Wednesday, August 4, 2021

ಸವಿಜ್ಞಾನ ಇ-ಪತ್ರಿಕೆಯ ಆಗಸ್ಟ್ - 2021ರ ಲೇಖನಗಳು

ಸವಿಜ್ಞಾನ ಇ-ಪತ್ರಿಕೆಯ ಆಗಸ್ಟ್ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

1. ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ - ಡಾ.ಬಾಲಕೃಷ್ಣ ಅಡಿಗ

2. ಏನೋ ಮಾಡಲು ಹೋಗಿ ........ - ಡಾ. ಎಂ. ಜೆ. ಸುಂದರ ರಾಮ್

3. ಅಂತರಿಕ್ಷದ ಅಲೆಮಾರಿಗಳು - ಆರ್. ಬಿ. ಗುರುಬಸವರಾಜ

4. ಹಕ್ಕಿಗಳು ಮನುಜನ ರಕ್ಷಕರು - ಕೃಷ್ಣ ಚೈತನ್ಯ 

5. ಭವಿಷ್ಯದಲ್ಲಿ ಕೃತಕ ಬುದ್ಧಿವಂತಿಕೆಯ ವಿಶ್ವರೂಪ - ವೆಂಕಿ ರಾಘವೇಂದ್ರ ಮತ್ತು ಭಾರತಿ ಮಣೂರ್ 

6. ಶಿಕ್ಷಣ ಕ್ಷೇತ್ರದ ಚೈತನ್ಯ ಈ ಕೃಷ್ಣ  

7. ಒಗಟುಗಳು - ವಿಜಯ್ ಕುಮಾರ್ ಹುತ್ತನಹಳ್ಳಿ

8. ವ್ಯಂಗ್ಯ ಚಿತ್ರಗಳು - ಶ್ರೀಮತಿ ಜಯಶ್ರೀ ಶರ್ಮ


ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ . . . . 

ಸವಿಜ್ಞಾನ’ ಇ-ಪತ್ರಿಕೆಯ ಎಂಟನೆಯ ಸಂಚಿಕೆಗೆ ವಿಜ್ಞಾನ ಶಿಕ್ಷಕರಿಗೆ ಮತ್ತು ವಿಜ್ಞಾನಾಸಕ್ತರಿಗೆ ಸ್ವಾಗತ. ನಮ್ಮ ಕಳೆದ ಏಳು ಸಂಚಿಕೆಗಳಿಗೆ ನೀವು ನೀಡಿದ ಸ್ಪಂದನ ಅಭೂತಪೂರ್ವ. ಓದುಗರಾಗಿ ನೀವು ನೀಡಿದ. ಸಲಹೆ ಸೂಚನೆಗಳನ್ನು ಪರಿಶೀಲಿಸಿ ಸೂಕ್ತವಾದುವುಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದೇವೆ. ನಮ್ಮ ಮುಂದಿನ ಸಂಚಿಕೆಗಳಿಗೂ ನಿಮ್ಮ ಪ್ರತಿಕ್ರಿಯೆ ಹೀಗೇ ಇರಲಿದೆ ಎಂಬ ನಿರೀಕ್ಷೆ ನಮ್ಮದು.

ನಮ್ಮ ಪತ್ರಿಕೆಯ ಓದುಗರ ಸಂಖ್ಯೆ ಹೆಚ್ಚುತ್ತಿರುವ ಸಂತಸ ಒಂದು ಕಡೆಯಾದರೆ, ಅನೇಕ ಶಿಕ್ಷಕರು ಲೇಖನಗಳನ್ನು ಬgದುಕೊಡಲು ಮುಂದೆ ಬಂದಿರುವುದು ಇನ್ನೊಂದು ಸಂತಸದ ವಿಚಾರ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ, ಗ್ರೆಗೋರ್ ಮೆಂಡೆಲ್ ಬಗ್ಗೆ ಶಿಕ್ಷಕಿ ಡಾ. ಸಂಧ್ಯಾ ಬರೆದ ಲೇಖನಕ್ಕೆ ಸಾಕಷ್ಟು ಮೆಚ್ಚುಗೆಯ ಜೊತೆಗೆ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಇನ್ನಷ್ಟು ಹೊಸ ಲೇಖಕರನ್ನು ಈ ಸಂಚಿಕೆಯೂ ಸೇರಿ, ಮುಂದಿನ ಸಂಚಿಕೆಗಳಲ್ಲಿ ಕ್ರಮೇಣ ಪರಿಚಯಿಸುವ ಹಂಬಲ ನಮ್ಮದು.

ಆಗಸ್ಟ್ ತಿಂಗಳ ಸಂಚಿಕೆ ಎಂದಿನಂತೆ ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಲೇಖನಗಳಿಂದ ಕೂಡಿದೆ. ಕಳೆದ ಮೂರು ಸಂಚಿಕೆಗಳಿಂದ ‘ನಿಸರ್ಗದಲ್ಲಿ ಸುವರ್ಣ ಅನುಪಾತ’ದ ಬಗ್ಗೆ ನೀವು ಓದುತ್ತಿರುವ ಲೇಖನ ಮಾಲೆಯ ಮುಂದುವರೆದ ಭಾಗವಾಗಿ ಮಾನವ ದೇಹ ರಚನೆಯಲ್ಲಿ ಸುವರ್ಣ ಅನುಪಾತದ ಬಗ್ಗೆ  ಒಂದು ಲೇಖನವಿದೆ. ಕಶೇರುಕ ಪ್ರಾಣಿಗಳಲ್ಲಿ ಜೀವವಿಕಾಸದ ಒಂದು ಪ್ರಮುಖ ಘಟ್ಟವಾದ  ನೀರಿನಿಂದ ನೆಲವಾಸಕ್ಕೆ  ಹೊಂದಿಕೊಂಡ ಸಂದರ್ಭದ ಒಂದು ಸುಂದರ ವಿವರಣೆ ನೀಡುವ ಲೇಖನಏನೋ ಮಾಡಲು ಹೋಗಿ...............’ ಎಂಬ ಲೇಖನವಿದೆ. ನನ್ನ ಗುರುಗಳಾದ ಡಾ. ಎಂ.ಜೆ ಸುಂದರ ರಾಮ್ ಬರೆದಿರುವ ಈ ಲೇಖನದ ಕಥನ ಶೈಲಿ ಆಕರ್ಷಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕೃತಕ ಬುದ್ಧಿಮತ್ತೆಯ ಬಗ್ಗೆ ಒಂದು ಲೇಖನವಿದೆ. ಕ್ಷುದ್ರಗ್ರಹಗಳ ಬಗ್ಗೆ ಬೆಳಕು ಚೆಲ್ಲುವ ‘ಅಂತರಿಕ್ಷದ ಅಲೆಮಾರಿಗಳು’ ಎಂಬ ಲೇಖನವಿದೆ. ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ಲೇಖನವಿದೆ. ಎಂದಿನಂತೆ, ಸಾಧಕ ಶಿಕ್ಷಕರೊಬ್ಬರ ಪರಿಚಯವಿದೆ. ನಿಮ್ಮನ್ನು ರಂಜಿಸುವ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳೂ ಇವೆ.      

ಲೇಖನಗಳನ್ನು ಓದಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಿಮಗೂ ಬರೆಯುವ ಇಚ್ಛೆಯಿದ್ದಲ್ಲಿ ನಮ್ಮ ಇ-ಮೇಲ್ ವಿಳಾಸದ (savijnana.tab@gmail.com) ಮೂಲಕ ಸಂಪರ್ಕಿಸಿ.

ಡಾ, ಟಿ .ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ !

ಸುವರ್ಣ ಅನುಪಾತಕ್ಕೆ ಮಾನವ ದೇಹವೂ ಹೊರತಲ್ಲ !


ಲೇಖಕರು:
 ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು



ನಿಸರ್ಗದ ಎಲ್ಲ ಕಡೆ ಕಂಡು ಬರುವ ಫಿಬೋನಾಚಿ ಸಂಖ್ಯಾ ಅನುಕ್ರಮಣಿಕೆ ಹಾಗು ಸುವರ್ಣ ಅನುಪಾತದ ಬಗ್ಗೆ ಕಳೆದ ಮೂರು ಸಂಚಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ನೀವು ಓದಿರಬಹುದು. ಸಸ್ಯಗಳ ಹಾಗು ಪ್ರಾಣಿಗಳ ದೇಹದ ವಿವಿಧ ಭಾಗಗಳಲ್ಲಿ ಸುವರ್ಣ ಅನುಪಾತದ ಪ್ರಭಾವ ಹೇಗೆ ಹಾಸು ಹೊಕ್ಕಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳನ್ನೂ ನೀವು ನೊಡಿದಿರಿ. ಮಾನವ ದೇಹವೂ ಈ ಕುತೂಹಲಕಾರಿ ಅನುಪಾತಕ್ಕೆ ಹೊರತಲ್ಲ. ಇದೇ ಸುವರ್ಣ ಅನುಪಾತದ ಪ್ರಭಾವ ಮಾನವ ದೇಹ ರಚನೆಯ ವಿವಿಧ ಪ್ರಕಾರಗಳಲ್ಲಿ ಹೇಗೆ ತನ್ನ ಅಚ್ಚೊತ್ತಿದೆ ಎಂಬುದನ್ನು ಈ ಬಾರಿಯ ಲೇಖನದಲ್ಲಿ ತಿಳಿದುಕೊಳ್ಳೋಣ.

ಏನೋ ಮಾಡಲು ಹೋಗಿ .....................

ಏನೋ ಮಾಡಲು ಹೋಗಿ .....................

ಡಾ. ಎಂ.ಜೆ. ಸುಂದರ ರಾಮ್

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗು ವಿಜ್ಞಾನ ಸಂವಹನಕಾರರು


ಸನ್ಯಾಸಿಯೊಬ್ಬ ಸಂಸಾರಿಯಾದ ಕತೆಯನ್ನು ನಾವೆಲ್ಲಾ ಓದಿದ್ದೇವೆ, ಅಲ್ಲವೇ ? ಕಶೇರುಕಗಳ ವಿಕಾಸದ ಇತಿಹಾಸದಲ್ಲಿ ಅಂತಹುದೇ ಒಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ ಎಂದರೆ ಅಚ್ಚರಿಯಾಗುತ್ತದೆ. ಕಶೇರುಕಗಳ ವಿಕಾಸದ ಏಣಿಯಲ್ಲಿ ಮೀನುಗಳು ಅತ್ಯಂತ ಕೆಳಗಿನ ಹಂತದಲ್ಲಿವೆ. ಮುಂದೆ, ಉಭಯಜೀವಿಗಳು, ಸರೀಸೃಪಗಳು. ನಂತರ ಹಕ್ಕಿಗಳು ಹಾಗೂ ಸ್ತನಿಗಳು. ಮಿಲಿಯನ್ ಗಟ್ಟಲೆ  ವರ್ಷಗಳನ್ನು ತೆಗೆದುಕೊಂಡ ಈ ವಿಕಾಸ ಪ್ರಕ್ರಿಯೆಯ ಹಿಂದಿನ ಕತೆ ರೋಚಕ ಹಾಗೂ ಕುತೂಹಲಕಾರಿ. 

ಅಂತರಿಕ್ಷದ ಅಲೆಮಾರಿಗಳು

ಅಂತರಿಕ್ಷದ ಅಲೆಮಾರಿಗಳು

ಲೇಖಕರು: ಆರ್. ಬಿ. ಗುರುಬಸವರಾಜ
ಆಂಗ್ಲ ಭಾಷಾ ಶಿಕ್ಷಕರು 
ಸರ್ಕಾರಿ ಪ್ರೌಢಶಾಲೆ ಬಸರಕೋಡು. 
ಹಗರಿಬೊಮ್ಮನಹಳ್ಳಿ(ತಾ) ವಿಜಯನಗರ(ಜಿ)


ಮೋಡಗಳಿಲ್ಲದ ರಾತ್ರಿ ಆಗಸ ನೋಡುವುದೇ ಒಂದು ಸೊಗಸು. ನಮ್ಮ ಸೌರವ್ಯೂಹದಲ್ಲಿ ಅನೇಕ ಕುತೂಹಲಕಾರಿ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಹಗಲಿನಲ್ಲಿ ಸೂರ್ಯನ ಪ್ರಖರವಾದ ಬೆಳಕು ಇರುವುದರಿಂದ ಇಂತಹ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ರಾತ್ರಿಯಾದರೆ ಇಂತಹ ಎಲ್ಲಾ ವಿದ್ಯಮಾನಗಳನ್ನು ಬರಿಗಣ್ಣಿನಿಂದ ನೋಡಬಹುದು. ಅವುಗಳ ಹಿಂದಿರುವ ವಿಜ್ಞಾನವನ್ನು ತಿಳಿಯಬಹುದು ಅಲ್ಲವೇ? ಈಗ ನಾವು ಅಂತರಿಕ್ಷಕದ ಕಲ್ಲುಗಳ ಬಗ್ಗೆ ಒಂದಿಷ್ಟು ಚರ್ಚಿಸೋಣ.

ಹಕ್ಕಿಗಳು: ಮನುಜನ ರಕ್ಷಕರು

ಹಕ್ಕಿಗಳು: ಮನುಜನ ರಕ್ಷಕರು

ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಪಕ್ಷಿಗಳೆಂದರೇನು?

ಪಕ್ಷಿಗಳು ಗರಿಗಳನ್ನು ಹೊಂದಿರುವ ದ್ವಿಪಾದಿ ಕಶೇರುಕಗಳು. ಸರೀಸೃಪಗಳಿಂದ ವಿಕಸನ ಹೊಂದಿರುವ ಇವು, ಬಿಸಿರಕ್ತದ ಪ್ರಾಣಿಗಳು. ಪ್ರಪಂಚದಲ್ಲಿ ಇಂದಿನವರೆಗೆ ಸುಮಾರು ೧೦,೨೦೦ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ. ಹಕ್ಕಿಗಳನ್ನು ಹಲವಾರು ವಿಧಗಳಲ್ಲಿ ವಿಂಗಡಿಸಲಾಗಿದೆ. ಭಾರತ ದೇಶ ನೂರಾರು ಭಾಷೆ, ಸಂಸ್ಕೃತಿ, ಧರ್ಮಗಳನ್ನು ಒಳಗೊಂಡಿರುವಂತೆ ಬೆಟ್ಟ, ಗುಡ್ಡ, ಪರ್ವತ, ಕಣಿವೆ, ಬಯಲು, ನದಿ, ಸರೋವರ, ಕೆರೆ, ಜೌಗು, ಕಾಡು, ಹಿಮಾವೃತ ಪ್ರದೇಶ ಮುಂತಾದ ವೈವಿದ್ಯಮಯ ಪರಿಸರಗಳು ಇರುವುದರಿಂದ, ಪಕ್ಷಿಗಳಲ್ಲಿಯೂ ಹಲವಾರು ವಿಧ ಮತ್ತು ವೈವಿದ್ಯತೆಯನ್ನು ಕಾಣಬಹುದಾಗಿದೆ. ಅವುಗಳ ಜೀವನ ಪದ್ಧತಿ ಬಹಳ ಕುತೂಹಲವನ್ನು ಉಂಟುಮಾಡುತ್ತದೆ.

ಭವಿಷ್ಯದಲ್ಲಿ ಕೃತಕ ಬುದ್ಧಿವಂತಿಕೆಯ ವಿಶ್ವರೂಪ !

ಭವಿಷ್ಯದಲ್ಲಿ ಕೃತಕ ಬುದ್ಧಿವಂತಿಕೆಯ ವಿಶ್ವರೂಪ !

ಲೇಖಕರು:
ವೆಂಕಿ ರಾಘವೇಂದ್ರ 

ಭಾರತಿ ಮಣೂರ್


ಇಮೇಲ್ ಬರೆಯಲು ಕಂಪ್ಯೂಟರ್ ಕೀಪ್ಯಾಡ್ ಮೇಲೆ ಬೆರಳಾಡಿಸಿ ಹಲೋ ಎಂಬ ಪದವನ್ನು ಟೈಪ್ ಮಾಡುವಷ್ಟರಲ್ಲಿ ಸ್ಕ್ರೀನ್ ಮೇಲೆ ಸರ್/ಮಾಡಮ್ ಎಂಬ ಪದ ಮೂಡುತ್ತದೆ. ಇದನ್ನು ನೋಡಿದ ತಕ್ಷಣ ಈ ಯಂತ್ರ ನಿಜವಾಗಿ ನನ್ನನ್ನು ಅರ್ಥಮಾಡಿಕೊಂಡಿದೆಯಾ ಎಂಬ ಪ್ರಶ್ನೆ ಮನಸ್ಸಿನಲ್ಲಿ ಸಹಜವಾಗೇ ಮೂಡುತ್ತದೆ. ಒಂದು ರೋಮ್ಯಾಂಟಿಕ್ ಹಾಡನ್ನು ಸವಿದರೆ, ಸ್ವಲ್ಪ ಹೊತ್ತಿನಲ್ಲಿ ಅಂತಹುದೇ ಹಾಡುಗಳನ್ನು ನನಗೋಸ್ಕರ ಹುಡುಕಿ ಕೊಡುವ ಯೂಟ್ಯೂಬ್ ನನ್ನ ಆತ್ಮೀಯ ಎಂದೆನಿಸುತ್ತದೆ. ನನ್ನನ್ನು ನನಗಿಂತ ಚನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಒಂದು ಯಂತ್ರ ಇದೆ ಮತ್ತು ಅದು ಯೋಚಿಸಬಲ್ಲದು ಎಂದರೆ ನಿಜವಾಗಿಯೂ ಆಶ್ಚರ್ಯಮಾತ್ರವಲ್ಲದೆ ಅದ್ಭುತವೂ ಎನಿಸುತ್ತದೆ. ಯಂತ್ರದ ಈ ನಡುವಳಿಕೆಗೆ ಕಾರಣ ಅದರಲ್ಲಿ ಅಳವಡಿಸಲಾದ ಕೃತಕ ಬುದ್ಧಿವಂತಿಕೆ. ಈ ಜಾಣ್ಮೆಯ ಪರಿಧಿ ಎಷ್ಟು ದೊಡ್ಡದೆಂದರೆ, ಅಮೇರಿಕಾದ ಟುನೈಟ್ ಶೋಬೊಟಿಕ್ಸ ಟಿ.ವಿ ಕಾರ್ಯಕ್ರಮದಲ್ಲಿ, ನಿರೂಪಕ ಜಿಮ್ಮಿ ಫಾಲೊನ್ ರವರು ಅತಿಥಿಯಾಗಿ ಆಹ್ವಾನಿಸಿದ ಸೋಫಿಯಾ ತನ್ನ ಹಾಸ್ಯದಿಂದ ವೀಕ್ಷಕರನ್ನು ನಗೆಯ ಸಾಗರದಲ್ಲಿ ತೇಲಿಸುತ್ತಾರೆ. ಇಷ್ಟಕ್ಕೂ ಯಾರೀ ಸೋಫಿಯಾ? ಸೋಫಿಯಾ ಸೌದಿ ಅರೇಬಿಯಾದ ಗೌರವ ಪ್ರಜೆಯಾಗಿರುವ ಒಂದು ಸಾಮಾಜಿಕ ರೋಬೋಟ್. ಕೃತಕ ಬುದ್ಧಿವಂತಿಕೆಯನ್ನು ಹೊಂದಿರುವ ರೋಬೋಟ್ ದೃಶ್ಯ, ಸಂಭಾಷಣೆ ಮತ್ತು ಭಾವನಾತ್ಮಕ ದತ್ತಾಂಶಗಳನ್ನು ಸಂಸ್ಕರಿಸಬಲ್ಲದು, ಅಲ್ಲದೆ ಜನರೊಡನೆ ಸಂಬಂಧಗಳನ್ನು ಬೆಳೆಸಬಲ್ಲದು. ಮಂಗನಿಂದ ಮಾನವನಾಗಲು ಮನುಷ್ಯ ಸಾವಿರಾರು ವರ್ಷಗಳನ್ನು ತೆಗೆದುಕೊಂಡರೆ ಒಂದೇ ಒಂದು ಪೀಳಿಗೆಯಲ್ಲಿ ಎದುರಿನ ವ್ಯಕ್ತಿಯ ಭಾವನೆಗಳನ್ನು ಅರ್ಥೈಸಿಕೊಂಡು ಸ್ಪಂಧಿಸುವ ಈ ರೋಬೋಟ್ ಗಳ ಬೆಳವಣಿಗೆ ನಿಜಕ್ಕೂ ಕುತೂಹಲಕಾರಿ.

ಶಿಕ್ಷಣ ಕ್ಷೇತ್ರದ ಚೈತನ್ಯ ಈ ಕೃಷ್ಣ

ಶಿಕ್ಷಣ ಕ್ಷೇತ್ರದ ಚೈತನ್ಯ ಈ ಕೃಷ್ಣ

ಲೇಖಕರು: ರಾಮಚಂದ್ರಭಟ್ ಬಿ.ಜಿ

  

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ?

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ?

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ ?

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ?

ಅಲ್ಲೆ ಆ ಕಡೆ ನೋಡಲಾ !

ಅಲ್ಲೆ ಕೊಡಗರ ನಾಡಲಾ ! ಅಲ್ಲೆ ಕೊಡವರ ಬೀಡಲಾ !

ಇದೇನು? ನೆನಪಾಯಿತೇ? ಬಾಲ್ಯದಲ್ಲಿ ಪಠ್ಯಪುಸ್ತಕದಲ್ಲಿ ಓದಿದ ನೆನಪೇ? ಹೌದು, ಕೊಡಗಿನ ಹುತ್ತರಿ ಹಬ್ಬದ ಕುರಿತು, ನಿಸರ್ಗ ಸೌಂದರ್ಯವನ್ನು ವಿವರಿಸುವ ಪಂಜೆ ಮಂಗೇಶರಾಯರ ಈ ಕವಿತೆಯನ್ನು ಮರೆಯುವುದೆಂತು? ಪಂಜೆಯವರ ಕಾವ್ಯವನ್ನೋ, ಬೆಟ್ಟಗುಡ್ಡಗಳನ್ನು ತಬ್ಬಿದ ಮಂಜಿನ ಬಗ್ಗೆ ರಾಜರತ್ನಂರವರ “ಮಡಿಕೇರಿಲಿ ಮಂಜು” ಕವನವನ್ನು ಆಸ್ವಾದಿಸದಿರುವ ಕನ್ನಡಿಗರಿರಲಾರರು.

ವಿಜ್ಞಾನದ ಒಗಟುಗಳು - ಆಗಸ್ಟ್ 2021

 ವಿಜ್ಞಾನದ ಒಗಟುಗಳು - ಆಗಸ್ಟ್ 2021

ಸದಾ ಒಟ್ಟಿಗೆ ಇರುವ, ಮೂವರು ಗೆಳೆಯರು ನಾವು,

ನಿಮ್ಮಯ ಮನೆ ಬೆಳಗಲು ಶ್ರಮಿಸುವೆವು.

ಒಬ್ಬನ ಹೆಸರು ವಿದ್ಯುತ್‌ ನನ್ನನೇ ನೇರ ಅವಲಂಬಿಸಿಹ.

ಇನ್ನೊಬ್ಬ ಅವನ ಚಲನೆಯ ಸತತ ತಡೆಯುತಿಹ.

ನನ್ನ, ಮತ್ತವನ ಹೆಸರುಗಳ ಹೇಳಿ ಎಂಬುದೇ ಬಿನ್ನಹ.            ಉತ್ತರ :

 *********************************

 ನೀರಿಗೆ ಅಂಟದ ತಾವರೆ ಎಲೆಯಂತೆ

ರಾಸಾಯನಿಕ ಕ್ರಿಯೆಯಲಿ ನಾ ಇರುವೆ.

ಕ್ರಿಯೆ ಬೇಗನೆ ಆಗುವ ಹಾಗೆ ನಾ ದುಡಿವೆ.

ಆದರೂ ಬದಲಾಗದೆ ನನ್ನಂತೇ ನಾ ಉಳಿವೆ,

ವೇಗದಿ ಹೇಳಿರಿ ನನ್ನಯ ಹೆಸರ ಭೇಷ್‌ ಎನುವೆ.                ಉತ್ತರ :

***********************************

ನಾನು ನನ್ನಯ ಆರು ಕುರಿ ಅದರ ಮೂರು ಮರಿ

ಕಾವಲು ನಾಯಿ, ನಾಯಿ ಮರಿ, ನಿನ್ನವೂ ಸೇರಿ

ಒಟ್ಟು ಎಷ್ಟು ಕಾಲುಗಳು ಬೇಗನೆ ಹೇಳು ಜಾಣಮರಿ.            ಉತ್ತರ :

_______________________________________________________

ರಚನೆ: ವಿಜಯಕುಮಾರ್‌ ಹುತ್ತನಹಳ್ಳಿ

……ನಿಮ್ಮ ಮಕ್ಕಳಿಗೆ ಶೇರ್‌ ಮಾಡಿ,

ಕಮೆಂಟ್‌ ಬಾಕ್ಸ್‌‌ನಲ್ಲಿ ನೀವೂ ಉತ್ತರಿಸಿ.

ಸರಿ ಉತ್ತರಗಳಿಗೆ ಮುಂದಿನ ಸಂಚಿಕೆ ತಪ್ಪದೆ ನೋಡಿ.

 

                      

ವ್ಯಂಗ್ಯಚಿತ್ರಗಳು - ಆಗಸ್ಟ್ 2021

 ವ್ಯಂಗ್ಯಚಿತ್ರಗಳು - ಆಗಸ್ಟ್ 2021 



 ರಚನೆ : ಶ್ರೀಮತಿ ಜಯಶ್ರೀ ಶರ್ಮ