಡಿಲವಾಗಿ ಕಳಚದಂತೆ ಕಾಯುವ ಗುರುತರ ಹೊಣೆ ನಮ್ಮಮೇಲಿದೆ.ನಾನು ತಿಳಿದಿರದ ಎಷ್ಟೋ ವಿಷಯಗಳನ್ನು ತಿಳಿಸಿಕೊಟ್ಟ. ಚಿಂತನೆಗೆ ಗ್ರಾಸ ನೀಡುವ ಮಾಹಿತಿ ಪೂರ್ಣಲೇಖನ. ಪರಿಸರ ಕಾಳಜಿಯ ಮನೋಭೂಮಿಕೆ ಪುನಃ ಸ್ಥಾಪನೆಗೆ ಪೂರಕವಾದ ಲೇಖನ . ಧನ್ಯವಾದಗಳು. ಮಮತಾ ದೇವಿ ಎಸ್.Mangalore
ReplyDeleteಸೂಕ್ಷ್ಮ ಸಂಬಂಧಗಳನ್ನು ಗುರುತಿಸುವುದು ಮತ್ರು ಜೋಪಾನ ಮಾಡುವುದೇ ಪರಿಸರ ಅಧ್ಯಯನ.... ನಾವು ನಮ್ಮ ಪಾತ್ರವನ್ನು ಮಿತಿಮೀರಿ ವೈಭವೀಕರಿಸಿದ್ದೇ ಜಗನ್ನಾಟಕ ಸೂತ್ರ ತಪ್ಪಲು ಕಾರಣ....ಅಲ್ಲವೇ.....
Deleteನಿಮ್ಮ ಸ್ಪಂದನೆಗೆ ವಂದನೆ.....
ಪರಿಸರ ವ್ಯವಸ್ಥೆಯ ಗೂಡಾರ್ಥಗಳನ್ನು ಅತ್ಯುತ್ತಮ ಉದಾಹರಣೆಗಳ ಮೂಲಕ ಪ್ರಸ್ತುತ ಪಡಿಸಿದ ರೀತಿ ಅನನ್ಯ. ಪರಿಸರ ವ್ಯವಸ್ಥೆಯ ವ್ಯಾಕರಣದಲ್ಲಿ ನಾವೆಷ್ಟು ಹಿಂದುಳಿದಿದ್ದೇವೆ ಎಂಬುದನ್ನು ತಿಳಿಸಿಕೊಟ್ಟಿತು. ಹರಿದು ಬಿದ್ದ ಜೇಡರ ಬಲೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲಾಗದಿದ್ದರೂ ನಮ್ಮ ಹಸ್ತಕ್ಷೇಪದ ಪ್ರಮಾಣವನ್ನು ಕಡಿಮೆ ಮಾಡಲೇ ಬೇಕಾಗಿದೆ.
ReplyDelete"ಎಚ್ಚರಾಗದಿದ್ದರೀಗ ಬುವಿಗೆ ಆಪತ್ತು"
ಇಷ್ಟೊಂದು ಸವಿಸ್ತಾರವಾದ ಸತ್ವಯುತ ಲೇಖನವನ್ನು ಪರಿಸರದ ಬಗ್ಗೆ ನಾನಂತೂ ಓದಿಲ್ಲ.
ಧನ್ಯವಾದ ಸರ್.
ನಿಮ್ಮ ಪ್ರತಿಸ್ಪಂದನೆಗೆ ವಂದನೆಗಳು.... ನಿಮ್ಮೊಂದಿಗೆ ಚರ್ಚಿಸುವೆ....
Deleteಬಹುಶಃ Unknown profile ಅಂತ ನೀನು ಗಮನಿಸಿರಲಿಕ್ಕಿಲ್ಲ.. ನಾನು ನಟಿ ಗುರುವೇ ..ಸನ್ಮಿತ್ರ ಪ್ರಸನ್ನ, ಪರಿಸರದ ಕಾಳಜಿಯ ಹಿಂದೆ ಸಕಲ ಜೀವಸಂಕುಲದ ಹಿತ ಅಡಗಿರುವುದನ್ನು ಮನವರಿಕೆ ಮಾಡುವ ನಿನ್ನ ಧಾವಂತ ಅಭಿನಂದನೀಯ ಹಾಗೂ ಅನುಕರಣೀಯ..ಪ್ರಾಣಿಸಂಕುಲದಲ್ಲೇ ಅತ್ಯಂತ ಸ್ವಾರ್ಥ ಜೀವಿ ಮಾನವನ ದುರಾಸೆ, ಇಷ್ಟೆಲ್ಲಾ ಅವನತಿಗೆ ಕಾರಣವಾಗಿರುವುದು ವಿಪರ್ಯಾಸವೇ ಸರಿ.ನೀನೇ ಬರೆದಿರುವಂತೆ,"ಪರಿಸರ ಕಾಳಜಿಯ ಅರಿವು ನಮ್ಮ ಹೃದಯಕ್ಕಿಳಿದು ಮೌಲ್ಯಗಳನ್ನು ಉದ್ದೀಪಿಸಿ,ನಮ್ಮ ಮೆದುಳಿನ ಆಲೋಚನೆಗಳನ್ನು ಬದಲಿಸಿ,ನಮ್ಮ ಕೈಗಳಿಂದ ಬದಲಾವಣೆಯ ಕೆಲಸ ಮಾಡಿಸಿ,ನಮ್ಮ ಕಾಲುಗಳನ್ನು ಸುಸ್ಥಿರ ಮಾರ್ಗದಲ್ಲಿ ಮುನ್ನೆಡೆಸಿ ನಮ್ಮ ಹಸ್ತಕ್ಷೇಪದ ಪ್ರಮಾಣವನ್ನು ಕಡಿಮೆ ಮಾಡುವುದೇ ನಾವು ಮಾಡುವ ಮಹದುಪಕಾರ..!!" ಎನ್ನುವ ನಿನ್ನ ಕಳಕಳಿ ಎಲ್ಲರ ಮನದಾಳಕ್ಕೆ ಇಳಿಯಲಿ ಎಂಬುದೇ ನನ್ನ ಬಯಕೆ.
ReplyDeleteReply
ಇಲ್ಲ ಕಣಪ್ಪಾ... ಅವತ್ತೇ ಪ್ರತಿಕ್ರಿಯೆ ಬರೆದೆ... ಎಲ್ಲೋ ಕಾಣೆಯಾಗಿದೆ....😀
Deleteನಿನ್ನ ಮಾತಿಗೆ ...ಪ್ರೇರಣೆಗೆ ಚಿರಋಣಿ
ಅತ್ಯುತ್ತಮ ಲೇಖನ ಸಾರ್...������������������
ReplyDelete🙏
Deleteಪರಿಸರ ಕಾಳಜಿ ಇಲ್ಲದ ನಮ್ಮ ನಡವಳಿಕೆಗೆ ಹಿಡಿದ ಕನ್ನಡಿ. ಏಳಿ ಎದ್ದೇಳಿ ಎಚ್ಚರಗೊಳ್ಳಿ ಎಂದು ವಿವೇಕಾನಂದರ ವಾಣಿ ಇಲ್ಲಿ ಅನುರಣನಗೊಂಡಿದೆ ಪರಿಸರದ ರಕ್ಷಣೆಯೆಡೆ.
ReplyDeleteಪ್ರತಿಸ್ಪಂದನೆಗೆ ಧನ್ಯವಾದ
DeleteSir your words are so inspirational to me.m working as a guest lecturer in one rural college from 7 years. M also trying to create more n more awareness among youth students its really challenging work but your words are so informative sir .thank you
ReplyDeleteThanks Sir.... Let's continue inspiring those who come in contact with you.....
ReplyDeleteಪರಿಸರ ಜವಾಬ್ದಾರಿಯ ಬಗ್ಗೆ ದೀರ್ಘವಾದ ಆಯಾಮದ ಬಗ್ಗೆ ದೀರ್ಘವಲ್ಲದ ಲೇಖನ ಇದಾಗಿದೆ. ಬಹಳ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದೆ. ಗೊತ್ತಿಲ್ಲದ ಆಯಾಮಗಳನ್ನೂ ಪರಿಚಯಿಸಿದ್ದೀರಿ ಧನ್ಯವಾದಗಳು. ಉತ್ತಮವಾದ ದಾರಿಯ ಬಗ್ಗೆಯೂ ತಿಳಿಸಿ.
ReplyDeleteಧನ್ಯವಾದಗಳು....ಅವುಗಳ ಬಗ್ಗೆ ಮುಂದೆ ಬರೆಯಬೇಕಿದೆ.....
DeleteVERY NICE ARTICLE SIR. THANK YOU SIR.
ReplyDeleteThank you....
Deleteಒಳ್ಳೆಯ ಲೇಖನ! ಮುಖ್ಯವಾದ ವಿಜ್ಞಾನ!
ReplyDelete"ಇದರರ್ಥ ಪರಿಸರ ವ್ಯವಸ್ಥೆಯು ನಾಶವಾಗುವ ಮೊದಲು ನಮಗೆ ಅನೇಕ ಸಂಕೇತಗಳನ್ನು ನೀಡುತ್ತದೆ. ಆದರೆ ನಮ್ಮ ಮುಂದಿರುವ ಪ್ರಶ್ನೆ ಅವರಿಗೆ ಇಂದ್ರಿಯಗಳು, ಜ್ಞಾನ ಮತ್ತು ಅವುಗಳನ್ನು ಗ್ರಹಿಸುವ ಕೌಶಲ್ಯವಿದೆಯೇ ಎಂಬುದು. ಏಕೆಂದರೆ ಇಡೀ ದೇಶ / ವಿಶ್ವ ನೀತಿಯನ್ನು ಈ ಗ್ರಹಿಸಿದ ಶಕ್ತಿಯ ಮೇಲೆ ನಿರ್ಮಿಸಲಾಗಿದೆ"
ಬಹುಶಃ ಅವರು ಇಂದ್ರಿಯಗಳನ್ನು ಹೊಂದಿದ್ದಾರೆ, ಅವರು ವೇಗವಾಗಿ ಹೊಂದಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ
Life finds a way!
ಜೀವನವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ
ಜುರಾಸಿಕ್ ಪಾರ್ಕ್, ಮಾಲ್ಕಮ್ ವಿವರಿಸುತ್ತಾರೆ,, ಡೈನೋಸಾರ್‌ಗಳನ್ನು ನಿಯಂತ್ರಿಸಲು ಮತ್ತು ಹೊಂದಲು ಅವರು ಏನು ಮಾಡಿದರೂ, ಆ ವಿಷಯಗಳು ಅಭಿವೃದ್ಧಿ ಹೊಂದಲು ಮತ್ತು ಬದುಕಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಜ್ಞಾನಿಗಳು ಎಲ್ಲಾ ಜೀವಿಗಳನ್ನು ಒಂದೇ ಲಿಂಗ ಎಂದು ತಳೀಯವಾಗಿ ವಿನ್ಯಾಸಗೊಳಿಸಿದ ಕಾರಣ ಅವರು ಸಂತಾನೋತ್ಪತ್ತಿ ಮಾಡುವ ಮಾರ್ಗವನ್ನು ಇನ್ನೂ ಕಂಡುಹಿಡಿಯುವುದಿಲ್ಲ ಎಂದಲ್ಲ
Chaya Subba Rao
ಹೌದು ನೀವು ಹೇಳಿದ್ದು ಸರಿ.... ಎಲ್ಲಾ ಪರಿಸರ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಮತ್ತು ಆ ಪರಿಸರ ವನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಏಕೈಕ ಜೀವಿ ಮಾನವ.
Deleteಈ ಸಾಮರ್ಥ್ಯ ದಿಂದಾಗಿ ಮಾನವ ಯಾರಿಗೂ ಹೊಂದಿ ಬಾಳಲೇ ಬೇಕೆಂಬ ಕಟ್ಟುಪಾಡಿಗೆ ಒಳಗಾಗಲಿಲ್ಲಾ.....ಹಾಗಾಗಿ ಆ ವ್ಯವಸ್ಥೆಯೆಡೆಗಿನ ಗೌರವವೂ ಪ್ರೀತಿಯೂ ನಶಿಸತೊಡಗಿತು....