Tuesday, May 4, 2021

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ’ದ ಐದನೆಯ ಸಂಚಿಕೆ. ಕಳೆದ ನಾಲ್ಕು ಸಂಚಿಕೆಗಳಿಗೆ ನಾಡಿನ ಶಿಕ್ಷಕ ಮಿತ್ರರು ಹಾಗೂ ವಿಜ್ಞಾನಾಸಕ್ತರು ನೀಡಿರುವ ಪ್ರತಿಕ್ರಿಯೆ ಆಶಾದಾಯಕವಾಗಿದೆ. ಅದರಲ್ಲಿಯೂ, ನಮ್ಮಲ್ಲಿ ಪ್ರಕಟವಾಗುತ್ತಿರುವ ಸಾಂದರ್ಭಿಕ ಲೇಖನಗಳ ಬಗ್ಗೆ ಹಾಗೂ ಸಾಧಕರ ಪರಿಚಯ ಲೇಖನಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಏಪ್ರಿಲ್ ೨೨ರ  ‘ವಿಶ್ವ ಭೂ ದಿನ’ಕ್ಕೆ ಸಂಬಂಧಿಸಿದಂತೆ ಪ್ರಕಟವಾದ ‘ ಭೂಮಿ ಅಂದರೆ ಏನರ್ಥ? ‘ ಲೇಖನವು ಓದುಗರನ್ನು ಅಂತರಾವಲೋಕನಕ್ಕೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಗಣಿತಜ್ಞ ವಿ.ಎಸ್. ಶಾಸ್ತ್ರಿಯವರ ‘ಗಣಿತವನ’ ದ ಪರಿಚಯ ಹಲವಾರು ಶಿಕ್ಷಕರನ್ನು ಅಲ್ಲಿಗೆ ಭೇಟಿ ನೀಡುವಂತೆ ಪ್ರೇರೇಪಣೆ ನೀಡಿದೆ. ಲೇಖನಗಳು ಓದುಗರಿಗೆ ಪ್ರೇರಣಾದಾಯಕವಾಗುತ್ತಿದೆ ಎಂದಲ್ಲಿ ನಾವು ನಮ್ಮ ಗುರಿಯತ್ತ ಸಾಗುತ್ತಿದ್ದೇವೆ ಎಂಬ ನಂಬಿಕೆ ನಮಗೆ ಮೂಡಿದೆ.

ಮೇ ತಿಂಗಳ ಸಂಚಿಕೆಯಲ್ಲಿ ವಿ.ಎಸ್. ಶಾಸ್ತ್ರಿಯವರ ಶ್ರಮದ ಇನ್ನೊಂದು ಮುಖವಾದ ಅವರ ವೈಯುಕ್ತಿಕ ವಸ್ತು ಸಂಗ್ರಹಾಲಯದ ಪರಿಚಯ ಲೇಖನವಿದೆ. ಸಸ್ಯಗಳು ಸುವರ್ಣ ಅನುಪಾತವನ್ನು ಅಳವಡಿಸಿಕೊಂಡಿರುವ ಬಗ್ಗೆ ಒಂದು ಲೇಖನವಿದೆ. ಅರಣ್ಯದ ರೋಚಕತೆಗಳನ್ನು ಪರಿಚಯಿಸುವ ಪ್ರಯತ್ನವಿದೆ. ಚಾರ್ಲ್ಸ್ ಡಾರ್ವಿನ್ ಬಗ್ಗೆ ಕುತೂಹಲಕರ ಮಾಹಿತಿ ನೀಡುವ ಲೇಖನವಿದೆ. ಹಾಲಿನ ಉಪಯುಕ್ತತೆಯನ್ನು ಪರಿಚಯಿಸುವ ಲೇಖನವೂ ಇದೆ. ಜೊತೆಗೆ, ಮಾನ್ಯ ಪ್ರಧಾನಮಂತ್ರಿಗಳ ‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮದ ಅಡಿಯಲ್ಲಿ ನಡೆದ ‘ಆಟಿಕೆ ಮೇಳ’ದಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಸಹಯೋಗದ ಬಗ್ಗೆ ಒಂದು ವರದಿಯೂ ಇದೆ. ಈ ಸಂಚಿಕೆಯಿಂದ ‘ತೆರೆ ಮರೆಯ ಸಾಧಕರು’ ಶೀರ್ಷಿಕೆಯಲ್ಲಿ ಪ್ರತಿ ತಿಂಗಳು ಒಬ್ಬ ಕ್ರಿಯಾಶೀಲ ಶಿಕ್ಷಕರ ಸಾಧನೆಯ ಪರಿಚಯ ಮಾಡಿಕೊಡಲಾಗುತ್ತದೆ. ಎಂದಿನಂತೆ, ನಿಮ್ಮನ್ನು ರಂಜಿಸಲು ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.

ರಾಷ್ಟ್ರದಾದ್ಯಂತ ಕೋವಿಡ್-೧೯ರ ಎರಡನೆಯ ಅಲೆಯ ತೀವ್ರತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಎಂದಿಗಿಂತ ಹೆಚ್ಚಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ, ಎಲ್ಲೆಡೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಸೂಕ್ತವಾದ ಮಾಸ್ಕ್ ಧರಿಸುವ ಮೂಲಕ ಮಾತ್ರ ಸೋಂಕು ಹರಡುವುದನ್ನು ನಿಯಂತ್ರಿಸಬಹುದಾಗಿದೆ. ಜವಾಬ್ದಾರಿಯುತ ನಾಗರೀಕರಾದ ನಾವು ಈ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲದೆ, ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಿ, ಈ ಸಂಕಷ್ಟದಿಂದ ಪಾರಾಗುವಂತೆ ಮಾಡಬೇಕಿದೆ. ಇದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಈ ಸಂಚಿಕೆಯನ್ನು ಆಸ್ವಾದಿಸುವಿರಲ್ಲವೇ ?

 

ಡಾ, ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು


ಸಸ್ಯಗಳಲ್ಲಿ ಸುವರ್ಣ ಅನುಪಾತದ ಸೊಗಸು !

ಸಸ್ಯಗಳಲ್ಲಿ ಸುವರ್ಣ ಅನುಪಾತದ ಸೊಗಸು !

ಲೇಖಕರು: ಡಾ. ಟಿ.ಎ.ಬಾಲಕೃಷ್ಣ ಅಡಿಗ 


ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು


ನಿಸರ್ಗದಲ್ಲಿ ಗಣಿತೀಯ ತತ್ವಗಳು ಜೀವಿಗಳ ಅನೇಕ ವಿನ್ಯಾಸ ಹಾಗೂ ರಚನೆಗಳಲ್ಲಿ ಹಾಸು ಹೊಕ್ಕಾಗಿವೆ ಎಂಬುದಕ್ಕೆ ಅಸಂಖ್ಯಾತ ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಅದರಲ್ಲಿಯೂ, ಫಿಬೋನಾಚಿ ಸಂಖ್ಯಾ ಅನುಕ್ರಮ (1, 2, 3, 5, 8. 13, 21, 34,........) ಮತ್ತು ಸಂಬಂಧಿಸಿದ ಸುವರ್ಣ ಅನುಪಾತ ( 1. 6180.........) ಸೂಕ್ಷ್ಮಜೀವಿಗಳ ರಚನಾ ವೈವಿಧ್ಯದಿಂದ ಪ್ರಾರಂಭಿಸಿ ಮಾನವನ ದೇಹ ರಚನೆಯ ವಿನ್ಯಾಸದವರೆಗೂ ವ್ಯಾಪಿಸಿದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ? ಈ ಬಾರಿಯ ಲೇಖನದಲ್ಲಿ ಸಸ್ಯಗಳಲ್ಲಿ ವ್ಯಾಪಕವಾಗಿರುವ ಸುವರ್ಣ ಅನುಪಾತದ ಸೊಗಸಿನ ಕೆಲವು ಉದಾಹರಣೆಗಳನ್ನು ಗಮನಿಸೋಣ.

ಇದೇನು ಮನೆಯೋ ? ವಾಚನಾಲಯವೋ ? ವಸ್ತು ಸಂಗ್ರಹಾಲಯವೋ? ಕಲಾ ಕುಟೀರವೋ?

ಇದೇನು ಮನೆಯೋ ? ವಾಚನಾಲಯವೋವಸ್ತು ಸಂಗ್ರಹಾಲಯವೋಕಲಾ ಕುಟೀರವೋ?   


ಲೇಖಕರು:    ರಾಮಚಂದ್ರ ಭಟ್ ಬಿ.ಜಿ.

ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು

 


ಕೋಲಾರದ ವಿ.ಎಸ್.‌ಎಸ್.‌ ಶಾಸ್ತ್ರಿಯವರನ್ನು ಈಗಾಗಲೇ ಪರಿಚಯಿಸಿದ್ದೇವಲ್ವಾ? ಸವಿಜ್ಞಾನ ತಂಡ ಶಾಸ್ತ್ರೀಜೀಯವರ ಮನೆಯ ಒಳಗೆ ಕಾಲಿಡುತ್ತಿದ್ದಂತೆ ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎನ್ನುವ ಸತ್ಯದ ಅನಾವರಣವಾಯಿತು. ಆಗ ನಮಗೆ ಅನಿಸಿದ್ದು ನಾವು ಬಂದಿದ್ದೆಲ್ಲಿಗೆ? ಇದೇನು ಮನೆಯೋ ? ವಾಚನಾಲಯವೋ? ವಸ್ತುಸಂಗ್ರಹಾಲಯವೋ? ಕಲಾಕುಟೀರವೋ? ಒಬ್ಬ ಮಾದರಿ ಆಚಾರ್ಯೋತ್ತಮನಾಗಬೇಕಾದರೆ ನಾವು ಏನೆಲ್ಲ ಮಾಡಬೇಕೋ ಅವೆಲ್ಲವೂ ಅಲ್ಲಿದ್ದವು. ಬ್ಯಾಂಕ್  ಉದ್ಯೋಗಿಯಾಗಿದ್ದ ಶಾಸ್ತ್ರೀಜಿಯವರು ಶಿಕ್ಷಣಕ್ಷೇತ್ರದ ಸೆಳೆತಕ್ಕೆ ಸಿಕ್ಕಿ ಅದನ್ನು  ತಮ್ಮ ಮೈಯಲ್ಲಿ ಆವಾಹಿಸಿಕೊಂಡಿದ್ದು ಹೇಗೆ? ಅದೊಂದು ರೋಚಕ ಕಥೆ. ಅದನ್ನು ಅವರ ಬಾಯಲ್ಲೇ ಕೇಳುವಿರಂತೆ.  ಈಗ ನಾನು ಹೇಳ ಹೊರಟಿರುವುದು ವಸ್ತು ಸಂಗ್ರಹಾಲಯದಂತಿರುವ ಅವರ ಮನೆಯ ಬಗ್ಗೆ !!! ಹಾಗೆಯೇ ಅಲ್ಲಿ ನಾವು ನೋಡಿ, ನಲಿದು ಕಲಿತು ಸ್ವಾಂಗೀಕರಿಸಿದ ನಮ್ಮ ಅನುಭವಗಳ ಬಗ್ಗೆ. ತಮ್ಮ ಜ್ಞಾನವನ್ನು ಇತರರಿಗೆ ಉಣಿಸಬೇಕೆಂಬ ಶಾಸ್ತ್ರೀಜಿಯವರ ಹಪಾಹಪಿ, ಕಾಳಜಿ ಬಹುಷಃ ನಮ್ಮೆಲ್ಲರಿಗೂ ಅನುಕರಣೀಯ.

ಚಾರ್ಲ್ಸ್ ಡಾರ್ವಿನ್ - ಮನುಕುಲದ ಅರಿವನ್ನು ವಿಸ್ತರಿಸಿದ ಮಹಾಚೇತನ

ಚಾರ್ಲ್ಸ್ ಡಾರ್ವಿನ್ - ಮನುಕುಲದ ಅರಿವನ್ನು ವಿಸ್ತರಿಸಿದ ಮಹಾಚೇತನ

ಲೇಖಕರು: ರಾಘವೇಂದ್ರ ಮಯ್ಯ ಎಂ.ಎನ್. 

ಸ.ಶಿ.  ಸರ್ಕಾರಿ ಪ್ರೌಢಶಾಲೆ ,

ಬೈರಾಪಟ್ಟಣ. ಚನ್ನಪಟ್ಟಣ. 

ರಾಮನಗರ ಜಿಲ್ಲೆ . 




ಅದು 1860ನೇ ಇಸವಿಯ ಒಂದು ದಿನ, ಆಕ್ಸ್ಫರ್ಡ್ ಸಭಾಂಗಣದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ವೇದಿಕೆಯ ಮೇಲೆ ಬಿಷಪ್ ಸಾಮ್ಯುಯಲ್ ವಿಲ್‌ಬರ್‌ಫೋರ್ಸ್ ಮತ್ತು ವಿಜ್ಞಾನಿಗಳಾದ ಹಕ್ಸ್ಲೀ ಮತ್ತು ಹೂಕರ್ ಇದ್ದರು. ನೆರೆದಿದ್ದವರಲ್ಲಿ ಬಹುಪಾಲು ಕ್ರೈಸ್ತ ಆಸ್ತಿಕರು. ಕೆಲವೇ ದಿನಗಳ ಹಿಂದೆ ಅವರು ಗ್ರಂಥವೊಂದನ್ನು ಸುಡಲು ಯೋಜಿಸಿದ್ದರು. ಆ ಗ್ರಂಥ ಅವರ ಧಾರ್ಮಿಕ ಭಾವನೆಯ ಮೇಲೆ ಗಧಾ ಪ್ರಹಾರ ಮಾಡಿತ್ತು. ಕ್ರೈಸ್ತ  ಗುರುಗಳು ತತ್ತರಿಸಿ ಹೋಗಿದ್ದರು. ಆ ಗ್ರಂಥದಲ್ಲಿನ ಸಿದ್ಧಾಂತ ಸುಳ್ಳೆಂದು ಸಾಬೀತು ಮಾಡುವುದಕ್ಕೆಂದೇ ಬ್ರಿಟಿಷ್ ಅಸೋಸಿಯೇಷನ್‌ನ ಆ ಸಭೆಯನ್ನು ಆಕ್ಸ್‌ಫರ್ಡ್  ಸಭಾಂಗಣದಲ್ಲಿ ಸೇರಿಸಲಾಗಿತ್ತು. ಗ್ರಂಥದ ಲೇಖಕನಿಗೆ ಇವರನ್ನು ಎದುರಿಸುವ ಚೈತನ್ಯವಿರಲಿಲ್ಲ. ಜೊತೆಗೆ, ತೀವ್ರತರವಾದ ಖಾಯಿಲೆ. ಹೀಗಾಗಿ ಅವನ ಗೆಳೆಯರಾದ ಡಾ|| ಹಕ್ಸ್ಲೀ ಮತ್ತು ಪ್ರೊ|| ಹೂಕರ್ ಬಂದಿದ್ದರು. ಬಿಷಪ್ ಎದ್ದು ನಿಂತರು. ಗಿಜಿಗುಡುತ್ತಿದ್ದ ಸಭಾಂಗಣ ಶಾಂತವಾಯಿತು. ಅತ್ಯುತ್ತಮ ವಾಗ್ಮಿ ಎಂದು ಹೆಸರು ಮಾಡಿದ್ದ ಬಿಷಪ್ ಸ್ವತಃ ಪುಸ್ತಕ ಓದಿರಲಿಲ್ಲ. ಸಹಾಯಕರು ಹೇಳಿದ ಸಾರಾಂಶ ಅವರ ತಲೆಯಲ್ಲಿತ್ತು. ಸತತ ಒಂದು ಗಂಟೆಯ ಕಾಲ ಗ್ರಂಥವನ್ನು ಟೀಕಿಸಿ ಅವರು ಮಾತನಾಡಿದರು. ನಂತರ ಹಕ್ಸ್ಲೀ ಕಡೆಗೆ ತಿರುಗಿ ವ್ಯಂಗ್ಯವಾಗಿ ಕೇಳಿದರು. “ನೀವು ಯಾವ ಕಡೆಯ ಮಂಗನಿಂದ ಇಳಿದು ಬಂದಿರೋದು? ಅಜ್ಜನ ಕಡೆಯ ಮಂಗನಿಂದಲೋ? ಅಜ್ಜಿ ಕಡೆಯ ಮಂಗನಿಂದಲೋ? ವಾತಾವರಣ ಕೂಡಲೇ ತಿಳಿಯಾಗಿ ಹೋಯ್ತು. ಗ್ರಂಥ ವಿರೋಧಿಗಳು ಚಪ್ಪಾಳೆ ತಟ್ಟಿದರು. ಅಣಕಿಸುವ ಧ್ವನಿ ಹೊರಡಿಸಿದರು. ಇದೆಲ್ಲವನ್ನೂ ಸಹಿಸಿದ ಡಾ|| ಹಕ್ಸ್ಲೀ ಭಾಷಣಕ್ಕೆ ಎದ್ದು ನಿಂತರು. ನಿಧಾನವಾಗಿ ಭಾಷಣ ಪ್ರಾರಂಭಿಸಿದ ಅವರು ಬಿಷಪ್‌ರ ಆಕ್ಷೇಪಣೆಗಳಿಗೆಲ್ಲ ಉತ್ತರ ನೀಡಿ ಗ್ರಂಥಕರ್ತನ ನಿಲುವನ್ನು ಸಮರ್ಥಿಸಿದರು. ಕೊನೆಗೆ ಬಿಷಪ್‌ರ ಕಡೆ ತಿರುಗಿ ಗಂಭೀರವಾಗಿಯೇ ನುಡಿದರು . “ನಾನು ಯಾವ ಕಡೆಯ ಕಪಿಯಿಂದ ಇಳಿದು ಬಂದರೇನು? ಸತ್ಯವನ್ನು ಮರೆಮಾಚಲು ತನ್ನೆಲ್ಲಾ ಮಾತಿನ ಕೌಶಲವನ್ನು ಬಳಸುವ ಮನುಷ್ಯನ ಮೂಲಕ ಭೂಮಿಗೆ ಬರುವುದಕ್ಕಿಂತ ಕಪಿಯಿಂದ ವಿಕಾಸವಾಗುವುದೇ ಉತ್ತಮ ಎಂದು ನಾನು ಭಾವಿಸುತ್ತೇನೆ”. ‘ಸೋಪಿ ಸ್ಯಾಂ’ ಎಂದೇ ಹೆಸರಾಗಿದ್ದ ಬಿಷಪ್ ವಿಲ್ಬರ್ ಫೋರ್ಸ್ರ ಮುಖ ಕಪ್ಪಿಟ್ಟಿತು. ಅವರು ತಲೆ ತಗ್ಗಿಸಿದರು. ಹೂಕರ್‌ಗೆ ಅತ್ಯಂತ ಸಂತಸವಾಗಿತ್ತು. ಧಾರ್ಮಿಕ ಪ್ರತಿನಿಧಿಗಳ ತಂಡವೊಂದು ಘೋಷಣೆ ಕೂಗಿ ಪ್ರತಿಭಟಿಸಿದರು. ಅಂತಿಮವಾಗಿ ‘ಬ್ರಿಟಿಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ನ  ಆ ಸಭೆ ಗ್ರಂಥದ ಸಿದ್ಧಾಂತವನ್ನು ಒಪ್ಪಿಕೊಂಡಿತು. ಆ ಗ್ರಂಥವೇ ... 
ದಿ ಆರಿಜನ್ ಆಫ್ ಸ್ಪೀಷೀಸ್ ಬೈ ಮೀನ್ಸ್ ಆಫ್ ನ್ಯಾಚುರಲ್ ಸೆಲೆಕ್ಷನ್’.            
ಅದರ ಲೇಖಕ ಚಾರ್ಲ್ಸ್ ರಾಬರ್ಟ್ ಡಾರ್ವಿನ್. ನಿಜಕ್ಕೂ ಆ ಪುಸ್ತಕದಲ್ಲಿ ಏನಿದೆ? ಅದೊಂದು ರೋಮಾಂಚಕ ಗಾಥೆ. ಬನ್ನಿ ತಿಳಿಯೋಣ.

ಅರಣ್ಯದ ರೋಚಕತೆಗಳು

ಅರಣ್ಯದ ರೋಚಕತೆಗಳು

ಲೇಖಕರು: ಡಿ.ಕೃಷ್ಣ ಚೈತನ್ಯ.

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹಾಯ್ ಗೆಳೆಯರೆ, ಕಳೆದ ಸಂಚಿಕೆಯಲ್ಲಿ ʼವನ್ಯಜೀವಿಗಳು : ನಮ್ಮಹಿತೈಷಿಗಳುʼ ಎಂಬ ಲೇಖನವನ್ನು ತಮ್ಮ ಮುಂದಿಟ್ಟಿದ್ದೆ ಅಲ್ಲವೇ? ಅಂತದ್ದೇ ಒಂದು ಲೇಖನ, ಆದರೆ ಭಿನ್ನವಾದ ಸಂಗತಿಗಳುಳ್ಳ ರೋಚಕತೆಯಿಂದ ಕೂಡಿರುವ, ರೋಮಾಂಚನವನ್ನುಂಟುಮಾಡುವ ಅಂಶಗಳುಳ್ಳ ಸಂಗತಿ ಇದ್ದರೆ ಚೆನ್ನ, ಅಲ್ಲವೇ? ಮಾರ್ಚ್ 21, ವಿಶ್ವ ಅರಣ್ಯ ದಿನ ಆಚರಿಸಿದೆವು. ಅದರ ಹಿನ್ನೆಲೆಯಲ್ಲಿ ಅರಣ್ಯದ ಕೆಲವು ರೋಚಕ ಅಂಶಗಳನ್ನು ತಮ್ಮ ಮುಂದೆ ಇಡುತ್ತಿದ್ದೇನೆ.


 

ಹಾಲು: ಪೋಷಕಾಂಶಗಳ ಸಾಗರ

 

ಹಾಲು: ಪೋಷಕಾಂಶಗಳ ಸಾಗರ

ಲಕ್ಷ್ಮೀ ಪ್ರಸಾದ್ ನಾಯಕ್ 

ಸರ್ಕಾರಿ ಪ್ರೌಢಶಾಲೆ (ಆರ್ ಎಂಎಸ್ ಎ ಕನ್ನಡ ),

ಕೆಂಗೇರಿ,  ಬೆಂಗಳೂರು .





ಹಾಲು.. 

ಪರಿಶುದ್ಧತೆಯ ಸಂಕೇತ

ಪ್ರಾಮಾಣಿಕತೆಯ ಸೂಚಕ

ನ್ಯಾಯಾನ್ಯಾಯ ನಿರ್ಣಯಿಸುವ ದ್ಯೋತಕವಾಗಿ ಬಹು ಹಿಂದಿನಿಂದಲೂ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಾಲಿನಂತಹ ಮನಸ್ಸು, ಎಲ್ಲಿ ಹಾಲು ಮುಟ್ಟಿ ಪ್ರಮಾಣ ಮಾಡು, ಹಂಸಕ್ಷೀರ ನ್ಯಾಯ ಮುಂತಾದ ಮಾತುಗಳಲ್ಲಿ ಹಾಲಿಗೆ ಆರೋಪಿಸಿರುವ ಮೇಲಿನ ಎಲ್ಲಾ ಗುಣಗಳನ್ನು ನಾವು ಗಮನಿಸಬಹುದು. ವೇದಗಳ ಕಾಲದಲ್ಲಿ ಪಶುಸಂಪತ್ತಿಗೆ ವಿಶೇಷ ಮನ್ನಣೆ ನೀಡಲಾಗಿತ್ತು. ವ್ಯಕ್ತಿಯೊಬ್ಬ ಹೊಂದಿರುವ ಗೋವುಗಳ ಸಂಖ್ಯೆಯ ಆಧಾರದ ಮೇಲೆ ಅವನ ಶ್ರೀಮಂತಿಕೆಯನ್ನು ಲೆಕ್ಕ ಹಾಕಲಾಗುತ್ತಿತ್ತು .

ಯಾಜ್ಞವಲ್ಕ್ಯ ಮಹಾಮುನಿಯ ದಿವ್ಯ ಚರಿತ್ರೆಯನ್ನು ಹೇಳುವ ದೇವುಡುರವರ “ಮಹಾದರ್ಶನ” ಕಾದಂಬರಿಯಲ್ಲಿ ನಮ್ಮ ಗಮನ ಸೆಳೆಯುವುದು ಅಲ್ಲಿ ಬರುವ ಗೋಸಂಪತ್ತು, ಧಾರೆಯಾಗಿ ಹರಿವ ಹಾಲು ತುಪ್ಪಗಳ ವಿಚಾರವೇಈ ವಿಚಾರ ಇಷ್ಟಕ್ಕೇ ಇರಲಿ. ಹಾಲು ಮತ್ತು ಹಾಲಿನ ಉತ್ಪನ್ನಗಳು ದೇಹದ ಪೋಷಣೆಯಲ್ಲಿ ಮಹತ್ತರ ಪಾತ್ರವಹಿಸುವುದು ನಮ್ಮ ಆಯುರ್ವೇದದಲ್ಲಿ ಸೂಚಿತವಾಗಿದೆ.


ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ -2021

ಆತ್ಮ ನಿರ್ಭರ ಭಾರತಕ್ಕೆ ಅಡಿಗಲ್ಲಾದ ರಾಷ್ಟ್ರೀಯ ಆಟಿಕೆ ಮೇಳ -2021 

ಲೇಖಕರು: ಚನ್ನಪ್ಪ ಕೆ.ಎಂ

ಸಹ ಶಿಕ್ಷಕರು

ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)

ದೇವನಹಳ್ಳಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ


ಭಾರತಕ್ಕೆ ಅಗತ್ಯವಿರುವ ಆಟಿಕೆಗಳ ಪೈಕಿ ಪ್ರತಿಶತ 80ರಷ್ಟು ಆಟಿಕೆಗಳನ್ನು ಭಾರತವು ಹೊರದೇಶಗಳಿಂದ ಅದರಲ್ಲೂ ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಆಮದು ಮಾಡಿಕೊಳ್ಳುತ್ತಿರುವ ಆಟಿಕೆಗಳ ವಹಿವಾಟು ಅಂದಾಜು ಸರಾಸರಿ ವಾರ್ಷಿಕ  6.7 ಲಕ್ಷ ಕೋಟಿ.

ತೆರೆ ಮರೆಯ ಸಾಧಕರು: ಮಧುಗಿರಿಯ ಗಿರಿ - ಶಿಕ್ಷಕ ಗಿರೀಶ್ ಬಿ.ಎಸ್

 ತೆರೆ ಮರೆಯ ಸಾಧಕರು

ಮಧುಗಿರಿಯ ಗಿರಿ - ಶಿಕ್ಷಕ ಗಿರೀಶ್ ಬಿ.ಎಸ್

ಲೇಖಕರು: ಶ್ರೀನಿವಾಸ್.ಎ

‘ಕಾಯಕವೇ ಕೈಲಾಸ’ ಎಂಬ ಉಕ್ತಿಯನ್ನು ವ್ರತವಾಗಿ ಸ್ವೀಕರಿಸಿದ ಅನೇಕ ವ್ಯಕ್ತಿಗಳು ಸಮಾಜವನ್ನು ಅರ್ಥಪೂರ್ಣವಾಗಿ ಕಟ್ಟುವಕಾಯಕ ಮಾಡುತ್ತಲೇ ಬಂದಿದ್ದಾರೆ. ಶಿಕ್ಷಕ ವಿದ್ಯಾರ್ಥಿಗಳ ಬಾಳನ್ನು ಬೆಳಕಾಗಿಸುವ ಸೊಡರು. ಇದೇ ಹಾದಿಯಲ್ಲಿ ನಡೆಯುತ್ತಿರುವ ಎಲೆ ಮರೆಯ ಕಾಯಿಯಂತೆ ಇರುವ ಸಾಧಕ ಶಿಕ್ಷಕ ಮಿತ್ರರೊಬ್ಬರ ಪರಿಚಯ ಮಾಡಿಕೊಡಲು ನನಗೆ ವಿಪರೀತ ಹೆಮ್ಮೆ ಎನಿಸುತ್ತದೆ.  ‘ವಿದ್ಯೆಗೆ ವಿನಯವೇ ಭೂಷಣ’ ಎಂಬ ನಾಣ್ಣುಡಿಗೆ ಅನ್ವರ್ಥವೇ ಈ ಮಧುಗಿರಿಯ ಗಿರಿ.  ಕೊರಟಗೆರೆ ತಾಲ್ಲೂಕಿನ ಮಧುಗಿರಿ ಶೈಕ್ಷಣೆಕಜಿಲ್ಲೆಯ ವಡ್ಡಗೆರೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಧಕ ಶಿಕ್ಷಕನೇ ಸ್ನೇಹಿತ ಗಿರೀಶ್ ಬಿ.ಎಸ್. 

ವಿಜ್ಞಾನದ ಒಗಟುಗಳು - ಮೇ 2021

 ವಿಜ್ಞಾನದ ಒಗಟುಗಳು - ಮೇ ೨೦೨೧

ಕಣ ಕಣದಲೂ ನಾನಿರುವೆ
ಡೆಮಾಕ್ರೈಟಸ್ ಕಣಾದರಿಗೋ ನನ್ನದೇ ಕನವರಿಕೆ
ನಿರ್ಜೀವವೆಂದು ಹೇಳುವರು ನನ್ನ
ಆದರೆ ನನ್ನೊಳಗೋ ಚೈತನ್ಯದಾ ರಾಶಿ
ಈಗ ಹತ್ತಿತೋ ನನ್ನ ಗುರುತು

ಉ: ಪರಮಾಣು 
 
ನಮ್ಮ ನಡುವಿನೊಂದು ವಿಶಿಷ್ಟ ಬಲ
ಬಂಡೆಗಳ ಸೀಳಿ ಪುಡಿಗಟ್ಟಬಲ್ಲುದು
ನಾನಿಲ್ಲದೆ ತಿರೆ ಜೀವಗ್ರಹವಲ್ಲ
ಜೀವೋತ್ಪತ್ತಿಗೋ ನಾನೇ ಮಹಾ ಮಾಧ್ಯಮ
ಸುಳಿವು ಹಿಡಿದು ಹೇಳಿರಿ ಜಾಣ ಜಾಣೆಯರೇ ಈ ಬಲವ 

ಉ: ನೀರಿನ ಅಣುಗಳ ನಡುವಣ  ಹೈಡ್ರೋಜನ್‌ ಬಂಧ
 
ಪ್ರತಿ ಧಾತುವಿನ ವಿಶಿಷ್ಟ ಬೆರಳಚ್ಚು ನಾ
ನನ್ನ ಮನೆಯೋ ಅತಿ ಕಿರಿದು ನನ್ನೊಳಗಿನಾಟವೋ ಮಹಾಸ್ಪೋಟ
ನನ್ನ ಲೆಕ್ಕವೇ ಆವರ್ತ ಕೋಷ್ಟಕಕೆ ಮಹಾಭಾಷ್ಯ
ವರ್ಣಮಾಲೆಯೊಂದರ ಕೊನೆಯ ಅಕ್ಷರವೇ ನಾ
ಈಗ ಹೇಳು ನೀ ನಾನ್ಯಾರೆಂಬುದನು 

ಉ: ಪರಮಾಣು ಸಂಖ್ಯೆ
 
ಜೀವಿ ಎಂಬರೋ ಜನರೆನ್ನ
ಜೀವಕೋಶದ ಹಂಗೆನಗಿಲ್ಲ
ಉಸಿರಾಡದೆ ಇರಬಲ್ಲೆ ನಾ ವರುಷ
ನನ್ನ ಗೊಡವೆಗೆ ಬಂದಿರೋ ಸೋಂಕನ್ನುಂಟುಮಾಡುವೆ
ಬಲ್ಲಿದರು ಬಿಡಿಸೀ ಒಗಟ

ಉ: ವೈರಸ್‌ 

- ರಾಮಚಂದ್ರ ಭಟ್ ಬಿ.ಜಿ.

ವ್ಯಂಗ್ಯಚಿತ್ರ

 ಮೇ - 2021


ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ