ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, August 4, 2021

ಹಕ್ಕಿಗಳು: ಮನುಜನ ರಕ್ಷಕರು

ಹಕ್ಕಿಗಳು: ಮನುಜನ ರಕ್ಷಕರು

ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಪಕ್ಷಿಗಳೆಂದರೇನು?

ಪಕ್ಷಿಗಳು ಗರಿಗಳನ್ನು ಹೊಂದಿರುವ ದ್ವಿಪಾದಿ ಕಶೇರುಕಗಳು. ಸರೀಸೃಪಗಳಿಂದ ವಿಕಸನ ಹೊಂದಿರುವ ಇವು, ಬಿಸಿರಕ್ತದ ಪ್ರಾಣಿಗಳು. ಪ್ರಪಂಚದಲ್ಲಿ ಇಂದಿನವರೆಗೆ ಸುಮಾರು ೧೦,೨೦೦ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ. ಹಕ್ಕಿಗಳನ್ನು ಹಲವಾರು ವಿಧಗಳಲ್ಲಿ ವಿಂಗಡಿಸಲಾಗಿದೆ. ಭಾರತ ದೇಶ ನೂರಾರು ಭಾಷೆ, ಸಂಸ್ಕೃತಿ, ಧರ್ಮಗಳನ್ನು ಒಳಗೊಂಡಿರುವಂತೆ ಬೆಟ್ಟ, ಗುಡ್ಡ, ಪರ್ವತ, ಕಣಿವೆ, ಬಯಲು, ನದಿ, ಸರೋವರ, ಕೆರೆ, ಜೌಗು, ಕಾಡು, ಹಿಮಾವೃತ ಪ್ರದೇಶ ಮುಂತಾದ ವೈವಿದ್ಯಮಯ ಪರಿಸರಗಳು ಇರುವುದರಿಂದ, ಪಕ್ಷಿಗಳಲ್ಲಿಯೂ ಹಲವಾರು ವಿಧ ಮತ್ತು ವೈವಿದ್ಯತೆಯನ್ನು ಕಾಣಬಹುದಾಗಿದೆ. ಅವುಗಳ ಜೀವನ ಪದ್ಧತಿ ಬಹಳ ಕುತೂಹಲವನ್ನು ಉಂಟುಮಾಡುತ್ತದೆ.

ಪಕ್ಷಿಗಳು, ಸರೀಸೃಪಗಳನ್ನು ಹೋಲುವ ಒಂದು ಸಣ್ಣ, ಪಾರಿವಾಳ ಗಾತ್ರದ ಆರ್ಕಿಯೋಪ್ಟರಿಕ್ಸ್ ಎಂಬ ಜೀವಿಯಿಂದ ಉಗಮವಾಗಿವೆ ಎಂದು ಪಳೆಯುಳಿಕೆಗಳ ಅಧ್ಯಯನದಿಂದ ತಿಳಿದುಬಂದಿದೆ.

 

ಚಿತ್ರ: ಆರ್ಕಿಯೋಪ್ಟರಿಕ್ಸ್. ಕೃಪೆ: ಅಂತರ್ಜಾಲ

ಇದರ ಪಳೆಯುಳಿಕೆಯನ್ನು ಹತ್ತೊಂಬತ್ತನೆಯ ಶತಮಾನದಲ್ಲಿ ಮೊದಲ ಬಾರಿಗೆ ಜರ್ಮನಿಯಲ್ಲಿ ಪತ್ತೆಹಚ್ಚಲಾಯಿತು. ಇದು ಸರೀಸೃಪ ಮತ್ತು ಪಕ್ಷಿಗಳ ನಡುವಿನ ಕೊಂಡಿ(ಲಿಂಕ್)ಯಾಗಿದ್ದು ಇದರಲ್ಲಿ ಸರೀಸೃಪಗಳ ಲಕ್ಷಣಗಳಾದ ಉದ್ದವಾದ ಬಾಲ, ಕೊಕ್ಕಿನಲ್ಲಿ ಹಲ್ಲುಗಳು, ಮುಂಗಾಲಿನಲ್ಲಿರುವ ಚೂಪಾದ ಉಗುರು, ಹಿಂಗಾಲಿನಲ್ಲಿ ಹುರುಪೆಯನ್ನು ಹೊಂದಿತ್ತು. ಈಗಲೂ ಸಹ ಪಕ್ಷಿಗಳ ರೆಕ್ಕೆಯಲ್ಲಿ ಉಗುರು, ಕಾಲುಗಳಲ್ಲಿ ಹುರುಪೆಗಳನ್ನು ನಾವು ನೋಡಬಹುದಾಗಿದೆ. ಇನ್ನು ಪಕ್ಷಿಗಳ ಪ್ರಮುಖ ಲಕ್ಷಣಗಳಾದ ಕೊಕ್ಕು, ದೇಹದ ಮೇಲೆ ಗರಿಗಳು ಮತ್ತು ರೆಕ್ಕೆಗಳನ್ನು ಆರ್ಕಿಯೋಪ್ಟರಿಕ್ಸ್ ಹೊಂದಿತ್ತು.

ಪಕ್ಷಿಗಳು ಏಕೆ ಹಾರುವುದನ್ನು ಕಲಿತವು?

ಚಿತ್ರ: ಗ್ರೇಟರ್ ಕಾರ್ಮೋರಾಂಟ್(ದೊಡ್ಡ ನೀರುಕಾಗೆ)

ಮಕ್ಕಳು ಸಾಮಾನ್ಯವಾಗಿ ಕೇಳುವ, ಬಹಳ ಕುತೂಹಲಕಾರಿಯಾದ  ಪ್ರಶ್ನೆ ಇದಾಗಿದೆ. ಸುಮಾರು ಮದ್ಯ ಯುಗದಲ್ಲಿ ಪಕ್ಷಿಗಳ ಪೂರ್ವಜರನ್ನು ಬೇಟೆಯಾಡುವಂತಹ ಜೀವಿಗಳು ಹೆಚ್ಚಾಗಿದ್ದುದರಿಂದ ಅವುಗಳ ಸಂತತಿ ಕ್ಷೀಣಿಸುತ್ತಾ ಬಂದಿರಬಹುದು, ಅವುಗಳಿಂದ ಜೀವ ಉಳಿಸಿಕೊಳ್ಳುವ ಸಲುವಾಗಿ ವೇಗವಾಗಿ ಓಡುತ್ತಾ, ಮುಂಗಾಲುಗಳನ್ನು ಗಾಳಿಯಲ್ಲಿ ಬಡಿಯುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವು. ಇದು, ನಿಧಾನವಾದ ಮತ್ತು ನಿರಂತgವಾದ ಪ್ರಯತ್ನವಾಗಿತ್ತು. ಇವೆಲ್ಲದರ ಫಲವಾಗಿ ಅವುಗಳ ದೇಹದಲ್ಲಾದ ಮಾರ್ಪಾಡುಗಳಿಂದ ಹಾರುವುದನ್ನು ಕಲಿತಿರಬಹುದು. ಎನ್ನಲಾಗಿದೆ. ನಂತರದ ವಿಕಾಸದ ಫಲವಾಗಿ ಇಂದು ಹಾರುವ ಸಾವಿರಾರು ಪ್ರಭೇದಗಳ ಪಕ್ಷಿಗಳನ್ನು ಕಾಣಬಹುದಾಗಿದೆ.

ಪಕ್ಷಿಗಳ ಗಾತ್ರವೆಷ್ಟು?

ಪಕ್ಷಿಗಳು ವಿವಿಧ ಗಾತ್ರವನ್ನು ಹೊಂದಿವೆ ಎಂಬುದನ್ನು ತಾವೆಲ್ಲರೂ ತಿಳಿದಿದ್ದೀರಿ. ಮಕ್ಕಳೆಲ್ಲರಿಗೂ ಅತ್ಯಂತ ಸಣ್ಣ ಪಕ್ಷಿ ಯಾವುದು ಎಂದರೆ ಥಟ್ಟನೆ ಗುಬ್ಬಚ್ಚಿ ಎಂದು ಉತ್ತರಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ನಮ್ಮ ಭಾರತದಲ್ಲಿ ಹಕ್ಕಿಗಳ ಬಗ್ಗೆ ಅಧ್ಯಯನ ಮಾಡುತ್ತಾ ಅಥವಾ ಹವ್ಯಾಸಕ್ಕಾಗಿ ಪಕ್ಷಿಗಳ ವೀಕ್ಷಣೆ ಮಾಡುತ್ತಾ ಹೋದಂತೆ ಹಲವಾರು ಸಣ್ಣ ಸಣ್ಣ ಗಾತ್ರದ ಹಕ್ಕಿಗಳು ಗೋಚರಿಸುತ್ತವೆ. ಆವುಗಳಲ್ಲಿ ಫ್ಲವರ್ ಪೆಕರ್, ಸನ್ ಬರ್ಡ್ ಹಕ್ಕಿಗಳು ಪ್ರಮುಖವಾದವುಗಳು. 

ಚಿತ್ರ: ಫ್ಲವರ್ ಪೆಕರ್

ಹಾಗೆಯೇ ಅತ್ಯಂತ ದೊಡ್ಡ ಪಕ್ಷಿ ಯಾವುದು? ಎಂದರೆ, ಭಾರತದಲ್ಲಿ ಸಾರಸ್ ಕ್ರೇನ್, ಹಿಮಾಲಯದ ಬೋಳುತಲೆಯ ರಣಹದ್ದು ಮುಂತಾದವು. ಇವುಗಳ ನಡುವೆಯೇ ಹೆಚ್ಚು ಕಡಿಮೆ ಸುಮಾರು ಎಂಟು ವಿವಿಧ ಗಾತ್ರದ ಹಕ್ಕಿಗಳನ್ನು ನೋಡಬಹುದು. ಗುಬ್ಬಚ್ಚಿ, ಬುಲ್-ಬುಲ್, ಮೈನ, ಪಾರಿವಾಳ, ಕಾಗೆ, ಕೋಳಿ, ಹದ್ದು, ನವಿಲು.

ಪಕ್ಷಿಗಳು ವಿವಿಧ ಬಣ್ಣಗಳನ್ನು ಏಕೆ ಹೊಂದಿವೆ?

ಪಕ್ಷಿಗಳು ಬಣ್ಣಗಳಲ್ಲಿ ಮಹತ್ತರವಾದ ವೈವಿದ್ಯವನ್ನು ಪ್ರದರ್ಶಿಸುವ ಕಶೇರುಕಗಳಾಗಿವೆ. ಯಾವುದೇ ಚಿತ್ರಗಳಿಗೆ, ಡಿಸೈನ್‌ಗಳಿಗೆ ವರ್ಣಸಂಯೋಜನೆ ಮಾಡುವ ಕಲಾಕಾರನಿಗೂ ಸವಾಲು ಕೊಡುವ ಬಣ್ಣಗಳ ಮಿಶ್ರಣವನ್ನು ನಾವು ಪಕ್ಷಿಗಳಲ್ಲಿ ಮಾತ್ರ ಕಾಣಬಹುದು.

ಚಿತ್ರ: ನವಿಲು

ಪಕ್ಷಿಗಳಲ್ಲಿರುವ ಜೀನ್‌ಗಳಲ್ಲಿನ ವಿಶಿಷ್ಟತೆಯೇ ಈ ವೈವಿದ್ಯಕ್ಕೆ ಕಾರಣವಾಗಿದೆ. ಹಕ್ಕಿಗಳ ಚರ್ಮದಲ್ಲಿರುವ ಮೆಲನಿನ್ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಗರಿಗಳಲ್ಲಿ ವಿವಿಧ ಬಣ್ಣಗಳು ಉತ್ಪತ್ತಿಯಾಗಿ ವರ್ಣಮಯ ಹಾಗೂ ವೈವಿಧ್ಯತೆಯನ್ನು ಉಂಟುಮಾಡಿದೆ. ಗರಿಯ ಮೇಲೊಂದು ಬಣ್ಣವಿದ್ದರೆ ಕೆಳಗೆ ಮತ್ತೊಂದು ತಿಳಿ ಬಣ್ಣವಿರುತ್ತದೆ.

ಹಕ್ಕಿಗಳಲ್ಲಿ ಗರಿಗಳು ನಿರ್ದಿಷ್ಟ ರೀತಿಯಲ್ಲಿ ಜೋಡಣೆಯಾಗಿರುತ್ತವೆ. ಇದನ್ನು ಗರಿ ವ್ಯವಸ್ಥೆ ಎನ್ನುವರು. ಸುಮಾರು ೭ ಬಗೆಯ ಗರಿಗಳು ಪಕ್ಷಿಗಳಲ್ಲಿ ಕಂಡುಬರುತ್ತವೆ. ಅವುಗಳೆಂದರೆ:

 

ಚಿತ್ರ: ಗರಿಗಳ ವಿಧಗಳು ಕೃಪೆ ಅಂತರ್ಜಾಲ

೧. ರೆಕ್ಕೆ ಗರಿಗಳು(ವಿಂಗ್ ಫೆದರ್): ಇವು ಉದ್ದವಾಗಿದ್ದು, ಪೆಡಸಾಗಿದ್ದು ಮಧ್ಯದಲ್ಲಿ ಗಟ್ಟಿಯಾದ ಕಡ್ಡಿಯಂತಹ ರಚನೆ ಇರುತ್ತದೆ. ಈ ಗರಿಗಳಲ್ಲಿ ಒಂದು ಭಾಗ ಅಗಲವಾಗಿದ್ದು ಮತ್ತೊಂದು ಭಾಗ ಚಿಕ್ಕದಾಗಿರುತ್ತದೆ. ಎರಡೂ ಬದಿಯಲ್ಲಿ ಸಣ್ಣ ಸಣ್ಣ ಮೃದುವಾದ ಆದರೆ ಒಂದಕ್ಕೊಂದು ಹೆಣೆದುಕೊಡಿರುವ ಕೂದಲಿನಂತಹ(ಬಾರ್ಬ್) ರಚನೆಗಳಿರುತ್ತವೆ, ಹೆಸರೇ ಹೇಳುವಂತೆ, ಇವು ರೆಕ್ಕಗಳಲ್ಲಿದ್ದು ಗಾಳಿಯನ್ನು ಕೆಳಕ್ಕೆ ಬಡಿದು ಮೇಲಕ್ಕೆ ಮತ್ತು ಮುಂದಕ್ಕೆ ಹಾರಲು ಸಹಾಯಮಾಡುತ್ತವೆ.

೨. ಬಾಲದ ಗರಿಗಳು( ಟೈಲ್ ಫೆದರ್): ಈ ಗರಿಗಳು ಪಕ್ಷಿಗಳು ವೇಗವಾಗಿ ಹಾರಿಬಂದು ಕೂರಲು ಹಾಗೂ ಬಾಲವನ್ನು ಓರೆಮಾಡಿ ಮರಗಳ ನಡುವೆ ಹಾರುವಾಗ ದಿಕ್ಕನ್ನು ಬದಲಾಯಿಸಲು ಸಹಾಯಮಾಡುತ್ತವೆ.

೩. ದೇಹದ ಗರಿಗಳು(ಕಾಂಟೂರ್ ಫೆದರ್): ದೇಹವನ್ನು ಆವರಿಸಿರುವ ಇವು ಚಿಕ್ಕದಾಗಿದ್ದು (೩-೫ಸೆಂಮೀ), ಎರಡೂ ಕಡೆ ಸಮನಾಗಿರುತ್ತವೆ. ಗರಿಯ ಅರ್ಧಭಾಗದಿಂದ ಮೇಲಕ್ಕೆ ಇರುವ ಗರಿ ಎಳೆಗಳು ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಇನ್ನರ್ಧ ಭಾಗ. ಹತ್ತಿಯ ಎಳೆಯಂತೆ ಬಿಡಿಸಿಕೊಂಡಿರುತ್ತವೆ. ಇವುಗಳ ಪ್ರಮುಖ ಕಾರ್ಯ ದೇಹದ ಉಷ್ಣತೆಯನ್ನು ಕಾಪಾಡುವುದು. ಬೆನ್ನಿನ ಹಿಂಭಾಗದಲ್ಲಿರುವ ತೈಲಗ್ರಂಥಿಯಿಂದ ಸ್ರವಿಕೆಯಾಗುವ ತೈಲವನ್ನು ಹಕ್ಕಿಗಳು ಕೊಕ್ಕಿನಿಂದ ದೇಹದ ಗರಿಗಳಿಗೆ ಸವರಿಕೊಳ್ಳುತ್ತಿರುತ್ತವೆ. ಇದರಿಂದ, ಮಳೆ ನೀರು ಚರ್ಮಕ್ಕೆ ಸೋಕದಂತೆ ಗರಿಗಳ ಮೇಲಿನಿಂದಲೇ ಜಾರಿಬೀಳುತ್ತಿರುತ್ತದೆ.

೪. ತುಪ್ಪಳದ ಗರಿ(ಡೌನ್ ಫೆದರ್): ದೇಹದ ಮೇಲಿನ ಗರಿಗಳನ್ನು ತೆಗೆದಾಗ ಮಾತ್ರ ಕಂಡುಬರುವ ಇವು ಕೂಡ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತವೆ.

೫. ಅರೆತುಪ್ಪಳದ ಗರಿಗಳು(ಸೆಮಿ ಪ್ಲೂಮ್): ತುಪ್ಪಳದ ಗರಿಗಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು, ಎಲ್ಲಾ ಎಳೆಗಳು ಬಿಡಿಸಿಕೊಂಡಿರುತ್ತವೆ.

೬. ರೋಮ ಗರಿಗಳು (ಪ್ಲೂಮ್): ದೇಹದ ಮೇಲಿನ ಎಲ್ಲಾ ಪುಕ್ಕಗಳನ್ನು ತೆಗೆದಾಗ ಮಾತ್ರ ಕಾಣುವ ಇವು, ಬಿಳಿ ಕೂದಲಂತೆ ತೆಳ್ಳಗೆ ಮತ್ತು ಉದ್ದ (೧-೨ ಸೆಂಮೀ)ವಾಗಿರುತ್ತವೆ. ಈ ಗರಿಗಳ ತುದಿಯಲ್ಲಿ ಸಣ್ಣ ಗುಚ್ಛ ಇರುತ್ತದೆ.

೭. ಕುಂಚ ಗರಿಗಳು(ಬ್ರಿಸ್ಟಲ್): ಇವು ರೋಮಗರಿಗಳಂತೆಯೇ ಇದ್ದು ಬುಡದಲ್ಲಿ ಗುಚ್ಛವಿದ್ದು ತುದಿಯಲ್ಲಿ ರೋಮದಂತಿರುತ್ತದೆ.

ಪಕ್ಷಿಗಳು ಹೇಗೆ ಹಾರುತ್ತವೆ?

ಕೆಲವು ಪಕ್ಷಿಗಳು ರೆಕ್ಕೆಯನ್ನು ನಿರಂತರವಾಗಿ ಬಡಿಯುತ್ತಾ ಹಾರಿದರೆ, ಮತ್ತೆ ಕೆಲವು ರೆಕ್ಕೆಗಳನ್ನು ನಿಯಮಿತ ಸಂಖ್ಯೆಯಲ್ಲಿ ಬಡಿಯುತ್ತಾ ನೀರಿನ ಅಲೆಯಂತೆ ಮೇಲೆ ಕೆಳಗೆ ಹಾರುತ್ತವೆ. ಕೆಲವು ಹಾರಿದಾಗ ರೆಕ್ಕೆಗಳು ಪ್ರಾರಂಭದಲ್ಲಿ ಪಟಪಟನೆ ಒಂದಕ್ಕೊಂದು ಬಡಿದು ಶಬ್ಧ ಬರುವಂತೆ ಹಾರುತ್ತವೆ. ಕೆಲವಂತೂ ಪ್ರಾರಂಭದಲ್ಲಿ ರೆಕ್ಕೆ ಬಡಿದು ನಂತರ ಬಿಸಿ ಗಾಳಿಯ ಮೇಲ್ಮೈ ಒತ್ತಡವನ್ನು ಬಳಸಿಕೊಂಡು ರೆಕ್ಕೆ ಬಡಿಯದೇ ಹಾಗೇ ಸುತ್ತುಹಾಕುತ್ತಾ ತೇಲುತ್ತಾ ಮೇಲೆ ಹೋಗುತ್ತವೆ. ನಾವು ಆಕಾಶವನ್ನು ದಿಟ್ಟಿಸಿ ನೋಡಿದಾಗ ನಮ್ಮ ಬರಿಗಣ್ಣಿಗೆ ನಿಲುಕದಷ್ಟು ಎತ್ತರದಲ್ಲಿ ಕೆಲವು ಹಕ್ಕಿಗಳು ಹಾರುವುದನ್ನೂ ಕಾಣಬಹುದು ! ಹಕ್ಕಿಗಳು ಹಾರುವುದರ ಮೇಲೆಯೇ ರಾಷ್ಟ್ರಕವಿ ಕುವೆಂಪುರವರು ದೇವರು ರುಜು ಮಾಡಿದನು ಎಂಬ ಸುಂದರವಾದ ಕವಿತೆ ಬರೆದಿಲ್ಲವೇ? ಹೀಗೆ ಪಕ್ಷಿಗಳು ನಾನಾ ರೀತಿಯಲ್ಲಿ ಹಾರುವುದನ್ನು ನೋಡಬಹುದು.

ಪಕ್ಷಿಗಳು ಹಾರಲು ಕಾರಣವಾದ ಅಂಶಗಳಾವುವು?

ಪಕ್ಷಿಗಳು ಹಾರಲು ಅನುಕೂಲಿಸುವ ಪ್ರಮುಖವಾದ ಕಾರಣಗಳು ಹೀಗಿವೆ :

೧. ರೆಕ್ಕೆಗಳು: ಪಕ್ಷಿಗಳಲ್ಲಿ ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಾಡು ಹೊಂದಿರುವುದರಿಂದ ಹಾರಲು ಸಹಾಯಕವಾಗಿವೆ.

೨. ಹಗುರವಾದ ದೇಹ: ದೇಹದ ಹಗುರತೆಗಾಗಿ ಕೆಲವು ಮೂಳೆಗಳು ಇಲ್ಲದಂತಾಗಿದ್ದರೆ, ಮತ್ತೆ ಕೆಲವು ಮೂಳೆಗಳಲ್ಲಿ ಗಾಳಿ ತುಂಬಿಕೊಂಡಿದೆ. ಇವುಗಳಿಗೆ ವಾಯುವಿಕ ಮೂಳೆಗಳು ಎನ್ನುವರು. ದೇಹದ ಬಲಕ್ಕಾಗಿ ಕೆಲವು ಮೂಳೆಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ.

೩. ಉಸಿರಾಟದ ಸಾಮರ್ಥ್ಯ: ಪಕ್ಷಿಗಳು ಹಾರಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇದೆ. ಇದನ್ನು ಅವು ತಾವು ಸೇವಿಸುವ ಅಧಿಕ ಕ್ಯಾಲರಿ ಇರುವ ಮೀನು, ಕೀಟ, ಕಾಳು ಹಾಗೂ ಧಾನ್ಯಗಳಿಂದ ಪಡೆಯುತ್ತವೆ. ಇವುಗಳಿಂದ ಸಿಗುವ ಶಕ್ತಿಯನ್ನು ಬಳಸಿಕೊಳ್ಳಲು ಅಧಿಕ ಆಕ್ಸಿಜನ್ ಅವಶ್ಯಕತೆ ಇದ್ದು ಹೆಚ್ಚು ಗಾಳಿಯನ್ನು ಸೇವಿಸುತ್ತವೆ. ಶ್ವಾಸಕೋಶಗಳ ಜೊತೆಗೆ ಅವುಗಳಿಂದ ಹೊರಕ್ಕೆ ವಿಸ್ತರಿಸಿದ ಗಾಳಿಚೀಲಗಳು ಇದ್ದು, ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪಡೆದುಕೊಳ್ಳುತ್ತವೆ.

ಮಾಂಸಕ್ಕಾಗಿ ಸಾಕುವ ಕೋಳಿ, ಬಾತುಕೋಳಿ, ಟರ್ಕಿಕೋಳಿ, ಎಮು ಮುಂತಾದ ಪಕ್ಷಿಗಳನ್ನು ಬಿಟ್ಟರೆ ಉಳಿದ ಬಹುತೇಕ ಪಕ್ಷಿಗಳಿಗೆ ದೇಹ ತೂಕವಿರುವುದಿಲ್ಲ. ನಾಲಿಗೆಯ ಚಪಲಕ್ಕೆ ಬ್ಭೆಟೆಯಾಡಿ ಪುಕ್ಕ ತೆಗೆದರೆ ಉಳಿಯುವುದೇ ಒಂದಿಷ್ಟು ಮಾಂಸ, ಮೂಳೆ ಹಚಿದರ. ಮಾಂಸಕ್ಕೋಸ್ಕರವೇ ಕೋಳಿ ಇದ್ದರೂ ಸಹ, ಇತರ ಪಕ್ಷಿಗಳನ್ನೂ ಬಿಡುವುದಿಲ್ಲವಲ್ಲ, ಹಾಳು ಮನುಷ್ಯ.!

ಪಕ್ಷಿಗಳು ಎಷ್ಟು ಸೂಕ್ಷ್ಮ?

ಪಕ್ಷಿಗಳ ಕಣ್ಣು ಮತ್ತು ಕಿವಿ ತುಂಬಾ ಸೂಕ್ಷ್ಮಗಾಹಿಯಾದವು. ಯಾವ ಪಕ್ಷಿ, ಪ್ರಾಣಿ ಅಥವಾ ಮನುಷ್ಯನ್ನು ದೂರದಿಂದಲೇ ಗಮನಿಸಿಬಿಡುತ್ತವೆ. ಅದರಲ್ಲೂ ಲೈಟ್ ಕಲರ್ ಬಟ್ಟೆಗಳಿದ್ದರಂತೂ ತುಂಬಾ ದೂರದಿಂದಲೇ ನೋಡಿ ಸುರಕ್ಷಿತ ಸ್ಥಳಕ್ಕೆ ಹಾರಿಹೋಗುತ್ತವೆ. ಕಣ್ಣುಗಳಂತೂ ಮನುಷ್ಯನ ಕಣ್ಣಿನ ಸಾಮರ್ಥ್ಯದ ಹತ್ತಾರು ಪಟ್ಟು ಹೆಚ್ಚು. ಕೆಲವು ಹಕ್ಕಿಗಳಿಗೆ ಇನ್ನೂರು ಪಟ್ಟು ಜಾಸ್ತಿ. ಎಷ್ಟೋ ಎತ್ತರದಲ್ಲಿ ಹಾರುತ್ತಿರವ ಹದ್ದು, ಗಿಡುಗ ನೆಲದ ಮೇಲಿನ ಕಪ್ಪೆಯನ್ನೋ, ಹಲ್ಲಿಯನ್ನೋ ಅನಾಯಾಸವಾಗಿ ಎತ್ತಿಕೊಂಡು ಹೋಗುವುದನ್ನು ತಾವು ನೋಡಿರಬಹುದು ಅಲ್ಲವೇ?

ಚಿತ್ರ: ಬ್ರಾಹ್ಮಿಣಿ ಗಿಡುಗ

ಹಕ್ಕಿಗಳು ಗೂಡು ಕಟ್ಟುವ ಸ್ಥಳದಲ್ಲಿ ನೀವು ಏನಾದರು ಸುಳಿದಾಡಿದಿರೋ, ಅವು ಆ ಸ್ಥಳವನ್ನೇ ಬಿಟ್ಟು ಮತ್ತೊಂದು ಕಡೆ ಹೊರಟುಹೋಗುತ್ತವೆ. ಮೊಟ್ಟೆ ಇಟ್ಟಿರುವ ಅಥವಾ ಮರಿ ಮಾಡಿರುವ ಸಂದರ್ಭದಲ್ಲಿ ಏನಾದರು ನೀವು ಆ ಗೂಡಿನ ಕಡೆಗೆ ಹೋಗುವಾಗಲೇ ನಮ್ಮನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತವೆ. ಮೊಟ್ಟೆ ಅಥವಾ ಮರಿಗಳನ್ನು ಸ್ಪರ್ಶಿಸಿದರೆ ಕೆಲವು ಪಕ್ಷಿಗಳು ಆಂತಹ ಮೊಟ್ಟೆ, ಮರಿಗಳನ್ನು ತ್ಯಜಿಸುತ್ತವೆ. ಕಾಗೆ, ಹದ್ದು ಮುಂತಾದ ದೈರ್ಯಶಾಲಿ ಹಕ್ಕಿಗಳಾದರೆ ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನು ಹಿಮ್ಮೆಟ್ಟಿಸಲೂ ಅಂಜಲಾರವು!

ಪಕ್ಷಿಗಳನ್ನು ಏಕೆ ಸಂರಕ್ಷಣೆ ಮಾಡಬೇಕು?

ಇದೊಂದು ಪ್ರಮುಖವಾದ ಪ್ರಶ್ನೆ. ಪಕ್ಷಿಗಳಿಗೆ ನಾವು ಮುಖ್ಯವೋ ಅಥವಾ ನಮಗೆ ಅವು ಮುಖ್ಯವೋ ಎಂದು ಯೋಚಿಸಿದಾಗ ಮೇಲಿನ ಪ್ರಶ್ನೆಗೆ ಉತ್ತರ ಸ್ವಲ್ಪ ಮಟ್ಟಿಗೆ ದೊರೆಯುತ್ತದೆ. ಪಕ್ಷಿಗಳು ನಮಗಿಂತಲೂ ಎಷ್ಟೋ ವರ್ಷಗಳ ಮೊದಲೇ ಉಗಮವಾಗಿರುವಂತ ಜೀವಿಗಳು. ಅಂದರೆ, ಅವು ನಮ್ಮ ಪೂರ್ವಜರು ಎಂದ ಹಾಗಾಯಿತು. ಹಾಗಾಗಿ ನಮ್ಮ ತಂದೆ, ತಾತ, ಮುತ್ತಜ್ಜರಿಗೆ ಕೊಡುವಂತಹ ಗೌರವವನ್ನು ಮೊದಲು ನೀಡಬೇಕಲ್ಲವೇ? ಅವುಗಳು ಉಗಮವಾದ ಕಾಲದಲ್ಲಿ ಮನುಷ್ಯ ಇರಲಿಲ್ಲ. ಅಂದ ಮೇಲೆ ಅವುಗಳಿಗೆ ನಮ್ಮ ಅವಶ್ಯಕತೆ ಇಲ್ಲವೆಂದಾಯಿತು ಅಲ್ಲವೇ? ಇನ್ನು ನಮಗೇಕೆ ಅವಶ್ಯಕ ಎಂದು ಯೋಚಿಸಿದಾಗ ೧. ಆಹಾರಕ್ಕಾಗಿ, ೨. ಕೀಟ ನಿಯಂತ್ರಣಕ್ಕಾಗಿ, ೩. ಬೀಜ ಪ್ರಸರಣ, ೪. ಗೊಬ್ಬರಕ್ಕಾಗಿ, ೫ ಉರಗ ನಿಯಂತ್ರಣಕ್ಕಾಗಿ, ೬. ದಂಶಕಗಳ ನಿಯಂತ್ರಣಕ್ಕಾಗಿ, ೭. ಕಳೆ ನಿಯಂತ್ರಣಕ್ಕಾಗಿ ೮. ಬೇಜಾರಾದಾಗ ಹೊತ್ತು ಕಳೆಯಲು, ೯. ಅವುಗಳನ್ನು ಅಭ್ಯಸಿಸುವ ಸಲುವಾಗಿ, ೧೦. ಕೊನೆಗೆ ಆಕ್ಸಿಜನ್‌ಗಾಗಿ! ಹೀಗೆ ಪಟ್ಟಿಮಾಡಿದರೆ ಇನ್ನೂ ಹಲವು ಅಂಶಗಳು ಸಿಗಬಹುದು.

ಪಕ್ಷಿಗಳ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೇನು?

ಪಕ್ಷಿಗಳು ನಮ್ಮ ಪೂರ್ವಜರು ಎಂದ ಮೇಲೆ ಅವರಿಗೆ ಗೌರವ ಕೊಟ್ಟು ಅವರನ್ನು ಉಳಿಸಿಕೊಳ್ಳಬೇಕು. ಮತ್ತೆ ಅವುಗಳಿಂದ ಅಷ್ಟೆಲ್ಲಾ ಪ್ರಯೋಜನಗಳಿವೆ ಎಂದ ಮೇಲೆ ಅವುಗಳನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೆ ಇದ್ದೇ ಇದೆ. ಅವುಗಳು ನೆಮ್ಮದಿಯಿಂದ ಬದುಕುತ್ತಿದ ಎಲ್ಲಾ ರೀತಿಯ ಪರಿಸರವನ್ನು ನಾವು ಹಾಳು ಮಾಡಿದ್ದೇವೆ. ಈಗಾಗಲೆ ಡೋಡೋ, ಪಿಂಕ್ ಹೆಡೆಡ್ ಡಕ್ ಮುಂತಾದ ಹಲವು ಪಕ್ಷಿಗಳನ್ನು ಶಾಶ್ವತವಾಗಿ ಭೂಮಿಯಿಂದ ನಿರ್ಗಮಿಸುವಂತೆ ಮಾಡಿದ್ದೇವೆ. ಉಳಿದಿರುವ ಪಕ್ಷಿಗಳಲ್ಲಿ ಅದೆಷ್ಟೋ ಪಕ್ಷಿಗಳು ವಿನಾಶದ ಅಂಚಿಗೆ ಬಂದು ತಲುಪಿವೆ. ಒಂದು ದೇಶದ ಆರೋಗ್ಯಕರ ಬೆಳವಣಿಗೆಗೆ ಶೇ ೩೩ರಷ್ಷು ಅರಣ್ಯವನ್ನು ಹೊಂದಿರಲೇಬೇಕು. ಆದರೆ ಅರಣ್ಯಗಳ ಒತ್ತುವರಿ ಮಾಡಿ ಅವುಗಳ ವ್ಯಾಪ್ತಿಯನ್ನು ಕೇವಲ ಶೇಕಡ ೪ಕ್ಕೆ ಇಳಿಸಿಬಿಟ್ಟಿದ್ದೇವೆ.

ಅಲ್ಲದೇ ರಸ್ತೆಗಳ ವಿಸ್ತರಣೆ, ರೈಲು ಮಾರ್ಗ, ವಿದ್ಯುತ್ ಮಾರ್ಗ, ಜಲಾಶಯಗಳ ನಿರ್ಮಾಣ,  ಕೆಲವು ಸ್ವಾರ್ಥ ರಾಜಕಾರಣದ ಯೋಜನೆಗಳು, ಗಣಿಗಾರಿಕೆ ಮುಂತಾದವುಗಳು ಪರಿಸರವನ್ನು ಚೇತರಿಸಿಕೊಳ್ಳಲಾರದಷ್ಟು ವಿಷಮಸ್ಥಿತಿಗೆ ತಂದು ನಿಲ್ಲಿಸಿದೆ. ಮರಗಳನ್ನು ಕಡಿದು ಹಾಕಿ ಕೃಷಿ ಭೂಮಿಯನ್ನು ಬಟಾಬಯಲು ಮಾಡಿಬಿಟ್ಟಿದ್ದೇವೆ, ಅರಣ್ಯ, ರಸ್ತೆ ಬದಿ, ಹೊಲಗಳ ಬದು ಹೀಗೆ ಕಂಡ ಕಂಡಲ್ಲಿ ಬೆಂಕಿ ಹಾಕುತ್ತೇವೆ. ಕೆರೆ, ನದಿ, ಸಮುದ್ರ ಹಾಗೂ ಸಾಗರಗಳ ಮಾಲಿನ್ಯ ಮಾಡಿದ್ದೇವೆ. ಹಾಗಾಗಿ ಹಾಳು ಮಾಡಿರುವದೆಲ್ಲವನ್ನು ಸರಿಪಡಿಸುವುದಷ್ಟೆ ಅಲ್ಲ, ಅವುಗಳ ಆವಾಸವನ್ನು ಉಳಿಸಿಕೊಂಡರಷ್ಟೆ ಮನುಷ್ಯನಿಗೆ ಬದುಕಲು ಸಾದ್ಯ. ಇಲ್ಲದಿದ್ದಲ್ಲಿ ನಮ್ಮ ವಿನಾಶ ನಿಶ್ಚಿತ.

ಹಿಂದೆಂದಿಗಿಂತಲೂ ಪರಿಸರದ ಸಂರಕ್ಷಣೆ ಮಾಡಿಕೊಳ್ಳಬೇಕಿರುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಜನಸಂಖ್ಯಾ ನಿಯಂತ್ರಣ ಮಾಡುವುದು ಬಹು ಮುಖ್ಯ. ಅರಣ್ಯಗಳ ಅತೀಕ್ರಮಣವನ್ನು ತಕ್ಷಣ ನಿಲ್ಲಿಸಬೇಕಿದೆ. ರಸ್ತೆಗಳ ಅಗಲೀಕರಣ, ರೈಲು ಮಾರ್ಗ, ವಿದ್ಯುತ್ ಮಾರ್ಗ, ಜಲಾಶಯಗಳ ನಿರ್ಮಾಣ, ಅರಣ್ಯಗಳ ಅಂಚಿನಲ್ಲಿ ರೆಸಾರ್ಟ್ಗಳ ನಿರ್ಮಾಣ ಮುಂತಾದವುಗಳನ್ನು ನಿಲ್ಲಿಸಬೇಕು ಇಲ್ಲವೇ ವಿವೇಕದಿಂದ ಬದಲಿ ಕ್ರಮಗಳ ಬಗ್ಗೆ ಚಿಂತಿಸಬೇಕು. ಅರಣ್ಯಗಳ ಶೋಷಣೆ ಮಾಡಿ ಶಾಲೆಗಳಲ್ಲಿ ಗಿಡ ನೆಡಿ ಎಂದರೆ ಅರಣ್ಯಗಳನ್ನು ಬೆಳೆಸಿದಂತಾಗುವುದಿಲ್ಲ. ಎಷ್ಟೋ ಸಂಘ, ಸಂಸ್ಥೆ ಮತ್ತು ಶಾಲೆಗಳಲ್ಲಿ ವನಮಹೋತ್ಸವ ಆಚರಿಸಿದರೂ ಬರುವ ವರ್ಷಕ್ಕೆ ಅದು ಒಣ ಮಹೋತ್ಸವಾಗಿರುತ್ತದೆ ಎಂದು ಪರಿಸರ ತಜ್ಞರೊಬ್ಬರು ಹಾಸ್ಯ ಮಾಡುವುದು ಈ ಸಂದರ್ಭದಲ್ಲಿ ನೆನಪಾಗುತ್ತದೆ.

ನೆಟ್ಟ ಗಿಡ, ಮರಗಳನ್ನು ಅವುಗಳು ಸಾಯದಂತೆ ನೋಡಿಕೊಳ್ಳುವುದು ಬಹು ಮುಖ್ಯ. ಹಣ್ಣು, ಕಾಯಿ ಮತ್ತು ಹೂವಿನ ಗಿಡಗಳನ್ನು ನೆಟ್ಟರೆ ಹಲವಾರು ಪಕ್ಷಿಗಳಿಗೆ ಸಹಾಯವಾಗುತ್ತದೆ. ನಾವೆಲ್ಲರೂ ಪಕ್ಷಿಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕಿದೆ ಮತ್ತು ನಮ್ಮ ಮನೆಯವರಿಗೆ ಹಾಗೂ ಸಾರ್ವಜನಿಕರಿಗೆ ಪಕ್ಷಿಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಇದನ್ನು ಮೆರವಣಿಗೆಯ ಮೂಲಕ, ಬೀದಿ ನಾಟಕಗಳ ಮೂಲಕ, ಸ್ಲೈಡ್ ಶೋ ಮೂಲಕ, ಕರಪತ್ರಗಳನ್ನು ಹಂಚಿಯೂ ಮಾಡಬಹುದು. ನೀವು ಸಿದ್ಧರಿದ್ದೀರಾ?

1 comment:

  1. ನಾವೆಲ್ಲರೂ ಪ್ರಯತ್ನಿಸಬಹುದು!

    ReplyDelete