ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ
ನಾಡು ಕಂಡ
ಅಪೂರ್ವ ಸಸ್ಯ ವಿಜ್ಞಾನಿ ಬಿ.ಜಿ.ಎಲ್.ಸ್ವಾಮಿ ಅವರು ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ಡಾ.ಡಿ.ವಿ.ಗುಂಡಪ್ಪ ಅವರ ಪುತ್ರ
ರತ್ನ. ಬೆಂಗಳೂರು ಗುಂಡಪ್ಪ ಲಕ್ಷೀನಾರಾಯಣ ಸ್ವಾಮಿ ಅವರ ಪೂರ್ಣ ನಾಮಧೇಯ. ಬಿ.ಜಿ.ಎಲ್.ಸ್ವಾಮಿ
ಕೇವಲ ಸಸ್ಯ ವಿಜ್ಞಾನಿಯಲ್ಲ. ಅವರದ್ದು ಬಹುಮುಖ ಪ್ರತಿಭೆ. ಸಂಶೋದಕ, ಜನಪ್ರಿಯ
ವಿಜ್ಞಾನ ಲೇಖಕ, ಸಾಹಿತಿ, ಪ್ರಾಧ್ಯಾಪಕ, ದಕ್ಷ
ಆಡಳಿತಗಾರ, ಸಂಗೀತಜ್ಞ, ನೃತ್ಯಪಟು, ಚಿತ್ರಕಾರ, ಬಹು ಭಾಷಾ
ಕೋವಿದ, ಹೀಗೆ, ಹತ್ತು ಹಲವು
ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 2021ರ ಫೆಬ್ರವರಿ 5 ರಂದು ಅವರ 103ನೇ ಜನ್ಮ ದಿನ. ಆ ಸಂದರ್ಭಕ್ಕೆ ಅವರ ಸ್ಮರಣೆಯಲ್ಲಿ ಈ
ಲೇಖನ.
ಬೆಂಗಳೂರಿನ
ಖ್ಯಾತ ನ್ಯಾಷನಲ್ ಹೈಸ್ಕೂಲಿನಲ್ಲಿ 1936ರಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಸೆಂಟ್ರಲ್
ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಹಾಗೂ ಪದವಿ ವಿದ್ಯಾಭ್ಯಾಸ (ರಸಾಯನ ವಿಜ್ಞಾನ, ಪ್ರಾಣಿ
ವಿಜ್ಞಾನ ಹಾಗೂ ಸಸ್ಯ ವಿಜ್ಞಾನ) ಮುಗಿಸಿದರು. ಪ್ರಾಣಿ ವಿಜ್ಞಾನದಲ್ಲಿ ಆಸಕ್ತಿ ಇದ್ದರೂ, ತಂದೆಯವರ
ಒಡನಾಡಿ ಸಾಹಿತಿ ಎ.ಆರ್.ಕೃಷ್ಣಶಾಸ್ತಿçಯವರ ಸಲಹೆಯ
ಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಸಸ್ಯ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರು. ಹೀಗೆ, ಸಸ್ಯ
ವಿಜ್ಞಾನದ ಅಧ್ಯಯನ ಅವರ ಜೀವನದ ಅವಿಭಾಜ್ಯ ಅಂಗವೇ ಆಗಿಹೋಯಿತು. ಮುಂದೆ, ಈ
ಕ್ಷೇತ್ರದಲ್ಲಿ ಸಾಮಾನ್ಯರು ಸಾಧಿಸಲಾಗದ್ದನ್ನು ಬಿ.ಜಿ.ಎಲ್.ಸ್ವಾಮಿ ಸಾಧಿಸಿ ತೋರಿಸಿದರು.
ಬಿ.ಎಸ್.ಸಿ. ಆನರ್ಸ್ ಪದವಿಯ ನಂತರ ಟಾಟಾ ವಿಜ್ಞಾನ
ಮಂದಿರದಲ್ಲಿ (I.I.Sc.) ಒಂದು ವರ್ಷ
ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದರು. ಅವರ ಮುಂದಿನ ಸಂಶೋಧನೆಗೆ ಅಗತ್ಯವಾದ ವಿಧಿ ವಿಧಾನಗಳನ್ನು
ಅವರ ಮನನ ಮಾಡಿಕೊಂಡಿದ್ದು ಇಲ್ಲಿಯೇ. ನಂತರ ಕೆಲಕಾಲ ಬೆಂಗಳೂರಿನ ಅರಣ್ಯ ಸಂಶೋಧನಾ
ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸಿದರು. ಆದರೆ, ಸ್ವಾಮಿಯವರ ಮನಸ್ಸು ಮಾತ್ರ ಸಂಶೋಧನಾ ಕ್ಷೇತ್ರದತ್ತಲೇ ತುಡಿಯುತ್ತಿತ್ತು. ಅಧ್ಯಾಪಕ ವೃತ್ತಿ
ಹಿಡಿದು ಸಂಶೋಧನೆಯನ್ನು ಮುಂದುವರೆಸುವ ಇಚ್ಛೆ ಅವರಿಗಿತ್ತು.
ಸಸ್ಯವಿಜ್ಞಾನದಲ್ಲಿ ಸಂಶೋಧನೆಯನ್ನು ಮುಂದುವರೆಸುವ ಸ್ವಾಮಿಯವರ ಮನದಾಸೆಗೆ ಇಂಬು ಕೊಟ್ಟದ್ದು
ಅವರ ತಂದೆ ಡಿ.ವಿ.ಜಿ.ಯವರು. ತಮಗಿದ್ದ ಆರ್ಥಿಕ ಸಮಸ್ಯೆಗಳ ನಡುವೆಯೂ ಮಗನ ಸಂಶೋಧನೆಗೆ ಅಗತ್ಯವಾದ ಮೈಕ್ರೋಸ್ಕೋಪು, ಮೈಕ್ರೋಟೋಮು
ಮುಂತಾದ ಪರಿಕರಗಳನ್ನು ಒದಗಿಸಿಕೊಟ್ಟರು. ಸ್ವಾಮಿಯವರೇ ಹೇಳಿರುವಂತೆ “ಎಲ್ಲ ಸೆಕೆಂಡ್ ಹ್ಯಾಂಡ್
ಪರಿಕರಗಳನ್ನು ಜೋಡಿಸಿಕೊಂಡು” ಮನೆಯಲ್ಲೇ ಸ್ವಾಮಿಯವರ ಸಂಶೋಧನೆಗಳು ಪ್ರಾರಂಭವಾದುವು ! ತಮ್ಮ
ಮನಸ್ಸಿನಲ್ಲಿಯೇ ಉದ್ಭವಿಸಿದ್ದ ಸಮಸ್ಯೆಗಳನ್ನೇ ಇಟ್ಟುಕೊಂಡು, ಯಾರ ಮಾರ್ಗದರ್ಶನವೂ ಇಲ್ಲದೆ ಪ್ರಯೋಗಗಳನ್ನು ನಡೆಸಿದರು. ಬಂದ ಫಲಿತಾಂಶಗಳನ್ನು
ಕ್ರೋಢೀಕರಿಸಿ,
ಲೇಖನಗಳನ್ನು
ಸಿದ್ಧಪಡಿಸಿ, ದೇಶದ ಖ್ಯಾತ
ವೈಜ್ಞಾನಿಕ ನಿಯತಕಾಲಿಕಗಳಿಗೆ ಕಳಿಸಿದರು. ಅವರ ಪ್ರಯೋಗಗಳ ಗುಣಮಟ್ಟದಿಂದಾಗಿ ಈ ಲೇಖನಗಳು
ಪ್ರಕಟವಾದುವಷ್ಟೇ ಅಲ್ಲದೇ ಸಮಕಾಲೀನ ವಿಜ್ಞಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದುವು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ನಾಡಿನ ಶ್ರೇಷ್ಟ
ಸಸ್ಯವಿಜ್ಞಾನಿ ಡಾ. ಪಂಚಾನನ ಮಹೇಶ್ವರಿ, ಸ್ವಾಮಿಯವರ ಸಂಶೋಧನೆಗಳಲ್ಲಿದ್ದ ಮೌಲ್ಯ ಹಾಗೂ ಉತ್ಕೃಷ್ಟತೆಯನ್ನು ಗುರುತಿಸಿ, ಅವರನ್ನು
ಹೃತ್ಪೂರ್ವಕವಾಗಿ ಪ್ರೋತ್ಸಾಹಿಸಿದರು. ಇದರಿಂದಾಗಿ, ಸ್ವಾಮಿಯವರ ಸಂಶೋಧನಾ ಲೇಖನಗಳು ವಿದೇಶೀ ನಿಯತಕಾಲಿಕಗಳಲ್ಲಿಯೂ ಪ್ರಕಟವಾಗತೊಡಗಿ, ಅಲ್ಲಿನ
ವಿಜ್ಞಾನಿಗಳ ಗಮನವನ್ನೂ ಸೆಳೆದುವು. ಯಾವ ಅತ್ಯಾಧುನಿಕ
ಉಪಕರಣಗಳಿಲ್ಲದೆ,
ಮನೆಯಲ್ಲಿಯೇ
ಸ್ವಾಮಿ ನಡೆಸಿದ ಸಂಶೋಧನೆಗಳು ವಿಶ್ವವಿಖ್ಯಾತಿ ಪಡೆದುವು! ಸ್ವಾಮಿಯವರ ಸಂಶೋಧನೆಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ 1947ರಲ್ಲಿ ಮೈಸೂರು
ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು.
ಸ್ವಾಮಿಯವರ ಸಂಶೋಧನೆಗಳು
ಭಾರತ ಸರ್ಕಾರದ
ಶಿಷ್ಯವೇತನದ ಅಡಿಯಲ್ಲಿ ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಾ. ಇರ್ವಿಂಗ್‌ಬೇಯ್‌ಲಿ (Dr. Irving Bailey) ಎಂಬ ಖ್ಯಾತ ಸಸ್ಯವಿಜ್ಞಾನಿಯ ಮಾರ್ಗದರ್ಶನದಲ್ಲಿ ತಮ್ಮ
ಸಂಶೋಧನೆಯನ್ನು ಮುಂದುವರೆಸುವ ಅವಕಾಶವನ್ನು ಸ್ವಾಮಿಯವರು ಪಡೆದರು. ಸಸ್ಯ ಶರೀರರಚನಾ ಶಾಸ್ತç ಮತ್ತು
ಭ್ರೂಣಶಾಸ್ತç, ಸ್ವಾಮಿಯವರ
ಪ್ರಮುಖ ಸಂಶೋಧನಾ ಕ್ಷೇತ್ರಗಳು. ವಿವಿಧ ಬಗೆಯ ಸಸ್ಯಗಳನ್ನು ಆಯ್ಕೆ ಮಾಡಿಕೊಂಡು ಈ
ಕ್ಷೇತ್ರಗಳಲ್ಲಿ ಸಂಶೋಧನೆ ಮುಂದುವರೆಸಿದರು. ನಿಖರ ಹಾಗೂ ವಸ್ತುನಿಷ್ಟ ಅಭಿಪ್ರಾಯ ಮಂಡನೆಗೆ
ಹೆಸರಾಗಿದ್ದ ಬೇಯ್‌ಲಿ ಬಹು ಬೇಗ ಸ್ವಾಮಿಯವರ ಸಂಶೋಧನಾ ಸಾಮರ್ಥ್ಯಕ್ಕೆ ಹಾಗೂ ವಿಶ್ಲೇಷಣಾ
ಚಾತುರ್ಯಕ್ಕೆ ಮಾರುಹೋದರು. ಹೀಗಾಗಿ, ಇಬ್ಬರ ನಡುವೆ ನಡೆಯುತ್ತಿದ್ದ ಅರ್ಥಪೂರ್ಣ ಚರ್ಚೆಗಳು
ಹಾಗೂ ವಿಚಾರ ವಿನಿಮಯಗಳು ಸಸ್ಯ ವಿಜ್ಞಾನಕ್ಕೆ ಅಮೂಲ್ಯ ಕೊಡುಗೆಯಾಗಿ ಒದಗಿದುವು. ಬೇಯ್‌ಲಿ ಅವರ
ಜೊತೆಗೆ ಜಂಟಿಯಾಗಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಸ್ವಾಮಿಯವರದ್ದು.
ಹಾರ್ವರ್ಡ್
ವಿಶ್ವವಿದ್ಯಾಲಯದಲ್ಲಿ ಹಾಗು ನಂತರ ಮದರಾಸಿನಲ್ಲಿ ಸ್ವಾಮಿಯವರು ನಡೆಸಿದ ಸಂಶೋಧನೆಗಳಿಗೆ ಸಂಬAಧಿಸಿದAತೆ
ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟವಾಗಿವೆ. ಅಲ್ಲದೆ, ಸ್ವಾಮಿಯವರ ಮಾರ್ಗದರ್ಶನದಲ್ಲಿ ಐವತ್ತಕ್ಕೂ ಹೆಚ್ಚು
ವಿದ್ಯಾರ್ಥಿಗಳು ಪಿ.ಹೆಚ್‌ಡಿ., ಪದವಿಯನ್ನು ಗಳಿಸಿದ್ದಾರೆ.
ಸಸ್ಯಗಳಲ್ಲಿ ಎಲೆಗಳಿಂದಲೇ
ಕಾಲಾನುಕ್ರಮದಲ್ಲಿ ಹೂವು ರೂಪುಗೊಳ್ಳುತ್ತವೆ ಎಂಬುದನ್ನು ನಿರ್ವಿವಾದವಾಗಿ ತೋರಿಸಿದ್ದು ಹಾಗೂ
ಹೂವಿನ ಅಂಡಾಶಯದ ಬೆಳವಣಿಗೆಯಲ್ಲಿನ ಪ್ರಮುಖ ಹಂತಗಳನ್ನು ಮತ್ತು ಬಗೆಗಳನ್ನು ಗುರುತಿಸಿದ್ದು, ಸ್ವಾಮಿ ಅವರ
ಸಂಶೋಧನೆಗಳಲ್ಲಿ ಪ್ರಮುಖವಾದುದು. ಅಲ್ಲದೆ, ಸಸ್ಯದ ಬೇರು ಮತ್ತು ಕಾಂಡ ಜೋಡಣೆಯಾಗುವ ಭಾಗದ
ಅಂಗರಚನೆಯ ಬಗ್ಗೆ ಬಹು ವರ್ಷಗಳಿಂದ ರೂಢಿಯಲ್ಲಿದ್ದ ಸಿದ್ಧಾಂತವೊAದನ್ನು ಬದಿಗೆ
ಸರಿಸಿ, ಹೊಸ
ಸಿದ್ಧಾಂತವೊAದನ್ನು
ರೂಪಿಸಿದ ಖ್ಯಾತಿ ಸ್ವಾಮಿಯವರದ್ದು. ಸ್ವಾಮಿಯವರ ಸಂಶೋಧನೆಯ ಮತ್ತೊಂದು ಪ್ರಮುಖ ಅಂಶ, ಆರ್ಕಿಡ್ (orchid) ಸಸ್ಯಗಳ
ಭ್ರೂಣದ ಬೆಳವಣಿಗೆಗೆ ಸಂಬAಧಿಸಿದ್ದು. ಇವರ ಈ ಎಲ್ಲ ಸಂಶೋಧನೆಗಳ ಫಲಿತಾಂಶಗಳು ವಿಶ್ವಮಾನ್ಯತೆ ಗಳಿಸಿ ಸಸ್ಯಶಾಸ್ತçದ ಹೆಸರಾಂತ ಪಠ್ಯಪುಸ್ತಕಗಳಲ್ಲಿ ಸೇರಿಹೋಗಿವೆ.
ತಮ್ಮ ಸಂಶೋಧನೆಯ ಅವಧಿಯಲ್ಲಿ ಸ್ವಾಮಿ ಕೆಲವು ಹೊಸ ಸಸ್ಯ
ಪ್ರಭೇದಗಳನ್ನು ಕಂಡು ಹಿಡಿದಿದ್ದರು. ಅದರಲ್ಲಿ ಒಂದು ಸಾರ್ಕ್ಯಾಂಡ್ರಾ (Sarcandra) ಎಂಬ ಜಾತಿಗೆ ಸೇರಿದ್ದು. ಈ ಹೊಸ
ಪ್ರಭೇದಕ್ಕೆ ತಮ್ಮ ನೆಚ್ಚಿನ ಗುರು ಬೇಯ್ಲಿಯವರ ಹೆಸರನ್ನೇ ಇಟ್ಟು ಸಾರ್ಕ್ಯಾಂಡ್ರಾ ಇರ್ವಿಂಗ್
ಬೇಯ್ಲಿಯೈ (Sarcandra irving baileyii) ಎಂದು ಕರೆದರು. ಅದೇ ರೀತಿ, ಸ್ವಾಮಿ ಕಂಡು ಹಿಡಿದ ಆಸ್ಕಾರೀನ (Ascarina) ಗಿಡದ ಹೊಸ ಪ್ರಭೇದವೊಂದಕ್ಕೆ ತಾವು ಅಪಾರವಾಗಿ ಗೌರವಿಸುತ್ತಿದ್ದ ಪಂಚಾನನ ಮಹೇಶ್ವರಿ ಅವರ ನೆನಪಿನಲ್ಲಿ
ಆಸ್ಕರೀನ ಮಹೇಶ್ವರಿಯೈ (Ascarina
maheshwarii) ಎಂಬ ವೈಜ್ಞಾನಿಕ ಹೆಸರನ್ನು
ಕೊಟ್ಟಿದ್ದಾರೆ.
ಸ್ವಾಮಿಯವರ ಕನ್ನಡ ಸಾಹಿತ್ಯ ಕೃತಿಗಳು
ಬಾಲ್ಯದಿಂದಲೇ ಬಿ.ಜಿ.ಎಲ್. ಸ್ವಾಮಿಯವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ. ಇದಕ್ಕೆ, ಮನೆಯ ವಾತಾವರಣವೇ ಕಾರಣ.
ತಂದೆ ಡಿ.ವಿ.ಜಿ.ಯವರನ್ನು ನೋಡಲು ಮನೆಗೆ ಬರುತ್ತಿದ್ದ ಕನ್ನಡ ಸಾಹಿತ್ಯದ ಅನೇಕ ಪ್ರಾತಃ ಸ್ಮರಣೀಯರ ಪ್ರಭಾವ ಸ್ವಾಮಿಯವರ ಮೇಲಾಗಿತ್ತು.
ಕನ್ನಡ ಸಾಹಿತ್ಯಕ್ಕೆ ಸ್ವಾಮಿಯವರ ಮೊದಲ ಕೊಡುಗೆ ಅವರ
“ಪಂಚ ಕಳಶ ಗೋಪುರ” ಎಂಬ ಕೃತಿ. ಕನ್ನಡ ಸಾಹಿತ್ಯ ಕ್ಷೇತ್ರದ ಅನರ್ಘ್ಯ ರತ್ನಗಳಾದ ಬೆಳ್ಳಾವೆ
ವೆಂಕಟನಾರಣಪ್ಪ, ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ ಶ್ರಿಕಂಠಯ್ಯ, ಎ.ಆರ್. ಕೃಷ್ಣಶಾಸ್ತಿç ಹಾಗೂ ವೀ.ಸೀತಾರಾಮಯ್ಯ – ಈ ಐವರ ಆದರ್ಶ ಜೀವನದ ಬಗ್ಗೆ, ತಮ್ಮ ಮೇಲೆ ಅವರು ಬೀರಿದ ಪ್ರಭಾವದ ಬಗ್ಗೆ ಸ್ವಾಮಿಯವರು ರಚಿಸಿದ
ಕೃತಿ ಇದು.
ವೃತ್ತಿ ಜೀವನಕ್ಕೆ ಮುಂಚೆ ಸ್ವಾಮಿ ಅವರು ಸಸ್ಯ ಶಾಸ್ತçದಲ್ಲಿ
ಸಂಶೋಧನೆಗಾಗಿ ಅಮೇರಿಕಾದಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ತಮ್ಮ ಅನುಭವಗಳ ಸಾರ ಸಂಗ್ರಹ “ಅಮೇರಿಕಾದಲ್ಲಿ ನಾನು” ಎಂಬ ಕೃತಿ ರಚಿಸಿದರು. ಕನ್ನಡದಲ್ಲಿ
ಪ್ರಕಟವಾಗಿರುವ ಅತ್ಯುತ್ತಮ ಪ್ರವಾಸ ಕಥನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಈ ಕೃತಿಯದ್ದು.
ಅಮೇರಿಕಾದಿಂದ ವಾಪಸಾದ ಮೇಲೆ
ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತç ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದಾಗಿನಿಂದ, ನಿವೃತ್ತರಾಗುವವರೆಗಿನ ತಮ್ಮ ಸುದೀರ್ಘ ಹಾಗೂ ಸ್ವಾರಸ್ಯಕರ ಅನುಭವಗಳನ್ನು ಸ್ವಾಮಿಯವರು
“ಪ್ರಾಧ್ಯಾಪಕನ ಪೀಠದಲ್ಲಿ” ಎಂಬ ತಮ್ಮ ಕೃತಿಯಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ.
ನಮ್ಮ
ಶೈಕ್ಷಣಿಕ ವ್ಯವಸ್ಥೆಯ ಅಧೋಗತಿಗೆ ಹಿಡಿದ ಕೈಗನ್ನಡಿ ಸ್ವಾಮಿಯವರು ರಚಿಸಿದ “ಕಾಲೇಜು ರಂಗ” ಹಾಗೂ
“ಕಾಲೇಜು ತರಂಗ” ಎಂಬ ಕೃತಿಗಳು. ಇದರಲ್ಲಿ ಸ್ವಾಮಿಯವರು ಸೃಷ್ಟಿಸಿದ ಎರಡು ಅದ್ಭುತ ಪಾತ್ರಗಳಾದ
‘ಕರಟಕ’ ಹಾಗೂ ‘ದಮನಕ’ರಂಥವರನ್ನು ನಮ್ಮ ಶಾಲಾ ಕಾಲೇಜುಗಳಲ್ಲಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ನಾವು
ಇಂದಿಗೂ ನೋಡಬಹುದು ! ‘ಕಾಲೇಜು ರಂಗ’ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಲನ ಚಿತ್ರವಾಗಿ
ಜನಪ್ರಿಯತೆ ಗಳಿಸಿದರೆ,
‘ಕಾಲೇಜು ತರಂಗ’
ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡು ಜನಪ್ರಿಯತೆ ಗಳಿಸಿತ್ತು.
ಇದೇ ಅವಧಿಯಲ್ಲಿ ಸ್ವಾಮಿ ರಚಿಸಿದ ಇನ್ನೊಂದು ಕೃತಿ
“ತಮಿಳು ತಲೆಗಳ ನಡುವೆ” . ಮದರಾಸಿನಲ್ಲಿ ತಮಿಳು ಜನಗಳ ಜೊತೆಗೆ ತಮ್ಮ ಒಡನಾಟದ ಅನುಭವಗಳನ್ನು ಹಾಸ್ಯಮಯವಾಗಿ ಇದರಲ್ಲಿ
ವಿವರಿಸಿರುವ ಶೈಲಿ ಆಕರ್ಷಕವಾಗಿದೆ.
ನಿವೃತ್ತಿಯ ನಂತರ ಸ್ವಾಮಿಯವರು ಮೈಸೂರು
ವಿಶ್ವವಿದ್ಯಾಲಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಸಂದರ್ಭದಲ್ಲಿ ತಮಗುಂಟಾದ ಅನುಭವಗಳನ್ನು
ಸ್ವಾರಸ್ಯಕರವಾಗಿ ವಿವರಿಸಿದ್ದಾರೆ, ತಮ್ಮ ‘ ಮೈಸೂರು ಡೈರಿ’ ಕೃತಿಯಲ್ಲಿ.
ಶುದ್ಧ ಸಾಹಿತ್ಯ ಗ್ರಂಥಗಳ ರಚನೆಯಲ್ಲಿಯೂ ವೈವಿಧ್ಯತೆಯನ್ನು ಹೇಗೆ ಬಿಂಬಿಸಬಹುದು ಎಂಬುದನ್ನು
ಹಾಗೂ ಹಿತಮಿತವಾದ ಹಾಸ್ಯ ವಿಡಂಬನೆಗಳನ್ನು ಕಲಾತ್ಮಕವಾಗಿ ಹೇಗೆ ನಿರೂಪಿಸಬಹುದು ಎಂಬುದನ್ನು ಮೇಲೆ
ಹೇಳಲಾದ ಅವರ ಕೃತಿಗಳಿಂದ ತಿಳಿಯಬಹುದು.
ಸ್ವಾಮಿಯವರ ಕನ್ನಡ ವಿಜ್ಞಾನ ಸಾಹಿತ್ಯ ಕೃತಿಗಳು
ವಿಜ್ಞಾನ ಬಲ್ಲವರಿಗೆ ಸಾಹಿತ್ಯದ ಆಳವಾದ ಅರಿವು ಹಾಗೂ
ಸಾಹಿತ್ಯದ ಒಲವು, ಸಂವೇದನೆ ಇರುವವರಿಗೆ ವಿಜ್ಞಾನ ಕ್ಷೇತ್ರದ ಬಗ್ಗೆ ಸಮರ್ಪಕ ಅರಿವು ಇರುವುದು ಅತ್ಯಂತ ಅಪರೂಪದ
ಸಂಗತಿ. ಇದಕ್ಕೆ ಬಿ.ಜಿ.ಎಲ್.ಸ್ವಾಮಿ ಅಪವಾದವಾಗಿ ಕಾಣುತ್ತಾರೆ. ವಿಜ್ಞಾನಿಯೊಬ್ಬ ಸಾಹಿತ್ಯ
ಕ್ಷೇತ್ರಕ್ಕೆ ಕಾಲಿಟ್ಟರೆ ಆತನ ಸೃಜನಾತ್ಮಕ ಶಕ್ತಿ ಎಂಥ ಸ್ವಾದುಫಲವನ್ನು ನೀಡಬಹುದು ಎಂಬುದಕ್ಕೆ
ಸ್ವಾಮಿ ಜ್ವಲಂತ ಉದಾಹರಣೆ.
ಸ್ವಾಮಿಯವರು ಬರೆದ
ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದುದು ‘ಹಸುರು ಹೊನ್ನು’. ಸ್ವಾಮಿಯವರು ತಮ್ಮ ವಿದ್ಯಾರ್ಥಿಗಳ
ತಂಡದೊAದಿಗೆ ಸಸ್ಯಗಳ ಶೋಧನೆಗೆ ಹೊರಟ ಸಂದರ್ಭದಲ್ಲಿನ ಅನುಭವಗಳ
ರಸವತ್ತಾದ ವರ್ಣನೆಯ ಜೊತೆಗೆ ಸ್ವಾರಸ್ಯಕರ ನಿರೂಪಣೆಯನ್ನು ಇದರಲ್ಲಿ ಗಮನಿಸಬಹುದು. ಅಷ್ಟೇ ಅಲ್ಲ, ವಿವಿಧ ಗಿಡ ಮರಗಳ ಬಗ್ಗೆ ಅರ್ಥವತ್ತಾದ ವಿವರಣೆಯನ್ನೂ
ಇದರಲ್ಲಿ ನೋಡಬಹುದು. ಸ್ವಾಮಿಯವರಿಗೆ 1978ರಲ್ಲಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಇದು. ಜೊತೆಗೆ, ತಂದೆ-ಮಕ್ಕಳಿಬ್ಬರೂ ಕೇಂದ್ರ ಸಾಹಿತ್ಯ ಅಕಾಡೆಮಿಯ
ಪ್ರಶಸ್ತಿಗೆ ಪಾತ್ರರಾದ ನಿದರ್ಶನವನ್ನು ಕನ್ನಡಕ್ಕೆ ಮೊದಲ ಬಾರಿಗೆ ಒದಗಿಸಿದ ಕೀರ್ತಿ ಈ ಕೃತಿಗೆ
ಸಲ್ಲುತ್ತದೆ.
ಸುಲಲಿತವಾಗಿ ಓದಿಸಿಕೊಂಡು ಹೋಗುವ ಸ್ವಾಮಿಯವರ
ಇನ್ನೊಂದು ಕೃತಿ “ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ”. ಕುತೂಹಲಕಾರಿ ಶೀರ್ಷಿಕೆಯ ಈ ಕೃತಿಯಲ್ಲಿ ನಮ್ಮ
ದೈನಂದಿನ ಆಹಾರದಲ್ಲಿ ಬಳಕೆಯಾಗುತ್ತಿರುವ ವಿವಿಧ ಸಸ್ಯಗಳ ಮೂಲವನ್ನು ಸ್ವಾಮಿಯವರು
ಬಯಲಿಗೆಳೆದಿರುವ ರೀತಿ ಅಚ್ಚರಿ ಮೂಡಿಸುತ್ತದೆ. ಅದೇ ರೀತಿ, ನೂರಾರು ಬಗೆಯ ಹಣ್ಣು ತರಕಾರಿಗಳ ಮೂಲ ಇತಿಹಾಸವನ್ನು ಅನಾವರಣಗೊಳಿಸುವ ಕೃತಿ ‘ಫಲಶೃತಿ’.
ಸ್ವಾಮಿಯವರು ರಚಿಸಿರುವ ‘ಸಾಕ್ಷಾತ್ಕಾರದ ಹಾದಿಯಲ್ಲಿ’
ಎಂಬ ಪುಸ್ತಕದ ಶೀರ್ಷಿಕೆ ಓದಿದವರಿಗೆ ಇದು ದೈವ ಸಾಕ್ಷಾತ್ಕಾರದ ಹಾದಿಗೆ ನಮ್ಮನ್ನು
ಕೊಂಡೊಯ್ಯುತ್ತದೆ ಎಂಬ ಭ್ರಮೆ ಮೂಡಬಹುದು. ಆದರೆ, ಈ ಕೃತಿಯಲ್ಲಿ ಸ್ವಾಮಿಯವರು ಅತ್ಯಂತ ಸೊಗಸಾಗಿ ವಿವರಿಸಿರುವುದು ಬಗೆ ಬಗೆಯ ಅಮಲುಕಾರಕ ಸಸ್ಯಗಳ ಬಗ್ಗೆ !
ಪೌರಾಣಿಕ ಸಾಹಿತ್ಯ ವಲಯದಲ್ಲಿ ಸೌಗಂಧಿಕಾಪಹರಣ ಎಂಬ
ಕಥೆಯನ್ನು ಕೇಳಿದ್ದ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ‘ದೌರ್ಗಂಧಿಕಾಪಹರಣ’ ಎಂಬ ಕೃತಿಯನ್ನು ನೀಡಿ
ಸ್ವಾಮಿ ಅಚ್ಚರಿಗೊಳಿಸುತ್ತಾರೆ ! ರಾಮಾಯಣದ ಛಾಯೆಯಲ್ಲಿ ನಿರೂಪಿತವಾದ ಈ ಕೃತಿಯಲ್ಲಿ ಸಸ್ಯಶಾಸ್ತçದ ವಿದ್ಯಾರ್ಥಿಗಳು ತೋಟವೊಂದಕ್ಕೆ ಸಸ್ಯದ ಮಾದರಿಗಳನ್ನು ನೋಡಲು ಹೋದಾಗಿನ ಅನುಭವಗಳನ್ನು
ತಮ್ಮದೇ ಆದ ನವಿರಾದ ಶೈಲಿಯಲ್ಲಿ ವಿವರಿಸಿದ್ದಾರೆ.
ಶಾಸನಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅಲ್ಲಿ
ಉಲ್ಲೇಖವಾಗಿರುವ ಸಸ್ಯಗಳ ಬಗ್ಗೆ ಸ್ವಾಮಿಯವರು ರಚಿಸಿರುವ ಕೃತಿಗಳೆಂದರೆ “ಸಸ್ಯ ಪುರಾಣ’ ಮತ್ತು
‘ಶಾಸನಗಳಲ್ಲಿ ಗಿಡಮರಗಳು’ ಇದರಲ್ಲಿ, ‘ಸಸ್ಯ ಪುರಾಣ’ ನಮ್ಮ ಪುರಾಣ
ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಸಸ್ಯಗಳ ಬಗ್ಗೆ ವಿವರಣೆ ನೀಡಿದರೆ, ಎರಡನೆಯ ಕೃತಿ ಶಾಸನಗಳಲ್ಲಿ ಹೇಳಲಾಗಿರುವ ಸಸ್ಯಗಳ ಬಗ್ಗೆ ತಿಳಿಸುತ್ತದೆ.
ಸಸ್ಯವಿಜ್ಞಾನದ ವಿಷಯಗಳನ್ನು ಎಷ್ಟು ಸ್ವಾರಸ್ಯವಾಗಿ, ಹೃದ್ಯವಾಗಿ ಹಾಗೂ ಹಾಸ್ಯಮಯವಾಗಿ ನಿರೂಪಿಸಬಹುದೆಂಬುದನ್ನು ಈ ಕೃತಿಗಳಲ್ಲಿ ಸ್ವಾಮಿಯವರು
ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ವಿಜ್ಞಾನ ಶಿಕ್ಷಕ ಹಾಗೂ ವಿಜ್ಞಾನ ಬರಹಗಾರ ಅಗತ್ಯವಾಗಿ ಓದಲೇಬೇಕಾದ ಅಮೂಲ್ಯ
ಕೃತಿಗಳಿವು.
ಚಿತ್ರಕಾರ ಸ್ವಾಮಿ
ಚಿಕ್ಕಂದಿನಿAದಲೂ ಸ್ವಾಮಿಯವರಿಗೆ ಚಿತ್ರಕಲೆಯಲ್ಲಿ ಆಸಕ್ತಿ. ಆಗ
ಖ್ಯಾತರಾಗಿದ್ದ ಕಲಾವಿದ ವೆಂಕಟಪ್ಪನವರೇ
ಸ್ವಾಮಿಯವರಿಗೆ ಸ್ಪೂರ್ತಿ. ತಮ್ಮ ಚಿತ್ರಕಲೆಯನ್ನು ಅಭಿವೃದ್ಧಿಪಡಿಕೊಳ್ಳುವ ನಿಟ್ಟಿನಲ್ಲಿ
ಶಿವರಾಮ ಕಾರಂತ ಹಾಗೂ ವೀ.ಸೀ.ಯವರಿಂದ
ಆಗಾಗ್ಗೆ ಸಲಹೆ ಪಡೆಯುತ್ತಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ಸಾಹಿತಿ ಗೊರೂರು ರಾಮಸ್ವಾಮಿ
ಅಯ್ಯಂಗಾರರು ತಮ್ಮ ಕೃತಿಯೊಂದಕ್ಕೆ ಸ್ವಾಮಿಯವರಿಂದ ಚಿತ್ರ ಬರೆಸಿದ್ದರು. ಚಿತ್ರಗಳ ಬಗ್ಗೆ
ಮೆಚ್ಚುಗೆಯನ್ನೂ ಸೂಸಿದ್ದರು.
ಸ್ವಾಮಿಯವರು ತಮ್ಮ ಎಲ್ಲಾ ಕೃತಿಗಳಿಗೆ ತಾವೇ
ವ್ಯಂಗ್ಯಚಿತ್ರಗಳನ್ನು ರಚಿಸಿದ್ದರು. ಸಂಶೋಧನೆಗೆ ಬಳಸುತ್ತಿದ್ದ ಸಸ್ಯಗಳ ವಿವಿಧ ಭಾಗಗಳನ್ನು
ಯಥಾವತ್ತಾಗಿ ಅವರು ಚಿತ್ರಿಸುತ್ತಿದ್ದ ರೀತಿಯನ್ನು ಸಂಶೋಧನೆಯ ಮಾರ್ಗದರ್ಶಕರಾಗಿದ್ದ ಇರ್ವಿಂಗ್
ಬೇಯ್ಲಿ ಬಹುವಾಗಿ ಮೆಚ್ಚಿಕೊಂಡಿದ್ದರು.
ಡಯಾಟಮ್ ನಂಥ ಸೂಕ್ಷ್ಮಜೀವಿಗಳ ಕೋಶಗಳ ಸೊಬಗನ್ನು ಹಾಗೂ ವಿವಿಧ ಸಸ್ಯಗಳ ಕಾಂಡ
ಹಾಗೂ ಬೇರುಗಳ ಅಡ್ಡ ಸೀಳಿಕೆಯನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ವೀಕ್ಷಿಸಿದಾಗ ಕಂಡುಬರುವ ಅಂಗಾAಶ ವಿನ್ಯಾಸಗಳ ಸುಂದರ ಚಿತ್ರಗಳನ್ನು ತಾವೇ ಸ್ವತಹ ಬಿಡಿಸಿ, ಹಲವಾರು ಕಡೆ microscopic
and decorative arts ಎಂಬ ಹೆಸರಿನಲ್ಲಿ ಈ
ಚಿತ್ರಗಳ ಪ್ರದರ್ಶನವನ್ನೂ ಸ್ವಾಮಿ ಏರ್ಪಡಿಸಿದ್ದರು. ಆ ಚಿತ್ರಗಳಲ್ಲಿದ್ದ ವಿನ್ಯಾಸಗಳನ್ನು
ಜನಸಾಮಾನ್ಯರ ಜೀವನದ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು
ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿಕೊಟ್ಟಿದ್ದರು. ಕೆಲವು ವಿನ್ಯಾಸಗಳನ್ನು ಉಡುಪುಗಳ, ಸೀರೆಗಳ ಹಾಗೂ ಪರದೆ ಬಟ್ಟೆಗಳ ಮೇಲೆ ಡಿಸೈನ್‌ಗಳಾಗಿ ಬಳಸಬಹುದೆಂದು ಸಂಬAಧಿಸಿದ ಉದ್ಯಮಿಗಳಿಗೆ ತೋರಿಸಿಕೊಟ್ಟರು. ಅಂಥ ಹಲವಾರು ಡಿಸೈನ್‌ಗಳುಳ್ಳ ವಸ್ತçಗಳು ತಯಾರಾಗಿ ಜನಪ್ರಿಯತೆಯನ್ನೂ ಗಳಿಸಿದ್ದುವು.
ಸಂಗೀತ ಪ್ರಿಯ ಸ್ವಾಮಿ
ಸಾಹಿತ್ಯ, ಚಿತ್ರಕಲೆಗಳ ಜೊತೆಗೆ ಸಂಗೀತ ಕ್ಷೇತ್ರದಲ್ಲಿಯೂ ಸ್ವಾಮಿಯವರಿಗೆ
ವಿಪರೀತ ಆಸಕ್ತಿ. ಬಾಲ್ಯದಲ್ಲಿ ಅವರ ಅಜ್ಜಿಯ ಪ್ರಭಾವದಿಂದಾಗಿ ಸಂಗೀತದ ಗೀಳು ಹಿಡಿಸಿಕೊಂಡ
ಸ್ವಾಮಿಯವರು ಪ್ರೌಢಶಾಲೆಯಲ್ಲಿದ್ದಾಗಲೇ 30ರೂ. ಕೊಟ್ಟು ಕೊಂಡುಕೊಂಡ ಸೆಕೆಂಡ್ ಹ್ಯಾಂಡ್
ಪಿಟೀಲಿನಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದರಂತೆ.
ಮದರಾಸಿನಲ್ಲಿನ ಅವರ ವೃತ್ತಿ ಜೀವನದ ಬಿಡುವಿನ
ವೇಳೆಯಲ್ಲಿ ಅಲ್ಲಿನ ಖ್ಯಾತ ಸಂಗೀತ ವಿದ್ವಾಂಸರ ಕಛೇರಿಗಳಿಗೆ ಹಾಜರಾಗುವ ಮೂಲಕ ತಮ್ಮ ತಮ್ಮ ಸಂಗೀತಾಸಕ್ತಿಯನ್ನು ನೀರೆರೆದು ಪೋಷಿಸಿದರು. ಆ ಕಾಲದ
ಖ್ಯಾತ ಸಂಗೀತ ವಿದ್ವಾಂಸರಾದ ಶೇಮ್ಮಂಗುಡಿ,
ಲಾಲ್‌ಗುಡಿ, ಎಂ.ಡಿ ರಾಮನಾಥನ್
ಮುಂತಾದವರ ಜೊತೆ ಸಂಗಿತದ ಬಗ್ಗೆ ಚರ್ಚೆಗಳನ್ನು ನಡೆಸುತ್ತಿದ್ದರು. ‘ ದಿ ಹಿಂದೂ’ ಪತ್ರಿಕೆಗೆ ನಿಯತವಾಗಿ ಸಂಗೀತ ವಿಮರ್ಶಕರಾಗಿ
ಲೇಖನಗಳನ್ನೂ ಬರೆಯುತ್ತಿದ್ದರು !
ಇನ್ನೊಂದು ಅಚ್ಚರಿಯ ವಿಷಯವೆಂದರೆ, ಸ್ವಾಮಿಯವರು ಪುರಂದರದಾಸರ ಹಲವಾರು ಜನಪ್ರಿಯ ಕೀರ್ತನೆಗಳನ್ನು ತಮಿಳಿಗೆ ಅನುವಾದಿಸಿದ್ದರಂತೆ. ಎಂ.ಡಿ.ರಾಮನಾಥನ್ ಈ ಅನುವಾದಿತ ಕೃತಿಗಳನ್ನು ಕಛೇರಿಗಳಲ್ಲಿ ಹಾಡಿ ಸಭಿಕರಿಂದ ಅಪಾರ ಮೆಚ್ಚುಗೆ ಗಳಿಸಿದ್ದರಂತೆ. ಆದರೆ, ದುರದೃಷ್ಟವೆಂದರೆ, ಈ ಅನುವಾದಿತ ಕೃತಿಗಳು ಪ್ರಕಟನೆಯ ಸೌಭಾಗ್ಯವನ್ನೇ ಕಾಣಲಿಲ್ಲ. ಅಷ್ಟೇ ಅಲ್ಲ ಅವುಗಳ ಹಸ್ತ ಪ್ರತಿಯೂ ಲಭ್ಯವಿಲ್ಲ,
ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಸ್ವಾಮಿ ಪ್ರತಿನಿತ್ಯ ಬೆಳಿಗ್ಗೆ 4.00 ಘಂಟೆಗೆ ಪಿಟೀಲಿನಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಸಾಹಿತಿ ಎಸ್.ಎಲ್ ಭೈರಪ್ಪನವರು ಎಷ್ಟೋ ಬಾರಿ ತಲ್ಲೀನರಾಗಿ ಸಂಗೀತ ಕೇಳುತ್ತಾ ಹೊರಗೇ ನಿಂತಿರುತ್ತಿದ್ದರಂತೆ ! ಕೆಲವೊಮ್ಮೆ ಮನೆ ಒಳಗೆ ಪ್ರವೇಶಿಸಿ ಸ್ವಾಮಿಯವರೊಡನೆ ಸಂಗೀತದ ಬಗ್ಗೆ ವಿಚಾರ ವಿನಿಮಯ ನಡೆಸುತ್ತಿದ್ದರಂತೆ. ಇಬ್ಬರೂ ಸೇರಿ ಸಂಗೀತದ ಬಗ್ಗೆ ಕೃತಿಯೊಂದನ್ನು ರಚಿಸುವ ಬಗ್ಗೆ ಒಮ್ಮತಕ್ಕೆ ಬಂದಿದ್ದರು. ಸ್ವಾಮಿಯವರು ಬರೆಯುವುದು, ಭೈರಪ್ಪನವರು ಅದನ್ನು ಪರಿಷ್ಕರಿಸುವುದು ಎಂಬ ತೀರ್ಮಾನವಾಗಿತ್ತು. ಆದರೆ, ಬರವಣಿಗೆ ಪ್ರಾರಂಭವಾಗುವ ಮುನ್ನವೇ ಸ್ವಾಮಿ ದಿವಂಗತರಾದದ್ದು ದುರ್ದೈವ. ಈ ವಿಷಯವನ್ನು ಭೈರಪ್ಪನವರೇ ಸ್ವಾಮಿಯವರ ಬಗ್ಗೆ ಬರೆದ ಲೇಖನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇತರ ಕಲೆಗಳಲ್ಲಿ ಆಸಕ್ತಿ
ಸ್ವಾಮಿಯವರು ಕೈ ಆಡಿಸದ ಕ್ಷೇತ್ರವೇ ಇಲ್ಲ ! ಅವರಿಗೆ
ನೃತ್ಯಕಲೆಯಲ್ಲಿಯೂ ಅಪಾರ ಆಸಕ್ತಿ. ಶಾಸ್ತ್ರೀಯ ನೃತ್ಯ ಅವರ
ಅಭಿರುಚಿಗಳಲ್ಲಿ ಒಂದು. ಅದರಲ್ಲಿ ಅವರ ಪರಿಣಿತಿ ಎಷ್ಟಿತ್ತೆಂದರೆ, ಮೈಸೂರಿನಲ್ಲಿದ್ದಾಗ
ಕುವೆಂಪು ಅವರ ಮೊಮ್ಮಗಳು, ಪೂರ್ಣಚಂದ್ರ ತೇಜಸ್ವಿ ಅವರ ಮಗಳು, ಕುಮಾರಿ
ಸುಶ್ಮಿತಾಳಿಗೆ ನೃತ್ಯ ಹೇಳಿಕೊಡುತ್ತಿದ್ದರಂತೆ ! ಅಮೇರಿಕಾದಲ್ಲಿದ್ದಾಗ ಟ್ಯಾಪ್ ಡ್ಯಾನ್ಸ್ (tap dance) ಕೂಡ ಕಲಿತಿದ್ದುದನ್ನು ಅವರೇ ತಮ್ಮ ಕೃತಿಯೊಂದರಲ್ಲಿ
ಹೇಳಿಕೊಂಡಿದ್ದಾರೆ !
ಸುಂದರವಾದ ರಂಗೋಲಿ ಬಿಡಿಸುವುದು ಸ್ವಾಮಿಯವರ ಇನ್ನೊಂದು ಹವ್ಯಾಸ. ಬೆಳಿಗ್ಗೆಯೇ ಅವರು ತಮ್ಮ ಮನೆಯ ಮುಂದೆ ರಂಗೋಲಿ ಬಿಡಿಸುತ್ತಿದ್ದುದನ್ನು ನೋಡಿರುವ
ಅನೇಕರು ಇದನ್ನು ಸ್ಮರಿಸಿಕೊಳ್ಳುತ್ತಾರೆ. ರಾಮನವಮಿ ಸಂಗೀತೋತ್ಸವದ ಸಂದರ್ಭದಲ್ಲಿ ನಡೆಯುತ್ತಿದ್ದ
ರಂಗೋಲಿ ಸ್ಪರ್ಧೆಗಳಲ್ಲಿಯೂ ಸ್ವಾಮಿ
ಪಾಲ್ಗೊಂಡಿದ್ದ ದಾಖಲೆಗಳಿವೆ !
ಬಹು ಭಾಷಾ ಪಂಡಿತ ಸ್ವಾಮಿ
ಕನ್ನಡ ಮತ್ತು ಇಂಗ್ಲೀಷ್ ಜೊತೆಗೆ, ಸಂಸ್ಕೃತ, ತಮಿಳು, ತೆಲುಗು ಹಾಗೂ
ಮಲಯಾಳಂ ಭಾಷೆಗಳಲ್ಲಿ ಪರಿಣಿತಿ ಇದ್ದ ಸ್ವಾಮಿ ಇವುಗಳ ಜೊತೆಗೆ
ಜರ್ಮನ್, ಲ್ಯಾಟಿನ್, ಫ್ರೆಂಚ್ ಮತ್ತು
ಸ್ಪಾನಿಷ್ ಭಾಷೆಗಳಲ್ಲಿಯೂ
ಪಾಂಡಿತ್ಯ ಹೊಂದಿದ್ದರು !
ಒಮ್ಮೆ ಸಂದರ್ಶನವೊಂದರಲ್ಲಿ “ ವಿಜ್ಞಾನ ಸಾಹಿತಿಗಳಿಗೆ ಏನಾದರೂ ಕಿವಿ ಮಾತು
ಹೇಳಿ ” ಎಂದು ಸಂದರ್ಶಕ ಕೇಳಿದಾಗ ಸ್ವಾಮಿ ಅವರು
ಉತ್ತರಿಸಿದ್ದು ಹೀಗೆ, “ ಕಿವಿಮಾತು ಅಲ್ಲ, ಘಂಟಾಘೋಷವಾಗಿ
ಹೇಳುತ್ತೇನೆ, ವಿಜ್ಞಾನ ಬಲ್ಲವರು ಕನ್ನಡದಲ್ಲೇ ಬರೆಯಿರಿ. ಓದುಗರನ್ನು
ಆಕರ್ಷಿಸಿ. ಆಗ ಬದಲಾವಣೆ ಶರವೇಗದಲ್ಲಿ ಆಗುತ್ತದೆ ನೋಡಿ”.
ತಮ್ಮ ಬಹುಮುಖ ಪ್ರತಿಭೆ, ವೃತ್ತಿಪರತೆ, ಕಾರ್ಯತತ್ಪರತೆ
ಹಾಗೂ ಬರವಣಿಗೆಗಳಿಂದ ಸ್ವಾಮಿ ವಿಜ್ಞಾನ ಲೇಖಕರಿಗೆ ಮಾತ್ರವಲ್ಲ, ವಿಜ್ಞಾನ
ಶಿಕ್ಷಕರಿಗೂ ಆದರ್ಶಪ್ರಾಯರಾಗಿದ್ದಾರೆ.
1. ಡಾ. ಬಿ.ಜಿ.ಎಲ್.ಸ್ವಾಮಿ ಅವರ ಬಗ್ಗೆ ‘ಕಲಾ ಮಾಧ್ಯಮ’ ಸಂಸ್ಥೆಯವರು ಸುಂದರ ಸಾಕ್ಷ್ಯಚಿತ್ರ ಒಂದನ್ನು ನಿರ್ಮಿಸಿದ್ದಾರೆ. ಆಸಕ್ತರು ಈ ಕೆಳಗಿನ ಲಿಂಕ್ ಗೆ ಭೇಟಿಕೊಟ್ಟು ಅದನ್ನು ವೀಕ್ಷಿಸಬಹುದು.
ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು
ಇಲ್ಲಿ ಕ್ಲಿಕ್ ಮಾಡಿ 👉 ಬಹುಮುಖ ಪ್ರತಿಭೆಯ ಸಸ್ಯ ವಿಜ್ಞಾನಿ - ಡಾ. ಬಿ.ಜಿ.ಎಲ್.ಸ್ವಾಮಿ
Excellent article. Sir.. ನಿಮ್ಮ ಪದಗಳಲ್ಲಿ ಅವರ ಪರಿಚಯ ತುಂಬಾ sogasaa. ಮೂಡಿಬಂದಿದೆ.. ಉತ್ತಮ ಲೇಖನ odagisidakkaagi ಧನ್ಯವಾದಗಳು ಸರ್
ReplyDeleteಧನ್ಯವಾದಗಳು !
Deleteಧನ್ಯವಾದಗಳು !
DeleteVery nicely narrated. Thank you very much for his introduction sir.
ReplyDeleteಧನ್ಯವಾದಗಳು !
Deleteಸ್ವಾಮಿ ಯವರ ಸಂಪೂರ್ಣ ಪರಿಚಯ ಆಯಿತು. ಧನ್ಯವಾದಗಳು ಸರ್.
ReplyDeleteಮೂರ್ತ ಚಾರ್. ವೀ
ಧನ್ಯವಾದಗಳು !
DeleteVey nice article on the eve of 104th birthday of prof BGL Swamy (5 February).Thank you sir
ReplyDeleteಧನ್ಯವಾದಗಳು !
DeleteVery nice article. Most relevant on the eve of 104th birthday of Prof BGLSwamy. Thank you sir.
ReplyDeleteNice article sir.
ReplyDeleteಧನ್ಯವಾದಗಳು !
Deleteಶ್ರೇಷ್ಠ ವ್ಯಕ್ತಿಯ ಪರಿಚಯವನ್ನು ನವಿರಾಗಿ ನಿರೂಪಿಸಿದ ನಿಮ್ಮ ವ್ಯಕ್ತಿತ್ವ ಆದರಣೀಯ.
ReplyDeleteಧನ್ಯವಾದಗಳು ಸರ್..
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು !
Deleteಬಿಜಿಎಲ್ ಸ್ವಾಮಿ ಅವರ ಬಗ್ಗೆ ಅಲ್ಪ ತಿಳಿದ ನಮಗೆ ಬಹುಮುಖ ಪ್ರತಿಭಾ ಪರಿಚಯಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಲೇಖನ ಗಳು ಇನ್ನು ಬರಲಿ ನಾವು ಓದಲು ಸಿದ್ದ
ReplyDeleteಧನ್ಯವಾದಗಳು !
ReplyDeleteಪ್ರೊ ಬಿ ಜಿ ಎಲ್ ಸ್ವಾಮಿ ಅವರ ಜೀವನ ಸಾಧನೆಗಳನ್ನು ಮತ್ತೊಮ್ಮೆ ನೆನೆಸಿಕೊಳ್ಳುವಂತಾಯಿತು. ಒಳ್ಳೆಯ ಸಾಂದರ್ಭಿಕ ಲೇಖನಕ್ಕೆ ಧನ್ಯವಾದಗಳು. - ಜಿ ವಿ ಅರುಣ
ReplyDeleteಧನ್ಯವಾದಗಳು, ಅರುಣ ಅವರೆ.
ReplyDeleteVery informative article Sir. Thank you for this wonderful article. ನನಗೆ ತಿಳಿದಿರುವಂತೆ ತಮ್ಮ ಬರವಣಿಗೆಗಳೆಲ್ಲಾ ಅಮೂಲ್ಯ ಮಾಹಿತಿಯನ್ನು ನೀಡುತ್ತವೆ. ನಾವು ನಿಮ್ಮನ್ನು ಅನುಕರಿಸಲು ಪ್ರಯತ್ನಿಸುತ್ತೇವೆ sir. Thank you 🙏🙏
ReplyDeleteನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
ReplyDeleteಓರ್ವ ಮನುಷ್ಯ ಇಷ್ಟು ಪ್ರತಿಭಾನ್ವಿತನಿರಬಹುದೇ ? ಊಹಿಸುವುದೂ ಅಸಾಧ್ಯ ಸರ್. ಪ್ರತಿಯೋರ್ವರೂ ಓದಲೇ ಬೇಕಾದ ಸಂಗ್ರಹಯೋಗ್ಯ ಮಾಹಿತಿ ನೀಡಿದ ಗುರುವರ್ಯರಿಗೆ ಧನ್ಯವಾದಗಳು.
ReplyDeleteGreat research and effort sir. We always ignore such good things around us. Thank you for throwing light on information of Dr.B G L Swami sir ��������
ReplyDeleteಮಹನೀಯರಾದ ಬಿ.ಜಿ.ಎಲ್.ಸ್ವಾಮಿ ಯವರ ಬಗ್ಗೆ ಮಹತ್ವದ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ್. ಹಾಗೆ ಇಡೀ ಬ್ಲಾಗ್ ರೂಪಿಸಿದ್ದಕ್ಕೆ.
ReplyDeleteಬಿ.ಜಿ.ಎಲ್ ಸ್ವಾಮಿಯವರ ಕುರಿತಾದ ಈ ಚುಟುಕು ಲೇಖನ ಸ್ವಾರಸ್ಯಕರವಾಗಿದೆ...
ReplyDeleteDr swami excels in so many subjects... He still inspires every one. Thanks for wonderful article about him sir. Director.. Mysur science Foundation...
Deleteಧನ್ಯವಾದಗಳು !
DeleteSuperb... Thank you so much
ReplyDeleteVery good information sir. Thanks
ReplyDeleteExcellent, good information to encourage students to become a good human being
ReplyDeleteಸ್ವಾರಸ್ಯಕರ ಲೇಖನ ನವಿರಾಗಿ ಮೂಡಿಬಂದಿದೆ.ಧನ್ಯವಾದಗಳು ಸರ್
ReplyDeleteಸರ್ ನಿಮ್ಮ ಈ ಲೇಖನವನ್ನು ನಾನು 6ನೆಯ ಫೆಬ್ರವರಿ 2021 ರಂದು ಪ್ರಥಮ ಬಾರಿಗೆ ಓದಿದೆ. ನಂತರ ಬಿ.ಜಿ.ಎಲ್ ರವರ ಬ್ೃಹದಾರಣ್ಯಕ, ಹಾಗೂ ಅಮೇರಿಕದಲ್ಲಿ ನಾನು ಎಂಬ ಕ್ೃತಿಗಳನ್ನು ಖರೀದಿಸಿ ಓದಿ ಆನಂದವಾಯಿತು. ಇದಕ್ಕೆ ಪ್ರೇರಣೆ ನಿಮ್ಮ ಅದ್ಭುತ ಲೇಖನ... ಧನ್ಯವಾದಗಳು ಸರ್.. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ..ಲೇಖನದ ಲಿಂಕ್ ನ್ನು ಹಂಚಿಕೊಂಡ ಶ್ರೀ ಗುರುದತ್ತ ಸರ್ ಅವರಿಗೂ ಧನ್ಯವಾದಗಳು ...
ReplyDeleteಧನ್ಯವಾದಗಳು !
Deleteಧನ್ಯವಾದಗಳು ಸರ್
ReplyDeleteVery nice article sir. Several time i read ' hasiru honnu'. When ever I take that book for reading I experience that I am new reader of that book. Both sri D.V.G and professorB.G.L Swami contribution are enormous. Thank you sir by this article I can know about professor . B.G.L swami.
ReplyDelete