ಶಿಕ್ಷಣ ಕ್ಷೇತ್ರದ ಚೈತನ್ಯ ಈ ಕೃಷ್ಣ
ಲೇಖಕರು: ರಾಮಚಂದ್ರಭಟ್ ಬಿ.ಜಿ
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ
ಬಿಮ್ಮನೆ ಬಂದಳೋ ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ
ನಿಂದಳೋ ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ
ಹೊಳೆ ಹೊಳೆ ಹೊಳೆವಳೋ ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ
ಕಳೆ ಕಳೆವಳೋ?
ಅಲ್ಲೆ ಆ ಕಡೆ ನೋಡಲಾ !
ಅಲ್ಲೆ ಕೊಡಗರ ನಾಡಲಾ ! ಅಲ್ಲೆ ಕೊಡವರ
ಬೀಡಲಾ !
ಇದೇನು? ನೆನಪಾಯಿತೇ? ಬಾಲ್ಯದಲ್ಲಿ
ಪಠ್ಯಪುಸ್ತಕದಲ್ಲಿ ಓದಿದ ನೆನಪೇ? ಹೌದು, ಕೊಡಗಿನ ಹುತ್ತರಿ ಹಬ್ಬದ ಕುರಿತು, ನಿಸರ್ಗ ಸೌಂದರ್ಯವನ್ನು ವಿವರಿಸುವ ಪಂಜೆ ಮಂಗೇಶರಾಯರ ಈ ಕವಿತೆಯನ್ನು ಮರೆಯುವುದೆಂತು? ಪಂಜೆಯವರ ಕಾವ್ಯವನ್ನೋ, ಬೆಟ್ಟಗುಡ್ಡಗಳನ್ನು ತಬ್ಬಿದ ಮಂಜಿನ ಬಗ್ಗೆ ರಾಜರತ್ನಂರವರ “ಮಡಿಕೇರಿಲಿ ಮಂಜು” ಕವನವನ್ನು
ಆಸ್ವಾದಿಸದಿರುವ ಕನ್ನಡಿಗರಿರಲಾರರು.
ಇದೇನು?, ಶಿಕ್ಷಕರನ್ನು ಪರಿಚಯಿಸ ಹೊರಟು ನಾನು ತೆಂಕಣದ ಗಾಳಿಗೆ ಸಿಲುಕಿದೆ
ಎಂದುಕೊಂಡಿರೋ? ನೀವೆಲ್ಲರೂ ಈ ತಿಂಗಳ
‘ತೆರೆಮರೆಯ ಸಾಧಕ’ ಕ್ರಿಯಾಶೀಲ ಶಿಕ್ಷಕ ಯಾರಿರಬಹುದೆಂಬ ಕುತೂಹಲದಿಂದ ಈ
ಸಂಚಿಕೆಯನ್ನು ಎದುರು ನೋಡುತ್ತಿದ್ದೀರೆಂದು ನನಗೆ ಗೊತ್ತು.
ಹೌದು, ನಾನು ಪರಿಚಯಿಸುವ ಮೊದಲೇ ಇವರು ತಮ್ಮ ಲೇಖನಗಳ ಮೂಲಕ ನಿಮಗೆ ಪರಿಚಯವಾಗಿರಬೇಕಲ್ಲವೇ? ಪಕ್ಷಿವೀಕ್ಷಣೆ, ಪರಿಸರ, ವನ್ಯಜೀವಿಗಳ ಕುರಿತ ಅವರ ಸರಣಿ ಲೇಖನಗಳನ್ನು ‘ಸವಿಜ್ಞಾನ’ದಲ್ಲಿ ನೀವು
ಓದಿಯೇ ಇರುತ್ತೀರಿ. ಹೀಗೆ, ಕೊಡಗಿನ ಈ
ಶಿಕ್ಷಕರನ್ನು ಪರಿಚಯಿಸುತ್ತಿದ್ದಂತೆ, ನನ್ನ ಬಾಲ್ಯದ ತವರು
ಜಿಲ್ಲೆಯ ನೆನಪಿಗೆ ಜಾರಿದೆ. ಇಂತಹ ಮಂಜಿನಿಂದ ಆಚ್ಛಾದಿತ, ಹಚ್ಚ ಹಸುರನ್ನು ಹೊದ್ದ, ಕೊಡಗಿನ ಇಳೆಯ ರಮಣೀಯ
ದೃಶ್ಯವೇ ಒಂದು ರೂಪಕ. ಈ ರೂಪಕದ ಒಂದು ಪಾತ್ರವೇ ನಮ್ಮ ಈ ಸಂಚಿಕೆಯ ಸಾಧಕ ಶಿಕ್ಷಕರು. ಇಂತಹ
ಸುಂದರ ವನಸಿರಿಯನ್ನು ತನ್ನೊಡಲಲ್ಲಿ ತುಂಬಿಕೊಂಡ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಪ್ರೌಢಶಾಲೆಯ ಸೃಜನಶೀಲ ಶಿಕ್ಷಕರಾದ ಡಿ.ಕೃಷ್ಣಚೈತನ್ಯ ಅವರ ಪರಿಚಯ ಮಾಡಿಕೊಳ್ಳೋಣ.
ನಿಸರ್ಗಾರಾಧಕ, ವನ್ಯಜೀವಿ ಛಾಯಾಗ್ರಾಹಕ, ವರ್ಲಿಕಲೆಯ ನಿಪುಣರಾದ ಚೈತನ್ಯ ಅವರ ಪ್ರತಿಭೆ ಹಲವು ಆಯಾಮಗಳದ್ದು. ಅಗತ್ಯವಿದ್ದಾಗ ಪೈಂಟರ್, ಕಾರ್ಪೆಂಟರ್ ಆಗಿಯೂ ಅವರ ಪ್ರತಿಭೆ ಹೊರಹೊಮ್ಮಿದೆ. ಹೀಗೆ ಹಲವು
ವಿಚಾರಗಳಲ್ಲಿ ಆಸಕ್ತಿಯುಳ್ಳ ಬಹುಮುಖ ಪ್ರತಿಭೆಯೇ, ರಾಜ್ಯ ಸಂಪನ್ಮೂಲ ಶಿಕ್ಷಕ ಡಿ.ಕೃಷ್ಣಚೈತನ್ಯ .
ಬಸವಯ್ಯ (ದೊಡ್ಡಹೈದಯ್ಯ) ಮತ್ತು
ಗಿರಿಜಮ್ಮ ದಂಪತಿಗಳ ಪುತ್ರರಾದ ಕೃಷ್ಣಚೈತನ್ಯ ಅವರು ಮೂಲತಃ ಮಂಡ್ಯದ ಗಂಡು. ಬಾಲ್ಯ ಮತ್ತು
ಪ್ರಾಥಮಿಕ ಶಿಕ್ಷಣವನ್ನು ಮಂಡ್ಯದ ಚಿಕ್ಕಾಯರ ಹಳ್ಳಿಯಲ್ಲಿ ಪೂರೈಸಿದರೆ, ಪ್ರೌಢಶಾಲಾ ಶಿಕ್ಷಣವನ್ನು ಕೃಷ್ಣರಾಜಸಾಗರದ ಸರ್ಕಾರಿ
ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಪದವಿಪೂರ್ವ ಶಿಕ್ಷಣವನ್ನು ಪಾಂಡವಪುರದ ವಿಜಯ ಜೂನಿಯರ್
ಕಾಲೇಜಿನಲ್ಲೂ, ಬಿ.ಎಸ್ಸಿ ಶಿಕ್ಷಣವನ್ನು ಮೈಸೂರಿನ
ಯುವರಾಜ ಕಾಲೇಜಿನಲ್ಲಿ ಪೂರೈಸಿ, ಮಂಡ್ಯದ ಶಂಕರಗೌಡ ಪ್ರಶಿಕ್ಷಣ ಕಾಲೇಜಿನಿಂದ ಬಿ.ಎಡ್ ಪದವಿಯನ್ನು
ಪಡೆದುಕೊಂಡರು. ಕಳೆದ ೨೬ ವರ್ಷಗಳಿಂದ ಶಿಕ್ಷಕರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು
ವರ್ಷಗಳ ಹಿಂದೆ ನಾವು ರಾಜ್ಯಮಟ್ಟದ ತರಬೇತಿಯನ್ನು ಬೆಂಗಳೂರಿನ RIEಯಲ್ಲಿ ಏರ್ಪಡಿಸಿದಾಗ ಪರಿಸರ ಹಾಗೂ ವನ್ಯಜೀವಿಗಳ ಕುರಿತ ಅವರ ಆಳವಾದ ಜ್ಞಾನದ ಅರಿವು ರಾಜ್ಯದ
ಶಿಬಿರಾರ್ಥಿ ಶಿಕ್ಷಕರಿಗಾಯಿತು. ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಶೇಕಡಾ ೩೩ರಷ್ಟಿದ್ದ
ಫಲಿತಾಂಶವನ್ನು ೯೦ಕ್ಕೆ ಏರಿಸಿದರು. ಇದಕ್ಕಾಗಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯದ ಮರು ನಿರ್ಮಾಣ
ಮಾಡಿ ವಿದ್ಯಾರ್ಥಿಗಳಿಗೆ ಪ್ರಯೋಗ ಮಾಡಿ ಕಲಿಯಲು
ಅವಕಾಶ ಕಲ್ಪಿಸಿದರು. ಬಹಳಷ್ಟು ಸಂದರ್ಭಗಳಲ್ಲಿ ನಿಸರ್ಗವೇ ಪ್ರಯೋಗಾಲಯ. ದಾನಿಗಳ ಸಹಾಯದಿಂದ ಶಾಲಾ ಮೂಲಸೌರ‍್ಯಗಳನ್ನು
ಅಭಿವೃದ್ಧಿಪಡಿಸಿದ್ದು ಅಷ್ಟೇ ಅಲ್ಲದೇ, ತಾವೇ ಸ್ವತಃ ಶಾಲಾ
ಪ್ರಾಂಗಣಕ್ಕೆ ಬಣ್ಣಬಳಿದು ಶೃಂಗರಿಸಿ ಮಕ್ಕಳಿಗೆ ಆಕರ್ಷಣೀಯ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ
ಮಾಡಿದ್ದಾರೆ. ತರಗತಿ ಕೋಣೆಗಳಿಗೆ ಗ್ರೀನ್ ಬೋರ್ಡ್, ಗೋಡೆಯ ಮೇಲೆಲ್ಲಾ ಮೂಡಿಸಿದ ಅಂದದ ವರ್ಲಿ ಚಿತ್ರಕಲೆ ಎಂಥವರನ್ನೂ ಸೆಳೆಯುತ್ತದೆ. ಗೋಡೆಯ
ಮೇಲೆ ಅವರು ಬಿಡಿಸಿರುವ ಆಕರ್ಷಕ ಆವರ್ತಕ ಕೋಷ್ಟಕ ಅತ್ಯುತ್ತಮ ಕಲಿಕೋಪಕರಣವಾಗಿದೆ. ಅನೇಕ
ಕಲಿಕೋಪಕರಣಗಳನ್ನು ಸರಳವಾದ ಹಾಗೂ ಸ್ಥಳೀಯವಾಗಿ
ಲಭ್ಯವಿರುವ ವಸ್ತುಗಳಿಂದ ತಯಾರಿಸಿ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಕ್ಯಾಮರಾ ಕೂಡ ಅವರ
ಕೈಯಲ್ಲಿ ಒಂದು ಕಲಿಕೋಪಕರಣವಾಗಿ ಅಪರೂಪದ ವನ್ಯಜೀವಿಗಳ, ನಿಸರ್ಗದ ಛಾಯಾಚಿತ್ರಗಳ ಹಾಗೂ ವಿಡಿಯೊಗಳ ಸೃಜನೆಗೆ ಕಾರಣವಾಗಿದೆ. ಈ ಮೂಲಕ ಮಕ್ಕಳಲ್ಲಿ
ಕಲಿಕೆಯ ಕುತೂಹಲ ಬೆಳೆಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಿಸರ್ಗವೇ ದೊಡ್ಡ ಪಾಠಶಾಲೆ.
ನಿಸರ್ಗದ ಮಡಿಲಲ್ಲಿ ಹಿಂದಿನ ಗುರುಕುಲ ಮಾದರಿಯನ್ನು ನೆನಪಿಸುವ ನೈಸರ್ಗಿಕ ಹಾಗೂ ಪ್ರಾಯೋಗಿಕ
ಬೋಧನೆ ಚೈತನ್ಯರ ಅಚ್ಚುಮೆಚ್ಚಿನ ಬೋಧನಾ ವಿಧಾನ. ಅಷ್ಟೇ ಅಲ್ಲದೇ ಪರಿಸರ ಸಂರಕ್ಷಣೆಯ ವಿಷಯದಲ್ಲಿ
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿರುವುದಷ್ಟೇ ಅಲ್ಲದೆ, ಶಿಕ್ಷಕ ಸಮುದಾಯದಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.
ಸ್ಥಳೀಯರ ಸಹಕಾರದೊಂದಿಗೆ ೬೦ ಮಳೆನೀರಿನ
ಇಂಗು ಗುಂಡಿಗಳ ನಿರ್ಮಾಣ ಮಾಡಿ ಅಂತರ್ಜಲ ಸಂರಕ್ಷಣೆಯ ಕಾರ್ಯದಲ್ಲಿ ಸ್ಥಳೀಯರು ಮತ್ತು ಮಕ್ಕಳನ್ನು
ತೊಡಗಿಸಿಕೊಂಡು ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
‘ನಿಸರ್ಗ ನಮ್ಮೆಲ್ಲಾ ಅವಶ್ಯಕತೆಗಳನ್ನೂ
ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ’ ಎಂಬ ಗಾಂಧೀಜಿಯವರ
ಮಾತು ಸರ್ವಕಾಲಿಕ ಸತ್ಯ. ನಿಸರ್ಗದೊಡಗಿನ ಅನುಸಂಧಾನ ನಮ್ಮ ಬದುಕನ್ನು ಕಟ್ಟಬಲ್ಲದು. ಸಾವಿರಾರು
ವರ್ಷಗಳಿಂದ ಅಯಾಚಿತವಾಗಿ ಬಂದ ಜ್ಞಾನ ಇಂದು ಅವಜ್ಞೆಗೊಳಗಾಗಿದೆ, ನಿಸರ್ಗದ ಮಡಿಲ ಮಹತ್ವವÀನ್ನು ಮತ್ತೆ ಜನರಿಗೆ ತಿಳಿಸಬೇಕಿದೆ. ಕೃಷ್ಣಚೈತನ್ಯ ಅವರು ಸ್ಥಳೀಯರ, ಸಹೋದ್ಯೋಗಿಗಳ, ಶಾಲೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಶಾಲೆಯ ಆವರಣದಲ್ಲಿ ಔಷಧೀಯ ಸಸ್ಯೋದ್ಯಾನ
ನಿರ್ಮಾಣಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಸುಮಾರು ೭೦ಕ್ಕೂ ಹೆಚ್ಚಿನ ಔಷಧೀಯ ಸಸ್ಯಗಳನ್ನು
ತಮ್ಮ ಧನ್ವಂತರಿ ವನದಲ್ಲಿ ನೆಟ್ಟು ಪೋಷಿಸಿದ್ದಾರೆ. ೧೪೦೦ಕ್ಕೂ ಹೆಚ್ಚು ಹೂವು, ಹಣ್ಣು ಮತ್ತು ಅಮೂಲ್ಯ ಸಸ್ಯಗಳನ್ನು ನೆಟ್ಟು, ಅವುಗಳ ಸಂರಕ್ಷಣೆ ಮಾಡಿ ಜೀವವೈವಿಧ್ಯತೆಯ ಪ್ರಾಮುಖ್ಯತೆಯನ್ನು
ಸಾರುತ್ತಿದ್ದಾರೆ. ಹಲವಾರು ರೀತಿಯಲ್ಲಿ ಪರಿಸರ ಸಂರಕ್ಷಣೆಯ ಕಾಯಕದಲ್ಲಿ ತಮ್ಮನ್ನು ತಾವು
ತೊಡಗಿಸಿಕೊಂಡಿದ್ದಾರೆ. ಇದು ಎಲ್ಲ ಶಿಕ್ಷಕರಿಗೂ ಅನುಕರಣೀಯ. ಕಳೆದ ಕೆಲ ವರ್ಷಗಳ ಹಿಂದೆ, ಕೊಡಗಿನಲ್ಲಿ ನಡೆದ ಭೀಕರ ಭೂಕುಸಿತದ ಹಿನ್ನಲೆಯಲ್ಲಿ ಇದರ ಮಹತ್ವವನ್ನು
ನಾವೆಲ್ಲರೂ ಅರಿಯಬೇಕಿದೆ.
ಇವುಗಳ ಜೊತೆಗೇ, ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್, ವರ್ಕ್ಬುಕ್ ಮತ್ತು ಪ್ರಶ್ನಾಕೋಠಿಯ ರಚನೆ. ಜಿಲ್ಲಾ ಹಂತದ ಪ್ರಶ್ನೆ
ಪತ್ರಿಕೆಗಳ ರಚನೆ ಮೊದಲಾದ ಶೈಕ್ಷಣಿಕ ಕರ‍್ಯಗಳಷ್ಟೇ ಅಲ್ಲದೆ, ಕರೋನ ಭೀತಿಯ ನಡುವೆಯೂ ದೂರದರ್ಶನದ ಸಂವೇದ ತರಗತಿಗಳಲ್ಲಿ ಪಾಲ್ಗೊಂಡು, ಇತರರಿಗೆ ಮಾದರಿಯಾಗಿದ್ದಾರೆ. ಹಲವಾರು ಶಿಕ್ಷಕ ತರಬೇತಿಗಳಲ್ಲಿ ಮತ್ತು
ನೇಚರ್ ಕ್ಯಾಂಪ್‌ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಶಾಲೆಯಷ್ಟೇ ಅಲ್ಲದೆ, ಇತರ ಶಾಲೆಗಳ ವಿದ್ಯಾರ್ಥಿಗಳಲ್ಲೂ ಪರಿಸರದ ಕುರಿತಂತೆ ಆಸಕ್ತಿ
ಮೂಡಿಸಿದ್ದಾರೆ. ಇಂತಹ ನೂರಾರು ಕರ‍್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಿ ಕೊಟ್ಟಿದ್ದಾರೆ.
ಹಲವಾರು ರೇಡಿಯೋ ಕರ‍್ಯಕ್ರಮಗಳನ್ನೂ ನಡೆಸಿಕೊಟ್ಟು ಜಿಲ್ಲೆಯಲ್ಲಿ ಜನಪ್ರಿಯ ಹಾಗೂ ಕ್ರಿಯಾಶೀಲ
ಶಿಕ್ಷಕರೆನಿಸಿದ್ದಾರೆ.
ಕೃಷ್ಣಚೈತನ್ಯರ ಇಂತಹ ಹತ್ತು ಹಲವು
ಸ್ತುತ್ಯರ್ಹ ಕಾರ‍್ಯಗಳನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ, ಪ್ರಶಸ್ತಿ ನೀಡಿ ಸನ್ಮಾನಿಸಿ, ಪ್ರೋತ್ಸಾಹಿಸಿವೆ. ಅಷ್ಟೇ ಅಲ್ಲದೆ, ಶಿಕ್ಷಣ ಇಲಾಖೆಯೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ
ಗೌರವಿಸಿದೆ. ಇಂತಹ ಶಿಕ್ಷಕರುಗಳು ಇಲಾಖೆಗಷ್ಟೇ ಅಲ್ಲದೇ ಸಮುದಾಯಕ್ಕೂ ಚೈತನ್ಯವನ್ನು ಒದಗಿಸುತ್ತಾರೆ. ಇಂತಹ
ಶಿಕ್ಷಕರ ಸಂಖ್ಯೆ ಸಮಾಜದಲ್ಲಿ ಹೆಚ್ಚಲಿ. ಕೃಷ್ಣ ಚೈತನ್ಯರಿಗೆ ಇನ್ನಷ್ಟು ಉತ್ತಮ ಕಾರ‍್ಯಗಳನ್ನು
ಕೈಗೊಳ್ಳುವ ಚೈತನ್ಯ ದೊರೆಯಲಿ ಎಂದು ‘ಸವಿಜ್ಞಾನ’ ತಂಡ ಹಾರೈಸುತ್ತದೆ.
ಟೈಮ್ಸ್ ಟೋಫಿಟ್ ಪ್ರಶಸ್ತಿ
ಪ್ರಯೋಗಶಾಲೆಯ ನೋಟ. ಪ್ರಶ್ನಿಸದೇ ಒಪ್ಪಿಕೊಳ್ಳಬೇಡಿ ಎನ್ನುವ ಟ್ಯಾಗ್ ಲೈನ್ ವಿದ್ಯಾರ್ಥಿಗಳನ್ನು ಯಾವಾಗಲೂ ಎಚ್ಚರದಲ್ಲೇ ಇಡುತ್ತದೆ.
ಅಂತರ್ಜಲ ಹೆಚ್ಚಿಸಲು ಇಂಗುಗುಂಡಿ
ನಿರ್ಮಾಣ
ಗೋಡೆ ಅಲಂಕರಿಸಿದ ಚೈತನ್ಯರ ಕೈಯಲ್ಲಿ ಅರಳಿದ ವರ್ಲಿ ಕಲೆ
ಸೀಮೆ ಸುಣ್ಣದಲ್ಲಿ ಅರಳಿದೆ ಕಲೆ
ಔಷಧೀಯ ಸಸ್ಯಗಳ ಧನ್ವಂತರಿವನದ ವಿಡಿಯೋ ಲಿಂಕ್
https://www.facebook.com/chaithanya.dk
ಮರದ ಕೆತ್ತನೆಯ ವಿಡಿಯೋ ಲಿಂಕ್
https://www.youtube.com/watch?v=4iK0EdyPpcc
ಕೃಷ್ಣಚೈತನ್ಯರ ಉಡುಗದ ಚೈತನ್ಯ ನಮಗೆಲ್ಲಾ ಮಾದರಿಯಾಗಲಿ. ಪ್ರೇರಣೆ ನೀಡಲಿ. ಪರಿಚಯಿಸಿರುವ ರೀತಿಯೂ ಚೇತೋಹಾರಿಯಾಗಿದೆ. ಅಭಿನಂದನೆಗಳು ಹೆಮ್ಮೆಯ ಶಿಕ್ಷಕರಿಗೆ,
ReplyDeleteAmazing sir. I'm proud to be your student today and forever
ReplyDeleteನೀವು ನನ್ನಂಥಹ ಅನೇಕ ಶಿಕ್ಷಕರಿಗೆ ಸ್ಫೂರ್ತಿ ಸರ್. U deserve d most sir. Congratulations sir💐💐💐
ReplyDeleteDedicated teacher and most inspirator to all. Myself learnt more valuable work from you.thanks to have concern of environment also implementation in your daily life schedule .Any how congratulation. All the best for coming involvement work.
ReplyDeleteಕೃಷ್ಣಚೈತನ್ಯರ ಕಲಿಕಾಶ್ರಮ, ಕಲಿಕಾಸಕ್ತಿ, ಪರಿಸರದ ಬಗ್ಗೆ ಕಾಳಜಿ, ಶಾಲೆಯಲ್ಲಿ ಅವರು ಈ ಹತ್ತು ವರ್ಷಗಳ ಹಿಂದೆಯೇ ಪ್ರಾರಂಭಿಸಿದ ಔಷದಿ ಸಸ್ಯಗಳ ವನ, ಎಲ್ಲಕಿಂತ ಅವರು ಎಲ್ಲರೊಡನೆ ಸ್ನೇಹದಿಂದ ಬೆರಯುವ ಪರಿ. ಶ್ಲಾಘನೀಯ. ಶಿಕ್ಷಕರಲ್ಲರಿಗೂ ಮಾದರಿ. ಇವರನ್ನ ಇತರ ಶಿಕ್ಷಕರು ಅನುಸರಿಸಿದರ ಆ ವಿದ್ಯಾರ್ಥಿಗಳು ಧನ್ಯ.
ReplyDeleteNice sir , well done sir ...great of you sir and we are lucky to have you as our teacher and I have proud to be your student..
ReplyDelete