ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, March 4, 2021

ವನ್ಯ ಜೀವಿಗಳು: ನಮ್ಮ ಹಿತೈಷಿಗಳು

ವನ್ಯ ಜೀವಿಗಳು: ನಮ್ಮ ಹಿತೈಷಿಗಳು

ಲೇಖಕರು: ಡಿ.ಕೃಷ್ಣ ಚೈತನ್ಯ.

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹಾಯ್ ಗೆಳೆಯರೆ, ನಾವೆಲ್ಲರೂ ಸಮೀಪದ ಅರಣ್ಯಕ್ಕೋ, ಪ್ರಾಣಿ ಸಂಗ್ರಹಾಲಯಕ್ಕೊ ಅಥವಾ ಉದ್ಯಾನವನಕ್ಕೊ ಭೇಟಿಕೊಟ್ಟಾಗ ಬಹಳ ಕುತೂಹಲದಿಂದ ನೋಡುವುದು ಪ್ರಾಣಿಗಳನ್ನು ಮಾತ್ರ. ಏಕೆಂದರೆ, ನಮಗೆ ವನ್ಯಜೀವಿಗಳೆಂದರೆ ಇರುವ ಕನಿಷ್ಟ ಜ್ಞಾನ ಅಷ್ಟೆ ಅಲ್ಲವೇ? ಹಾಗಾದರೆ, ವನ್ಯಜೀವಿಗಳೆಂದರೇನು? ಅವು ಎಷ್ಟು ಬಗೆಯವು? ನಾವು ಸಾಕುತ್ತಿರುವ ಪ್ರಾಣಿಗಳು ಹಿಂದೊಮ್ಮೆ ಕಾಡು ಪ್ರಾಣಿಗಳಾಗಿದ್ದವೆಯೇ? ಅಷ್ಟೆ ಏಕೆ? ಸ್ವತಃ ನಾವು ವನ್ಯಪ್ರಾಣಿಯಾಗಿದ್ದೆವಾ? ಕಾಡುಪ್ರಾಣಿಗಳನ್ನು ಕ್ರೂರ ಅಥವಾ ದುಷ್ಟ ಮೃಗಗಳು ಎನ್ನಬಹುದೇ? ಅವುಗಳಿಗಿಂತ ದುಷ್ಟ ಮೃಗ ಈ ಭೂಮಿಯ ಮೇಲೆ ಇರುವುದೇ? ಎನ್ನುವುದರ ಬಗ್ಗೆ ಒಂದಿಷ್ಟು ತಿಳಿಯೋಣ ಅಲ್ಲವೇ?

ವನ ಎಂದರೆ ಕಾಡು ಅಥವಾ ಅರಣ್ಯ. ಜೀವಿಗಳೆಂದರೆ ಸಸ್ಯ ಮತ್ತು ಪ್ರಾಣಿಗಳು. ವನ್ಯ ಜೀವಿಗಳೆಂದರೆ ಕಾಡಿನಲ್ಲಿರುವ ಜೀವಿಗಳು ಎಂದಾಯಿತಲ್ಲವೆ? ಕಾಡಿನಲ್ಲಿ ಎಲ್ಲಾ ಬಗೆಯ ಜೀವಿಗಳಿವೆ. ಎಲ್ಲಾ ಬಗೆಯ ಸಸ್ಯ ಅಂದರೆ ಪಾಚಿಯಿಂದ ಹಿಡಿದು ದೊಡ್ಡದೊಡ್ಡ ಹೂ ಬಿಡುವ ಮರ(ಸಸ್ಯ)ಗಳವರೆಗೂ ಇವೆ. ಅದೇ ರೀತಿ ಸಣ್ಣ ಸಣ್ಣ ಸೂಕ್ಷ್ಮ ಜೀವಿಗಳಿಂದ ಹಿಡಿದು ಆನೆಯಂಥ ದೊಡ್ಡ ದೊಡ್ಡ ಪ್ರಾಣಿಗಳೂ ಇವೆ. ಯಾವ ಜೀವಿಗಳು ತಮ್ಮ ತಮ್ಮ ನೈಸರ್ಗಿಕ ಆವಾಸಗಳಲ್ಲಿ ಸ್ವತಂತ್ರವಾಗಿ ಬದುಕಿ ಬಾಳುತ್ತಿರುತ್ತವೆಯೋ ಅವುಗಳನ್ನು ವನ್ಯಜೀವಿಗಳು ಎಂದು ಕರೆಯಲಾಗುತ್ತದೆ. ಕಾಡಿನಲ್ಲಿ ವಾಸಿಸುವ ಪ್ರಾಣಿಗಳನ್ನು ಮಾತ್ರ ವನ್ಯಜೀವಿಗಳೆಂದು ಕರೆಯುವುದಿಲ್ಲ. ಒಂದು ಕಲ್ಲಿನ ಕೆಳಗೆ ಬದುಕುತ್ತಿರುವ ಕಪ್ಪೆ, ಹಲ್ಲಿ, ಹಾವು, ಹೂವಿನ ಮೇಲೆ ಕುಳಿತಿರುವ ಚಿಟ್ಟೆ, ಎಲೆಯನ್ನು ತಿನ್ನುತ್ತಿರುವ ಹುಳು, ನೆಲದಲ್ಲಿ ಹರಿದಾಡುವ ಇರುವೆ, ಇವೆಲ್ಲವೂ ವನ್ಯಜೀವಿಗಳೇ ಆಗಿವೆ. ಮನೆಯಲ್ಲಿರುವ ಹಲ್ಲಿ, ಜೇಡಗಳನ್ನು ನೀವೇನೂ ಸಾಕಿರುವುದಿಲ್ಲ. ಅವು ಸಹ ವನ್ಯಜೀವಿಗಳೇ ಆಗಿವೆ. ಸಾಗರ ಮತ್ತು ಸಮುದ್ರಗಳಲ್ಲಿರುವ ಜೀವಿಗಳೂ ಈ ಪಟ್ಟಿಗೆ ಸೇರುತ್ತವೆ.

ವನ್ಯ ಜೀವಿಗಳಲ್ಲಿ ಎಷ್ಟು ವಿಧಗಳಿವೆ ಎಂಬುದಕ್ಕೆ ನಿಖರವಾದ ಉತ್ತರ ಇಲ್ಲವೇ ಇಲ್ಲ ಎನ್ನಬಹುದು. ಏಕೆಂದರೆ ಎಷ್ಟೋ ಜೀವಿಗಳು ಮನುಷ್ಯನ ಕಣ್ಣಿಗೆ ಇನ್ನೂ ಗೋಚರಿಸಿಯೇ ಇಲ್ಲ. ಹಾಗೆಯೇ, ಮನುಷ್ಯ ತಲುಪಲಾಗದ ದುರ್ಗಮ ಸ್ಥಳಗಳು ಇನ್ನೂ ಇವೆ. ಸಾಗರದ ಜೀವಿಗಳಲ್ಲಂತೂ ಕೇವಲ ಶೇ  ಒಂದರಷ್ಟು ಮಾತ್ರ ಲೆಕ್ಕಿಸಿದ್ದೇವೆ ಅಷ್ಟೆ. ವನ್ಯ ಜೀವಿಗಳನ್ನು ಲೆಕ್ಕಹಾಕುವುದಕ್ಕಾಗಿ ಹಲವಾರು ತಂತ್ರಗಳನ್ನು  ಮನುಷ್ಯ ಬಳಸಿದ್ದಾನೆ. ಸ್ವತಃ ನೋಡಿ ಲೆಕ್ಕಿಸುವುದು, ಅವುಗಳ ಹೂವು, ಬೀಜ, ಎಲೆಗಳ ಸಂಗ್ರಹದಿಂದ, ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕೆ, ಕೂಗುವಿಕೆ, ಮತ್ತು ಇತ್ತೀಚೆಗಿನ ಸ್ವಯಂಚಾಲಿತ ಕ್ಯಾಮೆರಾಗಳಿಂದ ಸೆರೆಹಿಡಿದ ಛಾಯಾಚಿತ್ರಗಳಿಂದ. ಹಾಗಾಗಿ, ಪ್ರತಿ ದಿನ ಹೊಸ ಹೊಸ ಪ್ರಬೇಧಗಳು ಪತ್ತೆ ಆಗುತ್ತಿರುವುದರಿಂದ ವನ್ಯ ಜೀವಿಗಳ ಸಂಖ್ಯೆ ಅನಿರ್ದಿಷ್ಟ ಎನ್ನಬಹುದು.


ಮನುಷ್ಯ ಸಾಕಿದ ಪ್ರಾಣಿಗಳಲ್ಲಿ ಮೊಟ್ಟ ಮೊದಲನೆಯದು ನಾಯಿ ಎಂದು ನಂಬಲಾಗಿದೆ. ತದ ನಂತರ ಹಸು, ಕುರಿ, ಮೇಕೆ, ಎಮ್ಮೆ, ಕತ್ತೆ, ಕುದುರೆ, ಕೋಳಿ ಮುತಾದವುಗಳನ್ನು ಒಂದರ ನಂತರ ಮತ್ತೊಂದನ್ನು ತನ್ನ ಉಪಯೋಗಕ್ಕಾಗಿ (ಸ್ವಾರ್ಥಕ್ಕಾಗಿ) ಪಳಗಿಸಿಕೊಂಡಿದ್ದಾನೆಯೇ ಹೊರತು ಮನುಷ್ಯ ಪ್ರಾಣಿಗಳನ್ನು ಸೃಷ್ಟಿಸಿ ಸಾಕಿಲ್ಲ ಎಂಬುದು ರುಜುವಾತಾಗಿದೆ. ಹಾಗಾದರೆ, ಇಂದು ಆ ಪ್ರಾಣಿಗಳು ಕಾಡಿನಲ್ಲಿ ಏಕಿಲ್ಲ ಎಂಬ ಪ್ರಶ್ನೆ ಮೂಡಬಹುದು. ಪರಿಸರದಲ್ಲಾಗುವ ಬದಲಾವಣೆಗಳು ಎಷ್ಟೋ ಪ್ರಾಣಿಗಳನ್ನು ನಿರ್ನಾಮ ಮಾಡಿರುವಂತೆ ಮೇಲಿನ ಪ್ರಾಣಿಗಳು ಅಲ್ಲಿ ಅಳಿದುಹೋಗಿರಬಹುದು ಎಂದು ತರ್ಕಿಸಬಹುದು. ಹಾಗಾಗಿ, ಹಿಂದೆ ಕಾಡು ಪ್ರಾಣಿಗಳಾಗಿದ್ದ ಕೆಲವು ಇಂದು ನಾಡು(ಸಾಕು) ಪ್ರಾಣಿಗಳಾಗಿವೆ. 

ಬಹಳ ಸ್ವಾರಸ್ಯಕರವಾದ ಪ್ರಶ್ನೆ ಎಂದರೆ ನಾವು ವನ್ಯಜೀವಿಗಳಾಗಿದ್ದೆವೆಯೇ ಎನ್ನುವುದು. ಇದಕ್ಕೆ ವಿಜ್ಞಾನ ‘ಹೌದು’ ಎಂಬ ಉತ್ತರವನ್ನು ಕೊಡುತ್ತದೆ. ಮಾನವನ ಇತಿಹಾಸ, ಸಿಕ್ಕಿರುವ ಸಾಕ್ಷಿ ಹಾಗೂ ಗುಹೆಗಳು ಮತ್ತಿತರ ಸ್ಥಳಗಳಲ್ಲಿ ಸಿಕ್ಕಿರುವ ಮಾಹಿತಿಗಳಿಂದ ಮಾನವ ಅರಣ್ಯಗಳಲ್ಲಿ ವಾಸಮಾಡುತ್ತಿದ್ದ ಎಂಬುದು ವೇದ್ಯವಾಗಿದೆ. ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಚಿತ್ರಗಳು, ಶಿಲಾಯುಧಗಳು ಅದಕ್ಕೆ ಪುಷ್ಟಿ ಕೊಡುತ್ತವೆ.



ಎಲ್ಲಾದರು ಒಂದು ಆನೆ ಅಥವಾ ಹುಲಿ ಒಬ್ಬ ವ್ಯಕ್ತಿಯನ್ನು ಸಾಯಿಸಿದರೆ, ಒಂದು ಜಾನುವಾರನ್ನು ಕೊಂದು ಹಾಕಿದರೆ, ಅಥವಾ ಮಾನವನನ್ನು ಗಾಯಗೊಳಿಸಿದರೆ ಎಲ್ಲಾ ಮಾಧ್ಯಮಗಳಲ್ಲಿ ಕಾಣಸಿಗುವ ವಿಜೃಂಭಣೆಯ ಪದ ಎಂದರೆ ‘ದುಷ್ಟ ಮೃಗದ ದಾಳಿಗೆ ಬಲಿಯಾದ ವ್ಯಕ್ತಿ ಎಂತಲೊ, ‘ಕ್ರೂರ’ ಮೃಗದ ದಾಳಿಗೆ ಜಾನುವಾರು ಬಲಿ ಎಂತಲೋ ಇಡೀ ದಿನ ಬಿತ್ತರಿಸುವುದನ್ನು ನಾವು ನೋಡಿದ್ದೇವೆ ಹಾಗೂ ಓದಿದ್ದೇವೆ. ಗೋವಿನ ಹಾಡಿನಲ್ಲಿಯೂ ‘ದುಷ್ಟ ವ್ಯಾಘ್ರನೇ ನೀನಿದೆಲ್ಲವನುಂಡು ಸಂತಸದಿಂದಿರು’ ಎಂಬ ಸಾಲು ಉಲ್ಲೇಖವಿರುವುದು ಯಾರಿಗೆತಾನೆ ಗೊತ್ತಿಲ್ಲ? ಆದರೆ, ವಾಸ್ತವವಾಗಿ ಮನುಷ್ಯ ಏನನ್ನು ಕೊಂದಿಲ್ಲ ಹಾಗೂ ಏನನ್ನು ತಿಂದಿಲ್ಲ ಹೇಳಿ? ಕಾಡಿನಲ್ಲಿರುವ ಮಾಂಸಹಾರಿಗೆ ಮಾಂಸವೇ ಆಹಾರವಾಗಿರುವುದರಿಂದ ಅದು ಬೇಟೆಯಾಡದೇ ವಿಧಿ ಇಲ್ಲ. ಬೇಟೆಯಾಡಿ ತಿನ್ನುವುದು ಅದರ ಆಹಾರಕ್ರಮ. ಅದಕ್ಕಾಗಿಯೇ ಬಲಿ ಪ್ರಾಣಿಗಳ ಉಸಿರಾಟ ನಿಲ್ಲಿಸಲು ಕೋರೆಹಲ್ಲು, ಪ್ರಾಣಿಯನ್ನು ಹಿಡಿಯಲು ಪಂಜ(ಕಾಲಿನ ಉಗುರು)ಗಳನ್ನು ಅವು ಹೊಂದಿವೆ. ಇನ್ನು ನಾವು, ನಮ್ಮ ದಂತ ಪಂಕ್ತಿಯ ಪ್ರಕಾರ ಮೂಲತಃ ಸಸ್ಯಹಾರಿಗಳು. ಆದರೆ, ಪ್ರಾಣಿಗಳನ್ನು ಕೊಲ್ಲುತ್ತಿಲ್ಲವೇ? ಮಾಂಸಹಾರ ಸೇವನೆ ಮಾಡುತ್ತಿಲ್ಲವೇ? ಅಷ್ಟ ಏಕೆ,  ಮನುಷ್ಯರನ್ನೂ ಕೊಲ್ಲುತ್ತಿಲ್ಲವೇ? ವಂಚನೆ, ಮೋಸ, ಅತಿಯಾಸೆ, ಹತ್ತು ತಲೆಮಾರಿನವರೆಗೆ ಕುಳಿತು ತಿಂದರೂ ಕರಗದಷ್ಟು ಸಂಪತ್ತು ಕೂಡಿಡುವ, ಕೆಲವು ವರ್ಷದವರೆಗೂ ಆಹಾರ ಪದಾರ್ಥಗಳನ್ನು ಕೂಡಿಟ್ಟುಕೊಳ್ಳುವ ಮನುಷ್ಯನ ಮುಂದೆ, ಏನನ್ನೂ ಮಾಡಿಕೊಳ್ಳದೇ, ಕೂಡಿಟ್ಟುಕೊಳ್ಳದೇ ಇರುವ ಪ್ರಾಣಿಗಳಿಂದಾದರೂ ನಾವು ಸ್ವಲ್ಪ ಬುದ್ದಿ ಕಲಿಯಬೇಡವೇ? ಯಾರನ್ನು ದುಷ್ಟ ಅಥವಾ ಕ್ರೂರ ಮೃಗ ಎನ್ನಬೇಕು ನೀವೇ ತೀರ್ಮಾನಿಸಿ.

ಬಹಳ ಆಸಕ್ತಿ ಕೆರಳಿಸುವ ವಿಷಯ ವನ್ಯಜೀವಿಗಳಲ್ಲಿ ಕಂಡು ಬರುತ್ತದೆ. ಅವೇ, ಕೂಡಿ ಬಾಳುವುದು ಮತ್ತು  ಪರಸ್ಪರ ಸಹಬಾಳ್ವೆ. ಒಂದು ಹೂವು ಪರಾಗಸ್ಪರ್ಶಕ್ಕೋಸ್ಕರ ದುಂಬಿಗೆ ಮಕರಂದ ಕೊಟ್ಟು ಸಾರ್ಥಕತೆ ಪಡೆಯುತ್ತದೆ. ಒಂದು ಹುಲಿ ತಾನು ಬೇಟೆಯಾಡಿದ ಪ್ರಾಣಿಯನ್ನು ಪೂರ್ತಿ ತಿನ್ನದೇ ಅರ್ಧ ಪಾಲನ್ನು ನರಿ, ಹಂದಿ, ರಣಹದ್ದು ಮುಂತಾದವುಗಳಿಗೆ ಮೀಸಲಿಟ್ಟು ಅವುಗಳನ್ನೂ ಉಳಿಸಿಕೊಳ್ಳುತ್ತದೆ. ಇಂಥÀ ನೂರಾರು ದುಷ್ಟಾಂತಗಳು ಕಾಡಿನಲ್ಲಿ ಸಿಕ್ಕಿತ್ತವೆ. ಹುಲಿ, ಚಿರತೆ, ಆನೆ, ಕಾಟಿ, ಕಾಡುನಾಯಿ, ಕಾಡುಹಂದಿ, ಕರಡಿ ಮುಂತಾದ ವನ್ಯಜೀಗಳು ಅನೇಕ ರೀತಿಯಲ್ಲಿ ಮನುಷ್ಯನಿಗೆ ಉಪಯುಕ್ಕವಾಗಿವೆ. ನದಿಯಲ್ಲಿ ವರ್ಷ ಪೂರ್ತಿ ನೀರು ಹರಿಯುತ್ತಿರಲು, ಕೈಗಾರಿಕೆಗಳಿಗೆ ಬೇಕಾಗುವ ಕಚ್ಛಾ ಪದಾರ್ಥ, ಔಷಧ ತಯಾರಿಕೆಗೆ ಅಗತ್ಯವಿರುವ ಗಿಡಮೂಲಿಕೆಗಳು, ಇವೆಲ್ಲವೂ ಸಿಗುತ್ತಿರುವುದು ವನ್ಯಜೀವಿಗಳಿಂದ ಅಲ್ಲವೇ?

ಇಂಥ ಮುಗ್ದ ಜೀವಿಗಳಿಗೆ ಅಪಾಯ ಒದಗಿರುವುದು ಪ್ರಪಂಚದಲ್ಲಿಯೇ ಅತೀ ಬುದ್ಧಿವಂತ ಎನಿಸಿಕೊಂಡಿರುವ ಮನುಷ್ಯನಿಂದ ಮಾತ್ರ. ಮನುಷ್ಯನಿಂದ ಅವುಗಳ ಆವಾಸ ನಾಶ, ತುಂಡರಿಕೆ, ಕಳ್ಳಬೇಟೆ, ಕಾಡ್ಗಿಚ್ಚು,  ವಿವೇಕವಿಲ್ಲದ ಅಭಿವೃದ್ಧಿ ಮುಂತಾದವುಗಳಿಂದ ಅವು ವಿನಾಶದ ಹಾದಿ ಹಿಡಿದಿವೆ. ಎಷ್ಟೋ ಜೀವಿಗಳು ಈಗಾಗಲೇ ಅಳಿದುಹೋಗಿವೆ. ಉಳಿದವುಗಳನ್ನು ಅಳಿದುಹೋಗದಂತೆ ಕಾಪಾಡಿಕೊಳ್ಳುವುದು ಮನುಷ್ಯನ ಪರಮೋಚ್ಛ ಕಾರ್ಯವಾಗಿದೆ. ತಮಗರಿವಿಲ್ಲದೇ ಜೀವಿಗಳು ಮಾಡುತ್ತಿರುವ ಅನೇಕ ಕ್ರಿಯೆಗಳಿಂದ ಶುದ್ಧಗಾಳಿ, ಮಳೆನೀರು ನಮಗೆ ಸಿಗುತ್ತಿದೆ. ಅವುಗಳ ನಿಸ್ವಾರ್ಥ ಬದುಕು ನಮಗೆ ಮಾದರಿಯಾಗಲಿ. ಇವುಗಳಿಂದಲಾದರೂ ನಾವು ಪಾಠ ಕಲಿಯೋಣ. ವನ್ಯಜೀವಿಗಳನ್ನು ಬದುಕಲು ಬಿಡೋಣ, ಆ ಮೂಲಕ ನಾವೂ ಬದುಕೋಣ.

6 comments: