ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, January 1, 2021

ಕಲಬುರಗಿಯ ಸ್ಫೂರ್ತಿಯ ಬುರುಜು - ರಾಷ್ಟ್ರಪ್ರಶಸ್ತಿ ವಿಜೇತೆ-ಸುರೇಖಾ ಜಗನ್ನಾಥ್

ಕಲಬುರಗಿಯ ಸ್ಫೂರ್ತಿಯ ಬುರುಜು - ರಾಷ್ಟ್ರಪ್ರಶಸ್ತಿ ವಿಜೇತೆ-ಸುರೇಖಾ ಜಗನ್ನಾಥ್

ಮಾಹಿತಿ : ರಾಜೇಶ್ ಎಸ್. ನಾಗೂರೆ

        ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಲಗುರ್ತಿ, 

        ಚಿತ್ತಾಪುರ ತಾಲ್ಲೂಕು ಕಲಬುರಗಿ ಜಿಲ್ಲೆ.


ಕೇಂದ್ರ ಸರ್ಕಾರದಿಂದ ಶಿಕ್ಷಕರ ದಿನಾಚರಣೆಯಂದು ನೀಡಲಾಗುವ    ಬಾರಿಯ ಅತ್ಯುತ್ತಮ ಶಿಕ್ಷಕ   ರಾಷ್ಟ್ರ   ಪ್ರಶಸ್ತಿಗೆ  (2020)  ಪಾತ್ರರಾದ ಕರ್ನಾಟಕದ ಇಬ್ಬರು ಶಿಕ್ಷಕರಲ್ಲಿ ವಿಜ್ಞಾನ ಶಿಕ್ಷಕಿ ಸುರೇಖಾ ಜಗನ್ನಾಥ್ ಒಬ್ಬರು. ಪ್ರಸ್ತುತ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಎಂಬ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 


ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಸುರೇಖಾ ಅವರು ಬೀದರ್ ಜಿಲ್ಲೆಯ ಚಿಟಗುಪ್ಪಾದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಲಿಂಗಸಗೂರಿನ ಅಮರೇಶ್ವರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಶಿಕ್ಷಣ ಪಡೆದು, ಧಾರವಾಡದ ಕಿಟ್ಟೆಲ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾಭ್ಯಾಸ ಮುಗಿಸಿದರು. ನಂತರ ಕಲಬುರ್ಗಿಯ ವಿ. ಜಿ. ಮಹಿಳಾ ವಿದ್ಯಾಲಯದಲ್ಲಿ ಬಿ.ಎಸ್‌ಸಿ., ಪದವಿ ವಿದ್ಯಾಭ್ಯಾಸ ಮುಗಿಸಿ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಎಂ.ಎಸ್‌ಸಿ.ಸ್ನಾತಕೋತ್ತರ ಪದವಿ ಪಡೆದರು. ಕಲಬುರಗಿಯ ಚಾಂದ್ ಬೀಬಿ ಕಾಲೇಜಿನಿಂದ ಬಿ.ಎಡ್. ಪದವಿಯನ್ನು ಗಳಿಸಿದರು.

2004ರಲ್ಲಿ ಜಿಲ್ಲೆಯ ಕೊಡದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಸುರೇಖಾ ಅವರು, ಅಲ್ಲಿಂದ ಅಫಜಲಪುರ ತಾಲೂಕಿನ ಗೊಬ್ಬೂರಿನ ಶಾಲೆಗೆ ವರ್ಗವಾದರು. ಪ್ರಸ್ತುತ ಬಂದರವಾಡಿಯ ಸರ್ಕಾರಿ ಶಾಲೆಯಲ್ಲಿ ವಿಜ್ಙಾನ ಶಿಕ್ಷಕಿಯಾಗಿದ್ದಾರೆ.

ಸದಾ ಕ್ರಿಯಾಶೀಲವಾಗಿರುವ ಸುರೇಖಾ ಅವರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳಸುವ ಮೂಲಕ ತಮ್ಮ ವಿದ್ಯಾರ್ಥಿಗಳು ವಿಜ್ಙಾನ ಕಲಿಕೆಯಲ್ಲಿ ಆಸಕ್ತಿ ತೋರುವ ನಿಟ್ಟನಲ್ಲಿ ಪ್ರೇರೇಪಿಸಿದ್ದಾರೆ. ವಿದ್ಯಾರ್ಥಿಗಳು ಸ್ವತಃ ತಾವೇ ಪ್ರಯೋಗಗಳನ್ನು ಮಾಡಿ ಕಲಿಯುವಂಥ ವಾತಾವರಣವನ್ನು ಶಾಲೆಯಲ್ಲಿ ಒದಗಿಸಿದ್ದಾರೆ. ವಿಜ್ಞಾನದ ಕಲಿಕೆ ಹೊರೆಯಲ್ಲ ಎಂಬ ಅಭಿಪ್ರಾಯವನ್ನು ತಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಾಲೂಕಿನಾದ್ಯಂತ ನಡೆಯುವ ವಿಜ್ಞಾನ ರಸಪ್ರಶ್ನೆ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿ ಅಸಂಖ್ಯಾತ ಬಹುಮಾನಗಳನ್ನು ಗಳಿಸಿದ್ದಾರೆ. ರಾಷ್ಟ್ರಮಟ್ಟದ ವಿಜ್ಞಾನ ಪ್ರದರ್ಶನಗಳಲ್ಲಿಯೂ ಅವರ ವಿದ್ಯಾರ್ಥಿಗಳು ತಮ್ಮ ಪ್ರಾತ್ಯಕ್ಷಿಕೆಗಳೊಂದಿಗೆ ಪಾಲ್ಗೊಂಡು ಯಶಸ್ಸು ಗಳಿಸಿದ್ದಾರೆ.

ತಮ್ಮ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಶಾಲೆಯ ಅಂಗಳದಲ್ಲಿ ಸುಂದರವಾದ ಕೈದೋಟವನ್ನು ನಿರ್ಮಿಸಿ, ಅಲ್ಲಿ ಬಗೆ, ಬಗೆಯ ಹೂವು ಹಣ್ಣುಗಳನ್ನು ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಜೊತೆಗೆ, ಗ್ರಾಮದ ಪರಿಸರದಲ್ಲಿಯೇ ಬೆಳೆಯತ್ತಿರುವ ಗಿಡ ಮೂಲಿಕೆ ಬಳಸಿ ನಡೆಸಲಾಗುವ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಬಗ್ಗೆ ಮಾಹಿತಿ ಕಲೆಹಾಕಿ ಗ್ರಾಮದ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾ ಕಲಿಕೆಯ ಬಗ್ಗೆ ಆಸಕ್ತಿ ಹಾಗೂ ಒಲವು ಮೂಡಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಸುರೇಖಾ ಅವರಿಗೆ ‘ಸವಿಜ್ಞಾನ’ ತಂಡ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

2017ರಲ್ಲಿ ಕಲಬುರಗಿಯಲ್ಲಿ ನಡೆದ ಮಕ್ಕಳ ವಿಜ್ಞಾನ ಕಾಂಗ್ರೆಸ್‌ನಲ್ಲಿ ಸವಿಜ್ಞಾನದ ಪ್ರಧಾನ ಸಂಪಾದಕರಾದ ಡಾ|| ಬಾಲಕೃಷ್ಣ ಅಡಿಗರೊಂದಿಗೆ ಸಂವಾದ ನಡೆಸುತ್ತಿರುವ ಶ್ರೀಮತಿ ಸುರೇಖಾ

***

ಈ ಲೇಖನದ PDF ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


6 comments:

  1. ವ್ಯಕ್ತಿ ಪರಿಚಯ ಸೊಗಸಾಗಿದೆ....
    ನಮ್ಮೊಳಗೊಬ್ಬರು ಅಸಾಮಾನ್ಯರು..

    ReplyDelete
  2. ಉಮೇಶ್
    ತುಂಬಾ ಉತ್ತಮ ಮಾಹಿತಿ ನೀಡಿದ ತಮಗೆ ಧನ್ಯವಾದಗಳು

    ReplyDelete
  3. Very informative article about Surekha Jagannath madam.
    Congratulations Rajesh

    ReplyDelete